Advertisement
ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಸಾಕ್ಷಿ ‘ಬದುಕೆಂಬ ಮಾಯೆ’: ಸುನಂದಾ ಕಡಮೆ ಬರಹ

ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಸಾಕ್ಷಿ ‘ಬದುಕೆಂಬ ಮಾಯೆ’: ಸುನಂದಾ ಕಡಮೆ ಬರಹ

‘ಭೂಮಿಗೆ ಗಟ್ಟಿಯಾಗಿ ಬಂಧಿಸಿದ ಯಾವ ಅನುಬಂಧವೂ ನನಗೆ ಒದಗಿ ಬಂದಿಲ್ಲ ಹಾಗಾಗಿ ಕಳೆದುಕೊಳ್ಳುವ ಭಯ ನನಗಿರಲಿಲ್ಲ’ ಎಂಬಂತಹ ಮಾತುಗಳನ್ನು ಒಬ್ಬ ಹೆಣ್ಣು ಹೇಳಬೇಕಾದರೆ, ಈ ಸಮಾಜ ಮತ್ತು ಈ ವ್ಯವಸ್ಥೆಯ ಪಾಲು ಎಷ್ಟು ಎಂಬ ಪ್ರಶ್ನೆಯನ್ನೂ ಸಹ ನಮಗೆ ನಾವೇ ಕೇಳಿಕೊಳ್ಳುವಂತಿದೆ. ‘ಹೆಣ್ಣಾಗಿ ಹುಟ್ಟಿದ ನನ್ನನ್ನು ಒಂದು ವ್ಯಕ್ತಿತ್ವವಾಗಿಸಿದ್ದು ಈ ಬಂಡಾಯದ ವಿಚಾರಧಾರೆ’ ಎನ್ನುವ ಸುಕನ್ಯಾ ಅವರ ಗುಂಡಿಗೆಯನ್ನು ಇನ್ನಷ್ಟು ಗಟ್ಟಿ ಮಾಡಿದ್ದು ತಾನು ಕಲಿತ ವಿದ್ಯೆ ಎಂದೇ ಮತ್ತೆ ಮತ್ತೆ ಅವರು ಸ್ಮರಿಸಿಕೊಳ್ಳುತ್ತಾರೆ.
ಕನ್ನಡದ ಹಿರಿಯ ಕವಿ ಪ್ರೊ. ಸುಕನ್ಯಾ ಮಾರುತಿಯವರ ಆತ್ಮಕತೆ ‘ಬದುಕೆಂಬ ಮಾಯೆ’ ಕುರಿತು ಸುನಂದಾ ಕಡಮೆ ಬರಹ ನಿಮ್ಮ ಓದಿಗೆ

ಕನ್ನಡದ ಹಿರಿಯ ಬಂಡಾಯ ಕವಿ ಪ್ರೊ.ಸುಕನ್ಯಾ ಮಾರುತಿಯವರ ‘ಬದುಕೆಂಬ ಮಾಯೆ’ ಆತ್ಮಕಥಾನಕವು ನಿಜಕ್ಕೂ ಕಲ್ಲುಮುಳ್ಳುಗಳೇ ತುಂಬಿದ ಬಹುದೊಡ್ಡ ಸಂಗ್ರಾಮವೇ ಹೌದು. ಹಾಗಾಗಿ ಸುಕನ್ಯಾ ತಮ್ಮ ಮಗನ ಹೆಸರನ್ನು ಸ್ವಂತ ಬದುಕಿನ ಒಂದು ಒಟ್ಟಾರೆ ರೂಪಕದಂತೆ ‘ಸಂಗ್ರಾಮ’ ಅಂತಲೇ ಇರಿಸಿದ್ದಾರೆ. ಇದಕ್ಕೆ ಪೂರಕವಾಗಿ ಈ ಕೃತಿಗೆ ಮುನ್ನುಡಿ ಬರೆದ ಪ್ರೊ ಮಲ್ಲೇಪುರಂ ವೆಂಕಟೇಶ್ ಅವರು ಸುಕನ್ಯಾ ಅವರನ್ನು “ಬೆಂಕಿಯಲ್ಲಿ ಅರಳಿದ ಹೂವು” ಅಂತ ಕರೆದಿದ್ದಾರೆ. ‘ಕಿಚ್ಚಿನಿಂದೆದ್ದು ಬಂದವಳನ್ನು ಇನ್ನೇನು ಸುಡಲು ಸಾಧ್ಯ?’ ಅನ್ನುವ ಸುಕನ್ಯಾ ಅವರ ಘನಘೋರ ಪ್ರಶ್ನೆಯೊಂದು ಇಡೀ ಸಮಾಜವನ್ನು ಮತ್ತು ಒಟ್ಟಾರೆ ಭಾರತೀಯ ವ್ಯವಸ್ಥೆಯನ್ನು ಕೇಳುವ ಒಂದು ಆತ್ಯಂತಿಕ ಪ್ರಶ್ನೆಯಾಗಿದೆ.

ಈ ಆತ್ಮಕಥನವು ಕನ್ನಡ ಸಾಹಿತ್ಯದಲ್ಲಿ ಅನೇಕ ಕಾರಣಗಳಿಂದ ಮಹತ್ವ ಪಡೆಯುತ್ತದೆ. ಇದು ಮೌನದ ಬದುಕಿಗೆ ಧ್ವನಿ ನೀಡುವ ಕಲೆ. ಇತಿಹಾಸದಲ್ಲಿ ದಾಖಲಾಗದ ಮಹಿಳೆಯರ ನೋವು, ಅವಮಾನ, ಹೋರಾಟ ಮತ್ತು ಕನಸುಗಳು ಇಲ್ಲಿ ದಾಖಲಾಗಿವೆ. ಇದು ಸತ್ಯನಿಷ್ಠೆಯ ಬರಹವಾಗಿದೆ. ಕಲ್ಪನೆಗಿಂತ ಬದುಕಿನ ಅನುಭವಗಳಿಗೆ ಇಲ್ಲಿ ಹೆಚ್ಚಿನ ಸ್ಥಾನವಿದೆ. ಓದುಗರು ಇಲ್ಲಿ ನೈಜ ಜೀವನದ ನೋವನ್ನು ಎದುರಿಸುತ್ತಾರೆ. ಮತ್ತಿದು ಸ್ತ್ರೀವಾದಿ ಸಾಹಿತ್ಯಕ್ಕೆ ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ. ಮಹಿಳೆಯ ಮೇಲಿನ ದೌರ್ಜನ್ಯವು ಕೇವಲ ಕುಟುಂಬದೊಳಗೆ ಮಾತ್ರವಲ್ಲ, ಧರ್ಮ, ಜಾತಿ, ಸಂಪ್ರದಾಯ ಮತ್ತು ಆರ್ಥಿಕ ವ್ಯವಸ್ಥೆಗಳ ಮೂಲಕವೂ ಹೇಗೆ ನಡೆಯುತ್ತದೆ ಎಂಬುದನ್ನು ಇಂತಹ ಕಥನಗಳು ಅನಾವರಣಗೊಳಿಸುತ್ತವೆ.

(ಪ್ರೊ. ಸುಕನ್ಯಾ ಮಾರುತಿ)

ದೇವದಾಸಿ ಪದ್ಧತಿಯು ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಮಹಿಳೆಯರ ಬದುಕನ್ನು ಬಂಧಿಸಿದ ಒಂದು ಅಮಾನವೀಯ ಸಾಮಾಜಿಕ ವ್ಯವಸ್ಥೆ. ವಾಸ್ತವದಲ್ಲಿ ಅನೇಕ ದೇವದಾಸಿಯರು ಆರ್ಥಿಕ, ಸಾಮಾಜಿಕ ಮತ್ತು ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆ. ಅವರ ಮಕ್ಕಳೂ ಸಹ ಸಮಾಜದಲ್ಲಿ ತಿರಸ್ಕಾರ, ಬಡತನ ಮತ್ತು ಅಸಮಾನತೆಯನ್ನು ಅನುಭವಿಸುತ್ತಾರೆ. ಈ ಹಿನ್ನೆಲೆ ಆತ್ಮಕಥನಕ್ಕೆ ಐತಿಹಾಸಿಕ ಮತ್ತು ಸಾಮಾಜಿಕ ಆಳವನ್ನು ನೀಡುತ್ತದೆ.

ದೇವದಾಸಿಯ ಮಗಳಾಗಿ ಹುಟ್ಟಿದ ಈ ಲೇಖಕಿಯ ಕಥನವು ಸಾಮಾನ್ಯವಾಗಿ ಕೇವಲ ವೈಯಕ್ತಿಕ ಜೀವನಕಥೆಯಲ್ಲ; ಅದು ಒಂದು ಸಮುದಾಯದ ನೋವು, ಶೋಷಣೆ, ಆತ್ಮಗೌರವದ ಹೋರಾಟ ಮತ್ತು ಸಾಮಾಜಿಕ ಅನ್ಯಾಯದ ಸಾಕ್ಷ್ಯವಾಗಿದೆ. ಅಂತೆಯೇ ಇಲ್ಲಿ ನಾವು ಬಾಲ್ಯದ ಬಡತನ, ಸಾಮಾಜಿಕ ತಿರಸ್ಕಾರ ಮತ್ತು ಅವಮಾನಗಳ ಅನುಭವಗಳನ್ನು ಕಾಣುತ್ತೇವೆ. ಇಲ್ಲಿ ದೇವದಾಸಿ ಪದ್ಧತಿಯಿಂದ ಮಹಿಳೆಯರು ಮತ್ತು ಅವರ ಮಕ್ಕಳ ಮೇಲೆ ಬೀರುವ ಪರಿಣಾಮವೇ ಮುಖ್ಯವಾಗಿ ಕಾಣಿಸುತ್ತವೆ. ಯಾರೋ ಎಳೆದ ಗೆರೆಗಳ ಮೀರುತ್ತ ಬೆಳೆದದ್ದು ಈ ‘ಬದುಕೆಂಬ ಮಾಯೆ’

ಇಲ್ಲಿ ಸಾಮಾನ್ಯವಾಗಿ ಸರಳ, ನೇರ ಮತ್ತು ಅನುಭವಸಮೃದ್ಧ ಭಾಷೆಯಿದೆ. ಅಲಂಕಾರಿಕ ಭಾಷೆಗಿಂತ ಭಾವನಾತ್ಮಕ ಪ್ರಾಮಾಣಿಕತೆಗೆ ಲೇಖಕಿ ಹೆಚ್ಚಿನ ಮಹತ್ವ ನೀಡಿದ್ದಾರೆ. ಗ್ರಾಮೀಣ ಬದುಕಿನ ಚಿತ್ರಣ, ಸ್ಥಳೀಯ ಪದಗಳು, ಜನಪದ ಸಂಸ್ಕೃತಿ, ಆಚರಣೆಗಳು ಮತ್ತು ಜೀವನಾನುಭವಗಳು ಕೃತಿಗೆ ಜೀವಂತಿಕೆಯನ್ನು ನೀಡಿವೆ. ಈ ಕಥನವು ಓದುಗರಲ್ಲಿ ಕೇವಲ ಕರುಣೆಯನ್ನು ಉಂಟುಮಾಡದೆ, ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಸಮಾಜದ ಅಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ಆಧಾರಿತ ತಾರತಮ್ಯ ಮತ್ತು ಶಿಕ್ಷಣದ ಕೊರತೆಯಂತಹ ಸಮಸ್ಯೆಗಳ ಬಗ್ಗೆ ಚಿಂತನೆಗೆ ಪ್ರೇರೇಪಿಸುತ್ತದೆ. ಈ ಓದು ಸಾಮಾಜಿಕ ಸುಧಾರಣೆಯ ಅಗತ್ಯವನ್ನು ಮನದಟ್ಟು ಮಾಡುತ್ತವೆ.

ತನ್ನ ಬದುಕಿನ ಹೊಣೆಗಾರಿಕೆಯನ್ನು ತಾನೇ ಹೊರುವ ಒಬ್ಬ ದಿಟ್ಟ ಮಹಿಳೆ ಈ ಪಯಣದುದ್ದಕ್ಕೂ ಕಾಣಸಿಗುತ್ತಾಳೆ. ಜೊತೆಯಲ್ಲಿ ಅವರಿಗೆ ವಿಶಾಲ ಅರಿವಿನ ಬೆಳಕಿನಲ್ಲಿ ಮಿಂದ ಒಂದು ಮುಕ್ತವಾದ ಮನಸ್ಸಿದೆ. ಕಡುದೈನಿಕಗಳ ಸ್ವಾನುಭವ ತುಂಬಿದ ಕಾವ್ಯವೇ ಇವರಿಗೆ ಒಡಹುಟ್ಟಿನಂತಿದೆ. ಬದುಕನ್ನು ಏಕಾಂಗಿಯಾಗಿ ಕಟ್ಟಿಕೊಂಡ ಹೋರಾಟದ ಹಿನ್ನೆಲೆಯ ಸುದೀರ್ಘ ಹಾದಿ ಇವರದು. ಬುದ್ಧನ ಕುರಿತಾದ ನಾಟಕವೊಂದರಲ್ಲಿ ಕಿಸಾಗೌತಮಿಯ ಪಾತ್ರ ಮಾಡಿದ್ದು ಇವರ ಬದುಕಿಗೇ ಒಂದು ಪ್ರತಿಮೆಯಂತಿದೆ. ಮಳೆ ಗಾಳಿಗಳ ದಾಳಿಗೆ ಗೋಡೆಯ ಮೇಲಿನ ಬರಹ ಅಳಿಸಿ ಹೋದಂತೆ ಶುಭ್ರವಾದ ದಿನಗಳನ್ನು ಲೇಖಕಿ ಇದೀಗ ಕಾಣುತ್ತಲಿದ್ದಾರೆ. ಶಾರೀರಿಕ ಅನಾರೋಗ್ಯದ ಮಧ್ಯೆಯೂ ಸುಕನ್ಯಾ ಅವರದು ಒಂದು ರೀತಿಯ ಚೈತನ್ಯಶೀಲ ಮನಸ್ಸು. ಉತ್ಸಾಹವಿಲ್ಲದಿದ್ದರೆ ಏನನ್ನೂ ಸಾಧಿಸಲಾಗದು ಎಂಬುದಕ್ಕೆ ಅವರ ಈ ಬರವಣಿಗೆಯೇ ಸಾಕ್ಷಿ.

ಇಲ್ಲಿ ಲೇಖಕಿ ಶಿಕ್ಷಣಕ್ಕಾಗಿ ನಡೆಸಿದ ಹೋರಾಟ ಮತ್ತು ಸಮಾಜದ ಅಡೆತಡೆಗಳು, ತಾಯಿಯ ಬದುಕಿನ ನೋವು, ತ್ಯಾಗ ಮತ್ತು ಹೋರಾಟದ ಚಿತ್ರಣಗಳಿವೆ. ಸ್ವಾಭಿಮಾನ, ಆತ್ಮಗೌರವ ಮತ್ತು ಸ್ವತಂತ್ರ ಬದುಕಿನ ಕನಸು ಕೂಡ ಇಲ್ಲಿವೆ. ಜಾತಿ, ಲಿಂಗ ಮತ್ತು ವರ್ಗದ ಅಸಮಾನತೆಗಳ ವಿರುದ್ಧದ ಹಲವು ಪ್ರಶ್ನೆಗಳನ್ನು ಕೂಡ ಈ ಕೃತಿ ಎತ್ತುತ್ತದೆ.

ಹುಟ್ಟಿನಿಂದ ತಂದೆ ಹೆಸರು ಹೊಂದಿರುವ ಮತ್ತು ಜಾತಿಯಿಂದ ಶ್ರೇಷ್ಠರಾಗಿದ್ದವರು ತಮ್ಮದೇ ಸಾಮಾಜಿಕ ಕ್ರೌರ್ಯದ ಭಾಷೆಯಲ್ಲಿ ಹೀಯಾಳಿಸುವ ಪರಿಗೆ ನೊಂದು ಬೆಂದ ಜೀವ ಇದು. ಇಂಥ ಅನೇಕ ನೋವಗಳ ಹೊರಹಾಕಲು ಸಮಾನ ಮನಸ್ಕ ಗೆಳತಿಯರಿಲ್ಲದೆ ಕವನಗಳ ಮೊರೆ ಹೊಕ್ಕವರು ಸುಕನ್ಯಾ. ‘ನಾನು ಅವಲಂಬಿಸಬಹುದಾದ ಯಾವ ಸಂಬಂಧಗಳೂ ನನಗಿಲ್ಲ’ ಎಂಬ ಅವರ ಮಾತು ಸ್ವಾವಲಂಬಿಯಾದ ಬದುಕಿಗೆ ಮತ್ತು ಅವರ ಆತ್ಮವಿಶ್ವಾಸದ ನಡೆಗೆ ಹಿಡಿದ ಕನ್ನಡಿಯಾಗಿದೆ. ಒಂದೆಡೆ ಅವರಿಗೆ ಈ ಪರಿಯ ಆತ್ಮಗೌರವ ಸಾಧ್ಯವಾಗಿಸಿದ್ದು ಅವರು ನೆಚ್ಚಿರುವ ಉದ್ಯೋಗವಾದರೆ, ಇನ್ನೊಂದೆಡೆ ಅವರ ಒಳಮನಸ್ಸನ್ನು ತಿದ್ದಿತೀಡಿದ ಕಾವ್ಯದ ಸಾಂಗತ್ಯ. ಒಬ್ಬ ಅಧ್ಯಾಪಕಿ ನಿಜವಾಗಿ ಬೆಳೆಯುವುದು ತರಗತಿಗಳಲ್ಲಿ ಅನ್ನುವ ಸುಕನ್ಯಾ ಅವರ ಕಲಿಸುವ ಪ್ರೇಮ ಅನನ್ಯವಾದದ್ದು.

ಒಳಗಿನ ಅಪಾರ ನೋವು ಮತ್ತು ಬೇಗುದಿಗಳಿಗೆ ದನಿ ಕೊಡುತ್ತಾ ಹೊರ ಜಗತ್ತಿನ ಮುಖವಾಡವನ್ನು ಕಿತ್ತೊಗೆಯುವ ಯತ್ನದ ಕವಿತೆಗಳು ಅವರವು. ‘ಹೆತ್ತಪ್ಪ’ ಎಂಬ ಮೊದಲ ಕವಿತೆಯಿಂದಲೇ ಇವರಿಗೆ ಕವಿಯ ಪಟ್ಟ ದೊರೆಯಿತು. ‘ದೇವದಾಸಿಯ ಮಗಳ ಸ್ವಗತ’ ಎಂಬ ಕವಿತೆಯಲ್ಲಿ ಸುಕನ್ಯಾ ತಮ್ಮ ಒಡಲಾಳದ ವೇದನೆಗೆ ದನಿಯಾದರು. ಹೀಗೇ ಪಯಣ ಯಶಸ್ವಿಯಾಗಿ ಸಾಗಿತು. ಮರದ ಕೊಂಬೆಯ ಮೇಲಿನ ಹಕ್ಕಿಯೊಂದು ಆ ಕೊಂಬೆಯನ್ನೇ ನಂಬಿ ಎಂದಿಗೂ ಕುಳಿತಿರುವುದಿಲ್ಲ, ಅದು ಅವಲಂಬಿಸಿರುವುದು ತನ್ನೆರಡು ರೆಕ್ಕೆಗಳನ್ನು. ಹಾಗೆಯೇ ಸುಕನ್ಯಾ ಅವರ ಒಂದು ರೆಕ್ಕೆ ವೃತ್ತಿ ಬದುಕಿನ ಆದಾಯವಾದರೆ, ಇನ್ನೊಂದು ರೆಕ್ಕೆ ಅವರ ಅತ್ಯಂತ ಸೂಕ್ಷ್ಮ ಸಮಾಜಮುಖೀ ಬರವಣಿಗೆ.

‘ನನ್ನನ್ನು ನಾನು ದೂರ ನಿಂತು ನೋಡಿಕೊಳ್ಳಬಲ್ಲ ಶಕ್ತಿ ಒದಗಿದ ನಂತರ ಬರೆದ ಕಥನ ಇದು’ ಎಂದು ಸುಕನ್ಯಾ ಇಲ್ಲಿ ಒಂದೆಡೆ ಹೇಳಿಕೊಳ್ಳುತ್ತಾರೆ, ಹಾಗಾಗಿ ಈ ಕಥನದ ಅಭಿವ್ಯಕ್ತಿಗೆ ಸಹಜವಾಗಿಯೇ ಪ್ರಾಮಾಣಿಕತೆ ಒಲಿದಿದೆ. ಅವರ ಎಪ್ಪತ್ತರ ಸನಿಹದ ಅವಕಾಶದಲ್ಲಿ ಎಲ್ಲ ಅನುಭವಗಳೂ ತನ್ನದೇ ಆದ ಕಟುಸತ್ಯವನ್ನು ತೆರೆದಿಟ್ಟು, ಅವೆಲ್ಲವುಗಳಿಂದ ಬೇರೆಯಾಗಿ ನಿಂತು ಬರೆಯುವ ಸಾವಧಾನದ ಸ್ಥಿತಿ ಅವರಿಗೆ ದಕ್ಕಿದೆ. ‘ನನಗೆ ನನ್ನ ಬದುಕಿನೊಂದಿಗೆ ಮಾನಸಿಕ ದೂರವನ್ನು ಸಾಧಿಸಲು ಸಾಧ್ಯವಾಗಿದೆ’ ಎಂಬ ಅವರ ಮಾತು ಇವರು ಒಬ್ಬ ಸಾಮಾಜಿಕ ವಿಮರ್ಶಕಿಯಷ್ಟೇ ಅಲ್ಲದೇ ಕೌಟುಂಬಿಕ ವಿಮರ್ಶಕಿಯಾಗಿಯೂ ಈ ಕಥನದಲ್ಲಿ ಓದುಗರಿಗೆ ತೋರಿಸಲು ಸಾಧ್ಯವಾಗಿದೆ.

ಸುಕನ್ಯಾ ಅವರು ಬರವಣಿಗೆ ಆರಂಭಿಸಿದ ಸಮಯ ದಲಿತ ಬಂಡಾಯ ಚಳುವಳಿಗಳ ಕಾಲ. ಹೊಸ ಅರಿವಿನಿಂದ ಕೀಳರಿಮೆಯನ್ನು ಕಿತ್ತೊಗೆದು ಹೊಸ ಮನುಷ್ಯಳಾಗಿ ಬೆಳೆದ ಬಗೆ ಇಲ್ಲಿದೆ. ಚಳುವಳಿಗಳು ಇವರನ್ನು ನೆಟ್ಟಗೆ ನಿಲ್ಲುವಂತೆ ರೂಪಿಸಿದ್ದು ಇವರ ಇಂಥ ಈ ಸೌಹಾರ್ದಕ್ಕೆ ಪ್ರಮುಖ ಕಾರಣ ಅಂತಲೇ ಅನಿಸುತ್ತದೆ.

ಬಡತನದ ಅನುಭವವುಂಡ ಸುಕನ್ಯಾ, ಮದುವೆಯ ಸಮಯದಲ್ಲಿ ಅವರ ಅಜ್ಜಿ ನೀಡಿದ ಐದು ತೊಲೆ ಚಿನ್ನದ ಸರವನ್ನು ಮಾರಿ, ಎಂ.ಎ. ಓದಲು ಧಾರವಾಡಕ್ಕೆ ಬಂದವರು, ಆ 25 ಸಾವಿರವನ್ನು ಬ್ಯಾಂಕಿನಲ್ಲಿಟ್ಟು, ಆಗಾಗ ಕೇವಲ 25 ರೂಪಾಯಿಗಳನ್ನಷ್ಟೇ ಬಿಡಿಸಿ ತಂದು, ಸಂಸಾರದ ಖರ್ಚನ್ನು ನಿಭಾಯಿಸಿದವರು. ಕಾಲೇಜಿಗೆ ಬಸ್ಸಿನಲ್ಲಿ ಹೋಗದೇ ಕಾಲ್ನಡಿಗೆಯಲ್ಲೇ ನಡೆದವರು, ‘ಆತ್ಮಸಂಗಾತಕ್ಕೆ ಮನುಷ್ಯರು ಯೋಗ್ಯರಲ್ಲ ಎಂಬುದು ತಡವಾಗಿ ತಿಳಿದಾಗ ಅಕ್ಕಮಹಾದೇವಿ ತನಗೆ ಸರಿಯಾಗಿ ಅರ್ಥವಾದಳು’ ಎನ್ನುವ ಸುಕನ್ಯಾ ಅವರ ಮಾತು ನಿಜಕ್ಕೂ ಈ ಪಿತೃಪ್ರಧಾನ ವ್ಯವಸ್ಥೆಯಲ್ಲಿರುವ ಎಲ್ಲಾ ಹೆಣ್ಣು ಮಕ್ಕಳಿಗೂ ಒಂದಿಲ್ಲ ಒಂದು ಕ್ಷಣದಲ್ಲಿ ಅರ್ಥವಾಗುವಂಥದ್ದೇ.

‘ತಲೆಯೆತ್ತಿ ನಡೆದರೂ ಬಿದ್ದವಳ ಪೆಟ್ಟುಗಳು ಮತ್ತೆ ಮತ್ತೆ ನರಳಿಸುತ್ತಿದ್ದವು’ ಎಂಬುದು ಎಲ್ಲ ದಲಿತ ಹೆಣ್ಣು ಮಕ್ಕಳ ಪರವಾಗಿ ಆಡಿದ ಮಾತಿನಂತಿದೆ. ದೇವರ ಸೇವೆಗೆ ಬಿಡುವುದು ಎಂಬ ದುಷ್ಟ ಪದ್ಧತಿಯು, ಇಡಿಯಾದ ಕುಟುಂಬವನ್ನು ಒಂದು ರೀತಿಯಲ್ಲಿ ಆತಂಕಕ್ಕೆ ಆಘಾತಕ್ಕೆ ಗುರಿ ಮಾಡುವ ಆಚರಣೆಯಾಗಿದ್ದು, ಅವಳ ಮುಂದಿನ ತಲೆಮಾರನ್ನು ಹೇಗೆ ನುಗ್ಗು ಮಾಡುತ್ತವೆ ಎಂಬುದು ಈ ಕೃತಿಯಲ್ಲಿ ನಮಗೆ ಸುದೀರ್ಘವಾಗಿ ಸಿಗುತ್ತವೆ. ಈ ಕಾರಣದಿಂದ ಲೇಖಕಿಯ ಹೆಜ್ಜೆ ಹೆಜ್ಜೆಗೂ ಎದುರಾಗುವ ಆತಂಕ, ದುಗುಡ, ವೇದನೆ, ಸಂಕಟ, ತಳಮಳಗಳು ಸಹೃದಯರ ಮನಸ್ಸನ್ನು ಕಂಪಿಸದೇ ಬಿಡಲಾರವು.

ಅವರ ವಿಚ್ಛೇದಿತ ಪತಿ ಚಿತ್ರಕಲಾಕಾರ ಮಾರುತಿಯವರು ಬೇರೆಯಾಗಿ ಇಪ್ಪತ್ತೈದು ವಸಂತಗಳೇ ಕಳೆದರೂ ಸಹ ಒಳಗೊಳಗೇ ತಮ್ಮ ಪತ್ನಿಯ ಬಗ್ಗೆ ಹೆಮ್ಮೆ ಪಡುವಂಥ, ಇವರೆಡೆಗೆ ಇಂದಿಗೂ ಪುನಃ ಪುನಃ ಆಕರ್ಷಿತರಾಗುವಂತಹ ಸುಮಧುರ ಸುಕೋಮಲ ವ್ಯಕ್ತಿತ್ವ ಸುಕನ್ಯಾ ಅವರದು. ಸುಕನ್ಯಾ ಅಂದೊಡನೆಯೇ ಮಾರುತಿಯವರ ಮುಖದಲ್ಲಿ ಮಂದಹಾಸವೊಂದು ಸುಳಿದುಹೋಗುವುದನ್ನು ನಾನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇವರಿಬ್ಬರೂ ತಮ್ಮ ಬಾಲ್ಯ ಕಾಲದಲ್ಲೇ ಪರಸ್ಪರ ಇಷ್ಟಪಟ್ಟು ಜೊತೆಯಾದದ್ದೇ ಒಂದು ಅನುಕಂಪಕ್ಕೆ ಕಾರಣವಿರಬಹುದು, ಅದರ ಮುಂದಿನ ಭಾಗವಾಗಿ ದಾಂಪತ್ಯ ಬಂಧನದಿಂದ ಹೊರ ಬಂದರೂ ಸಹ ಬ್ರಾಂಡ್‌ನೇಮ್ ಆಗಿ ಅವರು ಇಂದಿಗೂ ಸುಕನ್ಯಾ ಮಾರುತಿ ಆಗಿಯೇ ಉಳಿದುಕೊಳ್ಳಲು ಇಚ್ಛಿಸಿದ್ದಾರೆ.

ಹೈಸ್ಕೂಲಿನ ದಿನಗಳಲ್ಲೇ ಮಾರುತಿಯವರು ಬರೆದ ಒಂದು ಪತ್ರಕ್ಕಾಗಿ ಸುಕನ್ಯಾ ಸಾಕುತಂದೆಯಿಂದ ಹೊಡೆಸಿಕೊಂಡಿದ್ದರು. ಯಾರ ಕಾರಣಕ್ಕಾಗಿ ನಾನು ಹೊಡೆಸಿಕೊಂಡಿದ್ದೆನೋ ಆತನನ್ನೇ ಮದುವೆಯಾಗಬೇಕು ಎಂಬ ಹಟ ಅವರನ್ನು ಮುಂದೆ ಸಂಸಾರದಡೆಗೆ ತುಡಿಯುವಂತೆ ಮಾಡಿತ್ತು. ಇಬ್ಬರೂ ಮತ್ತೆ ಒಂದಾಗಬೇಕು ಅಂತ ಅನೇಕ ಕನ್ನಡ ಮನಸ್ಸುಗಳು ಈಗಲೂ ಹಾರೈಸುತ್ತಿವೆ. ಆದರೆ ಸುಕನ್ಯಾ ಅನುಭವಿಸಿದ ನೋವು ಸಂಕಟಗಳ ಕಹಿಗಳು ಅವರಿಗಷ್ಟೇ ಗೊತ್ತಿರುವಂಥದ್ದು. ಹಾಗೆ ಅವರ ಮನಸ್ಸಿನ ಮೇಲೆ ಮಾಯದ ಅನೇಕ ಗಾಯಗಳಿವೆ.

‘ದಾರಿಗುಂಟ ನನ್ನ ಬುತ್ತಿಯ ಗಂಟಿನ ಜೊತೆಗೆ ಅನೇಕ ನಂಟುಗಳು…’ ಈ ರೀತಿಯ ವಿಷಾದಪೂರ್ಣ ಅನುಭವದಿಂದ ಹುಟ್ಟಿದ ಭಾವಕ್ಕೆ ಲಾಲಿತ್ಯಪೂರ್ಣ ವಾಕ್ಯವನ್ನು ಕಟ್ಟುವ ಶಕ್ತಿ ಒಬ್ಬ ಅಪ್ಪಟ ಕವಿಯೊಬ್ಬಳ ಬಳಿ ಮಾತ್ರ ಸಾಧ್ಯ. ಇಂಥ ಇಲ್ಲಿನ ಅನೇಕ ಸಾಲುಗಳು ತೀಕ್ಷ್ಣ ಕವಿಯೋರ್ವಳನ್ನು ನಮಗೆ ಕಾಣಿಸುತ್ತಾ ಹೋಗುತ್ತದೆ. ಈ ಕಥನವು ನೋವಿನ ದಾಖಲೆಯಷ್ಟೇ ಅಲ್ಲ; ಅದು ಆತ್ಮಗೌರವ, ಬದುಕಿನ ಜೀವಂತಿಕೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟದ ಸಾಕ್ಷಿಯಾಗಿದೆ. ಇಂತಹ ಕೃತಿಗಳು ಓದುಗರಲ್ಲಿ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಅರಿವನ್ನು ಮೂಡಿಸುತ್ತವೆ. ಸಾಹಿತ್ಯದ ನಿಜವಾದ ಶಕ್ತಿ ಸಮಾಜದ ಮರೆಮಾಚಿದ ಸತ್ಯಗಳನ್ನು ಬೆಳಕಿಗೆ ತರುವುದು ಎಂಬುದನ್ನು ಈ ಕಥನವು ಸ್ಪಷ್ಟಪಡಿಸುತ್ತವೆ. ಇದು ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಬದಲಾವಣೆ, ಮಹಿಳಾ ಅಸ್ಮಿತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿ ಶಾಶ್ವತ ಮಹತ್ವವನ್ನು ಹೊಂದಿದೆ.

‘ಹುಟ್ಟಿದಾಗ ಸಾವು ಬರಲಿಲ್ಲ; ಆದರೆ ನಿತ್ಯವೂ ಸಾಯುತ್ತಾ ಬದುಕಿದೆ, ಇಂದಿಗೂ ಸಾವಿನೊಂದಿಗೆ ಹೋರಾಡುತ್ತಲೇ ಇದ್ದೇನೆ..’ ಒಬ್ಬ ಹಿರಿಯ ಲೇಖಕಿ ತನ್ನ ವಾಸ್ತವದ ಸ್ಥಿತಿಯನ್ನು ಹೇಳಿಕೊಳ್ಳಬೇಕಾದ ಸಂದರ್ಭ ಹೇಗೆ ಒದಗಿ ಬಂತು ಎಂಬುದಕ್ಕೆ ಸಮಾಜವೇ ಉತ್ತರಿಸಬೇಕು, ಅವರ ಈ ಮಾತು ಸಮಾಜದ ಅನೇಕ ಹೆಣ್ಣು ಮಕ್ಕಳ ಬವಣೆಯನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತಿದೆ. ಹೀಗೆ ಸುಕನ್ಯಾ ತಮ್ಮ ಒಳಗೊಳಗೇ ನಡೆಸಿಕೊಂಡು ಬಂದ ನರಳಾಟಗಳೆಲ್ಲವೂ ಈ ಕೃತಿಯಲ್ಲಿ ಸಾಧ್ಯಂತವಾಗಿ ನಿರೂಪಿತವಾಗಿವೆ.

‘ಕರುಣೆಗಿಂತ ಮಿಗಿಲಾದ ಗುಣವಿಲ್ಲ, ಮನುಷ್ಯನ ಮೊದಲ ಆದ್ಯ ಕರ್ತವ್ಯವೇ ಇನ್ನೊಬ್ಬ ಮನುಷ್ಯನನ್ನು ರಕ್ಷಿಸುವುದು’ ಎಂದು ಕುವೆಂಪು ಅವರು ಒಂದೆಡೆ ಹೇಳುತ್ತಾರೆ. ಈ ಮಾತನ್ನು ಅಕ್ಷರಶಃ ಪಾಲಿಸುತ್ತಾ ಬಂದ ಜೀವ ಇದು. ಅದಕ್ಕೆ ಇಲ್ಲೊಂದು ಜೀವಂತ ಉದಾಹರಣೆಯೇ ಇದೆ. ಇವರು ಹುಟ್ಟಿ ಬೆಳೆದ ಬೋರನಹಳ್ಳಿಯಲ್ಲಿ ಒಮ್ಮೆ ದೊಡ್ಡ ಮಳೆಗೆ ಕೆರೆ ಕಟ್ಟೆ ಒಡೆದ ಸ್ವಲ್ಪ ಹೊತ್ತಿನಲ್ಲಿ ಕೆರೆ ಕೋಡಿ ಹರಿದು ಓಣಿ ಮುಳುಗುತ್ತದೆ ಎಂಬ ಸುದ್ದಿ ಹರಡಿ, ಎಲ್ಲರೂ ಮಕ್ಕಳು ಮರಿ ಕುರಿ ಕೋಳಿ ಕೈಗೆ ಸಿಕ್ಕ ಸಾಮಾನು ಕಟ್ಟಿಕೊಂಡು ಓಡುತ್ತಾರೆ, ಆದರೆ ಪಾರ್ಶ್ವವಾಯು ಪೀಡಿತಳಾದ ತನ್ನ ದೊಡ್ಡ ಅಜ್ಜಿಯನ್ನು ಲೇಖಕಿ ಅಲ್ಲಿಂದ ಬಿಟ್ಟು ಕದಲುವುದಿಲ್ಲ. ಅಂತಹ ಒಂದು ಕಕ್ಕುಲಾತಿಯ ಜೀವ ಇದು, ಕಷ್ಟಕಾಲದಲ್ಲಿ ಮನುಷ್ಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಅವರ ಮಹಾನ್ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

ಲೇಖಕಿಯ ಅಜ್ಜಿ ಬೋರನಹಳ್ಳಿ ಮಾಯಮ್ಮನದು ಪೂಜಾರಿಕೆ ಮಾಡುವ ಕುಟುಂಬ. ಕೆಂಡ ತುಳಿಯುವ ಕುಟುಂಬವೂ ಹೌದು, ಇಡೀ ಹಳ್ಳಿಯೇ ಒಂದು ಕುಟುಂಬದಂತೆ ಲೇಖಕಿ ಬಾಳಿದವರು. ಹಬ್ಬದ ದಿನ ಅಜ್ಜಿ ಸಾಕ್ಷಾತ್ ಮಾಯಮ್ಮನೆಂದೇ ತಿಳಿದು ಜನ ಭಕ್ತಿ ತೋರುತ್ತಿದ್ದರು. ಮೂರು ಜನ ತಮ್ಮಂದಿರನ್ನು ಒಬ್ಬ ತಂಗಿಯನ್ನು ಹೊಂದಿದ ಇವರ ತವರಿನ ಬಾಲ್ಯ ಕೂಡ ಅಷ್ಟು ಸಮೃದ್ಧಿ ಹೊಂದಿರಲಿಲ್ಲ. ಪಿಯುಸಿವರೆಗೆ ಬರಿಗಾಲಲ್ಲಿ ಕಾಲೇಜಿಗೆ ಹೋದ ಈ ಲೇಖಕಿ, ವರ್ಷದ ಕೊನೆಗೆ ಸ್ಕಾಲರ್‌ಶಿಪ್ ಬಂದ ಮೇಲೆ ಹವಾಯಿ ಚಪ್ಪಲಿ ಕೊಂಡವರು. ಹೈಸ್ಕೂಲಿನ ದಿನಗಳಲ್ಲೇ ಅನಾಮಿಕವಾಗಿ ಬಂದು ಹಿಂಸಿಸುವ ಪತ್ರಗಳು ಇವರ ಚಾರಿತ್ರ್ಯವಧೆಯನ್ನು ವಿನಾಕಾರಣ ಮಾಡುತ್ತಿದ್ದವು. ಹೈಸ್ಕೂಲಿನಲ್ಲಿ ಒಬ್ಬ ಕಾಮುಕ ಮೇಷ್ಟರು ಲೈಬ್ರರಿ ಹತ್ತಿರಕ್ಕೆ ಬಂದು ಭಯ ಬೀಳಿಸಿದ್ದ, ನಂತರ ಮದುವೆ, ಪದವಿ, ತದನಂತರ ಧಾರವಾಡದಲ್ಲಿ ನೆಲೆಯೂರಿದ ದಿನಗಳ ಆ ಕಷ್ಟಗಳು, ಸಾಹಿತಿಗಳ ಒಡನಾಟಗಳು ಎಲ್ಲವೂ ವಿಸ್ತೃತವಾಗಿ ಇಲ್ಲಿ ನಿರೂಪಿತವಾಗಿವೆ.

ಮುತ್ತು ಕಟ್ಟಿಸುವ ವೀಳ್ಯ ನೀಡುವ ದುಷ್ಟ ಪದ್ಧತಿಗೆ ಬಲಿಯಾದ ಲೇಖಕಿಯ ತಾಯಿಯ ಸ್ಥಿತಪ್ರಜ್ಞತೆಯನ್ನು ಅಲ್ಲಲ್ಲಿ ನಾವು ಲೇಖಕಿಯಲ್ಲಿಯೂ ಕಾಣುತ್ತೇವೆ. ನಾಟಕದ ಕಲೆ ಇರುವ ತಾಯಿ ಸಾಹಿತ್ಯದಲ್ಲಿ ಆಸಕ್ತಿ ಇರುವ ತಂದೆ ಲೇಖಕಿಯ ಬಾಲ್ಯವನ್ನು ಸೃಜನಾತ್ಮಕ ಚಿಂತನೆಯತ್ತ ನಡೆಸಿದರು ಅನ್ನಬಹುದು. ಆದರೆ ಮುಂದೆ ಇವರ ಮದುವೆಯ ಲಗ್ನ ಪತ್ರಿಕೆಯಲ್ಲಿ ‘ದೇವರಮನಿ ಶಿವಾನಂದಪ್ಪನವರ ಪಾಲಿತಪುತ್ರಿ’ ಎಂದು ಬರೆಸಿದಾಗ ತನ್ನ ತಂದೆಯನ್ನು ಅವರು ಬೇರೆ ರೀತಿಯಾಗಿಯೇ ಕಾಣುವಂತಾಯಿತು.

ಅರ್ಜಿ ಫಾರಂಗಳಲ್ಲಿ ತಾಯಿಯ ಹೆಸರನ್ನು ಮಾತ್ರ ತುಂಬಿಸುವ ಸ್ಥಿತಿ ಎದುರಾದಾಗ ಗೆಳತಿಯರು ಕೇಳುವ ಪ್ರಶ್ನೆಗಳಿಗೆ ಲೇಖಕಿಯ ಹತ್ತಿರ ಉತ್ತರವಿರಲಿಲ್ಲ. ಸ್ವಾಮೀಜಿಗೆ ‘ಸಾಕು ಮಗಳು’ ಎಂದು ತೋರಿದ ಹೆತ್ತಪ್ಪನ ಸಾಮಾಜಿಕ ಬದುಕಿನ ಕಟ್ಟುಪಾಡುಗಳು ಬಾಲ್ಯದಲ್ಲಿ ಲೇಖಕಿಗೆ ಅರ್ಥವಾಗುವಂಥದ್ದಲ್ಲ. ಇಲ್ಲಿ ಅಜ್ಜಿ-ತಾಯಿ-ಮಗಳ ಸಂಬಂಧ, ಆತ್ಮಗೌರವ, ಶಿಕ್ಷಣಕ್ಕಾಗಿ ಹೋರಾಟ, ಸ್ವಾವಲಂಬನೆಯ ಕನಸು ಮತ್ತು ಸ್ವತಂತ್ರ ವ್ಯಕ್ತಿತ್ವ ನಿರ್ಮಾಣಗಳು ಪ್ರಮುಖ ಅಂಶಗಳಾಗಿವೆ. ಇಲ್ಲಿ ಸುಕನ್ಯಾ ಅವರು ತನ್ನ ಸಾಧನೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಗುರುತಿಸಿಕೊಳ್ಳಲು ಪ್ರಯತ್ನಿಸಿದ್ದು ಈ ಕೃತಿಯಲ್ಲಿ ಬಿಂಬಿತವಾಗಿದೆ.

‘ಭೂಮಿಗೆ ಗಟ್ಟಿಯಾಗಿ ಬಂಧಿಸಿದ ಯಾವ ಅನುಬಂಧವೂ ನನಗೆ ಒದಗಿ ಬಂದಿಲ್ಲ ಹಾಗಾಗಿ ಕಳೆದುಕೊಳ್ಳುವ ಭಯ ನನಗಿರಲಿಲ್ಲ’ ಎಂಬಂತಹ ಮಾತುಗಳನ್ನು ಒಬ್ಬ ಹೆಣ್ಣು ಹೇಳಬೇಕಾದರೆ, ಈ ಸಮಾಜ ಮತ್ತು ಈ ವ್ಯವಸ್ಥೆಯ ಪಾಲು ಎಷ್ಟು ಎಂಬ ಪ್ರಶ್ನೆಯನ್ನೂ ಸಹ ನಮಗೆ ನಾವೇ ಕೇಳಿಕೊಳ್ಳುವಂತಿದೆ. ಬಂಡಾಯ ಸಾಹಿತಿ ಎಂಬ ಹೊಸ ಅಸ್ಮಿತೆ ದೊರೆತ ಕ್ಷಣ, ಸುಕನ್ಯಾ ಅವರ ಹೊಸ ಹುಟ್ಟು ಅಂತಲೇ ಹೇಳಬಹುದು. ‘ಹೆಣ್ಣಾಗಿ ಹುಟ್ಟಿದ ನನ್ನನ್ನು ಒಂದು ವ್ಯಕ್ತಿತ್ವವಾಗಿಸಿದ್ದು ಈ ಬಂಡಾಯದ ವಿಚಾರಧಾರೆ’ ಎನ್ನುವ ಸುಕನ್ಯಾ ಅವರ ಗುಂಡಿಗೆಯನ್ನು ಇನ್ನಷ್ಟು ಗಟ್ಟಿ ಮಾಡಿದ್ದು ತಾನು ಕಲಿತ ವಿದ್ಯೆ ಎಂದೇ ಮತ್ತೆ ಮತ್ತೆ ಅವರು ಸ್ಮರಿಸಿಕೊಳ್ಳುತ್ತಾರೆ.

ಒಂಟಿತನದ ಒಳಪೆಟ್ಟಿನ ನೋವು, ನನಗೆ ನಾನೇ ಸ್ವಯಂಭೂ, ನನ್ನಂತೆ ನನ್ನ ಒಂಟಿತನಕ್ಕೂ ವಯಸ್ಸಾಗಿದೆ, ಪ್ರೀತಿಸಿ ಮದುವೆಯಾದರೆ ಈ ಒಂಟಿತನವನ್ನು ಗೆಲ್ಲಬಹುದೆಂದುಕೊಂಡಿದ್ದೆ, ಆದರೆ ಅದು ಕೆಂಡ ನುಂಗಿದಂತಾಗಿತ್ತು, ಎಂಬ ಇಲ್ಲಿಯ ಸಾಲುಗಳು ನಮ್ಮನ್ನು ಸುಕನ್ಯಾ ಅವರ ಇಡೀ ಬದುಕನ್ನು ಇನ್ನೊಂದೇ ಮಗ್ಗುಲಲ್ಲಿ ನಿಂತು ನೋಡಲು ಸಹಾಯ ಮಾಡುತ್ತವೆ.

‘ನನ್ನ ಹುಟ್ಟು ಒಂದು ಅಪರಾಧವಲ್ಲ, ಅದು ನನ್ನ ತಪ್ಪಲ್ಲವಲ್ಲ’ ಎಂಬ ಲೇಖಕಿಯ ಒಂದು ಯಾತನಾಮಯ ಮಾತು ಮತ್ತವರ ದಿಟ್ಟ ನಿಲುವುಗಳು ಓದುಗರನ್ನು ವಿಶ್ರಮಿಸಲು ಬಿಡದೇ ತಟ್ಟಿ ಎಬ್ಬಿಸುವಂತಿದೆ. ಸುಕನ್ಯಾ ಅವರ ಬದುಕು ಮತ್ತು ಬರಹ ಹೆಣ್ಣುಮಕ್ಕಳಿಗೆ ಒಂದು ಪಾಠದಂತೆಯೇ ಇಲ್ಲಿ ನಿರೂಪಿತವಾಗಿದೆ. ಈ ಕಥನವು ಕನ್ನಡ ಸಾಹಿತ್ಯವನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿಸುತ್ತದೆ ಎಂಬ ನಂಬಿಕೆ ನನ್ನದು. ಇದು ಪ್ರಮುಖವಾಗಿ ಮಹಿಳಾ ಅಧ್ಯಯನ, ದಲಿತ ಅಧ್ಯಯನ ಮತ್ತು ಸಾಂಸ್ಕೃತಿಕ ಅಧ್ಯಯನಗಳಿಗೆ ಅಮೂಲ್ಯ ದಾಖಲೆಯಾಗಿದೆ.

ಇಂಥ ಆತ್ಮಕಥಾನಕಗಳು ವ್ಯಕ್ತಿಯ ಜೀವನದ ಅನುಭವಗಳನ್ನು ಮಾತ್ರ ದಾಖಲಿಸುವ ಸಾಹಿತ್ಯ ಪ್ರಕಾರವಲ್ಲ; ಇದು ಸಂಸ್ಕೃತಿ, ಅಸಮಾನತೆ ಮತ್ತು ಮಾನವ ಸಂಬಂಧಗಳ ಜೀವಂತ ದಾಖಲೆಯೂ ಆಗಿದೆ. ವಿಶೇಷವಾಗಿ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಆತ್ಮಕಥನಗಳು ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡುತ್ತಲೇ ಬಂದಿವೆ. ದೇವದಾಸಿ ಪದ್ಧತಿಯ ಹಿನ್ನೆಲೆಯಲ್ಲಿ ಹುಟ್ಟಿದ ಮಹಿಳೆಯ ಆತ್ಮಕಥನವು ಒಬ್ಬ ವ್ಯಕ್ತಿಯ ಬದುಕಿನ ಕಥೆಯಷ್ಟೇ ಅಲ್ಲ, ಶತಮಾನಗಳಿಂದ ಶೋಷಣೆಗೆ ಒಳಗಾದ ಮಹಿಳೆಯರ ಸಮುದಾಯದ ಸಂಕಟ, ಪ್ರತಿರೋಧ ಮತ್ತು ಆತ್ಮಗೌರವದ ಹೋರಾಟದ ದಾಖಲೆಯಾಗಿದೆ.

ಬರವಣಿಗೆಯ ಮೂಲಕ ತನ್ನ ಧ್ವನಿಯನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನವೇ ಇಲ್ಲಿಯ ಮೂಲ ಆಶಯವಾಗಿ ನಮಗೆ ಕಾಣುತ್ತದೆ. ಓದುಗರಲ್ಲಿ ಸಹಾನುಭೂತಿ ಮೂಡಿಸುವುದರ ಜೊತೆಗೆ ಸಾಮಾಜಿಕ ಪರಿವರ್ತನೆಯ ಅಗತ್ಯವನ್ನು ಮನಗಾಣಿಸುತ್ತದೆ. ಕನ್ನಡದಲ್ಲಿ ದೇವದಾಸಿ ಸಮುದಾಯದ ಬದುಕನ್ನು ದಾಖಲಿಸಿರುವ ಕೃತಿಗಳು ಕಡಿಮೆ ಅಂತಲೇ ಹೇಳಬಹುದು. ಈ ಕೃತಿ ಸಾಮಾಜಿಕ ವಾಸ್ತವಗಳನ್ನು ನೇರವಾಗಿ ದಾಖಲಿಸಿರುವ ಮಹತ್ವದ ಆತ್ಮಕಥನವಾಗಿದೆ.

About The Author

ಸುನಂದಾ ಪ್ರಕಾಶ ಕಡಮೆ

ಕಥೆಗಾರ್ತಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸದ್ಯ ಹುಬ್ಬಳ್ಳಿ ನಿವಾಸಿ. ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವರ ಪ್ರಕಟಿ ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು (ಕಾದಂಬರಿಗಳು). ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳೂ ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ