ಕಕುದ್ಮಿಯ ಕತೆಯಲ್ಲಿ, ಅವನು ಭವಿಷ್ಯದ ಭೂಮಂಡಲಕ್ಕೆ ಬಂದಾಗ ಅವನಿಗೆ ಕಾಣುವುದು ಅಂತಹ ಸಂತೋಷದ ಪ್ರಪಂಚವಲ್ಲ; ಬದಲಿಗೆ, ಬುದ್ಧಿ ಮತ್ತು ಚೈತನ್ಯ ಎರಡರಲ್ಲೂ ಕ್ಷೀಣಗೊಂಡಿರುವ ಮಾನವ ಜನಾಂಗ. ಆದರೆ, ಬೇಗಂ ರೊಕೆಯಾ ಬರೆದ ಕತೆಯಲ್ಲಿ, ಅದರ ನಾಯಕಿ ಸುಲ್ತಾನಾ ಕಾಣುವ ಭವಿಷ್ಯತ್ತಿನ ಪ್ರಪಂಚ ಮಹಿಳಾ ಲೋಕವಾಗಿ ಮಾರ್ಪಾಡಾಗಿರುತ್ತದೆ. (ಅದರ ಹೆಸರೂ ಸಹ “ಲೇಡಿ ಲ್ಯಾಂಡ್”!) ಸರ್ಕಾರಿ ಆಡಳಿತದಿಂದ ಹಿಡಿದು, ಕೌಟುಂಬಿಕ ನಾಯಕತ್ವದ ವರೆಗೆ, ಸಮಾಜದ ಎಲ್ಲ ರಂಗಗಳಲ್ಲಿಯೂ ಹೆಂಗಸರದೇ ಪಾರಮ್ಯ. ಗಂಡಸರಿಗೆ “ಪರ್ದಾ” ಪದ್ಧತಿ ಬಂದುಬಿಟ್ಟಿರುತ್ತದೆ. ಕೆಲಸದ ಅವಧಿ, ಎಂಟು ಗಂಟೆಗಳ ಬದಲಿಗೆ, ಕೇವಲ ಎರಡು ಗಂಟೆಗಳು ಮಾತ್ರ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕಾಮಿಕ್ಸ್ ನ ಡಾಬೂವಿಗೇನೋ ಪ್ರೊ.ಅಧಿಕಾರಿಯಂತಹ ಮಹಾನ್ ವಿಜ್ಞಾನಿ-ತಂತ್ರಜ್ಞಾನಿಯೊಬ್ಬರ ಆಪ್ತ ಸಂಪರ್ಕವಿತ್ತು. ಅವರು ಅವನಿಗೆ ಕಾಲಯಂತ್ರವೊಂದನ್ನು ನಿರ್ಮಿಸಿ ಕೊಟ್ಟಿದ್ದರು. ಆದರೆ, ಆ ಕತೆಯನ್ನು ನಾನು ಓದುವ ಮುನ್ನವೇ ನಾನೂ ಸಹ ಕಾಲಯಾನವೊಂದನ್ನು ಶುರು ಮಾಡಿದ್ದೆ – ನನಗೇ ತಿಳಿಯದಂತೆ! ಡಾಬೂವಿಗೆ ಪ್ರೊಫೆಸರ್ ಒಬ್ಬರು ಕಾಲಯಂತ್ರ ನಿರ್ಮಿಸಿಕೊಟ್ಟಿದ್ದರೆ, ನನ್ನ ಕಾಲಯಾನಕ್ಕೆ ಸಹಾಯ ಮಾಡಿದವರೂ ಸಹ ಓರ್ವ ಶಿಕ್ಷಕರೇ!! ಅದೂ ಕೇವಲ ಒಂದು ಪೆನ್ ಬಳಸಿ!!!

ನನಗೆ ಐದು ವರ್ಷ ಮುಟ್ಟುವ ಮುನ್ನವೇ, ನನ್ನ ತಮ್ಮ ಮತ್ತು ತಂಗಿಯರ ಜನ್ಮವಾಗಿತ್ತು. ಮನೆಯಲ್ಲಿ ಒಟ್ಟಿಗೆ ಮೂರು ಮಕ್ಕಳನ್ನು ನೋಡಿಕೊಳ್ಳಲು ಕಷ್ಟವೆಂದೋ ಅಥವಾ ಮತ್ತಿನ್ನೇನೋ ಕಾರಣದಿಂದಲೋ, ನನಗೆ ಪ್ರೈಮರಿ ಶಾಲೆ ಸೇರುವ ವಯಸ್ಸಾಗದಿದ್ದರೂ ನನ್ನನ್ನು ಶಾಲೆಗೆ ಸೇರಿಸಲಾಯಿತು. ಇದು ಅಂತಹ ವಿಚಿತ್ರವೇನಲ್ಲ. ನಮ್ಮ ಕುಟುಂಬದಲ್ಲೇ ನನಗಿಂತ ಹಿರಿಯರೂ, ಕಿರಿಯರೂ ಸಹ ಈ ಅನರ್ಹ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆ ಕಾಲದಲ್ಲಿ ನಮ್ಮ ಮನೆಯ ಹತ್ತಿರದಲ್ಲೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇತ್ತು. ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದವರೊಬ್ಬರು ಅಲ್ಲಿ ಶಿಕ್ಷಕರಾಗಿದ್ದರು. ಅವರ ಮನೆ ನಮ್ಮ ಮನೆಯ ಎದುರಿನಲ್ಲೇ ಇತ್ತು. ಅವರೊಂದು ದಿನ ನನ್ನನ್ನು ಶಾಲೆಗೆ ಕರೆದುಕೊಂಡು ಹೋದರು. “ಶೇಷಾದ್ರಿ” ಎಂದು ನನ್ನ ಹೆಸರನ್ನು ಶಾಲೆಯ ರೆಜಿಸ್ಟರ್‌ ನಲ್ಲಿ ಬರೆದರು. (“ಗಂಜೂರು” ಎನ್ನುವುದು ಮುಂದೆಂದೋ ನಾನು ಜೋಡಿಸಿಕೊಂಡಂತಹ ನಮ್ಮ ಪೂರ್ವಿಕರ ಹಳ್ಳಿಯ ಹೆಸರು) ನನ್ನ ಜನ್ಮ ದಿನಾಂಕವನ್ನು ಶಾಲೆಯ ನಿಯಮಾವಳಿಗೆ ತಕ್ಕಂತೆ ಬದಲಿಸಿ ನಮೂದಿಸಿದರು.

ನಿಮಗೆ ಒಂದು ವರ್ಷ ಹೆಚ್ಚಾಗಲು ಒಂದು ವರ್ಷ ಬೇಕಿರಬಹುದು. ಆದರೆ, ಶಿಕ್ಷಕರೊಬ್ಬರ ಲೇಖನಿಯ ಸಹಾಯದಿಂದ, ಆ ದಿನ ನಾನು ಕೆಲವೇ ಸೆಕೆಂಡುಗಳಲ್ಲಿ ವರ್ಷಗಳೇ ದೊಡ್ಡವನಾಗಿಬಿಟ್ಟೆ! (ಡಾಬೂ ತನ್ನ ಕಾಲಯಾನದಲ್ಲಿ ಡೈನೋಸಾರುಗಳನ್ನು ಎದುರಿಸಿದರೆ, ದಶಕಗಳ ನಂತರ, ನಾನೂ ಸಹ ಅಮೆರಿಕದ ಪೌರತ್ವ ಪಡೆಯುವ ಸಂದರ್ಭದಲ್ಲಿ ಬರ್ತ್ ಸರ್ಟಿಫಿಕೇಟ್ ತಕರಾರನ್ನು ಎದುರಿಸಬೇಕಾಯಿತು. ತಿರುವು ರಸ್ತೆಗಳಲ್ಲಿ ಬಸ್ ಪ್ರಯಾಣ ಮಾಡುವಾಗ ಹಲವರಿಗೆ ತಲೆ ಸುತ್ತುವುದಾದರೇ, ನನ್ನ ಈ ಕಾಲ ಪ್ರಯಾಣದಿಂದ ನಮ್ಮ ತಂದೆ ಸರ್ಕಾರಿ ಕಛೇರಿ ಸುತ್ತುವಂತಾಯಿತು. ಟೈಮ್ ಟ್ರಾವೆಲ್‌ ನ ತೊಂದರೆಗಳು ಒಂದೆರಡಲ್ಲ!!)

******

ಎಚ್.ಜಿ.ವೆಲ್ಸ್ ೧೮೯೫ರಲ್ಲಿ ತನ್ನ “ದ ಟೈಮ್ ಮಷೀನ್” ಪ್ರಕಟಿಸುವವರೆಗೆ, ಕಾಲಯಂತ್ರದಲ್ಲಿ ಯಾರೂ ಪ್ರಯಾಣ ಮಾಡದಿದ್ದರೂ, ಬೇರಾವುದೋ ವಿಧಾನಗಳಿಂದ ಕಾಲ ಪ್ರಯಾಣ ಮಾಡಿದವರ ಹಲವಾರು ಉದಾಹರಣೆಗಳಿವೆ.

ಮಹಾಭಾರತದಲ್ಲಿ ಬರುವ ರಾಜ ಕಕುದ್ಮಿ ಮತ್ತು ಅವನ ಮಗಳು ರೇವತಿಯ ಕತೆ, ಕಾಲಯಾನದ ಇತಿಹಾಸದಲ್ಲೇ ಮೊಟ್ಟ ಮೊದಲನೆಯ ಇಂತಹ ಒಂದು ನಿದರ್ಶನ. ಅವರೂ ಸಹ ತಮಗೇ ಅರಿವಿಲ್ಲದೆ ಕಾಲಯಾನ ಮಾಡಿದವರು. ನನ್ನಂತೆಯೇ!

ಮಹರಾಜ ಕಕುದ್ಮಿ ಕುಶಸ್ಥಲೀ ರಾಜ್ಯದ ರಾಜನಾಗಿದ್ದವನು. ಅವನ ಇನ್ನೊಂದು ಹೆಸರು ರೈವತ. ಅವನು ಸದ್ಗುಣ ಸಂಪನ್ನನೂ ಮತ್ತು ಕರುಣಾಮಯಿಯೂ ಆಗಿದ್ದವನು. ಅವನ ಪುಣ್ಯ ಫಲ ಮತ್ತು ಹಲವು ವರ್ಷಗಳ ಪೂಜಾಫಲದಿಂದ ಅವನಿಗೊಂದು ಹೆಣ್ಣು ಮಗುವಿನ ಜನ್ಮವಾಯಿತು. ಅವಳ ಹೆಸರು ರೇವತಿ. ರೇವತಿಯೂ ಸಹ ತನ್ನ ತಂದೆಯಂತೆಯೇ, ಸದ್ಗುಣಿ. ಹಾಗೆಯೇ ಮಹಾನ್ ರೂಪವಂತೆ ಸಹ.

ಅವಳು ತಾರುಣ್ಯಕ್ಕೆ ಬಂದಾಗ, ರಾಜ ಕಕುದ್ಮಿ ತನ್ನ ಮಗಳಿಗೆ ತಕ್ಕನಾದ ವರನೊಬ್ಬನನ್ನು ಹುಡುಕಲಾರಂಭಿಸಿದ. ಆದರೆ, ಅವನೆಷ್ಟೇ ಹುಡುಕಿದರೂ, ರೇವತಿಯ ಗುಣ, ರೂಪ, ಅಂತಸ್ತುಗಳಿಗೆ ತಕ್ಕನಾದ ವರ ದೊರೆಯಲೇ ಇಲ್ಲ. ಹುಡುಕಿ-ಹುಡುಕಿ ಬೇಸತ್ತ ಕಕುದ್ಮಿ, ಸೃಷ್ಟಿಕರ್ತ ಬ್ರಹ್ಮನನ್ನೇ ಈ ವಿಷಯದ ಕುರಿತು ಕೇಳುವುದೆಂದು, ತನ್ನ ಮಗಳನ್ನೂ ಕರೆದುಕೊಂಡು ಬ್ರಹ್ಮ ಲೋಕಕ್ಕೆ ಬಂದ.

ಕಕುದ್ಮಿ ಮತ್ತು ರೇವತಿ ಬ್ರಹ್ಮ ಲೋಕಕ್ಕೆ ಆಗಮಿಸಿದಾಗ, ಅಲ್ಲಿ ಗಂಧರ್ವರು ಸಂಗೀತ ಕಛೇರಿಯೊಂದನ್ನು ನೀಡುತ್ತಿದ್ದರು. ಬ್ರಹ್ಮ ಸಂಗೀತ ಕೇಳುವುದರಲ್ಲಿ ಮಗ್ನನಾಗಿದ್ದ. ಕಛೇರಿ ಮುಗಿದನಂತರ, ಕಕುದ್ಮಿ ತನ್ನ ಅಳಲನ್ನು ಬ್ರಹ್ಮನೊಂದಿಗೆ ತೋಡಿಕೊಂಡ; ರೇವತಿಗೆ ತಕ್ಕನಾದ ವರನಿದ್ದರೆ ತೋರಿಸುವಂತೆ ಬ್ರಹ್ಮನನ್ನು ಬೇಡಿಕೊಂಡ.

ಕಕುದ್ಮಿಯ ಮಾತನ್ನು ಕೇಳಿದ ಬ್ರಹ್ಮ ನಸುನಕ್ಕ. ಬ್ರಹ್ಮಲೋಕದ ಕಾಲದ ವೇಗಕ್ಕೂ, ಭೂಲೋಕದ ಕಾಲದ ವೇಗಕ್ಕೂ ಮಹಾನ್ ವ್ಯತ್ಯಾಸ ಇರುವುದನ್ನು ಅವನು ಕಕುದ್ಮಿಗೆ ತಿಳಿಸಿದ. ಗಂಧರ್ವರ ಕಛೇರಿ ಮುಗಿಸುವ ಹೊತ್ತಿಗೆ ಭೂಲೋಕದಲ್ಲಿ ಇಪ್ಪತ್ತೇಳು ಚತುರ್ಯುಗಗಳು ಕಳೆದಿದ್ದವು. ಕಕುದ್ಮಿಯ ರಾಜ್ಯ, ಬಂಧು ಬಳಗ, ಪತ್ನಿ ಎಲ್ಲರೂ ನಾಶವಾಗಿ ನೂರೆಂಟು ಯುಗಗಳೇ ಮುಗಿದಿದ್ದವು. ಬ್ರಹ್ಮನ ಈ ಮಾತನ್ನು ಕೇಳಿದ ಕಕುದ್ಮಿಗೆ ಅತೀವ ವಿಷಾದವಾಯಿತು. ಆದರೆ, ಬ್ರಹ್ಮ ಕಕುದ್ಮಿಯನ್ನು ಸಂತೈಸಿ, ಕಕುದ್ಮಿ ಮತ್ತು ರೇವತಿ ಭೂಲೋಕಕ್ಕೆ ಮರಳುವ ವೇಳೆಗೆ, ಅಲ್ಲಿ ಕೃಷ್ಣ-ಬಲರಾಮರ ಅವತಾರವಾಗಿರುವುದಾಗಿಯೂ, ಬಲರಾಮನೇ ರೇವತಿಗೆ ತಕ್ಕನಾದ ವರನೆಂದೂ ತಿಳಿಸಿದ.

ಕಕುದ್ಮಿ ಮತ್ತು ರೇವತಿ ಭೂಲೋಕಕ್ಕೆ ವಾಪಸಾದಾಗ ಇಡೀ ಭೂಮಂಡಲವೇ ಬದಲಾಗಿತ್ತು. ಮನುಷ್ಯರ ರೂಪ, ಚರ್ಯೆಗಳೂ ಬದಲಾಗಿದ್ದವು. ಭಾಗವತ ಪುರಾಣದ ಪ್ರಕಾರ, ಮಾನವರ ಗಾತ್ರ, ಚೈತನ್ಯ ಮತ್ತು ಬುದ್ಧಿ ಶಕ್ತಿಗಳು ಕಡಿಮೆಯಾಗಿರುವುದು ಕಕುದ್ಮಿಯ ಅನುಭವಕ್ಕೆ ಬಂತು.

ಕೆಲ ಸಮಯದಲ್ಲೇ, ಬಲರಾಮನೊಂದಿಗೆ ರೇವತಿಯ ವಿವಾಹ ಮಾಡಿಸಿ, ತಪಶ್ಚರ್ಯದಲ್ಲಿ ತೊಡಗಲು ಹಿಮಾಲಯಕ್ಕೆ ಕಕುದ್ಮಿ ಹೊರಟು ಹೋದ.

******

ಕಕುದ್ಮಿ ಮತ್ತು ರೇವತಿಯರ ಕಾಲಯಾನ ದೈವೀಕ ಶಕ್ತಿಯಿಂದ ಸಂಭವಿಸಿದ್ದರೆ, ಈ ಪ್ರಯಾಣವನ್ನು ಸೈತಾನನ ಶಕ್ತಿಯಿಂದಲೂ ಮಾಡಬಹುದೆಂದು ತೋರಿಸಿದವನು ಬ್ರಿಟಿಷ್ ಲೇಖಕ ಮತ್ತು ವಿಡಂಬನಕಾರ ಮ್ಯಾಕ್ಸ್ ಬೀರ್‌ ಬಾಮ್.

ಅವನ ಕತೆಯೊಂದರಲ್ಲಿ, ೧೮೯೭ರಲ್ಲಿ ಇನೊಕ್ ಸೋಮ್ಸ್ ಎನ್ನುವ ಕವಿ ಇರುತ್ತಾನೆ. ಅವನೊಬ್ಬ ಯಾರೂ ಓದುಗರಿಲ್ಲದ ಕಳಪೆ ಕವಿ. ಆದರೆ, ಸೋಮ್ಸ್‌ ಗೆ ತನ್ನ ಕಾವ್ಯದ ಶ್ರೇಷ್ಠತೆಯ ಬಗೆಗೆ ಅಪಾರವಾದ ನಂಬಿಕೆ ಇರುತ್ತದೆ. ತನ್ನ ಕಾಲದ ಓದುಗರು ತನ್ನ ಸಾಹಿತ್ಯದ ಉತ್ಕೃಷ್ಟತೆಯನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥರಲ್ಲವೆಂದೂ ತಾನು ಬದುಕಿರುವಾಗ ದೊರಕದ ಮಾನ್ಯತೆ, ಶತಮಾನಗಳ ನಂತರ ಖಂಡಿತಾ ದೊರಕುತ್ತದೆ ಎಂದೇ ಅವನ ಎಣಿಕೆ. ಮುಂದೊಮ್ಮೆ, ಇಂಗ್ಲೀಷ್ ಓದುಗರು, ಶೇಕ್ಸ್‌ಪಿಯರ್‌ನೊಂದಿಗೆ “ಇನೊಕ್ ಸೋಮ್ಸ್” ಹೆಸರನ್ನೂ ಜಪಿಸುವುದು ಖಚಿತವೆಂದು ಅವನು ತನಗೆ ತಾನೇ ಹೇಳಿಕೊಳ್ಳುತ್ತಿರುತ್ತಾನೆ.

(ಇನೊಕ್ ಸೋಮ್ಸ್)

ಸೋಮ್ಸ್‌ ಗೆ ಒಂದು ವಿಷಾದಕರ ವಿಷಯವೆಂದರೆ, ತನ್ನ ಸಾಹಿತ್ಯಕ್ಕೆ ಮಾನ್ಯತೆ ದೊರಕುವ ವೇಳೆಗೆ ತಾನು ಬದುಕಿರುವುದಿಲ್ಲವಲ್ಲ ಎಂಬುದು.

“ಅಯ್ಯೋ, ನನ್ನ ಕಾವ್ಯಕ್ಕೆ ಪುರಸ್ಕಾರ ದೊರಕುವಾಗ ಅದನ್ನು ನೋಡಲು ನಾನಿರುವುದಿಲ್ಲವಲ್ಲ” ಎಂದು ಅವನು ಒಮ್ಮೆ ಹಲಬುತ್ತಿರುವಾಗ, ಸೈತಾನ ಪ್ರತ್ಯಕ್ಷನಾಗುತ್ತಾನೆ. ಸೈತಾನ ಸೋಮ್ಸ್‌ ನಿಗೆ ಒಂದು ಡೀಲ್ ಮುಂದಿಡುತ್ತಾನೆ. ಅದರ ಪ್ರಕಾರ, ಸೈತಾನ ಸೋಮ್ಸ್‌ ನನ್ನು ಮುಂದಿನ ಶತಮಾನಕ್ಕೆ ಕರೆದೊಯ್ದು ವಾಪಸು ಕರೆದುಕೊಂಡು ಬರಬೇಕು. ವಾಪಸಾದ ನಂತರ ಸೋಮ್ಸ್‌ ನ ಆತ್ಮದ ಒಡೆತನ ಸೈತಾನನಿಗೆ ಸೇರುತ್ತದೆ.

ತನ್ನ ಆತ್ಮವನ್ನು ಸೈತಾನನಿಗೆ ಮಾರಿಕೊಳ್ಳಲು ಇನೊಕ್ ಸೋಮ್ಸ್‌ ಗೆ ಇಷ್ಟವಿಲ್ಲ. ಆದರೂ, ತನ್ನ ಬಗ್ಗೆ ಮತ್ತು ತನ್ನ ಸಾಹಿತ್ಯದ ಬಗೆಗೆ ಇತಿಹಾಸ ತೋರುವ ಗೌರವವನ್ನು ಸ್ವತಃ ಕಾಣಬೇಕೆಂಬ ಅತೀವ ಹಂಬಲ ಅವನಿಗೆ. ಹೀಗಾಗಿ ಕೊನೆಗೆ ಸೈತಾನನ ಷರತ್ತಿಗೆ ಒಪ್ಪಿಕೊಳ್ಳುತ್ತಾನೆ.

ಸೈತಾನನ ಸಹಾಯದಿಂದ ಕಾಲಪ್ರಯಾಣ ಮಾಡಿ, ೧೯೯೭ರ ಲಂಡನ್ನಿಗೆ ಆಗಮಿಸುತ್ತಾನೆ. ನೂರು ವರ್ಷದ ನಂತರದ ಲಂಡನ್ ಬದಲಾಗಿರುತ್ತದಾದರೂ, ಅಲ್ಲಿಯ ರಾಯಲ್ ಮ್ಯೂಸಿಯಂನ ಲೈಬ್ರರಿ ಮಾತ್ರ ಇದ್ದಲ್ಲಿಯೇ ಇರುತ್ತದೆ. ಆ ಲೈಬ್ರರಿಯಲ್ಲಿ, ಲೇಖಕರ ಕುರಿತಾದ ಇಂಡೆಕ್ಸ್ ಕಾರ್ಡಿನಲ್ಲಿ ಒಂದು ಶತಮಾನದ ನಂತರ ತನ್ನ ಬಗೆಗೆ ಏನೆಂದು ಪರಿಚಯಿಸುತ್ತಾರೆಂದು ತಿಳಿದುಕೊಳ್ಳುವ ಅತೀವ ತವಕ ಅವನಿಗೆ. ಲೈಬ್ರರಿಯೊಳಗೆ ಒಮ್ಮೆಲೆ ಧಾವಿಸಿ, ಆ ಇಂಡೆಕ್ಸ್ ಕಾರ್ಡ್‌ ಗಳನ್ನು ತಡಕಾಡಿ, “ಇನೊಕ್ ಸೋಮ್ಸ್” ಎನ್ನುವ ಕಾರ್ಡ್ ಅನ್ನು ತೆಗೆದು ಓದುತ್ತಾನೆ:

ಮಹಾಭಾರತದಲ್ಲಿ ಬರುವ ರಾಜ ಕಕುದ್ಮಿ ಮತ್ತು ಅವನ ಮಗಳು ರೇವತಿಯ ಕತೆ, ಕಾಲಯಾನದ ಇತಿಹಾಸದಲ್ಲೇ ಮೊಟ್ಟ ಮೊದಲನೆಯ ಇಂತಹ ಒಂದು ನಿದರ್ಶನ. ಅವರೂ ಸಹ ತಮಗೇ ಅರಿವಿಲ್ಲದೆ ಕಾಲಯಾನ ಮಾಡಿದವರು. ನನ್ನಂತೆಯೇ!

“ಇನೊಕ್ ಸೋಮ್ಸ್: ಮ್ಯಾಕ್ಸ್ ಬೀರ್‌ ಬಾಮ್ ಕಥೆಯೊಂದರಲ್ಲಿ ಬರುವ ಕಾಲ್ಪನಿಕ ಕವಿ. ಮೂರನೆ ದರ್ಜೆಯ ಲೇಖಕ. ತನ್ನ ಕಾವ್ಯದ ಶ್ರೇಷ್ಠತೆಯನ್ನು ನಂಬಿ, ಇತಿಹಾಸ ತನ್ನ ಬಗ್ಗೆ ಏನೆನ್ನುತ್ತದೆ ಎಂದು ತಿಳಿದುಕೊಳ್ಳಲು ಸೈತಾನನೊಂದಿಗೆ ಒಪ್ಪಂದ ಮಾಡಿಕೊಂಡವನು”

******

ಎಚ್.ಜಿ.ವೆಲ್ಸ್ ತನ್ನ “ದ ಟೈಮ್ ಮಷೀನ್” ಪ್ರಕಟಿಸುವ ಸುಮಾರು ಎಪ್ಪತ್ತೈದು ವರ್ಷಗಳ ಮುಂಚೆಯೇ, ಅಮೆರಿಕನ್ ಲೇಖಕ ವಾಷಿಂಗ್ಟನ್ ಇರ್ವಿಂಗ್, ತನ್ನ ಕತೆಯೊಂದರಲ್ಲಿ ಕಥಾನಾಯಕನಿಗೆ ಕಾಲಯಾನ ಮಾಡಿಸುತ್ತಾನೆ. ಇರ್ವಿಂಗ್ ಹಲವಾರು ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಬರೆದಿರುವನಾದರೂ, ನನಗೆ ಅವನ ಸಾಹಿತ್ಯದ ಪರಿಚಯವಾಗಿದ್ದು, ಹೈ-ಸ್ಕೂಲ್ “ಇಂಗ್ಲೀಷ್ ನಾನ್-ಡಿಟೇಲ್ಡ್” ಮೂಲಕ. (ಇದನ್ನು “ನಾನ್-ಡಿಟೇಲ್ಡ್” ಎಂದು ಏಕೆ ಕರೆಯುತ್ತಿದ್ದರೋ ತಿಳಿಯದು. ನಾನು ಒಂಬತ್ತನೆಯ ಕ್ಲಾಸಿನಲ್ಲಿ ಫುಲ್ ಡಿಟೇಲಾಗಿ ಓದಿದ ಜಮಷೇಟ್ ಜೀ ಟಾಟರವರ ಜೀವನ ಚರಿತ್ರೆಯ ವಿವರಗಳು ಇನ್ನೂ ನನ್ನ ನೆನಪಿನಲ್ಲಿವೆ. ವಿಕ್ಟೋರಿಯ ರಾಣಿಯ ಗೌರವಾರ್ಥವಾಗಿ ಟಾಟರವರು ನಾಗಪುರದಲ್ಲಿದ್ದ ಮಿಲ್ ಅನ್ನು ೧೮೭೭ ರ ಜನವರಿ ಒಂದರಂದು “ಎಂಪ್ರೆಸ್ ಮಿಲ್” ಎಂದು ಮರುನಾಮಕರಣ ಮಾಡಿದರು. ಇದನ್ನು ಕೇಳಿದ ನಾನು ಪಿಸುಮಾತಿನಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಗೆಳೆಯನಿಗೆ ಟಾಟರವರ ರಾಷ್ಟ್ರ ಪ್ರೇಮದ ಬಗೆಗೆ ನನ್ನ ಒಕ್ಕಣೆ ನೀಡಿದೆ. ಇದೆಲ್ಲಾ ಡಿಟೇಲ್ಸ್ ಇಲ್ಲಿ ಬೇಡವಾದರೂ, ಇವೆಲ್ಲಾ ನನ್ನ “ನಾನ್-ಡಿಟೇಲ್ಡ್” ಕಲಿಕೆಗೆ ಸಂಬಂಧಿಸಿದ್ದೇ.)

ವಾಷಿಂಗ್ಟನ್ ಇರ್ವಿಂಗ್ ನ ಕಥಾನಾಯಕ ರಿಪ್ ವ್ಯಾನ್ ವಿಂಕಲ್ ಅತ್ಯಂತ ಸುಲಭವಾಗಿ ಕಾಲ ಯಾನ ಮಾಡುತ್ತಾನೆ. ಅವನು ನಿದ್ದೆ ಮಾಡಿ ಏಳುವ ಹೊತ್ತಿಗೆ, ಇಪ್ಪತ್ತು ವರ್ಷಗಳು ಕಳೆದಿರುತ್ತವೆ! ಪ್ರಯಾಣಮಾಡುವಾಗ ನಿದ್ದೆ ಮಾಡುವುದು ಸಾಮಾನ್ಯ. ಆದರೆ ನಿದ್ದೆಯನ್ನೇ ವಾಹನವಾಗಿ ಬಳಸಿದರೆ ಕಾಲದಲ್ಲಿ ಪ್ರಯಾಣ ಮಾಡಬಹುದೆನ್ನುವುದು ಹೊಸದು. ಆ ಕಾಲಕ್ಕೆ.

ವಾಷಿಂಗ್ಟನ್ ಇರ್ವಿಂಗ್ ನಿದ್ದೆಯನ್ನು ಕಾಲಯಾನಕ್ಕೆ ಬಳಸಿಕೊಂಡಿದ್ದರೆ, ಇನ್ನೆಷ್ಟೋ ಮಂದಿ, ನಿದ್ದೆಯೊಡನೆ ಒಡಗೂಡಿರುವ ಕನಸನ್ನು ವಾಹನವಾಗಿಸಿಕೊಂಡಿದ್ದಾರೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ, “ಸುಲ್ತಾನಾಳ ಕನಸು” (Sultana’s Dream) ಎಂಬ ಇಂಗ್ಲೀಷ್ ಕತೆ.

ಎಚ್.ಜಿ. ವೆಲ್ಸ್‌ ನ ಟೈಮ್ ಮಷೀನ್ ಪ್ರಕಟವಾದ ಹತ್ತು ವರ್ಷದ ನಂತರ, ೧೯೦೫ರಲ್ಲಿ ಪ್ರಕಟವಾದ ಕತೆ ಇದು. ಈ ಕತೆಯನ್ನು ಬರೆದವಳು ರೊಕೆಯಾ ಶಕಾವತ್ ಹುಸೇನ್ ಎಂಬ ಬೆಂಗಾಲಿ ಕತೆಗಾರ್ತಿ. ಅದು ಪ್ರಕಟವಾಗಿದ್ದು ಮದ್ರಾಸಿನ “ದ ಇಂಡಿಯನ್ ಲೇಡೀಸ್ ಮ್ಯಾಗಜ಼ೀನ್” ಎಂಬ ಪತ್ರಿಕೆಯಲ್ಲಿ.

ಕಕುದ್ಮಿಯ ಕತೆಯಲ್ಲಿ, ಅವನು ಭವಿಷ್ಯದ ಭೂಮಂಡಲಕ್ಕೆ ಬಂದಾಗ ಅವನಿಗೆ ಕಾಣುವುದು ಅಂತಹ ಸಂತೋಷದ ಪ್ರಪಂಚವಲ್ಲ; ಬದಲಿಗೆ, ಬುದ್ಧಿ ಮತ್ತು ಚೈತನ್ಯ ಎರಡರಲ್ಲೂ ಕ್ಷೀಣಗೊಂಡಿರುವ ಮಾನವ ಜನಾಂಗ. ಆದರೆ, ಬೇಗಂ ರೊಕೆಯಾ ಬರೆದ ಕತೆಯಲ್ಲಿ, ಅದರ ನಾಯಕಿ ಸುಲ್ತಾನಾ ಕಾಣುವ ಭವಿಷ್ಯತ್ತಿನ ಪ್ರಪಂಚ ಮಹಿಳಾ ಲೋಕವಾಗಿ ಮಾರ್ಪಾಡಾಗಿರುತ್ತದೆ. (ಅದರ ಹೆಸರೂ ಸಹ “ಲೇಡಿ ಲ್ಯಾಂಡ್”!) ಸರ್ಕಾರಿ ಆಡಳಿತದಿಂದ ಹಿಡಿದು, ಕೌಟುಂಬಿಕ ನಾಯಕತ್ವದ ವರೆಗೆ, ಸಮಾಜದ ಎಲ್ಲ ರಂಗಗಳಲ್ಲಿಯೂ ಹೆಂಗಸರದೇ ಪಾರಮ್ಯ. ಗಂಡಸರಿಗೆ “ಪರ್ದಾ” ಪದ್ಧತಿ ಬಂದುಬಿಟ್ಟಿರುತ್ತದೆ. ಕೆಲಸದ ಅವಧಿ, ಎಂಟು ಗಂಟೆಗಳ ಬದಲಿಗೆ, ಕೇವಲ ಎರಡು ಗಂಟೆಗಳು ಮಾತ್ರ. ಏಕೆಂದರೆ, ಗಂಡಸರಂತೆ ಹೆಂಗಸರು ಸಿಗರೇಟ್ ಸೇದುತ್ತಾ ಆರು ಗಂಟೆಗಳು ವ್ಯರ್ಥಮಾಡುವುದಿಲ್ಲವಲ್ಲ!!

ಸುಲ್ತಾನಾಳ ಭವಿಷ್ಯತ್ತಿನ ಲೇಡಿಲ್ಯಾಂಡಿನಲ್ಲಿ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದನೆ, ಸಂಪೂರ್ಣವಾಗಿ ಯಾಂತ್ರೀಕೃತವಾಗಿರುವ ಬೇಸಾಯ ಹಾಗೂ ಹಾರುವ ಕಾರುಗಳಂತಹ ವಿವಿಧ ತಂತ್ರಜ್ಞಾನಗಳಿವೆ. ಆದರೆ, ಅವೆಲ್ಲಕ್ಕಿಂತ ಆ ಕತೆಯಲ್ಲಿ ಮುಖ್ಯವಾಗುವುದು: ೧.ಪ್ರಥಮ ಬಾರಿಗೆ ನಾಯಕಿಯೊಬ್ಬಳು ಕಾಲಯಾನ ಮಾಡುತ್ತಾಳೆ. ಉಳಿದೆಲ್ಲಾ ಕಾಲಯಾನದ ಕತೆಗಳಲ್ಲಿ ಪುರುಷರದೇ ಪ್ರಾಧಾನ್ಯ. ೨.ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ, ಸ್ತ್ರೀವಾದಿ ಲೇಖಕಿಯೊಬ್ಬಳು ಭವಿಷ್ಯದ ಕುರಿತು ತೋರುವ ಆಶಾವಾದ. (ಅದು ಆಶಾವಾದವೋ ಅಥವಾ ತನ್ನ ಕಾಲದ ವಾಸ್ತವದ ಕುರಿತು ಪರೋಕ್ಷ ಟೀಕೆಯೋ ಎಂಬುದು ಚರ್ಚಿಸಬಹುದಾದ ವಿಷಯ)

ಲೇಖಕಿ ಬೇಗಂ ರೊಕೆಯಾ, ಅಂದಿನ ಅಖಂಡ ಭಾರತದ ಬೆಂಗಾಲ್ ಪ್ರಾಂತ್ಯದಲ್ಲಿ ಮ್ಯಾಜಿಸ್ಟ್ರೇಟ್ ಆಗಿದ್ದವನ ಪತ್ನಿ. ಆಕೆಯ ಗಂಡ ಪ್ರವಾಸದಲ್ಲಿದ್ದಾಗ, ತನ್ನ ಸಮಯ ಕಳೆಯಲು ಆಕೆ ಬರೆದಂತಹ ಕಥೆ ಇದು. ಅದರ ಇನ್ನೊಂದು ಉದ್ದೇಶ, ತನ್ನ ಗಂಡನಿಗೆ ತನ್ನ ಇಂಗ್ಲೀಷ್ ಪ್ರಾವೀಣ್ಯವನ್ನು ತೋರಿಸುವುದು. ಅದನ್ನು ಮೆಚ್ಚಿದ, ಆಕೆಯ ಗಂಡ ಖಾನ್ ಬಹದೂರ್ ಸಯದ್ ಶಕಾವತ್ ಹುಸೇನ್ ಆ ಕತೆಯನ್ನು ಯಾವುದಾದರೂ ಪತ್ರಿಕೆಯೊಂದಕ್ಕೆ ಕಳುಹಿಸುವಂತೆ ಆಕೆಯನ್ನು ಉತ್ತೇಜಿಸಿದನಂತೆ. ಇವೆಲ್ಲಾ ಆಕೆಯೇ ಮುಂದೊಮ್ಮೆ ಹೇಳಿದ ಮಾತುಗಳು.

******

ಕಾಲದಲ್ಲಿ ಯಾನ ಮಾಡಲು ವಿವಿಧ ವಿಧಾನಗಳಿವೆ. ಬ್ರಹ್ಮಲೋಕದ ಭೇಟಿಯ ಮೂಲಕ ಭವಿಷ್ಯತ್ತಿಗೆ ಬಂದಿಳಿಯಬಹುದು. ನಿದ್ರಾಲೋಕದಲ್ಲಿ ವಿಹರಿಸಿ ಇಪ್ಪತ್ತು ವರ್ಷಗಳ ನಂತರ ಎದ್ದೇಳಬಹುದು. (ಇನ್ನೊಂದು ಇಂತಹುದೇ ಕತೆಯಲ್ಲಿ, ಕಥಾನಾಯಕ ಉಪ್ಪಿನಕಾಯಿ ಜಾಡಿಯೊಂದರಲ್ಲಿ ಅಕಸ್ಮಾತ್ತಾಗಿ ಬಿದ್ದು, ನೂರು ವರ್ಷಗಳ ನಂತರ ಒಂದಷ್ಟೂ ಕೆಡದೆ ಎದ್ದೇಳುತ್ತಾನೆ!) ಸೈತಾನನೂ ನಿಮ್ಮನ್ನು ಭವಿಷ್ಯತ್ತಿಗೆ ಕೊಂಡೊಯ್ಯಬಲ್ಲ. ಹಾಗೆಯೇ ಕನಸೂ ಸಹ. ಇವೆಲ್ಲವೂ ನಿಮಗೆಟುಕದಿದ್ದರೆ, ನನ್ನಂತೆ ಒಂದು ಲೇಖನಿಯ ಸಹಾಯದಿಂದ ಕಾಲ ಪ್ರಯಾಣ ಮಾಡಬಹುದು.

ಆದರೆ ಇವಾವವೂ, ಎಚ್.ಜಿ.ವೆಲ್ಸ್‌ ನ ತರ್ಕಬದ್ಧ ಎಂದೆನಿಸುವಂತಹ ತಂತ್ರಜ್ಞಾನಗಳಲ್ಲ. (ತಂತ್ರಜ್ಞಾನ ಮತ್ತು ಕಾಲಯಾನದ ಕುರಿತು ಬರೆಯುವಾಗ, ಮೊನಚು ವ್ಯಂಗ್ಯದ ಅಮೆರಿಕನ್ ವಿಡಂಬನಕಾರ ಮಾರ್ಕ್ ಟ್ವೇನ್‌ ನನ್ನು ಮರೆಯಲಾದೀತೇ? ಬಹುಪಾಲು ಲೇಖಕರ ಕಾಲಯಾನಿಗಳು ಭವಿಷ್ಯದೆಡೆಗೆ ಪ್ರಯಾಣ ಮಾಡಿದರೆ, ಟ್ವೇನ್‌ ನ “ಎ ಕನೆಟಿಕಟ್ ಯಾಂಕೀ ಇನ್ ಕಿಂಗ್ ಆರ್ಥರ್ಸ್ ಕೋರ್ಟ್” ಪುಸ್ತಕದಲ್ಲಿ ಅದರ ಕಥಾನಾಯಕ ಪ್ರಯಾಣ ಬೆಳೆಸುವುದು ಹಲವು ಶತಮಾನಗಳ ಹಿಂದಕ್ಕೆ. ಆ ನಾಯಕ ಒಬ್ಬ ಎಂಜಿನಿಯರ್. ಆದರೆ, ಅವನು ಕಾಲಯಾನ ಮಾಡಲು ಬಳಸುವ ತಂತ್ರಜ್ಞಾನ: ಅವನ ತಲೆಯಮೇಲೆ ಸರಿಯಾಗಿ ಬೀಳುವ ಒಂದು ಮೊಟಕು!)

******

ಮಾರ್ಕ್ ಮತ್ತು ಸ್ಕಾಟ್ ಕೆಲ್ಲಿ ತದ್ರೂಪಿ ಅವಳಿ ಸಹೋದರರು. ಮಾರ್ಕ್, ಸ್ಕಾಟ್‌ ಗಿಂತ ಆರು ನಿಮಿಷ ದೊಡ್ಡವನು. ಆದರೆ, ಅವರ ಹೆಚ್ಚುಗಾರಿಕೆ ಅದಲ್ಲ. ಇಬ್ಬರೂ ಅಮೆರಿಕದ NASAದ ಗಗನಯಾನಿಗಳು.

ಸ್ಕಾಟ್ ೨೦೧೬ರ ಮಾರ್ಚ್‌ನಲ್ಲಿ, ಸುಮಾರು ಐದನೂರ ಇಪ್ಪತ್ತು ದಿನಗಳ ಕಾಲ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ ನಲ್ಲಿದ್ದು ಭೂಮಿಗೆ ವಾಪಸು ಬಂದ. ಈ ಸ್ಪೇಸ್ ಸ್ಟೇಷನ್ ಗಂಟೆಗೆ ಸುಮಾರು ೩೦,೦೦೦ ಕಿ.ಮಿ.ವೇಗದಲ್ಲಿ ಭೂಮಿಯನ್ನು ಸುತ್ತುತ್ತದೆ.

ಐನ್‌ಸ್ಟೈನ್‌ ನ ಥಿಯರಿ ಆಫ್ ರಿಲೆಟಿವಿಟಿ ಹೇಳುವಂತೆ, ನೀವು space‌ನಲ್ಲಿ (ಇಲ್ಲಿ ಸ್ಪೇಸ್ ಎಂದರೆ ಕೇವಲ ಆಕಾಶವಲ್ಲ, ಉದ್ದ, ಅಗಲ, ಎತ್ತರಗಳು ಆಯಾಮವಾಗಿರುವ ಯಾವುದೇ ಪ್ರದೇಶ) ವೇಗವಾಗಿ ಚಲಿಸುತ್ತಿದ್ದರೆ, ನಿಮ್ಮ ಗಡಿಯಾರ ನಿಧಾನವಾಗುತ್ತದೆ; ನಿಮ್ಮ ಕಾಲ ನಿಧಾನವಾಗಿ ಚಲಿಸುತ್ತದೆ. ಇದನ್ನು Time Dilation (ಸಮಯದ ಉಬ್ಬುವಿಕೆ ಅಥವಾ ಸಮಯದ ಕಿಸಿಯುವಿಕೆ) ಎನ್ನುತ್ತಾರೆ. ಇದು, ಯಾವುದೋ ಲೇಖಕನ ಅದ್ಭುತ ಕಲ್ಪನೆಯಲ್ಲ. ಮಾನವನ ಬುದ್ಧಿಶಕ್ತಿಯ ಉತ್ತುಂಗದಲ್ಲಿ ಕಂಡುಕೊಂಡಂತಹ, ಪ್ರಯೋಗಗಳಿಂದ ಖಚಿತ ಪಡಿಸಿಕೊಂಡಿರುವಂತಹ ಒಂದು ಅಪ್ಪಟ ಸತ್ಯ.

ಸ್ಕಾಟ್ ಆಕಾಶಯಾನ ಮಾಡುವ ಮೊದಲು, ತನ್ನ ಅಣ್ಣ ಮಾರ್ಕ್‌ ಗಿಂತ ಆರು ನಿಮಿಷ ಚಿಕ್ಕವನಿದ್ದ. ಆದರೆ, ಆಕಾಶಯಾನ ಮಾಡಿ ಬಂದ ಮೇಲೆ ಅವನು ಆರು ನಿಮಿಷ ಐದು ಮಿಲಿ ಸೆಕೆಂಡ್ ಚಿಕ್ಕವನಾಗಿದ್ದ.

(ಮಾರ್ಕ್ ಮತ್ತು ಸ್ಕಾಟ್ ಕೆಲ್ಲಿ ಅವಳಿ ಸಹೋದರರು)

ಸಂತೂರ್ ಸೋಪ್ ಬಳಸಿ ನಿಮ್ಮ ತೋರಿಕೆಯ ತಾರುಣ್ಯವನ್ನು ನೀವು ಉಳಿಸಿಕೊಳ್ಳಬಹುದೇನೋ. ಆದರೆ, ನಿಮ್ಮ ನಿಜದ ವಯಸ್ಸನ್ನು ಮುಂದಾಗದಂತೆ ಕಾಪಾಡಿಕೊಳ್ಳಬೇಕಿದ್ದರೆ, ವೇಗವಾಗಿ ಚಲಿಸುವ ರಾಕೆಟ್ ಒಂದನ್ನು ಏರಿದರೆ ಸಾಕು!

******

ಕಕುದ್ಮಿಯ ಕತೆಯಂತಹ ನಮ್ಮ ವೇದ – ಪುರಾಣಗಳ ಅದ್ಭುತಗಳನ್ನು, ಆಧುನಿಕ ವಿಜ್ಞಾನ-ತಂತ್ರಜ್ಞಾನಗಳೊಂದಿಗೆ ತಾಳೆ ಹಾಕಿ, “ಇವೆಲ್ಲಾ ನಮ್ಮ ಪೂರ್ವಿಕರಿಗೆ ತಿಳಿದಿತ್ತು” ಎನ್ನುವಂತಹದು ಇತ್ತೀಚೆಗೆ ಹೆಚ್ಚಾಗುತ್ತಿದೆ. ನನ್ನ ದೃಷ್ಟಿಯಲ್ಲಿ ಇದು ವಿಜ್ಞಾನಕ್ಕೆ, ವೇದ-ಪುರಾಣಗಳಿಗೆ, ಕೊನೆಗೆ, ನಮ್ಮ ಬುದ್ಧಿವಂತಿಕೆಗೇ ಮಾಡುವಂತಹ ಅವಮಾನ.


“ಕಾಲ”ದ ಸೋಜಿಗವನ್ನು ಚರ್ಚಿಸುವಾಗ, ಐನ್‌ಸ್ಟೈನನ ಸಾಪೇಕ್ಷ ಸಿದ್ಧಾಂತದ ಕತೆಯನ್ನು ಹೇಳದಿರಲು ಸಾಧ್ಯವಿಲ್ಲ. (ವೈಜ್ಞಾನಿಕ ಸಿದ್ಧಾಂತಗಳು ಹಲವಾರು ಕತೆಗಳನ್ನು ಹೇಳುತ್ತವೆ. ನಾವು ಕೇಳಲು ಸಿದ್ಧವಿದ್ದರೆ.)
ಅದನ್ನು ಮುಂದೆ ಕೇಳೋಣ. ಆದರೆ ಅದಕ್ಕೆ ಮುಂಚೆ, ಕಾಲಯಾನದ ಅವಾಂತರಗಳ ಕಡೆಗೆ ಕೊಂಚ ಗಮನ ಹಾಯಿಸೋಣ.

(ಮುಂದುವರೆಯುವುದು)