ಚುಟುಕು ಬ್ರಹ್ಮನೆಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಅವರು, ಅಂಕೋಲಾ ತಾಲ್ಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದವರು. ಧಾರವಾಡ ಮತ್ತು  ಮೈಸೂರಿನಲ್ಲಿ ಶಿಕ್ಷಣ ಪಡೆದರು. ಮುಂಬೈಗೆ ತೆರಳಿ ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾದರು.  ಗೋಪಾಲಕೃಷ್ಣ ಗೋಖಲೆಯವರು ಸ್ಥಾಪಿಸಿದ ‘ಭಾರತ ಸೇವಕ ಸಮಾಜ’ ದಿಂದ ಆಕರ್ಷಿತರಾಗಿ ಅದರ ಸದಸ್ಯರಾದರು. ಜನಸೇವಕ, ಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಇವರ ಚುಟುಕುಗಳು ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಇವರ ‘ದಿನಕರನ ಚೌಪದಿ’ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾಗಿದೆ.  ಹೂ ಗೊಂಚಲು, ತರುಣರ ದಸರೆ, ಕಡಲ ಕನ್ನಡ, ದಾಸಾಳ, ಮಕ್ಕಳ ಗೀತೆಗಳು ಅವರ ಪ್ರಮುಖ ಕವನ ಸಂಕಲನಗಳು.  ಕನ್ನಡ ಕಾವ್ಯ ಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ ‘ತಿಪ್ಪಾ ಭಟ್ಟರು ನೇಗಿಲು ಹಿಡಿದರು’ ಕವನ  ಇಲ್ಲಿದೆ

ತಿಪ್ಪಾ ಭಟ್ಟರು ನೇಗಿಲು ಹಿಡಿದರು
ಗದ್ದೆಯ ಹೂಡಲಿಕೆ !
ಊರಿನ ರೈತರು ಸೇರಿದರೆಲ್ಲರು
ಸೋಜಿಗ ನೋಡಲಿಕೆ.

ಕಟ್ಟಿದ  ಎತ್ತುಗಳೆರಡೂ ಹೆದರಲು
ವೇಗದೊಳೋಡಿದವು.
ತಿಪ್ಪಾಭಟ್ಟರ ಧೋತ್ರವು ಹರಿಯಲು
ಮತ್ತೂ ಓಡಿದವು.

ನೇಗಿಲು ಮುಂದಕೆ, ಭಟ್ಟರು ಹಿಂದಕೆ
ಬಲು ಪೇಚಾಡಿದರು;
ಗೊಬ್ಬರ ಕುಣಿಯಲಿ ಭಟ್ಟರು ಬೀಳಲು
ರೈತರು ಹಾಡಿದರು;

ತೊಗರಿಯ ಸಾರದು ಭಟ್ಟರಿಗೆ,
ನೇಗಿಲ ಭಾರವೆ ದಿಟ್ಟರಿಗೆ.