ಮಾತು ಕಿತ್ತರು ಅರಳದ ಹಾಗೆ

ನಾವು ಅಪರಾಧಿಗಳಲ್ಲದಿದ್ದರೂ ನಮ್ಮಿಬ್ಬರ ನೆರಳ ಸುತ್ತ ಸರಳು ಬಿಗಿದರು ಅಲುಗಾಡದ ಹಾಗೆ
ಮೌನದ ಬೇಗುದಿ ಬಿಗಿದು ಎದೆಯ ತುಡಿತದ ಮಾತು ಕಿತ್ತರು ಅಲುಗಾಡದ ಹಾಗೆ

ಇರುಳ ತುಡಿತದ ನೆರಿಗೆಯೊಳಗೆ ಮೃಗದ ಕೂಗಾಗಿ ನಿಂತು ಜಪದ ಕಣ್ಣಿಗೆ ಹುಣ್ಣಾಗಿ
ಹೂನಾಲೆಯ ಶವಾಗಾರದ ಎದೆಯ ಮೇಲೆ ಕೊಳ್ಳಿಯಾಗಿ ನಿಂತರು ಅರಳದ ಹಾಗೆ

ಮಧು ಮಂಚದ ಗುಟ್ಟಿನ ದುರ್ಬೀನುಗೊಳಿಸಿ ಸಂಸಾರ ನೌಕೆಗೆ ಹಳಸಾಗಿ ನಿಂತು
ಕನಸಿನ ಅರಮನೆಯ ನೆನಪುಗಳ ಮೇಲೆ ಮೋಸದ ಚಾಟಿ ತುರುಕಿದರು ಮೇಲೇಳದ ಹಾಗೆ

ಬಿದ್ದ ಮಳೆಯನು ವರ್ಗೀಕರಿಸಿ ಕೆಸರ ಪುಟಗಳಲಿ ಸವುಳಾಗಿ ಹಸಿರ ನೆಲೆಗೆ ಬರಡಾಗಿ ಕುಂತು
ನೆಲದ ಎದೆಯಲಿ ಭೇದವ ಸೃಷ್ಟಿಸಿ ಬಾರದ ಜ್ವಾಲೆಯಾಗಿ ನಿಂತರು ಚಿಗುರೊಡೆಯದ ಹಾಗೆ

ಹೆಗಲ ಬೇನೆಗೆ ಬಗಲ ಚೂರಿಯಾಗಿ ನಿಂತು ಹಾಲಾಹಲವ ಗಿರಿ ಕನಸಿಗೆ ಬಿಗಿದು
ಮೊಗ್ಗಿನ ಮನದ ಹಿಗ್ಗಿನ ಸಂತೆಯೊಳಗೆ ಕೀರಲುಗುಟ್ಟಿ ಹುತ್ತ ಕಟ್ಟುವರು ಹೆದರಿಸುವ ಹಾಗೆ

ರೆಕ್ಕೆ ಕೊಲ್ಲುದು ಬ್ಯಾಡ

ಹಾರೊ ಹಕ್ಕಿವೊಳಗ ಹೆಜ್ಜೆ ಹುಡ್ಕೋತ ರೆಕ್ಕೆ ಕೊಲ್ಲುದು ಬ್ಯಾಡ
ನೆಲೆಗಾಗಿ ಅದ್ಭುತ ಗೂಡು ಕಟ್ಟಿದ ಚುಕ್ಕಿಗಳ ಕಲೆವೊಳಗ ವಾಸ್ತು ತುರ್ಕೂದು ಬ್ಯಾಡ

ಕೂಳಿಗಾಗಿ ಸಾಲಾಗಿ ನಿಂತ ಇರುವೆ ಕುತ್ತಿಗೆಯೊಳಗ ಗಂಟ್ಲ ಕೊಯ್ಯುದು ಬ್ಯಾಡ
ಮಣ್ಣ ಉಂಡಿ ಮಾಡಿ ಎದೆ ಕರುಳಿಗೆ ದೂಕೊ ಎರಿಹುಳು ಬೆವರಾಗ ಸಂಶಯ ಹುಡ್ಕೂದು ಬ್ಯಾಡ

ಮಳೆ ಹನಿಗಳ ಲೆಕ್ಕ ಹಾಕ್ತಾ ಒಡ್ಡು ಕಟ್ಟಿ ಫಕೀರನ ಒಲೆ ಆರ್ಸುದು ಬ್ಯಾಡ
ಹೊಗೆ ಜಂತಿವಳಗ ಭರವಸೆ ತುಂಬ್ಕೊಂಡ ಉಡಿಯೊಳಗ ಕಿಚ್ಚು ಹಚ್ಚೂದು ಬ್ಯಾಡ

ಮಾತು ಮಲಗಿಸಿ ದುಡಿಯಾಕ ಅನಿಯಾದ ಮೌನದ ಗ್ವಾಡ್ಯಾಗ ಗಾಳ ಓಡ್ಸೂದು ಬ್ಯಾಡ
ಕ್ವಾರಿ ಕಲ್ಲಾಗ ನಿಜದ ದಾರಿ ಕೆತ್ತೊ ಜೀವದ ಒಡಲಾಗ ಹೆದ್ದಾರಿ ಹೆಣ ಹೊಗ್ಸೂದು ಬ್ಯಾಡ

ನಾಟ್ಯದ ನಾಡಿ ಬೆರಗು ಉಣಿಸೊ ನವಿಲ ಹೆಜ್ಜೆಯೊಳಗ ಕೆಂಗಣ್ಣು ಕುಕ್ಕುದು ಬ್ಯಾಡ ಮಲ್ಲಿಗೆ ಗಂಧ
‘ಗಿರಿ’ ಮೈಯಾಗೆಲ್ಲ ತೀಡಿ ಮನದ ಬಟ್ಟಲು ತುಂಬಿದ ಮಣ್ಣ ವಾಸನೆಯೊಳಗ ಮರಗ ತುಂಬುದು ಬ್ಯಾಡ

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.