Advertisement
ಕುಸುಮಾ ಆಯರಹಳ್ಳಿ ಬರೆದ ಈ ಭಾನುವಾರದ ಕತೆ

ಕುಸುಮಾ ಆಯರಹಳ್ಳಿ ಬರೆದ ಈ ಭಾನುವಾರದ ಕತೆ

ಮಹೇಶ ಅಷ್ಟು ಸಲ ವಿಧಾನಸೌಧಕ್ಕೆ ಹೋಗಿಬಂದು ಕೆಲಸ ಆಗಲಿಲ್ಲ ಅಂತ ಬೇಸರ ಮಾಡಿಕೊಂಡು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವಾಗೆಲ್ಲ ನನಗೆ ಕೋಪ ಬರ್ತಿತ್ತು ಮೇಷ್ಟ್ರೇ. ಪ್ರಜೆಗಳನ್ನ ಬಾಗ್ಲಲ್ಲಿ ನಿಲ್ಸಿ ಜಾತಿ ಯಾವುದಯ್ಯಾ ಒಳಗೋಗಕೆ? ಅಂತ ಕೇಳಕಾ ಆ ಪುಣ್ಯಾತ್ಮರು ದೇಶಾ ಕಟ್ಟಿದ್ದು? ಅಂತ ಕೋಪ ಉಕ್ಕುಕ್ಕಿ ಬರದು. ರಾತ್ರಿ ನಿದ್ದೆ ಬರ್ತಿರಲಿಲ್ಲ. ಆಚೆ ಭಾಷಣದಲ್ಲಿ ಹೇಳೋದು ಒಂದು. ಒಳಗ್ ಮಾಡದೊಂದು. ಇದಕ್ಕೇ ಏನಯ್ಯಾ ನಿಮಗೆ ಸಂವಿಧಾನ ಬರ್ಕೊಟ್ಟಿದ್ದು? ನೊಂದವರೇ ನೋಯಿಸಿದರೆ ಅದಕ್ಕಿಂತಾ ಕೇಡುಂಟಾ ಲೋಕದಲ್ಲಿ?
ಕುಸುಮಾ ಆಯರಹಳ್ಳಿ ಬರೆದ “ಕಪಿಲೆ ಕಂಡ ಕತೆಗಳು” ಕಥಾಸಂಕಲನ ಇಂದು ಬಿಡುಗಡೆಯಾಗಲಿದ್ದು ಈ ಕೃತಿಯ “ದೈತ್ಯ” ಕತೆ ನಿಮ್ಮ ಓದಿಗೆ

“ನಿನ್ನೆಗೂ ಮೊನ್ನೆಗೂ ನೋಡ್ತಿದೀನಾ ಅವನ್ನಾ ನಾನು? ನಮ್ ಮುಂದ್ ಬೆಳ್ದೋನು ಅವನು. ಈಗ ಅವೆಲ್ಲಾನೂ ಹೇಳಿದ್ರೆ ಜನ ನಂಬ್ತಾರೋ ಇಲ್ಲೋ. ಅವನು ಕಾಲೇಜಲ್ ಓಡ್ತಿದ್ದಾಗ ಮುದ್ದಣ್ಣ ಮೆಸ್‌ಗೆ ಹರ್ದೋಗಿರಾ ಪ್ಯಾಂಟಿಕ್ಕಂಡ್ ಬರೋನು. ಅರ್ಧ ಚಿತ್ರಾನ್ನ ತಕೊಳೋನು. ಏನೋ ನಮ್ ಪಕ್ದೂರ್ ಹುಡುಗ, ಬಡತನದಲ್ಲೂ ಓದದಲ್ಲಾಂತ ನಾನೇ ಎಷ್ಟೋ ದಿನ ಉಣ್ಲಾ ಮಗಾ ಹೊಟ್ತುಂಬಾ, ಬಿಲ್ ನಾ ಕೊಡ್ತೀನಿ ಅಂತ ಊಟ ಕೊಡ್ಸಿದೀನಿ. ಆಮೇಲ್ಯಾರ್ನೋ ಹಿಡ್ಕಂಡ್ ಹಾಸ್ಟಲಿಗ್ ಸೇರ್ಕಂಡು, ಓದ್ಕಂಡ್ ಗೀದ್ಕಂಡು, ಆಮೇಲ್ ಈ ರಾಜಕೀಯಕ್ ಬಂದ ಅನ್ನಿ. ಅದೇನ್ ಪೂರ್ತಿ ಓದಿದ್ನೋ ಅರ್ಧಕ್ಕೇ ಬುಟ್ಬುಟ್ನೋ, ಅದ್ ನಂಗೊತ್ತಿಲ್ಲ” ಅಂದರು ಲಿಂಗಣ್ಣ.

ಇಂಗ್ಲೀಷಲ್ಲಿ ಏನೋ ಒಂದ್ ಮಾತುಂಟಲ್ಲ, ಗೆದ್ದೋರ್ಗೆ ಊರ್ ತುಂಬಾ ಅಪ್ಪಂದ್ರು ಅಂತ ಹಂಗೇ ಸಾಹೇಬರ ಬಗ್ಗೆಯೂ ಮಾತಾಡೋರು ನೂರಾರು ಜನ, ಸಾವ್ರಾರು ಅಂತ್ಲೇ ಇಟ್ಕಳಿ. ದೊಡ್ಡ ಮನ್ಸರಾದೋರ್ ಜೊತೆ ಯಾವ್ದೋ ಕಾಲ್ದಲ್ ಇದ್ ಒಡನಾಟಾನ ಇಷ್ಟುದ್ದಾನ ಅಷ್ಟುದ್ದಾ ಮಾಡಿ ಹೇಳೋರೇ ಜಾಸ್ತಿ. ಆದ್ರೆ ನಮ್ ಲಿಂಗಣ್ಣ ಅಂತೋರಲ್ಲ. ನಾನು, ಅಂದ್ರೆ ಸರ್ಕಾರೀ ಸ್ಕೂಲ್ ಮೇಷ್ಟ್ರು ಸಿದ್ರಾಜು, ಲಿಂಗಣ್ಣನ್ನ 18 ವರ್ಷದಿಂದಾ ನೋಡ್ತಿದೀನಿ. ವಾರಕ್ ಎರಡ್ ಸಲವಾದ್ರೂ ಭೇಟಿ ಮಾಡ್ತೀನಿ. ಸಜ್ಜನ ಅವ್ರು. ಅವರ ತೋಟದ್ ಪಕ್ಕದಲ್ಲೆ ಮಹೇಶನ ತೋಟ. ಲಿಂಗಣ್ಣಂಗೆ 75 ವರ್ಷ ವಯಸಾದ್ರೂ ಯುವಕ ಮಹೇಶನಷ್ಟೇ ಉತ್ಸಾಹದಲ್ಲಿ ಹೊಸ ಹೊಸಾ ಕೃಷಿ ಪದ್ಧತಿ ಬಗ್ಗೆ ತಿಳ್ಕಳದು. ಪ್ರಯೋಗ ಮಾಡೋದು ಮಾಡ್ತಾ ಇರ್ತಾರೆ. ಈ ಊರಿಗೆ ನಾ ಬಂದ್ ಕಾಲಕ್ಕೂ ಈಗ್ಗೂ ಬಾರೀ ವ್ಯತ್ಯಾಸ ಇದೆ ಬಿಡಿ. ಬರೀ ತುಂಡೈಕ್ಳ ರಾಜಕೀಯ ಈಗ. ನಾವ್ ಸ್ಕೂಲಲ್ಲಿ ಜಾತಿ ಸುಳ್ಳು, ಮನುಷ್ಯ ಸತ್ಯ ಅಂತ ಪಾಠ ಮಾಡೋದು. ಈ ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು, ಊರ ಪುಡಾರಿಗಳು ಬಂದು ಮತ್ ಮತ್ತೆ ಎಲ್ಲಾನೂ ಅಲ್ಲಿಗೇ ತಂದ್ ನಿಲ್ಸದು.

(ಕುಸುಮಾ ಆಯರಹಳ್ಳಿ)

ದಿನಬೆಳಗಾದ್ರೆ ಇಂತವೆಲ್ಲ ಕೇಳೀ ನೋಡೀ ಬೇಜಾರಾಗಿ, ಊರ ಸಹವಾಸವೂ ಸಾಕಾಗಿ, ಸಮಯ ಸಿಕ್ಕಾಗೆಲ್ಲ ಮಹೇಶನ ತೋಟಕ್ ಹೋಗ್ ಕೂತ್ಕತಿದ್ದೆ. ಪಕ್ಕದ ಜಮೀನಿನ ಲಿಂಗಣ್ಣನೂ ಅಲ್ಲೇ ಬರೋರು. ಈ ಊರಲ್ಲಿ ಇವರಿಬ್ರೇ ಇದ್ದಿದ್ರಲ್ಲಿ ಸ್ವಲ್ಪ ಸೆನ್ಸಿಬಲ್ಲು. ಅಲ್ಲೋಗ್ ಕೂತ್ಕಂಡು, ಮಹೇಶನ ಹೆಂಡತಿ ಕೈಲಿ ಸಾವಯವ ಬೆಲ್ಲದ ಟೀ ಕುಡ್ಕೊಂಡು ನಮ್ಮ ಹರಟೆ. ನಾನೂ ಸರಕಾರೀ ವ್ಯವಸ್ಥೇಲಿ ನಡೀತಾ ಇರೋದನ್ ಹೇಳುವೆ. ಅವರೂ ರೈತರ ಪರಿಸ್ಥಿತಿ ಇತ್ಯಾದಿ ಮಾತಾಡೋರು. ರಾಜಕೀಯದ್ ವಿಷ್ಯ ಅಂತೂ ಇದ್ದೇ ಇರೋದು. ಬೇರ್ಯಾವ ವಿಷಯ ಬಂದ್ರೂ ಸಾಮಾನ್ಯವಾಗಿರುತ್ತಿದ್ದ ಲಿಂಗಣ್ಣೋರ ಪ್ರತಿಕ್ರಿಯೆ ರಾಜಕೀಯದ ವಿಷಯ ಬಂದಾಗೆಲ್ಲಾ ಬಿಸಿಯಾಗೋದು. “ಥೂ…. ಆ ಲೋಪರ್ಗಳ ಮಾತ್ಯಾಕ್ ಆಡ್ತೀರಿ ಮೇಷ್ಟ್ರೇ… ಅವರಿಂದ್ಲೇ ಇವತ್ ದೇಸ ಎಕ್ಕುಟ್ಟೋಗಿರದು. ಒಬ್ಬೊಬ್ಬನಿಗೂ ಎಕ್ಕಡಾ ತಗಂಡ್ ಹೊಡೀಬೇಕು ಅನಿಸ್ತದೆ” ಅನ್ನುತ್ತಾ, ಧ್ವನಿಯನ್ನು ತಾರಕಕ್ಕೇರಿಸಿ, ಕಣ್ಣು ಅಗಲ ಮಾಡಿ ಬೈಯುತ್ತಾ, ಆ ಉದ್ವೇಗವನ್ನು ತಾಳಲಾರದ ದೇಹ ಕೂರಲಾರೆ ಅನ್ನುತ್ತಿದೆಯೇನೋ ಎಂಬಂತೆ ಪದೇ ಪದೇ ಎದ್ದೂ ಕೂತು ಮಾಡುತ್ತಿದ್ದರು. ಅಪ್ರಜ್ಞಾಪೂರ್ವಕವಾಗಿ. “ಥತ್. ಹುಳಾ ಬಂದ್ ಸಾಯ್ತಾರೆ ಈ ನನ್ನ ಮಕ್ಕಳೆಲ್ಲಾ. ಅವರ ಮಕ್ಕಳೂ ಮರಿ ಯಾರೂ ಅವರು ಸಂಪಾದನೆ ಮಾಡಿದ್ ಉಣ್ಣಲ್ಲ. ನಾ ಸತ್ರೂ ನೋಡ್ಕಳಿ” ಅಂತಿದ್ದರು.

ಲಿಂಗಣ್ಣ ಏನೂ ಸಾಮಾನ್ಯ ಮನುಷ್ಯನಲ್ಲಾ. ಆ ಕಾಲಕ್ಕೇ ರಾಜಕೀಯದಲ್ಲಿದ್ದೋರು. ಇವತ್ತಿನ ರಾಜ್ಯದ ಲೀಡರುಗಳಲ್ಲಿ ಕೆಲವರು ಚೆಡ್ಡಿ ಹಾಕಿ ಸ್ಕೂಲಿಗೆ ಹೋಗ್ತಿದ್ದ ಕಾಲಕ್ಕೆ ಲಿಂಗಣ್ಣ ಜಿಲ್ಲಾ ಬೋರ್ಡು ಮೆಂಬರು. ಮನೆಯ ಗೋಡೆ ತುಂಬಾ ಆಗಲೂ ಈಗಲೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಕಟ್ಟುಹಾಕಿದ ಫೋಟೋಗಳು. ಖಾದಿ ಬಟ್ಟೆ. (ಈಗಲೂ ಅದೇ) ಹಾಕಿ ಹೊರಟರೆ ಪ್ರಾಮಾಣಿಕತೆಯ ದೀಕ್ಷೆ ತೊಟ್ಟಂತೆ. ಇಂತಿದ್ದ ಲಿಂಗಣ್ಣ ರಾಜಕೀಯ ಬಿಟ್ಟದ್ದು ಯಾಕೆಂದು ಅವರನ್ನು ನಾನು ಯಾವತ್ತೂ ಕೇಳಿಲ್ಲ. ಹೀಗೇ ಯಾರೋ ಹೇಳಿದ್ದು ಕೇಳಿದ್ದೇನಷ್ಟೇ, ಲಿಂಗಣ್ಣ ಯಾರನ್ನು ಬಹಳ ದೊಡ್ಡ ಆದರ್ಶ ವ್ಯಕ್ತಿಯೆಂದು ನಂಬಿದ್ದರೋ, ಕಾಲಿಗೆರಗುತ್ತಿದ್ದರೋ ಆ ಮನುಷ್ಯ- ಆ ಕಾಲದ ಮಂತ್ರಿ. ಭ್ರಷ್ಟರಾದ್ದನ್ನು ಕಣ್ಣಾರೆ ಕಂಡ ಲಿಂಗಣ್ಣ, ಅವತ್ತೇ, ಇನ್ನು ಇದರ ಸಹವಾಸ ಸಾಕು ಅಂತ ಮನೆ, ಊರು ಸೇರಿಕೊಂಡರಂತೆ. ಇಷ್ಟಕ್ಕೂ ಮಂತ್ರಿಗಳು ಆಗ ಮಾಡಿದ ಭ್ರಷ್ಟ ಕೆಲಸವಾದರೂ ಏನು ಅಂದರೆ- ಅವರ ಕಛೇರಿಗೆ ತಂದಿದ್ದ ವಿದ್ಯುತ್ ಬಲ್ಬುಗಳಲ್ಲಿ ಮಿಕ್ಕಿದ ನಾಕನ್ನು ಅವರ ಮನೆಗೆ ಅಳವಡಿಸಲು ಹೇಳಿದ್ದರಂತೆ. “ನಿಮ್ಮ ಮನೆ ಬೆಳಕಾಗಲು ಪ್ರಜಾಸರ್ಕಾರದ ಬಲ್ಬುಗಳು ಬೇಕಾ? ಸರಕಾರದ ವಸ್ತುಗಳನ್ನು ಸ್ವಂತಕ್ಕೆ ಬಳಸಿಕೊಂಡಿರಲ್ಲಾ, ನಿಮಗೆ ಸ್ವಲ್ಪವೂ ನಾಚಿಕೆಯೇ ಇಲ್ಲವಾ?” ಅಂತ ಬೈದು, ಅವರ ವಿವರಣೆಯನ್ನೂ ಕೇಳದೇ ತಿರುಗಿ ಬಂದರಂತೆ ಲಿಂಗಣ್ಣ.

ಲಿಂಗಣ್ಣ ಇಲ್ಲದಿದ್ದಾಗ ಮಹೇಶನೂ ನಾನೂ ಈ ವಿಷಯ ಮಾತಾಡಿಕೊಂಡು ಬಹಳ ನಗುತ್ತೇವೆ. ನಾಕು ಬಲ್ಬು ಯಾವ ಭ್ರಷ್ಟಾಚಾರದ ಲೆಕ್ಕ ಅಂತ. ಆದರೆ ಒಮ್ಮೊಮ್ಮೆ ಅನಿಸುವುದೂ ಉಂಟು. ಹೀಗೆ ಅಯ್ಯೋ ಇದೆಲ್ಲ ಯಾವ ಮಹಾ ದೊಡ್ಡದು ಅಂದುಕೊಂಡು ನಾವು ಸ್ವಲ್ಪ ಸ್ವಲ್ಪವೇ ಬಿಟ್ಟುಕೊಡುತ್ತಾ ಬಂದ ನೈತಿಕತೆ, ಬರುಬರುತ್ತಾ ಸ್ವಲ್ಪ ಸ್ವಲ್ಪವೇ ಹೊಂದಾಣಿಕೆ ಮಾಡಿಕೊಳ್ಳುತ್ತಾ ಬಂದ ಅಪ್ರಾಮಾಣಿಕತೆಗಳಿಂದಾಗಿಯೇ ಇವತ್ತು ಇಲ್ಲಿಗೆ ಬಂದು ನಿಂತಿದ್ದೇವಾಂತ. ಲಿಂಗಣ್ಣನ ಕಾಲದ್ದು ಬಿಡಿ. ನಾನೂ ನೀವೇ ಯೋಚಿಸಿದರೆ ಈಗ್ಗೆ 20-30 ವರ್ಷಗಳ ಹಿಂದೆ ತಮ್ಮ ಇಲಾಖೆಯಲ್ಲೋ, ರಾಜ್ಯದಲ್ಲೋ, ದೇಶದಲ್ಲೋ ಅಕಸ್ಮಾತ್‌ ಸಂಭವಿಸಿದ ಕೆಲವು ಅವಘಡಗಳಿಗೋ, ಸಣ್ಣ ಆಪಾದನೆಗಳಿಗೋ ರಾಜಕಾರಣಿಗಳು ರಾಜೀನಾಮೆ ಕೊಟ್ಟ ಹೋಗುತ್ತಿದ್ದರು. ರೈಲು ಆಕ್ಸಿಡೆಂಟಾದರೆ ರೈಲ್ವೇ ಮಂತ್ರಿ ರಾಜೀನಾಮೆ ಕೊಟ್ಟುಬಿಡುತ್ತಿದ್ದ. “ನೈತಿಕ ಹೊಣೆ ಹೊತ್ತು ರಾಜೀನಾಮೆ” ಅಂತ ಬರುತ್ತಿತ್ತು ಪೇಪರಲ್ಲಿ. ಈಗ ಕಂಡಿದ್ದೀರಾ ಅಂತದನ್ನು? ಸಮಾಜಕ್ಕೆ ಮುಖವೆತ್ತಿ ತೋರಬಾರದ, ತಲೆ ಎತ್ತಿ ನಡೆಯಬಾರದ ಎಂತದ್ದೇ ದೊಡ್ಡ ಆರೋಪ ಬಂದರೂ ನಾಕು ಬಕೆಟ್ ಫೆವಿಕಾಲ್ ಸುರಿದುಕೊಂಡು ಕೂತಂತೆ ಕೂತುಬಿಟ್ಟಿರುತ್ತಾರೆ ಕುರ್ಚೀಲಿ. ಅಲ್ಲಾಡಲ್ಲ ಮುಂದಿನ ಚುನಾವಣೆ ತನಕ. “ನೈತಿಕ ಹೊಣೆ ಹೊತ್ತು ರಾಜೀನಾಮೆ” ಅಂತ ಒಂದು ಸುದ್ದಿ ಇತ್ತು ಅಂತ ಈಚಿನ ಪತ್ರಕರ್ತರಿಗೆ ಗೊತ್ತೂ ಇರಲಿಕ್ಕಿಲ್ಲ. ಅಲ್ಲಾ, ಈಗ ಹಾಗೆ ನೈತಿಕ ಹೊಣೆ ಹೊತ್ತು ರಾಜೀನಾಮ ಕೊಡುವುದಾದರೆ ಯಾರೂ ಉಳಿಯುವುದೇ ಇಲ್ಲವೇನೋ ಬಿಡಿ.

ನೋಡಿ, ಅಸಲು ವಿಷಯವೇ ಮರ್ತುಹೋಯ್ತು. ಈ ಹಾಳು ರಾಜಕೀಯದ ವಿಷಯವೇ ಹಾಗೆ ನೋಡಿ, ಎಲ್ಲೆಲ್ಲೋ ಕರ್ಕೊಂಡು ಹೋಗಿಬಿಡುತ್ತದೆ. ಇವತ್ತು ಲಿಂಗಣ್ಣ ದೊಡ್ಡ ಸಾಹೇಬರ ಬಗ್ಗೆ ಅಷ್ಟು ಬೈಯುತ್ತಾ ಮಾತಾಡಿದ್ದಕ್ಕೆ ಒಂದು ಬಲವಾದ ಮತ್ತು ಬೇಸರವಾಗುವಂತಾ ಕಾರಣವಿದೆ. ಕೇಳಿದರೆ ನಿಮಗೂ ಖಂಡಿತವಾಗಿ ಬೇಸರವಾಗುತ್ತದೆ. ಕೋಪವೂ ಬರುತ್ತದೆ. ನಮ್ಮ ಮಹೇಶ ಇದ್ದಾನಲ್ಲ? ಬಿ ಎಡ್ ಮಾಡಿಕೊಂಡು ಯಾವ್ದೋ ಪ್ರೈವೇಟ್ ಸ್ಕೂಲಿನ ಮೇಷ್ಟ್ರಾಗಿದ್ದವನು ಕಡೆಗೆ ಫುಲ್ ಟೈಂ ಕೃಷಿಕನಾದವನು. ತೋಟದಲ್ಲಿ ಪುಟ್ಟ ಮನೆ ಮಾಡಿಕೊಂಡು ಇದ್ದುಬಿಟ್ಟವನು. ಮೇಷ್ಟ್ರಾಗಿದ್ದಾಗಲೇ ಯಾವ್ದೋ ಶಿಬಿರಕ್ಕೆ ಹೋಗಬಂದವನು ಕೃಷಿ ಅಂದರೆ ದಿನಾ ಹೊಲದಲ್ಲಿದ್ದು ಸೂರ್ಯೋದಯ ಸೂರ್ಯಾಸ್ತ ನೋಡಬೇಕು. ರಾತ್ರಿ ನಿಶ್ಯಬ್ದದಲ್ಲಿ ಎಚ್ಚರವಾಗುವ ಕ್ರಿಮಿಕೀಟಗಳ ಜೊತೆಗೂ ಒಡನಾಟ ಇರಬೇಕು. ಬೆಳಗ್ಗೆ ಬಂದು ಸಂಜೆ ಬಾಗಿಲಾಕೊಂಡ್ ಹೋಗಾಕೆ ಇದು ಆಫೀಸಲ್ಲ ಅಂದದ್ದೇ ಹೊಲದಲ್ಲೆ ಒಂದು ಸಣ್ಣ ಮನೆ ಮಾಡಿಕೊಂಡಿದ್ದ ಮಹೇಶ. ಚಿಕ್ಕವಯಸ್ಸು, ಹೊಸ ಸಂಸಾರ, ಪುಟ್ಟ ಕೂಸು. ಕಣ್ಣು ಮಂಜಾದ ಅವ್ವ. ಅವನು ವಿಜ್ಞಾನಿಯ ಹಾಗೆ, ಹಾಗೆ ಏನು ಬಂತು ಒಂತರದಲ್ಲಿ ವಿಜ್ಞಾನಿಯೇ ಅನ್ನಿ. ಏನಾದರೊಂದು ಕಂಡುಹಿಡಿಯೋನು ಮನುಷ್ಯ-ಪ್ರಕೃತಿಯ ಸಂಬಂಧದ ಬಗ್ಗೆ. ಈ ಹಣ್ಣಿನ ಗಿಡಗಳೆಲ್ಲ ಬಹಳ ಮೆದು. ಬೈದರೆ ಬೇಜಾರುಮಾಡಿಕೊಳ್ತವೆ ಅನ್ನುತ್ತಿದ್ದ. ಇನ್ಯಾವ್ದೋ ಪಾರ್ಥೇನಿಯ ತರದ ಗಿಡವನ್ನು “ಇದಕ್ಕೆ ಎಷ್ಟು ಬೈದರೂ ಮಾನವಿಲ್ಲ ಮರ್ಯಾದೆಯಿಲ್ಲ” ಅನ್ನುತ್ತಿದ್ದ. ಮಾತಿಗಲ್ಲ. ನಿಜಕ್ಕೂ ಅವನು ಅವುಗಳ ಜೊತೆ ಮನುಷ್ಯರ ಹಾಗೆ ಮಾತಾಡುತ್ತಿದ್ದ. ಬೇರೆ ಬೇರೆ ಕೃಷಿಕರನ್ನು ಭೇಟಿ ಮಾಡಿ ಏನೇನೋ ಹೊಸ ಪ್ರಯೋಗ ಮಾಡುತ್ತಿದ್ದ. ಯಾರೋ, ನೆಲಕ್ಕೆ ಬಿಸಿಲೇ ಬೀಳಕೂಡದು ಮುಚ್ಚಗೆ ಮಾಡಬೇಕು. ಆಗ ಕಳೆಯೂ ಬರಲ್ಲ ಅಂದದ್ದಕ್ಕೆ ಇಡೀ ತೋಟಕ್ಕೆಲ್ಲಾ ತೆಂಗಿನ ಗರಿಗಳನ್ನು ಹಾಸಿ ಮುಚ್ಚಿದ್ದ. ಇನ್ಯಾರೋ ಮಧ್ಯಾಹ್ನದ ಟೈಮಲ್ಲಿ ತೆಂಗಿನಮರದ ಗರಿಯ ತುದಿಯ ನೆರಳು ಸುತ್ತಲೂ ಎಲ್ಲಿ ಕೊನೆಯಾಗ್ತದೋ ಅಲ್ಲಿ ಅದರ ಬೇರಿರೋದು. ನೀರು ಗೊಬ್ಬರ ಕೊಡಬೇಕಾದ್ದು ಅಲ್ಲಿಗೆ ಅಂದದ್ದಕ್ಕೆ ಮರದ ಬುಡ ಬಿಟ್ಟು ನಾಕೈದಡಿ ದೂರದಲ್ಲಿ, ನೆರಳು ಕೊನೆಯಾದಲ್ಲಿ ಸುತ್ತಲೂ ಮಣ್ಣು ತೆಗೆದು ಅಲ್ಲಿಗೆ ನೀರು ಗೊಬ್ಬರ ಕೊಟ್ಟ. ಕಳೆದ ವರ್ಷ ಹೊಸ ಯಂತ್ರವೊಂದನ್ನ ತಂದಿದ್ದ. ಟ್ರ್ಯಾಕ್ಟರಿನ ಹಿಂದೆ ಅಳವಡಿಸುವ ತೆಂಗಿನ ಗರಿ ಪುಡಿ ಮಾಡೋ ಯಂತ್ರ ಅದು. ಪುಡಿ ಅಂದರೇನು? ನಿಮ್ಮ ಶ್ಯಾವಿಗೆ ಹಾಗೆ. ಅದರ ಜೊತೆಗೆ ಹಟ್ಟಿಗೊಬ್ಬರ ಮಿಕ್ಸ್ ಮಾಡಿ ಮರಗಳಿಗೆ ಕೊಟ್ಟಾಂದ್ರೆ ಒಳ್ಳೆ ಇಳುವರಿ. ಕೂಡಿಟ್ಟ ಗರಿಗಳನ್ನು ಆಗೀಗ. ಮಳೆಯಿಲ್ಲದಾಗ ಪುಡಿ ಮಾಡಿಕೊಳ್ಳುತ್ತಿದ್ದ ಮಹೇಶ. ಅವತ್ತೂ ಹಾಗೇ. ಒಂದೊಂದೇ ಗರಿಯನ್ನು ಮಿಷೀನಿನ ಬಾಯಿಗಿಡುತ್ತಿದ್ದ. ಅದು ರಾಕ್ಷಸನ ಬಾಯೇನೋ ಎಂಬಂತೆ ತುದಿ ತಾಕಿಸುತ್ತಿದ್ದ ಹಾಗೇ ಗುಳುಂ ಎಂದು ಒಳಕ್ಕೆಳೆದುಕೊಳ್ತಿತ್ತು. ತುದಿ ಸೋಕಿಸಿ ಬಿಟ್ಟುಬಿಡಬೇಕು. ಇನ್ನೊಂಚೂರು ಸರಿಯಾಗಿಡೋಣ ಅಂದರೆ ನೀನೂ ಬಾ ಅಂತ ಎಳಕೊಂಡೇಬಿಡುವಷ್ಟು ಫೋರ್ಸು ಅದರದು.

ಅವತ್ತು ಮಹೇಶ ಮಷೀನಿಗೆ ಗರಿಕೊಡುತ್ತಾ ಹಿತ್ತಲಿಂದ ಬಂದು ಜಗಲೀಲಿ ಕೈ ಮಡಿಕಂಡು ನಿಧಾನಕ್ಕೆ ಹೋಗುತ್ತಿದ್ದ ಅವ್ವನನ್ನು ನೋಡಿ. “ಹಿಡ್ಕಬೇಕೇನವ್ವಾ?… ಜ್ಯೋತೀ ಅವ್ವನ್ ನೋಡ್…. ಅಯ್ಯೋ… ಔಚ್…” ಎರಡೇ ಸೆಕೆಂಡು ಮೈಮರೆತನೇನೋ ಕೈ ಮಷೀನಿನ ಒಳಕ್ಕೆ ಹೋಗಿತ್ತು. ರಕ್ತ ಚಿಲ್ಲೆಂದದ್ದು ಕಂಡು ಜ್ಯೋತಿ ಚಿಟಾರನೆ ಚೀರಿದಳು.

ನಿನ್ನೆ ಮೊನ್ನೆಯಲ್ಲ. ಇದೆಲ್ಲ ಆಗಿ 8 ತಿಂಗಳ ಮೇಲೇ ಆಯ್ತು. ಮಹೇಶ 8 ತಿಂಗಳಿಂದ ಪರಿಹಾರದ ದುಡ್ಡಿಗಾಗಿ ಬೆಂಗಳೂರಿಗ ಹೋಗುತ್ತಲೇ ಇದ್ದಾನೆ. ಅವನು ಪ್ರತಿಸಲ ಹೋಗಿ ಬಂದಾಗಲೂ ಅವನ ಅನುಭವ ಕೇಳಿ, ನನಗೂ ಲಿಂಗಣ್ಣನವರಿಗೂ ರಕ್ತ ಕುದಿಯುವಷ್ಟು ಕೋಪ ಬರುತ್ತದೆ. ಇಷ್ಟು ದಿನ ಓಡಾಡಿದ್ದಾನಲ್ಲ? ಅವನ ಫೈಲು ಎಲ್ಲಿಗೆ ಬಂತು ಅಂತ ಕೇಳಿ ನೀವು. ಎಲ್ಲಾದರೂ ಹೋಗಿದ್ದರಲ್ಲವಾ ಬರುವುದು ಅದು? ತಿಂಗಳಿಗೆರಡು ಸಲವಾದರೂ ಹೋಗಿದ್ದಾನೆ. ಅವರು ಬಾಗಿಲ ಒಳಕ್ಕೂ ಬಿಟ್ಟಿಲ್ಲವಂತೆ. ಆದರೆ ಎಷ್ಟೋ ಫೈಲುಗಳು ಒಳಗೆ ಹೋಗಿ ಹಸಿರು ಸೈನು ಹಾಕಿಸಿಕೊಂಡು ಹೊರಬಂದು ಸೌಧದ ಆಚೆಗೂ ನಡೆದಿವೆ. ಆದರೆ ಮಹೇಶ ಮಾತ್ರ ನಿಂತಲ್ಲೆ ನಿಂತಿದ್ದಾನೆ. ಇದಕ್ಕೆ ಕಾರಣ ಅವನ ಜಾತಿ. ಈ ಸರಕಾರದಲ್ಲಿ ತುದಿಯಿಂದ ಕೊನೆವರೆಗೂ ತಮ್ಮ ಜಾತಿಯವರೇ ಇದ್ದಾರೆ. ನಾವು ಒಂದು ಬಾಗಿಲು ದಾಟಬೇಕೆಂದರೂ ಯಾರಾದರೂ ಅವರ ಜಾತಿಯವರ ಕೈ ಹಿಡಿದುಕೊಂಡು ಹೋಗಬೇಕು. ಇಲ್ಲದಿದ್ದರೆ ಪ್ರವೇಶವಿಲ್ಲ. “ಥತ್… ಅಲ್ಲಯ್ಯಾ, ದೊಡ್ಡ ಸಾಹೇಬ ಆಗೋಕೂ ಮೊದಲು ಅವನು ನಮ್ಮ ಕ್ಷೇತ್ರದ ಎಂ ಎಲ್ ಎ ಅಲ್ವೇನಯ್ಯ? ಕ್ಷೇತ್ರದೋರು ಅನ್ನೋ ಅಭಿಮಾನವಾದ್ರೂ ಬೇಡವಾ? ಎಷ್ಟಪ್ಪಾ ಓಟುಗಳಿರೋದು ನಮ್ಮ ಕ್ಷೇತ್ರದಲ್ಲಿ ಅವರ ಜಾತಿಯವು? ಅವರ ಜಾತಿಯೋರ್ ಮಾತ್ರ ಓಟಾಕಿದ್ರೆ ಅವನು ಗೆಲ್ತಿದ್ನೋ?” ಲಿಂಗಣ್ಣ ಕೇಳಿದರು. “ಅಯ್ಯೋ ನಮ್ಮಂತೋರ್ ಕತೆ ಬಿಡಿ ಅಣ್ಣಾ, ಅದ್ಯಾರೋ ಬಂದಿದ್ರು ಪಾಪ. ವಯಸಾದ ಮುದುಕಮ್ಮ… ಚಿಕ್ ವಯಸಲ್ಲಿ ನಿಮ್ಮ ಸಾಹೇಬನ್ನ ನಮ್ಮನೆಲೇ ಮಡಿಕಂಡ್ ಓದ್ಸಿದೀವಿ ಕಣಪ್ಪಾ, ಈಗ ಗಂಡ ಇಲ್ಲ. ಒಸಿ ಮಾತಾಡಬೇಕು ಅಂದ್ರೂ ಬುಡೊಲ್ರು ಯಾವ್ ಜನ ನೀವು? ಅಂತ ನೇರವಾಗಿ ಯಾವ ಮುಚ್ಚುಮರೆ, ಭಯ ಏನೂ ಇಲ್ಲೆ ಕೇಳ್ತಾರಣ್ಣ. ಅವರ ಜಾತಿಯಾದ್ರೆ ಮಾತ್ರ ಬುಡ್ತಾರೆ ಒಳಕ್ಕೆ ಅಥವಾ ಅವರ ಜಾತಿಯೋರ್ಯಾರಾದ್ರೂ ಕರ್ಕಂಡೋಬೇಕು ಅಂದ. “ಮೀಡಿಯಾದೋರಿಗ್ ಹೇಳಿದ್ರೆ? ಅಥವಾ ರೈತಸಂಘ?” ಕೇಳಿದೆ ನಾನು. “ಅದೆಲ್ಲ ಆಗಲ್ಲ ಮೇಷ್ಟೇ. ಆತ್ಮಹತ್ಯೆ ಮಾಡ್ಕಂಡ್ ಸತ್ತೋಗಿರೋರ್ನೇ ಕೇರ್ ಮಾಡಲ್ಲ. ಕೈ ಕತ್ತರಿಸೋದ್ರೆ ಕೇರ್ ಮಾಡ್ತಾರಾ? ಇವು ಅವಘಡವೇ ಅಲ್ಲ, ನೀನಾಗ್ ಮಾಡ್ಕಂಡಿರದು ಅಂದ್ಬಿಡ್ತಾರೆ. ವಿರೋಧಪಕ್ಷದೋರನ್ ಮಾತಾಡೋಕೂ ಆಗಲ್ಲ. ನಿಜಾ ಅಂದ್ರೆ ಮೇಲಕ್ಕೋಯ್ತಾ ಓಯ್ತಾ ಯಾರು ಆಳೋರು, ಯಾರ್ ವಿರೋಧಿಸೋರು ಅನ್ನೋದೆಲ್ಲ ಇರೋದೇ ಇಲ್ಲ. ಟಿವಿಲ್ ಜಗಳಾಡ್ತಿರ್ತಾರೆ. ಬೊಯ್ದಾಡ್ತಾ ಇರ್ತಾರೆ. ಅಲ್ಲಿ ತಬ್ಬಾಡ್ಕಂಡ್ ಒಟ್ಗೇ ಕಾಪಿ ಕುಡೀತಾ ಇರ್ತಾರೆ. ಪೆಟ್ರೋಲ್ ಸುರಕಂಡ್ ನಿಂತ್ಕಳಣಾ ವಿಧಾನಸೌಧದ್ ಮುಂದೆ ಅನ್ಕಂಡೆ. ಒಂದ್ ದಿನಕ್ ಸುದ್ದಿಯಾಗಬೋದು. ಆಮೇಲೆ ಬರೋಕಾಸೂ ಬರಲ್ಲ ಅಷ್ಟೇ. ಇದ್ಯಾವ್ದೂ ಆಗಲ್ಲಾಂತ ತೀರ್ಮಾನ ಮಾಡಿ, ನಾನೂ ಈ ಸಲ ಬರೋವಾಗ ಪಕ್ಕದೂರಲ್ಲಿ ಅವರ ಜಾತಿ ಪುಡಾರೀನ ನೋಡ್ಕಂಡ್ ಬಂದೆ. ಏ. ಹೇಳಕಿಲ್ವ ಇಷ್ಟ್ ದಿನ. ನಾನು ವಾರಕ್ಕೊಂದಲವಾದ್ರೂ ಹೋಗ್ತಿನಲ್ಲ ಸಲೀಸಾಗ್ ಕರ್ಕಂಡೋಯ್ತಿದ್ವಪ್ಪಾ ಅಂದ್ರು, ಅಂದ ಮಹೇಶ. ಲಿಂಗಣ್ಣ ಬಹಳ ಗಂಭೀರವಾಗಿ “ನಿಂಜೊತೆ ನಾನೂ ಬತ್ತೀನಿ ಮಹೇಶ” ಅಂದ್ರು.

ಇದಾದ ಮೇಲೆ ನಮ್ ಸ್ಕೂಲಿಗೆ ಇನ್ಸ್ಪೆ ಕ್ಷನ್ನು ಅಂತ ಶುರುವಾಯ್ತು. ನಮ್ ಹೆಚ್ ಎಂ ಟ್ರಾನ್ಸ್ವರ್ ಆಗಿ, ನಾನು ಹಂಗಾಮಿ ಮುಖ್ಯೋಪಾಧ್ಯಾಯ ಆದಾಗಿಂದ ನನಗೆ ಹಗಲ್ಯಾವ್ದೂ ರಾತ್ರಿ ಯಾವುದು ಗೊತ್ತಾಗದಷ್ಟು ಕೆಲಸ. ಮಕ್ಕಳಿಗೆ ಚಿಕ್ಕಿ ಕೊಡಬೇಕು. ಇಷ್ಟು ಗ್ರಾಂ ಕೊಟ್ಟೆವು ಅಂತ ಲೆಕ್ಕ ಬರೀಬೇಕು. ಮಧ್ಯಾಹ್ನದ ಬಿಸಿಯೂಟಕ್ಕೆ ಸಾರಿನ ಪುಡಿ ಮಿಲ್ ಮಾಡಿಸಿಕೊಂಡು ಬರಬೇಕು. ಅಕ್ಕಿ, ಬೇಳೆ ತರಬೇಕು ಎಲ್ಲಾನೂ ಲೆಕ್ಕ ಬರೀಬೇಕು. ಅದೂ ಗ್ರಾಂಗಳಲ್ಲಿ. ಅದನ್ನು ಕಂಪ್ಯೂಟರಿಗೆ ಹಾಕಬೇಕು. ಇನ್ನು ಆ ಪೌಡರಿನ ಹಾಲೋ, ಆ ಮಕ್ಳೂ ಬೇಡ, ವಾಂತಿ ಬರತ್ತೆ ಅಂತವೆ. ಪೋಷಕರು ಕೊಡಬ್ಯಾಡೀ ಅಂತಾರೆ. ಸ್ಕೂಲಲ್ಲಿಟ್ರೋ ಇನ್ಸ್ಪೆಕ್ಷನ್ ಟೈಮಿಗೆ ಕಷ್ಟ. ಸರಿ, ದನಗಳಿಗಾರೂ ಹಾಕೊಳಿ ಅಂತ ಪಾಕೀಟು ಪಾಕೀಟನ್ನೆ ಮಕ್ಕಳಿಗೆ ಕೊಟ್ಟಿದ್ದಾಯ್ತು. ಮಿಡ್ ಟೆರ್ಮ್ ಎಕ್ಸಾಮು ಬರೆಯೋಕೆ ಮಕ್ಕಳಿಗೆ ವೈಟ್ ಪೇಪರಿಲ್ಲ. ಅದನ್ನು ಸದ್ಯಕ್ಕೆ ಕೊಡೋಕಾಗಲ್ಲ. ನೀವು ಊರವರ ಸಹಾಯದಲ್ಲಿ ತಗೊಳಿ ಅಂದಿದೆ ಇಲಾಖೆ. ಅದಕ್ಕೆ ಯಾರನ್ನಾದರೂ ಹಿಡೀಬೇಕು. ಇದರ ಮಧ್ಯೆ ಜಿಲ್ಲಾಪಂಚಾಯ್ತಿ ಎಲೆಕ್ಷನ್ನಿನ ಟ್ರೈನಿಂಗು. ಅಯ್ಯೋ ಅತ್ತಾಗೆ ಸ್ಕೂಲಲ್ಲೇ ಮನಿಕಂಡೇಬುಡಿ ರಾತ್ರಿಗೂವೇ ಅಂತ ಹೆಂಡತಿ ಮಕ್ಕಳು ತಮಾಷೆ ಮಾಡ್ತಾರೆ. ನನಗೂ ಅದನ್ನು ಗಂಭೀರವಾಗಿ ಮಾಡೋದೇ ಸರಿಯೇನೋ ಅಂತಲೂ ಅನಿಸುತ್ತದೆ. ಇನ್ಸ್ಪೆಕ್ಷನ್ನು ನಮ್ ಸ್ಕೂಲಿಗೆ ಬರಲೇ ಇಲ್ಲ. ಅದಕಾಗಿ ಟೆನ್ನನ್ನು ತಗಂಡಿದ್ದೇ ಬಂತು.
ಇಷ್ಟೆಲ್ಲದರ ನಡುವೆ ತಿಂಗಳು ಕಳೆದದ್ದೇ ತಿಳಿಯಲಿಲ್ಲ.

ಅವತ್ತು ಮಹೇಶ ಕಾಣಲಿಲ್ಲ. ಪಕ್ಕದ ತೋಟದಲ್ಲಿ ದೂರದಲ್ಲಿ ಲಿಂಗಣ್ಣ ಕಂಡರು. ಅಲ್ಲಿಗೇ ಹೋದೆ. “ನಮಸ್ಕಾರ ಲಿಂಗಣ್ಣೋರೇ… ಟೈಮೇ ಆಗ್ಲಿಲ್ಲ ಬರಕೆ. ಏನ್ಸಮಾಚಾರ? ಹೋಗಿದ್ರಾ ಬೆಂಗಳೂರಿಗೆ? ಆಯ್ತಾ ಮಹೇಶನ ಕೆಲ್ಸ? ಬಾಳ ವರ್ಷಗಳ ಮೇಲೆ ಸೌಧದ ಮುಖ ನೋಡಿ ಬಂದ್ರೀ ಅನ್ನಿ” ಅಂದೆ. ಅವರು “ಬನ್ನಿ ಮೇಷ್ಟ್ರೇ” ಅನ್ನುತ್ತಾ. ಟವಲಿನಲ್ಲಿ ಕುತ್ತಿಗೆಯ ಬೆವರು ಸವರಿಕೊಂಡು ರೇಷ್ಮೆ ಹುಳದ ಮನೆಯ ಮುಂದಲ ಜಗಲಿಕಟ್ಟೆಯಲ್ಲಿ ಕೂತರು. ಎದುರಿಗೆ ನಾನೂ ಕೂತೆ. ಲಿಂಗಣ್ಣ ಯಾಕೋ ಎಂದಿಗಿಂತ ಹೆಚ್ಚೇ ಗಂಭೀರವಾಗಿದ್ದರು. “ಅವತ್ತಿಂದ ನಿಮ್ಮನ್ನ ಕಾಯ್ತಾ ಇದ್ದೆ. ಇಲ್ನೋಡಿ ಮೇಷ್ಟ್ರೇ, ನನ್ ಕೈ ಏನಾರ ವ್ಯತ್ಯಾಸ ಆಗಿದಾವ? ಅಂತ ಎರಡೂ ಅಂಗೈ ತೋರಿಸಿದರು. “ಇಲ್ವಲ್ಲ, ಇದ್ದಂಗೇ ಇವೆಯಲ್ಲಾ” ಅಂದೆ. ಮುಂದೆ ಲಿಂಗಣ್ಣ ದೃಷ್ಟಿಯನ್ನು ಎಲ್ಲೋ ದೂರದಲ್ಲಿ ನೆಟ್ಟವರಂತೆ ಕೂತು ಹೇಳಿದ್ದನ್ನೇ ನಿಮಗೆ ಹೇಳುತ್ತೇನೆ.

ಮಹೇಶ ಅಷ್ಟು ಸಲ ವಿಧಾನಸೌಧಕ್ಕೆ ಹೋಗಿಬಂದು ಕೆಲಸ ಆಗಲಿಲ್ಲ ಅಂತ ಬೇಸರ ಮಾಡಿಕೊಂಡು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವಾಗೆಲ್ಲ ನನಗೆ ಕೋಪ ಬರ್ತಿತ್ತು ಮೇಷ್ಟ್ರೇ. ಪ್ರಜೆಗಳನ್ನ ಬಾಗ್ಲಲ್ಲಿ ನಿಲ್ಸಿ ಜಾತಿ ಯಾವುದಯ್ಯಾ ಒಳಗೋಗಕೆ? ಅಂತ ಕೇಳಕಾ ಆ ಪುಣ್ಯಾತ್ಮರು ದೇಶಾ ಕಟ್ಟಿದ್ದು? ಅಂತ ಕೋಪ ಉಕ್ಕುಕ್ಕಿ ಬರದು. ರಾತ್ರಿ ನಿದ್ದೆ ಬರ್ತಿರಲಿಲ್ಲ. ಆಚೆ ಭಾಷಣದಲ್ಲಿ ಹೇಳೋದು ಒಂದು. ಒಳಗ್ ಮಾಡದೊಂದು. ಇದಕ್ಕೇ ಏನಯ್ಯಾ ನಿಮಗೆ ಸಂವಿಧಾನ ಬರ್ಕೊಟ್ಟಿದ್ದು? ನೊಂದವರೇ ನೋಯಿಸಿದರೆ ಅದಕ್ಕಿಂತಾ ಕೇಡುಂಟಾ ಲೋಕದಲ್ಲಿ? ಅಲ್ಲಾ, ಈಗಾ ಇವನು ಅಧಿಕಾರದಲ್ಲಿದ್ರೆ ಇವರ ಜಾತಿಯೋರಿಗೆ, ಅವರು ಅಧಿಕಾರದಲ್ಲಿದ್ರೆ ಅವರ ಜಾತಿಗೆ ಕೆಲ್ಸ ಮಾಡ್ಕೊಡ್ತಾ ಹೋದ್ರೆ ಜನ ನಮ್ ಜಾತಿಯೋನ್ಗೇ ವೋಟಾಕದ್ ಸರಿ ಅಂತ ಯೋಚ್ನೆ ಮಾಡೇ ಮಾಡ್ತಾರೆ. ಯಾವ್ ಜಾತಿಯವಾದ್ರೇನು? ಒಳ್ಳೇ ಮನ್ಷಾ ಗೆಲ್ಸಣ ಅನ್ನೋ ಪ್ರಜಾಪ್ರಭುತ್ವದ್ ಲೆಕ್ಕಾ ಎಲ್ ಬತ್ತದಪ್ಪಾ? ಓಟಿನ ಸಂಖ್ಯಾಬಲವೇ ಇಲ್ಲದ ಸಮುದಾಯಗಳೋರು ಸಾಯಬೇಕಾ? ಥೂ ಥೂ ಥೂ ನಿಮ್ ಜನ್ಮಕ್ ಬೆಂಕಿ ಹಾಕಾ… ಮಾಡ್ತೀನಿ ಅಂತ ಇಷ್ಟು ನೀಚವಾದ್ ಜಾತಿರಾಜಕಾರಣಾನಾ ಮಾಡದು? ಮನುಷತ್ವಾನೂ ಇಲ್ವೇನಯ್ಯಾ? ನೀನು ಯಾವ್ಯಾವ ಜಾತೀ ಮನೆಗಳಲ್ಲಿ ಉಂಡು, ಯಾವ್ಯಾವ ಜಾತಿ ಜನರಿಂದ ಸಹಾಯ ತಗಂಡು, ವೋಟು ತಗಂಡು ಬಂದು ಕೂತು, ಇಂತಾ ಹೊಲಸು ಜಾತಿರಾಜಕೀಯ ಮಾಡಬೋದಾ ಹೇಳು? ಭಾಷಣಗಳಲ್ಲಿ ಬುದ್ಧನ ಮಾತು ಕೋಟು ಮಾಡೋ ಯೋಗ್ಯತೆ. ಬಸವಣ್ಣ, ಸಂವಿಧಾನ, ಸಮಾನತೆ ಅಂತ ಮಾತಾಡೋ ಯೋಗ್ಯತೆ ಒಂದ್ ಸಾಸಿವೆಕಾಳಷ್ಟಾದ್ರೂ ಇದೆಯೇನಯ್ಯಾ? ಒಬ್ಬ ಅಮಾಯಕ, ಅಸಹಾಯಕ ರೈತನಿಗೆ ಯಾವ ಜಾತಿಯೋ? ಅವನ ಕಷ್ಟಾ ಗೊತ್ತೇನಯ್ಯಾ? ಬಡತನಕ್ಕೆ ಜಾತಿ ಇದೆಯೇನಯ್ಯಾ? ಬಡತನವೇ ಒಂದು ಜಾತಿ ಅಲ್ವೇನಪ್ಪಾ? ಬಡತನದಿಂದ್ಲೇ ಹುಟ್ಟಿಬಂದ ನಿನಗೇ ಅದು ತಿಳಿದಿದ್ ಮೇಲೆ ಇನ್ಯಾರಿಗ್ ತಿಳೀಬೇಕೋ? ಅಂತೆಲ್ಲಾ ಕೇಳಬೇಕು. ಕೇಳಿ ಕಪಾಳಕ್ಕೆ ನಾಕು ಬಾರಿಸಿ ಬರಬೇಕು ಅಂತ ಲೆಕ್ಕ ಹಾಕಿದೆ.

ಪಕ್ಕದೂರಿನ ಅವನದೇ ಜಾತಿಪುಡಾರಿ ಕರ್ಕೊಂಡೋಗ್ತಾನೆ ಅಂದಾಗ ನಾನೂ ಹೊರಟೆ. ಸೌಧದ ಹತ್ರಕ್ಕೆ ಹೋದೆವು. ಓಹೋಹೋ… ಏನು ಐಭೋಗ ಮೇಷ್ಟ್ರೇ. ರಾಜ್ಯಾನೇ ನಡಸೋ ಜಾಗ. ಎಷ್ಟೋ ಬಡವರ ಉದ್ಧಾರನೆಲ್ಲ ಹೊಟ್ಟೇಲ್ ತುಬ್ಕಂಡಿರೋ ಜಾಗ. ಅದು ಸೌಧ ಅಲ್ಲ ಮೇಷ್ಟ್ರೇ. ದೇವಸ್ಥಾನ. ಹೆಜ್ ಹೆಜ್ಜೆಗೂ ಕೈ ಮುಕ್ಕಂಡೇ ಹೋದೆ. ಆ ದೇವಸ್ಥಾನದಲ್ಲಿ ಒಂದ್ ಕುರ್ಚಿ ಸಿಗೋದು ಅಂದ್ರೆ ಏನು ಪುಣ್ಯಾ ಮೇಷ್ಟ್ರೇ. ದೇವರೇ ತನ್ ಕೆಲಸಾನ ನೀ ಮಾಡಪ್ಪಾಂತ ಮನ್ಷರಿಗೆ ಪವರ್ ಆಫ್ ಅಟಾರ್ನಿ ಕೊಟ್ಟಂಗೆ. ಅಂತಾ ಸ್ಥಾನದಲ್ಲಿ ಕೂತು ಹೊಲಸು ಮಾಡಿದ್ರೆ ಕ್ಷಮಿಸಬೋದಾ ಹೇಳಿ? ಇಲ್ಲಿದ್ದದ್ದಕ್ಕಿಂತಲೂ ಹತ್ತರಷ್ಟು, ನೂರರಷ್ಟು ರೋಷ ಬಂತು ಆ ದೇವಸ್ಥಾನದಲ್ಲಿ ನಿಂತಾಗ. ಪಕ್ದೂರಿನ ಪುಡಾರಿ ಬಾಗಿಲಗಂಟಾ ಕರ್ಕಂಡೋದ. ಒಳಗೆ ಮೀಟಿಂಗು ನಡೀತಿತ್ತು. ಬಾಗಲ ಕಾಯ್ತಾ ನಿಂತೋನಿಗೆ. “ನಮ್ಕಡೆಯೋರೇ, ನಮ್ ಕ್ಷೇತ್ರದವರೇ ಬಿಡಪ್ಪಾ ಒಳಗೆ” ಅಂದ ಇವನು. ಅವನು ಈಗ ಆಗಲ್ಲ ಅಂದ. ಇವನು “ಸಾಯೇಬರಿಗೇ ಪೋನಾಕ್ತೀನಿರಪ್ಪ” ಅಂದ.

ಬಾಗಿಲವನು “ಇಷ್ಟ್ ದಿನ ಬಂದಿದೀರಾ ಅಲ್ವ? ಏನಾರೂ ಹೇಳಿದೀವಾ? ಸಾಹೇಬರೂ ಹೇಳಿದಾರೆ. ನಮ್ಮೌರ್ಯಾರ್ ಬಂದ್ರೂ ಬಿಡಪ್ಪಾ ಅಂತ. ಈಗ್ ನಾ ಬುಡಲ್ಲಾ ಅಂತ ಹೇಳ್ತಾ ಇದೀನ ಹೇಳಿ. ಮೀಟಿಂಗು ಅಣ್ಣಾ. ಉತ್ತರ ಕರ್ನಾಟಕದಲ್ಲಿ ಬರಾ ಬಂದಿದೆಯಲ್ಲಾ ಅದರ ಬಗ್ಗೆ. ಅರ್ಧ ಗಂಟೆಯಂತೂ ಬೇಕೇಬೇಕು” ಅಂದ. ಮಹೇಶ “ಪರ್ವಾಗಿಲ್ಲ ಕಾಯಣ” ಅಂದ. ಅರ್ಧ ದಿನವಾದರೂ ಅವನಿಗೇನೂ ಅನಿಸ್ತಿರಲಿಲ್ಲ. ಅಷ್ಟು ಸಲ ಸುತ್ತಿ ಸಾಕಾಗಿತ್ತು ಪಾಪ ಅವನಿಗೆ. ಮುಕ್ಕಾಲು ಗಂಟೆಯಾಯ್ತು ಮೇಷ್ಟ್ರೇ. ಬಾಗಿಲು ತೆಗೆದಾಗ ಮೀಟಿಂಗು ಮುಗಿಸಿ ಒಳಗಿಂದ ಹೊರಗೆ ಬಂದವರನ್ನ ನೋಡಿದರೆ… ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು. ಆಹಾ… ಎಲ್ರೂ ದೇವರಿಂದ ಪವರ್ ಆಫ್ ಅಟಾರ್ನಿ ಪಡೆದವರೇ! ಒಬ್ಬೊಬ್ಬರ ಕೈಲೂ ಎಷ್ಟೆಷ್ಟು ದೊಡ್ಡ ಫೈಲುಗಳು! ಎಷ್ಟೆಷ್ಟು ಬಡವರ, ಅಶಕ್ತರ ಭವಿಷ್ಯವಿದೆಯೋ ಅದರಲ್ಲಿ? ಅವಕ್ಕೆಲ್ಲ ಹಸಿರು ಸೈನು ಬಿತ್ತೋ ಇಲ್ಲವೋ… ಎಷ್ಟೋ ನ್ಯಾಯವಾದ ಅರ್ಜಿಗಳು ಆ ಫೈಲಿನೊಳಗೆ ಇದ್ದಾವೋ ಇಲ್ಲವೋ. ಯೋಚಿಸುತ್ತಾ ಹೋದಂತೆ ನನಗೆ ಆ ಸೌಧದ ಸುತ್ತಾ ಅಸಂಖ್ಯ ಮರ್ಜಿಯಿಲ್ಲದ ಅರ್ಜಿಗಳು ಒಳಗೆ ಬರಲಾರದೇ ಓಡಾಡುತ್ತಿರುವಂತೆ ಕಾಣಿಸಿತು. ಎಲ್ಲೆಲ್ಲಿ ನೋಡಿದರೂ ಸೂತ್ರವಿರದ ಗಾಳಿಪಟದಂತೆ ಹಾರಾಡುತ್ತಿರುವ, ಸೌಧಕ್ಕೆ ಪ್ರದಕ್ಷಿಣೆ ಹಾಕುತ್ತಿರುವ, ಎಷ್ಟೋ ಕಾಲದಿಂದ ಅದನ್ನೇ ಮಾಡುತ್ತಾ ಮಾಸಿರುವ ಸಾವಿರಾರು… ಅಲ್ಲ, ಲಕ್ಷ ಲಕ್ಷ ಲಕ್ಷ ಅರ್ಜಿಗಳು! ನಾನು ನೋಡುತ್ತಲೇ ಇದ್ದೆ. ಆ ಅರ್ಜಿಗಳು ಅಲೆಯುತ್ತಾ, ಪಕ್ಷಿಗಳಂತೆ ಹಾರುತ್ತಾ, ದಿಕ್ಕೆಟ್ಟಂತೆ ಸೌಧವನ್ನು ಸುತ್ತುತ್ತಿವೆ. ಸುತ್ತುತ್ತಲೇ ಇವೆ. ಎಷ್ಟು ಕಾಲದಿಂದಲೋ…

“ಬನ್ನಿ” ಪಕ್ಕದೂರಿನ ಪುಡಾರಿ ಕರೆದ. ಬಾಗಿಲು ತೆರೆಯಿತು. ನಾನು ನಿರ್ಧಾರ ಗಟ್ಟಿಮಾಡಿಕೊಂಡೆ. ಅಂದುಕೊಂಡ ಮಾತುಗಳನ್ನೆಲ್ಲಾ ಆಡಿ ಕಪಾಳಕ್ಕೆ ಬಿಗಿದೇ ತೀರಬೇಕು ಅಂತ ಮುಷ್ಟಿ ಬಿಗಿ ಹಿಡಿದು ಒಳಹೋದೆ. ಹರಕಲು ಪ್ಯಾಂಟಲ್ಲಿ ಅರ್ಧ ಚಿತ್ರಾನ್ನಕ್ಕೆ ಬರುತ್ತಿದ್ದ ಆ ಹುಡುಗ ಇಂದ್ರನ ಅರಮನೆಯೋ ಎಂಬಂತಾ ವೈಭವದಲ್ಲಿ ಸಿಂಹಾಸನದಲ್ಲಿ ಕೂತಂತೆ ಕೂತಿದ್ದಾನೆ! ಸುತ್ತ ನಾಕೈದು ಜನ ಆಫೀಸರುಗಳು ನಿಂತುಕೊಂಡು ಏನೋ ಹೇಳುತ್ತಿದ್ದರು. ಇವನು ಅದನ್ನು ಕೇಳುತ್ತಲೂ ಏನೋ ಹೇಳುತ್ತಲೂ ಹೊರಡುವ ಸಲುವಾಗಿಯೋ ಎಂಬಂತೆ ಎದ್ದು ನಿಂತ. ನಿಂತ ಮೇಲೂ ಅವರು ಯಾವ್ದೋ ಫೈಲು ತೋರಿಸಿ ಏನೋ ಹೇಳಿದರು. ಇವನು ನಿಂತುಕೊಂಡೇ ಇನ್ನೇನೋ ಹೇಳಿದ. ಬಾಗಿಲ ಒಳಭಾಗದಲ್ಲಿ. ಆದರೆ ಆತನಿಂದ 25 -30 ಅಡಿ ದೂರದಲ್ಲಿ ನಾವಿದ್ದೆವು. ಹೊರಟೇಬಿಟ್ಟರೆ ಅಂತ ಮಹೇಶ ಚಡಪಡಿಸುತ್ತಿದ್ದ. ಪುಡಾರಿ, “ಇರಯ್ಯಾ ನನ್ ಮುಖ ತೋರ್ಸಿಲ್ವಾ?” ಅಂತ ಭರವಸೆ ನೀಡಿದ. ಅಧಿಕಾರಿಗಳ ಜೊತೆ ನಿಂತು ಮಾತಾಡುತ್ತಲೇ ಎರಡೂ ಕೈಯನ್ನು ಜೇಬಿನೊಳಗಿಟ್ಟಿದ್ದವನು ಒಂದು ಕೈ ಆಚೆ ತೆಗೆದು “ಬನ್ನಿ” ಎಂಬಂತೆ ಕೈಮಾಡಿ ಕರೆದ. ಮಹೇಶನೂ, ಪುಡಾರಿಯೂ ಹೋದರು. ನನ್ನ ಕಾಲು ಕದಲಲಿಲ್ಲ. ನಾನು ಹೋಗಿ ಸೀದಾ ಅವನ ಕೆನ್ನಗೆ ಬಾರಿಸುವ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೆ. ಪುಡಾರಿ ಅರ್ಜಿ ಕೊಟ್ಟ. ಸಾಹೇಬ ಅದನ್ನು ನೋಡದೆಯೇ ಅಲ್ಲೆ ಹಿಂಬದಿ ಕೈಕಟ್ಟಿ ನಿಂತಿದ್ದ ಯಾರಿಗೋ ಕೊಟ್ಟ. ಪುಡಾರಿಯ ಹೆಗಲ ಮೇಲೆ ಸಾಹೇಬ ಕೈ ಹಾಕಿದ. ಅವರೇನೋ ಮಾತಾಡುತ್ತಿದ್ದರು. ನಾನು ಮುಷ್ಟಿ ಇನ್ನಷ್ಟು ಬಿಗಿ ಮಾಡಿದೆ. ಸಾಹೇಬನ ಗಮನ, ನೋಟ ನನ್ನತ್ತ ಹರಿಯಿತು. ಪುಡಾರಿ- ಮಹೇಶ ಇಬ್ಬರೂ ದೂರದಲ್ಲಿದ್ದ ನನ್ನನ್ನು ಕೈಸಂಜ್ಞೆ ಮಾಡಿ ಕರೆದರು. ನಾನು ಮಾಡಬೇಕಾದ ಕೆಲಸಕ್ಕೆ ಮಾನಸಿಕವಾಗಿ ಸಿದ್ಧನಾಗಿ ಹೊರಟೆ. ಹೋಗುತ್ತಲೇ ಆಡಬೇಕಾದ ಎಲ್ಲ ಮಾತುಗಳನ್ನೂ ಮತ್ತೆ ಮತ್ತೆ ನೆನಪಿಸಿಕೊಂಡೆ. ಕೈ ಬಿಗಿ ಮಾಡಿಕೊಂಡೆ. ಆದರೆ ನಾನು ಹತ್ತಿರ ಹತ್ತಿರ ಹೋಗುತ್ತಲೂ ಅವನು, ಪುರಾಣದ ಕತೆಗಳಲ್ಲಿ ಚಿಕ್ಕ ಆಕಾರದ ಮನುಷ್ಯ ನೋಡನೋಡುತ್ತಾ ದೊಡ್ಡದಾಗಿ ಬೆಳೆವಂತೆ ಬೆಳೆದ. ನಾನು ಎಷ್ಟು ಹತ್ತಿರ ಹೋದರೆ ಅಷ್ಟು ದೊಡ್ಡ ಆಕಾರವಾಗುತ್ತಾ, ದೈತ್ಯನಾಗುತ್ತಲೇ ಇದ್ದ. ನನ್ನ ಕೈಗಳನ್ನು ನೋಡಿಕೊಂಡೆ. ಅವು ಇರುವುದಕ್ಕಿಂತ ಚಿಕ್ಕದಾಗಿದ್ದವು. ಮತ್ತೆ ಅವನನ್ನು ನೋಡಿದೆ. ಓಹ್… ಬೃಹತ್…ದೈತ್ಯ ಗಾತ್ರ!! ದೊಡ್ಡ ಮುಖ. ದೊಡ್ಡ ದೊಡ್ಡ ಹಲ್ಲುಗಳು ನನ್ನನ್ನು ಇಡಿಯಾಗಿ ಒಂದೇ ಮುಷ್ಟಿಯಲ್ಲಿ ಹಿಡಿಯಬಹುದಾದಷ್ಟು ದೊಡ್ಡ ಕೈ…. ನನಗೆ ಕಣ್ಣು ಕತ್ತಲು ಬಂದಂತಾಯ್ತು.

ಎಚ್ಚರವಾದಾಗ ನಾನು, ಮಹೇಶ, ಪುಡಾರಿ ಮೂವರೂ ಹೊರಗೆ ಹೋಗುವ ಸಲುವಾಗಿ ನಾವು ಬಂದ ಬಾಗಿಲನ್ನು ದಾಟುತ್ತಿದ್ದೆವು. ಕ್ಷಣದ ಹಿಂದೆ ಏನಾಯಿತು? ನಾನು ಮತ್ತೆ ತಿರುಗಿ ನೋಡಿದೆ. ಆಗ ದೈತ್ಯನಾಗಿ ಕಂಡಿದ್ದ ಅವನು ಈಗ ಸಾಮಾನ್ಯ ಗಾತ್ರದಲ್ಲೇ ಇದ್ದ. ಅಧಿಕಾರಿಗಳಿಗೆ ಏನೋ ಹೇಳಿದ. ಅವರು ತಲೆಯಾಡಿಸಿ ಹೊರಟ ಮೇಲೆ ತಾನೂ ಎರಡೂ ಕೈಗಳನ್ನು ಜೇಬಿಗಿಳಿಸಿ ಅಲ್ಲಿಂದ ಹೊರಡುತ್ತಿದ್ದ. ಆಗ ನನ್ನ ಕಡೆ ನೋಡಿ ನಕ್ಕನಾ? ಹಳೆ ಗುರುತು ಸಿಕ್ಕಿತಾ? ಅಥವಾ ಎಲ್ಲವೂ ನನ್ನ ಭ್ರಮೆಯೋ? ಒಂದೂ ಗೊತ್ತಾಗಲಿಲ್ಲ” ಲಿಂಗಣ್ಣ ಮಾತು ನಿಲ್ಲಿಸಿ ತಮ್ಮಷ್ಟಕ್ಕೇ ಏನನ್ನೋ ಯೋಚಿಸಿಕೊಳ್ಳುತ್ತಿದ್ದರು. ಏನನ್ನೋ ಮತ್ತೆ ನೆನಪಿಸಿಕೊಳ್ಳುವರಂತೆ. ಕೆಲನಿಮಿಷಗಳ ನಂತರ ಸಂಪೂರ್ಣ ಎಚ್ಚರ ಮತ್ತು ಆವೇಷದಿಂದ ಹೇಳಿದರು; “ಇಲ್ಲ ಮೇಷ್ಟ್ರೇ, ನಾನು ಮಾತ್ರ ಅವನನ್ನು ಬಿಡುವುದಿಲ್ಲ. ಎಲ್ಲಿ ಹೋಗ್ತಾನೆ ಹೇಳಿ? ಓಟು ಕೇಳಿಕೊಂಡು ಭಾಷಣಾ ಮಾಡೋಕೆ ಬರ್ತಾನಲ್ಲಾ… ಆಗ ಹೊಡೀತೀನಿ. ಈ ಕಿತ್ತೋದ ಎಕ್ಕಡಾ ತಗಂಡು ರಪಾ ರಪಾ ರಪಾಂತ ಹೊಡೀತೀನಿ” ಅಂತ ಕಾಲಲ್ಲಿದ್ದ ಮೆಟ್ಟನ್ನು ಕೈಲಿ ಹಿಡಿದು ಉನ್ಮಾದಕ್ಕೊಳಗಾದಂತಾದ ಲಿಂಗಣ್ಣನನ್ನು ನೋಡಿ ನನಗೆ ದಿಕ್ಕೇ ತೋಚದಂತಾಯ್ತು.

(ಕೃತಿ: ಕಪಿಲೆ ಕಂಡ ಕತೆಗಳು (ಕಥಾಸಂಕಲನ), ಲೇಖಕರು: ಕುಸುಮಾ ಆಯರಹಳ್ಳಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 150/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ