Advertisement
ಕೆ.ಟಿ. ಶಿವಪ್ರಸಾದ್ ಎಂಬ ಕಲಾವಿದನ ನೆನಪು….

ಕೆ.ಟಿ. ಶಿವಪ್ರಸಾದ್ ಎಂಬ ಕಲಾವಿದನ ನೆನಪು….

ಖ್ಯಾತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನೆನ್ನೆ ತೀರಿಕೊಂಡರು. ಅಂತರ್‌ರಾಷ್ಟ್ರೀಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದರು, ತಮ್ಮ ಕಲೆ, ತೀರಾ ಹತ್ತಿರದ ಸ್ನೇಹಿತರೊಂದಿಗಿನ ಒಡನಾಟದ ಹೊರತು, ತಮ್ಮ ಬದುಕನ್ನ ಬದುಕಿದ ರೀತಿ ಬಹಳ ಭಿನ್ನವಾಗಿತ್ತು. ಪೂರ್ಣಚಂದ್ರ ತೇಜಸ್ವಿಯವರ ಆಪ್ತ ಒಡನಾಡಿಯೂ ಆಗಿದ್ದ ಇವರ ನೆನಪುಗಳನ್ನು, ಅವರ ಆಪ್ತ ನಾಗರಾಜ್‌ ಹೆತ್ತೂರು “ಶಿವ ಮೇಡ್‌ ಬೈ ತೇಜಸ್ವಿ” ಪುಸ್ತಕದ ಹೆಸರಿನಲ್ಲಿ ಪ್ರಕಟಿಸಿದ್ದರು. ಈ ಕೃತಿಯ ಆಯ್ದ ಭಾಗಗಳು ನಿಮ್ಮ ಓದಿಗೆ ಇಲ್ಲಿವೆ.

ಕೆ.ಟಿ. ಎಂಬ ಅಂಬೇಡ್ಕರ್‌ವಾದಿಯ ಒಡನಾಟಕ್ಕೆ  ಹೋಗುವ ಮುನ್ನಾ….

ಆಗಷ್ಟೆ ನಾನು ವಿಜಯ ಕರ್ನಾಟಕ ತೊರೆದಿದ್ದೆ.

ಮುಂದೇನು…?  ಎಂದು ಮನಸ್ಸು ಗೊಂದಲದಲ್ಲಿ ಹೊಯ್ದಾಟ ನಡೆಸಿತ್ತು. ಕಾಲು ಎತ್ತೆತ್ತಲೋ ಸಾಗುತ್ತಿತ್ತು…  ವಿಜಯ ಕರ್ನಾಟಕದಂತಹ ಪತ್ರಿಕೆ ಬಿಟ್ಟು ಮುಂದೇನು..? ಮನಸ್ಸಿನ ಹೊಯ್ತಾಟ, ತೊಳಲಾಟ…

ನಿಜ…! ಪತ್ರಿಕೋದ್ಯಮ ಬಿಡದ ಬಂಧ.  ಮುಂದೇನು ಗೊತ್ತಿಲ್ಲ. ಪತ್ರಿಕೆ ಮಾಡಬೇಕೆಂಬ ಹುಮ್ಮಸ್ಸು ಆದರೆ ದಾರಿ ಯಾವುದೆಂದು ಗೊತ್ತಿಲ್ಲ. ಹಣಕಾಸಿನ ಸಮಸ್ಯೆ. ಬೆನ್ನಿಗೆ ನಿಲ್ಲುವರಿಲ್ಲ.

ಈ ಎಲ್ಲಾ ಜಂಜಾಟಗಳ ಮಧ್ಯೆಯೇ ನಾನು ಪರಿಚಯ ಮಾಡಿಕೊಂಡಿದ್ದು ಕೆ.ಟಿ. ಶಿವ ಪ್ರಸಾದ್. ಆಡುವಳ್ಳಿಯಲ್ಲಿ ವಾಸ ಇದ್ದ ಕೆಟಿಎಸ್ `ಒಂಟಿಚಾಳ್ರು’ಎನ್ನುತ್ತಾರಲ್ಲ ಹಾಗೆ ತಾವಾಯಿತು ತಮ್ಮ  ಕೆಲಸ, ಪೇಂಟಿಂಗ್ ಇದಿಷ್ಟೆ  ಜೀವನ ಎಂದುಕೊಂಡಿದ್ದವರು.

ಅವರನ್ನು ಭೇಟಿಯಾಗುತ್ತಿದ್ದಿದ್ದು ಅತ್ಯಂತ ಆಪ್ತ ವರ್ಗ. ಅವರಲ್ಲೂ ವೆರಿ ಸೆಲೆಕ್ಟೆಡ್ ಎನ್ನುವಂತಹವರು ಮಾತ್ರ.

ಮೊದಲಿಗೆ ಅವರನ್ನು ಭೇಟಿಯಾಗಿದ್ದು ಇನ್ನೂ ನೆನಪಿದೆ. ಕಾರ್ಯಕ್ರಮವೊಂದಕ್ಕೆ ಕರೆಯಲು ಹೋಗಿದ್ದೆವು.

ಸ್ನೇಹಿತರೊಡನೆ ಹೋಗಿ ಬಾಗಿಲು ತಟ್ಟಿದ್ದಷ್ಟೆ ನೆನಪು. ಆ ಕಡೆಯಿಂದ `ಯಾರೋ ನೀನು.. ಯಾಕೆ ಬಂದಿದ್ದೀಯಾ..?ʼ ನಾನು ಇವನು ಎಂದು ಪರಿಚಯ ಮಾಡಿಕೊಂಡು,  ಕಾರ್ಯಕ್ರಮಕ್ಕೆ ಕರೆಯೋಣ ಎಂದು ಬಂದೆ’ ಎಂದು ಹೇಳಿದೆ.

ಆ ಕಡೆಯಿಂದ ಅಷ್ಟೆ ನೇರವಾಗಿ `ಇಲ್ಲ ಬರಲ್ಲ. ಮತ್ತೆ ಯಾವಾಗಲೂ ಬರುವುದಾದರೆ ಹೇಳಿ ಬರಬೇಕು. ಹೀಗೆಲ್ಲ ಬರಬಾರದು’ ಎಂದು ಒಳಗೂ ಕರೆಯದೆ ಮುಖಕ್ಕೆ ಹೊಡೆದಂತೆ ಹೇಳಿ ಕಳಿಸಿದರು.

ನನಗೂ ನನ್ನ ಗೆಳೆಯರಿಗೂ ಒಂದು ರೀತಿಯ ಅವಮಾನ ಆದಂತಾಗಿ, ಇದ್ಯಾವುದೋ ಮೆಂಟಲ್ ಕೇಸ್ ಎಂದುಕೊಂಡು ಬಂದೆವು.

ಮೇಲಾಗಿ ಇವರು ಗೌಡರು ಎಂದು ತಿಳಿದಿದ್ದರಿಂದ ಗೌಡ್ರು ನನ್ನ ಮಕ್ಳು ಗೌಡಿಕೆ ಬಿಡ್ತಾರಾ..? ಹುಟ್ಟು ಗುಣ ಎಲ್ಲಿ ಹೋಗುತ್ತೇ ಎಂದು ನನ್ನೊಂದಿಗೆ ಬಂದಿದ್ದವರ ಜೊತೆ ಬೈದುಕೊಂಡು ಬಂದಿದ್ದೆ.

ಮತ್ತೊಮ್ಮೆ ಡಾ. ಎಂ.ಎಸ್. ಶೇಖರ್ ಸಿಕ್ಕಿದ್ದಾಗ ಆದ ಅನುಭವವನ್ನು ಹೇಳಿಕೊಂಡೆ. ಅವರಾಗ ಹೇಮ ಗಂಗೋತ್ರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಟಿಎಸ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲವೇ ಮಂದಿಯಲ್ಲಿ ಅವರೂ ಒಬ್ಬರು.

ನಂತರ ಅವರು ಕೆಟಿಎಸ್ ಬಗ್ಗೆ ಕೊಟ್ಟ ಬಿಲ್ಡಪ್ ಇನ್ನೂ ರೋಚಕವಾಗಿತ್ತು. ಅವರನ್ನು ಭೇಟಿ ಮಾಡಲು ಟೈಮಿಂಗ್ ತೆಗೆದುಕೊಳ್ಳಬೇಕು. ಅವರು ಪೇಯಿಂಟಿಂಗನ್ನು ಧ್ಯಾನದಂತೆ ಮಾಡುತ್ತಾರೆ. ಹಾಗಾಗಿ ಡಿಸ್ಟರ್ಬ್‌ ಮಾಡಬಾರದು. ಒಮ್ಮೆ ನನ್ನ ಜೊತೆ ಬನ್ನಿ ನಾನೇ ಪರಿಚಯ ಮಾಡಿಕೊಡುತ್ತೇನೆಂದು ಹೇಳಿದರು.

ಹಾಗೆ ಒಮ್ಮೆ ಅವರ ಮೂಲಕ ಪರಿಚಯ ಆಯ್ತು. ನಮ್ಮ ಕವಿ ಸುಬ್ಬು ಹೊಲೆಯಾರ್ ಅಕ್ಕನ ಮಗ ಪತ್ರಿಕೆಯಲಿದ್ದ. ಈಗ ಸ್ವಂತ ಪತ್ರಿಕೆ ಮಾಡಲು ಹೊರಟಿದ್ದಾನೆ. ಮೊನ್ನೆ ನಿಮ್ಮನ್ನು ಭೇಟಿ ಮಾಡಲು ಬಂದು ನೀವು ಸರಿಯಾಗಿ ಮಾತನಾಡಿಸದೆ ಕಳಿಸಿದ್ರಂತೆ ಎಂದರು ಪರಿಚಯಿಸಿದರು.

ಹೌದೆನೋ ನೀನೇ ಏನೋ ಬಂದಿದ್ದು… ಹೇಳೋದಲ್ವೆನೋ ಎಂದು ಸಹಜವಾಗಿ ಮಾತನಾಡಿದರು. ಅವತ್ತು ಹಾಗೆಲ್ಲ ಬೈದು ಕಳಿಸಿದ್ದು ಈ ಯಪ್ಪನೇ ಅಲ್ವಾ ..? ಎಂದು ಮನಸ್ಸಿನಲ್ಲೇ ಬೈದುಕೊಂಡು ಸುಮ್ಮನಾದೆ.

ಅಲ್ಲಿಂದ ಪರಿಚಯವಾದ ನಮ್ಮ ಪಯಣ ಹತ್ತಿರ ಹತ್ತಿರ ಒಂದು ದಶಕ ಕಳೆದಿದೆ.

ಈ ನಡುವೆ ಅವರು ಹಾಸನದಿಂದ ತುಮಕೂರಿಗೆ ಹೋದರು.. ಮತ್ತೆ ಬಂದರು ಅನೇಕ ಸಲ ಸುಮ್ಮ ಸುಮ್ಮನೆ ಮಾತು ಬಿಟ್ಟರು. ಬರಬೇಡ ಎಂದರು… ಹೀಗೆ ಏನೆಲ್ಲಾ ನಡೆದಿವೆ ಆದರೂ ಅವರ ಮೇಲಿನ ಗೌರವ ಕಡಿಮೆ ಆಗಿಲ್ಲ.

ಜೀವನದಲ್ಲಿ ಏನೂ ಭರವಸೆಗಳೇ ಇಲ್ಲ ಎಂದಾಗಲೆಲ್ಲ ಅವರೊಂದಿಗೆ ಹೋಗಿ ಮಾತನಾಡಿ ಬದುಕುವ ಭರವಸೆಯನ್ನು ನೋಡಿ ಕಲಿತಿದ್ದೇನೆ. ಅವರಲ್ಲಿನ ಪಾಸಿಟಿವ್ ಎನರ್ಜಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಹೀಗೂ ಬದುಕಬಹುದಾ ಅಂದುಕೊಂಡು ಹೌಹಾರಿದ್ದೇನೆ.

ನಿಜ ಇವರ ಹಿನ್ನೆಲೆಗಳನ್ನು ಕೇಳಿದರೆ, ಇವರದ್ದು ಒಂದು ವಿಶಿಷ್ಟ ವಿಕ್ಷಿಪ್ತ ವಿಚಿತ್ರ ಬದುಕು.

ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಅನೇಕ ಭಾರಿ ಯೋಚಿಸಿದ್ದೇನೆ. ಒಬ್ಬ ಮನುಷ್ಯ ಹೊರಗಿನ ಪ್ರಪಂಚದ ಬಗ್ಗೆ ಗೋಜಲುಗಳಿಲ್ಲದೇ ಒಬ್ಬಂಟಿಯಾಗಿ ಎಷ್ಟು ಗಂಟೆ.. ಎಷ್ಟು ದಿನ ಬದುಕಬಹುದು…!

ವಾರ, ತಿಂಗಳು, ವರ್ಷಗಳು.

ಅಂದರೆ ಬೆಳಗ್ಗಿನ ಪ್ರಜಾವಾಣಿ, ದ ಹಿಂದೂ ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನಷ್ಟೇ ನೋಡಿಕೊಂಡು ಅವರ ಸಮಕಾಲಿನವರು ಬಾಂಬೆಯಿಂದಲೊ.. ಮೈಸೂರಿನಿಂದಲೋ ಅಥವಾ ಅವರ ಮನೆಯವರು ಯಾರಾದರೂ ಕರೆ ಮಾಡಿದರೆ ಮಾತ್ರ ಮಾತು. ಅದರಲ್ಲೂ ಅವರ ಆಪ್ತರಲ್ಲಿರುವರು ಮಾತನಾಡಿದರೆ ಮಾತ್ರ ಮಾತು.  ಅದರ ಹೊರತಾಗಿ ಜನ ಸಾಮಾನ್ಯರಿಗೆ ಒಂದಿಷ್ಟೂ ನಿಲುಕದ  ಸುಮ್ಮನೆ ಹಾಗೆ ಆ ಮನೆಯಲ್ಲಿ ಕುಳಿತು ಪೇಯಿಂಟಿಂಗ್ ಮಾಡುತ್ತಾ ಊಟ ತಿಂಡಿ ಮಾಡಿಕೊಂಡು ಕುಳಿತುಕೊಳ್ಳುವುದು… ವ್ಯಾಯಾಮ ಮಾಡುವುದು… ಇದೆಂಥ ಬದುಕು…? ಅಥವಾ  ಹೀಗೂ ಬದುಕುತ್ತಾರಾ ..? ಎಂದುಕೊಂಡಿದ್ದೇನೆ.

ಹೌದಲ್ಲಾ ನಮ್ಮೆದುರೇ ಬದುಕುತ್ತಿದ್ದಾರಲ್ಲವೇ..? ಅದಕ್ಕಿಂತ ಉದಾಹರಣೆ ಬೇಕೆ..? ಎಂದು ಸುಮ್ಮನಾಗಿದ್ದೇನೆ.

ಆ ಆಡುವಳ್ಳಿ ಮನೆಯಲ್ಲಿ ಒಬ್ಬಂಟಿಯಾಗಿ ಹಾಗೆ ಇರುತ್ತಿದ್ದರು.

ಒಮ್ಮೆ ಹೀಗಾಯ್ತು ನಾನು ಸ್ನೇಹಿತರೊಬ್ಬರನ್ನು ಕರೆದುಕೊಂಡು ಹೋಗಿದ್ದೆ. ಒಂದು ಹಳೆ ಕಾಲದ ಟಿವಿ ಅವರ ಕೋಣೆಯಲ್ಲಿತ್ತು. ಯಾವುದೋ ಇಂಗ್ಲೀಷ್ ಚಲನಚಿತ್ರ; ಅದೊ ರೊಮ್ಯಾನ್ಸ್ ಮಾಡುವ ಸೀನ್ ಕಾಣಿಸುತ್ತಿತ್ತು. ಅಲ್ಲಿಗೆ ಪಾಸ್ ಮಾಡಿ ಸೀದಾ ಬಾಗಿಲು ತೆಗೆಯಲು ಬಂದರು ಒಳಗೆ ಹೋಗಿ ನೋಡಿದರೆ  ರೊಮ್ಯಾನ್ಸ್ ಸೀನ್ ಪಾಸ್ ಆಗಿತ್ತು.

ನಾನು ಅವರನ್ನೇ ಒಮ್ಮೆ ನೋಡಿದೆ. ನನ್ನ ಕಡೆ ನೋಡಿ `ಲೋ ನನ್ನ ಮಗನೇ ನೀಲಿ ಚಿತ್ರ ಅಲ್ಲಾ ಕಣೋ ಅದು, ಇಟಾಲಿಯನ್ ಮೂವಿ…’ ಎಂದರು.

ನಾನೇನು ಕೇಳಿದೆ ಎಂದೆ..?

“ಏನೇನೋ ತಿಳ್ಕೋಬೇಡ” ಎಂದವರು ಮಾತಿಗೆ ಇಳಿದರು. ಅಂದರೆ ಯಾವುದನ್ನೂ ಮುಚ್ಚಿಡದೆ ಅಲ್ಲೇ ಮುಗಿಸುತ್ತಿದ್ದರು.

ಕೆಟಿಎಸ್ ಎಂದರೆ..!  ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರು.. ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಸ್ನೇಹಿತ… ಕವಿಶೈಲವನ್ನು ನಿರ್ಮಿಸಿದವರು… ಜಫ್ತಿ ಮರುಜಫ್ತಿ  ಮಾಡಿದ ಹೋರಾಟಗಾರ… ಮಾಜಿ ಎಂಎಲ್‌ಎ ಉದ್ಯಮಿ ಕೆಟಿ ಕರ್ಲೆ ಅವರ ಮಗ… ದಲಿತ ಸಂಘರ್ಷ ಸಮಿತಿಯ ಕಟ್ಟಾಳು ಹೀಗೆ ಅನೇಕ ರೀತಿಯಿಂದ ಕರೆಯಬಹುದು.

ಕೆಟಿ ಎಂದರೆ ನನ್ನ ಕಣ್ಣಲಿದ್ದಿದ್ದಿದ್ದು ಮತ್ತು ಇಂದಿಗೂ ಇರುವುದು ಒಬ್ಬ ಮಹಾನ್ ಕಲಾ ತಪಸ್ವಿ, ಹಾಗೆ ಮುಗ್ಧ ಮಗು.

ಆರಂಭದಲ್ಲಿ ಅವರ ಹಿನ್ನೆಲೆ ಅವರ ಕುಟುಂಬದ ಹಿನ್ನೆಲೆಯನ್ನು ಕೇಳಿಯೇ ನಾನು ದಂಗಾಗಿದ್ದೆ. ಇವತ್ತು ಅವರ ಕುಟುಂಬದ ಆಸ್ತಿ ಸಾವಿರ ಕೋಟಿಗಟ್ಟಲೆ ಇದೆ. ಕರ್ಲೆ ಗ್ರೂಪ್ ಆಫ್ ಕಂಪನಿಯ ಒಬ್ಬ ಮಗ ಇವರು ಎಂಬುದೇ ನಮಗೆ ಅಚ್ಚರಿ.

ಅಂತಹ ಸಾವಿರ ಗಟ್ಟಲಕೆ ಆಸ್ತಿ ಇದ್ದರೂ ಏನೂ ಬೇಡ ಎಂದು ಚಿತ್ರ ಕಲೆ ಮಾಡುತ್ತಾ ಯಾವಾಗಲೋ ಮಾರಾಟವಾಗಿ ಬಂದಿದ್ದ ಹಣವನ್ನು ಡೆಪಾಸಿಟ್ ಎಂದು ಹಾಕಿಕೊಂಡು ಅದರಿಂದ ಬರುವ ಬಡ್ಡಿ ಹಣದಲ್ಲಿ ಮನೆ ಬಾಡಿಗೆ ಕೊಟ್ಟುಕೊಂಡು ಜೀವನ ನಡೆಸುವುದು ಸುಲಭದ ಮಾತಲ್ಲ.

(ಕೆ.ಟಿ. ಶಿವಪ್ರಕಾಶರೊಂದಿಗೆ ನಾಗರಾಜ್‌ ಹೆತ್ತೂರು)

ನಂಗೆ ಈಗಲೂ ಅವರ ಮಾತು ನೆನಪಾಗುತ್ತದೆ. ನನ್ನ ಹೆಂಡತಿ ಮನೆ ಕಟ್ಟಬೇಕು ಎಂದಾಗಲೆಲ್ಲ ನೋಡು ಕೆಟಿ ಎಸ್ ನೋಡಿಕೊಂಡು ಕಲಿ. ಅವರು ಯಾವಾಗಲೂ ಹೆಳುತ್ತಿರುತ್ತಾರೆ ಮತ್ತೆ ಅಂತೆಯೇ ಬದುಕಿದ್ದಾರೆ. ಕುವೆಂಪು ಅವರ `ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದೂ ಮುಟ್ಟದಿರು’ ಈ ಕಾರಣಕ್ಕೆ  ಹೆಂಡತಿಯೊಂದಿಗೆ ಬೈಸಿಕೊಂಡಿದ್ದು ಇದೆ.

ಅದರರ್ಥ ಚಲನೆಯಲ್ಲಿರಬೇಕು ಎಂಬುದು.

`ಚಲನೆ’ ಅವರು ಹೆಚ್ಚು ಬಳಸುವ ಪದ. ಬುದ್ಧ, ಅಂಬೇಡ್ಕರ್ ಮತ್ತು ನಾಗಾರ್ಜುನನನ್ನು ಹೊರತುಪಡಿಸಿ ಅವರು ಮಾತನಾಡಿದ ಉದಾಹರಣೆ ಇಲ್ಲ.

ಅದೂ ಈ ಕಾಲದಲ್ಲಿ ಇಂತಹವರೂ ಇರುತ್ತಾರೇಯೇ ..? ಎಂಬುದೇ ನನಗೆ ಅಚ್ಚರಿ.

ಕಾಲ ಕಳೆದಂತೆ ಅವರ ಆಪ್ತನಾಗುತ್ತಾ ಹೋದೆ. ಅವರ ಹತ್ತಿರದವರಲ್ಲಿ ಹತ್ತಿರದವನಾಗಿ ಏನೇ ಇದ್ದರೂ ಅವರೊಟ್ಟಿಗೆ ಚರ್ಚಿಸುವ ಮತ್ತು ಸಲಹೆ ಕೇಳುತ್ತಿದ್ದೆ. ಒಂದು ಹಂತದಲ್ಲಿ ಸಿಕ್ಕಿದವರು ಕೆಟಿ ದತ್ತು ಪುತ್ರ ಎನ್ನುವ ಮಟ್ಟಕ್ಕೆ ಜೊತೆಯಾಗಿದ್ದೆ.

ಹೀಗೆ ಶುರುವಾದ ನಮ್ಮ ಅವರ ಆಪ್ತ ಸಂಬಂಧ ಅನೇಕ ವರ್ಷಗಳ ಕಾಲ ನಿರಂತರವಾಗಿ ಮುಂದುವರೆಯಿತು. ಅವರೊಂದಿಗೆ ಅನೇಕ ಕಡೆ ತಿರುಗಿದ್ದೇನೆ… ಅನೇಕ ದೊಡ್ಡ ದೊಡ್ಡ ಸಂಪರ್ಕ ಸಾಧಿಸಿದ್ದೇನೆ. ಯಾರಾದರೂ ದೊಡ್ಡವರು  ಸಿಕ್ಕಾಗ ನಿಮ್ಮ  ಗುರು ಕೆಟಿ ಹೇಗಿದ್ದಾರಪ್ಪಾ…?  ಎನ್ನುವಷ್ಟರ ಮಟ್ಟಿಗೆ ಅವರ ಆಪ್ತತೆಯಲ್ಲಿ ಬೆರೆತಿದ್ದೆ. ಅವರೂ ಕೂಡ ಯಾವುದಕ್ಕೂ ರಿಸ್ಟಿçಕ್ಟ್ ಮಾಡುತ್ತಿರಲಿಲ್ಲ.  ದಲಿತ ಸಾಹಿತ್ಯ ಸಮ್ಮೇಳ ನ ಆರಂಭಿಸಿದಾಗ ಮೊದಲ ಸಮ್ಮೇಳನಾಧ್ಯಕ್ಷರಾದ  ದುದ್ದ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿದ್ದೇ ಕೆಟಿ.

ಇಲ್ಲಿ ಇನ್ನೂ ಒಂದು ನೆನೆಯಲೇಬೇಕು. ನಾನು ಪತ್ರಿಕೆ ಆರಮಭಿಸಿದಾಗ ನನಗೆ ಮೊದಲ ಕಂಪ್ಯೂಟರ್ ಕೊಡಿಸಿ ಬೆನ್ನು ತಟ್ಟಿದ ಮೊದಲು ಆಶೀರ್ವಾದ ಮಾಡಿದ್ದು ಕೆಟಿಎಸ್ ಅವರು ಅಂದು ಬೆನ್ನು ತಟ್ಟಿದ್ದು ನನ್ನನ್ನು ಇಂದು ಇಲ್ಲಿವರೆಗೆ ನಿಲ್ಲಿಸಿರುವುದನ್ನು ಎಂದೂ ಮರೆಯಲಾರೆ.

ಈ ಎಲ್ಲಾ ಕೊಡು ಪಡೆಯುವಿಕೆಯ ಆಚೆ ನಡುವೆ ಸಮಾಜದಲ್ಲಿ ಒಂದು ರೀತಿ ಗುರು ಶಿಷ್ಯ ಎನ್ನುವಷ್ಟರ ಮಟ್ಟಿಗೆ ಆಗೋಗಿದ್ದೆವು. ಈಗಲೂ ಹಾಗೆಯೇ ಇದೆ. ಅದು ಯಾವ ಮಟ್ಟಿಗೆ ಎಂದರೆ ಒಟ್ಟಿಗೆ ಕುಳಿತು ಎಣ್ಣೆ ಹೊಡೆಯುವ ಮಟ್ಟಿಗೆ ಸಂಬಂಧ ಬೆಳೆಯಿತು.

ಈ ನಡುವೆ  ಪತ್ರಕರ್ತ ಸ್ನೇಹಿತೆ ಸುವರ್ಣ ಅವರನ್ನು ಮದುವೆಯಾದರು.  ಹಾಸನದಿಂದ ಸ್ವಲ್ಪ ದಿನ ಆಚೆ ಹೋಗಬೇಕೆಂದು ಯೋಚಿಸಿ  ತುಮಕೂರಿಗೆ ತೆರಳಿದರು ನಂತರ ಮತ್ತೆ ವಾಪಾಸಾದರು

ಯಾವುದೋ ಒಂದು ಘಟನೆ…!

ಲೋ ಇನ್ನು ಮುಂದೆ ನೀನು ಮನೆಗೆ ಬರಬೇಡ ಎಂದರು. ಯಾಕೆ ಎಂದೆ ಅದೆಲ್ಲ ಬೇಡ ಬರಬೇಡ ಅಷ್ಟೆ… ಎಂದು ಫೋನಿಟ್ಟರು. ಇದೊಳ್ಳೆ ಕತೆ ಆಯ್ತಲ್ಲಾ  ಎಂದು ನಾನು ಕೂಡ ಆ ಕಡೆಗೆ ಹೋಗಲಿಲ್ಲ. ಅದಾಗಿ ಮತ್ತೆ ಸರಿ ಹೋಯ್ತು ಎನ್ನುವ ಹೊತ್ತಿಗೆ ಮತ್ತೊಂದು ಘಟನೆ

“ನೀವೆಲ್ಲಾ ರೇವಣ್ಣ ಮನೆ ಜೀತ ಮಾಡೋರು ನನ್ನ ಮಕ್ಳಾ” ಎಂದರು ನಾನು ಸಿಕ್ಕಿದ್ದರು ನನ್ನ ಮಾತನಾಡಿಸಬೇಡ ಎಂದರು . ಆಯ್ತು ಎಂದು ಸುಮ್ಮನಾದೆ.

ಹೀಗೆ ಅದು ಗಂಭೀರ ಕಾರಣಗಳಿಲ್ಲದ ಜಗಳಗಳು. ಅದಾದ ನಂತರವೂ ಕೆಟಿಎಸ್‌ ಅವರನ್ನು  ನಾನು ಎಲ್ಲೂ ಬಿಟ್ಟುಕೊಡಲಿಲ್ಲ. ಕಾರಣ ಅವರು ಬದುಕಿನ ಅನೇಕ ಅನುಭವಗಳನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಂಡು ಪಾಲಿಸುತ್ತಿದ್ದೆ.

ಜನ ಕೆಟಿ ಗೂ ನಾಗರಾಜ್ ಗೂ ಆಗಲ್ವಂತೆ..? ಎಂದರು ಕೆಲವರು ಅವರ ಗುರುಗಳ ಬಗ್ಗೆ ದಿನಾ ರ‍್ಕೊಂಡು ಮರ‍್ಸೋನು ರ‍್ಯಾಗಿ  ಕೊಟ್ಟರು ನೋಡು … ಎಂದುಕೊಂಡರು.

ಅವರೆಲ್ಲ ಏಕೆ…!

ನನ್ನ ಮನೆಯಲ್ಲೇ ಕೆಟಿ ಕೆಟಿ ಅಂತಾ ಯಾಕೆ ಹಂಗಾಡ್ತಿಯಾ ಎಂದು  ಹೇಳಿದ್ದು ಕೇಳಿಕೊಂಡು ನಕ್ಕು ಸುಮ್ಮನಾಗಿದ್ದೆ.  ಕೆಟಿ ಹಾಗೂ ಸುವರ್ಣ ಮದುವೆಯಾದಾಗ ಅನೇಕರು ನನ್ನ ಬಳಿ ಏನಪ್ಪಾ..? ನೀನೆ ಮದ್ವೆ ಮಾಡ್ಸಿದ್ದಂತೆ ಎಂದು ಕಾಲೆಳೆಯಲು ಬಂದರು.

ನಾನು ಏನೂ ಮಾತನಾಡದೆ ಸುಮ್ಮನಾದೆ. ಏಕೆಂದರೆ ನನ್ನ ಅರಿವೆಗೆ ಬಾರದೆ ಇವೆಲ್ಲಾ ನಡೆದು ಹೋಗಿತ್ತು. ಈ ಮನುಷ್ಯನಿಗೆ ಈ ವಯಸ್ಸಲ್ಲಿ ಮದುವೆ ಬೇಕಾ ಎಂದು ಹೇಳಲು ಬಂದರು ಆಗ ನನ್ನದೇ ರೀತಿಯಲ್ಲಿ ಸಮಜಾಯಿಷಿ ಕೊಡುತ್ತಿದ್ದೆ. ಏಕೆಂದರೆ ಅವರ ಒಂಟಿ ಜೀವನ ಮತ್ತು ಅದನ್ನು ಕಟ್ಟಿಕೊಂಡಿದ್ದ ರೀತಿ ಗೊತ್ತಿತ್ತು.  ಹೇಗೋ ಒಬ್ಬರು ಅವರ ಜೀವನದಲ್ಲಿ ಬಂದರು. ಅದರಲ್ಲೂ ನನ್ನ ಸ್ನೇಹಿತೆ ಬಂದಿದ್ದು ವಯಕ್ತಿಕವಾಗಿ ನನಗೆ ಖುಷಿ ಕೊಟ್ಟಿತ್ತು.

ಮದುವೆಯಾದ ನಂತರ ಎಲ್ಲೋ ಒಂದೊಂದು ಕಡೆ ಕೆಟಿಯನ್ನು ಸುವರ್ಣ ಕಟ್ಟಿ ಹಾಕುತ್ತಿದ್ದಾರೆ .. ಸಮಾಜದ ಆಸ್ತಿಯನ್ನು ಸ್ವಂತ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ.. ರಿಸ್ಟ್ರಿಕ್ಷನ್ ಮಾಡುತ್ತಿದ್ದಾರೆ ಎನ್ನುವ ಹೊತ್ತಿಗೆ ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ಕಾಣಿಸಿಕೊಂಡ ಕೆಟಿ ಈ ಮೂಲಕ ತಾನು ಸಮಾಜದ ಆಸ್ತಿ ಎಂದು ನಿರೂಪಿಸಿದರು. ಸವರ್ಣ ಈಗ ಹೆಚ್ಚು ಹೆಚ್ಚು ಅವರನ್ನು ಸಾರ್ವಜನಿಕವಾಗಿ ತೊಡಗಿಸಿಕೊಳ್ಳು ಬಿಡುತ್ತಿರುವುದು ಉತ್ತಮ ಬೆಳವಣಿಗೆ.

ಹಿಂದೊಮ್ಮೆ ಸಾಹಿತಿ ರೂಪಾ ಹಾಸನ್ ಖಿಂಡಲ್ ಮಾಡಿದ್ದರು. ನಿಮ್ಮ ಕೆಟಿ ಅಂತರಾಷ್ಟ್ರೀಯ ಅನ್ನುತ್ತಾರೆ ಅವರ ಪೇಯಿಂಟಿಂಗ್ ಗಳನ್ನು ಹಾನನದವರಿಗೆ ತೋರಿಸಿಲ್ಲ… ಎಂದಿದ್ದರು.

ನಿಜ ಅವರ ಪೇಯಿಂಟಿಂಗ್ ಗಳನ್ನು ಜಿಲ್ಲೆಯ ಜನರು ಇನ್ನೂ ನೋಡಲು ಸಾಧ್ಯವಾಗದಿರುವುದು ದುರಂತವೇ ಸರಿ.

ನಿಜ…!  ನನ್ನ ಪಾಲಿಗೆ ಕೆಟಿ ಅವರೊಂದಿಗೆ ಕಳೆದಿರುವುದು  ಹಾಗೂ ಜೀವಿಸಿರುವುದು ನನ್ನ ಪಾಲಿನ ಜೀವಮಾನದ ಅದೃಷ್ಟ ಎಂದೇ ಭಾವಿಸುತ್ತೇನೆ. ಇಲ್ಲಿ ಬರೆದಿರುವ ಘಟನೆಗಳು .. ಪ್ರಸಂಗಗಳು ಆಯಾ ಕಾಲದಲ್ಲಿ ನಡೆದಿರುವ ಮಾತುಕತೆ.. ಘಟನಾವಳಿಗಳನ್ನಷ್ಟೆ ದಾಖಲಿಸಿದ್ದೇನೆ.  ಕೆಟಿ ಅವರಿಗೆ ಇಷ್ಟು ಹತ್ತಿರದ ಸಾಂಗತ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದುಕೊಂಡಿದ್ದೇನೆ.

ನಾನು  ನೋಡಿರುವಂತೆ ಒಡನಾಟವನ್ನು ಕೆಲವರು ಬದುಕಿರುವಾಗ ತರುವುದಿಲ್ಲ.  ಕಳೆದು ಹೋದಾಗ ನಾನು ಅವರೊಂದಿಗೆ ಹಾಗಿದ್ದೆ ಹೀಗಿದ್ದೆ ಎಂದು ತರುವರೇ ಜಾಸ್ತಿ  ನೋಡಲು, ಅವರ ಬಗ್ಗೆ ನನ್ನ ಅಭಿಪ್ರಾಯ ಹೇಗಿತ್ತು ಎಂದು ಕೇಳಿ ಖುಷಿ ಪಡಲು ಅವರೇ ಇರುವುದಿಲ್ಲ.  ಅಂತಹುದ್ದರಲ್ಲಿ ನನಗೆ ನಂಬಿಕೆ ಇಲ್ಲ. ಬದುಕಿದ್ದಾಗಲೇ ನಮ್ಮೊಂದಿಗೆ ಚೆನ್ನಾಗಿರುವಾಗಲೇ ಅವರೊಂದಿಗಿನ ನಮ್ಮ ಆಪ್ತತೆಗಳನ್ನು ಹಂಚಿಕೊಂಡು ಖುಷಿ ಪಡಬೇಕು ಎಂಬುದು ನನ್ನ ನಿಲುವು. ಹಾಗಾಗಿ ಅವರೊಂದಿಗೆ ಕಳೆದಿರುವ ಒಂದಷ್ಟು ಘಟನೆಗಳನ್ನು, ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ನಿಜವಾಗಿಯೂ  ಜೀವನದಲ್ಲಿ ನಾನು ಕಂಡ ಅಪರೂಪದ ವ್ಯಕ್ತಿತ್ವ ಕೆಟಿ ಯದ್ದು. ಅನೇಕರು ಅವರ ಬಗ್ಗೆ ಏನೆಲ್ಲಾ ಹೇಳುತ್ತಾರೆ… ವಿಚಿತ್ರ.. ವಿಕ್ಷಿಪ್ತ.. ಒಂಟಿಚಾಳ ಎಂದಿದ್ದಾರೆ ಅದರಾಚೆಯ ಕೆಟಿ ಅನೇಕರಿಗೆ ಇನ್ನೂ ಅರ್ಥವಾಗಿಲ್ಲ. ಅರ್ಥವಾಗುವರೂ ಅಲ್ಲ.

ಅವರೊಳಗಿನ ಆ ಮುಗ್ಧತೆ, ಬಡವರ, ದಲಿತರ ಪೌರ ಕಾರ್ಮಿಕರ  ಸಮುದಾಯದ ಬಗ್ಗೆ ಇರುವ ಕಾಳಜಿ. ಎಂಥಹವರನ್ನೂ ಎದುರು ಹಾಕಿಕೊಳ್ಳಬಹುದಾದ, ಗತ್ತು ಮತ್ತು ತಾಕತ್ತು… ಅವರಿಗಿರುವ ಶಕ್ತಿ ನಿಜಕ್ಕೂ ಅಪರಿಮಿತ. ಅವರೊಟ್ಟಿಗೆ ಅನೇಕ ಹೋರಾಟಗಳಲ್ಲಿ ನಾನೂ ಪಾಲ್ಗೊಂಡಿದ್ದೇನೆ.

ಹೇಳಬೇಕೆಂದರೆ ಕೆಟಿ ಗೆ  ಭಾಷಣ ಮಾಡಲು  ಬರುವುದಿಲ್ಲ. ಅವರು ಏನು ಹೇಳಿದರು ಎಂದು ಸಮಾನ್ಯವಾಗಿ ಅರ್ಥವಾಗುವುದಿಲ್ಲ. ಆದರೆ ಬುದ್ದ, ನಾಗಾರ್ಜುನ, ಬಾಬಾ ಸಾಹೇಬರನ್ನು, ಕುವೆಂಪುರನ್ನು, ತೇಜಸ್ವಿಯನ್ನು  ಬಿಟ್ಟು ಎಲ್ಲೂ ಮಾತನಾಡುವುದಿಲ್ಲ. ನಾನೊಬ್ಬ ಅಪ್ಪಟ ಅಂಬೇಡ್ಕರ್ ವಾದಿ ಎಂದು ಹೇಳುವ ಕೆಟಿ ನಾನೂ ಒಬ್ಬ ಅಸ್ಪೃಶ್ಯ ಎನ್ನುತ್ತಲೇ  ಮೂಲಕ ಎಲ್ಲಾ ಗೌಡಿಕೆ, ಬ್ರಾಹ್ಮಣ್ಯ, ಹಣ, ಆಸ್ತಿ, ಅಂತಸ್ತು   ಹೀಗೆ ನಾವು ಏನೇನನ್ನು ಹೇಳುತ್ತೇವೆಯೋ ಎಲ್ಲವನ್ನೂ ಮೀರಿ ಬೆಚ್ಚನೆ ಕುಳಿತಿರುವ ಅಪರೂಪದ ವ್ಯಕ್ತಿ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ