ನಮ್ಮ ತಾತ್ವಿಕ ನೆಲೆಗಟ್ಟನ್ನು ಕೊನೆಗೂ ನಾವು ಕಂಡುಕೊಳ್ಳಬೇಕಾದ್ದು ಸಾಹಿತ್ಯದಲ್ಲೇ ಎನ್ನುವುದು ಬ್ರಾಡ್ ಸ್ಕಿಯ ಮತ. ಯಾವ ರಾಜಕೀಯ ಸಿದ್ಧಾಂತಕ್ಕಿಂತಲೂ ಈ ವಿಷಯದಲ್ಲಿ ಸಾಹಿತ್ಯವೇ ಹೆಚ್ಚು ವಿಶ್ವಾಸಾರ್ಹವಾದುದು. ಸಾಹಿತ್ಯದ ವಿರುದ್ಧ ನಡೆಯುವಂಥ ಹಿಂಸಾಚರಣೆಗಳನ್ನು ತಡೆಯುವುದು ಸಾಧ್ಯವೇ? ಒಂದು ಸರಕಾರವು ಮಾಡಬಹುದಾದ ದಮನಕ್ಕಿಂತ ಓದುಗರು ಓದದೇ ಮಾಡುವ ದಮನವೇ ಹೆಚ್ಚು ಗಂಭೀರವಾದುದು. ಆದರೆ ಇಂಥ ಕಾರ್ಯದ ಶಿಕ್ಷೆ ಕೂಡಾ ಇದರಲ್ಲೇ ಇದೆ ಎಂಬುದನ್ನು ಮರೆಯಲಾಗದು. ಓದದೆ ಇರುವ ವ್ಯಕ್ತಿ ತನ್ನ ಬದುಕನ್ನೇ ಇದಕ್ಕೆ ದಂಡ ತೆರಬೇಕಾಗುತ್ತದೆ:ಕೆ.ವಿ. ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳು.

 

ಜೋಸೆಫ್ ಅಲೆಕ್ಸಾಂಡ್ರೋವಿಚ್ ಬ್ರಾಡ್ ಸ್ಕಿ (1940-96) ರಶಿಯಾದ `ದೇಶಭ್ರಷ್ಟ’ ಲೇಖಕರ ಪರಂಪರೆಗೆ ಸೇರಿದವನು. 1940ರಲ್ಲಿ ಒಂದು ರಶಿಯನ್ ಯೆಹೂದಿ ಕುಟುಂಬದಲ್ಲಿ ಜನನ. ಹದಿನೈದನೇ ವಯಸ್ಸಿನಲ್ಲಿ ಶಾಲೆಯ ವಿದ್ಯಾಭ್ಯಾಸ ಅಂತ್ಯ. ಹದಿನೆಂಟನೇ ವಯಸ್ಸಿನಿಂದ ಕವಿತೆ ಬರೆಯುವುದಕ್ಕೆ ಆರಂಭ.

ಇಂಗ್ಲೀಷ್ ನ ಜಾನ್ ಡನ್ನ್, ಆಂಡ್ರ್ಯೂ ಮಾರ್ವೆಲ್ ಮೊದಲಾದ ಮೆಟಫಿಸಿಕಲ್ ಕವಿಗಳ ರೀತಿಯ ಬ್ರಾಡ್ ಸ್ಕಿಯ ಬರವಣಿಗೆ ಮತ್ತು ಅವನ ಸ್ವತಂತ್ರ ಮನೋಧರ್ಮ ಸೋವಿಯೆಟ್ ಅಧಿಕಾರಿಗಳ ಗಮನಕ್ಕೆ ಬೀಳದೆ ಇರಲಿಲ್ಲ. ಇವನ್ನು ಕೈಬಿಡಲು ಅವನಿಗೆ ಅಧಿಕೃತ ಮುನ್ನೆಚ್ಚರಿಕೆಯನ್ನು ನೀಡಲಾಯಿತು. 1964ರಲ್ಲಿ “ಸಾಮಾಜಿಕ ಪರೋಪಜೀವಿ” ಎಂಬ ಆರೋಪದ ಮೇಲೆ ಬಂಧನ, ವಿಚಾರಣೆ ಹಾಗೂ ಐದು ವರ್ಷ ಕಾಲ ಉತ್ತರ ಪ್ರಾಂತವೊಂದರಲ್ಲಿ ಕಠಿಣ ಶಿಕ್ಷೆಗೆಂದು ರವಾನೆ. ಇಪ್ಪತ್ತು ತಿಂಗಳಲ್ಲಿ ಬಿಡುಗಡೆ. 1972ರಲ್ಲಿ ರಶಿಯಾ ಬಿಟ್ಟು ಹೋಗಲು ಸರಕಾರಿ ಸೂಚನೆ. ಕೆಲವು ಕಾಲ ಯುರೋಪಿನಲ್ಲಿ ಸುತ್ತಾಡಿ ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಆಗಮನ. ಅಂದಿನಿಂದ ಅಮೇರಿಕದ ಹಲವು ಯುನಿವರ್ಸಿಟಿಗಳಲ್ಲಿ ಪಾಠಪ್ರವಚನ; ರಶಿಯನ್ ಭಾಷೆಯಲ್ಲಿ ಬರವಣಿಗೆ ಮುಂದುವರಿಕೆ. ಈ ಮಧ್ಯೆ ಬ್ರಾಡ್ ಸ್ಕಿ ಸ್ವಪ್ರಯತ್ನದಿಂದ ಇಂಗ್ಲೀಷ್ ನಲ್ಲಿ ಪಾಂಡಿತ್ಯವನ್ನೂ ಗಳಿಸಿಕೊಂಡ. ಗದ್ಯ ಲೇಖನಗಳನ್ನು ಇಂಗ್ಲಿಷ್ ನಲ್ಲಿ ಬರೆಯತೊಡಗಿದ. ಆದರೆ ಅದೇ ರೀತಿ ರಶಿಯನ್ ಸಾಹಿತ್ಯ ಪರಂಪರೆಯನ್ನೂ ಅರಗಿಸಿಕೊಳ್ಳಲು ಅವನು ಮರೆಯಲಿಲ್ಲ.

ರಶಿಯಾದಲ್ಲಿ ಬ್ರಾಡ್ ಸ್ಕಿ ಯ ಕವಿತೆಗಳು ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಪ್ರಕಟಕ್ಕೆ ಬಂದಿಲ್ಲ. ಆದರೆ ಅಮೇರಿಕಾದಲ್ಲಿ ಪ್ರಕಟವಾಗಿವೆ. ಹಾಗೂ ಬ್ರಾಡ್ ಸ್ಕಿ ಯ ಕವಿತೆಗಳು ಇಂಗ್ಲಿಷ್, ಫ್ರೆಂಚ್, ಇಟಾಲಿಯನ್, ಜರ್ಮನ್ ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇಂಗ್ಲಿಷ್ ನಲ್ಲಿ ಬ್ರಾಡ್ ಸ್ಕಿ ಯ ಕವಿತೆಗಳನ್ನು ಹಲವರು ಭಾಷಾಂತರಿಸಿದ್ದಾರೆ. 1973ರಲ್ಲಿ ಜಾರ್ಜ್ ಕ್ಲಿನೆಯ ಇಂಗ್ಲಿಷ್ ಭಾಷಾಂತರ Joseph Brodsky: Selected Poems ಎಂಬ ಹೆಸರಲ್ಲಿ ಪ್ರಕಟವಾಗಿದ್ದು ಇದರ ಪೆಂಗ್ವಿನ್ ಆವೃತ್ತಿ ಭಾರತದಲ್ಲಿ ಸಿಗುತ್ತದೆ. (ಇಲ್ಲಿ ಈಗ ಕೊಟ್ಟಿರುವ ಕನ್ನಡಾನುವಾದಗಳನ್ನು ಕ್ಲಿನೆಯ ಇಂಗ್ಲಿಷ್ ಭಾಷಾಂತರದಿಂದ ಮಾಡಿದ್ದು.) ಹಾಗೂ ಕ್ಲಿನೆಯ ಪುಸ್ತಕಕ್ಕೆ ಡಬ್ಲ್ಯೂ. ಎಚ್. ಆಡೆನ್ನ ವಿಮರ್ಶಾತ್ಮಕ ಮುನ್ನುಡಿ ಕೂಡಾ ಇದೆ. (ಅಖ್ಮತೋವಾ, ಆಡೆನ್, ಸಾರ್ತೃ ಮುಂತಾದ ಸಾಹಿತಿಗಳೇ ಬ್ರಾಡ್ ಸ್ಕಿ ಯನ್ನು ಸೋವಿಯೆಟ್ ಕಪಿಮುಷ್ಟಿಯಿಂದ ಪಾರುಮಾಡಿದವರು.)

1987ರ ನೊಬೇಲ್ ಪಾರಿತೋಷಕ ಪಡೆದ ಬ್ರಾಡ್ ಸ್ಕಿ ಯ ಸ್ವೀಕಾರ ಭಾಷಣ ನಂತರ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ (ಫೆಬ್ರವರಿ 21, 1988) ಪ್ರಕಟವಾಯಿತು. ಈ ಭಾಷಣದಲ್ಲಿ ಬ್ರಾಡ್ ಸ್ಕಿ ಸಾಹಿತ್ಯ ಮತ್ತು ಸ್ವಾತಂತ್ರ್ಯ, ಸೌಂದರ್ಯ ಮತ್ತು ತತ್ವಜ್ಞಾನ, ಮನುಷ್ಯ ಜೀವನ ಮತ್ತು ಕಾವ್ಯ ಮುಂತಾದ ವಿಷಯಗಳ ಬಗ್ಗೆ ಹಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದಾನೆ. ಕಲೆಯೆನ್ನುವುದು ಮನುಷ್ಯಜೀವನದ ಬೆಳವಣಿಗೆಗೆ ಪ್ರಾಸಂಗಿಕವಾಗಿ ಬಂದುದಲ್ಲ; ಕಲೆಯಿಂದಾಗಿ ಈ ಬೆಳವಣಿಗೆ ಸಾಧ್ಯವಾಯಿತು; ಪ್ರಾಣಿವರ್ಗದಿಂದ ಮನುಷ್ಯವರ್ಗವನ್ನು ಪ್ರತ್ಯೇಕಿಸುವುದು ಭಾಷೆಯೆಂದಾದರೆ, ಸಾಹಿತ್ಯ ಅರ್ಥಾತ್ ಕಾವ್ಯವೆನ್ನುವುದು ಮನುಷ್ಯವರ್ಗದ ಅಂತಿಮ ಗುರಿ ಎನ್ನುತ್ತಾನೆ ಬ್ರಾಡ್ ಸ್ಕಿ. ಸಾಧಾರಣ ಜೀವನದಿಂದ ಸಾಹಿತ್ಯ ಯಾಕೆ ಭಿನ್ನವಾಗಿದೆಯೆಂದರೆ ಸಾಹಿತ್ಯ ಪುನರಾವರ್ತನೆಯನ್ನಾಗಲಿ, ಅನುಕರಣೆಯನ್ನಾಗಲಿ ಸಹಿಸುವುದಿಲ್ಲ. ಒಂದೇ ಜೋಕನ್ನು ಹಲವು ಬಾರಿ ಹೇಳಿ ಜನರನ್ನು ನಗಿಸಬಹುದು. ಆದರೆ ಸಾಹಿತ್ಯದಲ್ಲಿ ಇದನ್ನೇ ಕ್ಲೀಷೆ ಎನ್ನುತ್ತಾರೆ. ಆದ್ದರಿಂದಲೇ ಸಾಹಿತ್ಯವನ್ನು ನಮ್ಮ ಇತಿಹಾಸವೆಂದು ಕರೆಯಲಾಗದು. ಸಾಹಿತ್ಯವು ಇತಿಹಾಸಕ್ಕೆ ಸಮಾನಾಂತರವಾಗಿ, ಅಥವಾ ಒಂದು ತೂಕ ಮುಂದೆಯೇ ಹೋಗುವಂಥದು. ಇದಕ್ಕೇ ಸಾಹಿತ್ಯ ಆಗಿಂದಾಗ್ಗೆ ನಮ್ಮ ಬೆಳವಣಿಗೆಗಿಂತಲು ಮುಂದೆ ಹೋದಂತೆ ಕಾಣಿಸುವುದು, ಎನ್ನುತ್ತಾನೆ.

ನಮ್ಮ ತಾತ್ವಿಕ ನೆಲೆಗಟ್ಟನ್ನು ಕೊನೆಗೂ ನಾವು ಕಂಡುಕೊಳ್ಳಬೇಕಾದ್ದು ಸಾಹಿತ್ಯದಲ್ಲೇ ಎನ್ನುವುದು ಬ್ರಾಡ್ ಸ್ಕಿಯ ಮತ. ಯಾವ ರಾಜಕೀಯ ಸಿದ್ಧಾಂತಕ್ಕಿಂತಲೂ ಈ ವಿಷಯದಲ್ಲಿ ಸಾಹಿತ್ಯವೇ ಹೆಚ್ಚು ವಿಶ್ವಾಸಾರ್ಹವಾದುದು. ಸಾಹಿತ್ಯದ ವಿರುದ್ಧ ನಡೆಯುವಂಥ ಹಿಂಸಾಚರಣೆಗಳನ್ನು ತಡೆಯುವುದು ಸಾಧ್ಯವೇ? ಒಂದು ಸರಕಾರವು ಮಾಡಬಹುದಾದ ದಮನಕ್ಕಿಂತ ಓದುಗರು ಓದದೇ ಮಾಡುವ ದಮನವೇ ಹೆಚ್ಚು ಗಂಭೀರವಾದುದು. ಆದರೆ ಇಂಥ ಕಾರ್ಯದ ಶಿಕ್ಷೆ ಕೂಡಾ ಇದರಲ್ಲೇ ಇದೆ ಎಂಬುದನ್ನು ಮರೆಯಲಾಗದು. ಓದದೆ ಇರುವ ವ್ಯಕ್ತಿ ತನ್ನ ಬದುಕನ್ನೇ ಇದಕ್ಕೆ ದಂಡ ತೆರಬೇಕಾಗುತ್ತದೆ. ಅದೇ ಒಂದು ರಾಷ್ಟ್ರ ಹೀಗೆ ಮಾಡಿದರೆ ತನ್ನ ಚರಿತ್ರೆಯನ್ನೇ ದಂಡ ತೆರಬೇಕಾಗುವುದು. ಆದರೆ ಬ್ರಾಡ್ ಸ್ಕಿ ಕೇವಲ ಅಕ್ಷರ ಜ್ಞಾನದ ಬಗ್ಗೆಯಾಗಲಿ, ವಿದ್ಯಾಭ್ಯಾಸದ ಬಗ್ಗೆಯಾಗಲಿ ಈ ಮಾತನ್ನ ಹೇಳುತ್ತಿಲ್ಲ. ಲೆನಿನ್, ಸ್ಟಾಲಿನ್, ಮಾವೋ ಎಲ್ಲರೂ ವಿದ್ಯಾವಂತರೇ ಅಲ್ಲವೇ? ಆದರೆ ಅವರ ಹಿಟ್ ಲಿಸ್ಟ್ ರೀಡಿಂಗ್ ಲಿಸ್ಟ್ ಗಿಂತಲೂ ಜಾಸ್ತಿಯಾಗಿತ್ತು.


ಕವಿತೆ ಬರೆಯುವ ಕ್ರಿಯೆ ಕವಿಗೆ ತನ್ನ ಪ್ರಜ್ಞೆಯನ್ನು ಉತ್ಕಟಸ್ಥಿತಿಗೆ ಒಯ್ಯುವ ವಿಧಾನ. ಒಮ್ಮೆ ಇದನ್ನು ಅನುಭವಿಸಿದವನು ಮತ್ತೆ ಮತ್ತೆ ಅನುಭವಿಸಲು ಯತ್ನಿಸುತ್ತಾನೆ. ಆದ್ದರಿಂದಲೇ ಕವಿಗೆ ಕವಿತೆಯಿಂದ ಬಿಡುಗಡೆಯಿಲ್ಲ—ಎನ್ನುತ್ತಾನೆ ಬ್ರಾಡ್ ಸ್ಕಿ.

ಬ್ರಾಡ್ ಸ್ಕಿ ಯ ಕವಿತೆಗಳನ್ನು ಅರ್ಥಮಾಡುವುದಕ್ಕೆ ಗ್ರೀಕ್, ರೋಮನ್ ಐತಿಹ್ಯಗಳನ್ನು, ಹಾಗೂ ಅವನ ಜೀವನದ ಕೆಲವೊಂದು ಸಂಗತಿಗಳನ್ನು ಅರಿತಿರಬೇಕಾಗುತ್ತದೆ. ಬ್ರಾಡ್ ಸ್ಕಿ ಯದು ಸಾಕಷ್ಟು ಛಂದೋಬದ್ಧವಾದ ಕವಿತೆಗಳು. ಈ ಕನ್ನಡಾನುವಾದದಲ್ಲಿ ಗದ್ಯಲಯವನ್ನು ಬಳಸಿಕೊಳ್ಳಲಾಗಿದೆ.

1. ಸಾನೆಟ್

ಎಂಟೆದೆಯ ಹೆಕ್ಟರನ ಕೊಲ್ಲುವ ಹಾಗೆ ಚುಚ್ಚಿದೆ ಭರ್ಚಿ
ಕಪ್ಪಿಟ್ಟ ನೀರಿನಲಿ ಜೀವ ಹೋಗುತಿದೆ ಕೊಚ್ಚಿ
ಎಲ್ಲಿ ಪೊದೆಗಳು ನಡುಗಿ ಬೆಳ್ಳಿ ಮೋಡಗಳು ಕಪ್ಪಡರಿ
ಆಂಡ್ರೊಮಾಖೆಯ ಉಮ್ಮಳವೂ ಬಹುದೂರ ಕರಗಿ.

ಮಹಾ ಬಲಶಾಲಿ ಏಜಾಕ್ಸ್ ಈ ಇಂಥ ಕರಾಳ ರಾತ್ರಿಯಲಿ,
ಈ ಪ್ರವಾಹದ ಪಾರದರ್ಶಕ ಅಲೆಗಳಲಿ ಮೊಳಕಾಲ ತನಕ ನೀರಿನಲಿ,
ಮತ್ತು ಜೀವ ಧಾವಿಸುವುದವನ ನೆಟ್ಟ ಕಣ್ಣುಗಳಿಂದ
ಹೆಕ್ಟರನ ಕಡೆಗಾಗಿ. ಏಜಾಕ್ಸ್ ನಡೆಯುವನು ಎದೆಮಟ್ಟ.
ಕಣ್ಣಿನಾಳವ ತುಂಬಿ ಚೆಲ್ಲಿರುವ ಕತ್ತಲು ಕಲೆಯಾಗಿ ಆ
ತರಂಗಗಳ ಮೇಲೆ, ನೀರೊಳಗಿನ ಸಸ್ಯಗಳ ಮೇಲೆ
ನೀರಾದರೋ ಈಗ ಅವನ ಸೊಂಟದ ತನಕ ಇಳಿದಿದೆ;
ಅವನ ಬಹು ಭಾರದ ಖಡ್ಗ ಭಾರೀ ಪ್ರವಾಹದಲಿ ಸಿಲುಕಿ,
ಮುಂದೆ ನುಗ್ಗುತ್ತಿದೆ
ಹಾಗೂ ಅಪ್ರತಿಮ ಏಜಾಕ್ಸನ ಜಗ್ಗಿ ಎಳೆಯುತ್ತಿದೆ.

[ಈ ಕವಿತೆ ಹೋಮರನ ಮಹಾಕಾವ್ಯ ಈಲಿಯಡ್ನಲ್ಲಿ ಬರುವ ಟ್ರೋಜನ್ ವೀರ ಹೆಕ್ಟರ್ ಮತ್ತು ಗ್ರೀಕ್ ಬಲಶಾಲಿ ಏಜಾಕ್ಸ್—ಐಯಾಸ್ ಎನ್ನುವುದು ಗ್ರೀಕ್ ಮೂಲಕ್ಕೆ ಹತ್ತಿರ—ಇವರಿಬ್ಬರ ನಡುವೆ ನಡೆಯುವ ದ್ವಂದ್ವ ಯುದ್ಧವನ್ನು ಚಿತ್ರಿಸುತ್ತದೆ. ಆಂಡ್ರೊಮಾಖೆ ಹೆಕ್ಟರನ ಪತ್ನಿ. ಹೋಮರನ ಕತೆಯ ಪ್ರಕಾರ ಈ ಯುದ್ಧ ನೀರಿನಲ್ಲಿ ನಡೆಯುವುದಿಲ್ಲ, ನೆಲದ ಮೇಲೆ ನಡೆಯುತ್ತದೆ. ಹಾಗೂ ಕತ್ತಲಾದಾಗ ಯುದ್ಧವನ್ನು ಯಾರೂ ಗೆಲ್ಲದೆ, ಸೋಲದೆ, ನಿಲ್ಲಿಸಲಾಗುತ್ತದೆ. ಇಲ್ಲಿ ಬ್ರಾಡ್ ಸ್ಕಿ ಕತೆಯನ್ನು ಮಾರ್ಪಡಿಸಿಕೊಂಡು ಯುದ್ಧವನ್ನು ಹರಿಯುವ ಪ್ರವಾಹದಲ್ಲಿ ನಡೆಯುವ ಹಾಗೆ ಚಿತ್ರಿಸಿದ್ದಾನೆ; ಇದನ್ನು ನದಿಯಾಗಿ, ಕ್ರೋಧದ ರೂಪಕವಾಗಿ ತೆಗೆದುಕೊಳ್ಳಬಹುದು.]

2. ಸಾನೆಟ್

ಸೆರೆಮನೆ ಕಿಟಕಿಗಳ ಬದಿಯಿಂದ ಜನವರಿ
ಹಾರಿ ಹೋಯಿತು ಅದೆಷ್ಟು ಬೇಗ. ಕೋಣೆಗಳ ಚಕ್ರವ್ಯೂಹದಲಿ
ಬಂದಿಗಳು ಹಾಡುವುದ ಕೇಳಿರುವೆ:
“ನಮ್ಮೊಬ್ಬ ಬ್ರದರಿಗೆ ಮರಳಿ ಬಂತು ಸ್ವಾತಂತ್ರ್ಯ.”
ಅವರ ಸಣ್ಣನೆ ದನಿ ಕೇಳಿಸುವುದೀಗಲೂ,
ಮಾತಿರದ ವಾರ್ಡನರ ಹೆಜ್ಜೆಗಳ ಶಬ್ದವೂ.
ಅಲ್ಲದೆ ನೀ ಸಹಾ ಹಾಡುವಿಯಲ್ಲ ಮೌನದಲ್ಲಿ:
“ಹೋಗು ಜನವರಿಯೇ.”
ಕಿಟಿಕಿ ಬೆಳಕಿಗೆ ಮುಖವಿರಿಸಿ
ಬೆಚ್ಚನೆ ಗಾಳಿಯನು ಗಳಗಳನೆ ಕುಡಿಯುವಿ.
ನಾ ಮಾತ್ರ ಇನ್ನೊಮ್ಮೆ ಹೊರಡುವೆನು, ಯೋಚನೆಯಲ್ಲಿ,
ಜಗಲಿಗಳ ಉದ್ದವೂ, ಹಿಂದಿನ ತನಿಖೆಯಿಂದ
ಮುಂದಿನದಕ್ಕೆ—ಆ ದೂರ ದೇಶಕ್ಕೆ
ಎಲ್ಲಿ ಮಾರ್ಚಿಯು ಇಲ್ಲ, ಫೆಬ್ರುವರಿಯೂ ಇಲ್ಲ.

3. ಸ್ಕೈರಸ್ನಲ್ಲಿ ಲೈಕೋಮಿಡೀಸ್

ಈ ಶಹರ ಬಿಡುವೆನು; ಹಿಂದೊಮ್ಮೆ ತಿಸ್ಯೂಸ್
ಚಕ್ರಕುಹರವ ತ್ಯಜಿಸಿದ ಹಾಗೆಯೆ, ಮಿನೊಟಾರನ್ನ
ಕೊಳೆಯಲು ಬಿಟ್ಟು, ಹಾಗೂ ಬೇಖಸನ ಜತೆ
ಅರಿಯಾನ್ನೆಯ ಮಲಗಲು ಬಿಟ್ಟು.
ಜಯವೆಂದರೆ, ಅನ್ನುತ್ತಾರೆ, ಹಾಗೆಂದು!
ಅದು ತಾತ್ವಿಕ ನೀತಿಯ ಪ್ರತ್ಯಕ್ಷ ರೂಪ.
ದೇವರೇ ಏರ್ಪಡಿಸಿದ ಹಾಗೆ—ಮತ್ತೆ ನಾವು ಸಂಧಿಸಬೇಕೆಂದು
ಈ ಪಟ್ಟಣದಲ್ಲಿ ನಮ್ಮ ಕೆಲಸ ಮುಗಿದು,
ಹೊಡೆದ ಕೊಳ್ಳೆಯ ಬೆನ್ನಿಗೇರಿಸಿಕೊಂಡು, ಈ ಸುವಿಶಾಲ
ನಿರ್ಜನ ಸ್ಥಳಗಳಲಿ ತಿರುಗಾಡುತಿರುವಂದು,
ಇನ್ನೆಂದಿಗೂ ಮರಳಲಿಚ್ಛಿಸದೆ ಈ ಸ್ಥಳವ
ತೊರೆದ ನಿಮಿಷವೇ.

ಏನ ಹೇಳಲಿ ಬಿಡಲಿ, ಕೊಲೆಯು
ಕೊಲೆಯೇ. ಅಲ್ಲದೆ ನಶ್ವರ ಜೀವಿಗಳು ನಮಗೆ
ದುಷ್ಟ ಜೀವಿಗಳ ವಿರುದ್ಧ ಕತ್ತಿಯೆತ್ತುವುದು ನಮ್ಮ ಕರ್ತವ್ಯ.
ಯಾರನ್ನುತ್ತಾರೆ ಅವು ನಶ್ವರವೆಂದು? ದೇವರು
ಗುಟ್ಟಿನಲಿ—ಸೋಲಿಸಿದವರಿಗಿಂತಲೂ ನಾವು ಬೇರೆಯೇ
ಎಂದು ತಿಳಿದುಕೊಳ್ಳದ ಹಾಗೆ ನಮ್ಮ ಗರ್ವದಲಿ—
ಗೆದ್ದು ಬೀಗುವ ಗುಂಪಿನಿಂದ ಅದರ ಎಲ್ಲ ಪ್ರತಿಫಲವ
ಮುರಿದುಕೊಳ್ಳುವನು ಕಾಲಾವಕಾಶದಲಿ. ಹಾಗೂ
ಬಾಯಿ ಮುಚ್ಚಿಕೊಂಡಿರಲು ಹೇಳುವನು. ಹೀಗೆ ಮಾಸಿಹೋಗುವೆವು.

ಈ ಸಲ ಮಾತ್ರ ನಾವು ಹೋಗುವುದು ನಿಶ್ಚಿತವೆ. ಕೆಟ್ಟ ಕೆಲಸಗಳ
ಮಾಡಿದಲ್ಲಿಗೆ ಮತ್ತೆ ಬರಬಹುದು ಮನುಷ್ಯರು.
ಆದರೂ ಕೆಟ್ಟು ಕೆರವಾದಲ್ಲಿ ಬರುವ ಕ್ರಮವಿಲ್ಲ.
ಈ ಒಂದು ವಿಷಯದಲಿ ದೇವರ ರೀತಿಯೂ
ನಮ್ಮ ಕುರಿತಾಗಿ ನಮ್ಮದೇ ನೀತಿಯೂ
ಸರಿಯಾಗಿ ತಾನೆ ಹೊಂದುವುದರಿಂದ
ಇದೋ ಹೊರಟೆವು ನಾವು: ಬಿಟ್ಟು ಈ ರಾತ್ರಿ,
ಈ ಕೊಳೆವ ಮೃಗ, ಈ ಬೊಬ್ಬಿರಿವ ಜನ, ನಮ್ಮ ಮನೆ ಮಠ,
ಒಲೆ ಬೆಂಕಿ, ಹೊರ ಬಯಲಲ್ಲಿ
ಅರಿಯಾನ್ನೆಯ ಅಪ್ಪಿ ಹಿಡಿದಿರುವ ಬೇಖಸ್ ಕತ್ತಲಲ್ಲಿ.

ಒಂದು ದಿನ ಮಾತ್ರ ನಾವು ಮರಳುವುದುಂಟು—ಮನೆಗೆ,
ನಮ್ಮ ಹುಟ್ಟೂರಿಗೆ. ನನ್ನ ಸ್ವಂತದ ದಾರಿ
ಈ ಶಹರದ ಹೃದಯದಿಂದಲೆ. ಆಗ
ದೈವ ಕಲ್ಪಿಸಲಿ ಇಬ್ಬಾಯಿ ಖಡ್ಗ ನನ್ನ ಬಳಿ ಇರದಂತೆ—
ಕಾರಣ ನಾಗರಿಕ ಮಂದಿಗೆ ನಗರಗಳು
ಪೇಟೆ ಚೌಕಗಳಿಂದ, ಗುಂಬಜಗಳಿಂದ ಮೊದಲಾಗುವುವು.
ಸಮೀಪಿಸುವ
ಪರದೇಶಿಗೋ—
ಹೊರವಲಯದಿಂದ.

[ಲೈಕೋಮಿಡೀಸ್ ಸ್ಕೈರಸ್ನ ದೊರೆ. ತನ್ನ ಆಶ್ರಯದಲ್ಲಿದ್ದ ತಿಸ್ಯೂಸನ್ನ ಅವನು ಕೊಲೆ ಮಾಡುತ್ತಾನೆ.]

4. ಸಂಜೆ

ಮಂಜು ಕೈಯಾಡಿಸುತ್ತಿತ್ತು ಬಿರುಕುಗಳ ನಡುವೆ
ಮತ್ತು ಅದು ಬೈಹುಲ್ಲಿನ ಮೇಲೆ ತೆಳುವಾಗಿ ಬಿದ್ದಿತ್ತು.
ದಂಟುಗಳ ನಾನು ಹರಡುತಿರುವಂತೆ
ಸ್ವಂದಿಸುವುದು ಕಾಣಿಸಿತು ಒಂದಾನೊಂದು ಹಾತೆ
ಪುಟಾಣಿ ಹಾತೆಯೆ! ಪುಟಾಣಿ ಹಾತೆಯೆ!
ಸಾವನ್ನು ನೀನು ಒತ್ತರಿಸಿಬಿಟ್ಟೆ
ಈ ಅಟ್ಟದ ಕಡೆ ಹರಿವುದರ ಮೂಲಕ:
ನಿದ್ರಿಸಿದೆ, ಬದುಕುಳಿದೆ—

ಹಾತೆ ಬದುಕಿತು ನೋಡುವುದಕ್ಕೆಂದು
ನನ್ನ ಲಾಟೀನು ಹೇಗೆ ಹೊಗೆಯ ಸಾಲುಗಳ
ಬಿಡುವುದೆಂದು; ಗೋಡೆ ಹಲಗೆಗಳು ಹೇಗೆ
ಹೊಳೆದು ಪ್ರಕಾಶಮಾನವಾಗುವುವೆಂದು.
ಎತ್ತಿ ಹತ್ತಿರ ತಂದು ನೋಡಿದರೆ
ಅದರ ಮೀಸೆಗಳೋ
ಬೆಳಕಿಗಿಂತಲು ಸ್ವಷ್ಟ
ಅಥವ ನನ್ನೆರಡು ಬೊಗಸೆಗಳಿಗಿಂತ.

ಆ ಸಂಜೆಯ ಮಬ್ಬಿನಲಿ
ಇಬ್ಬರೇ ನಾವು
ನನ್ನ ಬೆರಳುಗಳೂ ಬೆಚ್ಚನೇ
ಜೂನಿನ ಕಳೆದ ದಿವಸಗಳ ಹಾಗೇನೆ.