”ಕೇಸರಿ ಹೂವು ಅರಳಿ ನಿಂತಿದೆ. ಅದು ಎಷ್ಟು ಸುಕೋಮಲವೆಂದರೆ ಅದನ್ನು ಇರುಳಿನ ತಂಪಿನಲ್ಲೇ ಬಿಡಿಸಿ ನೆರಳಿಗೆ ಸಾಗಿಸಬೇಕು. ’ನೀಲ್’ ವಾದನದ ನಡುವೆ ಹೂಗಳನ್ನು ಅರಳಿಸಿ, ಕೇಸರಿ ಪಕಳೆಗಳನ್ನು ಮೃದುವಾಗಿ ಬಿಡಿಸಿ ಜೋಡಿಸಿಟ್ಟು ನೆರಳಿನಲ್ಲಿ ಒಣಗಿಸಬೇಕು. ಇವರಿಗೆ ಸಮಾಧಾನವಾಗುವಂತಹ ನೀಲ್ ವಾದಕ ಸಿಗುತ್ತಿಲ್ಲ, ಹೂವು ಬಾಡುವುದನ್ನು ನೋಡಲಾರದೆ ರಹೀಂ ಹೋಗಿ ತನ್ನ ಸಂಬಂಧಿಯನ್ನು ಬೇಡಿ, ಮನೆಗೆ ಕರೆ ತರುತ್ತಾನೆ. ನಿರ್ದೇಶಕನಿಗೆ ಅದೊಂದು ಕಣ್ತೆರೆಸಿದ ಘಟನೆ”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಇರಾನಿನ ಸಿನೆಮಾ ಲೀಫ್ ಆಫ್ ಲೈಫ್

 

ಅದೊಂದು ಕುಂಕುಮ ಕೇಸರಿ ಅರಳಿಸುವ ಹೂಗಳ ತೋಟ. ಆ ತೋಟದ ರೈತ ಮತ್ತು ಕುಂಕುಮ ಕೇಸರಿಯ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಬಂದಿರುವ ನಿರ್ದೇಶಕ ಹೊಲದಲ್ಲಿ ನಿಂತಿದ್ದಾರೆ. ರೈತ ಹೇಳುತ್ತಾನೆ, ’ಕಣ್ಣು ಮುಚ್ಚಿ ಕೇಳಿಸಿಕೋ, ಮಣ್ಣಿನಡಿಯಲ್ಲಿ ಮೊಳಕೆ ಒಡೆದು ಗಿಡ ಹೊರಗೆ ಬರುತ್ತಿದೆ…’. ಉಹೂ ಆ ನಿರ್ದೇಶಕನಿಗೆ ಏನೂ ಕೇಳಿಸುವುದಿಲ್ಲ. ನಿರ್ದೇಶಕನಿಗಷ್ಟೇ ಅಲ್ಲ, ನಮಗೂ ಆ ಸದ್ದು ಕೇಳಿಸುವುದಿಲ್ಲ. ರೈತನೊಬ್ಬನೇ ಯಾವುದೋ ಅಲೌಕಿಕ ಸಂಗೀತವನ್ನು ಕೇಳುವಂತೆ ಅದನ್ನು ಕೇಳುತ್ತಿರುತ್ತಾನೆ. ನಮಗೂ ಮತ್ತು ಆ ರೈತನಿಗೂ ಇರುವ ವ್ಯತ್ಯಾಸ ಅದು. ನಾವು ಅದನ್ನು ಒಂದು ’ನೋಟ’ವಾಗಿ ನೋಡುತ್ತಿದ್ದೇವೆ, ಆತ ಆ ಜಗತ್ತಿನ ಭಾಗವಾಗಿದ್ದಾನೆ.

(ನಿರ್ದೇಶಕ ಇಬ್ರಾಹಿಂ ಮೊಖ್ತಾರಿ)

ಅಡಿಗೆಗೆ ಬಳಸುವ ಕೇಸರಿ ಎನ್ನುವ ಪರಿಮಳದ, ನಾಜೂಕಿನ ಶಲಾಕೆಗಳು ಬೆಳೆಯುವುದು ತೆಳು ನೇರಳೆ ಬಣ್ಣದ ಆ ಹೂವಿನಲ್ಲಿ. ಆ ಹೂವಿನ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ನಿರ್ದೇಶಕ ಮನ್ಸೂರಿ ತನ್ನ ತಂಡದೊಂದಿಗೆ ಇರಾನ್ ನ ಆ ಪುಟ್ಟ ಹಳ್ಳಿಗೆ ಬಂದಿದ್ದಾನೆ. ಅಲ್ಲಿನ ರೈತ ರಹೀಂ. ಮನ್ಸೂರಿ ಹೆಸರಾಂತ ನಿರ್ದೇಶಕ. ಬದುಕಿನ ಮಧ್ಯಂತರ ತಲುಪಿದ್ದಾನೆ. ಈಗ ಒಂದು ಮನೆ ಕೊಳ್ಳುವುದು ಅವನ ಕನಸು. ಕೇವಲ ಅದಕ್ಕಾಗಿಯೇ ಅವನು ಈ ಚಿತ್ರ ಮಾಡಲು ಒಪ್ಪಿದ್ದಾನೆ. ಶೂಟಿಂಗ್ ನಡುವೆ ಮೊಬೈಲ್ ನಲ್ಲಿ ಆತ ಮನೆಯ ಬಗ್ಗೆ ಮಾತನಾಡುವುದು ಅವನ ಬಳಿ ಕೆಲಸ ಕಲಿಯಲೆಂದು ಬಂದ ಹುಡುಗನಿಗೆ ಅಸಮಾಧಾನ ಉಂಟು ಮಾಡುತ್ತಿದೆ. ಆತನ ಕಣ್ಣುಗಳಲ್ಲಿನ ಕನಸುಗಳಿಗಿನ್ನೂ ಸುಕ್ಕು ಬಂದಿಲ್ಲ. ಶೂಟಿಂಗ್ ಮಾಡುವಾಗ ದೃಶ್ಯವನ್ನು ಕಲಾತ್ಮಕವಾಗಿ ’ಚೆಂದ’ಗಾಣಿಸಲು ನಿರ್ದೇಶಕ ಮಾಡುವ ಪ್ರಯತ್ನ ಕಂಡು ರೈತನಿಗೆ ಅಪಹಾಸ್ಯ, ಸಿಟ್ಟು. ಕ್ಯಾಮೆರಾಕ್ಕೆ ಚೆಂದ ಕಾಣುವುದಿಲ್ಲವೆಂದು ಅವನ ಹೆಂಡತಿಯ ಪಾತ್ರವನ್ನು ಇವರು ಬದಲಿಸಿದ್ದಾರೆ, ಶೂಟಿಂಗ್ ಮನೆ ನಡುವೆ ಹೂಗಿಡ ನೆಟ್ಟು, ಪಕ್ಕದಲ್ಲಿ ಕೊಳವನ್ನು ಮಾಡಬೇಕೆಂದಿದ್ದಾರೆ. ಕುಡಿಯಲೂ ನೀರು ಸಿಗದ ಊರಿನಲ್ಲಿ ಮನೆ ಮುಂದೆ ಕೊಳ ಎನ್ನುವುದೇ ರಹೀಮನಿಗೆ ಆಭಾಸವಾಗಿ ಕಾಣುತ್ತಿದೆ. ಅಲ್ಲಿ ನೀರಿನ ಬರ ಎಷ್ಟೆಂದರೆ ಊರಿನವರೆಲ್ಲಾ ಸೇರಿ ಮೂರು ಕಾಲುವೆ ಮತ್ತು ಎರಡು ಬಾವಿಗಳ ನೀರನ್ನು ಸೇರಿಸಿ ’ಒಟ್ಟು ನೀರು’ ಮಾಡಿಕೊಂಡಿದ್ದಾರೆ. ಅದನ್ನು ಹಂಚಿಕೊಳ್ಳಲು ಒಂದು ವಿಧಾನ ಕಂಡುಕೊಂಡಿದ್ದಾರೆ : ದೊಡ್ಡದೊಂದು ಬಟ್ಟಲ ತುಂಬಾ ನೀರು, ಅದರೊಳಗೆ ತೇಲುವ ಒಂದು ಸಣ್ಣ ಬಟ್ಟಲು, ಅದಕ್ಕೊಂದು ರಂಧ್ರ. ಅದರ ಮೂಲಕ ನೀರು ಸಣ್ಣ ಬಟ್ಟಲನ್ನು ತುಂಬಿದಾಗ ಬಟ್ಟಲು ಮುಳುಗುತ್ತದೆ, ಅವರು ಒಂದು ಕಲ್ಲನ್ನು ಎಣಿಕೆಗೆ ಇಟ್ಟುಕೊಳ್ಳುತ್ತಾರೆ. ಒಬ್ಬೊಬ್ಬರಿಗೆ ಇಷ್ಟು ಸಲ ಬಟ್ಟಲು ನೀರುಮುಳುಗುವಷ್ಟು ಸಮಯ ನೀರು ಎಂದು ಲೆಕ್ಕ. ಆನಂತರ ಹರಿಯುವ ನೀರಿಗೆ ಒಡ್ಡು ಕಟ್ಟಿ ನೀರನ್ನು ಮತ್ತೊಂದು ಜಮೀನಿಗೆ ತಿರುಗಿಸುತ್ತಾರೆ. ರಹೀಮನ ಪಾಲಿಗಿರುವುದು ಆರು ಬಟ್ಟಲು ತುಂಬುವಷ್ಟು ಸಮಯದ ನೀರು. ಅದರಲ್ಲಿ ಆತ ಕೇಸರಿ ಮತ್ತು ದಾಳಿಂಬೆ ಎರಡನ್ನೂ ಬೆಳೆಯಬೇಕು.

ಮನ್ಸೂರಿ ಹೆಸರಾಂತ ನಿರ್ದೇಶಕ. ಬದುಕಿನ ಮಧ್ಯಂತರ ತಲುಪಿದ್ದಾನೆ. ಈಗ ಒಂದು ಮನೆ ಕೊಳ್ಳುವುದು ಅವನ ಕನಸು. ಕೇವಲ ಅದಕ್ಕಾಗಿಯೇ ಅವನು ಈ ಚಿತ್ರ ಮಾಡಲು ಒಪ್ಪಿದ್ದಾನೆ. ಶೂಟಿಂಗ್ ನಡುವೆ ಮೊಬೈಲ್ ನಲ್ಲಿ ಆತ ಮನೆಯ ಬಗ್ಗೆ ಮಾತನಾಡುವುದು ಅವನ ಬಳಿ ಕೆಲಸ ಕಲಿಯಲೆಂದು ಬಂದ ಹುಡುಗನಿಗೆ ಅಸಮಾಧಾನ ಉಂಟು ಮಾಡುತ್ತಿದೆ. ಆತನ ಕಣ್ಣುಗಳಲ್ಲಿನ ಕನಸುಗಳಿಗಿನ್ನೂ ಸುಕ್ಕು ಬಂದಿಲ್ಲ. ಶೂಟಿಂಗ್ ಮಾಡುವಾಗ ದೃಶ್ಯವನ್ನು ಕಲಾತ್ಮಕವಾಗಿ ’ಚೆಂದ’ಗಾಣಿಸಲು ನಿರ್ದೇಶಕ ಮಾಡುವ ಪ್ರಯತ್ನ ಕಂಡು ರೈತನಿಗೆ ಅಪಹಾಸ್ಯ, ಸಿಟ್ಟು. ಕ್ಯಾಮೆರಾಕ್ಕೆ ಚೆಂದ ಕಾಣುವುದಿಲ್ಲವೆಂದು ಅವನ ಹೆಂಡತಿಯ ಪಾತ್ರವನ್ನು ಇವರು ಬದಲಿಸಿದ್ದಾರೆ, ಶೂಟಿಂಗ್ ಮನೆ ನಡುವೆ ಹೂಗಿಡ ನೆಟ್ಟು, ಪಕ್ಕದಲ್ಲಿ ಕೊಳವನ್ನು ಮಾಡಬೇಕೆಂದಿದ್ದಾರೆ. ಕುಡಿಯಲೂ ನೀರು ಸಿಗದ ಊರಿನಲ್ಲಿ ಮನೆ ಮುಂದೆ ಕೊಳ ಎನ್ನುವುದೇ ರಹೀಮನಿಗೆ ಆಭಾಸವಾಗಿ ಕಾಣುತ್ತಿದೆ.

ಶೂಟಿಂಗ್ ನಡುವೆ ನಿರ್ದೇಶಕ ತನ್ನ ವೈದ್ಯರನ್ನು ನೋಡಲು ಟೆಹ್ರಾನ್ ಗೆ ಹೋಗುತ್ತಾನೆ. ಆತನಿಗೆ ಕ್ಯಾನ್ಸರ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸುವ ವೈದ್ಯರು ಪೆಟ್ ಸ್ಕ್ಯಾನ್ ಮಾಡಿಸಿಕೊಳ್ಳಲು ಹೇಳುತ್ತಾರೆ. ಮಾಡಿಸಿಕೊಂಡವ ನಂತರ ಟ್ರೀಟ್ಮೆಂಟಿಗೆ ನಿಲ್ಲದೆ ಶೂಟಿಂಗ್ ಗೆ ವಾಪಸ್ಸಾಗುತ್ತಾನೆ. ಈಗ ಅವನಿಗೆ ತನ್ನ ‘ಕೊನೆಯ’ ಚಿತ್ರವಾದ ಇದನ್ನು ಹೇಗಾದರೂ ಮಾಡಿ ಮುಗಿಸುವ ಮನಸ್ಸಿಲ್ಲ. ಕೇವಲ ಹಣಕ್ಕಾಗಿ ಕೈಗೆತ್ತಿಕೊಂಡ ಪ್ರಾಜೆಕ್ಟ್ ಈಗ ಅವನ ಕಲಾತ್ಮಕತೆಯನ್ನು ಸಾಬೀತುಪಡಿಸುವ ಕಡೆಯ ಪ್ರಯತ್ನವಾಗಿ ಬಿಡುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಅವರ ಕೆಲಸ, ಆ ಕೆಲಸ ತರುವ ಹಣಕ್ಕಿಂತ ಮುಖ್ಯವಾಗುವ ಸಮಯ ಒಂದು ಬರುತ್ತದೆ. ಇವನಿಗೆ ಅದು ಈಗ ಬಂದಿದೆ. ಶೂಟಿಂಗ್ ಕೋ ಆರ್ಡಿನೇಟರ್ ಗೆ ಕರೆ ಮಾಡಿ ತನ್ನ ಮನೆ ಮಾರುವುದಾಗಿ ಹೇಳುತ್ತಾನೆ, ಚಿತ್ರಕ್ಕೆ ಹಣಹಾಕುವವರು ಕೊಡುವ ಹಣಕ್ಕೆ ಈತ ಈಗ ಕಾಯಲಾರ. ತನ್ನ ಹಣದಲ್ಲಿ, ತನಗೆ ಸಮಾಧಾನವಾಗುವ ಹಾಗೆ ಚಿತ್ರ ಮುಗಿಸುವ ಮನಸ್ಸು ಅವನಿಗೆ. ತಮಾಶೆ ಎಂದರೆ ಥೇಟ್ ಅದೇ ಮನಸ್ಥಿತಿ ರಹೀಮನದೂ ಸಹ. ಆದರೆ ತನ್ನ ಕೆಲಸದ ಮಹತ್ತಿನ ಬಗ್ಗೆ ಅಷ್ಟು ಹೆಮ್ಮೆ ಪಟ್ಟುಕೊಳ್ಳುವ ಇವನಿಗೆ ರಹೀಮನಿಗೆ ಅವನ ಕೆಲಸವೂ ಅಷ್ಟೇ ಮಹತ್ತಿನದಾಗಿರಬಹುದು ಎನ್ನುವುದು ಇನ್ನೂ ಅರ್ಥವಾಗುವುದಿಲ್ಲ.

ಈ ನಡುವೆ ಇವನ ಖಾಯಿಲೆ ವಿಷಯ ತಿಳಿದ ಇವನ ವಿಚ್ಛೇದಿತ ಪತ್ನಿ ಇವನನ್ನು ನೋಡಲು ಬರುತ್ತಾಳೆ. ಅವರಿಬ್ಬರ ನಡುವೆ ಇನ್ನೂ ಉಳಿದುಕೊಂಡಿರುವ ಸ್ನೇಹ ಚಿತ್ರದ ಹೈಲೈಟ್. ‘ಹಾಥ್ ಛೂಟೇ ತೋ ಭಿ ರಿಶ್ತಾ ನಹಿ ತೋಡಾ ಕರತೆ ಹೈ…’. ಒಂದು ದೃಶ್ಯದಲ್ಲಿ ಇಬ್ಬರೂ ನೀರಿನ ಕಾಲುವೆ ಕಟ್ಟೆಯ ಮೇಲೆ ಎದುರುಬದರಾಗಿ ಕೂತಿದ್ದಾರೆ. ಅವರ ಕಾಲ ಕೆಳಗೆ ನೀರು ಹರಿಯುತ್ತಿದೆ, ಸಮಯದಂತೆ. ಅದು ಅವರಿಬ್ಬರ ಪಾಲಿನ ‘ಒಟ್ಟು ನೀರು’, ಇನ್ನೆಷ್ಟು ಉಳಿದಿದೆಯೋ ಗೊತ್ತಿಲ್ಲ. ಸುತ್ತಲೂ ಖಾಲಿ ಖಾಲಿ ಬಯಲು. ಆ ದೃಶ್ಯ ಕವನದಂತಹ ಚಿತ್ರ.

ಕೇಸರಿ ಹೂವು ಅರಳಿ ನಿಂತಿದೆ. ಅದು ಎಷ್ಟು ಸುಕೋಮಲವೆಂದರೆ ಅದನ್ನು ಇರುಳಿನ ತಂಪಿನಲ್ಲೇ ಬಿಡಿಸಿ ನೆರಳಿಗೆ ಸಾಗಿಸಬೇಕು. ನಮ್ಮ ಕೊಳಲಿನ ಹಾಗೆ ಅಲ್ಲಿ ’ನೀಲ್’ ಎನ್ನುವ ವಾದ್ಯ ಇದೆ. ರಾತ್ರಿಹೊತ್ತು ಅದರ ವಾದನದ ನಡುವೆ ಹೂಗಳನ್ನು ಅರಳಿಸಿ, ಕೇಸರಿ ಪಕಳೆಗಳನ್ನು ಮೃದುವಾಗಿ ಬಿಡಿಸಿ ಜೋಡಿಸಿಟ್ಟು ನೆರಳಿನಲ್ಲಿ ಒಣಗಿಸಬೇಕು. ಇವರಿಗೆ ಸಮಾಧಾನವಾಗುವಂತಹ ನೀಲ್ ವಾದಕ ಸಿಗುತ್ತಿಲ್ಲ, ಹೂವು ಬಾಡುತ್ತಿದೆ. ರಹೀಮನ ಸೋದರ ಸಂಬಂಧಿಯೊಬ್ಬ ಅದನ್ನು ಅದ್ಭುತವಾಗಿ ಬಾರಿಸುತ್ತಾನೆ, ಆದರೆ ಅವನೊಂದಿಗೆ ರಹೀಮನಿಗೆ ಮಾತಿಲ್ಲ. ಹೂ ಬಾಡಿ ವ್ಯರ್ಥವಾದರೂ ತಾನದಕ್ಕೆ ಹಣ ಕೊಡುವೆ ಎಂದು ನಿರ್ದೇಶಕ ಹೇಳಿದರೂ ರಹೀಮನಿಗೆ ಅಲ್ಲಿ ಹಣ ಮುಖ್ಯವಲ್ಲ. ಹೂ ಬಾಡುವುದನ್ನು ನೋಡಲಾರದೆ ರಹೀಂ ಹೋಗಿ ತನ್ನ ಸಂಬಂಧಿಯನ್ನು ಬೇಡಿ, ಮನೆಗೆ ಕರೆ ತರುತ್ತಾನೆ. ನಿರ್ದೇಶಕನಿಗೆ ಅದೊಂದು ಕಣ್ತೆರೆಸಿದ ಘಟನೆ.

ಈಗ ಅವನಿಗೆ ತನ್ನ ‘ಕೊನೆಯ’ ಚಿತ್ರವಾದ ಇದನ್ನು ಹೇಗಾದರೂ ಮಾಡಿ ಮುಗಿಸುವ ಮನಸ್ಸಿಲ್ಲ. ಕೇವಲ ಹಣಕ್ಕಾಗಿ ಕೈಗೆತ್ತಿಕೊಂಡ ಪ್ರಾಜೆಕ್ಟ್ ಈಗ ಅವನ ಕಲಾತ್ಮಕತೆಯನ್ನು ಸಾಬೀತುಪಡಿಸುವ ಕಡೆಯ ಪ್ರಯತ್ನವಾಗಿ ಬಿಡುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಅವರ ಕೆಲಸ, ಆ ಕೆಲಸ ತರುವ ಹಣಕ್ಕಿಂತ ಮುಖ್ಯವಾಗುವ ಸಮಯ ಒಂದು ಬರುತ್ತದೆ. ಇವನಿಗೆ ಅದು ಈಗ ಬಂದಿದೆ. ಶೂಟಿಂಗ್ ಕೋ ಆರ್ಡಿನೇಟರ್ ಗೆ ಕರೆ ಮಾಡಿ ತನ್ನ ಮನೆ ಮಾರುವುದಾಗಿ ಹೇಳುತ್ತಾನೆ, ಚಿತ್ರಕ್ಕೆ ಹಣಹಾಕುವವರು ಕೊಡುವ ಹಣಕ್ಕೆ ಈತ ಈಗ ಕಾಯಲಾರ. ತನ್ನ ಹಣದಲ್ಲಿ, ತನಗೆ ಸಮಾಧಾನವಾಗುವ ಹಾಗೆ ಚಿತ್ರ ಮುಗಿಸುವ ಮನಸ್ಸು ಅವನಿಗೆ. ತಮಾಶೆ ಎಂದರೆ ಥೇಟ್ ಅದೇ ಮನಸ್ಥಿತಿ ರಹೀಮನದೂ ಸಹ. ಆದರೆ ತನ್ನ ಕೆಲಸದ ಮಹತ್ತಿನ ಬಗ್ಗೆ ಅಷ್ಟು ಹೆಮ್ಮೆ ಪಟ್ಟುಕೊಳ್ಳುವ ಇವನಿಗೆ ರಹೀಮನಿಗೆ ಅವನ ಕೆಲಸವೂ ಅಷ್ಟೇ ಮಹತ್ತಿನದಾಗಿರಬಹುದು ಎನ್ನುವುದು ಇನ್ನೂ ಅರ್ಥವಾಗುವುದಿಲ್ಲ.

ಶೂಟಿಂಗ್ ಮುಗಿದಿದೆ. ಆದರೆ ಕಡೆಯ ದೃಶ್ಯವನ್ನು ನಿರ್ದೇಶಕ ರೀಶೂಟ್ ಮಾಡಬೇಕು ಎಂದಿದ್ದಾನೆ. ಅದಕ್ಕಾಗಿ ಮನೆಯ ಅಂಗಳದಲ್ಲಿ ಈಗ ಇರುವ ಸಸಿ ಕಿತ್ತು, ಶೂಟಿಂಗ್ ಮಾಡುವಾಗ ಇದ್ದ ಮರ ನೆಡಬೇಕಾಗಿರುತ್ತದೆ. ರೈತ ಬಿಲ್ ಕುಲ್ ಒಪ್ಪುವುದಿಲ್ಲ. ಶೂಟಿಂಗ್ ಆದ ಮೇಲೆ ಇಲ್ಲಿ ಇನ್ನೊಂದು ಗಿಡ ನಾನೇ ನೆಡಿಸಿಕೊಡುತ್ತೇನೆ ಎಂದು ನಿರ್ದೇಶಕ ಹೇಳಿದಾಗ ಆ ರೈತ ಹೇಳುವ ಮಾತು, ’ಅದರಿಂದ ಈ ಸಸಿಗೆ ಬಂದ ಲಾಭ ಏನು?’. ಸ್ವಕೇಂದ್ರಿತವಾದ ನಮ್ಮ ನೋಟ ಮತ್ತು ಸುತ್ತಲಿನ ಪ್ರಕೃತಿಯ ಒಂದು ಭಾಗವಾಗಿ ಬದುಕುವ ಅವನ ನೋಟದ ನಡುವೆ ಇರುವ ವ್ಯತ್ಯಾಸ ಅಲ್ಲಿದೆ. ಒಂದು ಸಲ ಇವರು ಒಂದು ಶಾಟ್ ತೆಗೆದುಕೊಳ್ಳುವಾಗ ಇದ್ದಕ್ಕಿದ್ದಂತೆ ನಿಂತು ಆತ ತನ್ನ ಕತ್ತೆಗಳ ಕಾಲಿಗೆ ಬಟ್ಟೆಕಟ್ಟುತ್ತಾನೆ. ಏಕೆ ಎಂದು ಕೇಳಿದರೆ, ಇದು ಬೇರೆಯವರ ಹೊಲ, ಅವರ ಹೊಲದ ಮಣ್ಣನ್ನು ನಾನು ತೆಗೆದುಕೊಂಡು ಹೋಗಬಾರದು, ಹೊಲದಾಟುವಾಗ ಈ ಬಟ್ಟೆ ತೆಗೆದು, ಅದರಲ್ಲಿನ ಮಣ್ಣನ್ನು ಇಲ್ಲೇ ಹಾಕುತ್ತೇನೆ ಎನ್ನುತ್ತಾನೆ. ಅದಕ್ಕಾಗಿ ನಮ್ಮ ಶಾಟ್ ಹಾಳು ಮಾಡಿದೆಯಾ ಎಂದಾಗ ಅವನು ಹೇಳುವುದು ಅದನ್ನೇ, ’ನಿಮಗೆ ಅರ್ಥವಾಗುವುದಿಲ್ಲ..’. ಇತಿಹಾಸವನ್ನು ಪುನರ್ನಿರ್ಮಿಸಲು ಹೊರಟವನಿಗೆ ತಾನು ಸುಳ್ಳಿನ ಕಟ್ಟಡವನ್ನು ಕಟ್ಟುತ್ತಿರುವ ಅರಿವೇ ಇಲ್ಲ. ಅವನಿಗೆ ತನ್ನ ಕೆಲಸ ಕಾಲವನ್ನು ಗೆಲ್ಲುತ್ತದೆ ಎನ್ನುವ ಅಹಂ. ರಹೀಮನಿಗೆ ತಾಯಿಯೊಬ್ಬಳೂ ಹೊಟ್ಟೆಯೊಳಗಿಟ್ಟುಕೊಂಡು ಒಂಬತ್ತು ತಿಂಗಳು ಸಾಕಿದ ಮಗುವಿನ ಹಾಗೆ ಅವನ ಬೆಳೆ.

ಇದರ ನಡುವೆ ಸದ್ದೇ ಆಗದಂತೆ ಅಲ್ಲಿ ಇನ್ನೊಂದು ಕ್ರಿಯೆ ನಡೆಯುತ್ತಿದೆ. ಚಿತ್ರತಂಡದ ಹುಡುಗಿಯೊಬ್ಬಳು ಒಂದು ಬೇಸಿಕ್ ಕ್ಯಾಮೆರಾ ಇಟ್ಟುಕೊಂಡು ಎಲ್ಲವನ್ನೂ ಯಾವುದೇ ’ಅಲಂಕಾರ’ ಇಲ್ಲದೆ ಅದು ಇರುವ ಹಾಗೆ ದಾಖಲಿಸುತ್ತಿದ್ದಾಳೆ. ನಿಜವಾದ ಸಾಕ್ಷ್ಯಚಿತ್ರ ಅಲ್ಲಿ ತಯಾರಾಗುತ್ತಿರುತ್ತದೆ. ಚಿತ್ರದ ಕಡೆಯಲ್ಲಿ ನಿರ್ದೇಶಕ ತನಗೆ ಸಮಾಧಾನವಾಗುವ ಹಾಗೆ ಕಡೆಯ ದೃಶ್ಯವನ್ನು ರೀಶೂಟ್ ಮಾಡಲು ಅವಳದೇ ಕ್ಯಾಮೆರಾ ಬಳಸುತ್ತಾನೆ. ಅದು ಆತ ಎಲ್ಲಾ ಪ್ರಭಾವಲಯಗಳನ್ನು, ’ತಾಂತ್ರಿಕ’ ಸಮೃದ್ಧಿಯನ್ನು ಮೀರಿ ಮತ್ತೆ ತನ್ನ ಕಲೆಗೆ ಹಿಂದಿರುಗಿದ ಘಳಿಗೆ.

ಈ ಚಿತ್ರದ ನಿರ್ದೇಶಕ ಇಬ್ರಾಹಿಂ ಮೊಖ್ತಾರಿ ಇಪ್ಪತ್ತು ವರ್ಷಗಳ ಹಿಂದೆ ಕೇಸರಿಯ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುವಾಗ ಆದ ಅನುಭವದ ಒಂದು ಎಳೆಯನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ಏಕೆ ಇಷ್ಟವಾಯಿತು ಎಂದರೆ ಇದೇ ಎಂದು ಬೆಟ್ಟು ಮಾಡಿ ಹೇಳುವುದು ಕಷ್ಟ, ಒಂದು ಉದಾತ್ತವಾದ ಮೌಲ್ಯಗಳನ್ನಿಟ್ಟುಕೊಂಡು ಕೆಲಸ ಪ್ರಾರಂಭಿಸಿರುತ್ತೇವೆ, ವಯಸ್ಸಾದಂತೆ ವಾಸ್ತವದ ಪಿಸು ಮಾತುಗಳು ಆಗಾಗ ನಮ್ಮೆ ಹೆಜ್ಜೆಗಳಿಗೆ ಸಂಕೋಲೆ ಹಾಕುತ್ತದೆ, ನಿಲ್ಲಿಸುತ್ತದೆ, ಹಾದಿ ಬದಲಿಸುತ್ತದೆ, ಅವಸರ ಮಾಡುತ್ತದೆ. ಆದರೆ ಬದುಕಿನ ನಶ್ವರತೆಯ ಘಳಿಗೆಯಲ್ಲಿ ತನ್ನ ನಂತರ ತನ್ನ ಕೆಲಸ ಉಳಿಯುತ್ತದೆ ಎಂದು ಅರಿವಾದಾಗ ಕಲೆ ಗೆಲ್ಲುವ ಆ ಘಳಿಗೆ, ಇಬ್ಬರು ವ್ಯಕ್ತಿಗಳ ನಡುವಿನ ದಾಂಪತ್ಯದಾಚೆಗಿನ ಸ್ನೇಹ, ತನ್ನ ಹೊಲ, ಹೊಲದ ಸಸಿ, ಸಸಿಯ ಹೂವು, ತನ್ನ ಹೆಂಡತಿ ಎಲ್ಲವನ್ನೂ ತನ್ನ ಒಂದು ಭಾಗವಾಗಿ ನೋಡುವ ರಹೀಮನ ಪ್ರೀತಿ, ಅವನ ಆ ಮುಗ್ಧ ನಗು… ಏಕೆ ಇಷ್ಟವಾಯಿತು ಆ ಚಿತ್ರ?