ತಾಯಿಯಿಂದ ದೂರವಾಗಿ ಕೆಲವು ವರ್ಷಗಳ ನಂತರ, ನೇಪಾಳದಲ್ಲಿ ಆಕೆ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು. ದುಲೀಪ್ ಸಿಂಗ್ ಅಮ್ಮನಿಗೆ ಹಲವು ಪತ್ರಗಳನ್ನು ಬರೆದಿದ್ದ. ನಿರಂತರ ಕೋರಿಕೆಯ ನಂತರ ಕೊಲ್ಕತ್ತಾದಲ್ಲಿ ತಾಯಿ-ಮಗನ ಭೇಟಿಗೆ ವ್ಯವಸ್ಥೆ ಮಾಡಲಾಯಿತು. 13 ವರ್ಷಗಳ ನಂತರ ಕಾಣಸಿಕ್ಕ ಮಗ ನಯವಾಗಿ ಮುಖ ಕ್ಷೌರ ಮಾಡಿಕೊಂಡು “ಜಂಟಲ್ಲ್ಮ್ಯಾನ್” ಆಗಿದ್ದನ್ನು ನೋಡಿ, ಸಿಖ್ ಸಾಮ್ರಾಜ್ಯ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ದುಃಖ ಪಂಜಾಬಿ ಅಸ್ಮಿತೆಯನ್ನು ಅಳಿಸಿಕೊಂಡ ಮಗನಿಂದ ಆಯಿತು ಎಂದಿದ್ದಳಂತೆ ಜಿಂದಾ ಕೌರ್.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕೊನೆಯ ಸಿಖ್ ದೊರೆ ದುಲೀಪ್ ಸಿಂಗ್ ಜೀವನದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

1854 ರ ಜುಲೈ1 ರಂದು ಎಳೆಯ ವಯಸ್ಸಿನ ಪಂಜಾಬಿನ ಮಹಾರಾಜ ಲಂಡನ್ ತಲುಪಿದ್ದ. ತಲುಪಿದ್ದಲ್ಲ ಪರಿಸ್ಥಿತಿಯೇ ಅಲ್ಲಿಗೆ ತಂದದ್ದು. ಅವಿಭಜಿತ ಭಾರತದ ಲಾಹೋರಿನಿಂದ ಹೊರಟು ಲಂಡನ್ ತಲುಪಿದ ಬಾಲದೊರೆ ದುಲೀಪ್ ಸಿಂಗನಿಗೆ ತಿಳುವಳಿಕೆ ಬರುವ ಮೊದಲೇ ಮನೆ, ಪ್ರಾಂತ್ಯ, ದೇಶದಲ್ಲಿ ಬಹಳಷ್ಟು ನಡೆದು ಹೋಗಿತ್ತು. ಘಟಿಸುವುದಕ್ಕೆ ಇನ್ನೂ ಕಾದಿತ್ತು. ಲಂಡನ್‌ಗೆ ಬಂದಮೇಲೆ, ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಣಿ ವಿಕ್ಟೋರಿಯಾಳಿಂದ ಹೃತ್ಪೂರ್ವಕ ಸ್ವಾಗತ ಸಿಕ್ಕಿತು, ಅವರ ಮೊದಲ ಭೇಟಿಯ ನಂತರ ಜರ್ನಲ್ ಒಂದರಲ್ಲಿ “ಹದಿನಾರು ವರ್ಷ ಅತ್ಯಂತ ಚೆಲುವನಿಗೆ ಗೌರವಯುತವಾದ ನಿಲುವಿದೆ. ಅಂದದ ಪೋಷಾಕಿನಲ್ಲಿ ವಜ್ರವನ್ನು ಧರಿಸಿ ಆಕರ್ಷಿಸುತ್ತಿದ್ದ” ಎಂದು ರಾಣಿ ಬರೆದಿದ್ದಳು. ರಾಣಿ ವಿಕ್ಟೋರಿಯಾಳ ಇಡೀ ಜೀವನದಲ್ಲಿ ಭಾರತ ಮತ್ತು ಅಲ್ಲಿನ ಕೆಲವು ವಿಷಯ ವಸ್ತುಗಳು ಆಕೆಯನ್ನು ಮರಳು ಮಾಡಿದ್ದವು, ಅಂತಹವುಗಳಲ್ಲಿ ಅಸಹಾಯಕ ಬಾಲದೊರೆಯೂ ಒಬ್ಬ.

1799ರಲ್ಲಿ ಸಿಖ್ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ “ಪಂಜಾಬಿನ ಸಿಂಹ” ರಾಜಾ ರಂಜಿತ್ ಸಿಂಗ್‌ನ ಕೊನೆಯ ಮಗ ದುಲೀಪ್ ಸಿಂಗ್. ಬ್ರಿಟಿಷ್ ವಸಾಹತಿನ ವಿಸ್ತರಣೆಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದ ಬಲಶಾಲಿ ತಂದೆ ಹಾಗು ಅಣ್ಣಂದಿರ ಮರಣದ ನಂತರ, ನೇಪಥ್ಯದಲ್ಲಿ ತಾಯಿ ಜಿಂದಾ ಕೌರ್ ಹಾಗು ಮಾವ ಆಡಳಿತ ನಡೆಸುತ್ತಿದ್ದರೂ ಸಿಂಹಾಸನದ ಮೇಲೊಬ್ಬ ಬೇಕು ಎಂದು ಆಟವಾಡುವ 5ನೆಯ ವಯಸ್ಸಿನ ದುಲೀಪ್ ಸಿಂಗ್‌ನನ್ನು ಆಟಿಕೆಯಂತೆ ಮಹಾರಾಜನನ್ನಾಗಿ ಮಾಡಲಾಯಿತು. ಆಗಲೇ ಪಂಜಾಬ್ ಪ್ರಾಂತ್ಯವನ್ನು ಆವರಿಸಿದ್ದ ಅರಾಜಕತೆ 1846ರಲ್ಲಿ ಆಂಗ್ಲೋ-ಸಿಖ್ ಯುದ್ಧದಿಂದ ಇನ್ನಷ್ಟು ಹದಗೆಟ್ಟಿತು. 1849ರಲ್ಲಿ ಪಂಜಾಬ್ ಕೂಡ ಬ್ರಿಟನ್‌ನ ತೆಕ್ಕೆಗೆ ಬಿದ್ದಾಗ ಸಿಖ್ ಸಾಮ್ರಾಜ್ಯದ ಬಾಲದೊರೆ ಪದರಹಿತ ಕೊನೆಯ ಅರಸನೆನಿಸಿದ. ತರುವಾಯ ತಾಯಿಯನ್ನು ಖೈದಿಯಾಗಿಸಿ ಎಳೆಯ ಮಹಾರಾಜನನ್ನು ಕುಟುಂಬದಿಂದ ಬೇರೆ ಮಾಡಲಾಯಿತು. ಲಾಹೋರ್ ಅರಮನೆಯಿಂದ ಉತ್ತರ ಪ್ರದೇಶದ ಫತೇಘರ್‌ಗೆ ವರ್ಗಾಯಿಸಲಾಯಿತು. ಲಾರ್ಡ್ ಡಾಲಹೌಸಿ, ದುಲೀಪ್ ಸಿಂಗ್‌ನ ಆರೈಕೆಯನ್ನು ಸೇನಾ ವೈದ್ಯ ಲೋಗನ್ ಮತ್ತು ಅವನ ಶ್ರೀಮತಿಗೆ ಒಪ್ಪಿಸಿದ. ಬಾಲಕನ ಕೈಗೆ ಬೈಬಲ್ ಕೊಡಲಾಯಿತು. ಆಂಗ್ಲ ಬದುಕಿನ ಶೈಲಿ ಭಾಷೆಯನ್ನು ಮನೆ ಪಾಠಗಳ ಮೂಲಕ ಕಲಿಸಲಾಯಿತು. ಇಂಗ್ಲಿಷ್ ಸಮಾಜಕ್ಕೆ ಹೊಂದುವಂತೆ ರೂಪಿಸಲಾಯಿತು. ಎಳೆಯ ಮಹಾಜರಾಜ ಕ್ರೈಸ್ತನಾಗಿ ಬದಲಾದ. ಹದಿನೈದು ವರ್ಷದ ದುಲೀಪ್ ಸಿಂಗ್ ಆದೇಶದಂತೆ “ಎಸ್ ಎಸ್ ಹಿಂದೂಸ್ತಾನ್” ಎನ್ನುವ ಉಗಿ ನೌಕೆಯನ್ನು ಏರಿ ಇಂಗ್ಲೆಂಡ್‌ಗೆ ಪ್ರಯಾಣಿಸಿದ.

“ಹೊರದೇಶದ ವಿನೂತನ ಉಡುಗೆ ತೊಡುಗೆಯ ರಾಜಕುಮಾರನಾಗಿದ್ದ ಆತನನ್ನು, ರಾಣಿ ವಿಕ್ಟೋರಿಯಾ ತನ್ನ ಮಗನಂತೆ ಕಂಡಳು, ರಾಜ ಪರಿವಾರದ ಪ್ರತಿ ಕಾರ್ಯಕ್ರಮಕ್ಕೂ ಅವನಿಗೆ ಆಹ್ವಾನ ಇರುತ್ತಿತ್ತು. ರಾಜಕುಮಾರ ಆಲ್ಬರ್ಟ್ ಮತ್ತು ರಾಣಿಯ ವಿಕ್ಟೋರಿಯಾ ಜೊತೆಗೆ ವಿಹಾರ ಮಾಡುತ್ತಿದ್ದ. ಪ್ರತಿ ರಾಜ ರಾಣಿಯೂ ತನ್ನ ಮೆಹಫಿಲ್ ಅಲ್ಲಿ ಬಯಸುವ ಬೇಡಿಕೆಯ ಗಣ್ಯನಾಗಿದ್ದ” ಎಂದು ಇತಿಹಾಸಕಾರರು ಯುವ ಮಹಾರಾಜನ ಲಂಡನ್ ದಿನಗಳ ಬಗ್ಗೆ ಬರೆದಿದ್ದಾರೆ. ಇಂಗ್ಲೆಂಡ್‌ಗೆ ಬಂದ ನಂತರದ ಒಂದು ದಶಕ ಸಿಖ್ ದೊರೆ ತನ್ನ ಸ್ಥಾನ ಸಮ್ಮಾನಗಳನ್ನು ಆಸ್ವಾದಿಸಿ ಆನಂದಿಸಿದ. ಇಂಗ್ಲೆಂಡ್ ರಾಜ ಮನೆತನದ ಅದ್ಧೂರಿ ಜೀವನ ಶೈಲಿ ಜೊತೆಗೆ ಅವರೊಡನೆಯೇ ಪ್ರವಾಸ ಮಾಡುವುದು ಶಿಕಾರಿಗೆ ಹೋಗುವುದು ಸಾಮಾನ್ಯ ಆಗಿತ್ತು. ಖಾಸಗಿಯಾಗಿ ಸಂಪೂರ್ಣವಾಗಿ ಆಂಗ್ಲ ಶ್ರೀಮಂತನಂತೆ ಬದುಕುತ್ತಿದ್ದ. ಆದರೆ ಸಾರ್ವಜನಿಕ ಜೀವನದಲ್ಲಿ ಭಾರತೀಯ ರಾಜನಂತೆ ಕಾಣಿಸಿಕೊಳ್ಳುತ್ತಿದ್ದ. ಮಹಾರಾಜನ ಪೋಷಾಕು ನಿಲುವು ಆಭರಣಗಳು ಜನಾಕರ್ಷಣೆಯ ವಸ್ತು ವಿಷಯಗಳಾಗಿದ್ದವು.

ದುಲೀಪ್ ಸಿಂಗ್ ಹಲವು ಬಾರಿ ಇಂಗ್ಲೆಂಡ್ ರಾಣಿಯ ವಿಂಡ್ಸರ್ ಅರಮನೆಗೆ ಹೋಗಿಬಂದಿದ್ದ. ವಿಕ್ಟೋರಿಯಾ ರಾಣಿ ಜರ್ಮನ್ ಮೂಲದ ಪ್ರಸಿದ್ಧ ಚಿತ್ರಕಲಾವಿದ ಫ್ರಾಂಜ್ ವಿಂಟರಹಾಲ್ಟರ್‌ನಿಂದ ಒಮ್ಮೆ ಅವನ ಚಿತ್ರಪಟಗಳನ್ನು ಮಾಡಿಸಿದ್ದಳು. ಎರಡು ಗಂಟೆಗಳಿಗೆ ಮಿಕ್ಕಿ ಹೇಗೆ ಅಲುಗಾಡದೆ ಒಂದೇ ಠೀವಿಯಲ್ಲಿ ದೊರೆ ಕುಳಿತಿದ್ದ ಎಂದು ಚಿತ್ರಕಾರ ನಂತರ ಟಿಪ್ಪಣಿ ಮಾಡಿದ್ದರ ದಾಖಲೆ ಇದೆ. ವಿಂಟರಹಾಲ್ಟರ್ ಎದುರು ವಿಶೇಷ ಭಂಗಿಯಲ್ಲಿ ಕುಳಿತ ಅಂತಹ ಒಂದು ಹೊತ್ತಿನಲ್ಲಿ ವಿಕ್ಟೋರಿಯಾ, ಸಿಖ್ ಮಹಾರಾಜ ಧರಿಸಿದ್ದ “ಕೊಹಿನೂರ್” ಅನ್ನು ಅಪೇಕ್ಷಿಸಿ ಪಡೆದಿದ್ದಳು. ಕೊಹಿನೂರ್ ಬ್ರಿಟಿಷರ ಪಾಲಾದ ಬಗೆಯ ಕುರಿತಾದ ಹಲವು ಆಯಾಮ ಕತೆಗಳಲ್ಲಿ ಇದೂ ಒಂದು. ಲಾರ್ಡ್ ಡಾಲಹೌಸಿಗೆ ಇಷ್ಟ ಇಲ್ಲದಿದ್ದರೂ, ರಾಣಿ ವಿಕ್ಟೋರಿಯಾ ಯುವಕನ ಮೇಲೆ ಪ್ರೀತಿ ಔದಾರ್ಯ ತೋರುತ್ತಿದ್ದಳು. ದುಲೀಪ್ ಸಿಂಗ್ ಶಾಲೆ ಕಾಲೇಜುಗಳಿಗೆ ಹೋಗುವಂತಿರಲಿಲ್ಲ. ರಾಜಪರಿವಾರ ಮನೆಯಲ್ಲೇ ವಿಜ್ಞಾನ, ಸಂಗೀತ, ಜರ್ಮನ್ ಭಾಷೆಗಳ ಕಲಿಕೆಗೆ ವ್ಯವಸ್ಥೆ ಮಾಡಿತ್ತು. 1863ರಲ್ಲಿ ಲಂಡನ್‌ನ ಬಂಗಲೆಯಿಂದ ಇಂಗ್ಲೆಂಡ್‌ನ ಪೂರ್ವಕ್ಕಿರುವ ಊರಾದ ಸಫೋಕ್‌ನ 17000 ಎಕರೆಯ (69 ಚದರ ಕಿಲೋಮೀಟರು) ಎಲ್ವೆಡೆನ್ ಎಸ್ಟೇಟ್‌ಗೆ ವಸತಿ ಬದಲಾಯಿಸಲಾಯಿತು. ಇಂಗ್ಲೆಂಡ್‌ನಿಂದ ಪಂಜಾಬ್ ಐದು ಸಾವಿರ ಮೈಲಿ ದೂರ ಇದ್ದರೂ ಸಿಖ್ ದೊರೆ ವಿದ್ಯಾವಂತನಾಗುವುದು, ದೇಶ ಬಾಂಧವರೊಡನೆ ಬೆರೆಯುವುದು ಪರಿಣಾಮ ಇನ್ನೊಂದು ದಂಗೆಗೆ ಕಾರಣ ಆಗುವುದು ಬ್ರಿಟಿಷರಿಗೆ ಬೇಕಿರಲಿಲ್ಲ, ಹಾಗಾಗಿಯೇ ದೊರೆ ಯಾವತ್ತೂ ಬ್ರಿಟಿಷ್ ಸರಕಾರದ ಅತಿ ಎಚ್ಚರದ ಕಣ್ಗಾವಲಿನಲ್ಲಿಯೇ ಬದುಕಿದ್ದ.

ಲಾರ್ಡ್ ಡಾಲಹೌಸಿ, ದುಲೀಪ್ ಸಿಂಗ್‌ನ ಆರೈಕೆಯನ್ನು ಸೇನಾ ವೈದ್ಯ ಲೋಗನ್ ಮತ್ತು ಅವನ ಶ್ರೀಮತಿಗೆ ಒಪ್ಪಿಸಿದ. ಬಾಲಕನ ಕೈಗೆ ಬೈಬಲ್ ಕೊಡಲಾಯಿತು. ಆಂಗ್ಲ ಬದುಕಿನ ಶೈಲಿ ಭಾಷೆಯನ್ನು ಮನೆ ಪಾಠಗಳ ಮೂಲಕ ಕಲಿಸಲಾಯಿತು. ಇಂಗ್ಲಿಷ್ ಸಮಾಜಕ್ಕೆ ಹೊಂದುವಂತೆ ರೂಪಿಸಲಾಯಿತು. ಎಳೆಯ ಮಹಾಜರಾಜ ಕ್ರೈಸ್ತನಾಗಿ ಬದಲಾದ. ಹದಿನೈದು ವರ್ಷದ ದುಲೀಪ್ ಸಿಂಗ್ ಆದೇಶದಂತೆ “ಎಸ್ ಎಸ್ ಹಿಂದೂಸ್ತಾನ್” ಎನ್ನುವ ಉಗಿ ನೌಕೆಯನ್ನು ಏರಿ ಇಂಗ್ಲೆಂಡ್‌ಗೆ ಪ್ರಯಾಣಿಸಿದ.

ತಾಯಿಯಿಂದ ದೂರವಾಗಿ ಕೆಲವು ವರ್ಷಗಳ ನಂತರ, ನೇಪಾಳದಲ್ಲಿ ಆಕೆ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು. ದುಲೀಪ್ ಸಿಂಗ್ ಅಮ್ಮನಿಗೆ ಹಲವು ಪತ್ರಗಳನ್ನು ಬರೆದಿದ್ದ. ನಿರಂತರ ಕೋರಿಕೆಯ ನಂತರ ಕೊಲ್ಕತ್ತಾದಲ್ಲಿ ತಾಯಿ-ಮಗನ ಭೇಟಿಗೆ ವ್ಯವಸ್ಥೆ ಮಾಡಲಾಯಿತು. 13 ವರ್ಷಗಳ ನಂತರ ಕಾಣಸಿಕ್ಕ ಮಗ ನಯವಾಗಿ ಮುಖ ಕ್ಷೌರ ಮಾಡಿಕೊಂಡು “ಜಂಟಲ್ಲ್ಮ್ಯಾನ್” ಆಗಿದ್ದನ್ನು ನೋಡಿ, ಸಿಖ್ ಸಾಮ್ರಾಜ್ಯ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ದುಃಖ ಪಂಜಾಬಿ ಅಸ್ಮಿತೆಯನ್ನು ಅಳಿಸಿಕೊಂಡ ಮಗನಿಂದ ಆಯಿತು ಎಂದಿದ್ದಳಂತೆ ಜಿಂದಾ ಕೌರ್. ದುಲೀಪ್ ಸಿಂಗ್ ತಾಯಿಯನ್ನು ತನ್ನ ಜೊತೆಗೆ ಇಂಗ್ಲೆಂಡ್‌ಗೆ ಕರೆತಂದ. ದುರ್ಬಲ ವೃದ್ಧ ಸಿಖ್ ರಾಜಮಾತೆಯಿಂದ ಬ್ರಿಟಿಷ್ ಆಡಳಿತಕ್ಕೆ ಆಗಂತೂ ಯಾವ ಅಪಾಯವೂ ಇರಲಿಲ್ಲ ಎಂದು ತಿಳಿದೇ ಸರಕಾರ ತಾಯಿ ಮಗನೊಡನೆ ಬರುವುದಕ್ಕೆ ಇರುವುದಕ್ಕೆ ಸಮ್ಮತಿ ನೀಡಿತ್ತು. ಇಲ್ಲದಿದ್ದರೆ ಪತಿ ರಂಜಿತ್ ಸಿಂಗ್ ತೀರಿಕೊಂಡ ಮೇಲೆ ರಾಣಿ ಜಿಂದಾ ಕೌರ್ ಸಿಖ್ಖರ ಸಂಘಟನೆ ಮಾಡಿ ಬ್ರಿಟಿಷರ ವಿರುದ್ಧ ಬಂಡೇಳುವ ಪ್ರಯತ್ನ ಮಾಡಿದ್ದಳು. ಇದೀಗ ಮತ್ತೆ ಮಗನನ್ನು ಇಂಗ್ಲೆಂಡ್‌ನಲ್ಲಿ ಸೇರಿಕೊಂಡ ಮೇಲೆ ಏನಿಲ್ಲದಿದ್ದರೂ ಕಳೆದುಹೋದ ಸಾಮ್ರಾಜ್ಯವನ್ನು, ಸಿಖ್ ಗುರುತನ್ನು ಮಗನಿಗೆ ನೆನಪಿಸುತ್ತಲೇ ಇದ್ದಳು. ಸಿಖ್ ಗುರುವೊಬ್ಬರು ಮಗನೇ ಮರಳಿ ಖಾಲ್ಸ ಬಣವನ್ನು ಸಂಘಟಿಸಿ ಬ್ರಿಟಿಷರನ್ನು ಸೋಲಿಸಿ ಆಳ್ವಿಕೆ ನಡೆಸುತ್ತಾನೆ ಎಂದು ಭವಿಷ್ಯ ನುಡಿದದ್ದನ್ನು ಹೇಳುತ್ತಿದ್ದಳು. ಇಂಗ್ಲೆಂಡ್‌ಗೆ ಬಂದ ಎರಡು ವರ್ಷದಲ್ಲಿ ಜಿಂದಾ ಕೌರ್ ನಿಧನಳಾದಳು. ಆಕೆಯ ಸಂಸ್ಕಾರವನ್ನು ಸಿಖ್ ವಿಧಿಗಳಿಗೆ ಅನುಗುಣವಾಗಿ ಮಾಡಲಾಯಿತು. ಮಹಾರಾಜನಿಗೆ ಪಂಜಾಬ್ ಭೇಟಿ ನಿಷಿದ್ಧವಾಗಿದ್ದ ಕಾರಣ ಚಿತಾಭಸ್ಮವನ್ನು ನಾಸಿಕ್‌ನ ಗೋದಾವರಿ ನದಿಯಲ್ಲಿ ತೇಲಿಬಿಡಲಾಯಿತು. ಉತ್ತರ ಕ್ರಿಯೆ ಮುಗಿಸಿ ಇಂಗ್ಲೆಂಡ್‌ಗೆ ಮರಳುವಾಗ ಕೈರೋ ಮೂಲದ ಹುಡುಗಿಯನ್ನು ದುಲೀಪ್ ಸಿಂಗ್ ಇಂಗ್ಲಿಷ್ ರಿವಾಜಿನಂತೆ ಮದುವೆಯಾದ. ಅವರ ದಾಂಪತ್ಯದಲ್ಲಿ ಆರು ಮಕ್ಕಳು ಹುಟ್ಟಿದರು (ಮೃತವಾದ ಒಂದು ಮಗುವನ್ನು ಬಿಟ್ಟು).

1870ರ ಹೊತ್ತಿಗೆ ಮಹಾರಾಜನಿಗೆ ಆರ್ಥಿಕ ಸಂಕಷ್ಟ ಎದುರಾಯಿತು. ಬ್ರಿಟಿಷ್ ಸರಕಾರ ನೀಡುವ ಪಿಂಚಣಿಯಲ್ಲಿ ಆರು ಮಕ್ಕಳನ್ನು ಬೆಳೆಸುವುದು ಐಷಾರಾಮಿ ಜೀವನ ಕ್ರಮವನ್ನು ಮುಂದುವರಿಸುವುದು ಅಸಾಧ್ಯವಾಯಿತು. ದೊಡ್ಡ ಸಾಲವೂ ತಲೆಯ ಮೇಲಿತ್ತು. ಬ್ರಿಟಿಷ್ ಸರಕಾರದ ಬಳಿ ಭಾರತದಲ್ಲಿದ್ದ ತನ್ನ ರಾಜ್ಯ ಮತ್ತು ಆಸ್ತಿಯನ್ನು ವಾಪಸು ಕೇಳಲು ಆರಂಭಿಸಿದ. ಪಂಜಾಬನ್ನು ಮೋಸದಿಂದ ಬ್ರಿಟಿಷ್ ಸಾಮ್ರಾಜ್ಯದೊಳಗೆ ಸೇರಿಸಿಕೊಳ್ಳಲಾಗಿದೆ ಎಂದು ಅಪಾದಿಸಿದ. ಸರಕಾರಕ್ಕೆ ಅಸಂಖ್ಯ ಪತ್ರಗಳನ್ನು ಬರೆದ. ಭಾರತದಲ್ಲಿರುವ ಸಿಖ್ಖರನ್ನು ಉದ್ದೇಶಿಸಿ ತಾನು ಮರಳಿ ಬಂದು ಸಿಖ್ ಧರ್ಮ ಸ್ವೀಕರಿಸಿ ಜೊತೆಗೂಡಿ ಹೋರಾಡುವುದಾಗಿ ಸಂದೇಶ ಕಳುಹಿಸಿದ. ಕುಟುಂಬವನ್ನು ಕರೆದುಕೊಂಡು ಹಡಗು ಹತ್ತಿ ಭಾರತಕ್ಕೆ ಹೊರಟ. ಭಾರತದಲ್ಲಿ ಇನ್ನೊಂದು ದಂಗೆ ಬ್ರಿಟಿಷರಿಗೆ ಬೇಕಾಗಿರಲಿಲ್ಲ. ಭಾರತದ ಹಾದಿಯಲ್ಲಿ ಹಡಗು ಯೆಮೆನ್ ಸಮೀಪದ ಅಡೆನ್ ಅಲ್ಲಿ ನಿಂತಿದ್ದಾಗ ಮಹಾರಾಜನನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಿದರು, ಕುಟುಂಬ ಮಾತ್ರ ಬ್ರಿಟನ್ನಿಗೆ ಮರಳಿತು. ಅಲ್ಲಿಯೇ 1886ರಲ್ಲಿ ಸರಳ ಸಮಾರಂಭದ ಮೂಲಕ ಸಿಖ್ ಧರ್ಮಕ್ಕೆ ವಾಪಾಸಾದ. ಭಾರತ ಪ್ರಯಾಣ ನಿರ್ಬಂಧಿಸಲ್ಪಟ್ಟಿದ್ದರಿಂದ ಮರುವರ್ಷ ಪ್ಯಾರಿಸ್‌ಗೆ ತೆರಳಿ ವಾಸ್ತವ್ಯ ಹೂಡಿದ.1889ರಲ್ಲಿ ಎರಡನೆಯ ಮದುವೆಯಾದ, ಈ ದಾಂಪತ್ಯದಿಂದ ಎರಡು ಮಕ್ಕಳು ಜನಿಸಿದರು. ಬ್ರಿಟಿಷರ ವಿರುದ್ಧ ಹೋರಾಟವನ್ನು ಕಟ್ಟಲು ಐರ್ಲೆಂಡ್‌ನ ಕ್ರಾಂತಿಕಾರಿಗಳೊಡನೆ ಚರ್ಚಿಸಿದ, ರಷ್ಯಾದ ಅರಸರ ಸಹಾಯ ಕೋರಿದ. ದುಲೀಪ್ ಸಿಂಗ್ ಎಂದೂ ಜಾಣ ಪಿತೂರಿಗಾರ ಆಗಿರಲಿಲ್ಲ. ಬ್ರಿಟಿಷ್ ಸರಕಾರ ಅವನ ಹಿಂದೆಯೇ ಗೂಢಚಾರರನ್ನು ನೇಮಿಸಿತ್ತು. ಪ್ರತಿಯೊಂದು ಚಲನೆ ಪತ್ರವ್ಯವಹಾರದ ಮಾಹಿತಿ ಪಡೆಯುತ್ತಿತ್ತು.

ನೇಪಾಳದಲ್ಲಿದ್ದ ತಾಯಿಯನ್ನು ಪಂಜಾಬಿನಲ್ಲಿದ್ದ ಬಾಂಧವರನ್ನು, ರಷ್ಯಾದ ಅರಸರನ್ನು ಉದ್ದೇಶಿಸಿ ಬರೆದ ಬಹುತೇಕ ಪತ್ರಗಳು ಸರಕಾರಿ ಅಧಿಕಾರಿಗಳ ವಶಕ್ಕೆ ಸಿಗುತ್ತಿದ್ದವು. ಹೋರಾಟ ಕ್ರಾಂತಿಯ ಯಾವ ಸಂಚು ಯೋಜನೆಯೂ ಫಲ ಕೊಡುವುದು ಸಾಧ್ಯ ಇರಲಿಲ್ಲ. ಹಲವು ವರ್ಷಗಳ ಕಾಲ ಸಂಚಿನ ಉದ್ದೇಶದಿಂದ ಅಲೆದಾಡಿದರೂ ಬ್ರಿಟಿಷ್ ಗೂಢಚಾರರು ಎಲ್ಲೆಲ್ಲಿಯೂ ಬೆನ್ನಟ್ಟುತ್ತಿದ್ದರು. ಎಲ್ಲ ಪ್ರಯತ್ನಗಳೂ ನಿರಾಶೆಯಲ್ಲಿಯೇ ಕೊನೆಗೊಳ್ಳುತ್ತಿದ್ದವು. ಅಂತಿಮ ದಿನಗಳನ್ನು ಪ್ಯಾರಿಸ್‌ನಲ್ಲಿ ಬಡತನದಲ್ಲಿ ಕಳೆದು 1893ರಲ್ಲಿ ಜೀವನಯಾತ್ರೆ ಮುಗಿಸಿದ. ಮಡಿದ 24 ಘಂಟೆಗಳೊಳಗೆ ಮಹಾರಾಜನ ಮೃತದೇಹವನ್ನು ಬ್ರಿಟನ್ನಿಗೆ ತರಲು ವಿದೇಶಾಂಗ ಸಚಿವಾಲಯ ಆದೇಶಿಸಿತ್ತು. ದುಲೀಪ್ ಸಿಂಗ್‌ನನ್ನ ಶಾಶ್ವತವಾಗಿ ತನ್ನದಾಗಿಸಿಕೊಳ್ಳುವ ಆಶಯ ಬ್ರಿಟಿಷ್ ಸರ್ಕಾರದ್ದಾಗಿತ್ತು. ಕ್ರೈಸ್ತ ಪದ್ಧತಿಯಂತೆ ಶವಪೆಟ್ಟಿಗೆಯಲ್ಲಿ ಇರಿಸಿ, ಇಂಗ್ಲೆಂಡ್ ವಾಸ್ತವ್ಯವಾಗಿದ್ದ ಎಲ್ವೆಡೆನ್ ಎಸ್ಟೇಟ್‌ನಲ್ಲಿ ಹೂಳಲಾಯಿತು.

ಅಸಹಾಯಕ ಬಾಲದೊರೆ ಹತಾಶ ಕ್ರಾಂತಿಕಾರಿಯಾಗಿ ಮಡಿದ ಒಂದು ಶತಮಾನದ ನಂತರ ಇಂಗ್ಲೆಂಡ್‌ನಲ್ಲಿ ಸಿಖ್ ಸಂಘಟನೆಗಳು ಬದುಕಿನ ಕೊನೆಯ ಕಾಲದಲ್ಲಿ ಸಿಖ್ ಆಗಿ ಪರಿವರ್ತನೆಗೊಂಡಿದ್ದ ಮಹಾರಾಜನ ಶವಪೆಟ್ಟಿಗೆಯನ್ನು ಮಣ್ಣಿನಿಂದ ಎತ್ತಿ ಪಂಜಾಬಿಗೆ ಸಾಗಿಸಿ ಧರ್ಮದ ವಿಧಿಯಂತೆ ಅಂತ್ಯಕ್ರಿಯೆ ನಡೆಸಬೇಕೆಂದು ಅಭಿಯಾನ ಆರಂಭಿಸಿದ್ದರು. ಸಂಘಟನೆಗಳಿಂದ ಹಿಡಿದು ಜನಪ್ರತಿನಿಧಿಗಳು ಮಂತ್ರಿಗಳ ತನಕ ಭಾಗಿಯಾದ ವರ್ಷಗಳ ಕಾಲ ನಡೆದ ಸಾಮಾಜಿಕ ರಾಜಕೀಯ ಜಿಜ್ಞಾಸೆಯಲ್ಲಿ ಕೆಲವರು ಮಹಾರಾಜನನ್ನು ಈಗ ಇರುವಲ್ಲೇ ಶಾಂತಿಯಿಂದ ಇರಗೊಡಬೇಕು ಎಂದೂ ಇನ್ನು ಕೆಲವರು ಅಗೆದು ಹೊರತೆಗೆದು ಪಂಜಾಬಿನ ಅಮೃತಸರಕ್ಕೆ ಸಾಗಿಸಬೇಕೆಂದೂ ವಾದಿಸಿದ್ದರು. ಪ್ರಕ್ಷುಬ್ದ ಬದುಕನ್ನು ಬಾಳಿದ ದೊರೆಯ ಮರಣೋತ್ತರ ಕಾಲದಲ್ಲೂ ವಿವಾದ ಅಶಾಂತಿ ಬಿಟ್ಟಿರಲಿಲ್ಲ.

ದುಲೀಪ್ ಸಿಂಗ್ ಜೀವನ ವಿವಾದಗಳ ಮಾತ್ರವಲ್ಲದೆ ಸಿನಿಮಾ ಕತೆ ಕಾದಂಬರಿಗಳಿಗೂ ವಸ್ತುವಾಗಿದೆ, ಸ್ಮಾರಕವಾಗಿ ನಿಂತಿದೆ. ಕ್ರಿಸ್ಟಿ ಕ್ಯಾಂಬೆಲ್ ಎನ್ನುವ ಪತ್ರಕರ್ತ “ಮಹಾರಾಜಾಸ್ ಬಾಕ್ಸ್” ಎನ್ನುವ ಪುಸ್ತಕವನ್ನು ಬರೆದ. ಸ್ವಿಸ್ ಬ್ಯಾಂಕಿನ ಖಾತೆಯಲ್ಲಿ ಪಂಜಾಬಿನ ಮಹಾರಾಜನಿಗೆ ಸೇರಿದ ಅಪಾರ ಧನ, ವಾರಿಸು ಇಲ್ಲದೆ ಬಿದ್ದಿದೆ ಎಂದ ಕ್ಯಾಂಬೆಲ್‌ನ ಪುಸ್ತಕ, ದೊರೆಯ ಬದುಕು ಸಾವಿನ ಐತಿಹಾಸಿಕ ಸಂಶೋಧನೆ ಎಂದು ಜನಪ್ರಿಯವಾಗಿದೆ. ಆದರೆ ದುಲೀಪ್ ಸಿಂಗ್ ಹಾಗು ತಾಯಿ ಜಿಂದಾ ಕೌರ್‌ರ ವ್ಯಕ್ತಿಚಿತ್ರಣ ಪುಸ್ತಕದಲ್ಲಿ ಸಮರ್ಪಕವಾಗಿಲ್ಲ ಎಂದು ಕೆಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ವಿಕ್ಟೋರಿಯಾ ರಾಣಿ, ಬಾಲಕ ದುಲೀಪ್ ಸಿಂಗ್‌ನನ್ನು “ನನ್ನ ಕಪ್ಪು ರಾಜಕುಮಾರ” ಎಂದು ಪ್ರೀತಿಯಿಂದ ಕರೆದಿದ್ದನ್ನು ನೆಪವಾಗಿಸಿ “ದಿ ಬ್ಲಾಕ್ ಪ್ರಿನ್ಸ್” ಎನ್ನುವ ಹೆಸರಿನ ಚಲನಚಿತ್ರವೂ ನಿರ್ಮಾಣ ಆಗಿದೆ. 1999ರಲ್ಲಿ ಸಫೋಕ್ ಪಟ್ಟಣದಲ್ಲಿ ಕುದುರೆಯ ಮೇಲೆ ಶಸ್ತ್ರಧಾರಿಯಾಗಿ ಕುಳಿತ ದುಲೀಪ್ ಸಿಂಗ್ ಪ್ರತಿಮೆಯ ಅನಾವರಣ ಅಂದಿನ ಬ್ರಿಟನ್ನಿನ ಯುವರಾಜ ಈಗಿನ ಮಹಾರಾಜ ಚಾರ್ಲ್ಸ್ ಅವರಿಂದ ಆಗಿತ್ತು. 2022ರ ಅಕ್ಟೋಬರ್ 22, ಸಿಖ್ ದೊರೆಯ 129ನೆಯ ಜನ್ಮದಿನದಂದು ಇಂಗ್ಲೆಂಡ್‌ನ ನಾರ್ವಿಚ್‌ನಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಮಹಾರಾಜ ಬರೆದಿದ್ದ ಕಾಗದಗಳು, ರಾಣಿ ವಿಕ್ಟೋರಿಯಾ ಬರೆದಿದ್ದ ಜರ್ನಲ್, ಅವರಿಬ್ಬರ ನಡುವೆ ಇದ್ದ ಸ್ನೇಹ ಪ್ರೀತಿ, ಬದುಕಿನುದ್ದದ ಹತಾಶೆ ನಿರಾಶೆ ಎಲ್ಲವೂ ಮೌನವಾಗಿ ಪ್ರದರ್ಶನದಲ್ಲಿ ಮಾತನಾಡಿದ್ದವು. ಕೊನೆಯ ಸಿಖ್ ದೊರೆಯ ಅಸ್ತಿತ್ವ ಬ್ರಿಟನ್ ಯುರೋಪ್ ಭಾರತಗಳಲ್ಲಿ ಹರಡಿ ಹಂಚಿಹೋಗಿದ್ದರೂ, ಆಗಾಗ ಬೇರೆ ಬೇರೆ ಕಾರಣಗಳಿಗೆ ಮುನ್ನೆಲೆಗೆ ಬಂದು ಮರೆಯಾದರೂ, 1881ರಿಂದ 86ರ ತನಕ ವಾಸಿಸಿದ ಲಂಡನ್‌ನ ಹಾಲೆಂಡ್ ಪಾರ್ಕ್‌ನ 55ನೆಯ ನಂಬರದ ಮನೆಯ ಗೋಡೆಯ ಮೇಲೆ ನೆಡಲಾದ ನೀಲಿ ಫಲಕ ಆ ಎಲ್ಲ ನೆನಪುಗಳಿಗೂ ಶಾಶ್ವತ ಕೀಲಿಕೈಯಾಗಿದೆ.