ನಾಳೆಯಿಂದ ಕೆಲಸ ಇಲ್ಲ ಕೂಲಿಯೂ ಇಲ್ಲ. ಹಾಗಿದ್ದರೆ ಊಟಕ್ಕೇನು? ಇವರನ್ನು ಕರೆ ತಂದ ಠೇಕೆದಾರನ ಫೋನ್ ನಂಬರು ಬಿಜಿ ಬರ್ತಿದೆ. ಅಳಿದುಳಿದ ಗಂಟು ಮೂಟೆ ಕಟ್ಟಿ ಇವಳೂ ದಕ್ಷಿಣ ದೆಹಲಿಯಿಂದ ಕಾನ್ಪುರಕ್ಕೆ ನಡೆದೇ ಬಿಟ್ಟಳು, ಕುಂಟುವ ಒಂದು ಮಗು ತೆವಳುವ ಇನ್ನೊಂದು ಮಗು ಕಂಕುಳಲ್ಲಿ ಒಂದು ಮಗು. ಗಂಡನಿಗೆ ಬೀಡಿ ಅಂಟಿಸುವ ಚಟ, ಆದರೆ ಬೀದಿ ಅಂಗಡಿಗಳೂ ಬಂದ್ ಆಗಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ನಿಲ್ಲುತ್ತ ಕಂಡ ಕಂಡ ವಾಹನಗಳಿಗೆ ಕೈ ಮಾಡುತ್ತ ಆ ಸಾವಿನ ರೂಪಕವ ತಲೆಯ ಮೇಲೆ ಹೊತ್ತು ನಡೆಯುತ್ತಿರುವ ಅಪಾರ ಜನಜಂಗುಳಿಯಲ್ಲಿ ಹೇಗೋ ಜಾಗ ಮಾಡಿಕೊಂಡು ಇವರೂ ಹತ್ತಿದ್ದಾರೆ ಬಸ್ಸು ಲಾರಿ……
ಡಾ. ಲಕ್ಷ್ಮಣ ವಿ.ಎ. ಅಂಕಣ

 

ದೇಶ ಇಂದಿಗೆ ಹದಿನೆಂಟನೇ ದಿನದ ಲಾಕ್ ಡೌನಿನಲ್ಲಿದೆ. ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸದಾ ಚಲನಶೀಲವಾಗಿದ್ದ ದೇಶವೊಂದು ಹೀಗೆ ಇದ್ದಕ್ಕಿದ್ದಂತೆ ಯಾರೋ ಸ್ಟಿಲ್ ಅಂದಂತೆ ನಿಂತ ಜಾಗದಲ್ಲಿಯೇ ನಿಂತು ಸ್ಟಿಲ್ ಆಗಿದೆ, ಎಕಾನಾಮಿ ಹಿಂದೆ ಸರಿದಿದೆ. ಮುಂಬಯಿ ಶೇರು ಮಾರುಕಟ್ಟೆ ಗೂಳಿ ಮಕಾಡೆ ಮಲಗಿದೆ.

ಪರೀಕ್ಷೆ ಬರೆಯದೇ ಮಕ್ಕಳು ಪಾಸಾಗಿ, ಅವರ ಖುಷಿಗೆ ಮೇರೆ ಇಲ್ಲ. ಪ್ರತಿದಿನ ಆಫೀಸಿಗೆ ಹೋಗುವ ಗಂಡಸರು ಮನೆಯಲ್ಲೇ ಉಳಿದು ತಿಂದುಂಡು ಮತ್ತಷ್ಟು ದುಂಡಗಾಗಿ ಆಲಸಿಯಾಗಿ ಕೈದಿಗಳು ಕಂಬಿ ಎಣಿಸುವವರಂತೆ ಮನೆಯ ಕಿಡಕಿಯ ಸರಳು ಎಣಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಕೊಟ್ಟ ರಜೆಗೆ ಏನು ಮಾಡಬೇಕೆಂದು ತಿಳಿಯದೇ ಹದಿನೈದು ದಿನ ಕಳೆದುಹೋಗಿದೆ.

ವಾಟ್ಸಾಪ್ಪಿನಲ್ಲಿ ಜೋಕುಗಳು ಸವೆದು ಆಯುಷ್ಯ ಮುಗಿದು ಹೋಗಿದೆ. ಟಿಕ್ ಟಾಕ್ ಬೇಸರವಾಗಿದೆ. ಹಳೆಯ ಮೇಮರಿಯಲ್ಲಿದ್ದ ಫೊಟೋ ತೆಗೆದು ಎಫ್ ಬಿ ಯಲ್ಲಿ ಹಾಕಿ ಹಾಕಿ ಎಲ್ಲವೂ ಖಾಲೀಯಾಗಿ ಹೋಗಿದೆ. ಜಗತ್ತು ಒಂದು ಕ್ಷಣ ನಿಂತಿದೆಯಾ? ಇಲ್ಲ. ನಿಂತಿಲ್ಲ ಬದುಕು ಹಿಂಬದಿಯ ಗೇರು ತೆಗೆದುಕೊಂಡಿದೆ. ಸಮಯವೇ ಇಲ್ಲವೆಂದು ಹಲಬುತ್ತಿದ್ದವರಿಗೀಗ ಅವರ ಮುಂದೆ ಸಮಯ ಕಾಲು ಚಾಚಿ ಬಿದ್ದು ಈ ಸಮಯವನ್ನು ಹೇಗೆ ಖರ್ಚು ಮಾಡುವುದೆಂದೇ ತಿಳಿಯುತ್ತಿಲ್ಲ. ಸಂಬಳ ಆಗಿದೆ, ಆದರೆ ಎ.ಟಿ.ಎಂ ಗೆ ಹೋಗುವಂತಿಲ್ಲ. ಕಳ್ಳರಂತೆ ಹೋಗಿ ತರಕಾರಿ ಹಾಲು ತರಬೇಕು. ಸಾರ್ವಜನಿಕವಾಗಿ ಈಗೇನಾದರೂ ಕೆಮ್ಮಿದರೆ ಸೀನಿದರೆ ನಿಮ್ಮನ್ನು ಕೊಲೆಯೇ ಮಾಡಿಬಿಡುವಷ್ಟು ಜನರಲ್ಲಿ ಕೊರೋನ ಭಯ ಬಿತ್ತಿದೆ.

ಮನೆಗೆ ಬಂದರೆ ಅದೇ ಗೀಳು ರೋಗಿಯ ಹಾಗೆ ತೊಳೆದ ಕೈಯನ್ನೇ ಮತ್ತೆ ಮತ್ತೆ ತೊಳೆಯುತ್ತಿರಬೇಕು, ಎಷ್ಟು ಕೈ ತೊಳೆದರೂ ಸಮಾಧಾನವಿಲ್ಲ. ಎಷ್ಟು ತೊಳೆದರೂ ಹಸನಾಗದ ಕೈಗಳು ನೀರು ಬಿದ್ದು ಬಿದ್ದು ಧೋಬಿಯ ಕೈಗಳಂತಾಗಿವೆ…. ಟೀವಿಯಲ್ಲಿ ತಾಂಡವವಾಡುತ್ತಿರುವ ಸಾವು ಚ್ಯಾನೆಲ್ ಬದಲಾಯಿಸಿದರೂ ಮತ್ತದೇ ಸಾವು ಸುದ್ದಿ. ಕಣ್ಣೀರು ಸಾವು! ವಿದಾಯ!…..

ನಮ್ಮ ಪಾಳಿ ಯಾವಾಗ!? ಬದುಕಿ ಉಳಿಯುವ ಭರವಸೆ ಕಳೆದು ಹೋಗಿದೆ.. ಛೇ! ಇಲ್ಲ ಈ ಟೀವಿ ನೋಡಿದರೆ ಬದುಕುವವರಿಗೂ ಹೃದಯಾಘಾತವಾಗುತ್ತದೆ. ಟೀವಿ ಬಂದು ಮಾಡಿ ಬಾಲ್ಕನಿಗೆ ಬಂದರೆ, ಮೇರೆ ಸಾಮನೇ ವಾಲಿ ಖಿಡಕೀ ಮೇ ಏಕ ಚಾಂದ ಸಾ ಟುಕಡಾ ರೆಹತಿ ಹೈ ಎಂಬ ಹಾಡಿನಂತೆ ಎದುರು ಮನೆಯ ಚೆಲುವಿ ಈಗಷ್ಟೇ ಬಿಸಿನೀರಿನಲ್ಲಿ ಮಿಂದೆದ್ದು ಬಾಲ್ಕನಿಯಲಿ ತನ್ನ ನೀಳ ಜಡೆಯಿಂದ ನೀರು ಕೊಡುವುತ್ತಿದ್ದಾಳೆ. ಆಹಾ!! ಅವಳ ಕಪ್ಪು ಕೇಶ ರಾಶಿಯಿಂದ ಈಗಷ್ಟೇ ಮಿಂದೆದ್ದ ಅವಳ ಸಹಜ ಚೆಲುವಿನ ಮುಖದಿಂದ ಚಂದ್ರ ಕಾಂತಿ ಸೂಸುತ್ತಿದೆ. ಹಾಡು ಹಗಲೆ ಬೆಳದಿಂಗಳು!

ಹಳೆಯ ಹಿಂದಿ ಹಾಡು, ಕನ್ನಡ ಸಿನೇಮಾ ಕೂಡ ಬೋರಾಗಿದೆ. ಇನ್ನೂ ಲಾಕ್ ಡೌನ್ ಮುಂದುವರೆಯುವ ಹಾಗಿದೆ. ಕೊರೋನಾದಿಂದ ಸಾಯುವುದಕ್ಕೆ ಈಗ ಭಯವಾಗುತ್ತಿಲ್ಲ, ಭಯವಾಗುತ್ತಿರುವುದು ಒಂಟಿತನಕ್ಕೆ. ಮತ್ತೆ ಮನೆಯಲ್ಲಿನ ರೇಷನ್ನು ಇನ್ನೊಂದು ವಾರ ಬರುತ್ತದೆ, ಮಕ್ಕಳಿಗೆ ಹಾಲು ತರಲು ದುಡ್ಡೂ ಖಾಲೀಯಾಗಿದೆ. ಓಹ್ ಹಸಿವು! ಎಂತಹ ಹಸಿವು!

ಪ್ರತಿದಿನ ಆಫೀಸಿಗೆ ಹೋಗುವ ಗಂಡಸರು ಮನೆಯಲ್ಲೇ ಉಳಿದು ತಿಂದುಂಡು ಮತ್ತಷ್ಟು ದುಂಡಗಾಗಿ ಆಲಸಿಯಾಗಿ ಕೈದಿಗಳು ಕಂಬಿ ಎಣಿಸುವವರಂತೆ ಮನೆಯ ಕಿಡಕಿಯ ಸರಳು ಎಣಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಕೊಟ್ಟ ರಜೆಗೆ ಏನು ಮಾಡಬೇಕೆಂದು ತಿಳಿಯದೇ ಹದಿನೈದು ದಿನ ಕಳೆದುಹೋಗಿದೆ.

ಹೌದು! ಹಸಿವೆಗಿಂತ ವಾಸ್ತವ ಯಾವುದಿದೆ!? ಈ ಹಸಿವು ತಣಿಸಲೆಂದೇ ಕೋಟ್ಯಾಂತರ ಜನ ಭೂಮಿಯ ಮೇಲೆ ವಲಸೆ ಹೊರಟವರಿದ್ದಾರೆ, ಅನ್ನ ಹುಡುಕಿ ಊರು ಬಿಟ್ಟವರಿದ್ದಾರೆ. ಹೀಗೆ ಊರು ಬಿಟ್ಟವರು ಶಹರ ಸೇರಿ ಕೂಲಿ ನಾಲಿ ಮಾಡಿ ಬದುಕುತ್ತಿರುವವರಿಗೆ ಕೊರೋನಾ ಎಷ್ಟು ಕ್ರೂರಿ ಎಂಬುದು ಗೊತ್ತಿಲ್ಲ. ಮಾಸ್ಕು ಖರೀದಿಸಲು ದುಡ್ಡಿಲ್ಲದೇ ಹೆಗಲ ಮೇಲಿನ ಟಾವೆಲ್ಲನ್ನೇ ಮುಖ ಮೂಗು ಮುಚ್ಚಿಕೊಂಡಿದ್ದಾರೆ. ಈ ಮುಚ್ಚಿದ ಮುಖದಲ್ಲಿ ತನ್ನವರನ್ನು ಗುರುತಿಸಲೂ ಆಗುತ್ತಿಲ್ಲ. ಇನ್ನು ಬೇರೆಯವರ ಗತಿ ಕೇಳಬೇಡಿ.

ಹೀಗೆ ಇದ್ದಕ್ಕಿದ್ದಂತೆ ಲಾಕ್ ಡೌನ್ ಆದ ಸುದ್ದಿ ಪ್ರಿಯಾ ಎಂಬ ಮೂವತ್ತರ ವಯಸ್ಸಿನವಳಿಗೆ ಹೇಗೋ ಗೊತ್ತಾಗಿದೆ. ಅವಳಿಗೆ ಮೂರು ಹೆಣ್ಣು ಮಕ್ಕಳಿವೆ. ನಾಳೆಯಿಂದ ಕೆಲಸ ಇಲ್ಲ ಕೂಲಿಯೂ ಇಲ್ಲ. ಹಾಗಿದ್ದರೆ ಊಟಕ್ಕೇನು? ಇವರನ್ನು ಕರೆ ತಂದ ಠೇಕೆದಾರ( ಕಂತ್ರಾಟುದಾರ) ನ ಫೋನ್ ನಂಬರು ಬಿಜಿ ಬರ್ತಿದೆ. ಅಳಿದುಳಿದ ಗಂಟು ಮೂಟೆ ಕಟ್ಟಿ ಇವಳೂ ದಕ್ಷಿಣ ದೆಹಲಿಯಿಂದ ಕಾನ್ಪುರಕ್ಕೆ ನಡೆದೇ ಬಿಟ್ಟಳು, ಕುಂಟುವ ಒಂದು ಮಗು ತೆವಳುವ ಇನ್ನೊಂದು ಮಗು ಕಂಕುಳಲ್ಲಿ ಒಂದು ಮಗು. ಗಂಡನಿಗೆ ಬೀಡಿ ಅಂಟಿಸುವ ಚಟ, ಆದರೆ ಬೀದಿ ಅಂಗಡಿಗಳೂ ಬಂದ್ ಆಗಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ನಿಲ್ಲುತ್ತ ಕಂಡ ಕಂಡ ವಾಹನಗಳಿಗೆ ಕೈ ಮಾಡುತ್ತ ಆ ಸಾವಿನ ರೂಪಕವ ತಲೆಯ ಮೇಲೆ ಹೊತ್ತು ನಡೆಯುತ್ತಿರುವ ಅಪಾರ ಜನಜಂಗುಳಿಯಲ್ಲಿ ಹೇಗೋ ಜಾಗ ಮಾಡಿಕೊಂಡು ಇವರೂ ಹತ್ತಿದ್ದಾರೆ ಬಸ್ಸು ಲಾರಿ……

ದೆಹಲಿಯಿಂದ ಕಾನ್ಪುರ 450 ಕಿ ಮಿ… ಎಷ್ಟು ದಿನ ನಡೆದರು? ಊರು ತಲುಪಿದವರೆಷ್ಟು ಜನ? ದಾರಿ ಮಧ್ಯದಲ್ಲಿ ಹಸಿವೆ ನೀರಡಿಕೆಯಿಂದ ಸತ್ತವರು ಎಷ್ಟು ಜನ? ಯಾರು ಲೆಕ್ಕ ಇಡುತ್ತಾರೆ. ಎಲ್ಲರಿಗೂ ತಮ್ಮ ತಮ್ಮ ಮನೆ ತಲುಪುವ ಅವಸರ.

ಸ್ವಾತಂತ್ರ್ಯೋತ್ತರದ ಕಾಲದ ಮಹಾ ವಲಸೆ ಎಂದು ಪತ್ರಿಕೆಗಳು ವರದಿ ಮಾಡುತ್ತವೆ. ಟೀವಿಯಲ್ಲಿ ಇನ್ನೂ ಕೊರೋನಾ ಕಂತೆ ಮುಗಿದಿಲ್ಲ. ಈ ನಡುವೆ ಕೊರೋನಾ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಹರಡಿದ ಸುದ್ದಿಯಾಗಿದೆ!

ಅಮೇರಿಕಾದಲ್ಲಿ ಹುಲಿಯೊಂದಕ್ಕೆ ಕೊರೋನಾ ವೈರಸ್ಸು ತಗುಲಿದ ಸುದ್ದಿಯಾಗಿದೆ, ಹಾಗಿದ್ದರೆ ಪ್ರಾಣಿಗಳಿಗೂ ಗಂಡಾಂತರವಿದೆಯೆಂದಂತಾಯ್ತು… ಹುಲಿಗೆ ಬಂದರೆ ಬೆಕ್ಕು ಚಿರತೆಯ ಜಾತಿಗೆ ಎಲ್ಲ ಪ್ರಾಣಿಗಳಿಗೂ ಬರುವ ಸಂಭವನೀಯತೆ ಹೆಚ್ಚು. ಮನುಷ್ಯ – ಮನುಷ್ಯನಿಂದ ಕೆಲಕಾಲ ದೂರವಿರಬಲ್ಲ, ಆದರೆ ಪಾಪ! ಈ ಬೆಕ್ಕು ನಾಯಿ ಮಾತ್ರ ಮನುಷ್ಯನ ಸುತ್ತಮುತ್ತಲೇ ಸುಳಿಯುವ ಜೀವಿಗಳು. ಮನುಷ್ಯನ ಪ್ರೀತಿಗೆ ಹಪಹಪಿಸಿ ಕಾಲಿಗೆ ಅಡರಿಕೊಳ್ಳುವ ಆಪ್ತ ಜೀವಗಳು. ಅದರಲ್ಲೂ ಮನುಷ್ಯ ನಾಯಿಯ ಸಂಬಂಧವಂತೂ ತಲೆ ತಲಾಂತರದ್ದು.

ಕರ್ನಾಟಕದಲ್ಲಿ ನಾಯಿಯ ಹೆಸರಿನಲ್ಲಿ ವೀರಗಲ್ಲು ಕೆತ್ತಿದ್ದನ್ನು ಓದಿದ್ದೇನೆ. ಈಗಿನ ಆಧುನಿಕ ನ್ಯೂಕ್ಲಿಯರ್ ಕುಟುಂಬದಲ್ಲಿ ನಾಯಿ ಬೆಕ್ಕಿಗೆ ಮನೆಯ ಸದಸ್ಯನ ಸ್ಥಾನ ಮಾನವಿದೆ. ಅದಕ್ಕೆ ತಕ್ಕುದಾದಂತಹ ಪೆಟ್ ಕ್ಲಿನಿಕ್ ಗಳು ಅವುಗಳ ವಿಶೇಷ ತಿನಿಸುಗಳು, ನಾಯಿಗಳಿಗೆಂದೇ ನಡೆಸುವ ಸೌಂದರ್ಯ ಸ್ಪರ್ಧೆಗಳು ಇವೆಲ್ಲ ಆಧುನಿಕ ಮಾನವನ ನಾಯಿಯ ಜೊತೆಗಿನ ಅನ್ಯೋನ್ಯತೆಯನ್ನು ಸಾರಿ ಹೇಳುತ್ತಿವೆ. ಹಾಗಿದ್ದರೆ ಈ ಸಾಕು ಪ್ರಾಣಿಗಳಿಗೆ ಸೋಷಿಯಲ್ ಡಿಸ್ಟೆನ್ಸ್ ನಿರ್ವಹಿಸಲು ಹೇಗೆ ತರಬೇತಿಗೊಳಿಸುವುದು?

ದೇವರೇ ಈ ಸುದ್ದಿ ಸುಳ್ಳಾಗಲಿ. ಜಗತ್ತು ತಲೆ ತಲಾಂತರದಿಂದ ನಂಬಿಕೊಂಡು ಬಂದ ಸಿದ್ಧಾಂತಗಳನ್ನೇ ಬುಡುಮೇಲು ಮಾಡುವ ಈ ಕೊರೋನಾ ಎಷ್ಟು ಕ್ರೂರಿ!! ನಾಗರೀಕ ಮನುಷ್ಯನೇ ಬೀದಿಪಾಲಾದ ಹೊತ್ತಿನಲ್ಲಿ ಈ ಮೂಕಪ್ರಾಣಿಗಳ ಕತೆ ಏನು?

ಚೈನಾ, ಯುರೋಪು, ಇರಾನ್, ಇರಾಕ್, ಇಟಲಿ, ಇಂಡಿಯಾ…… ಇನ್ನೂ ಇವೆ ಲಿಸ್ಟಿನಲ್ಲಿ, ಮಾಸ್ಕು ಹಾಕಿಕೊಂಡ ದೇಶಗಳು! ಸುಮ್ಮನೇ ಒಂದು ಕ್ಷಣ ಯೋಚಿಸಿದೆ ಈಗಲೂ ಪ್ರಾಣಿಗಳಂತೆ ಸ್ವಚ್ಛಂದವಾಗಿ ಬದುಕುವ ಆಫ್ರಿಕಾದ ದೇಶಗಳಿಗೇನಾದರೂ… ಸಾರಿ ನಾನು ಬಹಳ ನಕಾರಾತ್ಮಕವಾಗಿ ಯೋಚಿಸುತ್ತಿದ್ದೇನೆನಿಸುತ್ತಿದೆ.