Advertisement
ಕೊಳದ ಬಕ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೊಳದ ಬಕ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೊಳದ ಬಕಗಳು ಕೊಳ, ಕೆರೆ, ಗದ್ದೆ, ಕೆರೆ-ಕಾಲುವೆ, ಮುಂತಾದ ಪ್ರದೇಶಗಳಲ್ಲಿ ಹಾಗೂ ಜೊಂಡು-ಕೆಸರು ಇರುವೆಡೆಗಳಲ್ಲಿ, ಒಂಟಿಯಾಗಿ, ಅಥವಾ ತಮ್ಮ ಕುಟುಂಬಕ್ಕೆ ಸೇರಿದ ಇತರ ಹಕ್ಕಿಗಳೊಂದಿಗೆ ಗುಂಪಿನಲ್ಲಿ, ಬೇಟೆಯರಸುವುದನ್ನು ಕಾಣಬಹುದು. ಒಂದಿಷ್ಟೂ ಅಲುಗಾಡದೆ, ಒಂಟಿಕಾಲಿನ ಮೇಲೆ ನಿಂತು, ತದೇಕಚಿತ್ತದಿಂದ ಬೇಟೆಯಾಡುವ ಕೊಳದ ಬಕ, ಕೆಲವು ಸಾರಿ ಕೊಕ್ಕಿನಲ್ಲಿ ಸಣ್ಣ ಎರೆಹುಳವನ್ನು ಹಿಡಿದುಕೊಂಡು ಅದನ್ನು ನೀರಿನಲ್ಲಿ ಹಾಕಿ, ಸುತ್ತ ಮುತ್ತಲ ಮೀನುಗಳನ್ನು ಆಕರ್ಷಿಸುವ ಪರಿ ನಿಜಕ್ಕೂ ಕುತೂಹಲಕಾರಿ!
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಕೊಳದ ಬಕ” ಹಕ್ಕಿಯ ಕುರಿತ ಬರಹ ಇಲ್ಲಿದೆ

ನಾವು ಇಂದು ತಿಳಿದುಕೊಳ್ಳಲು ಹೊರಟಿರುವ ಹಕ್ಕಿಯ ಹೆಸರು ಕೊಳದ ಬಕ. ಇದರ ಹೆಸರೇ ಹೇಳುವಂತೆ ಕೊಳದ ಬಕ ಸ್ವಾಭಾವಿಕವಾಗಿ ಮತ್ತು ಸಾಮಾನ್ಯವಾಗಿ ಕೊಳದ ಬಳಿ ವಾಸಿಸುವ ಪಕ್ಷಿ. ಬಕಪಕ್ಷಿಯು ಒಂಟಿಕಾಲಿನ ಮೇಲೆ ನಿಂತುಕೊಂಡು ತದೇಕ ಚಿತ್ತದಿಂದ ಬೇಟೆಯನ್ನು ಅರಸುವ ಅದರ ಸ್ವಭಾವ, ಒಂದು ನಾಣ್ನುಡಿಯೂ ಆಗಿದೆ.

ಬಕಪಕ್ಷಿಗಳ ಜೊತೆಗೆ ಬೆಳ್ಳಕ್ಕಿ ಮತ್ತು ಗುಪ್ಪಿಗಳು ಆರ್ಡಿಡೆ (Ardeidae)  ಎಂಬ ಕುಟುಂಬಕ್ಕೆ ಸೇರಿವೆ. ಇಂಗ್ಲೀಷಿನಲ್ಲಿ ಈ ಹಕ್ಕಿಯನ್ನು ಇಂಡಿಯನ್ ಪಾಂಡ್ ಹೆರಾನ್ (Indian Pond Heron) ಎಂದೂ ವೈಜ್ಞಾನಿಕ ಪರಿಭಾಷೆಯಲ್ಲಿ ಆರ್ಡಿಯೋಲಾ ಗ್ರೇಯಿ (Ardeola grayii ) ಎಂದೂ ಕರೆಯುತ್ತಾರೆ. ಭಾರತ ದೇಶದಲ್ಲಿಯೇ ಅಲ್ಲದೆ, ಬರ್ಮಾ, ಶ್ರೀಲಂಕಾ ದೇಶಗಳಲ್ಲಿಯೂ ವ್ಯಾಪಕವಾಗಿ ಕಂಡುಬರುತ್ತವೆ.

ಕೊಳದ ಬಕ ಗುಂಪಾಗಿ ವಾಸಿಸುವ, ಆಹಾರಕ್ಕೆ ಜಲಚರಗಳನ್ನೇ ನಂಬಿಕೊಂಡಿರುವ ಹಕ್ಕಿ. ದೇಶದಾದ್ಯಂತ ಸಾಮಾನ್ಯವಾಗಿ ಗದ್ದೆ, ಕೆರೆ-ಕಾಲುವೆ, ಜೊಂಡು-ಕೆಸರು ಇರುವೆಡೆಗಳಲ್ಲಿ ನಾವು ಕಾಣಬಹುದು. ಸುಮಾರು 46 ಸೆಂಟಿಮೀಟರ್ ಗಾತ್ರದ ಕೊಳದ ಬಕದ ತಲೆ, ಕತ್ತು ಹಾಗೂ ಬೆನ್ನು ಬೂದುಗಂದು ಬಣ್ಣದಿಂದ ಕೂಡಿರುತ್ತದೆ. ಅದರ ಮೇಲೆ ಕಂದು ಬಣ್ಣದ ಉದ್ದ-ಗೀರುಗಳನ್ನು ಹೊಂದಿರುತ್ತವೆ. ಮುಖದಲ್ಲಿ ಉದ್ದವಾದ, ಖಡ್ಗದಂತೆ ಚೂಪಾದ, ಕಪ್ಪು ತುದಿಯುಳ್ಳ ಹಳದಿ ಕೊಕ್ಕು ಎದ್ದು ಕಾಣುತ್ತದೆ. ಸಪೂರ, ಉದ್ದವಾದ, ಒಳಗೆಳೆದುಕೊಳ್ಳಬಲ್ಲಂತಹ ಕತ್ತು ಹಾಗೂ ಅಗಲವಾದ, ಮೊಂಡು ಅಂಚುಳ್ಳ ದೊಡ್ಡ ರೆಕ್ಕೆಗಳು. ಉದ್ದನಾದ, ಪೇಲವ ಬೂದು ಬಣ್ಣದ ಕಾಲುಗಳು ಮತ್ತು ಕಾಲ್ಬೆರಳುಗಳು. ಹೊರ ಬೆರಳುಗಳಲ್ಲಿ ಜಾಲಪಾದವಿರುತ್ತದೆ. ಸಂತಾನಋತುವಿನಲ್ಲಿ, ತಲೆ ಮತ್ತು ಬೆನ್ನ ಮೇಲೆ ಅಲಂಕಾರಿಕ ಗರಿಗಳು ಮೂಡುತ್ತವೆ. ಇದರೊಂದಿಗೆ ಮೊಂಡು ಬಾಲ. ಕೊಳದ ಬಕದ ಬೂದು-ಕಂದು ಬಣ್ಣಗಳಿರುವ ದೇಹ, ಸುತ್ತಮುತ್ತಲ ವಾತಾವರಣದಲ್ಲಿ ಮರೆಮಾಚುವ ಮೈಬಣ್ಣದಿಂದಾಗಿ ಬೇಟೆಯರಸುತ್ತಿರುವಾಗ ಕೊಳದ ಬಕ ಕಾಣುವುದೇ ಇಲ್ಲ; ಆದರೆ, ಹಾರಲು ಮೇಲೆದ್ದೊಡನೆ, ಅಚ್ಚಬಿಳಿ ಕೆಳಮೈ ಮತ್ತು ರೆಕ್ಕೆಗಳು ಅತ್ಯಂತ ಮೋಹಕವಾಗಿ ಕಾಣುತ್ತದೆ! ಗಂಡು-ಹೆಣ್ಣು ಹಕ್ಕಿಗಳು ನೋಡಲು ಒಂದೇ ರೀತಿ ಕಾಣುತ್ತವೆ. ಆದರೆ ಕಿರು ವಯಸ್ಸಿನ ಕೊಳದ ಬಕಗಳ ಇಡೀ ದೇಹ ಕೆಂಗಂದು ಬಣ್ಣದಿಂದ ಕೂಡಿರುತ್ತವೆ.

ಕೊಳದ ಬಕಗಳು ಕೊಳ, ಕೆರೆ, ಗದ್ದೆ, ಕೆರೆ-ಕಾಲುವೆ, ಮುಂತಾದ ಪ್ರದೇಶಗಳಲ್ಲಿ ಹಾಗೂ ಜೊಂಡು-ಕೆಸರು ಇರುವೆಡೆಗಳಲ್ಲಿ, ಒಂಟಿಯಾಗಿ, ಅಥವಾ ತಮ್ಮ ಕುಟುಂಬಕ್ಕೆ ಸೇರಿದ ಇತರ ಹಕ್ಕಿಗಳೊಂದಿಗೆ ಗುಂಪಿನಲ್ಲಿ, ಬೇಟೆಯರಸುವುದನ್ನು ಕಾಣಬಹುದು. ಒಂದಿಷ್ಟೂ ಅಲುಗಾಡದೆ, ಒಂಟಿಕಾಲಿನ ಮೇಲೆ ನಿಂತು, ತದೇಕಚಿತ್ತದಿಂದ ಬೇಟೆಯಾಡುವ ಕೊಳದ ಬಕ, ಕೆಲವು ಸಾರಿ ಕೊಕ್ಕಿನಲ್ಲಿ ಸಣ್ಣ ಎರೆಹುಳವನ್ನು ಹಿಡಿದುಕೊಂಡು ಅದನ್ನು ನೀರಿನಲ್ಲಿ ಹಾಕಿ, ಸುತ್ತ ಮುತ್ತಲ ಮೀನುಗಳನ್ನು ಆಕರ್ಷಿಸುವ ಪರಿ ನಿಜಕ್ಕೂ ಕುತೂಹಲಕಾರಿ!

ಮೀನುಗಳು, ದ್ವಿಚರಿಗಳಾದ ಕಪ್ಪೆ, ಗೊದಮೊಟ್ಟೆಗಳು, ಮೃದ್ವಂಗಿಗಳು, ವಿವಿಧ ಕೀಟಗಳು, ಸಣ್ಣ ಜಾತಿಯ ಸ್ತನಿಗಳು, ಹಕ್ಕಿಗಳು, ಸರೀಸೃಪಗಳು, ಮುಂತಾದುವು ಕೊಳದ ಬಕದ ಆಹಾರದ ಪಟ್ಟಿಯಲ್ಲಿ ಸೇರಿವೆ.

ಹಾರುವಾಗ ಕತ್ತನ್ನು ಒಳಗೆಳೆದುಕೊಂಡು, ಕಾಲುಗಳನ್ನು ಹಿಂದಕ್ಕೆ ಚಾಚಿಕೊಂಡು, ಬಲವಾದ ರೆಕ್ಕೆಗಳನ್ನು ಬಡಿದುಕೊಂಡು ಹಾರುತ್ತವೆ.

ಹಾರುವಾಗ ಒರಟಾದ, ಕಿವಿಗೆ ಇಂಪಿಲ್ಲದ, ಕ್ರಾ… ಕ್ರಾ… ಎಂದು ಕೂಗುತ್ತವೆ. ಅಲ್ಲದೆ ಗೂಡಿನಲ್ಲಿರುವಾಗ ಕೀಚಲು ಕಚಪಿಚ ಧ್ವನಿಯಲ್ಲಿ ಒಂದಕ್ಕೊಂದು ಮಾತನಾಡಿಕೊಳ್ಳುತ್ತವೆ.

ಕೊಳದ ಬಕಪಕ್ಷಿಯ ಪ್ರಜನನ ಸಮಯ ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ. ಮಳೆಗಾಲದ ಈ ಸಮಯದಲ್ಲಿ ಹೇರಳವಾಗಿ ಮೀನು, ಏಡಿ, ಕಪ್ಪೆ ಮುಂತಾದ ಪ್ರಾಣಿಗಳು ತಿನ್ನಲು ದೊರಕುತ್ತವೆ. ನೀರಿರುವೆಡೆ, ಮರದ ಮೇಲೆ, ಕುಟುಂಬಕ್ಕೆ ಸೇರಿದ ವಿವಿಧ ಪ್ರಭೇದಗಳ ಇತರ ಹಕ್ಕಿಗಳೊಂದಿಗೆ ಜೊತೆ ಸೇರಿ, ಒಣರೆಂಬೆ, ಕಡ್ಡಿಗಳಿಂದ ತಯಾರಾದ ಅಟ್ಟಣಿಗೆ ಗೂಡುಗಳ ದೊಡ್ಡ ಕಾಲೊನಿ ಕಟ್ಟುತ್ತವೆ. ಗಂಡು-ಹೆಣ್ಣು ಬಕಗಳು ಸೇರಿ ಸಂಸಾರದ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತವೆ. ಹೆಣ್ಣು ಹಕ್ಕಿ ಒಂದು ಬಾರಿಗೆ ತಿಳಿ ಹಸಿರು-ನೀಲಿ ಬಣ್ಣದ, ಮೂರರಿಂದ ಐದು ಮೊಟ್ಟೆಗಳನ್ನು ಇಡುತ್ತದೆ. ಮರಿಹಕ್ಕಿಗಳಿಗೆ ಹಲವು ವಾರಗಳ ಕಾಲ ಪೋಷಣೆ ಅಗತ್ಯ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ