ವೆಸ್ಟ್ ಇಂಡೀಸ್‌ಗೆ ಹೋಗಿ ಅವರು ಅಲ್ಲೂ ಸುಮ್ಮನೆ ಕೂರಲಿಲ್ಲ! ಪ್ರಪ್ರಥಮವಾಗಿ ಟೆಸ್ಟ್‌ಗೆ ಇಳಿದ ಸುನಿಲ್‌ರ ಆರ್ಭಟ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರು ಮಾಡಿದ ಭಾರತದ ದಾಖಲೆ ಇನ್ನೂ ಯಾರೂ ಮುರಿದಿಲ್ಲ! ಐದರಲ್ಲಿ, ನಾಲ್ಕು ಟೆಸ್ಟ್ ಅಡಿದ ಸುನಿಲ್ ಗವಾಸ್ಕರ್ ಮೊಟ್ಟ ಮೊದಲನೇಯ ಸರಣಿಯಲ್ಲಿ 774ರನ್ ಹೊಡೆದು ಇಂದಿಗೂ ಆ ವಿಶ್ವದಾಖಲೆ ಜೀವಂತವಾಗಿ ಉಳಿದಿದೆ! ಅವರು ಆಡಿದ ಸರಣಿಯಲ್ಲಿ ಇಂದಿಗೂ ಪ್ರಪಂಚದ ಶ್ರೇಷ್ಟ ಆಲ್ ರೌಂಡರ್ ಎಂದು ಪರಿಗಣಿಸುವ ಗಾರ್ಫೀಲ್ಡ್ ಸೋಬರ್ಸ್ ವೆಸ್ಟ್ ಇಂಡೀಸಿನ ತಂಡಕ್ಕೆ ನಾಯಕನಾಗಿದ್ದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಸುನಿಲ್‌ ಗವಾಸ್ಕರ್‌ ಆಟದ ಕುರಿತ ಬರಹ ನಿಮ್ಮ ಓದಿಗೆ

‘ಮೂರ್ತಿ ದೊಡ್ಡದಲ್ಲ ಕೀರ್ತಿ ದೊಡ್ಡದು’ ಎಂಬ ನಾಣ್ನುಡಿ ಎಷ್ಟೋ ಸರ್ತಿ ಕೇಳಿದ್ದೇವೆ, ನೋಡಿದ್ದೇವೆ. ಇದು ಬಹಳ ಸಂದರ್ಭದಲ್ಲಿ ನಿಜವಾಗಿದೆ. ಕ್ರಿಕೆಟ್ ಆಟದಲ್ಲಿ ಒಂದೆರೆಡು ಆಟಗಾರರ ವಿಷಯದಲ್ಲಂತೂ ಅಕ್ಷರಸಹ ಇದು ಸತ್ಯವಾಗಿದೆ.

ಯಾವುದೇ ಆಟವಾಗಲಿ ಒಳ್ಳೆಯ ಆರೋಗ್ಯ ಮುಖ್ಯ. ಅದರಲ್ಲೂ ಹೆಚ್ಚಿನ ಎತ್ತರ, ಶಕ್ತಿ, ಬಲಿಷ್ಟವಾದ ಮೈಕಟ್ಟು ಕುಶಲತೆಗೆ ಮೆರಗು ಕೊಟ್ಟ ಹಾಗಿರುತ್ತೆ. ಅದರೆ ಇವುಗಳಲ್ಲಿ ಯಾವುದಾದರೂ ಇಲ್ಲದಿದ್ದರೆ, ಅದರ ಕೊರತೆ ಇದ್ದರೆ ಏನೂ ಪರವಾಗಿಲ್ಲ, ಅವರ ಪ್ರತಿಭೆ, ಕುಶಲತೆ ಮತ್ತು ಏಕಾಗ್ರತೆಯಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಕೆಲವರು ತೋರಿಸಿಕೊಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಅವರು ಆಡುವ ಕಾಲದಲ್ಲಿ ಅತ್ಯಂತ ಶ್ರೇಷ್ಟ ಆಟಗಾರನಾಗಿ, ಅನೇಕ ದಾಖಲೆಗಳನ್ನು ಮುರಿದು, ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ಫುಟ್‌ಬಾಲಿನಲ್ಲಿ ಪೆಲೆ ಮತ್ತು ಮೆಸ್ಸಿ 5′ 7” ಇರಬಹುದು. ಅವರೂ ಫುಟ್ಬಾಲಿನ ಬಹಳ ದೊಡ್ಡ ಶ್ರೇಷ್ಟಗಾರರಾದರು.

ಕ್ರಿಕೆಟ್ಟಿನಲ್ಲಿ ಕೆಲವು ಆಟಗಾರರು ಬಹಳ ಎತ್ತರವೇನಿರಲಿಲ್ಲ. ಆದರೂ ಇವರ ಆಟ ನೋಡಿ ದಂಗಾಗಿ ಅವರನ್ನು ಕ್ರಿಕೆಟ್ ಪ್ರಪಂಚ ‘ಲಿಟ್ಲ್ ಮಾಸ್ಟರ್ಸ್’ ಎಂದು ಕರೆಯಲು ಶುರುಮಾಡಿದರು. ‘ಲಿಟ್ಲ್ ಮಾಸ್ಟರ್’ ಎನ್ನುವ ನಾಮಾಂಕಿತ ಮೊಟ್ಟ ಮೊದಲು ಪಾಕಿಸ್ಥಾನದ ಆಟಗಾರ ಹನಿಫ್ ಮಹಮದ್‌ರಿಗೆ ಅನ್ವಯಿಸಿತು.

ಹನಿಫ್ ಮೊಹಮ್ಮದ್ 21 ಡಿಸೆಂಬರ್ 1934ರಲ್ಲಿ ಜುನಾಘಡ್, ಪಾಕಿಸ್ಥಾನದಲ್ಲಿ ಹುಟ್ಟಿದರು. ಅವರ ಎತ್ತರ 5’7″ ಇತ್ತು. 4 ಅಣ್ಣ ತಮ್ಮಂದಿರ ಜೊತೆ ಹುಟ್ಟಿದ ಹನಿಫ್‌ರ ಮನೆಯಲ್ಲಿ ಎಲ್ಲರೂ ಕ್ರಿಕೆಟ್ ಜಗತ್ತಿಗೆ ಇಳಿದರು. ಇವರ ತಮ್ಮ ಮುಸ್ಟಾಕ್ ಮೊಹಮ್ಮದ್ ಅವರಿಗೆ ಇನ್ನೂ 15 ವರ್ಷ 124 ದಿನಗಳಾಗಿದ್ದಾಗಲೇ ಪಾಕಿಸ್ಥಾನಕ್ಕೆ ಆಡಿ ಅದೊಂದು ದಾಖಲೆ ಮಾಡಿದರು. ಅಖಂಡ ಭಾರತ 1947ರಲ್ಲಿ ವಿಭಜನೆಯಾಗಿ ಪಾಕಿಸ್ಥಾನ 1952ರಲ್ಲಿ ಮೊದಲ ಬಾರಿ ಇಲ್ಲಿಗೆ ಬಂದಾಗ ಹನಿಫ್ ಮೊದಲನೆಯ ಟೆಸ್ಟ್ ಮ್ಯಾಚಿನಲ್ಲಿ ಪ್ರಾರಂಭ ಆಟಗಾರನಾಗಿ ಅವರ ಕ್ರಿಕೆಟ್ ಜೀವನವನ್ನು ಶುರು ಮಾಡಿದರು.

(ಹನಿಫ್ ಮೊಹಮ್ಮದ್)

ಹನಿಫ್ ಅವರಿಗೆ ಕ್ರಿಕೆಟ್ ತರಬೇತಿ ಕೊಟ್ಟಿದ್ದು ಅಬ್ದುಲ್ ಆಝೀಜ್. ಆಝೀಜ್ ಆಫ್ಘಾನಿಸ್ಥಾನದವರು ಮತ್ತು ಭಾರತದ ಜನಪ್ರಿಯ ಕ್ರಿಕೆಟ್ ಆಟಗಾರರಾಗಿದ್ದ ಸಲೀಮ್ ದ್ಯುರಾನಿ ಅವರ ತಂದೆ.

1957-58 ರಲ್ಲಿ ಪಾಕಿಸ್ತಾನ ವೆಸ್ಟ್ ಇಂಡೀಸ್‌ಗೆ ಹೋದಾಗ ಅವರ ವಿರುದ್ಧ ಟೆಸ್ಟ್ ಮ್ಯಾಚಿನಲ್ಲಿ 337 ರನ್‌ ಹೊಡೆದು ಏಷ್ಯಾಕ್ಕೆ ಒಂದು ದಾಖಲೆಯನ್ನು ಸೃಷ್ಟಿಸಿದರು. 6 ದಿವಸದ ಆ ಟೆಸ್ಟ್‌ನಲ್ಲಿ 473 ರನ್ ಹಿಂದೆ ಇದ್ದ ಪಾಕಿಸ್ತಾನದ ಎರಡನೆ ಇನಿಂಗ್ಸ್‌ನಲ್ಲಿ ಹನಿಫ್ 16 ಘಂಟೆಗಳ ಕಾಲ ಆಡಿ 337 ರನ್ ಹೊಡೆದರು. ಅವರು ನಿಂತು ಆಡಿದ 16 ಘಂಟೆಯ ಇನ್ನಿಂಗ್ಸ್ ಇಂದಿಗೂ ಸಮಯದ (16 ಗಂಟೆ) ದಾಖಲೆಯಾಗಿಯೇ ಉಳಿದಿದೆ. ಅದರಿಂದ ಪಾಕಿಸ್ತಾನಕ್ಕೆ ಸೋಲನ್ನು ತಪ್ಪಿಸಿದರು. ಆ ಸರಣಿಯಲ್ಲೇ ಪಾಕಿಸ್ತಾನದ ವಿರುದ್ಧವೇ ಗಾರ್ಫೀಲಡ್ ಸೋಬರ್ಸ್‌ 365 ರನ್‌ ಹೊಡೆದು ಅಜೇಯರಾಗಿ ಉಳಿದರು. ಸೋಬರ್ಸ್‌ ಲೆನ್ ಹಟ್ಟನ್‌ರ 364 ರನ್‌ ದಾಖಲೆಯನ್ನು ಮುರಿದರು. ಒಂದು ಸೋಜಿಗದ ಸಂಗತಿ ಎಂದರೆ ಹನಿಫ್ 337 ರನ್ ಮಾಡುವುದಕ್ಕೆ 970 ಬಾಲು ತೆಗೆದುಕೊಂಡಿದ್ದರು; ಆದರೆ ಸೋಬರ್ಸ್‌ ತಮ್ಮ 365ರನ್ ಗಳನ್ನು ಕೇವಲ 614 ಬಾಲುಗಳಲ್ಲಿ ಹೊಡೆದರು!

2004ರಲ್ಲಿ ಬ್ರೈಯನ್ ಲಾರ ಮುನ್ನೂರು ಇನ್ನು ಸಾಕು, ಮುಂದೆ ಹೋಗುವ ಎಂದು ಅಜೇಯನಾಗಿ ಇಂಗ್ಲೆಂಡಿನ ವಿರುದ್ಧ 400 ರನ್ ಹೊಡೆದರು. ಇದು ಈಗಿರುವ ದಾಖಲೆ.

1958-59ರಲ್ಲಿ ಹನಿಫ್ ಕರಾಚಿ ಪರವಾಗಿ ಆಡುತ್ತಾ ಭವಾಲ್ಪುರದ ವಿರುದ್ಧ 499 ರನ್ ಹೊಡೆದರು. ಅದು 452 ರನ್ ಹೊಡೆದ ಡಾನ್ ಬ್ರಾಡ್ಮನ್‌ರ ದಾಖಲೆಯನ್ನು ಬೀಳಿಸಿತ್ತು. ಐನೂರನೇ ರನ್ ಓಡುವಾಗ ಹನಿಫ್ ರನ್ ಔಟ್ ಆದರು! ಬಹಳ ವರ್ಷಗಳಾದ ಮೇಲೆ 1994ರಲ್ಲಿ ಇಂಗ್ಲೆಂಡಿನ ಕೌಂಟಿ ವಾರ್ವಿಕ್‍ಶೈರ್‌ನ ಪರವಾಗಿ ಆಡಿದ ವೆಸ್ಟ್ ಇಂಡೀಸ್‌ನ ಬ್ರೈಯನ್ ಲಾರ ಡರ್ಹಾಮ್‌ನ ವಿರುದ್ಧ ಅಜೇಯರಾಗಿ 501 ರನ್ ಹೊಡೆದು ತಮ್ಮದೇ ಆದ ಛಾಪನ್ನು ಸ್ಥಾಪಿಸಿದರು. 55 ಟೆಸ್ಟ್ ಆಡಿದ ಹನಿಫ್ 43.98ರ ಸರಾಸರಿಯಲ್ಲಿ 3915 ರನ್ ಗಳಿಸಿದರು.

*****

ಆಸ್ಟ್ರೇಲಿಯದ ವಿರುದ್ಧ ಆಡುವಾಗ ಹನಿಫ್ ಮೊದಲನೆ ಇನಿಂಗ್ಸ್‌ನಲ್ಲಿ ಸೆಂಚುರಿ ಹೊಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 93 ಆಗಿದ್ದಾಗ ಅವರನ್ನು ಜಾರ್ಮನ್ ಸ್ಟಮ್ಪ್ ಔಟ್ ಮಾಡಿದಾಗ ಎರಡನೇ ಸೆಂಚುರಿಗೆ ಹತ್ತಿರವಿದ್ದ ಹನಿಫ್ ನಿರಾಶರಾಗಿ ಪೆವಿಲಿಯನ್‌ಗೆ ನಡೆದರು. ಆಮೇಲೆ ಒಂದು ಪ್ರೆಸ್ ಕೂಟದಲ್ಲಿ ಮಾತನಾಡಿದ ಜಾರ್ಮನ್ ಹನಿಫ್ ಔಟಾಗಿರಲಿಲ್ಲ ಎಂದರು! ಎರಡೂ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಹೊಡೆಯುವ ಅವಕಾಶ ಹನಿಫ್‌ಗೆ ತಪ್ಪಿಹೋಯಿತು.

ಹನಿಫ್ ಎರಡು ಕೈಯಲ್ಲೂ ಬೋಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರು. 1981ರಲ್ಲಿ ಹನಿಫ್ ಮಹಮ್ಮದ್ ತಮ್ಮ 81ನೇ ವಯಸ್ಸಿನಲ್ಲಿ ಕಾಲವಾದರು.

*****

1970ರಲ್ಲಿ ಬಂದ ಸುನಿಲ್ ಗವಾಸ್ಕರ್ ಹನಿಫ್‌ರ ಗುಂಪಿಗೆ ಸೇರಿದವರು. ಅಂದರೆ ಅವರೂ ಓಪನರಾಗಿ ಮೊದಲ ಆಟಗಾರರಾಗಿ ಅವರ ಕ್ರಿಕೆಟ್ ಜೀವನ ಶುರುಮಾಡಿದರು. ಟೆಸ್ಟ್ ಮ್ಯಾಚಿನಲ್ಲಿ ‘ಓಪನರ್’ ಅಂದರೆ 140 – 145 ಕಿ.ಮಿ. ವೇಗದಲ್ಲಿ ಬರುವ ಚೆಂಡನ್ನು, ಕೆಲವು ಸಲ ಮೋಡದಿಂದ ಕೂಡಿದ ವಾತಾವರಣದಲ್ಲಿ, ವೇಗದ ಬೋಲಿಂಗನ್ನು ಇನ್ನೂ ಇಮ್ಮಡಿಗೊಳಿಸುವ ಪಿಚ್‌ನ ಮತ್ತು ಬೌನ್ಸರ್ ಆಗಿ ಬರುವ ಬಾಲನ್ನು ಆಡಬೇಕು. ಎಷ್ಟೋ ಸರ್ತಿ ಬಲವಾದ ಏಟು ತಿಂದು ಶಸ್ತ್ರಚಿಕಿತ್ಸೆಯಾಗಿ ವಾರ ಮತ್ತು ತಿಂಗಳಗಟ್ಟಲೆ ಮುಲಗುಟ್ಟುತ್ತಾ ಮೂಲೆಯಲ್ಲಿ ಕೂರುವ ಸ್ಥಿತಿ ಬರುತ್ತೆ. ಅದರಲ್ಲಿ 1970ರ ದಶಕದಲ್ಲಿ ವೆಸ್ಟ್ ಇಂಡೀಸ್ ಪಡೆ ವೇಗವಾಗಿ ಮಾಡುವವರಲ್ಲಿ ವಿಶ್ವದಲ್ಲೇ ಅತ್ಯಂತ ಶ್ರೇಷ್ಟವಾದ ಬೋಲಿಂಗ್ ತಂಡವೆಂದು ಪ್ರಸಿದ್ಧಿಯಾಗಿತ್ತು, ಈಗಲೂ ಆ ದಾಖಲೆಯನ್ನು ಯಾರೂ ಮುರಿದಿಲ್ಲ. ಮಾಲ್ಕಮ್ ಮಾರ್ಷಲ್, ಎಂಡೀ ರಾಬರ್ಟಸ್, ಮೈಕೆಲ್ ಹೋಲ್ಡಿಂಗ್, ಕೋರ್ಟ್ನಿ ವಾಲ್ಶ್, ಕರ್ಟಲಿ ಆಮ್ಬ್ರೋಸ್, ಜೊಎಲ್ ಗಾರ್ನರ್ ಮುಂತಾದ ಬೋಲರ್ಸ್‌ಗಳಿರುವಾಗ ಅವರು ಕ್ರಿಕೆಟ್ ಮೈದಾನಕ್ಕೆ ಇಳಿದರು.

ಸುನಿಲ್ ಮನೋಹರ್ ಗವಾಸ್ಕರ್ 5′ 4″ ಇದ್ದರು. ಪಾಕಿಸ್ತಾನದ ಹನಿಫ್ ನಂತರ ಸುಮಾರು ಇಪ್ಪತ್ತು ವರ್ಷದ ನಂತರ ಬಂದ ಆಟಗಾರ. ಸಾಧಾರಣವಾಗಿ ಒಬ್ಬ ಆಟಗಾರ ರಣಜಿ ಟ್ರೋಫಿಯಲ್ಲಿ ಆಡಿ ಅದರಲ್ಲಿ ಯಶಸ್ಸನ್ನು ಕಂಡು ಅವರ ವಲಯಕ್ಕೆ ದುಲೀಪ್ ಟ್ರೋಫಿಯಲ್ಲಿ ಒಂದೆರೆಡು ವರ್ಷ ಪಳಗಿ, ಆಮೇಲೆ ಟೆಸ್ಟ್ ಮ್ಯಾಚಿಗೆ ಆಯ್ಕೆಯಾಗುತ್ತಾನೆ. ಆದರೆ ಗವಾಸ್ಕರ್ ವಿಷಯದಲ್ಲಿ ಹಾಗಾಗಲಿಲ್ಲ! ಅವರು ವಿಶ್ವ ವಿದ್ಯಾನಿಲಯದ ರೋಹಿಂಗ್ಟನ್ ಬಾರಿಯ ಟೂರ್ನಮೆಂಟಿನಲ್ಲಿ ಮತ್ತು ರಣಜಿ ಟ್ರೋಫಿಯಲ್ಲಿ ಎಷ್ಟು ಚೆನ್ನಾಗಿ ಆಡಿದರೆಂದರೆ 1971ರಲ್ಲಿ ವೆಸ್ಟ್ ಇಂಡೀಸ್‌ಗೆ ಹೊರಟ ಭಾರತ ತಂಡಕ್ಕೆ ಸೀದಾ ಅಮಂತ್ರಣ ಪಡೆದು ಪ್ಲೇನಿನಲ್ಲಿ ಹೋಗಿ ಕೂತರು!

ವೆಸ್ಟ್ ಇಂಡೀಸ್‌ಗೆ ಹೋಗಿ ಅವರು ಅಲ್ಲೂ ಸುಮ್ಮನೆ ಕೂರಲಿಲ್ಲ! ಪ್ರಪ್ರಥಮವಾಗಿ ಟೆಸ್ಟ್‌ಗೆ ಇಳಿದ ಸುನಿಲ್‌ರ ಆರ್ಭಟ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರು ಮಾಡಿದ ಭಾರತದ ದಾಖಲೆ ಇನ್ನೂ ಯಾರೂ ಮುರಿದಿಲ್ಲ! ಐದರಲ್ಲಿ, ನಾಲ್ಕು ಟೆಸ್ಟ್ ಅಡಿದ ಸುನಿಲ್ ಗವಾಸ್ಕರ್ ಮೊಟ್ಟ ಮೊದಲನೇಯ ಸರಣಿಯಲ್ಲಿ 774ರನ್ ಹೊಡೆದು ಇಂದಿಗೂ ಆ ವಿಶ್ವದಾಖಲೆ ಜೀವಂತವಾಗಿ ಉಳಿದಿದೆ! ಅವರು ಆಡಿದ ಸರಣಿಯಲ್ಲಿ ಇಂದಿಗೂ ಪ್ರಪಂಚದ ಶ್ರೇಷ್ಟ ಆಲ್ ರೌಂಡರ್ ಎಂದು ಪರಿಗಣಿಸುವ ಗಾರ್ಫೀಲ್ಡ್ ಸೋಬರ್ಸ್ ವೆಸ್ಟ್ ಇಂಡೀಸಿನ ತಂಡಕ್ಕೆ ನಾಯಕನಾಗಿದ್ದರು.

ವೆಸ್ಟ್ ಇಂಡೀಸ್‌ನ ಜನಗಳು ಅವರ ಆಟದಿಂದ ಎಷ್ಟು ಪ್ರಭಾವಿತರಾದರೆಂದರೆ ಅವರ ಮೇಲೆ ‘ಕಾಲಿಪ್ಸೊ ಹಾಡು ರಚಿಸಿದರು!

ಸುನಿಲ್ ಗವಾಸ್ಕರ್ 1949 ಜೂಲೈ 10ರಲ್ಲಿ ಹುಟ್ಟಿದರು. ಮಹಾರಾಷ್ಟ್ರದಲ್ಲಿ ಅದರಲ್ಲೂ ಬೊಂಬಾಯಿಯಲ್ಲಿ ಕ್ರಿಕೆಟ್ಟಿಗೆ ಇರುವ ಆಸಕ್ತಿ ಭಾರತದ ಯಾವ ರಾಜ್ಯದಲ್ಲೂ ಇಲ್ಲ. ಮನೆಯಲ್ಲಿರುವ ಅಜ್ಜ ಅಜ್ಜಿಯರಿಂದ ಹಿಡಿದು ಮಕ್ಕಳ ತನಕ ಎಲ್ಲರೂ ಕ್ರಿಕೆಟ್‌ನ ವಿಷಯ ಚರ್ಚೆ ಮಾಡಿ ಮುಂಬಯಿಯ ಪ್ರಸಿದ್ಧವಾದ ಶಿವಾಜಿ ಪಾರ್ಕಿನಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ ಆಡುವುದಕ್ಕೆ ಹಾಜರು! ಆದ್ದರಿಂದಲೇ ಮುಂಬಯಿ ರಣಜಿ ಟ್ರೋಫಿಯಲ್ಲಿ 41 ಸಲ ಗೆದ್ದಿದೆ. ಆದರ ದಾಖಲೆಯನ್ನು ಯಾರೂ ಮುರಿಯುವ ಹಾಗೆ ಕಾಣಿಸಲ್ಲ.

ಗವಾಸ್ಕರ್ ಹುಟ್ಟಿದಾಗ ಒಂದು ಘಟನೆ ಜರುಗಿತು. ಇದನ್ನು ಗವಾಸ್ಕರ್ ತಮ್ಮ ಆತ್ಮಕಥೆ ‘ಮೈ ಡೇಸ್’ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹುಟ್ಟಿದ್ದು 10 ನೆ ಜುಲೈ ತಾರೀಖು. ಅವರನ್ನು ನೊಡಲು ಅವರ ಹತ್ತಿರದ ಸಂಬಂಧಿ ನಾರಾಯಣ ಮಾಸುರೇಕರ್ ಹಾಸ್ಪೆಟಲ್ಲಿಗೆ ಬಂದಿದ್ದರು. ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಎತ್ತಿ ಆಡಿಸಿದರು ಮಾಸುರೇಕರ್. ಆಗ ಅವರು ಮಗುವಿನ ಎಡ ಕಿವಿಯ ಹಾಲೆಯಲ್ಲಿ (ಲೋಬ್) ಒಂದು ಸಣ್ಣ ತೂತನ್ನು ಗಮನಿಸಿದರು. ಮಾರನೆಯ ದಿನ ಮತ್ತೆ ಅವರು ಬಂದು ಮಗುವನ್ನು ಎತ್ತಿ ಆಡಿಸುವಾಗ ಅವರಿಗೆ ಮಗುವಿನ ಕಿವಿಯ ಹಾಲೆಯಲ್ಲಿ ತೂತು ಕಾಣಿಸಲಿಲ್ಲ! ತಕ್ಷಣ ಎಲ್ಲರೂ ಮಗುವನ್ನು ಹುಡುಕಲಾರಂಭಿಸಿದರು. ಅದು ಒಂದು ಬೆಸ್ತರ ಮಹಿಳೆಯ ಪಕ್ಕ ಮಲಗಿತ್ತು! ನರ್ಸುಗಳು ಮಕ್ಕಳಿಗೆ ಸ್ನಾನ ಮಾಡಿಸುವಾಗ ಅದಲು ಬದಲಾಗಿ ಗವಾಸ್ಕರ್ ಬೆಸ್ತರ ಮಗುವಾಗಿ ಮಾರ್ಪಾಡಾಗಿದ್ದರು! ಬೆಸ್ತನಾಗಿದ್ದರೂ ಅವರು ಮುಂದೆ ಮೀನು ಹಿಡಿಯುವುದರಲ್ಲಿ ಅನೇಕ ದಾಖಲೆಗಳನ್ನು ಖಂಡಿತ ಮಾಡಿರೋವ್ರು ಅಂತ ಅನ್ನಿಸುತ್ತೆ!

ಸುನಿಲ್ ಇನ್ನೂ ಚಿಕ್ಕವನಾಗಿದ್ದಾಗಲೇ ಅವನ ತಾಯಿಯೇ ಅವನ ಮೊದಲ ಕೋಚ್! ಬೆಂಕಿಪೊಟ್ಟಣದಂತಿರುವ ಬೊಂಬಾಯಿಯ ಮನೆಗಳಲ್ಲಿ ಬಾಲ್ಕನಿ ಮೊದಲ ಆಟದ ಮೈದಾನವಾಗಿರುತ್ತೆ. ದಿನಾ ಅವರಿಗೆ ಮನೆಯಲ್ಲಿ ತರಬೇತಿ ಕೊಡುತ್ತಿದ್ದರು. ಅವರ ತಾಯಿ ಎಸೆದ ಟೆನ್ನಿಸ್ ಬಾಲ್‌ಗೆ ಗವಾಸ್ಕರ್ ಅವರ ಪ್ರಸಿದ್ಧವಾದ ಡಿಫೆನ್ಸ್ ಆಟಕ್ಕೆ ತಳಪಾಯಿ ಹಾಕಿದ್ದು ಇಲ್ಲೇ! ಒಂದು ಸರ್ತಿ ಸ್ವಲ್ಪ ಜೋರಾಗಿ ಹೊಡೆದು ತಾಯಿಯ ಮೂಗಿಗೆ ಜೋರಾಗಿ ತಗುಲಿ ಏಟುಬಿದ್ದು ರಕ್ತ ಬಂದಗೆ ಗವಾಸ್ಕರ್ ಗಾಭರಿಯಾದನು. ಆಕೆಯೇ ಮೂಗಿನ ರಕ್ತವನ್ನು ತೊಳೆದು ಅವನಿಗೆ ಸಮಾಧಾನಮಾಡಿ, ಮತ್ತೆ ಚೆಂಡು ಎಸೆಯಲು ತಾಯಿ ತಯಾರಾದರು! ತರಬೇತಿ ನಿಲ್ಲಿಸಲಿಲ್ಲ. ಅಷ್ಟು ಮುತ್ತುವರ್ಜಿವಹಿಸಿ ಆಟಕ್ಕೆ ಅಲ್ಲಿ ಅಷ್ಟು ಪ್ರಾಧಾನ್ಯ ನೀಡುತ್ತಾರೆ.

ಗವಾಸ್ಕರ್ ವಿಷಯದಲ್ಲಿ ಹಾಗಾಗಲಿಲ್ಲ! ಅವರು ವಿಶ್ವ ವಿದ್ಯಾನಿಲಯದ ರೋಹಿಂಗ್ಟನ್ ಬಾರಿಯ ಟೂರ್ನಮೆಂಟಿನಲ್ಲಿ ಮತ್ತು ರಣಜಿ ಟ್ರೋಫಿಯಲ್ಲಿ ಎಷ್ಟು ಚೆನ್ನಾಗಿ ಆಡಿದರೆಂದರೆ 1971ರಲ್ಲಿ ವೆಸ್ಟ್ ಇಂಡೀಸ್‌ಗೆ ಹೊರಟ ಭಾರತ ತಂಡಕ್ಕೆ ಸೀದಾ ಅಮಂತ್ರಣ ಪಡೆದು ಪ್ಲೇನಿನಲ್ಲಿ ಹೋಗಿ ಕೂತರು!

ಗವಾಸ್ಕರ್ ಒಟ್ಟು 125 ಟೆಸ್ಟ್ ಮ್ಯಾಚ್ ಆಡಿ, 34 ಶತಕಗಳನ್ನು ಬಾರಿಸಿ, 10,122 ರನ್ ಗಳಿಸಿದರು. ಅವರ ಬ್ಯಾಟಿಂಗ್‌ನ ಸರಾಸರಿ 51.12. ಮೊದಲ ದರ್ಜೆಯಲ್ಲೂ ಅವರು 81 ಶತಕಗಳನ್ನು ಬಾರಿಸಿದರು.

ಒಂದು ಕಾಲದಲ್ಲಿ ಭಾರತಕ್ಕೆ ವೇಗವಾಗಿ ಮಾಡುವ ಬೋಲರ್‌ಗಳು ಇಲ್ಲದಿದ್ದಾಗ ಗವಾಸ್ಕರ್ ಫಾಸ್ಟ್ ಬೋಲರ್ ಆಗಿ ಮಾಡಿ ಒಂದು ವಿಕೆಟನ್ನೂ ಪಡೆದಿದ್ದಾರೆ!

ಒಂದು ಟೆಸ್ಟ್‌ಗೆ ನಾಲಕ್ಕು ಇನಿಂಗ್ಸ್ ಇರುತ್ತೆ. ನಾಲಕ್ಕೂ ಇನ್ನಿಂಗ್ಸ್‌ನಲ್ಲಿ ಡಬಲ್ ಸೆಂಚುರಿ ಹೊಡೆದ ಕೀರ್ತಿ ಕೇವಲ ಗವಾಸ್ಕರ್ ಮಾತ್ರ ಸೇರುತ್ತೆ. ಬೇರೆ ಯಾವ ಆಟಗಾರನೂ ಇದನ್ನು ಮಾಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ 1978ರಲ್ಲಿ ಮೊದಲ ಇನಿಂಗ್ಸ್‌ನಲ್ಲಿ 205 ಹೊಡೆದರು. ಡಿಸೆಂಬರ್ 1983ರಲ್ಲಿ ಅದೇ ವೆಸ್ಟ್ ಇಂಡೀಸ್ ಮೇಲೆ ಎರಡನೇ ಇನ್ನಿಂಗ್ಸಿನಲ್ಲಿ ಅಜೇಯರಾಗಿ 236, ತಮ್ಮ ಮೊದಲನೆಯ ಶ್ರೇಣಿ 1971ರ ಟೆಸ್ಟ್ ಮ್ಯಾಚ್‌ನ ಮೂರನೇ ಇನ್ನಿಂಗ್ಸಿನಲ್ಲಿ 220 ರನ್ ಮತ್ತು ಕೊನೆಗೆ 1979ರಲ್ಲಿ ತಮ್ಮ ನಾಲಕ್ಕನೇ ಇನ್ನಿಂಗ್ಸಿನಲ್ಲಿ ಇಂಗ್ಲೆಡಿನ ವಿರುದ್ಧ 221 ಹೊಡೆದರು. ಗೆಲ್ಲುವುದಕ್ಕೆ 438 ಹೊಡೆಯಬೇಕಿದ್ದ ಇಂಡಿಯ ಬಹಳ ಹತ್ತಿರ ಬಂದು 429ಕ್ಕೆ ಎಲ್ಲರೂ ಔಟಾಗಿ ಕೇವಲ 9 ರಲ್ಲಿ ಸೋತರು! ಆ ಪಂದ್ಯದಲ್ಲೇ ಗವಾಸ್ಕರ್ 221 ಹೊಡೆದರು.

ಒಂದು ದಿನದ ಪಂದ್ಯದಲ್ಲಿ, ಒಡಿಐ ಯಲ್ಲಿ ಅವರು 3092 ರನ್ನು ಗಳಿಸಿ ಸರಾಸರಿಯಲ್ಲಿ ಇಳಿಮುಖವಾಗಿ ಕೇವಲ 35.13 ಆಯಿತು.

ಜೂನ್ 9, 1975ರಲ್ಲಿ 334/4 ಹೊಡೆದ ಇಂಗ್ಲೆಂಡ್ ವಿರುದ್ಧ ಒಡಿಐ ಪಂದ್ಯ ವಿಶ್ವ ಕಪ್ ಮ್ಯಾಚಿನಲ್ಲಿ 174 ಬಾಲುಗಳನ್ನಾಡಿ ಕೇವಲ 36 ರನ್ ಹೊಡೆದು ಗವಾಸ್ಕರ್ ಅಜೇಯರಾಗಿ ಉಳಿದರು! ಆಮೆ ನಡಿಗೆಗಿಂತಲೂ ನಿಧಾನವಾದ ಇದೊಂದು ಕೆಟ್ಟ ದಾಖಲೆ ಅವರ ಜೀವನದ ಉದ್ದಕ್ಕೂ ಅವರನ್ನು ಕಾಡುತ್ತೆ!

1983ರಲ್ಲಿ ಭಾರತ ಗೆದ್ದ ಒಡಿಐ ವಿಶ್ವ ಕಪ್ ಟೀಮಿನಲ್ಲಿ ಗವಾಸ್ಕರ್ ಸದಸ್ಯರಾಗಿದ್ದರು. 185ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಹೆಡ್ಜಸ್ ಚಾಂಪಿಯನ್‌ಷಿಪ್‌ನಲ್ಲಿ ಅವರ ನಾಯಕತ್ವದಲ್ಲಿ ಭಾರತ ಪಾಕಿಸ್ತಾನವನ್ನು ಫೈನಲ್ಸ್‌ನಲ್ಲಿ ಸೋಲಿಸಿ ಚಾಂಪಿಯನ್‌ರಾದರು.

ಕ್ರಿಕೆಟ್ಟಿನಲ್ಲಿ ಸಂಗಡಿಗರ ಜೊತೆಯಲ್ಲಿ ಸಂಬಂಧ ಬೆಳೆಯುವುದು, ಬೆಳೆಸುವುದು ಅತಿ ವಿರಳ. ಹಾಗಿದ್ದಲ್ಲಿ ಗವಾಸ್ಕರ್ ಮತ್ತು ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಗಳಸ್ಯ ಕಂಠಸ್ಯರಾದರು. ವಿಶ್ವನಾಥ್ ಅವರ ಪ್ರತಿಭೆಗೆ ದಂಗಾದ ಸುನಿಲ್, ಅವರ ಸ್ನೇಹ ಎಷ್ಟರ ಮಟ್ಟಿಗೆ ಇತ್ತೆಂದರೆ ವಿಶ್ವನಾಥ್‌ಗೆ ಅವರ ತಂಗಿ ಕವಿತಾರನ್ನು ಕೊಟ್ಟು ಮದುವೆ ಮಾಡಿದರು! ಇದೊಂದು ಕರ್ನಾಟಕ -ಮಾಹಾರಾಷ್ಟ್ರದ ಅಪೂರ್ವ ಮಿಲನ!

ಗವಾಸ್ಕರ್ ಕ್ರಿಕೆಟ್‌ನ ಹೊರತು ಒಂದು ಅದ್ಭುತ ಕಾರ್ಯವನ್ನು ಮಾಡಿದ್ದಾರೆ. ನಾನು ಆಗ ಮುಂಬಯಿಯಲ್ಲಿ ಇದ್ದೆ. 1993ರಲ್ಲಿ ಬಾಬ್ರಿ ಮಸೀದಿ ಒಡೆಯಲು ಹೋದ ಕಾರಣದಿಂದ ಮಧ್ಯೆ ಆದ ಕೋಮುವಾರು ಗಲಭೆಯಲ್ಲಿ ಒಂದು ದಿನ ಸಂಜೆ, ಗವಾಸ್ಕರ್ ಇದ್ದ ಅಪಾರ್ಟ್‌ಮೆಂಟಿನ ಹತ್ತಿರ ಟ್ಯಾಕ್ಸಿಯಲ್ಲಿ ಕುಳಿತ ಒಂದು ಅನ್ಯ ಜಾತಿಯ ಸಂಸಾರವನ್ನು ಮುಂಬಯಿಯ ಪ್ರಮುಖ ಜಾತಿಯ ಗುಂಪೊಂದು ಅವರನ್ನು ಅಟ್ಟಿಸಿಕೊಂಡು ಬರುತ್ತಿತ್ತು. ಆಗಿನ ವಾತಾವರಣ ಹ್ಯಾಗಿತ್ತೆಂದರೆ, ಮಾತು ಮಾತಿಗೂ, ‘ಕಡಿ, ಕೊಚ್ಚು, ಕೊಲ್ಲು’ ಅನ್ನುವ ಶಬ್ಧಗಳೇ ಕೇಳಿಬರುತ್ತಿದ್ದವು, ಅಂಥ ಘಟನೆಗಳು ನಡೆಯುತ್ತಿದ್ದವು. ಟೆರೆಸ್ಸಿನಿಂದ ಅವರನ್ನು ಅಟ್ಟಿಸಿಕೊಂಡು ಬರುತ್ತಿದ್ದ ಗುಂಪನ್ನು ಗಮನಿಸಿದ ಗವಾಸ್ಕರ್ ಹೆಂಡತಿ ಮಾರ್ಷನಿಲ್‌ಗೆ ಪೋಲೀಸರನ್ನು ಕರೆಯಲು ಹೇಳಿ, ಕೆಳಗಿಳಿದು ಟ್ಯಾಕ್ಸಿಯ ಮುಂದೆ ಓಡಿ ‘ಮೊದಲು ನನ್ನನ್ನು ಹೊಡೆದು, ಆಮೇಲೆ ನೀವು ಅವರನ್ನು ಹೊಡೆಯಬಹುದು’ ಎಂದು ಅಡ್ಡ ನಿಂತರು. ಇದು ಉದ್ರೇಕಗೊಂಡ ಗುಂಪಿಗೆ ತೀರ ಅನೀರೀಕ್ಷಿತವಾಗಿತ್ತು! ಗವಾಸ್ಕರ್ ಎದುರಿಗೆ ಅಡ್ಡ ನಿಲ್ಲಬಹುದು ಎಂದು ಯಾರೂ ಊಹಿಸಿರಲಿಲ್ಲ. ‘ಇದರಲ್ಲಿ ನೀನು ತಲೆ ಹಾಕಬೇಡ’ ಎಂದು ಎಚ್ಚರ ಕೊಟ್ಟ ಗುಂಪಿನ ಮುಂದೆ ಪೋಲೀಸರು ಬರುವ ತನಕ ಧೈರ್ಯವಾಗಿ ನಿಂತರು ಗವಾಸ್ಕರ್. ಅವರ ಧೈರ್ಯವನ್ನು ನೋಡಿ ದಂಗಾಗಿ ಗುಂಪು ಹಿಂದೆ ಸರಿಯಿತು. ಗವಾಸ್ಕರ್ ಅವರ ದಿಟ್ಟ ಮನೋಭಾವ, ಆತ್ಮ ವಿಶ್ವಾಸ, ಸಹಾನುಭೂತಿ ಎಲ್ಲರ ಮನಸ್ಸು ಸೆಳೆಯಿತು. ಅವರಿಂದ ಆ ಸಂಸಾರಕ್ಕೆ ಎರಡನೇ ಜೀವನ ಪಡೆದಹಾಗೆ ಆಯಿತು. ಘರ್ಷಣೆಯಾಗಿದ್ದರೆ ಗವಾಸ್ಕರ್ ಅವರಿಗೂ ಪ್ರಾಣದ ಹಾನಿ ಇರುತ್ತಿತ್ತು. ಅದು ಯಾವುದನ್ನೂ ಲೆಕ್ಕಿಸದೆ ಪ್ರಾಣದ ಭಯದಿಂದ ಓಡುತ್ತಿದ್ದ ಸಂಸಾರದ ರಕ್ಷಣೆಗೆ ನಿಂತರು. ಅವರ ಸಮಯಸ್ಪೂರ್ತಿ, ಕೆಚ್ಚೆದೆಯ ಶೌರ್ಯ ಬಹಳ ಮೆಚ್ಚಬೇಕಾದ ವಿಷಯ.

ಒಂದು ಸಲ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಕರ್ನಾಟಕದ ಹೆಸರಾಂತ ಸ್ಪಿನ್ ಬೋಲರ್ ರಘುರಾಂ ಭಟ್ ಬೋಲಿಂಗ್ ಮಾಡುತ್ತಿದ್ದಾಗ, ಅವರ ಬೋಲಿಂಗ್ ಅನ್ನು ಎದುರಿಸಲು ಮುಂಬಯಿಯ ಬ್ಯಾಟ್ಸ್ಮನ್‌ ಎಲ್ಲರೂ ಕಷ್ಟ ಪಡುತಿದ್ದರು. ಆಗ ಆಡುತ್ತಿದ್ದ ಗವಾಸ್ಕರ್ ಎಡಗೈಲಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದರು! ಆಗ ಅಲ್ಲಿ ಆಟ ನೋಡುತ್ತಿದ್ದ ಪಬ್ಲಿಕ್‌ಗೆ ಸಿಕ್ಕಾ ಪಟ್ಟೆ ಕೋಪ ಬಂತು. ಗವಾಸ್ಕರ್ ಕರ್ನಾಟಕ ಬೋಲರ್‌ಅನ್ನು ಅವಮಾನ ಮಾಡುವುದಕ್ಕೆ ಹಾಗೆ ಮಾಡಿದರೆಂದು ಭಾವಿಸಿದರು. ಆದರೆ ಆಮೇಲೆ ಗೊತ್ತಾಯಿತು. ರಘುರಾಂ ಭಟ್ಟರ ಬೊಲಿಂಗ್‌ಅನ್ನು ನಿಭಾಯಿಸುವುದಕ್ಕೆ ಅವರು ಎಡಗೈಲಿ ಆಟವಾಡಿದರೆ ಮತ್ರ ಸಾಧ್ಯವೆಂದು ಹಾಗೆ ಮಾಡಿದರು ಎಂದು. ಅಂಪೈರುಗಳಿಗೆ ಮುಂಚೆಯೇ ಹೇಳಿ ಅವರ ಅಪ್ಪಣೆ ಪಡೆದು ಅವರು ಎಡಗೈಲಿ ಆಡಿದರು. ಒಂದಿಬ್ಬರು ಪ್ರೇಕ್ಷಕರು, ‘ಮೈದಾನಕ್ಕೆ ನುಗ್ಗಿ ಎರಡು ಏಟು ಕೊಡೋಣ ಅಂತ ಯೋಚಿಸಿದ್ದೆವು, ಆದರೆ ಅಲ್ಲಿದ್ದ ಯಾರೋ ಹಿರಿಯರು, ಗವಾಸ್ಕರ್ ಏನಾದರೂ ಕನಾರ್ಟಕದ ಅಳಿಯ. ನಮ್ಮ ವಿಶ್ವನಾಥ್ ಅವರ ತಂಗಿಯನ್ನು ಮದುವೆಯಾಗಿದ್ದಾರೆ.. ನಾವು ವಿಪರೀತಕ್ಕೆ ಹೋಗಬಾರದು’ ಎಂದು!

ಸ್ವಲ್ಪ ವರ್ಷದ ಹಿಂದೆ ಐಪಿಎಲ್ ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ವಿಷಯಗಳು ಹೊರಗೆ ಬಂದಾಗ, ಭಾರತದ ಉಚ್ಚ ನ್ಯಾಯಾಲಯ, ಗವಾಸ್ಕರ್ ಅವರನ್ನು ಐಪಿಎಲ್ ಕಮಿಷನರ್ ಆಗಿ ನೇಮಿಸಿ, ಆ ವರ್ಷದ ಐಪಿಎಲ್ ಅವರ ನೇತೃತ್ವದಲ್ಲಿ ನಡೆಸಲು ತೀರ್ಮಾನಗೊಂಡಿತು.

ಗವಾಸ್ಕರ್ 1974ರಲ್ಲಿ ಮರಾಠಿ ಸಿನಿಮ ‘ಸಾವ್ಲಿ ಪ್ರೇಮಚಿ’ ದಲ್ಲಿ ಅಭಿನಯ ಮಾಡಿದರು. 1988ರಲ್ಲಿ ನಾಸೀರುದ್ದಿನ್ ಷಾ ಮಾಡಿದ ಸಿನಿಮಾ ‘ಮಲಾಮಾಲ್’ ನಲ್ಲಿ ಸುನಿಲ್ ಗವಾಸ್ಕರ್‌ಆಗಿಯೇ ಕಾಣಿಸಿಕೊಂಡರು. ಅಲ್ಲಿಗೆ ಅವರ ಫಿಲ್ಮಿ ದುನಿಯ ಮುಗಿಯಿತು.

ಭಾರತ ಸರ್ಕಾರದ ‘ಪದ್ಮ ಭೂಷಣ’ ದಿಂದ ಅಲಂಕೃತರಾದ ಗವಾಸ್ಕರ್ ಅವರು ಅನೇಕ ಪುಸ್ತಕಗಳನ್ನು ಬರೆದು, ಕಾಮೆಂಟರಿ ಮೂಲಕ ಕ್ರಿಕೆಟ್‌ನ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ.

ಎಪ್ಪತ್ತಮೂರರ ಗವಾಸ್ಕರ್ ಈಗಲೂ ಆರೋಗ್ಯವನ್ನು ಕಾಪಾಡಿಕೊಂಡು ಎಲ್ಲಾ ದೇಶಗಳಿಗೆ ಹೋಗಿ ಕಾಮೆಂಟರಿ ಮಾಡಿ ಬರುತ್ತಾರೆ. ಅವರ ಪುತ್ರ ರೋಹನ್ ಗವಾಸ್ಕರ್ ಕ್ರಿಕೆಟ್ ಅಟಗಾರನಾಗಿ ಶುರು ಮಾಡಿದರೂ ಅದರಲ್ಲಿ ಮುಂದೆ ಬರಲಾಗದೆ ಅವರೂ ಕಾಮೆಂಟರಿ ವೃತ್ತಿಗೆ ಇಳಿದಿದ್ದಾರೆ.

ಮುಂದಿನ ಸರ್ತಿ ‘ಲಿಟ್ಲ್ ಮಾಸ್ಟರ್’ಗಳಾದ ಗುಂಡಪ್ಪ ವಿಶ್ವನಾಥ್ ಮತ್ತು ಸಚಿನ್ ಟೆಂಡೂಲ್ಕರ್ ಅವರನ್ನು ಈ ಸರಣಿಯಲ್ಲಿ ಕಾಣೋಣ!