ಕ್ರಿಕೆಟ್ ಮ್ಯಾಚುಗಳ ಉತ್ಕಟತೆಯ ಅಡಿಯಲ್ಲಿ, ಆಸೀ ನಟ ಹೀತ್ ಲೆಡ್ಜರ್‌ನ ಮರಣದ ರೋಚಕತೆಯ ಅಡಿಯಲ್ಲಿ ಈ ನಾಡು ಒಂದು ಮುಖ್ಯವಾದ ಹೆಜ್ಜೆ ಇಡಲು ತಡವರಿಸುತ್ತಿದೆ. ತನ್ನೊಳಗಿನ ಹುಣ್ಣೊಂದರ ಮೇಲೆ ಕೈಸವರಿಕೊಳ್ಳಲು ಹವಣಿಸುತ್ತಿದೆ. ಇದು ಸಾಮಾಜಿಕವೂ, ಸಾಮುದಾಯಿಕವೂ, ರಾಜಕೀಯವೂ, ಎಲ್ಲಕ್ಕಿಂತ ಮಿಗಿಲಾಗಿ ವಯ್ಯಕ್ತಿಕವೂ ಅದ ಹೆಜ್ಜೆ. ವಯ್ಯಕ್ತಿಕ ಎಂದೊಡನೆ ಎಲ್ಲರೂ ಒಂದೇ ತಾಳಕ್ಕೆ ಹೆಜ್ಜೆಯಿಕ್ಕುತ್ತಾರೆಂದಲ್ಲ. ಆದರೆ ತಮ್ಮ ಹೆಜ್ಜೆ ಯಾವ ದಿಕ್ಕಲ್ಲಿ, ಯಾವ ತಾಳಕ್ಕೆ ಎಂದು ಕಂಡುಕೊಳ್ಳಲಂತೂ ಇದು ಮುಖ್ಯವಾದ ಗಳಿಗೆ. ತಟಸ್ತ ಮುಖಗಳ ಹಿಂದಿನ ಮಗ್ನತೆ, ನಗುವ ಮುಖದ ಹಿಂದಿನ ವಿಷಾದ, ಗಂಟಿಕ್ಕಿದ ಮುಖದ ಹಿಂದಿನ ಆತಂಕ ಎಲ್ಲಕ್ಕೂ ಅರ್ಥವಿರುವ ಗಳಿಗೆ.

ಆಸ್ಟ್ರೇಲಿಯಾದಲ್ಲಿ ಬಿಳಿಯ ಜನ ಕಾಲಿಟ್ಟಾಗಿನಿಂದ ನಡೆದಿರುವ ಅಪಚಾರ, ಹಿಂಸೆ, ಕಗ್ಗೊಲೆ ಈ ನಾಡಿನ ಚರಿತ್ರೆಯ ಕಹಿ ತಿರುಳು. ನಿರಾಕರಿಸಲಾಗದಂತದು. ಆದರೂ ಅವುಗಳಿಗೆ ಸಮಜಾಯಿಷಿ, ತರ್ಕ ಎಲ್ಲವನ್ನೂ ಕೇಳಿ ಆಗಿದೆ. ಧರ್ಮ, ಆಡಳಿತ, ಕಾನೂನು ಎಲ್ಲವೂ ಈ ನಾಡಿನ ಆದಿನಿವಾಸಿಗಳ ವಿರುದ್ಧ ಸಮರ ಹೂಡಿದ್ದು ಅಲ್ಲಗಳೆಯಲಾರದ್ದು . ಈ ಎಲ್ಲದರಿಂದ ಮತ್ತು ಅದಕ್ಕಿಂತ ಮುಖ್ಯವಾಗಿ ಅವುಗಳ ನಿರಾಕರಣೆಯಿಂದ ಎಲ್ಲರ ಎದೆಯಲ್ಲೂ ಕಗ್ಗಂಟೊಂದು ಕೂತಂತಾಗಿದೆ. ಆ ಗಂಟಿನ ಭಾರ ಇಳಿಸುವ ಕೆಲಸ ಸುಲಭದ್ದಲ್ಲ. ಆ ದಿಕ್ಕಿನಲ್ಲಿ ಒಂದು ಪು‌ಟ್ಟ ಹೆಜ್ಜೆ – ಈ ನಾಡಿನ ಆದಿನಿವಾಸಿ ಅಬಾರಿಜಿನ ಸಮುದಾಯದ ಬಳಿ ಕ್ಷಮೆ ಕೇಳುವುದು. ಹಿಂದಿನ ಹವರ್ಡ್ ಸರ್ಕಾರದ ಮೊಂಡುತನದಿಂದ ತುಂಬಾ ಸರಳವಾಗಿ ಕಾಣುವ ಈ ಹೆಜ್ಜೆಯನ್ನು ಈ ನಾಡು ಇಡಲೇ ಇಲ್ಲ. ಅದಕ್ಕಾಗಿ ಹಲವಾರು ಕರೆಗಳು ಬಂದವು. 2000ದ ‘ಸಾರಿ ಡೇ’ ಅಂಥದ್ದೊಂದು. ಈ ಶತಮಾನವನ್ನು ಹೊಸದಾಗಿ ಕಟ್ಟುವ ಕಾತರದಿಂದ ನೂರಾರು ಸಾವಿರ ಜನ ಈ ದೇಶದ ಎಲ್ಲ ಊರಿನ ದೊಡ್ಡ ಸೇತುವೆಗಳನ್ನ ಆ ದಿನ ಸಾಂಕೇತಿಕವಾಗಿ ದಾಟಿದರು. ಅಬಾರಿಜಿನಗಳ ಬಳಿ ಕ್ಷಮೆ ಕೋರುವಂತೆ ಸರ್ಕಾರವನ್ನು ಒತ್ತಾಯಿಸಿದರು – ಗೋರ್ಕಲ್ಲಿನ ಮೇಲೆ ಮಳೆಗರೆದಂತಾಯಿತು ಅಷ್ಟೆ.

ಹಾಗಾಗಿಯೆ ಈಗಿನ ಈ ಕ್ಷಮಾಪಣೆ ದಿಢೀರನೆ ಆದುದಲ್ಲ. ಇದಕ್ಕೆ ಸದ್ಯದ ಚರಿತ್ರೆಯಲ್ಲಿ ಹಲವಾರು ದಶಕಗಳ ಕತೆಯಿದೆ. ಅರವತ್ತರ ದಶಕದಲ್ಲಿ ಬಸ್ಸು ವ್ಯಾನುಗಳಲ್ಲಿ ಅಬಾರಿಜಿನಗಳೇ ‘ಫ್ರೀಡಂ ರೈಡ್’ ಎಂದು ಊರೂರಿಗೂ ಹೋಗಿ, ಕರಿಯರಿಗೆ ಪ್ರವೇಶವಿಲ್ಲದ ಈಜುಕೊಳಗಳಲ್ಲಿ ಈಜಿ, ಒಳಬಿಡದ ಪಬ್ ಬಾರ್‍ಗಳನ್ನು ಹೊಕ್ಕು ತಮ್ಮ ಹಕ್ಕುಗಳನ್ನು ಎತ್ತಿಹಿಡಿಯಲು ಹೋರಾಡಿದ್ದರು. ಕಡೆಗೂ ಅಬಾರಿಜಿನಗಳಿಗೆ 1967ರಲ್ಲಿ ಮತ ಚಲಾಯಿಸುವ ಹಕ್ಕು ದೊರಕಿತು. ಅಷ್ಟಾದರೂ, ಆಮೇಲೂ ಅವರ ಮೇಲಿನ ದಬ್ಬಾಳಿಕೆ ನಿಲ್ಲಲೇ ಇಲ್ಲ. ಈ ದಬ್ಬಾಳಿಕೆಯ ಬೇರು ಕರಿ-ಬಿಳಿ ಎಂಬ ಭಾವದಲ್ಲಿ ಇರುವುದರಿಂದ ಇದನ್ನು ತೊಡೆಯಲು ತಲೆಮಾರುಗಳೇ ಹಿಡಿಯಬಹುದೆಂಬ ಕಹಿ ಸತ್ಯ ಮೈದೋರಿತು. 1992 ರಲ್ಲಿ ಅಂದಿನ ಪ್ರಧಾನಿ ಪಾಲ್ ಕೀಟಿಂಗ್ ‘ರೆಡ್‌ಫರ್ನ್ ಸ್ಪೀಚ್’ ಕೊಟ್ಟಾಗ ಅದು ಹಲವರ ಮನಸ್ಸು ಮುಟ್ಟಿತು, ಹಾಗೆಯೇ ಹಲವರ ಮನಸ್ಸು ಮುರಿಯಿತು. ಆ ಸ್ಪೀಚಿನಲ್ಲಿ ಬಿಳಿಯ ಜನರು ಮಾಡಿದ ಎಲ್ಲ ಅಪರಾಧಗಳನ್ನು ಪಟ್ಟಿಮಾಡಿ ಗುರುತಿಸಲ್ಪಟ್ಟಿತು. ಆದರೆ ಕ್ಷಮಾರ್ಪಣೆ ಇರಲಿಲ್ಲ. ನಂತರ ಬಂದ ಪ್ರಧಾನಿ ಜಾನ್ ಹವರ್ಡ್‌ನ ದಶಕದಲ್ಲಿ ಯಾವ ಮುಂದಾಳತ್ವವೂ ಇಲ್ಲದೆ, ಕ್ಷಮಾರ್ಪಣೆ ಇರಲಿ, ಕರಿ-ಬಿಳಿ ಸಂಬಂಧವೇ ಹಲವಾರು ದಶಕಗಳಷ್ಟು ಹಿಂಜರಿದು ಬಿಟ್ಟಿತು.

ಫೆಬ್ರವರಿ 13ರಂದು ಈ ಎಲ್ಲವನ್ನೂ ಒಳಗೊಳ್ಳುವಂತೆ, ಎಲ್ಲ ಅಮಾನುಷಗಳಿಗೂ ಕ್ಷಮೆಯಾಚಿಸುವುದನ್ನು ತುಂಬಾ ಎದೆಗಾರಿಕೆಯಿಂದ ಇಂದಿನ ಪ್ರಧಾನಿ ಕೆವಿನ್ ರಡ್ ಮಾಡಿದ್ದಾನೆ. ನಾಡಿನ ಪಾರ್ಲಿಮೆಂಟಿನಲ್ಲಿ ನಿಂತು, ‘ನಾವು, ಬಿಳಿಯರು ಮಾಡಿದ ಅಪರಾಧಕ್ಕೆ, ಕ್ಷಮೆ ತೋರಿ’ ಎಂದು ಕೇಳಿದ್ದಾನೆ. ಬಿಳಿಯರ ಎಲ್ಲ ಅಪರಾಧಗಳಿಗೆ ಸಂಕೇತದಂತಿರುವ, “ಕಳವಾದ ತಲೆಮಾರು” ಇಲ್ಲಿ ಉಲ್ಲೇಖಗೊಂಡಿತು. ಅಬಾರಿಜಿನಿ ಎಂಬ “ಮಾನವ ತಳಿ” ನಶಿಸುವಂಥದ್ದು ಎನ್ನಲು ಸಲ್ಲದ ವೈಜ್ಞಾನಿಕ ಚಿಂತನೆಗಳನ್ನು ಬಳಿಸಿಕೊಂಡು, ನೆಲಕ್ಕಾಗಿ, “ಪರಿಶುದ್ಧತೆ”ಗಾಗಿ ಅವರನ್ನು ಕೊಂದವರು ಒಂದು ಕಡೆಯಾದರೆ, ಅವರನ್ನು ಉದ್ಧರಿಸುತ್ತೇವೆ ಎನ್ನುತ್ತಾ ತಂದೆ ತಾಯಂದಿರಿಂದ ಮಕ್ಕಳನ್ನು ಬೇರ್ಪಡಿಸಿ, ಅಬಾರಿಜಿನಿಗಳ ಸಂಸ್ಕೃತಿ, ನುಡಿ, ಮನೆ, ಮನಗಳನ್ನು ಮುರಿದಿದ್ದರು. ತಮ್ಮ ಕುಟುಂಬದ ಜತೆಗಿನ ಅಮೂಲ್ಯ ಸಂಬಂಧವನ್ನು ಕಳೆದುಕೊಂಡು ಅಂತರಪಿಶಾಚಿಗಳಾಗಿ ತಿರುಗಿದ ತಲೆಮಾರೇ ಸೃಷ್ಟಿಯಾಯಿತು. ಆ ಬಿಳಿಯರ ಕಾನೂನಿನ ಪರಿಣಾಮ ಇಂದಿಗೂ ನಮ್ಮ ನಡುವೆ ಇರುವುದು “ಕಳವಾದ ತಲೆಮಾರಿನ” ಉಲ್ಲೇಖಕ್ಕೆ ಹೆಚ್ಚು ಅರ್ಥಕೊಟ್ಟಿದೆ.

ಅದೇ ಮಧ್ಯಾಹ್ನ ಸಿಡ್ನಿಯ ಫಾಸ್ಟ್‌ ಪುಡ್ ಒಂದರಲ್ಲಿ ಕೂತು ಗಬಗಬ ತಿನ್ನುತ್ತಿದ್ದೆ. ನನ್ನೆದುರು ಹತ್ತನ್ನೆರಡು ವರ್ಷದ ಇಬ್ಬರು ಪುಂಡ ಹುಡುಗರು ಬಂದು ಕೂತರು. ಹಲೋ ಎಂದು ಮಾತಾಡಿಸಿದರು. ಏನ್ರೋ ಸಮಾಚಾರ ಎಂದೆ. ಕುಣಿವ ಕಣ್ಣು ನಗುವ ಮುಖಗಳ ಹಿಂದೆ ಆತಂಕದ ಒಂದು ತೆಳು ಪರದೆ ಇತ್ತು. ಸ್ಕೂಲಿಗೆ ಹೋಗಿಲ್ವ ಅಂತ ಕೇಳಿದೆ. ತಾವು ಬಿಹೇವಿಯರ್‍ ಪ್ರಾಬ್ಲಮ್ ಇರುವ ಮಕ್ಕಳ ಶಾಲೆಗೆ ಹೋಗೋದು ಅಂದರು. ಮಕ್ಕಳಿಗೆ ಹೊಂದುವಂತ ಹೊತ್ತುಗಳಲ್ಲಿ ಕ್ಲಾಸಿರುತ್ತವೆ ಅಂದರು. ತಾವಿರುವುದು ಝೆಟ್‌ಲಾಂಡಿನಲ್ಲಿ ಅಂದರು. ಸಿಟಿಯಲ್ಲಿ ಏರಿಸಿದ್ದ ದೊಡ್ಡ ಪರದೆಯಲ್ಲಿ ಪ್ರಧಾನಿ ಭಾಷಣವನ್ನು ನೋಡಲು ಬಂದಿದ್ದೆವು ಅಂದರು. ಬಿಳಿಯರಂತೆ ಕಂಡರೂ ಭಾಗಶಃ ಅಬಾರಿಜಿನಿಗಳಿರಬೇಕು ಅಂತ ಊಹಿಸುವುದು ಕಷ್ಟವಾಗಲಿಲ್ಲ. ಅತ್ತಿತ್ತ ಓಡಾಡುವ ಹುಡುಗಿಯರ ಮೊಲೆ ತೊಡೆ ಅವರ ತಲೆ ಕೆಡಿಸುತ್ತಿತ್ತು. ವಯಸ್ಸಿಗೆ ಸಹಜವಾಗಿ ಕುಲುಕುಲು ನಗುತ್ತಿದ್ದರು. ಒಬ್ಬರಿಗೊಬ್ಬರು ಕಣ್ಣು ಹೊಡೆದುಕೊಳ್ಳುತ್ತಿದ್ದರು. ತುಂಬಾ ಡಿಸ್ಟ್ರಾಕ್ಟ್ ಆಗುತ್ತಿದ್ದರು. ನಡುನಡುವೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ, ನನ್ನ ಶರ್ಟಿನ ಬಗ್ಗೆ ವಿಚಾರಿಸಿದರು. ಒಬ್ಬ ಹುಡುಗ ಹಣ ಕೇಳಿದ. ಮತ್ತೊಬ್ಬ ಅವನ ಭುಜಕ್ಕೆ ಹೊಡೆದು ಥೂ ಎಂದು ಬಯ್ದ. ನಾಚಿಕೆಯಾದವರಂತೆ ಬೈ ಹೇಳಿ ಓಡಿದರು. ನಿಮಗೆ ಒಳ್ಳೆಯದಾಗಲಿ ಎಂದು ಮನದಲ್ಲೇ ಹೇಳಿಕೊಂಡದ್ದೂ ಆತಂಕದಿಂದ ನಡುಗಿದಂತೆ ನನಗೇ ಅನಿಸಿತು.

ನನ್ನ ಮನಸ್ಸು ಇಂಡಿಯಾದ ಹಿಂದುಳಿದವರ ಸುತ್ತ ಸುತ್ತಿತು. ನಾವೆಲ್ಲಿದ್ದೇವೆ ಎಂದು ಕೇಳಿಕೊಂಡಿತು. ಅದನ್ನು ಇನ್ನಾವಗಲಾದರೂ ಹಂಚಿಕೊಳ್ಳುಬೇಕು ಅನಿಸುತ್ತಿದೆ.

ಕ್ಷಮಾಪಣೆ ಬರಿ ಅಬಾರಿಜಿನಗಳಿಗೆ ಮಾತ್ರವಲ್ಲ ಬಿಳಿಯರು ಹಾಗು ಇನ್ನುಳಿದವರ ಮನಸ್ಸಿಗೂ ಅತಿ ಮುಖ್ಯ. ಇದನ್ನು ಹಲವರು ಈಗಾಗಲೇ ಹೇಳಿದ್ದಾರೆ. ಹೊಸದೇನಲ್ಲ. ಕ್ಷಮೆಯೊಂದರಿಂದಲೇ ಏನೂ ಆಗುವುದಿಲ್ಲ. ಆದರೆ ಹತ್ತು ಹಲವು ಸದ್ಭಾವಕ್ಕೆ ಅದು ಕಾರಣವಾಗಬಲ್ಲದು. ಎಲ್ಲಕ್ಕಿಂತ ಮುಖ್ಯವಾಗಿ ಕ್ಷಮೆ ಕೇಳುವ ಮನಸ್ಸಿಗೂ ಅದು ಶಾಂತತೆ ತರುಬಲ್ಲದು.