ಅವ್ವ ಅತ್ತಿ ಹೇಳಿದ ಮಾತು, ಮೈನೆರೆದ ಮ್ಯಾಗ ಎಲ್ಲಾರೂ ನನ್ನ ಮಾತಾಡಿಸಿದ ರೀತಿ, ನನಗೆ ನನ್ನಲ್ಲಾದ ಬದಲಾವಣೆ, ಇಲ್ಲಿವರೆಗೂ ಇದ್ದ ಶಿವಮ್ಮ ಇಗಿರೊ ಶಿವಮ್ಮ ಬೇರೆನಾ? ಅಂತನ್ನಿಸಿ, ಒಮ್ಮೆಲೆ ನಾಕು ದಿಕ್ಕಿಂದಾನೂ ಒಂದೊಂದಾಗಿ ಇಟ್ಟಿಗೆ ಇಟ್ಟು ಅದ್ಯಾವುದೊ ಗೋಡೆ ನಿಧಾನವಾಗಿ ಕಟ್ಟಾಕತಾರ ಅಂಬಂಗಾತು, ಕಾಣದೆ ಇರೊ ಹಗ್ಗಾನ ನಿಧಾನವಾಗಿ ಹೂವಿಂದ ಸುತ್ತಿ, ಬಾಯಿಗೆ ಬೆನ್ನಿಗೆ ಕೈ ಕಾಲಿಗೆ ಗಟ್ಟಿಯಾಗಿ ಬಿಗದು, ಅದರ ಮ್ಯಾಲೆಲ್ಲ ‘ನೀ ಹೆಣ್ಣು, ನೀ ದೊಡ್ಡಾಕಿ, ನೀ ಹೆಣ್ಣು, ನೀ ಹಿಂಗಿರಬೇಕು, ನೀ ದೊಡ್ಡಾಕಿ’ ಅಂತ ಸೂಕ್ಷ್ಮ ಕುಸುರಿ ಕಲೆ ಮಾಡಿ, ಆ ನಾಲ್ಕು ಗ್ವಾಡಿಯೊಳಗ ಬಂಧಿಸಿದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಐದನೆಯ ಬರಹ
ಆ ಆಫಿಸ್ ಗೋಡಿಮೇಲೆ ಬರದಿದ್ದ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಅನ್ನೊ ಗಾದೆಯ ಮೇಲಿನ ಬಣ್ಣ ಮಾಸಿಹೋಗಿತ್ತು!
ಹಿಂಗ ಅವತ್ತು ಸಾಲಿಯೊಳಗ ಮೇಡಂ ಪಾಠ ಕೇಳಿ, ಒಂಥರಾ ಗೊಂದಲ ಆದಂಗಾಯ್ತು, ಆಗಿನ ಕಾಲದಾಗ ಹೆಣ್ಮಕ್ಕಳು ಓದ್ಬೊಕಂತ ಅಷ್ಟೆಲ್ಲಾ ಸಾವಿತ್ರಿಬಾಯಿ ಫುಲೆ ಅವರು ಹೋರಾಟ ಮಾಡ್ಯಾರ ಆದ್ರ, ನಮ್ಮೂರಾಗಿನ್ನೂ ಹುಡುಗ್ಯಾರಂದ್ರ ‘ಮನಿ ಕೆಲಸ ಮಾಡಾಕ ಹುಟ್ಯಾವಿವು’ ಅನ್ನಂಗ ಯಾಕ್ ನಡಸ್ಕೊತಾರ. ಆ ಗೌರಿ ಕೊಳ್ಳಾಗಿನ ತಾಳಿ ನೋಡಿ, ಅವಳ ಹತ್ರ ಹೋಗಿ ಕೇಳೆಬಿಟ್ಟೆ!
‘ಅಲಲೇ ಗೌರಿ, ನಿನಿಗ್ಯ ಮದುವಾಗೈತ್ಯನು?’ ಅಂತ ಕೇಳಿದಾಗ ಗೌರಿ ಅದೊಂತರಾ ಗಾಬರಿ ಆಗಿ ಮತ್ತೆ ನಕ್ಕಂತ ಕಿವಿ ಹತ್ರ ಬಂದು ‘ಹೌದಲೇ, ನಂಗ ಹೋದ್ ವರ್ಸ ಮದುವಿ ಮಾಡ್ಯಾರ ಮನ್ಯಾಗ’ ಅಂದ್ಲು.
ಮತ್ತ ಆಕಿ ನಗ್ತಿರೊದು ನೋಡಿ ‘ಯಾಕ್ ಹಂಗ್ ನಗಾಕತಿಲೇ ಗೌರಿ’ ಅಂದೆ, ಅದಕ್ಕವಳು ‘ಲೇ ಮದುವ್ಯಾದ್ರ ಹೊಸ ಹೊಸ ಬಟ್ಟಿ ಕೊಡ್ತಾರ, ಹಂಗ ಹೊಸ ಬೆಂಡೋಲಿ, ಸರ, ಮೂಗ್ಬಟ್ಟು ಎಲ್ಲಾ ಸಿಗ್ತಾವ ಗೊತ್ತನು, ಇನ್ನೊಂದು ನಾಕ್ ತಿಂಗಳಷ್ಟ ಆಮೇಲೆ ನನ್ನ ಗಂಡನ ಮನಿಗೆ ಕಳಸ್ತಾರ ಅವಾಗ ಈ ಸಾಲಿ ಇರಲ್ಲ ಏನೂ ಇರಲ್ಲ’ ಅಂದು ಖುಷಿಯಿಂದ ನಕ್ಕು ಹೋದಳು.
ಮದುವ್ಯಾದ್ರ ಇಷ್ಟು ಆರಾಮಿರ್ತಾರ? ಹಂಗಾರ ನಮ್ಮತ್ತಿ ಯಾಕ್ ನಮ್ಮನಿಯೊಳಗೈತಿ? ಅಂತ ಯೋಚನೆ ಮಾಡ್ತಾ ಇರುವಾಗ ನಾಲ್ಕುವರಿ ಆಗಿ ಸಾಲಿ ಬಿಟ್ಟಿತ್ತು. ಮನಿಗೆ ಹೋಗಿ ನಿಂತಾಗ, ಅಂಗಳ ಹಂಗ ಕಸ ಇಟ್ಕೊಂಡು ಕುಂತಿತ್ತು, ಮುಸುರಿ ಹಂಗ ಬಿದ್ದಿದ್ವು, ಬಡಾ ಬಡಾ ಎಲ್ಲ ಮುಸುರಿ ತಿಕ್ಕಿ, ಕಸ ಹೊಡಿಬೆಕಂತ ಕಸಬಾರಿಗೆ ಹಿಡದಾಗ, ಈ ಐದಂಕಣದ ಮನಿ ಹೆಂಗಪ್ಪಾ ಗೂಡಸಾದು ಅನ್ನಸ್ತಿತ್ತು, ದೇವರ ಮನಿ, ಅಡಗಿಮನಿ, ಬಂಕ, ಗ್ವಾದಲಿ, ಹೊರಗಿನ ಅಂಗಳ ಎಲ್ಲಾ ನನ್ನ ನೋಡಿ ನಕ್ಕಂಗಾಕ್ಕಿತ್ತು, ಎಲ್ಲಾ ಕೋಣಿದು ಕಸ ಹೊಡದು ಅದರ ಮೂಲ್ಯಾಗ ಕುಂಪಿ ಮಾಡಿ, ಎಲ್ಲಾ ಕಸಾನೂ ಹೊರಗ ಚೆಲ್ಲುವಷ್ಟರಾಗ ಬೆವರು ನಡಾ ಬೆನ್ನಿನ್ಯಾಗ ನೀರು ಹರದಂಗ ಹರಿತಿತ್ತು, ಬೆನ್ನತಾಕ ಎಲ್ಲಾ ಬೆವರಿಂದ ಹಸಿ ಹಸಿ ಆಗಿರ್ತಿತ್ತು. ಅಷ್ಟೂ ಕಸ ಗೂಡಸಾದರಾಗ ಹೊಟ್ಟಿ ಅದೊಂತರಾ ಬ್ಯಾನ್ಯಾದಂಗಾಗಿ ಬಯಲಿಗೆ ಹೋದ್ರ, ಅಲ್ಲಿ ಸಂಜಿಗತ್ತಲಾಗಿ ಅಂಜಿಕಿ ಬರೋದು, ಅದಲ್ಲದ ಊರಾಗೆಲ್ಲ ಈ ಬಯಲಿನ ಬಗ್ಗೆ ಒಬ್ಬೊಬ್ರು ಒಂದೊಂಥರಾ ಹೇಳೊರು, ಅತ್ತಿ ಕೂಡ ಯಾವಾಗಲೂ ಹೇಳಾಕಿ
‘ಅಲ್ಲಲೇ ಬಯಲಿಗ್ ನಿನೊಬ್ಬಾಕಿನ ಹೋಗ್ಬಾಡ ಅಲ್ಲಿ, ಸುಡುಗಾಡು ಗಂಡಸರು ಅಡ್ಡಾಡತಾರ, ಹೆಣ್ಮಕ್ಕಳು ಯಾವಾಗ ಬರ್ತಾವಂತಾನ ಕಾಯ್ಕ್ಯಂತ ಕುಂತಿರ್ತಾವು ಸನೆಸಿಗಳು ತಂದು. ಹಿಂಗಾ ಒಂದಿನ ಆ ನಿಂಗಮ್ಮಕ್ಕ ಬಯಲಿಗೊಗ್ಯಾಳ ಒಬ್ಬಾಕಿನ, ಅವಾಗೆವತಾ ಒಬ್ಬಾತ ದೂರ ಹಲ್ಲ್ ಕಿಸಗಂತ ನಿಂತಗಂಡಿದ್ನಂತ, ಈಕಿ ನೋಡಿದ್ದಾ ತಡ, ಚಿಟ್ಟನಂಗ ಚೀರಿ ಚಂಬಿಗಿನ ಆತನ ಕಡಿಗೆ ಒಗದು ಮನಿಗೆ ಎದುಸುರು ಬುಟುಗಂತ ಓಡಿ ಬಂದ್ಲಂತ. ಅವತ್ತಿಂದ ಆ ಹುಡುಗಿ ಗಂಡಮಕ್ಕಳಂದ್ರ ದೂರ ಓಡುತ್ತ, ಯಾರತಾಕೂ ಅಷ್ಟು ಮಾತಾಡಗಲ್ಲ. ಆದ್ರ ಬಯಲಿಗೆ ಬಂದು ಹೆಣ್ಮಕ್ಕಳಿಗೆ ಕಾಟ ಕೊಡಾ ಆ ಸುಡುಗಾಡಿ ಯಾವುದಂತ ಇನ್ನೂ ಯಾರಿಗೂ ತಿಳಿದಿಲ್ಲ’
ಅತ್ತಿ ಹೇಳ್ತಿದ್ದ ಈ ಮಾತು ತಲ್ಯಾಗ ಗುಂಯ್ ಗುಟ್ಟಿದಂಗಾಗಿ, ಹೊಟ್ಟಿಬ್ಯಾನಿ ತಡಿಲಾರದ ಆದದ್ದಾಗಲಿ ಅಂತ ಬಯಲಿಗೋದೆ, ಹೊಟ್ಟೆನೋವು, ಸಂಕಟ, ಭಯ, ಎಲ್ಲಾ ಒಟ್ಟೊಟ್ಟಿಗೆ ಆದಂಗಾಗಿ ಜೋರಾಗಿ ನನ್ನಷ್ಟಕ್ಕೆ ನಾನೆ ಅತ್ತು ಕಣ್ಣೊರಿಸಿಗ್ಯಂಡ್ಯ. ಅವತ್ಯಾಕೊ ಏನೆನೊ ನೆನಪಾಗಿ ಒಳಗಿನ ದುಃಖ ಎಲ್ಲಾ ಹೊರಾಗ ಒತ್ತರಿಸಿ ಬಂದಂಗಾಯ್ತು, ನನಗ್ಯಾಕಿಂಗಾಗತೈತಿ ಅಂತ ಯೋಚನೆ ಮಾಡ್ತಾ ಮನಿಕಡಿಗೊದಾಗ ಅವ್ವ, ಅತ್ತಿ ಆಗ್ಲೆ ಬಂದಿದ್ರು.
ಅತ್ತಿ ನನ್ನ ನೋಡಿದ್ದೆ ಮಾತಿಗಿಳದ್ಲು;
‘ಅಲಾ…ಸುಬ್ಬಿ… ಒಬ್ಬಾಕೆ ಹೋಗಿದ್ಯ ಅಲ್ಲಿಗೆ, ಯವಾತನ ಬಂದು ಹಿಡಕಂಡೊಕ್ಕಾನ್ ನೋಡ್ ನಿನ್ನ’
‘ಯವ್ವಾ ಸುಂಕಿರಬೆ ಯತಿ!
ಮೊದ್ಲಾ ನನಿಗೆ ಜೀವದಾಗ ಜೀವಿದ್ದಿಲ್ಲ, ಅಂಜಿಕ್ಯಂತ ಹೋಗಿ ಬಂದಿನಿ, ನೀ ಇನ್ನಾ ಸ್ವಲ್ಪ ಅಂಜಸ್ಬ್ಯಾಡ ನನ್ನ’
‘ನಿನ್ನ ಯಾರ್ ಅಂಜಸ್ತಾರಲೇ ಖೋಡಿ, ಈ ಊರಾಗಿರಾ ಎಲ್ಲಾ ಹೆಂಗಸರು ಹಿಂಗ ಅಂಜಿಕ್ಯಂತ ಬಯಲಿಗೊಬೊಕು, ಎಲ್ಲಾ ಕಡಿಗೆ ಅಂಜಿಕ್ಯಂತ ಬಾಳೆ ಮಾಡಬೊಕು ನಾವು’ ಅಂತ ಕಟ್ಟಿಗಿ ಕುಂಪಿಗೆ ಕಟ್ಟಿಗೆ ಒಗದು ನನ್ನ ಜೊತೆ ಕಟ್ಟಿ ಮೇಲೆ ಕುಂತ್ಲು. ನನ್ನ ನೋಡುತ್ತಾ ಗಲ್ಲ ಹಿಂಡಿ ‘ಸ್ವಲ್ಪ ಚಾ ಮಾಡಿ ಕೋಡಾ ನಮ್ಮವ್ವʼ ಅಂದಾಗ, ನಾನು ಅಡಗಿ ಮನಿ ಕಡೆ ನಡದೆ.

ಅತ್ತಿ ಜೋರಾಗಿ ‘ಅಲಲೇ ಶಿವಮ್ಮ, ಇಲ್ಲಿ ಬಾ ಇಲ್ಲಿ ಅಂತ ನನ್ನ ತಿರುಗಿಸಿ ಅದೊಂತರಾ ನೋಡ್ತಾ ಕುಂತ್ಲು. ಮತ್ತೆ ನಿಧಾನಕ್ಕ
‘ಶಿವಮ್ಮ ಏನನ ಬಡಿಸಿಗ್ಯಂಡ್ಯನು ಕಾಲಿಗೆ, ಇಲ್ಲ ಬೆನ್ನಿಗೆ’
‘ಅತ್ತಿ… ನಾ ಏನೂ ಬಡಿಸಿಗ್ಯಂದಿಲ್ಲ’ ಅಂತ ಹಾಕಿದ್ದ ಲಂಗದ ಹಿಂದಿನ ಬದಿ ಹಿಡಿದೆ, ಲಂಗ ಪೂರ್ತಿ ರಕ್ತದ ಕಲಿ ಆಗಿತ್ತು, ಅದನ್ನ ನೋಡಿದ್ದೆ ಹೊಟ್ಟೆ ನೋವಾಗಿ, ಭಯದಿಂದ ಮತ್ತೆ ಅಳು ಬಂತು. ಅತ್ತಿ ನನ್ನ ಗಟ್ಯಾಗಿ ತಬ್ಬಿ ತಾನೂ ಅಳತೊಡಗಿದಳು. ನಮ್ಮಿಬ್ರನ್ನೂ ನೋಡಿದ ಅವ್ವ ಓಡಿ ಬಂದು ಅತ್ತಿ ಕಡೆ ನೋಡಿ
‘ಏನಾತಂಗೆ ಯಾಕss?
ಯಾಕಿಂಗ ಇಬ್ರೂ ಅಳಾಕತಿರಿ?’
ಅತ್ತಿ ಅಳುತ್ತಾ ಮತ್ತೆ ಅದರಲ್ಲೆ ಖುಷಿಗೊಂಡಂಗ
‘ಬೇ ಅಂಬಮ್ಮ… ನಿನ್ನ ಮಗಳು ಮೈ ನೆರದಾಳಂಗೆ ಯವ್ವಾ’ ಅಂದಾಗ ಅವ್ವ ಕೂಡ ತನ್ನ ಸೆರಗನ್ನ ಬಾಯಿಗಿಟ್ಟು
‘ಇನ್ನಾ ಸಣ್ಣದಿತ್ತಂಗೆ ನನ್ನ ಮಗಳು, ಇಷ್ಟು ಬಡಾನ ದೊಡ್ಡದಾತಲಂಗೆ, ಮೊದಲಿವರಪ್ಪಗ ಹೇಳಬೇಕು, ನೀರು ಹಾಕಬೊಕು, ಇವರ ಸಣ್ಣತ್ತಿ ನಾಗಮ್ಮಗ, ಹುಡುಗಿ ತಲಿಮ್ಯಾಗ ನೀರಾಕಾಕ ಕರಿಬೇಕು’ ಅಂತ ಓಡಾಡ ತೊಡಗಿದಳು. ಆದ್ರೆ, ಭಯದಲ್ಲಿದ್ದ ನನಗೆ ಅತ್ತಿ ಸಮಾಧಾನದಿಂದ ‘ನೋಡ್ ಶಿವು… ಏನಾಗಲ್ಲ, ಇದು ಒಂದು ವಯಸ್ಸಿನ್ಯಾಗ ಎಲ್ಲಾ ಹೆಣ್ಣ ಮಕ್ಕಳಿಗೆ ಆಗಾದ’ ಅತ್ತಿ ಮಾತು ಕೇಳಿ ಸ್ವಲ್ಪ ಧೈರ್ಯ ಬಂದಂಗಾದ್ರೂನು ಹೊಟ್ಟಿ ಹಿಂಡಿದಂಗಾಗಿ ನೋವಾಗೊದು ತಡಕೊಳ್ಳೊಕಾಗಲಿಲ್ಲ,
ಅತ್ತಿ ನನ್ನ ತೊಳಲಾಟ ನೋಡಲಾರದ,
‘ಶಿವು… ಇವಾಗ ನೀನು ಸಣ್ಣಾಕಿ ಅಲ್ಲ, ದೊಡ್ಡಾಕಿ ಆಗಿ. ಇನ್ನಾ ಹನ್ನೊಂದು ದಿನದಾಗ ನಿನಗ ಹೂ ಮುಡಸಿ ಎದ್ದೆಳಸ್ತಾರ, ಗೊತ್ತೇನು?!’ ಆಶ್ವರ್ಯ ಆಗಿ ನಾನು
‘ಬೇ…ಯತಿ! ನೀ ಏನೇನ ಹೇಳತೆವಾ ಯವ್ವ. ಎದ್ದೇಳಸಾದು, ಹೂ ಮುಡಸಾದಂದ್ರ?’
ಅತ್ತಿ ನಗುತ್ತಾ ಇಲ್ಲಿ ಕೇಳು ಹೇಳ್ತಿನಿ …
‘ಶಿವಮ್ಮ ಈಗ ಮೈನೆರದಿ ಅಲಾ, ಹಂಗ ಹುಡುಗ್ಯಾರು ಮೈನೆರದಾಗ, ಮೊದಲು ಅವರು ಸೋದರತ್ತಿನ ಕರಸ್ತಾರ ಆಕಿ ಮುತ್ತೈದೆ ಆಗಿರಬೊಕು. ಆಕಿ ಬಂದು ಮೈನೆರದ ಹುಡುಗಿ ತಲಿಗೆ ನೀರಾಕ್ತಾಳ, ಆಮೇಲೆ ಆಕಿಗೂ ನೀರಾಕ್ತಾರ. ಆಮ್ಯಾಗ ಆ ಹುಡುಗಿನ ಮನಿಯೊಳಾಗ ಒಂದು ಮೂಲ್ಯಾಗ ಕುಂದ್ರಸ್ತಾರ, ಒಂಭತ್ತಿನಕ್ಕ ಹನ್ನೊಂದಿನಕ್ಕ ಹಿಂಗ ಅವರವರ ನಡಿ ಇದ್ದಂಗ ಇಷ್ಟು ದಿನ ಆಕಿ ಅಲ್ಲೆ ಕುಂದ್ರಬೊಕು, ಮೊದಲನೆ ದಿನ ಅಕಿಗೆ ಗೋಧಿ ಹಿಟ್ಟಿಲೆ ಮಾಡಿದ್ ನಾಲ್ಕು ಸಣ್ಣ ಸಣ್ಣ ಗೋಧಿ ಕಡಬು ಮುಂದ ಇಡತಾರ, ಆ ಐದು ಗೋಧಿ ಕಡಬುಗಳ ನಡಕ ಒಂದರಾಗ ಬೆಳ್ಳುಳ್ಳಿ, ಅಡಕಿ, ಅಂಗನೂಲ, ಅರಿಶಿಣ ಕೊಂಬು ಹಂಗ ಒಂದು ಖಾಲಿ ಬಿಟ್ಟಿರತಾರ. ಹಿಂಗ್ ಐದು ಕಡಬು ಆಕಿ ಮುಂದಿಟ್ಟು ಒಂದೊಂದಾಗಿ ಮುಟ್ಟಾಕ ಹೇಳ್ತಾರ, ಆಗ ಆಕಿ ಮನಸಿಗೆ ಬಂದಿದ್ದನ್ನ ಮೊದಲು ಮುಟ್ಟಬೊಕು, ಹಂಗ್ ಮುಟ್ಟಿದಾಗ ಮೊದಲು ಅಡಕಿ ಇಲ್ಲಾ ಅರಿಶಿನ ಕೊಂಬು ಬಂತಂದ್ರ ಇಕಿ ಮುಂದ ಮದುವ್ಯಾದಾಗ ಮೊದಲು ಗಂಡ್ ಹಡಿತಾಳ, ಮೊದಲು ಆಕಿ ಬೆಳ್ಳುಳ್ಳಿ ಇಲ್ಲ ಅಂಗನೂಲ ಮುಟ್ಟಿದ್ಲಂದ್ರ ಹೆಣ್ಣು ಹಡಿತಾಳ, ಖಾಲಿ ಇರಾದನ್ನೆನಾದ್ರೂ ಮುಟ್ಟಿದ್ರೆ ಆಕಿ ಬಂಜಿ ಆಗ್ತಾಳ, ಅದು ಬಂಜಿ ಕಡುಬು, ಅದಕ್ಕಾ ಅಕಿಗೆ ಮಕ್ಕಳಾ ಆಗಂಗಿಲ್ಲಂಥ ಅರ್ಥ, ಇದಾದಮ್ಯಾಲ ಹುಡುಗಿ ನೆರದಾಳಂತ ಬೀಗರ ಮನಿಗೆ ಗೊತ್ತಾದಾಗ, ಅವರೆಲ್ಲಾ ಕೊಬ್ಬರಿ ಬೆಲ್ಲ ತಗಂಡು ಮನಿಗೆ ಬಂದು ಹೋಗ್ತಾರ. ಹಿಂಗ ಒಂಭತ್ತು ದಿನ ಆದಮ್ಯಾಗ ಅಕಿಗೆ ಊರ ಬಾವಿಗೆ ಕರಕಂಡೊಗಿ ಅಲ್ಲಿ ಪೂಜೆ ಮಾಡಿಸಿ ಕರಕಂಬರತಾರ ಇಷ್ಟೆಲ್ಲಾ ಮಾಡಬೊಕು ನೋಡವಾ’ ಅಂತ ಹೇಳುವಷ್ಟರಲ್ಲಿ ನಾಗಮ್ಮತ್ತಿ ಬಂದು ‘ದೊಡ್ಡಾಕ್ಯಾದ್ಯನವಾ…ʼ ಅಂತ ನಗತೊಡಗಿದಳು, ಆಮೇಲೆ ಅತ್ತಿ ಹೇಳಿದಂಗ ಎಲ್ಲಾ ಸಂಪ್ರದಾಯಗಳೂ ನಡದ್ವು, ಒಂಭತ್ತನೆ ದಿನ ಸೀರಿ ಉಡಸಿ ಚೇರ್ ಮ್ಯಾಗ ಕುಂದ್ರಸಿ, ಗೆಳತ್ಯಾರು, ಸಂಬಂಧಿಕರೂ ಬಂದಿದ್ರು. ಆಗ ನಾಗಮ್ಮತ್ತಿ ರಾಗ ತೆಗದಿದ್ದೆ ಪದ ಕಟ್ಟಿ ಹಾಡಾಕ ಶುರು ಮಾಡಿದ್ಲು…
‘ಏನುಂಡ ಮೈನೆರದೆss
ಏನುಟ್ಟ ಮೈನೆರದೆsss
ಹಾಲುಬಾನುಂಡ ಮೈನೆರದೆ ಸೋ…..
ಹಾಲುಬಾನುಂಡಿದ್ದೆ
ಹವಳ ಪೋಣಿಸುತ್ತಿದ್ದೆ
ಯಾಲಕ್ಕಿ ಗೋನಿಯ ಹಿಡದಿದ್ದೆ ಸೋ….
ಯಾಲಕ್ಕಿ ಈ ಗೋನಿಯ
ನಾ ಹಿಡದಕೊಂಡಿದ್ದೆ
ಬಿಚ್ಚು ಮಲ್ಲಿಗೆ ಮುಡದಿದ್ದೆ ಸೋ…..”
ಹೀಗೆ ಅತ್ತಿ ಹಾಡನ್ನ ಮುಂದುವರಿಸಿ, ಊರ ಬಾವಿ ಅಂದ್ರ ಗಂಗಮ್ಮನ ಪೂಜೆ ಆದಮ್ಯಾಲೆ ಎಲ್ಲಾ ಕಾರ್ಯಗಳು ಮುಗದ್ವು ಅವತ್ತಿಂದ ನಾ ಎಂದಿನಂಗ ಮನ್ಯಾಗ ಎಲ್ಲಾ ಕಡೆಗೂ ಅಡ್ಡಾಡಬಹುದಿತ್ತು, ಆದ್ರ ಅವ್ವ ಹೇಳೊವಂಗ ‘ಶಿವಮ್ಮ ಮೊದ್ಲಿನಂಗ ಸಣ್ಣಾಕೆಲ್ಲ ನೀನಿಗ, ಮೈನೆರದಿ ಅಂಬಾದು ಖಬುರಿರ್ಲಿ, ಗಂಡಸರ್ನ ಮಾತಾಡಸಾದು ಮಾಡಬಾಡ ಈಗ, ಸಾಲಿ ಬುಟ್ಟು ಮ್ಯಾಗ ಎಲ್ಲಿನೂ ಆಡಾಕ ಹೋಗಂಗಿಲ್ಲ, ಮನ್ಯಾಗಿನ್ ದಗದ, ಸಾಲಿ, ಹೊಲ ಅಷ್ಟ ಇರಬೊಕು ಇಲ್ಲಂದ್ರ ಊರ್ ಮಂದಿ ಮಾತಾಡಿಕ್ಯಂತಾರ ಬಾಯಿಗೆ ಬಂದಂಗ’
ಅವ್ವ ಅತ್ತಿ ಹೇಳಿದ ಮಾತು, ಮೈನೆರೆದ ಮ್ಯಾಗ ಎಲ್ಲಾರೂ ನನ್ನ ಮಾತಾಡಿಸಿದ ರೀತಿ, ನನಗೆ ನನ್ನಲ್ಲಾದ ಬದಲಾವಣೆ, ಇಲ್ಲಿವರೆಗೂ ಇದ್ದ ಶಿವಮ್ಮ ಇಗಿರೊ ಶಿವಮ್ಮ ಬೇರೆನಾ? ಅಂತನ್ನಿಸಿ, ಒಮ್ಮೆಲೆ ನಾಕು ದಿಕ್ಕಿಂದಾನೂ ಒಂದೊಂದಾಗಿ ಇಟ್ಟಿಗೆ ಇಟ್ಟು ಅದ್ಯಾವುದೊ ಗೋಡೆ ನಿಧಾನವಾಗಿ ಕಟ್ಟಾಕತಾರ ಅಂಬಂಗಾತು, ಕಾಣದೆ ಇರೊ ಹಗ್ಗಾನ ನಿಧಾನವಾಗಿ ಹೂವಿಂದ ಸುತ್ತಿ, ಬಾಯಿಗೆ ಬೆನ್ನಿಗೆ ಕೈ ಕಾಲಿಗೆ ಗಟ್ಟಿಯಾಗಿ ಬಿಗದು, ಅದರ ಮ್ಯಾಲೆಲ್ಲ ‘ನೀ ಹೆಣ್ಣು, ನೀ ದೊಡ್ಡಾಕಿ, ನೀ ಹೆಣ್ಣು, ನೀ ಹಿಂಗಿರಬೇಕು, ನೀ ದೊಡ್ಡಾಕಿ’ ಅಂತ ಸೂಕ್ಷ್ಮ ಕುಸುರಿ ಕಲೆ ಮಾಡಿ, ಆ ನಾಲ್ಕು ಗ್ವಾಡಿಯೊಳಗ ಬಂಧಿಸಿದಂಗಾತು.

ಆ ಗ್ವಾಡಿಗಳನ್ನ ಮೇಲಿಂದ ಕೆಳಗ ನೋಡುವಾಗ್ಲೆ ಗೊತ್ತಾದದ್ದು,
ಆ ಗ್ವಾಡಿ ನಡಕ ಅವ್ವ, ಅತ್ತಿನೂ ಒದ್ದಾಡತಿದ್ರು
ಅಲ್ಲಿ ಆಕಿನೂ ಇದ್ಲು!

ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಚಳ್ಳೂರಿನವರು. ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಕಲೆ ಸಾಹಿತ್ಯ ಫೋಟೊಗ್ರಫಿ ಮುಖ್ಯ ಆಸಕ್ತಿಗಳು. ಇವರ ‘ಕಂಬದ ಹಕ್ಕಿ’ ಕಥೆಗೆ ‘ಸಂಗಾತ ಕಥಾ ಪುರಸ್ಕಾರ ‘ (2021), ‘ಕನಕಾಂಬರ’ ಕಥೆಗೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ‘ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪುರಸ್ಕಾರ’ ದೊರಕಿದೆ (2022). ‘ಕನಕಾಂಬರ’ ಹಾಗೂ ‘ಮಾರ್ನಾಮಿ’ ಸಣ್ಣ ಕಥೆಗಳು ToTo Funds the Arts’ India ಅವರು ಕೊಡುವ ಕನ್ನಡ ಸೃಜನಶೀಲ ಬರವಣಿಗೆ (Kannada Creative writing) ವಿಭಾಗದಲ್ಲಿ 2023 ಮತ್ತು 2025 ರಲ್ಲಿ ಅಂತಿಮ ಹಂತಕ್ಕೆ (Short List) ಆಯ್ಕೆ ಆಗಿದೆ. ಇವರ ಬರಹಗಳು ಕೆಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಹೆಣ್ಣು ಪಡುವ ಸಂಕಟ ಮತ್ತು ಆಕೆಯ ಸ್ವಾತಂತ್ರವನ್ನು ಕಿತ್ತು ಕೊಳ್ಳುತ್ತ, ಆಕೆಗೆ ನಾಲ್ಕು ಗೋಡೆಗೆ ಸೀಮಿತಗೊಳಿಸತ್ತಾರೆ. ತುಂಬಾ ಚೆನ್ನಾಗಿ ಶಬ್ದಗಳ ಮೂಲಕ ಹೇಳಿದಿರಿ ಮೇಡಂ.
ಮುಗ್ದ್ಬಬಾಲೆ ಹೆಣ್ಣಾಗುವ ಪ್ರಕ್ರಿಯೆಯನ್ನು, ಅವಳ ಮನಸ್ಸಿನ ತೊಲಳಾಟವನ್ನು , ಅವಳ ಅತ್ತೆಯ ಪಾತ್ರವನ್ನು, ಅವಳ ಸುಲುಗೆಯನ್ನ ತುಂಬ ಚೆನ್ನಾಗಿ ವರ್ಣಿಸಿದ್ದೀರಿ.ಹಳ್ಳಿಯ ಸೊಗಡನ್ನು ಬಹಳಷ್ಟು ಅರ್ಥಗರ್ಭಿತವಾಗಿ ಬರೆದಿದ್ದೀರಿ. ಬಹಳಷ್ಟು ಖುಷಿಯಿಂದ ಓದಿಸಿಕೊಂಡು ಹೋದ ಬರಹ 🙏🙏