ಅಷ್ಟಮಿ ಹಬ್ಬವು ತಕ್ಕಮಟ್ಟಿಗಿನ ಸಂಭ್ರಮದಲ್ಲಿ ಮುಕ್ತಾಯವಾಗುತ್ತಲೇ ಮತ್ತೊಂದು ಹಬ್ಬವನ್ನು ಸ್ವಾಗತಿಸಲು ಜನರು ಸಜ್ಜಾಗುತ್ತಿದ್ದಾರೆ. ಜೊತೆಗೆ ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿವೆ. ಕೆಲವು ತರಗತಿಗಳು ಅದಾಗಲೇ ಆರಂಭವಾಗಿವೆ. ನಮಗೆ ಸಮಾರಂಭಗಳು ಮುಖ್ಯವೇ ಅಥವಾ ಶಾಲೆಗಳು ಆರಂಭವಾಗುವುದು ಮುಖ್ಯವೇ ಎಂಬುದು ಸರಳವಾದ ಪ್ರಶ್ನೆ. ಮಕ್ಕಳ ಶಿಕ್ಷಣವೇ ಮುಖ್ಯ ಹೊರತು ಆಡಂಬರಗಳಲ್ಲ ಎನ್ನುವುದಕ್ಕೆ ಹೆಚ್ಚು ಯೋಚನೆ ಮಾಡಬೇಕೇ? ಆದರೆ ಜನಮಾನಸವು ಈ ಪ್ರಶ್ನೆಯೇ ಬದುಕಿನ ಒಂದು ಜಿಜ್ಞಾಸೆ ಎಂಬಂತೆ ಚಿಂತೆ ಮಾಡುತ್ತಿದೆ ಎನಿಸುತ್ತಿದೆ.
ಈ ಗೊಂದಲಗಳ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಲಹರಿಯೊಂದು ಇಲ್ಲಿದೆ.

ಹೆಚ್ಚು ತಿರುಗಾಟ ಮಾಡುವುದು ಕ್ಷೇಮವಲ್ಲ ಎಂಬ ಕಾರಣಕ್ಕೆ ಶಾಲಿನಿ ಮನೆಯೊಳಗೇ ಇರುತ್ತಿದ್ದಳು. ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಆಗಿರುವ ಆಕೆ, ಆನ್ ಲೈನ್ ಪಾಠಗಳನ್ನುಮಾಡುತ್ತಿದ್ದವಳು, ಮೊನ್ನೆ ಅಷ್ಟಮಿಯ ದಿನ ಹೀಗೇ ಮನೆಯೊಳಗೇ ಇರಬೇಕು ಎಂಬ ತನ್ನ ನಿರ್ಧಾರವನ್ನು ಮುರಿದಳು. ಯಾಕೋ ಮನಸ್ಸು ಬಹಳವೇ ರೋಸಿಹೋಗಿತ್ತು. ‘ಸರಿಯಾಗಿ ಕೂದಲು ಬಾಚದೇ, ಅಲಂಕರಿಸಿಕೊಳ್ಳದೇ, ಹೊರಗಿನ ಜಗತ್ತಿನೊಡನೆ ಸಂಪರ್ಕವಿಲ್ಲದೆ, ನಾಲ್ಕು ಜನರೊಂದಿಗೆ ಬೆರೆಯದೇ ನಿನಗೆ ಹೀಗೆ ಖಿನ್ನತೆ ಬಂದುಬಿಟ್ಟಿದೆ’ ಎಂದು ಅಮ್ಮ ದಬಾಯಿಸಿದ್ದರಿಂದ ಮೊನ್ನೆ ಅವಳು ದೇವಸ್ಥಾನದಲ್ಲಿ ಅಷ್ಟಮಿ ಹಬ್ಬಕ್ಕಾಗಿ ಲಡ್ಡು ಕಟ್ಟಲು ಹೋಗಿದ್ದಳು. ಸೇವಾರೂಪದಲ್ಲಿ ಭಕ್ತರು ಲಡ್ಡುಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದುಂಟು.

ಅಲ್ಲಿ ನೋಡಿದರೆ ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು ತನ್ನ ವಿದ್ಯಾರ್ಥಿಗಳಿಬ್ಬರೂ ಲಡ್ಡು ಕಟ್ಟಲು ಅದಾಗಲೇ ಕುಳಿತುಬಿಟ್ಟಿದ್ದಾರೆ. “ಅರೆ ಕ್ಲಾಸ್ ಇಲ್ವೇನ್ರೋ” ಎಂದು ಕೇಳಿದಾಗಲೇ ಗೊತ್ತಾಗಿದ್ದು, ಇಯರ್ ಫೋನ್ ನಲ್ಲಿ ಕ್ಲಾಸುಗಳು ನಡೆಯುತ್ತಿವೆ. ಇವರು ವಿಡಿಯೊ ಮತ್ತು ಆಡಿಯೋ ಆಫ್ ಮಾಡಿ ತಣ್ಣಗೆ ಲಡ್ಡು ಕಟ್ಟುತ್ತಿದ್ದಾರೆ. ಒಬ್ಬನಂತೂ ಪಕ್ಕದಲ್ಲಿ ಒಂದು ನೋಟ್ಸ್ ಇಟ್ಟುಕೊಂಡಿದ್ದು, ತನ್ನ ಹೆಸರು ಕರೆಯುವಾಗ, ಹೋಂವರ್ಕ್ ಅನ್ನು ತೋರಿಸುವುದಕ್ಕಾಗಿ ಸಿದ್ಧನಾಗಿಯೇ ಇದ್ದ.

‘ಮಕ್ಕಳ ಶಿಕ್ಷಣವು ಹೀಗೇ ಸಾಗಿದರೆ, ಅವರ ಭವಿಷ್ಯದ ಗತಿ ಏನಪ್ಪ’ ಎಂದು ಚಿಂತಿಸುತ್ತಿದ್ದ ಅವಳಿಗೆ, ತನ್ನ ಭವಿಷ್ಯದ ಕುರಿತೂ ಚಿಂತೆಯಾಗದೇ ಇರಲಿಲ್ಲ. ಶಾಲೆಗಳಲ್ಲಿ ಮಕ್ಕಳನ್ನು ನಿಭಾಯಿಸುವ ಕೆಲಸವಿಲ್ಲದೇ ಇರುವುದರಿಂದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅಸೆಂಬ್ಲಿ, ಕ್ರೀಡಾ ಚಟುವಟಿಕೆಗಳನ್ನೂ ನಡೆಸುವ ಅಗತ್ಯವಿಲ್ಲದೇ ಇರುವುದರಿಂದ ಪಾಠ ಮಾಡುವ ಕೆಲವೇ ಶಿಕ್ಷಕರು ಸಾಕು ಎಂದು ಆಡಳಿತ ಮಂಡಳಿ ಹೇಳಿತ್ತು. ಹಾಗಾಗಿ ಅನೇಕ ಶಿಕ್ಷಕರು ಕೆಲಸಗಳನ್ನು ಕಳೆದುಕೊಂಡಿದ್ದರು. ಆದರೂ ಅದೃಷ್ಟವಶಾತ್ ಶಾಲಿನಿಯ ಕೆಲಸ ಮಾತ್ರ ಉಳಿದಿತ್ತು. ಕಳೆದ ವರ್ಷದಂತೆ ಈ ವರ್ಷವೂ ಅವಳು ಸಹಿ ಮಾಡಿದ ಹನ್ನೆರಡು ಬ್ಲಾಂಕ್ ಚೆಕ್ ಗಳನ್ನು ಶಾಲೆಯ ಆಡಳಿತ ಮಂಡಳಿಗೆ ಕೊಟ್ಟಿದ್ದಳು. ಸರ್ಕಾರದ ನಿಯಮದಂತೆ ಶಿಕ್ಷಕರಿಗೆ ಕನಿಷ್ಠ ವೇತನ ನೀಡಬೇಕು ಎಂಬ ಕಾರಣಕ್ಕೆ ಅವಳ ಖಾತೆಗೆ 16 ಸಾವಿರ ರೂಪಾಯಿಗಳನ್ನು ತಿಂಗಳ ಮೊದಲ ವಾರದಲ್ಲಿ ಹಾಕಲಾಗುತ್ತದೆ. ಸಂಬಳ ಹಾಕಿದ ಅರ್ಧಗಂಟೆಯೊಳಗೆ ಶಾಲೆಯ ಕಡೆಯವರು, ಶಾಲಿನಿ ಸಹಿ ಹಾಕಿದ ಈ ಚೆಕ್ ಬಳಸಿಕೊಂಡು, 11 ಸಾವಿರ ರೂಪಾಯಿಗಳನ್ನು ವಾಪಸ್ ಪಡೆದುಬಿಡುತ್ತಾರೆ. ಅತ್ತ ಖಾತೆಗೆ ಕನಿಷ್ಠ ವೇತನ ದೊರೆತಂತಾಯಿತು, ಇತ್ತ ತಾವು ನಿಗದಿ ಮಾಡಿದ ಮೊತ್ತವಷ್ಟೇ ವೇತನ ಕೊಟ್ಟ ಹಾಗೂ ಆಯಿತು. ಇದನ್ನೆಲ್ಲ ಒಪ್ಪಿಕೊಂಡೇ ಕೆಲಸಕ್ಕೆ ಸೇರಿದ್ದರಿಂದ ಶಾಲಿನಿಗೆ ಬೇಸರವೇನೂ ಇರಲಿಲ್ಲ.

ಆದರೆ ಅಷ್ಟಮಿಯ ಮುನ್ನಾದಿನ ಲಡ್ಡು ಕಟ್ಟುತ್ತ ಅವಳಿಗೆ ಶಿಕ್ಷಕರ ದಿನಾಚರಣೆಯ ನೆನಪುಗಳೂ ಹಾದು ಹೋದವು. ಅಂದು ಶಾಲೆಗೆ ಪ್ರವೇಶಿಸುವಾಗಲೇ ವಿದ್ಯಾರ್ಥಿಗಳು ತಮ್ಮತಮ್ಮ ಶಿಕ್ಷಕರಿಗೆ ‘ಸರ್ ಪ್ರೈಸ್ ‘ ಕೊಡುತ್ತಿದ್ದರು. ತರಗತಿಯೊಳಗೆ ಪ್ರವೇಶಿಸುವಾಗ ಹೂಮಳೆಯಾಗುವಂತೆ ತಯಾರಿ ಮಾಡಿ, “ಹ್ಯಾಪಿ ಟೀಚರ್ಸ್ ಡೇ’’ ಎನ್ನುತ್ತ ಬೊಬ್ಬೆ ಹೊಡೆಯುವ, ಕರಿಬೋರ್ಡ್ ಮೇಲೆ ಮಕ್ಕಳೆಲ್ಲ ಸಹಿ ಮಾಡಿ, ಶುಭಾಶಯ ಕೋರಿದ,ತರಗತಿಯೊಳಗೆ ಶಿಕ್ಷಕರಿಗಾಗಿ ಹಾಡು ಹಾಡಿದ, ಮನೆಯಲ್ಲಿ ಮಾಡಿದ ಸಿಹಿ ತಿನಿಸನ್ನು ಡಬ್ಬಿಯಲ್ಲಿ ತಂದು ಟೀಚರ್ಸ್ ಗೆ ಕೊಡುವ, ತಮ್ಮ ಪ್ರೀತಿಯ ಶಿಕ್ಷಕ ಶಿಕ್ಷಕಿಯರ ವಿವಿಧ ಭಂಗಿಗಳ ಫೋಟೋವನ್ನು ಕದ್ದು ಸೆರೆ ಹಿಡಿದು, ಒಂದು ದೊಡ್ಡ ಕೊಲಾಜ್ ಫೋಟೋವನ್ನು ಉಡುಗೊರೆ ಮಾಡುವ.. – ವಿದ್ಯಾರ್ಥಿಗಳ ಪ್ರೀತಿಯೆಂದರೆ ಅದು ಪರಿಶುದ್ಧವಾದುದು. ತರಗತಿಯಲ್ಲಿ ಹೇಳಿದ ಮಾತು ಕೇಳದ ಪೋಕರಿ ವಿದ್ಯಾರ್ಥಿಗಳೂ ಬಂದು ಅಂದು ಶುಭಾಶಯ ಕೋರುವಾಗ ಮನದುಂಬಿ ಬರುತ್ತದೆ. ಆದರೆ ಈ ಬಾರಿ ಈ ಎಲ್ಲ ಸಂಭ್ರಮಗಳೂ ‘ಆನ್ ಲೈನ್’ ಗೆ ಸೀಮಿತವಾಗಿದೆ. ಹೈಸ್ಕೂಲು ತರಗತಿಗಳು ಆರಂಭವಾಗಿದ್ದರೂ, ಇಷ್ಟೊಂದು ಸಂಭ್ರಮದ ಆಚರಣೆ, ಶಾಲೆ ತುಂಬಾ ಕಲರವ, ಕೇಕೇಗಳು ಇರಲಿಕ್ಕಿಲ್ಲ. ಮೊಬೈಲ್ ನಲ್ಲಿ ಬರುವ ಶುಭಾಶಯ ಚಿತ್ರಗಳನ್ನು ಒತ್ತಿ ಒತ್ತಿ ತೋರುಬೆರಳು ಅದಾಗಲೇ ಒರಟಾಗಿರುವಂತಿದೆ. ಸೆ. 6ರಂದು ಆರರಿಂದ 8ನೇ ತರಗತಿಯ ಮಕ್ಕಳು ಶಾಲೆಗೆ ಬರುವರೇನೋ ಎಂಬ ನಿರೀಕ್ಷೆಯೇ ಈ ಬಾರಿಯ ಶಿಕ್ಷಕರ ದಿನಾಚರಣೆಯ ಖುಷಿ.

ಈ ಬಾರಿಯ ಲಾಕ್ ಡೌನ್ ನಿಯಮಗಳಿಗಿಂತ ಭಾರೀ ಕಡಕ್ ಆದ ನಿಯಮಗಳು ಕಳೆದ ವರ್ಷ ಜಾರಿಯಲ್ಲಿದ್ದುದನ್ನು ಶಾಲಿನಿ ಗಮನಿಸಿದ್ದಾಳೆ. ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿಯೇ ದೊಡ್ಡಪ್ಪನ ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಅವಳು ಭಾಗವಹಿಸಿದ್ದಳು. ಕಾಸರಗೋಡು ಗಡಿಯಂಚಿನ ಗ್ರಾಮದಲ್ಲಿರುವ ದೊಡ್ಡಪ್ಪ, ಕನ್ನಡಿಗರಾದರೂ, ದಾಖಲೆಪತ್ರಗಳ ಪ್ರಕಾರ ಅವರು ಕೇರಳಕ್ಕೆ ಸರಿದವರು. ಹಾಗಾಗಿ ಗೃಹಪ್ರವೇಶ ಸಮಾರಂಭವನ್ನು ಸರಳವಾಗಿ ಆಚರಿಸಲು ಕಳೆದ ವರ್ಷ ಜಿಲ್ಲಾಧಿಕಾರಿಯಿಂದ ಪ್ರತ್ಯೇಕ ವಿಶೇಷ ಅನುಮತಿ ಪಡೆದಿದ್ದರು.

ಇವರು ವಿಡಿಯೊ ಮತ್ತು ಆಡಿಯೋ ಆಫ್ ಮಾಡಿ ತಣ್ಣಗೆ ಲಡ್ಡು ಕಟ್ಟುತ್ತಿದ್ದಾರೆ. ಒಬ್ಬನಂತೂ ಪಕ್ಕದಲ್ಲಿ ಒಂದು ನೋಟ್ಸ್ ಇಟ್ಟುಕೊಂಡಿದ್ದು, ತನ್ನ ಹೆಸರು ಕರೆಯುವಾಗ, ಹೋಂವರ್ಕ್ ಅನ್ನು ತೋರಿಸುವುದಕ್ಕಾಗಿ ಸಿದ್ಧನಾಗಿಯೇ ಇದ್ದ.

ಮೊದಲಾಗಿ, ಸಮಾರಂಭದಲ್ಲಿ ಭಾಗವಹಿಸುವ ಎಲ್ಲರ ಕೋವಿಡ್ ಟೆಸ್ಟ್ ಮಾಡಿಸಲಾಯಿತು. ಬಳಿಕ ಸಮಾರಂಭದಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯಲಿವೆ ಎಂಬ ವರದಿಯೊಂದನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿ

ಸಲಾಯಿತು. ಈ ಸಮಾರಂಭವು ಸಲ್ಲಿಸಿದ ವರದಿಯ ಪ್ರಕಾರವೇ ನಡೆಯುತ್ತಿದೆಯೇ ಎಂಬುದನ್ನು ಗಮನಿಸಲು ಜಿಲ್ಲಾಧಿಕಾರಿಗಳು ಇಬ್ಬರು ಅಧಿಕಾರಿಗಳನ್ನುನಿಯೋಜಿಸಿದರು. ಹಾಗಾಗಿ ಮುನ್ನಾದಿನ ಸಂಜೆ ನಡೆಯುವ ಪೂಜಾ ಕಾರ್ಯಕ್ರಮ, ತಡರಾತ್ರಿ ನಡೆಯುವ ರಕ್ಷೋಘ್ನ ಹೋಮ, ಮರುದಿವಸ ವಾಸ್ತುಹೋಮ, ಸುದರ್ಶನ ಹೋಮ ಮತ್ತೆ ಸತ್ಯನಾರಾಯಣ ಪೂಜೆ.. ಊಟ.. ಹೀಗೆ ಪ್ರತೀ ಕಾರ್ಯಕ್ರಮವನ್ನೂ ಅವರು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಜಿಲ್ಲಾಡಳಿತ ವಿಧಿಸಿದ ನಿಯಮಗಳನ್ನು ಎಲ್ಲಿಯೂ ಮೀರಿಲ್ಲ ಎಂಬುದನ್ನು ಸಾಬೀತುಪಡಿಸಲು ಅವರು ಈ ವಿಡಿಯೊಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕಿತ್ತು. ಹೀಗೆ ತೀವ್ರನಿಗಾದಲ್ಲಿ ನಡೆದ ಸಮಾರಂಭ ಅದಾಗಿತ್ತು. ವಿಡಿಯೊದಲ್ಲಿ ಹೆಚ್ಚಿನ ಜನರ ಓಡಾಟವು ದಾಖಲಾಗಬಾರದು ಎಂಬ ಕಾರಣಕ್ಕಾಗಿ ಹೆಂಗಸರನ್ನೆಲ್ಲ ಒಂದು ಕೊಠಡಿಯೊಳಗೆ ಕೂರುವಂತೆ ಹೇಳಿದ್ದರು.

ಸಮಾರಂಭಗಳೆಂದರೇ ಭಾರೀ ರೇಶ್ಮೆ ಸೀರೆಗಳು ಮತ್ತು ಒಡವೆ ವಸ್ತ್ರಗಳು ಹಾಗೂ ಬಾಯಿತುಂಬಾ ಮಾತು ಅಲ್ಲವೇ. ಉಟ್ಟ ಹೊಸ ಸೀರೆಯನ್ನು, ಖರೀದಿಸಿದ ಹೊಸ ನೆಕ್ ಲೆಸ್ ಅನ್ನು ಎಲ್ಲರೂ ನೋಡಲಿ ಎಂಬ ಆಸೆ ಯಾರಿಗಿಲ್ಲ ಹೇಳಿ. ಹೀಗೆ ರೇಶ್ಮೆ ಸೀರೆ ಉಟ್ಟು ಕೊಠಡಿಯೊಳಗೆ ಕುಳಿತುಕೊಳ್ಳುವುದರಲ್ಲಿ ಏನು ಮಜವಿದೆ ಎಂದು ಎಲ್ಲ ಹೆಂಗಸರೂ ಬೇಸರ ಮಾಡಿಕೊಂಡಿದ್ದರು. ಹೆಂಗಸರ ಓಡಾಟದ ಮಾತುಕತೆಗಳ, ಸರಬರ ಸದ್ದಿಲ್ಲ ಎಂದು ಗಂಡಸರೇನೂ ನಿರಾಳವಾಗಿ ಓಡಾಡಿಕೊಂಡಿರಲಿಲ್ಲ. ಅವರು ‘ಈ ನೀರ್ಮಾಲ್ಯವನ್ನು ಚೆಲ್ಲಿ ಬಾ’ ಎನ್ನುವಂತಿಲ್ಲ. ‘ಇಲ್ಲೊಂಚೂರು ಗೋಮಯ ಬಳಿದು ಶುದ್ಧ ಮಾಡು’ ಎಂದು ಹೇಳುವಂತಿಲ್ಲ. ಪೂರ್ಣಾಹುತಿಗೂ ಕುಟುಂಬ ಸಮೇತ ಬಂದು ನಿಲ್ಲುವಂತಿಲ್ಲವಲ್ಲಾ ಎಂದು, ರಾಜ್ಯವಿಲ್ಲದ ರಾಜನಂತೆ, ಅವರಿಗೆ ಕಿರಿಕಿರಿಯಾಗುತ್ತಿತ್ತು.

‘ಇದೊಂಥರಾ ಜೆಂಡರ್ ಎಜುಕೇಶನ್ ಕಾರ್ಯಕ್ರಮವಾಗಿದೆ, ಹೀಗೇ ಆಗಬೇಕು. ಗೋಮಯವನ್ನು ಗಂಡಸರೇ ಬಳಿದು ಶುದ್ಧಮಾಡಿಕೊಳ್ಳಲಿ’ ಎಂದು ಶಾಲಿನಿ ಮನಸ್ಸಿನಲ್ಲಿಯೇ ಕುಟಿಲ ನಗು ನಕ್ಕಿದ್ದಳು. ಹೆಂಗಸರೆಲ್ಲ ಕೊಠಡಿಯೊಳಗೇ ಅರಿಶಿಣ ಕುಂಕುಮ ಕೊಟ್ಟುಕೊಂಡು, ಆರತಿ ಹಾಡು ಹಾಡಿಕೊಂಡು, ಉಳಿದ ಸಮಯದಲ್ಲಿ ತಮ್ಮ ಗಂಡ ಮಕ್ಕಳ , ಅತ್ತೆ ನಾದಿನಿಯ ಕತೆ ಹೇಳಿಕೊಂಡು, ಗಾಸಿಪ್ ಗಳ ಮಜಾವನ್ನೂ ತೆಗೆದುಕೊಂಡು ಖುಷಿಯಾಗಿದ್ದರು. ತಮ್ಮ ಲ್ಯಾಪ್ ಟಾಪ್ ತೆಗೆದು ಏನೋ ಕುಟ್ಟುತ್ತ, ನೆಟ್ ವರ್ಕ್ ಸಿಗುತ್ತಿಲ್ಲ ಎಂದು ಬೇಸರಿಸುತ್ತ , ಒಂದೆರಡು ಸೆಲ್ಫಿ ತೆಗೆಯುತ್ತ, ಕಾಫಿ ಚಹಾ ಸೇವಿಸುತ್ತ ಲವಲವಿಕೆಯಿಂದ ಇದ್ದರು.

ಈ ವರ್ಷ ನಡೆಯುವ ಪ್ರತೀ ಕಾರ್ಯಕ್ರಮದಲ್ಲಿ ಅದೇ ತೀವ್ರನಿಗಾದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವಿಷಯಗಳು ಮಾತಿನ ವಸ್ತುವಾಗಿದ್ದವು. ‘ಅಂದು ಕೋವಿಡ್ ಪ್ರಕರಣಗಳ ಸಂಖ್ಯೆ ಕೆಲವೇ ಕೆಲವು ಇದ್ದವು. ಆದರೂ ಕಟ್ಟಳೆಗಳು ಎಷ್ಟು ಬಿಗಿಯಾಗಿದ್ದವು ! ಆದರೆ ಈಗ ನೋಡಿದರೆ ಲೆಕ್ಕಕ್ಕೆ ಸಿಗುವ ಪ್ರಕರಣಗಳೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿವೆ. ಆದರೂ ‘ಕಾರ್ಯಕ್ರಮಗಳಲ್ಲಿ ಎಷ್ಟೊಂದು ಜನರು ಎಗ್ಗಿಲ್ಲದೆ ಭಾಗವಹಿಸುತ್ತಿದ್ದಾರೆ !’ ಎಂದು ಅಚ್ಚರಿಪಡುತ್ತಲೇ, ಎಲ್ಲರೂ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದಾರೆ.

ಇತ್ತೀಚೆಗೊಂದು ಅಲಿಖಿತ ನಿಯಮ ಸೃಷ್ಟಿಯಾಗಿದೆ. ಮದುವೆ ಮುಂಜಿ, ನಾಮಕರಣ, ಉತ್ತರಕ್ರಿಯೆ ಏನೇ ಇರಲಿ, ಅತಿಥಿಗಳು ಒಂದೇ ಸಮಯಕ್ಕೆ ಭೇಟಿ ಕೊಡುವಂತಿಲ್ಲ.  ‘ಬೆಳಿಗ್ಗೆ ಬನ್ನಿ’ ಎಂಬುದಾಗಿ ಒಂದಿಷ್ಟು ಜನರಿಗೆ ಸೂಚನೆ ಕೊಟ್ಟರೆ, ‘ಮಧ್ಯಾಹ್ನಕ್ಕೆ ಬನ್ನಿ’ ಎಂದು ಮತ್ತಷ್ಟು ಜನಕ್ಕೆ ಸೂಚನೆ ದೊರೆಯುತ್ತದೆ. ‘ಮೊದಲ ಪಂಕ್ತಿ ಆದ ಮೇಲೆ ಫೋನ್ ಮಾಡ್ತೀನಿ, ಆಗ ಬನ್ನಿ…’ ಎಂದು ಕೆಲವು ಆಪ್ತರಿಗೆ ಹೇಳುವುದುಂಟು. ಹೀಗೆ ಏಕಕಾಲಕ್ಕೆ ಸಮಾರಂಭಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೇ ಇದ್ದರೆ ಸಾಕು ಎಂಬುದು ಒಟ್ಟು ತಾತ್ಪರ್ಯ.

ಇದನ್ನೆಲ್ಲ ಗಮನಿಸಿ ಶಾಲಿನಿಗೆ ಚೋದ್ಯವೆನಿಸುತ್ತದೆ. ಜೊತೆಗೆ ಆತಂಕವೂ ಆಗುತ್ತದೆ. ಯಾಕೆಂದರೆ ಈ ಜನರೆಲ್ಲ ಹೀಗೆ ನಿಯಮಗಳ ಕಣ್ಣುತಪ್ಪಿಸಿ ಸಮಾರಂಭಗಳನ್ನು ಗಡದ್ದಾಗಿ ಮಾಡಬಹುದು. ಆದರೆ ನಾಳೆ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಸರ್ಕಾರವು ಮತ್ತೆ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾದರೆ, ಮಕ್ಕಳ ಶಿಕ್ಷಣದ ಗತಿಯೇನು? ಹಾಗಿದ್ದರೆ ಈ ದೊಡ್ಡವರಿಗೆ ತಮ್ಮ ಮಕ್ಕಳ ಬಗ್ಗೆ ಚಿಂತೆಯೇ ಇಲ್ಲವೇ..ಎಂದೆಲ್ಲ ವಿಸ್ಮಯ ಪಡುತ್ತಾಳೆ.

ಅಷ್ಟರಲ್ಲಿ ಅವಳ ಪರಿಚಯದವರಾದ ಶಿಕ್ಷಕರೊಬ್ಬರು ಬಂದು ಮಾತು ಶುರು ಮಾಡಿದರು. ಪಕ್ಕದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಾಸ್ತರರಾದ ಅವರಿಗೆ ಒಂದು ಜವಾಬ್ದಾರಿ ವಹಿಸಲಾಗಿತ್ತು. ಕೋವಿಡ್ ಕಾರಣಕ್ಕೆ ಮುಚ್ಚಿರುವ ಸರ್ಕಾರಿ ಶಾಲೆಯೊಂದು ಸರಿಯಾಗಿದೆಯೇ ಎಂದು ಆಗಾಗ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು. ‘ಏಳೂ ಕಿಟಕಿಗಳ ಬಾಗಿಲುಗಳು, ಗಾಜುಗಳು ಸರಿಯಾಗಿವೆ, ಎಲ್ಲ ಕೊಠಡಿಗಳ ಬಾಗಿಲುಗಳು ಸುಸ್ಥಿತಿಯಲ್ಲಿವೆ, ಶಾಲೆಯ ಬೋರ್ ವೆಲ್ ಸ್ವಿಚ್ ಬೋರ್ಡ್ ಸರಿಯಿದೆ, ಶಾಲೆಯೊಳಗೆ ಇರಿಸಿದ್ದ ಬಿಸಿಯೂಟದ ಸಾಮಗ್ರಿಗಳಾದ ದೊಡ್ಡ ಚೆರಿಗೆ, ಬಾಣಲಿ, ಟಾರ್ಪಾಲು, ಊಟದ 28 ಪ್ಲೇಟುಗಳು, ಆರು ಸೌಂಟುಗಳು ಸರಿಯಾಗಿವೆ ಮತ್ತು ಭದ್ರವಾಗಿವೆ’ ಎಂಬುದನ್ನು ಅವರು ವಾರಕ್ಕೆರಡು ಬಾರಿ ಗಮನಿಸಿ, ಅದಕ್ಕೆ ಸಂಬಂಧಿಸಿದ ಎಕ್ಸೆಲ್ ಶೀಟ್ ನಲ್ಲಿ ಟಿಕ್ ಮಾಡುತ್ತಿದ್ದರು. ಆದರೆ ಕಳೆದವಾರ ಅವರೊಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡರು. ಆನ್ ಲೈನ್ ನಲ್ಲಿ ಈ ಮಾಹಿತಿಯನ್ನು ತುಂಬಿ ಕಳಿಸಿದ ತಕ್ಷಣ ಮೇಲಧಿಕಾರಿಗಳು ಫೋನ್ ಮಾಡಿ,’ ರೀ ನಿಮ್ಮ ವರದಿಯಲ್ಲಿ ಲೊಕೇಶನ್ ಮೂಡಿಗೆರೆ ಎಂದು ತೋರಿಸುತ್ತಿದೆ. ನೀವು ಉಡುಪಿ ಜಿಲ್ಲೆಯ ಶಾಲೆಯಲ್ಲಿ ಕರ್ತವ್ಯ ಮಾಡುತ್ತಿರುವುದಲ್ವಾ ?’ ಎಂದು ಗರಂ ಆಗಿ ಕೇಳಿದರು.

‘ಈ ಲೊಕೇಷನ್ ವರದಿಯಲ್ಲಿಯೂ ದಾಖಲಾಗುತ್ತದೆ ಎಂಬುದು ಮರೆತು ಹೋಗಿತ್ತು ಮಾರಾಯ್ತಿ. ಈಗ ಈ ವರದಿ ಅಪ್ ಲೋಡ್ ಮಾಡುವಾಗ ಲೊಕೇಶನ್ ಕಾಣದ ಹಾಗೆ ಮಾಡಲಿಕ್ಕೆ ನಿನಗೆ ಗೊತ್ತಿದೆಯಾ ?’ ಎಂದು ಪ್ರಶ್ನಿಸಿದರು. ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಾಲಿನಿಗೆ ಈ ವಿಚಾರ ಅರ್ಥವಾಗಲಿಲ್ಲ. ಆದರೂ ಮೊಬೈಲ್ ನಲ್ಲಿ ಏನೋ ಪ್ರಯತ್ನ ನಡೆಸಿದಳು. ‘ಮೂಡಿಗೆರೆ ನನ್ನ ಊರು ಗೊತ್ತಾ. ಬೆಂಗಳೂರಿನ ದೊಡ್ಡ ದೊಡ್ಡ ಕಂಪನಿಯ ಉದ್ಯೋಗಿಗಳೇ ಊರಿಗೆ ಬಂದು ವರ್ಕ್ ಫ್ರಂ ಹೋಂ ಮಾಡುತ್ತಿರುವಾಗ, ನಾನು ಊರಿಗೆ ಹೋಗಿ ಸ್ವಲ್ಪ ತೋಟದ ಕೆಲಸ ಮಾಡಿದರೇನು ಇವರಿಗೆ ಹೊಟ್ಟೆಯುರಿ. ಈ ಶಾಲೆ ಕಾಯ್ಲಿಕ್ಕೆ ಅಂತ ನಾನು ಇಲ್ಲಿಯೇ ಕುಳಿತುಕೊಳ್ಳಬೇಕಾ.. ಈ ಶಾಲೆಯ ಬಾಗಿಲು ಕಿಟಕಿಯ ಲೆಕ್ಕ ಮಾಡಲಿಕ್ಕೆ ನಾನು ಪಕ್ಕದಲ್ಲಿರುವ ಮನೆಯ ಹುಡುಗನಿಗೆ ಹೇಳಿದ್ದೇನೆ. ಅಷ್ಟು ಸಾಕಲ್ವ?’ ಎಂದು ಮಾತನಾಡುತ್ತಲೇ ಇದ್ದರು.

ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಗವ್ವೆನ್ನುವ ಕತ್ತಲೆಯನ್ನು ಧರಿಸಿಕೊಂಡ ಶಾಲೆಯ ಚಿತ್ರವೊಂದು ಶಾಲಿನಿಯ ಕಣ್ಣ ಮುಂದೆ ಹಾದು ಹೋಯಿತು.