ಜಗತ್ತಿನ ಬದಲಾಗಿ ಸಿಕ್ಕ ಭಾಷೆ-ಕಂಬಾರರ ಮಟ್ಟಿಗೆ ಹೇಳುವದಾದರೆ ಅವರಿಗೆ ದೊರೆತ ಜಾನಪದ ಕತೆ, ಕಾವ್ಯ, ಪುರಾಣಗಳು-ಅನೇಕ ಸಂಭಾವ್ಯತೆಗಳಿಂದ ಕೂಡಿರುತ್ತದೆ. ‘ಹೇಳತೇನ ಕೇಳ’ ಕವಿತೆಯ ಶಿವಾಪುರದಲ್ಲಿ ಹಳೆಯ ಗೌಡ ಗೌಡತಿಯರ ಆಳಿಕೆ ಮುಗಿಯುವಂತಾಗಿ ಹೊಸ ಜೀವನ ವ್ಯವಸ್ಥೆ ತಲೆಯೆತ್ತುತ್ತದೆ. ಹೊರಗಿನಿಂದ ಬಂದ ರಾಕ್ಷಸ ಗೌಡನನ್ನು ಕೊಂದು ತಾನೇ ಗೌಡನಾಗಿ ಊರಿನೊಳಗೆ ತಿರುಗಿ ಬರುತ್ತಾನೆ. ದೂರ ದೂರದವರೆಗೆ ಬೇರು ಬಿಳಲುಗಳನ್ನು ಚಾಚಿದ್ದ ಮರವನ್ನು ಕಡಿದು ಅದರ ಸ್ಥಳದಲ್ಲಿ ಹೊಸ ಶಾಲೆಯನ್ನು ಕಟ್ಟಿಸುತ್ತಾನೆ.
ಕೀರ್ತಿನಾಥ ಕುರ್ತಕೋಟಿಯವರು ಬರೆದಿದ್ದ “ಕಂಬಾರರ ಕಾವ್ಯ ಮತ್ತು ನಾಟಕಗಳು” ವಿಮರ್ಶಾ ಸಂಕಲನ ನಾಳೆ ಬಿಡುಗಡೆಯಾಗಲಿದ್ದು ಆ ಕೃತಿಯ ಒಂದು ಲೇಖನ ನಿಮ್ಮ ಓದಿಗೆ

ಚಂದ್ರಶೇಖರ ಕಂಬಾರರ ಮೊದಲ ಕವನ ಸಂಗ್ರಹ ‘ಮುಗುಳು’ ಪ್ರಕಟವಾದದ್ದು 1958ರಲ್ಲಿ. ಆದರೆ ಅವರ ಕಾವ್ಯದ ಅಧಿಕೃತ ಸ್ವರೂಪ ಅವರ ಎರಡನೆಯ ಸಂಕಲನ ‘ಹೇಳತೇನಿ ಕೇಳ’ದಲ್ಲಿ 1964ರಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿಂದೀಚೆಗೆ ಅವರ ಕಾವ್ಯ ಹಾಡು ಮತ್ತು ನಾಟಕಗಳ ಮೂಲಕವಾಗಿ ಅಭಿವ್ಯಕ್ತಿಯನ್ನು ಪಡೆಯುತ್ತ ಬಂದಿದೆ. ಅವರ ಶ್ರೇಷ್ಠ ಕವಿತೆಗಳೆಲ್ಲ ಕಥನಾತ್ಮಕವಾದವುಗಳು, ಅವರ ಕಥೆಗಳೆಲ್ಲ ಜಾನಪದ ಭೂಮಿಯಲ್ಲಿ ಬೇರು ಬಿಟ್ಟವುಗಳಾಗಿವೆ. ತಮ್ಮ ಬಾಲ್ಯ ಕಾಲದ ಜಗತ್ತನ್ನು ಕುರಿತು ಒಂದು ಭಾಷಣದಲ್ಲಿ ಅವರು ಹೇಳಿದ ಕೆಲವು ಮಾತುಗಳು ಉಲ್ಲೇಖನೀಯವಾಗಿವೆ. ಕೊಲೆಗೆ ಈಡಾದವರ ಹೆಣಗಳನ್ನು ಸಂಸ್ಕಾರ ಮಾಡಿ ಹುಗಿಯಲು ಒಬ್ಬ ಜಂಗಮನನ್ನು ಕಣ್ಣು ಕಟ್ಟಿ ಕರೆದುಕೊಂಡು ಹೋಗುತ್ತಿದ್ದರಂತೆ ಅವರ ಊರಿನಲ್ಲಿ. ಅಲಿಬಾಬಾನ ಜಗತ್ತನ್ನು ನೆನಪಿಗೆ ತರುವ ಇಂಥ ಜಗತ್ತಿನ ಸ್ಮೃತಿಗಳಿಂದ ಅವರ ಕಾವ್ಯ ತುಂಬಿಕೊಂಡಿದೆ. ಕಂಬಾರರಿಗಿಂತ ಮೊದಲೇ ಆ ನಾಡಿನಲ್ಲಿ ಖ್ವಾಜಾಸಾಹೇಬನ ಲಾವಣಿಗಳು ಮತ್ತು ‘ಕೃಷ್ಣ ಪಾರಿಜಾತ’, ‘ಸಂಗ್ಯಾ ಬಾಳ್ಯಾ’ನಂಥ ನಾಟಕಗಳು ಪ್ರಚಲಿತವಾಗಿದ್ದವು. ಈ ಸಾಹಿತ್ಯ ಅವರಿಗೆ ಒಂದು ಜಾನಪದ-ಪೌರಾಣಿಕ ಕತೆಯನ್ನು ಕೊಟ್ಟಿತ್ತು.

ಕಂಬಾರರ ಕಾವ್ಯ ಈ ಕತೆಯ ಮೂಲಕ ಜೀವನವನ್ನು ಅರ್ಥವಿಸತೊಡಗಿತು. ಒಮ್ಮೊಮ್ಮೆ ಸ್ವಂತದ ಅನುಭೂತಿಯ ಉದ್ರೇಕ ಹೆಚ್ಚಾದಾಗ ಸುಶಿಕ್ಷಿತ ಕಾವ್ಯದ ಬಲದಿಂದ ಈ ಅನುಭೂತಿಯನ್ನು ಭೇದಿಸಬೇಕಾಯಿತು. ಒಂದು ಹಳೆಯ ಕವಿತೆಯ ಹೆಸರು ‘ಉಮರ ಮೈಯಲ್ಲಿ ಬಂದಾಗ’ ಎಂದಿದೆ. ಉಮರ ಖಯ್ಯಾಮನನ್ನು ತನ್ನಲ್ಲಿ ಆವಾಹಿಸಿ ಕೊಂಡು ಅರ್ಥ ಮಾಡಿಕೊಳ್ಳಬೇಕಾಯಿತು. ‘ನವಿರ ಸಾಲಿನ ಗುಂಟ ಸುಖದ ಮುಂಗಾರಿ ಬೀಜಗಳ ಬಿತ್ತು’ ಸ್ವಂತದ ಜೊತೆಗೆ ಇತರವಾದದ್ದು ಸೇರಿಕೊಂಡಿರುವ ಪ್ರತಿಮೆ ಇದಾಗಿದೆ. ‘ನಾನು-ನೀನು’ ಎಂಬ ಕವಿತೆಯಲ್ಲಿಯೂ ಸ್ವಂತ ಮತ್ತು ಇತರಗಳ ಮುಖಾಮುಖಿ ಪ್ರಣಯಕಾವ್ಯದ ಮೈಯಲ್ಲಿ ಸೇರಿ ಹೋಗಿದೆ. ತನಗಿಂತ ಭಿನ್ನವಾಗಿದ್ದರ ಬಗ್ಗೆ ಆಕರ್ಷಣೆ ಮತ್ತು ವಿಕರ್ಷಣೆ, ಸ್ನೇಹ ಮತ್ತು ಜಗಳಗಳೆರಡೂ ಕಂಬಾರರ ಮೊದಲಿನ ಕಾವ್ಯದಲ್ಲಿ ಕಾವ್ಯ ವಸ್ತುವನ್ನು ನಿರ್ಮಿಸುತ್ತವೆ, ತಾನು ‘ಬೆಳುವೊಲದ ಉಸುಬಿನ ಮಸಾರಿ’ಯಾದರೆ ತನಗಿಂತ ಭಿನ್ನವಾದದ್ದು ‘ಮಲೆನಾಡ ಮೊಗಸಿರಿಗೆ ಹಸಿರೊರಸಿ, ಹೂಮೆತ್ತಿ ಮುದ್ದಿಡುವ ಮನ್ಸೂನು ಮಳೆ’ಯಾಗುತ್ತದೆ.

ಜಗತ್ತನ್ನು ಹುಡುಕ ಹೊರಟ ಕವಿಗೆ ಜಗತ್ತಿನ ಬದಲು ಸಿಗುವದು ಭಾಷೆ. ಈ ಭಾಷೆ ಜಗತ್ತಿನ ಹತ್ತಾರು ಸಂಘರ್ಷಗಳನ್ನು ಮೈಗೂಡಿಸಿಕೊಂಡಿರುತ್ತದೆ. ಜಗತ್ತಿನ ಬದಲಾಗಿ ಸಿಕ್ಕ ಭಾಷೆ-ಕಂಬಾರರ ಮಟ್ಟಿಗೆ ಹೇಳುವದಾದರೆ ಅವರಿಗೆ ದೊರೆತ ಜಾನಪದ ಕತೆ, ಕಾವ್ಯ, ಪುರಾಣಗಳು-ಅನೇಕ ಸಂಭಾವ್ಯತೆಗಳಿಂದ ಕೂಡಿರುತ್ತದೆ. ‘ಹೇಳತೇನ ಕೇಳ’ ಕವಿತೆಯ ಶಿವಾಪುರದಲ್ಲಿ ಹಳೆಯ ಗೌಡ ಗೌಡತಿಯರ ಆಳಿಕೆ ಮುಗಿಯುವಂತಾಗಿ ಹೊಸ ಜೀವನ ವ್ಯವಸ್ಥೆ ತಲೆಯೆತ್ತುತ್ತದೆ. ಹೊರಗಿನಿಂದ ಬಂದ ರಾಕ್ಷಸ ಗೌಡನನ್ನು ಕೊಂದು ತಾನೇ ಗೌಡನಾಗಿ ಊರಿನೊಳಗೆ ತಿರುಗಿ ಬರುತ್ತಾನೆ. ದೂರ ದೂರದವರೆಗೆ ಬೇರು ಬಿಳಲುಗಳನ್ನು ಚಾಚಿದ್ದ ಮರವನ್ನು ಕಡಿದು ಅದರ ಸ್ಥಳದಲ್ಲಿ ಹೊಸ ಶಾಲೆಯನ್ನು ಕಟ್ಟಿಸುತ್ತಾನೆ. ಗೌಡನ ಮಗ ರಾಮಗೊಂಡ ತಾಯಿಯ ವಿಚಿತ್ರ ಬಯಕೆಗಳನ್ನು ತೃಪ್ತಿ ಪಡಿಸಲು ಹುಲಿಯ ಹಾಲು ತರಲು ಹೋದವನಿಗೆ ತನ್ನ ತಂದೆಯ ಮರಣ ರಹಸ್ಯ ತಿಳಿದು ಬರುತ್ತದೆ. ತಾಯಿ ತನ್ನವಳಾದರೂ ತಂದೆ ತನ್ನ ತಂದೆಯಲ್ಲವೆಂದು ತಿಳಿದು ಬರುತ್ತದೆ. ಅವನ ತಮ್ಮ ಬಾಳಗೊಂಡನ ಕತೆ ಇನ್ನೊಂದು ರೀತಿಯದು, ಮುಂದೆ ‘ಋಷ್ಯಶೃಂಗ’ ನಾಟಕದಲ್ಲಿ ಹೊಸ ಅರ್ಥವನ್ನು ಪಡೆಯುತ್ತದೆ. ಆದರೆ ಈಗ ಇರುವಂತೆ ಈ ಜಾನಪದ-ಪೌರಾಣಿಕ ಕತೆ ನಿಬಿಡವಾದ ಅರ್ಥ ಪ್ರಪಂಚ ವನ್ನು ಒಳಗಿಟ್ಟುಕೊಂಡಿದೆ. ಕಂಬಾರರ ಕಾವ್ಯ ಹಳೆಯ ಜಗತ್ತಿನ ಪಕ್ಷಪಾತಿಯಾಗಿ ಹೊಸ ಜಗತ್ತನ್ನು ಸಂಶಯದಿಂದ ನೋಡುತ್ತಿದೆ ಎಂದು ಅರ್ಥವನ್ನು ಸರಳೀಕರಿಸಿದರೆ ಅಪಾಯ ತಪ್ಪಿದ್ದಲ್ಲ.

ಯುರೋಪದಲ್ಲಿ ಎಡಿಪಸ್ ಮತ್ತು ಹ್ಯಾಮ್ಲೆಟ್‍ನಂಥವರು ಸಾಂಸ್ಕ ೃತಿಕ ಬಿಕ್ಕಟ್ಟು ಬಂದಾಗಲೆಲ್ಲ ಕಾಣಿಸಿಕೊಳ್ಳುವ ಕಾರಣ ಪಾತ್ರಗಳು. ಕಂಬಾರರ ರಾಮಗೊಂಡ ಬಾಳಗೊಂಡರು ಅಂಥ ಪಾತ್ರಗಳಾಗಿವೆ. ಬಾಳಗೊಂಡ ತಂದೆಯೊಂದಿಗೆ ಜಗಳವಾಡಿದರೆ ರಾಮಗೊಂಡನ ಜಗಳ ತಾಯಿಯೊಡನೆ. ರಾಮಗೊಂಡ ಮತ್ತು ಅವನ ತಂದೆ ತಾಯಿಗಳ ನಡುವೆ ಬಂದು ನಿಂತ ರಾಕ್ಷಸ ಆನುವಂಶಿಕ ಸಂಬಂಧವನ್ನು ಹರಿದು ಹಾಕುತ್ತಾನೆ. ಬಾಳಗೊಂಡ ಈ ಸಂಬಂಧವನ್ನು ಸಂಶಯದಿಂದ ನೋಡತೊಡ ಗುತ್ತಾನೆ. ಅವರಿಬ್ಬರಿಗೂ ಸಫಲವಾಗಬಲ್ಲ ಕಾಮಜೀವನವಿಲ್ಲ. ಅವರಿಬ್ಬರೂ ನಾಯಕರೂ ಹೌದು ಬಲಿಪಶುಗಳು ಹೌದು. ಕಾಮದ ಅನುಭವ ಅವರಿಗೆ ಎಲ್ಲರಿಗೂ ಹೇಗೋ ಹಾಗೆ ಅನುಭವವೂ ಹೌದು ತಿಳುವಳಿಕೆಯೂ ಹೌದು. ಆದರೆ ಇವೆರಡೂ ಒಂದನ್ನೊಂದು ಅಗಲುತ್ತಿರುವ ಕ್ಷಣದಲ್ಲಿ ಅವರು ಅನುಭವಕ್ಕಾಗಿ ಕಾತರರಾಗುತ್ತಾರೆ, ಭಾಷೆಯ ಕಲಬೆರಕೆಯಿಂದಾಗಿ ತಿಳುವಳಿಕೆ ಗೊಂದಲವಾಗುತ್ತದೆ, ಆದರೆ ಅನುಭವ ಮೋಸ ಮಾಡುವದಿಲ್ಲ.

ನವೋದಯ ಕಾಲಕ್ಕಿಂತ ಮೊದಲೇ ನಮಗೆ ಪಾಶ್ಚಾತ್ಯ ನಾಗರಿಕತೆಯ ಸಂಪರ್ಕ ಬಂದಿತ್ತು. ಅದು ಮೊದಮೊದಲು ಹುಟ್ಟಿಸಿದ್ದ ಭಯ ಮತ್ತು ಬೆರಗುಗಳು ಹಿಮ್ಮೆಟ್ಟಿ ನವೋದಯ ಕಾಲಕ್ಕೆ ಒಂದು ಬಗೆಯ ಸ್ನೇಹ ಸಂಬಂಧ ಬೆಳೆಯಿತು. ಹಳೆಯದರಿಂದ ಬಿಡುಗಡೆ ಎಂಬ ಕಲ್ಪನೆಯೇ ರೋಮಾಂಚಕಾರಿಯಾಗಿತ್ತು. ನಾಡಿನ ರಾಜಕೀಯ ಸ್ವಾತಂತ್ರ್ಯಕ್ಕೂ ನವೋದಯದ ಸಾಂಸ್ಕೃತಿಕ ಬಿಡುಗಡೆಗೂ ಹತ್ತಿರದ ಸಂಬಂಧವಿದೆ. ಆದರೆ ಸಾಂಸ್ಕೃತಿಕತೆ ನಾಡಿನ ಪ್ರಜ್ಞೆಗೆ ಸಂಬಂಧಿಸಿರುವದರಿಂದ ಹಳೆ ಮತ್ತು ಹೊಸದು ಇವುಗಳ ಕಗ್ಗಂಟು ಬೇಗ ಬಿಚ್ಚುವಂಥದ್ದಲ್ಲ. ‘‘ಪುರೋಹಿತರ ನೆಚ್ಚಿ ಪಶ್ಚಿಮ ಬುದ್ಧಿಯಾದೆವೋ | ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು’’ ಗೋಪಾಲಕೃಷ್ಣ ಅಡಿಗರ ಈ ಹೇಳಿಕೆಯ ಅರ್ಥ ವ್ಯಂಗ್ಯದಿಂದ ಕೂಡಿಕೊಂಡಿರುವದರಿಂದ, ನಿರ್ಣಾಯಕ ವಾದ ಮಾತನ್ನು ಹೇಳುವದಿಲ್ಲ. ಈ ಹೇಳಿಕೆಯಲ್ಲಿಯ ಪಶ್ಚಿಮ ಪೂರ್ವಗಳ ಅರ್ಥ ತಿರುವುಮುರುವಾಗುತ್ತದೆ. ಮುಂದೆ ನೋಡಬೇಕಾದ ‘ಪುರೋಹಿತರು’ ಹಿಂದೆ ನೋಡಿದಾಗ ಮುಂದೆ ನೋಡಿದ್ದೇ ಪಶ್ಚಿಮ ಬುದ್ಧಿ’. ಬಹುಶಃ ‘ಪೂರ್ವದ ಕಡೆಗೆ ನೋಡುವದೇ ಮುನ್ನೋಟವಾಗಬಹುದು. ಇಂಥ ಬಿಕ್ಕಟ್ಟಿನಲ್ಲಿ ಕಂಬಾರರು ಅವೆರಡನ್ನೂ ಬಿಟ್ಟು ಕೊಟ್ಟು ಪಾತಾಳದ ಆಳದಲ್ಲಿ ಮತ್ತು ಮುಗಿಲಿನಾಚೆಗೆ ಮೇಲೆ ನೋಡಲು ಪ್ರಾರಂಭಿಸಿದರು. ‘‘ಹಿಂದೆ ಹಿತ್ತಲ ಮುಂದಿನಂಗಳ ನೆರಳ ವೈಭವಾ | ಹಳೆಯ ಬಾವಿಯಲ್ಲಿ ಹಸಿರು ಸ್ವಪ್ನ ಸಂಭವಾ |’’.

‘ಹೇಳತೇನ ಕೇಳ’ ಕವಿತೆಯ ಕೊನೆಯಲ್ಲಿ ಕಣ್ಣು ಕಳೆದುಕೊಂಡ ರಾಮಗೊಂಡ ಪೂರ್ವದಿಕ್ಕನ್ನು ನೋಡುತ್ತ ಸೂರ್ಯನ ಬರವಿಗಾಗಿ ಕಾಯುತ್ತಾನೆ. ಒಂದಲ್ಲ ಹತ್ತು ಅರ್ಥಗಳನ್ನು ಒಳಗಿಟ್ಟುಕೊಂಡ ಪ್ರತಿಮೆ ಇದಾಗಿದೆ. ಮೂಡಣ ದಿಕ್ಕಿನಿಂದ ಬರುವ ಸಾಧು ಶರಣನೊಬ್ಬ ಮಂತ್ರಿಸಿದ ನೀರನ್ನು ಕೊಡಲಿದ್ದಾನೆ, ರಾಕ್ಷಸನ ಮೈಮೇಲೆ ಮಂತ್ರಿಸಿದ ನೀರನ್ನು ಸಿಂಪಡಿಸಬೇಕು. ಈ ಕಾಯುವಿಕೆಯೊಂದಿಗೆ ಕವಿತೆ ಮುಗಿಯುತ್ತದೆ. ಈ ಜಾನಪದ ಕತೆ ತಾತ್ಕಾಲಿಕ ಪರಿಹಾರವನ್ನು ಸೂಚಿಸುವದಿಲ್ಲ. ನಮ್ಮ ಎಲ್ಲ ಸಾಮಾಜಿಕ ಅನಿಷ್ಟಗಳಿಗೂ ರಾಜಕೀಯ ಪರಿಹಾರವಿದ್ದರೂ, ಅವೆಲ್ಲ ನಿರ್ಮೂಲವಾದ ಮೇಲೆ ಕೂಡ ನಮ್ಮ ಅಂತರಂಗದ ಸಮಸ್ಯೆ ಉಳಿದು ಬಿಡುತ್ತದೆ. ತನ್ನ ದೇಹ ಮತ್ತು ಮನಸ್ಸು ಗಳನ್ನು ತಾಯಿಯ ಬಯಕೆಗೆ ಬಲಿಯಾಗಿಸಿದ ರಾಮಗೊಂಡ ಒಂದು ವಿಶಿಷ್ಟ ಪ್ರತಿಮೆ ಯಾಗಿ ಉಳಿದು ಬಿಡುತ್ತಾನೆ. ಕಂಬಾರರ ಕಾವ್ಯದಲ್ಲಿ ಜನತೆ ಮತ್ತು ಜನ ನಾಯಕರ ಸಂಬಂಧ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಕುರಿಗಳು ಕುರುಬನಿಗಾಗಿ ಅಲ್ಪರೆಯುತ್ತವೆ. ಆದರೆ ನಾಯಕ ನಾಯಕನಾಗಲು ಒಪ್ಪಿಕೊಳ್ಳುವದಿಲ್ಲ. ಪ್ರಜಾಪ್ರಭುತ್ವದ ಒಂದು ದೊಡ್ಡ ಬಿಕ್ಕಟ್ಟೆಂದರೆ ನಾಯಕನ ಮರಣ. ನಾಯಕ ಸಾಯದೆ ಪ್ರಜಾರಾಜ್ಯ ಹುಟ್ಟುವದಿಲ್ಲ. ಆದರೆ ರಾಜ್ಯ ವ್ಯವಸ್ಥೆಯ ಅರ್ಥವೆಲ್ಲ ನಾಯಕನಲ್ಲಿ ಕೇಂದ್ರೀಕೃತವಾಗಿರುತ್ತದೆ. ನಾಯಕ ಪಾತ್ರದ ಅನೇಕ ಮಗ್ಗುಲಗಳನ್ನು ಕಂಬಾರರ ನಾಟಕಗಳು ಹೆಚ್ಚು ವಿಶದವಾಗಿ, ಶಕ್ತಿ ಪೂರ್ಣವಾಗಿ ಚಿತ್ರಿಸುತ್ತವೆ. ನಾಯಕ ಮತ್ತು ಜನತೆ ಇವರ ಸಂಬಂಧದಲ್ಲಿರುವ ಸ್ನೇಹ, ಅವಲಂಬನ, ಮೋಸ ಮತ್ತು ದ್ರೋಹಗಳನ್ನು ಅವರ ನಾಟಕಗಳು ವಿವರವಾಗಿ, ಮೂರ್ತವಾಗಿ ನಿರೂಪಿಸುತ್ತವೆ. ಆದರೆ ರಾಮಗೊಂಡ ಮತ್ತು ಬಾಳಗೊಂಡರು ಕಾವ್ಯ ನಾಯಕರೂ ಹೌದು.

ರಾಮಗೊಂಡನ ಕಣ್ಣಿಗೆ ಬಾಳಿನ ದುರಂತದ ರಹಸ್ಯವನ್ನೆಲ್ಲ ಬಲ್ಲ ‘ಜಕ್ಕ ಜಲದೇರು’ ಕಾಣುತ್ತಾರೆ. ಅವರ ಮುಂದೆ ನಿಂತು ದಾರಿಕಟ್ಟಿ ಒಡಪ ಒಡೆದು ಹೋಗಿರೆಂದು ಕೇಳಿ ಕೊಳ್ಳುತ್ತಾನೆ. ನಿರ್ದಯವಾಗಿ ಮನುಷ್ಯತ್ವವಿಲ್ಲದಂತಿದ್ದ ಕರಿಸಿದ್ದನಿಗೆ ಬಾವಾ ಬಂದು ಒಂದು ಕುದುರೆಯನ್ನು ಕೊಟ್ಟು ಹೋಗುತ್ತಾನೆ. ಸಿದ್ಧ ಕುದುರೆಯನ್ನು ಕದ್ದು ತಾನೇ ಇಟ್ಟುಕೊಂಡಾಗ ಬಾವಾ ಅವನನ್ನು ಶಪಿಸಿ ಕುದುರೆ ಅವನಿಗೆ ದಕ್ಕದಂತೆ ಮಾಡುತ್ತಾನೆ. ಈ ನಾಯಕರು ತಮ್ಮನ್ನು ಮೀರಿದ ಶಕ್ತಿಯೊಂದಿಗೆ ಸೆಣಸುವವರು. ಶಾಪ, ವರ, ಒಗಟು, ಸಮಯ, ಹರಕೆ ಮೊದಲಾದವುಗಳು ಸಾಮಾನ್ಯವಾದ ಭಾಷೆಯನ್ನು ಮೀರಿದ ಅತಿಭಾಷೆಯಾಗುತ್ತವೆ. ರಾಮಗೊಂಡ ಜಕ್ಕ ಜಲದೇರನ್ನು ತಡವದಿದ್ದರೆ, ಕರಿಸಿದ್ದ ಬಾವಾ ಕೊಟ್ಟಿದ್ದ ಕುದುರೆಯನ್ನು ತಿರುಗಿ ಕೊಟ್ಟಿದ್ದರೆ, ಬಹುಶಃ ಅವರು ಸಾಯುತ್ತಿರಲಿಲ್ಲ; ಆದರೆ ಸಾಮಾನ್ಯರಾಗಿ ಉಳಿಯುತ್ತಿದ್ದರು. ಇವರು ದೈವವನ್ನು ಕೆಣಕುವ ನಾಯಕರು, ಅಂತೆ ಅನುಯಾಯಿಗಳಿಲ್ಲದ ನಾಯಕರು. ಹೋದರೆ ನನ್ನ ಜೀವ, ಸಿಕ್ಕರೆ ಪರಮ ಸತ್ಯ ಇದು ಅವರ ಬಾಳಿನ ಅರ್ಥವಾಗುತ್ತದೆ. ಅವರಿಗೆ ದೊರೆತ ಸತ್ಯ ಯಾವದೆಂಬುದನ್ನು ಕಾವ್ಯ ಹೇಳುವದಿಲ್ಲ. ಪರಿಣಾಮವೆಲ್ಲ ಅಸ್ಪಷ್ಟ. ಹೋದವರು ಹಿಂದಿರುಗಿ ಬರಲಿಲ್ಲ. ಆಗೀಗ ಗೊರಸಿನ ದನಿ ಕೇಳಿ ಜನ ರಾತ್ರಿಯಲ್ಲಿ ಬೆಚ್ಚಿ ಬೀಳುವರು. ಪೇರಿಸಿಟ್ಟ ಅಡಕಲ ಗಡಿಗೆಗಳು ಕೆಳಗೆ ಬಿದ್ದರೆ, ಸಲಿಗೆಯ ಸಂಬಂಧದ ಬೆಸುಗೆ ಬಿಚ್ಚಿದರೆ ಕುದರೀಸಿದ್ದ ಮತ್ತು ಕುದುರೆಯ ಜೋಡಿ ತುಳಿದಾಡಿ ಹೋಗಿರಬೇಕೆಂದು ಜನರು ಆಡಿಕೊಳ್ಳುತ್ತಾರೆ. ಬಹುಶಃ ಅವರಿಗೆ ದೊರೆತ ಸತ್ಯವೆಂದರೆ ಪ್ರೊಮಿಥಿಯಸ್ ಸ್ವರ್ಗದಿಂದ ಕದ್ದು ತಂದ ಬೆಂಕಿ.

ನಾಡಿನ ರಾಜಕೀಯ ಸ್ವಾತಂತ್ರ್ಯಕ್ಕೂ ನವೋದಯದ ಸಾಂಸ್ಕೃತಿಕ ಬಿಡುಗಡೆಗೂ ಹತ್ತಿರದ ಸಂಬಂಧವಿದೆ. ಆದರೆ ಸಾಂಸ್ಕೃತಿಕತೆ ನಾಡಿನ ಪ್ರಜ್ಞೆಗೆ ಸಂಬಂಧಿಸಿರುವದರಿಂದ ಹಳೆ ಮತ್ತು ಹೊಸದು ಇವುಗಳ ಕಗ್ಗಂಟು ಬೇಗ ಬಿಚ್ಚುವಂಥದ್ದಲ್ಲ.

ಇಂಥ ಜಾನಪದ-ಪೌರಾಣಿಕ ಕತೆಗಳ ಜಗತ್ತಿಗೆ ವಿರುದ್ಧವಾಗಿ ಇನ್ನೊಂದು ಲೋಕವೂ ಕಂಬಾರರ ಕಾವ್ಯದಲ್ಲಿ ಕಾಣಿಸಿಕೊಂಡಿದೆ. ಅದೆಂದರೆ ಸಿಟಿಯಲ್ಲಿ ಕಾಣುವ ಜಗತ್ತು, ಅವರ ಸಿಟಿ-ಕಾವ್ಯವೆಂದರೆ ವಿಡಂಬನದ ಬಹಿರ್ಮುಖ ಕಾವ್ಯ. ನಗರದ ನೂರೆಂಟು ವಿಕೃತಿಗಳನ್ನು ಈ ಕಾವ್ಯ ರಾವುಗನ್ನಡಿ ಹಿಡಿದು ತೋರಿಸುತ್ತದೆ. ಆದರೆ ಇಲ್ಲಿ ಹಳ್ಳಿ ಮತ್ತು ನಗರ ಎಂಬ ಸಾಮಾನ್ಯವಾದ, ಸರಳವಾದ ವಿರೋಧವಿಲ್ಲ. ಕಂಬಾರರ ಕಾವ್ಯ ವಿರೋಧಿಸುವದು ಜೀವನದ ವ್ಯಾಪಾರೀಕರಣವನ್ನು, ಸಿಟಿ ಒಂದು ಇಟ್ಟಿಗೆಯ ಪಟ್ಟಣವಾಗಿ ಅಲ್ಲಿ ಒಂದು ಆತ್ಮದ ಮಾರ್ಕೆಟ್ಟಿದೆ ಎಂದು ಅವರ ಒಂದು ಕವಿತೆ ಹೇಳುತ್ತದೆ. ಅದು ಯಾವ ಸಿಟಿಯಲ್ಲಿ ಅಥವಾ ಅದು ನಿಜವೇ ಎಂಬ ಮಾತು ಇಲ್ಲಿ ಪ್ರಸ್ತುತವಲ್ಲ. ಹಳೆಗೆಳತಿ ಭೆಟ್ಟಿಯಾಗಿ ಅವಳ ಜೊತೆಯಲ್ಲಿ ಕುಳಿತರೂ ಹಳೆಯ ರೋಮಾಂಚ ಸತ್ತು ಹೋಗಿದ್ದರೆ ಈ ಸಾವಿಗೇನು ಕಾರಣ ಎಂದು ಕೇಳಬೇಕಾಗುತ್ತದೆ. ಜೀವ ವಿರೋಧಿಯಾದ ಎಲ್ಲ ಸಂಗತಿಗಳನ್ನೂ ಕಂಬಾರರ ಕಾವ್ಯ ವಿರೋಧಿಸುತ್ತದೆ. ಇಲ್ಲಿ ವಿಡಂಬನದ್ದೇ ಮುಖ್ಯ ಪಾತ್ರ.

ಇಷ್ಟಾಗಿಯೂ ಕಂಬಾರರ ಸಿಟಿ ಕಾವ್ಯ ತೃಪ್ತಿ ಕೊಡುವಂಥದ್ದಲ್ಲ. ಅವರ ಕಾವ್ಯ ತನಗೆ ವಿರುದ್ಧವಾದ ಕಾವ್ಯವನ್ನು ಹುಟ್ಟಿಸಿಕೊಂಡಂತಾಗಿದೆ. ಅವರ ಸಮಗ್ರ ಕಾವ್ಯದಲ್ಲಿ, ಅದರ ಸಂದರ್ಭದಲ್ಲಿ ಈ ಕಾವ್ಯವನ್ನಿಟ್ಟು ನೋಡಬೇಕು. ಸಿಟಿ ಕಾವ್ಯ ‘ಸೂಚಿಸುವ ವಾಸ್ತವತೆಗೂ ಅವರ ಉಳಿದ ಕಾವ್ಯ ಸೂಚಿಸುವ ಅವಾಸ್ತವಕ್ಕೂ ಬಹಳ ಅಂತರವಿದೆ. ಕಂಬಾರರ ಕಾವ್ಯಕ್ಕೆ ಬೇಕಾಗುವ ಕನಸುಗಳು ಸಿಟಿಯಲ್ಲಿ ಸಿಗುವದಿಲ್ಲ. ‘ಸ್ವಂತಚಿತ್ರ’ ಎಂಬ ಒಂದು ಕವಿತೆಯಲ್ಲಿ ಆಧುನಿಕ ಕಾವ್ಯ ಹುಡುಕುತ್ತಿರುವ ಕೇಂದ್ರ ಪ್ರಜ್ಞೆಯನ್ನು ಅವರು ವಿಡಂಬನಕ್ಕೀಡು ಮಾಡಿದ್ದಾರೆಂದು ತೋರುತ್ತದೆ.

ಮಧ್ಯದ ಅಯೋಧ್ಯೆಯೊಂದಿದೆಯಲ್ಲ,
ಅಲ್ಲೊಂದು ನರಮಂಡಲದ ತುದಿ ಮೊದಲು
ಹರಿಹರಿದು ಸೊರಗಿ ಮತ್ತೆ ಸೇರುವ ಹಾಗೆ :
ಅದೊಂದು
ಬಗೆ ಕಾವ್ಯದ ಕೇಂದ್ರ ಪ್ರಜ್ಞೆಯ ಹಾಗೆ-
ಕರಿಗೆರೆಯ ಕಬ್ಬಿಣಸಳಿಯ ಪಂಜರ ಬರೆ……..

ಕವಿ ಗೆಳೆಯನಿಗೆ ಸ್ವಂತ ಚಿತ್ರವನ್ನು ಬರೆಯುವದು ಹೇಗೆಂದು ಕಲಿಸುತ್ತಿದ್ದಾನೆ. ಅವನು ಹೇಳಿದಂತೆ ಬರೆದರೆ ಅದು ಭಾರತದ ಚಿತ್ರವಾಗುತ್ತದೆ. ಭಾರತದ ಕೇಂದ್ರದಲ್ಲಿಯ ಅಯೋಧ್ಯೆಯಲ್ಲಿ ಕಾವ್ಯದ ಕೇಂದ್ರ ಪ್ರಜ್ಞೆಯಂಥ ನರಮಂಡಲದ ಚಿತ್ರ ಪಂಜರದಂತೆ ಕಾಣಬೇಕು. ಸೂರ್ಯಾಸ್ತದ ಹೊತ್ತು ಈ ಪಂಜರದಲ್ಲಿ ಹಕ್ಕಿ ಬರಬಹುದು. ಪಂಜರದಲ್ಲಿ ಸೆರೆಗೊಂಡ ಹಕ್ಕಿ ಹಾಡಬಹುದು. ಭಾರತ ಒಂದು ಸನಾತನ ವೃಕ್ಷದಂತೆ ಕಾಣಬೇಕು; ಆ ವೃಕ್ಷದ ಮಧ್ಯದಲ್ಲಿ ಪಂಜರ ಗಿಡದೊಡನೆ ಸಾವಯವ ಸಂಬಂಧವನ್ನಿಟ್ಟುಕೊಳ್ಳ ಬೇಕು. ಪಂಜರದಲ್ಲಿ ಸೆರೆಯಾದ ಹಕ್ಕಿ ಹಾಡಬೇಕು. ಅದು ಹಾಡದಿದ್ದರೆ ಕುಂಚವನ್ನು ಬಣ್ಣದಲ್ಲಿ ಅದ್ದಿ ಅದರ ಚುಂಚನ್ನು ಬಿಡಿಸಿ ಅಲ್ಲೊಂದು ಹುಣ್ಣು ಬರೆಯಬೇಕು. ಆ ಹುಣ್ಣಿನ ಕೆಳಗೆ ಗೆರೆಯೆಳೆದು ನಿನ್ನ ಹೆಸರು ಬರೆಯಬೇಕು ಎಂದು ಕವಿತೆ ಹೇಳುತ್ತದೆ. ಆಧುನಿಕ ಕಾವ್ಯದ ಅನೇಕ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪರಿಕಲ್ಪನೆಗಳನ್ನು ಈ ಕವಿತೆ ನಿರಾಕರಿಸುತ್ತದೆಯೆಂದು ತೋರುತ್ತದೆ.

ಭಾರತದಲ್ಲಿ ವೃಕ್ಷ, ವೃಕ್ಷದಲ್ಲಿ ಪಂಜರ, ಪಂಜರದಲ್ಲಿ ಹಕ್ಕಿ, ಹಕ್ಕಿಯ ಹಾಡು ಇವೆಲ್ಲ ಒಟ್ಟುಗೂಡಿಕೊಂಡು ಒಂದು ಚಿತ್ರವಾಗಿ ಕವಿಯ ಹೆಸರೂ ಆ ಚಿತ್ರದಲ್ಲಿ ಸೇರಿ ಹೋಗುತ್ತದೆ. ಒಂದು ದೃಷ್ಟಿಯಿಂದ ಇದು ಐತಿಹಾಸಿಕ ಸಂಪ್ರದಾಯದ ನಿರಾಕರಣೆ, ಇನ್ನೊಂದು ದೃಷ್ಟಿಯಿಂದ ಇದು ಅಕ್ಷರ ಸಂಸ್ಕೃತಿಯ ನಿರಾಕರಣೆ. ‘ಕ್ಯಾಲೆಂಡರಿನಲ್ಲಿಯ ನಿಸರ್ಗ’ದಂತೆ ಈ ಚಿತ್ರವೂ ನಿರಾಕರಣೆಗೆ ಯೋಗ್ಯ ವಾದದ್ದು. ಅದಕ್ಕಾಗಿ ಕಂಬಾರರ ಕಾವ್ಯ ಜಾನಪದಕ್ಕೆ ತಿರುಗಿ ಹೋಗುತ್ತದೆ ಅಥವಾ ಅದು ಜಾನಪದದಿಂದ ಪ್ರಾರಂಭವಾಗುತ್ತದೆ. ಜಾನಪದವೇ ಅವರ ಕಾವ್ಯದ ಗಮ್ಯವಲ್ಲ, ಅದು ಅದರ ಪ್ರಾರಂಭ. ಅದು ನಿಲುಗಡೆಯ ಸ್ಥಿತಿಯೂ ಅಲ್ಲ, ಜಾನಪದ ಕಾವ್ಯದ ಉಪಯೋಗದ ಒಂದು ಸಾಧ್ಯತೆ ಬೇಂದ್ರೆಯವರಲ್ಲಿ ಕಾಣುತ್ತಿದ್ದರೆ ಕಂಬಾರರಲ್ಲಿ ಇನ್ನೊಂದು ಬಗೆಯ ಸಾಧ್ಯತೆ ಕಾಣುತ್ತದೆ. ಬೇಂದ್ರೆಯವರಿಗೆ ಭಾವಗೀತದ ವಾಕ್ಯ ಬೇಕಾಗಿತ್ತು. ಆ ಬಗೆಯ ವಾಕ್ಯ ಅವರಿಗೆ ಜಾನಪದ ಕಾವ್ಯದಲ್ಲಿ ದೊರೆಯಿತು. ಅವರ ಪ್ರಾರಂಭದ ಕವಿತೆಗಳಲ್ಲಿ ಮುಕ್ತವಾದ ವಾಕ್ಯರಚನೆ ಜಾನಪದ ಕಾವ್ಯದ್ದು. ಷಟ್ಪದಿಯ ವಾಕ್ಯ ರಚನೆಯಿಂದ ಅವರು ಜಾನಪದ ಕಾವ್ಯದ ವಾಕ್ಯರಚನೆಗೆ ಜಿಗಿದರು. ಅಲ್ಲಿಂದ ಮುಂದೆ ಅವರು ಅವೆರಡು ಸಂಸ್ಕಾರಗಳನ್ನೂ ಅಳವಡಿಸಿಕೊಂಡು ಆಧುನಿಕ ಕಾವ್ಯದ ವಾಕ್ಯವನ್ನು ನಿರ್ಮಿಸಿಕೊಂಡರು.

ಚಂದ್ರಶೇಖರ ಕಂಬಾರರು ತಮ್ಮ ಮೊದಲ ಸಂಕಲನವಾದ ‘ಮುಗುಳು’ದಲ್ಲಿ ಆಧುನಿಕ ಕಾವ್ಯದ ಮುಖ್ಯವಾಗಿ ನವೋದಯ ಕಾವ್ಯದ ಭಾಷೆ ಮತ್ತು ಮೌಲ್ಯಗಳನ್ನು ಒಪ್ಪಿಕೊಂಡೇ ಮುಂದುವರಿದರು. ಆದರೆ ಅವರ ಎರಡನೆಯ ಸಂಗ್ರಹ ‘ಹೇಳತೇನ ಕೇಳ’ ಸಂಪೂರ್ಣವಾಗಿ ಅಕ್ಷರ ಸಂಸ್ಕೃತಿಯನ್ನು ನಿರಾಕರಿಸಿದ ಕಾವ್ಯವಾಗಿದೆ. ನವೋದಯ ಕಾವ್ಯದ ಛಂದೋಗತಿ ಎಂದರೆ ಮಾತ್ರಾಗಣಗಳನ್ನು ಆಧರಿಸಿದ ಛಂದೋ ಪದ್ಧತಿ. ಈ ತಾಳಗತಿಯಲ್ಲಿ ಹುಟ್ಟಿದ ಕವಿತೆಯನ್ನು ಹಾಡಬಹುದಾದರೂ ಆ ಹಾಡಿಗೆ ಅಂಶಗಣದ ಮುಕ್ತತೆ ಇರಲಾರದು. ಕಂಬಾರರ ‘ಹೇಳತೇನ ಕೇಳ’ದ ಛಂದೋಗತಿ ಲಾವಣಿಗಳ ಛಂದೋಗತಿಯನ್ನು ಅನುಸರಿಸಿರುವದರಿಂದ ಅದನ್ನು ಬೀಸಾಗಿ ಹಾಡಬಹುದು. ಈ ಹಾಡಿನ ಲಯದಲ್ಲಿ ಆದಿಮ ಜನಾಂಗದ ಕುಣಿತದ ನಾದ ಮತ್ತು ಶಕ್ತಿಗಳಿವೆ. ಇದನ್ನೇ ಬಳಸಿಕೊಂಡು ನಮ್ಮ ಸುಶಿಕ್ಷಿತ ಕಾವ್ಯ ಹುಟ್ಟಿ ಬಂದಿತು. ಮೌಖಿಕ ದನಿ ಬರೆವಣಿಗೆ ಯಲ್ಲಿ ಭಾಷಾಂತರಗೊಂಡು ಕೆಲವು ಗುಣಗಳನ್ನು ಕಳೆದುಕೊಂಡು ಮತ್ತೆ ಕೆಲವು ಹೊಸ ಗುಣಗಳನ್ನು ಪಡೆದುಕೊಂಡಿತು. ಶಬ್ದ ಅಕ್ಷರದಲ್ಲಿ ಪರಿವರ್ತಿತವಾದಾಗ ಅದರ ಅರ್ಥವಂತಿಕೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಲಕ್ಷ್ಮೀಶನ ‘‘ತಾಯೆನಗೆ ತಾಯೆ ನಗೆಗೂಡಿ ನೋಡಿ’’ ಎಂಬ ಸಾಲಿನಲ್ಲಿ ಶಬ್ದ ಮತ್ತು ಅಕ್ಷರಗಳ ಚತುರವಾದ ಹೊಂದಾಣಿಕೆಯಲ್ಲಿ ಅರ್ಥಗಳನ್ನು ಸೃಷ್ಟಿಸುತ್ತಾನೆ. ಕನ್ನಡ ಕಾವ್ಯ ಮೊದಲಿನಿಂದ ಆಡುಮಾತು ಮತ್ತು ಬರೆವಣಿಗೆಗಳ ನಡುವೆ ಸಮನ್ವಯವನ್ನು ಸಾಧಿಸುತ್ತಲೇ ಬಂದಿದೆ. ಬೇಂದ್ರೆಯವರು ಆಡುಮಾತನ್ನು ಗಂಭೀರ ಭಾವಗಳ ಅಭಿವ್ಯಕ್ತಿಗಾಗಿ ಕೂಡ ಉಪಯೋಗಿಸಿ ಅದಕ್ಕೆ ಕಾವ್ಯ ಗೌರವವನ್ನು ತಂದುಕೊಟ್ಟರು. ಕಂಬಾರರು ಅದಕ್ಕೂ ಮುಂದೆ ಹೋಗಿ ಕಾವ್ಯದ ದನಿಯನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡಿದರು. ಈ ದನಿಯ ನಿರಂತರವಾದ ಅನುರಣನದಿಂದ ಹೊಸಲೋಕ ಸೃಷ್ಟಿಯಾಗುತ್ತದೆ. ‘‘ಹೇಳತೇನ ಕೇಳೊ ಗೆಳೆಯಾ ಕತಿಯೊಂದ ನಿನ ಮುಂದ | ಹೀಂಗ ನನ್ನ ಮುಂದೆ ಕುಂಡ್ರೊ ತೆರದ ಮನಾ’’ ಕತೆಯನ್ನು ಹೇಳುವ ಕವಿ ಮತ್ತು ಅದನ್ನು ಕೇಳುವ ಗೆಳೆಯ ಇಬ್ಬರೂ ಕತೆಯಾಗಿ ಬಿಡುತ್ತಾರೆ.

ಕಂಬಾರರ ಕಾವ್ಯವನ್ನು ತಿಳಿದುಕೊಳ್ಳುವದಕ್ಕಿಂತ ಅದನ್ನು ಅನುಭವಿಸಲು ಇದು ಸಹಾಯ ಮಾಡುತ್ತದೆ. ಗೇಯತೆ ಕವಿತೆಯ ಒಂದು ಅಲಂಕಾರವಾಗದೆ ಅದೇ ಕವಿತೆಯ ಮಾಧ್ಯಮವಾಗುತ್ತದೆ. ‘ಚಂದಿರನ ಬೇಟೆಗೆ ಹೋದಾ’ ಎಂಬ ಕವನದ ನಾಯಕ ಚಂದ್ರನ ಬೇಟೆಗೆ ಹೋಗುತ್ತಾನೆ. ಆದರೆ ಅವನು ಹೋಗುವ ದಾರಿ ವಿಶಿಷ್ಟವಾಗಿದೆ. ‘ಬಿಸಿಲ ಗುದುರೆಯನೇರಿ ಹೋದಾ’ ಅಂದಾಗ ಮೂರು ಬಗೆಯ ಸಂಭಾವ್ಯತೆಗಳು ಕಾಣಿಸಿಕೊಳ್ಳುತ್ತವೆ. ಬಿಸಿಲು ಗುದುರೆ ಅವನ ಮನಸ್ಸಿನ ಆಸೆಯನ್ನು ಸೂಚಿಸುವದರ ಜೊತೆಗೆ ಅವನ ಆಸೆ ವ್ಯರ್ಥವೆಂದೂ ಹೇಳುತ್ತದೆ. ಆದರೆ ಇದೂ ಶಬ್ದಾರ್ಥವಾಗಿದೆ. ‘ಬಿಸಿಲುಗುದುರೆ’ ಎಂಬ ಶಬ್ದದ ನಾದದ ಗತಿಯನ್ನು ಬದಲು ಮಾಡಿ ಹಾಡಿದರೆ ಬಿಸಿಲನ್ನು ಮೀರಿ ನಿಂತ ಚಂದ್ರ ಕಾಣತೊಡಗುತ್ತಾನೆ. ಈ ಅಸಂಭವದ ಸಂಭಾವ್ಯತೆ ಇಲ್ಲಿಯ ಕಾವ್ಯ ವಸ್ತುವಾಗಿದೆ. ‘ಕೈ ಮೀರಿದ ಚಂದಿರನ ಬೇಟೆ’ ಹೇಗಿರಬಹುದೆಂಬ ಕಲ್ಪನೆ ಬೇಟೆಗಾರನಿಗೂ ಇಲ್ಲ. ಗೊತ್ತಿರುವದನ್ನು ಕಾವ್ಯ ಭಾಷೆ ದಾಖಲಿಸಿದರೆ ಕಾವ್ಯದ ನಾದ ಇನ್ನೂ ಸಿಗದಿರುವದನ್ನು ಬೇಟೆಯಾಡುತ್ತದೆ. ಆದರೆ ಇಂಥ ಸಾಹಸವನ್ನು ಕೈಕೊಳ್ಳುವ ಅಪಾಯವೇ ಕಾವ್ಯ ಪ್ರತಿಭೆಗೆ ಆಹ್ವಾನವಾಗುತ್ತದೆ. ಅಂತಲೇ ಕವಿತೆಯಲ್ಲಿ ನಿರೂಪಕಿ ಚಂದಿರನ ಬೇಟೆಗೆ ಹೋದ ಹುಡುಗನಿಗಾಗಿ ಕಾತರದಿಂದ ಕಾಯುತ್ತಿದ್ದಾಳೆ. ಕನಸಿನ ಸತ್ಯವೆಂದರೆ ಲೋಕಾಂತರದ ಸತ್ಯ. ಕನಸಿಗೂ ಹಾಡಿಗೂ ಬಿಡಲಾರದ ಸಂಬಂಧವಿದೆ. ಬೆಳದಿಂಗಳಲ್ಲಿ ಈಜಾಡುವ ಬೆಳ್ಳಿ ಮೀನು-ಚಂದ್ರನೇ ಈ ಕನಸುಗಳನ್ನು ಹುಟ್ಟಿಸುವಾತ. ‘‘ಕನಸಿನಣುಗನೋ ಇವನ ಬಸಿರಿನಲೆ ಕನಸು ಬಂದವೇನೋ’’ ಬೇಂದ್ರೆಯವರ ‘ಅಪರೂಪರಾಗ’ ಎಂಬ ಕವಿತೆಯ ಸಾಲು ಈ ಸನ್ನಿವೇಶವನ್ನು ಸರಿಯಾದ ಶಬ್ದಗಳಲ್ಲಿ ಬಣ್ಣಿಸಿ ಹೇಳುತ್ತದೆ. ‘ಕಾಡು-ನಾಡು’ ಎಂಬ ಕವಿತೆಯಲ್ಲಿ ಕಂಬಾರರು ಈ ಸನ್ನಿವೇಶವನ್ನು ವಿಶದವಾಗಿ ತಿಳಿಸಿದ್ದಾರೆ. ಕಾಡಿನಲ್ಲಿ ಚಂದ್ರ ಬೆಳಗಿದರೆ ಆಟ ಕಳೆಗಟ್ಟುತ್ತದೆ. ಚಂದ್ರ ಗಿಡಕ್ಕೆ ಹೂವಿನ ಕನಸನ್ನು ಕೊಡುತ್ತಾನೆ. ಗಾಳಿಗೆ ಹಾಡಿನ ಕನಸನ್ನು ಕೊಡುತ್ತಾನೆ. ಅಂದರೆ ಸಚರಾಚರ ಜಗತ್ತಿಗೆ ಕನಸುಗಳ ವಾಸ್ತವ ಸತ್ತೆಯನ್ನು ಚಂದ್ರನ ಬೆಳಕಿನಲ್ಲಿ ಮಾತ್ರ ಗುರುತಿಸಬಹುದು. ಅಂಬಿಗರ ಹುಡುಗ ನದಿಯ ಮೈಯಲ್ಲಿ ಬೆಳ್ಳಿ ಮೀನಾಗಿ ತೇಲುವ ಚಂದ್ರನನ್ನು ಬಲೆ ಬೀಸಿ ಹಿಡಿಯಲು ಹೋಗುತ್ತಾನೆ. ಗೋರಿಯಿಂದ ಎದ್ದು ಬಂದ ಮುದುಕ ಕೂದಲ ಬಲೆಯನ್ನು ಹಾಕಲು ಸಲಹೆ ನೀಡುತ್ತಾನೆ. ಈ ಪ್ರಯತ್ನ ವ್ಯರ್ಥವಾದರೂ ಅಡ್ಡಿಯಿಲ್ಲ.

ಕಂಬಾರರ ಒಂದು ಕವಿತೆ ಇದೇ ಸನ್ನಿವೇಶದ ಕತೆಯನ್ನು ಹಾಡು ಮಾಡಿ ಹೇಳುತ್ತದೆ. ಕವಿತೆಯ ಹೆಸರು ‘ನವಿಲೇ ನವಿಲೇ’ ಎಂದಿದೆ. ಶಿವಪುರದ ಗೌಡ ಶಿವದೇವನಾಯಕ ಅವನ ಹೆಂಡತಿ ಮಹಾದೇವಿ ಇವರದು ಅಪರೂಪದ ದಾಂಪತ್ಯ. ಅವರ ಪ್ರೀತಿ ಶಿವನಿಗೆ ಪ್ರಿಯವಾದದ್ದು, ಆದರೂ ಶಿವಪುರಕ್ಕೆ ನೀರಿಲ್ಲ, ಮಹಾದೇವಿ ಮುಟ್ಟಾದ ಮೈಲಿಗೆಯನ್ನು ಕಳೆದುಕೊಳ್ಳಲು ಕೊಡ ತೆಗೆದುಕೊಂಡು ನೀರಿಗೆ ಹೊರಡು ತ್ತಾಳೆ. ಆದರೆ ನವಿಲು ಕಂಡು ಮುಗ್ಧಳಾಗಿ ಹಾಗೆಯೇ ನೀರಿಲ್ಲದೆ ತಿರುಗಿ ಬರುತ್ತಾಳೆ. ಮಳೆಯಾದರೆ ಸಾವಳಗಿಯ ಮಠಕ್ಕೆ ಒದ್ದೆಯಲ್ಲಿ ಹೋಗಿ ಬರುವೆನೆಂದು ಹರಕೆ ಹೊತ್ತಿದ್ದಾಳೆ. ಅವಳ ಬಯಕೆ, ನವಿಲಿನ ಕರೆ ಸಫಲವಾಗುವಂತೆ ಮಳೆ ಬರುತ್ತದೆ. ಮಳೆ ‘ಸೂರ್ಯ ನಾರಾಯಣನ ವೀರ್ಯ ಹರದಾವೇನ’ ಎಂಬಂತೆ ಧಾರಾಕಾರವಾಗಿ ಬೀಳುತ್ತದೆ. ಮಳೆಯಲ್ಲಿ ತೋಯಿಸಿಕೊಂಡು ತಿರುಗಿ ಬಂದ ಮಡದಿಗೆ ಶಿವದೇವನಾಯ್ಕ ಹೊಸ ಸೀರೆಯೊಂದನ್ನು ಕೊಡುತ್ತಾನೆ. ಅದು ನವಿಲಿನ ಗರಿಗಳಿಂದ ನೇಯ್ದ ಸೀರೆ; ನವಿಲಿನ ರಕ್ತ ಚುಮುಕಿಸಿದ ಅಂಚಿನ ನವಿಲು ಬಣ್ಣದ ಸೀರೆ. ಮಹಾದೇವಿ ಆ ಸೀರೆಯ ನ್ನೊಲ್ಲದೆ ಒದ್ದೆ ಸೀರೆಯಲ್ಲಿಯೇ ಮನೆಬಿಟ್ಟು ಹೊರಟು ಕತ್ತಲೆಯಲ್ಲಿ ಮಾಯವಾಗುತ್ತಾಳೆ.

ಈ ಕತೆ ಒಂದು ಜಾನಪದ-ಪೌರಾಣಿಕ ಕತೆಯೇ ಆಗಿದೆ. ಬರಗಾಲದಲ್ಲಿ ಮಹಾದೇವಿಯ ಹಂಬಲ ಮತ್ತು ನವಿಲಿನ ಉನ್ಮಾದದ ಕೂಗಿನಿಂದ ಮಳೆಯಾಗುತ್ತದೆ. ಸಂಯಮ ತುಸು ಸಡಲಿದರೆ ಇದೂ ಒಂದು ನೈತಿಕದ ಕತೆಯಾಗಿಬಿಡಬಹುದು. ಕತೆಯ ಬಂಧ ‘ಕೆರೆಗೆ ಹಾರ’ವನ್ನು ನೆನಪಿಗೆ ತಂದುಕೊಡುತ್ತದೆ. ಆದರೆ ಕಂಬಾರರ ಕಾವ್ಯ ಶಕ್ತಿ ಅದನ್ನು ಬೇರೆ ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ. ‘ನೀರಿಲ್ಲ ಶಿವಪುರಿಗೆ’ ಇದು ಕತೆಯಲ್ಲಿಯ ವಸ್ತು ಸ್ಥಿತಿ. ಮೊದಲನೆಯ ನುಡಿಯಲ್ಲಿಯ ‘ಸತಿ ಪತಿಯರ ಪ್ರೀತಿ ಹಿತವಾದರೂ ಶಿವಗೆ | ನೀರಿಲ್ಲ ಶಿವಪುರಿಗೆ | ಎಂಬ ಹೇಳಿಕೆ ಯೋಚನೆ ಮಾಡಲು ಪ್ರೇರಿಸುತ್ತದೆ. ಪ್ರಾಚೀನ ಜಗತ್ತಿನಲ್ಲಿ ಇದ್ದದ್ದೇ ಹೀಗೆ.

ಋಷ್ಯಶೃಂಗನಂಥ ಯುವಕ ಹೆಣ್ಣಿನ ಸಂಗದಿಂದ ದೂರವಿದ್ದರೆ ಬರಗಾಲ ಬೀಳುತ್ತದೆ. ಇದು ಕಂಬಾರರ ಮೊದಲ ನಾಟಕದಲ್ಲಿಯ ವಸ್ತು ಆಗಿದೆ. ಆದರೆ ಇಲ್ಲಿ ಶಿವದೇವನಾಯಕ ಮಹಾದೇವಿಯರ ದಾಂಪತ್ಯ ಪ್ರೀತಿಕರವಾಗಿದ್ದರೂ ಮಳೆಯಿಲ್ಲ. ಇಂಥ ದಾಂಪತ್ಯದಿಂದೇನು ಪ್ರಯೋಜನ ವೆಂದು ಮಹಾದೇವಿ ನವಿಲಿನೊಡನೆ ತನ್ನ ಪ್ರಣಯ ಪ್ರಸಂಗವನ್ನು, ತನ್ನ ಮುಟ್ಟಿನ ಅವಧಿಯಲ್ಲಿ, ನಡೆಸುತ್ತಾಳೆ ಅಥವಾ ಎರಡು ದಿನ ನವಿಲಿನ ಕರೆಯನ್ನು ತಿರಸ್ಕರಿಸಿ ಮೂರನೆಯ ದಿನ ಶರಣಾಗುತ್ತಾಳೆ. ಒಳ್ಳೆಯ ಅರ್ಥದಲ್ಲಿ ಅವಳು ಗರತಿ. ಅವರದು ಅನುರೂಪವಾದ ದಾಂಪತ್ಯ. ಆದರೂ ಶಿವಪುರಕ್ಕೆ ಕುಡಿಯಲು ನೀರಿಲ್ಲ. ನವಿಲಿನೊಡನೆ ಅವಳ ಪ್ರಣಯ ಪ್ರಸಂಗ ಊರಿಗೆ ಮಳೆಯನ್ನು ತರಿಸುತ್ತದೆಂಬ ಸಂಗತಿ ಈ ಸನ್ನಿವೇಶ ವನ್ನು ಕುರಿತು ಆಳವಾಗಿ ಪರ್ಯಲೋಚಿಸುವಂತೆ ಮಾಡುತ್ತದೆ. ನವಿಲಿನ ಕುಣಿತದಲ್ಲಿಯ ಉನ್ಮಾದ ಮತ್ತು ತನ್ಮಯತೆಗಳು ಅವಳ ದಾಂಪತ್ಯದಲ್ಲಿ ಇಲ್ಲ. ಅವರ ದಾಂಪತ್ಯಕ್ಕೆ ಸಾಮಾಜಿಕ ಮನ್ನಣೆಯಿದೆ, ನವಿಲಿನ ಕುಣಿತ ನಡೆಯುವದು ಕಾಡಿನಲ್ಲಿ. ಕಾಡೇ ಎದ್ದು ಕುಣಿಯುವಂತೆ ನವಿಲು ಕುಣಿಯುತ್ತದೆ. ಅದು ‘ಸೂರ್ಯನ ಥರ ಹೊಳೆವ ನವಿಲು’ – ಈ ಪ್ರಣಯ ಅಲೌಕಿಕವಾದರೂ ಅದು ಸಮಾಜಬಾಹಿರವಾದದ್ದು ಎಂಬ ಮಾತು ಇಲ್ಲಿ ಮಹತ್ವದ್ದಾಗಿದೆ. ಮಳೆ ಬಂದ ಮೇಲೆ ನವಿಲು ಉಳಿಯುವದಿಲ್ಲ. ಅದರ ಗರಿ, ತುರಾಯಿ, ನೆತ್ತರಗಳೆಲ್ಲ ಈಗ ಶಿವದೇವನಾಯ್ಕ ತಂದ ಸೀರೆಯಲ್ಲಿಯ ಅಲಂಕಾರದ ವಸ್ತುಗಳಾಗಿವೆ. ಈ ಘಟನೆಗಳೆಲ್ಲ ಸಾಂಕೇತಿಕವಾಗಿವೆ, ಕಾರಣವೆಂದರೆ ಒಂದು ಮಹತ್ವದ ಸಾಂಕೇತಿಕ ಕ್ರಿಯೆಯನ್ನು ಇವು ಧ್ವನಿಸುತ್ತವೆ.

ಶಿವದೇವನಾಯ್ಕ ಮತ್ತು ಮಹಾದೇವಿಯರದು ಅನುರೂಪವಾದ ದಾಂಪತ್ಯವೆಂದು ಈಗಾಗಲೇ ಹೇಳಲಾಗಿದೆ. ಇಲ್ಲಿ ಯಾವ ವ್ಯಂಗ್ಯವನ್ನೂ ಕವಿತೆ ಉಪಯೋಗಿಸುವದಿಲ್ಲ ‘ಪತಿವರತಿ ಮಿಂದ ನೀರು’ ಎಂದು ಹೇಳುವಾಗ ಕೂಡ ವ್ಯಂಗ್ಯವಿಲ್ಲ. ವಾಗರ್ಥಗಳ ದಾಂಪತ್ಯ ಇಲ್ಲಿ ನೆನಪಾಗಬೇಕು. ಈ ಕವಿತೆಯ ಮೊದಲ ನುಡಿಯಲ್ಲಿಯ ಹಾರೈಕೆಯನ್ನು ಪರಿಶೀಲಿಸಬೇಕು. ‘ನಾದಗಳು ನುಡಿಯಾಗಲೆ | ಹಾಡಾದ ನುಡಿಯೊಳಗೆ ಬೆಳಕಾಡಿ ಹಾಡಿನ | ಆಚೆ ಸೀಮೆಯ ತೋರಲೇ’ ನಾದಗಳು ನುಡಿಯಾಗಬೇಕು, ಹಾಡಾದ ನುಡಿಯೊಳಗೆ ಬೆಳಕಾಡಿ ಆಚೆಯ ಸೀಮೆಯನ್ನು ತೋರಬೇಕು. ಈ ನುಡಿ ಕವಿತೆಯ ಕೊನೆಗೆ ಪುನರುಕ್ತವಾಗುವದರಿಂದ ಕವಿತೆಯ ವಸ್ತು ನಿರ್ದೇಶ ಇಲ್ಲಿದೆ ಎಂದು ತಿಳಿಯ ಬೇಕಾಗುತ್ತದೆ. ನಾದಗಳು ನುಡಿಯಾದರೆ ಆ ನುಡಿಗಳು ಅರ್ಥವನ್ನು ಬೀರುವದಿಲ್ಲ. ಅರ್ಥವೆಂದರೆ ಲೌಕಿಕದ ಪರಿಮಿತ ಪ್ರಪಂಚ. ಶಬ್ದ ಮತ್ತು ಅರ್ಥಗಳೆರಡೂ ಸೇರಿಕೊಂಡು ತಮ್ಮ ಪರಸ್ಪರ ಸಂಕೇತ ಕ್ರಿಯೆಯ ಮೂಲಕ ಪ್ರಪಂಚದ ತಿಳಿವನ್ನು ಪ್ರತಿಫಲಿಸುತ್ತ ಒಂದು ಸಾಂಸ್ಕ ೃತಿಕ ವ್ಯವಸ್ಥೆಯನ್ನು ಕಟ್ಟಿಕೊಳ್ಳುತ್ತವೆ. ಭಾಷೆಯ ಗುರಿ ಎಂದರೆ ಯಾವ ರೀತಿಯ ಗೊಂದಲಕ್ಕೂ ಆಸ್ಪದ ಕೊಡದ ವ್ಯವಸ್ಥೆಯ ನಿರ್ಮಾಣ. ದಾಂಪತ್ಯವೂ ಇಂಥದೇ ಒಂದು ವ್ಯವಸ್ಥೆ ಎಂದು ಬೇರೆ ಹೇಳಬೇಕಾಗಿಲ್ಲ. ಭಾಷೆಯಲ್ಲಿಯೇ ಆಗಲಿ ದಾಂಪತ್ಯದಲ್ಲಿಯೇ ಆಗಲಿ ಸಾಮಾಜಿಕ ಪ್ರೇರಣೆ ಹಾಗೂ ಮನ್ನಣೆಗಳು ಅವುಗಳ ಗಮ್ಯವಾಗಿರುತ್ತದೆ. ಅವುಗಳ ಸಾಂಕೇತಿಕ ಕ್ರಿಯೆ ಒಂದೇ ಆಗಿದೆ. ದಾಂಪತ್ಯದಂತೆ ಭಾಷೆಯೂ ತನ್ನ ಸಂಬಂಧಗಳನ್ನು ಸ್ವಾಯತ್ತವಾಗಿ ಬೆಳೆಸಿಕೊಳ್ಳಬಲ್ಲದು. ಇಷ್ಟೇ, ಪತಿ-ಪತ್ನಿಯರ ಪ್ರೀತಿಯಂತೆ ಶಬ್ದಾರ್ಥಗಳ ಸಾಂಗತ್ಯವೂ ಇಲ್ಲಿ ಅಗತ್ಯವಾಗಿದೆ. ಕಂಬಾರರ ಕವಿತೆ ಇಂಥ ಒಂದು ಸನ್ನಿವೇಶದಿಂದ ಪ್ರಾರಂಭವಾಗುತ್ತದೆ. ಆದರೆ ಇಂಥ ವ್ಯವಸ್ಥೆ ಇದ್ದರೂ ಮಳೆಯಾಗುವದಿಲ್ಲ. ಮಳೆಯಾಗುವದೆಂದರೆ ಅಲೌಕಿಕದ ಕರುಣೆಯ ಫಲ. ಮಳೆಯಾಗಲಿ ಎಂದು ಮಹಾದೇವಿ ಒದ್ದೆಯಲ್ಲಿ ಸಾವಳಗಿ ಮಠಕ್ಕೆ ಹೋಗಿ ಬರುವೆ ನೆಂದು ಹರಕೆ ಹೊತ್ತಿದ್ದಾಳೆ. ಹರಕೆಯೂ ಒಂದು ಭಾಷೆ. ಆದರೆ ಮಳೆಯಾಗುವದು ಮಾತ್ರ ನವಿಲಿನ ಮೂಲಕ. ನವಿಲಿಗೆ ಕುಣಿದು ಕೇಕೆ ಹಾಕುವದು ಗೊತ್ತೇ ಹೊರತು ಭಾಷೆ ಗೊತ್ತಿಲ್ಲ. ಮಹಾದೇವಿ ನವಿಲಿನ ಕುಣಿತದಿಂದ ಮುಗ್ಧಳಾಗಿದ್ದಾಳೆ. ಅದರ ಕುಣಿತಕ್ಕೆ ತನ್ನನ್ನು ಒಪ್ಪಿಸಿಕೊಂಡಿದ್ದಾಳೆ. ಒಂದು ದೃಷ್ಟಿಯಿಂದ ಅವಳ ಈ ‘ಹಾದರ’ ಅಲೌಕಿಕವಾದದ್ದು. ಅಕ್ಕಮಹಾದೇವಿಯ ‘ಚನ್ನಮಲ್ಲಿಕಾರ್ಜುನನೊಡನೆ ಹಾದರ’ವನ್ನು ನೆನಪಿಗೆ ತರುವಂಥದ್ದು.

‘ಭಾಷೆಯ ಸೂತಕ’ವನ್ನು ಅನುಭವಿಸಿ ಅದರಿಂದ ಪಾರಾಗ ಬೇಕೆನ್ನುವ ಅಲ್ಲಮನ ಹಂಬಲವನ್ನು ನೆನಪಿಗೆ ತರುವಂಥದ್ದು. ನಾದಗಳು ನುಡಿಯಾದರೆ, ನುಡಿಗಳು ಹಾಡಾದರೆ ಅದೂ ಕೂಡ ಇಂಥ ಅಲೌಕಿಕದ ಜೊತೆಗಿನ ಹಾದರವಾಗಿದೆ. ಅರ್ಥವಿಲ್ಲದ ಶಬ್ದದೊಳಗಿನ ಶೂನ್ಯದ ಅವಕಾಶದಲ್ಲಿ ಅಲೌಕಿಕದ ಬೆಳಕು ಝಗ್ಗನೆ ಪ್ರಕಟವಾಗಬೇಕು. ಪ್ರಕಟವಾಗುತ್ತದೆಂಬ ನಂಬಿಕೆ ಗಟ್ಟಿಯಾಗಿದ್ದರೆ ಶಬ್ದದ ಮಣ್ಣಿನಲ್ಲಿ ಅಲೌಕಿಕದ ಮಿಂಚು ಹೊಳೆಯಬಹುದು. ಕಂಬಾರರು ತಮ್ಮ ‘ಪ್ರಭು’ ಕವಿತೆಯ ಕೊನೆಗೆ ಹೇಳುವಂತೆ, ‘ಮಣ್ಣ ಬಿಟ್ಟಿನ್ನೆಲ್ಲಿ ಹೊನ್ನು ಅಡಿಗಿದ್ದೀತು? ಮೀರಿ | ಹತ್ತಂಗುಲದ ಹಬ್ಬು ಅನಂತರ |’ ಈ ಕವಿತೆಯ ಭಾಷೆ ಕೂಡ ಅಲೌಕಿಕವಾದದ್ದು. ಅಲೌಕಿಕದ ಹಂಬಲವನ್ನು ಹೊತ್ತ ಲೌಕಿಕ ಭಾಷೆ ಇದಾಗಿದೆ. ಆದರೆ ‘ನವಿಲೇ ನವಿಲೇ’ ಇದು ಹಾಡು. ಲೌಕಿಕ ಮತ್ತು ಅಲೌಕಿಕಗಳ ಅಕ್ರಮ ಸಂಬಂಧದ, ಉನ್ಮಾದದ ಹಾಡು. ಶಬ್ದಾರ್ಥಗಳ ದಾಂಪತ್ಯದ ಪರಿಮಿತ ಸಂಬಂಧ-ಪರಿಮಿತವಾಗಿರಬೇಕೆಂಬುದು ಒಂದು ಅಗತ್ಯದ ನಿಯಮ-ಮೈ ಮನಸ್ಸುಗಳನ್ನು ಮುಟ್ಟಿ ತಣಿಸಬಹುದು. ಆದರೆ ಪ್ರಕೃತಿಯನ್ನೆಲ್ಲ ನೀರು ನೀರಾಗಿಸುವ ಅಲೌಕಿಕದ ಅದ್ಭುತ ಅದಕ್ಕಿಲ್ಲ.

ಕಂಬಾರರ ಎಲ್ಲ ಕವಿತೆಗಳೂ ಹಾಡಾಗಿಲ್ಲ, ಆಗುವದೂ ಇಲ್ಲ. ಶಬ್ದಾರ್ಥಗಳ ಸಾಂಗತ್ಯದಲ್ಲಿಯ ಪರಮಸಿದ್ಧಿಯೆಂದರೆ ಧ್ವನ್ಯರ್ಥ. ಅದು ಕೂಡ ಪ್ರತಿಭೆಗೆ ಮಾತ್ರ ಗೋಚರವಾಗುವದು. ಅದು ವಾಚ್ಯಾರ್ಥವನ್ನು ಕೊಂದು ಹುಟ್ಟುವ ಚಿಗುರು. ಆದರೆ ಬೀಜ ಮತ್ತು ಚಿಗುರಿನ ಸಂಬಂಧ ಸಾವಯವವಾದದ್ದು. ಆದರೆ ಅದು ಕೂಡ ಅಲೌಕಿಕದ ಸಿಡಿಲು ಹೊಡೆದರೂ- ಅಥವಾ ಸಿಡಿಲು ಹೊಡೆದರೆ ಮಾತ್ರ, ಹತ್ತಂಗುಲ ಮೇಲೆದ್ದು ನಿಲ್ಲುವ ವೃಕ್ಷವಲ್ಲ. ಕಂಬಾರರ ಕಾವ್ಯಕ್ಕೆ ಅಂಥ ವಾಸನೆಯಿದೆ. ‘ಕೃಷ್ಣ ಪಾರಿಜಾತ’ದೊಳಗಿನ ಹಾಡುಗಳ ಧಾಟಿಗಳು ಈ ಅಲೌಕಿಕವನ್ನರಸಿ ಹೋದವು.

(ಕೃತಿ: ಕಂಬಾರರ ಕಾವ್ಯ ಮತ್ತು ನಾಟಕ (ವಿಮರ್ಶಾ ಲೇಖನಗಳು) ಲೇಖಕರು: ಕೀರ್ತಿನಾಥ ಕುರ್ತಕೋಟಿ, ಪುಟಗಳು: 96, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: ರೂ. 120/-)