ವೇಗದ ಬಗೆಗೆ ಚಿಂತಿಸುವವನಿಗೆ, ಗಡಿಯಾರದ ಚಿಂತನೆ ಮಾಡದಿರಲು ಸಾಧ್ಯವೇ? ಗಡಿಯಾರದ ತಂತ್ರಜ್ಞಾನದಲ್ಲಿ ಅತ್ಯಂತ ಮಹತ್ತರ ಬೆಳವಣಿಗೆ ಆಗಿದ್ದು ಗೆಲಿಲಿಯೋನಿಂದ. ಅಲ್ಲಿಯವರೆಗೂ ಪ್ರಚಲಿತವಿದ್ದ ಯಾವುದೇ ಗಡಿಯಾರಗಳಿರಲಿ, ಅವು ಸನ್-ಡಯಲ್‌ ಗಳಿರಬಹುದು, ನೀರ್ಗಡಿಯಾರಗಳಿರಬಹುದು, ಸ್ಪ್ರಿಂಗ್ ಚಾಲಿತ ಮೆಕ್ಯಾನಿಕಲ್ ಗಡಿಯಾರಗಳಿರಬಹುದು, ಅವು ಯಾವುವೂ ಅಷ್ಟೊಂದು ಕರಾರುವಾಕ್ಕಾಗಿರಲಿಲ್ಲ. ಕರಾರುವಾಕ್ಕಾದ ಗಡಿಯಾರ ಒಂದನ್ನು ನಿರ್ಮಿಸಲು ಅದರ ಹಿಂದೆ, ಎಂದಿಗೂ ತನ್ನ ಲಯದಲ್ಲಿ ಹೆಚ್ಚು ಕಡಿಮೆಯಾಗದ ಸಾಧನ ಒಂದು ಇರಬೇಕು. ಇದನ್ನು ಪ್ರಥಮವಾಗಿ ಗ್ರಹಿಸಿದವನು ಗೆಲಿಲಿಯೋ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಸುಮಾರು ಐವತ್ತು ವರ್ಷಗಳ ಹಿಂದೆಯೇ, ನಾನಿನ್ನೂ ಪ್ರೈಮರಿ ಶಾಲೆಯಲ್ಲಿದ್ದಾಗಲೇ, ನನ್ನ ಕೈಗೊಂದು ಗಡಿಯಾರ ಸಿಕ್ಕಿತ್ತು. ಅದು ಮುಳ್ಳುಗಳಿಲ್ಲದ, ಸಂಖ್ಯೆ ತೋರಿಸುವ ಡಿಜಿಟಲ್ ಗಡಿಯಾರವಾದರೂ, ಎಲೆಕ್ಟ್ರಾನಿಕ್ ಗಡಿಯಾರವಾಗಿರಲಿಲ್ಲ; ಕೀ ತಿರುಗಿಸಿ ನಡೆಸುವ ಯಾಂತ್ರಿಕ ಗಡಿಯಾರವಾಗಿತ್ತು. ಹಳೆಯ ಪೆಟ್ರೋಲು ಬಂಕುಗಳಲ್ಲಿ, ಪೆಟ್ರೋಲು ಹರಿಯುವುದನ್ನು ಲೀಟರುಗಳಲ್ಲಿ ತೋರಿಸುತ್ತಿದ್ದ ಮೆಕ್ಯಾನಿಕಲ್ ಪಂಪುಗಳಂತೆ ಅದೂ ಸಹ ಕಾಲದ ಹರಿಯುವಿಕೆಯನ್ನು ಗಂಟೆ-ನಿಮಿಷಗಳಲ್ಲಿ ತೋರಿಸುತ್ತಿತ್ತು. ಅದನ್ನು, ನನ್ನ ಚಿಕ್ಕಪ್ಪ ಅಮೆರಿಕದಿಂದ ನನಗೆ ತಂದುಕೊಟ್ಟಿದ್ದರು. ಬೇರಾರ ಬಳಿಯೂ ಇರದ ಕೌತುಕದ ವಸ್ತುವೊಂದು ನನ್ನಲ್ಲಿ ಇದ್ದದ್ದು ನನಗೆ ಅತ್ಯಂತ ಸಂತೋಷ-ಹೆಮ್ಮೆಯ ವಿಷಯವಾಗಿತ್ತಾದರೂ, ಅದು ಹೆಚ್ಚು ಕಾಲ ಉಳಿಯಲಿಲ್ಲ.

ಜಂಬದ-ಕೋಳಿ ಕಸ್ತೂರಿಯ ತುತ್ತೂರಿ ನೀರಿಗೆ ಬಿದ್ದು ಹಾಳಾದರೆ, ನನ್ನ ಕೈಯಲ್ಲಿ ಸದಾಕಾಲ ವಿಜೃಂಭಿಸುತ್ತಿದ್ದ ಆ ಗಡಿಯಾರ, ನನ್ನ ಅತಿ-ಉತ್ಸುಕತೆಯ ಓವರ್-ವೈಂಡಿಂಗ್‌ ನಿಂದಾಗಿ ಒಂದು ವಾರದಲ್ಲೇ ಕೆಟ್ಟು ನಿಂತಿತು. ಅದರ ರಿಪೇರಿ ಮಾಡಿಸಲು ನಮ್ಮ ತಂದೆ ಪ್ರಯತ್ನ ಪಟ್ಟರಾದರೂ, ಅದು ಸಫಲವಾಗಲಿಲ್ಲ. ನಂತರದಲ್ಲಿ ಅದು ಎಲ್ಲಿ ಮಾಯವಾಯಿತೋ ತಿಳಿಯದು. ಆ ಕಾಲದಲ್ಲಿ ತೆಗೆದ ಕೆಲ ಕಪ್ಪು-ಬಿಳುಪು ಚಿತ್ರಗಳಲ್ಲಿ ಅದು ನನ್ನ ಕೈಯಲ್ಲಿ ಕಾಣುತ್ತದಾದರೂ, ಅದರ ಹೊಂಬಣ್ಣ ಮಾತ್ರ ನನ್ನ ಮನಸ್ಸಿನಲ್ಲಷ್ಟೇ ಉಳಿದಿದೆ.

ನಾನು ಹೈ-ಸ್ಕೂಲು ಮುಗಿಸುವ ವೇಳೆಗೆ ನಮ್ಮ ಚಿಕ್ಕಪ್ಪ ಅಮೆರಿಕದಿಂದ ನನಗೆ ಇನ್ನೊಂದು ಕೈಗಡಿಯಾರ ತಂದುಕೊಟ್ಟರು. ಅದೊಂದು ಡಿಜಿಟಲ್ ಎಲೆಕ್ಟ್ರಾನಿಕ್ ಕೈಗಡಿಯಾರ. ಈಗ ಡಿಜಿಟಲ್ ಎಲೆಕ್ಟ್ರಾನಿಕ್ಸ್ ವಸ್ತುಗಳು ಅತಿ ಸಾಮಾನ್ಯವಾಗಿದ್ದರೂ, ನಲವತ್ತು ವರ್ಷಗಳ ಹಿಂದೆ ಪರಿಸ್ಥಿತಿ ಆ ರೀತಿ ಇರಲಿಲ್ಲ. ಅಂತಹ ಗಡಿಯಾರವೊಂದು ನನ್ನ ಸ್ನೇಹಿತರು-ಸಹಪಾಠಿಗಳು-ಬಂಧುಗಳು ಯಾರ ಬಳಿಯಲ್ಲೂ ಇರಲಿಲ್ಲ. ಆ ಕಾಲದಲ್ಲಿ ನನ್ನ ಬಳಿ ಇದ್ದ ಅತ್ಯಮೂಲ್ಯ ವಸ್ತುವೆಂದರೆ, ಆ ಗಡಿಯಾರವೊಂದೇ. ಸದಾಕಾಲ ನನ್ನ ಕೈ-ಮಣಿಕಟ್ಟಿನಲ್ಲಿರುತ್ತಿದ್ದ ಅದನ್ನು ನಾನು ಅತಿ ಜತನದಿಂದ ಕಾಪಾಡಿಕೊಂಡಿರುತ್ತಿದ್ದೆ. ಬ್ಯಾಟರಿ ಸೆಲ್‌ ನಿಂದ ನಡೆಯುತ್ತಿದ್ದದ್ದರಿಂದ ಓವರ್-ವೈಂಡಿಂಗ್ ಅಪಾಯವೂ ಇರಲಿಲ್ಲ.

******

(ಗೆಲಿಲಿಯೋನ ಗಡಿಯಾರ)

೧೯೭೦-೮೦ರ ದಶಕಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಸ್ಟ್ರೈಕ್ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಚಿಂತಾಮಣಿ ಕಾಲೇಜೂ ಅದಕ್ಕೇನೂ ಹೊರತಾಗಿರಲಿಲ್ಲ. ಸ್ಟ್ರೈಕ್‌ ಗಳಲ್ಲಿ ಕೊಂಚ ಮಟ್ಟಿಗೆ ಮುಂಚೂಣಿಯಲ್ಲೇ ಇತ್ತು ಎನ್ನಬಹುದೇನೋ. ೧೯೮೧ರ ಒಂದು ದಿನ ಇಂತಹದೊಂದು ಸ್ಟ್ರೈಕ್ ಇದ್ದಕ್ಕಿದ್ದಂತೆ ಚಿಂತಾಮಣಿ ಕಾಲೇಜಿನಲ್ಲಿ ಪ್ರಾರಂಭವಾಯಿತು. ಶುರುವಾದ ಕೆಲವೇ ಗಂಟೆಗಳಲ್ಲಿ ಅದು ಹದ್ದು ಮೀರಿ, ಕಲ್ಲೆಸೆತ, ಬಸ್‌ ಗಳಿಗೆ-ಬೆಂಕಿ ಇತ್ಯಾದಿಗಳಿಗೆ ಕಾರಣವಾಗಿ, ಪೋಲೀಸರಿಂದ ಗೋಲೀಬಾರ್ ಸಹ ಆಯಿತು. ಕರ್ಫ್ಯೂ ಘೋಷಣೆಯೂ ಆಯಿತು. ಪೋಲೀಸರು ವಿದ್ಯಾರ್ಥಿಗಳನ್ನು ಸಿಕ್ಕ-ಸಿಕ್ಕಲ್ಲೆಲ್ಲಾ ಬಡಿದು ಠಾಣೆಗೆ ಕರೆದೊಯ್ಯಲಾರಂಭಿಸಿದರು.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಆಗಿದ್ದರಿಂದ ನಾನು ಮತ್ತು ಪಕ್ಕದ ಮನೆಯಲ್ಲಿದ್ದ ನನ್ನ ಮಿತ್ರ ಮನೆಯಲ್ಲೇ ಇದ್ದೆವು. ಆದರೆ, ಈ ಕಲ್ಲೆಸೆತ-ಬೆಂಕಿ-ಗೋಲೀಬಾರ್‌ ಗಳನ್ನು ಹೇಗಾದರೂ ನೋಡಬೇಕೆಂಬ ವಯಸ್ಸಿಗೆ ಸಹಜ ಕುತೂಹಲ ನಮಗೆ ಮೂಡಿತು. ವಿದ್ಯಾರ್ಥಿಗಳನ್ನು ಪೋಲೀಸರು ಬಡಿದು ಬಂಧಿಸುತ್ತಿರುವ ವಿಷಯವೂ ನಮಗೆ ಗೊತ್ತಿತ್ತು. ಪ್ಯಾಂಟ್ ಬದಲು ಪಂಚೆ ಸುತ್ತಿಕೊಂಡು, ಹೆಗಲ ಮೇಲೆ ಒಂದು ಟವೆಲ್ ಹಾಕಿಕೊಂಡು ಹೋದರೆ ಪೋಲೀಸರು ನಮ್ಮನ್ನು ಸುತ್ತಲ ಹಳ್ಳಿಯೊಂದರಿಂದ ಬಂದ ರೈತರ ಹುಡುಗರು ಎಂದು ಭಾವಿಸುತ್ತಾರೆ ಎಂಬ ಆಲೋಚನೆ ನಮ್ಮ ಮನಸ್ಸಿಗೆ ಬಂತು. ಆ ಆಲೋಚನೆ ಬಂದಿದ್ದೇ ತಡ, ನಾವು ಅದನ್ನು ಕಾರ್ಯರೂಪಕ್ಕೆ ತಂದೆವು.

ವೇಷ ಬದಲಿಸಿ ನಾವು ಸುಮಾರು ನೂರು-ಇನ್ನೂರು ಮೀಟರ್ ಹೋಗಿರಬಹುದು, ಪೋಲೀಸ್ ವ್ಯಾನ್ ಒಂದು ಮತ್ತು ಅದರ ಸುತ್ತ ನಿಂತಿದ್ದ ಪೋಲೀಸರೂ ಎದುರಾದರು. ಅವರು ನಮ್ಮನ್ನು ಅಟ್ಟಿಸಿಕೊಂಡು ಬರಲು ಪ್ರಾರಂಭಿಸಿದರು. ನಾವು ಓಡುತ್ತಾ, ಅವರಿಂದ ಹೇಗೋ ತಪ್ಪಿಸಿಕೊಂಡು, ಹತ್ತಿರದಲ್ಲಿದ್ದ ಮನೆಯೊಂದರ ಕಾಂಪೌಂಡ್ ಹಾರಿ, ಮನೆಯ ಅಂಚಿನಲ್ಲಿದ್ದ ಟಾಯ್ಲೆಟ್‌ ನಲ್ಲಿ ಅಡಗಿಕೊಂಡೆವು. ಹೀಗೆ ಎಷ್ಟು ಹೊತ್ತು ಅಡಗಿಕೊಂಡಿದ್ದೆವೋ ತಿಳಿಯದು. (ಇಂತಹ ಸಂದರ್ಭಗಳಲ್ಲಿ ಕಾಲದ ಹರಿವಿನ ವೇಗ ಬದಲಾಗುತ್ತದೆ. ಮುಂದೊಮ್ಮೆ ಇದನ್ನು ವಿಷದವಾಗಿ ನೋಡೋಣ) ಹೊರಗಡೆ ಇಣುಕಲೂ ಭಯ.

ಸ್ವಲ್ಪ ಸಮಯದ ನಂತರ, ವೇಳೆ ಎಷ್ಟಾಗಿದೆಯೆಂದು ನೋಡಲು ನನ್ನ ಕೈ-ಮಣಿಕಟ್ಟನ್ನು ನೋಡಿದರೆ, ನನ್ನ ಅತ್ಯಮೂಲ್ಯ ಗಡಿಯಾರ ಅಲ್ಲಿರಲಿಲ್ಲ. ನಾವು ಪೋಲೀಸರಿಂದ ತಪ್ಪಿಸಿಕೊಂಡು ಓಡುವಾಗ ಅದು ಎಲ್ಲೋ ಬಿದ್ದು ಹೋಗಿತ್ತು. ಗಡಿಯಾರ ಕಳೆದದ್ದು ತಿಳಿದ ತಕ್ಷಣವೇ ಅದನ್ನು ಹುಡುಕಲು ನಾನು ಚಡಪಡಿಸತೊಡಗಿದೆ. ಇನ್ನೂ ಸ್ವಲ್ಪ ಹೊತ್ತು ಅಡಗಿಕೊಳ್ಳುವುದೇ ಒಳಿತೆಂದು ನನ್ನ ಮಿತ್ರನ ಅಭಿಪ್ರಾಯವಾಗಿದ್ದರೂ, ನನ್ನ ಚಡಪಡಿಕೆಯಿಂದ, ಅವನಿಗೂ ಸಹ ಸಾಕೆನಿಸಿ, ನಾವು ಹೊರಗೆ ಬಂದೆವು. ಪೋಲೀಸರಾಗಲಿ, ಅವರ ವ್ಯಾನ್ ಆಗಲಿ ಕಣ್ಣಿಗೆ ಬೀಳಲಿಲ್ಲ. ನಾವು ಓಡಿದ ಹಾದಿಯಲ್ಲೇ ಮತ್ತೊಮ್ಮೆ ಹೋಗಿ ಗಡಿಯಾರಕ್ಕಾಗಿ ಹುಡುಕಾಡಿದೆವು. ಆದರೆ, ಅದು ಸಿಗಲಿಲ್ಲ.

ನನ್ನ ಬಳಿ ಇದ್ದ ಅತ್ಯಮೂಲ್ಯ ವಸ್ತು ಈ ರೀತಿ ಕಳೆದು ಹೋದದ್ದು, ಸಹಜವಾಗಿಯೇ ನನಗೆ ಅತ್ಯಂತ ದುಃಖ ಮೂಡಿಸಿತು. ಅದರ ಜೊತೆಗೆ, ಇಂತಹ ದುಸ್ಸಾಹಸವೊಂದರಲ್ಲಿ, ಬೆಲೆ ಬಾಳುವ ವಸ್ತುವೊಂದನ್ನು ಕಳೆದುಕೊಂಡದ್ದಕ್ಕೆ ಮನೆಯ ಹಿರಿಯರು ಏನೆನ್ನುವುರೋ ಎನ್ನುವ ಆತಂಕ ಬೇರೆ. ಹೆಗಲ ಮೇಲಿದ್ದ ಟವೆಲ್ ಅನ್ನು ಎಡಗೈ ಸುತ್ತಾ ಸುತ್ತಿಕೊಂಡು ಮನೆಗೆ ವಾಪಸು ಬಂದೆ. ಗಡಿಯಾರ ನನ್ನ ಕೈಯಲ್ಲಿ ಇಲ್ಲದ್ದನ್ನು ಮನೆಯಲ್ಲಿ ಯಾರೂ ಗಮನಿಸಲಿಲ್ಲ.

ಆ ದಿನ ಹೇಗೋ ಬಚಾವ್ ಆದರೂ, ಮಾರನೆಯ ದಿನ ಅಥವಾ ಅದರ ಮಾರನೆಯ ದಿನ ಸಿಕ್ಕಿಹಾಕಿಕೊಳ್ಳುವುದು ನಿಶ್ಚಿತ ಎಂಬ ಆತಂಕ ಕ್ಷಣ-ಕ್ಷಣಕ್ಕೂ ಕಾಡುತ್ತಿತ್ತು. ಆದರೆ, ದಿನಗಳು ವಾರಗಳಾದವು. ವಾರಗಳು ತಿಂಗಳುಗಳಾದವು. ತಿಂಗಳುಗಳು ವರ್ಷಗಳಾದವು. ವರ್ಷಗಳು ಇಂದು ದಶಕಗಳಾಗಿವೆ. ಇದುವರೆಗೂ, ನನ್ನ ಈ ಅತ್ಯಮೂಲ್ಯ ಗಡಿಯಾರದ ವಿಷಯವಾಗಿ ಒಮ್ಮೆಯೂ ಯಾರೂ ನನ್ನೊಂದಿಗೆ ಮಾತನಾಡಿಲ್ಲ.

ಆ ಗಡಿಯಾರವೇ ಇರಬಹುದು, ಕಾಲವೇ ಇರಬಹುದು, ಅದಕ್ಕೆ ನಾವು ನೀಡುವ ಬೆಲೆ ನಮ್ಮದಷ್ಟೇ ಅಲ್ಲವೇ…

******

ಸನ್-ಡಯಲ್ ಗಳಂತಹ ಗಡಿಯಾರಗಳ ನಿರ್ಮಾಣ ಪ್ರಾರಂಭವಾಗಿ, ಸಾವಿರಾರು ವರ್ಷಗಳೇ ಸಂದಿವೆ. ಆದರೆ, ಮೂರು ಸಾವಿರದ ವರ್ಷದ ಹಿಂದೆ, ಈಜಿಪ್ಟಿನ ನೈಲ್ ನದಿಯ ತಪ್ಪಲಲ್ಲಿ ಬೇಸಾಯ ಮಾಡುತ್ತಿದ್ದ ರೈತನೊಬ್ಬನಿಗೆ, ಗಡಿಯಾರವೊಂದರ ಅವಶ್ಯಕತೆಯಾದರೂ ಏನು? ಹಾಗೆಯೇ, ಕೇವಲ ಕೆಲವೇ ದಶಕಗಳ ಹಿಂದಿನ, ಚಿಂತಾಮಣಿಯ ಸುತ್ತಲ ಹಳ್ಳಿಯೊಂದರ ಕೃಷಿಕನೊಬ್ಬ ಗಡಿಯಾರ ಕಟ್ಟಿಕೊಂಡು ಮಾಡಬೇಕಿದ್ದಾದರೂ ಏನು?! ಮುಂಜಾವದ ಸೂರ್ಯನ ಬೆಳಕಿನಿಂದಲೋ, ಪಕ್ಷಿಗಳ ಕಲರವದಿಂದಲೋ, ಕೊನೆಗೆ, ಹಿತ್ತಲಿನ ಕೋಳಿಯ ಕೂಗಿನಿಂದಲೋ ಎದ್ದರಾಯಿತು. ನಂತರದ ದೈನಂದಿನ ಕಾರ್ಯಗಳು ಅವಷ್ಟಿಗೆ ಅವೇ ತೊಡಗಿಸಿಕೊಳ್ಳುತ್ತವೆ. ಮಧ್ಯಾಹ್ನದ ಸೂರ್ಯ ನಡು-ನೆತ್ತಿಗೇರಿದಾಗಲೋ, ಅಥವಾ ಹೊಟ್ಟೆ-ಚುರುಗುಟ್ಟಿದಾಗಲೋ ಊಟ ಮಾಡಿದರಾಯಿತು. ಸೂರ್ಯ ಮುಳುಗುವ ವೇಳೆಗೆ ಮನೆಗೆ ವಾಪಸಾಗಲು ಗಡಿಯಾರ ಬೇಕೇಕೆ?! ದಿನವಿಡೀ ಗೋಮಾಳವೊಂದರಲ್ಲಿ ಮೇಯ್ದ ದನಕರುಗಳು, ಸಂಜೆಯ ವೇಳೆಗೆ ಧೂಳೆಬ್ಬಿಸ್ಸುತ್ತಾ ವಾಪಸಾಗುವ ಗೋ-ಧೂಳಿಗಿಂತ ಕರಾರುವಾಕ್ಕಾದ ಗಡಿಯಾರದ ಪ್ರಯೋಜನವಾದರೂ ಏನು?!!

(ನೀರ್ ಗಡಿಯಾರ(Water Clock)

(ನಮ್ಮೂರು, ಚಿಂತಾಮಣಿ, ಒಂದು ಸಣ್ಣ ಪಟ್ಟಣ. ಅಲ್ಲಿ ಸಂತೆ ನಡೆಯುವುದು ಭಾನುವಾರಗಳಂದು. ನಾನು ಸಣ್ಣವನಿದ್ದಾಗ, ದನಕರುಗಳ ವ್ಯಾಪಾರ ಬಹು ಮಟ್ಟಿಗೆ ನಡೆಯುತ್ತಿದ್ದುದು ಆ ದಿನದಂದೆ. ಬೆಳಿಗ್ಗೆಯೇ ತಮ್ಮ ದನಕರುಗಳನ್ನು ಸಂತೆಗೆ ಕರೆದುಕೊಂಡು ಹೋಗುತ್ತಿದ್ದ ರೈತರು, ಸಂಜೆಯ ವೇಳೆಗೆ, “ಹಚ ಹಚ” ಎಂದು ಕೂಗುತ್ತಾ ಅವುಗಳನ್ನು ಹತ್ತಿರದ ಹಳ್ಳಿಗಳಲ್ಲಿದ್ದ ತಮ್ಮ ಮನೆಗಳಿಗೆ ಕರೆದೊಯ್ಯುತ್ತಿದ್ದುದು ನಮಗೆಲ್ಲಾ ಸಾಮಾನ್ಯ ದೃಶ್ಯವೇ ಆಗಿತ್ತು. ನನ್ನ ಮಟ್ಟಿಗೆ, ಈ “ಹಚ ಹಚ” ಕೂಗು, ದನಕರುಗಳ ಕಾಲಿನ ಸದ್ದು, ಅವುಗಳ ಕೊರಳಲ್ಲಿದ್ದ ಗಂಟೆಗಳಿಂದ ಹೊರಡುತ್ತಿದ್ದ ನಾದ, ಇವೆಲ್ಲವೂ ಭಾನುವಾರದ ರಜಾದಿನದ ಅಂತ್ಯದ ಸೂಚಕವಾಗಿದ್ದವು; ಆಟ ನಿಲ್ಲಿಸಿ, ಕೈ-ಕಾಲು ತೊಳೆದು, ಸಂಜೆಯ ಭಜನೆಗೆ ಕೂರುವ ಸಮಯದ ಅಲಾರಾಂ ಶಬ್ದಗಳೇ ಆಗಿದ್ದವು)

ಕರಾರುವಾಕ್ಕಾದ ಗಡಿಯಾರಗಳು ಬೇಕಿದ್ದುದ್ದು ಜನ-ಸಾಮಾನ್ಯರಿಗಲ್ಲ. ಅದು ಬೇಕಿದ್ದುದು, ವಿಜ್ಞಾನಿಗಳಿಗೆ; ಧಾರ್ಮಿಕ ಪೂಜೆಗಳನ್ನೇ ವೃತ್ತಿಯಾಗಿ ತೊಡಗಿಸಿಕೊಂಡಿದ್ದಂತಹ ಪುರೋಹಿತರಿಗೆ; ರಾಜ-ಮಹಾರಾಜರಿಗೆ ಸಲಹೆ-ಭವಿಷ್ಯ ನೀಡುತ್ತಿದ್ದಂತಹವರಿಗೆ. ತೀರಾ ಇತ್ತೀಚಿನವರೆಗೆ, ವಿಜ್ಞಾನಿ-ಪುರೋಹಿತ-ಭವಿಷ್ಯಕಾರ ಇವೆಲ್ಲಾ ಬೇರೆ-ಬೇರೆ ವೃತ್ತಿಗಳೇನೂ ಆಗಿರಲಿಲ್ಲ. Astronomyಯಲ್ಲಿ ತೊಡಗಿಕೊಂಡವರೇ, Astrologyಯಲ್ಲೂ ಇದ್ದರು. (ಇಂದು ಇವೆರಡು ಬೇರೆ-ಬೇರೆಯೇ ಆಗಿದ್ದರೂ, ಸೂರ್ಯ-ಚಂದ್ರ-ಗುರು ಎಂದೆಲ್ಲಾ ಹೇಳುತ್ತಾ, “ಭವಿಷ್ಯ” ಹೇಳುವುದನ್ನು ವಿಜ್ಞಾನ ಎಂಬಂತೆ ಬಿಂಬಿಸಿ ಮೋಸ ಮಾಡುವವರಿಗೇನೂ ಕಡಿಮೆ ಇಲ್ಲ.)

ಸೂರ್ಯನ ಬೆಳಕು-ನೆರಳಿನಾಟದಿಂದ ಸಮಯ ತೋರಿಸುವ “ಸನ್-ಡಯಲ್” ಗಡಿಯಾರಗಳು, ರಾತ್ರಿಯಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ, ಈ ವಿಜ್ಞಾನಿ-ಪುರೋಹಿತರು, ಹಗಲು-ರಾತ್ರಿ ಎನ್ನದೆ ಸಮಯ ತೋರಿಸಬಲ್ಲ ಗಡಿಯಾರಗಳ ಅನ್ವೇಷಣೆಯಲ್ಲಿ ನಿರತರಾದರು. ಈ ಅನ್ವೇಷಣೆಯಿಂದ ಹೊರ ಬಿದ್ದದು “ವಾಟರ್ ಕ್ಲಾಕ್”ಗಳು. ಒಂದು ಸರಳ ನೀರಿನ-ಗಡಿಯಾರ ನಿರ್ಮಿಸಲು ಅಂತಹ ಕಷ್ಟ ಏನೂ ಪಡಬೇಕಿಲ್ಲ. ಒಂದು ದೊಡ್ಡ ಪಾತ್ರೆಯೊಂದರ ಕೆಳಗಡೆ, ನೀರು ಹನಿ-ಹನಿಯಾಗಿ ತೊಟ್ಟಿಕ್ಕುವಂತೆ ಸಣ್ಣದೊಂದು ರಂಧ್ರವನ್ನು ಮಾಡಿ. ಆ ಪಾತ್ರೆಯ ತುಂಬಾ ನೀರು ತುಂಬಿಸಿ. ನೀರು ಇಳಿದಂತೆ, ಐದೋ-ಹತ್ತೋ ನಿಮಿಷಕ್ಕೋ ಒಮ್ಮೆ (ನಿಮ್ಮಲ್ಲಿ ಈಗಾಗಲೇ ಇರುವ ಗಡಿಯಾರವನ್ನು ನೋಡಿಕೊಂಡು) ಪಾತ್ರೆಯಲ್ಲಿನ ನೀರಿನ ಲೆವೆಲ್ ಮಾರ್ಕ್ ಮಾಡಿ. ನಿಮ್ಮ ವಾಟರ್-ಕ್ಲಾಕ್ ರೆಡಿ!

ಸನ್-ಡಯಲ್‌ ಗಳಲ್ಲಿ ತೋರುತ್ತಿದ್ದ ಅವಧಿಗಳನ್ನೇ ಮಾನದಂಡವಾಗಿರಿಸಿಕೊಂಡ, ಆದರೆ ರಾತ್ರಿಯಲ್ಲೂ ಕೆಲಸಮಾಡುವ ವಾಟರ್-ಕ್ಲಾಕ್‌ ಗಳ ಬಳಕೆ ಸುಮಾರು ಮೂರೂವರೆ ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭವಾಯಿತೆಂದು ಇತಿಹಾಸಜ್ಞರು ಹೇಳುತ್ತಾರೆ. ಇಂತಹ ನೀರ್ಗಡಿಯಾರಗಳ ಬಳಕೆಯ ಕುರುಹುಗಳು ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ದೊರೆತಿವೆ.

ಆದರೆ, ಒಂದು ಗಡಿಯಾರವನ್ನು ಇನ್ನೊಂದು ಗಡಿಯಾರದೊಂದಿಗೆ ತಾಳೆ ಹಾಕುವುದು ಅಂತಹ ಸುಲಭದ ವಿಷಯವಲ್ಲ. ಸೂರ್ಯೋದಯದಿಂದ, ಅಸ್ತಮಾನದ ಅವಧಿಯನ್ನು ನಾವು ಹನ್ನೆರಡು ಗಂಟೆಗಳಾಗಿ ಕತ್ತರಿಸಿದ ಸನ್-ಡಯಲ್ ಕರಾರುವಾಕ್ಕಾಗಿ ಕೆಲಸ ಮಾಡುತ್ತದೆ ಎಂದೆನಿಸಿದರೂ, ಅದನ್ನು ನೀರಿನ ಗಡಿಯಾರದೊಂದಿಗೆ ಜೋಡಿಸಿದರೆ, ಋತುಗಳು ಬದಲಾದಂತೆ, ಈ ಅವಧಿಗಳು ಹೆಚ್ಚೂ-ಕಡಿಮೆ ಆಗುವುದನ್ನು ಗಮನಿಸಬಹುದು. ಭೂಮಿ ಸೂರ್ಯನ ಸುತ್ತಾ ಕರಾರುವಕ್ಕಾದ ವೃತ್ತಾಕಾರದಲ್ಲೇನೂ ಪ್ರದಕ್ಷಿಣೆಗೈಯುವುದಿಲ್ಲವಲ್ಲ. ಹಾಗೆಯೇ, ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಮಾಡುವಾಗ, ನೇರವಾಗಿ ನಿಂತು ಸುತ್ತುವುದಿಲ್ಲ, ಸುಮಾರು 23 ಡಿಗ್ರಿ ತಲೆ ಬಗ್ಗಿಸಿರುತ್ತಾಳೆ. ಇದರಿಂದಾಗಿ, ವರ್ಷದ ಒಂದು ದಿನಕ್ಕೂ ಮತ್ತೊಂದು ದಿನಕ್ಕೂ ಹದಿನಾರು ನಿಮಿಷಗಳಷ್ಟು ಹೆಚ್ಚು ಕಡಿಮೆ ಆಗಬಹುದು.

ಇಂತಹ ವ್ಯತ್ಯಾಸಗಳು, ಚಂದ್ರನನ್ನು ಮಾನದಂಡವಾಗಿ ಇಟ್ಟುಕೊಂಡಿರುವ ಚಾಂದ್ರಮಾನ ಪಂಚಾಂಗಗಳಲ್ಲೂ ಕಾಣಬಹುದು. ಪ್ರಕೃತಿಯ ಈ ಮಹಾ ಗಡಿಯಾರಗಳಲ್ಲಿ, ಆಗಾಗ್ಗೆ ಹೀಗೆ ಹೆಚ್ಚು ಕಡಿಮೆ ಆಗುವುದರಿಂದಲೇ, ಲೀಪ್-ಸೆಕೆಂಡ್, ಲೀಪ್-ಯಿಯರ್, ಅಧಿಕ ಮಾಸಗಳಂತಹ “ಕರೆಕ್ಷನ್”ಗಳನ್ನು ಮಾಡಬೇಕಾಗುತ್ತದೆ.

ಇಂತಹ ಕರೆಕ್ಷನ್‌ ಗಳನ್ನು ಮಾಡುತ್ತಿದ್ದವರು ವಿಜ್ಞಾನಿ-ಪುರೋಹಿತರೇ ಆದರೂ, ಮತ್ತು ಅದರ ಹಿಂದೆ ಖಗೋಳ-ಗಣಿತದ ಲೆಕ್ಕಾಚಾರಗಳೇ ಬಹುಮಟ್ಟಿಗೆ ಇದ್ದರೂ, ಹಲವಾರು ಬಾರಿ ರಾಜ-ಮಹಾರಾಜರ ಒತ್ತಡಕ್ಕೋ, ಅಥವಾ ಅವರ ಕೃಪಾ ಕಟಾಕ್ಷದ ಆಸೆಯಿಂದಲೋ ಸಹ ಅವರು ಇಂತಹ “ಅಡ್ಜಸ್ಟ್‌ಮೆಂಟ್” ಮಾಡುತ್ತಿದ್ದರು. ಉದಾಹರಣೆಗೆ, ಎರಡು ಸಾವಿರ ವರ್ಷಗಳ ಹಿಂದಿನ ಜೂಲಿಯಸ್ ಸೀಸರ್ ಕಾಲದ ರೋಮ್‌ ನಲ್ಲಿ ಪಂಚಾಗದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದವರು “ಪಾಂಟಿಫಿಕೇಟರ್”ಗಳು (ತನ್ನ ಮಾತೆಂದರೆ “ವೇದವಾಕ್ಯ” ಎನ್ನುವಂತೆ ಒಣ ದರ್ಪದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದನ್ನು, “Pontificate” ಎಂದೆನ್ನುವ ಇಂಗ್ಲೀಷ್ ಪದದ ಹಿಂದೆ ಇರುವವರು ಈ “ಪಾಂಟಿಫಿಕೇಟರ್”ಗಳೇ!) ಈ ಪಾಂಟಿಫಿಕೇಟರ್‌ಗಳು, ಕ್ರಿಸ್ತ ಪೂರ್ವ ೪೬ರಲ್ಲಿ, ಜೂಲಿಯಸ್ ಸೀಸರ್‌ ನಿಗೆ ಅನುಕೂಲವಾಗುವಂತೆ ಮಾಡಲು ಆ ವರ್ಷದ ಅವಧಿಯನ್ನು ೪೪೬ ದಿನಗಳಿಗೆ ಹೆಚ್ಚಿಸಿದರು! ಇದರಿಂದ, ವಾರ್ಷಿಕ ಸಾಲ ತೆಗೆದುಕೊಂಡವರು ಸಂತೋಷ ಪಟ್ಟಿರಲೂಬಹುದು!!

(ಡಯಲ್ ಇಲ್ಲದ ಮೆಕ್ಯಾನಿಕಲ್ ಗಡಿಯಾರ)

ಸೂರ್ಯೋದಯದಿಂದ, ಅಸ್ತಮಾನದ ಅವಧಿಯನ್ನು ನಾವು ಹನ್ನೆರಡು ಗಂಟೆಗಳಾಗಿ ಕತ್ತರಿಸಿದ ಸನ್-ಡಯಲ್ ಕರಾರುವಾಕ್ಕಾಗಿ ಕೆಲಸ ಮಾಡುತ್ತದೆ ಎಂದೆನಿಸಿದರೂ, ಅದನ್ನು ನೀರಿನ ಗಡಿಯಾರದೊಂದಿಗೆ ಜೋಡಿಸಿದರೆ, ಋತುಗಳು ಬದಲಾದಂತೆ, ಈ ಅವಧಿಗಳು ಹೆಚ್ಚೂ-ಕಡಿಮೆ ಆಗುವುದನ್ನು ಗಮನಿಸಬಹುದು.

ನೀರ್ಗಡಿಯಾರಗಳ ಬಳಕೆ ಹೆಚ್ಚಾದಂತೆ, ಸಮಯದ ನಿರ್ಧಾರಕ್ಕಾಗಿ ಸೂರ್ಯನ ಮೇಲೆ ಅವಲಂಬಿಸುವ ದರ್ದು ಹೊರಟು ಹೋಯಿತು. ಮನೆಯ ಹೊರಗಿದ್ದ ಗಡಿಯಾರಗಳು, ಒಳಗೂ ಕಾಣಲಾರಂಭಿಸಿದವು. ಸುಮಾರು ಸಾವಿರದ ಏಳುನೂರು ವರ್ಷಗಳ ಹಿಂದೆ, ರೋಮನ್ ಸಾಮ್ರಾಟ ಕಾನ್ಸ್ಟಂಟೈನ್ ಕಾಲದಲ್ಲಿ, ಕ್ರೈಸ್ತ ಧರ್ಮ ಯೂರೋಪಿಯನ್ ರಾಷ್ಟ್ರಗಳಲ್ಲಿ ಬೇರು ಬಿಡಲು ಆರಂಭಿಸಿತು. ಆ ಕಾಲದ ಕೆಲವೊಂದು ಕ್ರೈಸ್ತ ಪಂಗಡಗಳಲ್ಲಿ, ರಾತ್ರಿ ವೇಳೆಯಲ್ಲೂ ಹಲವಾರು ಬಾರಿ ಎದ್ದು ಪ್ರಾರ್ಥನೆ ಮಾಡುವ ಪದ್ಧತಿ ಇತ್ತು. ನೀರ್ಗಡಿಯಾರಗಳು ರಾತ್ರಿ ವೇಳೆ ಸಮಯವನ್ನು ತೋರುತ್ತಿದ್ದವಾದರೂ, ಅವು ಸಮಯವನ್ನು “ಹೇಳು”ತ್ತಿರಲಿಲ್ಲ. ಪ್ರಾರ್ಥನೆಯ ಸಮಯ ಆಗಿದೆಯೇ ಎಂದು ತಿಳಿಯಲು ಗಡಿಯಾರವನ್ನು ನೋಡ ಬೇಕಿತ್ತು. ಹೀಗಾಗಿ, ಸಮಯ “ತೋರಿಸುವ” ಗಡಿಯಾರದ ಬದಲಿಗೆ ಅಥವಾ ಜೊತೆಗೇ ಸಮಯ “ಹೇಳುವ” ಗಡಿಯಾರಗಳ ಜರೂರತ್ತು ಏರ್ಪಟ್ಟಿತ್ತು.

ನೀರಿನ ಗಡಿಯಾರಗಳಿಗೆ, ಕೆಲವೊಂದು ಮೆಕ್ಯಾನಿಕಲ್ ಸಾಧನಗಳನ್ನು ಅಳವಡಿಸಿದ ಗಂಟೆ-ಗಂಟೆಗೂ ಶಬ್ದ ಮಾಡುವ ಗಡಿಯಾರಗಳು ನಿರ್ಮಾಣವಾಗತೊಡಗಿದವು. ನಾವಿಂದು “ಗಂಟೆ” ಎಂಬ ಅರ್ಥದಲ್ಲಿ ಬಳಸುವ ಇಂಗ್ಲೀಷ್ ಪದ “hour”ನ ಹಿಂದೆ, ಹಳೆಯ ಲ್ಯಾಟಿನ್ ಭಾಷೆಯ “ಪ್ರಾರ್ಥನೆಗಾಗಿ ಕರೆ” ಎಂಬ ಅರ್ಥವಿದೆ.

ಮೆಕ್ಯಾನಿಕಲ್ ಸಾಧನಗಳನ್ನು ಗಡಿಯಾರಕ್ಕಾಗಿ ಬಳಸುವುದು ಮುಂದುವರೆದಂತೆ, ಹದಿನೈದನೆಯ ಶತಮಾನದ ಹೊತ್ತಿಗೆ, “ಸ್ಪ್ರಿಂಗ್” ಒಂದನ್ನು ಸುತ್ತಿ, ಅದರಲ್ಲಿ ಚೈತನ್ಯವನ್ನು ಬಿಗಿ ಹಿಡಿದು, ನಿಧಾನವಾಗಿ ಅದನ್ನು ಹೊರ ಬಿಡುವ “ಕೀ”ಕೊಡುವ ಗಡಿಯಾರಗಳು ನಿರ್ಮಾಣಗೊಳ್ಳಲು ಪ್ರಾರಂಭವಾದವು. ಇವುಗಳಿಗೆ ನೀರಿನ ಅವಶ್ಯಕತೆ ಇರಲಿಲ್ಲ. ಇಂತಹ ಗಡಿಯಾರಗಳು ಬಹು ಮಟ್ಟಿಗೆ ಇರುತ್ತಿದ್ದುದು ಚರ್ಚ್‌ ಗಳ ಗೋಪುರಗಳಲ್ಲಿ. ಆಸಕ್ತಿಕರ ವಿಷಯವೆಂದರೆ, ಈ ಗಡಿಯಾರಗಳಿಗೆ ಸಮಯ ತೋರುವ “ಡಯಲ್”‌ಗಳು ಇರುತ್ತಿರಲಿಲ್ಲ. ಅವು ಗಂಟೆ-ಗಂಟೆಗೆ ಗಂಟೆ ಬಾರಿಸುತ್ತಿದ್ದವು, ಅಷ್ಟೇ. ಸಮಯ ತೋರಿಸುತ್ತಿರಲಿಲ್ಲ.

ಭಾರತದ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದಂತಹ ಪದ್ಧತಿಗಳು ರಾತ್ರಿಯ ಸೂರ್ಯಾಸ್ತಮಾನದ ನಂತರವೂ ಇರುತ್ತಿದ್ದಿದ್ದರೆ, ಭಾರತದಲ್ಲೂ ಮೆಕ್ಯಾನಿಕಲ್ ಗಡಿಯಾರಗಳು ಸಾಮಾನ್ಯವಾಗುತ್ತಿದ್ದವೇನೋ?!

******

(ಗೆಲಿಲಿಯೋ)

ಕೆಲವು ವರ್ಷಗಳ ಹಿಂದೆ ಇಟಲಿ ಪ್ರವಾಸಕ್ಕೆ ಹೋಗಿದ್ದೆ. ನಾನು ಸಣ್ಣವನಿದ್ದಾಗ ನಮ್ಮ ಚಿಕ್ಕಪ್ಪ ಹೇಳಿದ್ದ ಕತೆಯ ಗೆಲಿಲಿಯೋ ನನ್ನ ಮನಸ್ಸಿನಲ್ಲಿ ಆಳವಾಗಿ ಇಳಿದು ಎಷ್ಟೋ ದಶಕಗಳೇ ಆಗಿದ್ದವು. ಹಾಗಿದ್ದರೂ, ಈ ಗೆಲಿಲಿಯೋ ಓಡಾಡಿದ ಜಾಗಗಳು, ಅವನ ಅದ್ಭುತ ಆಲೋಚನೆಗಳಿಗೆ ಕಿಡಿ ಹತ್ತಿಸಿದ ದೃಶ್ಯಗಳನ್ನು ನೋಡಬೇಕೆಂಬ ಸಣ್ಣದೊಂದು ಕುತೂಹಲ ಇದ್ದೇ ಇತ್ತು.

ಇಟಲಿಯ ಪ್ರಖ್ಯಾತ ಪೀಸಾ ಗೋಪುರದ ಪಕ್ಕದಲ್ಲಿಯೇ ಪೀಸಾ ಕೆಥೆಡ್ರಲ್ ಎಂಬ ಚರ್ಚ್ ಇದೆ. ಅದರ ಒಳ ಹೊಕ್ಕಿದಾಗ, ಅಲ್ಲಿದ್ದ ಗೈಡ್ ಹೇಳಲಾರಂಭಿಸಿದಳು: “ಇದೇ ಕೋಣೆಯಲ್ಲಿ, ಸುಮಾರು ನಾಲ್ಕುನೂರು ವರ್ಷಗಳ ಹಿಂದೆ, ಗೆಲಿಲಿಯೋ ಕುಳಿತಿರುತ್ತಿದ್ದ..” ನಮ್ಮ ಚಿಕ್ಕಪ್ಪ ಐವತ್ತು ವರ್ಷಗಳ ಹಿಂದೆ ಹೇಳಿದ ಕತೆ. ಅದಕ್ಕೂ ಮುಂಚೆ, ಗೆಲಿಲಿಯೋನ ಖಾಸಾ ಶಿಷ್ಯ ವಿನ್ಸೆಂಚೋ ವಿವಿಯಾನಿ ಹೇಳಿದ ಕತೆ.

ಪೀಸಾ ಪಟ್ಟಣ ಗೆಲಿಲಿಯೋ ಹುಟ್ಟಿದ ಊರು. ಅವನ ಅಪ್ಪ ಒಬ್ಬ ಸಂಗೀತಗಾರ. ಸತ್ಯವನ್ನು ಅರಿಯಲು ಪ್ರಯತ್ನಿಸುವವರು ಯಾವುದೇ ಭಯ-ಆದರಗಳಿಲ್ಲದೆ ಪ್ರಶ್ನೆ ಮಾಡಬೇಕು ಎಂದು ನಂಬಿಕೆ ಇಟ್ಟವನು. ೧೫೮೧ರಲ್ಲಿ ಗೆಲಿಲಿಯೋ, ತನ್ನ ಹದಿನೇಳನೆಯ ವಯಸ್ಸಿನಲ್ಲಿ ಪೀಸಾ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ತೊಡಗಿದ. ಆದರೆ, ಗಣಿತದಲ್ಲಿ ಅಪಾರ ಆಸಕ್ತಿ ಇದ್ದುದ್ದರಿಂದ, ವೈದ್ಯಕೀಯವನ್ನು ಬಿಟ್ಟು ಗಣಿತದೆಡೆಗೆ ಗಮನ ಹರಿಸಿದ.

ಪ್ರಶ್ನೆ ಮಾಡಿ ಸತ್ಯವನ್ನು ಕಂಡುಕೊಳ್ಳುವುದು ಗೆಲಿಲಿಯೋ ತನ್ನ ತಂದೆಯಿಂದ ಅನುವಂಶಿಕವಾಗಿ ಪಡೆದ ಗುಣವೋ, ಅಥವಾ ಪ್ರೇರಿತನಾಗಿ ವೃದ್ಧಿಪಡಿಸಿಕೊಂಡ ಅಭ್ಯಾಸವೋ ತಿಳಿಯದು. ಆದರೆ, ಅವನ ಮುಂಚಿನವರು ಯಾರೂ ಕೇಳದಷ್ಟು ಪ್ರಶ್ನೆಗಳನ್ನು ಅವನು ಕೇಳಿಕೊಂಡ. ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹಲವಾರು ಪ್ರಯೋಗಗಳನ್ನೂ ಆಲೋಚಿಸಿದ, ಆಯೋಜಿಸಿದ. ಸ್ಟೀಫನ್ ಹಾಕಿಂಗ್‌ ಸೇರಿದಂತೆ, ಇಂದಿನ ಹಲವಾರು ಮಹಾ ವಿಜ್ಞಾನಿಗಳ ಪ್ರಕಾರ, “ಆಧುನಿಕ ವೈಜ್ಞಾನಿಕ ಯುಗ” ಪ್ರಾರಂಭವಾಗುವುದೇ ಗೆಲಿಲಿಯೋನಿಂದ.

ಅವನು ಪೀಸಾ ಗೋಪುರದಿಂದ ಸಣ್ಣದೊಂದು ಕಲ್ಲು, ದೊಡ್ಡದೊಂದು ಕಲ್ಲು ಎರಡನ್ನೂ ಒಟ್ಟಿಗೆ ಕೈ-ಬಿಡುವ ಪ್ರಯೋಗ ಮಾಡಿದನೆ? ವಿನ್ಸೆಂಚೋ ವಿವಿಯಾನಿ ಇಂತಹ ಪ್ರಯೋಗ ನಡೆಯಿತೆಂದೇ ಹೇಳುತ್ತಾನಾದರೂ, ಹಲವಾರು ತಜ್ಞರ ಪ್ರಕಾರ ಇಂತಹದೊಂದು ಪ್ರಯೋಗ ಗೆಲಿಲಿಯೋ ಮಾಡಿರಲಿಕ್ಕಿಲ್ಲ. ಹಾಗೆ ಮಾಡಿದ್ದರೂ, ಅವೆರಡೂ ಕಲ್ಲುಗಳು ಒಟ್ಟಿಗೆ ನೆಲವನ್ನು ಮುಟ್ಟುತ್ತವೆ ಎಂದು ನಿರ್ಧರಿಸಲು ಬೇಕಿರುವ ಸೂಕ್ಷ್ಮ ಗಡಿಯಾರಗಳು ಆ ಕಾಲದಲ್ಲಿ ಇರಲಿಲ್ಲ. (ಇಂತಹದೊಂದು “ಪ್ರಯೋಗ”ವನ್ನು ಅಮೆರಿಕದ ಅಪೊಲೊ-೧೫ರ ಚಂದ್ರಯಾನಿಗರು, ಗಾಳಿ ಇಲ್ಲದ, ಗುರುತ್ವಾಕರ್ಷಣೆ ಕಡಿಮೆ ಇರುವ ಚಂದ್ರನ ಮೈಮೇಲೆ ೧೯೭೧ರಲ್ಲಿ ಮಾಡಿದರು. ಅದರ ವಿಡಿಯೋ ಯೂಟ್ಯೂಬಿನಲ್ಲಿದೆ. ನೋಡಿಲ್ಲದಿದ್ದರೆ ನೋಡಿ. ಮಕ್ಕಳಿಗೆ ತೋರಿಸಿ)

ಗೆಲಿಲಿಯೋ ತನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಹಲವಾರು ಬಾರಿ “ಗಡಾಂಕಿನ್” (“gedanken”) ಪ್ರಯೋಗಗಳು ಎನ್ನುವ, ಮಾನಸಿಕ ಪ್ರಯೋಗಗಳಿಗೆ ಮೊರೆ ಹೊಕ್ಕುತ್ತಾನೆ. ಉದಾಹರಣೆಗೆ, ಭಾರದ ಸುತ್ತಿಗೆ ಮತ್ತು ತೆಳು ಹತ್ತಿಯ ಎಳೆಯನ್ನು ಒಟ್ಟಿಗೆ ಕೈ ಬಿಟ್ಟರೆ, ಸುತ್ತಿಗೆ ತಟ್ಟನೆ ನೆಲಕ್ಕೆ ಬೀಳುವುದು, ಹತ್ತಿ ತೇಲುತ್ತಾ ಕೆಳಗಿಳಿಯುವುದು ನಾವು ಕಾಣುವ ಸತ್ಯ, ಸಾವಿರಾರು ವರ್ಷಗಳ ಮಾನವ ಅನುಭವದ ಜ್ಞಾನ ಮತ್ತು ಅರಿಸ್ಟಾಟಲ್‌ನಂತಹ ಮಹಾಮಹಿಮನ ವಾಕ್ಕು. ಆದರೆ, ಇದು ನಿಜಕ್ಕೂ ಸತ್ಯವೇ?! ಇದನ್ನು ಪರೀಕ್ಷಿಸಲು, ಗೆಲಿಲಿಯೋ ತನ್ನ ಮನದೊಳಗೇ ಒಂದು ಪ್ರಯೋಗ ಮಾಡುತ್ತಾನೆ. (ಇದನ್ನು ಅವನು ತನ್ನ ಪುಸ್ತಕದಲ್ಲಿ ಬರೆದಿದ್ದಾನೆ)

ಎರಡು ಬೇರೆ-ಬೇರೆ ತೂಕದ ವಸ್ತುಗಳನ್ನು ತೆಗೆದುಕೊಳ್ಳಿ. ಅವೆರಡನ್ನೂ ಒಂದು ಉದ್ದನೆಯ ದಾರದ ಎರಡು ತುದಿಗಳಿಗೆ ಕಟ್ಟಿ. ಹೀಗೆ ಕಟ್ಟಿದ ಎರಡು ವಸ್ತುಗಳನ್ನು ಒಟ್ಟಿಗೆ ಕೈಬಿಟ್ಟರೆ ಏನಾಗುತ್ತದೆ? ಅರಿಸ್ಟಾಟಲನ ಮಾತು ನಿಜವಾದರೆ, ಭಾರ ಕಡಿಮೆ ಇರುವ ವಸ್ತುವಿಗಿಂತ ಭಾರವಾದ ವಸ್ತು ವೇಗವಾಗಿ ಬೀಳಲಾರಂಭಿಸುತ್ತದೆ. ಇದರಿಂದ ಕಟ್ಟಿರುವ ದಾರದಲ್ಲಿ ಎಳೆತ ಉಂಟಾಗುತ್ತದೆ. ಹೀಗಾಗಿ, ಅದರ ವೇಗ ಕಡಿಮೆಯಾಗುತ್ತದೆ. ಆದರೆ, ಅರಿಸ್ಟಾಟಲನ ಮಾತು ನಿಜವೇ ಆದಲ್ಲಿ, ಈ ಮೂರೂ ವಸ್ತುಗಳ (ಎರಡು ವಸ್ತುಗಳು ಮತ್ತು ದಾರ) ಒಟ್ಟು ಭಾರ ಹೆಚ್ಚಾಗಿರುವುದರಿಂದ ಒಟ್ಟು ವೇಗ ಹೆಚ್ಚಾಗಿರಬೇಕು!

(ಪೀಸಾ ಕೆಥಡ್ರಲ್ ತೂಗುದೀಪ)

ವೇಗದ ಬಗೆಗೆ ಚಿಂತಿಸುವವನಿಗೆ, ಗಡಿಯಾರದ ಚಿಂತನೆ ಮಾಡದಿರಲು ಸಾಧ್ಯವೇ? ಗಡಿಯಾರದ ತಂತ್ರಜ್ಞಾನದಲ್ಲಿ ಅತ್ಯಂತ ಮಹತ್ತರ ಬೆಳವಣಿಗೆ ಆಗಿದ್ದು ಗೆಲಿಲಿಯೋನಿಂದ. ಅಲ್ಲಿಯವರೆಗೂ ಪ್ರಚಲಿತವಿದ್ದ ಯಾವುದೇ ಗಡಿಯಾರಗಳಿರಲಿ, ಅವು ಸನ್-ಡಯಲ್‌ ಗಳಿರಬಹುದು, ನೀರ್ಗಡಿಯಾರಗಳಿರಬಹುದು, ಸ್ಪ್ರಿಂಗ್ ಚಾಲಿತ ಮೆಕ್ಯಾನಿಕಲ್ ಗಡಿಯಾರಗಳಿರಬಹುದು, ಅವು ಯಾವುವೂ ಅಷ್ಟೊಂದು ಕರಾರುವಾಕ್ಕಾಗಿರಲಿಲ್ಲ. ಕರಾರುವಾಕ್ಕಾದ ಗಡಿಯಾರ ಒಂದನ್ನು ನಿರ್ಮಿಸಲು ಅದರ ಹಿಂದೆ, ಎಂದಿಗೂ ತನ್ನ ಲಯದಲ್ಲಿ ಹೆಚ್ಚು ಕಡಿಮೆಯಾಗದ ಸಾಧನ ಒಂದು ಇರಬೇಕು. ಇದನ್ನು ಪ್ರಥಮವಾಗಿ ಗ್ರಹಿಸಿದವನು ಗೆಲಿಲಿಯೋ.

ವಿವಿಯಾನಿ ಹೇಳುವಂತೆ, “೧೬೪೧ರಲ್ಲಿ, ಒಂದು ದಿನ, ನಾನು ಅವರೊಡನೆ ಇದ್ದಾಗ, ಪೆಂಡುಲಂಗಳನ್ನು ಗಡಿಯಾರಕ್ಕೆ ಅಳವಡಿಸುವ ಆಲೋಚನೆ ಅವರಿಗೆ ಬಂತು” ಸಣ್ಣ ವಯಸ್ಸಿನಿಂದಲೂ ಗೆಲಿಲಿಯೋ ನೋಡುತ್ತಿದ್ದ ಪೀಸಾ ಕೆಥೆಡ್ರೆಲ್‌ ನ ತೂಗುದೀಪಗಳು, ಅವನಿಗೆ ಕೌತುಕದ ವಸ್ತುಗಳಾಗಿದ್ದವು. ಉಳಿದವರೆಲ್ಲರೂ, ಪ್ರಾರ್ಥನೆಯ ಮೇಲೆ ಗಮನಹರಿಸುತ್ತಿದ್ದರೆ, ಗೆಲಿಲಿಯೋ ಈ ತೂಗಾಡುವ ದೀಪಗಳ ಬಗೆಗೆ ಯೋಚಿಸುತ್ತಿದ್ದ. ಅವು ಎಡದಿಂದ ಬಲಕ್ಕೆ ತೂಗಾಡುತ್ತಿದ್ದರೆ, ಒಂದು-ಕೊನೆಯಿಂದ ಇನ್ನೊಂದನ್ನು ತಲುಪಲು ಎಷ್ಟು ಸಮಯ ಬೇಕೆಂದು ಯೋಚಿಸುತ್ತಿದ್ದ. ಕತೆಗಳ ಪ್ರಕಾರ, ಈ ಸಮಯವನ್ನು ಅಳೆಯಲು ಅವನು ಉಪಯೋಗಿಸಿದ್ದು ಅವನ ಹೃದಯದ ಬಡಿತದ ಲಯವನ್ನು. ತೂಗು ದೀಪ ಎಷ್ಟೇ ದೂರಕ್ಕೆ ತೂಗಾಡಲಿ, ಅದರ ತೂಗಾಟದ ಅವಧಿ ಮಾತ್ರ ಬದಲಾಗದೆ ಇದ್ದದ್ದು ಗೆಲಿಲಿಯೋ ಗಮನಕ್ಕೆ ಯಾವಾಗಲೋ ಬಂದಿತ್ತು. ನಂತರದಲ್ಲಿ, ಈ ತೂಗಾಟದ ಅವಧಿ, ಆ ಪೆಂಡುಲಂನ ಉದ್ದದ ಮೇಲಷ್ಟೇ ನಿರ್ಧರಿತವಾಗಿದ್ದದೂ ಅವನಿಗೆ ಪ್ರಯೋಗಗಳ ಮೂಲಕ ತಿಳಿದಿತ್ತು.

ಪೆಂಡುಲಂ ಗಡಿಯಾರಗಳ ಅವಿಷ್ಕಾರದ ಮುಂಚೆ, ಅತ್ಯಂತ ಕರಾರುವಾಕ್ಕಾದ ಗಡಿಯಾರದ ಸಮಯದಲ್ಲಿ ಸಹ ಪ್ರತಿನಿತ್ಯ ಸುಮಾರು ಹದಿನೈದು ನಿಮಿಷ ಹೆಚ್ಚು ಕಡಿಮೆ ಇರುತ್ತಿತ್ತು. ಆ ಗಡಿಯಾರಗಳು ಗಂಟೆ ಮೂರೆಂದರೆ, ಅದು, ಎರಡೂ ಮುಕ್ಕಾಲೂ ಆಗಿರಬಹುದು, ಅಥವಾ ಮೂರೂಕಾಲೂ ಆಗಿರಬಹುದು ಹೀಗಾಗಿ, ಅವುಗಳನ್ನು ನಿರಂತರವಾಗಿ “ಸರಿ” ಮಾಡಬೇಕಿತ್ತು. ಆದರೆ, ಆ ಕಾಲದ ಒಂದು ಒಳ್ಳೆಯ ಪೆಂಡುಲಂ ಗಡಿಯಾರ ಪ್ರತಿನಿತ್ಯ ಹದಿನೈದು ಸೆಕೆಂಡುಗಳಿಗಿಂತ ಹೆಚ್ಚು-ಕಡಿಮೆ ಆಗುತ್ತಿರಲಿಲ್ಲ. ರಾತ್ರಿಯಲ್ಲಿ ನಕ್ಷತ್ರರಾಶಿಗಳನ್ನು, ದೂರದ ಗ್ರಹಗಳನ್ನು ಗಮನಿಸಿ, ಅವುಗಳ ಚಲನೆಯ ಬದಲಾವಣೆಯನ್ನು ನಿಖರವಾಗಿ ದಾಖಲು ಮಾಡಿಕೊಳ್ಳತೊಡಗಿದ್ದ ಗೆಲಿಲಿಯೋ ನಂತಹ ವಿಜ್ಞಾನಿಗಳಿಗೆ, ಕರಾರುವಾಕ್ಕಾದ ಗಡಿಯಾರದ ಅವಶ್ಯಕತೆ ಇತ್ತು.

ಗೆಲಿಲಿಯೋ, ತನ್ನ ಮಗನೊಡನೆ ಸೇರಿ ಪೆಂಡುಲಂ ಗಡಿಯಾರದ ಡಿಸೈನ್ ಒಂದನ್ನು ರೂಪಿಸಿದನಾದರೂ, ಆ ಗಡಿಯಾರವನ್ನು ನಿರ್ಮಿಸಲಿಲ್ಲ. ಆ ವೇಳೆಗಾಗಲೇ ಅವನಿಗೆ ದೃಷ್ಟಿಮಾಂದ್ಯತೆ ಕಾಡುತ್ತಿತ್ತು. ಗಡಿಯಾರ ನಿರ್ಮಿಸುವ ಮುನ್ನವೇ ಅವನು ಕಾಲದೊಳಗೆ ಲೀನವಾದ.

(ಕ್ರಿಶ್ಚಿಯಾನ್ ಹಾಯ್ಹೆನ್ಸ್)

ಪೆಂಡುಲಂ ಗಡಿಯಾರವನ್ನು ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದವನು ಡಚ್ ವಿಜ್ಞಾನಿ ಮತ್ತು ತಂತ್ರಜ್ಞ ಕ್ರಿಶ್ಚಿಯಾನ್ ಹಾಯ್ಹೆನ್ಸ್. (Christiaan Huygens). ಇವನು ಸಾಮಾನ್ಯನೇನಲ್ಲ. ಆ ಕಾಲದಲ್ಲಿ ಲಭ್ಯವಿದ್ದ ಮಾಹಿತಿ ಮತ್ತು ತಂತ್ರಜ್ಞಾನಗಳನ್ನೇ ಬಳಸಿ, ಬೆಳಕಿನ ವೇಗವನ್ನು ಅಳೆದವನು ಇವನು. (ಅವನ ಅಳತೆಯ ಪ್ರಕಾರ, ಬೆಳಕಿನ ವೇಗ ಸೆಕೆಂಡಿಗೆ ಸುಮಾರು ೧೩೧,೦೦೦ ಮೈಲು. ಆಧುನಿಕ ವಿಜ್ಞಾನದ ಪ್ರಕಾರ, ಇದು ಸೆಕೆಂಡಿಗೆ ಸುಮಾರು ೧೮೬,೦೦೦ ಮೈಲು) ನ್ಯೂಟನ್‌ ನ ಸಮಕಾಲೀನನಾದ ಹಾಯ್ಹೆನ್ಸ್, ಅವನ ಮೇಲೆ ಪ್ರಭಾವ ಬೀರಿದವನೂ ಸಹ. ಹಾಯ್ಹೆನ್ಸ್ ಬೆಳಕಿನ ವೇಗವನ್ನು ಅಳೆದ ವಿಷಯ ತಿಳಿದ ನ್ಯೂಟನ್, ಅವನಿಗೆ ಕುತೂಹಲಕಾರಿ ಪತ್ರವೊಂದನ್ನು ಬರೆಯುತ್ತಾನೆ. ಹಾಯ್ಹೆನ್ಸ್‌ ಗೆ ನ್ಯೂಟನ್‌ ನ ಪ್ರಶ್ನೆ: ಬೇರೆ-ಬೇರೆ ಬಣ್ಣದ ಬೆಳಕುಗಳ ವೇಗದಲ್ಲಿ ವ್ಯತ್ಯಾಸವೇನಾದರೂ ಕಂಡುಬಂತೇ?!
(ಬೆಳಕಿನ ವೇಗ, ನ್ಯೂಟನ್ ಮತ್ತು “ಕಾಲ” ಇವುಗಳ ಸಂಬಂಧವನ್ನು ಮುಂದೊಮ್ಮೆ ನೋಡೋಣ – ಐನ್‌ಸ್ಟೈನನ ವಿಚಾರ ಬಂದಾಗ)

******

ಗೆಲಿಲಿಯೋ ೧೬೪೧ರಲ್ಲಿ ರೂಪಿಸಿದ, ಹಾಯ್ಹೆನ್ಸ್ ೧೬೫೬ರಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಿಸಿದ ಪೆಂಡುಲಂ ಗಡಿಯಾರಗಳು ಮುಂದಿನ ಸುಮಾರು ಮುನ್ನೂರು ವರ್ಷಗಳ ವರೆಗೆ ಅತ್ಯಂತ ಕರಾರುವಾಕ್ಕಾದ ಗಡಿಯಾರಗಳೆನಿಸಿದವು.

ನಮ್ಮ ಮನೆಯಲ್ಲೂ ಅಂತಹದೊಂದು ಗಡಿಯಾರವಿತ್ತು. ನಮಗಾರಿಗೂ ಸಿಕ್ಕದಂತೆ ಎತ್ತರದಲ್ಲಿಟ್ಟಿದ್ದ ಆ ಗಡಿಯಾರವೇ ಇಡೀ ನಮ್ಮ ಮನೆಗೆ “ರೆಫರೆನ್ಸ್” ಗಡಿಯಾರವಾಗಿತ್ತು. ಮನೆಯಲ್ಲಿ ಹಲವರ ಕೈಯಲ್ಲಿ ಕೈಗಡಿಯಾರಗಳಿದ್ದವು, ರೇಡಿಯೋದಲ್ಲಿ ಟೈಂ ಹೇಳುತ್ತಿದ್ದರು. ಆದರೆ, ಆ ಗಡಿಯಾರ ೯:೩೦ ಎಂದು ತೋರಿಸಿದರಷ್ಟೇ ನಾನು ಸ್ಕೂಲಿಗೆ ಹೊರಡುತ್ತಿದ್ದೆ. ಆಗೊಮ್ಮೆ, ಈಗೊಮ್ಮೆ ಅದು ಹಿಂದೆ-ಮುಂದೆ ಆಗುತ್ತಿತ್ತೇನೋ, ಆದರೆ, ಅದು ತಪ್ಪು ಸಮಯ ತೋರಿಸಿದ ನೆನಪೇ ನನಗಿಲ್ಲ.

ಕಾಲದ ಕತೆಯ ಮುಂದಿನ ಅಧ್ಯಾಯದಲ್ಲಿ, “ದೂರ” ಹೆಚ್ಚಾದಾಗ “ಕಾಲ” ಕಾಡಿಸುವ ಪ್ರಶ್ನೆಗಳ ಕಡೆಗೆ ಗಮನ ಹರಿಸೋಣ.

(ಮುಂದುವರೆಯುವುದು)