ಹಿಂದಿನ ಬೆಂಚಿನಲ್ಲಿ ಸತೀಶ ಎಂಬ ತೀಟಲೆ ಹುಡುಗನಿದ್ದ. ಅವನು ಗುಂಪು ಕಟ್ಟಿಕೊಂಡು ‘ಮರಿ’ ಜಾಗದಲ್ಲಿ ‘ಮುದಿ’ ಸೇರಿಸಿ ರಾಗವಾಗಿ ಹೇಳುತ್ತಿದ್ದನು. ಈ ಅಪಬ್ರಂಶವನ್ನು ಕೇಳಿದ್ದೆ ತಡ, ಧ್ವನಿ ಬಂದ ಕಡೆಗೆ ನುಗ್ಗಿ ಕೈಗೆ ಸಿಕ್ಕಿದವರನ್ನು ರಪರಪನೆ ಚೆಚ್ಚಿ ಬಿಡುತ್ತಿದ್ದರು. ಎಷ್ಟು ಸರ್ತಿ ಹೇಳಿಕೊಟ್ಟರೂ ಕೆಲ ಹುಡುಗರು ಮತ್ತೆ ಮತ್ತೆ ಹಾಗೆ ಹೇಳುತ್ತಿದ್ದರು. ಇದರಿಂದ ಉರಿದು ಬೀಳುತ್ತಿದ್ದ ಮಾಸ್ಟರ್ ಸಿಟ್ಟಿನಿಂದಲೇ ಹಾರ್ಮೋನಿಯಂ ಎತ್ತಿಕೊಂಡು ಹೊರ ಹೋಗಿಬಿಡುತ್ತಿದ್ದರು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಐದನೆಯ ಕಂತು

 

ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಓಕೆ ಸತೀಶನೆಂಬ ಹುಡುಗನಿದ್ದ. ಅವರ ಭಾವ ಬಿಡಿಒ ಆಫೀಸ್‌ನಲ್ಲಿ ಕಾರ್ ಡ್ರೈವರ್ ಆಗಿದ್ದುದರಿಂದ ಮನೆಗೂ ಹಾಸ್ಟೆಲ್‌ಗೂ ಓಡಾಡಿಕೊಂಡಿದ್ದ. ಸೈಕಲ್‌ನಲ್ಲಿ ಊಟಕ್ಕೆ ಬರುತ್ತಿದ್ದ ಆತ ವಾರದ ಕೆಲ ದಿನಗಳಲ್ಲಿ ಮಾತ್ರ ಇಲ್ಲಿ ಮಲಗುತ್ತಿದ್ದ. ನೋಡಲು ಉದ್ದಕ್ಕೆ ಸುಂದರನಾಗಿದ್ದ ಆತ ಮುಂಗೂದಲನ್ನ ಕಣ್ಣುಬ್ಬಿನವರೆಗೂ ಬಿಟ್ಟುಕೊಂಡು ಸ್ಟೈಲಾಗಿ ಕುಣಿಸುತ್ತಿದ್ದ. ಸತೀಶ ಕೆಲವು ದಿನಗಳ ಕಾಲ ಹಾಸ್ಟೆಲ್‌ನ ಮಾನಿಟರ್ ಕೂಡ ಆಗಿದ್ದು, ರಾತ್ರಿ ಹತ್ತು ಗಂಟೆಗೂ ಮುಂಚೆ ಮಲಗುವವರ ಮತ್ತು ಓದಿಕೊಳ್ಳದೆ ಗಲಾಟೆ ಮಾಡುತ್ತಿದ್ದವರ ಹೆಸರು ಬರೆದುಕೊಂಡು ಬೆಳಗ್ಗೆ ವಾರ್ಡನ್‌ಗೆ ತೋರಿಸಿ ಒದೆ ಬೀಳಿಸುತ್ತಿದ್ದ. ಅವನು ನಡೆದುಕೊಳ್ಳುತ್ತಿದ್ದ ರೀತಿಯಿಂದಾಗಿ ಹಾಸ್ಟೆಲ್ ಹುಡುಗರು ಅವನನ್ನು ವಿಚಿತ್ರವಾಗಿ ನೋಡುತ್ತಿದ್ದರು.

ಒಂದು ದಿನ ಅವನು ಚಿತ್ರಾನ್ನದಲ್ಲಿ ಕಡ್ಲೆಬೀಜವಿಲ್ಲ, ತಿಂಡಿ ತಿನ್ನಬಾರದೆಂದು ತಡೆದು ವಾರ್ಡನ್‌ ಹತ್ತಿರ ನ್ಯಾಯ ಕೇಳಲು ಹುಡುಗರನ್ನು ಕರೆದುಕೊಂಡು ಹೋದ. ವಾರ್ಡನ್‌ ‘ಕಡ್ಳೆಬೀಜ ಬೇಕೇನೊ ಕಡ್ಳೆಬೀಜ’ ಎಂದು ಮೂಲೆಗೆ ಹಾಕಿಕೊಂಡು ಚೆನ್ನಾಗಿ ತದುಕಿದರು. ಅವರಿಗೆ ಹೇಳಿ ಕರೆಸುತ್ತೇನೆ ಇವರಿಗೆ ಹೇಳಿ ಕರೆಸುತ್ತೇನೆ ಎಂದು ರೋಪೊಡೆದುಕೊಂಡು ತಿರುಗಾಡಿದನಾದರೂ ಯಾರೂ ಆತನ ಬೆಂಬಲಕ್ಕೆ ಬಂದದ್ದು ಕಾಣಲಿಲ್ಲ. ಸ್ವಲ್ಪ ದಿನ ಗೊಣಗಾಡಿಕೊಂಡು ಸುಮ್ಮನಾದ.

ನಶೆಯ ಸೀನು

ಮಾವಿನ ತೋಪಿನ ಸ್ಲಂನಿಂದ ಮಧ್ಯ ವಯಸ್ಸು ಮೀರಿದ ಹೆಂಗಸೊಂದು ಅಕ್ಕಿ ರಾಗಿ ಮಾಡಲು ಹಾಸ್ಟೆಲ್‌ಗೆ ಬರುತ್ತಿತ್ತು. ಹೊಕ್ಕುಳು ಕಾಣುವಂತೆ ಸೀರೆ ತೊಡುತ್ತಿದ್ದ ಆಕೆ ನಾವು ಮಧ್ಯಾಹ್ನದ ಹೊತ್ತು ಹಾಸ್ಟೆಲ್‌ಗೆ ಬಂದಾಗ ಒಬ್ಬೊಂಟಿಯಾಗಿ ರಾಗಿ ಕೇರುತ್ತಿರುತ್ತಿತ್ತು. ಆಫೀಸ್ ರೂಮೊಳಗಿರುತ್ತಿದ್ದ ವಾರ್ಡನ್ ಶಕೆಗೆ ಅಂಗಿ ಬಿಚ್ಚಾಕಿ ಬನಿಯನ್ನಿನಲ್ಲಿದ್ದು ಬೀಡಿ ಎಳೆಯುತ್ತಿರುತ್ತಿದ್ದರು. ದವಡೆಯಲ್ಲಿ ಸದಾ ಹೊಗೆ ಸೊಪ್ಪು ವತ್ಲಿಸಿಕೊಂಡಿರುತ್ತಿದ್ದ ಆಕೆ, ಅಕ್ಕಿ ಕೇರುತ್ತಿರುವಾಗಲೇ ಬಲಗೈನ ಹೆಬ್ಬೆರಳು ಮತ್ತು ತೋರು ಬೆರಳುಗಳ ನಡುವೆ ಬಿಗಿಯಾಗಿ ನಶ್ಯ ಹಿಡಿದು ಮೂಗಿನ ಒಳಲೆಯನ್ನು ಅಗಲಿಸಿ ಏರಿಸಿಕೊಳ್ಳುತ್ತಿದ್ದಳು. ತಕ್ಷಣವೇ ಉಮ್ಮಳಿಸಿ ಬರುತ್ತಿದ್ದ ಸೀನುಗಳಿಗೆ ಯಾವ ಅಡೆತಡೆಯನ್ನೂ ಕೊಡದೆ ಸ್ವತಂತ್ರ್ಯವಾಗಿ ಹರಡಲು ಬಿಡುತ್ತಿದ್ದಳು. ಆಕೆಯ ಸೀನು ಸುತ್ತ ಹರಡಿಕೊಂಡಿದ್ದ ಅಕ್ಕಿ ರಾಗಿಯನ್ನು ದಾಟಿ ಟ್ರಂಕಿನ ಹಿಂದೆ ಕೂತಿದ್ದ ಹುಡುಗರನ್ನೂ ತಲುಪುತ್ತಿತ್ತು. ಇದರಿಂದ ರೋಸಿ ಹೋದ ಹುಡುಗರು ಆಕೆ ನಶ್ಯ ನಿಲ್ಲಿಸಬೇಕು ಇಲ್ಲವೆ ಕೆಲಸಕ್ಕೆ ಬರುವುದನ್ನ ನಿಲ್ಲಿಸಬೇಕೆಂಬ ದೂರಿನೊಂದಿಗೆ ವಾರ್ಡನ್ ಹತ್ತಿರ ಹೋದರು.

ನಶ್ಯದ ಮೇಲಿನ ದೂರಿನಿಂದ ಮುಜುಗರಕ್ಕೊಳಗಾದ ವಾರ್ಡನ್ ಆಕೆಯನ್ನು ಆಫೀಸ್ ರೂಮಿಗೆ ಕರೆದು ಬುದ್ದಿ ಹೇಳುವಂತೆ ನಟಿಸಿದರು. ಈ ಪ್ರಸಂಗದಿಂದ ಅಡುಗೆ ಮನೆಯಲ್ಲಿದ್ದ ಭಟ್ಟರು ಮುಸಿ ಮುಸಿ ನಗುತ್ತ ಮುದ್ದೆ ತಿರುವುತ್ತಿದ್ದರು. ಈ ಘಟನೆಯ ನಂತರ ಪ್ರತಿನಿತ್ಯ ಹಟ್ಟಿಯಲ್ಲಿ ಬೈಯ್ದುಕೊಳ್ಳುವಂತೆ ಆ ಹೆಂಗಸು ದೂರುದಾರರ ಮೇಲೆ ಬೈದುಕೊಳ್ಳುತ್ತಾ ರಾಗಿ ಕೇರತೊಡಗಿದಳು.


ಬೀಡಿ ಎಳೆಯುತ್ತಿದ್ದ ಮೀಸೆ

ಹಾಸ್ಟೆಲ್‌ಗೆ ತಮ್ಮ ಮಕ್ಕಳನ್ನು ಹುಡುಕಿಕೊಂಡು ಬರುತ್ತಿದ್ದ ಪೋಷಕರು ತೀರಾ ವಿರಳ. ಕೆಲವೊಮ್ಮೆ ನಾಲ್ಕೈದು ವರ್ಷಕಳೆದರೂ ಯಾರೂ ಇತ್ತ ತಲೆ ಹಾಕುತ್ತಿರಲಿಲ್ಲ. ಕೊನೆಗೆ ಪಾಸ್ ಆಗಿಯೊ ಫೇಲ್ ಆಗಿಯೊ ಹುಡುಗರೇ ಹಾಸ್ಟೆಲ್ ತೊರೆಯಬೇಕಾಗಿ ಬರುತ್ತಿತ್ತು. ಕೆಲವು ತಾಯಂದಿರಿದ್ದರು, ಒಮ್ಮೆ ಭೇಟಿಕೊಟ್ಟವರು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ ಕೆಲವರು ನಮ್ಮ ಹಾಸ್ಟೆಲ್ ಸಿಬ್ಬಂಧಿಯೊಂದಿಗೆ ಸಲಿಗೆ ಬೆಳೆಸಿಕೊಂಡಿರುತ್ತಿದ್ದರು. ಮಕ್ಕಳೆಲ್ಲ ಶಾಲೆಗೆ ಹೋದ ನಂತರ ಬರುತ್ತಿದ್ದ ಅವರು, ಶಾಲೆಯಿಂದ ಮಕ್ಕಳು ವಾಪಾಸ್ಸಾಗುವುದಕ್ಕೂ ಮುನ್ನವೇ ಜಾಗ ಖಾಲಿ ಮಾಡಿರುತ್ತಿದ್ದರು.

ಅಂಥವರ ಮಕ್ಕಳನ್ನ ನಮ್ಮ ಭಟ್ಟರು ಸ್ವಲ್ಪ ದಿನ ವಿಶೇಷವಾಗಿ ಗಮನಿಸಿಕೊಂಡು ಊಟಗಳಲ್ಲಿ ರಿಯಾಯಿತಿ ತೋರಿ, ಆನಂತರ ಅಸಡ್ಡೆ ಬೆಳೆಸಿಕೊಳ್ಳುತ್ತಿದ್ದರು. ನನಗೊಬ್ಬ ಕಪ್ಪಗೆ ತೆಳ್ಳಗೆ ಉದ್ದಕ್ಕಿದ್ದ ಸ್ನೇಹಿತನಿದ್ದ. ಅವನ ತಾಯಿಯೂ ಕೂಡ ಅವನಂಗೇ ಇದ್ದಳು. ಆಕೆಯೂ ಕೂಡ ಕನಿಷ್ಟವೆಂದರೆ ವಾರಕ್ಕೊಂದು ದಿನವಾದರೂ ಹಾಸ್ಟೆಲ್‌ಗೆ ಭೇಟಿ ಕೊಡಲು ಶುರುವಿಟ್ಟುಕೊಂಡಿದ್ದಳು. ಆ ನಡುವೆ ನಮ್ಮ ಮೀಸೆ ಭಟ್ಟನೊಬ್ಬ ಗೆಳೆಯನಿಗೆ ಕೇಳಿದಾಗಲೆಲ್ಲ ಖರ್ಚಿಗೆ ಚಿಲ್ಲರೆ ಕಾಸು ಕೊಡುತ್ತಿದ್ದನು. ಹಾಗಾಗಿ ಅವನ ಹತ್ತಿರ ಸದಾ ದುಡ್ಡು ಇರುತ್ತಿತ್ತು. ನಾನು ಮತ್ತು ಗೆಳೆಯ ಒಂದು ದಿನ ಶಾಲೆಗೆ ಚಕ್ಕರ್ ಹಾಕಿ ತಿರುಗಾಡುತ್ತಿದ್ದೆವು. ‘ಪಿಚ್ಚರ್‍ಗೆ ಹೋಗೋನೆನೋ’ ಅಂದ. ನಾನು ದುಡ್ಡಿಲ್ಲ ಎಂದೆ. ‘ಬಾ ಹೇಗೊ ಆಗುತ್ತೆ’ ಅಂದು ಗಾಂಧಿನಗರದಲ್ಲಿದ್ದ ಅವರ ನೆಂಟರ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಗೆಳೆಯನ ಅಮ್ಮ ಒಬ್ಬರೇ ಇದ್ದರು. ಪಡಸಾಲೆಯಲ್ಲಿ ನಮ್ಮ ಭಟ್ಟ ಮೀಸೆಯಪ್ಪ ಕುರ್ಚಿಯ ಮೇಲೆ ಕೂತಿದ್ದನು. ನನಗೆ ಆಶ್ಚರ್ಯವಾಯಿತು. ಅಮ್ಮ ನಾವು ಸ್ಕೂಲಿಗೆ ಹೋಗದಿರುವುದರ ಬಗ್ಗೆ ವಿಚಾರಿಸುತ್ತಿದ್ದಳು. ಗೆಳೆಯ ಏನೇನೊ ಹೇಳಿ ಪಿಚ್ಚರಿಗೆ ಹೋಗುತ್ತೇವೆಂದ. ಹೊರಗೆ ಬೀಡಿ ಎಳೆಯುತ್ತಿದ್ದ ಮೀಸೆ, ಹತ್ತಿರ ಕರೆದು ಆರು ರೂಪಾಯಿ ಕೊಟ್ಟು, ಪಿಚ್ಚರ್‍ಗೆ ಹೋಗಿ ಬರಲು ಕಳುಹಿಸಿದನು. ನಾವು ತಲಾ ಮೂರು ರೂಪಾಯಿ ಕೊಟ್ಟು ಅಲ್ಲೆ ಇದ್ದ ಲಕ್ಷ್ಮಿ ಟಾಕೀಸ್‌ನ ಗಾಂಧಿ ಕ್ಲಾಸ್‌ಗೆ ಹೋದೆವು. ಸಂಜೆ ಸಿನಿಮಾ ಮುಗಿಸಿಕೊಂಡು ಮನೆ ಹತ್ತಿರ ಹೋದಾಗ, ಬೀಗ ಹಾಕಿತ್ತು. ನಾವು ಸೀದ ಹಾಸ್ಟೆಲ್ ತಲುಪಿದೆವು.

ಸೋಷಿಯಲ್ ಹಾಸ್ಟೆಲ್‌ನ ಪಕ್ಕದಲ್ಲೆ ಇದ್ದ ಬಿಸಿಎಮ್ ಕಾಲೇಜು ಹಾಸ್ಟೆಲ್‌ನಲ್ಲಿ ಮಧ್ಯವಯಸ್ಸಿನ ಸಿಂಗಾರಪ್ಪನೆಂದು ಬದಲಾಯಿಸಿದ ಹೆಸರಿನ ಮುಖ್ಯ ಅಡುಗೆಯವನಿದ್ದನು. ಅವನಿಗೆ ಸಹಾಯಕಿಯಾಗಿ ಬೆಳ್ಳಗೆ ಗುಂಡು ಗುಂಡಾಗಿದ್ದ ಹೆಂಗಸೊಬ್ಬಳಿದ್ದಳು. ನೋಡಲು ಒಂದೇ ವಯಸ್ಸಿನ ಒಂದೇ ಬಣ್ಣದವರಾಗಿದ್ದ ಅವರಿಬ್ಬರು ಉತ್ತಮ ಜಾತಿಯವರಂತೆ ಕಾಣುತ್ತಿದ್ದರು. ಸಿಂಗಾರಪ್ಪನ ಗಡ್ಡದಲ್ಲಿ ಅಲ್ಲೊಂದ್ ಇಲ್ಲೊಂದ್ ಬಿಳಿಗೂದಲು ಸೇರಿತ್ತಷ್ಟೆ. ಬಹಳ ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದಾಗಿ ಅವರಿಬ್ಬರೂ ಗಂಡ ಹೆಂಡತಿಯರಂತೆ ಹೊಂದಿಕೊಂಡು ಕೆಲಸ ಮಾಡುತ್ತಿದ್ದರು. ಆಕೆಯ ಪತಿ ಯಾವಾಗಲೊ ಒಮ್ಮೆ ಹಾಸ್ಟೆಲ್‌ಗೆ ಬಂದು ಅಡುಗೆ ಮನೆಯಲ್ಲಿ ಕುಕ್ಕರುಗಾಗಲಿ ಕೂತು ತಿಂಡಿ ತಿಂದು ಹೋಗುತ್ತಿದ್ದನು. ಅವನ ಉದ್ದದ ಕಪ್ಪು ಮಯ್ಯಿಗೆ ವಯಸ್ಸಾಗಿತ್ತು. ಅವರಿಬ್ಬರನ್ನು ಅನೇಕರು ತಂದೆ ಮಗಳೆಂದುಕೊಳ್ಳುತ್ತಿದ್ದರು. ಆಕೆಗೆ ಹೈಸ್ಕೂಲ್ ಓದುತ್ತಿದ್ದ ಮಗನಿದ್ದನು. ಆತ ತಾಯಿಯಂತೆ ಕೆಂಪಗೆ ಗುಂಡು ಗುಂಡಾಗಿದ್ದನು. ಆತ ಹಾಸ್ಟೆಲ್‌ಗೆ ಸೇರದಿದ್ದರೂ ಅಮ್ಮನ ಸಲುವಾಗಿ ಟೈಮಿಗೆ ಸರಿಯಾಗಿ ಬಂದು ಊಟ ತಿಂಡಿ ಮಾಡಿಕೊಂಡು ಹೋಗುತ್ತಿದ್ದನು.

ಅನೇಕ ಕಾಲೇಜು ಹುಡುಗರು ಆಸೆ ಮಾಡಿಕೊಂಡಿದ್ದರೂ ಫಲಿಸದ ಆಕೆ ಸಿಂಗಾರಪ್ಪನಲ್ಲಿ ಬಂಧಿಯಾದದ್ದು ಅನೇಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಏನಾದರೂ ಮಾಡಿ ಅವರಿಬ್ಬರನ್ನ ಸಿಕ್ಕಾಕಿಸಬೇಕೆಂದು ಹುಡುಗರು ಕಾಯುತ್ತಿದ್ದರು. ಬೆಳಗಿನ ತಿಂಡಿ ಸಮಯ ಮುಗಿದು, ಹುಡುಗರೆಲ್ಲಾ ಕಾಲೇಜುಗಳಿಗೆ ಹೋದ ನಂತರದಲ್ಲಿ ಹಾಸ್ಟೆಲ್ ನಿಶ್ಯಬ್ದವಾಗಿರುತ್ತಿತ್ತು. ಅದು ಅವರು ಸೇರುವ ಸಮಯವೆಂದು ಹೊಂಚು ಹಾಕಿ ಕಾಯುತ್ತಿದ್ದ ಹುಡುಗರಿಗೆ ಒಂದು ದಿನ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಂತೆ! ಅಂದಿನಿಂದ ಹುಡುಗರು ಸಿಂಗಾರಪ್ಪನನ್ನು ರೇಗಿಸುತ್ತ ಕೊಂಕಿಸಿ ಮಾತಾಡುತ್ತಿದ್ದರು. ಅಂಥ ಹುಡುಗರನ್ನ ಕಂಡರೆ ಸಿಂಗಾರಪ್ಪ ಕೈ ಕೈ ಮುಗಿಯುತ್ತ ನೀರಾಗಿ ಹರಿದು ಹೋಗುತ್ತಿದ್ದ. ಕೊನೆ ಕೊನೆಗೆ ಎಲ್ಲಾ ಹುಡುಗರೂ ಅವನನ್ನು ಚುಡಾಯಿಸತೊಡಗಿದರು. ಇದರಿಂದ ರೋಸಿ ಹೋದ ಸಿಂಗಾರಪ್ಪ ಕೊನೆಕೊನೆಗೆ ತಲೆಕೆಡಿಸಿಕೊಳ್ಳದೆ ಸುಮ್ಮನಿರತೊಡಗಿದ.

ನಶ್ಯದ ಮೇಲಿನ ದೂರಿನಿಂದ ಮುಜುಗರಕ್ಕೊಳಗಾದ ವಾರ್ಡನ್ ಆಕೆಯನ್ನು ಆಫೀಸ್ ರೂಮಿಗೆ ಕರೆದು ಬುದ್ದಿ ಹೇಳುವಂತೆ ನಟಿಸಿದರು. ಈ ಪ್ರಸಂಗದಿಂದ ಅಡುಗೆ ಮನೆಯಲ್ಲಿದ್ದ ಭಟ್ಟರು ಮುಸಿ ಮುಸಿ ನಗುತ್ತ ಮುದ್ದೆ ತಿರುವುತ್ತಿದ್ದರು.

ಒಂದು ಮಧ್ಯಾಹ್ನ ನಾನು ಎಲ್ಡಕ್ಕೆ ಎಂದು ಶಾಲೆಯಿಂದ ಕೇಳಿಕೊಂಡು ಹಾಸ್ಟೆಲ್ ಹತ್ತಿರ ಬಂದಿದ್ದೆ. ಬಯಲಲ್ಲಿ ವಿಸರ್ಜಿಸಿ ತಿಗತೊಳೆದುಕೊಳ್ಳಲು ಪೈಪಿನಲ್ಲಿ ಬರುತ್ತಿದ್ದ ನೀರಿಗಾಗಿ ಕಾದು ನಿಂತಿದ್ದೆ. ಅದೇ ಹೊತ್ತಿಗೆ ಸಿಂಗಾರಪ್ಪ ಮತ್ತು ಆತನ ಸಹಾಯಕಿ ಒಟ್ಟಿಗೆ ನೀರು ಹಿಡಿಯುತ್ತಿದ್ದರು. ಆಕೆ ಬಗ್ಗಿ ಬಿಂದಿಗೆಗೆ ನೀರು ತುಂಬಿಸಿಕೊಟ್ಟರೆ ಆತ ತೆಗೆದುಕೊಂಡು ಹೋಗಿ ಅಡುಗೆ ಮನೆ ಡ್ರಮ್ಮಿಗೆ ಸುರಿದು ಬರುತ್ತಿದ್ದ. ಕೆಲವೊಮ್ಮೆ ಬಿಂದಿಗೆ ತುಂಬುವುದು ಲೇಟಾಗುತ್ತಿತ್ತು. ಅದು ತುಂಬುವವರೆಗೂ ಆತ ಅಲ್ಲೆ ನಿಂತಿರುತ್ತಿದ್ದ. ಬಗ್ಗಿ ನೀರು ಹಿಡಿಯುವಾಗ ಕೊರಳಿನಲ್ಲಿದ್ದ ಆಕೆಯ ಸರ ಹೊರಗಡೆ ಈಜಾಡುತ್ತಿತ್ತು. ನೋಡಿ ನೋಡಿ ಸಾಕಾದ ಆತ, ಬಿಂದಿಗೆಯನ್ನು ಕೆಳಗಿಟ್ಟು ನೇತಾಡುತ್ತಿದ್ದ ಸರವನ್ನು ಕೈಯಲ್ಲಿ ಹಿಡಿದು ಆಕೆಯ ಬ್ಲೌಸ್ ಒಳಗೆ ತುರುಕಿದ. ಅಲ್ಲೆ ನಿಂತಿದ್ದ ನಾನು ನಾಚಿ ನೀರಾದರೆ, ಅವರು ನನ್ನ ಇರುವಿಕೆಯನ್ನ ಗಣನೆಗೇ ತೆಗೆದುಕೊಂಡಂತಿರಲಿಲ್ಲ. ಹೀಗೆ ನಾನಾ ವಿಧದಲ್ಲಿ ನನ್ನ ಸುತ್ತಲಿನ ಪರಿಸರ ಅಶ್ಲೀಲವಾಗಿತ್ತು.

ಕಿರಿಕಿರಿ ಶಾಲೆ

ನಾವು ಶಾಲೆಗೆ ಹೋಗುವ ದಾರಿಯಲ್ಲಿ ಶೇಟುಗಳ ಮನೆಗಳಿದ್ದವು. ಅವರ ಗೋಡೆ ಕಿಟಕಿಗಳು ಪಳ ಪಳ ಹೊಳೆಯುತ್ತಿದ್ದವು. ಮನೆಯ ಮುಂದೆ ಕಾರುಗಳು ನಿಂತಿರುತ್ತಿದ್ದವು. ನಾವು ಹೋಗುವಾಗ ಬರುವಾಗ ನಮ್ಮಗಳ ಮುಖವನ್ನು ಅವರ ಗಾಜಿನಂತ ಗೋಡೆಗಳಲ್ಲಿ, ಕಾರಿನ ಕಿಟಕಿಗಳಲ್ಲಿ ನೋಡಿಕೊಂಡು ತಲೆ ನೀವಿಕೊಂಡು ಹೋಗುತ್ತಿದ್ದೆವು. ಅವರು ಮನೆಯೊಳಗೆ ಕೂತು ಅಗಲವಾದ ಟಿವಿಯನ್ನು ನೋಡುತ್ತಿದ್ದರೆ, ಕಾಂಪೌಂಡಿನಾಚೆ ನಿಂತಿರುತ್ತಿದ್ದ ನಮಗೆ ಅವರ ಟಿವಿ ಕಿಟಕಿ ಗಾಜಿನ ಮೂಲಕ ಕಾಣಿಸುತ್ತಿತ್ತು. ಕಿಟಕಿ ಬಂದ್ ಮಾಡಿರುತ್ತಿದ್ದುದರಿಂದ ಟಿವಿಯ ದನಿ ಕೇಳಿಸುತ್ತಿರಲಿಲ್ಲ. ಸೌಂಡ್ ಕೇಳದ ಟಿವಿಯನ್ನೆ ನೋಡುತ್ತ ನಿಂತಿರುತ್ತಿದ್ದೆವು. ಒಂದಿಬ್ಬರಿಂದ ಶುರುವಾಗುತ್ತಿದ್ದ ಮೂಕಿ ಸಿನಿಮಾ ವೀಕ್ಷಣೆ ಸ್ವಲ್ಪದ್ದರಲ್ಲಿಯೇ ಹತ್ತಾರು ಆಗುತ್ತಿತ್ತು. ಕಾಂಪೌಂಡ್ ಆಚೆಗಿನ ನಮ್ಮ ಸಂಖ್ಯೆ ನೋಡಿ ಒಳಗಿನವರು ಟಿವಿ ಆರಿಸಿ ಇನ್ನೇನೊ ಮಾಡಲು ಶುರುವಾಗುತ್ತಿದ್ದರು. ನಾವು ಜಾರಿಕೊಳ್ಳುತ್ತಿದ್ದೆವು.

ನನ್ನ ಏಳನೇ ತರಗತಿಗೆ ನಾನು ನಮ್ಮ ಹಾಸ್ಟೆಲ್‌ನಿಂದ ಬರುತ್ತಿದ್ದ ಇಬ್ಬರು ಹುಡುಗರೊಂದಿಗೆ ಹೋಗುತ್ತಿದ್ದೆ. ಆ ಇಬ್ಬರೂ ಕೂಡ ಪೊಲಿಯೋ ಪೀಡಿತರು. ವಸಂತನೆಂಬುವವನು ನನ್ನ ಪಕ್ಕದಲ್ಲಿ ಬ್ಯಾಗು ನೇತಾಕಿಕೊಂಡು ನೆಗೆ ನೆಗೆದು ಬರುತ್ತಿದ್ದರೆ, ಚಡ್ಡಿ ಒಳಗಿಂದು ಸದಾ ಕಾಣಿಸುತ್ತಿತ್ತು. ರವಿ ಎಂಬ ಇನ್ನೊಬ್ಬನ ಒಂದು ಕಾಲು ಹೆಬ್ಬೆಟ್ಟಿಗಿಂತಲೂ ಕಿರಿದಾಗಿದ್ದು ನೆಲದಲ್ಲೆ ನಡೆದು ಬರುತ್ತಿದ್ದ. ರವಿ ಓದು ಆಟ ಎಲ್ಲದ್ದರಲ್ಲೂ ಮುಂದಿದ್ದು ಸಾಮಾನ್ಯರಿಗೂ ಸವಾಲಾಗಿದ್ದ. ಕಬ್ಬಡಿ ಆಟದಲ್ಲಿ ಆತ ನೆಲದಲ್ಲೆ ದೇಕಿ ಹಲವರನ್ನು ಔಟ್ ಮಾಡಿಕೊಂಡು ಬರುತ್ತಿದ್ದ. ನಮ್ಮೂರ ಶಾಲೆಯಲ್ಲಿ ಓದುವುದರಲ್ಲಿ ಮುಂದಿದ್ದ ನಾನು, ನಗರದ ಶಾಲೆಯಲ್ಲಿದ್ದ ತರಾವರಿ ಹುಡುಗರ ವೇಗದೊಳಗೆ ಮಂಕಾಗಿ ಹೋದೆ. ನಾನೇ ಅಲ್ಲ ಹಾಸ್ಟೆಲ್‌ನಿಂದ ಬರುತ್ತಿದ್ದ ಬಹುತೇಕ ಹುಡುಗರು ಸದಾ ಮಂಕಾಗಿರುತ್ತಿದ್ದರು. ಆಟಕ್ಕೆ ಊಟಕ್ಕೆ ಬಿಟ್ಟಾಗ ನಾವು ಇತರೆ ಹುಡಗರ ಜೊತೆ ಸೇರದೆ, ನಾವು ನಾವೇ ಗುಂಪಾಗಿದ್ದುಕೊಂಡು ಬೇರೆಯವರು ಆಡುತ್ತಿದ್ದುದ್ದನು ಬೆರಗಿನಿಂದ ನೋಡುತ್ತಿದ್ದೆವು.

ನಾನು ಕುಳಿತುಕೊಳ್ಳುತ್ತಿದ್ದ ಬೆಂಚಿನ ಹಿಂದೆ ಮೂರು ಜನ ಸಾಬರ ಹುಡುಗರು ಕುಳಿತುಕೊಳ್ಳುತ್ತಿದ್ದರು. ಅವರು ಸದಾ ಉರ್ದುವಿನಲ್ಲಿ ಮಾತಾಡಿಕೊಳ್ಳುತ್ತಿದ್ದರು. ನಾನು ಹಿಂದಕ್ಕೆ ತಿರುಗಿದರೆ ಸಾಕು ಚುಚ್ಚುವವರಂತೆ ನೋಡುತ್ತಿದ್ದರು. ಅದರಲ್ಲಿ ಖಲೀಂ ಎಂಬ ಸೆಣಕಲು ಬಿಳಿ ಜಿರಲೆಯಂತ ಹುಡುಗನಿದ್ದನು. ಬೆಂಚುಗಳು ಒತ್ತೊತ್ತಾಗಿರುತ್ತಿದ್ದುದರಿಂದ, ಖಲೀಂ ತನ್ನ ಚೂಪಾದ ಕೈವಾರವನ್ನು ನನ್ನ ಬೆನ್ನಿಗೆ ಸದಾ ಒಡ್ಡಿರುತ್ತಿದ್ದನು. ನಾನು ತುಸು ಹಿಂದಕ್ಕೆ ಬಾಗಿದರೆ ಸಾಕು ಅದು ನನಗೆ ಚುಚ್ಚುಕೊಳ್ಳುತ್ತಿತ್ತು. ಹಿಂದಕ್ಕೆ ತಿರುಗಿದರೆ ‘ತೆರಿ ಅಮ್ಮಾಕು’ ಎಂದು ಬೈಯುತ್ತಿದ್ದನು. ಪೆನ್ನಿನಿಂದ ಅಂಗಿಯ ತುಂಬಾ ಗೀಚಾಕುತ್ತಿದ್ದನು. ನಾನಿನ್ನು ಹೊಸದಾಗಿ ಹೋದವನಾದ್ದರಿಂದ ಮಾತಾಡಲು ದೂರು ಹೇಳಲು ಧೈರ್ಯ ಬರುತ್ತಿರಲಿಲ್ಲ. ಕೊನೆಗೆ ಹೇಗೊ ಮೇಡಮ್ ಒಬ್ಬರಿಗೆ ವಿಷಯ ತಿಳಿದು ಖಲೀಂನನ್ನು ಚೆನ್ನಾಗಿ ಕೆಚ್ಚಿದರು. ಅಂದಿನಿಂದ ಖಲೀಂನ ಕೀಟಲೆ ತಪ್ಪಿತಾದರೂ, ಆಟಕ್ಕೆ ಬಿಟ್ಟಾಗ ಅವರ ಗುಂಪು ನನ್ನನ್ನು ಗುರಾಯಿಸುತ್ತಿತ್ತು.

ಪಿ.ವಿ. ವಿಜಯನೆಂಬ ಇನ್ನೊಬ್ಬ ಬೆಳ್ಳಗೆ ಕುಳ್ಳಗಿದ್ದ ಹುಡುಗನಿದ್ದ. ಅವನ ತಲೆಗೂದಲು ಮೋಟಾಗಿರುತ್ತಿತ್ತು. ಹಣೆಯಲ್ಲಿ ಸದಾ ಗಂಧದ ನಾಮ ಇಟ್ಟುಕೊಂಡಿರುತ್ತಿದ್ದ ಅವನು ಬ್ರಾಹ್ಮಣರವನು ಎಂದು ಶಿಕ್ಷಕರು ಮಾತಾಡಿಕೊಳ್ಳುತ್ತಿದ್ದರು. ಅವರ ಅಪ್ಪ ಸ್ಕೂಲ್ ಪಕ್ಕದಲ್ಲಿದ್ದ ಶೃಂಗಾರ್ ಹೋಟೆಲ್‌ನ ಮುಂದೆ ಲಾಟರಿ ಮಾರುತ್ತಿದ್ದರು. ಆ ಹೋಟೆಲ್ ವಿಜಯನ ದೊಡ್ಡಪ್ಪನದ್ದಾಗಿತ್ತು.

ವಿಜಯ ಬಹಳ ಚೂಟಿಯಾಗಿದ್ದ ಹುಡುಗ. ಓದಿನಲ್ಲೂ ಮುಂದಿದ್ದನಾದರೂ ಶಾಲೆಯ ಇತರೆ ಯಾರೂ ಬಳಸದಂತಹ ಹೊಲಸು ಮಾತುಗಳನ್ನು ಬೈಯಲು ಬಳಸುತ್ತಿದ್ದನು. ಅವನ ತುಂಟತನ ಎಲ್ಲಾ ಶಿಕ್ಷಕರಿಗೂ ಗೊತ್ತಿತ್ತಾದರೂ ಅವನ ಜಾತಿ ಶ್ರೇಷ್ಠತೆಯಿಂದಲೇನೊ ಯಾರೂ ಶಿಕ್ಷಿಸುತ್ತಿರಲಿಲ್ಲ. ವಿಜಯ ನನ್ನೊಂದಿಗೆ ಸಲುಗೆಯಿಂದಿದ್ದನು. ಪ್ರತಿನಿತ್ಯ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಹೋಟೆಲ್‌ನಿಂದ ಕದ್ದು ಲಾಡು ತರುತ್ತಿದ್ದನು. ತಂದ ಲಾಡನ್ನು ನನಗೆ ಕೊಟ್ಟು, ಆತ ನನ್ನ ಜೊತೆ ಹಾಸ್ಟೆಲ್‌ಗೆ ಬಂದು ನಾನು ಅರ್ಧ ತಿಂದು ಬಿಟ್ಟಿದ್ದ ಇಡ್ಲಿಯನ್ನು ತಿನ್ನುತ್ತಿದ್ದನು. ಅದೇನು ರುಚಿಸುತ್ತಿತ್ತೊ ಏನೊ, ಕೊನೆಗೆ ಬಾಕ್ಸ್‌ನ ಮುಚ್ಚಳವನ್ನೂ ನೆಕ್ಕಿಕೊಳ್ಳುತ್ತಿದ್ದನು. ಓದಿನಲ್ಲಿ ಹಿಂದೆ ಬಿದ್ದಿದ್ದ ನನ್ನನ್ನು ಶಿಕ್ಷಕರೊಬ್ಬರು ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಚಿತ್ರಕ್ಕೆ ಪ್ರಥಮ ಬಹುಮಾನ ಬಂತು. ಮಾರನೇ ದಿನ ಬೆಳಗ್ಗೆ ಪ್ರೇಯರ್‌ನಲ್ಲಿ ನನ್ನ ಹೆಸರನ್ನು ಕೂಗಿ, ಎಲ್ಲಾ ವಿದ್ಯಾರ್ಥಿಗಳ ಮುಂದೆ ಬಹುಮಾನವಾಗಿ ಬಂದಿದ್ದ ಪ್ರಶಸ್ತಿ ಪತ್ರ ಮತ್ತು ‘ಪ್ರತಿಭಾ ಕ್ವಿಜ್’ ಎಂಬ ಪುಸ್ತಕವನ್ನು ಕೊಟ್ಟರು. ಅಂದಿನಿಂದ ಎಲ್ಲರೂ ನನ್ನನ್ನು ಚಿತ್ರ ಬರೆಯುವ ಹುಡುಗನೆಂದು ಗುರುತಿಸತೊಡಗಿದರು.

ನಮಗೆ ಸಮಾಜ ಪಾಠ ಮಾಡಲು ದಪ್ಪ ದೇಹದ ಶಿಕ್ಷಕರೊಬ್ಬರು ಬರುತ್ತಿದ್ದರು. ಅವರ ಕಾಲು ಪೋಲಿಯೋಗೆ ತುತ್ತಾಗಿತ್ತು. ಅವರು ತರಗತಿ ಕೊಠಡಿಗೆ ಬುರುವುದಕ್ಕೂ ಮುಂಚಿತವಾಗಿಯೇ ಆಫೀಸ್ ರೂಮಿನಲ್ಲೆ ಕುಳಿತುಕೊಂಡು ಭೂಗೋಳದ ನಕ್ಷೆಯನ್ನು ಬೋರ್ಡ್ ಮೇಲೆ ಬರೆಯಲು ಹೇಳಿ ಕಳುಹಿಸುತ್ತಿದ್ದರು. ನಾನು ಅವರು ಬರುವುದರೊಳಗೆ ಬೋರ್ಡ್ ಮೇಲೆ ನಕ್ಷೆ ಬಿಡಿಸಿರುತ್ತಿದ್ದೆ. ಅವರು ಬಂದು ಅದನ್ನೊಮ್ಮೆ ದಿಟ್ಟಿಸಿ ನೋಡಿ ನನ್ನನೂ ನೋಡಿ, ಸ್ಥಳಗಳನ್ನು ಗುರುತಿಸಿ ಕುರ್ಚಿ ಮೇಲೆ ಕುಳಿತು ಪಾಠ ಮಾಡಲು ಮುಂದಾಗುತ್ತಿದ್ದರು.

ಎನ್‌ಎಮ್ ಎಂಬ ಸಂಗೀತ ಶಿಕ್ಷಕರಿದ್ದರು. ಅವರಿಗೆ ಗಲಾಟೆ ಎಂದರೆ ಆಗುತ್ತಿರಲಿಲ್ಲ. ಸದಾ ಬಿಪಿ ರೈಜ್ ಮಾಡಿಕೊಂಡೇ ಇರುತ್ತಿದ್ದರು. ಗಲಾಟೆಯಾಗುತ್ತಿದ್ದ ತರಗತಿಗೆ ನುಗ್ಗಿ, ಗಲಾಟೆ ಮಾಡುತ್ತಿರುವವರು ಯಾರು ಸುಮ್ಮನಿರುವರು ಯಾರು ಇದಾವುದನ್ನೂ ವಿಚಾರಿಸದೆ ಕೈಗೆ ಸಿಕ್ಕಿದವರನ್ನು ಕೆಚ್ಚಿ ದೊಂಬಿ ಎಬ್ಬಿಸಿ ಹೋಗುತ್ತಿದ್ದರು. ನಾನು ಅವರನ್ನು ಕಂಡರೆ ಬೆಚ್ಚಿ ಬೀಳುತ್ತಿದ್ದೆ. ಅವರು ವಾರಕ್ಕೊಂದು ದಿನ ಹಾರ್ಮೋನಿಯಂನೊಡನೆ ಬಂದು, ಹಲವು ತರಗತಿಗಳನ್ನು ಕಂಬೈಂಡ್ ಮಾಡಿಕೊಂಡು ಹಾಡು ಹೇಳಿಕೊಡುತ್ತಿದ್ದರು. ಬಹುತೇಕ ಅವರ ಜನಪ್ರಿಯ ಹಾಡಾದ ‘ಆನೆ ಬಂದಿತಮ್ಮ, ಮರಿಯಾನೆ ಬಂದಿತಮ್ಮ’ ಎಂಬುದನ್ನ ಆರೋಹಣ ಅವರೋಹಣ ಮಾಡಿಕೊಂಡು ಹೇಳಿ ಕೊಡುತ್ತಿದ್ದರು.

ಹಿಂದಿನ ಬೆಂಚಿನಲ್ಲಿ ಸತೀಶ ಎಂಬ ತೀಟಲೆ ಹುಡುಗನಿದ್ದ. ಅವನು ಗುಂಪು ಕಟ್ಟಿಕೊಂಡು ‘ಮರಿ’ ಜಾಗದಲ್ಲಿ ‘ಮುದಿ’ ಸೇರಿಸಿ ರಾಗವಾಗಿ ಹೇಳುತ್ತಿದ್ದನು. ಈ ಅಪಬ್ರಂಶವನ್ನು ಕೇಳಿದ್ದೆ ತಡ, ಧ್ವನಿ ಬಂದ ಕಡೆಗೆ ನುಗ್ಗಿ ಕೈಗೆ ಸಿಕ್ಕಿದವರನ್ನು ರಪರಪನೆ ಚೆಚ್ಚಿ ಬಿಡುತ್ತಿದ್ದರು. ಎಷ್ಟು ಸರ್ತಿ ಹೇಳಿಕೊಟ್ಟರೂ ಕೆಲ ಹುಡುಗರು ಮತ್ತೆ ಮತ್ತೆ ಹಾಗೆ ಹೇಳುತ್ತಿದ್ದರು. ಇದರಿಂದ ಉರಿದು ಬೀಳುತ್ತಿದ್ದ ಮಾಸ್ಟರ್ ಸಿಟ್ಟಿನಿಂದಲೇ ಹಾರ್ಮೋನಿಯಂ ಎತ್ತಿಕೊಂಡು ಹೊರ ಹೋಗಿಬಿಡುತ್ತಿದ್ದರು.

ಸದಾ ರೇಡಿಯೋ ಹಾಕಿಕೊಂಡು ಕ್ರಿಕೆಟ್ ಕಾಮೆಂಟ್ರಿ ಕೇಳುತ್ತಿದ್ದ ಪಿಟಿ ಮೇಷ್ಟ್ರೊಬ್ಬರಿದ್ದರು. ಅದೇ ಟೈಮಿಗೆ ಅವಿವಾಹಿತ ಶಿಕ್ಷಕಿಯೊಬ್ಬರು ಹೊಸದಾಗಿ ನೇಮಕವಾಗಿ ಬಂದಿದ್ದರು. ಪಿಟಿ ಮೇಷ್ಟ್ರಿಗೂ ಹೊಸಮೇಡಮ್‌ಗೂ ಗುಸು ಗುಸು ಎಂದು ಹುಡುಗರೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಅವರಿಬ್ಬರೂ ಶಾಲೆಯಲ್ಲಿ ಹುಡುಗರ ಮುಂದೆಯೇ ಏನೇನೊ ಮಾಡುತ್ತಿದ್ದರಂತೆ! ಈ ವಿಚಾರವಾಗಿ ಉಳಿದ ಶಿಕ್ಷಕರು ಅವರಿಬ್ಬರನ್ನು ದೂರ ಮಾಡಿದಂತಿತ್ತು.


ನಾವು ತರಗತಿಯಲ್ಲಿರುವಾಗ ಕೆಲವೊಮ್ಮೆ ಇದ್ದಕ್ಕಿದ್ದಂತೆ ಕರೆ ಬರುತ್ತಿತ್ತು. ಹೊರಗೆ ಬಂದು ನೋಡಿದರೆ ನಮ್ಮ ಮಾವ ಕುಂದೂರು ತಿಮ್ಮಯ್ಯ ಪ್ರತ್ಯಕ್ಷರಾಗಿರುತ್ತಿದ್ದರು. ಮಾವ ತನ್ನ ಮಕ್ಕಳಾದ ಭಗತ್‌ಸಿಂಗ್, ಮುರುಳಿಯ ಜೊತೆ ಜೇಪಿ ಮತ್ತು ನನ್ನನ್ನು ಪಕ್ಕದಲ್ಲಿದ್ದ ಶೃಂಗಾರ್ ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಿತ್ತು. ಅಲ್ಲಿ ನಾಲ್ವರನ್ನೂ ಒಂದೇ ಟೇಬಲ್‌ನಲ್ಲಿ ಕುಳ್ಳಿರಿಸಿ, ಇಡ್ಲಿ ದೋಸೆ ಮುಂತಾದ ತಿಂಡಿಯನ್ನ ಕೊಡಿಸುತ್ತಿತ್ತು. ನಾವು ಸಂತೃಪ್ತಿಯಿಂದ ತಿಂದು ಶಾಲೆಗೆ ಹಿಂತಿರುಗುತ್ತಿದ್ದೆವು.