ಮೈಸೂರು ರಂಗಾಯಣದ ಎರಡು ಕಾರ್ಯಕ್ರಮಕ್ಕೆ ನಾವಿಬ್ಬರೂ ಒಟ್ಟಿಗೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಭಾಗೀರಥಿ ಬಾಯಿ ಕದಂ ಆಗ ನಿರ್ದೇಶಕರಾಗಿದ್ದರು. ಎರಡನೇ ಸಾರಿ ನಾವಿಬ್ಬರೂ ಭಾಗಿಯಾದ ಕಾರ್ಯಕ್ರಮ ಮುಗಿದ ರಾತ್ರಿ ನೀವೆಂದಿರಿ. “ಭಟ್ರೆ, ಭಾಗೀರಥಿಗೆ ನಾನು ಹೇಳಿದ್ದೆ. ಅವಳು ಕೇಳ್ತಾ ಇಲ್ಲೆ. ನಾವಿಬ್ಬರೂ ಬೇಕೋ ಬೇಡವೋ ಬ್ರಾಹ್ಮಣರು. ಬ್ರಾಹ್ಮಣ್ಯ ಆಚರಿಸ್ತೀವೋ ಬಿಡ್ತೀವೊ ಬೇರೆ ಪ್ರಶ್ನೆ. ಆದರೆ ಸಾಮಾಜಿಕ ಮುಖಕ್ಕೆ ಇದು ಸರಿ ಅಲ್ಲ. ಹೀಗಾಗಿ ಇನ್ಮುಂದೆ ನನ್ನ ಕರೆದ್ರೆ ಶ್ರೀಪಾದ ಭಟ್ಟರನ್ನು ಕರೀಬಾರ್ದು, ಅವರನ್ನ ಕರೆದ್ರೆ ನನ್ನ ಕರೀಬಾರ್ದು ಅಂತ ಹೇಳಿದ್ದಿ. ಸರಿ ಅಲ್ದಾ?”. ನಿಮ್ಮ ಸಾಮಾಜಿಕ ವಿವೇಕಕ್ಕೆ ತಲೆಬಾಗಿದ್ದೆ.
ಇತ್ತೀಚೆಗೆ ತೀರಿಕೊಂಡ ಹಿರಿಯ ರಂಗಕರ್ಮಿ ಚಿದಂಬರ ಜಂಬೆಯವರಿಗೆ ಡಾ. ಶ್ರೀಪಾದ ಭಟ್ ಬರೆದ ಪತ್ರ
ನಮಸ್ತೆ ಸರ್,
ನೀವು ಹಾಸಿಗೆ ಹಿಡಿದಿದೀರಿ ಅಂತ ಮೊನ್ನೆ ಮೊನ್ನೆ ಗಣಪತಿ ಹಿತ್ಲಕೈ ಹೇಳಿದಾಗ ಒಂದು ತರಹ ಕಸಿವಿಸಿ ಆಗಿತ್ತು. ಆರೋಗ್ಯದ ಬಗ್ಗೆ ತುಂಬ ಕಾಳಜಿ ತಗೊಳ್ಳೋರು ನೀವು. ಆರೋಗ್ಯಪೂರ್ಣವಾಗಿ, ಸುಂದರವಾಗಿ, ಆತ್ಮವಿಶ್ವಾಸದ ಒಂದು ಪುಟ್ಟ ನಗುವನ್ನು ಫ್ರೆಂಚ್ ಗಡ್ಡದನಡುವೆ ತುಳುಕಿಸುತ್ತ ಇರುವ ಚಿತ್ರವೇ ಸದಾಕಣ್ಮುಂದೆ ಇರುವುದು. ನೀವು ಸೋತು ಮಲಗುವುದನ್ನು ಊಹಿಸುವುದು ತುಸು ಕಷ್ಟವೇ. ಕೆಲ ತಿಂಗಳ ಹಿಂದೆ ಶಿವಮೊಗ್ಗ ರಂಗಾಯಣದಲ್ಲಿ ನೀವು ನಿರ್ದೇಶಿಸಿದ ನಮ್ಮೊಳಗೊಬ್ಬ ಗಾಂಧಿ ನಾಟಕ ನೋಡಲು ಹೋಗಿದ್ದಾಗ ಸಿಕ್ಕಿದಿರಿ. ಸುಸ್ತು ಮುಖದಲ್ಲಿಯೂ, ಪ್ರಯೋಗದಲ್ಲಿಯೂ ಕಾಣಿಸಿತ್ತು. ಹೇಗಿದೀರಿ ಅಂತ ಕೇಳಿದೆ. “ಚೆನ್ನಾಗಿದೇನೆ ಅಂದ್ರೆ ಸುಳ್ಳು ಹೇಳಿದ ಹಾಗೆ ಆಗುತ್ತೆ. ಚೆನ್ನಾಗಿಲ್ಲ ಅಂತಲೂ ಪೂರ್ಣ ಹೇಳುವ ಹಾಗಿಲ್ಲ ಮಾರಾಯ್ರೆ” ಅಂತ ನನ್ನ ಅಂಗೈ ಅನ್ನು ಮಿದುವಾಗಿ ಹಿಸುಕಿದಿರಿ. ಈ ಸುಸ್ತು ತಾತ್ಕಾಲಿಕ ಅಂತಲೇ ಆಗ ಅನಿಸಿತ್ತು. ಆದರೆ ಈಗ ಅದು ನಿಮ್ಮ ಚಿರ ವಿಶ್ರಾಂತಿಗೆ ಕಣ್ಸನ್ನೆಯಾಗಿತ್ತು ಅನಿಸ್ತಿದೆ. ಸಂಕಟ ಆಗ್ತಿದೆ.
ಯಾಕೆ ಹೀಗೆ ಸಂಕಟ ಅಂತ ನನ್ನನ್ನೇ ಕೇಳಿಕೊಂಡ್ರೆ ಉತ್ತರ ಅಷ್ಟು ಸ್ಪಷ್ಟ ಕಾಣ್ತಿಲ್ಲ. ನಾನು ನಿಮ್ಮ ದೀರ್ಘಕಾಲದ ಗೆಳೆಯನಲ್ಲ, ನಿಮ್ಮ ಶಿಷ್ಯನಲ್ಲ. ಆದರೂ ಒಂದು ವಿಚಿತ್ರ ಆತ್ಮೀಯತೆ ನಮ್ಮೊಳಗೆ ಬೆಳೆದಿತ್ತು. ನೀವು ಸಿಕ್ಕಷ್ಟೇ ಅವಧಿಯಲ್ಲಿ ನನ್ನೊಳಗೆ ಗಾಢವಾಗಿ ಉಳಿದುಬಿಟ್ಟಿದ್ದಿರಿ ಅಂತ ಕಾಣತ್ತೆ.
ನಿಮ್ಮ ಜೀವಪ್ರೀತಿ, ಮಗುತನ ಕಳಕೊಳ್ಳದ ನಿಮ್ಮ ಪ್ರೌಢತೆ ನನಗೆ ತುಂಬ ಇಷ್ಟವಾದ ಸಂಗತಿಯಾಗಿತ್ತು. ನಾಯಿಗಳ ಬಗೆಗಿನ ನಿಮ್ಮ ಪ್ರೀತಿ ಅನೇಕ ದಂತಕತೆಗಳಿಗೂ ಕಾರಣವಾಗಿದೆ. ನಿಮ್ಮ ಶಿಷ್ಯರನ್ನು ಕೇಳಿದರೆ ಅದಕ್ಕೆ ಸಂಬಂಧಿಸಿ ಒಬ್ಬೊಬ್ಬರೊಂದೊಂದು ಕತೆ ಹೇಳ್ತಾರೆ. ಆದರೆ ನಿಮ್ಮ ನಾಯಿ ಹಕ್ಲಿನ ಮನೆಯಲ್ಲಿ ಮಂಗಗಳ ಸಂತೆಯೂ ಸೇರುತ್ತಿತ್ತು ಅಂತ ಬಹಳ ಜನರಿಗೆ ತಿಳಿದಿಲ್ಲ.
ಹೆಗ್ಗೋಡಿನಲ್ಲಿ ಒಮ್ಮೆ ನಿಮ್ಮ ಮನೆಗೆ ಅಕಸ್ಮಾತ್ ಬಂದಿದ್ದೆ. ನೀವು ಮತ್ತು ನಿಮ್ಮ ಪತ್ನಿ ಹಿಂದಿನ ಜಗಲಿಯ ಮೇಲೆ ಕುಳಿತು ಎರಡು ಬಾಳೆಹಣ್ಣಿನ ಗೊನೆಗಳನ್ನು ಪಕ್ಕದಲ್ಲಿಟ್ಟುಕೊಂಡು, ಅದನ್ನು ಹರಿದು ಹರಿದು ಮಂಗಗಳಿಗೆ ತಿನಿಸುತ್ತಿದ್ದುದನ್ನು ನಾನೆಂದಿಗೂ ಮರೆಯಲಾರೆ. ನಾನಲ್ಲಿಗೆ ಬಂದಾಗ ನೀವಿಬ್ಬರೂ ಕುಟುಂಬದ ಆತ್ಮೀಯರ ಜತೆಗೆ ಹರಟುತ್ತಿದ್ದಿರೇನೋ ಅನಿಸುವಂತೆ ಹಿಂಡುಗಟ್ಟಲೆ ಮಂಗಗಳನ್ನು ಮಾತನಾಡಿಸುತ್ತಿದ್ದಿರಿ. ದೊಡ್ಡ ಮಂಗ ಬಾಳೆಹಣ್ಣುಗಳನ್ನು ಹೆಚ್ಚು ಬಾಚುತ್ತಿದ್ದುದನ್ನು ನೋಡಿ “ಏಯ್ ನೀನೊಬ್ಬನೇ ತಿಂದ್ರೆ ಸಾಕೇನ. ಆ ಪಾಪು ಏನು ಮಾಡಿತ್ತು. ಅದಕೂ ತಿನ್ನಬೇಕು ಅನಿಸ್ತಿಲ್ಯನ” ಅಂತ ಅದನ್ನು ತರಾಟೆಗೆ ತೆಗೆದುಕೊಳ್ಳುತ್ತ ಹವ್ಯಕಭಾಷೆಯಲ್ಲಿ ಹುಸಿಮುನಿಸಿನಿಂದ ಗದರುತ್ತಿದ್ದರೆ ಅವೆಲ್ಲವೂ ಹವ್ಯಕಮಂಗಗಳೇನೋ ಅನಿಸುತ್ತಿತ್ತು ಹೊರಗಿನವರಿಗೆ. ಅಂಗಡಿಯಿಂದ ಬಾಳೆಕೊನೆಗಳನ್ನು ಕಾಡುಮಂಗಗಳಿಗೆ ತಿನ್ನಲಿಕ್ಕೆಂದೇ ಖರೀದಿ ಮಾಡುವ ನಿಮ್ಮನ್ನು ಕಂಡು ಅಚ್ಚರಿಪಟ್ಟಿದ್ದೆ.
ಬೆಂಗಳೂರಿನಲ್ಲಿ ಎನ್. ಎಸ್. ಡಿ. ಚಾಪ್ಟರ್ನ ನಿರ್ದೇಶಕರಾಗಿದ್ದ ನೀವು ಶಿಕ್ಷಣದಲ್ಲಿ ರಂಗಭೂಮಿ ಕುರಿತಾಗಿ ಸಾಕಷ್ಟು ಚಟುವಟಿಕೆ ನಡೆಸಿದಿರಿ. ಅಲ್ಲಿಯ ಟ್ರೇನಿಂಗ್ ಕ್ಯಾಂಪಿಗೆ ಬಂದಿದ್ದೆ. ತರಬೇತಿ ಚೆನ್ನಾಗಿಯೇ ಇತ್ತು ಆದರೆ ತರಬೇತಿಗೆ ಬಂದ ನಟರ ಆರೋಗ್ಯದ ಬಗ್ಗೆ ನೀವು ವಹಿಸುತ್ತಿದ್ದ ಕಾಳಜಿ, ಪ್ರೀತಿ ಅದಕ್ಕಿಂತಲೂ ಚೆನ್ನಾಗಿತ್ತು. “ಬರೇ ಚಾ, ಕಾಫಿ ಕುಡಿದ್ರೆ ಎಸಿಡಿಟಿ ಆಗ್ತು. ಅದಕ್ಕೇ ಎಲ್ಲರಿಗೂ ರಾಗಿ ಅಂಬಲೀನೂ ಕೊಡಿಸ್ತಿದ್ದೆ. ಕಂಪಲ್ಸರಿ ಮಾಡಿದ್ದೆ. ಇಲ್ದಿದ್ರೆ ಕೆಲವ್ರು ಕುಡೀತ್ವೇ ಇಲ್ಲೆ. ನಖರಾ ಮಾಡ್ತೊ” ಅಂತ ನೀವು ಹೇಳಿದಾಗ ನಾವೆಲ್ಲ ತುಂಬ ನಕ್ಕಿದ್ವಿ. ಸ್ಟೋನ್ ಸೂಪ್ ಎಂಬ ನಾಟಕ ಸಿದ್ಧಪಡಿಸಿ ನೀವು ರಾಜ್ಯದ ತಿರುಗಾಟಕ್ಕೆ ನಡೆದಿರಿ. ಶೇಷಗಿರಿಗೆ ಆಹ್ವಾನಿಸಿದೆ. ಬಂದಿರಿ. ರಾತ್ರಿ ಉಳಿಯಲು ನಾನು ಹೊರಗಡೆ ಹೋಟೆಲ್ ವ್ಯವಸ್ಥೆ ಮಾಡಿದ್ದೆ. ನೀವು ಸುತಾರಾಂ ಒಪ್ಪದೇ ನಟರೊಂದಿಗೆ ರಂಗಮಂದಿರದಲ್ಲೇ ಉಳಿದಿರಿ. ಉದ್ದನೆಯ ಖುರ್ಚಿಯಲ್ಲೇ ಮಲಗಿದಿರಿ. ನಿದ್ದೆ ಬರುವವರೆಗೂ ಆ ಹಳ್ಳಿ, ಅಲ್ಲಿಯ ರಂಗಚಟುವಟಿಕೆಗಳ ವಿವರ ಕೇಳಿ ಖುಷಿಪಟ್ಟಿರಿ. ನಿಮ್ಮೊಡನೆ ಆತ್ಮೀಯವಾಗಿ ತಾಸುಗಟ್ಟಲೆ ಸುದ್ದಿ ಹೇಳಿದ್ದು ಅದೇ ಮೊದಲು. ಅದೇನೋ ಬಾಂಧವ್ಯ ಬೆಳೆದಂತೆನಿಸಿತ್ತು.
ಮೈಸೂರು ರಂಗಾಯಣದಲ್ಲಿ ನೀವು ತ್ರೀಸಿಸ್ಟರ್ ನಾಟಕ ಮಾಡಿಸುತ್ತಿದ್ದಿರಿ. ಅದೇ ಸಮಯಕ್ಕೆ ಅಲ್ಲಿಯ ಕಿರು ರೆಪರ್ಟರಿಗೆಂದು ನಾನು ‘ಯುದ್ಧಬಂತು ಮನೆಯವರೆಗೆʼ ನಾಟಕ ಮಾಡಿಸುತ್ತಿದ್ದೆ. ಗೆಸ್ಟ್ ಹೌಸಿನ ಕೆಳಗಿನ ಮತ್ತು ಮೇಲಿನ ರೂಮುಗಳಲ್ಲಿ ನಮ್ಮ ವಾಸ. ಸುಮಾರು ಒಂದು ತಿಂಗಳ ಸಾಂಗತ್ಯವದು. ನನ್ನ ಜತೆ ಸಹಾಯಕ ನಿರ್ದೇಶಕಿಯಾಗಿ ಶ್ವೇತಾ ಹಾಸನ ಇದ್ದರು. ನಿಮ್ಮದು ಶಿಸ್ತಿನ ಜೀವನ. ಬೆಳಿಗ್ಗೆ ೬ ಕ್ಕೆಲ್ಲ ನೀವು ಆ ರೋಡಿನ ನಾಯಿಗಳನೆಲ್ಲ ಮಾತನಾಡಿಸಿ ಅವುಗಳಿಗೆ ಅಂತಲೇ ತಂದಿಟ್ಟಿದ್ದ ಬಿಸ್ಕಿಟ್ ವಿತರಿಸಿ, ಆಮೇಲೆ ಉದ್ದನೆಯ ಲೋಟದಲ್ಲಿ ನೀವೇ ತಯಾರಿಸಿದ ಕಾಫಿ ಸಿದ್ಧಪಡಿಸಿ (ಮನೆಯಿಂದ ಕಾಫಿ ಮಾಡುವ ಫಿಲ್ಟರ್ ನಿಮ್ಮ ಜತೆಗೇ ಬರುತ್ತಿತ್ತು) ಮಾಳಿಗೆಯ ಮೇಲೆ ಮಲಗಿದ್ದ ನಮಗೆ ಕೇಳಿಸುವಂತೆ (ಅಂದರೆ ಬಿಲ್ಡಿಂಗ್ನಲ್ಲಿರುವ ಎಲ್ಲರಿಗೂ ಕೇಳಿಸುವಂತೆ) ಶ್ರೀಪಾದಾ, ಶ್ವೇತಾ… ಕಾಫಿ ಆರೋಗ್ತು. ಬನ್ರೋ ಅಂತ ಕರೆಯೋದು. ರಾತ್ರಿ ತುಂಬ ತಡವಾಗಿ ಅದು ಇದು ಕುಡಿದು, ತಿಂದು ಸ್ನೇಹಿತರ ಜತೆಗೆಲ್ಲ ಯದ್ವಾ ತದ್ವಾ ಮಾತನಾಡಿ ನಾವು ರೂಮಿಗೆ ಬಂದು ಮಲಗುತ್ತಿದ್ದುದು ಒಂದು ಗಂಟೆಯಮೇಲೆಯೇ. ನನಗೆ ನಿದ್ದೆ ಹತ್ತಲು ಇನ್ನೂ ಒಂದು ಗಂಟೆ ಲೇಟ್. ಅಂತೂ ಬೆಳಗಿನ ಮೂರಕ್ಕೋ ನಾಲ್ಕಕ್ಕೋ ನಿದ್ದೆ ಮಾಡುತ್ತಿದ್ದ ನನಗೆ ಬೆಳಗಿನ ೬ ಗಂಟೆ ಎಂದರೆ ಮಧ್ಯರಾತ್ರಿಯೇ!.. ಆದರೇನು ಮಾಡುವುದು. ನಿಮ್ಮ ಕರೆಗೆ ಓ ಗೊಡದಿರುವ ಯಾವ ಸಾಧ್ಯತೆಯೂ ಇರಲಿಲ್ಲ. ಕಣ್ಣೊರೆಸಿಕೊಂಡು ಕಾಫಿ ಕುಡಿಯಲು ಕೆಳಗೆ ಬರುತ್ತಿದ್ದೆ. ಶ್ವೇತಾರಿಗೆ ಆಗಾಗ ಹೇಳುತ್ತಿದ್ದೆ. “ಅವರು ನಿನಗಾದರೆ ಗುರುಗಳು. ನನಗೇನು ಕರ್ಮ ಮಾರಾಯ್ತಿ. ನಾನು ಹೇಳಿಯೇ ಬಿಡ್ತೇನೆ ಇನ್ನು ಕರೆಯಬೇಡಿ ಬೆಳಿಗ್ಗೆ ಅಂತ” ಹೇಳ್ತಿದ್ದುದೇನೋ ಹೌದು. ಆದರೆ ನನಗೆ ಬೆಳಿಗ್ಗೆ ಕಾಫಿ ಕುಡಿದರೆ ಆಗಲ್ಲ ಅಂತ ತಪ್ಪಿಸಿಕೊಂಡವಳು ಶ್ವೇತಾ! ಯಾವತ್ತೂ ಕಾಫಿ ಕುಡಿಯದಿದ್ದ ನಾನು ನೀವು ಕರೆಯುತ್ತಿದ್ದುದರಿಂದ ಆ ಒಂದು ತಿಂಗಳು ದಿನವೂ ನಿಮ್ಮೊಂದಿಗೆ ಕಾಫಿ ಕುಡಿದಿದ್ದೇನೆ; ಜತೆಯಲ್ಲಿ ಆಗಾಗ ಹುರಿದವಲಕ್ಕಿಯನ್ನೂ. ಹಂಚಿ ತಿನ್ನುವದರಲ್ಲಿ ಎಷ್ಟು ಪ್ರೀತಿ ಇತ್ತು ನಿಮಗೆ! ನಿಮ್ಮ ಶಿಷ್ಯರಾದ ರಂಗಾಯಣದ ಕೆಲ ಕಲಾವಿದರು ಅವರ ಮನೆಗಳಿಂದ ನಿಮಗೆಂದು ತಿಂಡಿ ತಂದುಕೊಟ್ಟರೆ ನಮಗೆ ಕೊಡದೇ ಎಂದೂ ತಿಂದವರಲ್ಲ ನೀವು.
ಆಗ ಸಿನೆಮಾ ನಿರ್ದೇಶಿಸುವ ಬಹುದೊಡ್ಡ ಆಸೆ ಇತ್ತು ನಿಮಗೆ. ಬೊಳುವಾರ ಮಹಮದ್ ಅವರ ಕತೆಗಳನ್ನು ಹೊಲಿದು ‘ಗಾಂಧಿ ಮಾಸ್ತರ್ʼ ಅಂತ ಸಿನೆಮಾ ಮಾಡುವ ಆಸೆ. ಆ ಆಸೆ ಹಲವು ಕಾಲ ಹಿಂದಿನದು. ಬೊಳುವಾರರ ‘ನಾ ಮಲಾಲಾ ಅಲ್ಲʼ ನಾಟಕ ನಿರ್ದೇಶಿಸಲು ನೀವು ಆರಂಭಿಸಿದಾಗ “ನನಗೆ ಫೋನ್ ಮಾಡಿ ಮಗಳು ಶೀತಲಳನ್ನು ಅಭಿನಯ ಮಾಡಲು ಕಳಿಸಿ, ನನಗೆ ಅವಳ ಬರವಣಿಗೆಯ ಸಹಾಯವೂ ಬೇಕಿದೆ” ಎಂದಿರಿ. ನಿಮ್ಮ ಜತೆ ಕೆಲಸ ಮಾಡುವ ಉತ್ಸಾಹದಿಂದ ಶೀತಲಳೂ ಒಂದು ತಿಂಗಳು ತುಮರಿ, ಮುಂತಾದಕಡೆ ನಿಮ್ಮೊಂದಿಗೆ ಬಂದಳು. ಆಗಲೂ ನೀವು ಆ ನಾಟಕದೊಂದಿಗೆ ಬೊಳುವಾರರ ಕೆಲವು ಕತೆಗಳನ್ನು ಸೇರಿಸಿ ರೂಪಕವಾಗಿಸಲು ಯತ್ನಿಸಿದ್ದಿರಿ. ನಾಟಕ ಚೆನ್ನಾಗಿ ಮೂಡಲಿಲ್ಲ. ಆದರೆ ಹಲವು ಕತೆಗಳ ಪಾಕವನ್ನು ಸಿದ್ಧಪಡಿಸಲು ಆ ಸಂದರ್ಭ ನೆರವಾಯಿತೆಂದು ನಿಮಗೆ ಸಂತಸವಾಗಿತ್ತು. ಮೈಸೂರಿನಲ್ಲಿ ನಾವು ಭೇಟಿಯಾಗುವ ಹೊತ್ತಿಗೆ ಸಿನೆಮಾದ ಸ್ಚ್ರಿಪ್ಟ್ ಇರುವ ಪುಸ್ತಕ ೪೦೦ ಪುಟ ದಾಟಿತ್ತು. ಬೆಳಗಿನ ಕಾಫಿ ಕುಡಿದಮೇಲೆ ನಿಮ್ಮೊಂದಿಗೆ ನಾಟಕದ ಬಗ್ಗೆ ಚರ್ಚಿಸುವ ಉತ್ಸಾಹ ನನಗೆ. ಆದರೆ ನೀವು ಪೂರ್ಣವಾಗಿ ಸಿನೆಮಾದಲ್ಲಿ ಮುಳುಗಿದ್ದಿರಿ. ಸ್ಚ್ರಿಪ್ಟ್ ಓದಲು ನನ್ನನ್ನು ಒತ್ತಾಯಿಸುತ್ತಿದ್ದಿರಿ. ಸಿನೆಮಾದ ಯಾವ ವ್ಯಾಕರಣದ ಪರಿಚಯವೂ ನನಗಿಲ್ಲವಾಗಿ ಇಬ್ಬರೂ ತುಸು ನಿರಾಶೆಯಿಂದಲೇ ಬೇರ್ಪಡುತ್ತಿದ್ದೆವು. ನೀನಾಸಂನಲ್ಲಿ ಓದಿದ, ನಂತರ ಸ್ಟಾರ್ ಆದ ಈಗಿನ ವಿವಾದಿತ ನಟ ದರ್ಶನ್ ಆ ಸಿನೆಮಾ ಮಾಡ್ತಾನೆ ಅಂತ ನಿಮಗೆ ಬಲವಾದ ನಂಬಿಕೆ ಇತ್ತು. ಮುಂದೇನಾಯ್ತು ತಿಳಿಯಲಿಲ್ಲ; ಸಿನೆಮಾ ಆಗಲೇ ಇಲ್ಲ. ಸುಮಾರು ಹತ್ತು ವರ್ಷದ ನಿಮ್ಮ ಕನಸದು.

ನಮ್ಮ ರಿಹರ್ಸಲ್ ನೋಡಲು ಬರುತ್ತಿದ್ದಿರಿ. ನಿರ್ವಂಚನೆಯಿಂದ ಚರ್ಚಿಸುತ್ತಿದ್ದಿರಿ. ಪ್ರಾಮಾಣಿಕ ಸಲಹೆ ನೀಡುತ್ತಿದ್ದಿರಿ. ಅಪ್ರಾಮಾಣಿಕ ಉಸಿರನ್ನು ನಿಮ್ಮ ಸನಿಹ ನಾನು ಕಾಣಲೇ ಇಲ್ಲ. ತುಸು ಮಾತಾದರೂ ಅದು ಹೊಕ್ಕುಳಾಳದಿಂದಲೇ ಬರಬೇಕೆಂಬ ‘ತಪʼ ಇದ್ದ ಹಾಗೆ ನಿಮ್ಮ ನಡೆ ನುಡಿ. ನನಗೆ ಇನ್ನೂ ನೆನಪಿದೆ. ಯಾರಿಗೋ ಒಬ್ಬರಿಗೆ ಏಕವ್ಯಕ್ತಿ ನಾಟಕ ಮಾಡಿಸಲು ನೀವು ಒತ್ತಾಯಕ್ಕೆ ಕಟ್ಟುಬಿದ್ದು ಒಪ್ಪಿಕೊಂಡುಬಿಟ್ಟಿದ್ದಿರಿ. ಆದರೆ ಅದು ನಿಮ್ಮೊಳಗೆ ತುಂಬ ಕಿರಿಕಿರಿ ಉಂಟು ಮಾಡಿತ್ತು. “ನಾನು ಪಾಪ ಮಾಡ್ತಿದೇನೆ ಭಟ್ರೆ” ಅಂತ ಮೂರ್ನಾಲ್ಕು ಸಲ ಅಲವತ್ತುಕೊಂಡಿದ್ರಿ. ರಂಗಕಾಯಕವದು ನಿಮಗೆ ಪವಿತ್ರಕೆಲಸವಾಗಿತ್ತು. ಅರೆ ಮನಸ್ಸಿನಿಂದ ಅಲ್ಲಿ ಕೆಲಸ ಮಾಡುವುದು ಪಾಪದ ಕೆಲಸ ಅಂತ ನಿಮಗೆ ಪ್ರಾಮಾಣಿಕವಾಗಿ ಅನಿಸಿತ್ತು. ಕ್ಲಾಸಿಕಲ್ ಯೋಗ್ಯತೆ ಇಲ್ಲದ ನಾಟಕವನ್ನು ಕೈಗೆತ್ತಿಕೊಳ್ಳುವಾಗಲೂ ನೀವು ಒದ್ದಾಡುತ್ತಿದ್ದಿರಿ.
ಮೈಸೂರು ರಂಗಾಯಣದ ಎರಡು ಕಾರ್ಯಕ್ರಮಕ್ಕೆ ನಾವಿಬ್ಬರೂ ಒಟ್ಟಿಗೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಭಾಗೀರಥಿ ಬಾಯಿ ಕದಂ ಆಗ ನಿರ್ದೇಶಕರಾ`ಗಿದ್ದರು. ಎರಡನೇ ಸಾರಿ ನಾವಿಬ್ಬರೂ ಭಾಗಿಯಾದ ಕಾರ್ಯಕ್ರಮ ಮುಗಿದ ರಾತ್ರಿ ನೀವೆಂದಿರಿ. “ಭಟ್ರೆ, ಭಾಗೀರಥಿಗೆ ನಾನು ಹೇಳಿದ್ದೆ. ಅವಳು ಕೇಳ್ತಾ ಇಲ್ಲೆ. ನಾವಿಬ್ಬರೂ ಬೇಕೋ ಬೇಡವೋ ಬ್ರಾಹ್ಮಣರು. ಬ್ರಾಹ್ಮಣ್ಯ ಆಚರಿಸ್ತೀವೋ ಬಿಡ್ತೀವೊ ಬೇರೆ ಪ್ರಶ್ನೆ. ಆದರೆ ಸಾಮಾಜಿಕ ಮುಖಕ್ಕೆ ಇದು ಸರಿ ಅಲ್ಲ. ಹೀಗಾಗಿ ಇನ್ಮುಂದೆ ನನ್ನ ಕರೆದ್ರೆ ಶ್ರೀಪಾದ ಭಟ್ಟರನ್ನು ಕರೀಬಾರ್ದು, ಅವರನ್ನ ಕರೆದ್ರೆ ನನ್ನ ಕರೀಬಾರ್ದು ಅಂತ ಹೇಳಿದ್ದಿ. ಸರಿ ಅಲ್ದಾ?”. ನಿಮ್ಮ ಸಾಮಾಜಿಕ ವಿವೇಕಕ್ಕೆ ತಲೆಬಾಗಿದ್ದೆ.
ನೀನಾಸಂ ರಂಗಶಾಲೆಯನ್ನು ನೀವು ನಡೆಸುತ್ತಿದ್ದ ರೀತಿಯನ್ನು ಬೆರಗು ಮತ್ತು ಆರಾಧನೆಯಿಂದ ನೋಡುತ್ತ ಬಂದವನು ನಾನು. ಅಲ್ಲಿ ಕಲಿಯುವ ಭಾಗ್ಯ ಒದಗದಿದ್ದುದಕ್ಕಾಗಿ ಆಗೆಲ್ಲ ಬೇಸರವೂ ಆಗುತ್ತಿತ್ತು. ಅದಾಗಲೇ ಹಾವೇರಿಯಲ್ಲಿ ಶಿಕ್ಷಕನಾಗಿದ್ದ ನಾನು ಅಲ್ಲಿಯ ಯಾವ ನಾಟಕವನ್ನೂ ತಪ್ಪಿಸುತ್ತಿರಲಿಲ್ಲ. ಆಗ ನೋಡಿದ ನಿಮ್ಮ ನಿರ್ದೇಶನದ ನಾಟಕಗಳಾದ ವಿಗಡ ವಿಕ್ರಮ, ಈ ಕೆಳಗಿನವರು, ಕತ್ತಲೆಗೆ ಹತ್ತು ತಲೆ ಮುಂತಾದ ನಾಟಕಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ವಾಸ್ತವವಾದಿ ಮಾದರಿಯ ರಂಗಪ್ರಯೋಗದಲ್ಲಿ ನಿಮಗೆ ಹೋಲಿಸುವ ನಿರ್ದೇಶಕರನ್ನು ನಾನು ಕಂಡಿಲ್ಲ. ಏಕೆಂದರೆ ಅವು ಕೇವಲ ವಾಸ್ತವವಾದಿ ಮಾದರಿಯ ನಾಟಕಗಳಾಗಿರಲಿಲ್ಲ. ಬಹುಶಃ ಪಾಶ್ಚಾತ್ಯ ಮಾದರಿಯ ವಾಸ್ತವವಾದಿ ಶೈಲಿಯಲ್ಲಿ ಎಲ್ಲೋ ಒಂದೆಡೆ ಭಾರತೀಯ ಶೈಲಿಯ ಕ್ಲಾಸಿಕಲ್ ಅನ್ನು ನೀವು ಹದವಾಗಿ ಬೆರೆಸುತ್ತಿರುವದರಿಂದ ಆಗಿರಬೇಕು. ಶಾಸ್ತ್ರೀಯ ಮಾದರಿಯನ್ನು ಆರಾಧಿಸುತ್ತಿದ್ದ ನೀವು ವಾಸ್ತವ ರಂಗಶೈಲಿಯನ್ನು ಪ್ರಯೋಗದಲ್ಲಿ ತರುವುದರಿಂದಾಗಿ ನಿಮ್ಮ ಒಳಗಿನ ಅಭಿಪ್ಸೆ ಮತ್ತು ರಂಗರೂಢಿಗಳೆರಡೂ ವಿಚಿತ್ರವಾಗಿ ಪಾಕಗೊಂಡವುಗಳಾಗಿದ್ದವು ಅಂತ ಈಗ ಅನಿಸುತ್ತದೆ. ಮುಂದೆ ನೀವು ಹಲವಾರು ಪ್ರಯೋಗಗಳನ್ನು ಕೂಡಿಯಾಟ್ಟಂ ಮತ್ತು ಯಕ್ಷಗಾನದ ನಡೆಗಳನ್ನಿಟ್ಟುಕೊಂಡು ಊರ್ವಶಿ, ಉತ್ತರರಾಮ ಚರಿತ, ಶಾಕುಂತಲ ಮೊದಲಾದ ಪ್ರಯೋಗಗಳನ್ನು ಮಾಡಿದರೂ ಅದು ನನಗೆ ಅತೃಪ್ತಿಯನ್ನೇ ಉಂಟು ಮಾಡುತ್ತಿತ್ತು. ಅಲ್ಲೆಲ್ಲಿಯೂ ‘ನೀವುʼ ಕಾಣುತ್ತಿರಲಿಲ್ಲ. ಆಗಾಗ ಚೆಕಾವ್, ತ್ರೀ ಸಿಸ್ಟರ್, ಟೀ ಹೌಸ್ ನಂತಹ ವಾಸ್ತವ ಮಾದರಿಯ ನಾಟಕಗಳನ್ನು ಆಡಿಸುವಾಗ ಅರೆಬರೆಯಾಗಿಯಾದರೂ ಕಾಣಿಸುತ್ತಿದ್ದಿರಿ.
ನಿಮ್ಮ ಆಸಕ್ತಿ ಕ್ಲಾಸಿಕಲ್ ಶೈಲಿಗೆ ವಾಲಿಹೋಗಿತ್ತು. ಆದರೆ ನಿಮ್ಮ ಪರಿಣತಿ ಬೇರೆಯದೇ ಆಗಿತ್ತು ಅನಿಸುತ್ತದೆ. ಅವೆರಡರ ಪಾಕದಲ್ಲಿ ‘ಜಂಬೆ ಶೈಲಿʼ ಅಡಗಿತ್ತೇನೊ. ನಿಮ್ಮ ದೀರ್ಘ ಒಡನಾಡಿಗಳು ನಿಮ್ಮ ರಂಗಶೈಲಿಯ ಕುರಿತು ಚರ್ಚಿಸಿದರೆ ನಮ್ಮಂತಹ ರಂಗ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದರೆ ಕಾರಂತ, ಪ್ರಸನ್ನ ಅವರಂತಹ ಎಷ್ಟೋ ಹಿರಿಯ ರಂಗನಿರ್ದೇಶಕರ ರಂಗಶೈಲಿ, ಕಾರ್ಯ ವೈಖರಿ ಕುರಿತು ಇನ್ನೂ ಒಂದು ಪುಟ್ಟ ಅಧ್ಯಯನವೂ ಪ್ರಕಟವಾಗಿರದಿದ್ದುದನ್ನು ನೋಡಿದರೆ ಈ ಯೋಚನೆಯೇ ಕನ್ನಡದಲ್ಲಿ ಕಷ್ಟವೇನೋ ಅನಿಸುತ್ತದೆ; ಕೆಲವು ದಂತಕತೆಗಳಿಗೆ ಮುಗಿದುಹೋಗುತ್ತದೆ ಇಂತಹ ಚರ್ಚೆಗಳು.
ಉಡುಪಿಯ ರಂಗಭೂಮಿ ತಂಡಕ್ಕೆ ಬೆಂದಕಾಳೂರು ನಾಟಕ ನಿರ್ದೇಶನಕ್ಕೆ ಬಂದಿದ್ದಿರಿ. ಶೋ ಹಿಂದಿನ ದಿನ ನನಗೆ ಫೋನ್ ಮಾಡಿ ‘ಸಾಧ್ಯವಾದರೆ ಬನ್ನಿʼ ಎಂದಿರಿ. ನಾನು ಶಿರಸಿಯಿಂದ ಬಂದಿದ್ದೆ. ಆ ರಾತ್ರಿ “ನಾನು ರಾಮಾಯಣ ದರ್ಶನಂ, ಮಹಾಕಾವ್ಯವನ್ನು ರಂಗಕ್ಕೆ ತರಬೇಕೆಂದು ಆಸೆ ಪಟ್ಟಿದ್ದೇನೆ. ಯಾವ ತಂಡಕ್ಕೆ, ಎಲ್ಲಿ ಅಂತ ಗೊತ್ತಿಲ್ಲ. ಅಕಸ್ಮಾತ್ ನಾಟಕ ಕೈಗೆತ್ತಿಕೊಂಡ್ರೆ ನನಗೆ ಸಹಾಯಕರಾಗಿ ಬರ್ತೀರಾ?” ಎಂದಿರಿ. ನಾನು ರಜೆ ಹಾಕಿಯಾದರೂ ಬರ್ತೇನೆ ಎಂದಿದ್ದೆ. ನಿಮ್ಮ ಜತೆ ಕೆಲಸ ಮಾಡುವ ಉಮೇದು ಬಹಳಿತ್ತು ನನಗೆ. ಆಗಲಿಲ್ಲ. ಆ ದರ್ಶನ ಕೂಡಲೇ ಇಲ್ಲ.
ಇನ್ನು, ಮೇಲ್ಗಡೆ ನಾನೂ ಬಂದು ಸೇರಿದಾಗ ದೇವ ದಾನವರಿಬ್ಬರನ್ನೂ ಸೇರಿಸಿ ದರ್ಶನ ಕಟ್ಟುವ. ಅಲ್ಲಿಯವರೆಗೂ ಗಡಿಬಿಡಿ ಮಾಡಬೇಡಿ.
ಇಂತಿ ನಿಮ್ಮ
ಶ್ರೀಪಾದ

ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ ಎಂಬ ವಿಷಯದಲ್ಲಿ ಡಾಕ್ಟರೇಟ್ ಮಾಡಿರುವ ಶ್ರೀಪಾದ ಭಟ್, ಸಂಗೀತ, ಸಾಹಿತ್ಯ, ಶಿಕ್ಷಣ ಮತ್ತು ಜನಪದ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ದೆಹಲಿಯ ಎನ್ ಎಸ್ ಡಿ ಆಯೋಜಿಸಿದ ರಂಗಭಾರತ ಮಹೋತ್ಸವದಲ್ಲಿ ಅವರು ನಿರ್ದೇಶಿಸಿದ ಕರ್ಣಭಾರ ಮತ್ತು ಚಿತ್ರಾ ನಾಟಕ ಪ್ರದರ್ಶನ ಕಂಡಿವೆ. ‘ಪಾಪು ಬಾಪು’ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ. ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿವೆ.

