ಚೀನಾ ದೇಶದ ಚೆಂಗ್ಡುವಿನಲ್ಲಿ ಕತೆಗಳನ್ನು ಕೇಳಲಿಕ್ಕೂ ಆಗದೆ ಹೇಳಲಿಕ್ಕೂ ಆಗದೆ ಏನು ಮಾಡುವುದು ಎಂದು ತೋಚದೆ ನಿನ್ನೆ ಸುಮ್ಮನೆ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ. ಅಷ್ಟರಲ್ಲಿ  ರಾಮನವಮಿಯ ಶುಭಾಶಯಗಳು, ಇನ್ಯಾವುದೋ ವೀಡಿಯೋಗಳು,  ಚೀನಾ ಹೇಗಿದೆ?  ಚೀನಾ ಸುಂದರಿಯರು ಹೇಗಿರುವರು? ಮೆಸೇಜುಗಳು ವಾಟ್ಸ್ ಅಪ್ ನಲ್ಲಿ ಬರುತ್ತಿದ್ದವು. ಅದ್ಯಾವುದೂ ಬೇಡವೆಂದು ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ಪ್ರಾಚೀನ ಕಾಲದ ಲಿಪಿಯ ಹಾಗೆ ಕಾಣುತ್ತಿದ್ದ ಚೈನೀಸ್ ಅಕ್ಷರಗಳನ್ನು, ಅದರಲ್ಲಿರುವ ಗೆರೆಗಳೋ, ಆಯತಾಕಾರಗಳೋ, ತ್ರಿಜ್ಯವೋ, ಅಥವಾ ನಕ್ಷತ್ರಾಕಾರಗಳೋ, ಇನ್ನೂ ಹೇಗೇಗೋ ಕಾಣುತ್ತಿದ್ದವುಗಳನ್ನು ಸುಮ್ಮನೆ ನೋಡುತ್ತಿದ್ದೆ. ನಾನು ಕೆಲವು ದಿನಗಳ ಹಿಂದೆ ಹಳೆಯ ಶಾಸನಲಿಪಿಯನ್ನು ಬರೆಯಲು ಅಭ್ಯಾಸ ಮಾಡುತ್ತಿದ್ದ ರೀತಿಯಲ್ಲಿ ಒಂದೊಂದೇ ಈ ಹೊಸ ಅಕ್ಷರಗಳನ್ನು ಬರೆದ ಎಲ್ಲಿಂದ, ಹೇಗೆ, ಯಾವ ರೀತಿ ಗೆರೆಗಳನ್ನು ಎಳೆದರೆ ಸುಲಭವಾಗಿ ಬರೆಯಬಹುದೆಂದು ನೋಡುತ್ತಿದ್ದೆ. ಅವರು ಅಕ್ಷರಗಳನ್ನು ಬರೆಯುವಾಗ ಅರ್ಥಗಳು ಹಾಳಾಗದ ಹಾಗೆ ಅದನ್ನು ತುಂಡರಿಸದೆ ಬರೆಯುತ್ತಾರಂತೆ. ಆದರೆ ಅದು ಅಕ್ಷರಗಳೋ ಶಬ್ದಗಳೋ ಎಂದು ನನಗೆ ಗೊತ್ತಾಗುತ್ತಿರಲಿಲ್ಲ.

ನಾನಾದರೂ ಏನು ಮಾಡಲಿ! ಏನಾದರೂ ಮಾತಾಡೋಣವೆಂದರೆ, ಏನೋ ತಪ್ಪು ಮಾಡಿದವರ ಹಾಗೆ, ‘ದಮ್ಮಯ್ಯ ನನ್ನಲ್ಲಿ ಒಂದು ಕೇಳಬೇಡಿ’ ಎನ್ನುವ ಹಾಗೆ ಇಲ್ಲಿನವರು ಮುಖ ಮರೆಸಿಕೊಂಡು ಹೋಗುತ್ತಿದ್ದರು. ಇಂಗ್ಲಿಷಿನ ಮಾತು ಹಾಗಿರಲಿ, ಕೈಸನ್ನೆ ಬಾಯಿ ಸನ್ನೆ ಮಾಡಿದರೂ, ‘ಬೇಕಾದರೆ ಕೇಳಿಸಿಕೋ, ಇಲ್ಲವಾದರೆ ಬಿಡು’, ಎಂಬಂತೆ, ಗಟ್ಟಿಯಾಗಿ ಅವರ ಭಾಷೆಯಲ್ಲಿ ಏನನ್ನೊ ಒದರಿ ಹೋಗುತ್ತಿದ್ದರು. ಒಂದೆರಡು ಸಲ ಹೀಗೆ ಬೈಸಿಕೊಂಡಿದ್ದೆ. ಅವರು ಬೈಯ್ಯುವಾಗ ಏನು ಬೈಯ್ಯುತ್ತಿರಬಹುದೆಂದು ಊಹಿಸಲೂ ಪ್ರಯತ್ನಿಸುತ್ತಿದ್ದೆ. ಏನೂ ಗೊತ್ತಾಗುತ್ತಿರಲಿಲ್ಲ. ಇನ್ನು ಇವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕತೆ ಕೇಳುವುದಾದರೂ ಹೇಗೆ? ಎಂದು ಅಂದುಕೊಳ್ಳುತ್ತಿರುವಷ್ಟರಲ್ಲಿ ನಮ್ಮ ಪೆಜತ್ತಾಯ ಮಾಮಾ ‘ಮಗೂ ಬೇಸರಿಸಬೇಡ, ಅವರಿಗೆ ಇಂಗ್ಲಿಷ್ ಬರದಿದ್ದರೆ ನೀನು ತುಳುವಿನಲ್ಲಿ ಮಾತಾಡು’ ಎಂದು ಮೇಲ್ ಮಾಡಿದ್ದರು. ತುಳುವೋ ಚೈನೀಸೋ, ಅಂತೂ ನಮ್ಮ ನಮ್ಮ ಭಾಷೆಯನ್ನು ನಾವು ಇಲ್ಲಿ ಗಟ್ಟಿಯಾಗಿ ಮಾತಾಡಿಕೊಳ್ಳ ಬೇಕಷ್ಟೆ.  ಹಾಗೆಯೇ ಇಲ್ಲಿ ಎಲ್ಲರಿಗೂ ಸರಾಗವಾಗಿ ಕತೆ ಹೇಳಲು ಬರುತ್ತಿದ್ದರೆ, ನಮ್ಮ ದೇಶವನ್ನು ಹಣ್ಣುಗಾಯಿ ನೀರುಗಾಯಿ ಮಾಡುಬಿಡುತ್ತಿದ್ದರೇನೋ ಅನ್ನಿಸುತ್ತಿತ್ತು.

ಚೆಂಗ್ಡು, ಚೀನಾದ ಪಶ್ಚಿಮ ಭಾಗದಲ್ಲಿರುವ ಸಿಚುವಾನ್ ಪ್ರಾಂತ್ಯದ ರಾಜಧಾನಿಯಾಗಿದೆ. ಇನ್ನೂ ಇಲ್ಲಿ ಬಂದು ಎರಡು ದಿನವಾಗಿರುವುದಷ್ಟೇ.  ಇಷ್ಟ ಬಂದಂತೆ ಬದಲಿಸುತ್ತಿದ್ದ ಹವೆ ನನ್ನ ಮನಸ್ಸಿನ ಹಾಗೆಯೇ ಕಾಣುತ್ತಿತ್ತು. ಕೂದಲುಗಳೆಲ್ಲಾ ಮುಖಕ್ಕೆ ರಾಚುವ ಹಾಗೆ ಬೀಸುತ್ತಿದ್ದ ಥಂಡಿ ಗಾಳಿಯಲ್ಲಿ ಸಂಜೆ ನಡೆದು ಹೋಗುತ್ತಿದ್ದೆ.  ಚೀನೀ ಸುಂದರಿಯರು ಇನ್ನಷ್ಟು ಮೇಕಪ್ ಮಾಡೀಕೊಂಡು ಹೀಲ್ಸ್ ಹಾಕಿಕೊಂಡು, ಟುಕ್ ಟುಕ್ ಎಂದು ನಡೆಯುತ್ತಿದ್ದರು. ಅವರಾಯಿತು ಅವರ ಪಾಡಾಯಿತೆಂಬಂತೆ ವಾಹನಗಳೂ ಜನರೂ ಮೋಡಗಳೂ ಸಂಚರಿಸುತ್ತಿದ್ದವು. ಎಲ್ಲೋ ಅಪರೂಪಕ್ಕೆ ಅಲ್ಪಸ್ವಲ್ಪ ಮಾತಾಡುವವರು, ಸಿಕ್ಕಾಗ ಏನೋ ಚೂರುಪಾರು ಕೇಳಿಕೊಳ್ಳುತ್ತಿದ್ದೆ. ಇವರು ಎರಡು ತಿಂಗಳಲ್ಲಿ ಒಂದು ಫ್ಲೈಓವರನ್ನೆ ಕಟ್ಟಿ ಮುಗಿಸುತ್ತಾರಂತೆ, ಸಿಟಿ ಕ್ಲೀನಾಗಿಸಲು ಮೋಡಬಿತ್ತನೆ ಮಾಡಿ ಮಳೆ ತರಿಸುತ್ತಾರಂತೆ. ಆರು ತಿಂಗಳಾದರೂ ಇನ್ನೂ ಕಟ್ಟಿ ಮುಗಿಸಲಿಲ್ಲವೆಂದು ಯಾವುದೋ ಕಟ್ಟಡದ ಬಗ್ಗೆ  ಬೇಸರದಿಂದ ಆತಂಕದಿಂದ ಮಾತನಾಡುತ್ತಿದ್ದರು. ಅದೇನು ಕೆಲಸ ಮಾಡುತ್ತಾರೋ! ನಮ್ಮ ದೇಶದೊಂದಿಗೆ ಸ್ವಲ್ಪವೂ ಕಂಪೇರ್ ಮಾಡಲು ಹೋಗದೆ ಇವರ ಕಾರ್ಯದಕ್ಷತೆಯನ್ನು ಸುಮ್ಮನೆ ಯೋಚಿಸುತ್ತಿದ್ದೆ. ಇನ್ನು ಸ್ಲಂ ಡಾಗ್, ತ್ರೀ ಈಡಿಯೆಟ್ಸ್ ಸಿನೆಮಾಗಳ ಬಗ್ಗೆ ಮಾತನಾಡುತ್ತಿದ್ದರು. ಸಿಕ್ಕಸಿಕ್ಕಲ್ಲಿ ಅವರ ಜೊತೆ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಅವರಿಗೆ ಭಾರತೀಯರ ಕಣ್ಣುಗಳು ಇಷ್ಟವಂತೆ, ಅವರ ಕಣ್ಣುಗಳೆಂದರೆ ಏನೋ ತಿರಸ್ಕಾರವಂತೆ.

ಇಲ್ಲಿನ ಗೆಳೆಯ ಲಿಂಗ್ಮೀ, ತನ್ನ ಅಜ್ಜದ ಕಾಲದ ಒಂದು ಕತೆಯನ್ನು ಕಷ್ಟಪಟ್ಟು ಹೇಳುತ್ತಿದ್ದ. ಚೀನಾ ಮೂಲತಃ ಕೃಷಿ ಪ್ರಧಾನವಾದ ದೇಶವಾಗಿತ್ತಂತೆ, ಮೊದಲಿನಿಂದಲೂ  ಚೀನೀಯರು ಕಷ್ಟಪಟ್ಟು ದುಡಿಯುತ್ತಿದ್ದರು.  ಹಿಂದಿನ ಕಾಲದಲ್ಲಿ ಮನೆಮಂದಿಯೆಲ್ಲಾ ಸೇರಿ ಗದ್ದೆ ಕೆಲಸವನ್ನು ಮಾಡುತ್ತಿದ್ದರು.   ಮನೆಯವರಿಗೆ ಸಹಾಯವಾಗಲಿ ಎಂದು,  ಸುಗ್ಗಿ ಕಾಲದಲ್ಲಿ ಮಕ್ಕಳಿಗೆ ಶಾಲೆಗೆ ರಜೆಯನ್ನೂ ನೀಡುತ್ತಿದ್ದರಂತೆ. ಮೀನು ಮಾಂಸಗಳೆಲ್ಲಾ ಚೀನೀಯರ ಹೊಸವರ್ಷಕ್ಕೆ ವಿಶೇಷ ಅಡುಗೆಗಳಾಗಿದ್ದವು. ಮೀನಿನ ಕುರಿತಾದ ಒಂದು ಚಂದದ ಕತೆಯೂ ಇದೆ. ಅದನ್ನು “ಮೀನಿನ ತಲೆಯ ಕತೆ” ಎಂದು ಕರೆಯುತ್ತಾರೆ.

ಹಿಂದಿನ ಕಾಲದಲ್ಲಿ ಮನೆಯಲ್ಲಿ ಬಡತನವಿರುತ್ತಿತ್ತು. ಮೀನು ಮಾಂಸಗಳನ್ನು ವಿಶೇಷ ಸಂದರ್ಭಗಳಲ್ಲಿ  ಮಾತ್ರ ಮಾಡುತ್ತಿದ್ದರು. ಅದೊಂದು ಮನೆ. ಅಪ್ಪ ಅಮ್ಮ ಮನೆಮಕ್ಕಳೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದರು.  ಹೊಸವರ್ಷಕ್ಕೆ ಮೀನಿನ ಅಡುಗೆಯೂ ಮಾಡುತ್ತಿದ್ದರು. ಇರುವ ಸ್ವಲ್ಪ ಅಡುಗೆಯಲ್ಲಿ ಮಕ್ಕಳಿಗೆ ನೀಡಿ, ಮೀನಿನ ತಲೆಯ ಭಾಗವನ್ನು ಅಮ್ಮ ಮಾತ್ರ ತಿನ್ನುತ್ತಿದ್ದಳು. ಉಳಿದ ಭಾಗವನ್ನು ಮಿಕ್ಕವರೆಲ್ಲಾ ತಿನ್ನುತ್ತಿದ್ದರು. ಹೀಗೆಯೇ ತುಂಬಾ ವರ್ಷಗಳು ಉರುಳಿದವು. ಮನೆಯಲ್ಲಿ ಸ್ವಲ್ಪ ಅನುಕೂಲವೂ ಆಯಿತು. ಸಾಕಷ್ಟು ಮೀನು ತಂದು ಒಳ್ಳೆ ಅಡುಗೆಗಳೂ ಆಗುತ್ತಿದ್ದವು. ಹೀಗೆ ವರ್ಷಗಳು ಕಳೆದರೂ ಪ್ರತೀ ಬಾರಿಯೂ ಅಮ್ಮ ಮೀನಿನ ತಲೆಯನ್ನೇ ತಿನ್ನುತ್ತಿದ್ದಳು. ಮಕ್ಕಳೆಲ್ಲರೂ ಅಮ್ಮನಿಗೆ ಮೀನಿನ ತಲೆಯ ಭಾಗವೇ ಇಷ್ಟವೆಂದು ಅದನ್ನೇ ಉಳಿಸಿ ಉಳಿದದ್ದೆಲ್ಲಾ ತಾವು ತಿನ್ನುತ್ತಿದ್ದರಂತೆ. ಒಂದು ದಿನ ತಾಯಿ ಸಾಯುವ ಸಮಯದಲ್ಲಿ ‘ಮಕ್ಕಳೇ ನೀವೇ ಎಲ್ಲವನ್ನು ತಿನ್ನಲಿ ಎಂದು ನಾನು ತಲೆಯ ಭಾಗವನ್ನು ಮಾತ್ರ ತಿನ್ನುತ್ತಿದ್ದೆ’ ಎಂದು ನಿಜ ವಿಷಯ ತಿಳಿಸಿದಳಂತೆ.  ಈ ಕತೆಯನ್ನು  ಸಣ್ಣವನಿರುವಾಗ ಅವರ ಟೆಕ್ಸ್ಟ್ ಬುಕ್ ನಲ್ಲಿ  ಓದಿದ್ದಾಗಿಯೂ, ಅದು ತನ್ನನ್ನು ತುಂಬಾ ಕಾಡುತ್ತಿರುವುದಾಗಿಯೂ ಲಿಂಗ್ಮೀ ಹೇಳುತ್ತಿದ್ದನು. ಆದರೆ ಈಗ  ಕೆಲಸದ ಕಾರಣದಿಂದ ಮನೆಯಿಂದ ದೂರವಾಗಿ ವರ್ಷಕ್ಕೊಂದು ಬಾರಿ ಅಪ್ಪ ಅಮ್ಮನನ್ನು ನೋಡಿಕೊಂಡು ಬರುವನಂತೆ.

ದೇವರನ್ನು ನಂಬದೇ ಇದ್ದವರ ನಡುವೆ ಅಲ್ಲಲ್ಲಿ ಕೆಲವರು ಬೌದ್ಧ ಧರ್ಮದ ನಂಬಿಕೆಗಳನ್ನು, ಕಥೆಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದರು. ಇವರ ಧರ್ಮದಲ್ಲಿ ಚೋ ಸನ್ ಎಂಬ ಒಬ್ಬ ಅಡುಗೆಯ ದೇವರು ಇರುವನಂತೆ. ಕುಟುಂಬದ ಆರೋಗ್ಯ ರಕ್ಷಣೆಯೇ ಇವನ ಪ್ರಮುಖ ಕಾರ್ಯ. ಚೈನೀಸ್ ಹೊಸ ವರ್ಷದ ಕೆಲವು ದಿನಗಳ ಮೊದಲು, ಚೋ ಸನ್ ಹಾಗೂ ಇತರ ಕೆಲವು ದೇವತೆಗಳನ್ನು ಇವರ ಅಧಿಪತಿಗಳು  ವಾರ್ಷಿಕ ಸಭೆ ನಡೆಸಲು ಭೂಮಂಡಲಕ್ಕೆ ಕರೆಸುತ್ತಾರಂತೆ. ಆ ವರ್ಷದ ಬೆಳವಣಿಗೆಯ ಬಗ್ಗೆ ಪ್ರತೀ ಕುಟುಂಬದ ಮಾಹಿತಿಯನ್ನು ಚೋ ಸನ್ ನೀಡಬೇಕು. ಈ ದೇವರು ಬರುವ ಮೊದಲು ಚೀನೀಯರು ಅವನಿಗೆ ಸಿಹಿಅನ್ನ, ಹಣ್ಣು, ಕೇಕ್ ಗಳನ್ನು ನೀಡಿ ಅವನನ್ನು ಸಂತೋಷ ಪಡಿಸುವುದು ವಾಡಿಕೆ.  ಆ ಮೂಲಕ ಅವನು ಸಭೆಯಲ್ಲಿ ಮನೆಯ ಬಗ್ಗೆ ಒಳ್ಳೆಯ ಮಾಹಿತಿ ನೀಡುವ ಹಾಗೆ, ಕೆಟ್ಟದಾಗಿ ಹೇಳದಂತೆ ಅವನ ಬಾಯಿ ಮುಚ್ಚಿಸುವರಂತೆ. ಹಾಗೆಯೇ ಅವರ ಪೂರ್ವಜರಿಗೂ ಇದನ್ನೆಲ್ಲಾ ನೀಡಿ ಮನೆಯನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರಂತೆ.

ಕತೆಯೇ ಸಿಗಲಿಲ್ಲವೆಂದು ಇಷ್ಟೆಲ್ಲಾ ಗೊತ್ತಾದ ಮೇಲೆ ಸ್ವಲ್ಪ ಖುಷಿಯಾಗಿತ್ತು.  ಯಾರ ಸುದ್ಧಿಗೂ ಇಲ್ಲದ ಇವರ ಮೇಲೆ ಪ್ರೀತಿಯೂ ಬಂದಿತ್ತು. ಅದೇನೋ ಸಿಕ್ಕಸಿಕ್ಕಿದನ್ನು ತಿನ್ನುತ್ತಾರೆ, ಸ್ವಲ್ಪ ಜಾಗೃತೆ ಎಂದು ಬರುವಾಗ ಎಲ್ಲರೂ ಹೇಳಿ ಕಳುಹಿಸಿದ್ದರು. ಮನುಷ್ಯನಿಗೆ ತಿನ್ನುವುದು ಎಷ್ಟು ಪ್ರಾಮುಖ್ಯ ಎಂಬುದು ಇಲ್ಲಿ ಕೆಜಿಗಟ್ಟಲೆ ಹೊತ್ತುಕೊಂಡು ಬರುವಾಗಲೇ  ಗೊತ್ತಾಗಿತ್ತು. ಗಂಟಲಲ್ಲಿ ಇಳಿದರೆ ಎಲ್ಲವನ್ನೂ ತಿನ್ನಬಹುದಿತ್ತು. ಆದರೆ ಏನು ಮಾಡಿದರೂ ಆಗುತ್ತಿಲ್ಲ.ಇಲ್ಲಿ ಅಪರೂಪವೆಂಬಂತೆ ಸಿಕ್ಕಿದ ಇಂಡಿಯನ್ ರೆಸ್ಟೋರೆಂಟ್ ಕಂಡಾಗ ನ್ಯೂಜಿಲ್ಯಾಂಡಿನ ಗೆಳತಿ ಜೋ ಮತ್ತು ಅವಳ ಗಂಡ ಮೈಕ್ ನನ್ನಕ್ಕಿಂತ ಹೆಚ್ಚು ಸಂಭ್ರಮಿಸಿದ್ದರು. ಸುಮಾರು ವರ್ಷಗಳ ಹಿಂದೆ, ಬರಗಾಲ ಬಂದಾಗ ಸಿಕ್ಕಸಿಕ್ಕ ಪ್ರಾಣಿಗಳನ್ನು ತಿಂದು ಚೀನೀಯರು, ಬದುಕಿದ್ದರಂತೆ. ಅದೇ ಕಾರಣಕ್ಕೆ ಜಗತ್ತಲ್ಲಿ ಎಲ್ಲವನ್ನೂ ತಿನ್ನುವವರು ಎಂಬ  ಹೆಸರು ಅವರಿಗೆ ಬಂದಿದೆ  ಎಂದು ತಾನು ಎಲ್ಲೋ ಓದಿದ ಪುಸ್ತಕದ ಬಗ್ಗೆ ಜೋ ಹೇಳುತ್ತಿದ್ದಳು. ಇಲ್ಲಿಗೆ ಬರುವ ಮೊದಲು, ಗೆಳೆಯರೊಬ್ಬರು, ‘ಅದೇನು ದೇಶವೋ, ಏನು ಜನರೋ, ಬೆಂಗಳೂರು ಎಷ್ಟು ಕಾಮ್ ಆಗಿದೆ’ ಎನ್ನುವಾಗ ನನಗಂತೂ ತಲೆ ತಿರುಗಿ ಹೋಗಿತ್ತು. ಬೆಂಗಳೂರು ಕಾಮ್ ಆಗಿದೆ ಎನ್ನುವಾಗ ಇನ್ನೇನಾಗಬಹುದು!, ಇಲ್ಲಿಗೆ ನನ್ನಕ್ಕಿಂತ ಮೊದಲೇ ಬಂದು ಹೋಗಿದ್ದ ನನ್ನ ಕಸಿನ್ ಒಬ್ಬನ ಬ್ಯಾಗೇಜ್ ಮಿಸ್ಸಾಗಿ ಏರ್ ಪೋರ್ಟ್ ನಲ್ಲಿ ಪರದಾಡಿದ್ದನ್ನು  ಜೀವಮಾನದಲ್ಲಿ ಅವನು ಮರೆಯಲಾರ. ಬರವಣಿಗೆಯ ಬಗ್ಗೆ ಏನೂ ಅರಿಯದ ಅವನು ವಾಪಾಸು ಬಂದ ಮೇಲೆ ಆ ಶಾಕ್ ನಲ್ಲಿ  ತನ್ನ ಅನುಭವಗಳನ್ನು ಸಿಕ್ಕಾಪಟ್ಟೆ ಚೆನ್ನಾಗಿ ಬರೆದು ಏನೋ ಹೊರೆ ಇಳಿಸಿದಂತೆ ಆಯಿತು ಎಂದಿದ್ದನು.

ಇಲ್ಲಿ ಫೇಸ್ ಬುಕ್, ಟ್ವಿಟ್ಟರ್, ಯುಟ್ಯೂಬ್ ಗಳಿಲ್ಲ. ಒಂದು ರೀತಿ ಒಳ್ಳೆಯದೇ ಆಯಿತು. ಅಂತೂ ಎಲ್ಲಿ ಹೋದರೂ ಮೊದಲು ನಿಹಾ (ಹೆಲೋ) ಎಂದು ಹೇಳಲು ಕಲಿತಿದ್ದೇನೆ. ಇನ್ನು ನಿದ್ದೆಯಲ್ಲಿ ಎದ್ದರೂ ಶಿಶಿ (ಥ್ಯಾಂಕ್ಸ್), ಪುಕಶಿ (ವೆಲ್ ಕಮ್)  ಎಂದು ಸರಾಗವಾಗಿ ಹೇಳಬಹುದು. ಈ ಮೂರು ಶಬ್ದಗಳಲ್ಲಿ ಇಲ್ಲಿ ಹೇಗೋ ಜೀವನ ನಡೆಯುತ್ತಿದೆ. ಇನ್ನು ಉಳಿದಂತೆ ಹೊಟ್ಟೆಪಾಡಿನ ಚಿಂತೆಯೇನೂ ಇಲ್ಲ. ಹೇಳಲು ಇನ್ನೂ ತುಂಬಾ ಉಳಿದುಕೊಂಡಿದೆ.