ರಾಬಿಯಾ ಅಲ್ ಬಸ್ರಿ
(714 ಮತ್ತು 718 CE (95 ಮತ್ತು 98 ಹಿಜ್ರಿ)
ನಂಬಿಕೆ ಮತ್ತು ಪ್ರೀತಿ ನಿಮ್ಮನ್ನು ಹೇಗೆ ಮುಕ್ತಗೊಳಿಸಬಹುದು ಎಂಬುದಕ್ಕೆ ರಬಿಯಾ ಬಸ್ರಿ ಒಬ್ಬರು ಅದ್ಭುತ ನಿದರ್ಶನ. ಇಸ್ಲಾಂ ಧರ್ಮದ ಮೊದಲ ಮಹಿಳಾ ಸೂಫಿ. ಸಂತ ರಬಿಯಾ ಅಲ್-ಅದಾವಿಯಾ, ರಬಿಯಾ ಬಸ್ರಿ ಎಂದೂ ಕರೆಯಲ್ಪಡುವ, ಸೂಫಿ ಪಂಥದ ಬೆಳವಣಿಗೆಗೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದರು.

ನನ್ನೊಳಗೆ ಗುಡಿಯಿದೆ
ಗೋಪುರ ಇಗರ್ಜಿ ಮಸೀದಿಯಿದೆ
ಮಂಡಿಯೂರುವೆ ನಾನಲ್ಲಿ

ಈ ಪ್ರಾರ್ಥನೆ
ನಾಮನೇಮಗಳ
ಹಂಗಿರದೇ ಬಯಲಾಗಬೇಕು

ಬೀಗುವ
ಸಾರ್ವಭೌಮನ ಬೆಳಗದ
ಪ್ರೇಮಗಡಿಯೇ ಇಲ್ಲವೇ ಎಲ್ಲಿಯೂ?

ತನ್ನದೇ ಮೈಮರೆವಿಗೆ
ದೀಪ ಚುಂಬಿಸಿ
ಸುಟ್ಟುಕೊಳ್ಳುವ ಪತಂಗ

ರೆಕ್ಕೆಯೇನೋ ಇದೆ
ಪಟಪಟನೆ ಬಡಿಯಲು
ಈಗಿಲ್ಲಿ ಹಾರಾಟಕ್ಕೆ ಮಾತ್ರ ಅರ್ಥವೇ ಇಲ್ಲ

ನನ್ನೊಳಗೆ ಗುಡಿಯಿದೆ
ಗೋಪುರ ಇಗರ್ಜಿ ಮಸೀದಿಯಿದೆ
ಒಂದು ದಿನ ಕರಗುವುದು
ಲೀನವಾಗುವುದು ಅನಂತದಲ್ಲಿ!

***

ನಿದ್ದೆ ಸೇರಿದ ಕಂಗಳು
ಚಿಕ್ಕಿ ಚೆಲ್ಲಿದ ಅಂಗಳು
ಗೂಡು ಸೇರಿದ ಹಕ್ಕಿಗಳು
ಸಮುದ್ರದೊಳಗಣ
ರಾಕ್ಷಸರೆಲ್ಲಾ ಗಪ್ ಚುಪ್

ನಿನಗೆ ಮಾತ್ರ ತಿಳಿದಿದೆ
ಬದಲಾಗದ ದೃಢತೆ
ಆಯತಪ್ಪದ ಸಮತೋಲನ
ನಿತ್ಯ ನಿರಂತರ ಶಾಶ್ವತತೆ

ಸುಲ್ತಾನರ
ಕೋಟೆಗಳಿಗೀಗ ಬಿಗಿ ಭದ್ರತೆ
ಬೀಗ ಜಡಿದ ಬಾಗಿಲ ಮುಂದೆ
ಪಹರೆ; ನಿನ್ನ ಎದೆ ಬಾಗಿಲು ಮಾತ್ರ
ನೆನೆದವರಿಗೆಲ್ಲಾ ಸದಾ ತೆರೆದೇ ಇರುವುದು

ಹೇ ಪ್ರಭು
ಪ್ರೇಮಿಗಳೆಲ್ಲಾ
ಕಡು ಏಕಾಂತದಲ್ಲಿರುವಾಗ
ನನ್ನ ಏಕಾಂತ ಮಾತ್ರ ನಿನ್ನೊಂದಿಗೆ

 

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ ಸಂದಿದೆ).
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..