ರಾತ್ರಿ ಪಾಳಿ

ಸಮೀಕ್ಷೆಗಳ ಪ್ರಕಾರ ರಾತ್ರಿ ಪಾಳಿಗಳು
ಆರೋಗ್ಯವನ್ನು ಮುಕ್ಕಿ
ಆಯಸ್ಸನ್ನು ಕುಕ್ಕಿ
ಖಿನ್ನತೆಯನ್ನು ರಾಚುತ್ತದೆಯಂತೆ
ನನ್ನದು ಹತ್ತು ವರುಷಗಳಿಂದಲೂ
ರಾತ್ರಿ ಪಾಳಿ

ಮುಕ್ಕಿ ಹೋದ ನನ್ನ ಆರೋಗ್ಯವೆಷ್ಟು
ಕುಕ್ಕಿಸಿಕೊಂಡ ನನ್ನ ಆಯಸ್ಸು ಎಷ್ಟು
ರಾಚಿ ಬಂದ ಖಿನ್ನತೆಯ ಕನವರಿಕೆಗಳ
ಲೆಕ್ಕ ಹಾಕಲು ಕೂತರೆ
ದೊಡ್ಡದೊಂದು ಕೊನೆಯಾಗದ ಆಕಳಿಕೆ

ನೇಣು ಹಾಕಿಕೊಂಡ ಅಪ್ಪನ
ಓಡಿ ಹೋದ ಅಮ್ಮನ
ನಗರದ ದಿಕ್ಕಾಪಾಲಿನ
ಬದುಕಿನ ಅನಾಥತನದ
ಪರಿಚಯ ಸಮೀಕ್ಷೆ ಮಾಡಿದವರಿಗೆ ಹೇಗೆ ಮಾಡಿಸುವುದು?!

ಸಮೀಕ್ಷೆಗಳ ಓದಿದ ಮೇಲೆ
ಖಾತೆಯಲ್ಲಿ ಕುಳಿತಿದ್ದ ರಜೆಗಳನ್ನು ಎಳೆದೆ
ನಿದ್ದೆ ಮಾಡಲು ಪ್ರಯತ್ನಿಸಿ ಸೋತೆ
ಕನಸಿನಲ್ಲಿ ಅಮ್ಮ ಅಪ್ಪನ ಜೊತೆ ಓಡಿಹೋದಳು
ನಾನು ನಿದ್ದೆಗೆಟ್ಟು ಸಮೀಕ್ಷೆಗಳ ಓದುವುದು ಬಿಟ್ಟೆ

ಜಯರಾಮಚಾರಿ ಮೂಲತಃ ಮೈಸೂರಿನವರು. ಬೆಳೆದದ್ದು ಬೆಂಗಳೂರು
ಸಧ್ಯ ನಮ್ಮ ಮೆಟ್ರೊದಲ್ಲಿ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ
“ಕರಿಮುಗಿಲ ಕಾಡಿನಲಿ: ಕಥಾ ಸಂಕಲನ ಇವರ ಪ್ರಕಟಿತ ಪುಸ್ತಕ
ಓದು ಮತ್ತು ಸಿನಿಮಾ ಇವರ ಹವ್ಯಾಸವಾಗಿದ್ದು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ
(ಕಲೆ: ರೂಪಶ್ರೀ ವಿಪಿನ್)