‘ಜಾವಳಿಯ ಪರಿಕಲ್ಪನೆಯು ಅಭಿನಯ ಪ್ರಧಾನವಾಗಿರುವುದಕ್ಕೆ ಇದೊಂದು ನಾಟ್ಯ ಬಂಧ. ಜಾವಳಿಯ ವಸ್ತು “ಶೃಂಗಾರ” ಮಧುರಭಾವ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಜಾವಳಿಗಳು ರಚಿತವಾಗಿವೆ. ಅವುಗಳ ವೈವಿಧ್ಯತೆಯೂ ರಮ್ಯಮನೋಹರವಾಗಿವೆ. ನೃತ್ಯಕ್ಷೇತ್ರದಲ್ಲಿ ಶೃಂಗಾರವೆಂದರೆ ಪರಿಪೂರ್ಣ ಅರ್ಪಣೆಯಲ್ಲದೆ ಮತ್ತೇನೂ ಅಲ್ಲ. ಅಷ್ಟೇ ಅಲ್ಲ. ನಾಯಕ-ನಾಯಕೀ ಭಾವವೇ ಜಾವಳಿಯ ಕೇಂದ್ರ ಬಿಂದು’- ಎನ್ನುವ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಜಾವಳಿಯ ಪರಿಚಯಾತ್ಮಕ ಬರಹವೊಂದನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ.

 

ನೃತ್ಯ ಕಲಾವಿದೆಯಾಗಿರುವ ನನಗೆ ಅಭಿನಯ‌ ಸಹಜವಾಗಿಯೇ ಆಸಕ್ತಿಯ, ಕುತೂಹಲದ ವಿಷಯ. ಅಭಿನಯ ಅಂದರೆ‌ ಬರಿಯ ನಟನೆಯೇ ಖಂಡಿತಾ ಅಲ್ಲಾ. ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಯೋಚನೆ ಮಾಡಿದರೆ ಪ್ರತಿಯೊಂದೂ ಅಭಿನಯ ಪ್ರಧಾನವಾದ ಬಂಧಗಳಿಗೂ ಅದರದ್ದೇ ಆದ ವೈವಿಧ್ಯತೆಗಳಿವೆ. ಹೀಗೆ ನನ್ನ ಕುತೂಹಲಕ್ಕೇ ಅವಕಾಶವಾಗುವಂತೆ ಒಮ್ಮೆ, ಭರತನಾಟ್ಯದ ‘ಜಾವಳಿ’ ಬಗ್ಗೆ ನಾನೂ ಅಧ್ಯಯನ ಮಾಡಬೇಕಿತ್ತು. ಇದನ್ನು ಸಾಧ್ಯ ಮಾಡಿಸಿದವರು ನನ್ನ ನೃತ್ಯ ಗುರುಗಳಾದ ವಿದುಷಿ ಶಾರದಾ ಮಣಿಶೇಖರ್‌ ಅವರು. ಶೃಂಗಾರ ಪ್ರಧಾನವಾಗಿರುವಂತಹ ಈ ಜಾವಳಿಯನ್ನು ನವರಸಾಭಿನಯದ ಮೂಲಕ (ಎಲ್ಲವೂ ಕಷ್ಟ ಸಾಧ್ಯ, ಪ್ರಾಯೋಗಿಕವಾಗಿ ಅಷ್ಟೇ) ಅಭಿವ್ಯಕ್ತಿಸುವ ಪ್ರಯತ್ನವನ್ನು ಮಾಡಿದ್ದೂ ಕೂಡ ಹಾಗೇ ನೆನಪಿದೆ. ಆ‌ ನೆನಪಿನ‌ ನೆಲೆಯಲ್ಲಿ ಜಾವಳಿಯ ಬಗ್ಗೆ ಒಂದಷ್ಟು ವಿಚಾರಗಳು ನನ್ನ ಅರಿವಿನ ಪರಿಧಿಗೆ ನಿಲುಕಿದವು ಎನ್ನಬಹುದು.

ಜಾವಳಿ ಎಂದರೆ- ಭರತನಾಟ್ಯ ಮಾರ್ಗ ಪದ್ಧತಿಯಲ್ಲಿರುವ ಒಂದು ನಾಟ್ಯಬಂಧವೆನಿಸಿಕೊಂಡಿದೆ. ಮಾರ್ಗಪದ್ಧತಿಯೆಂದರೆ ಭರತನಾಟ್ಯ ಕಲಿಯುವ ಒಂದು ಸಿದ್ಧ ಮಾದರಿ ಪಠ್ಯಕ್ರಮ ಎನ್ನಬಹುದು. ‘ಅಲರಿಪು’ ವಿನಿಂದ ತೊಡಗಿ ಜತಿಸ್ವರ, ಶಬ್ಧಂ, ಪದವರ್ಣ, ಪದಂ, ಜಾವಳಿ, ಅಷ್ಟಪದಿ ತೀರ್ಮಾನ – ಇವೇ ಮಾರ್ಗಪದ್ಧತಿಯಲ್ಲಿ ಬರುವ ನೃತ್ತ, ನೃತ್ಯ, ಹಾಗೂ ನಾಟ್ಯಬಂಧಗಳು. ಜಾವಳಿಯ ಪರಿಕಲ್ಪನೆಯು ಅಭಿನಯ ಪ್ರಧಾನವಾಗಿರುವುದಕ್ಕೆ ಇದೊಂದು ನಾಟ್ಯ ಬಂಧ. ಜಾವಳಿಯ ವಸ್ತು “ಶೃಂಗಾರ” ಮಧುರಭಾವ. ನಾನು ಗಮನಿಸಿದಂತೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಜಾವಳಿಗಳು ರಚಿತವಾಗಿವೆ. ಅವುಗಳ ವೈವಿಧ್ಯತೆಯೂ ರಮ್ಯಮನೋಹರವಾಗಿವೆ.

ನೃತ್ಯಕ್ಷೇತ್ರದಲ್ಲಿ ಈ ‘ಜಾವಳಿ’ಯ ಬಗ್ಗೆ ಒಂದು ರೀತಿಯ ಮಡಿವಂತಿಕೆಯೂ ಇದೆ ಎನ್ನಬಹುದು. ‘ಜಾವಳಿ’ ಎಂಬ ಪದ ಹೇಗೆ ಬಂತು ಎಂಬುವುದರ ಬಗ್ಗೆ ವಿದ್ವಾಂಸರೆಲ್ಲ ಸೂಚಿಸಿರುವಂತೆ ಅರಬ್ಬಿಯ ಜಲಾಲಿ ಅಥವಾ ಜೂಲಿ ಪದದ ರೂಪಾಂತರ ಎಂದು ಕೆಲವರು ಹೇಳಿದರೆ, “ಚಾವಡಿ” ಎಂಬ ಪದದಿಂದ ಮಾರ್ಪಾಟು ಹೊಂದಿದೆ ಎಂದು ಇನ್ನು ಕೆಲವರು ಹೇಳುತ್ತಾರೆ.

ಮೈಸೂರು ಮುರಳೀಧರರಾಯರು “ಜಾವಡಿ” ಎಂಬ ಕನ್ನಡ ಪದ ಮೂಲ ಮರಾಠಿಯ “ಜವಲಿ” ಎಂಬ ಶಬ್ದದಿಂದ ಬಂದಿದೆ ಎಂದು ಉಲ್ಲೇಖಿಸುತ್ತಾರೆ. ಹಿಂದೂಸ್ಥಾನಿ ಭಾಷೆಯ ಝಾಂವ್ ನಾ, ಝೂವಲೀ, ಝೂಂವಲೀ ಬಾಜ್ಸ್ ಮುಂತಾದ ಶಬ್ಧ ಜಾವಳೀಯ ಮೂಲವೆಂದು ಡಾ. ರಾ.ಸತ್ಯನಾರಾಯಣ ಇವರು ಅಭಿಪ್ರಾಯ ಪಡುತ್ತಾರೆ. ಹೀಗೆ ಶಬ್ದಮೂಲದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ.

ಕಣ್ಣಿನಲ್ಲಿ ಪ್ರೇಮವನ್ನು, ಪ್ರಣಯಸಂಕೇತವನ್ನು ಸೂಚಿಸುವುದು ಎಂಬ ಅರ್ಥವೂ ಈ ಪದಕ್ಕಿದೆ. ಇನ್ನು ಸಂಸ್ಕೃತದಲ್ಲಿ “ಜ್ಯಾ” ಎಂದರೆ ಮನ್ಮಥನ ಬಿಲ್ಲು ಎಂಬರ್ಥವಿದೆ. ಮುಖ್ಯವಾಗಿ ಹಗ್ಗ ಎಂದಿದ್ದರೂ ಇದು ಮನ್ಮಥನದ ಶೃಂಗಾರ ಭಾವದ ಸೆಲೆ. ಇದನ್ನು ಗಮನಿಸಿದಾಗ ಮುಖ್ಯವಾಗಿ ಪ್ರೇಮವನ್ನು, ಶೃಂಗಾರದ ಅಭಿವ್ಯಕ್ತಿಯನ್ನು ಸೂಚಿಸುವುದಕ್ಕೆ ಜಾವಳಿಯನ್ನು ಬಳಸುತ್ತಿರುವುದನ್ನು ಗಮನಿಸಬಹುದು.

ಶೃಂಗಾರ ಭಾವ ಎಂದ ತಕ್ಷಣ ನಾವೆಲ್ಲ ಬಹಳ ಅಂತರ ಕಾಯ್ದುಕೊಂಡು ಮಡಿವಂತಿಕೆಯಿಂದ ಮಾತನಾಡಲು ಶುರು ಮಾಡುತ್ತೇವೆ. ಆದರೆ ಕಲಾವಲಯದಲ್ಲಿ ‘ಶೃಂಗಾರ’ ಎಂಬ ಪದದ ಅರ್ಥ ವಿಶಾಲವಾದುದು. ಅದೊಂದು ಆತ್ಮಾರ್ಪಣೆಯ ಪರಾಕಾಷ್ಠೆ, ‘ನಾಯಕಾ ನಾಯಕೀ ಭಾವ’ವೇ ‘ಶೃಂಗಾರ’ ದ ಸ್ರೋತ ಎಂದು ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾವಳಿ ರಚನೆಯಲ್ಲಿ ಸ್ತ್ರೀಯೇ ಕೇಂದ್ರಬಿಂದು. ಅಥವಾ ಇದನ್ನು ಹೀಗೆ ಹೇಳಬಹುದು- ಈ ಜಗತ್ತಿನ ಜೀವಿಗಳೆಲ್ಲರಲ್ಲೂ ಸ್ಫೂರ್ತಿಯ ಸೆಲೆಯಾಗಿ “ಸ್ತ್ರೀ”ಯೇ ಕಾಣಿಸಿಕೊಳ್ಳುತ್ತಾಳೆ. ಏಕೆಂದರೆ ಆಳವಾಗಿ, ತರ್ಕವನ್ನು ಮೀರಿಯೂ ಪ್ರೀತಿಸಬಲ್ಲ ಶಕ್ತಿ ಇರುವುದು ಸ್ತ್ರೀಗೆ ಮಾತ್ರ.

ಮುಖ್ಯವಾಗಿ ಶೃಂಗಾರ ಭಾವ ‘ಪ್ರೀತಿ’ ಮೂಲವಾದುದು. ಗೆಳೆಯರ ನಡುವೆ, ಒಡೆಯ ಸೇವಕನ ನಡುವೆ, ಅಪ್ಪ, ಅಮ್ಮ, ಅಣ್ಣ, ತಂಗಿ ಹೀಗೆ ಎಲ್ಲಾ‌ ಸಂಬಂಧಗಳ‌ ಬಾಂಧವ್ಯದ ನಡುವೆ ಪ್ರೀತಿ ಕಾಣಬರುವುದಾದರೂ ಪತಿ-ಪತ್ನಿಯರ ನಡುವಿನ‌ ‘ಪ್ರೀತಿ’ ವಿಶಿಷ್ಟವಾದುದು. ನಾಯಕ, ನಾಯಕಿಯ ಅಗಲಿಕೆಯು ‘ವಿಪ್ರಲಂಭ’ ಶೃಂಗಾರವಾದರೆ, ಇವರಿಬ್ಬರೂ ಕೂಡುವುದು ‘ಸಂಭೋಗ ಶೃಂಗಾರ’. ವಿಪ್ರಲಂಭ ಶೃಂಗಾರದಲ್ಲಿ ನಾಯಕಿಯು ಸಂಶಯ, ಕೋಪ, ಭೀತಿ, ಆತಂಕ, ತಾಪ ಮುಂತಾದ ಹಲವು ಭಾವಗಳನ್ನು ಅನುಭವಿಸಿ ನಾಯಕನನ್ನು ಸೇರುವಲ್ಲಿ ಕಾತರಳಾಗಿರುತ್ತಾಳೆ. ಆದ್ದರಿಂದ ವಿರಹದಲ್ಲಿ ಭಾವ ವೈಶಾಲ್ಯವನ್ನು ಕಾಣಬಹುದು. ಸೃಜನಶೀಲ ವಿಸ್ತರಣೆಗೆ ಇಲ್ಲಿ ಸಾಕಷ್ಟು ಅವಕಾಶವೂ ಇರುತ್ತದೆ. ಕೆಲವರ ಪ್ರಕಾರ ವಿಪ್ರಲಂಭ ಶೃಂಗಾರವಿಲ್ಲದ ‘ಸಂಭೋಗ ಅಭಿವ್ಯಕ್ತಿ’ ಅಷ್ಟೇನು ಪರಿಣಾಮಕಾರಿ ಅಲ್ಲ ಎನ್ನುವುದು. ‘ಸಂಭೋಗ ಶೃಂಗಾರ’ದಲ್ಲಾದರೆ ನಾಯಕ‌-ನಾಯಕಿಯ ಆಸೆ ನೆರವೇರಿ, ಅಂತಿಮ ಗುರಿಯಾದ ಅರ್ಪಣ ಮನೋಭಾವವನ್ನು ಮಾತ್ರ‌ ನಮಗೆ ಗುರುತಿಸುವುದು ಸಾಧ್ಯವಾಗುತ್ತದೆ. ಹಾಗಾಗಿ ಪ್ರಾಯೋಗಿಕ ದೃಷ್ಟಿಯಿಂದ ವಿಪ್ರಲಂಬ ಶೃಂಗಾರದ ಅಭಿವ್ಯಕ್ತಿಯೇ ವಿಶೇಷವಾಗಿ ನಮ್ಮ‌ ನಡುವೆ ಕಾಣಿಸಿಕೊಳ್ಳುತ್ತದೆ.

ಕಲಾವಲಯದಲ್ಲಿ ‘ಶೃಂಗಾರ’ ಎಂಬ ಪದದ ಅರ್ಥ ವಿಶಾಲವಾದುದು. ಅದೊಂದು ಆತ್ಮಾರ್ಪಣೆಯ ಪರಾಕಾಷ್ಠೆ, ‘ನಾಯಕಾ ನಾಯಕೀ ಭಾವ’ವೇ ‘ಶೃಂಗಾರ’ ದ ಸ್ರೋತ ಎಂದು ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾವಳಿ ರಚನೆಯಲ್ಲಿ ಸ್ತ್ರೀಯೇ ಕೇಂದ್ರಬಿಂದು.

ಮರಾಠರ ಕಾಲದಲ್ಲಿ ‘ಜಾವಳಿ’ ರಚನೆಗಳು ನಡೆದವು ಎಂದು ಹೇಳಲಾಗಿದೆ. ಗಿರಿರಾಜ ಸೋಮಕವಿಗಳು ತಮ್ಮನ್ನು ಪೋಷಿಸುವವರನ್ನು ಕುರಿತಾಗಿ ಈ ರಚನೆಗಳನ್ನು ಬರೆದಿದ್ದಾರೆ ಎನ್ನುತ್ತಾರೆ. ಹಾಗೆಯೇ ತಂಜಾವೂರಿನ‌ ನಾಯಕರ ಕಾಲದಲ್ಲಿ ‘ತನ್ನಲ್‌ದರು’, ‘ಮನ್ಮಥದರು’ ಮುಂತಾದವುಗಳಲ್ಲಿ ರಾಜ‌ ಅಥವಾ ತಾನು ಪ್ರೀತಿಸುವ ನಾಯಕನ‌ ಕುರಿತು ನಾಯಿಕೆ ಪಡುವ ಅವಸ್ಥೆಗಳನ್ನು ಈ ಜಾವಳಿಗಳ ಮೂಲಕ‌ ಬರೆದಿರುವುದರಿಂದ ಇದರ ಹುಟ್ಟು ಸಾಧ್ಯವಾಯಿತು ಎನ್ನುತ್ತಾರೆ. ಈ ಪರಿಕಲ್ಪನೆಯು ಸುಮಾರು 19 ನೇ ಶತಮಾನದಲ್ಲಿ ಆಗಿರಬಹುದು ಎಂದೂ ಕೂಡಾ ಅಂದಾಜಿಸಲಾಗಿದೆ. ಅದೇ ಸಂದರ್ಭದಲ್ಲಿ ಅನೇಕ ಮಂದಿ ಹಿಂದೂಸ್ಥಾನಿ ಸಂಗೀತಜ್ಞರು ದಕ್ಷಿಣ ಭಾರತದಲ್ಲಿ ಬಂದು ವಾಸವಾಗಿದ್ದರು ಎಂಬ ಉಲ್ಲೇಖ ಕೂಡಾ ಇದೆ. ಆದ್ದರಿಂದಲೇ ಇರಬೇಕು – ಜಾವಳಿಗಳ ಮೇಲೆ ಹಿಂದೂಸ್ತಾನಿ ಸಂಗೀತದ ರಾಗಗಳ ಪ್ರಭಾವ ಇರುವುದನ್ನು ನಾವು ಗಮನಿಸಬಹುದು. ಅಂದರೆ‌ ಭಾವಪೂರ್ಣತೆಯಿಂದ ಕೂಡಿದ ಸಂಗೀತವು, ನೃತ್ಯಕ್ಕೆ ಗಾಂಭೀರ್ಯ ಭಾವವನ್ನು ಕೊಡುವ ಸಾಧ್ಯತೆ ಹೆಚ್ಚು.

ಜಾವಳಿಗಳ ವಿಷಯದಲ್ಲಿ ಮೈಸೂರು ಅಗ್ರಸ್ಥಾನ ಪಡೆದಿದೆ. ಮೈಸೂರು ಸಂಸ್ಥಾನ ಆಳಿದವರು ಸಂಗೀತಜ್ಞರು, ಕಲಾರಾಧಕರೂ ಆಗಿದ್ದು ನಾಡಿನ, ಹೊರನಾಡಿನ ಕಲಾವಿದರಿಗೆ ಆಶ್ರಯ, ಪ್ರೋತ್ಸಾಹಗಳನ್ನು ನೀಡಿ ಸಾಂಸ್ಕೃತಿಕ ಪರಂಪರೆಯ ವಾಹಕರಾಗಿ ಮೆರೆದರು. ಈಗಲೂ ಮೈಸೂರು ಸಾಂಸ್ಕೃತಿಕ ನಗರಿ‌ ಎಂದೇ ಅಗ್ಗಳಿಕೆ ಪಡೆದಿದೆ ಅಲ್ಲವೇ. ಮುಮ್ಮಡಿ ಕೃಷ್ಣರಾಜ ಒಡೆಯರು, ಚಾಮರಾಜ ಒಡೆಯರು ತಮ್ಮ ಆರಾಧ್ಯದೈವ “ಚಾಮುಂಡಾಂಬಾ” ಅಂಕಿತದಲ್ಲಿ ಶೃಂಗಾರ ವಿರಹದ ಜಾವಳಿಗಳನ್ನು ರಚಿಸಿದ್ದಾರೆ. ಉದಾಹರಣೆಗೆ ‘ಮುನಿಸೇತಕೆ ಬೇಗ ನೀ ಬಾರೇ, ಮಾಡಿ ಮಾಡಿ ಮೂಡನಾದೆ ಆಡಿ ಮಾಡಿ ದುಷ್ಟರೊಡನೆ’ ಎಂಬ ಸಾಲುಗಳು. ತದನಂತರ ಧರ್ಮಪುರಿ ಸುಬ್ಬರಾಯರು, ತಂಜಾವೂರು ಸಹೋದರರಲ್ಲಿ ಒಬ್ಬರಾದ ಚಿನ್ನಯ್ಯ ಹೀಗೇ ಈ ಅವಧಿಯಲ್ಲಿ ಅನೇಕ ಜಾವಳಿಗಳು ಜನಪ್ರಿಯವಾದವು.

ಜಾವಳಿಗಳ‌ ಭಾಷೆಯ ಬಗೆಗೆ ಹೇಳುವುದಾದರೆ ‘ಶಬ್ದಾರ್ಥ ಸಹಿತೌ ಕಾವ್ಯಂ..’ ಎಂಬುದು ಪ್ರಸಿದ್ಧ ಸೂತ್ರ. ಸಂಗೀತಕ್ಕೆ‌ ಸಂಬಂಧಿಸಿದಂತೆ ಶಬ್ದ ಎಂದರೆ ಸಾಹಿತ್ಯ ಮಾತ್ರ ಎಂದು ಅರ್ಥೈಸಬಹುದು. ಆದರೆ‌ ಮನದ ಭಾವಗಳನ್ನು ಅಭಿವ್ಯಕ್ತಿಸುವುದಕ್ಕೆ ಭಾಷೆ- ಮಾತು ಮುಖ್ಯವಲ್ಲ.
ಜಾವಳಿಗಳ ರಾಗಗಳ ಪ್ರಯೋಗಗಳು ಜನರ ಮನಸ್ಸನ್ನು ಬೇಗನೆ ಸೆರೆಹಿಡಿಯುತ್ತವೆ.

‘ಪದಂ’ ಆದ ಮೇಲೆ ಜಾವಳಿಯನ್ನು ನೃತ್ಯ ಪ್ರದರ್ಶನದಲ್ಲಿ ಹೆಚ್ಚಾಗಿ ನರ್ತಿಸುವುದರಿಂದ ಅದರಲ್ಲಿ ನಾಯಕ, ನಾಯಕಿ ಬಾಂಧವ್ಯದಲ್ಲಿ ಒಂದು ರೀತಿಯ ಗಾಂಭೀರ್ಯವಾಗಲೀ ಗೌರವವಾಗಲಿ, ತುಸು ಕಡಿಮೆಯೇ. ‘ಪದಂ’ ಗಳಲ್ಲಿ ಪಾರಮಾರ್ಥಿಕ ಪ್ರೇಮದಲ್ಲಿ ನಾಯಕನು ಪರಮಾತ್ಮನೇ ಎಂದು ಭಾವಿಸುವುದಾದರೆ ಇದರಲ್ಲಿ ನಾಯಕಿ ಸಾಮಾನ್ಯ ಪ್ರೇಮವನ್ನು ಅಥವಾ ಲೌಕಿಕ ಅನುರಾಗವನ್ನು ವಿಷದೀಕರಿಸಿ ತೋರಿಸುತ್ತಾಳೆ. ನಾಯಕ- ನಾಯಕಿ ಉನ್ನತ ಮಟ್ಟದ ಪ್ರೇಮಕ್ಕಿಂತ ಹೆಚ್ಚಾಗಿ ಇದರಲ್ಲಿ ನಾಯಕಿ ಅಂದರೆ ನರ್ತಕಿ ತಮ್ಮನ್ನು ಪೋಷಿಸಿದವರ ಅಥವಾ ನಾಯಕನ ಬಗ್ಗೆ ತನ್ನ ಮನಸ್ಸಿನ ಭಾವವನ್ನು ನಿಸ್ಸಂಕೋಚವಾಗಿ ಪ್ರೇಮವನ್ನು ಹೇಳಿಕೊಳ್ಳುತ್ತಾಳೆ. ಪ್ರೇಮವು ಪೂರ್ತಿ ಅಭಿವ್ಯಕ್ತಗೊಂಡರೆ ಅದರ ತೂಕವು ಕಿಂಚಿತ್ ಹಗುರಾಗಿಬಿಡುವುದು ಎಂಬ ಗ್ರಹಿಕೆ ನಮ್ಮಲ್ಲಿದೆ ಅಲ್ಲವೇ. ಹಾಗಾಗಿ ಜಾವಳಿ ಏನಿದ್ದರೂ, ‘ಪದಂ’ ನಂತರದ ಸ್ಥಾನ ಪಡೆಯುತ್ತದೆ. ಜೊತೆಗೆ ಅದರಲ್ಲಿ ಪರೋಕ್ಷವಾಗಿ ಪೋಷಕರನ್ನು ಅನುನಯಿಸುವ ಎಳೆಯೊಂದು ಇರಲೂಬಹುದು.

ಪದಂ ಮತ್ತು ಜಾವಳಿಗಳಲ್ಲಿ ಅಭಿನಯವೇ ಪ್ರಧಾನ. ಆದರೆ ಪದಂ ಅಧ್ಯಾತ್ಮವನ್ನು ಹೆಚ್ಚಾಗಿಟ್ಟುಕೊಂಡಿರುವ ಶೃಂಗಾರ ಭಾವವಾದರೆ, ಜಾವಳಿಯಲ್ಲಿ ಕಾಮ- ಪ್ರೇಮೋನ್ಮಾದದ ಭಾವವೇ ಹೆಚ್ಚಿದೆ. ಜೀವಾತ್ಮ- ಪರಮಾತ್ಮನ ಸಂಯೋಗ ಹೇಳುವಂತಹ ಶೃಂಗಾರ ಭಾವವು ಪದಂನಲ್ಲಿ ಇರುತ್ತದೆ. ಆದರೆ ಜಾವಳಿಯಲ್ಲಿ ಸುಲಲಿತವಾದ, ಸ್ವಲ್ಪ ವಾಚ್ಯ ಎನಿಸುವ ಶೃಂಗಾರ ಭಾವ ಇರುತ್ತದೆ. ಅದಕ್ಕೆ‌ ಬಹುಶಃ ತಂಜಾವೂರು ಮಾರ್ಗಪದ್ಧತಿಯಲ್ಲಿ‌ ಜಾವಳಿಯನ್ನು ಕಟ್ಟುನಿಟ್ಟಾಗಿ ಮಾಡಿಲ್ಲ. ಹಾಗಾಗಿಯೂ ಇರಬಹುದು – ಜಾವಳಿಯಲ್ಲಿ ನಾಯಿಕೆಯು ಸಾಮಾನ್ಯಳಾಗಿರುತ್ತಾಳೆ.

‘ಸಾಮಾನ್ಯ ನಾಯಿಕೆ’ ಅಂದರೇನು ಎಂಬುವುದಕ್ಕೆ ಈಕೆ ಸಾಧಾರಣ ಸ್ತ್ರೀ ಆಗಿರುತ್ತಾಳೆ. ಎಲ್ಲರನ್ನು ಸಂತೋಷ ಪಡಿಸುವುದು, ಉಲ್ಲಾಸಭರಿತಳಾಗಿರುವುದು, ಆಕರ್ಷಕಳಾಗಿ ಕಾಣಿಸಿಕೊಳ್ಳುವುದು ಆಕೆಯ ಮುಖ್ಯ ಲಕ್ಷಣಗಳಾಗಿರುತ್ತವೆ. ಯಾವುದೇ ಕಟ್ಟುಪಾಡುಗಳಿಗೆ ಅಂಟಿಕೊಳ್ಳದೆ ಎಲ್ಲರಲ್ಲೂ ಸಮಾನ ಪ್ರೀತಿಯನ್ನು ತೋರಿಸುವುದನ್ನು ತನ್ನ ಮುಖ್ಯ ಗುಣವನ್ನಾಗಿ ಮಾಡಿಕೊಂಡಿರುವಳು.

ಜಾವಳಿಯು ಒಂದು ಬಗೆಯ ಗೇಯಪ್ರಕಾರವಾಗಿ ಬೆಳೆದು ಬಂದಿತ್ತು ಎಂದೂ ಹೇಳುವವರಿದ್ದಾರೆ. ಯಾಕೆಂದರೆ ಗೇಯ ರೂಪದ ನಾಲ್ಕು ಅಂಗಗಳಾದ ರಾಗಾ, ಭಾಷಾ, ತಾಳ ಮತ್ತು ಮಾರ್ಗ ಈ ನಾಲ್ಕರ ಭಾವಾಭಿವ್ಯಕ್ತಿಯನ್ನು ಸೃಜಿಸುವುದು ಜಾವಳಿಯಲ್ಲಿ ಸಾಧ್ಯವಾಗುತ್ತದೆ. ಜಾವಳಿಯ ಸಾತ್ವಿಕ ಅಭಿನಯವನ್ನು ಗಮನಿಸಬೇಕಾದ್ದು ಕೂಡಾ ಮುಖ್ಯ. ಒಂದೇ ಮುಖಾಭಿನಯ ಸಾತ್ವಿಕವೇ, ಅದಕ್ಕೆ ಹಸ್ತವನ್ನು, ಆಂಗಿಕವನ್ನು ಸೇರಿಸಿದರೆ ಅದು ನಿರ್ಭಾವುಕ ಆಗುವ ಸಾಧ್ಯತೆಯೇ ಹೆಚ್ಚು. ಇದಕ್ಕಾಗಿ ಇಡೀ ದೇಹದಲ್ಲೇ‌ ಸತ್ವವನ್ನು ತುಂಬಿ ನರ್ತಿಸಬೇಕು.

ನೃತ್ಯ ಸಂಗೀತ ಸಂಬಂಧದ ಬಗ್ಗೆ ಹೇಳುವುದಾದರೆ, ಕಿವಿಗೆ ಕೇಳುವ ಸಂಗೀತ ಕಣ್ಣಿಗೆ ಕಾಣುವ ನೃತ್ಯವಾಗಿ ರೂಪಾಂತರಗೊಂಡು ಕಾಣಬೇಕು. ಸಾಹಿತ್ಯ ಮತ್ತು ನೃತ್ಯಕ್ಕೆ ಸಂಬಂಧವನ್ನು ಬೆಸೆಯಬೇಕು. ನಾಟ್ಯ ಎನ್ನುವುದು ಸಾಹಿತ್ಯಾಶ್ರಿತವಾಗಿದೆ ಎನ್ನುತ್ತಾರೆ ಬಲ್ಲವರು. ತಾಳ-ಲಯ ಹಾಗೂ ಛಂದೋಗತಿಗಳ ನಡುವಿನ ಸಂಬಂಧ ಕೂಡಾ ನೃತ್ಯದಲ್ಲಿ ಪರಿಣಾಮ ಬೀರಬೇಕು. ಮುಖ್ಯವಾಗಿ ಹೇಳಬಹುದೇನೆಂದರೆ ಸಂಗೀತ, ನೃತ್ಯಕ್ಷೇತ್ರದಲ್ಲಿ ಜಾವಳಿಗಳು ಒಂದು ಸುಂದರ ಶಿಲ್ಪದಂತೆ. ಮನೋಹರವಾದವು.