ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ.
ಪ್ರಕಾಶ್ ಎಸ್ ಮನ್ನಂಗಿ ಬರೆದ “ನೂರೊಂದು ಝೇಂಕಾರ” ಹನಿಗವನಗಳ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಲೇಖನ

‘ನೂರೊಂದು ಝೇಂಕಾರ’ ಕೃತಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀಯುತ ಪ್ರಕಾಶ್ ಎಸ್ ಮನ್ನಂಗಿ ವಿರಚಿತ ನೂರ ಒಂದು ಹನಿಗವನಗಳ ಸಂಕಲನವಾಗಿದ್ದು, ಮೇಲ್ನೋಟಕ್ಕೆ ಇದೊಂದು ನಗೆಹನಿಗಳ ಗುಚ್ಛದಂತೆ ಕಂಡರೂ ಹನಿಗಳಲ್ಲಿನ ವಿಶಾಲಾರ್ಥವನ್ನು ಕೆದಕಿದಾಗ ಅವುಗಳ ಸಾಮಾಜಿಕ ಮಹತ್ವದ ಅರಿವಾಗುತ್ತದೆ.

ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ.

ಮನ್ನಂಗಿಯವರ ಹನಿಗವನಗಳಲ್ಲಿ ವಿರಹವಿದೆ, ವಾಸ್ತವದ ಕಟುಸತ್ಯಗಳಿವೆ, ಹದಿಹರೆಯದವರಿಗಾಗಿ ಪ್ರಣಯ ಪ್ರಸಂಗಗಳಿವೆ, ನಗಿಸುತ್ತಲೇ ವ್ಯವಸ್ಥೆಯ ನಗ್ನತೆಯನ್ನು ಹೊರಹಾಕುವ ಸಾಮರ್ಥ್ಯ ಈ ಸಂಕಲನದಲ್ಲಿನ ಹನಿಗವನಗಳಿಗಿದೆ.

‘ಕುಳಿತರೂ
ನಿಂತರೂ
ನೋಟದಲ್ಲೂ,
ಆಟದಲ್ಲೂ,
ಮನದಲ್ಲೂ,
ಎಲ್ಲೆಲ್ಲೂ
ತಹತಹ

ಈ ವಿರಹ’- ಎಂದೆನ್ನುತ್ತಾ ವಿರಹವೊಂದು ಮನವನ್ನು ಸುಡುವ ಕೆಂಡವಿದ್ದಂತೆ ಎಂದು ಒತ್ತಿ ಹೇಳುತ್ತಾ, ನಲ್ಲೆಯ ವಾರೆನೋಟ, ಐಹಿಕಸುಖ, ಸಾಂಗತ್ಯದ ನೆನಪುಗಳ ನೆಪದಿ ವಿರಹದಳ್ಳುರಿಯನ್ನು ಬಹಿರಂಗಗೊಳಿಸಿರುವ ಲೇಖಕರು ತಮ್ಮ ವಿರಹವನ್ನು ಪ್ರೇಯಸಿಯೊಂದಿಗಿನ ಪ್ರಣಯ ಸಲ್ಲಾಪಗಳ ಸವಿನೆನಪುಗಳ ಮಾಲೆಯನ್ನು ಹನಿರೂಪದಲ್ಲಿ ಕಟ್ಟುತ್ತಾ ಮರೆಯುವ ಪ್ರಯತ್ನವನ್ನು ಮಾಡಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ.

‘ನಲ್ಲೆ ನೀ ಉರುಳಿದರೆ
ನನ್ನೆದೆಯಲ್ಲಿ
ಇನ್ನೆಲ್ಲಿ ಕಾಡೀತು
ಮಾಗಿಯ ಚಳಿ?’ – ಎಂದು ಪ್ರಶ್ನಿಸುತ್ತಾ ‘ರಾತ್ರಿ ಬೀಳುವ ನಿನ್ನ ಕನಸುಗಳ ನೆನೆಯುತ್ತ ಹಗಲು ಕಳೆಯುವೆ, ಮತ್ತೆ ರಾತ್ರಿಗಾಗಿ ಕನವರಿಸುವೆ’ ಎಂದು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವುದನ್ನೂ ಕಾಣಬಹುದಾಗಿದೆ.

ಕೇವಲ ವಿರಹಾಗ್ನಿಯನ್ನು ನಂದಿಸುವ ಪ್ರಣಯ ರೂಪಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಕವಿಗಳು ಸಮಾಜದ ಕಟುಸತ್ಯಗಳನ್ನು ವಾಸ್ತವಿಕ ನೆಲೆಯಲ್ಲಿ ಕಟ್ಟಿಕೊಡುವ ಅನೇಕ ಹನಿಗವನಗಳನ್ನು ಇಲ್ಲಿ ಸಂಕಲಿಸಿದ್ದು ಅವುಗಳಲ್ಲಿ ಅವರ ವೃತ್ತಿ ಜೀವನದಲ್ಲಿ ಕಂಡಂತ ಅವಿದ್ಯಾವಂತ ಜನಪ್ರತಿನಿಧಿಗಳನ್ನು
‘ಆಪ್ತ
ಕಾರ್ಯದರ್ಶಿಗಳ
ಬೆಳಕಿನಲ್ಲಿ
ಪ್ರಜ್ವಲಿಸುವ
ಸ್ವಂತ
ಬೆಳಕಿಲ್ಲದ ಗ್ರಹ..’ ವಿದ್ದಂತೆ ಎಂದು ವ್ಯಂಗ್ಯವಾಗಿ ಬಣ್ಣಿಸಿದ್ದಾರೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಕಲ್ಪನೆಯಲ್ಲಿ ‘ಬದುಕಿನ ಬ್ಯಾಲೆನ್ಸ್’ ತಿಳಿಸುವ ಚುಟುಕು ಓದುಗರ ಮನಗೆಲ್ಲುತ್ತದೆ.
‘ವೇದಿಕೆಯ ತುಂಬ
ಕವಿಗಳು
ಸಭಾಂಗಣದಲ್ಲಿಲ್ಲ
ಕೇಳುವ ಕಿವಿಗಳು‘ ಎನ್ನುತ್ತಾ ಇಂದಿನ ಸಾಹಿತ್ಯ ಕವಿಗೋಷ್ಠಿಗಳ ಬಣ್ಣ ಬಯಲು ಮಾಡಿರುವ ಮನ್ನಂಗಿಯವರು,
‘ನಮ್ಮೂರಲ್ಲಿ
ನಿತ್ಯವೂ ನಡೆಯುತ್ತದೆ
ಸಾಹಿತ್ಯಿಕ ಪ್ರೋಗ್ರಾಂ
ಅಳೆದು ತೂಗಿ
ನೋಡಿದರೆ
ಸಾಹಿತ್ಯವಿರುವುದಿಲ್ಲ
ಒಂದೂ ಗ್ರಾಂ..’ ಎಂದೆನ್ನುತ್ತಾ ಜೊಳ್ಳು ಸಾಹಿತ್ಯದ ಗುಣಮಟ್ಟವನ್ನು ವಿಡಂಬಿಸಿದ್ದಾರೆ.

ಜೀವನದಲ್ಲಿ ಬರುವ ಅನೇಕ ಹಾಸ್ಯ ಸನ್ನಿವೇಶಗಳನ್ನೇ ಚುಟುಕಾಗಿ ಹೊಂದಿಸಿ ಓದುಗರ ತುಟಿಯಂಚಲ್ಲಿ ನಗೆಯುಕ್ಕಿಸುವ ಶಕ್ತಿ ಇಲ್ಲಿನ ಅನೇಕ ಹನಿಗಳಿಗಿದ್ದು ಅವುಗಳು ಹೆಚ್ಚಾಗಿ ದಂಪತಿಗಳ ನಡುವಿನ ಸನ್ನಿವೇಶಗಳಿಂದಲೇ ಹೆಕ್ಕಿದವಾಗಿವೆ. ಉದಾಹರಣೆಗೆ
‘ದಂಪತಿಗಳಲ್ಲಿ
ಹೊಂದಾಣಿಕೆ
ಇರಲೇಬೇಕು
ಈಗ ನೋಡಿ, ನಾನು
ಅಡುಗೆ ಮಾಡುತ್ತೇನೆ
ನನ್ನವಳು ಬಡಿಸುತ್ತಾಳೆ’ ಎಂದೆನ್ನುತ್ತಾ ಕಚಗುಳಿಯಿಡುವ ಕವಿಗಳು ‘ಮಂತ್ರಿಗಳಿಗೆ ಎಷ್ಟೇ ಹಾಕಿದರೂ ಹಾರ, ಬಡವರಿಗೆ ಸಿಗುವುದಿಲ್ಲ ಪರಿಹಾರ’ ಎಂದೆನ್ನುತ್ತಾ ಹಾಸ್ಯದಲ್ಲಿಯೇ ವಾಸ್ತವಿಕತೆಯ ಗಂಭೀರತೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಾರೆ.

ಕೆಲವೆಡೆ ಪ್ರಾಸಗಳಿಗೆ ಒತ್ತು ಕೊಟ್ಟಿರುವ ಮನ್ನಂಗಿಯವರು ಹಲವೆಡೆ ಪ್ರಾಸಗಳ ತ್ರಾಸೇ ಬೇಡವೆಂದು ಸರಳ ಉಪಮೆಗಳ ಮೊರೆ ಹೋಗಿದ್ದು ಅಲ್ಲಿಯೂ ಅವರು ಗೆದ್ದಿರುವುದನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ತಮ್ಮ ಮಾಗಿದ ಜೀವನಾನುಭವಗಳನ್ನು ಇಂದಿನ ಯುವಕರಿಗೆ ಕಟ್ಟಿಕೊಡಲು ಮನ್ನಂಗಿಯವರು ಆಯ್ದುಕೊಂಡಿರುವ ಈ ಹನಿಗವನಗಳೆಂಬ ಚುಟುಕು ಸಾಹಿತ್ಯ ಪ್ರಕಾರವು ಸಮಾಜಹಿತಕ್ಕಾಗಿ ದುಡಿಯುವ ವ್ಯವಸ್ಥಿತ ಮಾಧ್ಯಮದಂತೆ ಕೆಲಸ ನಿರ್ವಹಿಸಿದಲ್ಲಿ ಅವರ ಉದ್ದೇಶವೂ ಸಾರ್ಥಕವಾದೀತು. ಅಂತಹ ಸಾರ್ಥಕತೆಗಾಗಿ ಯುವಜನತೆ ಹೆಚ್ಚಾಗಿ ಸಂಕಲನವನ್ನು ಕೊಂಡು ಓದುವುದರ ಮೂಲಕ ಝೇಂಕರಿಸಲೆಂಬುದು ಈ ಟಿಪ್ಪಣಿಯ ಆಶಯವಾಗಿದೆ.

(ಕೃತಿಯ: ನೂರೊಂದು ಝೇಂಕಾರ (ಹನಿಗವನಗಳು), ಲೇಖಕರು: ಪ್ರಕಾಶ್ ಎಸ್ ಮನ್ನಂಗಿ, ಪ್ರಕಾಶನ: ಸುಶೀಲ ಪ್ರಕಾಶನ. ಮೋಟೆಬೆನ್ನೂರು, ಹಾವೇರಿ ಜಿಲ್ಲೆ, ಬೆಲೆ: 90/-)