ಈಗ ಕುಂತು ಯೋಚಿಸುತ್ತಿದ್ದೇನೆ. ಆ ದಿವಸ ಹೆಗ್ಗೋಡು ನೀನಾಸಂ ಶಿಬಿರಲ್ಲಿ ಕೃಷ್ಣ ಅವರ ಸಂಗೀತ ಕೇಳದೆ ಹೋಗಿದ್ರೆ ನನ್ನಂಥ ಮೂರ್ಖ ಮತ್ತೊಬ್ಬನಿರುತ್ತಿದ್ದಿಲ್ಲ.ಹಿಂದೂಸ್ತಾನಿ ಸಂಗೀತವನ್ನು ಮಾತ್ರ ಆರಾಧಿಸುತ್ತಿದ್ದ ನನ್ನಂಥ ನೂರಾರು ಯುವಜನ ಪ್ರತಿ ಆಲಾಪಕ್ಕೂ ಮನಸಾರೆ ಚಪ್ಪಾಳೆ ತಟ್ಟಿದ್ದಂತೂ ಸುಳ್ಳಲ್ಲ.

ಟಿ.ಎಮ್.ಕೃಷ್ಣ ಅವರ ವಿಶೇಷತೆಗಳ ಕುರಿತು ಹೇಳದೇ ಹೋದ್ರೆ ಇದೆಲ್ಲವೂ ಉತ್ಪ್ರೇಕ್ಷೆ ಅನ್ನಿಸಬಹುದು. ಸಂಗೀತದ  ಜ್ಞಾನ, ಸೊಗಸಾದ ಶಾರೀರ ಇತ್ಯಾದಿ ಎಲ್ಲ ಹಾಡುಗಾರರಲ್ಲೂ ಸಾಮಾನ್ಯ. ಕೇವಲ ಮೂವತ್ನಾಲ್ಕು ವರ್ಷದ ಕೃಷ್ಣ ಶಾಸ್ತ್ರೀಯ ಸಂಗೀತದ ನಾಲ್ಕು ಆಲ್ಬಮ್ ಗಳನ್ನು ಬಿಡುಗಡೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಕರ್ನಾಟಕ ಸಂಗೀತದ ಘಮ ಬಿತ್ತಿದ್ದಾರೆ. ಅವರು ಇತ್ತೀಚೆಗೆ ಬರೆದಿರುವ ‘voices with in’ ಪುಸ್ತಕ ಸಂಗೀತದಲ್ಲಿನ ಅವರ ವಿನೂತನ ಪ್ರಯೋಗಗಳ ಸಾಕ್ಷಿಗೀತೆ. ಪರಂಪರೆಯೊಂದಿಗೆ ಸಂಗೀತಗಾರನೊಬ್ಬ ನಡೆಸಬಹುದಾದ ಕೊಡುಕೊಳ್ಳುವಿಕೆಯ ಸೂಕ್ಷ್ಮ ಪ್ರಕ್ರಿಯೆಗಳನ್ನು ಅಲ್ಲಿ ಗುರುತಿಸಬಹುದು. ಸಂಗೀತ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮುಖ ಪತ್ರಿಕೆಗಳಲ್ಲಿ ಹಲವು ಲೇಖನಗಳನ್ನೂ ಬರೆದಿದ್ದಾರೆ ಅನ್ನೋದು ಮತ್ತೊಂದು ವಿಶೇಷ.ರಾಜರತ್ನಂ ಪಿಳ್ಳೈ

ಸಂಗೀತದಲ್ಲಿಯೂ ಮುರಿದು ಕಟ್ಟುವ ಪರಂಪರೆಯುಂಟು.ಆದರೆ ಅದು ಸಾಹಿತ್ಯದ ವಿಷಯದಲ್ಲಾಗುವಷ್ಟು ಸುಲಭ ಸಾಧ್ಯವಲ್ಲ. ಇತಿಹಾಸ ಕೆದಕಿದರೆ ಹೀಗೆ ಹೊಸತನ್ನು ನೀಡಲು ಪಂಥಾಹ್ವಾನ ಕಟ್ಟಿಕೊಂಡು ಹೊರಟ ಅನೇಕ ಮಂದಿಯನ್ನು  ಸಂಪ್ರದಾಯವಾದಿಗಳು ‘ನಿರ್ಲಕ್ಷಿಸುವ’ ಮೂಲಕ ತಿರಸ್ಕಾರ ಧೋರಣೆ ತಳೆದ ನೂರಾರು ಪ್ರಸಂಗಗಳಿವೆ.ಇದರ ಅರಿವಿದ್ದೂ ಕೃಷ್ಣರವರು ಮಾಡುತ್ತಿರುವ ಅನೇಕ ಪ್ರಯೋಗಗಳು ಗಮನಾರ್ಹವಾದವು

*****

ಕಿಕ್ಕಿರಿದು ತುಂಬಿದ್ದ ನೀನಾಸಮ್ನ ಶಿವರಾಮ ಕಾರಂತ ರಂಗಮಂದಿರದಲ್ಲಿ ಆ ದಿನ ‘ಕೃಷ್ಣ’ನನ್ನು ಹೊರತುಪಡಿಸಿ ಬೇರೇನಿರಲಿಲ್ಲ. ಗಾಯನದ ಮೊದಲ ಹಂತ ಮುಗಿದೊಡನೆ ಏನು ಹಾಡಲಿ ಹೇಳಿ ಎಂಬಂತೆ ಕೇಳುಗರತ್ತ ನೋಡಿದಾಗ ಯಾರೋ ‘ತೋಡಿ ಹಾಡಿ’ ಅಂದರು. `now..?!’ ಅನ್ನೋ ಉದ್ಘಾರ ಆ ಬದಿಯಿಂದ ಕೇಳಿಬಂತು. ಅಷ್ಟೊತ್ತಿಗೆ ಮತ್ಯಾರೋ ಬೇರೊಂದು ರಾಗಕ್ಕೆ ಮೊರೆಯಿಟ್ಟರು. ಮುಗುಳ್ನಕ್ಕ ಕೃಷ್ಣ ಆ ಎರಡೂ ರಾಗಗಳಲ್ಲೂ ಹಾಡತೊಡಗಿದಾಗ ಎಲ್ಲರ ಕಂಗಳಲ್ಲೂ ಮಿಂಚು. ನಿರ್ಮಲ ನಿಶ್ಯಬ್ದ. ಕಣ್ಣು ಕೋರೈಸುವ ಬಣ್ಣದ ಬೆಳಕಿನ ನಡುವೆಯೂ ಹೊನಲಾಗಿ ಹರಿದದ್ದು ಸಂಗೀತವಷ್ಟೆ. ಮೊಳೆತು, ಚಿಗುರಿ, ಮೊಗ್ಗಾಗಿ, ಹೂ ಬಿರಿದು, ಬೀಜವಾಗಿ ಮತ್ತೆ ಮೊಳಕೆಯಾಗುತ್ತಿದ್ದದ್ದೂ ಅದೇ ಸಂಗೀತ.ಎರಡೂವರೆ ಗಂಟೆಯ ಆ ಮಾಂತ್ರಿಕ ಲೋಕದಲ್ಲಿ ಮಿಂದು ದೇಹ ಹಗುರಾದ ಅನುಭವ.

ಬೆಳಗ್ಗಿನ ಮೊದಲ ಸೆಷನ್ ನಲ್ಲಿ ಕೃಷ್ಣ ಅವರೊಟ್ಟಿಗೆ ಸಂವಾದ. ಸಾಮಾನ್ಯವಾಗಿ (ನಾನು ನೋಡಿದಂತೆ) ಸಂಗೀತಗಾರರು ಹೆಚ್ಚು ಮಾತನಾಡುವುದಿಲ್ಲ. ಅಥವಾ ಸಂಗೀತದ ಗಂಧ ಗೊತ್ತಿಲ್ಲದವರೂ ನಮ್ಮೆದುರಿದ್ದಾರೆ ಅನ್ನೋದನ್ನು ಮರೆತೇ ಮಾತನಾಡುತ್ತಾರೆ. ಆದರೆ ಕೃಷ್ಣ ಇದಕ್ಕೆ ಅಪವಾದ. ಆಂಗ್ಲಭಾಷೆಯಲ್ಲಿ ಹರಳು ಹುರಿದಂತೆ ಮಾತನಾಡಿದ ಅವರು ನಮ್ಮೆದುರಿಟ್ಟ ಕಥನಗಳಲ್ಲಿ ಮುಖ್ಯವಾದ ಮೂರು ನೆನಪುಗಳು ಇಲ್ಲಿವೆ, ಅವರದೇ ಮಾತುಗಳಲ್ಲಿ….

ದೇವರಿಗೇ ದೇವರಾದ ನಾದಸ್ವರ ವಾದಕ!
ಸಂಗೀತ ಮೂಲತಃ ರಾಜಪ್ರಭುತ್ವದಿಂದ ಬಂದದ್ದು. ಅರಸನಿಗೆ ಮೆಚ್ಚುಗೆಯಾದದ್ದು ಮಾತ್ರವೇ ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಮನೆಮಾಡಿದ್ದ ಕಾಲವೊಂದಿತ್ತು. ಹಾಗಾಗಿ ಪ್ರಭು ಯಾರನ್ನು ಒಪ್ಪುವನೋ ಅವರಷ್ಟೆ ಸಂಗೀತಗಾರರಾಗಿ ಹೆಸರು ಗಳಿಸುತ್ತಿದ್ದರು. ಅದೇ ಸಂದರ್ಭದಲ್ಲಿ ನಾದಸ್ವರ ವಾದನ ಎಲ್ಲರ ದೃಷ್ಟಿಯಲ್ಲೂ ಕೀಳುವಾದ್ಯವೆಂದು ತಿರಸ್ಕಾರಕ್ಕೆ ಒಳಗಾಗಿತ್ತು. ಜೊತೆಗೆ ಸಂಗೀತದ ಇತರೆ ಉಪಕರಣಗಳನ್ನು ಕುಳಿತು ನುಡಿಸಬಹುದಾಗಿತ್ತು. ನಾದಸ್ವರಕ್ಕೆ ಈ ಅನುಕೂಲತೆಯಿರಲಿಲ್ಲ. ನಾದಸ್ವರವು ತೃತೀಯ ದರ್ಜೆಯ ಸಂಗೀತವೆಂಬಂಥ ನಿರ್ಲಕ್ಷ್ಯ ಅಲ್ಲಿ ಮನೆಮಾಡಿತ್ತು.

ಸೆಮ್ಮಂಗುಡಿ ಮತ್ತು ಎಂ.ಎಸ್. ಸುಬ್ಬಲಕ್ಷ್ಮಿಆದರೆ ಈಗ ನಾದಸ್ವರ ವಾದನದ ಗಾರುಡಿಗನೆಂದು ಕರೆಯಲ್ಪಡುವ ರಾಜರತ್ನಂ ಪಿಳ್ಳೈ ಈ ಎಲ್ಲ ಕೊಂಕುಗಳಿಗೆ ಇತಿಶ್ರೀ ಹಾಡಿದರು. ಅವರು ಮಾಡಿದ ಮೊದಲ ಕೆಲಸ, ನಾದಸ್ವರ ಉಪಕರಣದ ಉದ್ದವನ್ನು ಹೆಚ್ಚಿಸಿದ್ದು. ಇದರಿಂದ ಅದನ್ನು ಕುಳಿತು ನುಡಿಸುವ ಅನುಕೂಲ ಒದಗಿಬಂತು. ಒಟ್ಟಾರೆ, ನಾದಸ್ವರ ಕೀಳು ಎಂಬ ಭಾವನೆಯನ್ನು ಹೋಗಲಾಡಿಸಿದ ಶ್ರೇಯಸ್ಸು ಪಿಳ್ಳೈಯವರಿಗೆ ಸಲ್ಲಬೇಕು.

ನಂತರ ಎಲ್ಲ ಬದಲಾದ ಸ್ಥಿತಿ. ಈ ಮೊದಲು ಉತ್ಸವಗಳಲ್ಲಿ ರಾಜರತ್ನಂ (ನಾದಸ್ವರ ವಾದಕರು) ದೇವರ ಹಿಂದೆ ನಡೆದು ಹೋಗುತ್ತಿದ್ದರು. ತರುವಾಯ ರಾಜರತ್ನಂ (ನಾದಸ್ವರ ವಾದಕರ) ಹಿಂದೆ ದೇವರು ನಡೆಯುವಂತಾಯಿತು. ದೇವಾಲಯಗಳಿಗೆ ಭಕ್ತರು ಹೋಗುವಾಗ ದೇವರಿಗಿಂತ ಮುಂಚೆ ರಾಜರತ್ನಂ (ನಾದಸ್ವರ ವಾದಕರ) ದರ್ಶನ ಮಾಡುವಂತಾಯಿತು !

*****

ಫೋನ್-ಇನ್ ಪ್ರಸಂಗ ಮತ್ತು ಸುಬ್ಬುಲಕ್ಷ್ಮಿ
ಶಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಬಳಿ ಸಂಗೀತ ಕಲಿಯುತ್ತಿದ್ದ ಹೊತ್ತದು.ಮದ್ರಾಸು ಆಕಾಶವಾಣಿಯಲ್ಲಿ ನಾನು ಹಾಡಿದ ಭಾಗವೊಂದನ್ನು ಬೆಳಗ್ಗಿನ ವೇಳೆಯಲ್ಲಿ ಪ್ರಸಾರ ಮಾಡಿದ್ದರು. ಸ್ವಾಭಾವಿಕವಾಗಿಯೇ ಎಲ್ಲರಂತೆ ನನಗೂ ಖುಷಿಯಾಗಿತ್ತು. ಆದರೆ ಅದೇ ಹೊತ್ತಿಗೆ ಒಂದು ಫೋನ್ ಕಾಲ್..

‘ಹಲೋ..ಕೃಷ್ಣ ಅವಂಗೊ ಇರುಕ್ ರಾಂಗ್ಳ….?’ (….ಕೃಷ್ಣ ಅವರು ಇದ್ದಾರಾ?)
ನನಗೆ ತಕ್ಷಣವೇ ಗೊತ್ತಾಯ್ತು ಆ ಬದಿಯಿಂದ ಮಾತನಾಡ್ತಿರೋದು ನನ್ನ ಗುರುಗಳೇ ಅಂತ. ಜೊತೆಗೆ ಇವತ್ತಿನ ಪ್ರಸಾರದ ವಿಷಯದ್ದೇ ಏನೋ ಚರ್ಚೆ ಅಂತ.

ಹತ್ತು ಗಂಟೆಯ ಸುಮಾರಿಗೆ ಶಮ್ಮಂಗುಡಿಯವರ ಮನೆಗೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಕಿಟಕಿಯ ಬಳಿ ನಿಂತ ಗುರುಗಳು ಯಾರ ಬಳಿಯೋ ಮಾತನಾಡುತ್ತಿದ್ದಂತಿತ್ತು.ಮೆತ್ತಗೆ ಹೆಜ್ಜೆ ಇಡುತ್ತಾ ಒಳಗೆ ಹೋದ್ರೆ ಇನ್ನೊಂದು ಬದಿಯಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ! ನಾನು ಕಂಗಳ ತುಂಬಾ ಬೆರಗು ಹೊತ್ತಿದ್ದನ್ನು ಗಮನಿಸಿದ ಗುರುಗಳು ನನ್ನನ್ನು ಎಂ.ಎಸ್.ಅವರಿಗೆ ಪರಿಚಯಿಸಿದರು. ಬೆಳಿಗ್ಗೆ ಆಕಾಶವಾಣಿಯಲ್ಲಿ ಪ್ರಸಾರವಾದದ್ದನ್ನೇ ಮತ್ತೆ ಹಾಡಲು ಹೇಳಿದರು. ನಾನು ಕೊಂಚ ಹಿಂದೇಟಿನಿಂದಲೇ ಆರಂಭಿಸಿದೆ. ಎಂ.ಎಸ್.ಧ್ವನಿಗೂಡಿಸಿದರು. ಶಮ್ಮಂಗುಡಿಯವರೂ ಜೊತೆ ಸೇರಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಮಾಂತ್ರಿಕ ಲೋಕ ನಿರ್ಮಾಣವಾಗಿತ್ತು. ಆದ್ರೆ ದುರಾದೃಷ್ಟವಶಾತ್ ಆ ಜುಗಲ್ ಬಂಧಿಯನ್ನು ರೆಕಾರ್ಡ್ ಮಾಡಿಕೊಳ್ಳಲಿಲ್ಲವಲ್ಲ ಎಂದು ಆ ನಂತರ ಹಲುಬಿದ್ದುಂಟು. (-ಈ ಪ್ರಸಂಗ ಹೇಳುವಾಗ ಕೃಷ್ಣ ತುಂಬಾನೇ ಭಾವುಕರಾಗಿದ್ರು, ಕೇಳುತ್ತಿದ್ದ ಎಲ್ಲರೂ. ಕೊನೆಯ ಸಾಲು ಕೇಳಿದೊಡನೆ ನಮಗೇ ಗೊತ್ತಿಲ್ಲದಂತೆ ಛೇ.. ಅನ್ನೋ ಉದ್ಘಾರ ಹೊರಟಿತ್ತು.)

*****

ಶಮ್ಮಂಗುಡಿಗೆ ಭಯವಾಗಿದ್ದೇಕೆ ಗೊತ್ತಾ..
ಗುರುಗಳಿಗೆ ಆರೋಗ್ಯ ಕೈಕೊಟ್ಟು ಆಸ್ಪತ್ರೆಯಲ್ಲಿದ್ದ ಹೊತ್ತು. ನಾನವರನ್ನು ನೋಡಲು ಹೋಗಿದ್ದೆ.ಒಳಹೋಗಿ ಮಂಚದ ಬಳಿ ಕುಂತು ಮಾತನಾಡಿಸಿದೆ. ಅವರು ಸಾಮಾನ್ಯವಾಗಿ ಎಲ್ಲರೂ ಆ ವಯಸ್ಸಿನಲ್ಲಿ ಮಾತನಾಡುವ ಹಾಗೆ….
‘ಎನುಕು ಭಯೊಂ ಆಯಿನ್ಕಿದು..’ (ನನಗೆ ಭಯವಾಗ್ತಾ ಇದೆ) ಎಂದರು.
ಆದರೆ ನಂತರ ಅವರು ಹೇಳಿದ ಮಾತುಗಳು ನನ್ನನ್ನು ಮೂಕನನ್ನಾಗಿಸಿದವು; ‘….ಎದುಕು ತೆರಿಯುಮಾ, ಒರು ವಾರುತ್ಲಿಂದ್ ಸಂಗೀತಂ ಪತ್ತಿ ನಾ ಒಣ್ಣೊಂ ಯೋಚಿಸಿಲ್ಲೆ.. ಎಂಗೆ ನಾ ಅದೆಲ್ಲಾ ಮರೆಂದ್ವಿಡ್ವೆನೋ ಅಣ್ ಭಯೊಂ…!’
(ಯಾಕೆ ಗೊತ್ತಾ, ಒಂದು ವಾರದಿಂದ ಸಂಗೀತದ ಬಗ್ಗೆ ಯೋಚಿಸಿಯೂ ಇಲ್ಲ. ನಾನೆಲ್ಲಿ ಅದನೆಲ್ಲಾ ಮರೆತುಬಿಡುವೆನೋ ಅಂತ ಭಯ..!) ಈ ಮಾತುಗಳನ್ನು ಆಡುವಾಗ ಅವರ ವಯಸ್ಸು ತೊಂಬತ್ತನ್ನೂ ಮೀರಿತ್ತು!.

******

ನಾವು ಯುವಜನರು ದೊಡ್ಡವರನ್ನು ದೂರುವಾಗ ಮಾತುಮಾತಿಗೂ ನಮ್ಮೆದುರು ಒಳ್ಳೆ ಮಾದರಿಗಳಿಲ್ಲ ಅಂತ ಮಾತಾಡ್ತೀವಿ. ಆದರೆ ನಮಗೆ ಬೇಕಾದ ಮಾದರಿಗಳನ್ನು ನಾವೇ ಹುಡುಕಿಕೊಳ್ಳಬೇಕು ಅನ್ನೋ ಕನಿಷ್ಠ ಪ್ರಜ್ಞೆ ನಮ್ಮದಾದರೆ ಈಗ ಸಮಸ್ಯೆ ಅಂದುಕೊಂಡಿರುವ ಅನೇಕ ಸಮಸ್ಯೆಗಳು ನಮ್ಮ ನಡುವೆ ಖಂಡಿತ ಇರಲಾರವು. ಈ ದೃಷ್ಟಿಯಿಂದ ನನಗೆ ಟಿ.ಎಂ.ಕೃಷ್ಣ ಮುಖ್ಯವೆನಿಸುತ್ತಾರೆ. ಇದೊಂದೇ ಕಾರಣಕ್ಕೂ ಈ ಬರಹ ಹುಟ್ಟಿರಬಹುದು.