ಸತ್ತುಹೋದ ತಂದೆಯೊಡನೆ ಒಂದು ಭೇಟಿ

ನಿದ್ರೆಯ ನೀರಲೆಗಳಲಿ ತೇಲಿದ
ಕನಸಿನ ಹಡಗೊಂದರಲಿ ಅಪ್ಪ

ಹಣೆ ತುಂಬಾ ವಿಭೂತಿ
ಹುಬ್ಬುಗಳ ನಡುವೆ ಚಂದನ
ಜೀವಂತವಾಗಿದ್ದಾಗ ಹೇಗೆ ಇದ್ದರೋ
ಹಾಗೆಯೇ ಇದ್ದರು ಅಪ್ಪ ಅಮಾಯಕರಾಗಿ

ವಿಶಾಲ ಎದೆ, ಬೊಜ್ಜು ಹೊಟ್ಟೆ
ಆಳವಾಗಿ ಬಿರಿದ ಹೊಕ್ಕಳು ಕಾಣುವಂತೆ
ಊದುಬತ್ತಿಯ ಹೊಗೆಯಾಗಿ ಗಾಳಿಯಲಿ ಬೆರೆಯುವ
ಕವಿದ ಮೋಡಗಳಲಿ ತೇಲುತ್ತಲಿದ್ದರು ಅಪ್ಪ

ಕನಸಲಿ ನನಗೆ
ಅತಿ ಗೌರವ ನೀಡಿ ಮಾತನಾಡಿದರು

ಅವರು ಈಗಾಗಲೇ ಕಾಲವಾದವರಂತೆ
ನಾನು ಇನ್ನೂ ಪ್ರಾಣ ಸಹಿತ ಬಾಳುವವನಂತೆ

ಮರಣ ನನ್ನೊಳಗೂ
ವೇಗವಾಗಿ ಬೆಳೆದು ಬರುತ್ತಿದೆ ಎಂಬುದು
ಅಪ್ಪನಿಗೆ ಹೇಗೆ ತಿಳಿಯದಾಯಿತು!

ನಾನು ಆಲೋಚಿಸಿಯೂ ಸಹ ಇರಲಿಲ್ಲ.
ಎಲ್ಲರನ್ನೂ ನೋಡಿ
ಆಜ್ಞೆ ಮಾಡುತ್ತಿದ್ದ ಅವರು
ಇಷ್ಟು ಕುಸಿದು ಹೋಗಿರುತ್ತಾರೆಂದು

ಈಗ ಕನಸಲಿ ನಾವಿಬ್ಬರೂ
ನನ್ನ ಬಾಲ್ಯಾವಸ್ಥೆಯ
ಹಳೆಯ ಮನೆಯೊಳಗಿದ್ದೆವು.

ನನಗೆ ಇನ್ನೂ ಸಹ ಅರ್ಥವೇ ಆಗುತ್ತಿಲ್ಲ
ಅಲೆಮಾರಿ ತಂಡವೊಂದು ನಮ್ಮ ಹಿತ್ತಲ ಬಳಿ
ಈಗ ಏಕೆ ವಾಸಿಸುತ್ತಿದ್ದಾರೆಂದು?

ಮನೆಯ ಯಾವುದೋ ಒಂದು ಮೂಲೆಯಿಂದ
ಆಕ್ರಂದನವಾಗಿ ಹರಿದ ಶಹನಾಯಿ ವಾದನ
ಏಕೋ ನನಗೆ ಹಿಡಿಸಲೇ ಇಲ್ಲ

ಮನೆಯ ಉಸ್ತುವಾರಿ ಸರಿಯಾಗಿ ನಿರ್ವಹಿಸಲಿಲ್ಲವೆಂದು
ನನ್ನ ಮೇಲೆ ತಪ್ಪು ಹೇಳಿ ಗೊಣಗುವ ತುಟಿಗಳೊಂದಿಗೆ
ಒಬ್ಬ ಕಲಾವಿದನ ನಡುಗುವ ನೀಳ ಬೆರಳುಗಳಿಂದ
ಅಪ್ಪ ತನ್ನ ಪೂಜಾಗೃಹದ ಗೋಡೆಗಳನು ಮೆಲ್ಲನೆ ನೇವರಿಸಿದರು

ಅವರು ಉಚ್ಚರಿಸಿದ ಪ್ರತಿಯೊಂದು ಪದವೂ
ನನ್ನೊಳಗೆ ಪ್ರತಿಧ್ವನಿ ಕಂಪನಗಳನ್ನೇಳಿಸಿ
ಕುರುಡು ಹಕ್ಕಿಗಳಂತೆ ಆವೇಶದಿಂದ ಹಾರಿ
ನನ್ನ ಹೃದಯದ ನಾಲ್ಕು ಗೋಡೆಗಳಿಗೆ ಬಡಿದು ಬಿದ್ದವು

ಅವರು ತನ್ನ ಕೈಯಲಿ
ಏಕೋ? ಹುಲ್ಲು ಕತ್ತರಿಸುವ ಸಲಕರಣೆಯನ್ನು ಇಟ್ಟುಕೊಂಡಿದ್ದರು
ಶುಚಿ ಮಾಡದೆ ಅದರಲಿ ಮಣ್ಣು,ಹುಲ್ಲು
ಇನ್ನೂ ಅಂಟಿಕೊಂಡಿತ್ತು

ನರಕದಲ್ಲೋ ಅಥವಾ ಸ್ವರ್ಗದಲ್ಲೋ
ಅವರಿಗೆ ಕಠಿಣ ಕೆಲಸವಿದ್ದಂತಿದೆ!

ಬಹಳ ಆಯಾಸ, ಬಳಲಿಕೆಗೊಂಡವರಂತೆ ಕಂಡ
ಅವರು ಯಾವುದರ ಮೇಲಾದರೂ ಕುಳಿತು ಕೊಳ್ಳಲು ಬಯಸಿದರು

ತನ್ನ ಸಮಸ್ತ ಶಕ್ತಿಯೂ ಆವಿಯಾಗಿ ಹೋದ ನಂತರ
ನೆಲದಲಿ ಕುಳಿತುಕೊಳ್ಳಲು ಹೋದವರನ್ನು ತಡೆದು
ನಾನು ನನ್ನ ಮಡಿಲ ಮೇಲೆ ಕೂರಿಸಿಕೊಂಡೆ

ಸೊರಗಿಹೋಗಿದ್ದ ಅವರ ಒಡಲು
ತೂಕರಹಿತವಾಗಿತ್ತು
ಅವರ ಹೃದಯ
ಬರಿದಾಗಿಯೂ, ಅಹಮ್ಮಿಕೆಯಿಲ್ಲದೆಯೂ ಇತ್ತು
ನಾನು ಅವರ ಬೂಜು ಬಂದ ಕಣ್ಣುಗಳನು
ಸೂಕ್ಷ್ಮವಾಗಿ ದಿಟ್ಟಿಸಿದೆ
ಅದರಲಿ ನನ್ನ ತಾರುಣ್ಯಾವಸ್ಥೆಯ ಕುರುಹುಗಳು ಏನಾದರೂ
ಕಾಣುತ್ತದೋ ಎಂದು
ದಿಟ್ಟಿಸುತ್ತಿದ್ದ ಅವರ ಕಂಗಳು
ಇರುಳಾಗಿಯೂ
ಯಾವ ಇಂಗಿತವೂ ಇಲ್ಲದಂತಿತ್ತು

ನಡುವೆ ನಾವಿಬ್ಬರೂ ಮೌನವಾಗಿ
ಕನಸ ಆಳ ತಿಳಿಯದ ಕಣಿವೆಯೊಂದರಲಿ
ಹೂತು ಹೋದೆವು

ಕತ್ತಲೊಳಗಿಂದ ಅವರ ದನಿ ಕೇಳಿಸಿತು
“ನೀ ಏನಾದರೂ ಹೇಳಲಿಚ್ಛಿಸುವೆಯಾ ಮಗನೇ”

ಇರುಳಲಿ ತಡಕಿದುದರಲಿ
ತಣ್ಣನೆಯ ಅವರ ಮೃದುವಾದ
ಅಂಗೈಯ ಹಿಡಿದು ಹೇಳಿದೆ

“ನನಗೆ ಹೇಳಲಿಕ್ಕೇನೂ ಇಲ್ಲ ಅಪ್ಪ
ಆದಷ್ಟು ಬೇಗ ನಾವು ಭೇಟಿಯಾಗೋಣ ಎಂಬುದರ ಹೊರತು”

ತಣ್ಣನೆಯ ಶಹನಾಯಿ ವಾದ್ಯವ
ನುಡಿಸುತ್ತಾ ಒಂದು ನೆರಳು
ನನ್ನನು ದಾಟಿ ಹೋಯಿತು

ಕಾಲದ ಅಟ್ಟಹಾಸದ ನಗೆಯ ಸದ್ದು
ಸಪ್ತ ಬೆಟ್ಟಗಳ ದಾಟಿ
ಪುನರ್ಜನ್ಮ ಮಹಾಸಾಗರದ ಅಬ್ಬರಿಸುವ ಅಲೆಗಳ
ತುಂತುರುಗಳಲಿ ಹೋಗಿ ಲೀನವಾಯಿತು