ನಮ್ಮಲ್ಲಿ ಸಾಮಾನ್ಯಜ್ಞಾನವಾಗಿಹೋಗಿರುವ ಒಂದು ಭಾವವೆಂದರೆ ತಂತ್ರಜ್ಞಾನವೆನ್ನುವುದು ಆಧುನಿಕ ಬೆಳವಣಿಗೆಯೆಂದು. ಆದರೆ, ಸ್ವಲ್ಪವೇ ಕೆದಕಹೋದವರೂ ಕೂಡ ಬಲುಬೇಗ ಸಾಮಾನ್ಯಜ್ಞಾನದ ನೇಪಥ್ಯ ತಲುಪಿದಂತೆ, ಭ್ರಮೆಯ ಪರದೆ ಸರಿದು, ತಂತ್ರಜ್ಞಾನದ ಪುರಾತತ್ವ ಗಮನಕ್ಕೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ತಂತ್ರಜ್ಞಾನದ ಕುರಿತು ನಿರ್ದಿಷ್ಟವಾದ ತತ್ವಶಾಸ್ತ್ರೀಯ ಬರಹಗಳು ಬಂದದ್ದು ಹತ್ತೊಂಬತ್ತನೇ ಶತಮಾನದಲ್ಲಿ. ಆದರೂ, ತಂತ್ರಜ್ಞಾನದ ಕುರಿತಾದ ಚಿಂತನೆಗೆ ಹಳೆಯ ಬೇರುಗಳಿವೆ. ಸುಪ್ರಸಿದ್ಧ ಗ್ರೀಕ್ ತತ್ವಜ್ಞಾನಿಗಳು ಕೂಡ ತಂತ್ರಜ್ಞಾನದ ಕುರಿತು ೨೩೦೦ ವರುಷಗಳಷ್ಟು ಹಿಂದೆಯೇ ಚರ್ಚಿಸಿದ್ದರು.
ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿ ಅಂಕಣ-4ʼ

 

ತಂತ್ರಜ್ಞಾನದ ಪರವಿರೋಧದ ಚರ್ಚೆಗಳು ನಮ್ಮ ಸುತ್ತ ನಡೆಯುತ್ತಲಿರುತ್ತವೆ. ಆಧುನಿಕ ಸಮಾಜದಲ್ಲಿ, ಅದರಲ್ಲಿಯೂ ಇಪ್ಪತ್ತೊಂದನೇ ಶತಮಾನದಲ್ಲಿ, ನಮ್ಮ ಜೀವನವು ಅತಿಯಾಗಿ ತಾಂತ್ರಿಕತೆಗೆ ಒಗ್ಗಿಕೊಳ್ಳುತ್ತಿರುವ ಕಾಲದಲ್ಲಿ, ಉತ್ಪಾದನಾ ವ್ಯವಸ್ಥೆ ಮಾತ್ರವಲ್ಲದೇ ಸೇವಾಕ್ಷೇತ್ರವೂ ಸೇರಿದಂತೆ ಹಲವಾರು “ಮಾನವ ಮಾತ್ರ” ಎಂದು ಪರಿಗಣಿಸಲಾಗುತ್ತಿದ್ದ ಕ್ಷೇತ್ರಗಳಲ್ಲಿಯೂ ಕೂಡ ಯಂತ್ರಗಳು ಮಾನವನ ಪಾತ್ರವನ್ನು ಕಿರಿದಾಗಿಸುತ್ತಿರುವ ಆತಂಕ ಹೆಚ್ಚುತ್ತಿರುವ ಕಾಲದಲ್ಲಿ, ಹಿಂದೆಲ್ಲ ಯಾವ ದೈಹಿಕ ಊನಗಳು ಮಾನವನ ಬದುಕನ್ನು ಕ್ಷೀಣಿಸಿ ಬಿಡುತ್ತಿದ್ದವೋ ಅವುಗಳನ್ನು ಮೀರಲು ಸಹಾಯಕವಾಗುವ ಯಂತ್ರಗಳು ಅದೆಷ್ಟೋ ಜನರ ಬದುಕನ್ನೇ ಬದಲಿಸುತ್ತಿರುವ ಕಾಲದಲ್ಲಿ, ಮಾನವನ ಮಧ್ಯಪ್ರವೇಶವೇ ಇರದೇ ಯಂತ್ರಗಳೇ ಮಾನವೋಪಯೋಗಿ ಆವಿಷ್ಕಾರಗಳನ್ನು ಮಾಡತೊಡಗಿರುವ ಕಾಲದಲ್ಲಿ, ತಂತ್ರಜ್ಞಾನದ ಕುರಿತು ತೀರಾ ಸರಳೀಕೃತ ಬೇಕುಬೇಡಗಳ ನೆಲೆಯಲ್ಲಿ ಯೋಚಿಸುವುದು ಸಾಧುವಲ್ಲ.

ತಂತ್ರಜ್ಞಾನ ಮಾನವನ ಬದುಕಿನಲ್ಲಿ ಒಳ್ಳೆಯದನ್ನೂ ಮಾಡುತ್ತಿದೆ, ಕೆಡುಕನ್ನೂ ಮಾಡುತ್ತಿದೆ – ನಾವು ಒಳಿತು ಮಾಡುವ ತಂತ್ರಜ್ಞಾನ ಉಳಿಸಿಬೆಳೆಸಿ, ಕೆಡುಕು ಮಾಡುವ ತಂತ್ರಜ್ಞಾನವನ್ನು ನಿಗ್ರಹಿಸಬೇಕೆಂದು ಹಲವರ ನಿಲುವು. ನಮ್ಮ ಸಮಾಜದಲ್ಲಿ ತಂತ್ರಜ್ಞಾನ ಹೇಗೆ ಜನರ ಬದುಕನ್ನು ಹೆಚ್ಚು ಹೆಚ್ಚು ಸುಗಮಗೊಳಿಸುವಲ್ಲಿ ಸಹಕಾರಿಯಾಗಿದೆ ಎನ್ನುವ ಧನಾತ್ಮಕ ಮತ್ತು ಹೇಗೆ ಮಾನವ ಬದುಕನ್ನು ರೂಪಿಸುವ ಉತ್ಪಾದನಾ ವ್ಯವಸ್ಥೆಯಲ್ಲಿ ಮನುಷ್ಯರನ್ನು ಅನವಶ್ಯಕರನ್ನಾಗಿಸುತ್ತಿದೆ ಎನ್ನುವ ಋಣಾತ್ಮಕ ದೃಷ್ಟಿಗಳ ಅರಿವಿನ ಚೌಕಟ್ಟುಗಳಲ್ಲಿ ತಂತ್ರಜ್ಞಾನದ ಕುರಿತಾದ ಚರ್ಚೆಗಳು ತಮ್ಮ ಗಮನವನ್ನು ಕೇಂದ್ರೀಕರಿಸಿವೆ.

ಸ್ಪಷ್ಟವಾಗಿ ಯೋಚಿಸಿದರೆ ಹೊಳೆಯುವ ಒಂದು ವಿಚಾರವೆಂದರೆ, ಈ ನಿಲುವುಗಳ – ಅದು ತಂತ್ರಜ್ಞಾನದ ಪರವಾದವಿರಲಿ, ವಿರೋಧವಾದವಿರಲಿ – ಹಿಂದೆ ಇರುವ ದೃಷ್ಟಿಕೋನವೆಂದರೆ, ತಂತ್ರಜ್ಞಾನ ಮಾನವ ತನ್ನ ಅನುಕೂಲಕ್ಕಾಗಿ “ಬಳಸುವ” ಸಾಧನವೆಂದು. ಈ ಕಾಲಂನಲ್ಲಿ ಈ ಸಾಧನವಿಧಾನವನ್ನು ವಿಷದಗೊಳಿಸುವುದು ನನ್ನ ಉದ್ದೇಶ.

ಮಾನವ ತನ್ನ ನಿಸರ್ಗದತ್ತ ಅಂಗಗಳ ಮಿತಿಯನ್ನು ಮೀರಲಿಕ್ಕಾಗಿ, ಅಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು, ನಿಸರ್ಗ ವಿನ್ಯಾಸ-ನಿಯಮಗಳನ್ನು “ಅನುಕರಣೆ” ಮಾಡಿ ನಿರ್ಮಿಸಿಕೊಳ್ಳುವ ಸಂಗತಿಗಳು ತಂತ್ರಜ್ಞಾನವೆನ್ನಲಾಗಿದೆ. ಇನ್ನು ಕೆಲವರು ಅರಿಸ್ಟಾಟಲನ “ಟೆಕ್ನಿ” ಪರಿಕಲ್ಪನೆಯ ಆಧಾರದ ಮೇಲೆ ತಂತ್ರಜ್ಞಾನವೆಂದರೆ ತಂತ್ರಗಳ ಜ್ಞಾನವೆಂದು ವಾದಿಸುತ್ತಾರೆ. “ಜಂಗಲ್ ಬುಕ್”ನ ಮೌಗ್ಲಿ ನೀರು ಎತ್ತಲು ಹಗ್ಗ ಬಳಸುವ ತಂತ್ರ ಕಂಡುಕೊಂಡಾಗ, ತಾಯಿತೋಳ ಅಂತಹ ಸಾಧನಗಳನ್ನು ಬಳಸುವುದನ್ನು ನಿಷೇಧಿಸಿ, ಮಾನವರ ಹಾಗೆ ವರ್ತಿಸಬೇಡ ಎನ್ನುತ್ತಾಳೆ. ಗ್ರೀಕ್ ತತ್ವಜ್ಞಾನಿಗಳು ಸಹ ತಂತ್ರಗಳನ್ನು ಬಳಸುವ ಜ್ಞಾನ ಮಾನವಮಾತ್ರ ಗುಣವೆಂದು ವಾದಿಸುತ್ತಾರೆ. ಹಾಗಾಗಿ, ಮಾನವ ಬಳಸುವ ಸಾಧನಗಳಷ್ಟೇ ಅಲ್ಲದೇ, ಹೀಗೆ ವಸ್ತುಗಳನ್ನು ಬಳಸುವ ಹಿಂದಿನ ಮಾನವ ಪ್ರೇರಣೆ ಮತ್ತು ಕೌಶಲ್ಯವನ್ನು ಸಹ ತಂತ್ರಜ್ಞಾನವೆಂದು ಕರೆಯಲಾಗಿದೆ.

ನಮ್ಮಲ್ಲಿ ಸಾಮಾನ್ಯಜ್ಞಾನವಾಗಿಹೋಗಿರುವ ಒಂದು ಭಾವವೆಂದರೆ ತಂತ್ರಜ್ಞಾನವೆನ್ನುವುದು ಆಧುನಿಕ ಬೆಳವಣಿಗೆಯೆಂದು. ಆದರೆ, ಸ್ವಲ್ಪವೇ ಕೆದಕಹೋದವರೂ ಕೂಡ ಬಲುಬೇಗ ಈ ಸಾಮಾನ್ಯಜ್ಞಾನದ ನೇಪಥ್ಯ ತಲುಪಿದಂತೆ, ಭ್ರಮೆಯ ಪರದೆ ಸರಿದು, ತಂತ್ರಜ್ಞಾನದ ಪುರಾತತ್ವ ಗಮನಕ್ಕೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ತಂತ್ರಜ್ಞಾನದ ಕುರಿತು ನಿರ್ದಿಷ್ಟವಾದ ತತ್ವಶಾಸ್ತ್ರೀಯ ಬರಹಗಳು ಬಂದದ್ದು ಹತ್ತೊಂಬತ್ತನೇ ಶತಮಾನದಲ್ಲಿ. ಆದರೂ, ತಂತ್ರಜ್ಞಾನದ ಕುರಿತಾದ ಚಿಂತನೆಗೆ ಹಳೆಯ ಬೇರುಗಳಿವೆ. ಸುಪ್ರಸಿದ್ಧ ಗ್ರೀಕ ತತ್ವಜ್ಞಾನಿಗಳು ಕೂಡ ತಂತ್ರಜ್ಞಾನದ ಕುರಿತು ೨೩೦೦ ವರುಷಗಳಷ್ಟು ಹಿಂದೆಯೇ ಚರ್ಚಿಸಿದ್ದರು.

ಗ್ರೀಕ್ ತತ್ವಜ್ಞಾನಿಗಳು ಬಳಸುವ “ಟೆಕ್ನಿ” (techne) ಪದ ಟೆಕ್ನಾಲಜಿ ಪದದ ಮೂಲ. ನಾವು ಬಳಸುವ ತಂತ್ರಜ್ಞಾನ ಪದದ “ತಂತ್ರ”ದಂತೆಯೇ ಟೆಕ್ನಿ ಕೂಡ ಮಾನವರ ಹಲವು ಬಗೆಯ ಜ್ಞಾನಗಳಲ್ಲಿ ಒಂದು. ಅರಿಸ್ಟಾಟಲನ ವಿಂಗಡಣೆಯಲ್ಲಿ ಮಾನವ ಚಿಂತನೆಗೆ (dianoia/thought) ಐದು ಬಗೆಯ ಗುಣಗಳಿವೆ: ಎಪಿಸ್ಟೀಮ್, ಟೆಕ್ನಿ, ಫ್ರೊನೆಸಿಸ್, ನೌಸ್ ಮತ್ತು ಸೋಫಿಯಾ. ಇದರಲ್ಲಿ ಎಪಿಸ್ಟೀಮ್ ಎನ್ನುವುದು ವೈಜ್ಞಾನಿಕ ಜ್ಞಾನ; ಟೆಕ್ನಿ ಎನ್ನುವುದು ನಿರ್ಮಿತಿಗೆ ಅವಶ್ಯ ಜ್ಞಾನ; ಫ್ರೊನೆಸಿಸ್ ಎನ್ನುವುದು ವ್ಯಾವಹಾರಿಕ ಜಾಣ್ಮೆ; ನೌಸ್ ಎನ್ನುವುದು ಹುಟ್ಟುಗುಣ; ಸೋಫಿಯಾ ಎನ್ನುವುದು ವಿವೇಚನೆ.

(ಫ್ರಾನ್ಸಿಸ್ ಬೇಕನ್)

ಗ್ರೀಕರ “ಟೆಕ್ನಿ” ಪರಿಕಲ್ಪನೆ ಮಾನವ ನಿರ್ಮಿತ ವಸ್ತುಗಳು ಅಥವಾ ಇತರ ವಿದ್ಯಮಾನಗಳ ನಿರ್ಮಾಣಕ್ಕೆ ಅವಶ್ಯ ಕೌಶಲ್ಯಕ್ಕೆ ಸಂಬಂಧಿಸಿದ್ದಾಗಿದೆ. ಅರಿಸ್ಟಾಟಲನಂತ ಗ್ರೀಕ್ ತತ್ವಜ್ಞಾನಿಗಳು ತಂತ್ರಜ್ಞಾನದ ಕುರಿತಾಗಿ ಪ್ರತ್ಯೇಕ ಚಿಂತನೆ ನಡೆಸಿಲ್ಲ; ಇದಕ್ಕೆ ಸಂಬಂಧಿಸಿದ ಅವರ ಹೊಳಹುಗಳು ಜ್ಞಾನದ ವಿಧಗಳ ಕುರಿತಾದ ಚರ್ಚೆಯಲ್ಲಿ ನಮಗೆ ದೊರಕುತ್ತವೆ. ಮಾನವ ತನ್ನ ಅನುಕೂಲಗಳಿಗಾಗಿ ಸಾಧನಗಳ ನಿರ್ಮಿತಿ (craftsmanship) ಕೈಗೊಳ್ಳುತ್ತಾನೆ. ಈ ಬಗೆಯ ಪರಿಕರಗಳ ನಿರ್ಮಿತಿಯೂ ಕೂಡ ನಿಸರ್ಗದ ಅನುಕರಣೆಯಾಗಿರುತ್ತದೆ.

ಮಾನವನ ನಿರ್ಮಾಣ ಕೌಶಲ್ಯವು ಅನುಕರಣಶೀಲವಾದುದು ಮತ್ತು ಅದಕ್ಕೆ ಪೂರಕ ಮಾಹಿತಿ – ಬಡಗಿಯೊಬ್ಬ ಖುರ್ಚಿಯೊಂದನ್ನು ಮಾಡುವುದರ ಹಿಂದೆ ಇರುವ ಕೌಶಲ್ಯ ಅಥವಾ ಆ ಕೆಲಸಕ್ಕೆ ಅವಶ್ಯವಾದ ಮಾಹಿತಿ – ಕೂಡ ಜ್ಞಾನದ ವಿಧಗಳಲ್ಲಿ ಒಂದು ಎನ್ನುವ ಚರ್ಚೆ ಅರಿಸ್ಟಾಟಲನ ಕೃತಿಗಳಲ್ಲಿ ಇದೆ. ಇದಕ್ಕೆ ಹೋಲಿಸಬಹುದಾದ ಆದರೆ ಅದರದೇ ಭಿನ್ನ ಛಾಯೆಗಳುಳ್ಳ “ಟೆಕ್ನಿ” ಪದದ ವಿವರಣೆಗಳು ಪ್ಲೇಟೋ ಮತ್ತು ಇತರ ಗ್ರೀಕ್ ತತ್ವಜ್ಞಾನಿಗಳಲ್ಲಿಯೂ ನಮಗೆ ಸಿಗುತ್ತದೆ.

ಮಧ್ಯಯುಗದುದ್ದಕ್ಕೂ ತಂತ್ರಜ್ಞಾನದ ಕುರಿತಾಗಿ ಐರೋಪ್ಯ ಚಿಂತನೆ ಅನುಕೂಲ ಸಾಧನೆಯ ಪರಿಕರ ಎಂಬ ನಿಲುವನ್ನೇ ಹೊಂದಿತ್ತು. ಐರೋಪ್ಯ ಪುನರುತ್ಥಾನದ ಸಂದರ್ಭದಲ್ಲಿ ಮೊದಲಾದ ಕೈಗಾರಿಕಾ ವೃದ್ಧಿಯ ಹಿನ್ನೆಲೆಯಲ್ಲಿ ಸಹಜವಾಗಿಯೇ ತಂತ್ರಜ್ಞಾನದ ಬಗೆಗೆ ಆಸಕ್ತಿ ಚಿಗುರೊಡೆಯುವುದನ್ನು ನಾವು ಕಾಣುತ್ತೇವೆ. ಈ ಕಾಲಮಾನದಲ್ಲಿ, ತಂತ್ರಜ್ಞಾನವನ್ನು ಜ್ಞಾನವಿಧಾನವಾಗಿ ಮಾತ್ರವಲ್ಲ, ಮಾನವರ ಬದುಕಲ್ಲಿ ಅಭಿವೃದ್ಧಿ ಸಾಧಿಸಲು ಸಾಧನಗಳ ನಿರ್ಮಿತಿಯ ಕ್ಷೇತ್ರವನ್ನಾಗಿ ಕೂಡ ಕಾಣಲಾಗುತ್ತದೆ. ಫ್ರಾನ್ಸಿಸ್ ಬೇಕನ್ ಭೌತ ವಿಜ್ಞಾನ (natural philosophy) ಮತ್ತು ತಂತ್ರಜ್ಞಾನದ ಕುರಿತು ವಿಷದವಾಗಿ ಚರ್ಚಿಸುತ್ತಾನೆ. ಭೌತ ವಿಜ್ಞಾನ ಅವಲೋಕನ ಮತ್ತು ಪ್ರಯೋಗಗಳ ಮುಖೇನ ಜ್ಞಾನಾಭಿವೃದ್ಧಿ ಮಾಡುತ್ತದೆ. ಆದ್ದರಿಂದ ಭೌತ ವಿಜ್ಞಾನ ನಡೆಸುವ ಶೋಧನೆಗೆ ಸೂಕ್ತ ಉಪಕರಣಗಳ ನಿರ್ಮಿತಿ ಅವಶ್ಯ. ಭೌತ ವಿಜ್ಞಾನ ಮಾನವನ ಭೌತಿಕ ಪರಿಸರದ ಕುರಿತು ಜ್ಞಾನ ನಿರ್ಮಿಸಿದರೆ ಸಾಲದು, ಮಾನವ ಬದುಕು ಮತ್ತು ಸಮಾಜವನ್ನು ಸುಧಾರಿಸಲು ನೆರವಾಗಬೇಕು. ಹೀಗೆ, ಫ್ರಾನ್ಸಿಸ್ ಬೇಕನ್ ತನ್ನ ಪ್ರಾಯೋಗಿಕ ವಿಧಾನದ (empirical method) ರೂಪುರೇಷೆಗಳಲ್ಲಿ ತಂತ್ರಜ್ಞಾನದ ವಿಶ್ಲೇಷಣೆಯನ್ನು ಕೂಡ ಮಾಡುತ್ತಾನೆ.

ಗ್ರೀಕ್ ತತ್ವಜ್ಞಾನಿಗಳು ಸಹ ತಂತ್ರಗಳನ್ನು ಬಳಸುವ ಜ್ಞಾನ ಮಾನವಮಾತ್ರ ಗುಣವೆಂದು ವಾದಿಸುತ್ತಾರೆ. ಹಾಗಾಗಿ, ಮಾನವ ಬಳಸುವ ಸಾಧನಗಳಷ್ಟೇ ಅಲ್ಲದೇ, ಹೀಗೆ ವಸ್ತುಗಳನ್ನು ಬಳಸುವ ಹಿಂದಿನ ಮಾನವ ಪ್ರೇರಣೆ ಮತ್ತು ಕೌಶಲ್ಯವನ್ನು ಸಹ ತಂತ್ರಜ್ಞಾನವೆಂದು ಕರೆಯಲಾಗಿದೆ.

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ತಂತ್ರಜ್ಞಾನ ಸರ್ವೇಸಾಮಾನ್ಯ ಆಗಿ, ಮಾನವ ಬದುಕಿನ ಹಲವಾರು ನೆಲೆಗಳಲ್ಲಿ ಅಪರಿಹಾರ್ಯ ಘಟಕವಾಗುವುದನ್ನು ಕಾಣಬಹುದು. ಅಮೇರಿಕಾದ ತತ್ವಜ್ಞಾನಿ ಜಾನ್ ಡ್ಯೂಯಿ ಕೂಡ ಬೇಕನ್ನನಂತೆ ತಂತ್ರಜ್ಞಾನವನ್ನು ಶೋಧನೆಗೆ ಸಹಾಯವಾಗುವ ನಿರ್ಮಿತಿ ಮತ್ತು ವಿಧಾನಗಳ ಕೌಶಲ್ಯವೆಂದು ಪ್ರತಿಪಾದಿಸುತ್ತಾನೆ. ಹಾಗಾಗಿ ಅವನ ದೃಷ್ಟಿಯಲ್ಲಿ ಪರಿಸರದೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಮಾನವರು ಬಳಸುವ ಎಲ್ಲ ಬುದ್ಧಿವಂತ ತಂತ್ರಗಳು, ಉಪಕರಣಗಳು, ಮತ್ತು ಸಾಮಾಜಿಕ ಚಟುವಟಿಕೆಗಳೇ ತಂತ್ರಜ್ಞಾನ.

ಕ್ರಮೇಣ, ಇಪ್ಪತ್ತೊಂದನೇ ಶತಮಾನಕ್ಕೆ ನಾವು ತಲುಪುವ ಹಾಗೆ ಮಾನವ ವಿಶ್ವಕ್ಕೆ ಸಮಾಂತರವಾಗಿ ಯಂತ್ರವಿಶ್ವ ಎದ್ದುನಿಲ್ಲುವುದನ್ನು ನಾವು ನೋಡಬಹುದು. ಭೂಮಿಯ ಇತಿಹಾಸದಲ್ಲಿ ಈ ಶತಮಾನವನ್ನು ಹೇಗೆ ಮಾನವಯುಗ (anthroposcene) ಎಂದು ಕರೆಯಲಾಗಿದೆಯೋ, ಹಾಗೆಯೇ ಯಂತ್ರವಿಶ್ವದ (technium) ಆವಿಷ್ಕಾರವೂ ಮಹತ್ತರ ಘಟನೆಯಾಗಿದೆ. ಇಂದು ಮಾನವನ ಅಗತ್ಯಕ್ಕೆ ಬೇಕಾಗುವುದಕ್ಕಿಂತ ಹೆಚ್ಚಿನ ಉತ್ಪಾದನೆ ಮಾನವರು ಬಳಸುವ ಯಂತ್ರಗಳ ಅಗತ್ಯಕ್ಕಾಗಿ ಮಾಡಲಾಗುತ್ತದೆ. (ಈ ಯಂತ್ರವಿಶ್ವದ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಮುಂದಿನ ಕಾಲಂನಲ್ಲಿ ಚರ್ಚಿಸುತ್ತೇನೆ).

ನಾನು ಇಲ್ಲಿಯವರೆಗೆ ಕೊಟ್ಟಿರುವ ವಿವರಣೆಗಳು ಐರೋಪ್ಯ ಚಿಂತನೆಯ ಇತಿಹಾಸದಲ್ಲಿ ತಂತ್ರಜ್ಞಾನದ ಕುರಿತಾಗಿ ಇದ್ದ ಕೆಲವು ನಿಲುವುಗಳ ಕಿಂಚಿತ್ ಪರಿಚಯ (ಇಲ್ಲಿ, ತೀರಾ ಸ್ಥೂಲವಾಗಿ ವಿಷಯವನ್ನು ಸೂಚನಾತ್ಮಕವಾಗಿ ಪ್ರಸ್ತುತ ಪಡಿಸಿದ್ದೇನೆ. ಇವುಗಳ ಸ್ಪಷ್ಟ ಮತ್ತು ಸರಿಯಾದ ಚರ್ಚೆಗೆ ಬೇಕಾಗುವ ಅವಕಾಶ ಈ ಕಾಲಂನಲ್ಲಿಲ್ಲ. ನಮ್ಮ ನುಡಿಯಲ್ಲಿ ಅಂಥಹ ವಿಸ್ತೃತ ಚರ್ಚೆ ಆಗಬೇಕಾಗಿದೆ). ಇಲ್ಲಿ ನಾನು ಸೂಚಿಸ ಬಯಸುವುದೆಂದರೆ, ಐರೋಪ್ಯ ಚಿಂತನ ಕ್ರಮಗಳ ಒಂದು ಧಾರೆಯಲ್ಲಿ ತತ್ವಜ್ಞಾನದ ಕುರಿತಾದ ಚರ್ಚೆ ಮೂಲತಃ ತಂತ್ರಜ್ಞಾನವನ್ನು ಮಾನವ ಬಾಹ್ಯ ಸಂಗತಿಯಾಗಿ ನೋಡುತ್ತದೆ ಮತ್ತು ಮಾನವನ ಕಾರ್ಯಸಾಧನೆಗೆ ಅವಶ್ಯ ಪರಿಕರಗಳು ಅಥವಾ ಅವುಗಳನ್ನು ನಿರ್ಮಿಸುವ ಕೌಶಲ್ಯವೆಂಬುದಾಗಿ ಅರ್ಥೈಸಿಕೊಳ್ಳುತ್ತದೆ.

ಇನ್ನೊಂದು ಧಾರೆ ತಂತ್ರಜ್ಞಾನವು ಹೇಗೆ ಆಧುನಿಕ ಸಮಾಜಗಳಲ್ಲಿ ಸರ್ವೇಸಾಮಾನ್ಯವಾಗಿವೆ ಎನ್ನುವುದನ್ನು ಒತ್ತಿ ಹೇಳುತ್ತ, ನಾವು ಬಳಸುವ ಸಾಧನಗಳು ನಮ್ಮ ಅಸ್ತಿತ್ವವನ್ನೇ ರೂಪಿಸುತ್ತವೆ ಎಂದು ವಾದಿಸುತ್ತದೆ. ನಾವು ಹೇಗೆ ನಮ್ಮ ಕೆಲಸಗಳನ್ನು ಮಾಡುತ್ತೇವೆಯೋ ಅದು ನಾವೇನು, ನಾವ್ಯಾರು ಎಂದು ನಿರ್ದೇಶಿಸುತ್ತದೆ ಮತ್ತು ಮಾನವನಾಗುವುದೆಂದರೇನು ಎನ್ನುವುದನ್ನು ತೀರ್ಮಾನಿಸುತ್ತದೆ. ಜ್ಯಾಕ್ ಎಲುಲ್ ಯಂತ್ರಗಳು ಸ್ವಾಯತ್ತವಾಗಿಬಿಟ್ಟಿವೆ ಎಂದರೆ ಮಾರ್ಷಲ್ ಮ್ಯಾಕಲೂಹನ್ ಪ್ರಕಾರ ತಂತ್ರಜ್ಞಾನವು ಮಾನವರನ್ನು ಯಂತ್ರವಿಶ್ವದ ಕಾಮಾಸಕ್ತಿಯ ಅಂಗಗಳನ್ನಾಗಿಸಿವೆ. ಅಥವಾ ಈ ದೃಷ್ಟಿಕೋನದ ಪ್ರಕಾರ ತಂತ್ರಜ್ಞಾನವು ಒಂದು ಬಗೆಯಲ್ಲಿ ಮಾನವನ ಹತೋಟಿಗೆ ಹೊರತಾಗಿದ್ದು, ವಿಧಿಯಾಗಿ ಮಾರ್ಪಟ್ಟಿದೆ.

ಇದೇ ಬಗೆಯ ಋಣಾತ್ಮಕ ಅಥವಾ ಅಪಾಯದ ಚೌಕಟ್ಟಿನಲ್ಲಿ ಹೈಡೆಗರನು ತಂತ್ರಜ್ಞಾನವನ್ನು ವಿಶ್ಲೇಷಿಸುವುದನ್ನು ಹಿಂದಿನ ಕಾಲಂನಲ್ಲಿ ಚರ್ಚಿಸಿದ್ದೇವೆ. ಸಂಕ್ಷಿಪ್ತವಾಗಿ, ಹೈಡೆಗರನ ಪ್ರಕಾರ ಆಧುನಿಕ ಜಗತ್ತಿನಲ್ಲಿ ನಮ್ಮನ್ನು ನಾವು ಯಂತ್ರವಿಶ್ವಕ್ಕೆ ಬೇಕಾದ ಕಚ್ಛಾ ಪದಾರ್ಥಗಳಲ್ಲಿ ಒಂದಾಗಿ ಬದಲಾಯಿಸಿಕೊಳ್ಳುವತ್ತ ತಂತ್ರಜ್ಞಾನವು ನಮ್ಮನ್ನು ತಂದಿರಿಸಿದೆ. ಅವನ ದೃಷ್ಟಿಯಲ್ಲಿ ಆಧುನಿಕ ತಂತ್ರಜ್ಞಾನವು ಇಡೀ ಸಾಮಾಜಿಕ ವ್ಯವಸ್ಥೆಯನ್ನು ನಿಯಂತ್ರಿತ ಸಂಗತಿಯನ್ನಾಗಿ ಬದಲಾಯಿಸಿಬಿಟ್ಟಿದೆ; ಯಂತ್ರಗಳ ಈ ಸಂರಚನೆಯನ್ನು ಬದಲಿಸುವತ್ತ ನಾವು ಹೆಜ್ಜೆ ಇಡದಿದ್ದರೆ, ಮಾನವ ಮತ್ತು ಸಮಾಜಗಳು ಕೇವಲ ಉಪಕರಣಗಳಾಗಿ ಉಳಿಯುತ್ತವೆ. ಮುಖ್ಯವೇನೆಂದರೆ, ಯಂತ್ರಗಳು ಕೆಡುಕೆಂಬ ತೀರ್ಮಾನವಲ್ಲ, ಆದರೆ, ಅವುಗಳನ್ನು ಸದಾಕಾಲ ಬಳಸುವ ಆಯ್ಕೆ ಮಾಡುವಲ್ಲಿ ನಾವು ಪರಿಸರ ನಾಶ, ಜಾಗತಿಕ ತಾಪಮಾನದ ಹೆಚ್ಚಳ ಇತ್ಯಾದಿ ಇನ್ನೂ ಅನೇಕ ಅನಪೇಕ್ಷಿತ ಆಯ್ಕೆಗಳನ್ನೂ ಮಾಡುತ್ತಿರುತ್ತೇವೆ – ಅದು ಅಪಾಯಕಾರಿ ಎಂದು. ಆದ್ದರಿಂದ, ತಂತ್ರಜ್ಞಾನದೊಂದಿಗಿನ ಮಾನವನ ಸಂಬಂಧವನ್ನು “ಗುರಿಗಾಗಿ ದಾರಿ” ಎನ್ನುವ ಸಾಧನವಿಧಾನವಾಗಿ ನೋಡಿದರೆ ಸಾಲುವುದಿಲ್ಲ.

(ಆಲ್ಬರ್ಟ್ ಬೋರ್ಗ್ಮನ್)

ಇದೇ ರೀತಿಯ ಋಣಾತ್ಮಕ ದೃಷ್ಟಿಯಲ್ಲಿ ತಂತ್ರಜ್ಞಾನದ ವಿಶ್ಲೇಷಣೆ ಮಾಡುವ ಆಲ್ಬರ್ಟ್ ಬೋರ್ಗ್ಮನ್ ತಂತ್ರಜ್ಞಾನದ ಜೊತೆಗಿನ ಮಾನವ ಸಂಬಂಧವನ್ನು “ಸಾಧನ ಮಾದರಿ” (device paradigm) ಎಂಬ ಪರಿಕಲ್ಪನೆಯಡಿ ನೋಡುತ್ತ, ತಾಂತ್ರಿಕ ಸಮಾಜವೆನ್ನುವುದರ ಮೂಲ ನಿಯಮವೆಂದರೆ ದಕ್ಷತೆ (efficiency) ಎಂದು ವಾದಿಸುತ್ತಾನೆ. ಯಾವುದೇ ಕೆಲಸದಲ್ಲಿ ಹೆಚ್ಚು ಹೆಚ್ಚು ದಕ್ಷತೆಯನ್ನು ಗಳಿಸಲಿಕ್ಕಾಗಿ ಸಾಧನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಈ ಸಾಧನ ಮಾದರಿಯು ದಕ್ಷತೆಯಲ್ಲಿ ಸುಧಾರಣೆ ತಂದರೂ ಸಹ ನಮ್ಮನ್ನು ವಾಸ್ತವದಿಂದ ದೂರಾಗಿಸುತ್ತದೆ ಎಂದು ಅವನ ವಾದ.

ಮಲೆನಾಡಲ್ಲಿ ಹಿಂದಿನ ಕಾಲದಲ್ಲಿ ಇದ್ದ ಒಂದು ಆಚರಣೆಯನ್ನು ಇಲ್ಲಿ ಉದಾಹರಣೆಯಾಗಿ ನೋಡೋಣ. “ಚಕ್ಕಲಿ ಕಂಬಳ” ಎಂಬ ಈ ಪದ್ಧತಿಯಲ್ಲಿ, ಸಾಮಾನ್ಯವಾಗಿ ಮನೆಯ ಹೆಂಗಸರು ಮಾಡುವ ಕೆಲಸದಲ್ಲಿ, ಗಂಡಸರೂ ಕೂಡ ಜೊತೆಯಾಗುವುದಷ್ಟೇ ಅಲ್ಲ, ಊರವರು, ನೆಂಟರಿಷ್ಟರೆಲ್ಲ ಚಕ್ಕಲಿ ಮಾಡುವುದಕ್ಕೆ ನೆರವಾಗಲು ಸೇರುತ್ತಿದ್ದರು. ಹಾಗಾಗಿ, ಈ ಚಕ್ಕಲಿ ಕಂಬಳ ಎನ್ನುವ ಪದ್ಧತಿಯ ಗುರಿ ಒಂದು ತಿನಿಸನ್ನು ಮಾಡುವುದೇ ಆದರೂ, ತನ್ಮೂಲಕ ಜನರನ್ನು ಒಂದಾಗಿಸುವ ವಿಶೇಷತೆ ಹೊಂದಿದೆ. ಹಾಗಾಗಿ, ಇಲ್ಲಿ ಚಕ್ಕಲಿಯ ನಿರ್ಮಿತಿಯ ಜೊತೆಗೆ ಸಾಮಾಜಿಕ ಬೆಸುಗೆಯೂ ಸಾಧ್ಯವಾಗಿ ಗುರಿಸಾಧನೆಯ ದಕ್ಷತೆ ಕೇವಲ ಸಮಯ ಮತ್ತು ಪ್ರಮಾಣಕ್ಕೆ ಸೀಮಿತವಾಗಿಲ್ಲ. ಆದರೆ, ಆಧುನಿಕ ಜಗದಲ್ಲಿ, ಚಕ್ಕಲಿ ಮಾಡುವ ಯಂತ್ರಗಳು ಮಾನವನ ಮೇಲಿನ ಹೊರೆಯನ್ನು ಕಡಿಮೆ ಮಾಡಿ, ದಕ್ಷತೆಯನ್ನು ಹೆಚ್ಚಿಸಿದ್ದರೂ ಸಹ, ಆ ಪ್ರಕ್ರಿಯೆಯಲ್ಲಿ ಸಾಮಾಜಿಕ ಸಂದರ್ಭವೇ ಇಲ್ಲದಾಗಿದೆ. ಇದನ್ನೇ ಬೋರ್ಗ್ಮನ್ “ಫೋಕಲ್ ಥಿಂಗ್ಸ್” ಎನ್ನುತ್ತಾನೆ ಮತ್ತು ಜನರನ್ನು ಅರ್ಥಪೂರ್ಣ ಕಾರ್ಯಗಳಲ್ಲಿ ಒಂದಾಗಿಸುವ ಪ್ರಕ್ರಿಯೆಯ ಮೌಲ್ಯದ ಬಗೆಗೆ ನಮ್ಮ ಗಮನ ಸೆಳೆಯುತ್ತಾನೆ.

ತಂತ್ರಜ್ಞಾನ ತಂದಿರುವ ಅಪಾಯಗಳಲ್ಲಿ ಇದೂ ಒಂದು ಎನ್ನಬಹುದು. ತಂತ್ರಜ್ಞಾನದಲ್ಲಿ ಬೇಕಿರುವ ಸುಧಾರಣೆ ಎಂದರೆ ಅದು ಜನರನ್ನು ಒಗ್ಗೂಡಿಸುವಂತದ್ದಾಗಿರಬೇಕು, ಕೇವಲ ಹೆಚ್ಚು ಹೆಚ್ಚು ದಕ್ಷ ಅಥವಾ ಉತ್ತಮ – ಹೆಚ್ಚು ವೇಗಿ, ಹೆಚ್ಚು ಸಣ್ಣ, ಹೆಚ್ಚು ಸುಂದರ – ಅಲ್ಲ. ಯಂತ್ರಗಳು ಮಾನವರನ್ನು ಹೆಚ್ಚು ಹೆಚ್ಚು ಒಳಗೊಂಡಿರಬೇಕು, ಕಡಿಮೆ ಸ್ವಚಾಲಿತವಾಗಿರಬೇಕು ಎನ್ನುವುದು ಅವನ ವಾದ.

ಒಟ್ಟಾರೆ ನೋಡಿದರೆ, ಐರೋಪ್ಯ ಚಿಂತನಾ ಧಾರೆಗಳಲ್ಲಿ ತಂತ್ರಜ್ಞಾನದ ಕುರಿತಾಗಿ ಇರುವ ವ್ಯಾಖ್ಯೆಗಳನ್ನು ಹೀಗೆ ವಿಂಗಡಿಸಬಹುದು:
ತಾಂತ್ರಿಕ ಪ್ರಕ್ರಿಯೆ: ನಾವು ಇಚ್ಛಿಸುವ ಗುರಿಸಾಧನೆಗಾಗಿ ಭೌತಿಕ ಮತ್ತಿತರ ಬದಲಾವಣೆ ಸಾಧ್ಯವಾಗಿಸಲು ಬೇಕಾದ ಪ್ರಕ್ರಿಯೆಗಳು.
ತಾಂತ್ರಿಕ ಪದಾರ್ಥಗಳು: ತಾಂತ್ರಿಕ ಪ್ರಕ್ರಿಯೆಯನ್ನು ಸಾಧ್ಯವಾಗಿಸಲು ಬೇಕಾದ ಪರಿಕರಗಳು – ಉಪಕರಣ, ಸಾಧನ, ವ್ಯವಸ್ಥೆ, ವಿಧಾನ.
ತಾಂತ್ರಿಕ ಜ್ಞಾನ: ತಾಂತ್ರಿಕ ಪ್ರಕ್ರಿಯೆ, ತಾಂತ್ರಿಕ ಪದಾರ್ಥಗಳ ಹಿಂದಿರುವ ಅರಿವು.

ತಾಂತ್ರಿಕ ವ್ಯವಸ್ಥೆ: ವಿಶಾಲಾರ್ಥದಲ್ಲಿ ತಂತ್ರಜ್ಞಾನವೆಂದರೆ ಬಿಡಿಬಿಡಿಯಾಗಿ ತಾಂತ್ರಿಕ ಪ್ರಕ್ರಿಯೆಯೋ, ಪದಾರ್ಥಗಳೋ, ಯಂತ್ರಗಳೋ, ಉಪಕರಣಗಳೋ, ಅವುಗಳನ್ನು ನಿರ್ಮಿಸುವ ಅಥವಾ ಬಳಸುವ ಜ್ಞಾನವೋ ಅಲ್ಲ; ಬದಲಿಗೆ ಇವೆಲ್ಲವನ್ನೂ ಒಳಗೊಂಡ ಸಂದರ್ಭ. ಇದು ಭೌತಿಕ ಪದಾರ್ಥಗಳ ಜೊತೆಜೊತೆಗೆ ಮಾನವರ ಇಚ್ಛೆ, ಗುರಿ, ಪರಿಕಲ್ಪನೆಗಳನ್ನೂ ಒಳಗೊಂಡಿರುವ ವಿಸ್ತೃತ ಅರ್ಥ. ಆದ್ದರಿಂದ, ತಂತ್ರಜ್ಞಾನವನ್ನು ಕೇವಲ ಉಪಕರಣ ಎಂಬ ಸೀಮಿತಾರ್ಥದಲ್ಲಿ ನೋಡದೇ, ಅದರ ಬಳಕೆಯ ಹಿಂದಿರುವ ಉದ್ದೇಶ, ನಿರ್ಮಿತಿಯ ಕೌಶಲ್ಯ, ಬಳಕೆಯ ವಿಧಾನಗಳು, ಅವುಗಳ ನಿಯೋಜನೆಯ ಸಾಮಾಜಿಕ ಸಂದರ್ಭಗಳೆಲ್ಲವನ್ನು ಒಳಗೊಂಡ ಒಟ್ಟಾರೆ ವ್ಯವಸ್ಥೆ ಎಂದು ಅರ್ಥೈಸಬೇಕು. ಮಾನವರಿಂದಲೇ ನಿರ್ಮಿತವಾಗಿದ್ದರೂ ಮಾನವರನ್ನೇ ಮಾರ್ಪಡಿಸಬಲ್ಲಂತ ಯಂತ್ರಗಳು, ಮಾನವರ ಸಂಸ್ಕೃತಿ, ಜೀವನ ವಿಧಾನ, ಪರಿಸರವೆಲ್ಲವನ್ನೂ ರೂಪಿಸುತ್ತವೆ. ತಂತ್ರಜ್ಞಾನವು ಪರಿಕರಗಳಿಗೆ ಸೀಮಿತವಾಗಿರದೇ, ಮಾನವರ ಸಾಮಾಜಿಕ ಬಾಳ್ಮೆಯನ್ನು ಸಾಧ್ಯವಾಗಿಸುವ ಇಡೀ ಸಾಮಾಜಿಕ ಸಂಬಂಧಗಳ ಜಾಲವನ್ನೇ ಒಳಗೊಳ್ಳುತ್ತದೆಯಾದರೆ, ಮಾನವರು ಮತ್ತು ತಂತ್ರಜ್ಞಾನ ಒಂದನ್ನಿನ್ನೊಂದು ಸದಾ ರೂಪಿಸುವ ವ್ಯವಸ್ಥೆಯನ್ನೇ ನಾವು ಕಲ್ಪಿಸಿಕೊಳ್ಳಬೇಕಾಗುತ್ತದೆ. ಒಂದೆಡೆ, ಮಾನವನ ಹಿತಾಸಕ್ತಿ, ಚಟುವಟಿಕೆ, ಮತ್ತು ಸಾಮೂಹಿಕ ಏರ್ಪಾಡುಗಳನ್ನು ಹಿಗ್ಗಿಸಲು ತಂತ್ರಜ್ಞಾನಗಳನ್ನು ಆವಿಷ್ಕರಿಸಲಾಗುತ್ತದೆ; ಅವೇ ಇನ್ನೊಂದೆಡೆ ತಾಂತ್ರಿಕ ವ್ಯವಸ್ಥೆಯಡಿ ಮರುರೂಪಿಸಲ್ಪಡುತ್ತವೆ.


ಇಷ್ಟು ಹೇಳಿದ ಮೇಲೆ ನಮಗೆ ಈ ವಿಚಾರ ಸರಣಿಯಲ್ಲಿ ಮಾನವ ಮತ್ತು ತಂತ್ರಜ್ಞಾನವನ್ನು ನಾವು ಪ್ರತ್ಯೇಕಿಸಿ ನೋಡುತ್ತಿರುವುದು ಗಮನಕ್ಕೆ ಬರುತ್ತದೆ. ಇದರ ಪ್ರಕಾರ ಮಾನವ ಮೊದಲು, ತಂತ್ರಜ್ಞಾನ ತದನಂತರದ್ದು. ಅಥವಾ ಹೀಗೂ ಹೇಳೋಣ: ತಂತ್ರಜ್ಞಾನವೆನ್ನುವುದು ಮಾನವ ನಿರ್ದಿಷ್ಟ ಉದ್ದೇಶಗಳಿಗಾಗಿ ಮಾಡುವ ಏರ್ಪಾಡುಗಳ ಬಿಡಿಬಿಡಿ ಅಥವಾ ಒಟ್ಟಾರೆ ವ್ಯವಸ್ಥೆ. ಏನಿದ್ದರೂ, ಅದು ಮಾನವನ ಅಧೀನ, ಮಾನವನ ತರುವಾಯದ ಸಂಗತಿ. ಯಾಂತ್ರಿಕತ್ವ (technicity) ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸುವ ಬರ್ನಾರ್ಡ್ ಸ್ಟೀಗ್ಲರ್ ಎಂಬ ತತ್ವಜ್ಞಾನಿಯ ಪ್ರಕಾರ, ಮಾನವ ತಾನು ಮಾನವನಾಗುವುದೇ ತಂತ್ರಜ್ಞಾನದ ಮೂಲಕ. ಹಾಗಾಗಿ, ಮಾನವತ್ವ ಮತ್ತು ತಂತ್ರಜ್ಞಾನ ಅಖಂಡ ಪರಿಕಲ್ಪನೆಗಳು. ಯಾಂತ್ರಿಕತ್ವ ಮುಂದಿನ ಕಾಲಂನ ವಿಷಯವಾಗಲಿದೆ.