ಪಶ್ಚಿಮರು ಅನುಭವಿಸುತ್ತಿದ್ದಂಥ ಕಷ್ಟಗಳನ್ನು ನಮ್ಮಲ್ಲಿ ಯಾರೂ ಅನುಭವಿಸಿಯೇ ಇಲ್ಲವೇ? ಇದ್ದಾರೆ ಆದರೆ ಇಲ್ಲಿನವರ ಕಷ್ಟಗಳ ಕಾರಣೀಕರ್ತನು ಬೇರೆ ಅಲ್ಲಿನ ಕಷ್ಟಗಳ ಕಾರಣೀಕರ್ತನು ಬೇರೆ. ಅಲ್ಲಿ ಶಿಕ್ಷೆ ಕೊಡುತ್ತಿದ್ದುದು ಪ್ರಕೃತಿ. ಪ್ರಕೃತಿ ಎಲ್ಲಾರಿಗೂ ಒಂದೇ ಮಾದರಿಯಲ್ಲಿ ಒಂದೇ ಮೊತ್ತದಲ್ಲಿ ಶಿಕ್ಷೆ ಕೊಡುವಂತಹ ವಿಶಿಷ್ಟ ಚಿತ್ರಗುಪ್ತ. ಶಿಕ್ಷೆ ಅನುಭವಿಸುತ್ತಿರುವ ಮನುಷ್ಯ ಯಾಕೆ ಶಿಕ್ಷೆ ಕೊಟ್ಟೆ ಅಂತ ಪ್ರಶ್ನಿಸಿದರೆ ಉತ್ತರ ಕೊಡುವವರಿರುವುದಿಲ್ಲ. ಯಾಕೆಂದರೆ ಅದಕ್ಕೆ ಉತ್ತರವೇ ಇಲ್ಲ. ಪ್ರಕೃತಿಯನ್ನು ಪ್ರಶ್ನಿಸುವುದು ಗೋಡೆಗೆ ತಲೆ ಚಚ್ಚಿಕೊಂಡಂತೆ. ವಿಚಿತ್ರ ಏನೆಂದರೆ ಮನುಷ್ಯನಿಗೆ ತನ್ನ ಕಷ್ಟಗಳಿಗೆ ವಿವರಣೆ ಸಿಕ್ಕಿಬಿಟ್ಟರೆ ಯಾಕೆ ಅನ್ನುವುದಕ್ಕೆ ಉತ್ತರ ಸಿಕ್ಕಿಬಿಟ್ಟರೆ ಕಷ್ಟ ಪರಿಹಾರವಾದಷ್ಟೇ ನೆಮ್ಮದಿ ಸಿಗುತ್ತದೆ.
ಮಧುಸೂದನ್ ವೈ ಎನ್ ಅಂಕಣ

 

ನಿಜಕ್ಕೂ ಮನುಷ್ಯನ ನಂಬಿಕೆಗಳು, ಮೌಲ್ಯಗಳು, ಧರ್ಮಗಳು, ಸಾಹಿತ್ಯ ಇವೆಲ್ಲ ಅವನ ಸ್ವಂತ ಆಲೋಚನಾ ಶಕ್ತಿಯಿಂದಲೇ ಹುಟ್ಟಿದ್ದವಾ? ಅಥವಾ ಬಾಹ್ಯ ಜಗತ್ತಿನ ಆಗುಹೋಗುಗಳಿಗೆ ಅವನಲ್ಲಿ ಉಂಟಾಗುವ ಪ್ರತಿವರ್ತನೆ(reflex) ಮಾತ್ರನಾ? ಅಂದರೆ ನಾವು ಬಹಳಷ್ಟು ಹೊಗಳುವ ಮನಷ್ಯನ ಆಲೋಚನಾ ಶಕ್ತಿ ಅನ್ನೋದೆಲ್ಲ ಉತ್ಪ್ರೇಕ್ಷೆಯಾ? ನಂಬಿಕೆ ಮೌಲ್ಯ ಸಾಹಿತ್ಯ ಇವಕ್ಕೆಲ್ಲ ನಾವಿರುವ ಭೌಗೋಳಿಕ ಹಾಗೂ ಪ್ರಾಕೃತಿಕ ಸ್ಥಿತಿಗತಿಗಳೇ ಮೂಲಕ ಕಾರಣ ಅನ್ನೋದು ನನ್ನ ಅನುಮಾನ.

ಪ್ರಕೃತಿಯು ಮನುಷ್ಯನನ್ನು ಭೂ ಮಧ್ಯ ರೇಖೆಯ ಸುತ್ತಮುತ್ತ ತನ್ನ ಮಡಿಲಲ್ಲಿಟ್ಟು ಸಾಕುತ್ತದೆ. ಅದರಿಂದ ಮೇಲೆ ಕೆಳಗೆ ಸರಿದಂತೆಲ್ಲ ಅದು ಮಾನವನ ಬದುಕಿಗೆ ಪ್ರತಿರೋಧ ಒಡ್ಡುತ್ತ ಹೋಗುತ್ತದೆ. ವಿಜ್ಞಾನದ ಪ್ರಕಾರ ಮಾನವನ ಉಗಮ ಆಫ್ರಿಕಾದಲ್ಲಾಗಿದ್ದು; ಆನಂತರ ಅವನು ಸಮುದ್ರ ದಂಡೆಯ ಅಂಚಿನಲ್ಲಿ ನಡೆಯುತ್ತ ಅಲ್ಲಲ್ಲೆ ನೆಲೆಗೊಂಡು ಅವನ ಮರಿಮಕ್ಕಳು ಮುಂದೆ ನಡೆಯುತ್ತ ಬೇರೆ ಬೇರೆ ಭೂಭಾಗಗಳನ್ನು ಪ್ರವೇಶಿಸುತ್ತ ಇಡೀ ಭೂಮಂಡಲವನ್ನು ಆವರಿಸಿದ್ದಾನೆ. ಭೂಮಧ್ಯೆ ರೇಖೆಯು ಆಫ್ರಿಕಾ ಖಂಡದ ಹೊಟ್ಟೆ ಮೇಲೆ ಹರಿದಿದೆ. ಗಣೇಶನ ಹೊಟ್ಟೆ ಸುತ್ತಿದ ಹಾವಿನಂತೆ. ಇದೇ ಕಾರಣಕ್ಕೆ ಜನಸಂಖ್ಯೆಯು ರೇಖೆಯ ಸುತ್ತಮುತ್ತಲೇ ಸಾಂದ್ರೀಕರಣಗೊಂಡಿದೆ. ದೂರ ಸರಿದಂತೆಲ್ಲ ಜನ ವಿರಳಗೊಳ್ಳುತ್ತ ಹೋಗುತ್ತಾರೆ.

ಕೆನಡಾದ, ರಶಿಯಾದ ಬಹುತೇಕ ಭೂಭಾಗದಲ್ಲಿ ಮನುಷ್ಯ ವಾಸಿಸಲು ಅಸಾಧ್ಯ. ಯೂರೋಪ್ ಅಮೇರಿಕಾದಲ್ಲಿ ಜನ ವಿರಳ. ತುಂಬಿ ತುಳುಕುತ್ತಿರುವುದೆಂದರೆ ದಕ್ಷಿಣ ಏಶಿಯಾದ ಉತ್ತರ ಆಫ್ರಿಕಾದ ದೇಶಗಳು. ನಾನು ಕೆನಡಾಗೆ ಭೇಟಿ ಕೊಟ್ಟಾಗ ಅಲ್ಲೊಬ್ಬ ರಶಿಯನ್ ಸಹೋದ್ಯೋಗಿ ಇದ್ದ. ಅವ ಹೇಳ್ತಿದ್ದ, In your land, if you spit on the street, something will grow out of it ಅಂತ. ಅಂದರೆ ನಮ್ಮ ದೇಶದಲ್ಲಿ ಎಲ್ಲಾದರೂ ಉಗಿದರೆ ಆ ಉಗುಳಲ್ಲೇ ಏನೋ ಒಂದು ಹುಟ್ಟಿಬಿಡತ್ತೆ ಅಂತ. “ಯೋಗ”(ದೈಹಿಕದ್ದಲ್ಲ) ಧರ್ಮ ಪಾಲಿಸುತ್ತಿದ್ದ ಆತ ಅಂಡಾಣು – ವೀರ್ಯಾಣುಗಳನ್ನು ಯಾವ ರೀತಿ ಬೆರೆಸಿದರೆ ಹುಟ್ಟುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ನಿರ್ಧರಿಸಬಹುದು ಎಂದು ತಾನೇ ಕಂಡುಕೊಂಡಿದ್ದ ಥಿಯರಿಯನ್ನ ಮುಂದಿಡುತ್ತಿದ್ದ, ಆತನಿಗಿದ್ದ ಮಕ್ಕಳು ಎಂತವೆಂದು ನಾನು ಇಲ್ಲಿ ಹೇಳೋದಿಲ್ಲ.

ಜಗತ್ತಿನಲ್ಲಿ ಎಲ್ಲ ಕಡೆ pattern ಅನ್ನೋದಿರುತ್ತದೆ. ಆ pattern ನೋಡಿಕೊಂಡು ನಾವು ಒಂದು ಗ್ರಹಿಕೆಗೆ ಬರಲು ಸಾಧ್ಯ. ಜ್ಯೋತಿಷ್ಯ ಶಾಸ್ತ್ರ ಹುಟ್ಟಿರುವುದು ಹೀಗೇ ಇರಬೇಕು. ಮದುವೆಗೆ ಇಂತಿಂಥ ಕಾಲಮಾನ ಅಂತ ಫಿಕ್ಸ್ ಆಗಿ ಅದರ ಮೂಲಕ ಹುಟ್ಟೋ ಮಕ್ಕಳೂ ನಿರ್ದಿಷ್ಟ ಸಮಯದಲ್ಲೇ ಹುಟ್ಟಿ ಆ ಸಮಯದಲ್ಲಿ ಬಿಸಿಲಿರತ್ತೋ ಛಳಿಯಿರತ್ತೋ ಬೆಳೆ ಬಂದಿರತ್ತೋ ಹಸಿವಿರತ್ತೋ ಅನ್ನೋದರ ಮೇರೆಗೆ ಮಗು ದೇಖರೇಖೆ ನಿರ್ಧಾರಗೊಂಡು ಅದು ಮಗು ಮನಸ್ಸಿನ ಮೇಲೆ ಪರಿಣಾಮ ಬೀರಿ ಅಂತಹ ಮಕ್ಕಳ ಗುಣಗಳ pattern ಮೇರೆಗೆ ಜ್ಯೋತಿಷ್ಯ ಶಾಸ್ತ್ರ ಬರೆದಿರಬಹುದು. ಆ ಕಾಲಕ್ಕೆ ಅದು ಅನುಭವಕ್ಕೆ ಹತ್ತಿರವಾಗಿರಬಹುದು. ಆಗಿನ ಕಾಲದ್ದನ್ನೇ ಈ ಗ್ಲೋಬಲೈಸ್ಡ್ ಕಾಲಕ್ಕೂ ಅನ್ವಯಿಸಿಕೊಂಡು ಮೂರ್ಖರನ್ನಾಗಿಸುವುದು ಸ್ವತಃ ಮೂರ್ಖರಾಗುವುದು ವಿಝೃಂಭಣೆಯಿಂದ ಸಾಗಿದೆ.

ನಿಮಗೆ ತಿಳಿದಿರಲಿ, ರಾಶಿಫಲವನ್ನು ಹೆಚ್ಚಾಗಿ ಗಮನಿಸುವುದು ಪಾಶ್ಚಿಮಾತ್ಯರೇ. ಆದರೆ ಅಲ್ಲಿ ಅವರು ತಮ್ಮ ಮೂರ್ಖತನಕ್ಕೆ ತಾವೇ ಹೊಣೆಗಾರರಾಗಿರುತ್ತಾರೆ. ಇಲ್ಲಿ ಅದಕ್ಕೆಂದು ಬೇರೆ ಕಿಣ್ವಗಳಿವೆ. ಹೀಗಾಗಿ ಸಾಮಾನ್ಯವಾಗಿ ದಂಪತಿಗಳಿಗೆ ಮೊದಲು ಹೆಣ್ಣು ಹುಟ್ಟಿ ಆಮೇಲೆ ಗಂಡು ಹುಟ್ಟಿ ಹೆಚ್ಚಾಗಿ ಅಕ್ಕ-ತಮ್ಮರ pattern ಕಾಣಿಸಿಕೊಂಡು, ಅರೆ ಈತ ಹೇಳಿದ್ದು ಖರೆ ಇರಬಹುದುಲ್ಲಾ ಅನಿಸಿಬಿಡಬಹುದು. ಬರೀತ ಬರೀತ ಒಳ್ಳೆ ಸಂಧಿಗ್ಧತೆಗೆ ಸಿಕ್ಕಾಕಿಕೊಂಡೆ ನೋಡಿ, ಇಲ್ಲೀಗ ನಾನು ಅವ ಹೇಳಿದ್ದು ಸತ್ಯ ಅಂತಂದರೆ ವಿಜ್ಞಾನಕ್ಕೆ ದ್ರೋಹ ಬಗೆದಂತೆ. ಅವ ಹೇಳಿದ್ದು ಸುಳ್ಳು ಅಂತಂದರೆ ನಾನೆಲ್ಲೋ ಟ್ರೈ ಮಾಡಿ ಸಾಧ್ಯವಾಗದೆ ಅದು ಸುಳ್ಳೆಂದು ಸಾಬೀತುಪಡಿಸಿಕೊಂಡಿರಬಹುದು ಅಂತ ನೀವು ಸಂಶಯಿಸಬಹುದು. ಇರಲಿ, ನಿಮ್ಮ ಮುದಕ್ಕೆ ಒಂದು ಪಾರಡಾಕ್ಸ್ ಸನ್ನಿವೇಶ ಎದುರಿಗಿಟ್ಟೆ. ಸತ್ಯವೇನೆಂದರೆ ಆತ ಹೇಳಿದ್ದು ಈ pattern ಅನುಸಾರ ಕೊಂಚ ಅನುಮಾನ ಹುಟ್ಟಿಸಿತೇ ಆದರೂ ಆಮೇಲೆ ಸಾಕಷ್ಟು ಅದರ ಬಗ್ಗೆ ಓದಿ ತಿಳಿದುಕೊಂಡು ಅದು ಅಪ್ಪಟ ಅವನ ಕಲ್ಪನೆ ಮಾತ್ರ ಎಂದು ರುಜುವಾತು ಮಾಡಿಕೊಂಡೆ. ಅದೆಲ್ಲ ಬಿಡಿ, ಏನು ಹೇಳ್ತಿದ್ದೆನಂದರೆ ನನ್ನ ಹೆಂಡತಿಯ ಪಿಯೆಚ್ಡಿ ಗೈಡ್ ಫ್ರಾನ್ಸ್ ನವರಿದ್ದರು. ಆಕೆ ತನ್ನ ಎರಡೂ ಮಕ್ಕಳ ಬಸುರಿತನವನ್ನು ಭಾರತಕ್ಕೆ ಬಂದು ಮುಗಿಸಿಕೊಂಡಿದ್ದರು. ಇದು Fertile land ಅನ್ನೋದಕ್ಕೆ ಇದನ್ನೆಲ್ಲ ಹೇಳಬೇಕಾಯಿತು. ಈ ಭೂಭಾಗ ಮನುಷ್ಯ ಬದುಕು ರೂಪಿಸಿಕೊಳ್ಳಲಿಕ್ಕೆ ಅತ್ಯಂತ ಅನುಕೂಲಕರ ವಾತಾವರಣ ಉಳ್ಳಂತದ್ದು. ಅದಕ್ಕಾಗೆ ನಾವು ಇಷ್ಟೊಂದು ಪಿತಗುಡುವುದು.

ಅದೇ ನೀವು ರೇಖೆಯಿಂದ ಉತ್ತರಕ್ಕೆ ಚಲಿಸಿದಂತೆಲ್ಲ ಪ್ರಕೃತಿಯ ರೌದ್ರತೆಗಳು ಶುರುವಾಗುತ್ತವೆ. ವಿಪರೀತ ಛಳಿ, ಮನುಷ್ಯ ಅಲ್ಲಿ ಬದುಕಲಿಕ್ಕೆ ದಿನನಿತ್ಯ ಪ್ರಕೃತಿಯ ವಿರುದ್ಧ ಸೆಣಸಬೇಕಾಗುತ್ತದೆ. ಆದ್ದರಿಂದ ಅಲ್ಲಿ ಜನಸಂಖ್ಯೆ ಸಮೃದ್ಧಿಯಾಗಿಲ್ಲ. ನೀವು ಅಲ್ಲಿನ ಮ್ಯೂಸಿಯಂಗಳಿಗೆ ಭೇಟಿ ಕೊಟ್ಟರೆ ಅವರ ಅನಾದಿ ಪುರುಷ ಬದುಕಲಿಕ್ಕೆ ಹೇಗೆಲ್ಲ ಹೋರಾಡಿರಬಹುದು ಎನ್ನುವ ಕಲ್ಪನೆ ಸಿಗುತ್ತದೆ. ಅಷ್ಟೊಂದು ಕೊರೆಯುವ ಛಳಿಯಲ್ಲಿ ಆತ ಯಾವಾಗಲೂ ಯಾವುದಾದರೂ ಒಂದು ಆಶ್ರಯದಲ್ಲಿರಬೇಕಾಗುತ್ತದೆ. ಅಲ್ಲಿ ಜನ ಒಂದೋ ಮನೆಯಲ್ಲಿರುತ್ತಾರೆ, ಇಲ್ಲಾ ಆಫೀಸಲ್ಲಿ, ಇಲ್ಲವೇ ಕಾರಿನೊಳಗಡೆ. ಬೀದಿಗಳಲ್ಲಿ ಸಮಯ ಕಳೆಯುವಂತಹ ವಾತಾವರಣವೇ ಅಲ್ಲಿಲ್ಲ. ಬೇಸಿಗೆಯಲ್ಲಿ ಮಾತ್ರ ಸ್ವಲ್ಪ ಹೊರಗೆ ಅಡ್ಡಾಡ್ತಾರೆ.

ನಾನು ಕೆನಡಾಕ್ಕೆ ಹೋಗಿದ್ದಾಗ ದಿನವಿಡೀ ಬಸ್ ಸ್ಟಾಂಡಿನಲ್ಲಿ ಕೂತರೂ ನೋಡಲಿಕ್ಕೆ ನಾಲ್ಕಾರು ಜನ ಸಿಗುತ್ತಿರಲಿಲ್ಲ. ಎರಡು ತಿಂಗಳು ಒಬ್ಬನೇ ಇರಬೇಕಾಗಿ ಬಂದಿದ್ದರಿಂದ ತಲೆಕೆಟ್ಟು ಜನ ನೋಡಲಂತನೇ ಬೀದಿ ಬೀದಿ ಅಲೆಯುತ್ತಿದ್ದೆ. ಬಸ್ ಸ್ಟಾಂಡುಗಳಲ್ಲಿ ಲಾಗ ಹಾಕುತ್ತಿದ್ದೆ.

ಅನಾದಿ ಕಾಲದಿಂದಲೂ ಅಲ್ಲಿನ ಮನುಷ್ಯ ಛಳಿಯ ಕಾರಣಕ್ಕಾಗಿ ಬಹಳಷ್ಟು ಸಮಯವನ್ನು ಮನೆಯ ಒಳಗೇನೆ ಕಳೆದಿರಬೇಕು. ಅಂದರೆ ತಾನೊಬ್ಬನೇ, ಹೆಚ್ಚೆಂದರೆ ತನ್ನದಷ್ಟೇ ಕುಟುಂಬದವರೊಂದಿಗೆ. ಆತ ದಿನವಿಡೀ ಸಾಮೂಹಿಕವಾಗಿ ಕೂತು ಹರಟೆ ಹೊಡೆದಿರುವುದು ಅನುಮಾನ. ದೀರ್ಘವಾದ ಛಳಿಗಾಲ ಪೂರ್ತಿ ಆತ ಹೊರಗೇ ಬಂದಿರಲಾರ ಅನ್ನೋದು ನನ್ನ ಅನಿಸಿಕೆ. ಅದೇ ನಮ್ಮ ದೇಶದಲ್ಲಿ ಸೆಖೆಯಿಂದ ಒಳಗಿರಲಾರದೆ ಹಜಾರಕ್ಕೆ ಬರುತ್ತೇವೆ. ಚಾಪೆ ಹರವಿಕೊಂಡು ಬೆಳದಿಂಗಳಲ್ಲಿ ಹರಟೆ ಹೊಡೆಯುತ್ತೇವೆ. ಅರಳಿ ಮರದ ಕಟ್ಟೆ ಕೆಳಗೆ ಸಮುದಾಯ ಸೇರುತ್ತದೆ. ಹೀಗಾಗಿ ಸುತ್ತ ಮುತ್ತ ಎಲ್ಲರೂ ಹಾಗೇ ಮಾಡಬೇಕಾಗಿ ಬಂದಾಗ ನಮ್ಮದು ಸಾಮೂಹಿಕ ಜೀವನವಾಗಿಬಿಡುತ್ತದೆ. “ಪ್ರೈವಸಿ” ಅನ್ನೋದಿರೋಲ್ಲ. ಆದ್ದರಿಂದ ಪ್ರೈವಸಿ ನಮ್ಮ ಮೌಲ್ಯವಾಗುವುದಿಲ್ಲ.

ಅದೇ ಪಾಶ್ಚಿಮಾತ್ಯರಿಗೆ ಪ್ರೈವಸಿ ಬಹಳ ಮುಖ್ಯ. ಹೆಚ್ಚು ಹೊತ್ತು ಸಾಮೂಹಿಕವಾಗಿ ಕಾಲ ಕಳೆಯುವುದು ಅವರಿಗೆ ಕಿರಿಕಿರಿ ಅನ್ನಿಸುತ್ತದೆ. ನಮ್ಮ ಜನ ಪಿಕ್ ನಿಕ್ ಗೆಂದು ಜಂಗುಳಿ ಇರೋ ಕಡೆ ಹೋಗ್ತಾರೆ. ಅಲ್ಲಿನವರು ಏಕಾಂತ ಅರಸಿ ಹೋಗ್ತಾರೆ. ಸಾವಿರಾರು ವರ್ಷಗಳಿಂದ ಒಂಟಿತನಕ್ಕೆ ರೂಢಿಸಿಕೊಂಡಿರುವ ಮನುಷ್ಯನ ಮನಸ್ಥಿತಿ ಹೇಗಿರುತ್ತದೆ? ಅದು ಹೇಗೆ ಯೋಚನೆ ಮಾಡುತ್ತದೆ?. ಅದು ಕಲೆಯಲ್ಲಿ ಹೇಗೆ ಬಿತ್ತರಗೊಂಡಿರುತ್ತದೆ? ಅವನ ಫಿಲಾಸಫಿ ಏನು ಹೇಳುತ್ತದೆ?

ನೀವು ರೇಖೆಯಿಂದ ಉತ್ತರಕ್ಕೆ ಚಲಿಸಿದಂತೆಲ್ಲ ಪ್ರಕೃತಿಯ ರೌದ್ರತೆಗಳು ಶುರುವಾಗುತ್ತವೆ. ವಿಪರೀತ ಛಳಿ, ಮನುಷ್ಯ ಅಲ್ಲಿ ಬದುಕಲಿಕ್ಕೆ ದಿನನಿತ್ಯ ಪ್ರಕೃತಿಯ ವಿರುದ್ಧ ಸೆಣಸಬೇಕಾಗುತ್ತದೆ. ಆದ್ದರಿಂದ ಅಲ್ಲಿ ಜನಸಂಖ್ಯೆ ಸಮೃದ್ಧಿಯಾಗಿಲ್ಲ. ನೀವು ಅಲ್ಲಿನ ಮ್ಯೂಸಿಯಂಗಳಿಗೆ ಭೇಟಿ ಕೊಟ್ಟರೆ ಅವರ ಅನಾದಿ ಪುರುಷ ಬದುಕಲಿಕ್ಕೆ ಹೇಗೆಲ್ಲ ಹೋರಾಡಿರಬಹುದು ಎನ್ನುವ ಕಲ್ಪನೆ ಸಿಗುತ್ತದೆ.

ನಮ್ಮಲ್ಲಿ ದೇವಸ್ಥಾನಗಳಲ್ಲಿ ಗೋಪುರಗಳ ಮೂಲೆ ಮೂಲೆಗಳಲ್ಲಿ ಹುಲಿ ಸಿಂಹಗಳಿರುವಂತೆ ಅಲ್ಲಿಯೂ ಅಲ್ಲಿನ ಚರ್ಚ್ ಗಳಲ್ಲಿ ಇಂತಹ ಮೂರ್ತಿಗಳಿವೆ. ಆದರೆ ನಮ್ಮ ಹುಲಿ ಸಿಂಹಗಳು ರೋಷದಿಂದ ದರ್ಪದಿಂದ ಗರ್ಜಿಸುತ್ತಿದ್ದರೆ ಅಲ್ಲಿನ ಹುಲಿ ಸಿಂಹಗಳು ಜರ್ಜರಿತ ಮನಸ್ಥಿತಿಯಿಂದ ರೋಧಿಸುತ್ತಿರುವಂತೆ ಭಾಸವಾಗುತ್ತದೆ. ಅಲ್ಲಿನ ಚಿತ್ರಕಲೆ ಶಿಲ್ಪಕಲೆಗಳಲ್ಲಿ ಮನುಷ್ಯನ ಕಷ್ಟಗಳು ಒಂಟಿತನ ಹೋರಾಟ ದಾರುಣತೆ ಇವೇ ಮೊದಲಾದವು ಭಿತ್ತರಗೊಂಡಿವೆ. ನಮ್ಮಲ್ಲಿನ ಚಿತ್ರಕಲೆ ಶಿಲ್ಪಕಲೆಗಳು ಯುದ್ಧ ಕಾಮ ಸಂಭ್ರಮಗಳ ಆಚರಣೆಗಳಿಂದ ತುಂಬಿವೆ. ಅಲ್ಲಿನ ತತ್ವಜ್ಞಾನಿಗಳು ಬದುಕಿಗೆ ಅರ್ಥವಿಲ್ಲ, ಬದುಕೆಂದರೆ ನಿರಂತರ ಗೋಳು ಮಾತ್ರ ಎಂದು ಮಿಥ್ ಆಫ್ ಸಿಸಿಫಸ್ ಗಳಂತಹ ಉದಾಹರಣೆಗಳ ಮೂಲಕ ಸಾರುತ್ತಿದ್ದರೆ ನಮ್ಮ ತತ್ವಗಳು ಬದುಕಿಗೆ ಅರ್ಥವಿದೆ, ಇಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರವಿದೆ ಎಂದು ನೆಮ್ಮದಿಕರ ವ್ಯಾಖ್ಯಾನ ಒದಗಿಸುತ್ತ ನಮ್ಮ ಜೀವನವು ಪೂರ್ವ ನಿರ್ಧಾರಿತ, ದೇವ ನಿರ್ಧಾರಿತ ಎನ್ನುವಂತೆ ಜನಕ್ಕೆ ಸಾಂತ್ವನ ಹೇಳುತ್ತವೆ.

ನನಗನ್ನಿಸಿದಂತೆ ಅಸಂಗತವಾದ ಭಾರತದಲ್ಲಿ ಎಂತಹ ತತ್ವಜ್ಞಾನಿಗೂ ಹೊಳೆಯಲಿಕ್ಕೆ ಅವಕಾಶವಿರಲಿಲ್ಲ ಅಂತ. ಅಂದರೆ ಇಲ್ಲಿನ ಬದುಕನ್ನು ಬಾಳಿ ಅಲ್ಲಿನ ಕ್ಷೋಭೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ ಅಂತ. ಅದೇ ರೀತಿ ಇಲ್ಲಿನ ಆಧ್ಯಾತ್ಮ ಅಲ್ಲಿನವರೊಳಗೆ ಸೃಜಿಸಲು ಸಾಧ್ಯವಿರಲಿಲ್ಲ. ಬುದ್ಧನ ವೈರಾಗ್ಯ ಅವನ ಅತೀ ಶ್ರೀಮಂತಿಕೆಯಿಂದ ಹುಟ್ಟಿರುವುದು. ಒಂದೊಮ್ಮೆ ಆತ ಬಡವನಾಗಿದ್ದರೆ ಆಸೆಯೇ ದುಖಃಕ್ಕೆ ಮೂಲ ಕಾರಣ ಎನ್ನಲು ಅವನಿಗೆ ಅನುಭವ ಸಹಾಯ ಮಾಡುತ್ತಿರಲಿಲ್ಲ. ಬಡವನ ಆಸೆಗಳು ಆಸೆಗಳಲ್ಲ, ಅಗತ್ಯಗಳು.

ಹಾಗಾದರೆ ಪಶ್ಚಿಮರು ಅನುಭವಿಸುತ್ತಿದ್ದಂಥ ಕಷ್ಟಗಳನ್ನು ನಮ್ಮಲ್ಲಿ ಯಾರೂ ಅನುಭವಿಸಿಯೇ ಇಲ್ಲವೇ? ಇದ್ದಾರೆ ಆದರೆ ಇಲ್ಲಿನವರ ಕಷ್ಟಗಳ ಕಾರಣೀಕರ್ತನು ಬೇರೆ ಅಲ್ಲಿನ ಕಷ್ಟಗಳ ಕಾರಣೀಕರ್ತನು ಬೇರೆ. ಅಲ್ಲಿ ಶಿಕ್ಷೆ ಕೊಡುತ್ತಿದ್ದುದು ಪ್ರಕೃತಿ. ಪ್ರಕೃತಿ ಎಲ್ಲಾರಿಗೂ ಒಂದೇ ಮಾದರಿಯಲ್ಲಿ ಒಂದೇ ಮೊತ್ತದಲ್ಲಿ ಶಿಕ್ಷೆ ಕೊಡುವಂತಹ ವಿಶಿಷ್ಟ ಚಿತ್ರಗುಪ್ತ. ಶಿಕ್ಷೆ ಅನುಭವಿಸುತ್ತಿರುವ ಮನುಷ್ಯ ಯಾಕೆ ಶಿಕ್ಷೆ ಕೊಟ್ಟೆ ಅಂತ ಪ್ರಶ್ನಿಸಿದರೆ ಉತ್ತರ ಕೊಡುವವರಿರುವುದಿಲ್ಲ. ಯಾಕೆಂದರೆ ಅದಕ್ಕೆ ಉತ್ತರವೇ ಇಲ್ಲ. ಪ್ರಕೃತಿಯನ್ನು ಪ್ರಶ್ನಿಸುವುದು ಗೋಡೆಗೆ ತಲೆ ಚಚ್ಚಿಕೊಂಡಂತೆ. ವಿಚಿತ್ರ ಏನೆಂದರೆ ಮನುಷ್ಯನಿಗೆ ತನ್ನ ಕಷ್ಟಗಳಿಗೆ ವಿವರಣೆ ಸಿಕ್ಕಿಬಿಟ್ಟರೆ ಯಾಕೆ ಅನ್ನುವುದಕ್ಕೆ ಉತ್ತರ ಸಿಕ್ಕಿಬಿಟ್ಟರೆ ಕಷ್ಟ ಪರಿಹಾರವಾದಷ್ಟೇ ನೆಮ್ಮದಿ ಸಿಗುತ್ತದೆ. ಒಂದೊಮ್ಮೆ ವಿವರಣೆ ಸಿಗದೆ ಅದು ಅವನ ಪ್ರಜ್ಞೆಗೆ ಬಂದರೆ ಇರುವ ಕಷ್ಟ ದುಪ್ಪಟ್ಟದಾದಷ್ಟು ದುಃಖವಾಗುತ್ತದೆ. ನಮ್ಮ ಖಂಡದಲ್ಲಿ ಎಲ್ಲದಕ್ಕೂ ಒಂದು ವಿವರಣೆ ಇರುತ್ತಿತ್ತು. ಆದ್ದರಿಂದ ಇಲ್ಲಿನವನು ಹೆಚ್ಚಿನ ವಿಚಾರಣೆಗೆ ಇಳಿಯುತ್ತಿರಲಿಲ್ಲ. ತಾನೇ ಉತ್ತರ ಕಂಡುಕೊಳ್ಳುವ ಶ್ರಮಕ್ಕೆ ಕೈ ಹಾಕುತ್ತಿರಲಿಲ್ಲ. ಒಂದರ್ಥದಲ್ಲಿ ನಮ್ಮದು ಎಲ್ಲರಿಗೂ ನೆಮ್ಮದಿ ಒದಗಿಸಿದ್ದಂತಹ ತತ್ವಜ್ಞಾನ. ಪ್ರಾಕೃತಿಕವಾಗಿ ಅನುಕೂಲಕರ ವಾತಾವರಣದ ತಳಹದಿ ಮೇಲೆ ಹುಟ್ಟಿದ ತತ್ವಜ್ಞಾನ ಇದು. ‘ಶಿವಪ್ಪಾ ಎಲ್ಲಾ ನೀನೇಪ್ಪ’ ಅಂದರೆ ಮುಗೀತು. ಅವನು ಕೊಟ್ಟಿರೋ ಪಾತ್ರ ಇದು ಅನುಭವಿಸಬೇಕು ಅಂತಂದುಕೊಂಡರೆ ಆಯಿತು.

ನಮ್ಮಲ್ಲಿ ಆಗಿನ ಕಾಲದಿಂದಲೂ ಹೆಚ್ಚು ಕಷ್ಟಗಳನ್ನು ಅನುಭವಿಸಿರೋರು ಹೆಂಗಸರು ಹಾಗು ಕೆಳವರ್ಗದವರು. ಕ್ಷತ್ರಿಯನ ಯುದ್ಧ, ಸಾವು ಇವೆಲ್ಲ ಕಷ್ಟಗಳಲ್ಲ, ಅಹಂನ ಪ್ರತಿಫಲಗಳು. ಮೇಲ್ವರ್ಗದವರ ಕಷ್ಟಗಳೂ ಜ್ಞಾನದ ವಿಜಯದ ಹಂಗಿನ ಪ್ರತಿಫಲಗಳು. ನೆನಪಿರಲಿ ನಾನು ಹೋಲಿಸುತ್ತಿರುವುದು ದಿನನಿತ್ಯ ಬದುಕು ಸಾವಿನ ನಡುವೆ ಹೋರಾಟ ನಡೆಸಬೇಕಿದ್ದ ಉತ್ತರ ಭೂ ಖಂಡಗಳ ಜನರ ಕಷ್ಟಗಳಿಗೆ ಹೋಲಿಸಿ. ನನಗೆ ಆಶ್ಚರ್ಯ ಆಗಿರೋದು ಈ ಹೆಂಗಸರು ಕೆಳವರ್ಗದವರು ಅದು ಹೇಗೆ ಗಂಡ ದೇವರೆಂದೋ ಒಡೆಯ ದೇವರೆಂದೋ ಅಂದುಕೊಂಡು ತಮ್ಮ ಜೀವನವನ್ನೆ ಅರ್ಪಿಸಿಕೊಂಡಿದ್ದರು ಅಂತ. ಅಂದರೆ ಬದುಕಿರುವ ವ್ಯಕ್ತಿ ಬೆಂಕಿಗೆ ಹಾರುವಷ್ಟು ಮನಃ ಪರಿವರ್ತಿಸಿರುವ ತತ್ವಜ್ಞಾನವಾದರೂ ಅದೆಂಥದ್ದು! ತಾನಿರುವುದೇ ಒಡೆಯನ ಕಾಲು ಒರೆಸಲಿಕ್ಕೆ ಎಂದು ನಂಬಿಕೆ ಹುಟ್ಟಿಸಿರುವ ಅದರ ಶಕ್ತಿ ಏನಿರಬಹುದು. ನೀವು ಪತ್ರಿಕೇಲಿ ಅಲ್ಲೋ ಇಲ್ಲೋ ಅಸ್ಪೃಶ್ಯಾಚರಣೆ ಇರೋದನ್ನ ಓದಿರ್ತೀರಿ. ಪರವಾಗಿಲ್ಲ, ಕ್ರಮೇಣ ಕಡಿಮೆಯಾಗ್ತಿದೆ ಅಂತ ನಿಮಗನಿಸಿರಬಹುದು. ಅಸ್ಪೃಶ್ಯತೆ ಇಂದಿಗೂ ಜೀವಂತವಿದೆ ಎಂದು ಯಾರಾದರೂ ಹೇಳಿದರೆ ಅವನು ಯಾರೋ “ಓರಾಟಗಾರ”ರ ಪೈಕಿನೋನು ಎಂದೆನಿಸಬಹುದು.

ಅಸ್ಪೃಶ್ಯತೆ ಎಲ್ಲ ಕಡೆ ಇದೆ, ವ್ಯಾಪಕವಾಗಿದೆ. ಸ್ವತಃ ಕೆಳವರ್ಗದವರೇ ಮೇಲ್ವರ್ಗದವರ ಮನೆ ಬಾಗಿಲಿಗೆ ಬಂದರೆ ಒಳಗೆ ಬರಲ್ಲ, ಬಾಗಿಲಲ್ಲೇ ಕೂರುತ್ತಾರೆ. ಕುಡಿಯಲು ನೀರು ಕೊಟ್ಟ ಚೊಂಬನ್ನು ಮೇಲ್ವರ್ಗದವರು ತೊಳೆದಿಡುತ್ತಾರೆ. ನೀವು ಇದೆಲ್ಲ ಹಳೇ ಜೆನೆರೇಶನ್ನಿಲ್ಲಿನ ಮಂದಿಯಲ್ಲಿ ಮಾತ್ರ ಇರೋದು ಅಂತ ಅನ್ನಬಹುದು. ಕೆಳವರ್ಗದ ಹೊಸ ಜೆನೆರೇಶನ್ನಿನೊಂದಿಗೆ ಮೇಲ್ವರ್ಗದ ಹೊಸ ಜೆನರೇಶನ್ನು ಸ್ನೇಹವನ್ನೇ ಬೆಳಸಿಲ್ಲ. ಅವರ ಅಗತ್ಯಗಳನ್ನು ಸರ್ಕಾರವೋ ನಗರೀಕರಣವೋ ಪೂರೈಸುತ್ತಿರುವುದರಿಂದ ಪರಸ್ಪರ ಸಹಾಯ ವಿನಿಮಯ ಇಲ್ಲದೆ ಸ್ನೇಹವಿನ್ನೆಲ್ಲಿ ಬೆಳೆಯುತ್ತದೆ? ಮನಸ್ಸೊಳಗಿನ ಶ್ರೇಣೀಯತೆ ಹೊರಗೆಲ್ಲಿ ಬರುತ್ತದೆ? ಮದುವೆ ಸಮಯದಲ್ಲಿ ಒಂಚೂರು ಹೊರಗೆ ಇಣುಕುತ್ತದೆ ಅಷ್ಟೆ. ಮಿಕ್ಕಂತೆಲ್ಲ ಸುಪ್ತ ನದಿಯಂತೆ ಒಳಗೇನೆ ಹರಿಯುತ್ತ ರಾಜಕೀಯ ವ್ಯಾಪಾರ ಮುಂತಾದ ಸ್ಥಳಗಳಲ್ಲಿ ತಮ್ಮ “ನಿರ್ಧಾರ”ಗಳ ಮೂಲಕ ವ್ಯಕ್ತವಾಗುತ್ತಿರುತ್ತದೆ.

ಒಂದೊಮ್ಮೆ ಇಲ್ಲಿಯೂ ಪ್ರಕೃತಿಯು ದೈನಂದಿನ ವಿಕೋಪದ ಮುಖ ತೋರಿಸುತ್ತಿದ್ದರೆ ಮಂದಿ ಪ್ರಕೃತಿಯ ವಿರುದ್ಧ ಸೆಣೆಸುವ ನೆಪದಲ್ಲಾದರೂ ಒಂದಾಗಿರುತ್ತಿದ್ದರೇನೋ. ಆದರೆ ಇಲ್ಲಿ ಪ್ರಕೃತಿ ದಿನನಿತ್ಯದ ಜೀವನಕ್ಕೆ ಪೂರಕವಾಗಿತ್ತು. ಮನುಷ್ಯ ತರಲೆ ಜೀವಿ. ಕಷ್ಟ ಇರಬೇಕು ಇಲ್ಲಾ ತರಲೆ ಇರಬೇಕು. ಸುಮ್ಮನೆ ಕುಳಿತುಕೊಳ್ಳುವ ಗುಣಲಕ್ಷಣ ಅವನಲ್ಲಿಲ್ಲ. ಹಾಗಾಗಿ ಅವನು ಹೊಸ ಸಮಸ್ಯೆಗಳನ್ನು ಹುಟ್ಟಿಹಾಕಿಕೊಂಡ. ಶ್ರೇಣಿ ವ್ಯವಸ್ಥೆ ತಂದುಕೊಂಡ. ತಾನು ಮೇಲು ಅವನು ಕೀಳು ಎಂಬುವ ಆಲೋಚನೆಗೆ ಬಿದ್ದ. ತನಗೆ ಹೊಳೆದ ತತ್ವಜ್ಞಾನವನ್ನು ದಾಖಲಿಸಿದ ಮತ್ತು ಅದನ್ನೇ ಎಲ್ಲ ಕಡೆ ಪಸರಿಸಿದ. ಈ ತತ್ವಜ್ಞಾನವು ಹೆಂಗಸರಿಗೆ ಕೆಳವರ್ಗದವರಿಗೆ ನಿನ್ನ ಪಾತ್ರವು ಪಾತ್ರದ ಶಿಕ್ಷೆಯು ಪೂರ್ವ ನಿಯೋಜಿತ ಎಂದು ಹೇಳಿಬಿಟ್ಟರೆ ಆತ ಏನು ಮಾಡುತ್ತಾನೆ? ತನ್ನದು ಪೂರ್ವ ನಿರ್ಧರಿತ ಶಿಕ್ಷೆಯೆಂದು ಭಾವಿಸಿ ತನ್ನದು ಪಾಪದ ಜೀವವೆಂದು ನಂಬಿ ಅದೇ ಜೀವನವನ್ನು ಒಪ್ಪಿಕೊಳ್ಳುತ್ತಾನೆ. ಹೆಣ್ಣು ತಮ್ಮ ಪಾತ್ರದ ಜವಾಬ್ದಾರಿಗಳು ಇದಷ್ಟೇ ಎಂದು ನಂಬಿ ಆಳ್ವಿಕೆಯನ್ನು ಗಂಡಿನ ಕೈಲಿಟ್ಟು ತಾನು ಅವನ ಸೇವೆಗೆಂದು ಸೀಮಿತಗೊಳ್ಳುತ್ತಾಳೆ. ಎಷ್ಟಂದರೆ ಇವರಲ್ಲಿ ತನ್ನ ಆತ್ಮ ಹಾಗೂ ಅಸ್ತಿತ್ವ ಬೇರೆ ಬೇರೆ ಎಂಬುವಂತೆ ಆತ್ಮವು ಶಿಕ್ಷೆಗೆ ಗುರಿಯಾಗಿರುವ ಅಸ್ತಿತ್ವವನ್ನು ಶಿಕ್ಷೆ ಅನುಭವಿಸಲು ಬಿಟ್ಟು ತಾನು ನಿಶ್ಚಿಂತೆಯಾಗಿರುತ್ತದೆ.

ನೀವು ಇಂತಹ ಶಿಕ್ಷೆ ಅನುಭವಿಸುತ್ತಿರುವ ಕೆಳವರ್ಗದವರನ್ನು ಆ ಕ್ಷಣದಲ್ಲಿ ದೃಷ್ಟಿ ನೆಟ್ಟು ನೋಡಬೇಕು. ಅವನ ಕಣ್ಣುಗಳಲ್ಲಿ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ನಿರ್ಲಿಪ್ತ ಭಾವ ತುಂಬಿರುತ್ತದೆ. ದೇಹ ಶ್ರಮಿಸುತ್ತ ಅಸ್ತಿತ್ವದಲ್ಲಿ ಸಿಟ್ಟು ಹತಾಶೆ ಮಡುಗಟ್ಟುತ್ತಿದ್ದರೆ ಆತ್ಮವು ಪ್ರೀತಿ ಸ್ನೇಹದಿಂದ ನಸುನಗುತ್ತಿರುತ್ತದೆ. ಒಂದು ವೇಳೆ ಇವರ ಮೇಲೆ ಈ ಸಾಂತ್ವನದ ತತ್ವ ಪ್ರಯೋಗ ಆಗಿರದಿದ್ದರೆ, ಬಹುಶಃ ಇವರು ಬಹಳ ಹಿಂದೆಯೇ ತಮ್ಮ ದುಃಸ್ಥಿತಿಯಿಂದ ಬಂಡೆದ್ದು ಹೊರಬಂದು ಹೊಸ ಮಾರ್ಗ, ಹೊಸ ಜೀವನ, ತತ್ವಗಳನ್ನು ಕಂಡುಕೊಳ್ಳುತ್ತಿದ್ದರು ಅನಿಸುತ್ತದೆ.

ಈಗಿನ ತತ್ವಜ್ಞಾನಗಳು ಆಗಿನ ಧರ್ಮಗಳು ಎಂತಾಗಿದ್ದರೆ, ಕ್ರಿಶ್ಚಿಯಾನಿಟಿ ಪಶ್ಚಿಮದಲ್ಲೇ ಯಾಕೆ ಅರಳಿತು? ಇಸ್ಲಾಂ ಮರುಭೂಮಿಯಲ್ಲೇ ಯಾಕೆ ಹರಿಯಿತು? ಭಾರತೀಯ ಧರ್ಮದಲ್ಲೇ(ಹಿಂದೂ ಅಂತ ಕರೆಯಲಾರೆ, ಅದರ ಪರಿಧಿ ಚಿಕ್ಕದು)ಯಾಕೆ ಕಾಮಸೂತ್ರದಂತಹ ವಿನೋದ ಲೀಲಾವಳಿ ಹುಟ್ಟಿತು?. ನಾನು ಗ್ರಹಿಸಿರುವಂತೆ ಕ್ರಿಶ್ಚಿಯಾನಿಟಿ ಮನುಷ್ಯನ ಮೂಲಭೂತ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವುದಿಲ್ಲ. ಬದಲಾಗಿ ಸಾಂತ್ವನ ನೀಡಲು ಪ್ರಯತ್ನಿಸುತ್ತದೆ. ಖುದ್ದು ಕ್ರಿಸ್ತ ಶಿಕ್ಷೆಗೆ ಗುರಿಯಾದವನು. ಅದು ಅಲ್ಲಿನ ಜನಗಳ ಕಷ್ಟದ ರೂಪಕದಂತೆ ಕಾಣಿಸುತ್ತದೆ. ಭಾರತೀಯ ಆಧ್ಯಾತ್ಮದಲ್ಲಿ ಪ್ರತಿಯೊಂದಕ್ಕೂ ಉತ್ತರವಿದೆ. ಈ ಜಗತ್ತಿನಲ್ಲಿ ಉತ್ತರಿಸದ ಪ್ರಶ್ನೆಗಳು ಇನ್ನೇನೂ ಉಳಿದಿಲ್ಲ ಎಂಬಷ್ಟು ಬರೆದಿಟ್ಟು ಹೋಗಿದ್ದಾರೆ. ಬಹಳ ಬಿಡುವಾಗಿದ್ದರು ಅಂತ ಕಾಣತ್ತೆ. ಅಂದರೆ ಇಲ್ಲಿನ ಭೂಗೋಳ ಪ್ರಕೃತಿ ಮನುಷ್ಯನಿಗೆ ಪೂರಕವಾಗಿದ್ದು ಅವನ ಬದುಕನ್ನು ಸುಲಭವಾಗಿಸಿತ್ತು ಅಂತ.

ಇಸ್ಲಾಂನದು ಬಹಳ ವಿಚಿತ್ರ ಸ್ಥಿತಿ. ಮರುಭೂಮಿಯ ಮಂದಿಗೆ ಮರುಭೂಮಿಯೇ ಪ್ರಾಕೃತಿಕ ವಿಕೋಪ. ಅವರಿಗೆ ಉತ್ತರ ಭೂಭಾಗದಂತೆ ಛಳಿಯ ಹೊಡೆತವಿಲ್ಲ, ಬದಲಾಗಿ ಕಾವಿನ ಏಟಿದೆ. ಅಂದರೆ ಅವರು ತಮ್ಮೆಲ್ಲ ದಿನನಿತ್ಯದ ಬದುಕನ್ನು ಮನೆಯ ಹೊರಗಡೇನೆ ಕಳೆದಿರಬೇಕು(ಮನೆಯೆಂಬುದೂ ಇತ್ತೋ ಇಲ್ಲವೋ?). ಅಂದರೆ ಅವರದ್ದು ಸಾಮೂಹಿಕ ಬದುಕಾಗಿರಬೇಕು. ಮರುಭೂಮಿಯಲ್ಲಿ ಹೋರಾಟ ನಡೆಸಲು ಸಮೂಹದ ಅಗತ್ಯ ಇದೆ. ಒಬ್ಬನೇ ಏನೂ ಮಾಡಲಾರ. ಆದ್ದರಿಂದಲೇ ಇಸ್ಲಾಂನಲ್ಲಿ “ಬ್ರದರ್ ಹೂಡ್” ಆಳವಾಗಿರಬಹುದು. ಅಲ್ಲಿ ಕುಡಿಯಲು ನೀರಿರುವುದಿಲ್ಲ. ಕಣ್ಣಿಗೆ ಹಸಿರಿನ ದರ್ಶನವಿಲ್ಲ. ತಿನ್ನಲು ಹೇರಳ ಆಹಾರವಿರುವುದಿಲ್ಲ. ಇಂತಹ ಕಡುಕಷ್ಟಗಳಿಂದಲೇ ಅವರಲ್ಲಿ ಧಾರ್ಮಿಕ ಕಾಠಿಣ್ಯ ಹುಟ್ಟಿತಾ ಅನ್ನೋದು ನನ್ನ ಅನುಮಾನ. ಅವರ ಪಾಲಿಗೆ ಬಂದಿರುವುದು ಭಾರತೀಯರ ಸಮೂಹ ಜೀವನ, ಪಾಶ್ಚಿಮಾತ್ಯರ ಪ್ರಾಕೃತಿಕ ಕಾಠಿಣ್ಯ.

ನಾನು ಇಷ್ಟೂ ಹೊತ್ತು ಮಾತಾಡುತ್ತಿದ್ದುದು ನಾಗರೀಕತೆ ಇಲ್ಲೀವರೆಗೆ ನಡೆದು ಬಂದ, ಬೆಳೆದು ಬಂದ ರೀತಿ ಬಗೆ. ನಾವೀಗ ಜಾಗತೀಕರಣದ ಯುಗದಲ್ಲಿದ್ದೇವೆ. ಬಹಳಷ್ಟು ಚಿಂತನೆಗಳನ್ನು ಆಮದು ಮಾಡಿಕೊಂಡು ಅಷ್ಟೇ ಪ್ರಮಾಣದಲ್ಲಿ ರಫ್ತು ಮಾಡಿ, ಎಲ್ಲ ಬೆರೆತ ಸ್ಥಿತಿಯಲ್ಲಿದ್ದು ಮೇಲಿನ ಪ್ರಾಕೃತಿಕ ಕಾರಣಗಳು ಈಗ ಅಷ್ಟರ ಮಟ್ಟಿಗೆ ಅನ್ವಯ ಆಗುವುದಿಲ್ಲವೇನೋ. ಮೊದಲಾಗಿ ಪ್ರಕೃತಿಯನ್ನು ಹಿಮ್ಮೆಟ್ಟಿಸಿ ಬದುಕು ಸುಲಭನಾಗಿಸುವ ತಂತ್ರ ಯಂತ್ರಗಳನ್ನು ರಚಿಸಿಕೊಂಡಿದ್ದೇವೆ. ಹಾಗಾಗಿ ಈ ಸ್ಥಿತಿಯಿಂದ ಭವಿಷ್ಯವನ್ನು ಯೋಚಿಸಿದರೆ ಮುಂದೆ ಹುಟ್ಟುವ ತತ್ವ ಸಾಹಿತ್ಯವೆಲ್ಲವೂ ಹಿಂದಿನ ಸರಕಿಗಿಂದ ಬಹಳ ಬಹಳಾನೆ ಭಿನ್ನವಾಗಿರುತ್ತದೆ. ನಾವು ಹಿಂದಿನ ಸರಕಿಗೇನೆ ಈಗಿನ ಬದುಕನ್ನು ಹೋಲಿಸಿಕೊಂಡು ಆಗ ಎಲ್ಲ ಚನ್ನಾಗಿತ್ತು, ಈಗ ಏನೂ ಸರಿಯಿಲ್ಲ ಎಂದು ವ್ಯಥೆ ಪಡುವುದರಲ್ಲಿ ಅರ್ಥವಿಲ್ಲ.