ನಾನು ಲಗ್ನವಾದ ಶುರುವಿಗೆ ಶಿವಮೊಗ್ಗೆಯಲ್ಲಿ ಒಂದು ಬಾಡಿಗೆ ಮನೆಯಲ್ಲಿದ್ದೆ. ಅದೊಂದು ಸಾಧಾರಣ ಹೆಂಚಿನಮನೆ. ಉದ್ದಕ್ಕೆ ರೈಲುಬೋಗಿಯಂತ್ತಿತ್ತು. ಸುತ್ತಲೂ ಜಾಗವಿದ್ದುದರಿಂದ ನಾನೂ ಬಾನು ಸೇರಿ ಹೊಂಗೆ ಗಿಡಹಾಕಿದೆವು. ನಾಲ್ಕೈದು ವರ್ಷಗಳಲ್ಲಿ ಮನೆ ಮುಚ್ಚಿಕೊಳ್ಳುವಂತೆ ಗಿಡಗಳು ಬೆಳೆದು, ಅದುವೇ ಬಂಗಲೆಯಂತಾಯಿತು.  ಪಕ್ಕದ ಮನೆಯ ತೆಂಗಿನ ಮರವು ಬಾಂಬ್ ಹಾಕಿದಂತೆ ಗರಿಯನ್ನೂ ತೆಂಗಿನಕಾಯನ್ನು ಬೀಳಿಸಿ ಹೆಂಚು ಒಡೆಯುತ್ತಿದ್ದುದು ಬಿಟ್ಟರೆ, ಬೇರ್ಯಾವ ತೊಂದರೆಯಿರಲಿಲ್ಲ. ಯಾವತ್ತಾದರೂ ಬಿಡಬೇಕಾದ ಮನೆ ಎಂಬ ಅಭದ್ರತೆ ಸುಳಿಯುತ್ತಿತ್ತು. ನಮ್ಮದೇ ಆದ ಮನೆಯ ಕಲ್ಪನೆ ಒಳಗೇ ಮೊಳೆಯುತ್ತಿತ್ತು. ಆಗಿನ ಸನ್ನಿವೇಶದಲ್ಲಿ ಅದು ಸಾಧ್ಯವಿರಲಿಲ್ಲ. ಸಂಜೆ ಮಧ್ಯಮವರ್ಗದ ಬಡಾವಣೆಗಳ ಮೂಲಕ ತಿರುಗಾಡಲು ಹೋದಾಗ, ಹಾದಿಯಬದಿಯ ಪುಟ್ಟಪುಟ್ಟ ಚೆಂದದ ಮನೆಗಳನ್ನು ನೋಡುತ್ತಿದ್ದೆವು. ಸ್ವಂತ ಮನೆಯ ಕನಸನ್ನು ಕಟ್ಟುತ್ತಿದ್ದೆವು. ಬಾನು “ನಮಗೆ ಇಷ್ಟಾದರೆ ಸಾಕಲ್ಲವೇನೊ? ನೋಡು ಈ ಮನೆ ನೋಡು ಎಷ್ಟು ಚೆನ್ನಾಗಿದೆ?” ಎಂದೆಲ್ಲಾ ರನ್ನಿಂಗ್ ಕಾಮೆಂಟರಿ ಮಾಡುತ್ತಿದ್ದಳು.

ಅಷ್ಟರಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಕ್ಕು ನಾವು ಬಳ್ಳಾರಿ ಜಿಲ್ಲೆಗೆ ವಲಸೆ ಬರಬೇಕಾಗಿ ಬಂತು. ನಾವು ಶಿವಮೊಗ್ಗೆ ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ಹೊರಟೆವು. ಅದು 1992ರ ಡಿಸೆಂಬರ್ ತಿಂಗಳು. ಕರ್ಫ್ಯೂ ಬಿದ್ದು ಸಾಮಾನು ತುಂಬಿದ ಲಾರಿಯನ್ನು 2 ದಿನ ನಿಲ್ಲಿಸಿಕೊಂಡಿದ್ದೆವು. ಅಷ್ಟರೊಳಗೆ ನಮ್ಮ ಎರಡು ಮಕ್ಕಳು ಹುಟ್ಟಿದ್ದವು. ಅವು ಎಲ್ಲರ ಮನೆಗೆ ಹೋಗಿಬಂದು ಬೀದಿಯ ಮಕ್ಕಳಾಗಿದ್ದವು. ಮನೆ ಬಿಡುವಾಗ ವಿಚಿತ್ರ ಸಂಕಟ. ಗಿಡಗಳು ನಮ್ಮನಗಲಿ ಹೋಗುವಿರಾ ಎಂದು ಕೇಳುವಂತೆ ಆಗುತ್ತಿತ್ತು.

ಹೊಸಪೇಟೆಗೆ ಬಂದ ಹೊಸತರಲ್ಲಿ ನಾವು ಬಾಡಿಗೆ ಮನೆಯಲ್ಲಿ ಐದಾರು ವರ್ಷವಿದ್ದೆವು. ಮಲೆನಾಡಿನಿಂದ ಬಂದ ನನಗೆ ಈ ಬಿಸಿಲ ಸೀಮೆಯಲ್ಲಿ ಮನೆ ಕಟ್ಟಿಕೊಂಡು ಖಾಯಂ ನೆಲೆಸುವ ಇರಾದೆಯೇ ಇರಲಿಲ್ಲ. ನಿವೃತ್ತಿಯಾದ ಬಳಿಕ ಊರಕಡೆ ಹೋಗಬೇಕೆಂದುಕೊಂಡು, ಬಾಡಿಗೆ ಮನೆಯಲ್ಲೇ ಕಾಲದೂಡುತ್ತಿದ್ದೆವು. ಆದರೂ ಕಾಲು ಶತಮಾನದ ಬಳಿಕ ಮರಳಿ ಹೋಗುವುದಕ್ಕಾಗಿ ಬಾಡಿಗೆ ಮನೆಗಳಲ್ಲೇ ಜಿಂದಗಾನಿ ಮಾಡುವುದು ಮೂರ್ಖತನ ಅನಿಸುತ್ತಿತ್ತು. ಪ್ರತಿಸಲ ಬಾಡಿಗೆ ಮನೆ ಬದಲಿಸುವಾಗ ಲಗ್ಗೇಜು ಕಟ್ಟಿ ಬಿಚ್ಚಿ ಸುಸ್ತಾಗುತ್ತಿತ್ತು. ಬಹುಶಃ ಸ್ವಂತ ಮನೆ ಕಟ್ಟಿಕೊಳ್ಳದ ಹೊರತು ಒಂದು ಊರಿನ ಜತೆ ಬೇರುಬಿಟ್ಟಂತೆ ಆಗುವುದಿಲ್ಲವೇನೊ? ಅಲ್ಲಿನ ಸಂಸ್ಕೃತಿಯ ಜತೆ ಆಪ್ತ ಭಾವನೆ ಮೊಳೆಯುವುದಿಲ್ಲವೇನೊ? ಅದೇ ಹೊತ್ತಿಗೆ ಬಾನು `ಲಗ್ನವಾದ ಬಳಿಕ ನಾನು ನನಗಾಗಿ ಏನೂ ಕೇಳಿಲ್ಲ. ನಮಗೊಂದು ಮನೆ ಕಟ್ಟಿಕೊಳ್ಳೋಣ’ ಎಂದು ಕಾಟ ಆರಂಭಿಸಿದಳು. ಯಾವುದೊ ದುರ್ಬಲ ಗಳಿಗೆಯಲ್ಲಿ ನಾನೂ ಹ್ಞೂಗುಟ್ಟಿದೆ. ನಂತರ ತಿಳಿದಿದ್ದು ಮನೆಯ ಕನಸು ನನ್ನೊಳಗೂ ಅಡಗಿತ್ತು, ಅದನ್ನು ಹುಸಿ ಆದರ್ಶಗಳಿಂದ ದಮನಿಸಿಟ್ಟಿದ್ದೆ ಎಂದು.

ನಮ್ಮ ಮನೆ ಎಲ್ಲರಂತಿರಬಾರದು. ಸರಳವಾಗಿ ವಿಶಿಷ್ಟವಾಗಿ ಇರಬೇಕು, ಸುತ್ತಮುತ್ತ ಹೂವುಹಣ್ಣಿನ ಗಿಡಗಳಿರಬೇಕು ಎಂದು ನಿರ್ಧರಿಸಿದೆವು. ನಮ್ಮಂತೆ ಹುಚ್ಚುಳ್ಳವರು ಕಟ್ಟಿದ ಕೆಲವು ಮನೆಗಳನ್ನು ನೋಡಿದೆವು. ಅವುಗಳ ಅಂದಚಂದ ಕಂಡಾಗ ಬೆರಗಾಗುತ್ತಿತ್ತು. ಅವರು ಪಟ್ಟ ಕಷ್ಟ ಕೇಳಿ ಕಂಗಾಲಾಗುತ್ತಿತ್ತು. ಕೆಲವರು ತಾವು ಮನೆಕಟ್ಟಿದ್ದನ್ನು ಹಿಮಾಲಯ ಹತ್ತಿಬಂದ ಸಾಹಸಗಾಥೆಯಂತೆ ಬಣ್ಣಿಸುತ್ತಿದ್ದರು. ಅವರ ಮೊಗದಲ್ಲಿ ಏನೋ ಸಾಧಿಸಿದ ಹೆಮ್ಮೆ ಲಾಸ್ಯವಾಡುತ್ತಿತ್ತು. ಮತ್ತೆ ಕೆಲವರು ಕೆಲಸಗಾರರು ಮಾಡಿದ ದಗಾ ಮತ್ತು ಕೊಟ್ಟ ಕೋಟಲೆಗಳಿಂದ ತಮಗಾದ ನೋವನ್ನೇ ಹೇಳುತ್ತಿದ್ದರು-ರೋಗಿಗಳು ತಮ್ಮ ಕಾಯಿಲೆಯ ವಿವರಗಳನ್ನು ಹೇಳುವಂತೆ; ಅವರ ಮನದ ತುಂಬ ಕಹಿಯೇ ತುಂಬಿತ್ತು. ತಮ್ಮ ಹಳೆಯ ಗಾಯದ ಹೆಕ್ಕಳೆಗಳನ್ನು ಸವರುತ್ತ ಮನೆಯ ಸುಖವನ್ನು ಅನುಭವಿಸದೆ ನರಳುತ್ತಿದ್ದರು. ಜನ ಮನೆಕಟ್ಟಿ ಮನೋರೋಗಿ ಆಗಿರುವುದು ಕಂಡು ಗಾಬರಿಯಾಗುತ್ತಿತ್ತು.

ಮನೆ ಕಟ್ಟಡವಾಗಿ ನಮ್ಮ ಸೊತ್ತಾಗಿರಬಹುದು. ಅದು ಮಾನಸಿಕವಾಗಿ ನಮ್ಮದಾಗದಿದ್ದರೆ ಮನೆ ಉಸಿರುಗಟ್ಟಿಸುತ್ತದೆ. ಹೊರಗಿಂದ ದಣಿದು ಬಂದ ಜೀವಕ್ಕೆ ವಿಚಿತ್ರ ನೆಮ್ಮದಿ ಭದ್ರತೆ ಪ್ರೈವೆಸಿ ಕೊಡುವ ಮನೆ, ಮನೆಯೊಳಗಿನ ಮನುಷ್ಯರ ಸಂಬಂಧಗಳು ಕುಸಿದುಬಿದ್ದಾಗ ಸೆರೆಮನೆಯಾಗುತ್ತದೆ. (ಇಂಗ್ಲಿಷಿನ ಜೈಲು ಶಬ್ದದಲ್ಲಿ ಇಲ್ಲದ `ಮನೆ’ ಶಬ್ದ ಸೆರೆಮನೆಯಲ್ಲಿದೆ!) ಆಗ ಮನೆಬಿಟ್ಟು ಹೋಗುವುದು ನೆಮ್ಮದಿ ಅನಿಸುತ್ತದೆ. ಅಕ್ಕ ಹಾಗೆ ಮನೆಬಿಟ್ಟು ಹೋಗಿ ನೆಮ್ಮದಿ ಕಂಡವಳು ತಾನೇ?

ಕನ್ನಡದಲ್ಲಿ ಮನೆಗೆ ಆಧ್ಯಾತ್ಮಿಕ ಲೋಕದಲ್ಲಿ ಬೇರೆ ಅರ್ಥಗಳೂ ಇವೆ. `ಸೋರುತಿಹುದು ಮನೆಯ ಮಾಳಿಗೆ’ ಎಂದು ಶಿಶುನಾಳನೂ, `ಮನೆಯೊಳಗೆ ಮನೆಯೊಡೆಯನಿಲ್ಲ’ ಎಂದು ಬಸವಣ್ಣನೂ, `ಅಲ್ಲಿದೆ ನಮ್ಮನೆ ಇಲ್ಲಿ ಬಂದೆವು ಸುಮ್ಮನೆ’ ಎಂದು ದಾಸರೂ ಹೇಳುವಾಗ ಮನೆಗೆ ಬೇರೆಬೇರೆ ಅರ್ಥಗಳಿವೆ. ವಿಶೇಷವೆಂದರೆ ಉರ್ದುವಿನಲ್ಲಿ ಹೆಣ ದಫನ್ ಮಾಡಲು ತೆಗೆಯುವ ಕುಳಿಯನ್ನು `ಘರ್’ ಎನ್ನುವುದು. ಇಲ್ಲಿ ಅದುವೇ ನಮ್ಮ ಖಾಯಂ ಮನೆ ಎಂಬರ್ಥವಿರಬೇಕು. ಈ ಲೆಕ್ಕದಲ್ಲಿ ನಮ್ಮ ಪಯಣ ಮನೆಯಿಂದ ಮನೆಗೆ. ಆದರೆ ನಾವಿರುವ ಲೋಕವು ಬಾಡಿಗೆ ಮನೆಯಂತೆ ತಾತ್ಕಾಲಿಕ ಎಂದು ಗೊತ್ತಿದ್ದರೂ, ಅದನ್ನೇ ಖಾಯಂ ಎಂಬಂತೆ ಅನುಭವಿಸುವುದು ತಾನೇ ಬಾಳಿನ ವಿಸ್ಮಯ?

ನಮ್ಮ ಮನೆ ಕಟ್ಟೋಣ ಶುರುವಾಯಿತು. ಅದು ದಿನನಿತ್ಯ ಬೇರೆಬೇರೆ ಆಕಾರ ತಳೆದು ತುಸುತುಸುವಾಗಿಯೇ ಮೇಲೇಳುತ್ತಿತ್ತು-ನನ್ನ ಮಡದಿಯ ಬಸಿರಲ್ಲಿ ನನ್ನ ಮಕ್ಕಳ ಭ್ರೂಣಗಳು ರೂಪುಪಡೆಯುತ್ತ ಬೆಳೆದಂತೆ. ಮನೆ ನಮ್ಮ ರೊಕ್ಕವನ್ನು ಮಾತ್ರವಲ್ಲ, ನಮ್ಮ ದೈಹಿಕ ಶಕ್ತಿಯನ್ನೂ ಒಳಗಿನ ಚೈತನ್ಯವನ್ನೂ ಹೀರುತ್ತಿತ್ತು. ಪ್ರತಿದಿನವೂ ಬೆಳಕು ಹರಿವ ಹೊತ್ತಿಗೆ ಯಾವುದಾದರೂ ಒಂದು ಸಮಸ್ಯೆ ಸೃಷ್ಟಿಯಾಗಿ `ತಾಕತ್ತಿದ್ದರೆ ನನ್ನನ್ನು ಬಿಡಿಸು’ ಸವಾಲು ಹಾಕಿ ಕಾದು ಕೂತಿರುತ್ತಿತ್ತು. ನಾವು ಬ್ಯಾಂಕು, ಹಾರ್ಡವೇರ್ ಅಂಗಡಿ, ಮೇಸ್ತ್ರಿಮನೆ ಸುತ್ತಿ ಬಿಸಿಲಲ್ಲಿ ಸುಟ್ಟುಹೋದೆವು. ಕೆಲವೊಮ್ಮೆ ಜಟಿಲವಾದ ಸಮಸ್ಯೆ ಎದುರಾದಾಗ ನಾಯಿಗಳಂತೆ ನಾವು ಕಚ್ಚಾಡುತ್ತಿದ್ದೆವು. ಮುನಿಸಿಪಾಲಿಟಿಯಲ್ಲಿ ಯಾವುದೊ ಒಂದು ದಾಖಲೆ ಲಂಚ ಕೊಡದೆ ಸಿಗುವುದಿಲ್ಲ ಎಂದು ಗೊತ್ತಾದಾಗ, ಜಗತ್ತೆಲ್ಲವೂ ಪ್ರಾಮಾಣಿಕವಾಗಿದ್ದು ಇಲ್ಲಷ್ಟೇ ಕೊಳಕಿದೆ ಎಂಬಂತೆ ನಾನು ಪ್ರಕ್ಷುಬ್ಧನಾಗುತ್ತಿದ್ದೆ. ಸಾಮಾನ್ಯವಾಗಿ ದುಡಿಯುವ ವರ್ಗದ ಪರವಾಗಿ ಚಿಂತಿಸುವ ನಾನು, ಮನೆ ಕಟ್ಟಿಸುವಾಗ ಅವರು ಮಾಡುವ ಕಿಲಾಡಿತನ ಕಂಡು ಅವರನ್ನು ಸಂಶಯಿಸುವ ಬೈಯುವ ಕೆಟ್ಟ ಧಣಿಯಾಗತೊಡಗಿದೆ. ಬಣ್ಣದವನು ಅರ್ಧ ಕೆಲಸ ಮುಗಿಸಿ, ಇನ್ನೊಂದು ಮನೆಯ ಕಾಂಟ್ರಾಕ್ಟು ಹಿಡಿದಾಗ, ಕಲ್ಲ್ಲಿನವನು ಹಿಟ್ಟುಕಲ್ಲನ್ನು ತಂದು ಹಾಕಿಹೋದಾಗ, ನನಗೆ ಜನರ ಮೇಲೆಯೇ ನಂಬಿಕೆ ಹೋಯಿತು. ನನಗೂ ಸಿನಿಕತೆಯ ಕಾಯಿಲೆ ಬರತೊಡಗಿತು. “ನೀನೇ ಅಲ್ಲವೇ ಸುಮ್ಮನಿದ್ದ ನನಗೆ ಮನೆ ಕಟ್ಟಬೇಕೆಂದು ಆಸೆ ಹುಟ್ಟಿಸಿದವಳು. ನನಗೆ  ಮನೇನೇ ಬೇಡವಾಗಿತ್ತು. ಯಾರಿಗೆ ಬೇಕು ಈ ಗೋಳು?” ಎಂದು ಸಿಡುಕಲಾರಂಭಿಸಿದೆ. ಅವಳು “ನನ್ನ ಜೀವನದಲ್ಲಿಟ್ಟ ಒಂದೇ ಬೇಡಿಕೆಯಿದು. ಇಷ್ಟಕ್ಕೂ ಕಟ್ಟಿದ ಮನೆಯಲ್ಲಿ ನಾನು ಒಬ್ಬಳೇ ಇರುತ್ತೇನೆಯೇ? ನೀನೂ ನಿನ್ನ ಮಕ್ಕಳೂ ಇರುವುದಿಲ್ಲವೇ? ಬಾಡಿಗೆ ಮನೆಯವರು ಮೀನುಫ್ರೈ ಮಾಡಿದ್ದಕ್ಕೆ ಬಿಡಿಸಿದ್ದನ್ನು ನೆನಪಿಸಿಕೊ. ಎಷ್ಟು ದಿನ ಅವರಿವರ ಹಂಗಿನಲ್ಲಿರುವುದು? ನಮ್ಮ ಹೊಟ್ಟೆಯಲ್ಲೂ ಮಕ್ಕಳಿದ್ದಾರೆ ಅಂತ ಮರೆಯಬೇಡ?” ಎಂದು ಜವಾಬು ಕೊಡುತ್ತಿದ್ದಳು. ಗದ್ಗದಗೊಂಡು ಮುಸುಮುಸು ಮಾಡುತ್ತಿದ್ದಳು. ನಾನು ಸೋತು, ನನ್ನ ಸಣ್ಣತನದಿಂದ ಕುಗ್ಗಿಹೋಗುತ್ತಿದ್ದೆ. ಈ ರಗಳೆಗಳಿಂದ ತಪ್ಪಿಸಿಕೊಳ್ಳಲು ಕಾರ್ಯಕ್ರಮಗಳ ನೆಪದಲ್ಲಿ ಊರುಬಿಟ್ಟು ಹೋಗುತ್ತಿದ್ದೆ. ಬಾನು ಮಾತ್ರ ಹಟ ತೊಟ್ಟಂತೆ ಮನೆ ಕಟ್ಟುವ ಜಾಗದಲ್ಲಿ ತನ್ನನ್ನು ಕಂಬದಂತೆ ಪ್ರತಿಷ್ಠಾಪಿಸಿಕೊಂಡು ನಿಂತಳು. ಮನೆ ಅವಳ ಪಾಲಿಗೆ ಬಾಳಿನಲ್ಲಿ ಸಾಧಿಸಬೇಕಾದ ಒಂದು ದೊಡ್ಡ ಗುರಿಯಾಗಿತ್ತು. ನಮ್ಮ ಮಕ್ಕಳೊ ಯಾವ ಪರಿವೆಯೂ ಇಲ್ಲದೆ ರಾಶಿಬಿದ್ದ ಹಸಿಉಸುಕನ್ನು ಪಾದದ ಮೇಲೆ ಸುರುವಿಕೊಂಡು ತಟ್ಟಿ ಮನೆ ಕಟ್ಟಿಕೊಂಡು ಆಡುತ್ತಿದ್ದವು.

ನಮ್ಮ ಜಗಳ ಕೂಗಾಟ ಕಷ್ಟ ಸಹನೆಗಳ ನಡುವೆ ನಮ್ಮ ಸುಪ್ತ ಸ್ವಪ್ನವೊಂದು ಮೈದಳೆದು ನನಸಾಗುತ್ತಿತ್ತು. ಬೆಟ್ಟದಿಂದ ಬಂದ ಕಲ್ಲು, ಕಾರ್ಖಾನೆಯಿಂದ ಬಂದ ಸಿಮೆಂಟು ಮತ್ತು ಕಬ್ಬಿಣ, ಯಾವುದೊ ಹೊಳೆಯ ಪಾತ್ರದ ಉಸುಕು, ಇನ್ಯಾವುದೊ ಕಾಡಿನಿಂದ ಬಂದ ಮರ, ಹಲವು ಅಂಗಡಿಗಳಿಂದ ಬಂದ ಮೊಳೆ ಚಿಲಕಗಳು, ತಾಂಡೂರಿನಿಂದ ಬಂದ ಚಪ್ಪಡಿ ಎಲ್ಲವೂ ಸೇರಿ, ಯಾವ ಮಾಯಕದಲ್ಲೋ ಹೊಸಆಕೃತಿಯೊಂದು ರೂಪುಗೊಳ್ಳತೊಡಗಿತು. ಕೆಲಸಗಾರರ ಕುಶಲತೆ ಬೆವರು ತರಲೆಗಳ ಮೂಲಕ ವಾಸ್ತುಶಿಲ್ಪಿಯ ನಕ್ಷೆಯ ಅಸ್ಥಿಪಂಜರವು ರಕ್ತಮಾಂಸವನ್ನು ಪಡೆಯತೊಡಗಿತು. ಇನ್ನು ಈ ನಾವು ಪಾತ್ರೆ ಪಗಡೆಯೊಂದಿಗೆ ಅಲ್ಲಿ ಅಡುಗೆ ಬೇಯಿಸಲು ನುಗ್ಗಿ ಮನೆಗೆ ಜೀವ ಆವಾಹನೆ ಮಾಡಬೇಕಷ್ಟೆ.

ಮನೆಯ ಕಾಂಪೌಂಡು ಕಟ್ಟುವಿಕೆ ಅರಂಭವಾಯಿತು. ಅದಕ್ಕೆ ಬೇಕಾದ ಇಟ್ಟಿಗೆಗಾಗಿ ನಮ್ಮ ವಾದ್ ಮನ್ನಿಗೆ ಕಟ್ಟಿಕೊಟ್ಟಿದ್ದ ಶೆಡ್ಡುಮನೆಯನ್ನು ಕೆಡವಬೇಕಾಯಿತು. ಆದರೆ ಶೆಡ್ಡನ್ನು ಕೆಡವಿ ಕಾಂಪೌಂಡು ಕಟ್ಟುವುದು ನನಗೆ ಕೆಡುಕೆನಿಸುತ್ತಿತ್ತು. ಅದೊಂದು ಕೆಸರು ಇಟ್ಟಿಗೆ ಬಳಸಿ ಕಟ್ಟಿದ ಕಚ್ಚಾ ಗೋಡೆಯ ಮೇಲೆ ಬೊಂಬಿನ ತೀರು ಹಾಕಿ ತಗಡು ಹೊದಿಸಿ ಮಾಡಿದ ಶೆಡ್ಡಾಗಿತ್ತು. ಅದರೊಳಗೆ ವಾದ್ ಮನ್ ಗವಿಯಪ್ಪನ ಕುಟುಂಬ ವಾಸವಾಗಿತ್ತು. ಕೊಪ್ಪಳದ ಕಡೆಯ ಗವಿಯಪ್ಪ ಸಣ್ಣರೈತ. ಗರಚು ಜಮೀನಿನಲ್ಲಿ ಏನೂ ಬೆಳೆ ತೆಗೆಯಲಾಗದ ಕಾರಣ, ಪಟ್ಟಣಗಳಿಗೆ ಬಂದು ಕೂಲಿಕಾರನಾಗಿದ್ದ. ಅವನ ಸಂಸಾರವೂ ಅದರೊಳಗೆ ಖಾಯಂ ಮನೆಯೆಂಬ ಭಾವದಲ್ಲಿ ನೆಲೆಸಿತ್ತು. ಎಂದೋ ಶಾಲೆಬಿಟ್ಟಿದ್ದ ಮಕ್ಕಳು ಅಪ್ಪನ ಜತೆಗೇ ಕೆಲಸ ಮಾಡುತ್ತಿದ್ದವು. ಮನೆ ಕಾಮಗಾರಿ ಮುಗಿಯತ್ತ ಬರಲು ಅವನು ಬೇರೊಂದು ಕಡೆ ಕೆಲಸ ನೋಡತೊಡಗಿದ. ಅವನ ಸಂಬಳವನ್ನು ಕೊಟ್ಟು ಚುಕ್ತಮಾಡಿದೆ. ಗವಿಯಪ್ಪನ ಕುಟುಂಬ ಇನ್ನೊಂದು ಮನೆ ಕಟ್ಟುವ ಜಾಗಕ್ಕೆ ವಲಸೆ ಹೊರಟಿತು. ಹಾಗೆ ಹೋಗುವಾಗ ಅವನಲ್ಲಿ ನಿರಾಳತೆಯಿತ್ತೊ ಇಲ್ಲವೊ ಅರಿಯೆ. ಅನಿವಾರ್ಯ ಪರಿಸ್ಥಿತಿಗಳೇ ಸಹಿಸುವ ಸ್ಥಿತಪ್ರಜ್ಞೆಯನ್ನು ತರುತ್ತವೆ. ಪ್ರಶ್ನೆಯೆಂದರೆ, ಈ ಅನಿವಾರ್ಯತೆ ತಂದಿತ್ತವರು ಯಾರು?

ಕೊನೆಗೊಂದು ದಿನ ಮನೆ ಸಿದ್ಧವಾಯಿತು. ಮನೆಗೆ ಇಳಕೊಳ್ಳುವ ಕಾರ್ಯಕ್ರಮಕ್ಕೆ ಮುಂಚೆ, ಕಟ್ಟಿದ ಕೆಲಸಗಾರರನ್ನೆಲ್ಲ ಕರೆದು ಅವರ ಜತೆ ಊಟಮಾಡಬೇಕು, ಅವರಿಗೆ ಏನಾದರೂ ಖುಷಿಗೆ ಕೊಡಬೇಕು ಎಂದು ತೀರ್ಮಾನಿಸಿದೆವು. ಕುಮಾರ, ಹಸೀನಕ್ಕ, ಜುಬೇರ್, ರತ್ನಕ್ಕ, ಮಾಚ ಜಂಬಯ್ಯ, ಓಬಯ್ಯ, ಪರಶು ಎಷ್ಟೆಲ್ಲ ಜನ ಈ ಮನೆ ಸೇರಿಕಟ್ಟಿದರು? ಅದರಲ್ಲೂ ಶಾಲೆಗೆ ಹೋಗಬೇಕಾದ ಪರಶು ಬೂದಿಸಿದ್ಧನಂತೆ ಸೀಮೆಂಟು ಸುರಿದುಕೊಂಡು ಗಾರೆ ಕಲಸುವಾಗ ನನ್ನ ಸಮಾಜವಾದಿ ಉಪನ್ಯಾಸ ಮತ್ತು ಬರೆಹಗಳು ನನ್ನನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದವು. ಹೊಸಪ್ಭೆಟೆಯ ಹೆಸರಿರದ ಗಲ್ಲಿಗಳಿಂದ ಬರುತ್ತಿದ್ದ ಈ ಕೆಲಸಗಾರರು ಬಡವರಾಗಿದ್ದರು. ಕೆಲಸ ಮಾಡುವಾಗ ಬೈದಾಡುತ್ತಿದ್ದರು. ಪರಸ್ಪರ ತಮಾಶೆ ಮಾಡಿ ನಗುತ್ತಿದ್ದರು. ಹಂಚಿಕೊಂಡು ತಿನ್ನುತ್ತಿದ್ದರು. ಈಗ ಅವರೆಲ್ಲ ಎಲ್ಲಿಲ್ಲಿದ್ದಾರೊ ಹುಡುಕುತ್ತ ಹೊರಟೆ. ಅವರು ತಾವು ಕಟ್ಟಿದ ಈ ಮನೆಯ ನೆನಪನ್ನೇ ಮರೆತವರಂತೆ ಇನ್ನೊಂದು ಮನೆ ಕಟ್ಟುವ ಕೆಲಸದಲ್ಲಿ ತನ್ಮಯವಾಗಿದ್ದರು. ಅವರ ಮನೆಗಳು ಚಾನಲ್ಲುಗಳ ದಡದಲ್ಲಿ, ಸ್ಲಮ್ಮಿನಲ್ಲಿ, ಗುಡ್ಡದ ಓರೆಯಲ್ಲಿ, ಹಳ್ಳದ ದಂಡೆಯಲ್ಲಿ ಇದ್ದವು. ಅವಕ್ಕೆ ತಟ್ಟಿಗೋಡೆ. ತಗಡು ಹೊದಿಕೆ. ಕೆಲವಕ್ಕೆ ಗೋಣಿಯ ಪರದೆಯೇ ಬಾಗಿಲು. ನಮ್ಮ ಚಂದದ ಮನೆ ಕಟ್ಟಿದವರು ದೊಡ್ಡಿಯಂತಹ ಗೂಡಿನಲ್ಲಿ ಬದುಕಿದ್ದರು. ಹಿಂದೆ ನಾವು ಸ್ವಂತ ಮನೆಯುಳ್ಳವರನ್ನು ಸ್ವರ್ಗವಾಸಿಗಳನ್ನು ಕಂಡಂತೆ ಕಂಡು ಕರುಬುತ್ತಿದ್ದೆವು. ಈಗ ನಮ್ಮ ಮನೆ ಕಟ್ಟಿದವರ ನರಕದ ಮನೆಗಳನ್ನು ಕಂಡು ಲಜ್ಜೆಯಾಗುತ್ತಿತ್ತು. ನಾನು ಹೋದಾಗ ಕುಶಲ ಕೆಲಸಗಾರನಾಗಿದ್ದ ಮಾಚ, ನಾನು ಹೋದಾಗ, ಗ್ಲಾಸು ತುಂಬ ಬ್ರಾಂಡಿ ಸುರುವಿಕೊಂಡು, ತಟ್ಟೆತುಂಬ ಅನ್ನದ ಹೆಂಟೆ ಇಟ್ಟುಕೊಂಡು, ಮಡದಿ ಮಕ್ಕಳ ಜತೆ ಊಟಕ್ಕೆ ಕುಳಿತಿದ್ದ. “ಬಾ ಧಣಿ, ಉಂಬಾನ. ಹೇಳಿ ಕಳಿಸಿದ್ರೆ ಬರತಿದ್ನಲ್ಲಾ, ನೀನ್ಯಾಕೆ ಬರಾಕ್ ಹೋದೆ?’ ಎಂದು ನನ್ನನ್ನು ಬರಮಾಡಿಕೊಂಡ. ಅವನ ಪರಿ ಕಂಡು, ಹೊಸಮನೆಗೆ ಪ್ರವೇಶ ಮಾಡುವ ನನ್ನ ಸಂಭ್ರಮವೇ ಅರ್ಧಕ್ಕರ್ಧ ಇಳಿದುಹೋಯಿತು.

ತಗಡು, ಸೋಗೆ, ತಟ್ಟಿ, ಗಾರೆ ಸೀಮೆಂಟು ಕಬ್ಬಿಣ ಕಲ್ಲು ಮಣ್ಣು ಮುಂತಾಗಿ, ಜೀವವಿಲ್ಲದ ವಸ್ತುಗಳನ್ನು ಬಳಸಿ ಕಟ್ಟುವ ಕಟ್ಟಡ, ಮನುಷ್ಯರು ಒಳಹೊಕ್ಕ ಕೂಡಲೇ ಮನೆಯಾಗುತ್ತದೆ. ಅದರ ಸೂರಿನಡಿ ಅಡುವ ಕುಡಿಯುವ  ಉಣ್ಣುವ ಮಲಗುವ ಪ್ರೀತಿಸುವ ಸಂಭೋಗಿಸುವ ಹೊಡೆಯುವ ಬೈದು ನೋಯಿಸುವ, ಹೆರುವ, ಸಾಯುವ-ನಮ್ಮ ಬಾಳಿನ ಮುಖ್ಯ ಘಟನೆಗಳೆಲ್ಲ ನಡೆಯುತ್ತವೆ. ಮನೆ ಬಾಡಿಗೆಯದಿರಲಿ ಸ್ವಂತದ್ದಿರಲಿ, ಅದು ನಮ್ಮ ಪ್ರೀತಿಪಾತ್ರರಾದವರ ಜತೆ ಬದುಕುವ ತಾಣ. `ಬೆಚ್ಚನ್ನ ಮನೆಯಾಗಿ’ ಎಂದು ಸರ್ವಜ್ಞ ಹೇಳುವಾಗ ಸೋರದ ಮನೆ ಎಂದರ್ಥವಲ್ಲ. ಬೆಚ್ಚನೆಯ ಭಾವ ಅನುಭವಿಸುವ ಜಾಗವೆಂದೇ ಹೇಳಿರಬೇಕು. ಆದ್ದರಿಂದಲೇ ಇರಬೇಕು, ನಮ್ಮ ಬೈಗುಳ ಶಾಪ ಬೆದರಿಕೆಗಳು- ಮನೆಹಾಳ, ನಿನ್ನಿಂದ ಮನೆ ಒಡೆಯಿತು, ನಿನ್ನ ಮನೆಗೆ ಮುಳ್ಳು ಎಳೆಯಾ, ನಿನ್ನ ಮನೆಹಾಳಾಗ, ಮನೆ ಬಿಟ್ಟಹೋಗು, ನಿನ್ನ ಮನೆ ಹೊಸಲು ತುಳಿಯೋದಿಲ್ಲ, ನಿನಗೆ ಮನೆಯಲ್ಲಿ ಸೇರಿಸಲ್ಲ ಇತ್ಯಾದಿ-ಮನೆಯ ರೆಫರನ್ಸನ್ನು ಪಡೆದಿರುವುದು. ಬಹುಶಃ ಒಬ್ಬರಿಗೆ ನೋಯಿಸುವ ಅತ್ಯಂತ ಕ್ರೂರ ವಿಧಾನವೆಂದರೆ ಅವರ ಮನೆಬಿಟ್ಟು ಹೋಗೆನ್ನುವುದು; ಅವರ ಮನೆಯನ್ನು ನಾಶಮಾಡುವುದು. ಬಾಡಿಗೆಯವರು ಮನೆ ಬಿಡಬೇಕು ಎಂದಾಗ ಬಾನುವಿಗೆ ಎಷ್ಟೊಂದು ಅಳು ಬಂದಿತ್ತು. ಮನೆ ಕಳೆದುಕೊಂಡವರು, ಹೆಣವಿಟ್ಟುಕೊಂಡು ಸಂಬಂಧಿಕರು ಅಳುವಂತೆ ಉಮ್ಮಳಿಸುತ್ತಾರೆ. ಜಾತಿ ಅಥವಾ ಕೋಮು ಸಂಘರ್ಷಕ್ಕೆ ಸಿಕ್ಕು ಬೆಂದ ಮನೆಗಳನ್ನು ನೋಡಲು ಹೋದಾಗ, ನೆರೆಯಲ್ಲಿ ಹಾಳಾದ ಹಳ್ಳಿಗಳನ್ನು ನೋಡಲು ಹೋದಾಗ ಇದನ್ನು ಕಂಡಿದ್ದೇನೆ. ಆ ಅಳು ಮನೆಯ ಆರ್ಥಿಕ ನಷ್ಟಕ್ಕಲ್ಲ. ಅದರೊಳಗಿದ್ದ ಆಪ್ತನೆನಪುಗಳ ಭಗ್ನತೆಗೆ. ಈಗಲೂ ನಾನು ಹುಟ್ಟಿದ ಹಳ್ಳಿಗೆ ಹೋದರೆ ಎಂದೊ ಬಿದ್ದು ನೆಲಸಮವಾಗಿರುವ ಅದರ ಸಮತಲದ ಮೇಲೆ ನಿಂತು, ನನ್ನ ಬಾಲ್ಯದಲ್ಲಿ ನನ್ನ ಮಲಗುವ ಕೋಣೆ ಎಲ್ಲಿತ್ತು, ನಾವೆಲ್ಲ ಅಡುಗೆ ಮನೆಯಲ್ಲಿ ಹೇಗೆ ಕೂತು ಊಟ ಮಾಡುತ್ತಿದ್ದೆವು, ನಾವೆಲ್ಲ ಬೆಲ್ಲ ಕದಿಯುತ್ತಿದ್ದ ವಾಡೆ ಎಲ್ಲಿತ್ತು ಎಂದೆಲ್ಲ ನೆನಪಿಸಿಕೊಳ್ಳುತ್ತೇನೆ. ಬಾಳಿನ   ನೆನಪುಗಳಿಂದಲೇ ಮನೆಗೆ ಪಾವಿತ್ರ್ಯ ಬರುವುದು. ಅದರ ಭೌತಿಕ ಚೆಲುವಿನಿಂದಲ್ಲ.

ಪ್ರಾಣಿಗಳಿಗೆ ಕೀಟಗಳಿಗೆ ಹಕ್ಕಿಗಳಿಗೆ ತಮ್ಮ ಗೂಡುಗಳ ಜತೆ ಮನುಷ್ಯರಿಗಿರುವಷ್ಟು ಸಂಕೀರ್ಣ ಸಂಬಂಧಗಳಿವೆಯೇ? ವಾಚಮನ್ನಿಗಾಗಿ ಕಟ್ಟಿಸಿದ ಶೆಡ್ಡಿನ ಬೊಂಬಿನ ಪೊಳ್ಳಿನಲ್ಲಿ ಗೂಡು ಕಟ್ಟಿದ ಗುಬ್ಬಿಗಳು ಈ ಪ್ರಶ್ನೆಯನ್ನು ಹುಟ್ಟಿಸಿದವು. ಅವು ಗೂಡು ಕಟ್ಟಲಾರಂಭಿಸಿದ ಪರಿಯನ್ನು ಕಣ್ಣಾರೆ ಕಂಡೆ. ಒಂದು ದಿನ ಒಂದು ಗಂಡು ಗುಬ್ಬಿ ಬಂದು, ಹೊರಚಾಚಿದ ಬೊಂಬಿನ ಟೊಳ್ಳಿನೊಳಗೆ ಹೊಕ್ಕುಹೊರಟು ಮಾಡಿ ಜಾಗವನ್ನು ಅಜಮಾಯಿಸತೊಡಗಿತು. ಬಳಿಕ ಹುಲ್ಲುಗರಿ, ಪುಕ್ಕ, ಪ್ಲಾಸ್ಟಿಕ್ ದಾರ ತಂದು ಇಡತೊಡಗಿತು. ಇದನ್ನೆಲ್ಲ ಹೆಣ್ಣು ದೂರದಲ್ಲಿ ಕಿರುಗಣ್ಣಿನಿಂದ ಕುಳಿತು ಗಮನಿಸುತ್ತಿತ್ತು. ನಮ್ಮ ಮನೆ ಸಿದ್ಧವಾಗುವ ಮೊದಲೇ ಅವರ ಗೂಡು ಸಿದ್ಧವಾಯಿತು. ಕಡೆಗೆ ಹೆಂಗುಬ್ಬಿ ಗೂಡಿನೊಳಗೆ ಮೊಟ್ಟೆ ಇಡಲು ಒಳಗೆ ಹೋಯಿತು. ನಮ್ಮ ಗೃಹಪ್ರವೇಶಕ್ಕೆ ಮೊದಲೇ ಅವು ಅಲ್ಲಿ ಸಂಸಾರ ಹೂಡಿಬಿಟ್ಟವು. ಎಲಾ! ಸೈಟಿಗಾಗಿ ಪರದಾಡಲಿಲ್ಲ. ಬ್ಯಾಂಕಿಗೆ ಎಡತಾಕಲಿಲ್ಲ. ಕೆಲಸಗಾರರ ಜತೆ ಗುದ್ದಾಡಲಿಲ್ಲ. ಯಾರ ನೆರವೂ ಇಲ್ಲದೆ ಎಷ್ಟು ಅನಾಯಾಸ ಮನೆಕಟ್ಟಿದವು. ಅಸೂಯೆ ಹುಟ್ಟಿತು. ಗುಬ್ಬಿಗಳು ಶೆಡ್ಡನ್ನು ಕೆಡಹುವ ಮೂರು ತಿಂಗಳ ಮುಂಚೆಯೇ ಮರಿಗಳನ್ನು ಬೆಳೆಸಿ, ಗೂಡನ್ನು ತೊರೆದು ನಿರಾಳವಾಗಿ ಹಾರಿಹೋದವು.

ಇದೇ ತರಹ ನಮ್ಮ ಹಿತ್ತಲಿನೊಳಗೆ ನಾನಾ ಜಾತಿಯ ಕೀಟಗಳು ಹಕ್ಕಿಗಳು ಗೂಡು ಕಟ್ಟತೊಡಗಿದವು. ತೆಂಗಿನ ಗರಿಯ ಕೆಳಗೆ ಕಡಜಗಳು ಗೂಡು ಕಟ್ಟಿಕೊಂಡವು. ಅವು ಗಿಡದ ಹತ್ತಿರ ಹೋದಾಗ ನಮಗೆ ಕಚ್ಚಿ ಓಡಿಸುತ್ತಿದ್ದವು. ನಮ್ಮ ತೋಟದಲ್ಲಿದ್ದು ನಮಗೇ ಹೆದರಿಸುತ್ತಿವೆಯಲ್ಲ ಎಂದು ಕೋಪಗೊಂಡು ನಾನು ಆ ಗರಿಯನ್ನೇ ಹುಶಾರಾಗಿ ಕಿತ್ತು ಹೊರಗೆಸೆದೆ. ಮತ್ತೊಮ್ಮೆ ನಮ್ಮ ಹಿತ್ತಲಲ್ಲಿ ಟೈಲರ್ ಹಕ್ಕಿ ಬದನೆಗಿಡದ ಎಲೆಗಳನ್ನು ಹೆಣೆದು ಗೂಡು ಕಟ್ಟಿಕೊಂಡಿತು. ಕ್ರೋಟನ್ ಗಿಡದಲ್ಲಿ ಬುಲ್ ಬುಲ್ ತೆಂಗಿನಚಿಪ್ಪಿನಂತಹ ನಾರಿನ ಗೂಡನ್ನು ಕಟ್ಟಿಕೊಂಡಿತು. ಇವೆರಡನ್ನೂ ಬೆಕ್ಕಿನಿಂದ ರಕ್ಷಿಸಲು ನಾವು ಹಗಲೂ ರಾತ್ರಿ ಕಾದೆವು. ಅವು ಇರುವ ದಿಕ್ಕಿಗೇ ಯಾರೂ ಹೋಗಲಿಲ್ಲ. ಅವು ತಮ್ಮ ಮರಿ ಮಾಡಿಕೊಂಡು ತಮ್ಮ ಗೂಡನ್ನು ತಬ್ಬಲಿ ಮಾಡಿ ಏನೂ ಆಗದಂತೆ ಹೊರಟುಹೋದವು ನಿರಾಳವಾಗಿ

ಈಗೀಗ ಯಾಕೋ ಈ ಗಣಿಗಾರಿಕೆ ಊರನ್ನು ಬಿಟ್ಟು ಧಾರವಾಡಕ್ಕೆ ಹೋಗಿ ನೆಲೆಸಬೇಕು ಎಂದು ಆಲೋಚನೆ  ಸುಳಿಯುತ್ತದೆ. ಶಿವಮೊಗ್ಗೆ ಬಿಟ್ಟುಬರುವಾಗ ಮನೆಯಿರಲಿಲ್ಲ. ಸುಲಭವಾಗಿ ಕಿತ್ತುಕೊಂಡು ಬಂದೆವು. ಈಗ ಮನೆಯಿದೆ. ಮಾವು ಸಪೋಟ ಸಂಪಿಗೆ ನಿಂಬೆ ತೆಂಗು ಅಡಕೆ ಹಲಸು ಸೀತಾಫಲ ನುಗ್ಗೆ ಅಂಜೂರ ನೆಲ್ಲಿ ಪಾರಿಜಾತದ ಮರಗಳಿವೆ. ಇವನ್ನೆಲ್ಲ ಕಿತ್ತುಕೊಂಡು ಹೋಗುವುದು ಸುಲಭ ಅನಿಸುತ್ತಿಲ್ಲ. ಆದರೆ ನಮ್ಮನ್ನು ಬೀಳ್ಕೊಡುವುದಕ್ಕೆ ಈ ಮನೆಗಾಗಲಿ ಈ ಗಿಡಗಳಿಗಾಗಲಿ ಯಾವ ದುಗುಡವೂ ಇಲ್ಲ. ಈಗಲೂ ಶಿವಮೊಗ್ಗೆಗೆ ಹೋದರೆ ನಮ್ಮ ಹಳೆಮನೆಯ ಮುಂದೆ ಹೋಗಿ, ಬೆಳೆದ ಹೊಂಗೆ ಮರಗಳನ್ನು ನೋಡಿಕೊಂಡು ಬರುತ್ತೇವೆ. ನಮ್ಮ ಅಗಲಿಕೆಯ ಪರಿವೇ ಇಲ್ಲದೆ ಅವು ಎಲೆಯನ್ನು ಗಲಗಲಿಸಿ ನಾವು ಚೆನ್ನಾಗಿದ್ದೇವೆ ಎಂದು ಹೇಳುವಂತೆ ಭಾಸವಾಗುತ್ತದೆ.

ಮನೆ ತೊರೆಯುವ ವಿಷಯದಲ್ಲಿ ಹಕ್ಕಿಗಳಿಂದ ನಾವು ಕಲಿಯುವ ಎಷ್ಟೊಂದು ಪಾಠಗಳಿವೆ? ಆದರೆ ನಾವು ಹಕ್ಕಿಗಳಲ್ಲವಲ್ಲ.

(ಚಿತ್ರಗಳು: ಲೇಖಕರವು)