ಕೊನೆಗೆ ಕುಡಿದು ಮತ್ತೇರಿದ ಅರಮನೆಯ ಸೈನಿಕರು ಬಂದು ಬೆಕೆಟ್ಟನನ್ನ ಎಲ್ಲರೆದುರು ಕೊಲ್ಲುತ್ತಾರೆ. ಬಿಷಪ್ಪನೊಬ್ಬ ಗುರುಮನೆಯೊಳಗೆ ಹುತಾತ್ಮನಾಗಿ ತನ್ಮೂಲಕ ಸಂತನೊಬ್ಬ ಉದಯಿಸಿದ್ದೇನೋ ನಿಜ. ಆದರೆ ಅರಮನೆ ಗೆದ್ದಂತಾಯಿತೆ? ಹೇಡಿ ಸೈನಿಕರು ಏನೇನೋ ಬಡಬಡಿಸುತ್ತಾ ತಾವೆಸಗಿದ ಘೋರ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಒಬ್ಬನಂತೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದರೂ ಬಿಷಪ್ ತಪ್ಪಿಸಿಕೊಳ್ಳಲಿಲ್ಲವಲ್ಲಾ? ತಾವೇನು ಮಾಡುವ ಹಾಗಿತ್ತು? ಹಾಗಾಗಿ ಅದೊಂದು ಆತ್ಮಹತ್ಯೆ ಎಂದು ಸಹ ಅರ್ಥೈಸುತ್ತಾನೆ. ಬಡಹೆಂಗಸರ ಮೇಳ ತಮ್ಮ ಬದುಕಿನಲ್ಲಿ ಸುಖ ಸಂತೋಷಗಳೊಂದೂ ಇಲ್ಲ, ತಾವು ಏನನ್ನೂ ಬದಲಾಯಿಸಲು ಅಸಮರ್ಥರು. ಆದರೆ ತಾವು ಅಜ್ಞಾನಿಗಳಂತೂ ಅಲ್ಲ ಎಂದು ಅತ್ಯಂತ ವಿಷಾದದಿಂದ ನುಡಿಯುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತಾರನೆಯ ಬರಹ
Murder in the Cathedral
ನಾನು ಧ್ಯಾನಕ್ಕೆಂದು ಹೋಗುವ ಗುರುಮನೆ ನನ್ನ ‘ವಕ್ರಗಣ್ಣಿಗೆ’ ಹೆಚ್ಚಿನಂಶ ಒಂದು ಸಾಮಾಜಿಕ ರಂಗದಂತೆ ಕಂಡಿದ್ದಿದೆ. ಮಂದಿಯ ಮಂದಿತನವೆಲ್ಲ ಬಯಲಾಗುವುದಕ್ಕೆ ಸ್ಟೇಜಾಗಿ ಅದು ಒದಗಿ ಬಂದು ಗುರುವು ಅಲ್ಲಿ ಮೂಕಪ್ರೇಕ್ಷಕನಂತೆ ಕಾಣಿಸುತ್ತಾನಲ್ಲ ಎಂದು ಅಚ್ಚರಿಪಟ್ಟಿದ್ದೇನೆ.
ತಮ್ಮ ಪಾಡಿಗೆ ಬಂದು ಹೋಗುವ ಕಾವಿಮಂದಿ ಭಜನೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಆದರೆ ಉಳಿದವರು? ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳಲೆಂದೇ ಮುಂದಿನ ಸಾಲನ್ನು ಆಕ್ರಮಿಸಿಕೊಂಡು ಮತ್ಯಾರೂ ಬಂದು ಕೂರದಂತೆ ಹರಡಿಕೊಂಡು ಕೂರುವವರು, ಆರತಿ-ಪ್ರಸಾದ ಕೊಡುವ ನೆಪದಲ್ಲಿ ಎಲ್ಲರ ಕಣ್ಣಿಗೆ ಬೀಳಲು ನಡೆಯುವ ಸ್ಪರ್ಧೆ, ಭೋಳೆತನ, ಹುಂಬತನ, ಲೆಕ್ಕಾಚಾರ, ಅಹಂಕಾರ, … ಒಂದೇ ಎರಡೇ!
ಹಲವೊಮ್ಮೆ ತರಾತುರಿಯಲ್ಲಿ ಬಂದಿಳಿಯುವ ಮಂದಿ ಹೋಗಿ ಗುರುವಿನ ಎದುರು ನಿಂತುಬಿಟ್ಟರೆ ಮುಗಿಯಿತು! ಹೋಗಿ ಕುಂಡೆಯ ಮೇಲೆ ಜಾಡಿಸಿ ಒದೆಯಬೇಕೆನ್ನಿಸುತ್ತದೆ. ಹಿಂದೆ ಕೂತಿರುವವರು ಈ ಕುರೂಪವನ್ನು ನೋಡಲು ಬಂದಿದ್ದ? ಕೆಲವರಂತೂ ತಮ್ಮ ಮಕ್ಕಳಿಗೆ ಗುರುಮನೆ ಆಟದ ಮೈದಾನದಂತೆ ಕಂಡರೂ ಪರವಾಗಿಲ್ಲ. ಜೂಟಾಟ ನೋಡುತ್ತಾ ಮೈಮರೆತು ನಿಂತಿರುತ್ತಾರೆ.
ಮೊನ್ನೆ ಗುರುಮನೆಯಲ್ಲಿ ಧ್ಯಾನಕ್ಕೆ ಕೂತಿದ್ದಾಗ ಯಾಕೋ ಏನೋ ಟಿ ಎಸ್ ಎಲಿಯಟ್ಟನ ನಾಟಕ Murder in the Cathedral ನೆನಪಿಗೆ ಬಂದಿತ್ತು! ಕಲೆಯ ನೆಲೆಯಲ್ಲಿ ಆಧುನಿಕತೆಯ ಒಂದು ಮುಖ್ಯ ಗುಣವೆಂದರೆ ಮನಶಾಸ್ತ್ರೀಯ ಸೂಕ್ಷ್ಮಗಳನ್ನು ಎಳೆಯೆಳೆಯಾಗಿ ಬಿಡಿಸಿ ಇಡುವುದು. ಅಲ್ಲಿ ಕಪ್ಪುಬಿಳುಪು ಬೈನರಿಗಳಿಗಿಂತ ಪಾತ್ರಗಳ ಹಲವಾರು ಆಯಾಮಗಳನ್ನು ತೆರೆಯುತ್ತಾ ಅವನ್ನು ಮಾನವೀಯಗೊಳಿಸುವ ಪ್ರಯತ್ನವೇ ಮುಖ್ಯವಾಗುತ್ತದೆ.
*****
ಹನ್ನೆರಡನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಬದುಕಿದ್ದ ಒಬ್ಬ ಆರ್ಚ್ ಬಿಷಪ್ಪನ ಹೆಸರು ಥಾಮಸ್ ಬೆಕೆಟ್ ಅಂತ. ರಾಜಕೀಯ ಶಕ್ತಿಯಾದ ಅರಮನೆ ಮತ್ತು ಧಾರ್ಮಿಕ ಶಕ್ತಿಕೇಂದ್ರವಾದ ಗುರುಮನೆಯ ನಡುವಿನ ಘರ್ಷಣೆಯಲ್ಲಿ ಬೆಕೆಟ್ ಕೆಥಿಡ್ರಲ್ ಒಳಗೇ ಇರಿದು ಸಾಯಿಸಲ್ಪಡುತ್ತಾನೆ.
ಕಥೆ ಮಹಾ ನಾಟಕೀಯ ಅಂತನ್ನಿಸಿದರೂ ಸಹ ಉದ್ದೇಶ ಅದಲ್ಲ. ಈ ಹನ್ನೆರಡನೆಯ ಶತಮಾನದ ಚಾರಿತ್ರಿಕ ಘಟನೆ ನಾಟಕವಾಗುವುದು ಇಪ್ಪತ್ತನೆಯ ಶತಮಾನದ ಎಲಿಯಟ್ಟನ ಕೈಯಲ್ಲಿ. ರಂಗದ ಮೇಲೆ ಮೂಡುವುದು ಆಧುನಿಕ ಬದುಕಿನ ತಲ್ಲಣಗಳೇ. ಅದು ಬರೆಯಲ್ಪಟ್ಟಿದ್ದು ಮೊದಲನೆಯ ಮಹಾಯುದ್ಧ ಮುಗಿದ ನಂತರದ ೧೯೩೫ ರಲ್ಲಿ.
ಇಪ್ಪತ್ತನೆಯ ಶತಮಾನ ಎರಡು ಘೋರ ಯುದ್ಧಗಳನ್ನು ಕಂಡಂತ ಕಾಲ. ಧರ್ಮ-ರಾಷ್ಟ್ರಗಳ ಜೋಡಿನೃತ್ಯದಲ್ಲಿ ಹಿಟ್ಲರನಂತಹ ಮಹಾ ಪಾತಕಿಗಳು ಮೈದಳೆದ ಕಾಲ. ಎಲಿಯಟ್ಟನ ಈ ಸುಪ್ರಸಿದ್ಧ ಕಾವ್ಯನಾಟಕ ಅರಮನೆ-ಗುರುಮನೆಗಳ ನಡುವಿನ ತಲ್ಲಣವಾಗಿ ಹೊಮ್ಮುತ್ತದೆ.
ಬೆಕೆಟ್, ಇಂಗ್ಲೆಂಡಿನ ರಾಜ ಎರಡನೆ ಹೆನ್ರಿಯ ಒಬ್ಬ ಚಡ್ಡಿ ದೋಸ್ತ್. ಚಾನ್ಸೆಲರ್ ಹುದ್ದೆಯಲ್ಲಿದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಬೆಕೆಟ್ಟನಿಗೆ ಆರ್ಚ್ ಬಿಷಪ್ ಹೊಣೆಯೂ ಸಹ ಹೆಚ್ಚುವರಿಯಾಗಿ ತಗುಲಿಕೊಂಡಾಗ ಅದೇನಾಗಿ ಹೋಯಿತೋ ಏನೋ! ಲೌಕಿಕವನ್ನು ತೊರೆದು ಆಧ್ಯಾತ್ಮದತ್ತ ಹೆಚ್ಚು ಹೆಚ್ಚು ವಾಲಿಕೊಂಡುಬಿಟ್ಟ!
ರಾಜನಿಗೆ ಇದು ಸುತರಾಂ ಹಿಡಿಸುವುದಿಲ್ಲ. ಗುರುಮನೆ ಏನಿದ್ದರೂ ಅರಮನೆಯ ಹಂಗಿನಲ್ಲಿ ಇರಬೇಕು. ಅದು ಬಿಟ್ಟು ಇದೇನು ಅಧಿಕಪ್ರಸಂಗ! ಬಿಷಪ್ ಬೆಕೆಟ್ ಹೆನ್ರಿ ರಾಜನ ಹುನ್ನಾರಗಳನ್ನು ಪ್ರತಿರೋಧಿಸುತ್ತಾ ಹೋದಾಗ ಒಂದು ಹಂತದಲ್ಲಿ ದೇಶ ಬಿಟ್ಟು ತೊಲಗುವ ಗಳಿಗೆ ಬರುತ್ತದೆ. ಫ್ರಾನ್ಸಿಗೆ ಪಲಾಯನ ಮಾಡುತ್ತಾನೆ.
ಎತ್ತರದಲ್ಲಿರುವ ಪೋಪ್ ಈ ಎರಡು ಟಗರುಗಳ ನಡುವೆ ರಾಜಿಮಾಡಿಸುವ ಪ್ರಯತ್ನವನ್ನೇನೋ ಮಾಡುತ್ತಾನೆ. ಈಗ ಏಳು ವರ್ಷಗಳ ನಂತರ ಬೆಕೆಟ್ ಮರಳಿ ಬರಲಿದ್ದಾನೆ. ಆದರೆ ಹವಾಮಾನವೇ ಸರಿಯಿಲ್ಲ. ಉಸಿರು ಸಿಕ್ಕಿ ಹಾಕಿಕೊಂಡಂತೆ ಮೋಡ ಕವಿದ ವಾತಾವರಣ. ಗುಮ್ಮನೆ ಗುಸುಕನೆ ಒಳಗೇನೋ ಗುದ್ದಾಟ ನಡೆದೇ ಇದೆ.
*****
ಗ್ರೀಕ್ ನಾಟಕದಲ್ಲಿ ಮೇಳ ಎನ್ನುವುದು ಸಾಮಾನ್ಯಮಂದಿಯ ಪ್ರತಿರೂಪ. ಈ ನಾಟಕದಲ್ಲಿ ಬಡಹೆಂಗಸರ ಗುಂಪೇ ಮೇಳವಾಗಿದೆ. ಗುರುಮನೆಯೊಳಗೇ ನಡೆಯುವ ಗುರುವಿನ ಕೊಲೆಗೆ ಸಾಕ್ಷಿಯಾಗಬೇಕಾದ ಕರ್ಮಕ್ಕೆ ಸಿಕ್ಕಿದವರು.
ಅದು ಡಿಸೆಂಬರ್ ಕಾಲ. ಹಳೆಯ ವರ್ಷದ ಬವಣೆಯಿನ್ನೂ ಮುಗಿದಿಲ್ಲ. ಬರುವ ವರ್ಷ ಹೊಸದಾದ ಘೋರವನ್ನು ಹೊತ್ತು ತರಲಿದೆ ಎಂದಷ್ಟೇ ಬಲ್ಲವರು. ಏನು ಎತ್ತ ಅಂತೇನೂ ಗೊತ್ತಿಲ್ಲ.
ಕರುಣಾಮಯಿ ಬಿಷಪ್ ಹಿಂತಿರುಗಿ ಬರಲಿದ್ದಾನೆ, ಸರಿ. ಕುರುಬನಿಲ್ಲದೆ ಏಳು ವರ್ಷ ದಿಕ್ಕೆಟ್ಟಿದ್ದ ಕುರಿಮಂದೆ ತಾವು ಎನ್ನುವುದೂ ನಿಜ. ಆದರೆ ಗುರುವು ಮರಳಿ ಬರುವ ಸುದ್ದಿ ಹರುಷ ತಂದಿಲ್ಲವೇಕೆ?
ಏನೋ ತಳಮಳ, ತಲ್ಲಣ, ಆಗಬಾರದ್ದು ಆಗಿಯೇ ಹೋಗುತ್ತದೆ, ನೋಡಬಾರದ್ದನ್ನು ನೋಡಲೇ ಬೇಕಾಗುತ್ತದೆ, ಇದೇನು ಕರ್ಮವೋ ಎಂಬ ಬೇಗುದಿ ಎದೆಯಲ್ಲಿ. ಈ ಹೆಂಗಸರು ಕೇವಲ ಮೂಕಸಾಕ್ಷಿಯಾಗುವ ಅನಿವಾರ್ಯಕ್ಕೆ ಸಿಕ್ಕವರು. ಏನನ್ನೂ ಮಾಡಲಾಗದ ಅಸಹಾಯಕತೆಗೆ ಪಕ್ಕಾದವರು.
‘ಬದುಕು ದಾರುಣ, ನಿಜ. ಪಡಬಾರದ ಪಾಡು, ನಿಜ. ಆದರೂ ತಾವು ಬಡ ಮಂದಿ. ತೆವಳುತ್ತಾ, ಬಳಲುತ್ತಾ ಹೇಗೋ ಸಾಗುತ್ತೇವಲ್ಲ? ಚಳಿಗಾಲ ನಮ್ಮನ್ನು ನಡುಗಿಸಿದರೂ ಸರಿಯೇ, ಬಿರುಬೇಸಿಗೆ ನೀರಿನ ತೊರೆಗಳನ್ನೆಲ್ಲ ಒಣಗಿಸಿದರೂ ಸರಿಯೇ. ಚಳಿ ಬಂದಾಗ ಬಿಸಿಲಿಗೆ ಕಾಯುತ್ತಾ, ಅದು ಬಂದಾಗ ಇದಕ್ಕೆ ಕಾಯುತ್ತಾ ಎರಡರಲ್ಲೂ ಸುಖ ಶಾಂತಿಯಿಲ್ಲ ಎಂದು ಅನುಭವಕ್ಕೆ ಬಂದರೂ ಸರಿಯೇ! ನಮ್ಮನ್ನು ನಮ್ಮ ಪಾಡಿಗೆ ಬಿಡಬಾರದೇ? ನೀನೇಕೆ ಈಗ ಬರುತ್ತಿರುವೆ ಗುರುವೇ? ಮರಳಿ ಹೋಗಬಾರದೆ?’
ಅಲ್ಲಿ ಮೂವರು ಪಾದ್ರಿಗಳು ಸಹ ಇದ್ದಾರೆ. ಅವರಿಗೆ ಗುರು ಮರಳಿ ಬರುತ್ತಿರುವ ವಿಷಯ ಸಂಭ್ರಮದ ಜೊತೆಗೆ ಭಯವನ್ನೂ ಸಹ ಹೊತ್ತು ತಂದಿದೆ. ಸುದ್ದಿ ಹೊತ್ತು ತಂದವ ಬೆಕೆಟ್ ಫ್ರಾನ್ಸಿನಿಂದ ಹೊರಡುವಾಗ ಆ ರಾಜನಿಗೆ ‘ಇನ್ನು ನಿಮ್ಮನ್ನು ಭೇಟಿಯಾಗುವ ಭಾಗ್ಯ ನನಗಿಲ್ಲ’ ಎಂದು ಹೇಳಿದ್ದನ್ನು ತಲುಪಿಸುತ್ತಾನೆ. ಏನದರ ಅರ್ಥ?
ಒಬ್ಬ ಪಾದ್ರಿಯ ಪ್ರಕಾರ ಬೆಕೆಟ್ ಸಾತ್ವಿಕ ಅಹಂಕಾರದಲ್ಲಿ ಕುರುಡಾದವ. ಅವನಿಗೆ ತಾನು ಮಹಾ ಉದಾರಿ ಎಂಬ ಮದ. ತನ್ನಂತ ನಿಷ್ಪಕ್ಷಪಾತಿ ಇನ್ನೊಬ್ಬರಿಲ್ಲ ಎಂಬ ಅಹಂಕಾರ. ‘ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ’! ದೇವರೊಬ್ಬನೇ ತನ್ನ ಒಡೆಯ ಎಂಬ ದಾರ್ಷ್ಟ್ಯ. ಇನ್ನಾರಿಗೂ ಆ ಯೋಗ್ಯತೆಯಿಲ್ಲ ಎಂಬ ತಾತ್ಸಾರ.
ಇನ್ನೊಬ್ಬ ಪಾದ್ರಿ ಭಯ ಆತಂಕಗಳ ನಡುವೆಯೇ, ‘for good or ill, let the wheel turn’ ಎಂಬ ನಿಶ್ಚಿಂತೆಯಲ್ಲಿದ್ದಾನೆ. ಒಳ್ಳೆಯದಕ್ಕೊ, ಕೆಟ್ಟದ್ದಕ್ಕೊ, ಚಕ್ರ ಉರುಳಿಯೇ ತೀರುತ್ತದೆ, ಅಷ್ಟೇ!

ಬೆಕೆಟ್ ಪ್ರವೇಶವಾಗುತ್ತದೆ. ಪಾದ್ರಿಗಳು ಬಡಬಡವೆನ್ನುತ್ತಿರುವ ಬಡಹೆಂಗಸರನ್ನು ಗದರಿಸುತ್ತಿರುವಾಗ ನಡುವೆ ಪ್ರವೇಶಿಸುತ್ತಾ, ‘ಬಯ್ಯಬೇಡಿ, ನಿಮಗೆ ತಿಳಿದಿಲ್ಲದ್ದು ಅವರಿಗೆ ತಿಳಿದಿರಬಹುದು’ ಎಂದು ಹೇಳುತ್ತಾನೆ. ಚಕ್ರ ಉರುಳಿದಂತೆ ಕಂಡರೂ ಅದು ನಿಶ್ಚಲವೇ. ಉರುಳಿಸಬಲ್ಲ ಶಕ್ತಿ ಇರುವುದು ಆ ದೇವನೊಬ್ಬನಿಗೇ.
ಬಿಷಪ್ ಬೆಕೆಟ್ ಆಮಿಷಗಳನ್ನು ಮೀರಿದವನೇನೂ ಅಲ್ಲ. ಎಲಿಯೆಟ್ ಆಮಿಷ ಎಂಬ ಗುಣವನ್ನು ಮಾನವ ರೂಪಕ್ಕೆ ಇಳಿಸಿದ್ದಾನೆ. ಮೊದಲನೆಯವನು ಕಾಣಿಸಿಕೊಂಡು ಬೆಕೆಟ್ಟನಿಗೆ ಕಳೆದು ಹೋದ ಸುದಿನಗಳನ್ನು ನೆನಪಿಸುತ್ತಾನೆ. ಸಾಕ್ಷಾತ್ ರಾಜನ ಸಖ್ಯ! ನೋಡು, ರಾಜಿ ಮಾಡಿಕೊಂಡರೆ ಕಳೆದಿದ್ದು ಮರಳಿ ಬಂದೀತು!
ರಾಜಿಗೆ ತೆರಬೇಕಾದ ಬೆಲೆ? ಆತ್ಮವನ್ನೇ ಮಾರಿಕೊಳ್ಳುವ ಇರಾದೆ ತನಗಂತೂ ಇಲ್ಲ! ಕಳೆದದ್ದು ಕಳೆದು ಹೋದದ್ದೇ! ತನಗೆ ಬೇಕಿಲ್ಲ! ಉರುಳುವ ಚಕ್ರದ ಮೇಲಿರುವ ಹುಲುಮನುಷ್ಯ ಚಕ್ರವನ್ನು ಉರುಳಿಸುತ್ತಿರುವುದು ತಾನೇ ಎಂಬ ಭ್ರಮೆಯಲ್ಲಿ ಮುಳುಗಿರುತ್ತಾನೆ!
ಎರಡನೆಯವ ಇನ್ನಷ್ಟು ಸೂಕ್ಷ್ಮ. ಅರಮನೆಯ ಶಕ್ತಿ ಸೇರಿದರೆ ಗುರುಮನೆಗೆ ಏನು ಮಾಡಲು ತಾನೇ ಸಾಧ್ಯವಿಲ್ಲ? ಎಲ್ಲೆಲ್ಲೂ ಕ್ಷೇಮ, ಸಮೃದ್ಧಿ! ಅರಮನೆಯ ಬಲವಿಲ್ಲದಿದ್ದರೆ ನೀನೊಬ್ಬ ಹಾಳೂರಿನ ರಾಜ ಅಷ್ಟೆ!
ಬೆಕೆಟ್ ಒಪ್ಪಲಾರ. ತಾನು ರಾಜರ ರಾಜ, ದೇವರ ಸೇವಕ! ಯಾರಿಗೂ ಡೊಗ್ಗು ಸಲಾಮು ಹೊಡೆಯಲಾರೆ. ಲೋಕದ ಕ್ಷೇಮ ಸಮೃದ್ಧಿಗಳು ನಿಜವಲ್ಲ. ನಿರಂತರವೂ ಅಲ್ಲ. ಆ ಭ್ರಮೆಗೆ ನನ್ನ ಆತ್ಮವನ್ನು ಮಾರಿಕೊಳ್ಳಲಾರೆ!
ನೀನೊಬ್ಬ ಮಹಾಮೂರ್ಖ ಎಂದು ಶಪಿಸುತ್ತಾ ಎರಡನೆಯ ಆಮಿಷ ತೊಲಗುತ್ತದೆ.
ಮೂರನೆಯವ ವಿನಯವೇ ಸಾಕಾರವಾಗಿ ಬಂದಿರುವ ಇನ್ನಷ್ಟು ಸೂಕ್ಷ್ಮವಾದ ಆಮಿಷ. ತನಗೇನೂ ಗೊತ್ತಿಲ್ಲ. ಸಾಧಾರಣದಲ್ಲಿ ತಾನೊಬ್ಬ ಸಾಧಾರಣದವ (ಕೇವಲ ಪಕೋಡಾ ಮಾರುವವ!). ನೀನು ನಾನು ಒಂದೇ ಧರ್ಮ-ಜನಾಂಗಕ್ಕೆ ಸೇರಿದವರು ತಾನೇ? ಹೆನ್ರಿಯ ವಿರುದ್ಧ ನಾವೆಲ್ಲ ನಾರ್ಮನ್ನರು ಒಂದು. ನೀನೊಬ್ಬನೇ ನಿಂತರೆ ಗೆಲ್ಲಲಾರೆ. ನಾವೇ ಇಂಗ್ಲೆಂಡಿನ ನಿಜವಾದ ಮೂಲ ಪ್ರಜೆಗಳು, ಹೆನ್ರಿಯಲ್ಲ! ನಾವು, ಫ್ರಾನ್ಸ್, ಪೋಪ್ ಸೇರಿಕೊಂಡರೆ ಹೆನ್ರಿಯನ್ನು ಕಿರುಬೆರಳಲ್ಲಿ ಎತ್ತಿ ಒಗೆಯಬಹುದು! ಗುರುಮನೆಯ ಶಕ್ತಿಯನ್ನು ಸಾಬೀತು ಮಾಡಲು ಇದು ಸಕಾಲ!
ತನ್ನ ಮನಸ್ಸಿನಲ್ಲಿ ಹಿಂದೊಮ್ಮೆ ಇದು ಬಂದಿದ್ದು ನಿಜ ಎಂದು ಬೆಕೆಟ್ ಒಪ್ಪಿಕೊಳ್ಳುತ್ತಾನೆ. ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಹೆಜ್ಜೆಯಿಟ್ಟವನಿಗೆ ತಪ್ಪೊಪ್ಪಿಗೆ ಕಂಗೆಡಿಸುವುದಿಲ್ಲ. ಆದರೆ ರಾಜದ್ರೋಹ, ಮಿತ್ರದ್ರೋಹ ತನಗೆ ತಕ್ಕದ್ದೇ ಅಲ್ಲ.
ಕೊನೆಯದಾಗಿ ಬಂದ ನಾಲ್ಕನೆಯವ ಮಾತ್ರ ಅತ್ಯಂತ ಅಪಾಯಕಾರಿ. ಎಂದೋ ಮಿತ್ರನಾಗಿದ್ದ ರಾಜ ಮತ್ತೆ ಇನ್ನೊಮ್ಮೆ ಮಿತ್ರನಾಗಲಾರ. ಗುಮಾನಿ ಕಾಡುತ್ತಲೇ ಇರುತ್ತದೆ. ಆ ಬಾಗಿಲು ನಿನ್ನ ಮಟ್ಟಿಗೆ ಮುಚ್ಚಿದಂತೆಯೇ. ಹುತಾತ್ಮನಾಗು, ಸಂತನ ಪಟ್ಟಕ್ಕೆ ನಿನ್ನನ್ನು ಏರಿಸಲಾಗುತ್ತದೆ. ಮಂದಿ ಮೊಣಕಾಲೂರಿ ನಿನ್ನನ್ನು ಸ್ತುತಿಸದಿದ್ದರೆ ಕೇಳು. ಸಾತ್ವಿಕ ವಿಜಯದ ಪರಮಾವಧಿಯನ್ನು ಮುಟ್ಟಿಬಿಡು!
ಆಮಿಷದ ಈ ರೂಪ ಮಾತ್ರ ಬೆಕೆಟ್ಟನಿಗೆ ಅನಿರೀಕ್ಷಿತ. ಅವನು ಸಹ ಅದರ ಸುಳಿಗೆ ಸಿಕ್ಕಿದವನೆ! ತನ್ನ ಅಂತರಾತ್ಮದಲ್ಲಿ ಸುಳಿದ ಆಸೆಗಳನ್ನು ಹೀಗೆ ಮುಲಾಜಿಲ್ಲದೆ ಬಡಬಡಿಸುತ್ತಿರುವ ಧೂರ್ತನನ್ನು ಮೊದಲು ತೊಲಗಿಸಬೇಕು!
ಕೊನೆಗೆ ಕುಡಿದು ಮತ್ತೇರಿದ ಅರಮನೆಯ ಸೈನಿಕರು ಬಂದು ಬೆಕೆಟ್ಟನನ್ನ ಎಲ್ಲರೆದುರು ಕೊಲ್ಲುತ್ತಾರೆ. ಬಿಷಪ್ಪನೊಬ್ಬ ಗುರುಮನೆಯೊಳಗೆ ಹುತಾತ್ಮನಾಗಿ ತನ್ಮೂಲಕ ಸಂತನೊಬ್ಬ ಉದಯಿಸಿದ್ದೇನೋ ನಿಜ. ಆದರೆ ಅರಮನೆ ಗೆದ್ದಂತಾಯಿತೆ? ಹೇಡಿ ಸೈನಿಕರು ಏನೇನೋ ಬಡಬಡಿಸುತ್ತಾ ತಾವೆಸಗಿದ ಘೋರ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಒಬ್ಬನಂತೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದರೂ ಬಿಷಪ್ ತಪ್ಪಿಸಿಕೊಳ್ಳಲಿಲ್ಲವಲ್ಲಾ? ತಾವೇನು ಮಾಡುವ ಹಾಗಿತ್ತು? ಹಾಗಾಗಿ ಅದೊಂದು ಆತ್ಮಹತ್ಯೆ ಎಂದು ಸಹ ಅರ್ಥೈಸುತ್ತಾನೆ.
ಬಡಹೆಂಗಸರ ಮೇಳ ತಮ್ಮ ಬದುಕಿನಲ್ಲಿ ಸುಖ ಸಂತೋಷಗಳೊಂದೂ ಇಲ್ಲ, ತಾವು ಏನನ್ನೂ ಬದಲಾಯಿಸಲು ಅಸಮರ್ಥರು. ಆದರೆ ತಾವು ಅಜ್ಞಾನಿಗಳಂತೂ ಅಲ್ಲ ಎಂದು ಅತ್ಯಂತ ವಿಷಾದದಿಂದ ನುಡಿಯುತ್ತದೆ.
*****
ಎಲಿಯಟ್ಟನ ನಾಟಕದ ಕಥೆಯನ್ನು ಹೇಳುವುದು ಈ ಲೇಖನದ ಉದ್ದೇಶವಲ್ಲ. ಇಲ್ಲಿ ಪ್ರಸ್ತುತವಾಗುವುದು ಇಪ್ಪತ್ತನೆಯ ಶತಮಾನದ ಒಬ್ಬ ನಾಟಕಕಾರ ಹನ್ನೆರಡನೆಯ ಶತಮಾನದಲ್ಲಿ ನಡೆದ ಚಾರಿತ್ರಿಕ ಘಟನೆಯನ್ನು ಇಟ್ಟುಕೊಂಡು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾನೆ ಎನ್ನುವುದು. ಅದಕ್ಕೆ ಒದಗಿ ಬರುವುದು ಕುಡಿದು ಬಂದು ಕೊಲೆಗೈದ ಅರಮನೆಯ ಸೈನಿಕರ ನಂತರದ ಮಾತುಗಳು.
ತಾವು ಮಾಡಿದ್ದು ನಿಸ್ವಾರ್ಥದ ಕೆಲಸ. ಅದರಲ್ಲಿ ತಮಗೆ ಸ್ವಂತ ಹಿತಾಸಕ್ತಿ ಏನೂ ಇಲ್ಲ ಎಂದು ಆ ಮಂದಿಯ ಬಾಯಲ್ಲಿ ಪದೇ ಪದೇ ಹೇಳಿಸಲಾಗುತ್ತದೆ. ಎರಡು ಮಹಾಯುದ್ಧಗಳ ಇಪ್ಪತ್ತನೆಯ ಶತಮಾನದ ಈಚೆಗೆ ಹೊಮ್ಮಿರುವ ಫ್ಯಾಸಿಸ್ಟ್ ಶಕ್ತಿಗಳು ಹೇಳುವುದು ಇದನ್ನೇ. ದೇಶ-ರಾಷ್ಟ್ರ-ಪ್ರಭುತ್ವಗಳ ಸಲುವಾಗಿ, ಸಾಮಾನ್ಯ ಜನರ ಕ್ಷೇಮಕ್ಕಾಗಿ ಹಿಂಸೆ ಅನಿವಾರ್ಯ ಎಂದು ಸಹ ಅವು ಬಡಬಡಿಸುತ್ತವೆ.
ಎಲಿಯಟ್ ಈ ನಾಟಕವನ್ನು ಬರೆದಾಗ ಯುರೋಪಿನಲ್ಲಿ ಹೆಚ್ಚಿನಂಶ ಸಂಪ್ರದಾಯಪರ ಬಲಪಂಥೀಯ ಸರಕಾರಗಳು ಮೆರೆಯುತ್ತಿದ್ದವು. ಪ್ರಭುತ್ವದ ಬಗ್ಗೆ ಬಂದ ಯಾವುದೇ ರೀತಿಯ ಟೀಕೆ ಟಿಪ್ಪಣಿಗಳನ್ನು ಸಹಿಸದೆ ಅಂಥವರನ್ನು ‘ಎಡಪಂಥೀಯರು’ ಎಂದು ಗುಲ್ಲೆಬ್ಬಿಸಿ ಬೇಟೆಯಾಡಲಾಗುತ್ತಿತ್ತು.
ಅಂತಹ ಹುಂಬತನಕ್ಕೆ ಗುರುವೊಬ್ಬನ ಸಾತ್ವಿಕ ಮತ್ತು ಜನಪರ ನಿಲುವು ಸಹ ಹಿಡಿಸಲಾರದು, ಗುರುಮನೆಯಲ್ಲೇ ಅವನ ಕೊಲೆ ಮಾಡಲು ಸಹ ಅದು ಹೇಸುವುದಿಲ್ಲ ಎಂಬ ಸತ್ಯಕ್ಕೆ ನಮ್ಮನ್ನು ಎದಿರಾಗಿಸುವುದು ಎಲಿಯಟ್ಟನ ಉದ್ದೇಶವಾಗಿತ್ತು.
‘ಉಸಿರೆತ್ತದೆ ತೆಪ್ಪಗಿರುವುದೇ ಸಭ್ಯಸ್ಥಿಕೆ, ಸುಮ್ಮನೆ ಮನೆಗೆ ಹೋಗಿ, ಎಲ್ಲೂ ಗುಂಪುಗೂಡಬೇಡಿ,’ ಎಂದು ಒಬ್ಬ ಕುಡಿದ ಸೈನಿಕ ಮಂದಿಗೆ ಎಚ್ಚರಿಸುತ್ತಾನೆ. ಇಪ್ಪತ್ತೊಂದನೆಯ ಶತಮಾನದ ಪ್ರಜಾಪ್ರಭುತ್ವದ ನೆಪದಲ್ಲಿ ಸಹ ಅದು ಮುಂದುವರೆಯುತ್ತದೆ.
ಆದರೆ ಇಂದಿನ ಶತಮಾನದಲ್ಲಿ ಹೆಚ್ಚಿನಂಶ ಅರಮನೆ-ಗುರುಮನೆಗಳು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಸಾಗುತ್ತವೆ ಎನ್ನುವುದೂ ಅಷ್ಟೇ ನಿಜ. ಅಧಿಕಾರದ ಹಪಿಹಪಿ ಇರುವ ಮಂದಿಗೆ ಗುರುಮನೆಯನ್ನು ಹಿಡಿದರೆ ರಾಷ್ಟ್ರವ್ಯವಸ್ಥೆಯ ಅರಮನೆ ದಕ್ಕುತ್ತದೆ ಎಂಬ ಭ್ರಮೆ! ಇವತ್ತಿಗಷ್ಟೇ ಲಾಭವಾದರೂ ಸರಿಯೇ, ಅರಮನೆಯ ಒತ್ತಾಸೆಗೆ ಬಾಯಿಬಿಡುವ ಗುರುಮನೆಗಳಿಗೆ ಪರದ ಚಿಂತೆ ಯಾಕೆ, ಇಹಕ್ಕೆ ಸಂದರೆ ಸಾಕು ಎನ್ನುವ ಭ್ರಮೆ!
ಇಲ್ಲದಿದ್ದರೆ ರಕ್ತ-ಯಾತ್ರೆಯ ಮೂಲಕವೇ ಉದ್ಘಾಟನೆಯಾಗಿದ್ದ ರಾಮಮಂದಿರದ ಪ್ರತಿಷ್ಠಾಪನೆಗೆ ಹೆಚ್ಚಿನಂಶ ಎಲ್ಲ ಗುರುಮನೆಗಳು ಬೇಷರತ್ತಾಗಿ ಯಾಕೆ ಸಂಭ್ರಮಿಸುತ್ತಿದ್ದವು?

ಇಲ್ಲದಿದ್ದರೆ ಬೆಳಗಾದರೆ ಊರುಮಠ, ಕೇರಿಮಠ, ಪೀಠ ಹಗರಣ, ವಿವಾದ ಇತ್ಯಾದಿಗಳನ್ನು ನೋಡುವ ಕರ್ಮ ನಮ್ಮಂತಹ ಮೇಳದ ಮಂದಿಗೆ ಯಾಕೆ ಒದಗಿ ಬರಬೇಕಿತ್ತು?
ಓಂ ಶಾಂತಿ ಶಾಂತಿ ಶಾಂತಿ ಎಂದಷ್ಟೇ ಹೇಳೋಣವೇ? ಮೇಳದ ಬಡ ಮಂದಿಯಂತೆ?

