ಗುಲಬರ್ಗ ಜಿಲ್ಲೆಯ ಮಳಖೇಡಕ್ಕೆ ಹೋಗಬೇಕೆಂದು ಬಹುಕಾಲದಿಂದ ಹೊಂಚು ಹಾಕಿಕೊಂಡಿದ್ದೆ. ಯಾಕೋ ಏನೋ ಅವಕಾಶ ಕೂಡಿಬಂದಿರಲಿಲ್ಲ. ಅಲ್ಲಿಗೆ ಹೋಗಲು ಎರಡು ಸೆಳೆತಗಳಿದ್ದವು. ಎರಡನೆಯದಾಗಿ, ಮಳಖೇಡದಲ್ಲಿ ನಡೆಯುವ ಸೂಫಿಸಂತ ಖಲೀಫತುರ್ ರಹಮಾನ್ ಖಾದ್ರಿ ಉರುಸು. ಆ ಉರುಸಿನಲ್ಲಿ ಗುಲಬರ್ಗಾ ಭಾಗದ ಸರ್ವಧರ್ಮದ ಮುಖಂಡರು ಕಲೆಯುವರು; ಅಲ್ಲಿ ಸೂಫಿಸಂಗೀತ ಗೋಷ್ಠಿ ನಡೆಯುವುದು. ಈ ಭಾಗದ ಪ್ರಸಿದ್ಧ ಗೀಗೀ ತಂಡಗಳು ಬಂದು ಹಾಡುವವು. ಮಾರ್ಗಕಾರನ ಊರಲ್ಲಿ ಓಡಾಡಲು, ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾದ ಜನ ಹಾಡುವುದನ್ನು ಕೇಳಲು ತವಕವಿತ್ತು. ಸರಿ, ಗುಂತಕಲ್ಲಿಗೆ ಹೋಗಿ, ಅಲ್ಲಿಂದ ತಿರುಪತಿಯಿಂದ ಬರುವ ರಾಯಲಸೀಮಾ ಟ್ರೈನನ್ನು ಹಿಡಿದು ಮಳಖೇಡಕ್ಕೆ ಹೋದೆ. ಸ್ಟೇಶನ್ನಿಗೆ ಇಳಿದೊಡನೆ ಎದುರಾಎದುರು ಬಿರ್ಲಾ ಸಿಮೆಂಟ್ ಕಾರ್ಖಾನೆ ಕಂಡಿತು. ಅದು ಬಯಲಲ್ಲಿ ಧುತ್ತನೆ ಎದ್ದ ಹುತ್ತದಂತಿತ್ತು. ಅದರ ಕೋವೆಗಳಲ್ಲಿ ಸಣ್ಣಗೆ ಹೊಗೆಯಾಡುತ್ತಿತ್ತು. ಮಳಖೇಡ ಸೀಮೆಯ ಜನ ಕಾರ್ಮಿಕರಾಗಿದ್ದವರು, ಅದರ ವಿಶಾಲ ಗೇಟಿನೊಳಗೆ ಬಂದುಹೋಗಿ ಮಾಡುತ್ತಿದ್ದರು. ಅಲ್ಲಿಂದ ಮಳಖೇಡಕ್ಕೆ ೫ ಕಿ.ಮೀ. ಟಂಟಂನಲ್ಲಿ ಹೊರಟೆ. ಊರ ಹೊರಗೆ ಎರೆಹೊಲಗಳ ನಡುವೆ ದರ್ಗಾಯಿದೆ. ದೂರದಿಂದಲೇ ಸರ್ಕಸ್ಸಿನ ತಂಬು ಕಂಡಿತು. ಉರುಸಿಗೆ ಜನ ಚಕ್ಕಡಿ, ಟಂಟಂ, ಟ್ರಾಕ್ಟರು, ಕಾರುಗಳಲ್ಲಿ ಬಂದಿಳಿಯುತ್ತಿದ್ದರು. ದರ್ಗಾದ ಗಿಡಗಳ ನೆರಳು ಮುಗಿದು, ಬಂದವರಿಗೆಂದು ಹಾಕಿದ ಶಾಮಿಯಾನಗಳೂ ಭರ್ತಿಯಾಗಿ, ಜನ ಸುತ್ತಮುತ್ತ ಖಾಲಿಬಿದ್ದ ಹೊಲಗಳಲ್ಲಿ ಡೇರೆ ಹಾಕುತ್ತಿದ್ದರು. ಅಂಗಡಿ-ಹೋಟೆಲಿನವರು ಈ ಮೊದಲೇ ಬಿಡಾರ ಹೂಡಿ ವ್ಯಾಪಾರ ಆರಂಭಿಸಿದ್ದರು. ಅದಕ್ಕೆ ಸಾಕ್ಷಿಯೆಂಬಂತೆ, ಮಿರ್ಚಿ ಬಾದೂಶಾ ಜಿಲೇಬಿಗಳು ತಟ್ಟೆಗಳಲ್ಲಿ ನೀಟಾಗಿ ಜೋಡಿಸಿಕೊಂಡು ಕುಳಿತಿದ್ದವು. ಜನ ಟೀ ಕುಡಿಯುತ್ತ ಬೀಡಿ ಸೇದುತ್ತ ಹೋಟೆಲು ತುಂಬ ಜೇನ್ನೊಣಗಳಂತೆ ತುಂಬಿಕೊಂಡಿದ್ದರು. ಇತ್ತ ದರ್ಗಾದ ಗುರುಗಳು ಸೂಫಿ ಸಮಾಧಿಗೆ ಗಂಧ ಹಚ್ಚಿ ಗಲೀಫಾ ಹೊದಿಸುತ್ತಿದ್ದರು. ದರ್ಗಾದ ಸುತ್ತ ಕೋಟೆಕಟ್ಟಿದಂತೆ ಭಕ್ತಗಣ ನಿಶ್ಶಬ್ದವಾಗಿ ಕೈಕಟ್ಟಿ ನಿಂತು ಅದನ್ನು ನೋಡುತ್ತಿತ್ತು. ಹೊರಗೆ ಕುರಿಯಂತೆ ಸ್ವರ ಹೊರಡಿಸುವ ಪೀಪಿ ಹಿಡಿದುಕೊಂಡ ಹುಡುಗರು, ಯಾವುದೊ ಗ್ಯಾನದಲ್ಲಿ ಕುಳಿತವರನ್ನು ಬೆಚ್ಚಿಸುವಂತೆ ಕಿವಿ ಬಳಿ ಊದಿ, ಅವರಿಂದ ಥೂಛೀ ಅನಿಸಿಕೊಂಡು ಅಡ್ಡಾಡುತ್ತಿದ್ದವು. ಉರುಸಿನ ಗದ್ದಲ ಸಂಭ್ರಮಗಳು ಗುಲಬರ್ಗ ಸೀಮೆಯ ಪ್ರಸಿದ್ಧ ಬಿಸಿಲು ಧೂಳುಗಳ ಜತೆಗೂಡಿ ಮೆಲ್ಲಮೆಲ್ಲಗೆ ಏರುತ್ತಿದ್ದವು. ನಿಜವಾಗಿ ಉರುಸಿಗೆ ಕಳೆಯೇರುವುದು ರಾತ್ರಿಗೆ. ಅಲ್ಲಿಯ ತನಕ ನನ್ನ ಮುಂದೆ ಇಡೀ ಒಂದು ಹಗಲು ತೆರೆದುಬಿದ್ದಿತ್ತು. ಅದೂ ಆಗಸದಿಂದ ಬೆಳ್ಳಗೆ ಪ್ರಖರವಾಗಿ ಸುರಿವ ಹಗಲು. ಊರಾಡಲು ಹೊರಟೆ. *****
ಆದರೆ ಇಷ್ಟೊಂದು ಭವ್ಯ ಚರಿತ್ರೆಯುಳ್ಳ ಈ ರಾಜಧಾನಿ ಪಟ್ಟಣ, ಈಗ ಸಣ್ಣ ಊರಾಗಿ ಹೇಗೆ ರೂಪಾಂತರಗೊಂಡಿತು? ಮಳಖೇಡ ಮಾತ್ರವಲ್ಲ, ಪ್ರಾಚೀನ ರಾಜಧಾನಿಗಳಾದ ಬನವಾಸಿ (ಕದಂಬ) ಬದಾಮಿ (ಚಾಲುಕ್ಯ), ಹಳೇಬೀಡು (ಹೊಯ್ಸಳ), ತಲಕಾಡು (ಗಂಗರು), ಹಂಪಿ (ವಿಜಯನಗರ) ಎಲ್ಲವೂ ಈಗ ಸಣ್ಣ ಊರುಗಳು. ಬನವಾಸಿಯಲ್ಲಿ ನಡೆದಾಡುವಾಗ ಇಲ್ಲಿ ಒಂದು ಸಾವಿರ ಬೌದ್ಧವಿಹಾರಗಳು ಇದ್ದವೇ? ವಿಜಯನಗರದಲ್ಲಿ ಅಲೆಯುವಾಗ ಇಲ್ಲಿ ಲಕ್ಷಾಂತರ ಸೈನ್ಯವಿತ್ತೇ? ಎಂದು ಶಂಕೆ ಬರುತ್ತದೆ. ಈ ಶಂಕೆ ಆಧುನಿಕ ಕಾಲದ ರಾಜಧಾನಿಗಳ ಕಲ್ಪನೆಯಲ್ಲೇ ನೋಡುತ್ತಿರುವುದರಿಂದ ಬರುತ್ತಿರಬಹುದು; ಗತ ಚರಿತ್ರೆಯನ್ನು ಕುರಿತ ಅತಿರಂಜಿತ ವೈಭವ ಕಥನಗಳ ಹ್ಯಾಂಗ್‌ಓವರಿನಿಂದ ಬಿಡಿಸಿಕೊಳ್ಳದೆ ಇರುವುದರಿಂದಲೂ ಬಂದಿರಬಹುದು; ಬಹುಶಃ ಕಾಲದ ಪ್ರಚಂಡ ಹೊಡೆತಗಳೇ ಈ ಮಾಜಿ ರಾಜಧಾನಿಗಳನ್ನು ಗ್ರಾಮರೂಪಕ್ಕೆ ಇಳಿಸಿಬಿಟ್ಟಂತಿವೆ. ಮೊಘಲರ ರಾಜಧಾನಿ ಫತೇಪುರ ಸಿಕ್ರಿ ಅರಮನೆ ಕೋಟೆಗಳ ಅವಶೇಷಗಳನ್ನು ಹೊರತು ಪಡಿಸಿದರೆ ಈಗಲೂ ಒಂದು ಗ್ರಾಮವೇ. ಆದರೆ ಮಳಖೇಡವು ಕೇವಲ ಗ್ರಾಮವಲ್ಲ. ಪಾಳು ಸುರಿವ ಗ್ರಾಮ. ಊರನ್ನು ಮುತ್ತಿಗೆ ಹಾಕಿದ ಸೈನ್ಯದಂತೆ ಸುತ್ತುವರೆದಿರುವ ಜಾಲಿಮುಳ್ಳಿನ ಕಂಟಿಗಳು. ಅದರೊಳಗೆ ತಂಬಿಗೆ ಮತ್ತು ಕೋಲು ಹಿಡಿದು ಬೀಡಿಸೇದುತ್ತ ಹೊಂಚುಹಾಕಿ ಕುಳಿತ ಸೈನಿಕರಂತಿರುವ ಜನ; ಊರೊಳಗೆ ಬಚ್ಚಲು ನೀರು ಎಲ್ಲಿಬೇಕಲ್ಲಿ ಹರಿದು ನಿರ್ಮಿಸಿರುವ ಸರೋವರಗಳು; ಅದರೊಳಗೆ ನಿರಾಳ ಕ್ರೀಡಿಸುವ ಹಂದಿಗಳು; ಊರ ತುಂಬ ಕಸದ ರಾಶಿ. ಹೈದರಾಬಾದ್ ಕರ್ನಾಟಕದ ಎಲ್ಲ ಊರುಗಳಲ್ಲೂ ಈ ದೃಶ್ಯ ಸಾಮಾನ್ಯ. ಈ ಭಾಗದ ಜನರಲ್ಲಿ ಸ್ವಚ್ಛತೆಯ ಅರಿವಿಲ್ಲವೊ ಅಥವಾ ನಗರವಾಸಿಗಳ ಸ್ವಚ್ಛತೆಯ ಕಣ್ಣಲ್ಲಿ ನೋಡುವುದರಿಂದ ಇವು ಹೀಗೆ ಕಾಣುತ್ತಿವೆಯೊ ತಿಳಿಯದು. ಬಹುಶಃ ಏರುಬಿಸಿಲಿನಲ್ಲಿ ಊರಾಟಕ್ಕೆ ಹೊರಟ ನನ್ನದೇ ತಪ್ಪಿರಬೇಕು. ಸಂಜೆಯ ಹೊಂಬಣ್ಣದಲ್ಲಿ ಅಥವಾ ಬೆಳುದಿಂಗಳಲ್ಲಿ ಸಾಮಾನ್ಯ ಹಳ್ಳಿಗಳೂ ರಮ್ಯವಾಗಿ ಕಾಣುತ್ತವೆ. ಹಗಲಿನ ಬೆಳಕಿನಲ್ಲಿ ಅವು ತೋರುವ ಕಟು ವಾಸ್ತವತೆ ಮನಸ್ಸನ್ನು ಕದಡುತ್ತದೆ. ನೋಡುವ ಸಮಯಕ್ಕೂ ಕಾಣುವ ದೃಶ್ಯಕ್ಕೂ ಸಂಬಂಧವಿದೆ. ಮಳಖೇಡದ ಪ್ರಸ್ತುತ ಅವಸ್ಥೆಗೆ ಮಾತ್ರ ಇದನ್ನಾಳಿದ ಸರ್ವರೂ ಕಾರಣರು; ಅದರಲ್ಲೂ ಕಳೆದ ಅರ್ಧಶತಮಾನ ಆಳಿದ ಆಧುನಿಕ ಚಕ್ರವರ್ತಿಗಳೂ ಕಾರಣರು. ಆದರೆ ಇಂತಹ ಬಡಕಲು ಊರುಗಳಲ್ಲಿ ಸಮೃದ್ಧವಾದ ಜನಪದ ಪರಂಪರೆಗಳು ನೆಲೆಸಿವೆ. ಹಿಂದುಳಿವಿಕೆಗೂ ಸಾಂಸ್ಕೃತಿಕ ಸಮೃದ್ಧಿಗೂ ವಿಚಿತ್ರ ಸಂಬಂಧವಿದೆ.
ಮಳಖೇಡದ ಕಿಲ್ಲೆಯೊಳಗೆ ಹನುಮಂತನ ಗುಡಿಯಿದೆ. ದರ್ಗಾ ಇದೆ. ಮಸೀದಿ ಇದೆ. ಆದರೆ ಜನರೇ ಇರಲಿಲ್ಲ. ಎಲ್ಲೆಡೆ ಖಬರಸ್ಥಾನದ ಮೌನ. ಕಿಲ್ಲೆಯ ನಡುವಣ ಬತೇರಿಯನ್ನೇರಿ ನಿಂತರೆ ಮೂಡಣಕ್ಕೆ ಬಸವಳಿದಂತೆ ಮಲಗಿರುವ ಊರು; ಪಡುವಣಕ್ಕೆ ಉದ್ದಕ್ಕೆ ಹರಿದಿರುವ ಕಾಗಿಣಾ ನದಿ. ಬಯಲು ಸೀಮೆಯ ಸುಡುಬಿಸಿಲಲ್ಲಿ ಹರಿವ ಜೀವನದಿ ಕಂಡರೆ ಆನಂದವಾಗುತ್ತದೆ. ಆದರೆ ಮೈತುಂಬ ನೀರಕಳೆ ಬೆಳೆಸಿಕೊಂಡಿರುವ ಕಾಗಿಣಾ ಹರಿಯುತ್ತಿರುವುದರ ಸುಳಿವೇ ಕಾಣಲಿಲ್ಲ. ಬಿರ್ಲಾ ಫ್ಯಾಕ್ಟರಿಯವರು ಕಟ್ಟಿದ ಬ್ಯಾರೇಜಿನ ಕಾರಣ ಅದು ಕೊಳಗಟ್ಟಿ ನಿಂತಿತ್ತು. ಆಧುನಿಕವಾದ ಎಲ್ಲ ಕಾರ್ಖಾನೆಗಳಿಗೂ ನದಿಪಕ್ಕದಲ್ಲೇ ಬೀಡುಬಿಡುವ ಹಠ. ಅದರಲ್ಲೂ ಸಿಮೆಂಟ್ ಫ್ಯಾಕ್ಟರಿಗೆ ಬಹಳ ನೀರು ಬೇಕಂತೆ. ಊರ ಎಲ್ಲ ಒಳಿತು ಕೆಡುಕೂಗಳೂ ಬಿರ್ಲಾ ಫ್ಯಾಕ್ಟರಿಗೆ ಲಗತ್ತಾಗಿಬಿಟ್ಟಿವೆ. ಫ್ಯಾಕ್ಟರಿಗಾಗಿ ಜಮೀನು ಕೊಟ್ಟು ಅದರಲ್ಲಿ ನೌಕರಿ ಪಡೆದವರೊಬ್ಬರು ಹೇಳಿದರು: ‘ಅದು ಬಂದ್ನಿಂದೆ ನಮಿಗೆ ಬೇಸಾಗದ. ಸುಳ್ಳು ಹೇಳಬಾರದು.’ ಕಾಗಿಣಾ ಮುಂದೆ ಭೀಮೆಯನ್ನು ಕೂಡಿಕೊಳ್ಳುತ್ತದೆ. ನನಗೆ ಇಂತಹ ಪುಟ್ಟನದಿಗಳ ಮೇಲೆ ಬಹಳ ಅಕ್ಕರಾಸ್ಥೆ. ಅವು ಪ್ರವಾಹ ತಂದು ಕಂಗೆಡಿಸುವುದಿಲ್ಲ. ದೊಡ್ಡದೊಡ್ಡ ಡ್ಯಾಂ ಕಟ್ಟಲು ಪ್ರಚೋದಿಸುವುದಿಲ್ಲ; ಅವನ್ನು ದಾಟಲು ದೊಡ್ಡ ಪೂಲುಗಳು ಬೇಡ. ಬ್ಯಾರೇಜು ಕಟ್ಟಿ ಹೊಲಗಳಿಗೆ ನೀರು ತಿರುಗಿಸಿಕೊಳ್ಳಬಹುದು. ಅವು ಸಂಗಾತಿಗಳಿದ್ದಂತೆ-ಹೆಗಲಮೇಲೆ ಕೈಹಾಕಿ ನಡೆಯಬಹುದು. ಆದರೂ ಕಾಗಿಣಾ ಇಲ್ಲಿನ ಹೊಲಗಳಲ್ಲಿ ಹಸಿರನ್ನು ಹಬ್ಬಿಸಿರಲಿಲ್ಲ. ವಾಡಿ, ಚಿತಾಪುರ, ಮಳಖೇಡ ಸೇಡಂ ಎಲ್ಲಿತನ ಹೋದರೂ, ಕಾಗಿಣಾ ತೀರದಲ್ಲಿ ಒಣಗಿದ ಹೊಲಗಳು. ಆದರೆ ನಾಲ್ಕೂ ಸಿಮೆಂಟು ಫ್ಯಾಕ್ಟರಿಗಳು ಅದರ ಜಲವನ್ನು ಹೀರುತ್ತಿದ್ದವು. ಕಿಲ್ಲೆಯ ಕೆಲವು ಭಾಗಗಳಲ್ಲಿ ಬಸದಿಯ ಅವಶೇಷಗಳು ಕಂಡವು. ಕರ್ನಾಟಕದಲ್ಲಿ ಎಲ್ಲ ಮತಗಳಿಂದ ಪೆಟ್ಟು ತಿಂದು ಹಿಂಜರಿದ ಧರ್ಮಗಳಲ್ಲಿ ಜೈನವೂ ಒಂದು. ಒಂದು ಕಾಲಕ್ಕೆ ಮಳಖೇಡವು ಜೈನಧರ್ಮದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು. ಇಲ್ಲಿದ್ದ ಜೈನ ಆಚಾರ್ಯರು ಜೈನಪುರಾಣ ರಚಿಸಿದರು. ಕವಿರಾಜಮಾರ್ಗಕಾರನಂತೂ ಸರಿಯೇ ಸರಿ; ಜತೆಗೆ ಇಲ್ಲಿ ಪೊನ್ನನಿದ್ದ; ಅಪಭ್ರಂಶಕವಿ ಪುಷ್ಪದಂತನಿದ್ದ; ಇದೇ ರಾಷ್ಟ್ರಕೂಟರ ಸಾಮಂತನೊಬ್ಬನ ಆಸ್ಥಾನದಲ್ಲಿ ಪಂಪನಿದ್ದ. ಇಷ್ಟೆಲ್ಲ ಇದ್ದರೂ ಮಾರ್ಗಕಾರನ ಕಾಲಕ್ಕೇ ಜೈನಮತದ ಕುಸಿತ ಆರಂಭವಾಗಿತ್ತು. ಮತಗಳ ನಡುವೆ ಸಂಘರ್ಷ ಶುರುವಾಗಿತ್ತು. ಆದ್ದರಿಂದಲೇ ಇರಬೇಕು ಕವಿರಾಜಮಾರ್ಗಕಾರನು ‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮಂ ಪರವಿಚಾರಮುಂ’ ಎಂದು ಹೇಳಿಕೆ ಮಾಡಬೇಕಾಯಿತು. ಇದರರ್ಥ ‘ಚಿನ್ನದಂತಹ ಶ್ರೇಷ್ಠವಾದ ಸಂಗತಿ ಯಾವುದೆಂದರೆ, ಮತ್ತೊಬ್ಬರ ವಿಚಾರವನ್ನು ಮತ್ತೊಬ್ಬರ ಧರ್ಮವನ್ನು ಸಹನೆಯಿಂದ ನೋಡುವುದು’ ಎಂದು. ಸಹನೆಯನ್ನು ಒಂದು ಮೌಲ್ಯವಾಗಿಸುವ ಈ ಮಾತು, ಭಾರತದಂತಹ ಬಹುಧರ್ಮ ಬಹುಸಂಸ್ಕೃತಿಯ ದೇಶದಲ್ಲಿ ಎಷ್ಟೊಂದು ಅಗತ್ಯ ತತ್ವ ಎಂದು ಬೇರೆ ಹೇಳಬೇಕಿಲ್ಲ. ಇದು ನಮ್ಮ ಡೆಮಾಕ್ರಸಿಗೂ ಬೇಕಾದ ತತ್ವವಾಗಿದೆ.
ಮಳಖೇಡವು ಜೈನ, ವೈಷ್ಣವ, ಶೈವಗಳನ್ನು ಕಂಡಿತು; ಬಳಿಕ ಇಸ್ಲಾಮನ್ನೂ ಮಾಧ್ವಮತವನ್ನೂ ಕಂಡಿತು. ಎಲ್ಲ ಮತಗಳ ಏಳುಬೀಳಿಗೆ ಸಾಕ್ಷಿಯಾಗಿರುವ ಮಳಖೇಡದಲ್ಲಿ ಸದ್ಯಕ್ಕೆ ಎಲ್ಲ ಧರ್ಮಸ್ಥರೂ ಬಡವರೇ ಆಗಿದ್ದಾರೆ. ಒಂದು ನಾಡಿನಲ್ಲಿ ಬಹುಧರ್ಮಗಳಿರುವುದು ವರವೂ ಹೌದು. ಶಾಪವೂ ಹೌದು. ಕಾರಣ, ಪ್ರಭುತ್ವಕ್ಕೆ ಯಾರು ಹತ್ತಿರವಾಗಬೇಕೆಂಬ ವಿಷಯದಲ್ಲಿ ಅವುಗಳಲ್ಲಿ ಏರ್ಪಡುವ ಸ್ಪರ್ಧೆ ವೈರಕ್ಕೂ ಕಾರಣವಾಗುತ್ತದೆ. ಕುತೂಹಲಕರ ಸಂಗತಿಯೆಂದರೆ, ದೊರೆಗಳ ಆಶ್ರಯ ಪಡೆದ ಧರ್ಮಗಳು ದೊರೆಗಳಿಲ್ಲದಾಗ ಸೊರಗುವುದು; ದೊರೆಗಳ ಹಂಗಿಗೆ ಒಳಗಾಗದ ದುಡಿವ ಸಮುದಾಯದ ಧರ್ಮಗಳು, ಮುಗಿಲನ್ನು ನೆಚ್ಚಿಕೊಂಡೇ ಬದುಕುವ ಖುಷ್ಕಿ ಜಮೀನಿನ ಬೆಳೆಗಳಿದ್ದಂತೆ, ಬದುಕುವುದು. ಜೈನರಾದ ಆದಿತ್ಯಬಿರ್ಲಾ ಮಳಖೇಡದಲ್ಲಿ ಹೊಸದೊರೆಯಾಗಿ ಬಂದಿದ್ದಾರೆ. ಆದರೆ ಇಲ್ಲಿ ಜೈನ ಧರ್ಮೀಯರು ಬೆರಳೆಣಿಕೆಯಷ್ಟಿದ್ದಾರೆ. ಊರಲ್ಲಿ ಬಸದಿಯಿದೆಯೆ ಎಂದು ಕೇಳಿದೆ. ಮಲ್ಲಿನಾಥ ಬಸದಿ ಇದೆಯೆಂದು ಹೇಳಿದರು. ಪ್ರಾಚೀನ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳ ಪಾಲಿಗೆ ಬಸದಿಗಳು ತೀರ್ಥಂಕರರು ಎಂದರೆ, ಜೀವವಿಕಾಸದ ಶೋಧಕರಿಗೆ ಡೈನೊಸರಸ್ ಅಸ್ಥಿಪಂಜರ ಕಂಡಂತೆ. ಒಬ್ಬ ಹುಡುಗ ನನ್ನನ್ನು ಕೋಟೆ ಹೆಬ್ಬಾಗಿಲಿಗೆ ಸಮೀಪವೇ ಒಂದು ಗಲ್ಲಿಯಲ್ಲಿ ಹುಗಿಸಿ, ದೊಡ್ಡಮಾಳಿಗೆ ಮನೆಯ ಮಗ್ಗುಲಲ್ಲಿ ಹಾಯಿಸಿ, ವಠಾರದಂತಹ ಒಂದು ಪ್ರಾಂಗಣಕ್ಕೆ ತಂದುಬಿಟ್ಟನು. ಬಸದಿಯ ಪಡಸಾಲೆ ಹೊಕ್ಕು ಅದರ ಮಬ್ಬಿಗೆ ಕಣ್ಣು ಹೊಂದಿಸಿಕೊಂಡು ನೋಡುತ್ತಲೇ ಅವಾಕ್ಕಾಗಿ ಹೋದೆ. ಮೂಲೆಯಲ್ಲಿ ಒಬ್ಬ ಬತ್ತಲೆಸ್ವಾಮಿ ಪದ್ಮಾಸನ ಕೂತಿದ್ದರು. ಅವರೆದುರು ಗೋಡೆಗೊರಗಿ ಒಬ್ಬ ಆರ್ಯಿಕೆ ಶ್ವೇತವಸ್ತ್ರ ಧಾರಿಣಿ ನವಿಲುಗರಿಯ ಪಿಂಛದಿಂದ ಗಾಳಿಹಾಕಿಕೊಳ್ಳುತ್ತ ಕುಳಿತಿದ್ದರು. ಸಾವರಿಸಿಕೊಂಡು ನಮಸ್ಕರಿಸಿದೆ. ಆರ್ಯಿಕೆ ನನ್ನನ್ನು ಕಂಡು ಒಂದು ಬೋರ್‌ವೆಲ್‌ನತ್ತ ಸನ್ನೆ ಮಾಡಿದರು. ಹೋಗಿ ಕೈಕಾಲು ಮುಖ ತೊಳೆದು ನೀರುಕುಡಿದು ಆಚಾರ್ಯರ ಮುಂದೆ ಕುಳಿತೆ. ಬಾಲ್ಯದಲ್ಲಿ ಶ್ರವಣಬೆಳಗೊಳದಿಂದ ಹುಂಚಕ್ಕೆ ನಮ್ಮೂರ ಮೇಲೆ ಬೆಳಗಿನ ಝಾವ ಕುಕ್ಕಲು ಓಟದಲ್ಲಿ ನಡೆದುಹೋಗುತ್ತಿದ್ದ ಬತ್ತಲೆಸ್ವಾಮಿಗಳನ್ನು ಕಂಡಿದ್ದೆ. ಆದರೆ ಜೈನಸಾಹಿತ್ಯ ಓದಿದ ಬಳಿಕ, ನನ್ನ ಗ್ರಹಿಕೆಯೇ ಬೇರೆಯಾಯಿತು. ಈಗ ನಿರ್‌ಗ್ರಂಥಿ ಸವಣರ ಜತೆ ಮಾತಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿತ್ತು. ಆಚಾರ್ಯರು ಮಣೆಯ ಮೇಲೆ ಕುಳಿತು ಒಂದು ಗ್ರಂಥವನ್ನು ಕೈಯಲ್ಲಿ ಬಿಡಿಸಿ ಹಿಡಿದು, ಬಂದಿದ್ದ ಒಬ್ಬ ಭಕ್ತನ ಜತೆ, ಮುಂದಿನ ತಿಂಗಳು ನಡೆಯಲಿರುವ ಬಸದಿಯ ಕಾರ್ಯಕ್ರಮಕ್ಕೆ ಬೇಕಾದ ಗ್ಯಾಸ್ ಸಿಲಿಂಡರ್ ಬಗ್ಗೆ ಚರ್ಚಿಸುತ್ತಿದ್ದರು. ಚರ್ಚೆ ಮುಗಿದ ಬಳಿಕ ನನ್ನತ್ತ ತಿರುಗಿ “ಹೇಳ್ರಿ! ನೀವ್ಯಾರು? ಎಲ್ಲಿಂದ ಬರೋಣವಾಯಿತು? ಯಾಕೆ ಬರೋಣವಾಯಿತು? ನಿಮ್ಮ ಹೆಸರೇನು?” ಎಂದು ಕೇಳಿದರು. ನಾನು “ನನ್ನ ಹೆಸರು ತರೀಕೆರೆ. ಹಂಪಿ ವಿಶ್ವವಿದ್ಯಾಲಯದಲ್ಲಿ ನೌಕರಿ ಮಾಡ್ತೀನಿ. ಉರುಸಿಗೆ ಬಂದಿದ್ದೆ” ಎಂದೆ. ಅವರ ಅಧಿಕಾರವಾಣಿಯಿಂದ ನನಗೆ ಬಸದಿಯೊಳಗೆ ಬಂದಿದ್ದು ಸರಿಯೊ ತಪ್ಪೊ ಎಂಬ ಆತಂಕ ಶುರುವಾಗಿತ್ತು. “ತರಕೇರಿ! ಪೂರಾ ಹೆಸರೇನು?” ಎಂದರು. ನಾನು “ರಹಮತ್ ತರೀಕೆರೆ” ಎಂದೆ. ಅವರ ವಿಶ್ವಾಸ ಪಡೆಯಲು “ಕನ್ನಡ ಸಾಹಿತ್ಯದ ವಿದ್ಯಾರ್ಥಿ. ಜೈನಸಾಹಿತ್ಯವನ್ನ ಅಭ್ಯಾಸ ಮಾಡಿದೀನಿ” ಎಂದೂ ಸೇರಿಸಿದೆ.
ನನಗೆ ಬಸದಿಯೊಳಗಿನ ಪಾರ್ಶ್ವನಾಥ ಮೂರ್ತಿಯನ್ನು ನೋಡುವ ಕುತೂಹಲ. ಆಚಾರ್ಯರು ಬಾಗಿಲ ಚಿಲಕ ತೆರೆಸಿ ‘ಹೊರಗಿಂದಲೇ ನೋಡ್ರಿ’ ಎಂದರು. ಒಳಗೆ ಕತ್ತಲಲ್ಲಿ ಪದ್ಮಾಸನ ಹಾಕಿ ಕುಳಿತ ಜಿನಮೂರ್ತಿ ಕಾಣಿಸಿತು. ಅರೆಗತ್ತಲಲ್ಲಿ ಅದು ಮಿರಮಿರ ಮಿಂಚುತ್ತಿತ್ತು. ಆದರೂ ಗರ್ಭಗುಡಿ ವಾಸಿಯಾದ ತೀರ್ಥಂಕರರಿಗಿಂತ ಬಟಾಬಯಲಲ್ಲಿ ನಿಂತಿರುವ ಬಾಹುಬಲಿಯೇ ಪ್ರಿಯನೆಂದು ಕಾಣುತ್ತದೆ; ನಮ್ಮನ್ನು ಕುಬ್ಜಗೊಳಿಸಿ ಮತ್ತೆ ಮೀರಿಬೆಳೆಯುವ ಮೊಳಕೆ ಪುಟಿಸುವ ಆ ಧೀಮಂತ ಮೂರ್ತಿಯನ್ನು, ಆಕಾಶ ನೋಡುವಂತೆ ನೂಕಾಟವಿಲ್ಲದೆ ನೋಡಬಹುದು. ನಮಸ್ಕರಿಸಿ ಹೊರಡಲು ಆಚಾರ್ಯರ ಅಪ್ಪಣೆ ಕೇಳಿದೆ. ‘ಓಂ ಣಂಮೊ ಸಿದ್ಧಾಣಾಂ, ಹೋಗಿಬರ್ರಿ, ನಿಮಗ ಒಳ್ಳೇದಾಗಲಿ’ ಎಂದು ಪಿಂಛವನ್ನೆತ್ತಿ ಹರಸಿದರು. ಆಚಾರ್ಯರು ಶತಮಾನಗಳ ಕಾಲದ ಹೊಡೆತದಿಂದ ವಿನಾಶದ ಅಂಚಿಗೆ ಬಂದಿರುವ ಜಿನನದಿಯ ಒಂದು ಸಣ್ಣಧಾರೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದಾರೆ ಅನಿಸಿತು. ಆರ್ಯಿಕೆ ಚಂದ್ರಮತಿಯವರಿಗೂ ವಂದಿಸಿದೆ. ಅವರೆದ್ದು “ಆಗಳೆ ನೀವು ಕುಡಿದ ನೀರು ಬೋರಿನದು. ಹೊಳೀ ನೀರು ಕುಡದುಹೋಗ್ರಿ” ಎಂದು ಬಸದಿಗೆ ಲಗತ್ತಾಗಿರುವ ಮನೆಯಿಂದ ಒಂದು ಚೊಂಬು ನೀರು ತರಿಸಿಕೊಟ್ಟರು. ಕಾಗಿಣಾ ನೀರು ಸಿಹಿಯಾಗಿತ್ತು. ಅಲ್ಲಿಂದ ಹೊರಟು ಜಾಲಿಕಂಟಿಗಳ ನಡುವೆ ಹೊಳೆ ಬಗಲಿಗೇ ತಿಪ್ಪೆಸಾಲಿನ ಪಕ್ಕ ಹಾದುಹೋಗಿರುವ ಹಾದಿಹಿಡಿದು, ಊರಹೊರಗೆ ಹೊರಟೆ. ಹೊಳೆಯ ಬದಿಯಲ್ಲಿ ಸಂಡಾಸಿಗೆ ಕೂರುವುದು, ಎಮ್ಮೆ ತೊಳೆಯುವುದು, ಮೀನು ಹಿಡಿಯುವುದು, ಬಟ್ಟೆ ಒಗೆಯುವುದು, ಜಳಕಮಾಡುವುದು, ತರ್ಪಣ ಬಿಡುವುದು, ಸಂಕಲೆಂಟೂ ಚಟುವಟಿಕೆಗಳೂ ನಡೆಯುತ್ತಿದ್ದವು. ಗಂಗೆಯ ದಡಗಳಲ್ಲೂ ಇದನ್ನು ಕಂಡಿದ್ದೇನೆ. ಊರೊಳಗೆ ಹರಿವ ಎಲ್ಲ ನದಿಗಳ ಪಾಡೂ ಒಂದೇ. ಅದರಲ್ಲೂ ನದಿ ಪವಿತ್ರವೆನಿಸಿದರೆ ಅದರ ಮೇಲೆ ಆಕ್ರಮಣ ಮತ್ತೂ ಹೆಚ್ಚು. ಒಂದು ಕಡೆ ಸತ್ತಿ (ಸರಸ್ವತಿ?) ಗುಡಿ ಕಂಡಿತು. ಕಿಂಡಿಯಲ್ಲಿ ಇಣಕಿದೆ. ಕತ್ತಲಲ್ಲಿ ವಿಗ್ರಹ ಕಾಣಲಿಲ್ಲ. ಬಳಿಕ ಹೊಳೆಯ ನೀರೊಳಗೆ ನಿಂತ ದರ್ಗಾ ಕಂಡಿತು. ಜನ ಸ್ವಯಂ ತಾವೇ ಎಡೆ ಓದಿಸಿಕೊಂಡು ಹೋಗುತ್ತಿದ್ದರು. ಕೇಳಲು ಗೈಬುಸಾಬನ ದರ್ಗಾವೆಂದು ಹೇಳಿದರು. ನದಿಗೆ ನೆರೆ ಬಂದರೂ ದರ್ಗಾ ಮುಳುಗುವುದಿಲ್ಲವಂತೆ. ಅದನ್ನು ದಾಟಿದ ಬಳಿಕ ಉತ್ತರಾದಿ ಮಠದ ವೃಂದಾವನಗಳು ಬಂದವು. ಅವು ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದ ಟೀಕಾಚಾರ್ಯರೆಂದು ಖ್ಯಾತರಾದ ಅಕ್ಷೋಭ್ಯತೀರ್ಥರ ಹಾಗೂ ಅವರ ಶಿಷ್ಯ ಜಯತೀರ್ಥರ ಸಮಾಧಿಗಳು. ವೃಂದಾವನಗಳ ಭಾಗದಿಂದ ಕಾಗಿಣಾ ಚೆನ್ನಾಗಿ ಕಾಣುತ್ತದೆ. ಪರಿಸರದಲ್ಲಿ ಜನರು ಬಹಳ ಕಮ್ಮಿಯಿದ್ದರು. ಊರಹೊರಗಿದ್ದ ವೃಂದಾವನಗಳು ದ್ವೀಪದಂತೆ ಕಂಡವು. ಪರಿಸರ ನಿಶ್ಯಬ್ದವಾಗಿತ್ತು. ಉರುಸಿಗೆ ಬಂದ ಮುಸ್ಲಿಂ ಕುಟುಂಬವೊಂದು ಟ್ರ್ಯಾಕ್ಸನ್ನು ನಿಲ್ಲಿಸಿ ಜಮಖಾನೆ ಹಾಸಿಕೊಂಡು ಆವರಣ ಮರಗಳಡಿ ವಿಶ್ರಮಿಸಿಕೊಳ್ಳುತ್ತಿತ್ತು. ಒಳಗೆ ಮಠದಲ್ಲಿ ಕೆಲವರು ಬಿಸಿಲಿನ ಆಯಾಸಕ್ಕೆ ಗಡಧಡ ದಡಘಡ ತಿರುಗುವ ಫ್ಯಾನಿನ ಕೆಳಗೆ ಅಡ್ಡಾಗಿದ್ದರು. ಮೈತುಂಬ ಗಂಧಾಕ್ಷತೆಯ ಮುದ್ರೆಧರಿಸಿದ ಒಬ್ಬ ವಯಸ್ಸಾದವರು ಏನನ್ನೊ ಓದುತ್ತಿದ್ದರು. ದೂರದಿಂದಲೇ ಮಠದ ಒಳಭಾಗದಲ್ಲಿ ಭಾಂಡೆ ತೊಳೆಯುವ ಶಬ್ದವಾಗುತ್ತಿತ್ತು. ಹೋಗಿ ಇಣುಕಿದೆ. ಮಠದ ಒಳಭಾಗ ಮೀನಾರು ಆಕಾರದ ಕಮಾನುಗಳಿಂದ ಕೂಡಿತ್ತು. ಉತ್ತರಾದಿ ಮಠದ ಯತಿಗಳಿಗೆ, ಅದರಲ್ಲೂ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳಿಗೆ ಪರಮ ಭಕ್ತರಾಗಿದ್ದ ಆದೋನಿ ನವಾಬರು ಇದನ್ನು ಕಟ್ಟಿಸಿಕೊಟ್ಟಿರೊ ಏನೊ? ಮತ್ತೆ ಊರೊಳಗೆ ಬಂದೆ. ದೊಡ್ಡದೊಂದು ವಾಡೆ ಕಂಡಿತು. ಒಂದು ಕಾಲಕ್ಕೆ ಮೆರೆದ ಲಕ್ಷಣಗಳು ನೋಡುತ್ತಲೇ ತಿಳಿಯುತ್ತವೆ. ಕೇಳಲು ಅದು ಹಿರಣ್ಯಪ್ಪ ದೇಸಾಯಿಯವರ ವಾಡೆ ಎಂದರು. ಹೆಬ್ಬಾಗಿಲ ಅಕ್ಕಪಕ್ಕದ ಕಟ್ಟೆಗಳ ಮೇಲೆ ಇಬ್ಬರು ಬೀಡಿ ಸೇದಿಕೊಂಡು ಕುಳಿತಿದ್ದ ಬಡಕಲು ವ್ಯಕ್ತಿಗಳಿಗೆ ವಾಡೆಯನ್ನು ನೋಡಬಹುದೇ ಎನ್ನಲು ‘ಏ ಬರ್ರಿ. ಯಾಕಾಗವಲ್ಲದು’ ಎಂದು ಸಂತೋಷದಿಂದ ಒಳಗೆ ಕರೆದುಕೊಂಡು ಹೋದರು. ಅವರಿಬ್ಬರೂ ದೇಸಾಯರ ಮಕ್ಕಳು. ದೊಡ್ಡದೊಡ್ಡ ಬಾಗಿಲುಗಳ ಮನೆ. ದೇಸಾಯರು ಕೂರುತ್ತಿದ್ದ ಪಡಸಾಲೆ ಪಾಳುಸುರಿಯುತ್ತಿತ್ತು. ಗಳೇವು ಸಾಮಾನು ಎಲ್ಲೆಂದರಲ್ಲಿ ಬಿದ್ದಿದ್ದವು. ಕೋಟು ಹಾಕಿ ಪೇಟಸುತ್ತಿ ಗತ್ತಿನಲ್ಲಿ ಕುಳಿತಿದ್ದ ದೇಸಾಯರ ಫೋಟೊಗಳು ಬಿಸಿಲಿಗೆ ಬಣ್ಣಕಳೆದುಕೊಂಡಿದ್ದವು. ಜಂತಿಗೆ ಹಾಕಿದ್ದ ದೊಡ್ಡದೊಡ್ಡ ತೊಲೆಗಳು ಗೆದ್ದಲು ಹಿಡಿದು ಮಾಳಿಗೆ ಸೋರಿ, ಗೋಡೆಗಳು ಶಿಥಿಲವಾಗಿದ್ದವು. ಕುರ್ಚಿ ಧೂಳುಹಿಡಿದು ಮಂಕಾಗಿತ್ತು. ಬೇರೆಬೇರೆ ಭಾಗಗಳನ್ನು ಅಣ್ತತಮ್ಮಂದಿರೂ ಅವರ ಮಕ್ಕಳೂ ಪಾಲು ಮಾಡಿಕೊಂಡು, ಏಳೆಂಟು ಒಲೆಗಳು ಉರಿಯುತ್ತಿದ್ದವು. ರಾಯಚೂರಿನ ಖಾಜನಗೌಡರ ವಾಡೆಯಲ್ಲೂ ಇಂತಹುದೇ ದೃಶ್ಯವನ್ನು ಕಂಡಿದ್ದೆ. ದೇಸಾಯರ ಕಿರಿಯ ಮಕ್ಕಳು ನನಗೆ ಪಡಸಾಲೆಯಲ್ಲಿ ಕೂರಿಸಿ, ಒಳಕೋಣೆಯತ್ತ ಕತ್ತುಚಾಚಿ ‘ಏ ಯಾರ ಹಾರ ಒಳಗಾ? ದೋ ಜಾಂ ಚಾ ಮಾಡ್ರಿ’ ಎಂದು ಕೂಗಿದರು. ತಮ್ಮ ತಂದೆ ಅಜ್ಜರ ಕತೆಯನ್ನು ಹೆಮ್ಮೆಯಿಂದ ಹೇಳಲಾರಂಭಿಸಿದರು. ಒಮ್ಮೆ ಮಳಖೇಡ ಸೀಮೆಗೆ ಬರಗಾಲ ಬಂದಾಗ, ಖಲೀಫತುರ್ ರಹಮಾನ್ ಸೂಫಿಗೂ ಅವನ ಶಿಷ್ಯರಿಗೂ ವಾಡೆಯವರು ದವಸಧಾನ್ಯ ಕೊಟ್ಟು ಜೀವ ಉಳಿಸಿದರಂತೆ. ಪಾಳು ವಾಡೆಯಲ್ಲಿ ಆಕ್ರಮಣದ ಚಿಹ್ನೆಗಳೂ ಇವೆ. ಬಾಂಧವ್ಯದ ಚಿಹ್ನೆಗಳೂ ಇವೆ. ಹಿರೀಕರ ವೈಭವದ ಬಗ್ಗೆ ಹೇಳುತ್ತಿದ್ದ ಅವರ ಮುಖದಲ್ಲಿ ಚರಿತ್ರೆಯ ಭಾರಹೊತ್ತಿರುವ ಬಳಲಿಕೆ ಮುಸುಕಿರುವುದನ್ನು ಕಂಡೆ. ದೇಸಾಯರ ಹಿರಿಯ ಮಗ, ನಿಷ್ಕಾರಣವಾಗಿ ನಮ್ಮ ಹಿಂದೆ ಮುಂದೆ ಓಡಾಡುತ್ತಿದ್ದರು. ಅವರಿಗೂ ಏನಾದರೂ ಹೇಳಬೇಕೆಂದು ಆಸೆ. ಆದರೆ ಮಾತು ಹೊರಡದಷ್ಟು ಅವರು ಟೈಟಾಗಿದ್ದರು. ಮಳಖೇಡದಲ್ಲಿ ಕಾಲುಭಾಗದಷ್ಟು ಗಂಡಸರು ಸಂಜೆಯಾಗುತ್ತಿದ್ದಂತೆ ಪರಕಾಯ ಪ್ರವೇಶ ಮಾಡುತ್ತಾರೆ. ಇದು ಉರುಸಿನ ಖುಷಿಗಾಗಿ ಏರಿದ ರಂಗೊ, ಫ್ಯಾಕ್ಟರಿಗೆ ಹೊಲಕೊಟ್ಟವರ ದುಗುಡವೊ, ಅಥವಾ ಕಾರಕಾನೆ ಪಗಾರದ ರೊಕ್ಕದಲ್ಲಿ ಮಾಡುತ್ತಿರುವ ದರ್ಬಾರೊ ತಿಳಿಯದಾಯಿತು. ಸಂಜೆ ನಾನು ಬೀದಿಯಲ್ಲಿ ಸಾಗುವಾಗ ಹೋಟೆಲಕಟ್ಟೆ ಮೇಲೆ ಕೂತಿದ್ದ ಜನರ ಗುಂಪಿನಲ್ಲಿದ್ದ ಒಬ್ಬರು ನನ್ನನ್ನು ‘ಏ ಬರ್ರಿಯಿಲ್ಲಿ, ಯಾರು ನೀವು?’ ಎಂದು ಕರೆದು ಏನುಎತ್ತ ವಿಚಾರಿಸಿದರು. ಕೊಂಚ ಹೊರಗಿನ ಜಗತ್ತನ್ನ ಬಲ್ಲವರಂತಿದ್ದ ಅವರು ಊರಿನ ಗಣ್ಯವ್ಯಕ್ತಿಯೂ ಇರಬಹುದು. ಅವರಿಗೆ ನನಗೆ ಸಹಾಯ ಮಾಡುವ ಉಮೇದಿತ್ತು. ಪರಮಾತ್ಮ ಒಳಹೊಕ್ಕಿದ್ದ ಕಾರಣ, ಬಾಯಿಂದ ಕಂಪು ಸೂಸುತ್ತಿತ್ತು. ನಾನು ‘ನಿಮ್ಮೂರ ಉರುಸು ನೋಡಲು ಬಂದೀನ್ರಿ. ಊರು ನೋಡ್ತಿದ್ದೆ’ ಎಂದೆ. “ಒಬ್ರೇ ನೋಡಿದರ ಏನ್ ತಿಳೀತೈತ್ರೀ ಊರು? ಗೊತ್ತಿದ್ದವರನ್ನ ಕರಕಂಡು ನೋಡಬೇಕು. ನಮ್ಮೂರಿಗೆ ಯಾರೇ ಬರಲಿ, ನನ್ಹತ್ತರ ಬರ್‍ತಾರ. ಯಾಕೆ? ಈ ಊರಿನ ಹಿಸ್ಟರಿ ನನಗೊತ್ತು” ಎಂದರು. ನಾನು “ಸರಿ. ನಿಮ್ಮೂರ ಬಗ್ಗೆ ಹೇಳಿ” ಎಂದೆ. ಅದಕ್ಕೆ ಅವರು “ಹೇಳಕ್ ಮೊದಲು ನೀವ್ಯಾರು? ಎಲ್ಲಿಂದ ಬಂದ್ರಿ? ಯಾಕೆ ಬಂದ್ರಿ ಎಲ್ಲ ಕರಟ್ಟಾಗಿ ಇನ್‌ಫಾರ್‌ಮೇಶನ್ ಕೊಡಬೇಕು. ಒಂದೀಟು ತಪ್ಪಾಗಬಾರದು” ಎಂದು ಎಚ್ಚರಿಸಿದರು. ನಾನು ‘ಹಂಪಿ ಯೂನಿವರ್ಸಿಟಿಲಿಂದ ಬಂದೀನಿ’ ಎಂದೆ. ‘ಏನು ಪಿಎಚ್‌ಡಿ ಮಾಡೋರಾ?’ ಎಂದರು. ‘ಅಲ್ಲ. ಅಲ್ಲಿ ಮಾಸ್ತರ್ ಎಂದೆ. ವಚನ ಬಹುದಿಂದ ಏಕಕ್ಕೆ ಇಳದಿತ್ತು. “ಅಲಲ ದೋಸ್ತ! ನನಗಾ ತಿಪ್ಪಲ ಮಾಡ್ತೀಯಲ್ಲ. ಪಿಎಚ್‌ಡಿ ಮುಗದದ ನಿನಗ? ಯಾರು ಗೈಡು? ಯಾವ ಯೂನಿವರ್ಸಿಟಿ? ನನಗ ಡಾಕಿಮೆಂಟ್ ಬೇಕು. ಬರೇ ಮಾತಾಡಿದರೆ ಕೇಳೊ ಸೂಳ್ಯಾಮಗಲ್ಲ ನಾನು” ಎಂದು ಕುಮ್ಮಕ್ಕಿಗಾಗಿ ಪಕ್ಕದಲ್ಲಿದ್ದವರ ಮುಖ ನೋಡಿದರು. ಅವರು ಅದಕ್ಕೆ ಅನುಮೋದಿಸಿದರು. ಆದರೆ ಅವರಲ್ಲೊಬ್ಬ ‘ಬಿಡ ಯಾಕ ಸತಾಸ್ತಿ ಆತಗ. ಪಾಪ, ಬಿಸಲಾಗ ಅಡ್ಡಾಡಿ ಸುಸ್ತಾಗ್ಯಾನ’ ಎಂದು, ಬಾಡುತ್ತಿದ್ದ ನನ್ನ ಮುಖ ನೋಡಿ ಕಣ್ಣುಮಿಸುಕಿ ‘ನೀವು ಹ್ವಾಗ್ರೀ ಸರ್’ ಎಂದನು. ಆದರೆ ಗೌಡರು ಬಿಡಲು ರೆಡಿಯಿರಲಿಲ್ಲ. ಅವರ ದನಿ ಏರುತ್ತಿತ್ತು. “ಕರ್ನಾಟಕ ಯೂನಿವರ್ಸಿಟಿಯಾಗ ಇರೋರೆಲ್ಲ ನನಗ ಕೂನ ಅದಾರ. ಈತ ಸುಳ್ಳು ಹೇಳ್ತದಾನ. ಏ, ನಿನ್ನಂತ ಎಷ್ಟು ಮಂದಿ ಮಾಸ್ತರನ್ನ ನೋಡಿಲ್ಲ ನಾನು?” ಎಂದು ಜೋರು ಮಾಡಿದರು. ಅಷ್ಟರಲ್ಲಿ ನನ್ನ ವಿಚಾರಣೆಗೆ ತಡೆಯಾಜ್ಞೆ ಕೊಡುವಂತೆ, ದರ್ಗಾಕ್ಕೆ ಎಡೆ ಒಯ್ಯುವ ಒಂದು ಸಣ್ಣ ಮೆರವಣಿಗೆ ಡೊಳ್ಳು ಬಾರಿಸಿಕೊಂಡು ಬಂದಿತು. ಕೂಡಲೇ ಗುಂಪಿನಲ್ಲಿ ನುಸುಳಿ ತಪ್ಪಿಸಿಕೊಂಡೆ. ಕಾಗಿಣೆಯಲ್ಲಿ ಹರಿಯುತ್ತಿರುವುದು ನೀರೊ ಮದ್ಯವೊ? ರಾಷ್ಟ್ರಕೂಟರ ಕಾಲದಲ್ಲಿ ಆಮದಾಗುತ್ತಿದ್ದ ಮುಖ್ಯ ವಸ್ತುಗಳಲ್ಲಿ ದ್ರಾಕ್ಷಾರಸವೂ ಒಂದಾಗಿತ್ತಂತೆ. ಈ ಪಾನಪ್ರಿಯರ ಕಾಟ ಗೀಗೀ ಮೇಳದಲ್ಲೂ ತಪ್ಪಲಿಲ್ಲ. ರಾತ್ರಿ ೯ಕ್ಕೆ ಸರ್ವಧರ್ಮ ಮಾನವತಾ ಸಮಾವೇಶ ಆರಂಭವಾಯಿತು. ಕವಿ ರಂಜಾನ ದರ್ಗಾ, ಭಾಲ್ಕಿಯ ಪಟ್ಟದ್ದೇವರು ಮಠದ ಸ್ವಾಮಿಗಳು, ಗುರುದ್ವಾರದ ಒಬ್ಬ ಸಿಖ್‌ಗುರು, ಹೈದರಾಬಾದಿಂದ ಬಂದಿದ್ದ ಒಬ್ಬ ಮೌಲವಿ, ಕೂಡುಬಾಳಿನ ಬಗ್ಗೆ ಚೆನ್ನಾಗಿ ಮಾತಾಡಿದರು. ಜನ ಭಾಷಣ ಕೇಳುತ್ತಲೇ ತಮ್ಮ ಬುತ್ತಿಬಿಚ್ಚಿ ಉಣ್ಣುತ್ತಿದ್ದರು. ಉಂಡವರು ಅಡ್ಡಾಗಿಕೊಂಡು ಭಾಷಣ ಕೇಳುತ್ತಿದ್ದರು. ಅಡ್ಡಾದ ಕೆಲವರು ಅರೆನಿದ್ದೆಗೆ ಸಲ್ಲುತ್ತಿದ್ದರು. ಎಲ್ಲರಿಗಿಂತ ಪರಿಣಾಮಕಾರಿಯಾಗಿದ್ದು ಮಳಖೇಡ ದರ್ಗಾದ ಗುರುಗಳ ಮಾತು. ಮಳಖೇಡ ಸೀಮೆಯ ದೇಸೀಕನ್ನಡದಲ್ಲಿ ಅವರು ಬಸವಣ್ಣನ ವಚನಗಳನ್ನು ಇಟ್ಟುಕೊಂಡು, ನಡೆ ಮತ್ತು ನುಡಿಯಲ್ಲಿ ಫರಕಿರುವ ನಮ್ಮ ಮಾತಿಗೆ ಯಾವ ಬೆಲೆಯೂ ಇಲ್ಲ. ಅದನ್ನು ಬದುಕಿನಲ್ಲಿ ಬದುಕಿ ತೋರಿದರೆ ಮಾತ್ರ ಬೆಲೆ ಎಂದು ಪ್ರಾಮಾಣಿಕವಾಗಿ ಮಾತಾಡಿದರು.
ಕೊಳ್ಳೂರಿನಿಂದ ಹರದೇಶಿ ನಾಗೇಶಿ ತಂಡಗಳು ಬಂದಿದ್ದವು. ಗಂಡು ಶಿವ ಬೆಳಕು ಮತ್ತು ಆತ್ಮ ಹೆಚ್ಚೆಂದು ಹಾಡುವ ಹರದೇಶಿ ತಂಡದ ಗಾಯಕನ ಹೆಸರು ನಸರುದ್ದೀನ್. ಅದಕ್ಕೆ ಪ್ರತಿಯಾಗಿ ಹೆಣ್ಣು ಪಾರ್ವತಿ ಕತ್ತಲು ಮತ್ತು ದೇಹ ಹೆಚ್ಚೆಂದು ಹಾಡುವ ನಾಗೇಶಿ ತಂಡಕ್ಕೆ ರೇಣುಕಾ ಗಾಯಕಿ. ಒಬ್ಬರು ಸವಾಲು ಹಾಕಿದರೆ ಅದಕ್ಕೆ ಜವಾಬು ಕೊಡುತ್ತಾರೆ ಮತ್ತೊಬ್ಬರು. ಬೆಳತನಕ ಗಾಯನ. ಹಾಡಿಕೆಯಲ್ಲಿ ಹೆಚ್ಚು ಹೊತ್ತು ಜನ ಗಾಯಕರಿಗೆ ರೊಕ್ಕ ಅಹೇರಿ ಮಾಡುವುದರಲ್ಲಿ ಕಳೆದು ಹೋಗುತ್ತಿತ್ತು. ನಡುನಡುವೆ ಈ ಕುಡುಕರ ಕೆಣಕು ಮಾತು. ಗಾಯಕರು ತಮ್ಮ ಹಾಡಲ್ಲೇ ಕುಡುಕರನ್ನು ಝಂಕಿಸುವ ಮಾತು ಸೇರಿಸಿ ಅವರನ್ನು ಹಣಿಯುತ್ತಿದ್ದರು. ನೆರೆದ ಜನ ಹೋ ಎನ್ನುತ್ತಿತ್ತು. ಮೂಡಣದಲ್ಲಿ ಕೆಂಪು ಹರಡುವ ಹೊತ್ತಿಗೆ ದರ್ಗಾದ ಗುರುಗಳು ಬಂದು ಆಸೀನರಾದರು. ಈಗ ಎರಡೂ ತಂಡದವರು ಸೇರಿ ರಾತ್ರಿಯೆಲ್ಲ ನಡೆದ ಸವಾಲು ಜವಾಬಿನ ರೊಚ್ಚನ್ನು ಬಿಟ್ಟು ಭಕ್ತಿಯಿಂದ ಮಂಗಳಪದಗಳನ್ನು ಹಾಡಬೇಕು. ಹರದೇಶಿ ತಂಡದವನು ಪ್ರವಾದಿಯವರ ಬಗ್ಗೆ ಪದ ಹಾಡಲು ಆರಂಭಿಸಿದ. ಪದ ತುಸು ದೀರ್ಘವಾಗಿತ್ತು. ಅಷ್ಟರಲ್ಲಿ ಸಭೆಯೊಳಗಿಂದ ನಶೆ ಇಳಿಯದ ಯಾರೋ ಒಬ್ಬ, ರಾತ್ರಿ ಬೈಸಿಕೊಂಡವನು, ‘ಸಾಕು ನಿಲ್ಲಸೋ ಯಪ್ಪಾ’ ಎಂದುಬಿಟ್ಟ. ಹಾಡುಗಾರ ಪದವನ್ನು ತಟ್ಟನೆ ನಿಲ್ಲಿಸಿದ. ಗೋಷ್ಠಿ ಅಚಾನಕ್ ಮುಗಿದುಬಿಟ್ಟಿತು. ದರ್ಗಾದ ಗುರುಗಳು ತಮ್ಮ ಕರ್ತವ್ಯ ಪೂರೈಸಿ ಹೋಗಿಬಿಟ್ಟರು. ಸಿಟ್ಟಿಗೆದ್ದ ಜನ ‘ಲೇ ನಮ್ಮೂರ ಮಾನ ತಗದೆ. ಏನಾಗಿತ್ತೋ ನಿನಗ’ ಎಂದು ಅವನ ಮೈಮೇಲೆ ಏರಿಹೋದರು. ‘ನಾ ಹಂಗಂದಿಲ್ಲರೊ. ಕೊಲ್ಲೀರೇನೊ ನನ್ನ? ಕೊಲ್ಲಬರ್ರಿ’ ಎನ್ನುತ್ತ ಅವನು ಉತ್ತರಿಸುತ್ತಿದ್ದನು. ಅಷ್ಟರಲ್ಲಿ ಸೂರ್ಯ ಮೇಲಕ್ಕೆ ಬಂದು ಜನರೆಲ್ಲ ಚದುರಿದರು.
ಆದರೆ ನನ್ನ ಟ್ರೈನೇ ಮೊದಲು ಬಂತು. ಹತ್ತಿಕೂತೆ. ರೈಲು ಚಲಿಸುತ್ತ ಮಳಖೇಡವು ದೂರವಾಯಿತು. ಅದರ ಮಗ್ಗುಲಿಗಿರುವ ಸಿಮೆಂಟ್ ಕಾರ್ಖಾನೆ ದೂರದವರೆಗೂ ಕಾಣುತ್ತಿತ್ತು. ಅದು ದೀಪಗಳನ್ನೆಲ್ಲ ಹೊತ್ತಿಸಿಕೊಂಡು, ಮೈತುಂಬ ಕಣ್ಣುಳ್ಳ ಆಕಾಶಕಾಯವೊಂದು ಬಯಲಲ್ಲಿ ಬಂದು ಕೂತಂತೆ ತೋರುತ್ತಿತ್ತು. ಹಿಂದೆ ರಾಷ್ಟ್ರಕೂಟದ ದೊರೆಗಳು ಗಂಗಾಬಯಲಿನ ತನಕ ಹೋಗಿ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು; ಈಗ ಅದೇ ಉತ್ತರದಿಂದ ಬಿರ್ಲಾ ಬಂದು ಮಳಖೇಡದಲ್ಲಿ ತಮ್ಮ ರಾಜ್ಯ ವಿಸ್ತರಣೆ ಮಾಡಿದ್ದಾರೆ. ನಾನಿರುವ ವಿಜಯನಗರ ಸಾಮ್ರಾಜ್ಯದ ಸೀಮೆಯಲ್ಲೂ ಕೊಪ್ಪಳದಿಂದ ಕುಡಿತಿನಿ ತನಕ ೧೨ ದೊಡ್ಡ ಕಾರ್ಖಾನೆಗಳು ತುಂಗಭದ್ರೆಯ ತೀರದಲ್ಲಿ ಬೀಡುಬಿಟ್ಟಿವೆ ತಾನೇ? ಬಹುಶಃ ನದಿದಂಡೆಗಳಲ್ಲಿ ಸಾಮ್ರಾಜ್ಯಗಳು ನೆಲೆಸುವುದನ್ನು ತಪ್ಪಿಸಲಾಗದು ಎನಿಸುತ್ತದೆ. ‘ತುಂಗಭದ್ರೆಯಿಂ ಕಾಗಿಣಾವರಮಿರ್ಪ’ ಕನ್ನಡ ನಾಡಿನಲ್ಲಿ ಸದ್ಯಕ್ಕೆ ನದಿಗಳುದ್ದಕ್ಕೂ ಹೊಸ ಸಾಮ್ರಾಜ್ಯಗಳು! [ಚಿತ್ರಗಳು-ಲೇಖಕರದು] |
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.