`ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ – ಲಂಕೇಶರ ಲೇಖನ ನೆನಪಾಗುತ್ತೆ. ಬಿಟ್ಟೇನೆಂದರೂ ಮನುಷ್ಯನಿಗೆ ಮನುಷ್ಯರ ಸಹವಾಸವನ್ನು ಬಿಡಲು ಸಾಧ್ಯವೇ? `ಯಾರ ಹತ್ತಿರವೂ ನಾನು ಮಾತಾಡುವುದಿಲ್ಲ, ಮನುಷ್ಯರ ಸಹವಾಸವೇ ಬೇಡ’ ಎಂದುಕೊಂಡ ಸಿದ್ಧಾರ್ಥನು ಕೆಲವು ದಿನ ಹೀಗಿದ್ದರೂ ನಂತರ ನಿಧಾನವಾಗಿ ಮನುಷ್ಯರ ಸಂಗ, ಸಹವಾಸ ಬೆಳೆಸುತ್ತಾ ಹೋಗುವುದು, ಸೋಫಿಯಾಳ ಪ್ರೀತಿಯಲ್ಲಿ ತಲ್ಲೀನನಾಗುವುದು, ಹಾಗೂ ತಾನು ನೋಡಿದ ವಿವರಣೆಗೆ ಮೀರಿದ ಹಿಂಸೆಯಿಂದ ಮನುಷ್ಯರ ಬಗೆಗೆ ತೀವ್ರ ಅಪನಂಬಿಕೆ ಬೆಳೆಸಿಕೊಂಡಿದ್ದ ಸೋಫಿಯಾಳು ಸಿದ್ಧಾರ್ಥನನ್ನು ಹೃದಯಕ್ಕೆ ಹಚ್ಚಿಕೊಳ್ಳುವುದು – ಇವು ಏನನ್ನು ಸೂಚಿಸುತ್ತವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೆರಡನೆಯ ಬರಹ
ಗುಹಾವಾಸಿಯುಗ, ಅಲೆಮಾರಿಯುಗ, ಬೇಟೆ-ಆಹಾರ ಸಂಗ್ರಾಹಕ ಯುಗ, ಕೃಷಿಯುಗ, ಕೈಗಾರಿಕಾಯುಗಗಳ ನಂತರದ ಮಾಹಿತಿ ತಂತ್ರಜ್ಞಾನ ಯುಗ ಹಾಗೂ ಪ್ರಸ್ತುತದ ಮಾನವನಿರ್ಮಿತ ಬುದ್ಧಿಮತ್ತೆಯ(ಎಐ) ಯುಗ! – ಮನುಕುಲದ ಬೆಳವಣಿಗೆಯ ಈ ಹಾದಿ ಅಚ್ಚರಿ ಮೂಡಿಸುತ್ತದೆ. ಅದರಲ್ಲೂ ಕೊನೆಯ ಎರಡು ಯುಗಗಳಂತೂ ತಮ್ಮ ಕ್ಷಿಪ್ರಗತಿಯ ಚಲನೆ, ಮತ್ತು ಹಿಂದಿನ ಯುಗಗಳಿಗೆ ಹೋಲಿಸಿದರೆ ತಮ್ಮಲ್ಲಿ ಉಂಟಾದ ಅತ್ಯುನ್ನತ ತಂತ್ರಜ್ಞಾನದ ಮುನ್ನಡೆ ಮತ್ತು, ಮೂಲ ಮಾನವಸಂಬಂಧಗಳಲ್ಲಿ ಅಲ್ಲದೆ ಸಾಮಾಜಿಕ ರಚನೆಗಳಲ್ಲಿ ತಾವು ತಂದ, ತರುತ್ತಿರುವ ಪಲ್ಲಟಗಳಿಂದಾಗಿ ಅಚ್ಚರಿಗಿಂತ ಮಿಗಿಲಾದ ವಿಹ್ವಲತೆಯನ್ನು ಮೂಡಿಸಿವೆ; ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಎಐ ಯುಗವು ಮನುಷ್ಯನಿಗೆ ಕೊಡುತ್ತಿರುವ ಬಿಡುವು ಹಾಗೂ ಮಾನವೀಯ ಸ್ಪರ್ಶದ `ಅನನಿವಾರ್ಯತೆಗಳು’ (ಅನಿವಾರ್ಯ ಪದಕ್ಕೆ ಅನನಿವಾರ್ಯ ಪದವು ವಿರುದ್ಧಪದವಾಗಬಹುದೇ?) ಈವರೆಗೆ ಮನುಕುಲವು ನಂಬಿಕೊಂಡು ಬಂದ ಮೂಲ ಮೌಲ್ಯಗಳನ್ನೇ ಪ್ರಶ್ನಿಸುತ್ತಿವೆ.
ನಿಜಮಾನವ ಸಂಪರ್ಕದಲ್ಲಿರುವುದಕ್ಕಿಂತ ತಮ್ಮ ಕೈಯಲ್ಲಿನ ಅಥವಾ ತೊಡೆಯ ಮೇಲಿರುವ ಉಪಕರಣಗಳ ಪರದೆಗಳ ಸಂಗದಲ್ಲೇ ಹೆಚ್ಚು ಕಾಲ ಇರುವ ಯುವಪೀಳಿಗೆ, ಅವರಲ್ಲಿ ಸಾಂಕ್ರಾಮಿಕ ಜಾಡ್ಯದಂತೆ ಹಬ್ಬುತ್ತಿರುವ ಫೋಮೊಗಳನ್ನು ಗಮನಿಸುತ್ತಿದ್ದೇವೆ. ಪೋಮೊ(FOMO) ಎಂದರೆ ಫಿಯರ್ ಆಫ್ ಮಿಸ್ಸಿಂಗ್ ಔಟ್ ; ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ಉಪಸ್ಥಿತಿಯ ಹೋಲಿಕೆಯಲ್ಲಿ, ತಾವೆಲ್ಲಿ ತಮ್ಮ ಸಹಜೀವಿಗಳಿಗಿಂತ ಹಿಂದೆ ಉಳಿದುಬಿಡುತ್ತೇವೊ ಎಂಬ ಭಯವು ಮನುಷ್ಯರ ಮನಸ್ಸಿನಲ್ಲಿ ಉಂಟಾಗುವಂಥ ವಿದ್ಯಮಾನ ಇದು. ಎಐ ಎಂಬುದು ಒಡನಾಡಿ, ಮಾನಸಿಕ ಸಲಹೆಗಾರ, ಗೆಳೆಯ, ಮಾರ್ಗದರ್ಶಕ ಎಲ್ಲವೂ ಆಗುತ್ತಿರುವ ಪ್ರಸ್ತುತ ಸನ್ನಿವೇಶದ ಪ್ರಭಾವ-ಪರಿಣಾಮಗಳು ಇನ್ನೂ ನಮಗೆ ಪೂರ್ತಿ ಅರ್ಥವಾಗಿವೆ ಎಂದು ನನಗನ್ನಿಸುತ್ತಿಲ್ಲ.
*****
ಮನುಷ್ಯರು ತಮಗಾಗಿ ನಿರ್ಮಿಸಿಕೊಂಡ ತಂತ್ರಜ್ಞಾನಮಯ ಲೋಕವು ಮನುಷ್ಯರನ್ನು ಮನುಷ್ಯರಿಂದ ಹೀಗೆ ಇನ್ನಿಲ್ಲದಂತೆ ದೂರ ಮಾಡುತ್ತಿರುವ ಹೊತ್ತಿನಲ್ಲಿ, ವಯೋಮಾನದ ಮಿತಿಗಳನ್ನು ಮೀರಿ ಜನರು ಪ್ರಕೃತಿಯ ಸಾನ್ನಿಧ್ಯದಲ್ಲಿ ತಮ್ಮ ಬದುಕಿನ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಚಾರಣ(ಟ್ರೆಕ್ಕಿಂಗ್)ನಲ್ಲಿ ಬಹಳಷ್ಟು ಜನರು ತೋರುತ್ತಿರುವ ಅತ್ಯಾಸಕ್ತಿಯು ಇದಕ್ಕೆ ಸಾಕ್ಷಿ. ಅಮಿತಾಭ್ ಬಚ್ಚನ್, ಡ್ಯಾನಿ, ಅನುಪಮ್ ಖೇರ್, ಬೊಮ್ಮನ್ ಇರಾನಿ ಹಾಗೂ ನೀನಾ ಗುಪ್ತಾ, ಸಾರಿಕಾ ಮುಂತಾದ, ಹಿರಿಯ ವಯೋಮಾನದ ನಟ-ನಟಿಯರ ಮುಖ್ಯಭೂಮಿಕೆಗಳನ್ನು ಹೊಂದಿದ್ದ `ಊಂಛಾಯಿ’ ಎಂಬ ಹಿಂದಿ ಸಿನಿಮಾ ನೆನಪಾಗುತ್ತಿದೆ(ಬಿಡುಗಡೆ – 2022, ನಿರ್ದೇಶನ – ಸೂರಜ್ ಬಾರ್ಜಾತ್ಯ, ನಿರ್ಮಾಣ – ರಾಜ್ಶ್ರೀ ಪ್ರೊಡಕ್ಷನ್ಸ್). ಎವರೆಸ್ಟ್ ಪರ್ವತದ ಬುಡಕ್ಕೆ ವಯೋವೃದ್ಧ ಕಥಾ ನಾಯಕ, ನಾಯಕಿಯರು ಚಾರಣಕ್ಕೆ ಹೋಗುವ ಈ ಸಿನಿಮಾ ಮೇಲೆ ಹೇಳಿದ ಸಂಗತಿಗಳಿಗೆ ನಿದರ್ಶನದಂತಿದೆ.
ಈ ಹಿನ್ನೆಲೆಯಲ್ಲಿ, 2023ರಲ್ಲಿ ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆಯಾದ `ಅಂಕಿತ ಪುಸ್ತಕ’ವು ಹೊರತಂದ, ಸತೀಶ್ ಚಪ್ಪರಿಕೆಯವರು ಬರೆದ `ಘಾಂದ್ರುಕ್’ ಎಂಬ ಕಾದಂಬರಿಯು ನಮ್ಮ ಕಾಲದ ಅಂದರೆ ಈ ಎಐ ಯುಗದ ತಲ್ಲಣ, ಸಾರ್ಥಕತೆಯ ಹುಡುಕಾಟ, ತಹತಹ, ಮತ್ತು ಚಾರಣಾಕಾಂಕ್ಷೆಗಳನ್ನು ಚೆನ್ನಾಗಿ ಚಿತ್ರಿಸುತ್ತದೆ ಅನ್ನಿಸಿತು.
`ಘಾಂದ್ರುಕ್’ ಎಂಬ ಪದವನ್ನು ಓದಿದ ತಕ್ಷಣ `ಇದೇನು?’ ಎಂಬ ಪ್ರಶ್ನೆ ಮೂಡಿ ತಕ್ಷಣ ಗೂಗಲಿಸಿದೆ (ಹೀಗೆ ಎಲ್ಲಕ್ಕೂ ಗೂಗಲಿಸುವುದು ಕೂಡ ಇಂದಿನ ಯುಗಧರ್ಮವಲ್ಲವೆ!). ನೇಪಾಳದ ಹಿಮಾಲಯ ಬೆಟ್ಟಸಾಲಿನ ತಪ್ಪಲಿನ ಒಂದು ಹಳ್ಳಿಯ ಹೆಸರು `ಘಾಂದ್ರುಕ್’ ಅಂತೆ; ಅನ್ನಪೂರ್ಣ ಪರ್ವತ ಹತ್ತಲು ಇಷ್ಟಪಟ್ಟು ಅದರ ತಪ್ಪಲನ್ನು ತಲುಪಬಯಸುವವರು ಈ ಹಳ್ಳಿಯ ಮೂಲಕ ಹಾದು ಹೋಗುತ್ತಾರೆ ಎಂಬ ವಿಷಯವು ಅದರ ಬಗ್ಗೆ ಹೆಚ್ಚು ಓದಿದಾಗ ತಿಳಿದು ಬಂತು.
`ಘಾಂದ್ರುಕ್’ ಕಾದಂಬರಿಯನ್ನು ಓದಲು ಪ್ರಾರಂಭಿಸುತ್ತಿದ್ದಂತೆಯೇ ಮೊದಲು ಅನ್ನಿಸುವ ವಿಷಯವೆಂದರೆ ಈ ಕಾದಂಬರಿಯು ಇಂದಿನ ಡಿಜಿಟಲ್ ಕನ್ನಡನಾಡಿನ `ನಗರನುಡಿಗಟ್ಟಿ’ನಲ್ಲಿ ಮಾತಾಡುತ್ತದೆ ಎಂಬುದು. ಎಐ(ಮಾನವನಿರ್ಮಿತ ಬುದ್ಧಿಮತ್ತೆ) ಸ್ಟಾರ್ಟಪ್, ಯೂನಿಕಾರ್ನ್ ಕಂಪೆನಿ, ಟ್ರೆಕ್ಕಿಂಗ್, ಲಿವ್ ಇನ್, ಎಲ್ಜಿಬಿಟಿ– ಈ ಪದಗಳು ಯುವಪೀಳಿಗೆಯ ಮಂತ್ರವೇನೋ ಎಂಬಂತೆ ಭಾಸವಾಗುತ್ತಿರುವ ಇಂದಿನ ದಿನಮಾನದಲ್ಲಿ, ಬೆಂಗಳೂರಿಗರಿಗೆ ಹಾಗೂ ನಗರಜೀವನದ ಪರಿಚಯ ಇರುವವರಿಗೆ ತುಂಬ ಸಮಕಾಲೀನವೆನ್ನಿಸುವ ಪರಿಸರವನ್ನು ಈ ಕಾದಂಬರಿಯು ಕಟ್ಟಿಕೊಡುತ್ತದೆ. ಗಗನಚುಂಬಿ ಗಾಜುಗೋಡೆಗಳ ಕಟ್ಟಡಗಳಲ್ಲಿ ವಾರದ ಐದು ಕೆಲಸದ ದಿನಗಳಲ್ಲಿ ಲೋಕವನ್ನೇ ಮರೆಯುವ ಸಾಫ್ಟ್ವೇರಿಗರು ವಾರಾಂತ್ಯಗಳಲ್ಲಿ ಅಥವಾ ದೀರ್ಘರಜೆಗಳಿದ್ದಾಗ ಕಾಡು, ಬೆಟ್ಟಗಳ ಪ್ರದೇಶಗಳಿಗೆ ಚಾರಣಕ್ಕೆ ಹೋಗುವುದು ಈಗ ಸಾಮಾನ್ಯ; ಸಾಮಾನ್ಯವೆನ್ನುವುದಕ್ಕಿಂತ ಅನೇಕರ ಜೀವನಶೈಲಿಯ ಒಂದು ಮುಖ್ಯಭಾಗ ಅದು. ಇಂತಹ ಪ್ರಯಾಣಗಳು ಬಹುಶಃ ಅವರಿಗೆ ತಮ್ಮನ್ನು ಹುಡುಕಿಕೊಳ್ಳಲು ಮಾತ್ರವಲ್ಲದೆ ತಮ್ಮಂತಹ ಸಮಾನ ಮನಸ್ಕರನ್ನು ಪರಿಚಯಿಸಿಕೊಳ್ಳಲು ಮತ್ತು ಅವರೊಂದಿಗೆ ಅರ್ಥಪೂರ್ಣವಾದ ಸಂಬಂಧಗಳನ್ನು ಕಟ್ಟಿಕೊಳ್ಳಲು ಕೂಡ ಸಹಾಯ ಮಾಡುತ್ತವೆ ಅನ್ನಿಸುತ್ತದೆ.
ಎಲ್ಲವನ್ನೂ ಬಿಟ್ಟು ಹೊರಡುವ ಪ್ರಯತ್ನದಲ್ಲಿರುವ ಕಥಾನಾಯಕ ಸಿದ್ಧಾರ್ಥನನ್ನು ಪರಿಚಯಿಸುವ ಮೂಲಕ ಈ ಕಾದಂಬರಿ ಶುರುವಾಗುತ್ತದೆ. ತನ್ನನ್ನು ತಾನು ಹುಡುಕಿಕೊಳ್ಳುವ ದಾರಿಯಲ್ಲಿರುವ ಮೂವತ್ತಾರು ವರ್ಷದ ವ್ಯಕ್ತಿ ಅವನು. `ಬದುಕನ್ನೇ ಮರೆಯಲು ಹೊರಟ ಒಂಟಿಜೀವಿʼ. ಜೀವನವನ್ನು ತುಂಬಿ ತುಂಬಿ ಸವಿಯಬೇಕಾದ ವಯಸ್ಸಿನಲ್ಲಿ ಇವನ ಈ `ಮಹಾಪಲಾಯನ’ಕ್ಕೆ ಕಾರಣವೇನು ಎಂಬ ಪ್ರಶ್ನೆಯು ಓದುಗರನ್ನು ಕಾಡಲಾರಂಭಿಸುತ್ತದೆ.
ಸಿದ್ಧಾರ್ಥನ ಜೀವನದ ಹಂತಗಳು ಮತ್ತು ಅನ್ನಪೂರ್ಣ ಬೇಸ್ಕ್ಯಾಂಪ್ಗೆ ಹೋಗುವ ಪರ್ವತಚಾರಣದ ಹಂತಗಳು–ಇಲ್ಲಿ ಒಂದರೊಡನೊಂದು ಮೇಳೈಸುತ್ತಾ ಹೋಗಿವೆ. `ಅನ್ನಪೂರ್ಣ ಸರ್ಕಿಟ್’ ಎಂಬ ಆ ದಾರಿಯಲ್ಲಿ ಸಿಗುವ ಊರುಗಳು, ಟೀಹೌಸ್ಗಳು ಎಂದು ಕರೆಸಿಕೊಳ್ಳುವ ಬಾಡಿಗೆ ವಾಸ್ತವ್ಯಗಳು, ಅಲ್ಲಿನ ಸರಳ ಮುಗ್ಧ ಗುಡ್ಡಗಾಡು ಜನರು, ಅವರು ಎದುರಿಗೆ ಸಿಕ್ಕಿದವರಿಗೆ ಹೇಳುವ ನಗುಮೊಗದ `ನಮಸ್ತೆ’ ಇವುಗಳನ್ನೆಲ್ಲ ಅದೆಷ್ಟು ಚೆನ್ನಾಗಿ ಇಲ್ಲಿ ಚಿತ್ರಿಸಲಾಗಿದೆ ಎಂದರೆ ನಿಜವಾಗಿಯೂ ನಾವೇ ಚಾರಣದಲ್ಲಿದ್ದೇವೇನೋ ಎಂಬ ಭಾವನೆ ಬರುತ್ತದೆ. ಜೊತೆಗೆ, `ಉದ್ಯಮ ಪ್ರಪಂಚದ ಮುಂದಿನ ದೊಡ್ಡ ಮಹಾಘಟನೆಯೆಂದರೆ ಅದು ಎಐ(ಆರ್ಟಿಫಿಶಿಯಲ್ ಇಂಟೆಲೆಜೆನ್ಸ್)’ಎಂಬುದನ್ನು ಮುಂಗಂಡು, `ಝೆಸ್ಟ್ ಇಂಟೆಲಿಜೆನ್ಸ್’ ಎಂಬ ಅತ್ಯಂತ ಯಶಸ್ವಿ ಯೂನಿಕಾರ್ನ್ ಉದ್ಯಮವೊಂದನ್ನು ಕಟ್ಟುವ ಹಾಗೂ `ವೆಂಚರ್ ಕ್ಯಾಪಿಟಲಿಸ್ಟ್’ಗಳೆಂಬ ತಿಮಿಂಗಿಲಗಳ ರಾಜ್ಯದಲ್ಲಿ ಅದನ್ನು ಕಳೆದುಕೊಳ್ಳುವ ಸಿದ್ಧಾರ್ಥನ ವೃತ್ತಿಬದುಕು, ಹಾಗೂ ಮದುವೆ ಮತ್ತು ವಿವಾಹ ಬಾಹಿರ ಪ್ರಣಯ ಎರಡರಲ್ಲೂ ಶಾಶ್ವತ ನೆಮ್ಮದಿ ಕಾಣದ ಅವನ ವೈಯಕ್ತಿಕ ಬದುಕು–ಇವೆರಡೂ ಚಾರಣದ ಹಂತಗಳೊಡನೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಬೆಟ್ಟಗಳ ದಾರಿಯ ಪಯಣ ಮತ್ತು ಕಾದಂಬರಿಯ ನಾಯಕನ ಬದುಕಿನ ಪಯಣಗಳನ್ನು ಓದುಗರಿಗೆ ಗೊಂದಲ, ಕಿರಿಕಿರಿ ಆಗದಂತೆ ಸುಗಮವಾಗಿ, ಹೊಲಿಗೆ ಗುರುತುಗಳು ಕಾಣದಂತೆ (ಸೀಮ್ಲೆಸ್ಲಿ ಪದದ ಕನ್ನಡ ತರ್ಜುಮೆ!) ಮೇಳೈಸಿರುವ ಲೇಖಕರ ಕಥನಪ್ರತಿಭೆಯ ಬಗೆಗೆ ಮೆಚ್ಚುಗೆ ಮೂಡುತ್ತದೆ(ಎಲ್ಲೋ ಒಂದು ಕಡೆ `ಆಪಲ್’ ಸಂಸ್ಥೆಯನ್ನು ಶ್ರದ್ಧೆಯಿಂದ ಕಟ್ಟಿ ನಂತರ ಅದರಿಂದ ಹೊರಬಿದ್ದ ಸ್ಟೀವ್ ಜಾಬ್ಸ್ನ ಜೀವನಕಥೆ ಸಹ ನೆನಪಾಗುತ್ತದೆ).
ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಸಿದ್ಧಾರ್ಥನಿಗೆ ತಂದೆತಾಯಿ ಎರಡೂ ಆಗುವ ಧರ್ಮರಾಜ ಶೆಟ್ಟರ ವ್ಯಕ್ತಿತ್ವವು ನೆನಪಿನಲ್ಲಿ ಉಳಿಯುವಂಥದ್ದು. ಸ್ವತಃ ತಾವು ನಾಸ್ತಿಕರಾದರೂ ತಮ್ಮ ಮೂಲವಾದ ಹೊಸ್ಮನೆ ಕುಟುಂಬದ ದೈವಾರಾಧನೆಯನ್ನು ಶ್ರದ್ಧೆಯಿಂದ ನಡೆಸಿಕೊಂಡು ಹೋಗುವ ಇವರು, ಕಾರಂತರ ಜೀವನದೃಷ್ಟಿಯನ್ನು ನೆನಪಿಸುತ್ತಾರೆ (ಅಂದರೆ, ತಾವು ದೇವರನ್ನು ನಂಬದಿದ್ದರೂ ದೇವರನ್ನು ನಂಬುವ ಪಾತ್ರಗಳನ್ನು ಶ್ರದ್ಧೆಯಿಂದ ಚಿತ್ರಿಸುವ ಕಾರಂತರ ಕಾದಂಬರಿ ಲೋಕ).

(ಸತೀಶ್ ಚಪ್ಪರಿಕೆ)
ನವಮಾನವರ ಚಾರಣಾಸಕ್ತಿಯೊಂದಿಗೆ, ಧರ್ಮವು ರಾಜಕೀಯದೊಂದಿಗೆ ಬೆರೆತಾಗ ಪಡೆದುಕೊಳ್ಳುವ ಹಿಂಸಾತ್ಮಕ ರೂಪದ ಬಗೆಗಿನ ಚಿಂತನೆ ಸಹ ಕಾದಂಬರಿಯ ಒಂದು ಮುಖ್ಯ ಕಾಳಜಿಯಾಗಿದೆ. ಬಹುಶಃ ಇದು ಇಂದಿನ ಹಿಂಸಾರಭಸಮತಿ ಕಾಲಮಾನದ ಗಂಭೀರವಿಮರ್ಶೆಯೂ ಹೌದು. ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ಅತ್ಯಂತ ಕ್ರೂರವರ್ತನೆಯ ತನ್ನ ಅಜ್ಜನು ತನ್ನ ಕಣ್ಣ ಮುಂದೆಯೇ ಮಾಡಿದ ಹಿಂಸಾಕಾಂಡಗಳನ್ನು ನೋಡಿದ, ಕೊಲಂಬಿಯಾ ದೇಶದ ಸೋಫಿಯಾ, ಮುಂದೆ ವಿಶ್ವಸಂಸ್ಥೆಯು ನಿರಾಶ್ರಿತರಿಗೆ ಮರುವಾಸ್ತವ್ಯದ ವ್ಯವಸ್ಥೆ ಮಾಡುವ ಯುಎನ್ಎಚ್ಆರ್ಸಿ ಎಂಬ ಅಂಗಸಂಸ್ಥೆಯನ್ನು ಸೇರುತ್ತಾಳೆ. ತದನಂತರ ಆಕೆಯ ಅನುಭವಕ್ಕೆ ಬರುವ ಪ್ರಪಂಚದ ಭಯಾನಕತೆಯು ನಮ್ಮ ಕಲ್ಪನೆಗೂ ಮೀರಿದ್ದು. ಅಂತರ್ಯುದ್ಧ, ಭಯೋತ್ಪಾದನೆ, ವ್ಯಕ್ತಿಗಳ ರಕ್ತಪಿಪಾಸು ಗುಣ, ಮುಗ್ಧ ಮಕ್ಕಳೆಂದು ನೋಡದೆ ತಮಗಾಗದವರ ಗುಂಪಿನವರ ಜೀವವನ್ನು ಬರ್ಬರವಾಗಿ ತೆಗೆಯುವುದು, ಪತ್ರಿಕೋದ್ಯಮಿಗಳನ್ನು, ಮಾಧ್ಯಮ ಕ್ಷೇತ್ರದವರನ್ನು ಚಿತ್ರಹಿಂಸೆ ಮಾಡಿ ಕೊಲ್ಲುವುದು……. ಒಟ್ಟಿನಲ್ಲಿ ಇವತ್ತು ನಮ್ಮ ಲೋಕವು ಎಂತೆಂತಹ ಕ್ರೌರ್ಯಗಳಿಗೆ ಸಾಕ್ಷಿಯಾಗಿದೆಯೋ ಅವೆಲ್ಲವೂ ಈ ಕಾದಂಬರಿಯಲ್ಲಿದೆ. ಹಿಂಸಕರಿಂದ ಕತ್ತು ಸೀಳಿಸಿಕೊಂಡ ಆರು ವರ್ಷದ ಮುಗ್ಧ ಹೆಣ್ಣುಮಗುವೊಂದು ಸೋಫಿಯಾಳ ಕೈಯಲ್ಲೇ ಸಾಯುತ್ತದೆ ಮತ್ತು ಆ ಘೋರ ಅನುಭವವು ತಂದಂತಹ ಮನಃಸ್ಥಿತಿಯು ಅವಳ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ಸೋಫಿಯಾ ಸಹ ಸಿದ್ಧಾರ್ಥನಂತೆಯೇ ಬೆಟ್ಟಗಳ ದಾರಿಯಲ್ಲಿ ಶಾಂತಿಯನ್ನು ಅರಸಿ ಬಂದಿರುತ್ತಾಳೆ ಮತ್ತು ನಾನಾ ಕಾರಣಗಳಿಂದಾಗಿ ನಿರಾಶ್ರಿತರಾದ ಪ್ರಪಂಚದ ಎಲ್ಲೆಡೆಯ ಮಕ್ಕಳಿಗೆ ಮರುವಸತಿ ಕಲ್ಪಿಸಿ, ಅವರಿಗಾಗಿ ಪ್ರೀತಿಯುತ ತಂಗುದಾಣವನ್ನು ಕಟ್ಟುವ (ನಮೋಬುದ್ಧ ಎಂಬ ಹೆಸರಿನ ತಾಣ)ಕನಸನ್ನು ಹೊತ್ತಿರುತ್ತಾಳೆ. ಇಂತಹ ಸೋಫಿಯಾಳು ಸಿದ್ಧಾರ್ಥನನ್ನು ಪ್ರೇಮ-ಕಾಮಗಳನ್ನು ಮೀರಿದ ನೆಲೆಯಲ್ಲಿ ಆಳವಾಗಿ ಪ್ರೀತಿಸುವುದು ಕಾದಂಬರಿಯ ಮಹತ್ವದ ತಿರುವುಗಳಲ್ಲಿ ಒಂದು.
`ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ – ಲಂಕೇಶರ ಲೇಖನ ನೆನಪಾಗುತ್ತೆ. ಬಿಟ್ಟೇನೆಂದರೂ ಮನುಷ್ಯನಿಗೆ ಮನುಷ್ಯರ ಸಹವಾಸವನ್ನು ಬಿಡಲು ಸಾಧ್ಯವೇ? `ಯಾರ ಹತ್ತಿರವೂ ನಾನು ಮಾತಾಡುವುದಿಲ್ಲ, ಮನುಷ್ಯರ ಸಹವಾಸವೇ ಬೇಡ’ ಎಂದುಕೊಂಡ ಸಿದ್ಧಾರ್ಥನು ಕೆಲವು ದಿನ ಹೀಗಿದ್ದರೂ ನಂತರ ನಿಧಾನವಾಗಿ ಮನುಷ್ಯರ ಸಂಗ, ಸಹವಾಸ ಬೆಳೆಸುತ್ತಾ ಹೋಗುವುದು, ಸೋಫಿಯಾಳ ಪ್ರೀತಿಯಲ್ಲಿ ತಲ್ಲೀನನಾಗುವುದು, ಹಾಗೂ ತಾನು ನೋಡಿದ ವಿವರಣೆಗೆ ಮೀರಿದ ಹಿಂಸೆಯಿಂದ ಮನುಷ್ಯರ ಬಗೆಗೆ ತೀವ್ರ ಅಪನಂಬಿಕೆ ಬೆಳೆಸಿಕೊಂಡಿದ್ದ ಸೋಫಿಯಾಳು ಸಿದ್ಧಾರ್ಥನನ್ನು ಹೃದಯಕ್ಕೆ ಹಚ್ಚಿಕೊಳ್ಳುವುದು – ಇವು ಏನನ್ನು ಸೂಚಿಸುತ್ತವೆ?…… ಬಹುಶಃ `ಘಾಂದ್ರುಕ್’ ಕಾದಂಬರಿ ಹೇಳದೆಯೂ ಹೇಳುವ ಒಂದು ಮನುಕುಲದ ಒಂದು ಸಾರ್ವತ್ರಿಕ ಸತ್ಯ ಅಂದರೆ ಕೊನೆಗೂ ಮನುಷ್ಯನಿಗೆ ಬೇಕಾದ್ದು ತನ್ನನ್ನು ಪ್ರೀತಿಸುವ ಒಂದು ಮನುಷ್ಯ ಹೃದಯ ಅಷ್ಟೇ. ಅದೊಂದಿದ್ದರೆ ಇನ್ನೆಲ್ಲಕ್ಕೂ ಅರ್ಥ, ಅದಿಲ್ಲದಿದ್ದರೆ ಏನಿದ್ದರೂ ವ್ಯರ್ಥ. ಬಹುಶಃ ಎಐ ಯುಗದ ರಭಸಮತಿಗೆ ಇದನ್ನು ಅರ್ಥ ಮಾಡಿಸಲು ಸಾಹಿತಿಗಳು ಹರಸಾಹಸ ಪಡಬೇಕೇನೋ ಅನ್ನಿಸುತ್ತೆ.
*****
ಕಾದಂಬರಿಯ ಕೇಂದ್ರಪ್ರಶ್ನೆಯೊಂದು ಎದುರಾಗುವುದು ಸಿದ್ಧಾರ್ಥನು ಘಾಂದ್ರುಕ್ಗೆ ಹೊರಡುವ ತುಸು ಮುಂಚೆ. ಅಷ್ಟು ಹೊತ್ತಿಗೆ ಅವನಿಗೆ ತನ್ನ ತಂದೆಯ ಜೀವನದಲ್ಲಿ ಹೆಂಡತಿಯಂತೆ ಇದ್ದ ಒಬ್ಬ ಹೆಂಗಸು ಹಾಗೂ ಅವಳ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಗು ಅಂದರೆ ತನಗೊಬ್ಬಳು ತಂಗಿ (ಪಾಶ್ಚಾತ್ಯರ ಮಾತುಗಳಲ್ಲಿ ಹೇಳುವುದಾದರೆ ಹಾಫ್ ಸಿಸ್ಟರ್ – ಅರ್ಧತಂಗಿ) ಇರುವುದು ಗೊತ್ತಾಗಿರುತ್ತದೆ. `ತನ್ನ ತಂದೆ ಬೇರೊಂದು ಸಂಬಂಧ ಇಟ್ಕೊಂಡ್ರು, ಮಗುವೊಂದನ್ನು ಪಡೆದ್ರು’ ಅನ್ನುವ ಬಗ್ಗೆ ಅವನಿಗೆ ಸಿಟ್ಟಿರುವುದಿಲ್ಲ, ಆದರೆ ಆ ವಿಷಯವನ್ನು ತನಗೆ ತಿಳಿಸದೇ, ತನ್ನ ಇನ್ನೊಂದು ತಾಯಿಯನ್ನ–ತಂಗಿಯನ್ನ ತನಗೆ ಪರಿಚಯ ಮಾಡಿಕೊಡದೇ….. ಆ ವಿಷಯವನ್ನ ಮೂವತ್ತು ವರ್ಷಗಳಷ್ಟು ಕಾಲ ರಹಸ್ಯವಾಗಿಟ್ಟು ತನಗೆ ತನ್ನದೇ ಅಮ್ಮ ತಂಗಿಯ ಪ್ರೀತಿ ಸಿಗದಂತೆ ಮಾಡಿಬಿಟ್ಟರಲ್ಲಾ”……. ಎಂದು ಅವನು ತುಂಬಾ ಬೇಸರಿಸಿಕೊಳ್ಳುತ್ತಾನೆ. ಆಗ ಸೋಫಿಯಾ ಅವನನ್ನು ಸಮಾಧಾನಿಸಿ, “ಬದುಕಲ್ಲಿ ನಾವು ಕಳ್ಕೊಂಡಿದ್ದರ ಬಗ್ಗೆ ಯೋಚನೆ ಮಾಡ್ತಾ ಇರೋ ಬದಲು ಇರುವುದರ ಬಗ್ಗೆ ಗಮನ ಹರಿಸಿ ಅದನ್ನು ಕಾಪಾಡಿಕೊಳ್ಳೋದು ಮುಖ್ಯ” ಎಂದು ಹೇಳಿರುತ್ತಾಳೆ. (ಧರ್ಮರಾಜ ಶೆಟ್ಟರಿಗೆ ಇನ್ನೊಂದು ಹೆಂಡತಿ ಹಾಗೂ ಮಗಳು ಇರುವ ಪ್ರಸಂಗವು ಕಾದಂಬರಿಯ ಬಂಧಕ್ಕೆ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆ ಓದುಗರನ್ನ ಕಾಡುವ ಸಾಧ್ಯತೆ ಇದೆ).
ಈ ಎಲ್ಲದರ ಹಿನ್ನೆಲೆಯಲ್ಲಿ ಸಿದ್ದಾರ್ಥ ಯೋಚಿಸುತ್ತಾನೆ –
“ಮುಖವಾಡಗಳು!
ಕಳಚಬೇಕು, ಒಂದೊಂದನ್ನೇ. ಇಲ್ಲವಾದಲ್ಲಿ ಈ ಬದುಕಿಗೆ ಬೆಲೆಯಿಲ್ಲ, ಅರ್ಥವಿಲ್ಲ, ಮೋಕ್ಷವಿಲ್ಲ.
ಮುಖವಾಡ ತೊಡುವುದೇ ಬದುಕೇ?
ಇಲ್ಲವಾದಲ್ಲಿ ಅದನ್ನು ಕಳಚಿ ಒಗೆಯುತ್ತ, ಒಗೆಯುತ್ತ ಬೆತ್ತಲಾಗುವುದೇ …… ನಿಜವನ್ನು ಹುಡುಕುವುದೇ ಬದುಕೇ?”
ಸಿದ್ಧಾರ್ಥನ ಪ್ರಶ್ನೆಗಳು ನಮ್ಮವೂ ಆಗಿಬಿಡುತ್ತವೆ.
*****
ಕಾದಂಬರಿಯ ಕೊನೆಯಲ್ಲಿ ಸಿದ್ಧಾರ್ಥನು ತನಗೆ ಇದ್ದ ನಾಲ್ಕು ಆಯ್ಕೆಗಳಲ್ಲಿ – ಊರಿಗೆ ಮರಳುವುದು, ಅಮೆರಿಕಾದ ಕಂಪೆನಿ ಸೇರುವುದು, `ಝೆಸ್ಟ್ ಇಂಟೆಲಿಜೆನ್ಸ್; ಕಟ್ಟಲು ತನಗೆ ಬೆಂಬಲ ನೀಡಿದ್ದ ತನ್ನ ಜೀವಕೊರಳ ಗೆಳೆಯರು ಹೈದರಾಬಾದಿನಲ್ಲಿ ಹೊಸದಾಗಿ ಶುರುಮಾಡಿದ ಉದ್ಯಮ ಸೇರುವುದು, ಮತ್ತು ಸೋಫಿಯಾಳ ಕನಸಾದ ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮಾನವೀಯ ಹಂಬಲವುಳ್ಳ ಆಶ್ರಯತಾಣ, ನಮೋ ಬುದ್ಧದ ಉಸ್ತುವಾರಿಯಲ್ಲಿ ಮುಖ್ಯಪಾತ್ರ ವಹಿಸುವುದು – ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂದು ಲೇಖಕರು ಹೇಳುವುದಿಲ್ಲ. ಅದನ್ನು ಓದುಗರಿಗೇ ಬಿಡುತ್ತಾರೆ. ಆದರೆ ಈ ನಾಲ್ಕನ್ನು ಬಿಟ್ಟು ಬೇರೆಯೇ ಆದ ಐದನೇ ಆಯ್ಕೆಯೊಂದಿರಬಹುದು ಎಂದು ಕೂಡ ಕಾದಂಬರಿ ಸೂಚಿಸುತ್ತದೆ. ಏಕೆಂದರೆ ಸಿದ್ಧಾರ್ಥನ ಎದುರಿಗೆ ಹೊಳೆಯುತ್ತಿದ್ದ ಅನ್ನಪೂರ್ಣಾ, ಹಿಮ್ಚುಲಿ, ಗಂಗಾಪೂರ್ಣಾ ಮತ್ತು ಮಚಾಪುಚಾರ ಶಿಖರಗಳು ಎಷ್ಟು ಆಕರ್ಷಕವಾಗಿ ಕಣ್ಸೆಳೆಯುತ್ತವೋ ಅವೆಲ್ಲವನ್ನೂ ಮೀರಿಸುವಂತೆ ಇನ್ನೊಂದು ಶಿಖರ ಧವಳಗಿರಿ ಕೂಡ ಕಾಣುತ್ತದೆ!
`ಘಾಂದ್ರುಕ್’ಒಮ್ಮೆ ಹಿಡಿದ ಮೇಲೆ ಬಿಡದೆ ಓದಿಸಿಕೊಂಡು ಹೋಗುವುದು ಮಾತ್ರವಲ್ಲದೆ ಅನೇಕ ಸ್ಥಿತ್ಯಂತರಗಳಿಗೆ ಒಳಗಾಗುತ್ತಿರುವ ನಮ್ಮ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಜೀವನದ ಬಗೆಗೂ ಸಹ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಗಂಡು-ಹೆಣ್ಣು ಎಂಬ ಲಿಂಗಗಳನ್ನು ಗೆರೆಕೊರೆದಂತೆ ಪ್ರತ್ಯೇಕಿಸಲು ಆಗದ ಈ ಕಾಲದಲ್ಲಿ ಲೈಂಗಿಕತೆ, ಮದುವೆ, ಮಕ್ಕಳು, ಕುಟುಂಬ ಜೀವನ, ವೃತ್ತಿಯ ಸಾರ್ಥಕತೆ, ಹಣ….. ಹೀಗೆ ಎಲ್ಲ ವಿಷಯಗಳ ಬಗೆಗೂ ಮರುಚಿಂತನೆ ಮಾಡುವ ಅಗತ್ಯ ಬಂದಿದೆ. ಈ ಮರುಚಿಂತನೆಯೇ ಘಾಂದ್ರುಕ್ನಲ್ಲಿದೆ. ಇಲ್ಲಿ ಉತ್ತರಗಳಿಲ್ಲ, ಆದರೆ ನಾವು ಇಂದು ಕೇಳಿಕೊಳ್ಳಲೇಬೇಕಾದ ಕೆಲವು ಮುಖ್ಯ ಪ್ರಶ್ನೆಗಳಿವೆ.

ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ, ಅನುವಾದಗೊಳ್ಳುತ್ತಿರುವ `ಘಾಂದ್ರುಕ್’ ಕಾದಂಬರಿಯು, `ಸಾಹಿತ್ಯವು ಜೀವನದ ಗತಿಬಿಂಬ’ ಎಂಬ ಮಾತಿಗೆ ಸಾಕ್ಷಿ.
ನಾವು ಸಹ ಬದುಕಿನ ಅರ್ಥವನ್ನು ಹುಡುಕುತ್ತಿದ್ದೇವಲ್ಲ, ಮಾನವರು ಮತ್ತು ಮಾನವನಿರ್ಮಿತ ಬುದ್ಧಿಮತ್ತೆಗಳ ನಡುವಿನಲ್ಲಿ……. ಈ ಕಾದಂಬರಿಯ ನಾಯಕನಂತೆ!

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
