ನಾನು ಹುಬ್ಬಳ್ಳಿಗೆ ಹೋದಾಗ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಹೋಗುತ್ತಿರುತ್ತೇನೆ. ಅಲ್ಲಿ ನನಗೆ ಯಾರೂ ಪರಿಚಿತರಿಲ್ಲ. ಅನುಭಾವಿ ಪಂಥಗಳ ಸಂಶೋಧಕನಾಗಿ ಒಬ್ಬನೇ ಅಡ್ಡಾಡಿಕೊಂಡು ಬರುತ್ತೇನೆ. ಮಠದ ಹಿಂದಿನ ತೋಟದಲ್ಲಿರುವ ಕಬೀರದಾಸರ ಸಮಾಧಿಗೂ ಹೋಗುತ್ತೇನೆ. ಸೂಫಿ ಪರಂಪರೆಗೆ ಸೇರಿದ, ಹುಟ್ಟಿನಿಂದ ಮುಸ್ಲಿಮರಾಗಿದ್ದ ಕಬೀರಾನಂದರು ಸಿದ್ಧಾರೂಢರ ಶಿಷ್ಯರಾಗಿದ್ದರು. ಶಿಶುನಾಳ ಶರೀಫ, ಗರಗದ ಮಡಿವಾಳಪ್ಪ, ನವಲಗುಂದದ ನಾಗಲಿಂಗಪ್ಪ ಮುಂತಾದ ಯೋಗಿಗಳ ಜತೆ ಅವರಿಗೆ ಒಡನಾಟವಿತ್ತು. ಈ ಎಲ್ಲ ಯೋಗಿಗಳು ೧೯ನೇ ಶತಮಾನದ ಕೊನೆಯಲ್ಲಿ ಈ ಭಾಗದಲ್ಲಿ ಒಂದು ಜಾತ್ಯತೀತ ಪರಂಪರೆಯ ಸಂಸ್ಕೃತಿಯನ್ನು ನಿರ್ಮಿಸಿದ್ದರು. ವಿಶೇಷವೆಂದರೆ, ಈ ಪರಂಪರೆಯು ಸಂಗೀತ ಮತ್ತು ನಾಟಕಗಳ ಕಲೆಯ ಆಯಾಮವನ್ನೂ ಹೊಂದಿದ್ದುದು. ಸಿದ್ಧಾರೂಢಸ್ವಾಮಿ ಅವರ ‘ಸಿದ್ಧಾರೂಢ ಪ್ರಾಸಾದಿಕ ನಾಟಕ ಮಂಡಳಿ ಹಳೇ ಹುಬ್ಬಳ್ಳಿ (೧೯೧೫) ಎಂಬ ನಾಟಕ ಕಂಪನಿಯಿತ್ತು. ಉತ್ತರ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ಪಸರಿಸಲು, ಸಿದ್ಧಾರೂಢರು ಪರೋಕ್ಷವಾಗಿ ಕಾರಣರಾದರು. ಈ ವಿಚಾರವು ನನಗೆ ಹುಬ್ಬಳ್ಳಿಯ ಜೆ.ಎನ್. ಬೆಳಂಕರ್ ಅವರ ಪರಿಚಯವಾದ ಬಳಿಕ ಹೆಚ್ಚು ಸ್ಪಷ್ಟವಾಯಿತು. ಇದು ಕರ್ನಾಟಕದ ಆರೂಢ ಪರಂಪರೆಯನ್ನು ಕೇವಲ ವಿರಕ್ತಿಯ ಅಧ್ಯಾಯವಾಗಿ ನೋಡುತ್ತ ಬಂದಿರುವವರಿಗೆ ಅದನ್ನು ಭಿನ್ನವಾಗಿ ಅರ್ಥಮಾಡಿಕೊಳ್ಳಲು ಪ್ರೇರೇಪಿಸುವ ಸಂಗತಿಯಾಗಿದೆ.

ಕರಾವಳಿಯಲ್ಲಿ ಗುಡಿಗಳು ಯಕ್ಷಗಾನ ತಂಡ ಕಟ್ಟುವುದು ಹೊಸತಲ್ಲ. ಇದರಿಂದ ಗಡಿಗೆ ಆದಾಯವೂ ಬರುತ್ತದೆ ಮತ್ತು ಗುಡಿಯ ದೈವದ ಪ್ರಚಾರವೂ ಆಗುತ್ತದೆ. ಅಲ್ಲಿ ದೈವಕ್ಕೆ ನಡೆದುಕೊಳ್ಳುವುದು ಎಂದರೆ, ಆಟವಾಡಿಸುತ್ತೇನೆಂದು ಹರಕೆ ಕಟ್ಟಿಕೊಳ್ಳುವುದು. ಇಲ್ಲಿ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಭಾಗವಾಗಿ ನಾಟಕವಿದೆ.  ಆದರೆ ಸಿದ್ಧಾರೂಢರಲ್ಲಿ ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳು ಅವರ ಸ್ವಂತ ಅಭಿರುಚಿಯ ಭಾಗವಾಗಿದ್ದವು. ಅವರಿಗೆ ೨೦ನೇ ಶತಮಾನದ ಮೊದಲ ಘಟ್ಟದ ಬಹುತೇಕ ರಂಗನಟರ ಹಾಗೂ ಸಂಗೀತಗಾರರ ಜತೆ ಸಂಬಂಧವಿತ್ತು. ಮೈಸೂರು ಆಸ್ಥಾನದ ಗಾಯಕರಾಗಿದ್ದವರು ಮುಂಬೈ ಪುಣೆ ಮೀರಜ್ ಸಾಂಗಲಿ ಕೊಲ್ಹಾಪುರ ಬರೋಡಗಳಿಗೆ ರೈಲಿನಲ್ಲಿ ಹೋಗಿಬರುವಾಗ, ಅವರನ್ನು ಹುಬ್ಬಳ್ಳಿಯಲ್ಲಿ ಇಳಿಸಿಕೊಂಡು, ಸಂಗೀತದ ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು. (ಈ ಕಾರಣಕ್ಕೆ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಹರಡಿಕೆಯಲ್ಲಿ ಬ್ರಿಟಿಶರು ತಮ್ಮ ವಾಣಿಜ್ಯದ ಉದ್ದೇಶಗಳಿಗೆ ಸೈನಿಕರ ಸಾಗಾಣಿಕೆಗೆ ಹಾಕಿದ ರೈಲ್ವೆಹಾದಿ ನಿರ್ವಹಿಸಿದ ಪಾತ್ರ ಸ್ವಾರಸ್ಯಕರ.) ಮರಾಠಿ ರಂಗಭೂಮಿಯ ಕಣ್ಮಣಿಯೆನಿಸಿದ್ದ ಬಾಲಗಂಧರ್ವರು ಹುಬ್ಬಳ್ಳಿಯಲ್ಲಿ ಕ್ಯಾಂಪು ಹಾಕಿದಾಗೆಲ್ಲ ಸಿದ್ಧಾರೂಢರನ್ನು ಕಾಣುತ್ತಿದ್ದರು. ಒಮ್ಮೆ ಅವರು ಸಿದ್ಧಾರೂಢರಿಗಾಗಿಯೇ ‘ಸಂಗೀತ ಸುಭದ್ರಾ ನಾಟಕವನ್ನು ಪ್ರದರ್ಶನ ಮಾಡಿದ್ದರಂತೆ. ಭಾರತದ ಮೊಟ್ಟಮೊದಲ ಸರ್ಕಸ್ ಸ್ಥಾಪಿಸಿದ ವಿಷ್ಣುಪಂತ  ಛತ್ರೆಯವರು ಸಿದ್ಧಾರೂಢರ ಜತೆ ಸಂಬಂಧ ಪಡೆದಿದ್ದರು. ಗ್ವಾಲಿಯರ್ ಘರಾಣೆಯ ಹದ್ದೂಖಾನರ ಮಕ್ಕಳಾದ ಭೂಗಂಧರ್ವ ರೆಹಮತ್‌ಖಾನರೂ ವಿಷ್ಣುಪಂತ ಛತ್ರೆಯವರೂ ಗುರುಬಂಧುಗಳು. ತಮ್ಮ ಸರ್ಕಸ್ಸಿನಲ್ಲಿ ವಿಷ್ಣುಪಂತರು ರೆಹಮತ್ ಖಾನರ ಸಂಗೀತವನ್ನು ಅಳವಡಿಸಿದ್ದರು. ಕಂಪನಿಯಲ್ಲಿ ಕೆಲಸವಿಲ್ಲದಾಗ ಅಥವಾ ಸರ್ಕಸ್ಸಿನಲ್ಲಿ ಹಾಡಲು ಬೇಡವೆನಿಸಿದಾಗ ರೆಹಮತ್ ಖಾನರು ಸಿದ್ಧಾರೂಢ ಮಠದಲ್ಲಿ ಬಂದಿರುತ್ತಿದ್ದರು. ಅವರಿಗೆ ಹಿಂದೂಸ್ತಾನಿ ಸಂಗೀತದಲ್ಲಿ ಪ್ರವೇಶವಿದ್ದ  ಕಬೀರಾನಂದರ ಜತೆ ಗಾಢವಾದ ಸ್ನೇಹವಾಗಿತ್ತು. ಕರೀಂಖಾನರು ತಮ್ಮ ಮಡದಿ ತಾರಾಬಾಯಿ ಮಾನೆ ತೊರೆದುಹೋದ ಬಳಿಕ ಖಿನ್ನತೆಯಲ್ಲಿದ್ದರು. ಆಗ ಸಿದ್ಧಾರೂಢರು ಅವರನ್ನು ಕರೆಯಿಸಿಕೊಂಡು ಸಾಂತ್ವನ ಮಾಡಿದರು.   ಕರೀಂಖಾನರು ರೆಹಮತ್ ಖಾನರ ಮುಂದೆ ತಮ್ಮ ಹಾಡಿಕೆಯನ್ನು ಪ್ರಸ್ತುತಪಡಿಸಿದ ಚಾರಿತ್ರಿಕ ಮಹತ್ವದ ಪ್ರಸಂಗ ನಡೆದಿದ್ದು ಆಗಲೇ. ಕರೀಂಖಾನರ ಗಾಯನ ಕೇಳಿದ ರೆಹಮತ್ ಖಾನರು ‘ಗಲಾ ಅಚ್ಛಾಹೈ ಎಂದಷ್ಟೆ ಪ್ರತಿಕ್ರಿಯಿಸಿದರಂತೆ- ಕಂಠ ಪರವಾಗಿಲ್ಲ, ಆದರೆ ತಾಲೀಮು ಸಾಲದು ಎಂಬರ್ಥದಲ್ಲಿ. ಅದನ್ನು ಸವಾಲಾಗಿ ಸ್ವೀಕರಿಸಿ ಅಬ್ದುಲ್ ಕರೀಂಖಾನರು ದೊಡ್ಡಸಾಧನೆ ಮಾಡಿದರಂತೆ.

ಸಂಗೀತ ಲೋಕದಲ್ಲಿ ಸ್ಪರ್ಧೆಮಾಡುವುದು, ಗೆದ್ದು ವಿಜೃಂಭಿಸುವುದು, ಸೋತು ಕಳವಳಿಸುವುದು, ಸೋಲು ಅಪಮಾನದ ಭೂಮಿಕೆಯಲ್ಲಿ ಹೊಸ ಸಾಧನೆಗೆ ಸಂಕಲ್ಪ ಮಾಡುವುದು ಸಾಮಾನ್ಯ. ಆದರೆ ಅನುಭಾವಿ ಅಥವಾ ಯೋಗಿಗಳಿಗೆ ಸಂಗೀತದ ಜತೆಯಿದ್ದ ಸಂಬಂಧದ ಸ್ವರೂಪವೇನು? ಇದು ಮೂಲಭೂತವಾದ ಪ್ರಶ್ನೆ.

ಸಂಗೀತದ ಲೋಕದಲ್ಲಿಯೂ ಅನುಭಾವ ಆರೂಢರ ಲೋಕದಲ್ಲಿರುವಂತೆ, ಸ್ಪರ್ಧೆ-ಜಿದ್ದಾಜಿದ್ದು, ಸೋಲು-ಗೆಲುವುಗಳ ಕಥನಗಳಿವೆ. ಅಲ್ಲಾದಿಯಾಖಾನರ ಆತ್ಮಕತೆಯಂತೂ ಇಂತಹ ಸಂಗೀತ ಕದನಗಳಿಂದ ತುಂಬಿಹೋಗಿದೆ. ಚಾಂಗದೇವನಿಗೂ ಒಬ್ಬ ಯೋಗಿನಿಗೂ ನಡೆಯುವ ಸ್ಪರ್ಧೆ ಪ್ರಸಿದ್ಧವಾಗಿದೆ. ಕುಸ್ತಿ ಇತ್ಯಾದಿ ಮಲ್ಲಯುದ್ಧದ ಕಲೆಗಳಲ್ಲಿ ಇದೇ ತರಹದ ಸ್ಪರ್ಧೆ ಮತ್ತು ಸೋಲುಗೆಲುವುಗಳ ಆಯಾಮವಿದೆ. ಸಂಗೀತ, ಕುಸ್ತಿ, ಮತ್ತು ಯೋಗ ಮೇಲುನೋಟಕ್ಕೆ ಸಂಬಂಧವಿಲ್ಲದ ಜಗತ್ತುಗಳ ಹಾಗೆ ಕಾಣುತ್ತವೆ. ಆದರೆ ಅವುಗಳ ನಡುವೆ ಕುತೂಹಲಕರ ಸಾಮ್ಯಗಳಿವೆ. ಈ ಮೂರು ಕ್ಷೇತ್ರಗಳು ಗುರುಪರಂಪರೆಗೆ ಸೇರಿದವು. ಒಬ್ಬ ಉಸ್ತಾದರ ನೆರವಿಲ್ಲದೆ ಏಕಾಂಗಿಯಾಗಿ ಸ್ವತಂತ್ರವಾಗಿ ಕಲಿಯುವ ವಿದ್ಯೆಗಳಲ್ಲ. ಇವುಗಳಲ್ಲಿ ತಾಲೀಮು ಮಾಡುವುದು ಬಹಳ ಮುಖ್ಯ. ತಾಲೀಮು,  ಉಸ್ತಾದ್ (ವಸ್ತಾದಿ), ಗುರು, ಶಿಷ್ಯ, ದೀಕ್ಷೆ ಎಂಬ ಪರಿಭಾಷೆಗಳು ಸಂಗೀತ ಮತ್ತು ಕುಸ್ತಿಗಳಲ್ಲಿ ಮತ್ತೆಮತ್ತೆ ಬಳಕೆಯಾಗುತ್ತವೆ. ಈ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದು ಮುಖ್ಯ ಉದ್ದೇಶ. ಇವು ದೇಹ ಮತ್ತು ಮನಸ್ಸುಗಳಿಗೆ ಸಂಬಂಧಿಸಿದ ಕಲೆಗಳು. ಸಂಗೀತದಲ್ಲಿ ತಾನುಗಳನ್ನು ಹೊರಡಿಸುವುದು, ಆಲಾಪನೆ ಮಾಡುವುದು, ಅಸ್ಥಾಯಿಯಿಂದ ಅಂತರಾಕ್ಕೆ ನೆಗೆಯುವುದು, ಸ್ವರಗಳ ಆರೋಹಣ ಮತ್ತು ಅವರೋಹಣಗಳು, ರಣರಂಗದ ಕುಶಲತೆಗಳ ಹಾಗೆಯೇ ಇವೆ. ಹಿಂದೆ ಸಂಗೀತಗಾರರು ಕಡ್ಡಾಯವಾಗಿ ಕತ್ತಿವರಸೆ ಮುಂತಾದ ಯುದ್ಧಕಲೆಗಳನ್ನೂ ಕಲಿಯುತ್ತಿದ್ದರು. ಸಂಗೀತ ಸಾಮ್ರಾಟರೆನಿಸಿದ್ದ ಉಸ್ತಾದ್ ಅಲ್ಲಾದಿಯಾಖಾನರು ಕತ್ತಿವರಸೆಯಲ್ಲಿ ಪಳಗಿದ್ದರು. ಸಂಗೀತದಲ್ಲಿ ರಿಯಾಜ್ ಮಾಡುವುದು ಮತ್ತು ಕತ್ತಿವರಸೆ ನಡೆಸುವುದು ಅವರಿಗೆ ಬೇರೆಯಾಗಿರಲಿಲ್ಲ. ಉಸ್ತಾದ್ ಬಡೇಗುಲಾಂ ಅಲಿಖಾನರು ನೋಡುವುದಕ್ಕೆ ಯಾವುದೊ ಕುಸ್ತಿ ಗರಡಿಯಿಂದ ತಪ್ಪಿಸಿಕೊಂಡು ಬಂದ ಪೈಲ್ವಾನರಂತಿದ್ದರು. ಆದರೆ ತಮ್ಮ ಭದ್ರಾಕಾರ ಮತ್ತು ಭಾರೀ ಮೀಸೆಗಳಿಗೆ ಏನೇನೂ ಸಂಬಂಧವಿಲ್ಲದಂತೆ ಅವರು ಹೆಣ್ದನಿಯಲ್ಲಿ ಶೃಂಗಾರರಸ ಪ್ರಧಾನವಾದ ಠುಮ್ರಿಗಳನ್ನು ಹಾಡುತ್ತಿದ್ದರು. ಅದು ಬೇರೆ ಸಂಗತಿ.

ಯೋಗಸಾಧಕರು ತಮ್ಮ ದೇಹವನ್ನು ಬಹಳ ದೃಢವಾಗಿ ಇರಿಸಿಕೊಳ್ಳುತ್ತಿದ್ದರು ಮತ್ತು ನೂರಾರು ವರ್ಷ ಬದುಕುತ್ತಿದ್ದರು. ಅವರು ಯೋಗಸಾಧನೆಯಲ್ಲಿ ತುರೀಯಾವಸ್ಥೆಗೆ ಹೋದಾಗ, ಬಗೆಬಗೆಯ ನಾದಗಳು ಕೇಳುವುದಂತೆ. ಈ ನಾದಗಳ ವರ್ಣನೆಯನ್ನು ಶಿಶುನಾಳರು ಮಾಡುತ್ತಾರೆ. ನಾಥರಲ್ಲಿ ಸಂಗೀತ ಮತ್ತು ಯೋಗ ಜತೆಯಲ್ಲೆ ಇವೆ. ಸೂಫಿಗಳಿಗೆ ಆನುಭಾವಿಕ ಸಾಧನೆಗೆ ಸಂಗೀತವು (ಮೆಹಫಿಲ್ ಎ ಸಮಾ) ಅನಿವಾರ್ಯವಾಗಿತ್ತು. ಕುಸ್ತಿಪಟುಗಳು ಸದಾ ನೆನೆಯುವ ಮೌಲಾಲಿಯವರು (ಪೈಗಂಬರರ ಅಳಿಯ) ಸೂಫಿಗಳ ಪಾಲಿಗೆ ಮೊದಲನೇ ಆನುಭಾವಿಕ ಗುರು ಕೂಡ. ಪಂಜಾಬಿ ಸೂಫಿಕವಿಗಳು ಮೌಲಾಲಿಯವರ ಮೇಲೆ ಬಂದಿಶ್‌ಗಳನ್ನು ರಚಿಸಿಹಾಡಿದರು. ‘ಧಮಾಧಂ ಮಸ್ತ ಖಲಂದರ್ ಅಲೀಕಾ ಪಹಿಲಾ ನಂಬರ್ ಇವುಗಳಲ್ಲಿ ಜನಪ್ರಿಯವಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ಧಾರೂಢರಂತಹ ಯೋಗಿಗಳು ಸಂಗೀತದಲ್ಲಿ ಆಸಕ್ತಿಯಿರಿಸಿಕೊಂಡಿದ್ದು ಸಹಜವಾಗಿದೆ. ಆಗಿನ ನಾಟಕಗಳಲ್ಲಿ ಅಭಿನಯ ಮಾತು ಕಡಿಮೆ, ಹಾಡಿಕೆ ಹೆಚ್ಚಿತ್ತಷ್ಟೆ. ಇನ್ನೂ ಕುತೂಹಲ ಹುಟ್ಟಿಸಿದ್ದು ಸಿದ್ಧಾರೂಢರು ಕೊಲ್ಲಾಪುರದ ಶಾಹು ಮಹಾರಾಜರ ಜತೆ ಕುಳಿತಿರುವ ಫೊಟೊ. ಶಾಹು ಮಹಾರಾಜರು ಹಿಂದುಳಿದ ವರ್ಗಗಳನ್ನು ಅವರ ಹಕ್ಕುಪ್ರಜ್ಞೆ ಮೂಡಿಸಲು ಮುಂಬೈ ಕರ್ನಾಟಕದಲ್ಲಿ ಅನೇಕ ಸಭೆಗಳನ್ನು ನಡೆಸುತ್ತಿದ್ದರು. ಆಗ ಅವರು ಹುಬ್ಬಳ್ಳಿಯಲ್ಲೂ ಒಂದು ಸಭೆ ನಡೆಸಿದರು. ಬಹುಶಃ ಆಗ ಅವರು ಸಿದ್ಧಾರೂಢರನ್ನು ಭೇಟಿ ಮಾಡಿರಬಹುದು. ಸಿದ್ಧಾರೂಢ ಮಠದಲ್ಲಿರುವ ಫೊಟೊಗಳು, ಒಂದು ಕಾಲದ ರಾಜಕೀಯ ಸಾಂಸ್ಕೃತಿಕ ಚರಿತ್ರೆಯನ್ನು ಅರಿಯಲು ಅಥವಾ ವ್ಯಾಖ್ಯಾನಿಸಲು ಅಮೂಲ್ಯ ಆಕರಗಳಾಗಿವೆ. ಸ್ವತಃ ಕುಸ್ತಿಪಟುವಾಗಿದ್ದ ಶಾಹುಮಹಾರಾಜರು ಸಂಗೀತಪ್ರೇಮಿ ಕೂಡ. ಕೊಲ್ಹಾಪುರದಲ್ಲಿ ಭಾರತದಲ್ಲಿಯೇ ದೊಡ್ಡದಾದ ಕುಸ್ತಿಮೈದಾನವನ್ನು ಅವರು ಸ್ಥಾಪಿಸಿದ್ದರು. ಅಲ್ಲಾದಿಯಾಖಾನರು ಅವರ ಪ್ರೀತಿಪಾತ್ರ ಗಾಯಕರಾಗಿದ್ದರು.

ಮೇಲ್ನೊಟಕ್ಕೆ ಸಂಬಂಧವಿಲ್ಲದ ಜಗತ್ತುಗಳಂತೆ ಕಾಣುವ ಕುಸ್ತಿ, ಯೋಗ ಹಾಗೂ ಸಂಗೀತಗಳು ಆಳದಲ್ಲಿ ಪಡೆದುಕೊಂಡಿರುವ ಕರುಳಬಳ್ಳಿ ಸಂಬಂಧ ಅದ್ಭುತವಾಗಿದೆ.

ಎತ್ತಣ ಮಾಮರ, ಎತ್ತಣ ಕೋಗಿಲೆ ಎತ್ತಣಿದೆಂತ ಸಂಬಂಧವಯ್ಯಾ!