ತಮ್ಮ ಕುಟುಂಬದ ಒಂದು ಮಗುವಿಗಾಗಿ ಅವರ ಅಪ್ಪಅಮ್ಮರಿಗೆ ಇಡೀ ಕುಟುಂಬ ಒತ್ತಾಸೆಯಾಗಿ ನಿಂತು ಅವರನ್ನು ಗಟ್ಟಿಮಾಡಿದ್ದೂ ಅಲ್ಲದೆ ಆ ಮಗುವಿಗೆ ತರಬೇತಿಯ ಜೊತೆಗೆ ಅಕ್ಕರೆಯಿಂದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಆ ಕುಟುಂಬದ ಹಿರಿಕಿರಿಯ ಎಲ್ಲರಿಗೂ ಇರುವುದು, ಹಾಗೆಯೇ ಆ ಮನೆಯವರ ಒಗ್ಗಟ್ಟನ್ನು ನೋಡಿದಾಗ ‘ಕೂಡಿ ಬಾಳೋಣ’ ಎನ್ನುವ ಹಾಡು ನೆನಪಾಯಿತು. ಈಗ ಇಲ್ಲಿನ ಶಾಲೆಯಲ್ಲಿ ಮೂವತ್ತಾರು ಮಕ್ಕಳು, ಒಂಭತ್ತು ಅಧ್ಯಾಪಕಿಯರೂ ಇದ್ದಾರೆ.
ಸುಜಾತಾ ತಿರುಗಾಟ ಕಥನ

 

ನಾವು ಹೋಟೆಲ್ಲಿಂದ ಸೀದಾ ಹೋಗಿದ್ದು ತಲ್ಲೂರ್ ಅವರ ಮನೆಗೆ. ಅವರೊಡನೆ ಅಡ್ಡಾಡಿದ ಎರಡೂ ದಿನವೂ ಹಬ್ಬವೇ. ಅವರ ಮನೆಯಲ್ಲಿ ಉಂಡ ಕೋಳಿಸಾರು ಹಾಗೂ ಶಾವಿಗೆ ಕಾಯಿರಸ, ಅಪ್ಪಟ ನೂಕಡ್ಡೆಯ ಕುಂದಾಪ್ರ ಊಟ. ನೂಕಡ್ಡೆ ಅಂದರೆ ಹಳೇಕಾಲದ ಕರಾವಳಿ ಕಡೆಯ ಒಂದು ಅಸಡ್ಡೆಯ ಮಾತು. ‘ಹಿಂದಿನ ಕಾಲದಲ್ಲಿ ಬಂದ ನೆಂಟರು ಹೆಚ್ಚು ದಿನ ಝಾಂಡಾ ಊರಿದಾಗ ನೆಂಟರನ್ನು ಉಪಾಯವಾಗಿ ಮನೆಯಿಂದ ಹೊರಡಿಸಲು ಈ ಒತ್ತು ಶಾವಿಗೆಯನ್ನು ಮಾಡುತ್ತಿದ್ದರಂತೆ. ಅಲ್ಲಿಗೆ ಆತಿಥ್ಯ ಕ್ಲೋಸ್ ಅನ್ನುವ ಇಂಗಿತವಂತೆ ‘.

ಆದರೆ ತಲ್ಲೂರು ಮನೆಯಯವರ ಆತಿಥ್ಯದಲ್ಲಿ ನಮಗೆ ಖುಶಿ ಹೆಚ್ಚಿತ್ತು. ಜೊತೆಗೆ ಅವರ ತಾಯಿ ಕೈನ ಕುಂದಾಪ್ರ ಮಸಾಲೆಯ ಭಿನ್ನ ರುಚಿಯ ಕೋಳಿಸಾರಿನ ರುಚಿ ಬೇರೆಯೇ. ನಾವು ಹೋದಾಗಿನಿಂದ ಬರುವರೆಗೂ ರಾಜಾರಾಂ ಹಾಗೂ ಎಲ್. ಎನ್. ತಲ್ಲೂರರ ಜೊತೆ ಇದ್ದುದು ಸಂತಸವೇ ಆಗಿತ್ತು.

ಅಣ್ಣ ರಾಜಾರಾಂ ಪತ್ರಿಕೋದ್ಯಮದ ಹಿನ್ನೆಲೆಯಲ್ಲಿ ಕೆಲಸ ಮಾಡಿದವರು. ವೈದ್ಯಕೀಯ, ಕಾನೂನು, ಐ. ಟಿ, ಹಣಕಾಸು, ವಿಮೆ, ಹಾಗೂ ವಿಷಯ ತಜ್ಞರು. ಸಧ್ಯ ‘ಟ್ರಾನ್ಸ್ಲೇಟರ್ಸ್ ಕೆಫೆ’ ಎಂಬ ಸೃಜನಶೀಲ ಹಾಗೂ ಯಶಸ್ವೀ ಉದ್ಯಮ ಎರಡರಲ್ಲೂ ಪಳಗಿದವರು. ಅವರ ಹೆಂಡತಿ ವಕೀಲೆ.

ಎಲ್. ಎನ್. ತಲ್ಲೂರು

ಲಕ್ಷ್ಮೀನಾರಾಯಣ ತಲ್ಲೂರು ಸರಳ ನಗೆಯ ಹೆಸರಾಂತ ಅಂತಾರಾಷ್ಟ್ರೀಯ ಕಲಾವಿದ. ಮೈಸೂರಿನ ಕಾವಾ, ಗುಜರಾತ್, ಯು. ಕೆ, ಯ ವಿದ್ಯಾಭ್ಯಾಸದಲ್ಲಿ ಅರಳಿದ ದೊಡ್ಡ ಪ್ರತಿಭೆ. ಅಮೇರಿಕಾ, ಜರ್ಮನ್, ದಕ್ಷಿಣ ಕೊರಿಯಾದಲ್ಲಿ 15 ಏಕವ್ಯಕ್ತಿ ಕಲಾಪ್ರದರ್ಶನ ನಡೆಸಿದ್ದು ಈಗ ಅಮೇರಿಕಾದ ವರಾರಿಯೋದ ತಮ್ಮ ಇನ್ನೊಂದು ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ತಮ್ಮ ತಾಯ್ಮನೆಯ ತಲ್ಲೂರಿನ ಸ್ಟುಡಿಯೋದಲ್ಲಿ ಮುಳುಗಿಹೋದ ಹಾಗೆ ತನ್ನ ಹೆಂಡತಿ ಮನೆಯ ಕೊರಿಯಾದಲ್ಲೊಂದು ಸ್ಟುಡಿಯೋವನ್ನೂ ಇವರು ಹೊಂದಿದ್ದಾರೆ. ಭಾರತದ ತಲ್ಲೂರು ಹಾಗೂ ಕೊರಿಯಾ ನಡುವಿನ ಸಂಬಂಧ ಸೇತುವೆಯಾಗಿದ್ದಾರೆ. ಹಾಗೆಯೇ ಮಣಿಪಾಲದ ಒಂದು ಸರ್ಕಲ್ ನಲ್ಲಿ ಅವರ ಬೃಹತ್ ಕಲಾಕೃತಿಯೊಂದು ನಿಂತಿದೆ. ತಲ್ಲೂರು ಹೆಸರಿನ ಈ ಕಲಾವಿದ ಆ ಊರಿನ ಹೆಮ್ಮೆ.

ತಲ್ಲೂರಿನ ವಿಶೇಷಗಳು

ತಲ್ಲೂರು ಮನೆಯ ಸ್ಟುಡಿಯೋದಲ್ಲಿರುವ ದೊಡ್ಡ ದೊಡ್ಡ ಕಲಾವಿನ್ಯಾಸಗಳು ಮಗನ ಕಲಾವಿಶೇಷವನ್ನು ಹೇಳಿದರೆ ಅವರ ಮನೆಯ ಪರಿಸರ ಅವರ ತಾಯಿಯ ನಡೆನುಡಿ, ಆಸಕ್ತಿಗಳು ಮಕ್ಕಳ ನೈಪುಣ್ಯತೆಗೆ ಸಮನಾಗಿ ಕಾಣುತ್ತವೆ. ಅವರ ತಾಳ್ಮೆಯೇ ಒಂದು ದೊಡ್ಡ ಶಕ್ತಿ. ಅವರ ಗ್ರಹಿಕೆ ಮಿತಿಮೀರಿದ್ದು. ಲವಲವಿಕೆಯ ಮಾಗಿದ ಆ ಜೀವ ಹೊಂದಿರುವ ಕೈತೋಟ, ಅವರೇ ನೇಯುವ ನೇಯ್ಗೆಯನ್ನು ನೋಡಿದರೆ ಆಶ್ಚರ್ಯವಾಗುವಂತಿದೆ. ಇದೇ ಅವರ ಮಕ್ಕಳ ಕಲಾಬೆಳವಣಿಗೆಯ ಸ್ಪೂರ್ತಿ ಕೂಡ ಆಗಿದೆ ಅನ್ನಿಸುತ್ತದೆ.

ಎರಡು ಎರಡೂವರೆ ವರುಷ ಕಾಲಾವಧಿಯಲ್ಲಿ ಅವರು ದಾರದಲ್ಲಿ ನೇದಿರುವ ಅವರ ಫಾಮಿಲಿ ಫೋಟೋ ಕಂಡರೆ ನಿಮಗೆ ಆಚ್ಚರಿಯಾಗುತ್ತದೆ. ಸಣ್ಣ ಸಣ್ಣ ಚೌಕಳಿಯ ವಿವಿಧ ಬಣ್ಣದ ಅವರೆ ಬೇಳೆಯಗಲದ ಬಟ್ಟೆಯ ತುಣುಕುಗಳನ್ನು ಸೇರಿಸಿ ಬಣ್ಣ, ಹಾಗೂ ಗೆರೆಗಳ ವ್ಯತ್ಯಾಸ ತಿಳಿಯದಂತೆ ಮಾಡಿರುವ ಅವರ ಮೊಮ್ಮಗಳ ದೊಡ್ಡ ದೊಡ್ಡ ಆಕೃತಿಯನ್ನು ನೀವು ನೋಡಬೇಕು. ಎಷ್ಟು ಕರಾರುವಕ್ಕಾಗಿದೆಯೆಂದರೆ ಅಂಗೈಗಲದ ಫೋಟೋ ಒಂದು ಗೋಡೆಯ 4 ಅಡಿ ಅಗಲದ 6 ಅಡಿ ಅಗಲದ ದೊಡ್ಡ ಕಲಾಕೃತಿಯಾಗಿ ಅರಳಿದೆ.

ಅಂತೆಯೇ ಕೊರಿಯಾದ ಸೊಸೆಯ ಮನೆಯಲ್ಲಿ ಹೇರ್ ಬ್ಯಾಂಡ್ ಕಲಿಕೆಯನ್ನು ಕಣ್ಣಿಂದ ನೋಡಿದ ಇವರು ಇಲ್ಲಿ ಅದರ ಪ್ರಯೋಗ ನಡೆಸಿ, ಚಂದದ ವಿನ್ಯಾಸ ಮಾಡಿ ಬಂದವರಿಗೆ ಕೊಡುವ ಬಗೆ…. ಮಕ್ಕಳನ್ನು ಖುಶಿಯಾಗಿಸಿ ಚಿಟ್ಟೆಯನ್ನಾಗಿಸುತ್ತದೆ.

ಹೀಗೆ….ತಲ್ಲೂರಿನ ತಾಯಿಯೊಬ್ಬಳ ತಾಳ್ಮೆಯ ಕಲೆಯ ಆಶಯ ಇಂದು ಮಗನಿಂದ ಪ್ರಪಂಚದ ವಿಸ್ತಾರಕ್ಕೂ ಹರಡಿದ ಕಲಾ ವಿನ್ಯಾಸದಂತೆ ಕಾಣುತ್ತದೆ. ನೆಟ್ಟ ಚಿಕ್ಕ ಬೀಜವೊಂದು ದೊಡ್ಡದಾಗಿ ಹೆಮ್ಮರವಾದಂತೆ. ಇವರ ಮನೆಗೆ ಪ್ರೀತಿಯಿಂದ ಬಂದು ಇವರ ಕಲಾಕೃತಿಗಳನ್ನು ನೋಡಿ ಹೋಗುತ್ತಿದ್ದ ಹೆರಿಟೇಜ್ ವಿಲ್ಲೇಜ್ ನ ವಿಜಯನಾಥ್ ಶೆಣೈರವರ ಕೆಲವು
ಹಳೆಯ ಕಲಾಕೃತಿಗಳ ಛಾಯೆಯೂ ಇಲ್ಲಿ ಕಾಣಿಸುತ್ತದೆ.

ತಮ್ಮ ತಾಯ್ಮನೆಯ ತಲ್ಲೂರಿನ ಸ್ಟುಡಿಯೋದಲ್ಲಿ ಮುಳುಗಿಹೋದ ಹಾಗೆ ತನ್ನ ಹೆಂಡತಿ ಮನೆಯ ಕೊರಿಯಾದಲ್ಲೊಂದು ಸ್ಟುಡಿಯೋವನ್ನೂ ಇವರು ಹೊಂದಿದ್ದಾರೆ. ಭಾರತದ ತಲ್ಲೂರು ಹಾಗೂ ಕೊರಿಯಾ ನಡುವಿನ ಸಂಬಂಧ ಸೇತುವೆಯಾಗಿದ್ದಾರೆ.

ತ್ಯಾಂಪಣ್ಣನ ಕುಂಬಾರಿಕೆ

ಹೊಸತೆನ್ನುವುದು ಹಳೆಯದರಿಂದಲೇ ಹುಟ್ಟುವುದು. ಒಂದರಳೊಗೊಂದರಲ್ಲಿರುವ ಬೆಸೆತ ಈ ಬದುಕಿನ ವಿನ್ಯಾಸ ಎಂಬುದಿರಬಹುದೇನೋ ಅನ್ನಿಸುವುದು ನಿಜವೇ ಆಗಿದೆ. ಕುಂಬಾರನ ಮಡಕೆಯೆಂಬುದು ತಿದ್ದಿ ತೀಡಿ, ಗಿರಗಿರನೆ ತಿರುಗುವ ತಿಗರಿಯಲ್ಲಿ ಮಡಕೆ ಮಾಡಿ ಬದುಕುತಿದ್ದ ಕಾಲವೀಗ ಮಡಿಕೆ ಕುಡಿಕೆಯ ಜೊತೆಗೆ ಇಂದು ಊಟದ ತಟ್ಟೆ, ಲೋಟ, ಸಣ್ಣ ಬೋಗುಣಿ, ತಂದೂರಿ ರೋಟಿಯ ಮಡಿಕೆ, ಅಡಿಕೆ ಚೊಗರಿನ ಗುಡಾಣ, ಹೂಕುಂಡ, ನಲ್ಲಿ ಜೋಡಿಸಿದ ಹೂಜಿಯಾಗಿ ಮಾರ್ಪಾಡಾಗಿವೆ.

ಮಣ್ಣು ಹದ ಮಾಡಲು ಮಗನ ನೆರವಿಲ್ಲದೆ ಮಂಡಿ, ಬೆನ್ನು ಬಾಗಿದರೂ ತ್ಯಾಂಪಣ್ಣ ಕುಂಬಾರಿಕೆ ಬಿಟ್ಟಿಲ್ಲ. ತನ್ನ ಹಿತ್ತಿಲಲ್ಲಿ ತನಗೆ ವ್ಯಾಪಾರವಿದೆ, ಮಗ ಬೇರೆಡೆ ಕೆಲಸಕ್ಕೆ ಹೋಗುವನು, ಕೂಲಿಗೆ ಆಳು ಸಿಗುವರೇ… ದುಡಿಮೆ ಆಗುವರೆಗೂ ಮಾಡುವ ಎನ್ನುತ್ತ ವ್ಯಾಪಾರ ಮಾಡುವ ತ್ಯಾಂಪಣ್ಣ ಒಬ್ಬ ನಿರುಮ್ಮಳ ಜೀವಿ. ಯಾರಾದರೂ ಹೆಚ್ಚು ಹಣ ನೀಡಿದರೂ ತೆಗೆದುಕೊಳ್ಳದವ. ಇದ್ದವರು ಹೆಚ್ಚು ಕೊಟ್ಟರೆ ನಿತ್ಯ ಬರುವ ಗಿರಾಕಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಅನ್ನುವವ.

ತ್ಯಾಂಪಣ್ಣನ ಹತ್ತು ಸೆಂಟ್ಸ್ ಜಾಗದಲ್ಲಿ ಮನೆಗೆ ಬೆಳೆವ ತರಕಾರಿಯ ಪ್ರತಿಯೊಂದು ಗಿಡವೂ ಇದ್ದು, ಒಂದೆರಡು ನಾಟಿ ದನಗಳು ಒಂದು ಅಡಿ ತರಗಿನ ಹಾಸಿಗೆಯ ಮೇಲೆ ಕರುವಿನೊಂದಿಗೆ ನೆಮ್ಮದಿಯಾಗಿ ಮಲಗಿದ್ದವು. ಪಕ್ಕದಲ್ಲೇ ಭೂಮಿಯಲ್ಲಿ ಕೊರೆದ ಒಂದು ಒಲೆ, ಜೋಡಿಸಿದ್ದ ಮಡಿಕೆ ಕುಡಿಕೆಗಳು, ಅಚ್ಚುಕಟ್ಟಾಗಿ ಕುಳಿತಿದ್ದವು. ಬಡತನದ ರೇಖೆಯಲ್ಲಿಯೂ ಮನೆಯ ಮುಂದಿನ ನಾಯಿ ನೆಮ್ಮದಿಯಲ್ಲಿ ಕುಳಿತಿತ್ತು.

ಒಂದೆರಡು ಮಕ್ಕಳು ಮನೆ ಮುಂದೆ ಆಡುತಿದ್ದವು. ನಾವು ಹೋದಾಗ ರಾತ್ರಿ ಏಳು ಗಂಟೆಯಲ್ಲಿ ಕೆಲಸಕ್ಕೆ ಹೋದ ಮಗ ಇನ್ನೂ ಬಂದಿರಲಿಲ್ಲ. ಗೇಟು ದಾಟಿ ಬರುವಾಗ ಗಿಡಗಳು ಹಸಿರು ಗಾಳಿಗೆ ತೂಗುತ್ತಿದ್ದವು. ತ್ಯಾಂಪಣ್ಣ ಬೀಳ್ಕೊಟ್ಟರು.

ಮಂಗಳೂರು ಹೆಂಚು

ಹೀಗೆ ಕಟ್ಟುವ ಮನೆಯ ಮಾಡುಗಳು ಕೂಡ ಹುಲ್ಲು ಬೊಂಬಿನಿಂದ ಕುಂಬಾರ ಹೆಂಚಿಗೆ ಕೈ ಬದಲಾಗಿ… ಮಂಗಳೂರು ಹೆಂಚಿಗೆ ಸೂರು ಪಕ್ಕಾಸಿಗೆ ಬದಲಾಗಿ… ಈಗ ತಾರಸಿಯ ಮೇಲೆ ದಬ್ಬು ಹೊಯ್ಯುವ ಅಲಂಕಾರದ ಹೆಂಚಿನ ಆವಿಷ್ಕಾರವೂ ಆಗಿವೆ. ಟೆರ್ರಕೋಟದ ಹಲವಾರು ವಿನ್ಯಾಸಗಳೂ ಕೂಡ ಈಗ ಬಂದಿವೆ.

ಹಿಂದೆ ಹೆಂಚಿನ ಕಾರ್ಖಾನೆ ಅತ್ಯಂತ ಪ್ರಸಿದ್ಧ ಹಾಗೂ ದೊಡ್ಡ ಉದ್ಯಮವಾಗಿ ಮಂಗಳೂರಿನ ಎಲ್ಲ ಕಡೆ ಬೆಳೆದಿತ್ತು. ಆ ಕಾಲದಲ್ಲಿ ಎಲ್ಲರೂ ಹೆಂಚಿನ ಮನೆಯನ್ನೇ ಕಟ್ಟುತ್ತಿದ್ದರು. ಹಾಗೆ ಕಟ್ಟಿದ ಸುಭದ್ರ ಇಳಿ ಹೆಂಚಿನ ಮನೆಗಳು ನೂರು ವರುಷಕ್ಕೂ ಮೀರಿ, ಭಾರೀ ಮಳೆಯ ಹೊಡೆತ ತಾಳಿಕೊಂಡು ಇಂದಿಗೂ ಉಳಿದಿವೆ. ಕ್ರಮೇಣ ಬರುಬರುತ್ತ ಕಾಂಕ್ರೀಟ್ ಕಾಡು ಹೆಚ್ಚಾದ ಹಾಗೆ ಮಣ್ಣು ನಮ್ಮಿಂದ ದೂರವಾಗುತ್ತಿದೆ. ಹಾಗಾಗಿ ಮಂಗಳೂರು ಉಡುಪಿ ದಿಕ್ಕಿನ ಕಾರ್ಖಾನೆಗಳ ಜಾಗದಲ್ಲೀಗ ಬೆಲೆ ಬಾಳುವ ರಿಯಲ್ ಎಸ್ಟೇಟ್ ಉದ್ಯಮ ಬೆಳೆದು ಕಣ್ಣ ತಂಪನ್ನು ಕಂಗೆಡಿಸುವಂತೆ ಕಾಣುತ್ತಿವೆ.

ಹೀಗೆ ಅಲ್ಲಲ್ಲಿ ಉಳಿದ ಒಂದೊಂದು ಹೆಂಚಿನ ಕಾರ್ಖಾನೆಯಂತೆ ತಲ್ಲೂರಿನ ಬಳಿಯಲ್ಲಿ ಇರುವ ಕಾರ್ಖಾನೆಗೆ ನಾವು ಭೇಟಿಯಿತ್ತಾಗ ಮಣ್ಣು ಸ್ವರೂಪ ಹೆಂಚಾಗುವಾಗಿನ ರೂಪವಾಗಿ ಕಣ್ಮುಂದೆ ಬಂದು ನಿಂತಿತು. ಹಲವು ಘಟ್ಟಗಳನ್ನು ಹಾದು ಬರುವ ಮಾಗಿದ ಜೀವದಂತೆ ಅಲ್ಲವೇ? ಅದೂ ಕೂಡ.

ಅಲ್ಲಿ, ಹೆಂಚಿಗೆ ಸೂಕ್ತವಾದ ಗುಡ್ಡೆ ಹಾಕಿದ ಲಾಟುಗಟ್ಟಳೆ ಲಾಟರೇಟ್ ಮಣ್ಣಿನಿಂದ ಹಿಡಿದು ಅದನ್ನು ಸಾಣೆ ಹಿಡಿವ ಯಂತ್ರಗಳವರೆಗೂ…. ಬೆಂದು ಹದವಾಗುವ ರೂಮುಗಳಿಂದ… ಅದನ್ನು ಹಿಡಿದು ಸಾಗುವ ತೊಟ್ಟಿಲವರೆಗೂ…. ನಂತರ ಅದನ್ನು ಜೋಡಿಸಿ ಗಾಳಿಗೆ ತಂಪಿಡುವ ಅಟ್ಟದ ಕಟ್ಟಳೆವರೆಗೂ…. ಮಣ್ಣು ಮಾಗಿ…. ಒಂದು ಹಣ್ಣು ಜೀವದಂತೆ, ಮಳೆಗಾಳಿಗಳನ್ನು ತಡೆ ಹಿಡಿವ….. ಮನೆ ಕಟ್ಟಿದವರ ತಲೆ ಕಾಯುವ ಸೂರಾಗಿ ಅರಳುವ ಪರಿಯನ್ನು, ಅದಕ್ಕಾಗಿ ಉರಿದು ಬೂದಿಯಾಗುವ ಲಾಟುಗಟ್ಟಳೆ ಒಟ್ಟಿದ ಸೌದೆಯ ಕಾಯವನ್ನು…. ರೂಮುಗಳಲ್ಲಿ ಮಣ್ಣಿನ ಮೈ ಕಾಯಿಸಿ ಹೆಂಚನ್ನಾಗಿಸುವ ಕುಲುಮೆಗಳನ್ನು, ಆ ಅಪರಿಮಿತ ಬಿಸಿ ಕಾಯುವ ಪರ್ನೆಸ್ ನ (ಕುಲುಮೆ) ಕಿಚ್ಚಿಗೆ, ಸೌದೆಗಳನ್ನು ದೂಡುವ ಒಲೆಯ ಮುಚ್ಚಳಗಳನ್ನು ಮುಚ್ಚಿ, ಕಾಪಾಡುವ ಕಾರ್ಮಿಕರನ್ನು ನೋಡಿ ನಾವು ಯಾವುದೋ ನೂರು ವರುಷದ ಹಿಂದೆ ಹೋದ ಹಾಗಾಯಿತು.

ಪಕ್ಕದಲ್ಲೇ ಭೂಮಿಯಲ್ಲಿ ಕೊರೆದ ಒಂದು ಒಲೆ, ಜೋಡಿಸಿದ್ದ ಮಡಿಕೆ ಕುಡಿಕೆಗಳು, ಅಚ್ಚುಕಟ್ಟಾಗಿ ಕುಳಿತಿದ್ದವು. ಬಡತನದ ರೇಖೆಯಲ್ಲಿಯೂ ಮನೆಯ ಮುಂದಿನ ನಾಯಿ ನೆಮ್ಮದಿಯಲ್ಲಿ ಕುಳಿತಿತ್ತು.

ಇದೀಗ ಕುಶಲ ಕಾರ್ಮಿಕರ ಕೊರತೆಯಿಂದಾಗಿ, ಈ ಉದ್ಯಮ ಅಳಿವಿನಂಚಿನಲ್ಲಿದೆ. ಅದರ ದಪ್ಪ ಹಾಗೂ ಧೃಡತೆ ಹಾಗೂ ಫ್ಯಾಕ್ಟ್ರಿಯ ಅಚ್ಚಾದ ಹೆಸರಿನಿಂದಾಗಿ ಇವಕ್ಕೆ ಬ್ರಾಂಡ್ ಒದಗಿ ತಾಳಿಕೆ ಬಾಳಿಕೆಯ ಹೆಸರಾಗಿ, ಅಂದಿನ ದೊಡ್ಡ ಉದ್ಯಮವಾಗಿದ್ದವು ಈಗ ಕಣ್ಮರೆಯಾಗುತ್ತಿವೆ, ಭತ್ತದ ಸೀಮೆಯ ರೈಸ್ ಮಿಲ್ಲು ಹಾಗೂ ಆಲೆಮನೆಗಳಂತೆ…

ನಮ್ಮ ಮನೆಯಲ್ಲಿ ನನ್ನಪ್ಪ ನನ್ನೂರಿಗೆ ಮಂಗಳೂರಿನಿಂದ ಲಾರಿಯಲ್ಲಿ ನಮ್ಮ ಮನೆಯ ಹೆಂಚುಗಳನ್ನು ತರಿಸಿದ್ದರೆಂದು ಆಗಾಗ ಹೇಳುತ್ತಿದ್ದರು. ನಮ್ಮ ಮನೆಯ ಮಹಡಿಯಲ್ಲಿ ಬೆಳಕು ಹೆಂಚು, ಬೆನ್ನು ಹೆಂಚು, ಮೂಲೆ ಹೆಂಚು, ಸೀಲಿಂಗ್ ಹೆಂಚಲ್ಲದೆ ಉಳಿದ ಚಿತ್ತಾರದ ಒಳಪದರದ ಹೆಂಚುಗಳು ಮಾಡು ಮುಚ್ಚಿ ಮಿಕ್ಕಿ ಜೋಡಿಸಿಟ್ಟಿದ್ದವು. ಎಲ್ಲವೂ ಒಮ್ಮೆಲೆ ನೆನಪಾಯಿತು.

ಈ ಉದ್ಯಮವನ್ನು ಜರ್ಮನಿ ಮಿಷನರಿಯವರು 1860 ರಲ್ಲಿ ಭಾರತಕ್ಕೆ ತಂದು ಸ್ಥಾಪಿಸಿದರೆಂದು ಹೇಳುತ್ತಾರೆ. ‘ಎತ್ತಣ ಮಾಮರ ಎತ್ತಣ ಕೋಗಿಲೆ! ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು’ ಹದವಾಗಿ, ಒಂದಾಗಿ, ಅಡಿಗೆ ಮನೆಯಲ್ಲಿ ಕುಳಿತು ಬಾಯಿ ನೀರೂರಿಸುತ್ತ ಬದುಕಿನಾಸೆಗಳನ್ನು ಹೆಚ್ಚಿಸುವ, ಹೊಸ ಹೊಸ ಆವಿಷ್ಕಾರಗಳು ನಮ್ಮನ್ನು ಸೆಳೆದು
ತನ್ನ ಹಿಡಿತದಲ್ಲಿಡುತ್ತಲೇ, ಬದುಕನ್ನು ಕಲೆಯಾಗಿಸುವ ಪರಿಗೆ ಸೋಜಿಗವಾಯಿತು.

ತಲ್ಲೂರು ಕುಟುಂಬದ ಶಾಲೆ

ಕೊನೆಗೆ ತಲ್ಲೂರಿನ ಒಂದು ವಿಶೇಷ ಶಾಲೆಗೆ ಹೋದೆವು. ಅದು ತಲ್ಲೂರು ಕುಟುಂಬದಲ್ಲಿದ್ದ ಒಂದು ಬುದ್ಧಿಮಾಂದ್ಯ ಮಗುವಿಗೆ ವಿಶೇಷವಾಗಿ ತೆರೆದದ್ದು. ಇಡೀ ಕುಟುಂಬ ಹೆದ್ದಾರಿ ಪಕ್ಕದಲ್ಲಿದ್ದ ಒಂದು ದೊಡ್ದ ಜಾಗವನ್ನು ಆ ಟ್ರಸ್ಟ್ ಗಾಗಿ ಬಿಟ್ಟುಕೊಟ್ಟು ಅದರ ಹೊಣೆಗಾರಿಕೆಯನ್ನು ಆ ಮನೆಯ ಮೊಮ್ಮಕ್ಕಳೆಲ್ಲರೂ ಹೊಂದಿದ್ದೂ ಅಲ್ಲದೆ ಕಾಳಜಿ ಕೂಡ ಮಾಡುವುದು ವಿಶೇಷ.

ತಮ್ಮ ಕುಟುಂಬದ ಒಂದು ಮಗುವಿಗಾಗಿ ಅವರ ಅಪ್ಪಅಮ್ಮರಿಗೆ ಇಡೀ ಕುಟುಂಬ ಒತ್ತಾಸೆಯಾಗಿ ನಿಂತು ಅವರನ್ನು ಗಟ್ಟಿಮಾಡಿದ್ದೂ ಅಲ್ಲದೆ ಆ ಮಗುವಿಗೆ ತರಬೇತಿಯ ಜೊತೆಗೆ ಅಕ್ಕರೆಯಿಂದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಆ ಕುಟುಂಬದ ಹಿರಿಕಿರಿಯ ಎಲ್ಲರಿಗೂ ಇರುವುದು, ಹಾಗೆಯೇ ಆ ಮನೆಯವರ ಒಗ್ಗಟ್ಟನ್ನು ನೋಡಿದಾಗ ‘ಕೂಡಿ ಬಾಳೋಣ’ ಎನ್ನುವ ಹಾಡು ನೆನಪಾಯಿತು. ಈಗ ಇಲ್ಲಿನ ಶಾಲೆಯಲ್ಲಿ ಮೂವತ್ತಾರು ಮಕ್ಕಳು, ಒಂಭತ್ತು ಅಧ್ಯಾಪಕಿಯರೂ ಇದ್ದಾರೆ.

ಅವರವರ ಕೆಲಸಗಳನ್ನು ಅವರವರ ಶೌಚವನ್ನು ಮಾಡಿಕೊಳ್ಳುವ ಕೆಲಸದಿಂದ ಶುರು ಮಾಡಿ, ಆನಂತರ ಸುತ್ತಲಿನ ಜನರಿಗೆ ಸ್ಪಂದಿಸುವುದನ್ನು, ಓದು ಬರಹವನ್ನು ಕಲಿಸುವುದನ್ನು, ಕೈ ಕುಸುರಿಯ ಕೌಶಲದ ಕೆಲಸವನ್ನೂ ಈವನದ ನಿರ್ವಹಣೆಗೆ ಕಲಿಸಿ ಕಳಿಸಿಕೊಡುವ ಈ ಶಾಲೆ ಇಂಥ ಮಕ್ಕಳಿಗೆ ತಮ್ಮ ಕಾಲ ಮೇಲೆ ನಿಂತು ತಾವು ಬದುಕುವುದನ್ನು ಕಲಿಸಿಕೊಡುತ್ತದೆ. ಆ ಮಕ್ಕಳ ಅಗತ್ಯಕ್ಕೆ ತಕ್ಕ ಹಾಗೆ. ಬೇರೆಯವರಿಗೆ ಹೊರೆಯಾಗದಿರುವುದೂ ಮನುಷ್ಯನ ಅಗತ್ಯ ಹಾಗೂ ಅನಿವಾರ್ಯತೆ.

ಈ ವಿಶೇಷ ಶಾಲೆ ಭಾರವಾಗಿರುವ ಕಣ್ಣ ಹನಿಗಳನ್ನು ಹಿಡಿದಿಟ್ಟು ಬಂಡೆಕಲ್ಲ ಮೇಲೆ ಜಿನುಗಿಸುತ್ತ ಸಣ್ಣ ಝರಿಯನ್ನಾಗಿಸುವ ಕಾಯಕದ ಸೆಲೆಯಾಗಿದೆ.