Advertisement
ತಾಯಿ ಭುವನೇಶ್ವರಿಯ ಮಕ್ಕಳು ನಾವೂ…: ಎಚ್. ಗೋಪಾಲಕೃಷ್ಣ ಸರಣಿ

ತಾಯಿ ಭುವನೇಶ್ವರಿಯ ಮಕ್ಕಳು ನಾವೂ…: ಎಚ್. ಗೋಪಾಲಕೃಷ್ಣ ಸರಣಿ

ಇಬ್ಬರು ಕನ್ನಡಿಗರು ಅವರ ಹುಟ್ಟೂರಿನಲ್ಲಿ ಸಿಕ್ಕಿದರೂ ಸಹ ಇಂಗ್ಲಿಷ್ ನಲ್ಲಿ ಮಾತು ಆರಂಭಿಸುತ್ತಾರಂತೆ. ಬೇರೆಯವರ ಸಂಗಡ ಆದರೆ ಎದುರಿನವನ ಭಾಷೆ ಇವರದ್ದು ಆಗುತ್ತಂತೆ. ಬೇರೆ ಊರಿನಲ್ಲಿ ಭೇಟಿಸಿದರೆ ಅದೆಷ್ಟೋ ವರ್ಷ ತಾವು ಕನ್ನಡದವರು ಎಂದು ತಿಳಿದಿರುಲ್ಲವಂತೆ. ಊರು ಬಿಡಬೇಕಾದರೆ ತಮ್ಮಿಬ್ಬರ ತಾಯಿ ಒಬ್ಬಳೇ, ಆಕೆಯೇ ಭುವನೇಶ್ವರಿ ಅಂತ ಗೊತ್ತಾಗುತ್ತಂತೆ! ಒಂದು ಸಣ್ಣ ಉಪಕತೆ ನೀವು ಅಲ್ಲ ಸಾರಿ ನಾನು ಮರೆಯುವ ಮೊದಲು ನಿಮಗೆ ಹೇಳಿ ಬಿಡುತ್ತೇನೆ. ಮರೆತುಬಿಟ್ಟು ಅಯ್ಯೋ ಮರೆತೆ ಎನ್ನುವ ಗಿಲ್ಟ್ ಅಂದರೆ ಪಾಪ ಪ್ರಜ್ಞೆ ನನ್ನನ್ನು ಕಾಡಬಾರದು ತಾನೇ?
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೮ನೇ ಬರಹ ನಿಮ್ಮ ಓದಿಗೆ

ಹಿಂದಿನ ಎಪಿಸೋಡು ಹೀಗೆ ಮುಗಿಸಿದ್ದೆ..

ಜೇಬು ಮುಟ್ಟಿಕೊಳ್ಳುತ್ತಾ ಅವರು ನಿಂತರು. ಯಾರೋ ಗಿರಾಕಿ ಸಾರ್ ಟೆನ್ ರೂಪಿಸ್ ಕೇಳುತ್ತಾನೆ ಅಂತ ಅವರು ಅಂದುಕೊಂಡಿರಬಹುದು.

ಅವರೆದುರು ನಿಂತು ಗಂಟಲು ಸರಿಮಾಡಿಕೊಳ್ಳಲು ಒಮ್ಮೆ ಕೆಮ್ಮಿದೆ. ಸಾರ್ ಅಂದೆ, ಧ್ವನಿ ಸರಿಯಾಗಿ ಹೊರ ಬರುತ್ತಿದೆಯೇ ಎಂದು ಟೆಸ್ಟ್ ಮಾಡಿಕೊಂಡೆ.

ಎದುರು ನಿಂತ ಡೂಪ್ಲಿಕೇಟ್ ವುಡ್ ಹೌಸ್ ನನ್ನ ನೋಡಿದರು. ಅವರ ಕಣ್ಣು ದಪ್ಪ ಕನ್ನಡಕದ ಹಿಂದೆ ಶ್ರಿಂಕ್ ಆಯಿತು ಅನಿಸಿತು.

“ನೋಡಿ ಇವರೇ, ನಾನು ಜೇಬಲ್ಲಿ ದುಡ್ಡು ಇಟ್ಟುಕೊಳ್ಳಲ್ಲ. ಬರೀ ಬಸ್ ಚಾರ್ಜ್ ಆಗೋ ಅಷ್ಟು ಮಾತ್ರ ಇರುತ್ತೆ…..” ಅಂದರು!

ನನ್ನನ್ನು ಅವರು ದುಡ್ಡು ಪೀಕುವ ಹೊಸ ರೀತಿಯ ಭಿಕ್ಷುಕ ಎಂದು ತಿಳಿದುಕೊಂಡರು ಅನಿಸಿಬಿಡ್ತು. ಸಾರ್ ನಾನು ಇಂಥ ಕಡೆ ಕೆಲಸ, ತಿಂಗಳಿಗೆ ಆರನೂರ ಹನ್ನೆರೆಡು ಸಂಬಳ ಬರುತ್ತೆ. ನಿಮ್ಮನ್ನ ಭಿಕ್ಷೆ ಕೇಳಲು ನಿಲ್ಲಿಸಿಲ್ಲ ಅಂತ ಹೇಳಬೇಕು ಎಂದು ಮನಸಿನಲ್ಲಿ ಪದ ಜೋಡಿಸುತ್ತಾ ಇದ್ದೆನಾ….

ಇನ್ನು ಮುಂದಿನ ಕತೆಗೆ ಹೋಗೋಣ..

ಎದುರು ನಿಂತ ಡೂಪ್ಲಿಕೇಟ್ ವುಡ್ ಹೌಸ್ ನನ್ನ ನೋಡಿದರು. ಅವರ ಕಣ್ಣು ದಪ್ಪ ಕನ್ನಡಕದ ಹಿಂದೆ ಶ್ರಿಂಕ್ ಆಯಿತು ಅನಿಸಿತು.

“ನೋಡಿ ಇವರೇ, ನಾನು ಜೇಬಲ್ಲಿ ದುಡ್ಡು ಇಟ್ಟುಕೊಳ್ಳಲ್ಲ. ಬರೀ ಬಸ್ ಚಾರ್ಜ್ ಆಗೋ ಅಷ್ಟು ಮಾತ್ರ ಇರುತ್ತೆ…..” ಅಂದರು! ಇದನ್ನು ಅವರು ಹೇಳಿದ್ದು ಇಂಗ್ಲಿಷ್‌ನಲ್ಲಿ. ಆಗ ಬೆಂಗಳೂರಿಗೆ ಹೊರಗಡೆಯಿಂದ ಬಂದವರು ಈಗಿನಿಂತಲೂ ಕಡಿಮೆ ಮತ್ತು ಸರಿ ಸುಮಾರು ಕನ್ನಡ ಬಲ್ಲವರು! ಇವರಿಗೆ ನಾನು ಭಿಕ್ಷೆ ಕೇಳುತ್ತಿಲ್ಲ, ತಿಂಗಳಿಗೆ ಇಷ್ಟೊಂದು ಸಂಬಳ ಬರುತ್ತೆ. ಮೊದಲಾದ ಆಗಲೇ ತಲೆಯಲ್ಲಿ ಸೃಷ್ಟಿಸಿದ್ದ ಪದ ಪುಂಜಗಳಿಗೆ ಪರ್ಯಾಯ ಇಂಗ್ಲಿಷ್ ಜೋಡಿಸಿಕೊಂಡು ಹೊರಡಿಸಿದೆ. ಅದು ಹೀಗೆ..

“ಸಾರ್, ಐ ಆಮ್ ನಾಟ್ ಆಸ್ಕಿಂಗ್ ಆಲಂಸ್. ಐ ಗೆಟ್ ಸಿಕ್ಸ್ ಹಂಡ್ರೆಡ್ ಟ್ವೆಲ್ವ್‌ ಆಸ್ ಸ್ಯಾಲರಿ ಆನ್ ಎವರಿ ಫಸ್ಟ್ ಒಫ್ ಮಂತು …..”

ಅವರು ಕಡೆಗಂಣ್ಣಿನಿಂದ ನನ್ನ ಕಡೆ ನೋಡಿದರಾ?

ಸಾಲ ಭಿಕ್ಷೆ ಕೇಳುತ್ತಿಲ್ಲ ಅಂದರೆ ಇವನ ಹುನ್ನಾರ ಏನಿರಬಹುದು ಅಂತ ಅವರಿಗೆ ಅನಿಸಿರಲೇ ಬೇಕು!

“ಓಕೆ… ದೆನ್ ವಾಟ್ ಡು ಯು ವಾಂಟ್?” ಅಂದರು.

ಅದೇ ನಾನು ಕಾಯುತ್ತಿದ್ದ ಪ್ರಶ್ನೆ. ಆದರೆ ಅದಕ್ಕೆ ಉತ್ತರ ಹೇಳಲು ನನ್ನ ಇಂಗ್ಲಿಷ್ ಭಂಡಾರದಲ್ಲಿ ಪದಗಳನ್ನು ಹುಡುಕುವಷ್ಟರಲ್ಲಿ, ಅವರು ನನ್ನನ್ನು ಮತ್ತೊಮ್ಮೆ ತಲೆಯಿಂದ ಕಾಲಿನವರೆಗೆ ನೋಡಿ, ಜೇಬಿನ ಮೇಲೆ ಕೈ ಇಟ್ಟುಕೊಂಡೇ ನಿಂತರು. ಆಗ ಆಕಾಲದಲ್ಲಿ ಎಂ ಜಿ ರಸ್ತೆಯಲ್ಲಿ ಹೀಗೆ ನಿಂತು ಇಂಗ್ಲಿಶಿನಲ್ಲಿ ಭಿಕ್ಷೆ ಕೇಳುವವರ ಪೀಳಿಗೆ ಇತ್ತು. ಅಂತಹವರಿಗೆ ಭಿಕ್ಷೆ ಕೊಟ್ಟು ಬೆಂಗಳೂರಿನ ಈ ಭಾಗಕ್ಕೆ ಬಂದು ಲೋಕಲ್ ಕನ್ನಡಿಗರು ಇಂಗ್ಲಿಶಿನಲ್ಲಿ ಭಿಕ್ಷೆ ಕೇಳಿದ ಇಲ್ಲ ಅಂತ ಹೇಗೆ ಹೇಳೋದು, ಹತ್ತು ಕೊಟ್ಟೆ ಐವತ್ತು ಕೊಟ್ಟೆ ನೂರು ಕೊಟ್ಟೆ ಅಂತ ಕಣ್ಣಿನಲ್ಲಿ ರಕ್ತ ಹರಿಸುತ್ತಿದ್ದರು! ಆಗ ಬೆಂಗಳೂರಿನಲ್ಲಿ ಭಿಕ್ಷೆ ರೇಟು ಐದು ಪೈಸೆ, ಹತ್ತು ಪೈಸೆ ಮತ್ತು ಇಪ್ಪತ್ತೈದು ಪೈಸೆ ಇದ್ದದ್ದು! ಅಮೇರಿಕಾದಲ್ಲಿ ದಂತವೈದ್ಯ ಆಗಿದ್ದ ನಮ್ಮ ಅಣ್ಣನ ಸ್ನೇಹಿತರೊಬ್ಬರು ಇಲ್ಲಿಗೆ ರಜಕ್ಕೆ ಬಂದಿದ್ದರು. ಆಗಿನ ಫೇಮಸ್ ವುಡ್ ಲಾಂಡ್ಸ್ ಹೋಟಲಲ್ಲಿ ಊಟ ಮಾಡಿದೆವು. ಟಿಪ್ಸ್ ಅಂತ ನೂರು ರೂಪಾಯಿ ತಟ್ಟೆಯಲ್ಲಿ ಇಟ್ಟರು. ಅವರ ಜತೆ ಊಟ ಮಾಡಿದ ನಮಗೆ ಆಗ ಹಾರ್ಟ್ ಅಟ್ಯಾಕ್ ಆಗುವುದು ಬಾಕಿ ಇತ್ತು. ನಂತರ ಸುಮಾರು ವರ್ಷ ಈ ನೂರು ರೂಪಾಯಿ ಟಿಪ್ಸ್ ನಮ್ಮಲ್ಲಿ ಒಂದು ಚರ್ಚೆಯ ವಿಷಯವಾಗಿತ್ತು. ಇಲ್ಲೊಂದು ಇನ್ನೊಂದು ಸಂಗತಿ ತೂರಿಸಿ ಬಿಡ್ತೇನೆ, ಆಮೇಲೆ ಬೇಜಾರು ಆಗಬಾರದು ತಾನೇ?

ನಾಲ್ಕೈದು ವರ್ಷ ಹಿಂದೆ ಸ್ನೇಹಿತನ ಕಾರಿನಲ್ಲಿ ಹೋಗುತ್ತಿದ್ದೆ. ಅವರ ಮಗ ಡ್ರೈವ್ ಮಾಡುತ್ತಿದ್ದ. ಸಿಗ್ನಲ್‌ನಲ್ಲಿ ಕಾರು ನಿಂತಿದೆ. ಭಿಕ್ಷುಕ ಒಬ್ಬ ಕಾರಿನ ಬಳಿ ಬಂದ. ಸ್ನೇಹಿತರ ಮಗ ಪರ್ಸ್ ಹುಡುಕಿ ಇಪ್ಪತ್ತರ ನೋಟು ಹಾಕಿದ! ನಮ್ಮ ಕಾಲದಲ್ಲಿ ಒಂದು ರೂಪಾಯಿ ಭಿಕ್ಷೆ ಹಾಕಿದವನು ನಮ್ಮ ಲೆಕ್ಕದಲ್ಲಿ ದೊಡ್ಡ ಹುಚ್ಚ ಆಗುತ್ತಿದ್ದ! ಮತ್ತೆ ಟ್ರ್ಯಾಕ್‌ಗೆ..

“ಸಾರ್…” ಎಂದು ಮತ್ತೆ ಗಂಟಲು ಸರಿಮಾಡಿಕೊಂಡೆ.

“ಐ ಆಮ್ ಲುಕಿಂಗ್ ಫಾರ್ ಎ ಫ್ರೆಂಡ್…”

“ಫ್ರೆಂಡ್?” ಅವರ ಹುಬ್ಬುಗಳು ಮೇಲಕ್ಕೆ ಹೋದವು.

“ಯೆಸ್ ಸಾರ್. ಹೀ ಇಸ್ ವೆರಿ ಮಚ್ ಲೈಕ್ ಯು!”

ಇಷ್ಟು ಕೇಳುತ್ತಿದ್ದಂತೆ ಅವರ ಮುಖದಲ್ಲಿ ಅನುಮಾನ ಇನ್ನೂ ಒಂದು ಸುತ್ತು ಹೆಚ್ಚಾಯಿತು. ಬಹುಶಃ, ‘ಇವನು ನನ್ನಂಥವರನ್ನು ಹುಡುಕುತ್ತಾ ತಿರುಗುವ ಯಾವುದೋ ವಿಚಿತ್ರ ವ್ಯಕ್ತಿ ಇರಬೇಕು’ ಎಂದುಕೊಂಡಿರಬಹುದು!

ಆದರೆ ನನಗೆ ಮಾತ್ರ, ಹಲವು ದಿನಗಳಿಂದ ಹುಡುಕುತ್ತಿದ್ದ ವ್ಯಕ್ತಿಯ ಸುಳಿವು ಸಿಕ್ಕಿದ ಖುಷಿ. ಈಗ ಈ ಮಹಾನುಭಾವರು ಸ್ವಲ್ಪ ತಾಳ್ಮೆಯಿಂದ ನನ್ನಮಾತು ಕೇಳಿದರೆ ಸಾಕು ಎಂಬ ಆಶೆ.

ಮಾತು ಈಗ ಭುವನೇಶ್ವರಿ ಮೂಲಕ ಸರಾಗವಾಯಿತು. ಭುವನೇಶ್ವರಿ.. ಇದ್ಯಾವುದು ಹೊಸಾ ಕ್ಯಾರೆಕ್ಟರ್ ಅಂತ ನಿಮಗೆ ಅನಿಸಿರಬೇಕು! ಇದು ಹೊಸಾ ಕ್ಯಾರೆಕ್ಟರ್ ಅಲ್ಲ, ಇದು ನಮ್ಮ ತಾಯಿ ದೇವರು ಅಂದರೆ ಕಸ್ತೂರಿ ಕನ್ನಡ. ಬೆಂಗಳೂರಿನಲ್ಲಿ ಅದು ಜನ್ಮ ತಲೆದಾಗಲಿಂದಲೂ ಒಂದು ಅನ್ ರಿಟನ್ unwritten ಸಂಸ್ಕೃತಿ ಜಾರಿಯಲ್ಲಿದೆ. ನಮ್ಮ ನೂರು ಸಾವಿರ ಪೀಳಿಗೆ ಪರಿಪಾಲಿಸಿಕೊಂಡು ಬಂದದ್ದು ಮತ್ತು ಮುಂದಿನ ಸಾವಿರ ಪೀಳಿಗೆಗೆ ನಾವು ಮುಂದುವರೆಸುತ್ತಾ ಇರುವುದು…! ಅದೇನು ಎಂದಿರಾ? ಅದೇ ಭುವನೇಶ್ವರಿಯನ್ನು ಸಂಪೂರ್ಣ ಕಾಲ ಕೆಳಗೆ ಹಾಕಿ ತುಳಿಯುವ ಮನೋವ್ಯಾಧಿ! ಎಷ್ಟು ತುಳಿದಿದ್ದೇವೆ ಅಂದರೆ ಆಕೆಗೆ ತನ್ನ ಅಸ್ತಿತ್ವ ಮರೆತು ಹೋಗಿದೆ ಮತ್ತು ಯಾರಾದರೂ ನೇರ ಅವಳ ನುಡಿ ಉಪಯೋಗಿಸಿದರೆ ತಲೆ ಸುತ್ತು ಬರುತ್ತೆ. ತಲೆ ಸುತ್ತು ಬರುವ ಕತೆ ಮತ್ತೆ ಯಾವಾಗಲಾದರೂ ಹೇಳುತ್ತೇನೆ. ಇದರ ಮೊದಲಿನದು ಅರ್ಥ ಆಗಲಿಲ್ಲ ತಾನೇ? ಇರಿ ಅದಕ್ಕೇ ಬಂದೆ..

ಎದುರಿನ ಸಾಹೇಬರು ಮುಖದ ಗಂಟು ಸ್ವಲ್ಪ ಸಡಿಲಿಸಿದರು ಮತ್ತು ಮುಖದಲ್ಲಿ ಕೊಂಚವೇ ಕೊಂಚ ಹುಸಿನಗು ಮೂಡಿದೆ ಅನಿಸಿತು. ಬಹುಶಃ ಇವನು ಸಾಲಗಾರ ಅಲ್ಲ ಎನ್ನುವ ನಿರಾಳತೆ ಅವರಲ್ಲಿ ಉದಯಿಸಿರಬೇಕು (ಉದಯವಾಗಲಿ ನಮ್ಮ ಕನ್ನಡ ನಾಡು ನೆನಪಿಗೆ ಬoದಿದೆ…..!). ಈಗ ನಮ್ಮ ಅನಾದಿ ಕಾಲದ ಅನ್ ರಿಟನ್ ಅನ್ ರಿಟನ್ ಪಾಲಿಸಿ ಬಗ್ಗೆ ಹೇಳಲೇ…?

ಇಬ್ಬರು ಕನ್ನಡಿಗರು ಅವರ ಹುಟ್ಟೂರಿನಲ್ಲಿ ಸಿಕ್ಕಿದರೂ ಸಹ ಇಂಗ್ಲಿಷ್ ನಲ್ಲಿ ಮಾತು ಆರಂಭಿಸುತ್ತಾರಂತೆ. ಬೇರೆಯವರ ಸಂಗಡ ಆದರೆ ಎದುರಿನವನ ಭಾಷೆ ಇವರದ್ದು ಆಗುತ್ತಂತೆ. ಬೇರೆ ಊರಿನಲ್ಲಿ ಭೇಟಿಸಿದರೆ ಅದೆಷ್ಟೋ ವರ್ಷ ತಾವು ಕನ್ನಡದವರು ಎಂದು ತಿಳಿದಿರುಲ್ಲವಂತೆ. ಊರು ಬಿಡಬೇಕಾದರೆ ತಮ್ಮಿಬ್ಬರ ತಾಯಿ ಒಬ್ಬಳೇ, ಆಕೆಯೇ ಭುವನೇಶ್ವರಿ ಅಂತ ಗೊತ್ತಾಗುತ್ತಂತೆ! ಒಂದು ಸಣ್ಣ ಉಪಕತೆ ನೀವು ಅಲ್ಲ ಸಾರಿ ನಾನು ಮರೆಯುವ ಮೊದಲು ನಿಮಗೆ ಹೇಳಿ ಬಿಡುತ್ತೇನೆ. ಮರೆತುಬಿಟ್ಟು ಅಯ್ಯೋ ಮರೆತೆ ಎನ್ನುವ ಗಿಲ್ಟ್ ಅಂದರೆ ಪಾಪ ಪ್ರಜ್ಞೆ ನನ್ನನ್ನು ಕಾಡಬಾರದು ತಾನೇ?

ಅಮೇರಿಕಾದ ಯಾವುದೋ ನಗರದಲ್ಲಿ ನನ್ನ ಭಾಮೈದುನನ ಮಗಳು ಅಳಿಯ ಎಲ್ಲಾ ವಾಸ. ಅಲ್ಲಿಗೆ ಭಾಮೈದ ಹೋಗಿದ್ದರು. ಒಂದು ಬೆಳಿಗ್ಗೆ ಮನೆ ಮುಂದೆ ಲುಂಗಿ ಉಟ್ಟು ಇವರು ಗಿಡಕ್ಕೆ ನೀರು ಹಾಕ್ತಾ ಇದಾರೆ. ಇದು ಒಂದು ಪಾರ್ಟು.

ನನ್ನ ತಾಯಿ ಕಡೆ ಕಸಿನ್ ಮಗ ಅಮೇರಿಕಾದ ಅದೇ ನಗರದಲ್ಲಿ ಇರೋದು. ಅವನ ಮನೆಗೆ ನನ್ನ ಕಸಿನ್ ಹೋಗಿದ್ದಾನೆ. ಬೆಳಿಗ್ಗೆ ವಾಕಿಂಗ್ ಅಂತ ಇವನು ಎರಡು ರಸ್ತೆ ದಾಟಿದ. ಇದು ಇನ್ನೊಂದು ಪಾರ್ಟು.

ರಸ್ತೆ ದಾಟಿ ಅತ್ತ ಇತ್ತ ನೋಡುತ್ತಾ ನಡೀತಾ ಇದ್ದ. ಲುಂಗಿ ಉಟ್ಟ ನಾನ್ ಅಮೇರಿಕನ್ ಕಣ್ಣಿಗೆ ಬಿದ್ದರು. ಇವರು ಯಾವದೇಶವೋ ಎನ್ನುವ ಕುತೂಹಲ ಮೂಡಿತು. ಗುಡ್ ಮಾರ್ನಿಂಗ್ ಅಂದ. ಅವರೂ ಅದನ್ನ ರಿಪೀಟ್ ಮಾಡಿದರು. ಇವನು which country ಅಂತ ಕೇಳಿದ. ಅವರು you which country ಅಂದರು. ಇಬ್ಬರೂ ಇಂಡಿಯಾ ಅಂತ ಗೊತ್ತಾಯ್ತಾ? ಇಂಡಿಯಾದಲ್ಲಿ which city ಪ್ರಶ್ನೆ ನಂತರ ಕಸಿನ್ ಬೆಂಗಳೂರು ಅಂತ ಅಂದ. ಭಾಮೈದ ಬನ್ನಿ ಒಳಗೆ ಅಂದರು ಭುವನೇಶ್ವರಿ ತಾಯಿ ಅಮೇರಿಕಾ ಎಂಬ ಸಾವಿರಾರು ಮೈಲಿ ದೂರದ ಊರಿನಲ್ಲಿ ಏಕ್ ದಮ್ ಎರಡು ಅಡಿ ಎತ್ತರ ಆದರು. ಇಬ್ಬರಿಗೂ ಪರಸ್ಪರ ಪರಿಚಯ ಇರಲಿಲ್ಲ. ಕನ್ನಡದಲ್ಲಿ ಮಾತು ಮುಂದುವರೆಯಿತು. ಭಾಮೈದ ಕೇರಳದಲ್ಲಿ ಸೆಟಲ್ ಆಗಿದ್ದವರು ಬೆಂಗಳೂರಿನ ಹಲವಾರು ಏರಿಯಾ ಹೆಸರು ಹೇಳಿದರು. ನನ್ನ ಕಸಿನ್‌ ಮನೆಗೆ ಬಂದ ನಂತರ ನನ್ನ ನೆಂಟರು ಇರಬೇಕು ಅವರು ಎನ್ನುವ ಸಂಶಯ ಹುಟ್ಟಿತು…. ಕತೆ ಹೀಗೆ ಮುಂದುವರೆಯುತ್ತೆ….! ಸುಮಾರು ಸಲ ಹೀಗೆ ಮೊದಲನೇ ಭೇಟಿಯಲ್ಲಿ ಒಂದೇ ಭಾಷೆಯವರು ನಾವು ಅನ್ನುವುದು ಭುವನೇಶ್ವರಿ ವಂಶದವರಲ್ಲಿ ಗೊತ್ತಾಗದು. ಆದರೆ ಈ ರೂಲು ಬೇರೆ ಭಾಷಸ್ತರಲ್ಲಿ ಇಲ್ಲ. ಭಾಷಸ್ತ ಅನ್ನುವುದು ಕನ್ನಡ ಸಾರಸ್ವತ ಲೋಕಕ್ಕೆ ನನ್ನ ಕೊಡುಗೆ! ಅದರ ಅರ್ಥ ಸ್ವಯಂವೇದಿ ಅಂತ. ಇದು ಅoದರೆ ಭಾಷಸ್ತ ಬಾಂಧವ್ಯ ಕೇರಳದವರಲ್ಲಿ ಹೆಚ್ಚು. ನೆಕ್ಸ್ಟ್ ತಮಿಳರು, ಅದರ ನೆಕ್ಸ್ಟ್ ತೆಲುಗರು… ಹೀಗೆ. ಇಷ್ಟು ಅಥಾರೀಟೇಟಿವ್ ಆಗಿ ಹೇಗೆ ಹೇಳ್ತೀಯಾ ಅಂತ ನೀವು ಕೇಳ್ತೀರಿ. ಅನುಭವ ಸರ ಅದು ಅನುಭವ. ಇನ್ನೊಂದು ಪುಟಾಣಿ ಉಪಕತೆ ನಿಮಗೆ. ನಾನು ಕೆಲಸಕ್ಕೆ ಸೇರಿದಾಗ ಸುಮಾರು ಎಂಬತ್ತರಷ್ಟು ಕೋಲಿಗೂಗಳು ಕನ್ನಡದವರಲ್ಲ. ಕೇರಳ ಮದ್ರಾಸ್ ಕಡೆಯವರು. ಇಲ್ಲಿನ ಕೆಲಸ ತಮ್ಮವರಿಗೇ ಮೀಸಲು ಎನ್ನುವ ಮೈಂಡ್ ಸೆಟ್ ಇದ್ದವರು. ಅದಕ್ಕೇ ಪೂರಕವಾಗಿ ನಮ್ಮ ರಾಜ್ಯಸರ್ಕಾರದ ನಡವಳಿಕೆಯೂ ಇತ್ತು. ಪೋಸ್ಟ್ ಆಫೀಸು, ಬ್ಯಾಂಕ್, ರೈಲು… ಹೀಗೆ ಎಲ್ಲಾ ಕಡೆ ಹುಡುಕಿದರೂ ನಿಮಗೆ ಒಬ್ಬನೇ ಒಬ್ಬ ಕನ್ನಡದವನು ಸಿಕ್ತಾ ಇರಲಿಲ್ಲ. ನೇರವಾಗಿ ಹೊರಗಡೆಯಿಂದ ಆಮದು ವ್ಯವಸ್ಥೆ ಇತ್ತು. ಇಂತಹ ಪರಿಸರದಲ್ಲಿ ಲೋಕಲ್ ಕೆಲಸಗಾರರು ಕೆಲಸ ಗಿಟ್ಟಿಸಿಕೊಂಡರೆ ಹೊರಗಡೆಯ ಅವರ ಕಡೆಯ ಒಬ್ಬನ ಅನ್ನ ಇವನು ಲೋಕಲ್ ಸಾವ್ ಗಿರಾಕಿ ಕಿತ್ತುಕೊಂಡ ಎನ್ನುವ ಭಾವನೆ ಆಳವಾಗಿತ್ತು. ಸಾವ್ ಗಿರಾಕಿ ಎನ್ನುವ ಪದವನ್ನು ಯತೇಚ್ಚವಾಗಿ ನಾವು ಇಷ್ಟ ಪಡದ ವ್ಯಕ್ತಿಗೆ ಪ್ರಯೋಗ ಆಗುತ್ತಿತ್ತು. ಸಾವ್ ಗಿರಾಕಿ ಪದದ ಅರ್ಥ ನನಗೆ ಆಗಲೂ ಈಗಲೂ ತಿಳಿಯದು. ಅವರ ಮಧ್ಯೆ ನಾವು ಇದ್ದರೆ ಅಪಹಾಸ್ಯ ಲೇವಡಿ ಮೊದಲಾದವುಗಳು ಹೇರಳವಾಗಿ ಅವರವರಲ್ಲೇ ಅವರ ಭಾಷೆಯಲ್ಲಿ ನಡೆಯುತ್ತಿತ್ತು. ಅಕಸ್ಮಾತ್ ನಮ್ಮ ಜತೆ ಅವರಲ್ಲಿ ಒಬ್ಬ ಇದ್ದು ಅವನ ಕಡೆಯ ಎರಡೋ ಮೂರೋ ಜನ ಸೇರಿದರೆ ಸಾಕು ನಮ್ಮನ್ನು ಪೂರ್ಣ ಕಡೆಗಣಿಸಿ ಬಿಡುತ್ತಿದ್ದರು! ಈಗ ಪರಿಸ್ಥಿತಿ ಕೊಂಚ ಇಂಪ್ರೂವ್ ಆಗಿದೆ ಅನ್ನಿ. ಕಾರಣ ನಾವು ಛಲದಂಕ ಮಲ್ಲರು ಒಳಗೆ ಸೇರಿದ್ದು!

ಅತಿಥಿ ಬೇಟೆಗೆ ಹೊರಟು ಆ ಪ್ರಯತ್ನದಲ್ಲಿ ಭೇಟಿಸಿದ ಒಬ್ಬರು ಸಭ್ಯರ ಬಗ್ಗೆ ಹೇಳುತ್ತಿದ್ದೆ ತಾನೇ? ಮತ್ತೆ ಅಲ್ಲಿಗೆ (ಪುನರಾಯಾನ್ ಮಹಾ ಕಪಿ!)

ಒಟ್ಟಿನಲ್ಲಿ ಭುವನೇಶ್ವರಿ ಮಾತೆ ಪಕ್ಕದಲ್ಲಿ ಕ್ಯೂ ನಲ್ಲಿ ಯಾವಾಗ ನನ್ನ ಸರದಿ ಬರುತ್ತೆ ಅಂತ ಒಂಟಿ ಕಾಲಿನ ಮೇಲೆ ಕಾದು ನಿಂತಿರಬೇಕು!

ಹೇಳಿ ಏನು ನಿಮ್ಮ ಪ್ರಾಬ್ಲಮ್? ಯಾವ ಸ್ನೇಹಿತ ನನ್ನ ಹಾಗೇ ಇರೋದು…? ಅಂತ ಇಂಗ್ಲಿಷ್ ನಲ್ಲಿ ಕೇಳಿದರು.

ಈ ಪ್ರಶ್ನೆಗೆ ಉತ್ತರವನ್ನು ಇಂಗ್ಲಿಷ್‌ನಲ್ಲಿ ಜೋಡಿಸುತ್ತಾ ಇದ್ದೆನಾ? ಕೆಲವು ಸಲ ನಮ್ಮ ಬ್ರೈನ್ ಇದೆ ನೋಡಿ ನಮ್ಮ ನಿಯಂತ್ರಣ ತಪ್ಪಿ ಕೆಲವು ಡಿಸಿಷನ್ ಅವೇ ಸ್ವತಂತ್ರವಾಗಿ ತಗೊಂಡು ಬಿಡ್ತಾವೆ, ಮೋಸ್ಟ್ಲಿ ನಮ್ಮ ವೀಕ್ ನೆಸ್ ಅವಕ್ಕೆ ಚೆನ್ನಾಗಿ ಗೊತ್ತಾಗಿರ್ತದೆ. ಈಗಲೂ ಅದೇ ಆಗಿದ್ದು. ಪದ ಜೋಡಿಸುತ್ತಾ ಮನಸ್ಸು ಅದರಲ್ಲಿ ತಜ್ಞವಾಗಿದ್ದರೆ ಬ್ರೈನು ಫಾಸ್ಟ್ ಫಾರ್ವರ್ಡ್ ಆಗಿ ಬಿಟ್ಟಿತು! ಅಂದರೆ ಮೆದುಳಿನ ನಿಯಂತ್ರಣ ತಪ್ಪಿ ಮುಂದೆ ನುಗ್ಗಿತು. ಹೀಗಾಗಲು ಸಾಧ್ಯವೇ ಎನ್ನುವ ಪ್ರಶ್ನೆ ನಿಮ್ಮನ್ನು ಕೊರೀತಿದೆ ತಾನೇ? ಆಗುತ್ತೆ ಸಾರ್, ನೀವು ನಮ್ಮ ಹಾಗೆ ಇದ್ದರೆ, ನಿಮ್ಮ ಬ್ರೈನ್ ಸಿಕ್ಕಾಪಟ್ಟೆ ಓವರ್ ವರ್ಕ್ ಮಾಡುತ್ತಿದ್ದರೆ ಖಂಡಿತ ಹಾಗಾಗಲು ಸಾಧ್ಯ! ನಿನ್ನೆ ಮೊನ್ನೆ ನಮ್ಮ ಬೆಂಗಳೂರು ಮೆಟ್ರೋದಲ್ಲಿ ತಾಂತ್ರಿಕ ಕಾರಣದಿಂದ ಕೆಲವು ಅಡಚಣೆ ಆಗಿ ಸರಾಗ ಚಾಲನೆ ಆಗಲಿಲ್ಲ. ನನ್ನ ಮಿತ್ರ ಶ್ರೀ ಆನಂದ ರಾಮ ಶಾಸ್ತ್ರೀ ಒಂದು ಪುಟ್ಟ ಪದ್ಯ ಬರೆದರು… ಹೀಗೆ..

ನಿನ್ನೆ
ಬಾಗಿಲು ತೆರೆಯಲು ಆಗಲಿಲ್ಲ.
ಇಂದು
ಬಾಗಿಲು ಮುಚ್ಚಲು ಆಗಲಿಲ್ಲ.
ನಮ್ಮ ಮೆಟ್ರೋ
ನಂಬಿದವರು ಕೆಟ್ರೋ.

ಹೀಗೆ ನಮ್ಮ ನಿಯಂತ್ರಣ ಕೆಲವು ಸಲ ವರ್ಕ್ ಆಗೋಲ್ಲ.

ಬನ್ನಿ ಮೂಲಕತೆಗೆ (ಮೂಲ ರಾಮಾಯಣ ದ ಹಾಗೆ. ಮೂಲ ರಾಮಾಯಣ ಕೇಳಿದ್ದೀನಿ ಆದರೆ ಮೂಲ ಭಾರತ, ಮೂಲ ಗೀತೆ, ಮೂಲ ಹರಿಶ್ಚಂದ್ರ…. ಇವೆಲ್ಲಾ ಕೇಳಿಲ್ಲ ಯಾಕೋ…!)

“ಸಾರ್ ಅವರು ಮಿತ್ರ ಅಂತ. ಅವರ ಹೆಸರು ಮಿತ್ರಾ ಅಂತ ಕನ್ನಡದಲ್ಲಿ ಬರೀತಾರೆ, ಮಹಾರಾಣಿಸ್ ನಲ್ಲಿ ಪ್ರೊಫೆಸರು…. ಅವರನ್ನ ಈವರೆಗೆ ನಾನು ಮುಖತಃ ಭೇಟಿ ಆಗಿಲ್ಲ…….” ಅಂತ ಪಟ ಪಟ ಪಟಾಕಿ ಸಿಡಿಸಿದೆ.

ಅವರು ನಿಂತರು.

“ಅಯ್ಯೋ ಮಿತ್ರಾ ಏನ್ರೀ ಮೊದಲೇ ಹೇಳಬೇಕಿತ್ತು… ಇಷ್ಟು ಹೊತ್ತು ನನ್ನ ಜತೇಲೆ ಇದ್ರು… ಬಸ್ ಸ್ಟಾಪ್ ಗೆ ಹೋದರು ಅಂತ ಕಾಣುತ್ತೆ…” ಅಂದರು! ಅವರ ಹೆಸರು ಕೃಷ್ಣ ಭಟ್ ಅಂತೆ. ಅವರೂ ಸಹ ಕಾಲೇಜಲ್ಲಿ ಮೇಷ್ಟ್ರು ಅಂತ ಪರಿಚಯ ಮಾಡಿಕೊಂಡರು.

ಅಯ್ಯೋ ಅನ್ನುವ ಸ್ಯಾಡ್ ಭಾವ ತುಂಬಿದ ಪದ ನನ್ನ ಬಾಯಿಂದ ಆಚೆ ಬಿದ್ದಿರಬೇಕು, ನನ್ನ ಅರಿವಿಲ್ಲದ ಹಾಗೆ.

ಅವರು ನಿಂತರು. ಬೆನ್ನ ಮೇಲೆ ಕೈ ಹಾಕಿದರು.

“ಯಾಕಪ್ಪಾ ಏನಾಯ್ತು..” ಅಂತ ಕೇಳಿದರು.

ಸಮಯ ಐದು ಆಗ್ತಾ ಇತ್ತು. ಇವತ್ತು ಮಿತ್ರ ಅವರು ಸಿಗಲಾರರು, ಮತ್ತೆ ಬರಬೇಕೇ ಎನ್ನುವ ಹತಾಶ ಭಾವನೆ ನನ್ನ ದನಿಯಲ್ಲಿ ಅವರಿಗೆ ಕಂಡಿರಬೇಕು ಅಂತ ಕಾಣುತ್ತೆ.

“ಹೀಗೆ ಸಾರ್. ಅವರನ್ನ ಒಂದು ಭಾಷಣಕ್ಕೆ ಕರಿಬೇಕಿತ್ತು… ” ಅಂತ ನನ್ನ ಪುರಾಣ ಬಿಟ್ಟೆ.

“ಅಯ್ಯೋ ಹೌದೇ? ಮಲ್ಲೇಶ್ವರದಲ್ಲಿ ಮೀಟಿಂಗು ಅಂತ ಹೇಳ್ತಾ ಇದ್ರು. ಬಸ್ ಸ್ಟಾಪಲ್ಲಿ ಇಲ್ಲ ಅಂದರೆ ಮಲ್ಲೇಶ್ವರದಲ್ಲಿ ಸಿಗ್ತಾರೆ….” ಅಂತ ಸ್ವಗತ ಮಾಡಿಕೊಂಡರು. ಸ್ವಗತ ಅಂದರೆ ಗೊತ್ತು ತಾನೇ? ಅವರಿಗೆ ಅವರೇ ಮಾತಾಡಿಕೊಳ್ತಾರೆ ನೋಡಿ ಅದಕ್ಕೆ ಸ್ವಗತ ಅಂತ ಹೆಸರು. ಈ ಸ್ವಗತದ ಚಟ ಹೆಚ್ಚಾಗಿ ಹೆಂಗಸರಲ್ಲಿ ಇರುತ್ತೆ ಅಂತ ಹೇಳುತ್ತಾರೆ.

ಮಲ್ಲೇಶ್ವರದಲ್ಲಿ ಮೀಟಿಂಗ್ ಅಂದರೆ ಯಾವ ಜಾಗದಲ್ಲಿ ಎನ್ನುವ ಮತ್ತೊಂದು ಯಕ್ಷಪ್ರಶ್ನೆ ತಲೆಯಲ್ಲಿ ಉದ್ಭವ ಆಯ್ತಾ?

ಎದುರಿನ ಕೃಷ್ಣಭಟ್ಟರು ಬಾಯಿ ತೆರೆದರು. ಅವರ ಹೆಸರು ಈಗಾಗಲೇ ಹೇಳಿದ್ದರು.

ನನ್ನ ಯಕ್ಷಪ್ರಶ್ನೆ ಅವರಿಗೆ ಟೆಲಿಪತಿ ಮೂಲಕ ರವಾನೆ ಆಗಿರಬೇಕು ಅಂತ ಕಾಣುತ್ತೆ.

“ಮಲ್ಲೇಶ್ವರದ ಗಾಂಧೀ ಸಂಘದಲ್ಲಿ ಮೀಟಿಂಗು ಅಂತ ಹೇಳ್ತಾ ಇದ್ದಹಾಗಿತ್ತು. ಅಲ್ಲಿ ಹೋದರೆ ಸಿಗಬಹುದು ಅಂತ ಕಾಣ್ಸುತ್ತೆ….” ಅಂದರು.

ಆಗ ಬೆಂಗಳೂರು ಇನ್ನೂ ಬೆಂಗಳೂರೇ ಆಗಿದ್ದ ಕಾಲ. ಫ್ಲೈ ಓವರು ಮೆಟ್ರೋ ಪೆಟ್ರೋ ರಿಂಗ್ ರೋಡು ಪಿಂಗ್ ರೋಡು ಇಲ್ಲದ ಸ್ವರ್ಗ ಆಗ ಬೆಂಗಳೂರು. ಒಂದು ತುದಿಯಿಂದ ಇನ್ನೊಂದು ತುದಿಗೆ ಒಂದು ಗಂಟೇಲಿ ಹೋಗಬಹುದಾಗಿದ್ದ ಕಾಲ. ಸೆಂಟ್ರಲ್ ಕಾಲೇಜು, ಗವರ್ನಮೆಂಟ್ ಕಾಲೇಜು ಮಧ್ಯೆ ರಸ್ತೆ. ರಸ್ತೆಯ ಎರಡೂ ಕಡೆ ಬಸ್ ಸ್ಟಾಪು. ಎಲ್ಲಿಗೆ ಬೇಕೋ ಅಲ್ಲಿಗೆ ಅಥವಾ ಅದರ ಸಮೀಪ ಹೋಗಿ ಸೇರಬಹುದು. ಈ ವೇಳೆಗೆ ಬಸ್ ಸ್ಟಾಪ್ ಹತ್ತಿರ ಬಂದಿದ್ದೆವು……..

ಇನ್ನೂ ಇದೆ

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ