ಇದೇನು ನನ್ನ ವೈಯುಕ್ತಿಕ ಅನಿಸಿಕೆ ಅಲ್ಲ. ಕಾವ್ಯ ಪ್ರತಿಭೆಯ ಜೊತೆಜೊತೆಗೇ ಅದರ ದುಪ್ಪಟ್ಟು ವ್ಯಾಮೋಹಗಳೂ ಇದ್ದರೆ ಮಾತ್ರ ಕವಿಗಳು ಇಂತಹ ಖಿನ್ನತೆಗಳಿಂದ ಪಾರಾಗುತ್ತಾರೆ ಎಂದು ನಾನು ಯೌವನದಲ್ಲಿ ಓದಿರುವ ಸಂಸ್ಕೃತ ಕಾವ್ಯಮೀಮಾಂಸೆಗಳು ಹೇಳಿದ್ದವು. ಬಹುಶಃ ತಿರುಮಲೇಶರು ಪಾಶ್ಚಾತ್ಯ ಕಾವ್ಯ ಮೀಮಾಂಸೆಗೆ ಹೆಚ್ಚು ಒತ್ತುಕೊಟ್ಟಿದ್ದರು ಅನಿಸುತ್ತದೆ ಇರಲಿ ಬಿಡಿ. ತಿರುಮಲೇಶರ ಜೊತೆಗಿನ ಸಾಮ್ಯಗಳ ವಿಷಯದಲ್ಲಿ ನಾನು ಲಜ್ಜಾವಂತ. ಆದರೆ ವ್ಯತ್ಯಾಸಗಳ ವಿಷಯಕ್ಕೆ ಬಂದರೆ ಅವರಿಗೆ ನಾನು ವಿನೀತ. ಅವರ ಓದು, ಪಾಂಡಿತ್ಯ, ಬರವಣಿಗೆಯ ಓಘ ಮತ್ತು ಶಿಸ್ತು ಮುಂತಾದವು ಯಾವುದೂ ನನ್ನಂತಹ ವ್ಯಾಮೋಹಿಗಳ ಕೈಹಿಡಿಯುವ ದೇವತೆಗಳಲ್ಲ.
ಕೆ.ವಿ. ತಿರುಮಲೇಶರ ಕುರಿತು ಅಬ್ದುಲ್‌ ರಶೀದ್‌ ಬರಹ ನಿಮ್ಮ ಓದಿಗೆ

ಮೈಸೂರಿನಿಂದ ಸುಮಾರು ಒಂದು ತಾಸು ದೂರದಲ್ಲಿರುವ ಈ ಸರೋವರದ ಹೆಸರು ದೈತ್ಯನ ಕೆರೆ. ಈ ಸರೋವರಕ್ಕೆ ಈ ಹೆಸರು ಯಾಕೆ ಬಂತು ಎಂಬುದೂ ನನಗೆ ಗೊತ್ತಿಲ್ಲ. ಈ ದೈತ್ಯನ ಕುರಿತು ಅಪರಿಮಿತ ಕುತೂಹಲವಿದೆ.

ಈ ಸರೋವರದಿಂದ ಒಂದಿನಿತು ದೂರದಲ್ಲಿ ರತ್ನಪುರವೆಂಬ ಊರಿದೆ. ಈ ಊರನ್ನು ರಾಜಶೇಖರನೆಂಬ ರಾಜ ಆಳುತ್ತಿದ್ದ. ಈ ರಾಜನಿಗೆ ವಜ್ರಮುಕುಟನೆಂಬ ಮಗನೂ ಜಾನಕಿಯೆಂಬ ಮಗಳೂ ಇದ್ದಳಂತೆ. ಈ ಜಾನಕಿ ಎಂಬ ರಾಜಕುಮಾರಿ ಅವಿವಾಹಿತೆಯಾಗಿದ್ದಾಗಲೇ ತಾಯಿಯಾಗಿದ್ದರಿಂದ ಕ್ರುದ್ಧನಾದ ರಾಜ ಮಗಳನ್ನು ವಧಿಸಲು ರಾಜಾಜ್ಞೆ ವಿಧಿಸಿದ. ಭಯಗೊಂಡ ಮಗಳು ಮಗುವಿನ ಸಮೇತ ಭೂಮಿಯ ಒಳಹೊಕ್ಕಳಂತೆ.

ಈ ಸುದ್ದಿ ತಿಳಿದು ಅವಳನ್ನು ರಕ್ಷಿಸಲು ದಾವಿಸಿ ಬಂದ ಸೂಫಿ ಸಂತನೊಬ್ಬ ಅಲ್ಲಿ ತಲುಪಿದಾಗ ತಡವಾಗಿತ್ತಂತೆ.

ರಕ್ಷಿಸಲು ಭೂಮಿಯೊಳಕ್ಕೆ ಕೈಚಾಚಿದ ಅವನ ಕೈಗಳಿಗೆ ಆಕೆಯ ಸೀರೆಯ ಸೆರಗು ಮಾತ್ರ ಸಿಕ್ಕಿತಂತೆ.

ಈ ರಾಜಕುಮಾರಿ ಪಾಳು ಬಿದ್ದಂತಿರುವ ಈ ಊರಿನ ನಡುವಿನಲ್ಲಿರುವ ದರ್ಗಾ ಒಂದರಲ್ಲಿ ಪೂಜೆಗೊಳ್ಳುತ್ತಾಳೆ. ಆಕೆಯನ್ನು ‘ಜಮಾಲ್ ಬೀ’ ಎಂದು ಕರೆಯುತ್ತಾರೆ.

ನಾನು ಕೇಳಿದ ಇನ್ನೊಂದು ಕಥೆಯ ಪ್ರಕಾರ ಈಕೆ ಮಧ್ಯಪ್ರಾಚ್ಯದ ಏಳು ಜನ ರಾಜಕುಮಾರಿಯರಲ್ಲಿ ಒಬ್ಬಳು. ಅಲ್ಲಿನ ದುಷ್ಟ ರಾಜನೊಬ್ಬನ ಕೋಟಲೆಗಳಿಂದ ತಪ್ಪಿಸಿಕೊಳ್ಳಲು ಅವರೆಲ್ಲರೂ ಹಿಂದೂಸ್ತಾನಕ್ಕೆ ಪರಾರಿಯಾಗಿ ಬಂದವರು ಒಬ್ಬೊಬ್ಬರು ಆ ದಾರಿಯ ಒಂದೊಂದು ಊರುಗಳಲ್ಲಿ ಮಣ್ಣೊಳಗೆ ಅಂತರ್ಧಾನರಾಗುತ್ತಾರೆ. ಮಧ್ಯಪ್ರಾಚ್ಯದ ಉಳಿದ ಆ ಆರು ಜನ ರಾಜಕುಮಾರಿಯರೂ ಹೀಗೆ ಭರತಖಂಡದ ಬೇರೆ ಬೇರೆ ಕಡೆಗಳಲ್ಲಿ ನೆಲೆಯಾಗಿದ್ದಾರೆ.

ಯಾವ ದೇಶವಾದರೇನು ಎಲ್ಲ ಕಡೆಯ ರಾಜಕುಮಾರಿಯರದೂ ಇದೇ ಕಥೆ

ಮೊನ್ನೆ ಶನಿವಾರ ಹಕ್ಕಿಗಳ ಫೋಟೋ ತೆಗೆಯಲು ಈ ದೈತ್ಯನ ಕೆರೆಗೆ ಹೋಗಿದ್ದೆ. ಪ್ರತಿ ವರ್ಷ ಚಳಿಗಾಲಕ್ಕೆ ಇಲ್ಲಿಗೆ ದೂರದ ಹಕ್ಕಿಗಳು ವಲಸೆ ಬರುತ್ತವೆ. ಆದರೆ ಈ ಸಲ ಇನ್ನೂ ಯಾಕೋ ಬಂದಿರಲಿಲ್ಲ.

ರಾಜಕಾರಣಿಯೊಬ್ಬರ ಕಡೆಯವರು ಕೆರೆಯ ಬದಿಯಲ್ಲಿ ಅತಿ ಸುಂದರವಾದ ತೋಟದ ಮನೆ ಕಟ್ಟಿದ್ದರು.

ಉದ್ಯಮಿಯೊಬ್ಬರು ಕೆರೆಯ ಮೀನಿನ ಕಾಂಟ್ರಾಕ್ಟು ವಹಿಸಿಕೊಂಡು ಮೀನಿನ ಮರಿಗಳನ್ನು ಕೆರೆಯಲ್ಲಿ ಬಿಟ್ಟು ದೊಡ್ಡ ದೊಡ್ಡ ಮೀನುಗಳನ್ನಾಗಿ ಬೆಳೆಸಿ ಮಾರುತ್ತ ಖುಷಿಯಾಗಿದ್ದರು.

ಇವರೆಲ್ಲರೂ ಹೀಗೆ ಈ ಸರೋವರವನ್ನು ಸುಖಿಸುತ್ತಿರುವಾಗ ಹಕ್ಕಿಗಳಾದರೋ ಹೇಗೆ ಬರುತ್ತವೆ?

ನಾನು ಇನ್ನೇನು ಮಾಡುವುದೆಂದು ಗೊತ್ತಾಗದೆ ಅತಿ ಹೆಚ್ಚು ತೂಕದ ದೈತ್ಯ ಮೀನೊಂದನ್ನು ಅವರು ಹೇಳಿದ ಬೆಲೆಗೆ ಕೊಂಡುಕೊಂಡು ಅದನ್ನು ಕಾರೊಳಗೆ ಆತ್ಮಸಖನಂತೆ ಕೂರಿಸಿಕೊಂಡು ಮನೆಯವರೆಗೆ ತಂದಿಟ್ಟುಕೊಂಡು ಹೇಗೆ ತಿನ್ನುವುದು ಎಂದು ತಯಾರಿ ಮಾಡಿಕೊಳ್ಳುತ್ತಿರುವಾಗಲೇ ತೀರ್ಥರೂಪರಂತಿದ್ದ ಕವಿ ತಿರುಮಲೇಶರು ತೀರಿಕೊಂಡ ಸುದ್ದಿ ತಿಳಿದು ಸೂತಕಪುತ್ರನಂತೆ ಕುಳಿತಿರುವೆ.

ಅವರನ್ನು ನಾನು ಸರಿಯಾಗಿ ಒಮ್ಮೆಯೂ ನೋಡಿಲ್ಲ.

ಬಹಳ ಹಿಂದೆ ಒಮ್ಮೆ ನೋಡಿರುವೆನೆಂದು ಅವರು ಎಲ್ಲೋ ಬರೆದಿದ್ದಾರೆ. ಅದು ನನಗೆ ನೆನಪಾಗದಿರುವಷ್ಟು ನನ್ನ ಗೋಳುಗಳು ಜಾಸ್ತಿ ಇತ್ತು ಅನಿಸುತ್ತದೆ. ಆದರೆ ಅವರಿಂದ ಬೆನ್ನು ಬಿದ್ದು ಬರೆಸಲು ಶುರುಮಾಡಿದ ಮೇಲೆ ಅವರ ಮೇಲೆ ನನ್ನ ಮೋಹಗಳು ಬೆಳೆಯಲು ಶುರುವಾದವು.

ನನಗೂ ಅವರಿಗೂ ಇರುವ ಬಹಳ ಸಾಮ್ಯಗಳೂ ಅಷ್ಟೇ ವೈರುಧ್ಯಗಳೂ ಈ ಮೋಹಕ್ಕೆ ಕಾರಣ ಅನಿಸುವುದು.

ಈ ಸಾಮ್ಯಗಳು ನನ್ನನ್ನು ನಾಚಿಕೊಳ್ಳುವಂತೆ ಮಾಡುವಂತಹದು. ಉದಾಹರಣೆಗೆ ನನ್ನ ಬರಹಗಳನ್ನು ಯಾರೂ ಕ್ಯಾರೇ ಮಾಡಲಿಲ್ಲ ಅನ್ನುವಂತಹ ಹಳಹಳಿಕೆಗಳು. ಈ ಹಳಹಳಿಕೆ ತಿರುಮಲೇಶರಲ್ಲಿ ದಂಡಿಯಾಗಿದ್ದವು.

ಈ ಹಳಹಳಿಕೆಗಳನ್ನು ಮರೆಸಬಲ್ಲ ವ್ಯಾಮೋಹಗಳು ದುರಾದೃಷ್ಟಕ್ಕೆ ಅವರಲ್ಲಿ ಇರಲಿಲ್ಲ.

ನನಗೆ ಇರುವುದರಿಂದ ನಾನು ಈ ಹಳಹಳಿಕೆಯಿಂದ ಅದೃಷ್ಟವಶಾತ್ ಬಚಾವಾದೆ ಅಂತಿಟ್ಟುಕೊಳ್ಳಿ.

ಇದೇನು ನನ್ನ ವೈಯುಕ್ತಿಕ ಅನಿಸಿಕೆ ಅಲ್ಲ. ಕಾವ್ಯ ಪ್ರತಿಭೆಯ ಜೊತೆಜೊತೆಗೇ ಅದರ ದುಪ್ಪಟ್ಟು ವ್ಯಾಮೋಹಗಳೂ ಇದ್ದರೆ ಮಾತ್ರ ಕವಿಗಳು ಇಂತಹ ಖಿನ್ನತೆಗಳಿಂದ ಪಾರಾಗುತ್ತಾರೆ ಎಂದು ನಾನು ಯೌವನದಲ್ಲಿ ಓದಿರುವ ಸಂಸ್ಕೃತ ಕಾವ್ಯಮೀಮಾಂಸೆಗಳು ಹೇಳಿದ್ದವು. ಬಹುಶಃ ತಿರುಮಲೇಶರು ಪಾಶ್ಚಾತ್ಯ ಕಾವ್ಯ ಮೀಮಾಂಸೆಗೆ ಹೆಚ್ಚು ಒತ್ತುಕೊಟ್ಟಿದ್ದರು ಅನಿಸುತ್ತದೆ ಇರಲಿ ಬಿಡಿ.

ತಿರುಮಲೇಶರ ಜೊತೆಗಿನ ಸಾಮ್ಯಗಳ ವಿಷಯದಲ್ಲಿ ನಾನು ಲಜ್ಜಾವಂತ.

ಆದರೆ ವ್ಯತ್ಯಾಸಗಳ ವಿಷಯಕ್ಕೆ ಬಂದರೆ ಅವರಿಗೆ ನಾನು ವಿನೀತ. ಅವರ ಓದು, ಪಾಂಡಿತ್ಯ, ಬರವಣಿಗೆಯ ಓಘ ಮತ್ತು ಶಿಸ್ತು ಮುಂತಾದವು ಯಾವುದೂ ನನ್ನಂತಹ ವ್ಯಾಮೋಹಿಗಳ ಕೈಹಿಡಿಯುವ ದೇವತೆಗಳಲ್ಲ.

ಆದರೆ ವ್ಯಾಮೋಹಿ ದೇವತೆಗಳೂ ಪಾಂಡಿತ್ಯದ ದೇವತೆಗಳೂ ಒಬ್ಬನದೇ ಕೈ ಹಿಡಿಯುವುದು ಬಹಳ ಅಪರೂಪ.

ಅವರಿಗೆ ಒಲಿದ ಪಾಂಡಿತ್ಯದ ದೇವತೆಗಳ ಮುಂದೆ ನನ್ನಂತಹ ಪಾಮರರೂ ವ್ಯಾಮೋಹಿಗಳೂ ಆದವರು ಲಜ್ಜಾವಂತರಾದ ನಾಚಿಕೆಕೆಟ್ಟವರು.

ತಿರುಮಲೇಶರ ಬಳಿ ನಿಮ್ಮ ಆತ್ಮಕಥೆ ಬರೆಯಿರಿ ಎಂದು ನಾನು ಬಹಳ ಸಲ ಅಲವತ್ತುಕೊಂಡಿದ್ದೆ.

ಅವರಿಗೆ ಅದು ಇಷ್ಟವಿರಲಿಲ್ಲ.

ಕವಿಯ ಬದುಕಿಗಿಂತ ಆತನ ಸಾಲುಗಳು ಅವಲೋಕನಕ್ಕೆ ಹೆಚ್ಚು ಯೋಗ್ಯ ಎಂಬುದು ಬಹುಶಃ ಅವರ ನಂಬಿಕೆಯಾಗಿತ್ತು ಅನಿಸುತ್ತದೆ.

ಬಹುಶಃ ಅವರ ಬಾಲ್ಯದ ಉಸಿರುಗಟ್ಟಿಸುತ್ತಿದ್ದ ಅಸಹನೀಯ ಗಬ್ಬು ವಾತಾವರಣ ಇದಕ್ಕೆ ಕಾರಣ ಇರಬಹುದು ಎಂದು ನನಗೆ ಅನಿಸುತ್ತದೆ.

ಕಿಳಿಂಗಾರು ವೆಂಕಪ್ಪ ತಿರುಮಲೇಶ್ ಅವರು ಕಾಸರಗೋಡಿನ ಬಳಿಯ ಕಾರಡ್ಕದ ಹವೀಕ ಮನೆತನದಲ್ಲಿ ಹುಟ್ಟಿದವರು. ಹವ್ಯಕ ಅವರ ಮನೆಯ ಮಾತು (ವಿಮರ್ಶಕರೊಬ್ಬರು ಬರೆದಿರುವಂತೆ ಮಲಯಾಳಂ ಅಲ್ಲ)

‘ತಿರುಮಲೇಶರೇ ಮೈಸೂರಿಗೆ ಬನ್ನಿ. ಇಲ್ಲಿಂದ ಇಬ್ಬರೂ ನಿಮ್ಮ ಕಾರಡ್ಕಕ್ಕೆ ಹೋಗಿ ತಿರುಗಾಡಿಕೊಂಡು ಬರೋಣ. ಫೋಟೋ ತೆಗೆದುಕೊಳ್ಳೋಣ’ ಅಂತ ಕೇಳಿಕೊಂಡಿದ್ದೆ.

ಅವರು ನನ್ನ ಮಾತುಗಳನ್ನು ಕೇಳಿಸಿಕೊಳ್ಳದಂತೆ ವರ್ತಿಸಿದ್ದರು.

ಬಹುಶಃ ಆ ಗ್ರಾಮದ ಕುರಿತು ಅವರಿಗೆ ಅಷ್ಟು ಒಳ್ಳೆಯ ನೆನಪುಗಳೇನೂ ಇಲ್ಲದಿರಬಹುದು ಎಂದು ನಾನೇ ಸುಮ್ಮನಾದೆ.

ನನ್ನಿಂದ ತಿನ್ನಲಾಗದೇ ಶೀತಲೀಕರಣದ ಪೆಟ್ಟಿಗೆಯೊಳಗೆ ಇಟ್ಟುಕೊಂಡಿರುವ ದೈತ್ಯನಕೆರೆಯ ಬೃಹತ್ ಮೀನಿನ ಕುರಿತು ಯೋಚಿಸುತ್ತಾ ನಾನು ಇದನ್ನೆಲ್ಲ ಬರೆಯುತ್ತಿದ್ದೇನೆ. ಈಗ ಅಫಘಾನಿಸ್ತಾನದಲ್ಲಿರುವ ಆದರೆ ಒಂದು ಕಾಲದಲ್ಲಿ ಬಲ್ಕಿಸ್ಥಾನವಾಗಿದ್ದ ದೇಶದ ಕವಿ ಮೌಲಾನಾ ಜಲಾಲುದ್ದೀನ್ ರೂಮಿ ತನ್ನ ಕುರಿತು ಒಂದು ಕಡೆ ಹೀಗೆ ಬರೆಯುತ್ತಾನೆ.

“ಹಗಲೆಲ್ಲ ಯೋಚಿಸುವೆ. ಇರುಳು ಅದನೇ ಹೇಳುವೆ.
ಎಲ್ಲಿಂದ ಬಂದೆ, ನಾನೇನು ಮಾಡುತಿರುವೆ ಒಂದೂ ಅರಿಯೆ.
ನನ್ನ ರೂಹು ಬೇರೆ ಎಲ್ಲಿನದೋ, ಅದು ಗೊತ್ತು ನಿಜ.
ಮತ್ತೆ ಅಲ್ಲಿಗೇ ಹೋಗಿ ಸೇರುವೆನು.
ಈ ಕುಡುಕುತನ ಬೇರೊಂದು ಹೆಂಡದಂಗಡಿಯಿಂದ ತೊಡಗಿದ್ದು
ಹಿಂತಿರುಗಿ ಅಲ್ಲಿ ತಲುಪಿದಾಗ
ಪೂರಾ ಸುಮ್ಮಗಾಗುವೆನು
ಅದುವರೆಗೆ ಈ ಗೆಲ್ಲ ಮೇಲೆ ಒಂದುಹಕ್ಕಿ ನಾನು
ಬಂದಿರುವುದು ಬೇರೊಂದು ಭೂಖಂಡದಿಂದ”

ಬಹುಶಃ ಈ ಜಾನಕೀದೇವಿ ಎಂಬ ರಾಜಕುಮಾರಿಯೂ, ಮಧ್ಯಪ್ರಾಚ್ಯದಿಂದ ಬಂದ ರಾಜಕುಮಾರಿಯರೂ, ದೈತ್ಯನಕೆರೆಯ ದೈತ್ಯನೂ, ವಲಸೆಬರುವ ಹಕ್ಕಿಗಳೂ, ಕವಿ ತಿರುಮಲೇಶರೂ ಎಲ್ಲರೂ ಯಾರೂ ಇಲ್ಲಿನವರಲ್ಲ ಅನಿಸುತ್ತದೆ. ಅವರು ಬಂದ ಜಾಗಕ್ಕೆ ಹಿಂತಿರುಗಿ ಹೋಗಿದ್ದಾರೆ ಅಷ್ಟೇ ಎಂದೂ ಅನಿಸುತ್ತದೆ.

ಇಲ್ಲದಿದ್ದರೆ ಸಾಲುಸಾಲಾಗಿ ತೀರಿಹೋಗುತ್ತಿರುವ ಹಿರಿಯರ ಸೂತಕದಲ್ಲಿ ಸದಾ ಮುಳುಗಿರುವುದು ಬಹಳ ಕಷ್ಟ.

ಆಂಗ್ಲಭಾಷೆಯ ಹಿರಿಯ ಕವಿ ಟಿ ಎಸ್ ಎಲಿಯಟ್ ತನ್ನ ವೇಸ್ಟ್ ಲ್ಯಾಂಡ್ ಎಂಬ ಕವಿತೆ ಬರೆದು ಈ ವರ್ಷಕ್ಕೆ ನೂರು ತುಂಬುತ್ತದೆ.

ನಾನೂರ ಮೂವತ್ತನಾಲ್ಕು ಸಾಲುಗಳ ಈ ಕಾವ್ಯ ಉಪನಿಷತ್ತಿನ ‘ದತ್ತ ದಯಧ್ವಂ ದಮ್ಯತ ಶಾಂತಿಃ ಶಾಂತಿಃ ಶಾಂತಿಃ’ ಎಂಬ ಸಾಲಿನೊಂದಿಗೆ ಮುಕ್ತಾಯವಾಗುತ್ತದೆ.

ಒಂದು ಮಾತಿಗೆ ಇದೇ ಎಂಬ ಅರ್ಥವಿರುವುದಿಲ್ಲ. ಯಾವುದೇ ಮಾತಾಗಲಿ ಅರ್ಥ ಪಡೆಯುವುದು ನಮ್ಮ ಮನಸ್ಸಿನಲ್ಲಿ. ಅರ್ಥದ ಅರಿವಾಗುವುದು ನಮ್ಮ ಅನುಭವದ ಮಿತಿಯಲ್ಲಿ ಎಂಬ ನೀತಿಯನ್ನು ಹೇಳುವ ಶುಕ್ಲಯಜುರ್ವೇದದ ಬೃಹದಾರಣ್ಯಕ ಉಪನಿಷತ್ತಿನ ಒಂದು ಕಥೆಯಲ್ಲಿ ಬರುವ ಸಾಲುಗಳಿವು.
ಪ್ರಜಾಪತಿಯ ಮಕ್ಕಳಾದ ಸುರರು, ಅಸುರರು ಮತ್ತು ಮನುಷ್ಯರು ತಮ್ಮ ತಂದೆಯ ಬಾಯಿಂದ ಗುಡುಗಿನಂತೆ ಹೊರಬಿದ್ದ ಕೋಪದ ‘ದ….ದ….ದ…’ ಎಂಬ ಪದವನ್ನು ಹೇಗೆ ಬೇರೆಬೇರೆಯಾಗಿ ಅರ್ಥ ಮಾಡಿಕೊಂಡು ಹಾಳಾಗಿ ಹೋದರು ಎಂಬುದನ್ನು ಈ ಸಾಲು ಹೇಳುತ್ತದೆ.

ತಿರುಮಲೇಶರು ಈ ಕವಿತೆಯನ್ನು ಪೂರ್ತಿಯಾಗಿ ಕನ್ನಡಕ್ಕೆ ಅನುವಾದಿಸಿ ಇತ್ತೀಚೆಗಷ್ಟೇ ಮೈಲ್ ಮಾಡಿದ್ದರು.

‘ಆದಷ್ಟು ಬೇಗ ಪ್ರಕಟಿಸಿ. ತೀರಾ ತಡವಾದರೆ ಆಗುವ ಅನಾಹುತಕ್ಕೆ ನಾನು ಜವಾಬ್ದಾರನಲ್ಲ’ ಎಂದೂ ಎಚ್ಚರಿಸಿದ್ದರು.

ಅದು ಪೂರೈಸುವ ಮೊದಲೇ ಹೋಗಿಬಿಟ್ಟರು.

ಏಕಕಾಲದಲ್ಲಿ ಸುರರೂ ಅಸುರರೂ ಮತ್ತು ಮನುಷ್ಯರೂ ಆದ ನಾವು ಈಗ ಅವರ ಕವಿತೆಗಳನ್ನು ಎದುರಲ್ಲಿ ಬಾಳೆಯ ಎಲೆಯಂತೆ ಹರವಿಕೊಂಡು ಕೂತಿರುವೆವು.

ಬಹುಶಃ ಇಲ್ಲಿ ನೀವು ನೋಡುತ್ತಿರುವ ದೈತ್ಯನಕೆರೆಯಿಂದ ಹಿಡಿದು ತಂದಿರುವ ವಿಲವಿಲ ಒದ್ದಾಡುತ್ತಿರುವ ಬೃಹತ್ ಮೀನುಗಳಿಗೂ ತಿರುಮಲೇಶರ ಕವಿತೆಗಳ ತಳಮಳಗಳಿಗೂ ಬಹಳ ಸಾಮ್ಯಗಳಿವೆ ಅನಿಸುತ್ತದೆ. ಜೊತೆಗೆ ಬಾಳೆ ಎಲೆಯ ಮುಂದೆ ಕುಳಿತಿರುವ ನನಗೂ ಮತ್ತು ನನ್ನಂತಹ ಹೊಟ್ಟೆಬಾಕ ಓದುಗರಿಗೂ.