ಈ ಕತೆ ಸಿಕ್ಕಿದ್ದು ಬಾಲೆಹೊಸೂರಿನಲ್ಲಿ. ಇದರ ವಿವರಗಳನ್ನು ನೋಡಲಾಗಿ ಈ ಊರಿನಲ್ಲಿಯೇ ‘ದ್ಯಾಮವ್ವ’ ಪೂಜೆಗೊಳ್ಳುತ್ತಾಳೆ. ಹೀಗಾಗಿ ಇಲ್ಲಿನ ತುಡುಗು ಮಂದಿಯೇ ಈ ಕಥೆಯ ನಾಯಕರಿರಬಹುದು. ಇದು ಸೃಷ್ಟಿ ಕತೆಯಲ್ಲ ಆದರೆ ಈಗಾಗಲೇ ಇರುವ ಸಮುದಾಯದ ಪ್ರವೃತ್ತಿಯನ್ನು ಬೆಂಬಲಿಸಿ ಪಾರುಮಾಡುವ ಕತೆಯಾಗಿದೆ. ಅಂತೆಯೇ ಸಮುದಾಯ ದೈವಗಳ ಜತೆ ಹೊಂದಿದ್ದ ಅವಿನಾಬಾವ ಸಂಬಂಧವನ್ನು ಕೂಡ ಸೂಚಿಸುತ್ತದೆ. ಅಂತೆಯೇ ದ್ಯಾಮವ್ವ ತಮ್ಮನ್ನು ಪೊರೆಯುತ್ತಾಳೆ ಎಂಬ ನಂಬಿಕೆಯನ್ನೂ ಸಮುದಾಯದಲ್ಲಿ ಬಲಗೊಳಿಸುತ್ತದೆ. ಹೀಗೆ ತುಡುಗು ಮಾಡಲು ಹೋದಾಗ ರಕ್ಷಿಸಿದ ಹನುಮಂತನ ಕಥೆಗಳೂ ಹಲವಿವೆ.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಎಂಟನೆಯ ಕಂತು

 

ಗಂಟಿಚೋರರ ಕಳ್ಳತನ ಅಥವಾ ತುಡುಗು ಮಾಡುವುದಕ್ಕೆ ಹೊಂದಿಕೊಂಡಂತೆ ಹಲ ಬಗೆಯ ನಂಬಿಕೆಯ ಲೋಕವನ್ನು ಕಟ್ಟಿಕೊಂಡಿದ್ದಾರೆ. ಈ ನಂಬಿಕೆಯ ಲೋಕವು ಅವರ ಆತ್ಮವಿಶ್ವಾಸವನ್ನೂ ಧೈರ್ಯವನ್ನು ಕೊಡುವುದಾಗಿ ಭಾವಿಸುತ್ತಾರೆ. ಈ ನಂಬಿಕೆಗಳ ಸತ್ಯಾಸತ್ಯತೆಗಿಂತ ಆಯಾ ನಂಬಿಕೆಗಳು ಈ ಸಮುದಾಯಕ್ಕೆ ಕೊಡುವ ಮಾನಸಿಕ ಸ್ಥೈರ್ಯವು ಮುಖ್ಯವಾಗಿದೆ. ಹಾಗಾಗಿ ಈ ನಂಬಿಕೆಯ ಲೋಕವನ್ನು ವೈಚಾರಿಕತೆಯಿಂದ ವಿಶ್ಲೇಷಣೆ ಮಾಡುವುದಕ್ಕಿಂತ, ಒಂದು ಸಮುದಾಯವು ತನ್ನ ಹೊಟ್ಟೆಪಾಡಿಗೆ ನಂಬಿದ ಒಂದು ಪ್ರವೃತ್ತಿಯನ್ನು ಮೌಲ್ಯೀಕರಿಸಿಕೊಂಡು ಆತ್ಮವಿಶ್ವಾಸ ಪಡೆಯುವ ಕ್ರಮವಾಗಿ ಮನಶ್ಶಾಸ್ತ್ರೀಯ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಅಂತಹ ನಂಬಿಕೆಲೋಕದ ಕೆಲವು ಸಂಗತಿಗಳನ್ನು ಇಲ್ಲಿ ಚರ್ಚೆ ಮಾಡಲಾಗಿದೆ.

ಸ್ವಮೂತ್ರಪಾನ

ಬಾಲೆಹೊಸೂರಿನ ಸರಿಸುಮಾರು 80 ವರ್ಷದ ಆಸುಪಾಸಿನವರು ತಮಗೆ ತಮ್ಮ ಹಿರಿಯರು ಹೇಳಿದ್ದರು ಎನ್ನಲಾದ ವಿಶಿಷ್ಟ ಸಂಗತಿಯೊಂದು ಸ್ವಲ್ಪ ಮುಜುಗರದಿಂದ ಹೇಳಿಕೊಂಡರು. ಇವರು ಹೇಳಿದ್ದನ್ನು ನೋಡಿದರೆ ಸರಿಸುಮಾರು ಹದಿನೆಂಟನೇ ಶತಮಾನದ ಕೊನೆಯ ಅಂಚಿನಲ್ಲಿ ಇದ್ದಿರಬಹುದಾದ ಒಂದು ನಂಬಿಕೆ ಇದು ಎಂದು ಗುರುತಿಸಬಹುದು. ಮುಖ್ಯವಾಗಿ ಪೊಲೀಸರು ಹೊಡೆಯುವ ಹೊಡೆತ ಮೈಗೆ ಹತ್ತಬಾರದು ಎನ್ನುವ ಕಾರಣಕ್ಕೆ ತಮ್ಮ ಮೂತ್ರವನ್ನೇ ತಾವು ಕುಡಿಯುತ್ತಿದ್ದರು ಎನ್ನುವುದು ಈ ಸಂಗತಿಯಾಗಿದೆ. ಮುಖ್ಯವಾಗಿ ಹೆಚ್ಚು ತುಡುಗುತನಕ್ಕೆ ಹೋಗುತ್ತಿದ್ದವರು ಮಾತ್ರ ಪೊಲೀಸರ ಹೊಡೆತಕ್ಕೆ ಮೈ ನಲುಗಬಾರದು ಎಂದು ಬೆಳಗ್ಗೆ ತಮ್ಮ ಮೂತ್ರದ ಸ್ವಲ್ಪ ಭಾಗವನ್ನು ಕುಡಿಯುತ್ತಿದ್ದರಂತೆ. ಇದಕ್ಕೆ ವೈಜ್ಞಾನಿಕ ಕಾರಣವನ್ನು ಪರಿಶೀಲಿಸಲಾಗಿ ಅಂತಹ ಮಹತ್ವದ ಸಂಗತಿಗಳೇನೂ ಇಲ್ಲ. ಬದಲಾಗಿ ಮಾನಸಿಕವಾಗಿ ದೃಢವಾಗಲು ಅನ್ಯರು ಮಾಡದ ಸಾಹಸವನ್ನು ಮಾಡಿ ದಕ್ಕಿಸಿಕೊಳ್ಳುತ್ತಲೇ ಮಾನಸಿಕವಾಗಿ ಗಟ್ಟಿಯಾಗುವ ಪ್ರಯತ್ನದಂತೆ ಕಾಣುತ್ತದೆ.

ವೈದ್ಯಕೀಯ ವಿಜ್ಞಾನದಲ್ಲಿ ಸ್ವಮೂತ್ರದ ಸೇವನೆಯಿಂದ ದೇಹಕ್ಕೆ ಯಾವುದೇ ಉಪಯೋಗವಿಲ್ಲವೆಂದು ಸಾಬೀತಾಗಿದೆ. ವೈದ್ಯರಾದ ಕೃಷ್ಣಗಿಳಿಯಾರ್ ಅವರು ಹೇಳುವಂತೆ ‘ದೇಹವು ತನಗೆ ಬೇಕಾದ್ದನ್ನು ಬಳಸಿಕೊಂಡು ಬೇಡವಾದ್ದನ್ನು ಹೊರಹಾಕುತ್ತದೆ, ಹಾಗಿರುವಾಗ ದೇಹ ಬೇಡವಾದ್ದನ್ನು ಹೊರಹಾಕಿದ್ದರಿಂದ ಮತ್ತೆ ದೇಹಕ್ಕೆ ಏನೋ ಆಗುತ್ತದೆ ಎನ್ನುವುದೇ ಹುಚ್ಚುತನ’ ಎನ್ನುತ್ತಾರೆ. ಹಾಗಾಗಿ ಸ್ವಮೂತ್ರ ಸೇವನೆಯನ್ನು ಮನಶ್ಶಾಸ್ತ್ರದ ಹಿನ್ನೆಲೆಯಲ್ಲಿ ನೋಡಬೇಕು. ಮುಖ್ಯವಾಗಿ ದೇಹ ಎಲ್ಲವನ್ನೂ ಸಹಿಸಬಲ್ಲದು ಎನ್ನುವುದನ್ನು ಮಾನಸಿಕವಾಗಿ ದೇಹಕ್ಕೆ ಮಾಡಿಕೊಳ್ಳುವ ಹಲವು ಪ್ರಯೋಗಗಳಲ್ಲಿ ಸ್ವಮೂತ್ರಸೇವನೆಯೂ ಒಂದಾಗಿದೆ. ಹಾಗಾಗಿಯೇ ಅಘೋರಿಗಳು, ಸಾಧಕರು ಕೆಲವರು ಹೀಗೆ ಸ್ವಮೂತ್ರ ಸೇವನೆ ಮಾಡುವ ಪದ್ಧತಿ ಭಾರತದ ಪ್ರಚಲಿತದಲ್ಲಿದ್ದ ಬಗ್ಗೆ ಮಾಹಿತಿಗಳಿವೆ. ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ‘ರೋಗನಿರೋಧಕ’ ಕಾರಣಕ್ಕಾಗಿ ಸ್ವಮೂತ್ರಪಾನ ಮಾಡುವ ಸುದ್ದಿ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗಿತ್ತು.

ಶುಭಾಶುಭ ಸಂಕೇತಗಳು

ಗಂಟಿಚೋರ್ ಸಮುದಾಯವು ತುಡುಗು ಅಥವಾ ಕಳ್ಳತನಕ್ಕೆ ಹೋಗುವ ಸಂದರ್ಭದಲ್ಲಿ ಅವರು ಕೇಳುವ, ನೋಡುವ ಸಂಗತಿಗಳಲ್ಲಿ ಶುಭಶಕುನ, ಅಪಶಕುನ ಇರುವುದನ್ನು ಗುರುತಿಸಿಕೊಳ್ಳುತ್ತಿದ್ದರು ಅಥವಾ ಹಾಗೆ ನಂಬಿಕೊಂಡು ಬಂದಿದ್ದರು. ಹಾಗೆ ನೋಡಿದರೆ, ಶುಭಾಶುಭ ಸಂಕೇತಗಳ ದೊಡ್ಡ ಪಟ್ಟಿಯೇ ಇದೆ. ವಿಶೇಷವಾಗಿ ಗಂಟಿಚೋರರು ಮಾತ್ರ ಗುರುತಿಸಿಕೊಳ್ಳುವ ಸಂಕೇತಗಳಿವೆಂದು ಹೇಳುವಂತಿಲ್ಲ. ಬದಲಾಗಿ ಇವು ಇತರೆ ಸಮುದಾಯಗಳು ಗುರುತಿಸಿಕೊಳ್ಳುವ ಸಂಕೇತಗಳ ಜತೆ ಸಾಮ್ಯತೆ ಹೊಂದಿವೆ. ಆದರೆ ಈ ಸಮುದಾಯವು ಸಾಮಾಜಿಕವಾಗಿ ಬಳಕೆಯಲ್ಲಿದ್ದ ಶುಭಾಶುಭ ಸಂಕೇತಗಳನ್ನು ತಮ್ಮ ಪ್ರವೃತ್ತಿಯಾದ ‘ತುಡುಗು’ ಮಾಡುವ ಸಂದರ್ಭಕ್ಕೆ ಪೂರಕವಾಗಿ ಅರ್ಥೈಸಿಕೊಳ್ಳುತ್ತಿದ್ದರು. ಹೀಗೆ ಅರ್ಥೈಸಿಕೊಳ್ಳುವಿಕೆಯಲ್ಲಿಯೂ ಕೆಲವು ಪ್ರಾದೇಶಿಕ ಭಿನ್ನತೆಗಳಿದ್ದವು. ಇದರಲ್ಲಿ ಪ್ರಾತಿನಿಧಿಕವಾಗಿ ಎಲ್ಲಾ ಭಾಗದಲ್ಲಿಯೂ ಪ್ರಚಲಿತವಿದ್ದ ಅಥವಾ ಈಗಲೂ ಉಳಿದುಬಂದಿರುವ ಕೆಲವು ಸಂಗತಿಗಳನ್ನು ಇಲ್ಲಿ ಗುರುತಿಸಲು ಪ್ರಯತ್ನಿಸುವೆ.

ಕಾಗೆ, ಬೆಕ್ಕು, ಹಾವು ಎದುರು ಬಂದರೆ ಅಪಶಕುನ ಎಂದು ಭಾವಿಸಿ ಆ ದಿನ ಕಳವಿಗೆ ಹೋಗುತ್ತಿರಲಿಲ್ಲ. ತುಡುಗಿಗೆ ಹೊರಟಾಗ ಹೆಣ್ಣುಮಗಳು ತುಂಬಿದ ಕೊಡ ಹೊತ್ತು ಬಂದರೆ ಕಳವು ಚೆನ್ನಾಗಿ ಆಗುತ್ತದೆ ಎಂದೂ, ಅದೇ ಹೆಣ್ಣುಮಗಳು ಕಾಲಿ ಕೊಡ ಹಿಡಿದು ಎದುರು ಬಂದರೆ ಅಪಶಕುನವೆಂದೂ ಭಾವಿಸುತ್ತಿದ್ದರು. ವಿಧವೆಯರು ಎದುರು ಬಂದರೆ ಕಳ್ಳತನಕ್ಕೆ ಹೋಗುತ್ತಿರಲಿಲ್ಲ. ಅಂತೆಯೇ ಮುತ್ತೈದೆಯರು ಎದುರು ಬಂದರೆ ಶುಭವೆಂದು ಭಾವಿಸಿ ತುಡುಗಿಗೆ ಹೋಗುತ್ತಿದ್ದರು. ದಾರಿಯಲ್ಲಿ ಎದುರಿಗೆ ಕಟ್ಟಿಗೆ ಹೊತ್ತುಕೊಂಡು ಬಂದರೆ ಅಪಶಕುನ, ಕ್ಷೌರದವರು ಬಂದರೆ ಅಪಶಕುನ, ದಲಿತರು ಬಂದರೆ ಅಪಶಕುನ ಎಂದು ಭಾವಿಸುತ್ತಿದ್ದರು. ಅಂತೆಯೇ ಹೋಗುವ ದಾರಿಯಲ್ಲಿ ಜಗಳವಾಡುತ್ತಿದ್ದರೆ ಅಪಶಕುನವೆಂದು ಭಾವಿಸುತ್ತಿದ್ದರು. ಅಪಶಕುನ ಎಂದು ಭಾವಿಸುವಾಗಲೆಲ್ಲಾ ಕಳ್ಳತನಕ್ಕೆ ಹೋಗದೆ ಮನೆಗೆ ಹಿಂತಿರುಗುತ್ತಿದ್ದರು.

ತುಡುಗಿಗೆ ಹೋಗುವ ಆಲೋಚನೆ ಮಾಡುವಾಗ ಒಂದು ಸೀನು ಬಂದರೆ ಒಳ್ಳೆಯದು, ಎರಡು ಸೀನು ಬಂದರೆ ಅಪಶಕುನ. ತುಡುಗಿಗೆ ಹೋಗುವ ಮಾತುಕತೆ ನಡೆಯುವಾಗ ಒಲೆಯ ಮೇಲಿನ ಮತ್ತು ದೇವರ ಜಗಲಿ ಮೇಲಿನ ಹಲ್ಲಿ ನುಡಿದರೆ ಒಳ್ಳೆಯದು. ಪಡಸಾಲೆ ಮೇಲಿನ, ಒಳಬಾಗಿಲ ಮೇಲಿನ ಹಲ್ಲಿ ನುಡಿದರೆ ಕೆಟ್ಟದ್ದು, ಅಂತೆಯೇ ಮನೆಯ ತಲೆಬಾಗಿಲ ಬಲಕ್ಕೆ ಹಲ್ಲಿ ನುಡಿದರೆ ಒಳ್ಳೆಯದೆಂದೂ, ಎಡಕ್ಕೆ ನುಡಿದರೆ ಕೆಟ್ಟದ್ದೆಂದೂ, ಹಲ್ಲಿಯು ಮೂರು ಬಾರಿ ನುಡಿದರೆ ಒಳ್ಳೆಯದೆಂದೂ, ಒಂದು ಬಾರಿ ನುಡಿದರೆ ಕೆಟ್ಟದ್ದೆಂದೂ, ನಾಯಿಯೊಂದು ಮೈಕೊಡವಿ ಓಡಿದರೆ ಒಳ್ಳೆಯದೆಂದೂ, ಹಾಗೆ ಮೈಕೊಡವಿ ನಿಂತುಕೊಂಡರೆ ಕೆಟ್ಟದ್ದೆಂದೂ ನಂಬುತ್ತಿದ್ದರು.

ಹೀಗೆ ಹತ್ತು ಹಲವು ಶುಭಾಶುಭ ಶಕುನಗಳಿವೆ. ಇವರು ತಮ್ಮ ದೈನಂದಿನ ಜೀವಿತದ ಘಟನೆಗಳಲ್ಲಿಯೇ ಸಾಮಾಜಿಕ ನಂಬಿಕೆಗಳಾಗಿದ್ದ ಕೆಟ್ಟ ಮತ್ತು ಒಳ್ಳೆಯದರ ಪರಿಭಾಷೆಯನ್ನು ರೂಢಿಸಿಕೊಂಡಿದ್ದರು. ಇದು ಸಾಮಾಜಿಕ ಒಡನಾಟದ ಪರಿಣಾಮವಾಗಿತ್ತು. ಕ್ಷೌರಿಕರು, ದಲಿತರು ಅಪಶಕುನ ಎನ್ನುವ ನಂಬಿಕೆಯನ್ನು ಮೇಲುಜಾತಿಗಳು ಕಟ್ಟಿದ್ದವು. ಇದನ್ನೇ ಇವರು ಕುರುಡಾಗಿ ಬಳಸಿದ್ದಾರೆ. ಇದಕ್ಕೆ ವಿರುದ್ಧವಾದ ಶುಭಾಶುಭ ಶಕುನಗಳು ಜನಪದದಲ್ಲಿವೆ. ದಲಿತರು, ಕುರುಬರು, ಹೂಗಾರರು ಎದುರು ಬಂದರೆ ಒಳ್ಳೆಯದೆಂದೂ, ಜಂಗಮರು, ಶಾನುಭೋಗರು(ಬ್ರಾಹ್ಮಣರು) ಎದುರು ಬಂದರೆ ದಟ್ಟ ದಾರಿದ್ರ್ಯವೆಂದೂ ನಂಬುವ ಮೂಲಕ ಸಾಮಾಜಿಕ ಮೌಲ್ಯವನ್ನು ಅಪಮೌಲ್ಯೀಕರಿಸುವುದೂ ಜನಪದದಲ್ಲಿದೆ.

ಈ ನಂಬಿಕೆಯ ಲೋಕವನ್ನು ವೈಚಾರಿಕತೆಯಿಂದ ವಿಶ್ಲೇಷಣೆ ಮಾಡುವುದಕ್ಕಿಂತ, ಒಂದು ಸಮುದಾಯವು ತನ್ನ ಹೊಟ್ಟೆಪಾಡಿಗೆ ನಂಬಿದ ಒಂದು ಪ್ರವೃತ್ತಿಯನ್ನು ಮೌಲ್ಯೀಕರಿಸಿಕೊಂಡು ಆತ್ಮವಿಶ್ವಾಸ ಪಡೆಯುವ ಕ್ರಮವಾಗಿ ಮನಶ್ಶಾಸ್ತ್ರೀಯ ಹಿನ್ನೆಲೆಯಲ್ಲಿ ನೋಡಬೇಕಾಗಿದೆ.

ದ್ಯಾಮವ್ವನ ಕಥೆ

ಈ ಸಮುದಾಯದ ‘ತುಡುಗು’ ಮಾಡುವ ಕೆಲಸಕ್ಕೆ ದೇವಿ ಹೇಗೆ ಬೆಂಬಲವಾಗಿದ್ದಾಳೆ ಎನ್ನುವುದನ್ನು ಈ ಕತೆ ಸಾಬೀತು ಮಾಡುವಂತಿದೆ. ಗಂಟಿಚೋರರ ನಾಲ್ಕು ಜನ ಕಳ್ಳರು ನಿರಂತರವಾಗಿ ಕಳ್ಳತನ ಮಾಡುತ್ತಾ ಜನರಿಗೆ ಬೇಸರ ತರಿಸಿದ್ದರಂತೆ. ಎಷ್ಟೇ ಹೇಳಿದ್ದರೂ ಹೇಗಾದರೂ ಮಾಡಿ ಕಳ್ಳತನವನ್ನು ತುಂಬಾ ಚಾಕಚಕ್ಯತೆಯಿಂದ ಮಾಡುತ್ತಿದ್ದರಂತೆ. ಹೀಗೆ ಪ್ರಸಿದ್ಧಿ ಹೊಂದಿದ ಇವರನ್ನು ಸುತ್ತಮುತ್ತಣ ಹಳ್ಳಿಗಳಲ್ಲಿ ತುಡುಗರೆಂದು ತಕ್ಷಣ ಗುರುತಿಸುತ್ತಿದ್ದರಂತೆ. ಇವರ ಮೇಲೆ ಕಣ್ಣಿಟ್ಟು ತುಡುಗು ಮಾಡಿ ಸಿಕ್ಕರೆ ಜನರೆಲ್ಲಾ ಸೇರಿ ಧರ್ಮದೇಟು ಹಾಕುತ್ತಿದ್ದರಂತೆ. ಅಷ್ಟಾಗಿಯೂ ಇವರು ತುಡುಗು ಮಾಡುವುದನ್ನು ಮಾತ್ರ ಬಿಟ್ಟಿರಲಿಲ್ಲವಂತೆ. ಹೀಗಿರುವಾಗ ಒಂದು ದಿನ ದೂರದ ಹಳ್ಳಿಯೊಂದಕ್ಕೆ ಜಾತ್ರೆಗೆ ಕಳವು ಮಾಡಲು ಹೋದರಂತೆ. ಆ ಜಾತ್ರೆಯಲ್ಲಿ ಇವರನ್ನು ಕೆಲವರು ಗುರುತಿಸಿ ಹಿಡಿದರಂತೆ. ಹೀಗೆ ಹಿಡಿದವರನ್ನು ಕೋಣನ ಜತೆ ದೇವಿಗೆ ಬಲಿ ಕೊಟ್ಟರಾಯಿತೆಂದು ದೊಡ್ಡ ವಾಡೆಯಲ್ಲಿ ಕೂಡಿಟ್ಟರಂತೆ.

ಈ ನಾಲ್ಕು ಜನರ ಕಳ್ಳರು ದ್ಯಾಮವ್ವನಿಗೆ ಬೇಡಿಕೊಂಡರಂತೆ. ‘ನಮ್ಮನ್ನ ಕೋಣನ ಜತೆ ಬಲಿ ಕೊಡ್ತೀವಿ ಅಂತ ಊರವರು ಕೂಡಿಟ್ಟಾರ, ನೀನು ದೊಡ್ಡಾಕಿ, ನೀ ಬಂದು ನಮ್ಮನ್ನ ಕಾಪಾಡಬೇಕು, ಇಲ್ಲಾಂದ್ರ ನಾವು ಬಲಿಯಾಗ್ತೀವಿ’ ಎಂದು ಬೇಡಿಕೊಂಡು ಮಲಗಿದರಂತೆ. ಹೀಗಿರುವಾಗ ದ್ಯಾಮವ್ವ ಇವರ ಕನಸಲ್ಲಿ ಬಂದು ‘ಈ ವಾಡೆಯ ಬಾಗಿಲು ತೆಗೀತೀನಿ, ಊರ ಹೊರಗೆ ಒಂದು ಹುಡೇವು ಇದೆ. ಅದನ್ನ ಹತ್ತಿ ಅಲ್ಲಿಂದ ಕೆಳಗ ಹಾರಿರಿ, ಕೆಳಗೆ ಆನೆಯ ಲದ್ದಿ ಇರುತ್ತೆ ನಿಮಗೆ ಏನೂ ಆಗುವುದಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ನಿಮ್ಮ ಊರಿಗೆ ಸುರಕ್ಷಿತವಾಗಿ ಹೋಗಿರಿ’ ಎಂದು ಮಾಯವಾದಳಂತೆ. ತಕ್ಷಣ ಎದ್ದವರೇ ವಾಡೆಯಿಂದ ತಪ್ಪಿಸಿಕೊಂಡು ಹುಡೇವನ್ನು ಹತ್ತಿ ಒಬ್ಬೊಬ್ಬರೇ ಕೆಳಕ್ಕೆ ಹಾರಿದರಂತೆ. ಹೀಗಿರುವಾಗ ಒಬ್ಬ ಮಾತ್ರ ಕತ್ತಲಲ್ಲಿ ಕಾಣದೆ ಆನೆಲದ್ದಿಯನ್ನು ಬಿಟ್ಟು ನೆಲದ ಮೇಲೆ ಹಾರಿ, ತುಂಬಾ ಪೆಟ್ಟಾಗಿ ನಡೆದಾಡದಂತೆ ಸುಸ್ತಾಗಿ ಕೂತಿದ್ದಾನೆ. ಆಗ ಉಳಿದವರು ಅವನನ್ನು ಅಲ್ಲಿಯೇ ಕೂರಿಸಿ ಗೋವಿನ ಸೊಪ್ಪನ್ನು ಕಾಣದಂತೆ ಮುಚ್ಚಿ, ಯಾರದೋ ಮನೆಯ ಹಿತ್ತಲಲ್ಲಿ ಕಟ್ಟಿದ ಆಕಳೊಂದನ್ನು ಬಿಚ್ಚಿಕೊಂಡು ಬಂದು ಅದರ ಮೇಲೆ ಪೆಟ್ಟಾದವನನ್ನು ಕೂರಿಸಿಕೊಂಡು ಊರು ತಲುಪಿದರಂತೆ.

ಈ ಕತೆ ಸಿಕ್ಕಿದ್ದು ಬಾಲೆಹೊಸೂರಿನಲ್ಲಿ. ಇದರ ವಿವರಗಳನ್ನು ನೋಡಲಾಗಿ ಈ ಊರಿನಲ್ಲಿಯೇ ‘ದ್ಯಾಮವ್ವ’ ಪೂಜೆಗೊಳ್ಳುತ್ತಾಳೆ. ಹೀಗಾಗಿ ಇಲ್ಲಿನ ತುಡುಗು ಮಂದಿಯೇ ಈ ಕಥೆಯ ನಾಯಕರಿರಬಹುದು. ಇದು ಸೃಷ್ಟಿ ಕತೆಯಲ್ಲ ಆದರೆ ಈಗಾಗಲೇ ಇರುವ ಸಮುದಾಯದ ಪ್ರವೃತ್ತಿಯನ್ನು ಬೆಂಬಲಿಸಿ ಪಾರುಮಾಡುವ ಕತೆಯಾಗಿದೆ. ಅಂತೆಯೇ ಸಮುದಾಯ ದೈವಗಳ ಜತೆ ಹೊಂದಿದ್ದ ಅವಿನಾಬಾವ ಸಂಬಂಧವನ್ನು ಕೂಡ ಸೂಚಿಸುತ್ತದೆ. ಅಂತೆಯೇ ದ್ಯಾಮವ್ವ ತಮ್ಮನ್ನು ಪೊರೆಯುತ್ತಾಳೆ ಎಂಬ ನಂಬಿಕೆಯನ್ನೂ ಸಮುದಾಯದಲ್ಲಿ ಬಲಗೊಳಿಸುತ್ತದೆ. ಹೀಗೆ ತುಡುಗು ಮಾಡಲು ಹೋದಾಗ ರಕ್ಷಿಸಿದ ಹನುಮಂತನ ಕಥೆಗಳೂ ಹಲವಿವೆ.

ಹನುಮಂತನ ಪ್ರಸಾದದ ನಂಬಿಕೆ

ಬಾಲೆಹೊಸೂರಿನ ಯಾವುದೇ ಜಾತಿಯವರು ಬೇರೆ ಊರಿಗೆ ಹೋದರೆ, ಬೇರೆ ಊರಿನವರು ಇವರನ್ನು ಗಂಟಿಚೌಡ್ಯಾ ಎಂದು ಕರೆಯುತ್ತಾರೆ. ಸುತ್ತಮುತ್ತಲ ಹಳ್ಳಿಯಲ್ಲಿ ಗಂಟಿಚೌಡೇರು ಎನ್ನುವುದು ಒಂದು ನುಡಿಗಟ್ಟಾಗಿ ಬಳಕೆಯಾಗಿದೆ.

ಆಂಜನೇಯ ದೇವರ ಹೂ ಪ್ರಸಾದದ ಫಲ

ಬಲ: ಕುತ್ತಿಗೆ ಭಾಗ ಸ್ವಲ್ಪಬಿಟ್ಟು ಮುಂದಿನ ಬುಡದವರೆಗೆ ಹೂ ಕೊಟ್ಟಲ್ಲಿ ಸಂಕಲ್ಪ ಮಾಡಿಕೊಂಡ ಕೆಲಸ ಕೈಗೂಡುತ್ತದೆ.

ಅಮೃತಬಟ್ಟು: ಬಲಗೈ ತುದಿಬೆರಳ ಮೇಲೆ ಹೂ ಕೊಟ್ಟರೆ ಅದು ಅಮೃತಬೊಟ್ಟು. ನಿಧಾನಕ್ಕೆ ಕಾರ್ಯ ಸಿದ್ಧಿಯಾಗುತ್ತದೆ ಎಂದು ಅರ್ಥ. ಅಮೃತದಲ್ಲಿ ಕೈ ಇಟ್ಟಂತಹ ವರ.

ಬಲಗೈ ಮೊಣಕೈ ಸಂದಿ: ಈ ಭಾಗದಲ್ಲಿ ಹೂ ಫಲ ನೀಡಿದರೆ ಸಂಕಲ್ಪ ಮಾಡಿಕೊಂಡ ಕೆಲಸವು ಸಂದಿಯಲ್ಲಿ ಅಥವಾ ತೊಡಕಿನಲ್ಲಿದೆ. ಸ್ವಲ್ಪ ತಡೆದು ಕೆಲಸ ಮಾಡು ಎಂದು ಅರ್ಥ.

ಬಲಗೈ ರಟ್ಟೆಯ ಭಾಗ: ಈ ಭಾಗ ಮೊಣಕೈ ಸಂದಿ ಮತ್ತು ಭುಜ ಭಾಗದ ಮಧ್ಯೆಯ ಹೂ ಪ್ರಸಾದವಾಗಿದೆ. ಸಂಕಲ್ಪ ಮಾಡಿಕೊಂಡ ಕೆಲಸವು ನಮ್ಮ ತೆಕ್ಕೆಗೇ ಬಿದ್ದು ಕೆಲಸ ಕಾರ್ಯರೂಪಕ್ಕೆ ಬರುತ್ತದೆ.

ಬಲಭಾಗದ ಕಿವಿ: ಈ ಕಿವಿಯ ಮೇಲಿನ ಹೂ ಬಿದ್ದರೆ ಒಳ್ಳೆಯ ಸುದ್ದಿ ನಮ್ಮ ಕಿವಿಗೆ ಕೇಳುತ್ತದೆ ಎಂದು ಅರ್ಥ.

ಮೇಲಕಟ್ಟು: ನೆತ್ತಿಯ ಮೇಲೆ ಸುತ್ತುವರಿದ ಬಾಲದ ಮೇಲಿನ ಹೂ ಪ್ರಸಾದ ಮೂರ್ತಿಯ ಮುಖಕ್ಕೆ ಬಡಿದುಕೊಂಡು ಬಿದ್ದರೆ ಅದು ದೇವರ ನೆದರು, ಲಕ್ಷ್ಯ ತಮ್ಮ ಮೇಲಿದೆ ಎಂದರ್ಥ. ಸಂಕಷ್ಟದಲ್ಲಿದ್ದಾಗ ನಮ್ಮನ್ನು ಕಾಯುತ್ತಾನೆಂದು ತಿಳಿಯುತ್ತಾರೆ.

ತಲೆಮೇಲಿನ ಜುಟ್ಟಿನ ಬಡ್ಡಿ: ಬಡ್ಡಿ ಶಕಾ ಎನ್ನುತ್ತಾರೆ. ಬಡ್ಡಿ ಅಥವಾ ಬುಡ ಅಂದರೆ ಹಿಡಿದ ಕೆಲಸದ ಬುಡ ಗಟ್ಟಿಯಾಗಿಲ್ಲ ಎಂದರ್ಥ.

ಜುಟ್ಟಿನ ಮೇಲಿನ ಹೂ: ಹನುಮಂತನ ಬಾಲದ ಜುಟ್ಟಿನ ಬುಡದಿಂದ ಮೇಲೆ ಇರುವ ಹೂ. ಈ ಪ್ರಸಾದ ಆದರೆ ಜುಟ್ಟಿಡಿದು ಕೆಡವಾಡಿದಂತೆ ಯಾವ ಕೆಲಸವೂ ಆಗುವುದಿಲ್ಲವೆಂದು ಅರ್ಥ.

ಮೀಸೆ ಪ್ರಸಾದ: ಮೀಸೆ ಮೇಲಿನ ಹೂ ಕೊಟ್ಟಲ್ಲಿ ಸಂಕಲ್ಪ ಮಾಡಿಕೊಂಡ ಕೆಲಸದಲ್ಲಿ ಜಯ ಸಾಧಿಸಿ ಮೀಸೆ ಮೇಲೆ ಕೈ ಹಾಕುತ್ತೀರಿ ಎಂದರ್ಥ.

ಅಂಡಬಾಲ: ಬಾಲದ ಬುಡದ ಭಾಗವನ್ನು ಅಂಡಬಾಲ ಎನ್ನುವರು. ಈ ಪ್ರಸಾದ ಆದರೆ ಯಾವುದೇ ಕೆಲಸ ಆಗುವುದಿಲ್ಲವೆಂದು ಅರ್ಥ. ಕೆಲಸ ತಳ ಹಿಡಿದಿದೆ ಎಂದರ್ಥ.

ಅಂಡಬಾಲದ ಮುಂದಿನ ಭಾಗ(ಸಾಗುಬಾಲ): ಬಾಲದ ಬುಡದ ಭಾಗದಿಂದ ಸ್ವಲ್ಪ ಮೇಲಕ್ಕೆ ಏರುವ ಸ್ಥಳವಾಗಿದೆ. ಈ ಭಾಗದಲ್ಲಿ ಪ್ರಸಾದವಾದರೆ, ಸಂಕಲ್ಪ ಮಾಡಿಕೊಂಡ ಕೆಲಸ ಸಾಗುತ್ತದೆ ಎಂದು ಅರ್ಥ.

ಬಲಗಡೆ ಪಾದ: ಬಲಗಡೆ ಪಾದಕ್ಕೆ ಎದ್ದ ಪಾದ ಎನ್ನುತ್ತಾರೆ. ಈ ಪಾದದಲ್ಲಿ ಪ್ರಸಾದವಾದರೆ ಮೊದಲು ಎದ್ದು ಹೋಗಿ ಆದಷ್ಟು ಬೇಗ ಕೆಲಸ ಮಾಡಿ, ನಿಮ್ಮ ಕೆಲಸವಾಗುತ್ತದೆ ಎಂದು ಅರ್ಥ.

ಜೊಲ್ಲುಬಾಯಿ: ಎಡಭಾಗದ ಕುತ್ತಿಗೆ ಭಾಗದಿಂದ ಬಾಯಿಯ ಹತ್ತಿರದ ಪ್ರಸಾದವನ್ನು ಜೊಲ್ಲುಬಾಯಿ ಪ್ರಸಾದ ಎನ್ನುತ್ತಾರೆ. ಈ ಪ್ರಸಾದ ಸಾಂಕೇತಿಕವಾಗಿ ಒಳ್ಳೆಯದು, ಆದರೆ ಅಷ್ಟು ಖಚಿತವಲ್ಲದ್ದು. ಜೊಲ್ಲುಬಾಯಿಯ ಮುಂದಿನ ಭಾಗ ಅಂದರೆ ರಟ್ಟೆಯ ಎರಡು ಪಟ್ಟಿ ಇರುತ್ತವೆ. ಆ ಭಾಗದಲ್ಲಿ ಪ್ರಸಾದವಾದರೆ ಯಾವುದೇ ಕೆಲಸ ನೆರವೇರುವುದಿಲ್ಲವೆಂದು ಅರ್ಥ.

ಗಂಟುಕೈ ಪ್ರಸಾದ: ಎಡಗೈ ಭಾಗದ ಮೊಣಕೈ ಸಂದಿಯಲ್ಲಿಯ ಹೂವಿಗೆ ಗಂಟುಕೈ ಪ್ರಸಾದ ಎನ್ನುತ್ತಾರೆ. ನಮ್ಮ ಸಂಕಲ್ಪದ ಕೆಲಸ ನೆರವೇರಿದರೂ ಅದಕ್ಕಾಗಿ ಗಂಟು(ಹಣ) ಖರ್ಚಾಗುತ್ತದೆ ಎಂದು ಅರ್ಥ.

ಕಂಕಣಕೈ ಪ್ರಸಾದ: ಎಡಗೈ ಮುಂಗೈಯನ್ನು ಕಂಕಣ ಕೈ ಎನ್ನುತ್ತಾರೆ. ಕೈಗೊಂಡ ಕೆಲಸ ಕಂಕಣ ಕಟ್ಟಿದಂತೆ ಯಶ ಕಾಣುತ್ತದೆ ಎನ್ನುವುದನ್ನು ಸಾಂಕೇತಿಸುತ್ತದೆ. ಮದುವೆ ವಿಚಾರದಲ್ಲಿ ಕಂಕಣ ಭಾಗ್ಯ ಬರುತ್ತದೆ ಎಂದು ಸೂಚಿಸುತ್ತದೆ.

ಹಿಡಿದ ಮುಷ್ಟಿ: ಎಡಗೈ ಕಂಕಣ ಭಾಗದಿಂದ ಮುಂದಿನ ಭಾಗವನ್ನು ಹಿಡಿದ ಮುಷ್ಟಿ ಎನ್ನುತ್ತಾರೆ. ಇಲ್ಲಿನ ಪ್ರಸಾದವಾದರೆ ಹಿಡಿದ ಕೆಲಸಕ್ಕೆ ಒಳ್ಳೆಯದಾಗುತ್ತದೆ, ಕೆಲಸ ಮುಂದುವರಿಸಬಹುದು ಎನ್ನುವುದನ್ನು ಸೂಚಿಸುತ್ತದೆ.

ಗೋಪಾಳ ಅಥವಾ ಬಾಳೆಗೊನೆ ಪ್ರಸಾದ: ಎಡಭಾಗದ ಸೊಂಟದ ಕೆಳಗೆ ಅಥವಾ ಹಿಡಿದ ಮುಷ್ಟಿಯ ಕೆಳಭಾಗವಾಗಿದೆ. ಈ ಭಾಗದ ಪ್ರಸಾದವೂ ಶುಭ ಸೂಚನೆಯಾಗಿದೆ.

ನಿಂತ ಕಾಲು ಪ್ರಸಾದ: ಎಡಗಡೆ ಕಾಲಿನ ಮೇಲಿನ ಪ್ರಸಾದವಾಗಿದೆ. ಈ ಪ್ರಸಾದ ಕೊಟ್ಟರೆ ಯಾವ ಕೆಲಸವೂ ಆಗುವುದಿಲ್ಲ ಎನ್ನುವುದನ್ನು ಸಾಂಕೇತಿಸುತ್ತದೆ.

ಕೊರಳ ಪ್ರಸಾದ: ಇದು ಕುತ್ತಿಗೆ ಭಾಗದ ಪ್ರಸಾದವಾಗಿದೆ. ಈ ಪ್ರಸಾದ ಕೊಟ್ಟರೆ ಉರುಲು ಗಂಟು ಇದೆ, ಈ ಕೆಲಸಕ್ಕೆ ಹೋದರೆ ಉರುಲು ಅಥವಾ ನೇಣು ಹಾಕಿಕೊಳ್ಳುತ್ತೀರಿ ಎನ್ನುವ ಅಪಾಯದ ಸೂಚನೆಯನ್ನು ಕೊಡುತ್ತದೆ.

ಕೊಳ್ಳಿಬಾಲ: ಇದು ಬಾಲದ ತುದಿಯ ಪ್ರಸಾದವಾಗಿದೆ. ಇದು ಕೊಳ್ಳಿ ಹಚ್ಚಿಕೊಳ್ತೀರಿ ಎನ್ನುವುದನ್ನು ಸೂಚಿಸುತ್ತಿತ್ತು. ಅಂದರೆ ಈ ಕೆಲಸದಲ್ಲಿ ಮುಂದುವರಿದರೆ ಮೈಗೆ ಕೊಳ್ಳಿ ಅಥವಾ ಬೆಂಕಿ ಹಾಕಿಕೊಳ್ಳುತ್ತೀರಿ ಎನ್ನುವುದರ ಎಚ್ಚರಿಕೆಯ ಸಂಕೇತವಾಗಿತ್ತು.

ಮಾಹಿತಿ: ಬಾಲೆ ಹೊಸೂರಿನ ನಾಗಪ್ಪ ಆಸಂಗಿ

ಯಲ್ಲಮ್ಮನ ಪದಕದ ಶಕುನ

ಈ ಮೇಲೆ ನೋಡಿದ ಹನುಮಂತನ ಪ್ರಸಾದದಂತೆ ಈ ಸಮುದಾಯದವರು ತುಡುಗಿಗೆ ಹೋಗುವ ಮೊದಲು ಯಲ್ಲಮ್ಮನ ಪದಕದ ಶಕುನ ಕೇಳುವ ನಂಬಿಕೆಯೂ ಇತ್ತು. ಇದರಲ್ಲಿ ಹೆಣ್ಣುದೈವದ ಶಕ್ತಿಯ ಮೇಲೆ ಅತೀವ ನಂಬಿಕೆ ಇಟ್ಟ ಈ ಸಮುದಾಯದ ಹಿರಿಯರು ಹನುಮಂತನನ್ನು ಎಲ್ಲಮ್ಮನ ಅಣ್ಣ ಎಂತಲೂ ಭಾವಿಸುತ್ತಾರೆ. ಹೀಗಾಗಿ ಈ ಇಬ್ಬರಲ್ಲೂ ಶಕುನ ಕೇಳುವ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಯಲ್ಲಮ್ಮನ ಪದಕದ ಶಕುನ ಕೇಳುವ ಸಂಪ್ರದಾಯ ಹೀಗಿದೆ: ಜಳಕ ಮಾಡಿಕೊಂಡು, ಕೊರಳಲ್ಲಿರುವ ಯಲ್ಲಮ್ಮನ ಪದಕ ಹಾಕಿಕೊಂಡು, ಪೂಜೆ ಪುನಸ್ಕಾರ ಮಾಡಿ ತೂಗಬೇಕು. ಅದು ಯಾವ ಕಡೆಗೆ ತೋರಿಸುತ್ತದೆಯೋ ಆ ದಿಕ್ಕಿಗೆ ಕಳ್ಳತನಕ್ಕೆ ಹೋಗುತ್ತಿದ್ದರು. ಸಾಮಾನ್ಯವಾಗಿ ಪ್ರತಿ ಗಂಟಿಚೋರರ ಮನೆಯಲ್ಲಿ ಯಲ್ಲಮ್ಮನನ್ನು ದೇವಿ ಹೊತ್ತವರು ಒಬ್ಬರಿರುತ್ತಿದ್ದರು. ಈ ಶಕುನದ ಸಂದರ್ಭದಲ್ಲಿ ಹೀಗೆ ದೇವಿ ಹೊತ್ತವರೇ ಬಂದು ಯಲ್ಲಮ್ಮನ ಪೂಜೆ ಮಾಡುತ್ತಿದ್ದರು. ಪದಕ ತೂಗಿದ ನಂತರ ಪೂಜೆ ಮಾಡಿದ ಜೋಗಮ್ಮ ಯಲ್ಲಮ್ಮನ ಪದಕ ತೂಗುವಿಕೆಯನ್ನು ಬಿಡಿಸಿ ಹೇಳುತ್ತಿದ್ದರು. ಪದಕ ಇಂತಹ ದಿಕ್ಕಿಗೆ ಜಗ್ಗಿದೆ, ಈ ದಿಕ್ಕಿಗೆ ಹೋದರೆ ದೇವಿ ಕಾಯುತ್ತಾಳೆ ಎಂಬುದನ್ನು ವಿವರಿಸಿ ಹೇಳುತ್ತಿದ್ದಳು. ಇದು ಕೂಡ ತುಡುಗು ಮಾಡುವ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತಿತ್ತು.

(ಚಿತ್ರಗಳು: ಲೇಖಕರ ಸಂಗ್ರಹದಿಂದ)