ಶಿವ ಶಕ್ತಿಯ ಸಂಗಮವು ನಾನಾರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಮತ್ತು ವಿಸ್ಮಯವೆನಿಸುವ ರೀತಿಗಳಲ್ಲಿ ಅದು ಅಭಿವ್ಯಕ್ತಿ ಹೊಂದಿದೆ. ಬುಡಕಟ್ಟಿನವರ ದೇವಲೋಕವೂ ಇದಕ್ಕೆ ಹೊರತಾಗಿಲ್ಲ. ನದಿಯ ನಡುವೆ ಒಂದು ಕಲ್ಲಿದೆ. ಅಲ್ಲಿ ತ್ರಿಶೂಲದ ಹಾಗೂ ಒಂದು ಪಾದದ ಗುರುತಿದೆ. ದಂತೇಶ್ವರಿ ಮತ್ತು ಭೈರವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾಗ ದೇವಿಯು ಶಿವ ಮೋಸ ಮಾಡಿದ ಎಂದು ಕೋಪದಿಂದ ಅವನ ಮೇಲೆ ಎಸೆದ ತ್ರಿಶೂಲ ಅಲ್ಲಿ ಸಿಕ್ಕಿಕೊಂಡಿದೆ ಎನ್ನುವುದು ನಂಬಿಕೆ. ಅದಕ್ಕೇ ತಪ್ಪಿಸಿಕೊಂಡು ಹೋದ ಭೈರವನ ದೇವಾಲಯ ನದಿಯ ಆಚೆ ದಡದಲ್ಲಿದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

ರಾಮಾಯಣದಲ್ಲಿ ರಾಮ ವನವಾಸಕ್ಕೆ ಹೊರಟಾಗ ಉತ್ತರಕ್ಕೆ ಹೋಗದೆ ದಕ್ಷಿಣಕ್ಕೆ ಹೋದ. ಅವನು ದಂಡಕಾರಣ್ಯದಲ್ಲಿ ಅಂದರೆ ಇಂದಿನ ಛತ್ತೀಸಗಢದ ಬಸ್ತರ್‌ ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ವಾಸಿಸಿದ್ದ, ಸೀತಾಪಹರಣದ ನಂತರ ಅಲ್ಲೇ ಅನೇಕ ರಾಕ್ಷಸರನ್ನು ಕೊಂದು ಹಾಕಿದ. ಅವನ ಅಜ್ಜಿ ಅಂದರೆ ಕೌಸಲ್ಯೆಯ ತಾಯಿಯ ಊರು ಕೋಸಲ ದೇಶ. ಇದೂ ಕೂಡ ದಂಡಕಾರಣ್ಯದ ಭಾಗವೇ. ರಾಮನನ್ನು ದಶರಥ ಕಾಡಿಗಟ್ಟಿದಾಗ ಅವನಿಗೆ ಅಜ್ಜಿಯ ಮನೆಯ ಕಡೆಯ ಕಾಡು ಸೆಳೆಯಿತೇನೋ! ಅದಕ್ಕೇ ಆ ದಿಕ್ಕಿಗೆ ಹೋದನೇನೋ!!

ಹಾಗೆ ಅವನು ಕನಿಷ್ಠ ೭-೮ ವರ್ಷಗಳು ದಂಡಕಾರಣ್ಯದಲ್ಲಿ ಸುತ್ತಿದ್ದರೂ ರಾಮನ ದೇವಾಲಯಗಳನ್ನು ನಾನು ಇಲ್ಲಿ ನೋಡಲೇ ಇಲ್ಲ. ರಾಮಾಯಣ ಮಹಾಭಾರತಗಳು ಎಷ್ಟರ ಮಟ್ಟಿಗೆ ಭಾರತದ ಉದ್ದಗಲಕ್ಕೂ ಹಾಸುಹೊಕ್ಕಾಗಿವೆ ಅಂದರೆ ಎಲ್ಲೇ ಹೋದರೂ ರಾಮ ಅಲ್ಲಿಗೆ ಹೋಗಿದ್ದ ಅನ್ನುವುದರ ಅನೇಕ ಸ್ಥಳಪುರಾಣಗಳು ಲೋಕನಂಬಿಕೆಗಳಾಗಿ ಜನಮನದಲ್ಲಿ ನಲಿದಾಡುತ್ತಿವೆ. ಅಂತಹದರಲ್ಲಿ ರಾಮ ಓಡಿಯಾಡಿದ ಜಾಗದಲ್ಲಿ ಯಾಕೆ ರಾಮನ ಮೇಲೆ ಹೆಚ್ಚು ಕಥೆಗಳಿಲ್ಲ, ಯಾಕೆ ಅವನ ದೇವಾಲಯಗಳಿಲ್ಲ ಅಂತ ಯೋಚಿಸುತ್ತಿದ್ದೆ.

ಅಸುರರು ಅಂದರೆ ಯಾರು? ಅವರೂ ಒಂದು ಬುಡಕಟ್ಟಿನವರು. ಈಗಲೂ ಜಾರ್ಖಂಡ್‌ ಕಡೆ ಅಸುರ ಅನ್ನುವ ಸರ್ ನೇಮ್‌ ಇರುತ್ತೆ. ರಾಮ ಅವರ ಸಮುದಾಯದವರ ೧೬೦೦೦ ರಾಕ್ಷಸರನ್ನು ಖರ ದೂಷಣರನ್ನೂ ದಂಡಕಾರಣ್ಯದಲ್ಲಿದ್ದಾಗ ಸಂಹಾರ ಮಾಡಿದ. ಅಂದ ಮೇಲೆ ಅವರು ಅವನನ್ನು ಅವರ ಬಂಧುಗಳನ್ನು ಕೊಂದವನನ್ನು ಹೇಗೆ ಪ್ರೀತಿಸಲು ಸಾಧ್ಯ ಅಂತ ಪ್ರಶ್ನಿಸಿದವ ಇಂದಿನ ಬುಡಕಟ್ಟು ಸಮುದಾಯದವರ ಏಳಿಗೆಗೆ ಬಸ್ತರ್‌ನ ಟೂರಿಸಂ ಗೆ ಕೆಲಸ ಮಾಡುತ್ತಿರುವ ತೇಜಸಿಂಗ್. ಬೇಕೆಂತಲೇ ಜನ ರಾಮನ ನೆನಪುಗಳನ್ನು ತಮ್ಮ ಮನಸ್ಸಿನಾಳದಿಂದ ತೆಗೆದು ಹಾಕಿದ್ದಾರೆ. ಅಲ್ಲಿ ಪುರಾತನವಾದ ೪ -೫ ನೇ ಶತಮಾನಕ್ಕೆ ಸೇರಿದ ಶಿವನ ದೇವಾಲಯಗಳು ಉತ್ಖನನದಲ್ಲಿ ಸಿಕ್ಕಿವೆ. ಆದರೆ ರಾಮನ ಪುರಾತನ ದೇವಾಲಯಗಳು ನಾನು ಕಂಡಂತೆ ಸಿಗಲಿಲ್ಲ. ಇತ್ತೀಚೆಗೆ ಛತ್ತೀಸಗಢ ಸರಕಾರ ರಾಮ ವನ ಗಮನ ಪಥ ಎನ್ನುವ ಯೋಜನೆಯಲ್ಲಿ ಎಲ್ಲೆಲ್ಲಿ ರಾಮ ಹೋಗಿದ್ದನೋ ಆ ಹಾದಿಯನ್ನು ಗುರುತಿಸಿ ಅದನ್ನು ಅಭಿವೃದ್ಧಿ ಮಾಡಿ ಪ್ರವಾಸೋದ್ಯಮಕ್ಕೆ ಜೋಡಿಸುತ್ತಿದ್ದಾರೆ. ಸಂಪಾತಿ ರಾವಣನೊಂದಿಗೆ ಯುದ್ಧ ಮಾಡಿದ್ದನೆನ್ನಲಾದ ಒಂದು ಬಂಡೆಯನ್ನು ‘ಕೇಶಕಾಲʼ ಎನ್ನುವ ಊರಿನ ಬಳಿ ನೋಡಿದೆ. ಕೇರಳದಲ್ಲೂ ಅಂತಹ ಒಂದು ಜಾಗವನ್ನು ಗುರುತಿಸುತ್ತಾರೆ. ಆದರೆ ಬಸ್ತರ್‌ನಲ್ಲಿ ಗೀದಮ್‌ ಎನ್ನುವ ಒಂದು ಊರು ಅಂದಿನ ಜಟಾಯುವಿನ ಊರು ಎನ್ನುತ್ತಾರೆ. ರಾಮ ಭೇಟಿ ಮಾಡಿದ ಋಷಿಮುನಿಗಳ ಜಾಗಗಳನ್ನೂ ಕೂಡ ರಾಮ ವನ ಗಮನ ಪ್ರಾಜೆಕ್ಟ್‌ನಲ್ಲಿ ಗುರುತಿಸಿದ್ದಾರೆ.

ಹಾಗಾದರೆ ಅವರು ಯಾವ ದೇವರನ್ನು ಪೂಜಿಸುತ್ತಾರೆ? ಇವತ್ತು ಅವರು ದೇವಿಯ ಉತ್ಸವವಾಗಿ ಆಚರಿಸುವ ೭೫ ದಿನಗಳ ದಸರಾದ ಬಹುಮುಖ್ಯ ಭಾಗ ಅವರ ಮಾವಲೀ ಮಾತಾ ಮತ್ತು ದಂತೇಶ್ವರಿ ದೇವಿ. ಮೂಲ ಬಸ್ತರಿನ ದೇವಿ ಮಾವಲೀ ಮಾತಾ. ೧೪ ನೇ ಶತಮಾನದಲ್ಲಿ ವಾರಂಗಲ್ಲಿನ ಕಾಕತೀಯ ರಾಜ ಅನ್ನಮದೇವ ಬಸ್ತರಿಗೆ ದಂಡೆತ್ತಿ ಬಂದು ಅಲ್ಲಿನ ನಾಗವಂಶೀಯ ರಾಜರನ್ನು ಸೋಲಿಸಿ ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತಾನೆ. ಹಾಗೆ ಬರುವಾಗ ಆತನ ಆರಾಧ್ಯ ದೈವ ದಂತೇಶ್ವರಿಯನ್ನು ಕೂಡ ತನ್ನೊಂದಿಗೆ ತರುತ್ತಾನೆ. ಈಗ ಅವಳು ಮತ್ತು ಮಾವಲೀ ಮಾತಾ ಅಕ್ಕ ತಂಗಿಯರಾಗಿ ಬಸ್ತರಿನ ಜನಮನದ ದೇವಿಯರಾಗಿ ವಿರಾಜಮಾನರಾಗಿದ್ದಾರೆ. ದಂತೇವಾಡದಲ್ಲಿರುವ ದಂತೇಶ್ವರಿ ದೇವಾಲಯ ಒಂದು ಶಕ್ತಿಕ್ಷೇತ್ರವೂ ಹೌದು. ೫೨ ಶಕ್ತಿಪೀಠಗಳಲ್ಲಿ ಒಂದು. ದೇವಿಯ ದೇಹದ ದಂತ ಬಿದ್ದ ಜಾಗ ದಂತೇವಾಡ ಅನ್ನುತ್ತದೆ ಒಂದು ಕಥೆ. ನಾನು ಹೋದಾಗ ಅಲ್ಲಿ ನವರಾತ್ರಿಯ ದಿನಗಳು. ಹಾಗಾಗಿ ಜನ ಕಿಕ್ಕಿರಿದು ಸೇರಿದ್ದರು. ದೇವಿಯರ ದರ್ಶನಕ್ಕೆ ಉದ್ದದ ಸಾಲು. ನಾನು ವಿಶೇಷ ಪೂಜೆಯ ಟಿಕೇಟು ಪಡೆದು ಒಳ ಹೋದೆ. ಪ್ಯಾಂಟ್‌ ಹಾಕಿದ್ದವರನ್ನು ಸೇರಿಸುವುದಿಲ್ಲ. ಪ್ಯಾಂಟ್‌ ಹಾಕಿದ್ದವರೆಲ್ಲರೂ ಅಲ್ಲಿ ಕೊಡುವ ಪಂಚೆಯನ್ನು ಧರಿಸಿಯೇ ಒಳಹೋಗಬೇಕು. ದೇವಿಗೆ ಆರು ಕೈಗಳು. ಕಪ್ಪು ಶಿಲೆಯಿಂದ ಮಾಡಿದ ದೇವಿಯು ಅಲಂಕೃತಳಾಗಿದ್ದಳು. ತುಂಬಾ ಜನ ಇದ್ದದ್ದರಿಂದ ಹೆಚ್ಚು ಹೊತ್ತು ಅಲ್ಲಿರಲಾಗಲಿಲ್ಲ. ಸುತ್ತ ಮುತ್ತ ೧೦೦ ಕಿ. ಮೀ. ದೂರದಿಂದ ಜನ ಬರಿಗಾಲಲ್ಲಿ ನಡೆದು ಬರುತ್ತಾರೆ. ನವರಾತ್ರಿಯ ದಿನಗಳಲ್ಲಿ ಭಕ್ತಿ ಇರುವ ಎಲ್ಲಾ ಬುಡಕಟ್ಟಿನವರ ಕುಟುಂಬ ಕಲಾಪ ಜತೆಯಾಗಿ ಹೋಗಿ ದಂತೇಶ್ವರಿಯ ದರ್ಶನ ಪಡೆಯುವುದು. ದಂತೇಶ್ವರಿ ದೇವಾಲಯ ಶಾಂಕಿನಿ ಮತ್ತು ಡಂಕಿನಿ ನದಿಯ ಸಂಗಮದ ದಡದಲ್ಲಿದೆ. ನದಿಯ ಒಂದು ಬದಿ ದಂತೇಶ್ವರಿ ದೇವಾಲಯ ಇದ್ದರೆ ನದಿಯ ಆಚೆ ದಡದಲ್ಲಿ ಭೈರವನ ದೇವಾಲಯ ಇದೆ.

ರಾಮಾಯಣ ಮಹಾಭಾರತಗಳು ಎಷ್ಟರ ಮಟ್ಟಿಗೆ ಭಾರತದ ಉದ್ದಗಲಕ್ಕೂ ಹಾಸುಹೊಕ್ಕಾಗಿವೆ ಅಂದರೆ ಎಲ್ಲೇ ಹೋದರೂ ರಾಮ ಅಲ್ಲಿಗೆ ಹೋಗಿದ್ದ ಅನ್ನುವುದರ ಅನೇಕ ಸ್ಥಳಪುರಾಣಗಳು ಲೋಕನಂಬಿಕೆಗಳಾಗಿ ಜನಮನದಲ್ಲಿ ನಲಿದಾಡುತ್ತಿವೆ. ಅಂತಹದರಲ್ಲಿ ರಾಮ ಓಡಿಯಾಡಿದ ಜಾಗದಲ್ಲಿ ಯಾಕೆ ರಾಮನ ಮೇಲೆ ಹೆಚ್ಚು ಕಥೆಗಳಿಲ್ಲ, ಯಾಕೆ ಅವನ ದೇವಾಲಯಗಳಿಲ್ಲ ಅಂತ ಯೋಚಿಸುತ್ತಿದ್ದೆ.

ಶಿವ ಶಕ್ತಿಯ ಸಂಗಮವು ನಾನಾರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಮತ್ತು ವಿಸ್ಮಯವೆನಿಸುವ ರೀತಿಗಳಲ್ಲಿ ಅದು ಅಭಿವ್ಯಕ್ತಿ ಹೊಂದಿದೆ. ಬುಡಕಟ್ಟಿನವರ ದೇವಲೋಕವೂ ಇದಕ್ಕೆ ಹೊರತಾಗಿಲ್ಲ. ನದಿಯ ನಡುವೆ ಒಂದು ಕಲ್ಲಿದೆ. ಅಲ್ಲಿ ತ್ರಿಶೂಲದ ಹಾಗೂ ಒಂದು ಪಾದದ ಗುರುತಿದೆ. ದಂತೇಶ್ವರಿ ಮತ್ತು ಭೈರವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾಗ ದೇವಿಯು ಶಿವ ಮೋಸ ಮಾಡಿದ ಎಂದು ಕೋಪದಿಂದ ಅವನ ಮೇಲೆ ಎಸೆದ ತ್ರಿಶೂಲ ಅಲ್ಲಿ ಸಿಕ್ಕಿಕೊಂಡಿದೆ ಎನ್ನುವುದು ನಂಬಿಕೆ. ಅದಕ್ಕೇ ತಪ್ಪಿಸಿಕೊಂಡು ಹೋದ ಭೈರವನ ದೇವಾಲಯ ನದಿಯ ಆಚೆ ದಡದಲ್ಲಿದೆ.

ವಾರಂಗಲ್‌ನಿಂದ ಬಸ್ತರಿಗೆ ಬಂದ ಅನ್ನಮದೇವನ ಜೊತೆಯಲ್ಲಿ ದಂತೇಶ್ವರಿ ದೇವಿಯೂ ಬರುತ್ತಾಳೆ. ಅವಳು ರಾಜನಿಗೆ ನಿನ್ನ ಹಿಂದೆಯೇ ನಾನು ಬರುತ್ತೀನಿ. ಎಲ್ಲಿಯ ತನಕ ಕರೆದುಕೊಂಡು ಹೋಗುತ್ತೀಯೋ ಅಲ್ಲಿಯ ತನಕ ನಿನ್ನ ಸಾಮ್ರಾಜ್ಯ ವಿಸ್ತರಿಸುತ್ತೀಯಾ. ಆದರೆ ಒಂದು ಷರತ್ತು. ನೀನು ಹಿಂತಿರುಗಿ ನೋಡಬಾರದು. ಹಾಗೇನಾದರೂ ಆದರೆ ನಾನು ಅಲ್ಲಿಯೇ ನಿಲ್ಲುತ್ತೀನಿ. ಹಲವಾರು ದಿನಗಳು, ತಿಂಗಳುಗಳು ರಾಜ ಹಾಗೆಯೇ ನಡೆಯುತ್ತಾನೆ. ಆದರೆ ಶಾಂಕಿನಿ ಡಂಕಿನಿ ನದಿಯ ಬಳಿ ಬಂದಾಗ ನದಿಯ ಕೆಸರಿನಲ್ಲಿ ದೇವಿಯ ಕಾಲು ಹೂತು ಹೋಗಿ ಅವಳ ಗೆಜ್ಜೆಯ ಸದ್ದು ಕೇಳುವುದಿಲ್ಲ. ಅವನು ತಿರುಗಿ ನೋಡುತ್ತಾನೆ. ಅಲ್ಲಿಗೆ ಅವಳ ಷರತ್ತು ಮುರಿದಿದ್ದರಿಂದ ಅವಳು ಮುಂದೆ ಹೋಗುವುದಿಲ್ಲ. ಅಲ್ಲಿಯೇ ನೆಲೆಸುತ್ತಾಳೆ. ಅವಳೊಂದಿಗೆ ಬಂದ ಅವಳ ಭಕ್ತರೇ ಇಂದಿನ ಜೋಗಿ ಬುಡಕಟ್ಟು ಜನರು.

ಮಾವಲೀ ದೇವಿಯ ನಾಗವಂಶೀಯರ ಕಾಲದಿಂದಲೂ ಇದ್ದ ದೇವಿ. ಹಾಗಾಗಿ ನವರಾತ್ರಿಯ ಒಂದು ದಿನ ಮಾವಲೀ ಪರಗಾವ್‌ ಅವಳಿಗೆಂದೇ ಮೀಸಲಿಟ್ಟ ದಿನ.

ಇದು ಬಸ್ತರ್‌ ಬುಡಕಟ್ಟು ಜನರ ದೇವಿಯಲೋಕವಾದರೆ ಅವರ ದಿನನಿತ್ಯ ಜೀವನದ ದೇವದೇವಿಯರದ್ದೇ ಒಂದು ಲೋಕವಿದೆ. ಅವರೆಲ್ಲಾ ಊರು ಕಾಯುವ ದೈವಗಳು. ಪ್ರಕೃತಿಯ ಜೊತೆ ಬದುಕುವ ಅವರಿಗೆ ನೆಲ, ಮರ, ಬೆಂಕಿ, ಗಾಳಿ, ನೀರು, ಎಲೆ, ಹೂವು ಎಲ್ಲವೂ ಅವರ ಪೂಜೆಗೆ ಒಳಗಾಗುವ ದೈವಗಳು. ನಮ್ಮ ಊರಲ್ಲಿ ಕರೆಯೋ ಹಾಗೆ ಅವರೂ ಕೂಡ ಅಂತಹ ಜಾಗಗಳಿಗೆ ಗುಡಿ ಎನ್ನತ್ತಾರೆ. ಬಹುತೇಕ ಗುಡಿಗಳಿಗೆ ಹೆಂಗಸರಿಗೆ ಪ್ರವೇಶವಿಲ್ಲ. ನನ್ನ ಆಸಕ್ತಿಯನ್ನು ಕಂಡು ಒಬ್ಬರು ತೀರ್ಥಮ್‌ನ ಒಂದು ಗುಡಿಗೆ ಕರೆದೊಯ್ದರು. ಅಲ್ಲಿ ಹೆಂಗಸರಿಗೆ ಪ್ರವೇಶದ ನಿರ್ಬಂಧ ಇರಲಿಲ್ಲ. ಗುಡಿಯ ಅಂಗಳದಲ್ಲಿ ಮರದಲ್ಲಿ ಮಾಡಿದ ಒಂದು ಜೋಕಾಲಿ ಇತ್ತು. ಅದರ ಹಲಗೆಯ ಮೇಲೆ ಕಬ್ಬಿಣದ ಮುಳ್ಳುಗಳನ್ನು ಮೊಳೆ ಹೊಡೆದಿದ್ದರು. ಹಬ್ಬಹರಿದಿನಗಳಲ್ಲಿ ಮೈಮೇಲೆ ದೇವರು ಬಂದಾಗ ಅಲ್ಲಿನ ಪೂಜಾರಿ ಅದರ ಮೇಲೆ ಕೂರುತ್ತಾರಂತೆ. ಇಷ್ಟು ಚೂಪಾಗಿರುವ ಮುಳ್ಳುಗಳ ಮೇಲೆ ಅವರು ಹೇಗೆ ಕೂರುವರು? ಅವರಿಗೆ ನೋವಾಗುವುದಿಲ್ಲವಾ ಅಂತ ನಾನು ಯೋಚಿಸಿದೆ. ಮತ್ತೊಂದು ಕಡೆ ಮರದ ಎರಡು ಸಣ್ಣ ಕಂಬಗಳನ್ನು ನಿಲ್ಲಿಸಿದ್ದರು. ಅದು ಕೂಡ ಅವರ ದೈವ. ಗುಡಿಯ ಒಳಗೆ ಎರಡು ಮೂರ್ತಿಗಳಿದ್ದವು. ಅವು ಏನು ಎಂಬುದು ತಿಳಿಯಲಿಲ್ಲ. ಅಲ್ಲಿನ ಪೂಜಾರಿಯ ಪ್ರಕಾರ ಅದು ಜಲದೇವತೆ. ಅದರ ಪಕ್ಕ ೩-೪ ಮರದ ಕೋಲುಗಳನ್ನು ಕಟ್ಟಿ, ಕೆಂಪು ಬಟ್ಟೆ, ನವಿಲುಗರಿಗಳಿಂದ ಅಲಂಕರಿಸಿದ್ದರು.

ಅದು ಆಂಗಾ ದೇವ ಅಂತ ಕರೆಯುವ ಅವರ ದೈವ. ಎಲ್ಲಿ ಏನೇ ಉತ್ಸವಗಳಾಗಲೀ ಈ ಆಂಗಾ ದೇವನನ್ನು ಹೊತ್ತು ಹೋಗುತ್ತಾರೆ. ಅವರ ಮೈಮೇಲೆ ಆವಾಹಿಸಿಕೊಂಡ ಆಂಗಾ ದೇವನನ್ನು ಯಾರೂ ತಡೆಯಲಾಗುವುದಿಲ್ಲ. ಹೊತ್ತವರು ಭಾವಾತೀತ ಸ್ಥಿತಿಯಲ್ಲಿರುವುದನ್ನು ನವರಾತ್ರಿಯ ಸಂದರ್ಭದಲ್ಲಿ ನೋಡಿದ್ದೇನೆ. ಹೀಗೆ ಹಲವಾರು ಗುಡಿಗಳಿಂದ ಅನೇಕ ಆಂಗಾ ದೇವರುಗಳು ಜಗದಲಪುರದ ನವರಾತ್ರಿ ಉತ್ಸವಕ್ಕೆ ಆಗಮಿಸುತ್ತಾರೆ. ನಾನು ಅಲ್ಲಿರುವಾಗಲೇ ಅಲ್ಲಿರುವ ಒಬ್ಬರ ಮೈಮೇಲೆ ದೇವರು ಬಂದಿತ್ತು. ಆತನನ್ನು ಒಬ್ಬರು ಪ್ರಶ್ನೆ ಕೇಳುತ್ತಿದ್ದರು. ದೇವರು ಉತ್ತರಿಸುತ್ತಿತ್ತು. ನನಗೆ ಅರ್ಥ ಆಗದಿದ್ರೂ ಅಮೇಲೆ ತಿಳಿದಿದ್ದು ಆ ದೈವ ಕೇಳಿದವರಿಗೆ ಸಮಾಧಾನ ಮಾಡುತ್ತಿತ್ತು. ನೀನೇನೂ ಯೋಚನೆ ಮಾಡಬೇಡ. ಯಾವ ದೈವ ನಿಲ್ಲದಿದ್ದರೂ ನಾನು ನಿನ್ನ ಜೊತೆ ನಿಲ್ಲುತ್ತೀನಿ ಅಂತ ಭರವಸೆ ಕೊಟ್ಟಿತಂತೆ. ಆಮೇಲೆ ಮೈ ಎಲ್ಲಾ ಅದುರಿ, ನಾನಾ ರೀತಿಯ ಸದ್ದುಗಳನ್ನು ಮಾಡುತ್ತಾ ದೈವ ದೇಹದಿಂದ ಬೇರೆಯಾಯಿತು. ಆ ವ್ಯಕ್ತಿ ಮತ್ತೆ ಸಾಮಾನ್ಯ ವ್ಯಕ್ತಿಯಾದರು.

ಒಂದೊಂದು ಗುಡಿಯಲ್ಲಿ ಒಂದೊಂದು ಪ್ರಕೃತಿಗೆ ಸಂಬಂಧಪಟ್ಟ ದೈವಗಳು. ಇವರೆಲ್ಲರ ಸಮಾವೇಶ ವರ್ಷಕ್ಕೊಂದು ಬಾರಿ ಕೇಶಕಾಲದಲ್ಲಿ ಆಗುತ್ತದೆ. ಆ ಊರಿನ ಭಂಗಾರಮ್‌ ಮಂದಿರದಲ್ಲಿ ಇವರ ನ್ಯಾಯ ಪಂಚಾಯತಿ ನಡೆಯುತ್ತದೆ. ಯಾವುದಾದರೂ ದೈವಗಳು ತಮ್ಮ ಜನರನ್ನು ಪೊರೆಯುವ ಕೆಲಸಗಳನ್ನು ಸರಿಯಾಗಿ ನಿರ್ವಹಿಸಿಲ್ಲದಿದ್ದರೆ ಅವರಿಗೆ ಅಲ್ಲಿ ಭಂಗಾರಮ್‌ ದೇವಿಯ ನ್ಯಾಯಾಲಯದಲ್ಲಿ ತಪ್ಪಿಗೆ ತಕ್ಕ ಶಿಕ್ಷೆ ವಿಧಿಸುತ್ತಾರೆ. ಕೆಲವೊಮ್ಮೆ ಆ ದೇವರು ಪೂಜೆಯನ್ನು ಮಾಡದಿರುವಂತೆ ಆ ದೈವವನ್ನು ತ್ಯಜಿಸುವ ಶಿಕ್ಷೆ ಕೂಡ ಇರುತ್ತದೆ.

ನಾಡಿನವರಿಗೆ ಅವರ ದೇವರು, ಕಾಡಿನವರಿಗೆ ಅವರ ದೇವರು ಇದ್ದೇ ಇರುತ್ತಾರೆ. ಅವರರವರ ಆಚರಣೆ ನಂಬಿಕೆ ಅವರಿಗೆ ಮುಖ್ಯ. ಬಸ್ತರಿನ ವಿಶೇಷವೆಂದರೆ ಹೊರಗಿನಿಂದ ಬಂದ ದಂತೇಶ್ವರಿಯು ಸ್ಥಳೀಯವಾಗಿದ್ದ ಮಾವಲೀ ಮಾತಾ ಈ ಎರಡೂ ದೇವಿಯರೂ ಏಕಕಾಲದಲ್ಲಿ ಪೂಜೆಗೆ ಒಳಗಾಗುವುದು. ಜನರ ಪ್ರೀತಿಗೆ, ಭಕ್ತಿಗೆ ಪಾತ್ರರಾಗುವುದು. ಜನರ ಸಹಬಾಳ್ವೆ ಲೌಕಿಕ ಆದರ್ಶವಾದರೆ, ದೇವತೆಗಳ ಸಹಬಾಳ್ವೆ ಆಚರಣಾ ಲೋಕದ ಆದರ್ಶ. ಅದರ ಪ್ರತಿರೂಪಗಳು ಈಗಲೂ ಬಸ್ತರಿನ ಕಾಂತಾರದಲ್ಲಿ ಅಡಗಿದ್ದು ಹೀಗೆ ಆಗಾಗ ಹೊರಗಿನವರ ಕಣ್ಣಿಗೆ ಬೀಳುತ್ತವೆ. ವಸ್ತು ಇರುತ್ತದೆ. ಇರುವುದನ್ನು ನೋಡಲು ಅದೃಷ್ಟ ಬೇಕಷ್ಟೆ.