ಈ ದೇವಾಲಯದ ವಿಶೇಷ ಅಂದರೆ ಇಡೀ ದೇವಾಲಯನ್ನು ರಥದ ಮಾದರಿಯಲ್ಲಿ ಕಟ್ಟಿರುವುದು. ನಮಗೆ ರಥ ಅಂದ ಕೂಡಲೇ ನೆನಪಾಗುವುದು ಹಂಪಿಯ ವಿಜಯ ವಿಠ್ಠಲ ದೇವಾಲಯದ ರಥ, ಆಮೇಲೆ ಕೋನಾರ್ಕಿನ ಸೂರ್ಯ ದೇವಾಲಯದ ಚಕ್ರಗಳು. ಆದರೆ ಅದೇ ರೀತಿ ಇರುವ ರಥದ ಕಲ್ಪನೆಯಲ್ಲಿ ಕಟ್ಟಿರುವ ಇನ್ನೂ ಹಲವು ದೇವಾಲಯಗಳಿವೆ. ಹೆಚ್ಚು ಪ್ರಚಲಿತವಾಗಿಲ್ಲ ಅಷ್ಟೇ. ತಾಡಿಪತ್ರಿಯ ರಥದ ಮಾದರಿಯಲ್ಲಿರುವ ಗರುಡಗಂಬ, ಕುಂಭಕೋಣಂನ ಸಾರಂಗಪಾಣಿ ದೇವಾಲಯ ಹಾಗೂ ದಾರಾಸುರಮ್‌ನ ದೇವಾಲಯ ತಕ್ಷಣಕ್ಕೆ ನೆನಪಿಗೆ ಬರುವ ನಾನು ಕಂಡ ರಥದ ದೇವಾಲಯಗಳು. ಕೋನಾರ್ಕಿನ ದೇವಾಲಯಕ್ಕೆ ದಾರಾಸುರಮ್ಮಿನ ಈ ದೇವಾಲಯವೇ ಸ್ಫೂರ್ತಿ ಎನ್ನುತ್ತಾರೆ. ಇರಬಹುದೇನೋ.
‘ದೇವಸನ್ನಿಧಿ’ ಅಂಕಣದಲ್ಲಿ ದಾರಾಸುರಂನ ಶಿಲ್ಪಕಲೆಯ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

ಹಿಂದಿನ ದಿನ ತಾನೆ ಮಳೆ ಆಗಿದ್ದರಿಂದ ತಮಿಳುನಾಡಿನ ಬಿಸಿಲಿನ ಝಳ, ತಾಪ ಇರಲಿಲ್ಲ. ಆದರೂ ಆದಷ್ಟೂ ಬೇಗ ಹೋದರೆ ಜನ ಕಡಿಮೆ ಇರುತ್ತಾರೆ. ಬೇಕಾದಷ್ಟು ಹೊತ್ತು ಶಿಲ್ಪಗಳನ್ನು ಅಭ್ಯಸಿಸಬಹುದು ಅಂತ ೯ ರ ಸುಮಾರಿಗೆ ಹೋದರೂ ಒಳಗೆ ಬಿಡಲಿಲ್ಲ. ಸ್ವಲ್ಪ ಕಾಯಿಸಿ ೧೦ ರ ಸುಮಾರಿಗೆ ಒಳಗೆ ಬಿಟ್ಟರೂ ಹೆಚ್ಚು ಜನರೇನೂ ಇರಲಿಲ್ಲ. ಸರಿ ಒಳ ಹೋಗೋಣ ಅಂತ ಹೋದರೆ ದೇವಾಲಯದ ಮುಂದಿನ ನಂದಿ ಮಂಟಪ ನೀರಿನ ಮಧ್ಯದಲ್ಲಿತ್ತು. ಅಲ್ಲೊಬ್ಬರು, ನೀರಿನ ಒಳಗೆ ನಡೆದುಕೊಂಡೇ ಹೋಗಬೇಕು ಅಂದರು. ಮಂಡಿ ಮಟ್ಟದ ನೀರಿನಲ್ಲಿ ಹೆಜ್ಜೆ ಹಾಕುತ್ತಾ ದೇವಾಲಯದ ರಾಜಗೋಪುರದ ಕೆಳಗೆ ನಡೆದು ಒಳ ಹೋದರೆ ಇಡೀ ದೇವಾಲಯ ಸಂಕೀರ್ಣ ನೀರಿನ ನಡುವೆ ನಿಂತಿತ್ತು. ನೀರಿದೆ ಅಂತ ಗೊಣಗಾಡಲೋ ಅಥವಾ ನೀರಿನ ನಡುವೆ ಇರೋದರಿಂದ ಒಂಥರಾ ರಮ್ಯವಾಗಿ ಕಾಣುತ್ತಿದೆಯಲ್ಲಾ ಅಂತ ಖುಷಿ ಪಡಲೋ ಗೊತ್ತಾಗಲಿಲ್ಲ. ಇನ್ನು ಹೀಗೆ ಮೇಲೆ ನೋಡಿಕೊಂಡು ನಿಂತಿದ್ದರೆ ಕೆಳಗಿನ ಪಾಚಿಗೆ ಜಾರಬೇಕಾಗುತ್ತೆ ಅಂತ ಎಚ್ಚರಿಕೆಯಿಂದ ಹೆಜ್ಜೆ ಹಾಕಿದೆ.

ಅದು ದಾರಾಸುರಮ್‌. ಅಪರೂಪದ ವಾಸ್ತುಶಿಲ್ಪಗಳನ್ನು ಕೊಡುಗೆಯಾಗಿ ಕೊಟ್ಟ, ಚೋಳರ ಕಲಾಪ್ರಜ್ಞೆ ಅವರ ಕಲಾಭಿರುಚಿ, ಬೃಹತ್‌ ದೇವಾಲಯಗಳನ್ನು ನಿರ್ಮಿಸುವ ಅವರ ಶ್ರದ್ಧೆ, ಶೈವಭಕ್ತಿ ಅನನ್ಯವಾದುದು. ಭಾರತದ ಇತಿಹಾಸದಲ್ಲಿ ಬಹುಕಾಲ ಆಳಿದ ರಾಜವಂಶ ಚೋಳರದು. ಗಂಗಾನದಿಯಿಂದ ಕೆಳಗೆ ದಕ್ಷಿಣದ ತನಕ ಹಾಗೂ ಭಾರತದಾಚೆ ತಮ್ಮ ಸಾಮ್ರಾಜ್ಯ ವಿಸ್ತರಿಸಿದ ಖ್ಯಾತಿ ಅವರದು. ಇವತ್ತಿಗೂ ಅವರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳನ್ನು ದರ್ಶಿಸುವುದು ಕಲಾಪ್ರಿಯರ ಪಾಲಿಗೆ ಹಬ್ಬವೇ. ಅವರ ಕಾಲದ ಮೂರು ದೇವಾಲಯಗಳನ್ನು ಯುನೆಸ್ಕೋ ಚೋಳರ ಜೀವಂತ ದೇಗುಲಗಳು ಅಂತ ಗುರುತಿಸಿದೆ. ಮೊದಲನೆಯದು ತಂಜಾವೂರಿನ ಬೃಹದೇಶ್ವರ ದೇವಾಲಯ. ಇದನ್ನು ರಾಜರಾಜ ಚೋಳ ೧ ಕಟ್ಟಿಸಿದ್ದು. ನೀವು ಸಿನೆಮಾ ನೋಡುವವರಾಗಿದ್ದರೆ, ಇತ್ತೀಚೆಗೆ ಬಂದ ಪೊನ್ನಿಯನ್‌ ಸೆಲ್ವಂ ನೋಡಿರಬಹುದು. ಅದರ ನಾಯಕ ಅರಳ್ಮೋಳಿ ವರ್ಮನ್‌ ನನೇ ರಾಜರಾಜ ಚೋಳ ಎಂದು ಪ್ರಖ್ಯಾತನಾದ ಚೋಳರ ಬಹುಮುಖ್ಯನಾದ ರಾಜ.

ವಾಸ್ತುಶಿಲ್ಪದ ದೃಷ್ಟಿಯಿಂದ ಇದೊಂದು ವಿಸ್ಮಯ. ಅಧ್ಯಾತ್ಮಿಕತೆಯ ದೃಷಿಯಿಂದ ನೋಡಿದರೆ ಅದು ದಕ್ಷಿಣ ಮೇರು. ಎರಡನೆಯದು ಗಂಗೈಕೊಂಡ ಚೋಳಪುರಮ್. ಇದನ್ನು ರಾಜರಾಜನ ಮಗ ರಾಜೇಂದ್ರ ಚೋಳ ಕಟ್ಟಿಸಿದ್ದು. ಇವೆರಡೂ ಗಾತ್ರದಲ್ಲಿ ಬೃಹತ್‌. ಅವನ್ನು ನೋಡಲು ಒಂದು ಸುತ್ತು ಬಂದರೇ ನಿಮ್ಮ ಅವತ್ತಿನ ವಾಕಿಂಗ್‌ ಗುರಿ ಮುಟ್ಟಿದಂತೆ. ಕನಿಷ್ಟ ೮೦೦೦ ಹೆಜ್ಜೆಗಳು ಗ್ಯಾರಂಟಿ. ಇನ್ನು ಮೂರನೆಯದೇ ದಾರಾಸುರಮ್.

ದಾರಾಸುರಮ್‌ ತಮಿಳುನಾಡಿನ ದೇವಾಲಯಗಳ ಪಟ್ಟಣವಾದ ಕುಂಭಕೋಣಂನಿಂದ ೩ ಕಿ. ಮೀ ದೂರದಲ್ಲಿದೆ. ಕುಂಭಕೋಣಂನಲ್ಲಿ ನಾವು ಉಳಿದಿದ್ದ ಹೋಟೆಲ್‌ನಿಂದ ಹೊರಟು ಇನ್ನೂ ಕಾರಿನಲ್ಲಿ ಸರಿಯಾಗಿ ಕೂರುವುದರೊಳಗೆ ದಾರಾಸುರಮ್‌ನ ದೇವಾಲಯದ ಮುಂದಿದ್ದೆವು. ಇದನ್ನು೧೨ ನೇ ಶತಮಾನದಲ್ಲಿ (೧೧೪೩-೧೧೭೩ ) ರಾಜರಾಜ ೨ ಕಟ್ಟಿಸಿದ. ಇದನ್ನು ಐರಾವತೇಶ್ವರ ದೇವಾಲಯ ಅಂತಲೂ ಕರೆಯುತ್ತಾರೆ. ಅದರ ಸ್ಥಳಪುರಾಣದ ಪ್ರಕಾರ, ಒಮ್ಮೆ ಇಂದ್ರನ ಐರಾವತ ದೂರ್ವಾಸನಿಂದ ಶಾಪಗ್ರಸ್ತವಾಗಿ ಭೂಮಿಗೆ ಬರುತ್ತದೆ. ಅದು ಇಲ್ಲಿನ ಕಲ್ಯಾಣಿಯಲ್ಲಿ ಸ್ನಾನ ಮಾಡಿ ಶಿವನನ್ನು ಪೂಜಿಸಿದ್ದರಿಂದ ಶಾಪವಿಮುಕ್ತವಾಯಿತು ಎಂಬ ಕಾರಣದಿಂದ ಈ ದೇವಾಲಯಕ್ಕೆ ಐರಾವತಶ್ವೇರ ಎಂಬ ಹೆಸರು ಎನ್ನುತ್ತಾರೆ. ಇದೇ ರೀತಿ ಯಮನಿಗೆ ಯಾರೋ ಋಷಿಯಿಂದ ಶಾಪ ಸಿಕ್ಕು ಅವನು ಇಲ್ಲಿ ಶಾಪ ಪರಿಹಾರ ಮಾಡಿಕೊಂಡ ಅಂತಲೂ ಒಂದು ಕಥೆಯಿದೆ. ಇದೇ ತರಹದ ಕಥೆಯನ್ನು ತಮಿಳುನಾಡಿನ ಅನೇಕ ದೇವಾಲಯಗಳಲ್ಲಿ ನಾನು ಕೇಳಿದ್ದೇನೆ.

ಈ ದೇವಾಲಯದ ವಿಶೇಷ ಅಂದರೆ ಇಡೀ ದೇವಾಲಯನ್ನು ರಥದ ಮಾದರಿಯಲ್ಲಿ ಕಟ್ಟಿರುವುದು. ನಮಗೆ ರಥ ಅಂದ ಕೂಡಲೇ ನೆನಪಾಗುವುದು ಹಂಪಿಯ ವಿಜಯ ವಿಠ್ಠಲ ದೇವಾಲಯದ ರಥ, ಆಮೇಲೆ ಕೋನಾರ್ಕಿನ ಸೂರ್ಯ ದೇವಾಲಯದ ಚಕ್ರಗಳು. ಆದರೆ ಅದೇ ರೀತಿ ಇರುವ ರಥದ ಕಲ್ಪನೆಯಲ್ಲಿ ಕಟ್ಟಿರುವ ಇನ್ನೂ ಹಲವು ದೇವಾಲಯಗಳಿವೆ. ಹೆಚ್ಚು ಪ್ರಚಲಿತವಾಗಿಲ್ಲ ಅಷ್ಟೇ. ತಾಡಿಪತ್ರಿಯ ರಥದ ಮಾದರಿಯಲ್ಲಿರುವ ಗರುಡಗಂಬ, ಕುಂಭಕೋಣಂನ ಸಾರಂಗಪಾಣಿ ದೇವಾಲಯ ಹಾಗೂ ದಾರಾಸುರಮ್‌ನ ದೇವಾಲಯ ತಕ್ಷಣಕ್ಕೆ ನೆನಪಿಗೆ ಬರುವ ನಾನು ಕಂಡ ರಥದ ದೇವಾಲಯಗಳು. ಕೋನಾರ್ಕಿನ ದೇವಾಲಯಕ್ಕೆ ದಾರಾಸುರಮ್ಮಿನ ಈ ದೇವಾಲಯವೇ ಸ್ಫೂರ್ತಿ ಎನ್ನುತ್ತಾರೆ. ಇರಬಹುದೇನೋ. ಯಾಕೆಂದರೆ ಕೋನಾರ್ಕಿನ ದೇವಾಲಯವನ್ನು ನಿರ್ಮಿಸಿದ್ದು ೧೨೫೦ ರಲ್ಲಿ, ದಾರಾಸುರಮ್‌ನ ದೇವಾಲಯ ಕಟ್ಟಿದ ಸುಮಾರು ೭೫ ವರ್ಷಗಳ ನಂತರ. ಇಲ್ಲಿನ ಮುಖಮಂಟಪದ ಎರಡೂ ಬದಿಗೂ ಒಂದೊಂದು ಚಕ್ರಗಳಿವೆ. ನಾವು ಮುಖಮಂಟಪ ಅಂತ ಕರೆಯುವ ದೇವಾಲಯದ ಈ ಭಾಗವನ್ನು ಅಲ್ಲಿನ ಶಾಸನಗಳು ರಾಜಗಂಭೀರಮ್‌ ತಿರುಮಂಟಪಮ್‌ ಎಂದು ಕರೆದಿವೆ. ಈ ಚಕ್ರಗಳಿಗೆ ೩೨ ಕಡ್ಡಿಗಳಿವೆ. ಸುಮ್ಸುಮ್ನೆ ೩೨ ಕಡ್ಡಿ ಕೆತ್ತುತ್ತಾರಾ? ಇದನ್ನು ಸಮಯದ ಅಳತೆಗೆ ಕೆತ್ತಿರಬಹುದು. ಅಂದಿನ ಸ್ಥಪತಿಗಳು ಇಷ್ಟೆಲ್ಲಾ ಸೂಕ್ಷ್ಮಗಳನ್ನು ತಮ್ಮ ಕಲೆಯಲ್ಲಿ ಅಳವಡಿಸಿಕೊಳ್ಳುವ ಸಾಮರ್ಥ್ಯವಿದ್ದವರು. ಅವರು ಹತ್ತಾರು ಭಾರತೀಯ ಜ್ಞಾನಶಾಖೆಗಳಾದ ವೇದ, ಗಣಿತ, ಜ್ಯೋತಿಷ್ಯ, ಖಗೋಳಶಾಸ್ತ್ರಗಳಲ್ಲಿ ನುರಿತವರು. ಇಂತಹ ಚಕ್ರಗಳನ್ನು ಕಡೆಯುವುದು ಅವರಿಗೊಂದು ಆಟದಂತಿತ್ತೇನೋ! ಚಕ್ರಕ್ಕೆ ಜೋಡಿಸಿದಂತೆ ಕೆನೆಯುವ ಕುದುರೆ! ಕುದುರೆಯನ್ನು ಹತ್ತಿರದಿಂದ ನೋಡಿದರೆ ಅದರ ಮೇಲಿನ ಸುಂದರ ಕೆತ್ತನೆಯನ್ನು ಗಮನಿಸಬಹುದು.

ಇಡೀ ದೇವಾಲಯ ಒಂದು ಎತ್ತರದ ಜಗುಲಿಯ ಮೇಲೆ ಕಟ್ಟಿದ್ದಾರೆ. ಜಗುಲಿಯನ್ನು ಏರಲು ಚಕ್ರದ ಪಕ್ಕ ಎರಡೂ ಬದಿಯಲ್ಲಿ ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳ ಇಕ್ಕೆಲದಲ್ಲಿ ಚಕ್ರಕ್ಕೆ ಹೊಂದಿಕೊಂಡಂತೆ ಆನೆಗಳಿವೆ. ಹಾಗಾಗಿ ಒಂದು ಕೋನದಲ್ಲಿ ಚಕ್ರವನ್ನು ಆನೆ ಎಳೆಯುತ್ತಿದೆಯಾ ಅಥವಾ ಕುದುರೆ ಎಳೆಯುತ್ತಿದೆಯಾ ಅಂತ ಅನುಮಾನ ಬರುತ್ತೆ. ಈ ಆನೆಗಳನ್ನು ನೋಡಿದಾಗ ಅವುಗಳಿಂದಲೇ ದೇವಾಲಯಕ್ಕೆ ಐರಾವತೇಶ್ವರ ಹೆಸರು ಬಂತೇನೋ ಅಂದುಕೊಂಡೆ.

ಗಂಗಾನದಿಯಿಂದ ಕೆಳಗೆ ದಕ್ಷಿಣದ ತನಕ ಹಾಗೂ ಭಾರತದಾಚೆ ತಮ್ಮ ಸಾಮ್ರಾಜ್ಯ ವಿಸ್ತರಿಸಿದ ಖ್ಯಾತಿ ಅವರದು. ಇವತ್ತಿಗೂ ಅವರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳನ್ನು ದರ್ಶಿಸುವುದು ಕಲಾಪ್ರಿಯರ ಪಾಲಿಗೆ ಹಬ್ಬವೇ. ಅವರ ಕಾಲದ ಮೂರು ದೇವಾಲಯಗಳನ್ನು ಯುನೆಸ್ಕೋ ಚೋಳರ ಜೀವಂತ ದೇಗುಲಗಳು ಅಂತ ಗುರುತಿಸಿದೆ. ಮೊದಲನೆಯದು ತಂಜಾವೂರಿನ ಬೃಹದೇಶ್ವರ ದೇವಾಲಯ. ಇದನ್ನು ರಾಜರಾಜ ಚೋಳ ೧ ಕಟ್ಟಿಸಿದ್ದು.

ರಾಜಗೋಪುರದ ಒಳ ಬಂದ ಮೇಲೆ ಸುತ್ತಲೂ ಪ್ರಾಕಾರವಿದೆ, ನಂತರ ರಾಜಗಂಬಿರಮ್‌ ತಿರುಮಂಟಪಮ್‌. ಒಳಗೆ ಹೋದ ಮೇಲೆ ಯಾಲಿಗಳ ಕೆತ್ತನೆಯಿರುವ ಕಂಬಗಳು ಗಮನಸೆಳೆಯುತ್ತವೆ. ಯಾಲಿ ಪುರಾಣದ ಒಂದು ಪ್ರಾಣಿ. ಇದಕ್ಕೆ ಸಿಂಹದ ದೇಹವೂ, ಆನೆಯ ಮುಖವೂ, ಹಂದಿಯ ಕಿವಿಯೂ, ಟಗರಿನ ಕೊಂಬೂ, ಹಸುವಿನ ಬಾಲವೂ ಇರುವ ಚಿತ್ರವಿಚಿತ್ರ ಪ್ರಾಣಿ. ಇದನನ್ನು ನಮ್ಮ ದಕಸ್ಷಿಣ ಭಾರತದ ದೇವಾಲಯಗಳಲ್ಲಿ ಕಂಬದ ಅಲಂಕಾರದಲ್ಲಿ ಬಳಸುವುದನ್ನು ಅನೇಕ ಕಡೆ ನೋಡಬಹುದು.

ಚೋಳರ ಬೃಹದೇಶ್ವರ ಹಾಗೂ ಗಂಗೈಕೊಂಡಚೋಲಪುರಮ್‌ ದೇವಾಲಯಗಳು ಅವುಗಳ ಗಾತ್ರಕ್ಕೆ ಪ್ರಸಿದ್ಧವಾದರೆ, ಐರಾವತೇಶ್ವರ ದೇವಾಲಯ ಅದರ ವಾಸ್ತುಶಿಲ್ಪ, ಸೂಕ್ಷ್ಮ ಕೆತ್ತನೆಗಳಿಗೆ ಹಾಗೂ ಅಪರೂಪದ ಶಿಲ್ಪಗಳಿಗೆ ಪ್ರಸಿದ್ಧ. ಮಹಾಮಂಟಪದ ಕಡೆಗೆ ಹೆಜ್ಜೆ ಹಾಕಿದಂತೆ ಕಂಬಗಳು ಹೆಚ್ಚೆಚ್ಚು ಕಲಾತ್ಮಕವಾಗುತ್ತಾ ಅನೇಕ ಕಥೆಗಳನ್ನು ಹೇಳುತ್ತಾ ಹೋಗುತ್ತವೆ. ಶಿವನ ಅನೇಕ ಕಥೆಗಳನ್ನು ಕೆತ್ತಿದ್ದಾರೆ. ಬಹುಪಾಲು ಶಿವಪುರಾಣದ ಕಥೆಗಳನ್ನೆಲ್ಲಾ ಇಲ್ಲಿ ನೋಡಬಹುದು. ಇವೆಲ್ಲಾ ಸಣ್ಣಾತಿಸಣ್ಣ ಕತ್ತನೆಗಳು. ಆದರೆ ಕಥೆಯನ್ನು ವಿಸ್ತಾರವಾಗಿ ಹೇಳುವಂತಹವು. ಕೆಲವು ಕಥೆಗಳು ಕಂಬದ ಆಚೆಗೆ ಪಕ್ಕದ ಕಂಬಕ್ಕೆ ವಿಸ್ತರಿಸಿವೆ. ಅಷ್ಟಕ್ಕೂ ಅವರು ಕೆತ್ತಿರುವುದು ಗ್ರಾನೈಟ್‌ ಕಲ್ಲಿನ ಮೇಲೆ. ಸ್ವಲ್ಪ ಹೆಚ್ಚು ಕಡಿಮೆ ಉಳಿಯೇಟು ಬಿದ್ದರೆ ಒಡೆದೇ ಹೋಗುವಂತಹ ಕಲ್ಲುಗಳು. ಅಲ್ಲಿ ಅಂತಹ ನಿಖರತೆಯನ್ನು ಹೇಗೆ ತರುತ್ತಾರೋ! ಪ್ರತಿ ದೇವಾಲಯಕ್ಕೆ ಹೋದಾಗಲೂ ನನಗಿದೊಂದು ಬೆರಗು! ಸೋಜಿಗ.. ಕಣ್ಣ ಮುಂದೆ ಹರಡಿದ ಚಾಕೋಲೇಟ್‌ನಲ್ಲಿ ಯಾವುದು ತಿನ್ನಲಿ ಅಂತ ಕನ್ಫ್ಯೂಸ್‌ ಆಗುವ ಮಕ್ಕಳಂತೆ ಅಲ್ಲಿಂದ ಇಲ್ಲಿಗೆ ಓಡಾಡುತ್ತಾ ಇರುತ್ತೀನಿ. ಯಾವತ್ತೂ ನೋಡಿ ಮುಗೀತು ಎಂದುಕೊಂಡು ಬರೋಕೆ ಆಗೋದೇ ಇಲ್ಲ, ನೋಡಿದಷ್ಟೂ ಹೊಸ ಅರ್ಥಗಳು, ಹಲವಾರು ತಿಳಿವುಗಳು.. ಈ ದೇವಾಲಯಗಳು ತೆರೆದಿಟ್ಟ ಪುಸ್ತಕಗಳು.

ನಾವು ಓದಿದ ಶಿವನ ಭಕ್ತರಿಗೆಲ್ಲಾ ಇಲ್ಲಿ ಸ್ಥಾನ. ಬೇಡರ ಕಣ್ಣಪ್ಪನದೂ ಒಂದು ಶಿಲ್ಪವಿದೆ. ಶೈವ ಸಂಪ್ರದಾಯದ ನಾಯನಾರುಗಳು ೬೩ ಜನರು. ಅವರು ಶಿವನ ಸ್ತುತಿಸುತ್ತಾ ಶೈವ ಸಂಪ್ರದಾಯವನ್ನು ತಮಿಳುನಾಡಿನಲ್ಲೆಲ್ಲಾ ಹರಡಿದವರು. ಅವರ ಕತ್ತನೆಗಳನ್ನೂ ಮತ್ತವರ ಬೋಧನೆಯನ್ನೂ ಕಲ್ಲಿನ ಮೇಲೆ ಕಾಣಬಹುದು. ಇನ್ನು ಗರ್ಭಗುಡಿಯಲ್ಲಿ ನಿತ್ಯಪೂಜೆಗೊಳ್ಳುವ ಸುಂದರವಾದ ಶಿವಲಿಂಗವಿದೆ.

ದೇವಾಲಯದ ಹೊರಪ್ರಾಂಗಣದಲ್ಲಿ ಒಂದು ಪ್ರದಕ್ಷಿಣೆ ಬಂದರೆ ದೇವಾಲಯದ ಹೊರಭಿತ್ತಿಯನ್ನು ಅಲಂಕರಿಸಿದ ಕೆತ್ತನೆಗಳನ್ನು ನೋಡಬಹುದು. ನಮ್ಮ ಹೊಯ್ಸಳರಂತೆ ಹೊರಗೋಡೆ ತುಂಬಾ ಕೆತ್ತನೆಗಳಿಲ್ಲದಿದ್ದರೂ ಅನೇಕ ಒಳ್ಳೆಯ ಕತ್ತನೆಗಳಿವೆ. ಅಗಸ್ತ್ಯ ಮತ್ತು ಇತರ ಋಷಿಗಳು, ಶಿವ, ವಿಷ್ಣು, ದುರ್ಗಾರ ಮೂರ್ತಿಗಳಿವೆ. ಸುಮಾರು ಎಲ್ಲಾ ಚೋಳರ ದೇವಾಲಯಗಳಲ್ಲಿ ಕಾಣುವ ಲಿಂಗೋದ್ಭವ ಮೂರ್ತಿ ಇಲ್ಲಿಯೂ ಇದೆ. ದೇವಾಲಯದ ಸುತ್ತಲೂ ಮಳೆ ನೀರು ನಿಂತಿದ್ದರಿಂದ ಅದು ನೀರ ಮೇಲೆ ಪ್ರತಿಫಲಿಸುತಿತ್ತು. ಇದ್ಯಾಕೆ ಹೀಗೆ? ದೇವಾಲಯ ಕೆಳ ಭಾಗದಲ್ಲಿರುವುದರಿಂದ ಸುತ್ತಮುತ್ತಲ ಅಷ್ಟೂ ನೀರು ಇಲ್ಲಿ ಬಂದು ಸೇರುತ್ತದೆ. ಮೋಟರ್‌ ಹಾಕಿ ನೀರು ಖಾಲಿ ಮಾಡಬೇಕು. ಮಳೆಗಾಲದಲ್ಲಿ ಇದು ನಿತ್ಯದೃಶ್ಯ ಅನ್ನುವುದು ತಿಳಿಯಿತು. ಯುನೆಸ್ಕೋದ ಪಾರಂಪರಿಕ ತಾಣವಾದ ಇಲ್ಲೇ ಇಂತಹ ಒಂದು ಸಮಸ್ಯೆಯನ್ನು ಹಲವಾರು ವರ್ಷಗಳಿಂದ ಬಗೆಹರಿಸಿಲ್ಲ ಅಂದರೆ ಬೇರೆ ಅಜ್ಞಾತ ದೇವಾಲಯಗಳ ಗತಿ ಏನು? ಯುನೆಸ್ಕೋ ದುಡ್ಡು ಸುರಿಯಲು ಸಿದ್ಧವಿದ್ದರೂ ರಾಜ್ಯ ಸರ್ಕಾರ ಅದಕ್ಕೆ ಕೈ ಜೋಡಿಸದಿದ್ದರೆ ಹೇಗಾದೀತು?

ಅದೇ ಪ್ರಾಂಗಣದಲ್ಲಿ ದೇವಿಯ ದೇವಾಲಯವೂ ಇದೆ. ಅದರ ಮುಂದೆ ಎಷ್ಟು ನೀರಿತ್ತೆಂದರೆ ಮುಂದೆ ಹೋಗಲಾಗಲೇ ಇಲ್ಲ. ಆದರೆ ಅದರ ಹೊರಗೆ ಇರುವ ಕೆತ್ತನೆಗಳು, ಸಾಮಾನ್ಯ ಜನಜೀವನವನ್ನು ತೋರಿಸುವ ಕತೆಗಳು ಕುತೂಹಲಕಾರಿಯಾಗಿವೆ. ಒಬ್ಬ ಗರ್ಭಿಣಿಯನ್ನು ಇಬ್ಬರು ಗೆಳತಿಯರು ಕರೆದುಕೊಂಡು ಹೋಗುವ ದೃಶ್ಯ ತುಂಬಾ ಚೆನ್ನಾಗಿದೆ. ಅವಳ ಪಕ್ಕದಲ್ಲಿ ನಿಂತವಳ ಮುಖಬಾವವಂತೂ ಅದ್ಭುತ. ಇದೇ ರೀತಿಯ ಒಂದು ಚಿತ್ರಣವನ್ನು ಗುಜರಾತಿನ ಮೊಢೇರಾ ದೇವಾಲಯದಲ್ಲೂ ಕಂಡಿದ್ದೇನೆ.

ಹೊರಗೆ ಬರುವಾಗ ನಂದಿಮಂಟಪವನ್ನು ಸರಿಯಾಗಿ ಗಮನಿಸಿದೆ. ದೇವರಿಗೆ ಎದುರಾಗಿ ಇರುವ ನಂದಿಯ ಪುಟ್ಟ ಮಂಟಪವದು. ಅದರ ಪಕ್ಕದಲ್ಲಿ ಒಂದಷ್ಟು ಮೆಟ್ಟಿಲುಗಳು. ಅವನ್ನು ಮೆಷ್‌ ಹಾಕಿ ಬೀಗ ಹಾಕಿದ್ದರು. ಅವು ಸಂಗೀತ ನುಡಿಸುವ ಮೆಟ್ಟಿಲುಗಳು. ಅವುಗಳ ಮೇಲೆ ನಡೆದರೆ ಸಂಗೀತ ಹೊಮ್ಮುತ್ತದಂತೆ. ಜನ ಅದನ್ನು ಹಾಳಮಾಡದಿರಲಿ ಅಂತ ಬೀಗ ಹಾಕಿ ಇಟ್ಟಿದಾರೆ.

ಹಿಂದೆ ಇದು ಈಗಿರುವ ದೇವಾಲಯದ ೭ ಪಟ್ಟು ದೊಡ್ಡದಿತ್ತಂತೆ. ಅದರೆ ಕಾಲಾನುಕ್ರಮೇಣ ಹಾಳಾಗಿ ಈಗ ಇಷ್ಟು ಉಳಿದಿದೆ. ದೇವಾಲಯದ ವಿಮಾನ ಅಂದರೆ ಗರ್ಭಗುಡಿ ಇರುವ ಭಾಗ ೨೪ ಮೀಟರ್‌ ಎತ್ತರವಿದ್ದು ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಒಳಗೆ ಶಿವಲಿಂಗ ಇದೆ. ಚೋಳರ ಲಿವಿಂಗ್‌ ದೇವಾಲಯಗಳು ಅಂತ ಕರೆಯುವ ಮೂರೂ ದೇವಾಲಯಗಳಲ್ಲಿ ನಿತ್ಯ ಆಗಮಗಳ ಪ್ರಕಾರ ಪೂಜೆ ನಡೆಯುತ್ತದೆ. ಹಾಗಾಗೇ ಇವು ಮುಂದೆಯೂ ಜೀವಂತ ದೇಗುಲಗಳಾಗಿ ಉಳಿಯುತ್ತವೆ. ಹಿಂದೆ ಆದ ಇಸ್ಲಾಂ ಆಕ್ರಮಣಗಳನ್ನು ಮೀರಿ ಇವು ಬದುಕುಳಿದಿವೆ. ದೇವಾಲಯದ ಪ್ರಾಂಗಣದಲ್ಲಿ ಒಂದು ಮ್ಯೂಸಿಯಂ ಕೂಡ ಇದೆ. ಬೇರೆ ದೇವಾಲಯಗಳಿಗೆ ಹೋಲಿಸಿದರೆ ಇಲ್ಲಿ ಜನಜಂಗುಳಿ ಕಡಿಮೆಯೇ. ಅದು ಒಂದು ತರಹಕ್ಕೆ ಒಳ್ಳೆಯದೇ…!

(ಫೋಟೋಗಳು: ಲೇಖಕರವು)