ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು.ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.

ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈವತ್ತು ಈ ಜಾಗದಲ್ಲಿ ಜಯಂತ ಕಾಯ್ಕಿಣಿಯವರ ಒಂದು ಕವಿತೆ ಇದೆ.

ಬಟನ್ ಮೊಲ

ರಸ್ತೆಯಲ್ಲಿ ಕೆಟ್ಟು ನಿಂತಿದೆ ಕಹಿಮುಖದ ಟೆಂಪೋ
ಬೆನ್ನಲ್ಲಿ ಹೊತ್ತುಕೊಂಡು ಒಂದು ಮನೆತನ.
ವಾಲುವಂತೆ ಪೇರಿಸಿಟ್ಟ ಕಬ್ಬಿಣದ ಟ್ರಂಕು
ಹೊಟ್ಟೆ ಅದುಮಿ ಒದ್ದಾಡುವ ಬಟ್ಟೆ ಮೂಟೆ
ಕೈಕಾಲು ಮಡಿಸಿ ನಿಂತ ಯೋಗಮುದ್ರೆಯ ಮಂಚ
ಸವೆದ ಶಾಯಿ ಗುರುತಿನ ಮೇಜಿನ ಮೇಲಲ್ಲಾಡುವ
ಕಪ್ಪು ದಕ್ಷಿಣ ಗೋಲಾರ್ಧದ ಅನ್ನದ ಪಾತ್ರೆ
ಅದರಲ್ಲಿ ಕಡೇಗಳಿಗೆ ಇಟ್ಟ ಒಗ್ಗರಣೆ ಸವುಟು
ಚಾ ಪುಡಿ ಇನ್ನೂ ಅಂಟಿರುವ ಸಡಿಲ ಚಿಮ್ಮಟ
ಎಷ್ಟೊ ಸಂವತ್ಸರದ ಸೊಗಡು ಸುತ್ತಿಟ್ಟ ಕ್ಯಾಲೆಂಡರು ಯಶೋಧೆ
ಅವಳ ಉದರಕ್ಕೆ ಚುಚ್ಚಿಟ್ಟ ಟಾಚಣಿ ನೂಲಿನ ಜಡೆಯ ಜಂಗು ಸೂಜಿ
ಮಡಿಸಿಟ್ಟ ಹಾಸಿಗೆ ಮಲಗಿದ ಕಪಾಟು
ಅಂಗಾತ ಬಿದ್ದ ಕನ್ನಡಿಯಲ್ಲಿ ಹಾರುತ್ತಿರುವ ಕಾಗೆ.

ಒಲೆ ಇದ್ದಿದ್ದರೆ ಬಾವಿಯ ನೀರಿದ್ದರೆ ಎಲ್ಲದಕೂ ಜೀವ
ಬರಬಹುದಿತ್ತು ಇಲ್ಲಿ. ಯಾರಿಲ್ಲವೆ ಹೋದರೆಲ್ಲಿ
ಎಂದಿನ್ನೇನು ಕೇಳಬೇಕು ಅಷ್ಟರಲ್ಲಿ ಅಗೋ
ಆ ಬೋರಲು ಬಾಲ್ದಿಗೆ ಆತು ನಿಂತು ಕಣ್ಣಿಟ್ಟು
ಕಾವಲು ಕಾಯುತ್ತಿದೆ ಸ್ತಬ್ಧ ಬೆಳ್ಳನೆ ಬಟನ್ ಮೊಲ.
ಅದರ ಕಣ್ಣಿಗೆ ಕೆಂಪು ಮಣಿ
ಕಟ್ಟು ಹಾಕಿಸಿದ ಕಾಜು ಕಪ್ಪು ಬಟ್ಟೆ. ಕೆಳಗೆ
ನೂಲಿನಿಂದ ಬರೆದ-ಕುಸುಮ ಕೌಸಲ್ಯ ಮೃದುಲ-ಇಂಥದೇ
ಮಳೆಯ ಹೂವಿನಂಥ ಹೆಸರು

ಅವಳಿಗೇನಾಯಿತು ಈಗ ಎಲ್ಲಿರುವಳು
ಅಪರಾಹ್ನ ಅಳುವ ಮೂಗ ಸೊರಕ್ ಕೈಯುದ್ದ ವರೆಸುತ್ತ
ಒಂದೊಂದೇ ಬಟನ್ ಪೋಣಿಸಿದವಳು
ಹೊರಗಿನವರು ಬಂದರೆ ಥಟ್ಟನೆದ್ದು ಅದನ್ನಲ್ಲೇ ಬಿಟ್ಟು ಹಿತ್ತಲಿಗೋಡಿದವಳು
ತಂಗಿಯ ನೋಡಲು ಬಂದಾಗ ಅಡಗಿ ಕೂತವಳು
ಅಮ್ಮನ ಲಂಗದ ಮೇಲೆ ತಮ್ಮನ ಅಂಗಿ ಹಾಕಿ
ಎಲ್ಲೆಲ್ಲೋ ಹಪ್ಪಳ ಮಾಡಲು ಹೋಗಿ ಅಲ್ಲೇ
ಅಂದಿನ ಊಟ ಉಂಡವಳು.

ಕತ್ತಲಲ್ಲಿ ಕಳೆದು ಹೋಗುವ ಸೂಜಿ
ಸಂದಿಯಲ್ಲಿ ಬಿಚ್ಚಿಬೀಳುವ ನೂಲಿನುಂಡೆ
ಪೇಟೆ ತುಂಬ ಅಬ್ಬ ಎಷ್ಟೊಂದು ಗುಂಡಿಗಳು
ಮೆಲ್ಲಗೆ ಕಾಜು ಮುರಿದು ಸದ್ದಿಲ್ಲದೆ ಹೊರಬೀಳುತ್ತಿದೆ ಮೊಲ
ಕತ್ತು ಚಾಚಿ ಅತ್ತಿತ್ತ ನೋಡಿ ಮನೆ ತುಂಡುಗಳ ಮೂಸುತ್ತ
ಚಂಗನೆ ಟೆಂಪೋದಿಂದ ನೆಗೆದು ನಡುಬೀದಿಯಲ್ಲಿ ಓಡುತ್ತಿದೆ
ಪೋಣಿಸಿದ ತಾಯನ್ನು ಅರಸಿಕೊಂಡು