ಬುದ್ಧ ಪೂರ್ಣಿಮೆಯ ರಾತ್ರಿ

ಅಪ್ಪನನ್ನು ಮಣ್ಣು ಮಾಡಿದ
ರಾತ್ರಿ
ಉಸಿರು ಸ್ಕಾಚ್ ಬೇರ್ಪಡಿಸಲಾರದಷ್ಟು
ಸಮ
ಕುಡಿದು ಅವಳ ತೆಕ್ಕೆಯಲಿ ಹಳೆಯ
ಸ್ವರ್ಗಗಳನ್ನು ಕಂಡ
ಬುದ್ಧ ಪೂರ್ಣಿಮೆಯ ಅ ಬೆಳದಿಂಗಳ ರಾತ್ರಿ
ಬೆಳದಿಂಗಳಾಗುವುದನ್ನೇ ಮರೆತು
ನಸುಕಿನ ಜಾವದಲಿ ಜ್ಞಾಪಿಸಿಕೊಂಡು
ಮುಂಜಾವನ್ನು
ಬೆಳದಿಂಗಳನ್ನು ನಿಶ್ಯಬ್ದದಲಿ
ಸಾಗುಹಾಕುವಾಗ
ಅವನಿಗೆ ಎಚ್ಚರವಾಯ್ತು

ಬಾಹುಬಂಧನಗಳಿಗಂಟಿದ ಅವಳು
ಶರತ್ಕಾಲದ ಎಲೆಗಳಾಗಿ
ಅವನ ಮುಚ್ಚಿ
ಬೆಂಕಿಯಾಗಿ
ಉರಿದವು
—–

ಅದು ಇದು
ಪಾಚಿ ಈ ಬೃಹತ್ ಮರದ ರಂಬೆ ಕೊಂಬೆ
ಗಳಿಗೆಲ್ಲಾ ಸೌಂದರ್ಯವ ಮೆತ್ತಿದೆ
ಮಂಜು ಆವರಿಸಿ ಸುತ್ತ
ಮರ ಮರವನ್ನೇ
ಎತ್ತಿ
ಹೋಗುತಿದೆ ತೇಲಿಸಿಕೊಂಡು ಒಂದು ಪಕ್ಷಿ
ಗೊಂಚಲು ಗೊಂಚಲು ಬಿಟ್ಟಿರುವ
ಮರದ ಹಣ್ಣುಗಳನ್ನು ತಿನ್ನುತ್ತ
ಅದೂ ಅದರ ಜೊತೆ
ತೇಲುತಿದೆ

ಕಾಣಿಸಲಿಲ್ಲವಾ
ಸರಿ

ಅಗೋ ಅಲ್ಲಿ
ಪುಟ್ಟ ಹುಡುಗಿ
ಸರಿಯುತ್ತಿದ್ದಾಳೆ
ಸುರಿಯುತ್ತಿರುವ ಮಳೆಯಲ್ಲಿ
ಆಟವಾಡುತ್ತಾ ನೆನೆಯದೆ

ಇದು

 

 

 

 

 

 

ಆನೆಯ ಸೊಂಡಿಲು ಹಳದಿ ಸೇವಂತಿಗೆಯಂತೆ
ಆನೆಯ ಸೊಂಡಿಲು ಹಳದಿ ಸೇವಂತಿಗೆಯಂತೆ
ನಗುತಿರಬೇಕಿತ್ತು ಜಿರಾಫೆಯಾಗಿ ಇರುವೆ
ಆಕಾಶದ ಹಣ್ಣನ್ನು ತಿಂದು ಮಲ ಮಾಡಬೇಕಿತ್ತು
ಭೂಮಿ ಮೇಲೆ ಘೇಂಡಾಮೃಗದ ಥರ ನಡೆದಾಡಬೇಕಿತ್ತು
ಚೇಳು
ಆಗಿ ಇಲಿ ಹಾವು ನವಿಲ
ಒಳ ಎಳೆದು ಕೊಳ್ಳಬೇಕಿತ್ತು
ಹೊಸ ಹೊಸ ಪುರಾಣಗಳಲಿ ಗೂಬೆ
ಹಂಸವಾಗಿ ದೇವರ ಬಸ್ಸುಗಳಾಗ ಬೇಕಿತ್ತು
ಮನುಷ್ಯ ಗೊಮ್ಮಟದ ಕಲ್ಲೋ ಅಥವಾ
ಮರುಭೂಮಿಯಾಗಿ ಈಜಾಡಬೇಕಿತ್ತು ಸದಾ ಬಿಸಿಲಲ್ಲಿ

ಹಿಂದೆ ಮುಂದೆ

ಸಾನಿಯ ಮಿರ್ಜ ಸೋತರೆ ಬೆಟರ್ ಲಕ್ ನೆಕ್ಸ್ ಟೈಮೆಂದು
ಪಪ್ಪ
ಒಂದು ಗ್ಲಾಸ್ ಸ್ಕಾಚ್ ಕುಡಿದು ಹರಿದ ಅಂಗಿಯ
ಕ್ಯಾಲೆಂಡರ್ ನಲ್ಲಿ ಸಿಕ್ಕಿಸಿದ ಸೂಜಿಯಲಿ ಹೊಲೆದು
ನದಿಯ ದಡದಲಿ ಕೂತು
ಇಡೀ ದಿನ ಮೀನಿಗೆ ಗಾಳ

ಎಷ್ಟೋ ಸಲ ಚಾಲಾಕು ಮೀನುಗಳು
ಪಪ್ಪನ ಬರೀಗೈಲಿ ಕಳಿಸಿದ್ದಿದೆ

ಅಮ್ಮ ಅಡುಗೆ ಕೋಣೆಯಲಿ ಸಾಸುವೆ ಸಿಡಿಸುವಾಗ
ಸಾಸುವೆ ಹೂವು ವ್ಯಾನ್‌ಗೋನ ಸೂರ್ಯ ಕಾಂತಿ ಹೂವು
ಪಪ್ಪನ ಕವಿತೆಯಲಿ

ನಾನು ಮುಂದೆ
ಪಪ್ಪ ಹಿಂದೆ
ಪಪ್ಪ ಹಿಂದೆ
ನಾನು ಮುಂದೆ

ತಿರುಗಿ ನೋಡಿದರೆ
ಈಗ
ಖಾಲಿ ಖಾಲಿ ದಾರಿ
ಪಪ್ಪಾ ಪಪ್ಪಾ…

 

(ಮುಖಪುಟ ಚಿತ್ರ: ಪ್ರತೀಕ್ ಮುಕುಂದ)
(ರೇಖಾಚಿತ್ರ: ರೂಪಶ್ರೀ)