ಬೆಂಗಳೂರಿನಲ್ಲಿ ಬಿಲ್ಡರುಗಳ ಲಾಬಿಗೆ ಮಣಿದು ತವರಿಗೆ ಮರಳುವ ಆಸೆ ಹೊತ್ತುಬಂದ ವಲಸೆ ಕಾರ್ಮಿಕರ ಕಣ್ಣುಗಳಲ್ಲಿ ಅದೆಂತಹ ಆಸೆಗಳಿದ್ದವು? ತಮ್ಮವರನ್ನು ನೋಡುವ ಕಾತರ ಎಷ್ಟು ಇದ್ದಿರಬೇಕು. ರೈಲು ರದ್ದಾದ ಸುದ್ದಿಯ ಕೇಳಿ ಇವರೇನು ಬೆಚ್ಚಿ ಬಿದ್ದವರಲ್ಲ. ಇದ್ದ ಲಗ್ಗೇಜನ್ನೇ ತುಸು ಕಡಿಮೆಮಾಡಿ ಬಿಹಾರ ಜಾರ್ಖಂಡ ಮಧ್ಯಪ್ರದೇಶ ಓರಿಸ್ಸಾದಿಂದ ಬಂದ ಕೂಲಿಗಳು ಕೆಂಡದ ಟಾರು ರೋಡು ತುಳಿಯುತ್ತ ನಡೆದುಕೊಂಡೇ ಹೋಗುತ್ತಾರೆಂದರೆ ಇವರಿಗೆ ಲಾಕ್ ಡೌನ್ ಹುಟ್ಟಿಸಿದ ಭಯ ಎಷ್ಟಿರಬಹುದು? ಕಿತ್ತುತಿನ್ನುವ ಹಸಿವು ಎಷ್ಟಿದ್ದಿರಬಹುದು? ಕಾಡಿದ ಒಂಟಿತನ ಅಸಹಾಯಕತೆ, ತನ್ನವರ ನೋಡುವ ಹಂಬಲ, ತವರಿನಲ್ಲಿ ಕಾಯುತ್ತಿರುವ ಪುಟ್ಟ ಮಕ್ಕಳು ಮಡದಿ ವಯಸ್ಸಾದ ಅವ್ವ ಅಪ್ಪ ಈ ಒಂಟಿತನದ ನೋವು ಅವರಿಗೂ ಬಾಧಿಸುತಿದೆ ಅಲ್ಲಿ.
ಡಾ. ಲಕ್ಷ್ಮಣ ವಿ.ಎ. ಅಂಕಣ

 

ಈ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ರೇಲ್ವೆ ಸ್ಟೇಷನ್ನಿನಲಿ ನಡೆದ ಘಟನೆ ನೆನೆದರೆ ಮೈ ನಡುಕ ಹುಟ್ಟಿ ಎಂಥದೋ ಸಂಕಟ.. ಒಟ್ಟು ಹದಿನಾಲ್ಕು ಜನ ಊರಿಗೆ ಹೊರಟು ತನ್ನವರನ್ನು ಕಾಣುವ ಕಾತರದಲ್ಲಿದ್ದವರಿಗೆ ಎದುರಾಗಿದ್ದು ಸಾವು. ಚೆಲ್ಲಾಪಿಲ್ಲಿಯಾದ ರಕ್ತಸಿಕ್ತ ದೇಹಗಳು, ಅದರ ಸುತ್ತ ಅರೆಬೆಂದ ಚಪಾತಿಗಳು. ಮಲಗುವುದಾಗಿದ್ದರೆ ಅವರು ಸ್ಟೇಷನ್ನಿನ ಪ್ಲಾಟ್ ಫಾರ್ಮಿನ ಮೇಲೇಕೆ ಮಲಗಲಿಲ್ಲ? ಅಷ್ಟು ಗಲೀಜಿನ ರೇಲ್ವೆ ಟ್ರ್ಯಾಕಿನ ಪಕ್ಕ ಮಲಗುವ ಅನಿವಾರ್ಯತೆ ಏನಿತ್ತು? ರೈಲು ಬರುವ ಸೂಚನೆಯನ್ನು ಸ್ಟೇಷನ್ ಮಾಸ್ತರರು ಕೊಡಬಹುದಿತ್ತಲ್ಲವೆ? ರೇಲ್ವೆ ಪೋಲೀಸರ ಕಣ್ಣಿಗೆ ಇವರು ಕಾಣಿಸಲಿಲ್ಲವೇ? ಎಂಬ ಪ್ರಶ್ನೆಗಳು ಕಾಡುವುದು ಸಹಜ. ಆದರೆ ನೆನಪಿರಲಿ ಈ ದುರಿತಕಾಲದಲ್ಲಿ ಟೋಲು ನಾಕೆಗಳ ಕಣ್ಣು ತಪ್ಪಿಸಿ ಪೋಲೀಸರ ಕಣ್ಣು ತಪ್ಪಿಸುವುದು ಸುಲಭವೆಂದು ಎಷ್ಟೋ ದೂರದಿಂದ ನಡೆದುಕೊಂಡೇ ಈ ಹಳಿಯಜೊತೆ ಬಂದವರು ಇವರು. ಇವರ ಮಲಗಿದ ಜಾಗ ಕಗ್ಗಾಡು, ಕಾಡುಪ್ರಾಣಿಗಳ ಭಯ. ರೇಲ್ವೆ ಟ್ರ್ಯಾಕ್ ನ ಮೇಲೆ ಪಶುಗಳು ಬರಲಾರವು ಹಾಗು ಲಾಕ್ ಡೌನ್ ಇರುವುದರಿಂದ ರೈಲು ಬರಲಾರವೆಂಬ ಧೈರ್ಯದಿಂದ ಇಲ್ಲಿ ಹಳಿಗಳ ಮೇಲೆ ಮಲಗಿದರು. ನಸುಕಿನ ನಿದ್ದೆಯಲಿ ಊರಿಗೆ ಹೋಗುವ ಕನಸಿನಲ್ಲಿದ್ದವರು ಮರಳಿಬಾರದ ಲೋಕಕೆ ಪಯಣಿಸಿದವರು. ಚೆಲ್ಲಾಪಿಲ್ಲಿಯಾಗಿ ಬಿದ್ದ ಹೆಣದ ಭಾಗಗಳು, ಬಟ್ಟೆ, ದುಡ್ಡು, ಮತ್ತು ಅರೆಬೆಂದ ಚಪಾತಿಗಳು! ಬಹುಶಃ ಬೆಳಗಿನ ತಿಂಡಿಗೆಂದೇ ತೆಗೆದಿಟ್ಟುಕೊಂಡಿದ್ದ ಚಪಾತಿಗಳವು. ಇವರ ಇತಿಹಾಸದ ವೀರ ಶಾಸನ ಬರೆಯುವ ಹಾಗಿದ್ದರೆ ಅರೆಬೆಂದ ಚಪಾತಿಯ ಚಿತ್ರವನ್ನು ಬರೆದರೆ ಮಾತ್ರ ಆ ಶಾಸನ ಪೂರ್ಣ ಶಾಸನ.

ಬೆಂಗಳೂರಿನಲ್ಲಿ ಬಿಲ್ಡರುಗಳ ಲಾಬಿಗೆ ಮಣಿದು ತವರಿಗೆ ಮರಳುವ ಆಸೆ ಹೊತ್ತುಬಂದ ವಲಸೆ ಕಾರ್ಮಿಕರ ಕಣ್ಣುಗಳಲ್ಲಿ ಅದೆಂತಹ ಆಸೆಗಳಿದ್ದವು? ತಮ್ಮವರನ್ನು ನೋಡುವ ಕಾತರ ಎಷ್ಟು ಇದ್ದಿರಬೇಕು. ರೈಲು ರದ್ದಾದ ಸುದ್ದಿಯ ಕೇಳಿ ಇವರೇನು ಬೆಚ್ಚಿ ಬಿದ್ದವರಲ್ಲ. ಇದ್ದ ಲಗ್ಗೇಜನ್ನೇ ತುಸು ಕಡಿಮೆಮಾಡಿ ಬಿಹಾರ ಜಾರ್ಖಂಡ ಮಧ್ಯಪ್ರದೇಶ ಓರಿಸ್ಸಾದಿಂದ ಬಂದ ಕೂಲಿಗಳು ಕೆಂಡದ ಟಾರು ರೋಡು ತುಳಿಯುತ್ತ ನಡೆದುಕೊಂಡೇ ಹೋಗುತ್ತಾರೆಂದರೆ ಇವರಿಗೆ ಲಾಕ್ ಡೌನ್ ಹುಟ್ಟಿಸಿದ ಭಯ ಎಷ್ಟಿರಬಹುದು? ಕಿತ್ತುತಿನ್ನುವ ಹಸಿವು ಎಷ್ಟಿದ್ದಿರಬಹುದು? ಕಾಡಿದ ಒಂಟಿತನ ಅಸಹಾಯಕತೆ, ತನ್ನವರ ನೋಡುವ ಹಂಬಲ, ತವರಿನಲ್ಲಿ ಕಾಯುತ್ತಿರುವ ಪುಟ್ಟ ಮಕ್ಕಳು ಮಡದಿ ವಯಸ್ಸಾದ ಅವ್ವ ಅಪ್ಪ ಈ ಒಂಟಿತನದ ನೋವು ಅವರಿಗೂ ಬಾಧಿಸುತಿದೆ ಅಲ್ಲಿ. ಹೀಗಾಗಿ ಸರಕಾರ ಕೊಟ್ಟ ಊಟ ಉಪಚಾರ ಎಲ್ಲ ತಿರಸ್ಕರಿಸಿ ನಡೆಯುತ್ತಲೇ ಹೋಗುವ ಇವರ ದಾಖಲೆಯನ್ನು ಇತಿಹಾಸದ ಪುಟಗಳಲ್ಲಿ ಹೇಗೆ ದಾಖಲಿಸುವುದು?

ಎಷ್ಟು ನೋವುಗಳಿವೆ? ಎಷ್ಟು ಕಣ್ಣೀರ ಕಥೆಗಳಿವೆ? ಬಿಟ್ಟು ಹೋಗುತ್ತಿರುವ ಬೆಂಗಳೂರಿಗೆ ಹೇಳಲು ಏನಾದರೂ ಮಾತುಗಳು ಉಳಿದಿವೆಯೇ? ಈ ವಲಸೆಯವರ ದುರಾದೃಷ್ಟ ನೋಡಿ, ಇಲ್ಲಿ ಕರ್ನಾಟಕದವರು ಕಳುಹಿಸಲು ಸಿದ್ಧರಿದ್ದರೂ ಇವರ ರಾಜ್ಯದವರು ಇವರನ್ನು ಸ್ವಾಗತಿಸಲು ತಯಾರಿಲ್ಲ. ವಲಸೆಯ ಮಹಾಪ್ರವಾಹವೇ ಬಂದಿರುವ ಹೊತ್ತಿನಲ್ಲಿ ಅಲ್ಲಿ ಇವರನ್ನು ಹದಿನಾಲ್ಕು ದಿನ ಕ್ವಾರೈಂಟೈನ್ ಮಾಡಲೂ ಕಷ್ಟವಾಗಬಹುದು. ಅಗಸನ ನಾಯಿ ಈ ಕಡೆ ಮನೆಗೂ ಆಗಲಿಲ್ಲ ಆ ಕಡೆ ಬೆಟ್ಟಕ್ಕೂ ಆಗಲಿಲ್ಲ.

ಎಲ್ಲ ಮಾತುಗಳೂ ಅರ್ಥ ಕಳೆದುಕೊಂಡ ಹೊತ್ತಿನಲ್ಲಿ ಮೌನವೂ ಭೀಕರವಾಗಿ ಇರಿಯುತ್ತಿವೆ. ಧರೆ ಹೊತ್ತಿ ಉರಿಯುತ್ತಿದೆ.

ಈ ವಾರ ಏನೂ ಬರೆಯಬಾರದೆಂದುಕೊಂಡಿದ್ದೆ. ಶಬ್ಧಗಳಿಗೂ ನಡುಕುಹುಟ್ಟಿಸುವ ವಿದ್ಯಮಾನಗಳ ಕಾಲವಿದು. ಈ ಸಂಕಟದ ಎದೆಯುರಿಯನ್ನು ಕತೆಯಾಗಿಸಲಾ ಕವಿತೆಯಾಗಿಸಲಾ? ಉಹುಂ…. ಬೇಡ…. ಸುಮ್ಮನೇ ಅನುಭವಿಸಬೇಕು ಯಾತನೆಯನ್ನು. ಏನಾಗುತ್ತಿದೆ ಇಲ್ಲಿ ಅಂತ ಯಾರಿಗೂ ಗೊತ್ತಾಗುತ್ತಿಲ್ಲ. ಇನ್ನೇನು ನಲವತ್ತು ದಿನಗಳ ಲಾಕ್ ಡೌನ್ ಮುಗಿಯಿತೆನ್ನುವ ಸ್ವಾತಂತ್ರ್ಯ ಖುಷಿ ಎನ್ನುವಾಗಲೇ ದೇಶದ ತುಂಬ ಸೂತಕದ ಸುದ್ದಿಗಳು, ಕೊರೋನಾ ಮೃತರ ಸೋಂಕಿತರ ಗ್ರಾಫ್ ಏರಿದಂತೆ ದುಃಖವೂ ಅಸಹಾಯಕತೆಯೂ ಏರುತ್ತಿದೆ.

ಮನುಕುಲಕ್ಕೆ ಶಾಂತಿ ಪ್ರೀತಿ ಬೋಧಿಸಿದ ಬುದ್ಧನ ಜನ್ಮದಿನದಂದೇ ವಿಶಾಖಪಟ್ಟಣಂನ ದುರಂತ ಇದೇ ದಿನ ದೇಶದ ಹಲವೆಡೆ ನಡೆದ ದುರಂತಗಳು ಮನುಷ್ಯನ ತಾಳ್ಮೆಯನ್ನು, ಶಕ್ತಿಯನ್ನು, ಪರೀಕ್ಷಿಸಲು ಬಂದ ವಿಧಿಯಂತೆ ಎಲ್ಲ ನಡೆದುಹೋಗುತ್ತಿದೆ. ಒಂದು ದುಃಖ ಮರೆಯುವ ಮುನ್ನವೇ ಇನ್ನೊಂದು ದುರಂತ.. ಹೀಗೆ ಸರಣಿ ದುಃಖಗಳಲ್ಲಿ ಒಂದು ದಿನ ಸಾವೂ ಕೂಡ ಸಹಜವಾಗುತ್ತದೆಯೇ? ಪೂರ್ವದಲ್ಲಿ ಮೂಡಿ ಪಶ್ಚಿಮಕ್ಕೆ ಮುಳುಗುವ ಸೂರ್ಯನಂತೆ? ಇಡೀ ದೇಶವೇ ಈಗ ಕದನ ಭೂಮಿಯಂತೆ, ಆಸ್ಪತ್ರೆಗಳು ಸ್ಮಶಾನದಂತೆ, ಬದುಕುಳಿದವರು ಸಾವಿನೊಂದಿಗೆ ಸೆಣೆಸುತ್ತಿರುವ ಯೋಧರಂತೆ, ತನ್ನ ಸಹಚರ ತೀರಿ ಹೋದನೆಂದು ದುಃಖಿಸುತ್ತ ಕುಳಿತರೆ ಕೊರೋನಾ ಎಂಬ ಶತ್ರು ಈ ಯೋಧನನ್ನೇ ತಿಂದು ಹಾಕುತ್ತದೆ. ಕಿಸೆಯಲ್ಲಿನ ಕಾಡತೂಸು ಮುಗಿಯುವ ತನಕ ಕಾದಾಡಲೇಬೇಕು.

ಎಷ್ಟು ನೋವುಗಳಿವೆ? ಎಷ್ಟು ಕಣ್ಣೀರ ಕಥೆಗಳಿವೆ? ಬಿಟ್ಟು ಹೋಗುತ್ತಿರುವ ಬೆಂಗಳೂರಿಗೆ ಹೇಳಲು ಏನಾದರೂ ಮಾತುಗಳು ಉಳಿದಿವೆಯೇ? ಈ ವಲಸೆಯವರ ದುರಾದೃಷ್ಟ ನೋಡಿ, ಇಲ್ಲಿ ಕರ್ನಾಟಕದವರು ಕಳುಹಿಸಲು ಸಿದ್ಧರಿದ್ದರೂ ಇವರ ರಾಜ್ಯದವರು ಇವರನ್ನು ಸ್ವಾಗತಿಸಲು ತಯಾರಿಲ್ಲ.

ಲಾಕ್ ಡೌನ್ ಏನೋ ಸಡಿಲವಾಯಿತು. ಆದರೆ ಕೊರೋನಾದ ಅಟ್ಟಹಾಸ ಕಡಿಮೆಯಾಗುತ್ತಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಮದ್ಯದ ಅಮಲಿನಲ್ಲಿ ತೇಲುತಿರುವ ಈ ಲೋಕ, ಇದೇ ಸಮಾಜದ ಇನ್ನೊಂದು ಜನರಿಗೆ ಕಂಟಕವಾಗಿ ಸರಕಾರಕ್ಕೆ ಆದಾಯದ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿ “ಮಗ ಎಲ್ಲ ಬಿಟ್ಟ ಭಂಗೀ ನೆಟ್ಟ” ಎನ್ನುವಂತಹ ಆಡಳಿತದ ನಿಲುವುಗಳು. ಸಿಕ್ಕೀತೋ ಸಿಗಲಾರದೋ ಎಂದು ಮುಗಿಬಿದ್ದು ಕುಡಿಯುವ ಮದ್ಯ ಪ್ರಿಯರು ಈ ಅಮಲಿನಲ್ಲಿ ತೇಲಿ ಸುರಕ್ಷಿತ ಅಂತರದ ಖಬರು ಇಲ್ಲದೇ ಸಿಕ್ಕ ಸಿಕ್ಕಲ್ಲಿ ಸೋಂಕು ತಂದೊಡ್ಡಬಹುದಾದ ಅಪಾಯ.

******

ಲಾಕ್ ಡೌನಿನ ಅವಧಿಯಲ್ಲಿ ಅಷ್ಟಾಗಿ ಕೆಲಸವಿಲ್ಲದ ನಾನು ಬಹಳ ದಿನಗಳ ನಂತರ ನಮ್ಮ ಬಂಧುಬಳಗ ದೂರದ ಸಂಬಂಧಿಗಳು, ಅಕ್ಕನ ಮಕ್ಕಳು ಅಣ್ಣನ ಮಕ್ಕಳು ಎಸ್ಸೆಸ್ಸೆಲ್ಸಿ ಹಿಡಿದು ಕಾಲೇಜು ದಿನಗಳ ಡಿಗ್ರಿ ಓದುವಾಗಿನ ಎಲ್ಲ ಗೆಳೆಯರಿಗೆ surprise ಎನ್ನುವಂತೆ ಕರೆ ಮಾಡಿ ಹಳೆಯ ನೋವು ನಲಿವು ಹಂಚಿಕೊಂಡೆ, ಈಗ ಅವರೂ ಬಿಡುವಾಗಿದ್ದುದರಿಂದ ಮನಸಿಗೆ ತೃಪ್ತಿಕರವಾಗುವಷ್ಟು ಮಾತನಾಡಿ ಈ ನಾಗಾಲೋಟದ ಬದುಕಿನಲ್ಲಿ ಹೇಳದೇ ಉಳಿದ ಅಲ್ಲಲ್ಲಿ ತುಂಡಾದ ಮಾತುಗಳನ್ನು ಜೋಡಿಸಿ ಸಂಬಂಧಗಳಿಗೆ ಮತ್ತೆ ಬೇರು ಮೂಲದಿಂದ ಜೋಡಿಸಿದಂತೆ ಅನಿಸಿತು! ಎಲಾ ಕರುಣೆಯ ಕಾಲವೇ ಕರೋನಾವೊಂದು ಬರದೇ ಹೋಗಿದ್ದರೆ ನಾನು ಬದುಕಿನ ನಾಗಾಲೋಟದ ಫೋರ್ಸಿಗೆ ಎಲ್ಲಿಗೆ ಹೋಗಿ ಬಿದ್ದಿರುತ್ತಿದ್ದೆ!? ನೋಡ ನೋಡುತ್ತಿದ್ದಂತೆ ಬೆಳೆದ ಅಕ್ಕನ ಮಕ್ಕಳು ಒಬ್ಬರು ಜೈಲರು ಇಬ್ಬರು ಟೀಚರ್ ಇನ್ನೊಬ್ಬರದು ಐ ಎ ಎಸ್ ತಯಾರಿ… ಗೆಳೆಯನ ಸಂಸಾರ, ಹತ್ತಿರದ ಸಾವುಗಳು, ಯಾರ ಸಾವಿಗೂ ಹೋಗದ ನನ್ನ ಅಸಹಾಯಕತೆ, ಪಾಪ ಪ್ರಜ್ಞೆ ಎಲ್ಲ ಮೂಡಿ ಅಕ್ಷರಶಃ ಕಣ್ಣೀರಾದೆ. ಹಾಗೆ ಕೊರೋನಾ ಕೊಟ್ಟ ಪ್ರೈವಸಿಗೊಂದು ತ್ಯಾಂಕ್ಸ್ ಕೂಡ ಹೇಳಿದೆ.

ಹೀಗೆ ನನ್ನ ಇನ್ನೊಬ್ಬ ಹಳೆಯ ದೋಸ್ತು ಕಾರಣಾಂತರಗಳಿಂದ ಭಯಂಕರ ಕುಡುಕನಾಗಿ ಬಿಟ್ಟಿದ್ದ. ಮೂವತ್ತನೇ ವಯಸ್ಸಿಗೆ ಬಿ. ಪಿ. ಶುಗರು ಬಂದು ವಿಪರೀತವಾಗಿ ಒಂದು ಸಲ ಸಣ್ಣ ಸ್ಟ್ರೋಕ್ ಗೂ ಒಳಗಾಗಿ ನಾಲಿಗೆ ಶಕ್ತಿ ಕಳೆದುಕೊಂಡು ಈಗ ಕುಡಿಯದಿದ್ದರೂ ಕುಡಿದವರಂತೆ ಮಾತನಾಡುತ್ತ ಜೀವ ತೇಯುತ್ತಿದ್ದಾನೆ. ಆಸ್ಪತ್ರೆಯಿಂದ ಬಂದ ಮಾರನೆ ದಿನವೇ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸುತ್ತ ಕುಡಿಯುತ್ತ, ತೊದಲುತ್ತ, ಸಾಗಿರಲು ಈ ಕೊರೋನಾ ಬಂದು ಶರಾಬು ನಿಂತೋಯ್ತಲ್ಲ ನನಗೆ ತಕ್ಷಣವೇ ಇವನ ನೆನಪಾಗಿ ಪ್ರತಿ ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಫೋನು ಮಾಡಿ ವಿಚಾರಿಸಿಕೊಳ್ಳುತ್ತಿದ್ದೆ. ಅವನೂ ಸಹಜವಾಗಿ ಮಾತನಾಡುತ್ತ ನಾನೊಂದು ದಿನ ಮಾತಿನ ಮಧ್ಯ ಅವನನ್ನು ಅವನಿಗೆ ನೋವಾಗದಂತೆ ವಿಚಾರಿಸಿದೆ.

ಏನ್ರಿ… ಕಂಟ್ರೀ ಸಾರಾಯಿ ಜೋರಾ? ಎಂದು ಕೇಳಿದೆ. ಈ ಗೆಳೆಯ ಹೇ.. ಹೇ ಇಲ್ಲಪ್ಪ ಕಂಟ್ರಿ ವಾಸನೇನೆ ಆಗಲ್ಲ ಅಂದ. ಇವನಿರುವ ಊರಿನ ಸುತ್ತ ಹಳ್ಳಿಯಲ್ಲಿ ಲಂಬಾಣಿ ತಾಂಡಾಗಳಿವೆ. ಅವರು ಹೇಗೆಂದರೆ ಯಾವ ಸರಕಾರ ಬರಲಿ ಬೀಳಲಿ ಸಾಯಂಕಾಲಕ್ಕೆಂದೇ ತಮ್ಮ ಮನೆಯಲ್ಲಿ ಕಂಟ್ರಿ ದಾರೂ ಮಾಡಿ ಕುಡಿದು, ಉಳಿದರೆ ಮಾರುತ್ತಾರೆ. ನಾನು ಫೋನು ಮಾಡಿದ ಉದ್ದೇಶ ಇವನ withdrawal symptoms ಮತ್ತು behaviour changes ತಿಳಿಯಬೇಕಿತ್ತು. ಒಂದು ಕಾಲಕ್ಕೆ ಕುಡಿತ ಚಟವಾಗಿ ಅಂಟಿಕೊಂಡರೆ ಅದರಿಂದ ಹೊರಬರುವುದು ಕಷ್ಟ. ಇದೊಂದು ವಿಷವರ್ತುಲ, ಸಾಲ ಮಾಡಿ ಕುಡಿಯೋದು. ಸಾಲದಿಂದ ಮನೆಯ ನೆಮ್ಮದಿ ಹಾಳು, ಈ ನೆಮ್ಮದಿ ಹಾಳು ಮಾಡಿಕೊಂಡು ಕುಡಿಯಲಿಕ್ಕೆ ಇನ್ನಷ್ಟು ಸಾಲ ಮಾಡುವುದು….. ಆದರೆ ನೀವು ನಂಬಿ..!! ಈ ಗೆಳೆಯ ಕುಡಿತ ಅದೇಗೋ ಮರೆತುಬಿಟ್ಟಿದ್ದ. ಈ ಶರಾಬು ಮಾರಾಟವಾದ ಮಾರನೆ ದಿನವೇ ನಾನು ಮತ್ತೊಮ್ಮೆ ಕರೆ ಮಾಡಿ ಮಾತನಾಡಿದೆ. ಸಹಜವಾಗಿ ಮಾತನಾಡುವಾಗಲೂ ಅವನು ತೊದಲುವುದರಿಂದ ಅವನ ಪತ್ನಿಯ ಕೈಗೆ ಮೊಬೈಲ್ ಕೊಡಲು ಹೇಳಿ ಹೇಗಮ್ಮ ನಿಮ್ಮ ಯಜಮಾನರು ಎಂದು ಕೇಳಿದೆ. ಅವನು ಕುಡಿತವನ್ನು ಅಕ್ಷರಶಃ ಮರೆತೇ ಬಿಟ್ಟಿದ್ದ.

ಕೆಲವೊಮ್ಮೆ ಈ withdraw symptoms ಗಳು ಆತ್ಮಹತ್ಯೆಯ ಮಟ್ಟಕ್ಕೆ ಹೋಗುವ ಅಪಾಯವಿರುತ್ತದೆ. ಅಂತಹವರಿಗೆ ಚಿಕಿತ್ಸೆ ಕೌನ್ಸೆಲಿಂಗ್ ಅವಶ್ಯವಿರುತ್ತದೆ. ಆದರೆ ಕೆಲವೊಮ್ಮೆ ನಮ್ಮ ಊಹೆಗಳೂ ವಿಜ್ಞಾನ ತರ್ಕಗಳೂ ಬುಡಮೇಲಾಗುತ್ತವೆ. ಅದು ಮನುಷ್ಯನ ಇಚ್ಛಾಶಕ್ತಿಯ ತಾಕತ್ತು, ಪರಿಸ್ಥಿತಿ ತಂದೊಡ್ಡಿದ ವಿಪತ್ತನ್ನೇ ಸವಾಲಾಗಿ ಸ್ವೀಕರಿಸಿ ಎದುರಿಸುವ ಜಾಣ್ಮೆ. ಇದೂ ಕೂಡ ಡಾರ್ವಿನ್ ನ ಬದುಕಿ ಉಳಿಯುವ ಜೀವಿಯ ಒಂದು ತಂತ್ರವೇ ಆಗಿರಲು ಸಾಧ್ಯ. ಲಾಕ್ ಡೌನಿನ ಪರಿಣಾಮವಾಗಿ ಇವನ ಮನೆಯ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತು. ಅಷ್ಟೇನೂ ಆದಾಯವಿಲ್ಲದ ಪುಟ್ಟ ವ್ಯಾಪಾರ ಲಾಕ್ ಡೌನಿನ ಹೊಡೆತಕ್ಕೆ ನಿಂತು ಹೋಗಿತ್ತು. ಮನೆಯಲ್ಲೆರಡು ಪುಟ್ಟ ಮಕ್ಕಳು ತಿನ್ನುವ ಅನ್ನಕ್ಕೆ ತತ್ವಾರವೆಂದು ತಿಳಿದು ಈ ಗೆಳೆಯ ಕುಡಿತದಿಂದ ದೂರ ಉಳಿದ. ಸದ್ಯ ಗೆದ್ದ.. ಆದರೆ ಇವನಂತೆ ಎಲ್ಲರಿಗೂ ಸಾಧ್ಯವೆ!? ಸಾಧ್ಯವಿತ್ತು ಸರಕಾರ ಮನಸು ಮಾಡಬೇಕಿತ್ತು.

ಈ ಕೊರೋನಾ ಮಾಡಿದ ಉಪಕಾರದಲ್ಲಿ ಇದೂ ಒಂದು. ಮದ್ಯಪಾನ ನಿಷೇಧಕ್ಕೊಂದು ಅದ್ಭುತವಾದ platform ಸಿದ್ಧವಾಗಿತ್ತು. ಆದರೆ ಮತ್ತೆ ಸರಕಾರ ಕೈಯಾರೆ ಅದನ್ನು ಹಾಳು ಮಾಡಿಕೊಂಡಿತು.

ನಿಮಗೊಂದು ಮಾತು ಹೇಳುತ್ತೇನೆ. ಅಬಕಾರಿ ಆದಾಯ ಆದಾಯ ಅಂತ ಹೇಳುತ್ತಾರಲ್ಲ, ಇದಕ್ಕಿಂತ ಹೆಚ್ಚಿನ ನಷ್ಟ ಕೌಟುಂಬಿಕ, ಹಣಕಾಸಿನ, ಸಾಮಾಜಿಕ ಆರೋಗ್ಯ ಹೆಚ್ಚು ನಷ್ಟವಾಗುತ್ತದೆ. ಅದನ್ನು ಅಂಕೆ ಸಂಖ್ಯೆಗಳ ಸಮೇತ ಸಮಾಜಶಾಸ್ತ್ರಜ್ಞರು ಸಾಬೀತು ಪಡಿಸಿದ್ದಾರೆ. ಆದರೆ ಈಗ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಜನರಿಗೆ ಮದ್ಯ ಕೊಟ್ಟು ಮಂದ ಅರ್ಥವ್ಯವಸ್ಥೆಯನ್ನು ಮೇಲೆತ್ತಲು ಸರಕಾರ ಬಯಸುತ್ತದೆ….. ಇತ್ತ ಕಡೆ ಇವನು ಕುಡಿದು ಮೇಲೇಳಲಾಗದೆ ಒದ್ದಾಡುತ್ತಿದ್ದಾನೆ.