ಕುಂಬಾರನಿಂದ ತಂದ ಹೊಸ ಕರಿಗೆಯನ್ನು ಸೇಡಿ ಹಾಗೂ ಕೆಂಪು ಜಾಂಜಿನಿಂದ ಸುಂದರವಾಗಿ ಹಲಿಹೊಯ್ದು, ಹೊಸ ಇರಿಕೆಯ ಮೇಲೆ ತುಲಸಿ ಮನೆಯಲ್ಲಿ ಇಡುತ್ತಾರೆ. ಒಂದು ಕರಿಗೆಗೆ ನೀರು ತುಂಬಿ, ಅದರೊಳಗೆ ಗಿಡಮೂಲಿಕೆಗಳನ್ನು ಹಾಕಿ, ಕರಿಗೆಯ ಬಾಯಿಗೆ ಮಾವಿನ ಕುಡಿಗಳನ್ನಿಟ್ಟು ಅದರ ಮೇಲೆ ಮೊಗೆಕಾಯಿಯಿಟ್ಟು, ಮುಖದಾಕೃತಿ ಬರುವಂತೆ ಕಾಡಿಗೆ ಹಚ್ಚಿ ಬೋರಜ್ಜಿಯನ್ನು ಮಾಡುತ್ತಾರೆ. ಈ ಬೋರಜ್ಜಿ ಬೇರುಬಳ್ಳಿಗಳ ದೇವತೆ. ಬೋರಜ್ಜಿ ಕರಿಗೆಯ ಸುತ್ತ ಬಳ್ಳಿಗಳ ಹಲಿ ಇರಲೇಬೇಕು. ಈ ಬಳ್ಳಿಗಳ ಹಲಿಯೇ ಔಷಧಿಗುಣದ ಬಳ್ಳಿಬೇರುಮರಗಳ ಸಂಕೇತವಾಗಿದೆ.
ದೀಪಗಳ ಹಬ್ಬ ದೀಪಾವಳಿಯಾದ ಇಂದು ದೊಡ್ಡಹಬ್ಬದ ಬೋರಜ್ಜಿ ಮತ್ತು ಬಲೀಂದ್ರರಾಯ ಕುರಿತು ಅಕ್ಷತಾ ಕೃಷ್ಣಮೂರ್ತಿ ಬರಹ
ದೀಪಾವಳಿ ಹಬ್ಬ ಎಂದರೆ ನಮ್ಮ ನಾಡಿನ ತುಂಬ ಸಂಭ್ರಮದಿಂದ ಆಚರಿಸುವ ವಿಶೇಷ ಹಬ್ಬ. ಬೆಳಕಿನಹಬ್ಬ ಎಂದು ಕರೆಯಲ್ಪಡುವ ದೀಪಾವಳಿ, ಉತ್ತರಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ದೊಡ್ಡಹಬ್ಬ ಎಂದೇ ಹೆಸರಾಗಿದೆ. ಆಶ್ವಿಜ ಬಹುಳ ದ್ವಾದಶಿಯಿಂದ ಆರಂಭವಾಗುವ ಹಬ್ಬ ಕಾರ್ತಿಕ ಶುದ್ಧ ಪಂಚಮಿಯವರೆಗೂ ಹರಡಿಕೊಳ್ಳುತ್ತದೆ. ದೀಪಾವಳಿ ಹಬ್ಬ ಸದಾ ವೈಶಿಷ್ಟಪೂರ್ಣವಾದದ್ದು; ಯಾಕೆಂದರೆ ಈ ಹಬ್ಬ ಪೌರಾಣಿಕ, ಐತಿಹಾಸಿಕ ಹಾಗೂ ಜಾನಪದ ಆಚರಣೆಗಳ ಸುತ್ತ ಬೆಸೆದುಕೊಂಡಿದೆ.
ಜಾನಪದೀಯರ ದೀಪಾವಳಿಯ ಪ್ರಮುಖ ಆಕರ್ಷಣೆ ಬಲೀಂದ್ರ ಮತ್ತು ಬೋರಜ್ಜಿ ಬರುವುದು ಆಗಿದೆ.
ಮುತ್ತಿನ ಹೊಸ ಮಣೆ ಮ್ಯಾಲೆ
ಚಿಕ್ಕ ಬಲಿವೇಂದ್ರ ಕುಳ್ಳಿರಲೆ
ಚಿಕ್ಕ ಬಲಿವೇಂದ್ರಗೆ ಎತ್ತಿದರೆ ಮುತ್ತಿನಾರತಿಯಾ.
ಎಂದು ಹಾಡುವುದರ ಮೂಲಕ ಕರಾವಳಿಯ ದೀಪಾವಳಿಯಲ್ಲಿ ಬಲೀಂದ್ರ ಮತ್ತು ಬೋರಜ್ಜಿ ಪೂಜಿಸಲ್ಪಡುತ್ತಾರೆ. ಬೆಳೆ ದೇವನಾದ ಬಲೀಂದ್ರನನ್ನು, ಸಿರಿಯೊಡತಿಯಾದ ಲಕ್ಷ್ಮಿಯನ್ನು, ಬಳ್ಳಿ ಬೇರಿನ ಮೂಲ ದೇವತೆಯಾದ ಬೋರಜ್ಜಿಯನ್ನು ಸ್ವಾಗತಿಸುವ ದೀಪಾವಳಿ ‘ದೊಡ್ಡಹಬ್ಬ’ವಾಗಿದೆ. ಧನತ್ರಯೋದಶಿಯನ್ನು ನಮ್ಮ ಜನಪದೀಯರು ನೀರು ತುಂಬುವ ಹಬ್ಬ, ಕರಗಿ ಕುಳ್ಳಿಸುವ ಹಬ್ಬ ಎಂದು ಕರೆಯುವುದು ರೂಢಿ. ಈ ದಿನ ಸಂಜೆ ಬಚ್ಚಲು ಮನೆಯನ್ನು ಸಾರಿಸಿ, ನೀರು ಕಾಯಿಸುವ ಹಂಡೆಯನ್ನು ತೊಳೆದು ಹಲಿ ಹಾಕುತ್ತಾರೆ. ಹಂಡೆಯ ಕಂಠದ ಸುತ್ತಲೂ ಹಿಂಡ್ಲಕಾಯಿ ಬಳ್ಳಿ ಕಟ್ಟಿ ಗೊಂಡೆ ಹೂವಿನ ಹಾರದಿಂದ ಸಿಂಗರಿಸುತ್ತಾರೆ. ಈ ಹಂಡೆಯನ್ನು ಒಲೆ ಮೇಲಿಟ್ಟು ಜಾಗಟೆ ಗಂಟೆ ಸದ್ದಿನೊಂದಿಗೆ ಹಂಡೆಗೆ ನೀರು ತುಂಬುತ್ತಾರೆ. ಕುಂಬಾರನಿಂದ ತಂದ ಹೊಸ ಕರಿಗೆಯನ್ನು ಸೇಡಿ ಹಾಗೂ ಕೆಂಪು ಜಾಂಜಿನಿಂದ ಸುಂದರವಾಗಿ ಹಲಿಹೊಯ್ದು, ಹೊಸ ಇರಿಕೆಯ ಮೇಲೆ ತುಲಸಿ ಮನೆಯಲ್ಲಿ ಇಡುತ್ತಾರೆ. ಒಂದು ಕರಿಗೆಗೆ ನೀರು ತುಂಬಿ, ಅದರೊಳಗೆ ಗಿಡಮೂಲಿಕೆಗಳನ್ನು ಹಾಕಿ, ಕರಿಗೆಯ ಬಾಯಿಗೆ ಮಾವಿನ ಕುಡಿಗಳನ್ನಿಟ್ಟು ಅದರ ಮೇಲೆ ಮೊಗೆಕಾಯಿಯಿಟ್ಟು, ಮುಖದಾಕೃತಿ ಬರುವಂತೆ ಕಾಡಿಗೆ ಹಚ್ಚಿ ಬೋರಜ್ಜಿಯನ್ನು ಮಾಡುತ್ತಾರೆ. ಈ ಬೋರಜ್ಜಿ ಬೇರುಬಳ್ಳಿಗಳ ದೇವತೆ. ಬೋರಜ್ಜಿ ಕರಿಗೆಯ ಸುತ್ತ ಬಳ್ಳಿಗಳ ಹಲಿ ಇರಲೇಬೇಕು. ಈ ಬಳ್ಳಿಗಳ ಹಲಿಯೇ ಔಷಧಿಗುಣದ ಬಳ್ಳಿಬೇರುಮರಗಳ ಸಂಕೇತವಾಗಿದೆ. ಬೋರಜ್ಜಿಯ ಪಕ್ಕದಲ್ಲೇ ಇನ್ನೊಂದು ಕರಿಗೆಯಲ್ಲಿ ಬೆಣತಕ್ಕಿಯನ್ನು ತುಂಬಿ ಕರಿಗೆಯ ಬಾಯಿಗೆ ಮಾವಿನ ಕುಡಿಯಿಟ್ಟು ಸುಲಿದ ತೆಂಗಿನ ಕಾಯಿ ಅದರ ಮೇಲಿಟ್ಟು, ಬಂಗಾರದ ಸಣ್ಣ ಆಭರಣವನ್ನು ಕರಿಗೆಯ ಕೊರಳಿಗೆ ಹಾಕುತ್ತಾರೆ. ಇದು ಕೃಷಿಕರಿಗೆ ಸಿರಿಯನ್ನು ಒದಗಿಸುವ ಲಕ್ಷ್ಮೀ ದೇವತೆಯಾಗಿ ಪೂಜಿಸಲ್ಪಡುತ್ತದೆ.
ನರಕ ಚತುರ್ದಶಿಯ ದಿನ ನೀರು ಮೀಯುವ, ಅವಲಕ್ಕಿ ತಿನ್ನುವ, ಬಲೀಂದ್ರ ಬರುವ ದಿನವೆನ್ನುತ್ತಾರೆ. ಅಂದು ಮುಂಜಾನೆ ಛತ್ರಿಯನ್ನು ಹಿಡಿದ ಬಲೀಂದ್ರ ದಂಪತಿಗಳ ಮೂರ್ತಿಗಳನ್ನು ಮಾಡಿ ಬಿಸಿಲಲ್ಲಿ ಒಣಗಿಸಿ, ಅದಕ್ಕೆ ಕೆಂಪು ಜಾಂಜಿನ ಬಣ್ಣ ಬಳಿದು ಗೊಂಡೆ ಹೂವಿನಿಂದ ಸಿಂಗರಿಸಿ ಬೋರಜ್ಜಿಯ ಪಕ್ಕದಲ್ಲಿಡುತ್ತಾರೆ.
ದೀಪಾವಳಿಯ ಹಬ್ಬದಲ್ಲಿ ಬೆಳೆಯ ದೇವತೆಯಾದ ಬಲೀಂದ್ರ ಕುಳ್ಳುವ ಪೀಠ ಹಾಗೂ ಅವನ ಕೋಟೆಯನ್ನು ನೋಡುವುದೇ ಚಂದ. ತುಳಸಿಕಟ್ಟೆಯ ಮುಂದೆ ಕೆಮ್ಮಣ್ಣು ಹಾಗೂ ಸೇಡಿ ಮಣ್ಣನ್ನು ಕಲಿಸಿ ವೃತ್ತಾಕಾರದ ಪೀಠವನ್ನು ಮಾಡಿ, ಅದರ ಮೇಲೆ ಹಿಂಡ್ಲಕಾಯಿಯನ್ನು ನೆಟ್ಟಗೆ ನಿಲ್ಲಿಸುವರು. ಅದನ್ನು ಹ್ವೊಂಡೆ ಎನ್ನುವರು. ಇದು ಬಲೀಂದ್ರನ ಕೋಟೆ ಎಂಬುದು ಜನಪದೀಯರ ನಂಬಿಕೆ. ದೀಪಾವಳಿ ಸಮಯದಲ್ಲಿ ಬಲೀಂದ್ರ ತನ್ನ ರಾಜ್ಯಕ್ಕೆ ಮೂರು ದಿನಗಳ ಮಟ್ಟಿಗೆ ಆಗಮಿಸಿ, ತನ್ನ ಕೋಟೆಯನ್ನೇರಿ ರಾಜ್ಯ ಸಿರಿಯನ್ನು ನೋಡುವನು ಎಂಬ ನಂಬಿಕೆಯಿದೆ. ನಂತರದ ಅಮವಾಸ್ಯೆಯ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಡಗರವಿರುತ್ತದೆ. ದೀಪ ಬೆಳಗಿ ಪೂಜೆ ಸಲ್ಲಿಸುವುದರ ಮೂಲಕವಾಗಿ ಕತ್ತಲನ್ನು ತೊಲಗಿಸಿ ಮನೆಯಲ್ಲಿ ಧನ ಧಾನ್ಯ ಹೆಚ್ಚಾಗುವುದೆಂಬ ನಂಬಿಕೆ ಇದೆ. ಬಲಿಪಾಡ್ಯದ ದಿನದಂದು ಗೋಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ದನಕರುಗಳಿಗೆ ಶೃಂಗಾರ ಮಾಡಿ ಪೂಜಿಸಲಾಗುತ್ತದೆ. ಕೊಟ್ಟಿಗೆ ಪೂಜೆಯನ್ನು ಸಹ ಈ ದಿನವೇ ಮಾಡಲಾಗುತ್ತದೆ.
ದೀಪಾವಳಿ ಕೃಷಿಕರ ಹಬ್ಬವಾಗಿ ಜಾನಪದೀಯವಾಗಿ ಹೆಚ್ಚು ಮಹತ್ವವುಳ್ಳದ್ದಾಗಿದೆ. ದೀಪಾವಳಿಗೆ ಅಗತ್ಯವಾಗಿ ಬೇಕಾಗುವ ಗಿಡಮೂಲಿಕೆಗಳು, ಹಿಂಡ್ಲಕಾಯಿ ಬಳ್ಳಿ, ಗೊಂಡೆ ಹೂವು, ಹಿಟ್ಟಿನ ದೀಪಗಳು, ಕೆಮ್ಮಣ್ಣು, ಶೇಡಿ ಮಣ್ಣು, ಕಹಿಮದ್ದಿಗೆ ಬೇಕಾಗುವ ಸಾಮಾನುಗಳನ್ನೆಲ್ಲ ಒಟ್ಟಾಗಿ ಸೇರಿಸುವಲ್ಲಿ ಆನಂದವಿದೆ. ಕೇರಿಯ ಮನೆಗಳು ಪರಸ್ಪರ ಸಾಮಾನು ಸೇರಿಸುವಲ್ಲಿ ಸಹಕರಿಸುವ ರೀತಿ ಪರಸ್ಪರ ಬಾಂಧವ್ಯ ಹೆಚ್ಚಿಸುತ್ತದೆ. ಹೀಗಾಗಿ ದೀಪಾವಳಿ ಹಬ್ಬ ಜನಪದರನ್ನು ಒಟ್ಟಾಗಿ ಸೇರಿಸಿ ಒಗ್ಗಟ್ಟು ಸಾಕ್ಷೀಕರಿಸುವ ಹಬ್ಬವಾಗಿಯೂ ಗಮನ ಸೆಳೆಯುತ್ತದೆ.

ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ

