ಅಲ್ಲಿಂದ ಸ್ವಲ್ಪ ದೂರ ಸೂರ್ಯನ ಕಿರಣ ಬಿದ್ದು, ಗಾಳಿಯೂ ಸೋಕಿ ತುಸು ದಣಿವು ಕಡಿಮೆಯಾಯಿತು. ಮತ್ತೆ ಮುಂದುವರೆದಂತೆ ತುಸು ಇಳಿಜಾರಿಗೆ ಸಾಗಿದ ದಾರಿ ಮತ್ತೆ ಸ್ವಲ್ಪ ಹೆಚ್ಚೇ ಏರುಹಾದಿಯಲ್ಲಿ ಕರೆದುಕೊಂಡುಹೋಯಿತು. ಅದು ತಲುಪಿದ್ದು ದೊಡ್ಡ ದೊಡ್ಡ ಬಂಡೆಗಳ ಬಳಿ. ಅಲ್ಲಿಂದ ಮುಂದೆ ಯಾವ ದಾರಿಯಿರಲಿಲ್ಲ. ಹತ್ತೋಕೆ ಆಗುತ್ತೋ ಇಲ್ವೋ ಅನ್ನೋ ಹಾಗಿದ್ದ ಬಂಡೆಗಳು. ಇಲ್ಲಿಂದ ಮುಂದೆ ಮುಂದಿನ ೨೦೦—೩೦೦ ಮೀಟರಿನ ದಾರಿ ತುಸು ಕಠಿಣವಾಗೇ ಇತ್ತು. ಹೆಜ್ಜೆ ಇಡೋದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಒಂದು ನಾಲ್ಕು ಮೂಳೆಗಳು ರಿಪೇರಿಗೆ ಹೋಗೋದು ಗ್ಯಾರಂಟಿ. ಅಲ್ಲಿಂದಲೂ ಗಣೇಶ ಏನೂ ಕಾಣಿಸುತ್ತಿರಲಿಲ್ಲ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

ದಂಡಕಾರಣ್ಯದ ದಟ್ಟ ಕಾಡು. ತಮಾಷೆಗಲ್ಲ. ನಿಜಕ್ಕೂ ಇದು ರಾಮಾಯಣದ ದಂಡಕಾರಣ್ಯ. ಇವತ್ತಿಗೂ ದಟ್ಟ ಕಾಡೇ. ಅದರ ನಡುವೆ ಕಾಡಿನಿಂದ ಧುತ್ತನೆ ಮೇಲೆದ್ದಂತಹ ಕಲ್ಲಿನ ಬೆಟ್ಟ. ಅದರ ಮೇಲೆ ಒಬ್ಬರೋ ಇಬ್ಬರೋ ಕೂರಲು ಆಗುವಂತಹ ಸಣ್ಣ ಜಾಗ. ಅಲ್ಲೊಂದು ಸಾವಿರ ವರ್ಷಗಳಷ್ಟು ಹಳೆಯದಾದ ಗಣೇಶನ ಮೂರ್ತಿ. ಅದರ ಮೇಲೆ ಪೂಜೆ ಮಾಡಿರುವ ಸಾಕ್ಷಿಯಾಗಿ ಕುಂಕುಮ. ಮೇಲೆ ಸೂರಿಲ್ಲ ಬರೀ ಆಕಾಶ, ಸುತ್ತ ಹಸಿರು. ಆಕಾಶ ತತ್ತ್ವದ ಸಾಕಾರ ಮೂರ್ತಿ ಗಣೇಶನಿಗೆ ಇದಕ್ಕಿಂತ ಸೊಗಸಾದ ಜಾಗ ಬೇಕೆ?

ಇದು ಛತ್ತೀಸಗಢದ ಬಸ್ತರ್‌ ಡಿವಿಜನ್ನಿನ ದಂತೆವಾಡ ಜಿಲ್ಲೆಯಲ್ಲಿರುವ ಧೋಲ್ಕಲ್‌ ಗಣೇಶ, ಬಸ್ತರ್‌ ಬುಡಕಟ್ಟು ಜನರ ಜಾಗ. ಅಲ್ಲಿರುವ ಬಹುಪಾಲು ಜನರು ಬೇರೆ ಬೇರೆ ಬುಡಕಟ್ಟು ಪಂಗಡಗಳಿಗೆ ಸೇರಿದವರೇ. ಗಣೇಶ ಎಲ್ಲ ಕಾಲಕ್ಕೂ ಎಲ್ಲರಿಗೂ ಬೇಕಾದ ದೇವರು. ಶಾಸ್ತ್ರೋಕ್ತವಾಗಿ ಪೂಜಿಸುವವರಿಂದ ಶುರು ಮಾಡಿ ಆಸ್ತಿಕರೆಲ್ಲರಿಗೂ ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ ಒಲಿಯುವ ದೇವರು. ಕೆಲವು ವರ್ಷಗಳ ತನಕವೂ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದ್ದ ಬಸ್ತರ್‌ ಬುಡಕಟ್ಟು ಜನರ ದೈವವೂ ಗಣೇಶನೇ.

೧೯೩೬ ರಲ್ಲಿ ಬ್ರಿಟಿಷ್‌ ಭೂಗರ್ಭಶಾಸ್ತ್ರ ಪರಿಣತ ಕ್ರೂಕ್ ಶಾಂಕ್ ಆ ಜಾಗವನ್ನು ಸರ್ವೇ ಮಾಡುವಾಗ ಗಣೇಶ ಮೊದಲ ಬಾರಿಗೆ ಜಗತ್ತಿಗೆ ತಿಳಿದಿದ್ದು. ಆಮೇಲೂ ಸ್ವಾತಂತ್ಯ್ರಾ ನಂತರವೂ ಯಾರೂ ಅದರ ಬಗ್ಗೆ ಹೆಚ್ಚು ಅಧ್ಯಯನ ಮಾಡಲಿಲ್ಲ. ಸುಲಭವಾಗಿ ತಲುಪಲು ಸಾಧ್ಯವಿಲ್ಲದ್ದೂ ಒಂದು ಕಾರಣವಿರಬಹುದು. ನಕ್ಷಲ್‌ ಹಾವಳಿ ವಿಪರೀತ ಇರುವ ಜಿಲ್ಲೆಯಾಗಿದ್ದರಿಂದ ಯಾರೂ ಅಲ್ಲಿಗೆ ಹೋಗುವ ದುಸ್ಸಾಹಸ ಮಾಡುತ್ತಿರಲಿಲ್ಲ. ೨೦೧೨ ರಲ್ಲಿ ಸ್ಥಳೀಯ ಪತ್ರಕರ್ತನೊಬ್ಬ ಅಲ್ಲಿಗೆ ತಲುಪಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುವ ತನಕ ಯಾರಿಗೂ ಅದರ ಇರುವಿನ ಅರಿವಿರಲಿಲ್ಲ. ಸ್ಥಳೀಯ ಜನರಿಗೆ ತಿಳಿದಿದ್ದರೂ ಅದು ಹೊರಪ್ರಪಂಚಕ್ಕೆ ಗೊತ್ತಾಗಿದ್ದು ಹೀಗೆ. ಆಮೇಲೆ ನಿಧಾನಕ್ಕೆ ಜನ ಹೋಗಲಾರಂಭಿಸಿದರು. ಛತ್ತೀಸಗಢ ಪ್ರವಾಸೋದ್ಯಮ ಇಲಾಖೆ ಕೂಡ ಅದನ್ನು ಟ್ರೆಕ್ಕಿಂಗ್‌ ಸ್ಥಳವಾಗಿ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತಿತ್ತು.

೨೦೧೭ ಜನವರಿಯಲ್ಲಿ ಒಂದು ಸುದ್ದಿ ಪ್ರಕಟ ಆಗಿತ್ತು. ‘ಮಾವೋವಾದಿಗಳಿಂದ ನಾಶವಾದ ೧೦೦೦ ವರ್ಷ ಹಳೆಯ ಚತ್ತೀಸಗಢದ ಗಣೇಶ ಮೂರ್ತಿʼ ಅಂತ. ಅದನ್ನು ಓದಿ ತುಂಬಾ ನೊಂದುಕೊಂಡಿದ್ದೆ. ಅಷ್ಟು ಎತ್ತರದಿಂದ ೧೦೦೦ ವರ್ಷಗಳಿಂದ ಅಲ್ಲಾಡದೇ, ಮಳೆ, ಬಿಸಲು ಗಾಳಿಗೆ ಜಗ್ಗದೆ ಕುಳಿತಿದ್ದ ಗಣಪನನ್ನು ಯಾರೋ ನೀಚರು ಬೆಟ್ಟದ ಮೇಲಿಂದ ತಳ್ಳಿ ಒಡೆದು ಹಾಕಿದ್ದರು. ಯಾರು ಮಾಡಿದ್ದು ಅಂತ ಕಡೆಗೂ ಗೊತ್ತಾಗಲಿಲ್ಲ. ಸ್ಥಳೀಯರು ಬೆಟ್ಟಹತ್ತಿ ಹೋದಾಗ ಗಣೇಶ ಇರಲಿಲ್ಲ. ಅವರು ಕೆಳಗೆ ಬಂದು ಪೋಲೀಸರಿಗೆ ತಿಳಿಸುವ ತನಕ ಯಾರಿಗೂ ಗೊತ್ತೇ ಇರಲಿಲ್ಲ. ನಮ್ಮ ದೇಶದ ಪುರಾತನ ಸಂಪತ್ತನ್ನು ಹೊರಗಿನ ಆಕ್ರಮಣಕಾರರು ಹಲವಾರು ವರ್ಷಗಳು ದೋಚಿ ಇತ್ತೀಚೆಗೆ ಅದರ ಬಗ್ಗೆ ಅರಿವು ಮೂಡುವ ಹೊತ್ತಿನಲ್ಲಿ ನಮ್ಮವರೇ ಹಾಗೆ ಹಾಳು ಮಾಡುವುದು ನಿಜಕ್ಕೂ ಬೇಸರದ ಸಂಗತಿ. ಅನೇಕ ದೇವಾಲಯಗಳಲ್ಲಿ ಶಿಲ್ಪಗಳನ್ನು ಗೀಚಿ, ಕೆರೆದು ಹಾಳು ಮಾಡಿರುವುದನ್ನೂ ನೋಡುತ್ತೇವೆ. ಪುರಾತತ್ವ ಇಲಾಖೆ ಕೆಲವೊಮ್ಮೆ ನಿಜಕ್ಕೂ ಒಳ್ಳೊಳ್ಳೆಯ ಕೆಲಸ ಮಾಡುತ್ತದೆ. ಅದೇ ವರ್ಷ ಫೆಬ್ರವರಿಯಲ್ಲಿ ಈ ಧೋಲ್ಕಲ್‌ ಗಣೇಶನನ್ನು ಮತ್ತೆ ಜೋಡಿಸಿ ಆ ಬೆಟ್ಟದ ಮೇಲೇ ಸ್ಥಾಪಿಸಿದ ಸುದ್ದಿಯನ್ನೂ ಓದಿದೆ.

ಅಂದಿನಿಂದ ಧೋಲ್ಕಲ್‌ ಗಣೇಶ ಅಂದರೆ ನನಗೆ ವಿಪರೀತ ಸೆಳೆತ. ಅಲ್ಲಿಗೆ ಸಾಧ್ಯವಾದರೆ ಒಮ್ಮೆ ಹೋಗಬೇಕು ಅನ್ನುವುದು ಮನಸ್ಸಿನಲ್ಲಿತ್ತು. ಆದರೆ ಒಬ್ಬಳೇ ಹೋಗಲು ಅದೆಷ್ಟು ಸುರಕ್ಷಿತವೋ ಅಲ್ಲವೋ ಅಂತ ಯೋಚಿಸಿಕೊಂಡು ಮುಂದೆ ಹಾಕುತ್ತಾಇದ್ದೆ. ಮೊನ್ನೆ ಇದ್ದಕ್ಕಿದ್ದಂತೆ ಬಸ್ತರಿಗೆ ಒಂದು ವಾರದ ಮಟ್ಟಿಗೆ ಹೋಗಿ ಬರಲು ನಿಶ್ಚಯಿಸಿದೆ. ಅದರ ಮುಖ್ಯ ಕಾರಣ ಗಣೇಶನನ್ನು ಕಾಣುವುದೇ ಆಗಿತ್ತು. ನಾನು ಹೋದ ಮೂರನೇ ದಿನ ಧೋಲ್ಕಲ್‌ ಗಣೇಶನ ಕಡೆಗೆ ಟ್ರೆಕ್ಕಿಂಗ್.

ಚಿತ್ರಕೂಟದಿಂದ ಹೊರಟು ದಂತೆವಾಡವನ್ನು ದಾಟಿ ೧೩ ಕಿ. ಮೀ ಕ್ರಮಿಸಿದರೆ ಸಿಗುವ ಜಾಗ ಫಲಸ್‌ಪಾಲ್ ಎಂಬ ಊರು. ಅಲ್ಲಿಂದಲೇ ಟ್ರೆಕ್ಕಿಂಗ್‌ ಶುರುವಾಗುವುದು. ಅಲ್ಲಿ ಸ್ಥಳೀಯರಿಗೆ ಕೆಲಸ ಕೊಡೋ ಉದ್ದೇಶದಿಂದ ಹೋಗುವವರು ಅಲ್ಲಿಂದಲೇ ಗೈಡ್‌ಗಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯಿದೆ. ನನ್ನ ಜೊತೆಯೂ ಒಬ್ಬ ಗೈಡ್‌ ಇದ್ದ. ಸುಮಾರು ೧೧.೩೦ರ ಹೊತ್ತಿಗೆ ಮಟಮಟ ಮಧ್ಯಾಹ್ನ ನಾನು ಬೆಟ್ಟ ಹತ್ತಲು ಆರಂಭಿಸಿದೆ. ಕಾಡು ತುಂಬಾ ದಟ್ಟವಾಗಿರುವುದರಿಂದ ಬಿಸಿಲು ನೇರವಾಗಿ ಬೀಳದಿದ್ದರೂ ಬಿಸಿಲಿನ ಝಳಕ್ಕೆ ಹಾಗೂ ಏರು ದಾರಿಯ ಸುಸ್ತಿಗೆ ಬೆವರಿನ ಸ್ನಾನ. ಪಕ್ಕದಲ್ಲಿ ಹರಿಯುವ ತೊರೆಯಿಂದ ನೀರು ಹನಿಸಿಕೊಂಡು ನಿಧಾನಕ್ಕೆ ಹತ್ತುತ್ತಾ ಹೋದೆ. ನವರಾತ್ರಿ ಸಮಯ ಆಗಿದ್ದುದರಿಂದ ಅನೇಕ ಸ್ಥಳೀಯರು ಬಹುಪಾಲು ಯುವಕ ಯುವತಿಯರು ಬೆಟ್ಟ ಹತ್ತುತ್ತಿದ್ದರು. ಅವರನ್ನು ಹೊರತುಪಡಿಸಿದರೆ ನನ್ನಂತೆ ಹೊರಗಿನಿಂದ ಬಂದವರು ಒಂದಿಬ್ಬರಿದ್ದರು ಅಷ್ಟೇ.

ನನ್ನ ಜೊತೆ ಬಂದ ಗೈಡ್‌ ಇಪ್ಪತ್ತರ ಹುಡುಗ. ಅವನು ಗಣೇಶ ಇಲ್ಲಿಗೆ ಹೇಗೆ ಬಂದ ಅಂತ ಒಂದು ಕಥೆ ಹೇಳಿದ. ಕಥೆಗಳೆಂದರೆ ನನಗೆ ನೂರು ಕಿವಿ. ಹಿಂದೆ ಒಮ್ಮೆ ಪರಶುರಾಮ ಶಿವನನ್ನು ನೋಡಲು ಹೋದಾಗ ಗಣೇಶ ಅವನನ್ನು ತಡೆದನಂತೆ! ಆಗ ಕೋಪಗೊಂಡ ಪರಶುರಾಮ ಗಣೇಶನೊಡನೆ ಕದನಕ್ಕಿಳಿದ. ಅವರಿಬ್ಬರ ಗುದ್ದಾಟದಲ್ಲಿ ಗಣೇಶನ ದಂತ ಮುರಿದು ಹೋಯಿತಂತೆ. ಅದಕ್ಕೆ ಅವನು ಏಕದಂತನಾದ. ಗಣೇಶನ ದಂತಭಗ್ನದ ಬಗ್ಗೆ ಇರುವ ಕಥೆಗಳಲ್ಲಿ ಇದೂ ಒಂದು. ಪರಶುರಾಮನ ಕೊಡಲಿ ಅಲ್ಲಿ ಬಿದ್ದಿದ್ದರಿಂದ ಆ ಊರಿನ ಹೆಸರು ಫಲಸ್‌ಪಾಲ್. ಧೋಲ್ಕಲ್‌ ಬೆಟ್ಟದ ಮೇಲೇ ಅವರಿಬ್ಬರ ಕಾಳಗ ನಡೆದಿದ್ದು. ಅದರ ನೆನಪಿಗಾಗಿ ಚಿಂಡಕ್‌ ನಾಗವಂಶಿ ರಾಜರು ೧೦ ನೇ ಶತಮಾನದಲ್ಲಿ ಈ ಗಣೇಶನನ್ನು ಅಲ್ಲಿ ಸ್ಥಾಪಿಸಿದರು. ಇಡೀ ಬಸ್ತರ್‌ ಕಬ್ಬಿಣದ ಅದಿರಿಗೆ ಹೆಸರುವಾಸಿ. ಅತ್ಯಂತ ಉತೃಷ್ಟ ಗುಣಮಟ್ಟದ ಹಾಗೂ ಜಗತ್ತಿನ ಅತಿ ಹೆಚ್ಚು ಕಬ್ಬಿಣದ ಅದಿರು ಸಿಗುವ ಜಾಗ ಬಸ್ತರ್‌. ಛತ್ತೀಸಘಢದ ತುಂಬಾ ಅನೇಕ ಕಬ್ಬಿಣದ ಕಾರ್ಖಾನೆಗಳಿವೆ. ಈ ಭಾಗದ ಕಲ್ಲುಗಳಲ್ಲಿ ಕಬ್ಬಿಣ ಹೇರಳವಾಗಿರುವುದರ ಕಾರಣ ಪರಶುರಾಮನ ಕೊಡಲಿ ಇಲ್ಲಿ ಬಿದ್ದಿದ್ದೇ ಎನ್ನುವುದು ಇಲ್ಲಿನ ಜನನಂಬಿಕೆ.

ಸ್ಥಳೀಯರು ಬೆಟ್ಟಹತ್ತಿ ಹೋದಾಗ ಗಣೇಶ ಇರಲಿಲ್ಲ. ಅವರು ಕೆಳಗೆ ಬಂದು ಪೋಲೀಸರಿಗೆ ತಿಳಿಸುವ ತನಕ ಯಾರಿಗೂ ಗೊತ್ತೇ ಇರಲಿಲ್ಲ. ನಮ್ಮ ದೇಶದ ಪುರಾತನ ಸಂಪತ್ತನ್ನು ಹೊರಗಿನ ಆಕ್ರಮಣಕಾರರು ಹಲವಾರು ವರ್ಷಗಳು ದೋಚಿ ಇತ್ತೀಚೆಗೆ ಅದರ ಬಗ್ಗೆ ಅರಿವು ಮೂಡುವ ಹೊತ್ತಿನಲ್ಲಿ ನಮ್ಮವರೇ ಹಾಗೆ ಹಾಳು ಮಾಡುವುದು ನಿಜಕ್ಕೂ ಬೇಸರದ ಸಂಗತಿ.

ನಡೆಯುತ್ತಾ ನಡೆಯುತ್ತಾ ತೊರೆ ಮತ್ತದರ ಜುಳುಜುಳು ಸದ್ದು ದೂರವಾಗುತ್ತಾ ಕಾಡು ದಟ್ಟವಾಯಿತು. ಜೊತೆಗೆ ಏರುದಾರಿಯೂ. ನಡುದಾರಿಯಲ್ಲಿ ಎಲ್ಲಿಯೂ ಸುತ್ತಲಿನ ನೋಟವೇನೂ ಸಿಗುವುದಿಲ್ಲ. ಯಾಕೆಂದರೆ ಮರಗಳ ಛತ್ರಛಾಯೆ ಮೇಲೆಲ್ಲ ಆವರಿಸಿಕೊಂಡಿರುತ್ತದೆ. ಏರು ದಾರಿಯಲ್ಲಿ ಏದುಸಿರು ಬಿಡುತ್ತಾ, ಉಸ್ಸಪ್ಪಾ ಅಂತ ನಿಂತು ನಿಂತು ಸುಧಾರಿಸಿಕೊಳ್ಳುತ್ತಾ ಹೇಗೋ ಮುಂದೆ ಹೆಜ್ಜೆ ಹಾಕಿದೆ. ನಡುವೆ ಒಂದು ಕಲ್ಲುಗಳನ್ನು ಪೇರಿಸಿಟ್ಟಿದ್ದ ಒಂದು ಬಾರ್ಡರ್‌ ತರಹ ಸಿಕ್ತು. ಅದು ದಂತೆವಾಡ ಮತ್ತು ಬಿಜಾಪುರ ಜಿಲ್ಲೆಗಳ ನಡುವಿನ ಗಡಿ. ಅಂದ ಹಾಗೆ ಇದು ನಮ್ಮ ಕರ್ನಾಟಕದ ಬಿಜಾಪುರ ಅಲ್ಲ. ಇದು ಛತ್ತೀಸಗಢದ ಬಿಜಾಪುರ. ಇವತ್ತಿಗೂ ನಕ್ಸಲರ ಕಾರ್ಯಕ್ಷೇತ್ರ. ಇತ್ತೀಚೆಗಿನ ವರ್ಷಗಳಲ್ಲಿ ದಂತೆವಾಡದಲ್ಲಿ ಅವರ ಚಟುವಟಿಕೆ ಕಡಿಮೆ ಆಗಿ ಅವರು ಬಿಜಾಪುರದ ಒಳಭಾಗ ಮತ್ತು ಅಲ್ಲಿಂದ ಮುಂದಿನ ಕಾಡುಗಳಲ್ಲಿ ಸೇರಿಕೊಂಡಿದ್ದಾರೆ ಅನ್ನುತ್ತಾರೆ ಅಲ್ಲಿನ ಜನ. ಅಲ್ಲಿಂದ ಮುಂದೆ ಹೋಗುವ ಮುನ್ನ ಒಂದು ಎಲೆಯನ್ನು ಆ ಗಡಿಯ ಬಳಿ ಹಾಕಿ ಗಣೇಶನನ್ನು ದರ್ಶನ ಮಾಡಿ ಬರುವ ಕಾರ್ಯ ಸುಗಮವಾಗಿ ಆಗಲಿ ಅಂತ ಬೇಡಿಕೊಂಡು ಮುಂದುವರೆಯುವುದು ಅಲ್ಲಿನ ಆದಿವಾಸಿಗಳ ನಂಬಿಕೆ. ಅವರ ಎಲ್ಲಾ ನಂಬಿಕೆಗಳೂ ಪ್ರಕೃತಿಯ ಜೊತೆಗೆ ಹಾಸುಹೊಕ್ಕಾಗಿರುತ್ತದೆ. ನಾನೂ ಹಾಗೇ ಮಾಡಿ ಮುಂದೆ ಹೆಜ್ಜೆ ಹಾಕಿದೆ.

ಅಲ್ಲಿಂದ ಸ್ವಲ್ಪ ದೂರ ಸೂರ್ಯನ ಕಿರಣ ಬಿದ್ದು, ಗಾಳಿಯೂ ಸೋಕಿ ತುಸು ದಣಿವು ಕಡಿಮೆಯಾಯಿತು. ಮತ್ತೆ ಮುಂದುವರೆದಂತೆ ತುಸು ಇಳಿಜಾರಿಗೆ ಸಾಗಿದ ದಾರಿ ಮತ್ತೆ ಸ್ವಲ್ಪ ಹೆಚ್ಚೇ ಏರುಹಾದಿಯಲ್ಲಿ ಕರೆದುಕೊಂಡುಹೋಯಿತು. ಅದು ತಲುಪಿದ್ದು ದೊಡ್ಡ ದೊಡ್ಡ ಬಂಡೆಗಳ ಬಳಿ. ಅಲ್ಲಿಂದ ಮುಂದೆ ಯಾವ ದಾರಿಯಿರಲಿಲ್ಲ. ಹತ್ತೋಕೆ ಆಗುತ್ತೋ ಇಲ್ವೋ ಅನ್ನೋ ಹಾಗಿದ್ದ ಬಂಡೆಗಳು. ಇಲ್ಲಿಂದ ಮುಂದೆ ಮುಂದಿನ ೨೦೦—೩೦೦ ಮೀಟರಿನ ದಾರಿ ತುಸು ಕಠಿಣವಾಗೇ ಇತ್ತು. ಆ ಕಲ್ಲುಗಳೋ ೬೭% ಕಬ್ಬಿಣ ಇರೋ ಹೆಮಟೈಟ್‌ನ ಅದಿರಿರುವ ಕಲ್ಲುಗಳು. ಒಂದು ತರಹಕ್ಕೆ ಕಬ್ಬಿಣದ ಬಂಡೆಗಳು. ಹೆಜ್ಜೆ ಇಡೋದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಒಂದು ನಾಲ್ಕು ಮೂಳೆಗಳು ರಿಪೇರಿಗೆ ಹೋಗೋದು ಗ್ಯಾರಂಟಿ. ಅಲ್ಲಿಂದಲೂ ಗಣೇಶ ಏನೂ ಕಾಣಿಸುತ್ತಿರಲಿಲ್ಲ. ಇಷ್ಟು ದೂರ ಬಂದು ಅವನನ್ನು ನೋಡದೆ ಹೋಗೋದು ಹೇಗೆ? ಕ್ಯಾಮೆರಾ, ಫೋನ್‌ ಎಲ್ಲಾ ಬ್ಯಾಗಿಗೆ ತುಂಬಿಕೊಂಡು ಎರಡು ಕೈಯನ್ನೂ ಬಳಸಿ ಹತ್ತೋಕೆ ಶುರು ಮಾಡಿದೆ. ಪೂಜೆಗೋಸ್ಕರ ಕೈಯಲ್ಲೊಂದು ಕಾಯಿ ಹಿಡಿದುಕೊಂಡು ಬೆಟ್ಟ ಹತ್ತುತ್ತಿದ್ದ ಯುವಕ ಯುವತಿಯರು ಇದ್ದ ಸಣ್ಣ ಜಾಗದಲ್ಲೇ ಸಿಕ್ಕಾಪಟ್ಟೆ ಟ್ರ್ಯಾಫಿಕ್‌ ಜಾಮ್‌ ಮಾಡಿಬಿಡ್ತಾ ಇದ್ದರು. ಪ್ರಾಣಭಯ!

ಜಾಗರೂಕತೆಯಿಂದ ಹೆಜ್ಜೆ ಇಡಬೇಕಿತ್ತು. ಹಾಗೂ ಹೀಗೂ ಗಣೇಶನ ಮುಂದೆ ಹೋಗಿ ನಿಂತಿದ್ದಾಯ್ತು. ಅಹಾ! ಏನು ಸೊಬಗು! ಧೋಲ್‌ ಅಂದರೆ ಡ್ರಮ್/ತಬಲದ ತರಹದ ಸಂಗೀತ ಸಾಧನದ ಹಾಗಿರುವ ಕಲ್ಲಿನ ಮೇಲೆ ಗಣೇಶನ ಮೂರ್ತಿ ಇರುವುದರಿಂದ ಅದರ ಹೆಸರು ಧೋಲ್ಕಲ್‌ ಎಂದಾಗಿದೆ. ನಮ್ಮ ಕನ್ನಡದ ಪದದ ಹಾಗಿದೆ ಅಲ್ವಾ? ಹುಲಿಕಲ್‌, ಧೋಲ್ಕಲ್‌ ಹೀಗೆ. ದೋಲ್+ಕಲ್‌. ಕನ್ನಡಕ್ಕೂ ಏನಾದರೂ ಸಂಬಂಧ ಇದೆಯಾ ಅಂತ ಅಲ್ಲಿಗೆ ಹೋದಾಗಿನಿಂದ ನನಗೆ ಅನ್ನಿಸ್ತಾ ಇತ್ತು. ಅವರ ಎಷ್ಟೊಂದು ಪದಗಳು ಕನ್ನಡದ ಹಾಗೇ ಇವೆ.

ನನ್ನ ಮುಂದೆ ನಾನು ನಿಂತಿರೋ ಜಾಗಕ್ಕೂ ಧೋಲ್ಕಲ್‌ ಗಣೇಶನಿಗೂ ಮಧ್ಯೆ ಒಂದು ಕಂದಕ. ಆಮೇಲೆ ಗಣೇಶ ಇರೋ ಧೋಲ್‌ನ ಹಾಗಿರುವ ಕಡಿದಾದ ಕರಿ ಶಿಲೆ. ಅದರ ಮೇಲೆ ಗಣೇಶ. ಮತ್ತೊಬ್ಬರೋ ಇಬ್ಬರೋ ಕೂರಬಹುದಾದ ಜಾಗ ಅಷ್ಟೇ. ಅದನ್ನು ಹತ್ತಲು ಕಡಿದಾದ ಒಂದು ಶಿಲೆ. ಎಲ್ಲಿ ಹಿಡಿದುಕೊಳ್ಳಬೇಕು, ಕಾಲು ಎಲ್ಲಿ ಇಡಬೇಕು, ಹೇಗೆ ಅದನ್ನು ಹತ್ತಿ ಗಣೇಶನನ್ನು ಮುಟ್ಟೋದು. ಸಿಕ್ಕಾಪಟ್ಟೆ ತಲೆಬಿಸಿ ಆಯಿತು. ಆ ಶಿಲೆಯ ಆಚೆ, ಅಕ್ಕಪಕ್ಕದಲ್ಲೆಲ್ಲಾ ಹಸಿರೋ ಹಸಿರಿನ ದಟ್ಟ ಕಾಡು. ಸ್ವಲ್ಪ ಹೊತ್ತು ಗಣೇಶ ಮತ್ತು ಅವನನ್ನು ಪೂಜೆ ಮಾಡಲು ಬರುವ ಸ್ಥಳೀಯರನ್ನು ನೋಡುತ್ತಾ ಕುಳಿತಿದ್ದೆ. ಯಾರಾದರೂ ಯಾಕಾದರೂ ಇಂತಹ ಜಾಗದಲ್ಲಿ ಬಂದು ಗಣೇಶನ್ನ ಸ್ಥಾಪಿಸಿದ್ದಾರೆ? ಸುಮಾರು ೪ ಅಡಿಯ, ೫೦೦ ಕೆ ಜಿ. ತೂಗುವ ಮೂರ್ತಿಯನ್ನು ಹೇಗಾದರೂ ಇಲ್ಲಿಗೆ ಸಾಗಿಸಿದರು? ಇನ್ನು ೨೦೧೭ ರಲ್ಲಿ ಅದು ಒಡೆದು ಹೋದಾಗ ಪುರಾತತ್ವ ಇಲಾಖೆಯವರು ಅದನ್ನು ಹೇಗೆ ಜೋಡಿಸಿರಬಹುದು? ೫೭ ಚೂರುಗಳಾಗಿತ್ತಂತೆ. ಅಲ್ಲಿನ ಕಲ್ಲು ಹಾಗೂ ಶಿಲ್ಪದ ಗ್ರಾನೈಟ್‌ ಕಲ್ಲಿನ ರಚನೆ ಬೇರೆಯಾದ್ದರಿಂದ ಅವರಿಗೆ ಹುಡುಕಲು ಸುಲಭವಾಗಿ ಸಿಕ್ಕಿದೆ. ಕೊನೆಗೆ ಒಂದು ಕಿವಿ ಸಿಕ್ಕಿರಲಿಲ್ಲವಂತೆ. ಅದನ್ನು ಜೋಡಿಸಲು ಸಹಾಯ ಮಾಡಿದ ಪುರಾತತ್ತ್ವತಜ್ಞ -ಅರುಣ್‌ಕುಮಾರ್‌ ಶರ್ಮಾ ಅವರು ಹತ್ತು ಸಾವಿರ ಬಹುಮಾನವನ್ನೂ ಘೋಷಿಸಿದರು. ಒಬ್ಬ ಪೋಲಿಸ್‌ ಇನ್ಸಪೆಕ್ಟರ್‌ಗೆ ಕೊನೆಗೂ ಸಿಕ್ಕಿದೆ. ಎಲ್ಲಾ ಜೋಡಣೆ ಆದಮೇಲೆ ಕಡೆಗೂ ಸೊಂಡಿಲಿನ ತುದಿ ಒಂದು ಮಾತ್ರ ಸಿಕ್ಕದೆ ಕಡೆಗೆ ಅದು ಹಾಗೇ ಕೊರತೆಯಾಗಿ ಉಳಿದಿದೆ. ಇದನ್ನೆಲ್ಲಾ ಮರುಜೋಡಿಸಲು ಪೂರ್ತಿ ನಾಲ್ಕು ದಿನ ತಗುಲಿತಂತೆ.

ಮೂರ್ತಿಯನ್ನು ಗಮನಿಸಿದರೆ ಅದು ನಾಗವಂಶೀಯ ರಾಜರ ಶಿಲ್ಪಗಳ ಹಾಗೆಯೇ ಇತ್ತು. ಅದರ ಮುಕುಟ, ಗಣೇಶನ ಹೊಟ್ಟೆಯ ಸುತ್ತ ಕಟ್ಟಿದ ಹಾವು ಪಕ್ಕಾ ನಾಗವಂಶೀಯ ರಾಜರ ಶೈಲಿಯದು. ಅವನು ಲಲಿತಾಸನದಲ್ಲಿ ಕುಳಿತಿದ್ದಾನೆ. ೪ ಕೈಗಳು. ಬಲಗಡೆ ಒಂದು ಕೈಯಲ್ಲಿ ಕೊಡಲಿ, ಒಂದು ಕೈಯಲ್ಲಿ ಜಪಮಣಿ, ಎಡಗೈನ ಒಂದು ಕೈ ಮುರಿದ ದಂತ ಹಾಗೂ ಮತ್ತೊಂದರಲ್ಲಿ ಮೋದಕ ಎನಿಸುವ ವಸ್ತುವಿದೆ. ಕೆಲವರ ಪ್ರಕಾರ ಅದು ಮೋದಕವಲ್ಲ, ಕಬ್ಬಿಣದ ಕೆಲಸ ಮಾಡುವ ಒಂದು ಸಾಧನ. ವಿಶೇಷ ಅಂದರೆ ಅವನ ಯಜ್ಞೋಪವೀತದ ಜಾಗದಲ್ಲಿ ಕಬ್ಬಿಣದ ಸರಪಳಿಯಿದೆ. ಇದರ ಮಹತ್ವ ಏನು ಅಂತ ತಿಳಿಯೋದಕ್ಕೆ ನಾನು ಹಲವಾರು ಗ್ರಂಥಗಳನ್ನು ತಿರುವಿ ಹಾಕಿದೆ. ಕೆಲವರು ಶಿಲ್ಪಿಯ ಸೃಜನಶೀಲತೆ ಇದು ಎಂದರು. ಪ್ರಖ್ಯಾತ ಆರ್ಕಿಯಾಲಜಿಸ್ಟ್‌ ಅರುಣ್‌ ಕುಮಾರ ಶರ್ಮ ಅವರ ಪ್ರಕಾರ ಇದು ಅಸುರೀ ಶಕ್ತಿಗಳನ್ನು ಸರಪಳಿಗಳಲ್ಲಿ ಬಂಧಿಸುವ ಅಗತ್ಯತೆಯ ಸಂಕೇತ. ಆದರೆ ನನಗೆ ಇನ್ನೂ ಸಮರ್ಪಕ ಉತ್ತರ ದೊರೆತಿಲ್ಲ. ಅಲ್ಲಿಯ ಕಬ್ಬಿಣದ ಅದಿರಿನ ಸಂಬಂಧಿತ ಸಂಕೇತವೋ ಗೊತ್ತಿಲ್ಲ.

ಭೋಗಾಮಿ ಆದಿವಾಸಿಗಳು ಧೋಲ್ಕಲ್‌ ಗಣೇಶನನ್ನು ಮೊದಲಿನಿಂದಲೂ ಪೂಜಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಒಬ್ಬ ಮಹಿಳೆ ನಿತ್ಯವೂ ಗಣೇಶನನ್ನು ಪೂಜಿಸುತ್ತಿದ್ದಳು ಎನ್ನುತ್ತಾರೆ.

ನಾನು ಇಬ್ಬಂದಿಯಲ್ಲಿದ್ದೆ. ಗಣೇಶನ ತನಕ ತಲುಪುವ ಶಿಲೆಯನ್ನು ಹತ್ತುವುದೋ ಇಲ್ಲ ಹಾಗೇ ವಾಪಸ್‌ ಹೋಗುವುದೋ. ಏನಾದರು ಹೆಚ್ಚು ಕಡಿಮೆ ಆದರೆ ಆಂಬ್ಯುಲೆನ್ಸ್‌ ಬರೋದಕ್ಕೂ ಕನಿಷ್ಠ ೪ ಗಂಟೆ ಬೇಕಾಗುತ್ತೆ. ಹಳ್ಳಿಯ ಜನ ಬಂದು ಇದೇನೂ ಅಲ್ಲ ಅನ್ನೋ ಹಾಗೇ ಹತ್ತುತ್ತಿದ್ದುದನ್ನು ನೋಡಿ ಮನಸ್ಸು ಒಂದು ಕಡೆ ಹೋಗು ಹತ್ತು ಅಂತಿತ್ತು. ಇನ್ನೊಂದು ಮನಸ್ಸು ನೋಡು ಬೇಕಾ ರಿಸ್ಕ್‌, ವಾಪಸ್‌ ಹೋದ ಮೇಲೆ ಆ ಕೆಲಸ ಇದೆ ಈ ಕೆಲಸ ಇದೆ ಅಂತ ಒಂದಷ್ಟು ಪಟ್ಟಿ ಮಾಡ್ತು. ಅಷ್ಟೊತ್ತಿಗೆ ಹಳೆಯ ನೆನಪೊಂದು ನುಗ್ಗಿ ಬಂತು. ನಾನು ಚಿಕ್ಕವಳಾಗಿದ್ದಾಗ ಆದಿಚುಂಚನಗಿರಿ ಬೆಟ್ಟಕ್ಕೆ ಗೆಳತಿಯೊಂದಿಗೆ ಹೋಗಿದ್ದೆ. ಅಲ್ಲಿ ಕೊನೆ ಭಾಗವನ್ನು ಹತ್ತಲು ಸರಪಳಿಯ ಸಹಾಯದಿಂದ ಹೋಗಬೇಕಾಗಿತ್ತು. ಒಂದೆರಡು ಹಜ್ಜೆ ಹೋಗಿ ಕಾಲು ನಡುಗಿ ಆಗಲ್ಲ ಅಂತ ವಾಪಸ್‌ ಬಂದಿದ್ದೆ. ಇದು ನನ್ನ ಜೀವನದುದ್ದಕ್ಕೂ ಕಾಡತ್ತಲೇ ಬಂದಿರುವ ಸೋಲು. ಜೀವನದ ಬೇರೆ ಸೋಲುಗಳ ಸಮಯದಲ್ಲೂ ಇದು ಬಂದು ಹಂಗಿಸಿ ಹೋಗುತ್ತಿತ್ತು, ಕನಸಲ್ಲೂ ಕಾಡುತ್ತಿತ್ತು. ಅದಾದ ಮೇಲೆ ಅನೇಕ ಬೆಟ್ಟ ಗುಡ್ಡಗಳನ್ನು ಹತ್ತಿದ್ದೀನಿ. ಆದರೆ ಆ ದಿನ ಮಾತ್ರ ಇನ್ನೂ ಮರೆಯೋಕೆ ಆಗಿಲ್ಲ. ಈಗಲೂ ಅದೇ ಕಣ್ಣ ಮುಂದೆ ಬಂದು ಕುಣೀತು. ಇಷ್ಟು ದೂರ ಬಂದು ಈಗ ವಾಪಸ್‌ ಹೋದರೆ ಮತ್ತೆ ಇನ್ನೆಂದೂ ಬರೋಕಾಗಲ್ಲ. ಪ್ರಯತ್ನಿಸು ಅಂತ.

ವೀರಾವೇಶದಿಂದ ಎದ್ದೆ. ಗಣೇಶನ ಮೇಲೆ ಭಾರ ಹಾಕಿ, ನನ್ನ ಗೈಡ್‌ಗೆ ಸಹಾಯ ಮಾಡೋಕೆ ಹೇಳಿ ಇರೋ ಜಾಗದಿಂದ ಇಳಿದೆ. ಹಾಗೂ ಹೀಗೂ ಮಾಡಿ ಗಣೇಶನ ಏಕಶಿಲೆಯ ಮೇಲೆ ತಲುಪಿದಾಗ ಭಾವ ತುಂಬಿ ಬಂತು. ವಿಘ್ನವಿನಾಶಕ ಕೈ ಹಿಡಿದು ತಲುಪಿಸಿದ್ದ. ಪುಟ್ಟ ಪುಟ್ಟ ಗೆಲುವುಗಳ ಖುಷಿ. ಇಡೀ ಜೀವನದುದ್ದಕ್ಕೂ ಈ ಖುಷಿ ಜೊತೆ ಇರುತ್ತೆ. ನನ್ನ ಕ್ಯಾಮೆರಾವನ್ನು ಬ್ಯಾಗ್‌ಗೆ ಹಾಕಿ ಕೆಳಗೆ ಕಲ್ಲೊಂದರ ಮೇಲೆ ಇಟ್ಟು ಬಂದಿದ್ದರಿಂದ ಕೆಳಗೆ ಇರುವ ಯಾರಿಗೋ ಹೇಳಿ ಒಂದೆರಡು ಫೋಟೋ ತೆಗೆಸಿಕೊಂಡು, ಗಣೇಶನಿಗೆ ನಮಸ್ಕರಿಸಿ ಕೆಳಗಿಳಿದೆ.

ದಾರಿಯಲ್ಲಿ ಬೆಟ್ಟದ ಮೇಲೆ ಒಂದು ಸೂರ್ಯ ದೇವಾಲಯ ಇತ್ತು ಅಂತ ಹೇಳುವ ಒಂದು ಪೂಜಾಸ್ಥಳ ಇದೆ. ಅಲ್ಲಿ ಮೂರ್ತಿ ಇಲ್ಲ. ಬರೀ ಒಂದು ಕಲ್ಲಿದೆ. ಬೆಳಗಿನ ಸೂರ್ಯಕಿರಣ ಸೃಷ್ಟಿಸುವ ಗಣೇಶನ ಬೃಹತ್‌ ನೆರಳು ಇಡೀ ಬೆಟ್ಟದ ತುಂಬಾ ಆವರಿಸಿಕೊಳ್ಳುತ್ತದೆ ಅಂತ ಅಲ್ಲಿಯವರು ಹೇಳಿದರು. ನನಗೆ ನೋಡಲು ಸಿಗಲಿಲ್ಲ, ಇಳಿಯುವಾಗ ಪಶುವಾಗಿ ನಾಲ್ಕು ಕಾಲಿನ ಪಶುವಾಗಿ, ಜಾರಿಕೊಂಡು, ತೆವಳಿಕೊಂಡು, ಬಂಡೆಗಳಿಂದ ಹುಷಾರಾಗಿ ಇಳಿದಿದ್ದಾಯ್ತು. ಅಲ್ಲಿಂದ ವಾಪಸ್‌ ಫಲಸ್‌ಪುರಕ್ಕೆ ಇಳಿಯುವ ಟ್ರೆಕ್ಕಿಂಗ್‌ ಹಿತವಾಗಿತ್ತು. ಧೋಲ್ಕಲ್‌ ಗಣೇಶ ನ ಟ್ರೆಕಿಂಗ್‌ ಒಂದು ಸುಂದರ ಅನುಭವವಾಗಿ ನೆನಪಿನ ಪುಟ ಸೇರಿದೆ. ಇಂತಹ ಅಷ್ಟು ಪ್ರಸಿದ್ಧವಲ್ಲದ ಜಾಗಗಳು ಭಾರತದ ಮತ್ತೊಂದು ಮಗ್ಗುಲನ್ನು ಪರಿಚಯಿಸುತ್ತವೆ.

ಟ್ರೆಕಿಂಗ್‌ ಸಲಹೆಗಳು

ಬೆಂಗಳೂರಿನಿಂದ ರಾಯಪುರಕ್ಕೆ ಹೋಗಿ ಅಲ್ಲಿಂದ ೩೦೦ ಕಿ ಮೀ ದೂರದ ದಂತೆವಾಡಕ್ಕೆ ಬಸ್ಸು, ಕಾರಿನ ಮೂಲಕ ತಲುಪಬಹುದು. ಅಲ್ಲಿಂದ ೧೩ ಕಿ. ಮೀ ದಾರಿ ಫಲಸ್‌ಪುರಕ್ಕೆ. ಅಥವಾ ಹೈದರಾಬಾದಿನಿಂದ ಜಗದಲಪುರಕ್ಕೆ ನೇರ ವಿಮಾನ ಇದೆ. ಅಲ್ಲಿಂದ ೧೦೦ ಕಿ. ಮೀ ದೂರದಲ್ಲಿ ದಂತೆವಾಡ ಇದೆ.

ಟ್ರೆಕ್ಕಿಂಗ್‌ಗೆ ಹೊರಡುವ ಮೊದಲು ಅಲ್ಲಿರುವ ಕ್ಯಾಂಪಿಂಗ್‌ ವ್ಯವಸ್ಥಾಪಕರಿಗೆ ಹೇಳಿದರೆ ಬರುವಷ್ಟರಲ್ಲಿ ಊಟದ ವ್ಯವಸ್ಥೆ ಮಾಡಿರುತ್ತಾರೆ. ಹಾಗೂ ಉಳಿಯಲು ಕ್ಯಾಂಪ್‌ ಕೂಡ ಸಿಗುತ್ತದೆ. ನಾನು ಅಲ್ಲಿಂದ ವಾಪಸ್‌ ಜಗದಲಪುರಕ್ಕೆ ಹೋದೆ. ಟ್ರೆಕಿಂಗ್‌ ಹೋಗಿ ಬರಲು ೯.೫ ಕಿ.ಮೀ ಆಗುತ್ತದೆ.