ಮತ್ತೂ ಒಂದು ಸಂಗತಿ ತಿಳಿಯಿತು. ಏನೆಂದರೆ ನಟನ ಕಲಾವಿದರಿಗೆ ‘ಸುಭದ್ರಾ ಕಲ್ಯಾಣ’ ನಾಟಕದ ಹಾಡುಗಳನ್ನ ಕಲಿಸಿದವರು ಪರಮಶಿವನ್ ಸರ್ ಅವರು ಎಂದು. ಆದರೆ ಅವರು ನಿರ್ಗಮಿಸಿದ ಮೇಲೆ ಪರಮಶಿವನ್ ಅವರಿಂದ ತರಬೇತುಗೊಂಡ ನಟರಿಗೆ ಹಾರ್ಮೋನಿಯಂ ಸಾಥ್ ನೀಡಲು ಪ್ರೀತಿಯಿಂದ ಬಂದವರು ಪುಟ್ಟಣ್ಣಯ್ಯನವರು ಎಂಬುದು. ಪರಮಶಿವನ್ ಸರ್ ಅವರು ತರಬೇತುಗೊಳಿಸಿದ್ದಾರೆ ಅಂದಮೇಲೆ ಯಾರೂ ಅಷ್ಟು ತೀರಾ ಕೆಟ್ಟದಾಗಿ ಹಾಡಲಾರರು ಅಂದುಕೊಂಡೆ. ಹಾಡುಗಳನ್ನ ಅವರು ಕಲಿಸಿದರೆ ನಾಟಕದ ನಿರ್ದೇಶನದ ಹೊಣೆಯನ್ನ ಸ್ವತಃ ಮಂಡ್ಯ ರಮೇಶ್ ಸರ್ ಹೊತ್ತಿದ್ದರು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

“ಮೈಸೂರು ‘ನಟನ’ ದಲ್ಲಿ ‘ಸುಭದ್ರಾ ಕಲ್ಯಾಣ’ ನಾಟಕ ಆಡ್ತಾರಂತೆ. ಪುಟ್ಟಣ್ಣಯ್ಯನವರು ಹಾರ್ಮೋನಿಯಂ ನುಡಿಸ್ತಾರಂತೆ.. ಬರ್ತೀರಾ ಹೋಗಿಬರೋಣ..?’ ಅಂತ ಕೇಳಿದರು ಬಾಬು ಹಿರಣ್ಣಯ್ಯ ಸರ್.

ಇಂಥ ಅವಕಾಶ ಯಾಕೆ ತಪ್ಪಿಸಿಕೊಳ್ಳಬೇಕು ಅನಿಸಿ ‘ನಡೀರಿ ಸರ್..’ ಅಂದೆ. ಇದಕ್ಕೆ ಹಿನ್ನೆಲೆಯಾಗಿ ಹಲವು ಕಾರಣಗಳಿದ್ದವು.

ಹಲವರಿಗೆ ತಿಳಿದಿರುವಂತೆ ‘ನಟನ’ ಮಂಡ್ಯ ರಮೇಶ್ ಅವರ ಕನಸಿನ ಸಾಕಾರ. ಹಲವು ವರ್ಷಗಳ ತಪಸ್ಸು. ನಾನು ‘ನಟನ’ ಬಗ್ಗೆ ಕೇಳಿ ತಿಳಿದಿದ್ದೇನೇ ಹೊರತು ಕಂಡಿರಲಿಲ್ಲ. ಅವಕಾಶ ದೊರೆತಾಗ ಯಾಕೆ ನೋಡಬಾರದು..? ಇದು ಮೊದಲ ಕಾರಣ. ಎರಡನೆಯ ಕಾರಣ- ಮೈಸೂರಿಗೆ ಬೆಂಗಳೂರಿನಿಂದ ಮೂರು ಗಂಟೆಗಳ ಪ್ರಯಾಣ. ಹೋಗುವಾಗ ಮೂರು ಗಂಟೆ ಮತ್ತು ಹೊರಳಿ ಬರುವಾಗ ಮೂರು ಗಂಟೆ. ಒಟ್ಟು ಆರು ಗಂಟೆ. ಬಾಬು ಸರ್ ಜೊತೆಗೂಡಿದರೆ ವೃತ್ತಿ ರಂಗಭೂಮಿಯ ಹಲವು ವಿವರಗಳು ಸವಿಸ್ತಾರವಾಗಿ ತೆರೆದುಕೊಳ್ಳುತ್ತವೆ. ಅವುಗಳನ್ನು ಕೇಳುವುದು ಚೆಂದದ ಅನುಭವ. ನಾವು ಜೊತೆಗೂಡಿದಾಗ ಮಾತುಗಳು ಸಂಸಾರದ ತಾಪತ್ರಯ ಮತ್ತು ಜಂಜಡಗಳ ಕಡೆಗೆ ಹೊರಳುವುದಿಲ್ಲ. ಏನಿದ್ದರೂ ನಾಟಕದ ಕುರಿತ ಮಾತೇ. ಹಾಗಾಗಿ ಆರು ಗಂಟೆ ತುಂಬ ಅತ್ಯಮೂಲ್ಯ ಅನಿಸಿ ಖುಷಿಯಿಂದ ‘ನಡೀರಿ ಸರ್.. ಹೊರಡೋಣ’ ಅಂದೆ.

ನಾಟಕ ನಿಗದಿ ಆಗಿದ್ದ ದಿನ ಮಧ್ಯಾಹ್ನ ಕಾರಿನಲ್ಲಿ ಹೊರಟೆವು. ಅಂದು ಬಾಬು ಸರ್ ಮೈಸೂರಿಗೆ ಹೊರಡಲಿಕ್ಕೆ ‘ಇನೋವಾ’ ಕಾರು ಹೊರತೆಗೆದರು. ಕಾರಿನ ಗಾಜುಹಣೆಯ ಮೇಲೆ ‘ರಂಗಭೂಮಿ’ ಎಂದು ಬರೆದಿತ್ತು. ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಮನೆಯ ಹೆಸರೂ ‘ರಂಗಭೂಮಿ’ಯೇ. ಕಾರಿನ ಹಣೆಯ ಮೇಲೂ ಅದೇ ಹೆಸರು. ಎಲ್ಲಕ್ಕಿಂತ ಮಿಗಿಲಾಗಿ ಅಜ್ಜ ಬದುಕಿದ್ದಾಗ ಹಲವು ಊರುಗಳಲ್ಲಿ ನಾಟಕ ಪ್ರದರ್ಶನ ನೀಡಲು ಬಳಸುತ್ತಿದ್ದ ಇನೋವಾ ಕಾರು ಅದು. ಡ್ರೈವಿಂಗ್ ಸೀಟ್ನಲ್ಲಿ ಬಾಬು ಸರ್ ಅವರದೇ ಡ್ರೈವಿಂಗ್. ಅವರ ಪಕ್ಕದ ಸೀಟ್ನಲ್ಲಿ ಅಜ್ಜ ಮಾಸ್ಟರ್ ಹಿರಣ್ಣಯ್ಯ ಕೂರುತಿದ್ದರು. ಈಗ ಅಜ್ಜ ಕೂರುತಿದ್ದ ಜಾಗದಲ್ಲೇ ನನಗೆ ಕೂರಲು ಅವಕಾಶ ಒದಗಿ ಬಂದಾಗ ಆದ ಖುಷಿ ಅಷ್ಟಿಷ್ಟಲ್ಲ. ಮರು ಮಾತಿಲ್ಲದೆ ಹೊರಡಲು ಒಪ್ಪಿಕೊಂಡಿದ್ದೆ.

ನಾನು ಮತ್ತು ಬಾಬು ಸರ್ ಎಂದೂ ಫಾರ್ಮಲ್ ಆಗಿ ಮಾತು ಆರಂಭಿಸುವುದಿಲ್ಲ. ಅದು ಕೃತಕ. ಆ ದಿನ ನಾನು ಅವರನ್ನ ಯಾವುದರ ಬಗ್ಗೆ ಪ್ರಶ್ನಿಸುತ್ತೇನೆ ಎನ್ನುವುದೂ ನನಗೇ ಗೊತ್ತಿರುವುದಿಲ್ಲ. ಅದು ಆ ದಿನದ ಲಹರಿಗೆ ಸಂಬಂಧಿಸಿದ್ದು. ರಂಗಕ್ಕೆ ಸಂಬಂಧಿಸಿದಂತೆ ಏನು ಕೇಳಿದರೂ ಬಾಬು ಸರ್ ತಮ್ಮ ಚಿಂತನೆ ಆರಂಭಿಸುತ್ತಾರೆ. ಅದರಲ್ಲಿ ಕಣ್ಣಿಗೆ ಕಟ್ಟುವ ಚಿತ್ರವತ್ತಾದ ಚಿತ್ರಗಳಿರುತ್ತವೆ. ತುಂಬ ಉಪಯುಕ್ತ ಮಾಹಿತಿಗಳಿರುತ್ತವೆ.

ಮೈಸೂರಿಗೆ ಹೊರಟ ದಿನವೂ ನಾನು ಬಾಬು ಸರ್ ಅವರಿಗೆ ಪ್ರಶ್ನೆಗಳನ್ನ ಸಿದ್ಧ ಮಾಡಿಕೊಂಡಿರಲಿಲ್ಲ. ಆ ಕ್ಷಣ ನನ್ನ ತಲೆಯಲ್ಲಿ ಹಾದು ಹೋಗುವ ವಿಚಾರಗಳ ಬಗ್ಗೆ ಕೇಳಿದರಾಯಿತು ಅಂದುಕೊಂಡಿದ್ದೆ.

ಅಂದು ನನ್ನ ತಲೆಯಲ್ಲಿ ಎರಡು ಸಂಗತಿಗಳು ಸುಳಿ ತಿರುಗುತ್ತಿದ್ದವು. ಒಂದು- ಗುಬ್ಬಿ ಕಂಪನಿಯ ಸುಪ್ರಸಿದ್ಧ ನಾಟಕ ‘ಸಂಗೀತ ಸುಭದ್ರಾ..’. ಇದು ಮೂಲ ಹೆಸರು. ಅನಂತರ ಅದು ‘ಸುಭದ್ರಾ ಕಲ್ಯಾಣ’ ಆಯಿತು. ಯಾಕೆ ಆಯಿತು, ಕಾರಣ ಏನು? ನನಗೆ ಗೊತ್ತಿಲ್ಲ. ಎರಡನೆಯ ಸಂಗತಿ- ಪುಟ್ಟಣ್ಣಯ್ಯನವರು ಹಾರ್ಮೋನಿಯಂ ನುಡಿಸ್ತಾರಂತೆ ಎಂಬ ಸಂಗತಿ.

(ಬಾಬು ಹಿರಣ್ಣಯ್ಯ)

‘ಸರ್ ಯಾರು ಈ ಪುಟ್ಟಣ್ಣಯ್ಯನವರು..?’ ಅಂತ ಬಾಬು ಸರ್ ಅವರನ್ನ ಕೇಳಿದೆ. ‘ಗುಬ್ಬಿ ಕಂಪನೀಲಿ ಹಾರ್ಮೋನಿಯಂ ನುಡಿಸ್ತಿದ್ರಂತೆ.. ಮಂಡ್ಯ ರಮೇಶ್ ಹಾಗಂದರು..’ ಅಂದರು ಬಾಬು ಸರ್ ಸ್ಟೇರಿಂಗ್ ತಿರುಗಿಸುತ್ತ.

ಇಂಥ ವಿವರಗಳನ್ನ ಕೇಳುವುದೇ ಚೆಂದ ಅನಿಸಿತು. ಗುಬ್ಬಿ ಕಂಪನೀಲಿ ಹಾರ್ಮೋನಿಯಂ ನುಡಿಸ್ತಿದ್ದರು ಅಂದರೆ ಕಡಿಮೆ ಇರಲಿಕ್ಕಿಲ್ಲ. ಅವರನ್ನ ಕಂಡ ಹಾಗಾಗುತ್ತದೆ ಅಂದುಕೊಂಡೆ.

ಎಲ್ಲಕ್ಕಿಂತ ಹೆಚ್ಚಾಗಿ ನಟನ ಟೀಂ ‘ಸಂಗೀತ ಸುಭದ್ರಾ…’ ನಾಟಕ ಆರಿಸಿಕೊಳ್ಳುವ ಛಾತಿ ತೋರಿದ್ದು ಯಾಕೆ ಎಂಬುದು ನನ್ನ ಪ್ರಶ್ನೆಯಾಗಿತ್ತು. ಯಾಕೆಂದರೆ ಆ ನಾಟಕದಲ್ಲಿನ ಹಾಡುಗಳನ್ನ ಹಾಡುವುದು ಸುಲಭದ ಸಂಗತಿಯಲ್ಲ. ಹಲವು ವರ್ಷಗಳ ನಿರಂತರ ಸಂಗೀತದ ಸಾತತ್ಯ ಬೇಕು. ಶೃತಿ ಶುದ್ಧತೆ ಬೇಕು. ನಂತರ ಸಂಗತಿಗಳನ್ನ ವಿಸ್ತರಿಸಿ ಹಾಡುವ ಕಲೆಗಾರಿಕೆ ಬೇಕು. ಹಿಂದೆ ಘಟಾನುಘಟಿ ನಟರು ಈ ಹಾಡುಗಳನ್ನ ಹಾಡಿ ನಿರ್ಗಮಿಸಿದ್ದಾರೆ. ಹೀಗಿರುವಾಗ ಈ ನಾಟಕದ ಹಾಡುಗಳನ್ನ ಇಂದಿನ ತಲೆಮಾರಿನ ಹೊಸಬರು ಹೇಗೆ ಹಾಡಿಯಾರು ಎಂಬುದು ನನ್ನ ಪ್ರಶ್ನೆಯಾಗಿತ್ತು.

ರಂಗಗೀತೆಗಳ ಬಗ್ಗೆ ಮೊದಲಿಂದ ವಿಪರೀತ ಹುಚ್ಚು ಹತ್ತಿಸಿಕೊಂಡಿರವ ನಾನು ವಿದ್ವಾನ್ ಪರಮಶಿವನ್ ಅವರ ನೇತೃತ್ವದಲ್ಲಿ ಸೀಡಿಗಳಲ್ಲಿ ದಾಖಲಿಸಿದ ಅಂದಿನ ಕಾಲದ ಶೈಲಿಯ ರಂಗಗೀತೆಗಳಿಗೆ ಕಿವಿಯಾಗಿದ್ದೆ. ಆ ಕಾಲದಲ್ಲಿ ನಟರು ಆಯಾ ನಾಟಕಗಳಲ್ಲಿ ಹಾಡುತ್ತಿದ್ದ ಬಗೆಯನ್ನು ಆ ಸೀಡಿಗಳಲ್ಲಿನ ಹಾಡುಗಳು ಕೊಂಚ ಪರಿಚಯಿಸಿದ್ದವು. ಆ ಪರಿ ಹಾಡಬೇಕಾದರೆ ಪ್ರಾವೀಣ್ಯತೆ ಬೇಕು. ಹೊಸ ಹುಡುಗ ಹುಡುಗಿಯರು ಹೇಗೆ ಹಾಡುತ್ತಾರೆ ಎಂದುಕೊಳ್ಳುತ್ತಲೇ ಇದ್ದೆ. ಪ್ರಯಾಣದ ವೇಳೆ ಇದನ್ನೇ ಪ್ರಶ್ನೆಯಾಗಿ ಬಾಬು ಸರ್ ಅವರಿಗೆ ಕೇಳಿದೆ.

‘ಸರ್ ಆ ಪರಿ ಸಂಗೀತ ಜ್ಞಾನ ಇದ್ದ ಅವತ್ತಿನ ನಟರು ಹಾಡುತ್ತಿದ್ದ ಹಾಡುಗಳನ್ನ ಇಂದಿನವರು- ಅದರಲ್ಲೂ ಇನ್ನೂ ಹುಡುಗರು ಹೇಗೆ ಹಾಡ್ತಾರೆ..? ಯಡವಟ್ಟಾದರೆ ಕಷ್ಟ ಅಲ್ಲವಾ ಸರ್..?’ ಅಂದೆ.

‘ಇವರ ಯಡವಟ್ಟು ಬಿಡಿ.. ಅಂದಿನವರೂ ಯಡವಟ್ಟು ಮಾಡಿಕೊಂಡ ಒಂದು ಸಂಗತಿ ಹೇಳ್ತೀನಿ.. ಕೇಳಿಸ್ಕೊಳ್ಳಿ..’ ಎಂದು ಶುರುಮಾಡಿದರು ಬಾಬು ಸರ್. ಅವರು ಹೇಳಿದ ಒಂದು ಘಟನೆ ಹೀಗಿದೆ-

ಗುಬ್ಬಿ ಕಂಪನೀಲಿ ಕಿವುಡು ಶಂಕರಪ್ಪ ಎಂದೊಬ್ಬರು ಇದ್ದರಂತೆ. ಅವರು ಹಾರ್ಮೊನಿಯಂ ಸೊಗಸಾಗಿ ನುಡಿಸುತ್ತಿದ್ದರಂತೆ. ಆದರೆ ಕಿವಿ ಏನೆಂದರೆ ಏನೂ ಕೇಳಿಸುತ್ತಿರಲಿಲ್ಲ. ರಂಗದ ಮೇಲೆ ನಟನಟಿಯರು ಬಂದು ಹಾಡಲು ತುಟಿ ಕದಲಿಸುತ್ತಿದ್ದಂತೆ ಆ ತುಟಿಗಳ ಚಲನೆ ನೋಡಿಯೇ ಸೊಗಸಾಗಿ ಹಾರ್ಮೋನಿಯಂ ನುಡಿಸುತ್ತಿದ್ದರಂತೆ. ಹಾಗಾಗಿ ಅವರನ್ನ ಎಲ್ಲರೂ ‘ಕಿವುಡು ಶಂಕರಪ್ಪ’ ಎಂದೇ ಕರೆಯುತ್ತಿದ್ದರಂತೆ.

‘ನಟರು ಅಂದಂದಿನ ತಮ್ಮ ದನಿ ಮತ್ತು ಶೃತಿ ಆಧರಿಸಿ ಕಿವುಡು ಶಂಕರಪ್ಪನವರಿಗೆ ಮೊದಲೇ ‘ಇಂದು ಕಪ್ಪು ಎರಡನೆ ಮನೆಯಲ್ಲಿ ಹಾಡ್ತೀನಿ.. ಇಂದು ಬಿಳಿ ಎರಡನೆಯ ಮನೆಯಲ್ಲಿ ಹಾಡ್ತೀನಿ’ ಅಂತ ತಿಳಿಸಿರುತ್ತಿದ್ದರಂತೆ…

ಆದರೆ ಹಿರಿಯ ನಟರೊಬ್ಬರಿಗೆ ಕಿವುಡು ಶಂಕರಪ್ಪನಿಗೆ ಮೊದಲೇ ತಾವೇನು ತಿಳಿಸುವುದು ಅನಿಸಿದೆ. ರಂಗದ ಮೇಲೆಯೇ ತಿಳಿಸಿದರಾಯಿತು.. ಏನು ಅವರ ಬಳಿ ಮೊದಲೇ ಹೋಗಿ ತಿಳಿಸುವುದು ಎಂದು ಅವರಿಗೆ ಮನಸ್ಸಿಗೆ ಬಂದಿದೆ. ಹಾಗಾಗಿ ಅವರು ಒಂದು ಹೊಸ ವಿಧಾನ ಕಂಡುಕೊಂಡಿದ್ದರಂತೆ.

ರಂಗದ ಮೇಲೆ ಹೋದಾಗ ಕಿವುಡು ಶಂಕರಪ್ಪನವರ ಕಡೆಗೆ ನೋಡಿ ತಾವು ತೊಟ್ಟಿರುವ ದಿರಿಸಿನಲ್ಲಿ ಬಿಳಿ ಬಣ್ಣದ ಕಡೆ ಬೆರಳು ತೋರಿ ಎರಡನೆಯ ಶೃತಿ ಎಂದು ಬೆರಳುಗಳಲ್ಲಿ ಸೂಚಿಸಿ ಹಾಡಲು ಆರಂಭಿಸುವುದು. ಕಪ್ಪಿನ ಮನೆಯಲ್ಲಿ ಮತ್ತೊಂದು ದಿನ ಹಾಡುವುದಿದ್ದರೆ ಮತ್ತೆ ತಮ್ಮ ದಿರಿಸಿನಲ್ಲಿದ್ದ ಕಪ್ಪು ಬಣ್ಣದ ಕಡೆ ಬೆರಳು ಮಾಡಿ ತೋರಿಸಿ ಹಾಡುತ್ತಿದ್ದರಂತೆ. ದಿರಿಸಿನಲ್ಲಿ ಕಪ್ಪು ಇಲ್ಲದಿದ್ದರೆ ಕಪ್ಪು ವಿಗ್ ಹಾಕಿದ್ದರೆ ಅದನ್ನ ತೋರಿಸಿ ಹಾಡುವುದು ರೂಢಿ ಮಾಡಿಕೊಂಡಿದ್ದರಂತೆ. ಆದರೆ ಮೊದಲೇ ಹೋಗಿ ಸೂಚಿಸಿ ಹಾಡದಷ್ಟು ಪೂರ್ವಗ್ರಹ ಮತ್ತು ಕೊಂಚ ಅಹಂ ಕೂಡ ಬೆಳೆಸಿಕೊಂಡಿದ್ದರಂತೆ.

ಎಲ್ಲ ಬಾರಿಯೂ ಹೀಗೇ ನಡೆಯಬೇಕಲ್ಲ. ಒಮ್ಮೆ ತಾವು ತೊಟ್ಟಿರುವ ದಿರಿಸು ಕಪ್ಪು ಬಣ್ಣದ್ದು ಅಂದುಕೊಂಡು ಅದರ ಕಡೆ ತೋರಿ ಹಾಡು ಆರಂಭಿಸಿದರಂತೆ. ಶೃತಿ ಕೂಡಲಿಲ್ಲ. ಜನ ನಕ್ಕರಂತೆ. ಮತ್ತೆ ಮೈಮರೆವಿನಲ್ಲಿ ಮತ್ತೆ ದಿರಿಸು ಮುಟ್ಟಿ ತೋರಿಸಿ ಹಾಡು ಆರಂಭಿಸಿದರಂತೆ. ಮತ್ತೆ ಶೃತಿ ಕೂಡಲಿಲ್ಲ. ಜನ ಮತ್ತೆ ನಕ್ಕರಂತೆ. ಸಿಟ್ಟುಗೊಂಡ ಆ ಹಿರಿಯ ನಟ ರಂಗದ ಒಳಗೆ ನಡೆದುಬಿಟ್ಟರಂತೆ.

ಆಮೇಲೆ ಒಳಗೆ ‘ಕಿವುಡು ಶಂಕರಪ್ಪ ಬೇಕೂಂತ ನನಗೆ ಅವಮಾನ ಮಾಡಲಿಕ್ಕೇ ಹೀಗೆ ಮಾಡಿದ ಇವತ್ತು’ ಎಂದು ಜಗಳ ತೆಗೆದರಂತೆ. ಏನು ಜಗಳ ಎಂದು ವಿಚಾರಿಸಲಿಕ್ಕೆ ಸ್ವತಃ ಗುಬ್ಬಿ ವೀರಣ್ಣನವರೇ ಬಂದರಂತೆ. ಮತ್ತು ಶಂಕರಪ್ಪನವರನ್ನೂ ಕರೆಸಿದರಂತೆ. ಏನು ಕಾರಣ ಎಂದು ಆ ನಟರನ್ನ ಕೇಳಿದಾಗ ಆಗಲೂ ಮೈಮರೆವಿನಲ್ಲಿ ತಾವು ತೊಟ್ಟಿರುವ ದಿರಿಸು ಕಪ್ಪು ಬಣ್ಣದ್ದು ಎಂದು ತೋರಿಸುತ್ತ ‘ಕಪ್ಪಿನ ಮನೆಯಿಂದ ಶುರುಮಾಡು ಅಂದರೆ ಬಿಳಿ ಮನೆ ಹಿಡಿದರೆ ನಾ ಹೇಗೆ ಹಾಡೋದು..?’ ಎಂದು ಜೋರು ಮಾಡಿದರಂತೆ. ಗುಬ್ಬಿ ವೀರಣ್ಣನವರು ನೋಡಿದರೆ ಆ ನಟನ ದಿರಿಸಿನಲ್ಲಿ ಕಪ್ಪು ಚೂರೂ ಇರಲಿಲ್ಲವಂತೆ. ಇದ್ದದ್ದೆಲ್ಲ ಬರೀ ಬಿಳೀ ಬಣ್ಣವೇ. ಅದನ್ನ ತೋರಿಸಿದಾಗ ಶಂಕರಪ್ಪ ಸಹಜವಾಗಿ ಬಿಳಿ ಮನೆಯಿಂದ ಹಾಡು ಆರಂಭಿಸಿದ್ದಾರೆ. ಅವರದೇನು ತಪ್ಪು..? ಇದನ್ನ ಗುಬ್ಬಿ ವೀರಣ್ಣನವರು ಆ ನಟನಿಗೆ ಮನವರಿಕೆ ಮಾಡಿಸಿ ಸಮಸ್ಯೆ ಬಗೆಹರಿಸಿದರಂತೆ. ಮತ್ತು ಈ ಪರಿ ಅಂತರ, ಅಹಂ ಕೂಡದು ಎಂದೂ ಸೂಕ್ಷ್ಮವಾಗಿ ಹೇಳಿದರಂತೆ…’

ಈ ಘಟನೆ ಬಗ್ಗೆ ಕೇಳಿದಾದ ನಾನು ನಕ್ಕೆ. ಇಂಥವು ಬಾಬು ಸರ್ ಬಳಿ ಎಷ್ಟು ಸ್ಟಾಕ್ ಇವೆಯೋ..

ಹೀಗೇ ಅದೂ ಇದೂ ಮಾತಾಡುತ್ತ ನಡುವೆ ‘ಶಿವಳ್ಳಿ ಟಿಫನ್ ರೂಂ’ ಬಳಿ ಕಾರು ನಿಲ್ಲಿಸಿ ಇಬ್ಬರೂ ಒಂದೊಂದು ದಹಿ ವಡಾ ತಿಂದು ಕಾಫಿ ಹೀರಿ ಮುಂದೆ ಸಾಗಿದೆವು.

ನಟನ ತಲುಪಿದಾಗ ಸಂಜೆ ಐದು ಗಂಟೆ. ಆರು ಗಂಟೆಗೆ ‘ಸುಭದ್ರಾ ಕಲ್ಯಾಣ’ ನಾಟಕ. ನಟನ ಒಳಹೊಕ್ಕೆವು. ಅಲ್ಲಿ ಮಂಡ್ಯ ರಮೇಶ್ ಸರ್ ಅತ್ಯಂತ ಚುರುಕಿನಿಂದ ಓಡಾಡುತ್ತ ಸಮಸ್ತ ಕೆಲಸ ಗಮನಿಸುತ್ತಿದ್ದರು. ಪಂಚೆ ಉಟ್ಟು, ಮೊಣಕಾಲು ಕೆಳಗಿನವರೆಗೆ ಇದ್ದ ಅರಿಶಿನ ಬಣ್ಣದ ಉದ್ದನೆಯ ಕುರ್ತ ಹಾಕಿಕೊಂಡು ಲಗುಬಗೆಯಿಂದ ಓಡಾಡುತ್ತಿದ್ದರು. ಬಾಬು ಸರ್ ಅವರನ್ನ ಕಾಣುತ್ತಲೇ ಪ್ರೀತಿಯಿಂದ ಬರಮಾಡಿಕೊಂಡರು. ನಾನು ನಮಸ್ಕರಿಸಿದೆ. ನಕ್ಕು ಕಣ್ಣುಮಿಟುಕಿಸಿ ಕೈ ಜೋಡಿಸಿದರು. ನನ್ನನ್ನ ಮತ್ತು ಬಾಬು ಸರ್ ಅವರನ್ನ ನಟನದ ಬೇಸ್ಮೆಂಟ್ ಗೆ ಕರೆದುಕೊಂಡು ಹೋಗಿ ‘ಇದು ಪ್ರಾಪರ್ಟಿಗಳನ್ನ ಇಟ್ಟುಕೊಳ್ಳಲಿಕ್ಕೆ ನಿರ್ಮಿಸಿಕೊಂಡಿರೊ ಕೋಣೆ… ಇಲ್ನೋಡಣ್ಣ.. ಮುಖವರ್ಣಿಕೆಗಳು… ಬರೀ ನಟರಾದರೆ ಸಾಲೋದಿಲ್ಲ… ಇಂಥ ಮುಖವರ್ಣಿಕೆಗಳನ್ನ ತಯಾರಿಸೋದನ್ನೂ ಕಲೀಬೇಕು.. ಇಲ್ಲಿ ಕಲಿಸ್ತಿದ್ದೀವಿ…’ ಎಂದು ಹಲವು ಬಗೆಯ ಮುಖವರ್ಣಿಕೆಗಳನ್ನ ಕಾಣಿಸಿದರು. ನಂತರ ಅದೇ ಬೇಸ್ಮೆಂಟ್ ನಲ್ಲಿ ಅವರು ಸಂಗ್ರಹಿಸಿರುವ ಹಲವು ಸಾವಿರ ದಾಟಿರುವ ಪುಸ್ತಕಗಳ ಕಡೆಗೆ ಕೈತೋರಿಸಿದರು. ನಂತರ ದಿರಿಸಿನ ಕೊಠಡಿಗೆ ಕರೆದುಕೊಂಡು ಹೋಗಿ ‘ಅಣ್ಣಾ ಇಲ್ಲಿ ಒಂದಷ್ಟು ಕೋಟುಗಳು… ಒಂದು ಸಾವಿರ ಥರ ಥರ ಸೀರೆಗಳಿವೆ..’ ಎಂದರು. ನಂತರ ಬಾಬು ಸರ್ ಅವರಿಗೆ ‘ಅಣ್ಣಾ ನೀನು ಕಂಪನಿ ಯಜಮಾನರ ಮಗ… ನಿನಗೆ ಇದೆಲ್ಲ ಗೊತ್ತೇ ಇರುತ್ತೆ.. ಆದ್ರೂ ಹೇಳ್ತಿದ್ದೀನಿ..’ ಅಂದರು.

ಇಷ್ಟು ನಮಗೆ ವಿವರಿಸುತ್ತಿದ್ದಾಗಲೂ ಅವರ ಕಣ್ಣುಗಳು ಸುತ್ತ ನಡೆಯುತ್ತಿದ್ದ ಕೆಲಸಗಳನ್ನು ಗಮನಿಸುತ್ತಲೇ ಇದ್ದವು. ಇನ್ನು ಮುಕ್ಕಾಲು ಗಂಟೆಯಲ್ಲಿ ನಾಟಕ ಆರಂಭವಾಗುವುದಿತ್ತು. ಪೌರಾಣಿಕ ನಾಟಕಗಳ ದಿರಿಸುಗಳನ್ನ ತೊಟ್ಟ ನಟರು ತಿಂಡಿಯ ಪ್ಯಾಕೆಟ್ ಬಿಚ್ಚಿ ಒಟ್ಟಾಗಿ ನಿಂತು ತಿಂಡಿ ತಿನ್ನುತ್ತಿದ್ದರು. ಅವರನ್ನು ನೋಡುವುದೇ ಒಂದು ಮಜವಾಗಿತ್ತು. ಬೇಸ್ಮೆಂಟ್ ನಲ್ಲಿ ನೆಲದ ಮೇಲೆ ಅಂದಿನ ನಾಟಕದ ಬಿಲ್ಲುಗಳು ಇತ್ಯಾದಿಗಳನ್ನ ಇಟ್ಟಿದ್ದರು.

ಆಮೇಲೆ ನನಗೆ ಗೊತ್ತಾದ ಸಂಗತಿ ಅಂದರೆ ನಾಟಕದ ಪೂರ್ವದಲ್ಲಿ ಒಂದು ಸ್ಮರಣೆ ಕಾರ್ಯಕ್ರಮ ನಿಗದಿ ಆಗಿದೆ ಎಂಬುದು. ರಂಗಸಂಗೀತ ವಿದ್ವಾಂಸರಾದ ಪರಮಶಿವನ್ ಈಚೆಗೆ ಅಗಲಿದ ಸಂಗತಿ ತಿಳಿದೇ ಇದೆ.

ಅವರು ಹಾರ್ಮೊನಿಯಂ ಸೊಗಸಾಗಿ ನುಡಿಸುತ್ತಿದ್ದರಂತೆ. ಆದರೆ ಕಿವಿ ಏನೆಂದರೆ ಏನೂ ಕೇಳಿಸುತ್ತಿರಲಿಲ್ಲ. ರಂಗದ ಮೇಲೆ ನಟನಟಿಯರು ಬಂದು ಹಾಡಲು ತುಟಿ ಕದಲಿಸುತ್ತಿದ್ದಂತೆ ಆ ತುಟಿಗಳ ಚಲನೆ ನೋಡಿಯೇ ಸೊಗಸಾಗಿ ಹಾರ್ಮೋನಿಯಂ ನುಡಿಸುತ್ತಿದ್ದರಂತೆ.

ನಟನ ‘ಪರಮಶಿವನ್ ಸ್ಮರಣೆ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅತಿಥಿಗಳು ಒಬ್ಬೊಬ್ಬರಾಗಿ ಬಂದು ಜೊತೆಗೂಡಲು ಆರಂಭಿಸಿದರು. ನಮ್ಮೆಲ್ಲರಿಗೆ ಕಾಫಿ ಬಿಸ್ಕತ್ತು ಸರಬರಾಜಾಯಿತು. ಆಗಲೂ ಮಂಡ್ಯ ರಮೇಶ್ ಸರ್ ಅವರ ಕಣ್ಣುಗಳು ಸುತ್ತಲಿನ ಕೆಲಸಗಳ ಕಡೆಗೇ ಸುಳಿ ತಿರುಗುತ್ತಿದ್ದವು. ನನ್ನ ಕಣ್ಣುಗಳು ನಟರುಗಳು ಪೌರಾಣಿಕ ದಿರಿಸಿನಲ್ಲಿದ್ದುಕೊಂಡು ಪ್ಯಾಕೆಟ್ ಬಿಚ್ಚಿ ತಿಂಡಿ ತಿನ್ನುತ್ತಿದ್ದ ಕಡೆಗೆ ಹರಿಯುತ್ತಲೇ ಇತ್ತು. ಎಷ್ಟು ಚೆಂದ ಇವೆಲ್ಲ ಅಂದುಕೊಳ್ಳುತ್ತ ಕಾಫಿ ಹೀರಿದೆ.

(ಮಂಡ್ಯ ರಮೇಶ್)

ಆಮೇಲೆ ಮತ್ತೂ ಒಂದು ಸಂಗತಿ ತಿಳಿಯಿತು. ಏನೆಂದರೆ ನಟನ ಕಲಾವಿದರಿಗೆ ‘ಸುಭದ್ರಾ ಕಲ್ಯಾಣ’ ನಾಟಕದ ಹಾಡುಗಳನ್ನ ಕಲಿಸಿದವರು ಪರಮಶಿವನ್ ಸರ್ ಅವರು ಎಂದು. ಆದರೆ ಅವರು ನಿರ್ಗಮಿಸಿದ ಮೇಲೆ ಪರಮಶಿವನ್ ಅವರಿಂದ ತರಬೇತುಗೊಂಡ ನಟರಿಗೆ ಹಾರ್ಮೋನಿಯಂ ಸಾಥ್ ನೀಡಲು ಪ್ರೀತಿಯಿಂದ ಬಂದವರು ಪುಟ್ಟಣ್ಣಯ್ಯನವರು ಎಂಬುದು. ಪರಮಶಿವನ್ ಸರ್ ಅವರು ತರಬೇತುಗೊಳಿಸಿದ್ದಾರೆ ಅಂದಮೇಲೆ ಯಾರೂ ಅಷ್ಟು ತೀರಾ ಕೆಟ್ಟದಾಗಿ ಹಾಡಲಾರರು ಅಂದುಕೊಂಡೆ. ಹಾಡುಗಳನ್ನ ಅವರು ಕಲಿಸಿದರೆ ನಾಟಕದ ನಿರ್ದೇಶನದ ಹೊಣೆಯನ್ನ ಸ್ವತಃ ಮಂಡ್ಯ ರಮೇಶ್ ಸರ್ ಹೊತ್ತಿದ್ದರು. ಅವರ ಕನಸಿನ ರಂಗಮಂದಿರ, ಅದರ ಮುಂಭಾಗದಲ್ಲಿ ಪರಮಶಿವನ್ ಅವರ ಭಾವಚಿತ್ರ, ಅದರ ಹಿಂದುಗಡೆ ರಂಗದ ಮೇಲೆ ಶಿವ ಜಡೆಕೆದರಿದ ಗಂಗಾವತರಣದ ಕಲರ್ ಫುಲ್ ಸೀನರಿ.. ನಾಟಕ ನೋಡಲು ಹುಮ್ಮಸ್ಸು ತುಂಬಿತು.

ನಾಟಕ ಆರಂಭವಾಗುವ ಮೊದಲಿಗೇ ನನ್ನ ಕಿವಿಯಲ್ಲಿ ನಾನು ಸೀಡಿ ಕೇಳಿ ತುಂಬಿಸಿಕೊಂಡಿರುವ ‘ಸಂಗೀತ ಸುಭದ್ರಾ’ ನಾಟಕದ ಕೆಲವು ಹಾಡುಗಳು ಧ್ವನಿಸಲು ಶುರುವಾದವು. ‘ಪೇಳೈ ಸಚಿವರೇ..’ , ‘ವಂದಿಸುವೆ ಮುನೀಂದ್ರ ನಿಮ್ಮ ಚರಣ ಕಮಲಕೇ..’, ‘ಬಾರಮ್ಮ ಬಾರೇ ಸೋದರಿ…’… ಮತ್ತು ‘ಸುಭದ್ರಾ ಕಲ್ಯಾಣ’ ನಾಟಕ ಅಂದಾಗ ಮತ್ತೆ ಮತ್ತೆ ಕೇಳುವ ನನ್ನ ಅತ್ಯಂತ ಪ್ರೀತಿಯ ಹಾಡು ‘ನಿನಗಾಗಿ ನಾನಾಂತೆ… ಮುನಿವೇಷವನು ಅನುಮಾನಿಸದೆ… ನಿನಗಾಗಿ ನಾನಾಂತೆ…’ ನನ್ನನ್ನ ಒಂದು ಗುಂಗಿನ ಲೋಕಕ್ಕೆ ಕರೆದುಕೊಂಡು ಹೋಗಿದ್ದವು. ಇವುಗಳನ್ನ ‘ನಟನ’ ನಟರುಗಳು ಹೇಗೆ ಹಾಡುತ್ತಾರೆ ಎಂಬ ಕುತೂಹಲವಿತ್ತು.

ಈ ಕುತೂಹಲ ಕೊಂಚ ಅಹಂಕಾರಕ್ಕೆ ತಿರುಗಿಕೊಂಡರೆ ಕಷ್ಟ ಅನಿಸಿ ನಾಟಕ ಆರಂಭವಾಗುವ ಪೂರ್ವದಲ್ಲಿ ನನ್ನನ್ನ ನಾನು ತಿದ್ದಿಕೊಳ್ಳಲು ಆರಂಭಿಸಿದೆ. ನಟರು ಚೆಂದ ಹಾಡಿದರೂ ಸರಿಯೇ.. ಹಾಡದಿದ್ದರೂ ಸರಿಯೇ… ತುಂಬ ವಿನೀತ ಭಾವದಲ್ಲಿ ನಾಟಕ ನೋಡಬೇಕು ಎಂದು ನನ್ನ ಮನಸ್ಸನ್ನ ನಿರ್ಬಂಧಿಸಿಕೊಂಡೆ. ಯಾಕೆಂದರೆ ‘ಸಂಗೀತ ಸುಭದ್ರ’ ನಾಟಕ ಆಡುವುದು ಸುಲಭದ ಮಾತು ಅಲ್ಲವೇ ಅಲ್ಲ. ಮತ್ತು ಅವತ್ತಿನ ಮಹಾನ್ ನಟರ ಹಾಗೆ ಹಾಡುವುದು ಮತ್ತೂ ದುಃಸ್ಸಾಧ್ಯ. ನಾನು ಕೇಳಿರುವ ಹಾಡುಗಳ ಶೈಲಿ ಮತ್ತು ಗಮಕಗಳ ರೀತಿಯೇ ಹಾಡಬೇಕು ಅಂದುಕೊಳ್ಳವುದು ಧಿಮಾಕು ಆಗುತ್ತದೆ ಅಂದುಕೊಂಡು ಸುಮ್ಮನೆ ಕೂತೆ. ಮೊದಲಿಗೆ ಇಂಥ ಪ್ರಯತ್ನ ಮಾಡುತ್ತಿರುವುದೇ ಅಪರೂಪದ ಸಂಗತಿ ಮತ್ತು ಅತೀ ದೊಡ್ಡ ಸಾಹಸದ ಕೆಲಸ ಎಂದು ಮನವರಿಕೆ ಮಾಡಿಕೊಂಡೆ. ಮಿಗಿಲಾಗಿ ನಾನು ಅಂದಿನ ಭವ್ಯ ಕಂಪನಿ ನಾಟಕಗಳನ್ನ ಕಂಡವನಲ್ಲ. ನನಗೆ ತಿಳಿದಿರುವುದೆಲ್ಲ ನನ್ನ ಕಿವಿಗೆ ದಕ್ಕಿದ ಸರಕು. ಹಾಡುಗಳು ಈ ಬಗೆಯಲ್ಲಿರುತ್ತವೆ ಎಂದು ಕೊಂಚ ತಿಳಿದಿರುವ ಮಾತ್ರಕ್ಕೆ ಅಹಂನಿಂದ ಮತ್ತು ಭ್ರಮೆಯಿಂದ ನಾಟಕ ನೋಡಬಾರದು ಎಂದು ತಿಳುವಳಿಕೆ ತಂದುಕೊಂಡೇ ಕೂತೆ.

ಪುಟ್ಟಣ್ಣನವರು ಬಂದರು. ಲೆಗ್ ಹಾರ್ಮೋನಿಯಂ ಮುಂದೆ ಕೂತು ತಬಲಾ ಕಲಾವಿದರು ಶೃತಿ ಮಾಡಿಕೊಳ್ಳಲಿಕ್ಕೆ ಹಾರ್ಮೋನಿಯಂ ಮನೆಗಳನ್ನ ತಾಕಿ ನೆರವಾದರು. ನಂತರ ನಾಟಕ ಶುರುವಾಯಿತು.

ಪ್ರಾರ್ಥನೆಯಲ್ಲಿಯೇ ನಟರ ಶೃತಿಶುದ್ಧತೆ ಬಗ್ಗೆ ನನಗೊಂದು ಅಂದಾಜು ಸಿಕ್ಕಿತು. ಶೃತಿ ಕಿವಿಗೆ ಕಚಗುಳಿ ಇಡಲಿಲ್ಲ. ಹಿತ ಅನಿಸಿತು. ಇನ್ನೇನು ಬೇಕು? ನಂತರ ಒಂದೊಂದಾಗಿ ದೃಶ್ಯಗಳು ಅನಾವರಣ ಆಗಲಿಕ್ಕೆ ಅರಂಭಿಸಿದವು. ಹಿಂದಿನ ನಾಟಕದ ಹೆಸರೇ ‘ಸಂಗೀತ ಸುಭದ್ರ’ ಎಂದಿದ್ದರಿಂದ ನಾಟಕದಲ್ಲಿ ಹಾಡುಗಳು ತುಂಬಿರುವುದರಲ್ಲಿ ಆಶ್ಚರ್ಯವಿಲ್ಲ. ರಾಜಸಭೆಯಲ್ಲಿ ಬಲರಾಮ ‘ಪೇಳೈ ಸಚಿವರೇ..’ ಹಾಡು ಆರಂಭಿಸಿದರು. ಹಾಡನ್ನು ಬಾಗಿ ಬಳುಕಿಸಿ ಹಾಡುವ ವಿಚಾರ, ಅದರ ಕ್ರಾಪ್ಟು ಅವೆಲ್ಲ ಬೇಡ.. ಆದರೆ ಶೃತಿ ಎಷ್ಟು ಚೆಂದ ಕೂಡಿಸ್ತಿದ್ದಾರಲ್ಲ ಅನಿಸಿತು ಬಲಭದ್ರನ ಹಾಡು ಕೇಳಿ. ಶಕುನಿಯ ಆಗಮನ, ಮಾತು. ನಾರದರ ಪ್ರವೇಶ ಹಾಡಿನೊಂದಿಗೇ. ಅವರಿಗೆ ತಾಲೀಮು ಸಾಲದಾಯಿತೊ ಅಥವಾ ತಾಳಬದ್ಧವಾಗಿ ಹಾಡುವ ಬಗೆ ಇನ್ನೂ ದಕ್ಕಿಸಿಕೊಂಡಿರಲಿಲ್ಲವೋ ಏನೋ. ಆದರೆ ಪುಟ್ಟಣ್ಣಯ್ಯ ಮಾಸ್ತರರು ನಟರು ಹಾಡುವ ಹಾಡಿಗೆ ತಾಳ ಹೊಂದಿಸಿ ನುಡಿಸುತ್ತಿರಲಿಲ್ಲ. ಬದಲಿಗೆ ಅವರು ತಾಳಕ್ಕೆ ಹೊಂದಿಸಿಕೊಂಡು ಹಾಡುವಂತೆ ನಾರದರನ್ನು ರಂಗದ ಮೇಲೇ ಅಣಿಮಾಡುತ್ತಿದ್ದದ್ದು ಚೆಂದ ಇತ್ತು.

ಪುಟ್ಟಣ್ಣಯ್ಯನವರು ಒಂದೇ ಕೈನಲ್ಲಿ ಲೆಗ್ ಹಾರ್ಮೋನಿಯಂ ನುಡಿಸುತ್ತ ಎಡಕೈಯಲ್ಲಿ ಹಾರ್ಮೋನಿಯಂ ಪೆಟ್ಟಿಗೆಯ ಕಿವಿಭಾಗದಲ್ಲಿ ತಾಳ ಹಾಕಿಕೊಂಡೇ ನುಡಿಸುತ್ತಿದ್ದರು. ಇದು… ವೃತ್ತಿಪರತೆ ಅಂದರೆ ಅಂದುಕೊಂಡೇ ಸಂತೋಷದಲ್ಲಿ ನಾಟಕ ನೋಡುವುದನ್ನು ಮುಂದುವರೆಸಿದೆ.

ಹೀಗೇ ಅನುಕ್ರಮದಲ್ಲಿ ದೃಶ್ಯಗಳು ಅನಾವರಣವಾಗಲು ಆರಂಭಿಸಿದಾಗ ನನಗೆ ಒಂದು ಸಂಗತಿ ಮನದಟ್ಟಾಯಿತು. ಕೆಲವೇ ಕೆಲವು ನಟರು ನಿರ್ದಿಷ್ಟ ಮನೆಯ ಶೃತಿಗೆ ನಿಲುಕಲು ಪ್ರಯತ್ನಿಸುತ್ತ ಹಾಡುತ್ತಿದ್ದರು. ಆದರೆ ಬಹುತೇಕರು ಶೃತಿ ಕೂಡಿಸುತ್ತ ಹಾಡುತ್ತಿದ್ದರು. ಇದು ಪರಮಶಿವನ್ ಸರ್ ತರಬೇತುಗೊಳಿಸಿರುವ ಬಗೆ ಮತ್ತು ಜಾದು ಒಂದು ಕಡೆ.

ಆದರೆ ಮತ್ತೊಂದು ಕಡೆ ನಟರ ಅಭಿನಯ ಕ್ರಮದಲ್ಲಿ ಮಂಡ್ಯ ರಮೇಶ್ ಸರ್ ಅವರ ನಿರ್ದೇಶನದ ಪಾಠಕ್ರಮ ತುಂಬ ಢಾಳಾಗಿ ಕಾಣುತ್ತಿತ್ತು. ರಮೇಶ್ ಸರ್ ನೀನಾಸಂನಲ್ಲಿ ಕಲಿತವರು, ನಂತರ ರಂಗಾಯಣದಲ್ಲಿ ಕಲಿತವರು. ಈ ಎರಡೂ ಶಾಲೆಗಳಲ್ಲಿ ಕಲಿಸಲಾಗುವ ಬಾಡಿ ಲ್ವ್ಯಾಂಗ್ವೇಜ್ ಮತ್ತು ಅದರ ಚಾಕಚಕ್ಯತೆಯನ್ನ ‘ಸುಭದ್ರಾ ಕಲ್ಯಾಣ’ದಲ್ಲೂ ಸ್ಪಷ್ಟವಾಗಿ ಗುರುತಿಸಬಹುದಿತ್ತು.

ಸಾಮಾನ್ಯವಾಗಿ ಪೌರಾಣಿಕ ನಾಟಕಗಳಲ್ಲಿ ನಟರ ಹೆಚ್ಚಿನ ಗಮನ ಹಾಡುಗಳ ಕಡೆಗೇ ಇರುತ್ತದೆ. ಅಭಿನಯ ಮತ್ತು ಬಾಡಿ ಲ್ವ್ಯಾಂಗೇಜ್ ನಲ್ಲಿರು ಶಾರ್ಪ್ ನೆಸ್ ಮರೆಯಾಗಿರುತ್ತದೆ. ಪರಮಶಿವನ್ ಸರ್ ರಂಗಸಂಗೀತದ ಜ್ಞಾನವನ್ನ ನಟರಿಗೆ ದಕ್ಕಿಸಿಕೊಡಲು ಶ್ರಮಿಸಿದ್ದರೆ ಮಂಡ್ಯ ರಮೇಶ್ ಸರ್ ಪೌರಾಣಿಕ ನಾಟಕದಲ್ಲೂ ತಾವು ಕಲಿತ ಸ್ಕೂಲ್ ಆಫ್ ಥಾಟ್ ಆ್ಯಕ್ಟಿಂಗ್ ಸ್ಟೈಲನ್ನ ತುಂಬ ಅಚ್ಚುಕಟ್ಟಾಗಿ ತಂದಿದ್ದರು. ಮುಖ್ಯವಾಗಿ ಸಂನ್ಯಾಸಿ ವೇಷದಲ್ಲಿ ಬರುವ ಅರ್ಜುನ, ಹಾಗೂ ಅವನ ಶಿಷ್ಯನಾಗಿ ಬರುವ ಭೀಮನ ಮಗ ಘಟೋತ್ಕಚ- ಈ ಇಬ್ಬರೂ ಮಾರು ವೇಷದಲ್ಲಿ ಬಂದು ಬಲಭದ್ರನಿಗೆ ಯಾಮಾರಿಸುವ ದೃಶ್ಯದಲ್ಲಿ ನನಗೆ ಅರ್ಜುನ ಹಾಗೂ ಘಟೋತ್ಕಚನ ದೇಹಭಾಷೆಯಲ್ಲಿ ನೀನಾಸಂ ಸ್ಟೈಲಿನ ಝಲಕುಗಳು ಕಂಡವು. ಮತ್ತು ಅವು ಚೇತೋಹಾರಿ ಅನಿಸಿದವು. ಸಾಮಾನ್ಯವಾಗಿ ಪೌರಾಣಿಕ ನಾಟಕಗಳಲ್ಲಿ ಕಡೆಗಣಿಸುವ ದೇಹಭಾಷೆಯ ಕೊರತೆಯನ್ನ ರಮೇಶ್ ಸರ್ ತುಂಬ ಸಮರ್ಥ ರೀತಿಯಲ್ಲಿ ತುಂಬಿಕೊಟ್ಟಿದ್ದರು. ಇದು ನನಗೆ ಹಳೆ ಬೇರು ಮತ್ತು ಹೊಸ ಚಿಗುರಿನ ಹಳೇ ರೂಪಕ ನೆನಪಿಸಿತು. ನಂತರ ದೃಶ್ಯಗಳ ವಿಭಾಗ ಕ್ರಮ, ಅದರಲ್ಲಿ ಇರಿಸಿಕೊಂಡಿದ್ದ ಅಚ್ಚುಕಟ್ಟಿನ ಹಿಂದೆ ರಮೇಶ್ ಸರ್ ಕೊಡುಗೆ ಇದ್ದದ್ದನ್ನು ಕಾಣಿಸುತ್ತಿತ್ತು.

ಅರ್ಜುನ ಹಾಡುತ್ತಿದ್ದ ಕ್ರಮ ಕೊಂಚ ಪೇಲವ ಅನಿಸುತ್ತಿದ್ದರೂ ಅಭಿನಯದಲ್ಲಿ ಲವಲವಿಕೆ ಇತ್ತು. ಆದರೆ ಸುಭದ್ರೆ ಬಂದ ತರುವಾಯ ಮತ್ತು ಆ ನಟಿ ಹಾಡಗಳನ್ನು ಹಾಡಿದ ರೀತಿ ಅದ್ಭುತವಾಗಿತ್ತು. ಅರ್ಜುನ, ಘಟೋತ್ಕಚ, ಕೃಷ್ಣ, ದಾರುಕ ಅಭಿನಯದಲ್ಲಿನ ಝಲಕುಗಳನ್ನ ಕಾಣಿಸುತ್ತಿದ್ದರೆ ಹಾಡು ಮತ್ತು ಅಭಿನಯದಲ್ಲಿ ಬಲಭದ್ರ ಹಾಗೂ ಸುಭದ್ರೆ ಮನಸ್ಸಿನಲ್ಲಿ ನಿಂತರು.

ಒಟ್ಟಾರೆ ಈ ಪ್ರಯೋಗವನ್ನ ಹೀಗೆ ಗ್ರಹಿಸಿ ಹೇಳಬಹುದು- ನಟನ ಕಲಾವಿದರು ಅಭಿನಯಿಸಿದ ‘ಸುಭದ್ರಾ ಕಲ್ಯಾಣ’ ನಾಟಕವೆಂಬೊ ದೇಹದಲ್ಲಿನ ಕಂಠದಲ್ಲಿ ವೃತ್ತಿ ನಾಟಕ ಕಂಪನಿ ಶೈಲಿಯ ಹಾಡುಗಳ ನಿನಾದ ಇದ್ದರೆ, ಆ ಒಟ್ಟು ದೇಹದಲ್ಲಿನ ದೇಹಭಾಷೆಯಲ್ಲಿ ಮೆಥೆಡ್ ಆ್ಯಕ್ಟಿಂಗ್ ಶೈಲಿ ನುಸುಳಿ ಜಾಗ ಪಡೆದುಕೊಂಡಿತ್ತು. ಹಾಗಾಗಿ ಈ ನಾಟಕ ಮೇಲೆ ವಿವರಿಸಿದ ಎರಡೂ ಬಗೆಗಳ ಸಂಗಮ. ಈ ಸಂಗಮಕ್ಕೆ ಕಾರಣರಾದ ಪರಮಶಿವನ್ ಸರ್ ಹಾಗು ರಮೇಶ್ ಸರ್ ಅವರನ್ನು ಖುಷಿಯಲ್ಲಿ ನೆನೆಯುತ್ತಲೇ ಮತ್ತೆ ಬಾಬು ಸರ್ ಜೊತೆ ಕಾರು ಹತ್ತಿ ಬೆಂಗಳೂರಿನ ಕಡೆ ಹೊರಟೆ…