“ನನ್ನ ಮೂವರು ಅಕ್ಕಂದಿರಲ್ಲಿ ಸಣ್ಣಕ್ಕನೇ ನೋಡಲು ಬಹಳ ಚೆನ್ನಾಗಿದ್ದವಳು.ಆಕೆ ತುಂಬ ಮೃದು ಮತ್ತು ಕರುಣಾಮಯಿ.ಅವಳೆಂತಹ ಚೆಲುವೆ ಅಂದರೆ ಗಾಜಿನ ಹಾಗೆ ಪಾರದರ್ಶಕ, ಸೂಕ್ಷ್ಮ. ನಮ್ಮಣ್ಣ ಬೀಮ್ ಮೇಲಿಂದ ಬಿದ್ದು ತಲೆಗೆ ಏಟು ಬಿದ್ದಾಗ ಅವನ ಬದಲು ನನ್ನ ಜೀವ ಹೋಗಲಿ ಅಂತ ಅತ್ತವಳು ಈ ಅಕ್ಕ.ಇದನ್ನು ಬರೀತಿರಬೇಕಾದರೆ ಕೂಡ ನನ್ನ ಕಣ್ಣುಗಳು ತುಂಬಿ, ಗಂಟಲು ಉಬ್ಬಿ ಬರ್ತಿದೆ. ಬಿಕ್ಕಳಿಸದೆ ಬರೆಯಲಾಗುತ್ತಿಲ್ಲ”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಎರಡನೆಯ ಅಧ್ಯಾಯ.

ನಮ್ಮಣ್ಣ ನನಗಿಂತ ನಾಲ್ಕು ವರ್ಷ ದೊಡ್ಡವನು. ಆದರೆ ಬುದ್ಧಿವಂತಿಕೆಯ ವಿಷಯಕ್ಕೆ ಬಂದಾಗ ನಮ್ಮಿಬ್ಬರ ನಡುವೆ ಹತ್ತು ವರ್ಷಗಳ ವ್ಯತ್ಯಾಸವಿತ್ತು. ನಾನು ಪ್ರೈಮರಿ ಸ್ಕೂಲಿನಲ್ಲಿ ಮೂರನೇ ತರಗತಿಗೆ ಬರೋವೇಳೆಗೆ ಮಗುತನ ಕಳೆದು ಸ್ವಲ್ಪ ಮಟ್ಟಿಗೆ ಚಿಕ್ಕಹುಡುಗನ ಹಾಗೆ ಬೆಳೆದಿದ್ದೆ. ಆಗ ನಮ್ಮಣ್ಣ ಮಿಡಲ್ ಸ್ಕೂಲಿಗೆ ಬಂದಿದ್ದ. ಆ ಸಮಯದಲ್ಲಿ ಯಾರೂ ಊಹಿಸದೆ ಇದ್ದಂತಹ ಒಂದು ಘಟನೆ ನಡೀತು.

ಮೊದಲೇ ಹೇಳಿದೆನಲ್ಲ ನಮ್ಮಣ್ಣ ಬುದ್ಧಿವಂತ ವಿದ್ಯಾರ್ಥಿ. ಅವನು ಐದನೇ ತರಗತಿಯಲ್ಲಿದ್ದಾಗ ಟೋಕಿಯೋದ ಪ್ರೈಮರಿ ಸ್ಕೂಲು ಮಕ್ಕಳಿಗೆ ನಡೆಸೋ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ. ಆರನೇ ತರಗತಿಯಲ್ಲಿ ಮೊದಲನೇ ಸ್ಥಾನ ಪಡೆದಿದ್ದ. ಮಿಡಲ್ ಸ್ಕೂಲಿನಲ್ಲಿ ಹೈಸ್ಕೂಲಿಗೆ ನಡೆಸೋ ಪ್ರವೇಶ ಪರೀಕ್ಷೆ ತೊಗೊಂಡಾಗ ಫೇಲಾಗಿ ಬಿಟ್ಟ. ಆ ಪರೀಕ್ಷೆ ಪಾಸ್ ಮಾಡಿದ್ದರೆ ಅವನಿಗೆ ಟೋಕಿಯೊ ಇಂಪಿರಿಯಲ್ ಯೂನಿರ್ಸಿಟಿಯಲ್ಲಿ ಓದೋ ಅವಕಾಶ ಸಿಕ್ಕಿರೋದು.

ಈ ಘಟನೆ ನಮ್ಮ ಮನೆಯವರ ಪಾಲಿಗೊಂದು ಕೆಟ್ಟಕನಸು. ನಮ್ಮಪ್ಪ ಕುಗ್ಗಿಹೋದರು. ಮನೆಯಲ್ಲಿ ವಿಚಿತ್ರ ವಾತಾವರಣ ಆವರಿಸಿಕೊಂಡಿದ್ದು ನಂಗಿನ್ನೂ ನೆನಪಿದೆ. ಇದ್ದಕ್ಕಿದ್ದ ಹಾಗೇ ಎದ್ದ ಸುಂಟರಗಾಳಿ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿಹೋದ ಹಾಗೆ. ನಮ್ಮಪ್ಪ ಆಕಾಶ ನೋಡ್ತಾ ಕೂರುತ್ತಿದ್ದರು, ಅಮ್ಮ ಗೊತ್ತುಗುರಿಯಿಲ್ಲದೆ ಸುಮ್ಮನೆ ಮನೆಯಲ್ಲಿ ಓಡಾಡೋರು, ಅಕ್ಕಂದಿರು ನಮ್ಮಣ್ಣನ ನೋಟವನ್ನ ತಪ್ಪಿಸುತ್ತಾ ಮೆಲ್ಲಗೆ ಮಾತಾಡ್ಕೊತಿದ್ದರು. ನಾನು ಕೂಡ ಈ ಘಟನೆಯಿಂದ ಅವಮಾನಕ್ಕೊಳಗಾದವನ ಹಾಗೇ ವಿಚಿತ್ರ ಭಾವೋದ್ವೇಗಕ್ಕೆ ಒಳಗಾಗಿದ್ದೆ.

(ಇವತ್ತಿಗೂ ಅವನು ಆ ಪ್ರವೇಶ ಪರೀಕ್ಷೆಯಲ್ಲಿ ಯಾಕೆ ಫೇಲಾದ ಅಂತ ನಂಗರ್ಥವಾಗಿಲ್ಲ. ಅವನಿಗೆ ಯಾವತ್ತೂ ಪರೀಕ್ಷೆಗಳ ಬಗ್ಗೆ ಪ್ರಶ್ನೆಗಳ ಬಗ್ಗೆ ಸಮಸ್ಯೆಯಿರಲಿಲ್ಲ. ಈ ಪರೀಕ್ಷೆ ಮುಗಿದಾಗ ಕೂಡ ಅವನು ಆತ್ಮವಿಶ್ವಾಸದಿಂದಲೇ ಇದ್ದ. ಅವನು ಈ ಎರಡು ಕಾರಣಗಳಿಂದ ಫೇಲಾಗಿಬಹುದಾ ಅಂತ ನನ್ನ ಊಹೆ: ಒಂದು ಅಂತಿಮ ಆಯ್ಕೆಯಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ, ಎರಡನೆಯದು ಮೌಖಿಕ ಪರೀಕ್ಷೆ. ನನ್ನಣ್ಣ ಅಹಂಕಾರಿ ಮತ್ತು ವಿಚಿತ್ರ ಮನುಷ್ಯ. ಅವನ ಉತ್ತರಗಳು ನಿಸ್ಸಂಶಯವಾಗಿ ಅವರ ಮಾನದಂಡಗಳಿಗೆ ಒಪ್ಪಿತವಾಗಿರಲ್ಲ.)

ವಿಚಿತ್ರ ಅಂದರೆ ಆವಾಗ ನಮ್ಮಣ್ಣನ ಮೂಡು ಹೇಗಿತ್ತು ಅವನು ಹೇಗೆ ನಡ್ಕೊಂಡ ಅನ್ನೋದು ನೆನಪಿಲ್ಲ. ಈ ಘಟನೆಯಿಂದ ಅವನಿಗೂ ಶಾಕ್ ಆಗಿತ್ತು ಆದರೆ ಅವನದನ್ನ ಕೇರ್ ಮಾಡದವನ ಹಾಗೆ ಇದ್ದ ಅಂತ ಕಾಣುತ್ತೆ. ನಂಗೆ ಈ ಅನುಮಾನ ಯಾಕೆ ಬಂತು ಅಂದ್ರೆ ಈ ಘಟನೆಯ ನಂತರ ಇದ್ದಕ್ಕಿದ್ದ ಹಾಗೆ ಅವನ ಸ್ವಭಾವ ನಾಟಕೀಯವಾಗಿ ಬದಲಾಗೋಯ್ತು. ನಮ್ಮಪ್ಪನ ಸಲಹೆಯಂತೆ ಟೋಕಿಯೋದ ವಕಮತ್ಸ್ ಚೊ ದಲ್ಲಿದ್ದ ಸೆಯ್ಜೊ ಮಿಡಲ್ ಸ್ಕೂಲಿಗೆ ಸೇರಿದ. ಅದು ಥೇಟ್ ಮಿಲಿಟರಿ ಸ್ಕೂಲುಗಳ ಹಾಗಿತ್ತು. ನಮ್ಮಣ್ಣ ಅಲ್ಲಿನ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿರಬೇಕು ಅನ್ನಿಸುತ್ತೆ. ಅದೇನೆ ಇರಲಿ ಆಗವನು ತನ್ನ ವಿದ್ಯಾಭ್ಯಾಿಸವನ್ನ ಗಾಳಿಗೆ ತೂರಿಬಿಟ್ಟ. ಸಾಹಿತ್ಯದ ಗೀಳು ಹತ್ತಿಸಿಕೊಂಡ. ಅಪ್ಪ ಮತ್ತು ಅಣ್ಣನ ನಡುವೆ ತಿಕ್ಕಾಟ ನಡೀತಾನೇ ಇತ್ತು.

ಅಪ್ಪ ತಾವು ಓದಿದ್ದ ಇಂಪಿರಿಯಲ್ ಆರ್ಮಿಯ ಟೊಯಾಮಾ ಅಕಾಡೆಮಿಯಲ್ಲಿ ಮೇಷ್ಟ್ರಾಗಿದ್ದರು. ಅವರು ಬಹಳ ಒಳ್ಳೇ ಮೇಷ್ಟ್ರು. ಅವರ ಕೆಲವು ವಿದ್ಯಾರ್ಥಿಗಳು ಜನರಲ್ ಆಗೋ ಮಟ್ಟವನ್ನ ತಲುಪಿದ್ದರು. ಅವರ ಶಿಕ್ಷಣದ ತತ್ವಗಳು ಭಯಂಕರ ಕಠೋರ. ಪಾಶ್ಚಾತ್ಯ ಸಾಹಿತ್ಯ ಓದಿಕೊಂಡು ಅಲ್ಲಿನ ಐಡಿಯಾಗಳ ಕಡೆ ಒಲವು ಬೆಳಸಿಕೊಳ್ಳುತ್ತಿದ್ದ ಅಣ್ಣನೊಂದಿಗೆ ಅಪ್ಪನ ತಿಕ್ಕಾಟ ಅನಿವಾರ್ಯವಾಗಿತ್ತು.

ಅವರಿಬ್ಬರ ತಿಕ್ಕಾಟದ ಕಾರಣ ನಂಗರ್ಥವಾಗ್ತಿರಲಿಲ್ಲ. ಅದನ್ನು ಬೇಸರದಲ್ಲಿ ನೋಡೋದು ಬಿಟ್ಟು ನಾನೇನೂ ಮಾಡುವಂತಿರಲಿಲ್ಲ. ಈ ಸುಂಟರಗಾಳಿ ನಮ್ಮ ಮನೆಯನ್ನ ಹಾದು ಹೋಗ್ತಿದ್ದ ಹಾಗೆ ಇನ್ನೊಂದು ಬದಲಾವಣೆಯ ತಂಗಾಳಿ ಬೀಸಲು ಶುರುವಾಯಿತು.

ವಿಚಿತ್ರ ಅಂದರೆ ಆವಾಗ ನಮ್ಮಣ್ಣನ ಮೂಡು ಹೇಗಿತ್ತು ಅವನು ಹೇಗೆ ನಡ್ಕೊಂಡ ಅನ್ನೋದು ನೆನಪಿಲ್ಲ. ಈ ಘಟನೆಯಿಂದ ಅವನಿಗೂ ಶಾಕ್ ಆಗಿತ್ತು ಆದರೆ ಅವನದನ್ನ ಕೇರ್ ಮಾಡದವನ ಹಾಗೆ ಇದ್ದ ಅಂತ ಕಾಣುತ್ತೆ. ನಂಗೆ ಈ ಅನುಮಾನ ಯಾಕೆ ಬಂತು ಅಂದ್ರೆ ಈ ಘಟನೆಯ ನಂತರ ಇದ್ದಕ್ಕಿದ್ದ ಹಾಗೆ ಅವನ ಸ್ವಭಾವ ನಾಟಕೀಯವಾಗಿ ಬದಲಾಗೋಯ್ತು.

ನನ್ನ ದೊಡ್ಡಕ್ಕನ ಮಗ ನನ್ನ ವಯಸ್ಸಿನವನು. ಅಂದರೆ ನಾನು ಹುಟ್ಟೋ ಹೊತ್ತಿಗೆ ನನ್ನ ಈ ಅಕ್ಕ ಮದುವೆಯಾಗಿ ಮನೆಬಿಟ್ಟು ಹೋಗಿದ್ದಳು. ನನ್ನ ದೊಡ್ಡಣ್ಣ ಕೂಡ ನನಗಿಂತ ತುಂಬ ದೊಡ್ಡವನು. ಹಾಗಾಗಿ ನಾನು ಬೌದ್ಧಿಕವಾಗಿ, ದೈಹಿಕವಾಗಿ ಬೆಳೆಯುವ ಹೊತ್ತಿಗೆ ಅವನು ಕೂಡ ಮನೆಬಿಟ್ಟು ಹೋಗಿದ್ದ. ಅಪರೂಪಕ್ಕೊಮ್ಮೆ ನಾನವನನ್ನ ನೋಡ್ತಿದ್ದೆ. ನನ್ನ ಎರಡನೆಯ ಅಣ್ಣ ಚಿಕ್ಕವನಾಗಿದ್ದಾಗಲೇ ನಾನು ಹುಟ್ಟೋಕೂ ಮುಂಚೆನೇ ಖಾಯಿಲೆಯಿಂದ ತೀರಿಕೊಂಡಿದ್ದ. ಹಾಗಾಗಿ ಈಗ ಬರೀತಿದೀನಲ್ಲ ಈ ಅಣ್ಣ ಮತ್ತು ನನ್ನ ಉಳಿದ ಮೂವರು ಅಕ್ಕಂದಿರ ಜೊತೆಯಲ್ಲಿ ನಾನು ಬೆಳೆದದ್ದು. ನಾನೇ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕೋನು.

ನನ್ನೆಲ್ಲ ಅಕ್ಕಂದಿರ ಹೆಸರಿನ ಕೊನೆಯಲ್ಲಿ ಅವರು ದೊಡ್ಡವರು ಅಂತ ಸೂಚಿಸೋದಕ್ಕೆ “ಯೊ” ಅಂತ ಸೇರಿಸಿದ್ದರು. ಆಗಲೇ ಹೇಳಿದ್ದೆನಲ್ಲ ಮದುವೆಯಾಗಿ ಹೋದ ಅಕ್ಕ ಆಕೆ ಶಿಗೆಯೊ. ಉಳಿದವರು ಹರಯೊ, ತನೆಯೊ ಮತ್ತು ಮೊಮೊಯೊ. ಆದರೆ ಮನೆಯಲ್ಲಿ ನಾನವರನ್ನ ಅವರ ವಯಸ್ಸಿಗನುಗುಣವಾಗಿ ಕರೀತಿದ್ದೆ. ಮೊದಲನೆಯವಳನ್ನ “ದೊಡ್ಡಕ್ಕ” ಎರಡನೆಯವಳನ್ನ “ಅಕ್ಕ”, ಮೂರನೆಯವಳನ್ನ “ಸಣ್ಣಕ್ಕ” ಅಂತ. ಮೊದಲೇ ಹೇಳಿದ ಹಾಗೆ ನನ್ನಣ್ಣನ ಜೊತೆ ನನ್ನ ಸಂಬಂಧ ಅಷ್ಟಕಷ್ಟೇ. ಹಾಗಾಗಿ ನಾನು ಯಾವಾಗಲೂ ನಮ್ಮಕ್ಕಂದಿರ ಜೊತೆ ಆಟ ಆಡ್ತಿದ್ದೆ. (ನಾನೀಗಲೂ ಅಚ್ಚಚ್ಚು ಬೆಲ್ಲದಚ್ಚು ಮತ್ತು ದಾರದ ಆಟ, ಅಂದ್ರೆ ಎರಡೂ ಕೈಗಳ ಹೆಬ್ಬೆರಳು ಮತ್ತು ಕಿರುಬೆರಳಿಗೆ ದಾರ ಸಿಕ್ಕಿಸಿಕೊಂಡು ಆಡುವ ಆಟ) ಚೆನ್ನಾಗಿ ಆಡ್ತೀನಿ. ಈಗ ನಾನಿದನ್ನ ನನ್ನ ಪರಿಚಯದವರ ಮುಂದೆ ಅಥವ ನನ್ನ ಚಿತ್ರತಂಡದ ಮಂದಿ ಮುಂದೆ ಆಡಿ ತೋರಿಸಿದರೆ ಅವರಿಗೆ ಆಶ್ಚರ್ಯವಾಗಿಬಿಡುತ್ತೆ. ಅವರು ನನ್ನ “ಅಳುಮುಂಜಿ” ಕಾಲದ ಕತೆ ಕೇಳಿ ಇನ್ನಷ್ಟು ಆಶ್ಚರ್ಯಪಡ್ತಾರೆ ಅಂತ ನಂಗೊತ್ತು.)

ನಾನು ಹೆಚ್ಚು ಸಮಯ ಕಳೀತಾ ಇದ್ದದ್ದು ನನ್ನ ಸಣ್ಣಕ್ಕನ ಜೊತೆ. ಒಂದು ಸಾರಿ ಒಮೊರಿ ಜಿಲ್ಲೆಯಲ್ಲಿ ನಮ್ಮಪ್ಪ ಪಾಠ ಮಾಡ್ತಿದ್ದ ಶಾಲೆಯಲ್ಲಿ ನಾವಿಬ್ಬರೂ ಆಟ ಆಡ್ತಿದ್ದಾಗ ನಡೆದ ಘಟನೆ ನಂಗಿನ್ನೂ ಚೆನ್ನಾಗಿ ನೆನಪಿದೆ. ನಾವು ಅಲ್ಲೊಂದು ಮೂಲೆಯಲ್ಲಿ ಕೂತು ಆಟಆಡ್ತಿರಬೇಕಾದರೆ ಇದ್ದಕ್ಕಿದ್ದ ಹಾಗೆ ಸುಂಟರಗಾಳಿ ಎದ್ದುಬಿಟ್ಟಿತು. ಆ ಗಾಳಿ ನಮ್ಮಿಬ್ಬರನ್ನೂ ಆಕಾಶಕ್ಕೆ ಎತ್ತಿಕೊಂಡು ಹೋಗಿ ಗಾಳಿಯಲ್ಲಿ ಕ್ಷಣ ಕಾಲ ಸುತ್ತಿಸಿ ದೊಪ್ಪಂತ ನೆಲದ ಮೇಲೆ ಎಸೆಯಿತು. ನಾನು ನಮ್ಮಕ್ಕನ ಕೈಯನ್ನ ಗಟ್ಟಿಯಾಗಿ ಹಿಡ್ಕೊಂಡಿದ್ದೆ. ಇಬ್ಬರೂ ಮನೆಕಡೆ ಓಡಿದ್ವಿ. ನಾನು ದಾರಿಯುದ್ದಕ್ಕೂ ಅಳ್ತಾನೆ ಇದ್ದೆ.

ನಾನು ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಪ್ರೀತಿಯ ಈ ಅಕ್ಕ ಖಾಯಿಲೆ ಬಿದ್ದಳು. ಇದ್ದಕ್ಕಿದ್ದ ಹಾಗೆ ಯಾವುದೋ ಕೆಟ್ಟಗಾಳಿ ಸೋಕಿದವಳ ಹಾಗೆ ಸತ್ತುಹೋದಳು. ಜುನ್ ಟೆನ್ಡೋ ಆಸ್ಪತ್ರೆಯಲ್ಲಿ ಅವಳನ್ನ ನೋಡಲು ಹೋದಾಗ ಅವಳ ಮುಖದಲ್ಲಿದ್ದ ಹತಾಶ ನಗುವನ್ನ ಮರೆಯಲು ಸಾಧ್ಯವಿಲ್ಲ.

ನಾವು ಅಲ್ಲೊಂದು ಮೂಲೆಯಲ್ಲಿ ಕೂತು ಆಟಆಡ್ತಿರಬೇಕಾದರೆ ಇದ್ದಕ್ಕಿದ್ದ ಹಾಗೆ ಸುಂಟರಗಾಳಿ ಎದ್ದುಬಿಟ್ಟಿತು. ಆ ಗಾಳಿ ನಮ್ಮಿಬ್ಬರನ್ನೂ ಆಕಾಶಕ್ಕೆ ಎತ್ತಿಕೊಂಡು ಹೋಗಿ ಗಾಳಿಯಲ್ಲಿ ಕ್ಷಣ ಕಾಲ ಸುತ್ತಿಸಿ ದೊಪ್ಪಂತ ನೆಲದ ಮೇಲೆ ಎಸೆಯಿತು. ನಾನು ನಮ್ಮಕ್ಕನ ಕೈಯನ್ನ ಗಟ್ಟಿಯಾಗಿ ಹಿಡ್ಕೊಂಡಿದ್ದೆ. ಇಬ್ಬರೂ ಮನೆಕಡೆ ಓಡಿದ್ವಿ. ನಾನು ದಾರಿಯುದ್ದಕ್ಕೂ ಅಳ್ತಾನೆ ಇದ್ದೆ.

ಮಾರ್ಚ್ 3ರಂದು ಬೊಂಬೆ ಹಬ್ಬದ ಸಮಯದಲ್ಲಿ ಅವಳ ಜೊತೆ ಆಟ ಆಡ್ತಿದ್ದದ್ದನ್ನ ಮರೆಯಲು ಸಾಧ್ಯವಿಲ್ಲ. ನಮ್ಮ ಮನೆಯಲ್ಲಿ ತಲೆತಲಾಂತರದಿಂದ ಬಂದಿದ್ದ ಮಹಾರಾಜ ಮಹಾರಾಣಿಯರ ಬೊಂಬೆಗಳಿದ್ದವು. ಇವೆಲ್ಲ ಹಬ್ಬದ ಬೊಂಬೆಗಳು. ಇದರ ಜೊತೆ ಮೂವರು ಸೇವಕಿಯರು, ಐವರು ಆಸ್ಥಾನದ ಸಂಗೀತಗಾರರು ಮತ್ತು ಉರೊಶಿಮ ತಾರೋ ಬೊಂಬೆ (ಇವನು ರಿಪ್ ವ್ಯಾನ್ ವಿಂಕಲ್, ಕ್ಯಾಟ್ ಸ್ಕಿಲ್ ಬೆಟ್ಟಗಳಿಗೆ ಹೋದವನು ಅಲ್ಲೇ ಇಪ್ಪತ್ತು ವರ್ಷ ಮಲಗಿಬಿಟ್ಟಿದ್ದನಂತೆ. ಕಣ್ಣುಬಿಟ್ಟಾಗ ಇಡೀ ಜಗತ್ತು ಬದಲಾಗಿ ಹೋಗಿತ್ತಂತೆ) ತರಹದವನು. ಆಮೆಯ ಮೇಲೆ ಕೂತು ನೀರಲ್ಲಿ ಸುತ್ತಾಡಲಿಕ್ಕೆ ಹೋದವನು ಮರಳಿ ಮನೆಗೆ ಬಂದಾಗ ಮುದುಕನಾಗಿದ್ದನಂತೆ). ಹಗ್ಗ ಕಟ್ಟಿದ್ದ ಪಿಕೆನಿಸ್ ನಾಯಿ ಹಿಡಿದ ಮತ್ತೊಬ್ಬಳು ಸೇವಕಿಯ ಬೊಂಬೆಯಿತ್ತು. ಎರಡು ಜೊತೆ ಮಡಚುವಂತಹ ಚಿನ್ನದ ಬಣ್ಣದ ಪರದೆಗಳು, ಎರಡು ಲಾಟೀನುಗಳು ಮತ್ತು ಐದು ಪುಟ್ಟ ಚಿನ್ನದ ಬಣ್ಣದ ತಟ್ಟೆಗಳು, ಅದರೊಂದಿಗೆ ಪುಟ್ಟ ಪಾತ್ರೆಗಳು ಮತ್ತು ಸಮಾರಂಭಗಳಿಗೆ ಅಡುಗೆ ಮಾಡಲು ಬಳಸುವ ಪಾತ್ರೆಗಳಿದ್ದವು. ಅದರೊಂದಿಗೆ ನನ್ನ ಅಂಗೈಯಲ್ಲಿ ಹಿಡಿಸುವಂತಹ ಬೆಳ್ಳಿಯ ಪುಟಾಣಿ ಬಟ್ಟಲಿತ್ತು. ಐದು ಮೆಟ್ಟಿಲುಗಳಾಗಿ ಜೋಡಿಸಿದ್ದ ಸ್ಟ್ಯಾಂಡಿನಲ್ಲಿ ಕೆಂಪುಬಟ್ಟೆ ಹಾಸಿ ಈ ಬೊಂಬೆಗಳನ್ನ ಜೋಡಿಸಿಡುತ್ತಿದ್ದರು. ದೀಪಗಳನ್ನು ಆರಿಸಿದಾಗ ಈ ಲಾಟೀನಿನಲ್ಲಿ ಹಚ್ಚಿರುತ್ತಿದ್ದ ಮೇಣದ ಬತ್ತಿಯ ಬೆಳಕು ಸಣ್ಣಗೆ ಕತ್ತಲು ಕೋಣೆಯಲ್ಲಿದ್ದ ಆ ಗೊಂಬೆಗಳ ಮೇಲೆ ಬೀಳುತ್ತಿತ್ತು. ಆ ಬೆಳಕಿನಲ್ಲಿ ಬೊಂಬೆಗಳು ಅದೆಷ್ಟು ಜೀವಂತವಾಗಿ ಕಾಣುತ್ತಿತ್ತು ಅಂದ್ರೆ ಯಾವುದೇ ಕ್ಷಣದಲ್ಲಿ ಅವು ಮಾತಾಡಿಬಿಡುತ್ತೇನೋ ಅನ್ನೋ ಹಾಗೆ. ಈ ಅದ್ಭುತ ನೋಟ ನನ್ನಲ್ಲಿ ಸ್ವಲ್ಪ ಭಯ ಕೂಡ ಹುಟ್ಟಿಸೋದು. ಸಣ್ಣಕ್ಕ ನನ್ನ ಕರೆದು ಈ ಬೊಂಬೆಗಳ ಮುಂದೆ ಕೂಡಿಸ್ತಿದ್ದಳು. ನನ್ನ ಮುಂದೆ ಒಂದು ತಟ್ಟೆ ಇಟ್ಟು ಆ ಬೆಳ್ಳಿಬಟ್ಟಲನ್ನು ಕೊಡ್ತಿದ್ದಳು. ಅಲ್ಲಿದ್ದ ಪುಟ್ಟ ಪುಟ್ಟ ಬಟ್ಟಲುಗಳಲ್ಲಿನ ಸಿಹಿತಿಂಡಿಯನ್ನ ನಂಗೆ ಕೊಡೋಳು.

ನನ್ನ ಮೂವರು ಅಕ್ಕಂದಿರಲ್ಲಿ ಸಣ್ಣಕ್ಕನೇ ನೋಡಲು ಬಹಳ ಚೆನ್ನಾಗಿದ್ದವಳು. ಆಕೆ ತುಂಬ ಮೃದು ಮತ್ತು ಕರುಣಾಮಯಿ. ಅವಳೆಂತಹ ಚೆಲುವೆ ಅಂದರೆ ಗಾಜಿನ ಹಾಗೆ ಪಾರದರ್ಶಕ, ಸೂಕ್ಷ್ಮ. ನಮ್ಮಣ್ಣ ಬೀಮ್ ಮೇಲಿಂದ ಬಿದ್ದು ತಲೆಗೆ ಏಟು ಬಿದ್ದಾಗ ಅವನ ಬದಲು ನನ್ನ ಜೀವ ಹೋಗಲಿ ಅಂತ ಅತ್ತವಳು ಈ ಅಕ್ಕ. ಇದನ್ನು ಬರೀತಿರಬೇಕಾದರೆ ಕೂಡ ನನ್ನ ಕಣ್ಣುಗಳು ತುಂಬಿ, ಗಂಟಲು ಉಬ್ಬಿ ಬರ್ತಿದೆ. ಬಿಕ್ಕಳಿಸದೆ ಬರೆಯಲಾಗುತ್ತಿಲ್ಲ.

ಅವಳ ಅಂತ್ಯಕ್ರಿಯೆ ನಡೆದ ದಿನ ನಮ್ಮ ಕುಟುಂಬದವರು ಮತ್ತು ನಮ್ಮ ಬಂಧುಗಳೆಲ್ಲ ಬೌದ್ಧ ಮಂದಿರದ ಮುಖ್ಯ ಪ್ರಾಂಗಣದಲ್ಲಿ ಸೇರಿದ್ದೆವು. ಅಲ್ಲಿ ಪುರೋಹಿತರು ಸೂತ್ರಗಳನ್ನು ಹೇಳುವವರಿದ್ದರು. ಅವರು ಸೂತ್ರಗಳನ್ನು ಹೇಳುತ್ತಿರುವಾಗ ವಾದ್ಯಗಳ ಸದ್ದು ಹೆಚ್ಚಾಗುತ್ತಿದ್ದಂತೆ ನಾನು ಜೋರಾಗಿ ನಗಲಾರಂಭಿಸಿದೆ. ನಮ್ಮಪ್ಪ, ಅಮ್ಮ, ಅಕ್ಕಂದಿರು ಸಿಟ್ಟಿನಿಂದ ನನ್ನ ಕಡೆ ನೋಡಿದರೂ ನಂಗೆ ನಗು ತಡೆಯಲಾಗಲಿಲ್ಲ. ನಮ್ಮಣ್ಣ ನನ್ನ ಕೈ ಹಿಡಿದು ಹೊರಗಡೆ ಕರೆದುಕೊಂಡು ಹೋದ. ನಾನು ನಗ್ತಾನೆ ಇದ್ದೆ. ಈಗಿವನು ಚೆನ್ನಾಗಿ ಬೈಯ್ತಾನೆ ಅಂತ ಬೈಯಿಸಿಕೊಳ್ಳಲು ತಯಾರಾಗಿದ್ದೆ. ಆದರೆ ನಮ್ಮಣ್ಣಂಗೆ ಕೋಪ ಬಂದಹಾಗೆ ಕಾಣಲಿಲ್ಲ. ಅವನು ನನ್ನ ಹೊರಗಡೆ ಬಿಟ್ಟು ವಾಪಸ್ಸು ಮಂದಿರದೊಳಕ್ಕೆ ಹೋಗುತ್ತಾನೆ ಅಂದುಕೊಂಡಿದ್ದೆ. ಆದರೆ ಅವನು ಹಾಗೆ ಮಾಡಲಿಲ್ಲ. ಬದಲಿಗೆ ಹಿಂತಿರುಗಿ ಮಂದಿರದತ್ತ ನೋಡಿ “ಅಕಿರಾ ಇಲ್ಲಿಂದ ಹೋಗೋಣ” ಅಂದು ಬೇಗಬೇಗ ಮಂದಿರದ ಗೇಟಿನ ಹತ್ತಿರವಿದ್ದ ಮೆಟ್ಟಿಲುಗಳ ಕಡೆ ಹೆಜ್ಜೆ ಹಾಕಿದ.

ಮುಂದೆ ನಡೆದು ಹೋಗುತ್ತಾ “ಶುದ್ಧ ಮೂರ್ಖತನ” ಅಂತ ಗೊಣಗಿದ. ನಂಗೆ ಖುಷಿಯಾಯ್ತು. ಹಾಗನ್ನಿಸಿದ್ದರಿಂದಲೇ ನಕ್ಕಿದ್ದೆ. ಅಲ್ಲಿನ ಇಡೀ ಕ್ರಿಯೆ ಅಸಂಗತ ಮತ್ತು ತಮಾಷೆ ಅನ್ನಿಸಿಬಿಟ್ಟಿತು. ನಮ್ಮಣ್ಣನಿಗೂ ಹಾಗೇ ಅನ್ನಿಸಿದೆ ಅಂತ ಗೊತ್ತಾದ ಕೂಡಲೇ ನಿರಾಳವಾದೆ. ಅಲ್ಲಿ ನಡೆಯುತ್ತಿದ್ದ ಕ್ರಿಯೆಗಳಿಂದ ನಮ್ಮಕ್ಕನಿಗೆ ಶಾಂತಿ ಸಿಗುತ್ತಾ ಅಂತ ಆಶ್ಚರ್ಯವಾಯ್ತು. ಅವಳು ಸತ್ತಾಗ ಅವಳಿಗೆ ಹದಿನಾರು ವರ್ಷ. ಅದ್ಯಾಕೋ ಸತ್ತಮೇಲೆ ಅವಳಿಗಿಟ್ಟ ಬೌದ್ಧ ಹೆಸರು ನೆನಪಿದೆ. ಅದು ತೊ ರಿನ್ ತೆಯಿ ಕೊ ಶಿನ್ ನ್ಯೊ (ಸೂರ್ಯನ ಬಿಸಿಲು ಕೂಡ ಸೋಕಿರದ ಅರಣ್ಯದಂತಹ ಕನ್ನೆನೆಲ).