ಮಸೀದಿಯಲ್ಲಿ ಶುಕ್ರವಾರಕ್ಕೊಮ್ಮೆ ಸಿಗುತ್ತಿದ್ದ ಪುಟಾಣಿ ಸಕ್ಕರೆಯ ರುಚಿ ನನ್ನ ಬೆಂಬಿಡದೆ ಕಾಡತೊಡಗಿ ದಿನವೂ ತಿನ್ನಬೇಕೆನಿಸುತ್ತಿತ್ತು. ಆದರೆ ನನಗೆ ತಿನ್ನಬೇಕೆನಿಸಿದಾಗ ಎಲ್ಲಿಂದ ಪಡೆಯುವುದು? ಶುಕ್ರವಾರ ಬರುವವರೆಗೂ ಕಾದು ಅವರು ಕೊಡುವ ಒಂದು ತುತ್ತಿನಷ್ಟು ಪುಟಾಣಿ ಸಕ್ಕರೆ ನನ್ನ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ತಿಂದರೆ ಹೊಟ್ಟೆ ತುಂಬುವಷ್ಟು ಅದನ್ನೇ ತಿನ್ನಬೇಕೆನ್ನುವ ಆಸೆ. ಅಪ್ಪನ ಹತ್ತಿರನೋ ಅವ್ವನ ಬಳಿಯೋ ರೊಕ್ಕ ಕೇಳಿದರೆ ಆಗ ಎಂಟಾಣೆಯೋ ಒಂದು ರೂಪಾಯಿಯೋ ಸಿಗುತ್ತಿತ್ತಷ್ಟೆ. ಏನೇ ಮಾಡಿದರೂ ಅದಕ್ಕಿಂತ ಹೆಚ್ಚಿಗೆ ರೊಕ್ಕ ಸಿಗುವುದಿಲ್ಲವೆನ್ನುವ ಖಾತ್ರಿ ಇತ್ತು.
ಇಸ್ಮಾಯಿಲ್ ತಳಕಲ್ ಬರೆಯುವ “ತಳಕಲ್ ಡೈರಿ”ಯಲ್ಲಿ ಹೊಸ ಬರಹ
ನನ್ನ ನಾನಿಗೆ ಅಂದರೆ ನನ್ನ ತಾಯಿಯ ತಾಯಿಗೆ ನಾನೆಂದರೆ ಬಲು ಪ್ರೀತಿ ಇತ್ತು. ಪ್ರೀತಿ ಎಂದರೆ ಕುರುಡು ಪ್ರೀತಿ ಅಲ್ಲ. ನನ್ನನ್ನು ಎಚ್ಚರಿಸುತ್ತಲೇ, ತಪ್ಪು ಮಾಡಿದಾಗ ಶಿಕ್ಷಿಸುತ್ತಲೇ ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡುಕೊಳ್ಳುವ ಪ್ರೀತಿ. ನನ್ನ ವಾರಿಗೆಯ ಗೆಳೆಯರಿಗಿಂತ ನಾನು ಅಷ್ಟೊಂದು ಚುರುಕಾಗಿಲ್ಲವೆಂದು ಯಾವಾಗಲೂ ನನ್ನನ್ನು ಗೋಳು ಹೊಯ್ದುಕೊಳ್ಳುತ್ತಿದ್ದರೂ ‘ಅವರಂಗ ನೀ ಯಾವಾಗ ಶ್ಯಾಣ್ಯಾ ಆಗೋದು?’ ಎನ್ನುವ ಕಾಳಜಿ ಆಕೆಯಲ್ಲಿರುತ್ತಿತ್ತು. ಓಣಿಯಲ್ಲಿ ಯಾವುದೇ ಮದುವೆ ಮುಂಜಿ ಇನ್ನಿತರ ಕಾರ್ಯಕ್ರಮಗಳಿದ್ದರೂ ನಾನಿ ಅಲ್ಲಿ ತಪ್ಪದೆ ಹಾಜರಿರಬೇಕು. ಅಲ್ಲಿರದಿದ್ದರೆ ಆಕೆಯನ್ನು ಕರೆದುಕೊಂಡು ಬರಲು ಯಾರನ್ನಾದರೂ ಕಳುಹಿಸುತ್ತಿದ್ದರು. ಮದುವೆಯಾದ ಹೊಸ ಮದುಮಕ್ಕಳಿಗೆ ಹೂಮುಡಿಸುವ ಕಾರ್ಯಕ್ರಮದಲ್ಲಿ ಹೂಮುಡಿಸಲು ಬರುವ ಹೆಣ್ಣುಮಕ್ಕಳಿಗೆ ಒಡಪು ಹಾಕಿ ಗಂಡನ ಹೆಸರು ಹೇಳುವವರೆಗೂ ನನ್ನ ನಾನಿ ಬಿಡುತ್ತಿರಲಿಲ್ಲ. ನಾನಿಯ ಕಾಟಕ್ಕೆ ಅವರು ಒಡಪು ಹಾಕಿ ಗಂಡನ ಹೆಸರು ಹೇಳಲೇಬೇಕಿತ್ತು. ನಮಗೆಲ್ಲಾ ಅದೊಂತರಾ ಭಾರಿ ಮಜಾ. ಮದುವೆ ಮಾಡಿಕೊಂಡು ವಧುವನ್ನು ಮನೆ ತುಂಬಿಸಿಕೊಳ್ಳುವಾಗ ವರನ ಮನೆಯ ಮುಂದೆ ಅಮ್ಮಾ ಪುರಿ ಬಾವಾ ಪುರಿ ಎನ್ನುವ ಒಂದು ರೀತಿಯ ಮನರಂಜನಾ ಸ್ಪರ್ಧೆಯನ್ನು ಹೊಸ ಜೋಡಿಗಳ ನಡುವೆ ಮಾಡುತ್ತಾರೆ. ಅಕ್ಕಿಯಲ್ಲಿ ಉಂಗುರ ಹುಡುಕುವುದು, ಕಡುಬು, ಹೋಳಿಗೆ, ಚಪಾತಿ ಮಾಡುವುದು, ಚರಿಗೆಯ ಮೇಲೆ ಚರಿಗೆ ಇಡುವುದ ಹೀಗೆ ನಾನಾ ರೀತಿಯ ಚಟುವಟಿಕೆ ಮಾಡಿಸುತ್ತಿದ್ದರು. ವಧು ಗೆಲ್ಲಲಿ ಎಂದು ಒಂದು ಗುಂಪು, ವರ ಗೆಲ್ಲಲಿ ಎಂದು ಮತ್ತೊಂದು ಗುಂಪು ಅವರವರ ಚಟುವಟಿಕೆಗಳಿಗೆ ಭಂಗ ತರುತ್ತಿದ್ದರು. ನನ್ನ ನಾನಿ ಯಾವಾಗಲೂ ವಧುವಿನ ಪಾರ್ಟಿ. ವರ ಸೋಲಲಿ ಎಂದು ಕೈಯಲ್ಲಿ ಕಟ್ಟಿಗೆ ಹಿಡಿದು ಆತನ ಆಟವನ್ನು ಕೆಡಿಸುತ್ತಿದ್ದಳು. ಉಳಿದವರೆಲ್ಲರಿಗಿಂತಲೂ ನಾನಿ ಹೆಚ್ಚು ಉತ್ಸುಕಳಾಗಿ ಪಾಲ್ಗೊಳ್ಳುತ್ತಿದ್ದರಿಂದ ಅವಳ ಆಟ ಕೆಡಿಸುವ ಶೈಲಿಗೆ ಎಲ್ಲರೂ ಮನಸಾರೆ ನಗುತ್ತಿದ್ದರು. ನಾನಿ ಹಾಗೆ ನಗಿಸುತ್ತಿದ್ದಳೂ ಕೂಡ. ಹೀಗಾಗಿ ನಾನಿ ಎಲ್ಲ ಕಾರ್ಯಕ್ರಮಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಆಕೆ ಎಲ್ಲಿಯೇ ಹೋಗಲಿ ನನ್ನನ್ನು ಜೊತೆಗೆ ಕರೆದುಕೊಂಡೆ ಹೋಗುತ್ತಿದ್ದಳು. ಮದುವೆ, ಜಾತ್ರೆ, ಯಾವುದಾದರೂ ಕಾರ್ಯಕ್ರಮಗಳ ಊಟಕ್ಕೆ ನಾನು ನಾನಿಯ ಜೊತೆ ಬಾಲಂಗೋಚಿಯಂತೆ ಸದಾ ಜೊತೆಗಿರುತ್ತಿದ್ದೆ.
ಪಂಚಮಿ ಬಂತೆಂದರೆ ಸಜ್ಜಿ ಉಂಡಿ, ಶೇಂಗಾ ಉಂಡಿ ಬೇರೆ ಬೇರೆ ಉಂಡಿಗಳನ್ನು ಅಮ್ಮ ಮತ್ತು ನಾನಿ ಇಬ್ಬರೂ ಮಾಡುತ್ತಿದ್ದರು. ನಾನು ನಾನಿಯ ಜೊತೆ ಕಲ್ಲಿನ ನಾಗರ ಇದ್ದಲ್ಲಿ ಹೋಗಿ ಹಾಲೆರೆದು ಬರುತ್ತಿದ್ದೆ. ನಮ್ಮೂರಿನ ಕರಿಯಮ್ಮ ಜಾತ್ರೆಯೋ, ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯೋ ಬಂತೆಂದರೆ ನನ್ನ ಕರೆದುಕೊಂಡು ಹೋಗಿ ತೇರಿಗೆ ಉತ್ತತ್ತಿ ಒಗೆದು ಜಾತ್ರಿಯಲ್ಲಿ ಏನಾದರೂ ತಿನ್ನಲು ಕೊಡಿಸಿಕೊಂಡು ಬರುತ್ತಿದ್ದಳು. ಹೀಗೆ ಯಾವುದೇ ಹಬ್ಬ ಬಂದರೂ ಬಹಳ ಸಂಭ್ರಮದಿಂದಲೇ ನಾನಿಯ ಜೊತೆ ಆಚರಿಸುತ್ತಿದ್ದೆ. ನನ್ನ ಮೇಲೆ ಜೀವ ಇಟ್ಟುಕೊಂಡಿದ್ದ ನಾನಿ ನಾನು ರೊಕ್ಕ ಕಳುವು ಮಾಡಿದೆ ಎನ್ನುವ ಕಾರಣಕ್ಕೆ ಒಮ್ಮೆ ಅಪ್ಪ ಅಮ್ಮನ ಜೊತೆ ಬಡಿಸಿಬಿಟ್ಟಿದ್ದಳು. ನಾನು ರೊಕ್ಕ ಕದಿಯುವ ಹಾಗೆ ಮಾಡಿದ್ದು ಸಕ್ಕರೆ ಪುಟಾಣಿ.
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಾನು ಮತ್ತು ನನ್ನ ಗೆಳೆಯ ಇಬ್ಬರೂ ಶುಕ್ರವಾರದ ನಮಾಜನ್ನು ಎಂದೂ ತಪ್ಪಿಸುತ್ತಿರಲಿಲ್ಲ. ನಮಗೆ ದೈಹಿಕ ಶಿಕ್ಷಕರಾಗಿದ್ದ ಶಿವನಗೌಡ ಸರ್ ಬಳಿ ಹೋಗಿ “ಸರ್, ಇವತ್ತು ಶುಕ್ರವಾರ ಐತಿ, ನಮಾಜಿಗೆ ಹೋಕ್ಕೀವಿ ಸರ್” ಎಂದು ಕೇಳಿಕೊಂಡಾಗ, “ಆಯ್ತಪಾ, ಹೋಗಿ ಬೇಗ ವಾಪಾಸ್ ರ‍್ರಿ” ಎಂದು ಖುಷಿಯಿಂದಲೇ ಅನುಮತಿ ನೀಡುತ್ತಿದ್ದರು. ಅವರು ಯಾವತ್ತೂ ಬೇಡ ಎನ್ನುತ್ತಿರಲಿಲ್ಲವಾದರೂ ಅವರಿಗೆ ಒಂದು ಮಾತು ಹೇಳಿ ಹೋಗುತ್ತಿದ್ದದ್ದು ರೂಢಿ. ನಮಾಜಿಗೆ ಅನುಮತಿ ಸಿಕ್ಕಿದ್ದೇ ತಡ ಇಬ್ಬರೂ ಮನೆಗೆ ಓಡಿ ಡಬರಿ, ಚರಿಗಿಗಳನ್ನು ಹಿಡಿದು ಬೋರ್‌ವೆಲ್ ಇದ್ದ ಕಡೆ ಹೋಗಿ ನೀರನ್ನು ಹೊಡೆದುಕೊಂಡು ಮೈಮೇಲೆ ಸುರಿದುಕೊಳ್ಳುವುದೆಂದರೆ ಎಲ್ಲಿಲ್ಲದ ಹಿಗ್ಗು. ರಣ ರಣ ಹೊಡೆಯುತ್ತಿದ್ದ ಬಿಸಿಲಿನಲ್ಲಿ ಬೋರ್‌ವೆಲ್ಲಿನ ತಣ್ಣನೆ ನೀರು ಬೆನ್ನ ಮೇಲೆ ಬಿದ್ದಾಗ ಇಡಿ ಮೈ ಪುಳಕಿತಗೊಳ್ಳುತ್ತಿತ್ತು. ನಮ್ಮ ಮನೆಗಳಲ್ಲಿ ಜಳಕ ಮಾಡಬಹುದಿತ್ತಾದರೂ ಹೀಗೆ ಹೊರಗಡೆ ಬಂದು ದೇಹವನ್ನು ಬಿಸಿಲಿಗೆ ಒಡ್ಡಿ ಜಳಕ ಮಾಡುವ ಮಜಾನೆ ಬೇರೆ ಇರುತ್ತಿದ್ದರಿಂದ ಈ ಬಯಲ ಮಜ್ಜನ ನಮಗೆ ಪ್ರಿಯವಾಗಿತ್ತು. ಶುಕ್ರವಾರದ ನಮಾಜು ಹೇಗೆ ತಪ್ಪುತ್ತಿರಲಿಲ್ಲವೋ ಹಾಗೆ ಊರ ಬಯಲಿನಲ್ಲಿದ್ದ ಈ ಬೋರ್‌ವೆಲ್ಲಿನ ಮಜ್ಜನವೂ ತಪ್ಪುತ್ತಿರಲಿಲ್ಲ. ಇದೊಂತರ ಆಟವಾಗಿ ಮಜದಂತೆ ಕಂಡರೂ ದಿನವೂ ಸ್ನಾನ ಮಾಡುತ್ತಿದ್ದೆವೋ ಇಲ್ಲವೋ ನೆನಪಿಲ್ಲ ಆದರೆ ಶುಕ್ರವಾರದ ನಮಾಜಿಗೆ ಜಳಕ ಮಾಡಿ ಹೋಗಬೇಕೆನ್ನುವ ಒಂದು ರೀತಿಯ ಭಕ್ತಿಯಂತೂ ಇರುತ್ತಿತ್ತು.
ಪ್ರತಿ ಶುಕ್ರವಾರ ಯಾರಾದರೊಬ್ಬರು ಸಕ್ಕರೆ ಪುಟಾಣಿ ಕಲೆಸಿಕೊಂಡು ಒಂದು ತಾಟಿನಲ್ಲಿ ಹಾಕಿ ತಂದಿರುತ್ತಿದ್ದರು. ನಮಾಜು ಮುಗಿದು ಎಲ್ಲರೂ ಹೊರಡುವಾಗ ಪ್ರಸಾದವೆಂಬಂತೆ ಅದನ್ನು ಎಲ್ಲರಿಗೂ ಹಂಚುತ್ತಿದ್ದರು. ಅಲ್ಲಿಯೇ ನೋಡಿ ನನಗೆ ಅದರ ರುಚಿ ಹತ್ತಿದ್ದು. ಚಿಕ್ಕವರಿದ್ದಾಗ ನಾವು ಏನು ತಿಂದರೂ ಅದು ನಮಗೆ ಭಯಂಕರ ರುಚಿಯಾಗಿಯೇ ಕಾಣುತ್ತದೆ. ಅದನ್ನು ಪದೆ ಪದೆ ತಿನ್ನಬೇಕೆನ್ನುವ ಹಪಾಹಪಿ ಇರುತ್ತದೆ. ದೊಡ್ಡವರಾದ ಮೇಲೆ ಎಷ್ಟೆಲ್ಲಾ ಅವಕಾಶಗಳಿದ್ದರೂ ಪರ್ಸಿನ ತುಂಬಾ ಹಣವಿದ್ದರೂ ಎಲ್ಲವೂ ಸುಲಭವಾಗಿ ಕೈಗೆಟುಕುತ್ತಿದ್ದರೂ ಏನನ್ನೂ ತಿನ್ನಲು ಮನಸಾಗುವುದಿಲ್ಲ ಅಥವಾ ಯಾವುದೂ ರುಚಿಸುವುದಿಲ್ಲ. ಬಾಲ್ಯದಲ್ಲಿಯ ಇಂತಹ ಅಮಾಯಕತೆ, ಕುತೂಹಲ, ಸಣ್ಣ ಸಣ್ಣ ವಿಷಯಗಳಿಗೆ ಹೃದಯ ತುಂಬುವಷ್ಟು ಪಡುತ್ತಿದ್ದ ಆನಂದ ದೊಡ್ಡವರಾದಂತೆ ಮಾಯವಾಗತೊಡಗುತ್ತವೆ. ಬೆಳೆದು ದೊಡ್ಡವರಾದ ಮೇಲೆ ಅದ್ಯಾವ ಪೊರೆ ನಮ್ಮನ್ನು ಸುತ್ತಿಕೊಳ್ಳುತ್ತದೆಯೋ ಗೊತ್ತಿಲ್ಲ ನಮ್ಮ ಪ್ರತಿ ಬೇಕು ಬೇಡಗಳನ್ನು ಅದು ನಿಯಂತ್ರಿಸತೊಡಗುತ್ತದೆ. ಆದರೆ ನನಗೆ ಪುಟಾಣಿ ಸಕ್ಕರೆ ಬಹಳ ಇಷ್ಟವಾಗಿದ್ದರಿಂದ ನಾನು ಎರೆಡೆರೆಡು ಬಾರಿ ಬೇಡಿ ತಿನ್ನುತ್ತಿದ್ದೆ.
ನಮ್ಮೂರಿನ ಕರಿಯಮ್ಮ ಜಾತ್ರೆಯೋ, ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯೋ ಬಂತೆಂದರೆ ನನ್ನ ಕರೆದುಕೊಂಡು ಹೋಗಿ ತೇರಿಗೆ ಉತ್ತತ್ತಿ ಒಗೆದು ಜಾತ್ರಿಯಲ್ಲಿ ಏನಾದರೂ ತಿನ್ನಲು ಕೊಡಿಸಿಕೊಂಡು ಬರುತ್ತಿದ್ದಳು. ಹೀಗೆ ಯಾವುದೇ ಹಬ್ಬ ಬಂದರೂ ಬಹಳ ಸಂಭ್ರಮದಿಂದಲೇ ನಾನಿಯ ಜೊತೆ ಆಚರಿಸುತ್ತಿದ್ದೆ. ನನ್ನ ಮೇಲೆ ಜೀವ ಇಟ್ಟುಕೊಂಡಿದ್ದ ನಾನಿ ನಾನು ರೊಕ್ಕ ಕಳುವು ಮಾಡಿದೆ ಎನ್ನುವ ಕಾರಣಕ್ಕೆ ಒಮ್ಮೆ ಅಪ್ಪ ಅಮ್ಮನ ಜೊತೆ ಬಡಿಸಿಬಿಟ್ಟಿದ್ದಳು.
ಮಸೀದಿಯಲ್ಲಿ ಶುಕ್ರವಾರಕ್ಕೊಮ್ಮೆ ಸಿಗುತ್ತಿದ್ದ ಪುಟಾಣಿ ಸಕ್ಕರೆಯ ರುಚಿ ನನ್ನ ಬೆಂಬಿಡದೆ ಕಾಡತೊಡಗಿ ದಿನವೂ ತಿನ್ನಬೇಕೆನಿಸುತ್ತಿತ್ತು. ಆದರೆ ನನಗೆ ತಿನ್ನಬೇಕೆನಿಸಿದಾಗ ಎಲ್ಲಿಂದ ಪಡೆಯುವುದು? ಶುಕ್ರವಾರ ಬರುವವರೆಗೂ ಕಾದು ಅವರು ಕೊಡುವ ಒಂದು ತುತ್ತಿನಷ್ಟು ಪುಟಾಣಿ ಸಕ್ಕರೆ ನನ್ನ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ತಿಂದರೆ ಹೊಟ್ಟೆ ತುಂಬುವಷ್ಟು ಅದನ್ನೇ ತಿನ್ನಬೇಕೆನ್ನುವ ಆಸೆ. ಅಪ್ಪನ ಹತ್ತಿರನೋ ಅವ್ವನ ಬಳಿಯೋ ರೊಕ್ಕ ಕೇಳಿದರೆ ಆಗ ಎಂಟಾಣೆಯೋ ಒಂದು ರೂಪಾಯಿಯೋ ಸಿಗುತ್ತಿತ್ತಷ್ಟೆ. ಏನೇ ಮಾಡಿದರೂ ಅದಕ್ಕಿಂತ ಹೆಚ್ಚಿಗೆ ರೊಕ್ಕ ಸಿಗುವುದಿಲ್ಲವೆನ್ನುವ ಖಾತ್ರಿ ಇತ್ತು. ಅವರು ಕೊಡುತ್ತಿದ್ದ ಹಣಕ್ಕೆ ಪುಟಾಣಿ ಸಕ್ಕರೆ ಬರುತ್ತಿರಲಿಲ್ಲ. ಆದರೆ ಸಕ್ಕರೆ ಪುಟಾಣಿ ತಿನ್ನಬೇಕೆನ್ನುವ ನನ್ನ ಆಸೆಗೆ ನನಗೆ ಸುಲಭಕ್ಕೆ ಹೊಳೆದ ಉಪಾಯ ಅಪ್ಪನ ಜೇಬಿನಿಂದ ರೊಕ್ಕ ಕದಿಯುವುದು. ನಮ್ಮದು ಒಂದು ಲಾರಿ ಇದ್ದುದ್ದರಿಂದ ಅಪ್ಪ ದುಡಿದು ಎರಡು ಮೂರು ದಿನಕ್ಕೆ ಮನೆಗೆ ಬಂದಾಗ ಅವರ ಪ್ಯಾಂಟಿನ ಜೇಬು ಉಬ್ಬಿರುವುದು ಕಂಡು ಆ ಜೇಬಿನ ತುಂಬಾ ರೊಕ್ಕ ಇರುವುದೆಂದು ಊಹಿಸುತ್ತಿದ್ದೆ.
ಒಂದು ದಿನ ಅವರು ಬಟ್ಟೆ ಬದಲಿಸಿಕೊಂಡು ಹೊರಗೆ ಹೋದಾಗ ಅನುಭವಸ್ತ ಕಳ್ಳನಂತೆ ಮೆಲ್ಲಗೆ ಒಳಗೆ ಹೋಗಿ ಉಬ್ಬಿದ್ದ ಪ್ಯಾಂಟಿನ ಜೇಬಿನಲ್ಲಿ ಕೈಹಾಕಿದರೆ ಐವತ್ತರ ಕಟ್ಟು ಕಂಡಿತು. ನನಗೆ ಆಗ ಐವತ್ತರ ಒಂದು ನೋಟಿನ ಮೌಲ್ಯ ತಿಳಿಯುತ್ತಿರಲಿಲ್ಲವಾದ್ದರಿಂದ ಮೆಲ್ಲಗೆ ಒಂದೇ ನೋಟನ್ನು ಎಳೆದುಕೊಂಡು ನನ್ನ ಚಡ್ಡಿ ಜೇಬಿನಲ್ಲಿ ತುರುಕಿ ಹೊರಗಡೆ ಬಂದಾಗ ಎಲ್ಲರೂ ಅವರವರ ಕೆಲಸಗಳಲ್ಲಿ ಮಗ್ನರಾಗಿದ್ದರು. ನಾನು ಏನೋ ಸಾಧಿಸಿದ ಉಮೇದಿನಲ್ಲಿ ಒಂದೇ ಓಟಕ್ಕೆ ಕಿರಾಣಿ ಅಂಗಡಿಗೆ ಓಡಿದ್ದೆ. ಹತ್ತತ್ತು ರೂಪಾಯಿಯ ಸಕ್ಕರೆ ಪುಟಾಣಿ ಕೊಂಡುಕೊಂಡು ಅವುಗಳನ್ನು ಒಂದೇ ಪೊಟ್ಟಣದಲ್ಲಿ ಕಲೆಸಿ ಇಡಿ ದಿನ ತಿನ್ನುತ್ತಾ ನನ್ನ ಆಸೆ ಇಡೇರಿದ್ದರ ಖುಷಿಯಲ್ಲಿ ತೇಲಾಡಿದ್ದೆ. ಹೀಗೆ ಯಾವಾಗ ಸಕ್ಕರೆ ಪುಟಾಣಿ ತಿನ್ನಬೇಕೆನಿಸುತ್ತಿತ್ತೋ ಆಗೆಲ್ಲ ಉಬ್ಬಿರುವ ಅಪ್ಪನ ಪ್ಯಾಂಟಿನ ಜೇಬು ಮಾಯಾ ಪೆಟ್ಟಿಗೆಯಂತೆ, ಐವತ್ತರ ನೋಟು ಮಂತ್ರದ ಹಾಳೆಯಂತೆ ಕಾಣುತ್ತಿತ್ತು. ಬಹಳಷ್ಟು ಬಾರಿ ಐವತ್ತರ ನೋಟನ್ನು ಎಗರಿಸಿ ನನ್ನ ಮಹಾದಾಸೆಯನ್ನು ತೀರಿಸಿಕೊಳ್ಳುತ್ತಿದ್ದೆ. ಆದರೆ ಪ್ರತಿ ಬಾರಿಯೂ ಜೇಬಿನಿಂದ ಐವತ್ತರ ನೋಟು ಮರೆಯಾದುದರ ಬಗ್ಗೆ ಮನೆಯಲ್ಲಿ ಚರ್ಚೆಯಾಗುತ್ತಿತ್ತು ಎನ್ನುವುದು ನನ್ನ ಗಮನಕ್ಕೆ ಬರುತ್ತಿರಲಿಲ್ಲ. ಅಮ್ಮ ತೆಗೆದುಕೊಂಡಿರಬಹುದೆಂದು ಅಪ್ಪ ಬಯ್ಯುತ್ತಿದ್ದರೆ, ನೀವೆ ಸರಿಯಾಗಿ ಎಣಿಸಿರಲಿಕ್ಕಿಲ್ಲ ನೋಡಿ ಎಂದು ಅಮ್ಮ ವಾದ ಮಾಡುತ್ತಿದ್ದರು. ಅಲ್ಲೆ ಕುಳಿತಿರುತ್ತಿದ್ದ ನಾನಿ ಕೋರ್ಟಿನ ಜಡ್ಜಿನಂತೆ ಇವರಿಬ್ಬರೂ ವಕಿಲರ ಹಾಗೆ ಮಾಡುತ್ತಿರುವ ವಾದ ಪ್ರತಿವಾದಗಳನ್ನೆಲ್ಲ ಗಮನಿಸುತ್ತಾ ಯಾರ ವಾದ ಸರಿ ಇರಬಹುದೆಂದು ಲೆಕ್ಕ ಹಾಕುತ್ತಿದ್ದರು. ನಾನೋ ಇದ್ಯಾವುದರ ಪರಿವೆ ಇಲ್ಲದಂತೆ ಸಕ್ಕರೆ ಪುಟಾಣಿ ತಿನ್ನುತ್ತಾ ನನ್ನ ಯಾವ ಗೆಳೆಯರಿಗೂ ಈ ಅದೃಷ್ಟವಿರದೆ ನಾನೇ ಮಹಾ ಅದೃಷ್ಟವಂತ ಎನ್ನುವ ಭಾವದಲ್ಲಿ ತಿರುಗಾಡತೊಡಗಿದ್ದೆ.
ಹೀಗೆ ಒಮ್ಮೆ ಅಪ್ಪನ ಜೇಬಿನಿಂದ ಐವತ್ತರ ನೋಟು ತೆಗೆದುಕೊಂಡಾಗ ಮನೆ ಕೋರ್ಟಾಗಿ ಬದಲಾಯಿತು. ಒಂದು ನೋಟು ಕಾಣೆಯಾಗಿದ್ದನ್ನು ಗಮನಿಸಿದ ಅಪ್ಪ ಅಮ್ಮನ ಜೊತೆ ವಾದಕ್ಕೆ ತೊಡಗಿದರು. ಅಮ್ಮ ಮತ್ತದೇ ಅಪ್ಪನ ಮೇಲೆ ಆರೋಪ ಮಾಡತೊಡಗಿದ್ದರು. ಎಂದೂ ಯಾರಿಗೂ ನನ್ನ ಮೇಲೆ ಸಂಶಯವೇ ಬಂದಿರಲಿಲ್ಲ. ಆದರೆ ನೋಟನ್ನು ಜೋಪಾನವಾಗಿ ನನ್ನ ಚಡ್ಡಿ ಜೋಬಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದ ನಾನು ಎಲ್ಲಿ ಸಿಕ್ಕಿ ಬೀಳ್ತಿನೋ ಎನ್ನುವ ಭಯಕ್ಕೆ ಹೊರ ಬಂದು ಕೋಳಿಗಳನ್ನು ಮುಚ್ಚುತ್ತಿದ್ದ ಪುಟ್ಟಿಯಲ್ಲಿ ನೋಟನ್ನು ಇಟ್ಟು ಮುಚ್ಚಿಬಿಟ್ಟೆ. ವಾದ ಪ್ರತಿವಾದಗಳು ನಡೆಯುತ್ತಿರುವಾಗಲೇ ಮಧ್ಯೆದಲ್ಲಿ ನಾನು ಎದ್ದು ಹೊರಗೆ ಬಂದದ್ದು ನಾನಿಗೆ ಸಂಶಯ ಬಂದು ನನ್ನ ಹಿಂದೆಯೆ ಬಂದ ಅವರು ನಾನು ರೊಕ್ಕ ಇಡುತ್ತಿದ್ದನ್ನು ನೋಡಿಬಿಟ್ಟರು. ಜಡ್ಜಿನಂತೆ ಕಳ್ಳ ಯಾರು, ಯಾರದ್ದು ತಪ್ಪಿರಬಹುದೆಂದ ತುಂಬಾ ತಲೆ ಕೆಡಿಸಿಕೊಂಡಿದ್ದ ನಾನಿ ಕೈಯಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬೀಳುತ್ತೇನೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಮುಂದೆ ಆಗಿದ್ದು ಮಾತ್ರ ರಾಮಾಯಣ ಮಹಾಭಾರತ. ನನ್ನನ್ನು ದರ ದರ ಎಳೆದುಕೊಂಡು ಹೋಗಿ ಅಪ್ಪನ ಬಳಿ ನಿಲ್ಲಿಸಿ, ಇವನೆ ರೊಕ್ಕ ಕಳುವು ಮಾಡಾಕತ್ತಿದ್ದ ಎಂದು ಹೇಳಿ ನೋಟನ್ನು ತೋರಿಸಿದರು. ಇಷ್ಟು ದಿನ ರೊಕ್ಕ ಹೋದವಲ್ಲಾ ಎನ್ನುವ ಕೊರಗಿಗಿಂತ ಮಗ ಕದಿಯುತ್ತಿದ್ದನಲ್ಲಾ ಎನ್ನುವ ಸಿಟ್ಟು ಹೆಚ್ಚಾಗಿ ಅಪ್ಪ ನಾಲ್ಕು ಬಿಗಿದರು. ಅಮ್ಮನೂ ಎರಡೇಟು ಕೊಟ್ಟರು. ಅಪ್ಪ ನಾಲ್ಕು ಬುದ್ಧಿ ಮಾತು ಹೇಳಬಹುದೆಂದು ಚಾಡಿ ಹೇಳಿದ್ದ ನಾನಿಗೆ ತಂದೆ ತಾಯಿಗಳಿಬ್ಬರೂ ಮಗನನ್ನು ಹೀಗೆ ಹೊಡೆಯುವರೆಂದುಕೊಂಡಿರಲಿಲ್ಲ. ಅದಕ್ಕಾಗಿ ನನಗಿಂತ ಹೆಚ್ಚಾಗಿ ನಾನಿಯೇ ಕಣ್ಣೀರು ಹಾಕಿದ್ದಳು. ಇಡಿ ರಾತ್ರಿ ನಾನಿಯನ್ನು ತಬ್ಬಿಕೊಂಡೆ ಮಲಗಿದ್ದೆ. ಅದೇ ಕೊನೆ ಮತ್ತೆಂದೂ ಮನೆಯಲ್ಲಿ ಒಂದು ರೂಪಾಯಿಯನ್ನೂ ಕದಿಯಲೇ ಇಲ್ಲ. ನನಗೆ ನಾನು ಕದಿಯುತ್ತಿದ್ದೇನೆ ಎನ್ನುವ ಭಾವನೆಯೇ ಇರಲಿಲ್ಲ. ಸಕ್ಕರೆ ಪುಟಾಣಿ ತಿನ್ನಬೇಕೆನ್ನುವ ನನ್ನ ಆಸೆಯೊಂದೆ ನನ್ನ ಕಣ್ಣ ಮುಂದೆ ಇದ್ದದ್ದು. ಆದರೆ ನಾನಿಗೆ ನನ್ನ ಮೇಲೆ ಅಷ್ಟೊಂದು ಪ್ರೀತಿ ಇದ್ದರೂ ಆ ಪ್ರೀತಿ ಎಂದೂ ನನ್ನ ಹಠಮಾರಿಯನ್ನಾಗಿಯೂ, ತಪ್ಪು ದಾರಿ ತುಳಿಯುವಂತೆಯೂ ಮಾಡಲಿಲ್ಲ. ನನ್ನನ್ನು ಮುದ್ದು ಮಾಡಿದಂತೆಯೂ ಗುದ್ದನ್ನೂ ನೀಡುತ್ತಿದ್ದಳು. ನಾನಿ ಯಾವಾಗಲೂ ನೇರ. ಇದ್ದದ್ದನ್ನು ಇದ್ದ ಹಾಗೆಯೇ ಹೇಳುತ್ತಿದ್ದಳು. ತಪ್ಪು ಯಾರೇ ಮಾಡಿರಲಿ ಮುಖಕ್ಕೆ ಹೊಡೆದವರ ಹಾಗೆ ಹೇಳಿಬಿಡುತ್ತಿದ್ದದ್ದು ನಾನು ಇಷ್ಟಪಡುತ್ತಿದ್ದ ನಾನಿಯಲ್ಲಿನ ಗುಣ.
ಇಸ್ಮಾಯಿಲ್ ತಳಕಲ್ ಕೊಪ್ಪಳ ಜಿಲ್ಲೆಯ ಗೊಂಡಬಾಳ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸರ್ಕಾರಿ ಆದರ್ಶವಿದ್ಯಾಲಯ(ಆರ್ಎಮ್ಎಸ್ಎ) ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2020) ಸೇರಿದಂತೆ ಇವರ ಕಥೆಗಳು ಹಲವೆಡೆ ಪ್ರಕಟವಾಗಿ, ಬಹುಮಾನ ಪಡೆದುಕೊಂಡಿವೆ. “ಬೆತ್ತಲೆ ಸಂತ” ಇವರ ಪ್ರಕಟಿತ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನಕ್ಕೆ 2021ರ ಪ್ರತಿಷ್ಟಿತ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಬಹುಮಾನ” ಬಂದಿದೆ. ಸಂಗೀತ ಕೇಳುವುದು, ಅಡುಗೆ ಮಾಡುವುದು ಇವರ ಆಸಕ್ತಿಯ ವಿಷಯಗಳು.