ನಾವಿಲ್ಲದಾಗ ನಮ್ಮ ಬೆಳೆಯನ್ನು ಕಾಪಾಡುವುದು ಹೇಗೆ ಎಂಬ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಅಲ್ಲಿಯೇ ಮನೆ ಮಾಡಿಕೊಂಡು ಇರುವುದು ನನಗೆ ಇನ್ನೂ ಸಾಧ್ಯವಿರಲಿಲ್ಲ. ಹೊಲದಲ್ಲಿ ಕ್ಯಾಮೆರಾ ಹಾಕೋಣ ಅಂತಲೂ ಯೋಚಿಸಿದೆ. ಆದರೆ ಹಾಗೆ ಮಾಡಲು ಅಲ್ಲೊಂದು ತೋಟದ ಮನೆಯಾದರೂ ಬೇಕಲ್ಲ. ಸೂರ್ಯನ ಶಕ್ತಿಯಿಂದಲೇ ಕೆಲಸ ಮಾಡುವ ವೈಫೈ ಕ್ಯಾಮೆರಾಗಳು ಇವೆ ಅಂತ ತಿಳಿಯಿತು. ಆದರೆ ಆ ಕ್ಯಾಮೆರಾಗಳನ್ನೆ ಕಳುವು ಮಾಡಿದರೆ ಏನು ಮಾಡೋದು ಅಂತ ಸುಮ್ಮನಾದೆ.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 19ನೇ ಕಂತು
ಭತ್ತದ ಹುಲ್ಲಿನ ಕಳುವಿನ ಪ್ರಕರಣ ಆದ ಬಳಿಕ ನಾನು ಬೆಂಗಳೂರಿಗೆ ಹೋದೆ. ಆ ಕ್ಷಣದಲ್ಲಿ ಈ ಹೊಲದ ಸಹವಾಸವೇ ಬೇಡ ಅಂತ ಅನಿಸಿದ್ದೇನೋ ನಿಜ, ಆದರೂ ಹಾಗೆ ಬಿಟ್ಟು ಬಿಡಲು ಅದೇನು ನನ್ನ corporate ಕೆಲಸವೇ? ಇಷ್ಟದಿಂದ ಮಾಡಬೇಕು ಅಂದುಕೊಂಡು ಇಷ್ಟೆಲ್ಲ ದೂರ ಬಂದಿದ್ದ ನಾನು ಇದನ್ನು ಬಿಡುವ ಪ್ರಶ್ನೆಯೇ ಇರಲಿಲ್ಲ. ಆದರೂ ಒಂದು ದಟ್ಟ ಅಸಮಾಧಾನ ಆವರಿಸಿತ್ತು. ಯಶವಂತಪುರ ರೈಲು ನಿಲ್ದಾಣದಿಂದ ಮನೆಗೆ ಬಂದಾಗ ರಾತ್ರಿಯಾಗಿತ್ತು; ಆದ್ದರಿಂದ ಅದರ ಕುರಿತು ಏನೂ ಮಾತಾಡಲು ಆಗಲಿಲ್ಲ. ಮರುದಿನ ಚಹಾ ಹೀರುತ್ತಾ ಆಶಾಳ ಎದುರು ವಿಷಯ ತೆಗೆದೆ. ಹೀಗೆಯೆ ನಾವಿಲ್ಲದಾಗ ಕಳುವು ಆಗುತ್ತಿದ್ದರೆ ಎಂತಾ ಮಾಡೋದು ಎಂಬ ಕುರಿತು ಸುದೀರ್ಘ ಚರ್ಚೆ ನಮ್ಮಿಬ್ಬರ ಮಧ್ಯೆ ಶುರುವಾಯ್ತು.
ಈ ಹೊಲ ಮಾರಿ ಹತ್ತಿರ ಎಲ್ಯರೆ ತೊಗೊಳ್ಳೋಣ. ನನಗೂ ಆಗಾಗ ಹೋಗಿ ಬಂದು ಮಾಡಲಿಕ್ಕೆ ಆಗ್ತದ… ಅಂದೆ.
ಹಾಗಂದಾಗ ನನ್ನ ತಲೆಗೆ ಬಂದಿದ್ದು, ಈ ಹೊಲ ಮಾರಿ ಮೈಸೂರಿನಲ್ಲಿ ಇನ್ನೊಂದು ಹೊಲ ಕೊಂಡುಕೊಳ್ಳಬೇಕು ಅಂತ. ನನಗೆ ಅದು ತುಂಬಾ ಇಷ್ಟದ ಊರು ಕೂಡ. ಅಲ್ಲಿಯೂ ಕೆಲವು ಗೆಳೆಯರು ಈಗಾಗಲೇ ಹೊಲ ತೆಗೆದುಕೊಂಡ ಸಂಗತಿ ಗೊತ್ತಿತ್ತು. ಅದೂ ಅಲ್ಲದೆ ಬೆಂಗಳೂರಿಗೆ ತುಂಬಾ ಹತ್ತಿರ ಅನ್ನುವುದೂ ಒಂದು ರೀತಿಯಲ್ಲಿ ಅನುಕೂಲ ಆದೀತು ಅನ್ನೋದು ನನ್ನ ತರ್ಕ.
ಆಯ್ಯss…. ಮಾಡಬೇಕು ಅನ್ನೋ ಮನಸ್ಸು ಇರೋರು ಎಲ್ಲಿದ್ರೂ ಮಾಡ್ತಾರ. ದೂರ, ಹತ್ತರ ಸಂಬಂಧ ಇಲ್ಲ ಅಂದಳು ಆಶಾ. ಅವಳು ಹೇಳಿದ್ದು ಸರೀನೇ ಆದರೂ ನಾನು ಕೇಳಬೇಕಲ್ಲ!
Practical ಆಗಿ ವಿಚಾರ ಮಾಡು. ಅಲ್ಲಿಗೆ ಹೋಗಲಿಕ್ಕೆ ೮ ಗಂಟೆ ಬೇಕು. ಅದೇ ಮೈಸೂರಿಗೆ ಕೆಲವೇ ಗಂಟೆಗಳಲ್ಲಿ ಹೋಗಬಹುದು.. ನಾನು ವಾರಕ್ಕೊಮ್ಮೆ ಆದ್ರೂ ಅಲ್ಲಿಗೆ ಹೋದ್ರ ಇನ್ನೂ ಚೆಂದ ಮಾಡಬಹುದು. ನಾನು ವಾದ ಮುಂದುವರಿಸಿದೆ.
ಯಾವ ಊರಾದರೇನು, ನೀನು ಒಂದು ದಿನ ಅಲ್ಲಿ ಇಲ್ಲ ಅಂದ್ರೂ ಕಳುವು ಮಾಡ್ತಾರ, ಆವಾಗ ಏನ್ ಮಾಡ್ತಿ.. ಅಂದಳು ಅವಳು.
ಅದೂ ನಿಜವೇ. ಪುಗಸಟ್ಟೆ ಸಿಕ್ಕರೆ ಕಳುವು ಮಾಡುವವರು ಎಲ್ಲಾ ಕಡೆಯೂ ಸಿಗುತ್ತಾರೆ. ಹೀಗೆಲ್ಲ ವಾದಗಳು ನಡೆದು ಕೊನೆಗೆ ಅನಿಸಿದ್ದು, ಮಾರುವುದು, ಖರೀದಿ ಮಾಡುವದೊಂದು ರಗಳೆಯೂ ಹೌದು. Registration, survey ಮಾಡಿಸೋದು ಇಂತಹ ಹೊಸ ಕಿರಿಕಿರಿಗಳನ್ನು ಮೈಮೇಲೆ ಎಳೆದುಕೊಳ್ಳೋದು ಬೇಡ ಅಂತಲೂ ಅನಿಸಿತು. ನಮ್ಮ ಹೊಲದಲ್ಲಿ ಏನೂ ಮಾಡಲು ಆಗದಿದ್ದರೆ ಕ್ರಮೇಣ ಕಾಡು ಮರಗಳನ್ನಾದರೂ ಬೆಳೆಸೋಣ ಅಂತ ನಮ್ಮ ಸಂಭಾಷಣೆಗೆ ಪೂರ್ಣ ವಿರಾಮ ಹಾಕಿದೆವು.
ಆಶಾಳು ನನ್ನ ಕೃಷಿಯ ಹುಚ್ಚನ್ನು ಪೋಷಿಸುವುದರ ಜೊತೆಗೆ, ಇಂತಹ ಘಟನೆಗಳು ನನ್ನನ್ನು ವಿಚಲಿತಗೊಳಿಸಿದಾಗಲೆಲ್ಲ ಧೈರ್ಯ ತುಂಬುತ್ತಾಳೆ. ಪ್ರವಾಹದ ವಿರುದ್ಧ ನಾನು ಈಜಲು ಮತ್ತೆ ಹುರುಪು ತುಂಬುತ್ತಾಳೆ. ಅವಳನ್ನು ವರಿಸಿದ ನಾನೇ ಪುಣ್ಯವಂತ!
ಕ್ರಮೇಣ ಬೆಂಗಳೂರಿನ ಕೃಷಿ ಕೆಲಸದಲ್ಲಿ ತೊಡಗಿದ ಬಳಿಕ ಮನಸ್ಸಿನಿಂದ “ಕಳುವಾದರೆ” ಎಂಬ ಚಿಂತೆ ಸ್ವಲ್ಪ ಮಟ್ಟಿಗೆ ದೂರ ಆಗಿತ್ತು. Out of sight is out of mind ಅಂತಾರಲ್ಲ ಹಾಗೆ. ಆದರೆ ನಮ್ಮ ಹೊಲ out of sight ಆದಾಗಲೇ ಕಳ್ಳರ ಕಣ್ಣಿಗೆ ಅವು ಹತ್ತಿರ ಆಗೋದು ಎಂಬುದೂ ಕೂಡ ಅಷ್ಟೇ ಸತ್ಯ!
ಅಂತೂ ಬೆಂಗಳೂರಿನ ಕೆಲಸ ಮುಗಿಸಿ ಮತ್ತೆ ಹಳ್ಳಿಗೆ ಮರಳಿದೆ. ಅಷ್ಟೊತ್ತಿಗೆ ನಾಗಣ್ಣ ಕೂಡ ಬಂದಿದ್ದರು. ಅವತ್ತು ಇಬ್ಬರೂ ಹೊಲಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಸಂಗಣ್ಣ ಸಿಕ್ಕ. ಮತ್ತೇನ್ರಿ ಸಂಗಣ್ಣ ಆರಾಮ ಅದೀರಿ? ಅಂತ ವಿಚಾರಿಸಿದೆ. ಇಬ್ಬರ ನಡುವೆ ಈಗಾಗಲೇ ಜಗಳ ಆಗಿತ್ತಾದರೂ ಅವನೂ ಕೂಡ ಅಷ್ಟೇ ಸಮಾಧಾನದಿಂದ ಆರಾಮ ರಿ ಅಂತ ಹೇಳಿದನಾದರೂ ಒಳಗೊಳಗೇ ಅವನಿಗೆ ನನ್ನ ಮೇಲೆ ಇನ್ನೂ ಕೋಪ ಇರಬಹುದು ಅನಿಸಿತು. ತಪ್ಪು ಮಾಡಿದ್ದು ಅವನು. ಕೋಪ ಇರಬೇಕಾದದ್ದು ನನಗೆ, ಆದರೆ ನಾನು ಅವನನ್ನು ಕ್ಷಮಿಸಿದ್ದೆ.
ಗದ್ದೆಯೊಳಗೆ ಅಡ್ಡಾಡುತ್ತಿದ್ದಂತೆ ಹಲವೆಡೆ ಭತ್ತದ ತೆನೆಗಳು ಮೂಡುತ್ತಿರುವುದನ್ನು ಗಮನಿಸಿದೆ. ಮೊಟ್ಟ ಮೊದಲ ಬಾರಿಗೆ ನಮ್ಮದೇ ಹೊಲದಲ್ಲಿ ನಾವೇ ಬೆಳೆದ ಗಿಡಗಳು ಫಲ ಕೊಡುವುದನ್ನು ನೋಡಿದಾಗ ಆಗುವ ಖುಷಿ ವರ್ಣಿಸಲು ಅಸಾಧ್ಯ. ಕೂಡಲೇ ವಿಡಿಯೋ call ಮಾಡಿ ಆಶಾ, ಪರಿಧಿ ಇಬ್ಬರಿಗೂ ತೋರಿಸಿ ಸಂಭ್ರಮಿಸಿದೆ. ನಾಗಣ್ಣ ಕೂಡ ವಿಡಿಯೋ call ನಲ್ಲಿ ಮಗ್ನರಾಗಿದ್ದರು!
ಹಾಗೆಯೇ ಒಂದಿಷ್ಟು ಅಡ್ಡಾಡಿದಾಗ ಕೆಲವು ಗಿಡಗಳ ಎಲೆಗಳಲ್ಲಿ ಚುಕ್ಕೆ ಚುಕ್ಕೆ ಕಾಣಿಸುತ್ತಿದ್ದವು. ಪರಿಶೀಲಿಸಿದಾಗ ಅದೊಂದು fungus/ ಶಿಲೀಂಧ್ರ ಅಂತ ತಿಳಿಯಿತು. ಈಗಾಗಲೇ ಬೆಂಗಳೂರಿನಲ್ಲಿ ತರಕಾರಿ ಬೆಳೆಯುವಾಗ ಅನೇಕ ಸಲ ಶಿಲೀಂಧ್ರದ ಕಾಟ ನೋಡಿದ್ದೆ. ಅದನ್ನು ಹೇಗೆ ಪರಿಹಾರ ಮಾಡಬೇಕು ಅಂತಲೂ ಗೊತ್ತಿತ್ತು.
ಸರ್ ಇದಕ್ಕೆ ಈಗ ಎಂತ ಮಾಡೋದು ಅಂದರು ನಾಗಣ್ಣ.
Trichoderma Viride spray ಮಾಡಿದರೆ ಸಾಕು ಅಂದೆ.
Chemical ಬಳಸೋದು ಬೇಡ ಅಂದಿದ್ರಲ್ಲ ಸರ್ ಅಂದರು.
ನಾವು ಹೊಲ ಮಾಡಬೇಕು ಅಂತ ಬಂದಾಗಲೇ ಯಾವುದೇ ತರಹದ ಕ್ರಿಮಿ ನಾಶಕವಾಗಲಿ, ಕಳೆ ನಾಶಕವಾಗಲಿ ಬಳಸುವುದಿಲ್ಲ ಅಂತ ಪಣ ತೊಟ್ಟಾಗಿತ್ತು.. Trichoderma ಎಂಬ ಹೆಸರು ಅವರಿಗೆ chemical ಹೆಸರಿನಂತೆಯೇ ಕೇಳಿತ್ತು. ಹೀಗಾಗಿ ನಾಗಣ್ಣ ಅವರಿಗೆ ಆಶ್ಚರ್ಯ ಆಗಿತ್ತು.
ರಿ ನೀವು ನನ್ನ class ನಲ್ಲಿ ನಿದ್ದೆ ಮಾಡ್ತಿದ್ರಾ!? Trichoderma Viride ರಾಸಾಯನಿಕ ಅಲ್ಲ; ಅದೂ ಕೂಡ ಒಂದು fungus.
ಎಷ್ಟೋ ತಿಂಗಳ ಹಿಂದೆ ನನ್ನ hydroponics ಕ್ಲಾಸ್‌ನಲ್ಲಿ ಅದರ ಬಗ್ಗೆ ಹೇಳಿದ್ದು, ಮರೆಯುವ ಸ್ವಭಾವದ ನಾಗಣ್ಣ ಅವರಿಗೆ ನೆನಪುಳಿಯುವ ಸಾಧ್ಯತೆ ಇರಲಿಲ್ಲ. ಆದರೂ ಮತ್ತೆ class ತೆಗೆದುಕೊಂಡು ಅವರ ಗೋಳು ಹೊಯ್ಕೊಳ್ಳುವುದು ನನ್ನ ಹಕ್ಕು ಅಂದುಕೊಂಡಿದ್ದೆನಲ್ಲ!
ಸರ್ ಮರ್ತು ಬಿಟ್ಟೆ sorry.. ಅದೂ ಒಂದು fungus ಅಂತೀರಾ .. ಅದು ಹೆಂಗೆ ಇನ್ನೊಂದು fungus ನ ಕೊಲ್ಲುತ್ತೆ?
ಅದೇ ಅದರ ವಿಶೇಷ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಹಾಗೆಯೇ fungus ಗಳಲ್ಲಿ ಕೂಡ ಕೆಟ್ಟ ಹಾಗೂ ಒಳ್ಳೆಯ fungus ಗಳಿವೆ. ಭತ್ತಕ್ಕೆ ಅಂಟಿದ್ದ ಕೆಟ್ಟ ಶಿಲೀಂಧ್ರವನ್ನು ಓಡಿಸಲು trichoderma ಎಂಬ ಒಳ್ಳೆಯ ಶಿಲೀಂಧ್ರ ರಾಮ ಬಾಣ. ಎಷ್ಟೋ ರೈತರಿಗೆ ಇದರ ಕುರಿತು ಮಾಹಿತಿ ಇಲ್ಲ. ಹೀಗಾಗಿ pharmacy ಗೆ ಹೋಗಿ ಕೇಳಿದಂತೆ ಗಿಡಗಳ ರೋಗಗಳಿಗೂ ಔಷಧಿ ಕೇಳುತ್ತಾರೆ. ಅಲ್ಲಿ ಕೊಟ್ಟ ಯಾವುದೋ ಒಂದು ವಿಷವನ್ನು ತಂದು ಸಿಂಪಡಿಸುತ್ತಾರೆ. ಭತ್ತ, ಹಣ್ಣು, ತರಕಾರಿ ಯಾವುದೂ ಈಗ ವಿಷಮುಕ್ತ ಅಲ್ಲ. ಅನ್ನದಾತರು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ವಿಷದಾತರು ಆಗುತ್ತಾ ಇಂಥದೊಂದು ವಿಷ ವರ್ತುಲದ ಅವಿಭಾಜ್ಯ ಭಾಗ ಆಗಿದ್ದಾರೆ.
ನನಗೆ ಗೊತ್ತಿದ್ದರೂ ಭತ್ತವನ್ನು ಮೊದಲ ಬಾರಿಗೆ ಬೆಳೆಯುತ್ತಿದ್ದೆನಾದ್ದರಿಂದ ಅಲ್ಲೊಂದಿಬ್ಬರು ಭತ್ತದ ಬೆಳೆಗಾರರಿಗೆ ಕೂಡ ಈ ರೋಗದ ಕುರಿತು ಕೇಳಿದೆ. ಅವರಿಗೆ ಗೊತ್ತಿದ್ದ ಉಪಾಯಗಳು ಕೂಡ chemical ವಿಷಗಳೆ ಆಗಿದ್ದವು!
ಅಲ್ಲಿನ ಸ್ಥಳೀಯ ಸಹಕಾರಿ ಸಂಘದ ಅಂಗಡಿಯಲ್ಲಿ ವಿಚಾರಿಸಿದಾಗ trichoderma viride ಲಭ್ಯವಿತ್ತು. ಅದರ ಜೊತೆಗೆ ಇನ್ನೊಂದು ಒಳ್ಳೆಯ ಶಿಲೀಂದ್ರ trichoderma harzianum ಅನ್ನೂ ಕೂಡ ಅವರು ಸಿಂಪಡಿಸಲು ಹೇಳಿದರು. ಇದರ ಬಗ್ಗೆ ಗೊತ್ತಿರುವ ಹಾಗೂ ಉಪಯೋಗಿಸುವ ಕೆಲವರಾದರೂ ಹಳ್ಳಿಯಲ್ಲಿ ಇದ್ದಾರಲ್ಲ ಅಂತ ಸಮಾಧಾನವಾಯ್ತು. ಒಳ್ಳೆಯ ಬದಲಾವಣೆ ಕೂಡ ಆಗುತ್ತದೆ. ಸ್ವಲ್ಪ ಸಮಯ, ಸಮಾಧಾನ ಬೇಕು ಅಷ್ಟೆ!
ಇಬ್ಬರ ನಡುವೆ ಈಗಾಗಲೇ ಜಗಳ ಆಗಿತ್ತಾದರೂ ಅವನೂ ಕೂಡ ಅಷ್ಟೇ ಸಮಾಧಾನದಿಂದ ಆರಾಮ ರಿ ಅಂತ ಹೇಳಿದನಾದರೂ ಒಳಗೊಳಗೇ ಅವನಿಗೆ ನನ್ನ ಮೇಲೆ ಇನ್ನೂ ಕೋಪ ಇರಬಹುದು ಅನಿಸಿತು. ತಪ್ಪು ಮಾಡಿದ್ದು ಅವನು. ಕೋಪ ಇರಬೇಕಾದದ್ದು ನನಗೆ, ಆದರೆ ನಾನು ಅವನನ್ನು ಕ್ಷಮಿಸಿದ್ದೆ.
ಶ್ಯಾಮನನ್ನು ಕರೆಸಿ trichoderma ಜೋಡಿ ಶಿಲೀಂಧ್ರಗಳನ್ನು ಒಂದು ಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಸಿಂಪರಣೆ ಕಾರ್ಯ ಮುಗಿಸಿದೆವು. ಇದು ರಾಸಾಯನಿಕ ಅಲ್ಲವಾದ್ದರಿಂದ ಹೆಚ್ಚಿಗೆ ಸಿಂಪಡಿಸಿದರೂ ತೊಂದರೆ ಇಲ್ಲ.
“ಆರಾಮಾಗಿ ಬೆಂಗಳೂರಿನಲ್ಲಿ ಇರೋದು ಬಿಟ್ಟು ಇದೆಲ್ಲ ಇವರಿಗೆ ಯಾಕೆ ಬೇಕಿತ್ತು”, ಅನ್ನುವ ನೋಟದಲ್ಲಿ ಶ್ಯಾಮ ನಮ್ಮ ಕೆಲಸ ಮಾಡಿಕೊಟ್ಟು, ಬೆಂಗಳೂರಿನ ನನ್ನ ಕುರಿತ ಒಂದಿಷ್ಟು ವಿಷಯಗಳ ಕೆದಕಿ ತಿಳಿಯುವ ವ್ಯರ್ಥ ಪ್ರಯತ್ನ ಮಾಡಿ ಮನೆಗೆ ಹೋದ. ಅಲ್ಲಿನ ಯಾರಿಗೂ ನನ್ನ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಡಬಾರದು ಅಂತ ನಿರ್ಧಾರ ಮಾಡಿದ್ದೆ. ಹೀಗಾಗಿ ಅವನು ಕೇಳುವ ಪ್ರಶ್ನೆಗಳಿಗೆಲ್ಲ ಹಾರಿಕೆ ಉತ್ತರಗಳನ್ನು ಕೊಡುತ್ತಿದ್ದುದನ್ನು ಕೇಳಿ ಅವನಿಗೂ ಅದು ಅರ್ಥವಾಗಿತ್ತು ಅನಿಸುತ್ತೆ. ಕೆಲವು ಸಲ ಒಬ್ಬ ಮನುಷ್ಯನನ್ನು ಅರಿಯದೆಯೇ ತುಂಬಾ ಗುಟ್ಟುಗಳನ್ನು ಅವರಿಗೆ ಹೇಳುವುದು ಒಂದು ದಡ್ಡತನ ಅಂತ ತಡವಾದರೂ ಅರಿವಾಗಿತ್ತು. ಆದರೂ ನಾನು ಇನ್ನೂ ಸ್ವಲ್ಪ ದಡ್ಡನೆ ಆಗಿದ್ದೆ!
ಸಿಂಪಡಿಸಿದ ಕೆಲವು ದಿನಗಳಲ್ಲಿ ಶಿಲೀಂಧ್ರ ಮಾಯವಾಗತೊಡಗಿತ್ತು. ನಮ್ಮ ಮುಳ್ಳು ಇನ್ನೊಂದು ಮುಳ್ಳನ್ನು ತೆಗೆಯಲು ಶುರು ಮಾಡಿತ್ತು!
ಅದೇ ಸಮಯದಲ್ಲಿ ಉಳಿದ ರೈತರು ಆ ಭಾಗದಲ್ಲಿ ಏನೇನು ಬೆಳೆಯುತ್ತಾರೆ ಎಂಬ ತನಿಖೆಗೆ ತೊಡಗಿದೆವು. ತುಂಬಾ ಭಾಗದಲ್ಲಿ ಭತ್ತವನ್ನು ಬೆಳೆಯುವವರು ಅಲ್ಲಿ ಹೆಚ್ಚು. ಅದನ್ನು ಬಿಟ್ಟರೆ ಮೆಕ್ಕೆ ಜೋಳ, ಶುಂಠಿ, ಬಾಳೆ. ಈಗೀಗ ಅಡಿಕೆಗೆ ಹೆಚ್ಚಿನ ಬೆಲೆ ಬರುತ್ತಿರುವುದರಿಂದ ಅವರಲ್ಲಿ ಹೆಚ್ಚು ಹೆಚ್ಚು ಜನರು ಈಗೀಗ ಅಡಿಕೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಡುತ್ತಿವೆ. ಆ ಪರಿವರ್ತನೆ ತುಂಬಾ ವೇಗವನ್ನೂ ಪಡೆಯುತ್ತಿದೆ ಅನಿಸಿತು. ಹೀಗಾದರೆ ಕ್ರಮೇಣ ಅಡಿಕೆ ದರ ಕುಸಿಯುವುದಿಲ್ಲವೆ ಎಂಬ ಪ್ರಶ್ನೆಗೆ ಹಲವರು ಹೌದು ಅಂದರೂ ಇನ್ನೂ ಕೆಲವರು, ಹೀಗೆ ತುಂಬಾ ವರ್ಷಗಳಿಂದ ಹೇಳುತ್ತಿದ್ದಾರೆ, ಅಡಿಕೆಗೆ ಬೆಲೆ ಏರುತ್ತಲೇ ಇದೆ. ಈಗೀಗ ಬಣ್ಣ ತಯಾರಿಸಲೂ ಕೂಡ ಅದನ್ನು ಬಳಸುತ್ತಿದ್ದಾರೆ. ಹೀಗಾಗಿ ಅದರ ಬೇಡಿಕೆ ಕಡಿಮೆ ಆಗದು ಎಂಬ ಸಮಜಾಯಿಷಿ ನೀಡಿದರು. ಆದರೂ ಹೀಗೆಯೇ ಎಲ್ಲರೂ ಅಡಿಕೆ ಬೆಳೆಯಲು ನಿಂತರೆ ಮುಂದೆ ತಿನ್ನುವುದಕ್ಕೆ ಅನ್ನವಾದರೂ ಇರುತ್ತದೆಯೆ ಅಂತ ಭಯವಾಯಿತು. ನಾವು ಬರಿ ಹಣ್ಣು, ತರಕಾರಿ, ಕಾಳುಕಡಿ ಬೆಳೆಯೋಣ ಅಂತ ನಾನು ನಾಗಣ್ಣ ಅವರಿಗೆ ಹೇಳಿದೆ. ಅವರೂ ಹೂಂ ಅಂದರು. ಪಾಪ ಗುರುವಿನ ಮಾತಿಗೆ ಎದುರು ಮಾತಾಡೋದು ಬೇಡ ಅಂತ ಸುಮ್ಮನಿದ್ದರೋ ಏನೋ!
ಆದರೆ ನಾವಿಲ್ಲದಾಗ ನಮ್ಮ ಬೆಳೆಯನ್ನು ಕಾಪಾಡುವುದು ಹೇಗೆ ಎಂಬ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಅಲ್ಲಿಯೇ ಮನೆ ಮಾಡಿಕೊಂಡು ಇರುವುದು ನನಗೆ ಇನ್ನೂ ಸಾಧ್ಯವಿರಲಿಲ್ಲ. ಹೊಲದಲ್ಲಿ ಕ್ಯಾಮೆರಾ ಹಾಕೋಣ ಅಂತಲೂ ಯೋಚಿಸಿದೆ. ಆದರೆ ಹಾಗೆ ಮಾಡಲು ಅಲ್ಲೊಂದು ತೋಟದ ಮನೆಯಾದರೂ ಬೇಕಲ್ಲ. ಸೂರ್ಯನ ಶಕ್ತಿಯಿಂದಲೇ ಕೆಲಸ ಮಾಡುವ ವೈಫೈ ಕ್ಯಾಮೆರಾಗಳು ಇವೆ ಅಂತ ತಿಳಿಯಿತು. ಆದರೆ ಆ ಕ್ಯಾಮೆರಾಗಳನ್ನೆ ಕಳುವು ಮಾಡಿದರೆ ಏನು ಮಾಡೋದು ಅಂತ ಸುಮ್ಮನಾದೆ.
ಅಷ್ಟೊತ್ತಿಗೆ ನನ್ನ ಹೊಲ ನೋಡಲು ಭಾವ ಸಂತೋಷ್ ಹೆಗಡೆ ಬಂದಿದ್ದರು. ಅವರಿಗೆ ನನ್ನ ಹೊಲ ನೋಡಿಕೊಳ್ಳುವ ವಿಷಯದಲ್ಲಿ ಮೊದಲೆಲ್ಲ ತುಂಬಾ ಕಾಟ ಕೊಟ್ಟಿದ್ದೆ. ಈಗ ಅಷ್ಟೆಲ್ಲ ಅವರಿಗೆ ತೊಂದರೆ ಕೊಡುತ್ತಿರಲಿಲ್ಲ. ಆದರೂ ನಾನು ಭತ್ತ ಬೆಳೆಯುವ ವಿಷಯ ತಿಳಿದು ನೋಡಲು ಬಂದಿದ್ದರು. ನೋಡಿ ಖುಷಿ ಪಟ್ಟರು. ಚೆನ್ನಾಗಿ ಬರ್ತಾ ಇದೆ ಅಂತ certificate ಕೂಡ ಕೊಟ್ಟರು. ಹಾಗೆಯೇ ಮಾತಾಡುವಾಗ ಕಳುವಿನ ವಿಷಯ ತಿಳಿಸಿದೆ. ಆಗವರು ಇಂತಹದಕ್ಕೆಲ್ಲ ದೇವರೇ ಕಾಪಾಡಬೇಕು ಅಂದರು. ಅದನ್ನು ತಮಾಷೆಯಾಗಿ ಹೇಳಿದರೇನೋ ಅಂದ್ಕೊಂಡೆ. ಆದರೆ ಅವರು ಹೇಳಿದ್ದು ನಿಜಾವಾಗಿಯೂ ದೇವರ ಸಹಾಯ ತೆಗೆದುಕೋ ಅಂತ!
ಅಲ್ಲಿಂದ ಎರಡು ಗಂಟೆಯ ದೂರದಲ್ಲಿ ಸಾಗರದ ಹತ್ತಿರ ಸಿಗಂದೂರು ಎಂಬ ಊರಿನಲ್ಲಿ ತಾಯಿ ಚೌಡೇಶ್ವರಿ ದೇವಿಯ ದೇವಸ್ಥಾನ ಇದೆ. ಅಲ್ಲಿಗೆ ಹೋಗಿ ದೇವಿಯ ಆಶೀರ್ವಾದ ಪಡೆದು ಸಿಗಂದೂರು ದೇವತೆಯ ಎಚ್ಚರಿಕೆ ಬೋರ್ಡ್‌ಅನ್ನು ಹೊಲದಲ್ಲಿ ಹಾಕಿದರೆ ಕಳ್ಳರು ಕಳುವು ಮಾಡುವ ಮೊದಲು ಯೋಚನೆ ಮಾಡುತ್ತಾರೆ ಅಂದರು. ಸಿಗಂದೂರಿನ ದೇವಿ ಕಳ್ಳರಿಗೆ ಶಿಕ್ಷೆ ಕೊಡುತ್ತಾಳೆ ಎಂಬ ನಂಬಿಕೆ ಈಗಲೂ ಜೀವಂತವಾಗಿದೆ. ದೇವರ ಭಯ ಮೊದಲಿನ ಕಾಲದಲ್ಲಿ ಇನ್ನೂ ಹೆಚ್ಚು ಇತ್ತು. ಅದೇ ಕಾರಣಕ್ಕೆ ಬೇರೆಯವರ ವಸ್ತುಗಳನ್ನು ಯಾರೂ ಮುಟ್ಟುತ್ತಿರಲಿಲ್ಲ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು. ಈಗೀಗ ಅದೊಂದು ಮೂಢ ನಂಬಿಕೆ ಎಂದು ಹೀಗಳೆಯುವ ನಾಸ್ತಿಕರು ಹೆಚ್ಚಾದಂತೆ ಕಳ್ಳರು, ಮೋಸಗಾರರು ಕೂಡ ಹೆಚ್ಚಾದರೇನೋ. ಆದರೂ ಭಯ ಭಕ್ತಿ ಇರುವವರ ಸಂಖ್ಯೆಯೂ ಹಳ್ಳಿಗಳಲ್ಲಿ ಇನ್ನೂ ಪೂರ್ತಿ ಕಡಿಮೆಯಾಗಿಲ್ಲ ಅನಿಸಿತು.
ಒಟ್ಟಿನಲ್ಲಿ ಇದು ಒಂದು ಒಳ್ಳೆಯ ಸಲಹೆ ಅನಿಸಿತು ನನಗೆ. ಎಲ್ಲರೂ ದೇವರಿಗೆ ಹೆದರದಿದ್ದರೂ ಎಷ್ಟಾದರೂ ಪರಿಣಾಮ ಆದೀತು ಅಂದುಕೊಂಡೆ. ಆದಷ್ಟು ಬೇಗ ಆಶಾಳನ್ನು ಸಿಗಂದೂರಿಗೆ ಕರೆದುಕೊಂಡು ಹೋಗಿ ಬರಬೇಕು ಅಂದುಕೊಂಡೆ ..
(ಮುಂದುವರಿಯುವುದು …)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.