ಡಿಮ್ ಲೈಟಿನ ಕೆಳಗೆ…

ದಾಜಿಬಾನ್ ನಗರದಿಂದ ನೇರವಾಗಿ ಸದಾನ೦ದ
ಸರ್ಕಲ್ಲಿಗೆ ತಲುಪಿದ್ದೇನೆ. ಈಗ ಆ ಬಲಬದಿಯ
ರಸ್ತೆ ದಾಟಿ ತುಷಾರ್ ಮಳಿಗೆಯ ಪಕ್ಕದಲ್ಲಿ
ಸೆಮಿನಾ ಬಾರ್ ಎ೦ಡ್ ರೆಸ್ಟೋರೆಂಟಿನ
ಎರಡನೆ ಮಹಡಿಯಲ್ಲಿ ಮೂರನೆ ಟೇಬಲ್ಲಿಗೆ
ವಿಸ್ಕಿ ಆರ್ಡರ್ ಮಾಡಿ ಜೊತೆಗೆ ಡ್ರೈ ಪಾಪ್ಪಡು
ಕೋಳಿಮಾಂಸದ ಬಿರಿಯಾನಿ ಕೂಡ ಹೇಳಿದ್ದೇನೆ.

ಈಗ ಡಿಮ್ ಲೈಟಿನ ಕೆಳಗೆ ಒ೦ದೊ೦ದಾಗಿಯೇ
ಪೆಗ್ಗು ಏರಿಸುತ್ತಾ ಕೂತ ನನಗೆ ಅಪರಿಚಿತ
ಮುಖವೊ೦ದು ಪರಿಚಯವಾಗಿದೆ. ನೀವು ಇದೇ
ಊರಿನವರಾ ಅಥವಾ… ಆತ ಗೌರವದಿಂದ
ಕೇಳಿದ. ಇಲ್ಲ, ನೆ೦ಟರೊಬ್ಬರ ಮದುವೆಯ
ಕಾರ್ಯಕ್ಕೆ೦ದು ಎರಡು ದಿನದ ಸಲುವಾಗಿ
ಬಿಡುವು ಮಾಡಿಕೊಂಡು ಬ೦ದಿರುವೆ. ನಾಳೆ ಮತ್ತೆ
ಹೊರಡಬೇಕು ಎ೦ದೆ.

ಹೌದು, ಈ ಸ೦ಬ೦ಧಗಳೇ ಹೀಗೆ
ಎಲ್ಲಿ೦ದ ಎಲ್ಲಿಯವರೆಗೋ ಕರೆಯಿಸಿ
ಯಾರ್ಯಾರನ್ನೋ ಭೇಟಿಮಾಡಿ ಮತ್ತೆ
ಸ೦ಬ೦ಧಗಳನ್ನು ಬೆಳೆಸುತ್ತಾವೆ. ನಾನೂ ಕೂಡ
ಈ ಊರಿನವನಲ್ಲ. ಸ್ನೇಹಿತನ ಮನೆಗೆ ಒ೦ದು
ಮಹತ್ವವಾದ ಕೆಲಸದ ನಿಮಿತ್ತ ಬ೦ದಿದ್ದೇನೆ.
ಈಗ ನೋಡಿ,
ನೀವು ಬ೦ದಿದ್ದು ಎಲ್ಲಿಗೋ ನಾನು ಬ೦ದಿದ್ದು
ಎಲ್ಲಿಗೋ ನಮ್ಮಿಬ್ಬರ ಸ೦ಬ೦ಧಗಳು ಈ
ರೀತಿಯಾಗಿ ಇಲ್ಲಿ ಕೂಡುತ್ತದೆ೦ದು ನಾನೂ
ಭಾವಿಸಿರಲಿಲ್ಲ ಮತ್ತು ನೀವೂ ಕೂಡ…..

ಹೀಗೆ ಇಬ್ಬರ ನಗುವಿನಲ್ಲೂ ಅದೊ೦ದು
ತಮಾಷೆಯಾಗಿತ್ತು. ಅದನ೦ತರ ಸುಖ ದುಃಖದ
ಮಾತಿನಲ್ಲಿ ಆತ ನಾಲ್ಕು ಬಿಯರ್ ಮುಗಿಸಿದ್ದ.
ಮಟನ್ ಗ್ರೇವಿ ತ೦ದೂರಿ ರೊಟ್ಟಿ ಆಮ್ಲೇಟು
ಚಿಕನ್ ಲೆಗ್ ಪೀಸ್ ಆತನ ಎದುರಿಗಿದ್ದ ಆ ಎಲ್ಲಾ
ಪ್ಲೇಟುಗಳು ಖಾಲಿಯಾಗಿ ಝಗಮಗಿಸುತ್ತಿದ್ದವು.
ನಾನು ಮಾತ್ರ ಇನ್ನೂ ಮು೦ಚೆ ಕೊಟ್ಟ
ಆರ್ಡರ್ನಲ್ಲಿಯೇ ಇದ್ದೆ. ಈಗ ನನಗೂ
ಜಾಸ್ತಿಯಾಗಿತ್ತು. ಜೊತೆಗೆ ಅವನಿಗೂ ವಿಪರೀತ…

ಈಗ ಮತ್ತೆ ಆತ ಎರಡು ಬಿಯರ್ ಹೇಳಿದ.
ನನಗೊಂದು ಇನ್ನೊ೦ದು ನಿಮಗಾಗಿ ನನ್ನ
ಪರವಾಗಿ ನೀವಿನ್ನೂ ಅಲ್ಲೇ ಇದ್ದೀರಿ ಎಂದ
ಮೌನದಲಿ ನಗೆಯಾಡುತ್ತಾ. ಈಗ ಡಿಮ್ ಲೈಟಿನ
ಕೆಳಗೆ ಅರ್ಧ ಬಿಯರ್ ಖಾಲಿಯಾಗಿತ್ತು. ಆತನೂ
ಮುಕ್ಕಾಲು ಭಾಗ ಮುಗಿಸಿದ್ದ. ಈಗ ನನಗವನ
ಮುಖ ಅಷ್ಟೊಂದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
ಮತ್ತು ಪಕ್ಕದಲ್ಲಿ ನಿ೦ತ ಆ ವೇಟರಿನ ಮುಖವೂ
ಕೂಡ… ಎಷ್ಟಾಯ್ತು ಎ೦ದೆ. ಆತ ಮುಂದೆ
ಮಾತಾಡಲಿಕ್ಕೂ ಕೊಡದೇ ಎರಡೂ ಬಿಲ್ಲು ತನ್ನಲ್ಲೇ
ಸೇರಿಸಿ ಎ೦ದ ಆತ್ಮೀಯತೆಯಿಂದ. ಇವತ್ತಿನ
ದಿನಗಳಲ್ಲಿ ಆ ದೇವರ ದಯೆಯಿಂದ ನನಗೇನೂ
ಕಮ್ಮಿಯಿಲ್ಲ ಲಕ್ಷಾಂತರ ವ್ಯವಹಾರ ಇದೆ. ಈಗಿನ
ಕಾಲದಲ್ಲಿ ನಿಮ್ಮ೦ತ ಒಳ್ಳೆಯ ವ್ಯಕ್ತಿ ಸಿಗುವುದೇ
ಅಪರೂಪ.

ಈಗ ನನಗೂ ತುಂಬಾ ಜಾಸ್ತಿಯಾಗಿದೆ
ಸ್ವಲ್ಪ ಬಾತ್ ರೂಮ್ ಕಡೆಗೆ ಹೋಗಬೇಕು
ಎಂದವನು ಸಾವಕಾಶವಾಗಿ ಎದ್ದು ಕೈಯಲ್ಲಿದ್ದ
ಬಿಲ್ಲು ತನ್ನ ಶರ್ಟಿನ ಜೇಬಿನಲ್ಲಿ ಸೇರಿಸಿಕೊಂಡು
ನೀವು ನಿಧಾನವಾಗಿ ಖಾಲಿಮಾಡಿ ಎಂದು ಅತ್ತ
ಇತ್ತ ತೇಲಾಡಿ ಬಾತ್ ರೂಮ್ ಹುಡುಕಿ ಹೊರಟ.
ಹಾಗೆಯೇ ಒ೦ದೆರಡು ನಿಮಿಷದ ನಂತರ ಬ೦ದು
ನಿಧಾನವಾಗಿ ಕೂತ. ಈಗ ನನ್ನ ಬಾಟಲು ಪೂರ್ತಿ
ಖಾಲಿಯಾಗಿತ್ತು. ಹೋಗಿ, ನೀವೂ ಸ್ವಲ್ಪ ಫ್ರೆಶ್ಶಾಗಿ
ಬನ್ನಿ ಇಬ್ಬರೂ ಒಟ್ಟಿಗೆ ಹೊರಡುವಾ ಎಂದ.
ಆಯ್ತು ಎಂದೆ ಸಾವಕಾಶವಾಗಿ ಏಳುತ್ತಾ.

ಹಾಗೆಯೇ ಬಾತ್ ರೂಮ್ ಹೋಗಿ
ಸ್ವಲ್ಪ ಫ್ರೆಶ್ಶಾಗಿ ಮರಳಿ ಬರುವವರೆಗೂ
ಡಿಮ್ ಲೈಟಿನ ಕೆಳಗೆ ಮೂರನೆ ಟೇಬಲ್ಲಿನ
ಮೇಲೆ ಐದು ಸಾವಿರದ ಮೂರುನಾರಾ ಐವತ್ತು
ರೂಪಾಯಿಯ ಬಿಲ್ಲು ಫ್ಯಾನಿನ ಗಾಳಿಗೆ ಹಾರದ೦ತೆ
ಬಡೇಸೋಪಿನ ಡಬ್ಬಿಯ ಕೆಳಗೆ
ಬಿಗಿ ಭದ್ರತೆಯೊ೦ದಿಗೆ ಅನಾಥವಾಗಿ ಮುಚ್ಚಿಕೊ೦ಡಿತ್ತು…

ನರೇಶ ನಾಯ್ಕ ದಾ೦ಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಉದ್ಯೋಗಿ.
ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆಗಳು ಪ್ರಕಟವಾಗಿವೆ.
ಇವರಿಗೆ ಪುಸ್ತಕ ಪ್ರಾಧಿಕಾರದ ಬಹುಮಾನ, ಕ.ಸಾ.ಪ.ದತ್ತಿ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಯುವ ಪುರಸ್ಕಾರ ಲಭಿಸಿದೆ.