ರಾಮಚಂದ್ರ ದೇವರೂ ‘ಮೂಗೇಲ’ ಕತೆಯಲ್ಲಿ ಮೂಗೇಲನ ಅಪ್ಪನಂಥವರು ಮನುಷ್ಯ ಸಂಬಂಧಗಳಿಗಿಂತ ಆರ್ಥಿಕ ಲಾಭಕ್ಕೆ ಪ್ರಾಮುಖ್ಯ ನೀಡುವುದನ್ನು ತೋರಿಸಲು ಮೂಗೇಲನ ಮೂಗನ್ನು ಅಸಂಗತವಾಗಿ ಹನುಮಂತನ ಬಾಲದಂತೆ ಬೆಳೆಸಿದ್ದಾರೆ. ಈ ಕತೆ ಮೇಲ್ನೋಟಕ್ಕೆ ಭಾರತೀಯ ಅಥವಾ ಕನ್ನಡದ ವಿಶಿಷ್ಟ ಸನ್ನಿವೇಶವನ್ನು ಸೂಚಿಸುವಂಥದ್ದಲ್ಲ – ವೈಯಕ್ತಿಕ ಆಯಾಮದ ಪರಿಶೀಲನೆಯಾದುದರಿಂದ ಜಗತ್ತಿನ ಎಲ್ಲಿ ಬೇಕಾದರೂ ನಡೆಯಬಹುದಾದ್ದು ಎಂದು ಅನಿಸುತ್ತದೆ. ಇಂಥ ಲಾಭ ಬಡುಕರನ್ನು ಜಗತ್ತಿನಾದ್ಯಂತ ಕಾಣಬಹುದು ಎನ್ನುವುದೇ ಇದಕ್ಕೆ ಕಾರಣ.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ ಅವರ  ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್

 

ಡಾ. ರಾಮಚಂದ್ರ ದೇವ (ಮಾರ್ಚ್ 22, 1948 – ಸೆಪ್ಟಂಬರ್ 11, 2013) ಕನ್ನಡದ ವಿಶಿಷ್ಟ ಪ್ರತಿಭೆಯ ಲೇಖಕರು. ಅವರ ಕತೆಗಳೂ, ಕತೆಗಳಂತಹ ಕವನಗಳೂ ನಮ್ಮ ಕಾಲದ ಸಮಾಜದ ಬಗ್ಗೆ ಒಳನೋಟಗಳನ್ನು ಕೊಡುತ್ತವೆ. ಆಂಗ್ಲಭಾಷೆಯ ಪ್ರಾಧ್ಯಾಪಕರಾಗಿದ್ದ ಅವರು ಒಳನೋಟಗಳುಳ್ಳ ವಿಮರ್ಶಕರೂ, ಅನುವಾದಕರೂ ಆಗಿದ್ದರು. ಜತೆಗೆ ಅವರು ಒಳ್ಳೆಯ ನಾಟಕಕಾರರೂ ಹೌದು.

ಅವರು ಹುಟ್ಟಿದ್ದು ದಕ್ಷಿಣ ಕನ್ನಡದ ಕೋಟೆ ಮುಂಡುಗಾರು ಗ್ರಾಮದಲ್ಲಿ. ದೇವ ರಾಘವೇಂದ್ರಯ್ಯ ಮತ್ತು ದೇವ ಹೊನ್ನಮ್ಮ ದಂಪತಿಗಳ ಪುತ್ರ ದೇವ ರಾಮಚಂದ್ರಯ್ಯ ಮುಂದೆ ರಾಮಚಂದ್ರ ದೇವ ಎಂದೇ ಪ್ರಸಿದ್ಧರಾದರು. ಸುಳ್ಯ ಪರಿಸರದಲ್ಲಿ ಬೆಳೆದ ರಾಮಚಂದ್ರ ದೇವ ಅವರು ನವ್ಯ ಸಾಹಿತ್ಯದ ಉತ್ಸಾಹದ ಕಾಲದಲ್ಲಿ ಸಮಾನಸ್ಕಂಧರೊಂದಿಗೆ ಸಾಹಿತ್ಯಿಕ ಚರ್ಚೆಗಳನ್ನು ನಡೆಸುತ್ತ, ಚಿಂತನೆಗಳನ್ನು ಹಂಚಿಕೊಳ್ಳುತ್ತ ಕವಿಯಾಗಿ ಮಾಗಿದವರು. ಸುಳ್ಯ ಪರಿಸರದಲ್ಲಿ ಆಗ ಸುಬ್ರಾಯ ಚೊಕ್ಕಾಡಿಯವರ ನೇತೃತ್ವದಲ್ಲಿ ಸಾಹಿತ್ಯಾಸಕ್ತ ಯುವಕರ ಬಳಗವೊಂದು ರೂಪುಗೊಂಡಿತ್ತು. ರಾಮಚಂದ್ರ ದೇವ ಅದರ ಸದಸ್ಯರಾಗಿದ್ದರು. ಚೊಕ್ಕಾಡಿಯವರ ಪ್ರಭಾವದ ಬಗ್ಗೆ ರಾಮಚಂದ್ರ ದೇವ ಹೀಗೆ ಬರೆದಿದ್ದಾರೆ : “ಎಸ್ಸೆಸ್ಸೆಲ್ಸಿ ಮುಗಿಯುವ ಹೊತ್ತಿಗೆ ಸುಬ್ರಾಯ ಚೊಕ್ಕಾಡಿ ನನ್ನ ಸಂವೇದನೆಯನ್ನು ಖಚಿತವಾಗಿ ರೂಪಿಸಿದ್ದರು. ಮುಂದೆ ನಾನು ಬೆಳೆದಿದ್ದರೆ, ಅದು ಅವರು ರೂಪಿಸಿಕೊಟ್ಟ ಮನಸ್ಸಿನ ಬುನಾದಿಯ ಮೇಲೆ (`ಮುಚ್ಚು ಮತ್ತು ಇತರ ಲೇಖನಗಳು’). ಚೊಕ್ಕಾಡಿ ತುಂಬ ಕಟುವಾಗಿ ಟೀಕಿಸುತ್ತ ತಮ್ಮ ಬೆಳವಣಿಗೆಗೆ ಕಾರಣರಾದರೆಂದು ರಾಮಚಂದ್ರ ದೇವ ಅವರು ನೆನಪಿಸಿಕೊಂಡಿದ್ದಾರೆ.

ದೇವ ಅವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ. ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಎಂ. ಎ. (1971) ಪದವಿ ಪಡೆದು ಉಡುಪಿ ಜಿಲ್ಲೆಯ ಕಲ್ಯಾಣಪುರದಲ್ಲಿ, ಮೈಸೂರಿನ ಬನುಮಯ್ಯನವರ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು. ಶೇಕ್ಸ್‍ಪಿಯರ್ ನಾಟಕಗಳ ತೌಲನಿಕ ಅಧ್ಯಯನ ‘ಶೇಕ್ಸ್ ಪಿಯರ್ ಎರಡು ಸಂಸ್ಕೃತಿಗಳಲ್ಲಿ’ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅವರು ಒಪ್ಪಿಸಿದ ಪಿಎಚ್.ಡಿ. ಥೀಸಿಸ್. ದೇವ ಅವರು ದೆಹಲಿಯ ನ್ಯಾಷನಲ್ ಎಂಬೆಸಿಯ ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ 1974 ರಿಂದ 1980 ರವರೆಗೆ ಗ್ರಂಥಪಾಲಕರಾಗಿದ್ದರು. ನಂತರ ‘ಪ್ರಜಾವಾಣಿ’ಯಲ್ಲಿ ಸಹಸಂಪಾದಕರಾಗಿ, ಪ್ರಿಂಟರ್ಸ್ ಪ್ರಕಾಶನದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. 1988 ರಲ್ಲಿ ಅವರು ಬೆಂಗಳೂರಿನಲ್ಲಿ ಒಂದು ಪುಸ್ತಕದಂಗಡಿ ಕಂ ಆರ್ಟ್ ಗ್ಯಾಲರಿ ಪ್ರಾರಂಭಿಸಿದ್ದರು. ಕೊನೆಯ ಕೆಲವು ವರ್ಷಗಳಲ್ಲಿ ಅವರು ತಮ್ಮ ಊರಾದ ಕಲ್ಮಡ್ಕದಲ್ಲಿ ಕೃಷಿಕರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.

ರಾಮಚಂದ್ರ ದೇವ ಅವರ ಕಥಾಸಂಕಲನ ‘ದಂಗೆಯ ಪ್ರಕರಣ’ (1974) ಅವರನ್ನು ಬಹಳ ಬೇಗನೆ ಕನ್ನಡದ ಒಬ್ಬ ಮಹತ್ವದ ಕತೆಗಾರ ಎಂದು ಗುರುತಿಸುವಂತೆ ಮಾಡಿತು. ಭಾರತೀಯ ಫ್ಯಾಂಟಸಿ ಮಾದರಿಯೊಂದನ್ನು ಬೆಳೆಸಬೇಕೆಂದು ಅವರು ‘ಮೂಗೇಲ ಮತ್ತು ಇತರ ಕಥೆಗಳು’ (1985) ಸಂಕಲನದಲ್ಲಿ ಪ್ರಯತ್ನಿಸಿದ್ದಾರೆ. ನಂತರದ ಅವರ ‘ರಿಸಾರ್ಟ್’ ಎಂಬ ಕತೆ ಕನ್ನಡದ ಮುಖ್ಯ ಕತೆಗಳಲ್ಲಿ ಒಂದಾಗಿದೆ. 2012 ರಲ್ಲಿ ಅವರ ಸಮಗ್ರ ಕತೆಗಳ ಮೊದಲನೆಯ ಸಂಪುಟ ಹೊರಬಂದಿದೆ.

ಕತೆಗಳ ಜತೆ ಜತೆಯಲ್ಲಿಯೇ ಅವರು ನವ್ಯ ಮಾದರಿಯ ಕವಿತೆಗಳನ್ನೂ ಬರೆದು, ನವ್ಯರಲ್ಲಿ ತಮ್ಮದೇ ಆದ ಪ್ರತ್ಯೇಕ ಮಾರ್ಗವೊಂದನ್ನು ಕಂಡುಕೊಂಡಿದ್ದರು. ‘ಮಾತಾಡುವ ಮರ’ (2003) ಅವರ ಸಮಗ್ರ ಕಾವ್ಯಸಂಪುಟ.

ರಾಮಚಂದ್ರ ದೇವ ಅವರು ವಿಮರ್ಶೆ ಹಾಗೂ ಅಂಕಣ ಬರಹಗಳನ್ನು ಬರೆಯುತ್ತಾ ಸಾಹಿತ್ಯದ ಚರ್ಚೆಗಳನ್ನು ಬೆಳೆಸುತ್ತಿದ್ದರು. ಅವರ ಪ್ರತಿಯೊಂದು ಬರಹವೂ ಒಳನೋಟಗಳಿಂದ ಮತ್ತು ಹೊಸವಿಚಾರಗಳಿಂದ ತುಂಬಿರುತ್ತಿತ್ತು. ಅವರ ವಿಮರ್ಶೆಯ ಲೇಖನಗಳು ‘ಮುಚ್ಚು ಮತ್ತು ಇತರ ಲೇಖನಗಳು’ (1994) ಪುಸ್ತಕದಲ್ಲಿ ಸೇರಿವೆ. ‘ಮಾತು ಕತೆ’ (1998) ಅಂಕಣ ಬರಹಗಳ ಸಂಕಲನ. ಅವರು ನಿಷ್ಠುರವಾದಿ; ತಮ್ಮ ವಿಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಹಾಗೂ ಯಾವ ಮುಲಾಜೂ ಇಲ್ಲದೆ ಮಂಡಿಸುವ ಧೈರ್ಯ ಅವರಲ್ಲಿತ್ತು.

ರಾಮಚಂದ್ರ ದೇವ ನಮ್ಮ ಮುಖ್ಯ ಆಧುನಿಕ ನಾಟಕಕಾರರಲ್ಲಿ ಒಬ್ಬರು. ಅವರ ‘ರಥಮುಸಲ’ ಮುಂತಾದ ನಾಟಕಗಳು ರಂಗಪ್ರಯೋಗಗಳಾಗಿ ಚಿಂತನಶೀಲ ಮನಸ್ಸುಗಳಿಗೆ ಆಧುನಿಕ ಜಗತ್ತನ್ನು ಅನನ್ಯವಾಗಿ ಅರಿವಿಗೆ ತಂದುಕೊಡುವ ಕಲಾಕೃತಿಗಳಾಗಿ ಮುಖ್ಯವೆನಿಸಿವೆ. ದೇವ ಅವರು ಈ ಕೇಡುಗಾಲದಲ್ಲಿ ಶೇಕ್ಸ್ ಪಿಯರಿನಂತೆ ಅಪಸ್ವರಗಳಿಂದ ಬಾಧಿತರಾಗಿ ಸುಸ್ವರಕ್ಕಾಗಿ ಹಂಬಲಿಸಿದ್ದಾರೆ ಎಂದು ವಿಮರ್ಶಕರೊಬ್ಬರು ನುಡಿದಿದ್ದಾರೆ. ಅವರು ತಮ್ಮ ನಾಟಕಗಳಲ್ಲಿ ತುಳುನಾಡಿನ ಯಕ್ಷಗಾನ ಹಾಗೂ ಭೂತ ಕೋಲಗಳನ್ನು ಬಳಸುತ್ತಾರೆ. ಅವರು ಶೇಕ್ಸ್‌ಪಿಯರಿನ ‘ಮ್ಯಾಕ್‍ಬೆತ್’ ಮತ್ತು ‘ಹ್ಯಾಮ್ಲೆಟ್’ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ತಮ್ಮ ಪ್ರಿಯ ಲೇಖಕ ಶೇಕ್ಸ್‌ಪಿಯರನ ಇನ್ನಷ್ಟು ನಾಟಕಗಳನ್ನು ಕನ್ನಡಕ್ಕೆ ತರುವ ಬಯಕೆಯೂ ಅವರಿಗಿತ್ತು.

ರಾಮಚಂದ್ರ ದೇವ ಅವರ ಸಮಗ್ರ ನಾಟಕಗಳ ಐದು ಸಂಪುಟಗಳು ಪ್ರಕಟವಾಗಿವೆ. ಅವರೇ ಅವುಗಳನ್ನು ಇಂಗ್ಲಿಷಿಗೆ ಕೂಡಾ ಭಾಷಾಂತರಿಸಲು ತೊಡಗಿದ್ದರು.

‘ದೇವ ಸಾಹಿತ್ಯ’ (2005) ಎಂಬ ರಾಮಚಂದ್ರ ದೇವ ಅವರ ಕುರಿತ ಲೇಖನಗಳ ಸಂಕಲನವನ್ನು ಕೆ. ನ. ಶಿವತೀರ್ಥನ್ ಮತ್ತು ಕೃಷ್ಣಮೂರ್ತಿ ಹನೂರು ಸಂಪಾದಿಸಿದ್ದಾರೆ.

ರಾಮಚಂದ್ರ ದೇವ ಅವರು ಜೀವನೋತ್ಸಾಹಿಯಾಗಿದ್ದರು. ತಮ್ಮ ಹೃದಯ ಬೇನೆಯ ಅರಿವಿದ್ದೂ ಸಾಹಿತ್ಯದ ಕೆಲಸದಲ್ಲಿ, ಚಿಂತನೆಯಲ್ಲಿ, ಕೃಷಿಯ ಕುರಿತಾದ ಆಸಕ್ತಿಯಲ್ಲಿ ಕೊನೆಯವರೆಗೂ ಉತ್ಸಾಹ ಕಳೆದುಕೊಳ್ಳದೆ ರಾಮಚಂದ್ರ ದೇವ ಬದುಕಿದರು. ದೇವರ ಇನ್ನೊಂದು ಯೋಜನೆ ಕನ್ನಡದ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸುವುದಾಗಿತ್ತು. ಕನ್ನಡ ಸಾಹಿತ್ಯ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿ ಕೊಡದ ಹೊರತು ನಮಗೆ ಜಾಗತಿಕ ಮನ್ನಣೆ ದೊರಕಲಾರದು ಎಂದು ಅವರು ನಂಬಿದ್ದರು. ರಾಮಚಂದ್ರ ದೇವ ಅಂತಹ ಕೆಲಸಗಳನ್ನು ಪ್ರಾರಂಭಿಸಿದ್ದರು. ತಮ್ಮ ಸಾಹಿತ್ಯ ಕೃತಿಗಳನ್ನು ತಾವೇ ಪ್ರಕಟಿಸಿ ಸದಾ ಅವುಗಳು ಓದುಗರಿಗೆ ಲಭ್ಯವಾಗುವಂತೆ ಮಾಡಿರುವ ಅವರ ಸಾಧನೆಯೂ ಅನುಕರಣೀಯವಾಗಿದೆ.

ಬದುಕನ್ನು ಮತ್ತು ಸಮಾಜವನ್ನು ಅರಿತು ದಾಖಲಿಸಲು ರಾಮಚಂದ್ರ ದೇವ ಅವರು ಮಾಡಿದ ಪ್ರಯತ್ನಗಳನ್ನು ಗ್ರಹಿಸಲು ಅವರ ಕಾವ್ಯ ಮತ್ತು ಕತೆಗಳನ್ನು ಜತೆಯಾಗಿ ಪರಿಶೀಲಿಸುವುದು ಸೂಕ್ತ. ಅವರ ಕವಿತೆಗಳು ಕಥನವನ್ನೇ ಹೂರಣವಾಗಿ ಹೊಂದಿರುವುದು ಇದಕ್ಕೆ ಒಂದು ಕಾರಣವಾದರೆ, ಅವರ ಕಥಾವಸ್ತುಗಳು ಮತ್ತು ಕವಿತೆಗಳು ಎತ್ತಿಕೊಳ್ಳುವ ಪ್ರಶ್ನೆಗಳು ಒಂದಕ್ಕೊಂದು ಪೂರಕವಾಗಿರುವುದು ಇನ್ನೊಂದು ಕಾರಣವಾಗಿದೆ. ಹಾಗಾಗಿ ಈ ಮಾಲೆಯ ಬೇರೆ ಲೇಖನಗಳಂತಲ್ಲದೆ ಡಾ. ರಾಮಚಂದ್ರ ದೇವ ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಇಲ್ಲಿ ಅವರ ಮೂರು ಘಟ್ಟಗಳ ಮೂರು ಕವಿತೆಗಳನ್ನು ಮತ್ತು ಮೂರು ಕತೆಗಳನ್ನು ಜತೆಜತೆಯಾಗಿ ಪರಿಶೀಲಿಸುತ್ತಾ ಹೋಗಲಾಗಿದೆ. ಇದರಿಂದ ಅಡಿಗೋತ್ತರವಾಗಿ ಅಂದರೆ ನವ್ಯೋತ್ತರವಾಗಿ ಕರಾವಳಿಯ ಕವಿಯೊಬ್ಬರು ನಮ್ಮ ಸಮಾಜವನ್ನು ಅರಿತುಕೊಳ್ಳಲು ಮಾಡಿದ ಹೊಸ ಬಗೆಯ ಪ್ರಯತ್ನಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು.

ಇಲ್ಲಿ ವಿಶ್ಲೇಷಣೆಗೆ ಆರಿಸಿಕೊಂಡ ರಾಮಚಂದ್ರ ದೇವರ ಮೂರು ಮುಖ್ಯ ಕತೆಗಳು – ಅವರು ತಮ್ಮ ಬರವಣಿಗೆಯ ಮೂರು ಘಟ್ಟಗಳಲ್ಲಿ ನೀಡಿದಂಥವು – ‘ದಂಗೆಯ ಪ್ರಕರಣ’ (1970), ‘ಮೂಗೇಲ’ (1983) ಮತ್ತು ‘ರಿಸಾರ್ಟ್’ (1999). ಇವುಗಳ ಜತೆಗೆ ಅವರ ಮೂರು ಪ್ರಾತಿನಿಧಿಕ ಕವನಗಳನ್ನು – ‘ಅಪ್ಪು ಮಾವನ ಆರುಪ್ಪೆ ಕುರು’ (1975), ‘ಡೊಂಕು ಪ್ರಗಾಥ’ (1994) ಮತ್ತು ‘ಮಾತಾಡುವ ಮರ’ (2002) – ಕೂಡ ವಿಶ್ಲೇಷಣೆಯಲ್ಲಿ ಬಳಸಿಕೊಳ್ಳಲಾಗಿದೆ.

ರಾಮಚಂದ್ರ ದೇವರ ಅಭಿವ್ಯಕ್ತಿ, ಪುರಾಣ ಮತ್ತು ಕಾವ್ಯಗಳ ನಡುವೆ ತುಡಿಯುವಂಥದ್ದು – ಸರಳವಾಗಿ ಹೇಳಬೇಕೆಂದರೆ ಗದ್ಯ ಮತ್ತು ಪದ್ಯಗಳ ನಡುವೆ – ಎರಡರಿಂದಲೂ ಸತ್ವವನ್ನು ಹೀರಿ ಬೆಳೆದಂಥದ್ದು. ಭಾರತೀಯ ಪರಂಪರೆಯಲ್ಲಿ ಕಾವ್ಯ ಅಂದರೆ ಗದ್ಯದಲ್ಲಿಯಾಗಲಿ, ಪದ್ಯದಲ್ಲಿಯಾಗಲಿ ಇರುವ ಸಾಹಿತ್ಯ ಎಂಬ ವಿಶಾಲಾರ್ಥವಿದ್ದುದನ್ನು ನೆನಪಿಸಿಕೊಂಡರೆ ರಾಮಚಂದ್ರ ದೇವರನ್ನು ಕವಿ ಎಂದು ಕರೆಯಬಹುದು – ಗದ್ಯ ಕಾವ್ಯವೇ ಅವರ ಅಭಿವ್ಯಕ್ತಿಯ ಮಾಧ್ಯಮ. ಅವರು ತಮ್ಮ ಕಾವ್ಯ ಖಂಡಗಳನ್ನು ಬರೆಯುವಾಗ ತಮ್ಮದೇ ಆದ ಪುರಾಣಗಳನ್ನು ಸೃಷ್ಟಿಸಿಕೊಂಡು ಆ ಸಂಪನ್ಮೂಲವನ್ನೇ ಯಥೇಚ್ಛೆಯಿಂದ ಬಳಸಿಕೊಳ್ಳುತ್ತಾರೆ.

*****

ಈ ಮಾಲೆಯ ಇತರ ಬರಹಗಳಂತಲ್ಲದೆ ಈ ಬರಹದಲ್ಲಿ ರಾಮಚಂದ್ರ ದೇವ ಅವರ ಸಮಗ್ರ ಕಾವ್ಯವನ್ನು ಬೇರೆ ಬಗೆಯಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ. ಅವರ ಬರವಣಿಗೆಯನ್ನು ಮೂರು ಘಟ್ಟಗಳನ್ನಾಗಿ ಮಾಡಿಕೊಂಡು ಮೂರೂ ಘಟ್ಟಗಳನ್ನು ಪ್ರತಿನಿಧಿಸುವ ಒಂದೊಂದು ಕವನಗಳನ್ನು ಆರಿಸಿಕೊಂಡು, ಆಯಾಯ ಕಾಲಘಟ್ಟಗಳಲ್ಲಿ ಅವರು ಬರೆದ ಮೂರು ಮಹತ್ವದ ಕತೆಗಳನ್ನು ಈ ಕವನಗಳ ಜತೆಯಲ್ಲಿ ಪರಿಶೀಲಿಸಲಾಗಿದೆ. ಇದರಿಂದ ಸಂವೇದನಾಶೀಲ ಸಾಹಿತಿಯೊಬ್ಬ ಕಾಲಕಾಲಕ್ಕೆ ತನ್ನ ಸಮಾಜಕ್ಕೆ ಸ್ಪಂದಿಸಿದ ಬಗೆಯನ್ನು ಅರ್ಥಮಾಡಿಕೊಳ್ಳಬಹುದು ಎನ್ನುವುದು ಈ ಲೇಖಕನ ನಂಬಿಕೆ.

ಅದರಂತೆ ಇಲ್ಲಿ ಆರಿಸಿಕೊಂಡಿರುವ ಮೂರು ಪ್ರಾತಿನಿಧಿಕ ಕವನಗಳು: 1. ಅಪ್ಪು ಮಾವನ ಅರುಪ್ಪೆ ಕುರು. 2. ಡೊಂಕು ಪ್ರಗಾಥ. 3. ಮಾತನಾಡುವ ಮರ.

ಇವುಗಳ ಜತೆಯಲ್ಲಿ ಪರಿಶೀಲಿಸಿರುವ ಕತೆಗಳು: 1. ದಂಗೆಯ ಪ್ರಕರಣ. 2. ಮೂಗೇಲ. 3. ರಿಸಾರ್ಟ್.

ಮೊದಲನೆಯ ಘಟ್ಟ

ರಾಮಚಂದ್ರ ದೇವ ಆವರ ಪ್ರಸಿದ್ಧ ಸಣ್ಣಕತೆ, ‘ದಂಗೆಯ ಪ್ರಕರಣ’ ಒಂದು ಅನಾಮಧೇಯ, ಚಕ್ರವ್ಯೂಹದಂಥ ಊರಿನಲ್ಲಿ ನಡೆಯುವ ಕಥೆ. (ಮೊದಲು ‘ಈ ಊರು ಪುತ್ತೂರು – ಸುಬ್ರಹ್ಮಣ್ಯದ ಮಧ್ಯೆ ಬಸ್ಸಿನ ಮಾರ್ಗದಿಂದ ಒಂದು ಐದಾರು ಮೈಲಿ ದೂರದಲ್ಲಿದೆ’ ಎಂದು ಭೌಗೋಳಿಕವಾಗಿ ಅದರ ಸ್ಥಾನ ನಿರ್ದೇಶಿಸಿದ್ದ ದೇವ ನಂತರ ಈ ವಾಕ್ಯವನ್ನು ಕೈಬಿಟ್ಟಿದ್ದಾರೆ). ಈ ಊರು ಗತವೈಭವವನ್ನು ಸಾರುವ ಒಂದು ನಿರ್ಜನ ರಾಜಧಾನಿಯಂತಿದೆ; ವರ್ತುಲಾಕಾರವಾಗಿ ಸುತ್ತುವರಿದಿರುವ ಆಳೆತ್ತರದ ಗೋಡೆಯಿಂದಾಗಿ ಜೈಲಿನಂತೆ ಕಾಣುತ್ತದೆ. ಇಲ್ಲಿನ ಬೀದಿಗಳು ವಕ್ರಾಕಾರವಾಗಿ ಸುತ್ತುತ್ತಾ ನಮ್ಮನ್ನು ಮೊದಲಿದ್ದಲ್ಲಿಗೇ ಕರೆದುಕೊಂಡು ಬಂದುಬಿಡುತ್ತವೆ. “ಒಂದು ಕಡೆ ನೋಡಿದಂಥದ್ದೇ ಗೋಪುರಗಳನ್ನು, ಸ್ಥಳಗಳನ್ನು ಇನ್ನೊಂದು ಕಡೆಯೂ ಕಂಡು ಮೊದಲಿದ್ದಲ್ಲಿಯೇ ಇದ್ದೇವೆ ಎಂದು ತಲೆಮೇಲೆ ಕೈಹೊತ್ತು ಕೊಳ್ಳುವುದು – ಊರಿನವರಿಗೆ ಇದು ತಮಾಷೆಗೆ ದಾರಿಯಾಗುತ್ತದೆ. ಅವರು ಹೇಳುವ ಪ್ರಕಾರ, ಕೆಲವರು ಅಪರಿಚಯಸ್ಥರು ಬಂದವರು ಇಲ್ಲೇ ನೆಲಸಿ, ಮದುವೆಯಾಗಿ ಅವರವರೇ ಆಗಿಬಿಟ್ಟಿದ್ದಾರಂತೆ. ಸುಮಾರು ವರ್ಷಗಳ ಕೆಳಗೆ ಒಬ್ಬ ಕುದಿಯುತ್ತಿದ್ದ ಜೀವನದ ಬಿಸಿಯ ಯುವಕ ಬಂದವನು ಈ ಹಳೆಯ ಕಾಲದ ಗೋಪುರಗಳಲ್ಲಿ, ಮೂರ್ತಿಗಳಲ್ಲಿ ಏನಿದೆ ಮಹಾ ಎಂದು ಸಹಜವಾಗಿಯೇ ರೇಗುತ್ತಿದ್ದ. ಆದರೆ ಸ್ವಲ್ಪ ದಿವಸದಲ್ಲೇ ಎಲ್ಲರ ಜೊತೆಯವನಾದ. ಈಗ ಕೇಳಿದರೆ, ಅವನು ಈ ಊರಿನ ಅಂಗುಲಂಗುಲವನ್ನು ಬಲ್ಲನಂತೆ. ಅಲ್ಲೇ ಮದುವೆಯಾಗಿ ನೆಲೆಸಿದ್ದಾನೆ. ನೋಡಿದರೆ ಮುದುಕನ ಹಾಗೆ ಕಂಡ.”

ಈ ವರ್ಣನೆಯನ್ನು ಸೂಕ್ಷ್ಮವಾಗಿ ನೋಡಿದರೆ ನಿರೂಪಕ ‘ಹೊರಗಿನವನು’, ‘ಹೊರಗಿನ ದೃಷ್ಟಿಕೋನದಿಂದ’ ಈ ಊರನ್ನು ನೋಡುತ್ತಿದ್ದಾನೆ (ಗಿರಿಯವರ ‘ಗತಿ-ಸ್ಥಿತಿ’ ಕಾದಂಬರಿಯಲ್ಲಿರುವಂತೆ. ‘ಗತಿ-ಸ್ಥಿತಿ’ ಕಾದಂಬರಿ ‘ದಂಗೆಯ ಪ್ರಕರಣ’ದ ನಂತರ ಬಂತು). ‘ನೋಡಿದರೆ’, ‘ಕಂಡ’ ಎಂಬ ಪ್ರಯೋಗಗಳಿಂದ ನಿರೂಪಕ ಸ್ವತಃ ಈ ಊರನ್ನು ನೋಡಿ ವರ್ಣಿಸುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ. ‘ಮುದುಕನ ಹಾಗೆ ಕಂಡ’ ಎಂದು ಹೇಳುವಲ್ಲಿ ಒಂದು ಪೂರ್ವ ನಿರ್ಧಾರವಿದೆ – ಈ ಊರಿನವರ ಹಾಗೆ ಆಗುವವರು ಒಂದೋ ಮುದುಕರಾಗಿರಬೇಕು; ಇಲ್ಲವೇ ಮುದುಕರ ಹಾಗಾಗಬೇಕು. ಯುವಶಕ್ತಿಯುಳ್ಳವರು ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.

ರಾಮಚಂದ್ರ ದೇವರು ಸ್ಪಷ್ಟವಾಗಿ ಭಾರತೀಯ ಸಮಾಜ, ಭಾರತೀಯ ಆಧ್ಯಾತ್ಮಿಕತೆ (ಸ್ಪಿರಿಚುವಲ್ ಹಂತಕ್ಕೇರದೆ ರಿಚುವಲ್ ಹಂತಗಳಲ್ಲಿರುವ ಜನರ ಧಾರ್ಮಿಕ ಆಚರಣೆಗಳು ಎಂಬರ್ಥದಲ್ಲಿ) ಇವುಗಳನ್ನು ಈ ಕತೆಯಲ್ಲಿ ಚಿತ್ರಿಸುತ್ತಿದ್ದಾರೆ. ಭಾರತಕ್ಕೆ ಪಾಶ್ಚಾತ್ಯ ನಾಗರಿಕತೆ ಮತ್ತು ಚಿಂತನೆಯ ಪ್ರಭಾವ ಆಗಲಾರಂಭಿಸಿದ ಮೇಲೆ ಸಾಮಾನ್ಯವಾಗಿ ಯುವಕರು ಆ ವಿಚಾರಧಾರೆಯನ್ನು ಒಪ್ಪಿಕೊಳ್ಳುವುದೂ; ಸ್ವಲ್ಪ ವಯಸ್ಸಾದಂತೆ ಭಾರತೀಯ ‘ಧಾರ್ಮಿಕತೆ’ಯತ್ತ (ಅವರವರ ಭಾವಕ್ಕೆ ತಕ್ಕ ಭಕುತಿಯನ್ನು ಆವಾಹಿಸಿಕೊಳ್ಳುತ್ತ) ವಾಲುವುದೂ ಸಾಮಾನ್ಯವಾಗಿ ಬಿಟ್ಟಿದೆ. ಸ್ವಲ್ಪ ಯುವಕರೇ ಭಾರತೀಯ ನಡೆ-ನುಡಿಗಳನ್ನು ಅನುಕರಿಸಿದರೆ ಅವರು ‘ಮುದುಕರಂತೆ’ ಕಾಣುತ್ತಾರೆಂದು ಜನ ಭಾವಿಸುವುದು ಈ ಕಾರಣಕ್ಕೇ.

ರಾಮಚಂದ್ರ ದೇವರು ತಮ್ಮ ತಂದೆಯವರ ಬಗ್ಗೆ ಹೇಳಿರುವ ಕೆಲವು ಮಾತುಗಳು ಹೀಗಿವೆ : “ನಮ್ಮ ತಂದೆ ತಮ್ಮ ಸುಮಾರು ಐವತ್ತೈದನೇ ವರ್ಷದ ಬಳಿಕ ಹೆಚ್ಚು ಹೆಚ್ಚು ದೈವಭಕ್ತರಾಗಲು ಪ್ರಾರಂಭಿಸಿದರು. ಶಿರಡಿ ಸಾಯಿಬಾಬಾನಿಂದ ಸುರುವಾದ ಭಕ್ತಿ ಕ್ರಮೇಣ ಸತ್ಯ ಸಾಯಿಬಾಬಾನವರೆಗೆ ವ್ಯಾಪಿಸಿತ್ತು. ತಮ್ಮ ಕೊನೆಯ ದಿನಗಳಲ್ಲಂತೂ ಇಡೀ ದಿನವನ್ನು ಸ್ನಾನ, ಭಜನೆ, ಪೂಜೆ, ಪಾರಾಯಣಗಳಲ್ಲಿ ಕಳೆಯುತ್ತಿದ್ದರು…. ಒಂದು ಕಾಲದಲ್ಲಿ The Modern Review, Harijan, Young India ಗಳಿಗೆ ಚಂದಾದಾರರಾಗಿದ್ದ ಅವರು ಈ ಮ್ಯಾಜಿಕ್ ಬಾಬಾಗಳ ಮೇಲೆ ಹೇಗೆ ನಂಬಿಕೆ ಬೆಳೆಸಿಕೊಂಡರು ಎನ್ನುವುದು ನನಗೆ ಕುತೂಹಲದ ವಿಷಯ.” (‘ಮುಚ್ಚು ಮತ್ತು ಇತರ ಲೇಖನಗಳು’.)

ಆಧುನಿಕತೆ ಎನ್ನುವುದು ‘ದೇವರನ್ನು’ – ಅದೂ ಕೂಡ ರಿಚುವಲ್‌ಗಳಲ್ಲಿ ಪ್ರಸ್ತುತವಾಗುವ ಮೂರ್ತರೂಪದ ದೇವರನ್ನು – ದೂರವಿಟ್ಟಾಗಲಷ್ಟೇ ನಿಜವಾಗಬಲ್ಲುದು ಎನ್ನುವ ಗ್ರಹಿಕೆ ಸಾಮಾನ್ಯವಾಗಿ ಎಲ್ಲರಲ್ಲೂ, ರಾಮಚಂದ್ರದೇವರಲ್ಲೂ ಇದೆ. ಹಾಗಾಗಿ ‘ದಂಗೆಯ ಪ್ರಕರಣ’ದಲ್ಲಿ ದೇವರ ವಿರುದ್ಧ ದಂಗೆ ಎದ್ದಾಗಲಷ್ಟೇ ವಿಶಾಲ ಜಗತ್ತಿಗೆ, ಅಂದರೆ ಆಧುನಿಕತೆಯಿರುವ ಜಗತ್ತಿಗೆ ಬರಬಹುದು ಎನ್ನುವ ನಿಲುವು ಕಾಣಿಸಿಕೊಂಡಿದೆ. ಅನಂತಮೂರ್ತಿಯವರ ‘ಭಾರತೀಪುರ’ದಲ್ಲಿಯೂ ಇದೇ ಅಭಿಪ್ರಾಯವನ್ನು ಕಾಣಬಹುದು.

ಈ ಕತೆಯಲ್ಲಿ ಊರಿನ ಜನರೆಲ್ಲ ಗೋಪಾಲಕೃಷ್ಣ ದೇವರ ಇಚ್ಛೆಯ ಮೇರೆಗೇ ಪ್ರಪಂಚ ನಡೆಯುತ್ತದೆಂದು ನಂಬಿಕೊಂಡು; ದೇವಸ್ಥಾನವನ್ನೇ ತಮ್ಮ ಬದುಕಿನ ಕೇಂದ್ರ ಮಾಡಿಕೊಂಡು, ಊರ ಜಾತ್ರೆಯಿಂದಲೇ ಕನಸನ್ನು ಸೃಷ್ಟಿಸಿಕೊಂಡು, ಎಲ್ಲವೂ ಗೋಪಾಲಕೃಷ್ಣನ ಇಚ್ಛೆಯಿಂದಲೇ ನಡೆಯುವುದೆಂದು ತಿಳಿದುಕೊಂಡು ಬದುಕುತ್ತಿರುತ್ತಾರೆ. ಹೀಗಿರುವಾಗ ಕಥಾನಾಯಕನಾದ ಗೋವಿಂದನೆಂಬವ ಊರುಬಿಟ್ಟು ‘ತನ್ನ ಬದುಕು ತಾನು ಬದುಕಬೇಕು’ ಎಂದು ಮಂಗಳೂರಿಗೆ ಹೋದ. ಅಲ್ಲಿ ರಾಮಭಟ್ಟ ಎನ್ನುವ ಕ್ರಾಂತಿಕಾರಿ ಮನೋಭಾವದ, ಮಾಂಸ ತಿಂದು, ಬೀರು ಕುಡಿದು, ಜನಿವಾರಕ್ಕೆ ಬೆಂಕಿಕೊಟ್ಟ ಬ್ರಾಹ್ಮಣ ಯುವಕ ಅವನ ಗೆಳೆಯನಾದ. ಇಬ್ಬರೂ ಮಾರ್ಕ್ಸ್‌ನನ್ನು, ಕಮೂನನ್ನು ಓದಿದರು; ಸಮಾಜವನ್ನು ಬದಲು ಮಾಡಬೇಕೆಂದು ಹೊರಟರು. ಗೋವಿಂದನಿಗೀಗ ವ್ಯವಸ್ಥೆಯ ಮೇಲೆ, ಶೋಷಕರ ಮೇಲೆ ಸಿಟ್ಟು. ತನ್ನ ಹೋಟೇಲಿನ ಧನಿಯ ಮುಖದ ಮೇಲೆ ಸಾರು ಹಾಕಿದ ಕಪ್ಪನ್ನು ಎಸೆದು ಕೆಲಸ ಕಳೆದುಕೊಂಡ. ಊರಿಗೆ ಬಂದು ದೇವರ ಹಿಡಿತದಿಂದ ಜನರನ್ನು ಬಿಡಿಸಬೇಕೆಂದು ದೇವಸ್ಥಾನಕ್ಕೆ ಬೆಂಕಿಕೊಟ್ಟ. ಊರವರು ಅದೂ ದೈವೇಚ್ಛೆಯೇ ಎಂದು ತಿಳಿದು ದೇವಸ್ಥಾನವನ್ನು ಪುನರ್ನಿರ್ಮಿಸಿದರು; ಸುಟ್ಟು ವಿಕಾರವಾದ ವಿಗ್ರಹವನ್ನು ಮಾತ್ರ ಹಾಗೆಯೇ ಇಟ್ಟುಕೊಂಡರು. ಗೋವಿಂದ ಊರಿನಿಂದ ಹತಾಶನಾಗಿ ಹೊರಹೋಗಬೇಕೆಂದವ ಹೊಳೆ ಬದಿಯಲ್ಲಿ ಕುಸಿದು ಸತ್ತುಹೋಗುತ್ತಾನೆ.

ಈ ಕತೆಯನ್ನು ಮೂರು ಸ್ತರಗಳಲ್ಲಿ ಅರ್ಥ ಮಾಡಿಕೊಳ್ಳಬಹುದು. ಮೊದಲನೆಯದು – ಲೇಖಕರು ಮೇಲ್ನೋಟಕ್ಕೆ ತೋರಿಸಿಕೊಡುವ ಸಂಪ್ರದಾಯಶಠ ಭಾರತೀಯ ಸಮಾಜದ ಚಿತ್ರಣ. ನವ್ಯ ಕಾವ್ಯ ಮತ್ತು ನವ್ಯ ಕತೆಗಳು ಸಮಾಜಮುಖಿಯಾದಾಗ ನಮ್ಮ ದೇಶದ ಜಡ ಸಂಪ್ರದಾಯ ಮತ್ತು ರಾಜಕೀಯದ ಆಷಾಢಭೂತಿತನಗಳನ್ನು ವ್ಯಂಗ್ಯವಾಗಿ ಟೀಕಿಸಿದ್ದಿದೆ. ಉದಾಹರಣೆಗೆ ಈ ಕತೆಯಲ್ಲಿ ಊರಲ್ಲಿ ಹರಿಯುವ ‘ಗಂಗಾನದಿ’ಯ ವಿವರ ಬರುತ್ತದೆ. ಊರಿಗೆ ಬರಗಾಲ ಬಂದಾಗ ಅರಸರು ತಪಸ್ಸು ಮಾಡಿ ಒಲಿಸಿ ತಂದ ಗಂಗೆ ಈಗ ಹೇಗಿದೆಯೆಂದರೆ – “ಈಗ ಜನರು ಕುಂಡೆ ತೊಳೆಯುವುದರಿಂದ ಹಿಡಿದು ದೇವರ ಪೂಜೆಯತನಕ ಇದೇ ನೀರನ್ನು ಉಪಯೋಗಿಸುವುದರಿಂದ ನೀರು ಮಲಿನವಾಗಿದೆ.”

ನವ್ಯ ಕವನಗಳನ್ನು ಬರೆದಿರುವ ಚಂದ್ರಶೇಖರ ಕಂಬಾರರ ‘ಗಂಗಾಮಾಯಿ’ ಕವನ ಈ ವಿವರಕ್ಕೆ ಸಂವಾದಿಯಾಗಿರುವುದು (ಮತ್ತು ಈ ಕತೆಯ ಊರಿನಂತೆ ಕಂಬಾರರ ಕೆರೆಯೂ ‘ಏಳುಸುತ್ತಿನ ಕೋಟೆ’ ಯಾಗಿರುವುದು) ಆಕಸ್ಮಿಕವೇನಲ್ಲ. ಕಂಬಾರರು ಹೇಳುತ್ತಾರೆ :

…. ನಮ್ಮೂರ ಕೆರೆ; ಹೆಸರು ಗಂಗಾಮಾಯಿ
ಮೂರು ಬದಿ ಮರಗಿಡಿ ಕಂಟಿ ಸಸ್ಯ ಕೋಟಿಯ, ಹೊಕ್ಕವನು
ಹೊರಬರದ ಏಳು ಸುತ್ತಿನ ಕೋಟೆ……
………………. ತೊಡಗುವರು ಮಂದಿ ಈ
ನೀರ ಬಳಸುವುದಕ್ಕೆ ಕುಡಿಯುವುದಕ್ಕೆ, ಮೀಯಲಿಕ್ಕೆ, ದನದ
ಸೆಗಣಿ ಮೈಗಂಜಳ ತೊಳೆಯಲಿಕ್ಕೆ, ನಮ್ಮಪ್ಪ ಬೀರಪ್ಪನ ಪಾದ
ಪಡಕೊಳ್ಳಲಿಕ್ಕೆ, ಹಡದವ್ವ ಕರ್ರೆವ್ವನ ಕರಿಮೈ ಎರೆಯಲಿಕ್ಕೆ,
ಹೊರಕಡೆಗೆ, ಹೇಲುಚ್ಚೆಗೆ, ಬೋಳಿಯರ ಮಡಿ ಒದ್ದೆಗೆ,
ಭಟ್ಟರಾಚಮನಕ್ಕೆ, ಅದಕ್ಕೆ ಇದಕ್ಕೆ ಎದಕ್ಕು. (ಗಂಗಾಮಾಯಿ)

ಇದೇ ರೀತಿ ಅಡಿಗರು ಭಾರತೀಯ ಸಂಸ್ಕೃತಿಯ ಬಗ್ಗೆ ಹೇಳಬೇಕಾದಾಗ ಗಂಗೆಯ ಸಂಕೇತವನ್ನು ತಮ್ಮ ‘ಬತ್ತಲಾರದ ಗಂಗೆ’ ಕವನದಲ್ಲಿ ತಂದಿದ್ದಾರೆ. ರಾಮಚಂದ್ರ ದೇವರ ‘ದಂಗೆಯ ಪ್ರಕರಣ’ ಈ ಮೇಲ್‌ಸ್ತರದಲ್ಲಿ ಬದಲಾವಣೆಯನ್ನು, ಚಲನಶೀಲತೆಯನ್ನು ನಿರಾಕರಿಸುವ, ನಿಂತ ನೀರಾಗಿದೆ ಎಂದು ತಿಳಿಯಲ್ಪಟ್ಟಿರುವ ಭಾರತೀಯ ಸಮಾಜವನ್ನು ಒಂದು ರೂಪಕದ ಮೂಲಕ ಟೀಕಿಸುವ ಕತೆಯಾಗಿದೆ. ವಿಗ್ರಹಭಂಜನೆಯ ವಸ್ತು ಕನ್ನಡ ಕತೆಗಳಲ್ಲಿ ಆಗಾಗ ಕಾಣಿಸಿಕೊಂಡಿದೆ. ಯರ್ಮುಂಜ ರಾಮಚಂದ್ರ ಅವರ ‘ಚಿನ್ನಪ್ಪ ಒಡೆದ ಮೂರ್ತಿ’ ಕತೆ; ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿ; ಬೇಂದ್ರೆಯವರ ‘ಉದ್ಧಾರ’ (ನಾಟಕ) ಮತ್ತು ಕಾರಂತರ ‘ಗರ್ಭಗುಡಿ’ ನಾಟಕಗಳನ್ನು ಉದಾಹರಿಸಬಹುದು. ರಾಮಚಂದ್ರ ದೇವರೇ ಹೇಳುವಂತೆ, “ದಂಗೆಯ ಪ್ರಕರಣ ವಸ್ತುವಿನ ದೃಷ್ಟಿಯಿಂದ ಬೇಂದ್ರೆಯವರ ‘ಉದ್ಧಾರ’ (1947) ಮತ್ತು ಶಿವರಾಮ ಕಾರಂತರ ‘ಗರ್ಭಗುಡಿ’ (1937) ನಾಟಕಗಳ ಪರಂಪರೆಗೆ ಸೇರಿದೆ. ದೇವಸ್ಥಾನದ ವಿರುದ್ಧ ದಂಗೆ ಏಳುವುದು ಮತ್ತು ಮೂರ್ತಿ ಭಂಜಿಸುವುದರ ಬಗ್ಗೆ ಮೊದಲು ಬರೆದವರು ಈ ಇಬ್ಬರು ಹಿರಿಯರು. ಅದರ ಬರೆವಣಿಗೆಯ ಕ್ರಮವನ್ನು ಸ್ಥಳ ಪುರಾಣಗಳ ಓದಿನ ನೆನಪಿಂದ ರೂಪಿಸಿಕೊಂಡೆ”. (‘ಮುಚ್ಚು ಮತ್ತು ಇತರ ಲೇಖನಗಳು’ – 1994).

ರಾಮಚಂದ್ರ ದೇವರಿಗೆ ದೇವರು ಮತ್ತು ಆಧ್ಯಾತ್ಮಿಕತೆಗಳ ನಡುವೆ ವ್ಯತ್ಯಾಸ ಮಾಡಿಕೊಳ್ಳುವ ಅಗತ್ಯ ಬಹುಶಃ ಈ ಕತೆಯ ಮಟ್ಟಿಗೆ (ಯಾಕೋ) ಇರಲಿಲ್ಲವೆನಿಸುತ್ತದೆ. ಮೇಲಿನ ಪಾರದ ನಂತರ ಒಟ್ಟು ಚಿಂತನೆ ಎನ್ನುವ ರೀತಿಯ ಒಂದು ಪಾರದಲ್ಲಿ ಅವರು ಹೀಗೆ ಹೇಳುತ್ತಾರೆ : “ನಾವು ನಮ್ಮ ವೈಯಕ್ತಿಕ ಸುಖದುಃಖಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ ಸಹಜವಾಗಿ. ಸಮಾಜದ ಬಗ್ಗೆ ಯೋಚಿಸುತ್ತೇವೆ, ಕೆಲವು ಸಲ. ಅಷ್ಟೇ ಮಟ್ಟಿಗೆ ದೇವರ ಬಗ್ಗೆ ಸಹಾ ತಲೆಕೆಡಿಸಿಕೊಳ್ಳುತ್ತೇವೆ. ನಾವು ಸಾಯಿಬಾಬಾ, ಮೊರ, ಹಣಿಗೆ, ಹುತ್ತ, ಗುಂಡುಕಲ್ಲುಗಳನ್ನೇ ದೇವರೆಂದು ತಿಳಿದಿರಬಹುದು. ಇದು ತಪ್ಪು ದೇವರ ಹಿಂದೆ ಬಿದ್ದಿದ್ದರ ಫಲ. ಆದರೆ ಭಾರತದಲ್ಲಿ ದೇವರ ಬಗ್ಗೆ ಯೋಚಿಸದವರು, ದೇವರಿಗಾಗಿ ಕಾಲ ವಿನಿಯೋಗಿಸದವರು ಬಹುಶಃ ಯಾರೂ ಇಲ್ಲ. ಹೀಗಾಗಿ, ನಮ್ಮ ಅನುಭವಕ್ಕೆ ವೈಯಕ್ತಿಕ ಮತ್ತು ಸಾಮಾಜಿಕ ಆಯಾಮವಿರುವಂತೆ ಆಧ್ಯಾತ್ಮಿಕ ಆಯಾಮ ಸಹಾ ಇದೆ. ಬರೆವಣಿಗೆಯಲ್ಲಿ ನನ್ನ ಪ್ರಯತ್ನ ಒಂದು ಅನುಭವದ ಈ ಹೊಡೆಗಳನ್ನು ಹಿಡಿದಿರಬೇಕೆಂದು” (1994).

ಇಲ್ಲಿ ದೇವರ ಬಗ್ಗೆ ಮಾತಾಡುತ್ತ ಒಮ್ಮೆಲೆ ಆಧ್ಯಾತ್ಮಿಕತೆ ಎಂಬ ಶಬ್ದವನ್ನು ತರುತ್ತಾರೆ. ಬೇಂದ್ರೆ ಮತ್ತು ಕಾರಂತರು ‘ಆಧ್ಯಾತ್ಮಿಕತೆಯ ಭಂಜನೆ’ಯನ್ನು ವಸ್ತು ಮಾಡಿಕೊಳ್ಳುವುದಿಲ್ಲ. ಸಂಸ್ಥಾ ರೂಪದ ಧರ್ಮ, ತಪ್ಪು ದೇವರ ಹಿಂದೆ ಬಿದ್ದವರನ್ನು ಎಚ್ಚರಿಸುವ ಕೆಲಸ ಮಾಡಿರಬಹುದು. ಬ್ರಿಟಿಷರು ಮತ್ತು ಇತರ ಪಾಶ್ಚಾತ್ಯ ಚಿಂತಕರಿಗೆ ಭಾರತೀಯ ಆಧ್ಯಾತ್ಮಿಕತೆಯೂ ತಪ್ಪು ದೇವರಾಗಿ ಕಂಡಿತ್ತು; ಸ್ವರ್ಗದಲ್ಲಿರುವ ಒಬ್ಬನೇ ದೇವನನ್ನು ಸ್ತುತಿಸುವುದು ಮಾತ್ರ ಸರಿಯಾಗಿ ಕಂಡಿತ್ತು. ಆಧುನಿಕ ಭಾರತೀಯರಿಗೂ ಈ ಆಧ್ಯಾತ್ಮಿಕತೆ ತಪ್ಪು ದೇವರಾಗಿ ಕಾಣಿಸುತ್ತದೆ ಮತ್ತು ಕಾರ್ಲ್‍ಮಾರ್ಕ್ಸ್‌ – ಕಮೂ ಚಿಂತನೆಗಳು ಸರಿಯಾಗಿ ಕಾಣುತ್ತವೆ. ದಂಗೆಯ ಪ್ರಕರಣದ ಗೋವಿಂದನಿಗಾದುದೂ ಅದೇ. ಮಂಗಳೂರಿಗೆ ಹೋದವನು ಮಾರ್ಕ್ಸ್‌ನನ್ನು ಕಮೂನನ್ನು ಓದಿ ಸಮಾಜದ ಬಗ್ಗೆ ಸಿಟ್ಟಿಗೇಳುತ್ತಾನೆ. ‘ಸಿಟ್ಟು’ ಮತ್ತು ‘ದಾಳಿ’ ಅವನ ವ್ಯಕ್ತಿತ್ವದ ಭಾಗಗಳಾಗಿ ಬಿಡುತ್ತವೆ.

ಹೀಗೆ ಗೋವಿಂದನ ದೃಷ್ಟಿಕೋನ ಪರಕೀಯವಾದುದು; ಭಾರತೀಯ ಸಮಾಜವನ್ನು ಹೊರಗಿನಿಂದ ಅರ್ಥೈಸಿಕೊಂಡುದು; ತಾನು ಈ ಸಮಾಜವನ್ನು ಹೇಗಾದರೂ ಸರಿ ಮಾಡಲೇಬೇಕೆಂದು ಒದ್ದಾಡುವುದು; ಈ ಸಮಾಜದವರಿಗೆ ಬದಲಾವಣೆ ಬೇಡವಲ್ಲ ಎಂದು ಹಲುಬುವುದು; ಸಿಟ್ಟಿನಿಂದ ಕುದಿಯುವುದು; ಬಲಾತ್ಕಾರವಾಗಿ ಬದಲಾವಣೆಗೆ ಪ್ರಯತ್ನಿಸುವುದು; ಅವರ ಶ್ರದ್ಧೆಯ ಕೇಂದ್ರಗಳನ್ನು ನಾಶ ಮಾಡಲು ಪ್ರಯತ್ನಿಸುವುದು – ಇವೆಲ್ಲ ಸಾಂಕೇತಿಕವಾಗಿದೆ ಎನ್ನುವುದನ್ನು ಗಮನಿಸಿದರೆ ‘ದಂಗೆಯ ಪ್ರಕರಣ’ದ ಎರಡನೆಯ ಸ್ತರದ ಅರ್ಥ ಗೋಚರಿಸುತ್ತದೆ. ಈ ಗೋವಿಂದ ಕೂಡ ಊರಿನವನಲ್ಲ; ಅನಾಥ; ‘ಪಾಪ’ ಎಂದು ಊರ ಹಿರಿಯರೇ ಎತ್ತಿಕೊಂಡು ಬಂದು ಇಲ್ಲಿ ಬೆಳೆಸಿದ್ದು. (ಸುಮಾರು ವರ್ಷಗಳ ಕೆಳಗೆ ಒಬ್ಬ ‘ಕುದಿಯುತ್ತಿದ್ದ ಜೀವನದ ಬಿಸಿಯ ಯುವಕ’ ಕೂಡ ಹೊರಗಿನಿಂದಲೇ ಬಂದು ಇವರ ಬಗ್ಗೆ ‘ಸಹಜವಾಗಿಯೇ ರೇಗುತ್ತಿದ್ದವನು’ ಈ ಊರಿನವರಲ್ಲೊಬ್ಬನಾದುದು ಅವ್ಯಕ್ತ ನಿರೂಪಕನಿಗೆ ಇಷ್ಟವಾಗದ ವಿಷಯ. ಅವ್ಯಕ್ತ ನಿರೂಪಕನೂ ಹೊರಗಿನಿಂದಲೇ ಬಂದು ಗಮನಿಸುವವನೆಂಬುದನ್ನು ನಾವು ಈಗಾಗಲೇ ಗಮನಿಸಿದ್ದೇವೆ).

ನೆಮ್ಮದಿಯಿಂದಿರುವ ಒಂದು ‘ಹಿಂದುಳಿದ’ ಜನಾಂಗವನ್ನು ಕಂಡ ಕೂಡಲೇ ಪಶ್ಚಿಮ ಬುದ್ಧಿಗೆ ಅವರನ್ನು ತಮ್ಮ ನಾಗರಿಕತೆಯ ನಿಯಮಗಳಿಗೆ ಒಳಪಡಿಸಬೇಕೆಂದು ಕಾಣುವುದು; ಇದಕ್ಕೆ ಹಲವಾರು ಮಿಶನ್‌ಗಳೂ ಚಕ್ರಾಧಿಪತ್ಯಗಳೂ ಹಗಲಿರುಳೆನ್ನದೆ ಶ್ರಮಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ರೀತಿಯ ಒಂದು ಪರಿಷ್ಕೃತ, ನಮ್ಮ ಕಾಲದ ‘ಮಿಷನ್’ ಗೋವಿಂದನದು. ಈ ಮಿಷನರಿ ನಮ್ಮ ನಡುವಿಂದಲೇ ಉದ್ಭವಿಸಿದವನು ಎನ್ನುವುದು ಕೂಡ ಆಧುನಿಕ ಭಾರತದಲ್ಲಿ ಕಂಡಿರುವ ವಿದ್ಯಮಾನವೇ. ಇದು ಲೇಖಕರು ಬಯಸಿರದ ಅರ್ಥಸ್ತರ ಇರಬಹುದು – ಆದರೆ ಕೃತಿಯ ಸತ್ವದಿಂದಾಗಿ ಈ ರೀತಿ ಲೇಖಕರ ಉದ್ದೇಶ, ಕಾಲಗಳನ್ನು ಮೀರಿದ ಅರ್ಥಸ್ತರಗಳು ಕಾಣಿಸಿಕೊಳ್ಳುವುದು ಸಹಜ.

‘ದಂಗೆಯ ಪ್ರಕರಣ’ದ ಮೂರನೆ ಅರ್ಥಸ್ತರ ಕೃತಿಯ ಒಳಗಿನ ವಿವರಗಳೇ ವಿರುದ್ಧಾರ್ಥಗಳನ್ನು ಬಿಟ್ಟುಕೊಡುತ್ತಿರುವುದು. ಅಂದರೆ ಕತೆ ಯಾವುದನ್ನು ಖಂಡಿಸುತ್ತದೆಯೋ ಅದು ಸರಿಯೇ ಇರಬಹುದು ಎಂದು ಸೂಚಿಸುತ್ತಾ ಹೋಗುವುದು. ಉದಾಹರಣೆಗೆ : (1) ಒಬ್ಬ “ಇಲ್ಲಿ ಏನು ಮಾಡುವುದಕ್ಕೂ ಸಾಧ್ಯವಿಲ್ಲ. ಬೇರೆ ಎಲ್ಲಿಗಾದರೂ ಹೋಗಿ ಬದುಕುತ್ತೇನೆ. ನನಗೆ ಬದುಕು ಮುಖ್ಯ’ ಎಂದು ಈ ಊರು ಬಿಟ್ಟು ಹೋದ. ಯಾಕೋ ಏನೋ – ಮೂರು ತಿಂಗಳಲ್ಲಿ ಹಿಂದೆ ಬಂದ.” (2) “ಬಂಡೆಗಳ ಮಧ್ಯ ಅವರವರ ಕೆಲಸದಲ್ಲಿ ತೊಡಗಿರುವ ಕರಿ ಮೈಯ ಜನರು ಬಂಡೆಗಳ ಹಾಗೆಯೂ, ಬಂಡೆಗಳು ಮನುಷ್ಯರ ಹಾಗೂ ಮಧ್ಯಾಹ್ನದ ಬಿಸಿಲಲ್ಲಿ ಕಾಣಿಸಿದರೆ ಆಶ್ಚರ್ಯವಿಲ್ಲ.” (3) “ತಾನು ಇಷ್ಟು ಗಲಾಟೆ ಮಾಡಿದ ಮೇಲೂ ಎಲ್ಲವೂ ಮೊದಲಿನ ಹಾಗೇ ನಡೆಯುವುದು ನೋಡಿ ಅವನಿಗೆ ವ್ಯಥೆಯಾಗಿತ್ತು.” ಇದು ಊರಿನ ಈಗಿನ ಪರಿಸ್ಥಿತಿ.

ಹಿಂದೆ ಒಮ್ಮೆ – “ಜನಗಳು ಅತ್ತ ಬದುಕಿಯೂ ಇಲ್ಲ; ಅತ್ತ ಸತ್ತೂ ಇಲ್ಲ ಎನ್ನುವ ಹಾಗೆ ಉಸಿರು ಕಟ್ಟಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಖೈದಿಗಳಾಗಿದ್ದ ಕಾಲ. ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಬರಿಯ ಕಲ್ಲು ಬಂಡೆಗಳು ಮಾತ್ರ ಕಪ್ಪಾಗಿ, ಬಿಸಿಲಿನಲ್ಲಿ ಮೈತೆರೆದುಕೊಂಡು ದೂರಕ್ಕೆ ಮನುಷ್ಯರ ಹಾಗೆ ಕಾಣಿಸುತ್ತಿದ್ದವು. ಆಗ ಜನರ ಸಂಕಷ್ಟವನ್ನು ಮನಗಂಡ ದೊರೆಗಳು ಸಮಸ್ತವನ್ನೂ ತೊರೆದು ಬರಿಮೈಯಾಗಿ ಆ ಗುಹೆಗೆ ಹೋಗಿ ಗಂಗಾದೇವಿಯನ್ನು ಕುರಿತು ಒಂಟಿ ಕಾಲಿನಲ್ಲಿ ತಪಸ್ಸು ಮಾಡುತ್ತಾ ನಿಂತುಬಿಟ್ಟರಂತೆ. ಹಾಗೆ ನಿಂತವರಿಗೆ ಮತ್ತೆ ಎಚ್ಚರವಾದದ್ದು ತಮ್ಮ ಕಾಲನ್ನು ಸೋಕಿಕೊಂಡು ಗಂಗಾನದಿ ಹರಿದು ಹೋದಾಗಲೇ….. ಇನ್ನು ಕೆಲವರು ದೊರೆಗಳು ಸುರಂಗ ತೋಡಿಸಿ ನೀರು ಹರಿಯುವ ಹಾಗೆ ಮಾಡಿದರೆಂದೂ ಹೇಳುತ್ತಾರೆ.”

ಹಿಂದೆ ಊರಿಗಾಗಿ ಏನಾದರೂ ಮಾಡುವುದು ಅಗತ್ಯವಿದ್ದಾಗ ದೊರೆಗಳು ಕ್ರಿಯಾಶೀಲರಾಗಿ ನೀರು ತರಿಸಿಕೊಟ್ಟರು. ಈಗ ಊರಿಗೆ ಏನೂ ಬೇಕಾಗಿಲ್ಲ; ಅಧಿಕಪ್ರಸಂಗಿಯೊಬ್ಬ ಬದಲಾವಣೆ ಬೇಕೆಂದು ತಾನೇ ನಿರ್ಧರಿಸಿ ದೇವಸ್ಥಾನಕ್ಕೆ ಬೆಂಕಿಕೊಟ್ಟ (ಕಟ್ಟುವ ಕೆಲಸವಲ್ಲ; ಕೆಡಹುವ ಕೆಲಸ – ಗಮನಿಸಿ); ಆದರೂ ಜನರಲ್ಲಿ ಬದಲಾವಣೆಯಾಗದ್ದು ನೋಡಿ ಕಂಗೆಟ್ಟ. ಮುಖ್ಯವಾಗಿ ಅವನಿಗೆ ಅರ್ಥವಾಗದ್ದು ‘ದೇವರ ಮೂರ್ತಿ ದೇವರಲ್ಲ’ ಎನ್ನುವುದು. ಊರಿನವರಿಗೆ ಅದು ಗೊತ್ತು. ಮೂರ್ತಿಯ ವಿಕಾರ ಮುಖ ನೋಡಿ, ‘ಗೋಪಾಲಕೃಷ್ಣ ಇಚ್ಛಿಸಿದ ರೂಪ ಅದು’ ಎನ್ನುತ್ತಾರೆ. ಗೋವಿಂದ ಊರು ಬಿಟ್ಟು ಹೋದ – ಊರಲ್ಲಿ ಏನೂ ಕೊರತೆ ಆಗಲಿಲ್ಲ. ಪೇಟೆಯಲ್ಲಿ ‘ಕ್ರಾಂತಿ’ ಮಾಡಿದ – ಏನು ಬದಲಾವಣೆ ಆಗಲಿಲ್ಲ. ಊರಿಗೆ ಬಂದ, ‘ಕ್ರಾಂತಿ’ ಮಾಡಿದ – ಏನೂ ಬದಲಾವಣೆ ಆಗಲಿಲ್ಲ. “ಅವನಿಗೆ ಊರಿಗೆ ಬಂದ ಮೇಲೆ…. ಮತ್ತಷ್ಟು ಸಿಟ್ಟು ಬಂತು. ಸ್ವಾತಂತ್ರ್ಯವೇ ಇಲ್ಲದೆ ತಾನು ಸದಾ ಯಾವುದಕ್ಕೋ ಬಂಧಿತನಾದ ಹಾಗೆ ಅನ್ನಿಸುತ್ತಿತ್ತು” – ಹೀಗೆ ಸೂಕ್ಷ್ಮವಾಗಿ ನೋಡಿದರೆ ಗೋವಿಂದನ ಕ್ರಾಂತಿ ಅವನ ವೈಯಕ್ತಿಕ ತೆವಲು ಹೊರತು; ಊರಿಗೆ ಅಗತ್ಯವಾದುದಲ್ಲ ಎಂದು ಕತೆ ಹೇಳುವಂತಿದೆ. ಈ ಓದು ಲೇಖಕರಿಗೆ ಒಪ್ಪಿತವಲ್ಲದಿರಬಹುದು. ಕತೆಯಲ್ಲಿಯೇ ಒಂದು ಕಡೆ ಬರುತ್ತದೆ –

“ಮಾತಾಡುವುದಕ್ಕೆ ಹೊರಟರೆ ಯಾವಾಗಲೂ ಆಗುವುದು ಹೀಗೆ – ಹೇಳಬೇಕೆಂದದ್ದು
ಒಂದು, ಹೇಳುವುದು ಇನ್ನೊಂದು. ಅದರ ಅರ್ಥ ಮತ್ತೊಂದೇ. ಕೊನೆಗೆ ಹೇಳುವವನಿಗೂ ಕೇಳುವವನಿಗೂ ಇಬ್ಬರಿಗೂ ಬೇಜಾರಾಗಿ ಸಂವಾದವೇ ಸಾಧ್ಯವಿಲ್ಲದೆ ಹೋಗುವುದು. ನಾನು ಹೇಳಬೇಕೆಂದಿರುವ ಕತೆಯೂ ಅಷ್ಟೇ.”

*****

ವೈಯಕ್ತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಈ ಮೂರೂ ಆಯಾಮಗಳನ್ನು ಒಳಗೊಳ್ಳುವಂತೆ ಬರೆಯುವ ಹಂಬಲದ ರಾಮಚಂದ್ರ ದೇವ ‘ದಂಗೆಯ ಪ್ರಕರಣ’ದಲ್ಲಿ ಸಾಮಾಜಿಕ ಆಯಾಮಕ್ಕೆ ಗಮನ ಕೊಡಲಾಗಲಿಲ್ಲ. ಅವರು ಆಧ್ಯಾತ್ಮಿಕ ಆಯಾಮವೆಂದು ಚಿತ್ರಿಸಿದ್ದು ಕೂಡ ಸಮಾಜೋ- ಸಾಂಸ್ಕೃತಿಕ ಧ್ವನಿ ಭಾರಗಳಿಂದ ಕೂಡಿ ಸಮಾಜ – ರಾಜಕೀಯ ಆಯಾಮ ಸಂಪೂರ್ಣವಾಗಿ ನಿರ್ಲಕ್ಷಿತವಾಯಿತು. ಸಮಾಜ – ಆರ್ಥಿಕ ನೆಲೆಯೂ ಇಲ್ಲದೆ ಅಸಂಗತದ ಪರಿಧಿಯೊಳಗೆ ನಿಂತಿತು. ಆದುದರಿಂದ ‘ಅಪ್ಪು ಮಾವನ ಅರುಪ್ಪೆ ಕುರು’ ಎಂಬ ಸಣ್ಣ ಕವನದಲ್ಲಿ ಇಂಡಿಯಾ ಹುಣ್ಣುಗಳಿಂದ ಕೂಡಿದೆ; ರಸಿಕೆ ಇಳಿದು ಮತ್ತೆ ಮತ್ತೆ ಕುರುಗಳು ಏಳುತ್ತಿವೆ ಎಂದು ವಿಡಂಬನಾತ್ಮಕವಾಗಿ ಹೇಳಿದರು.

ಅಪ್ಪುಮಾವನ ಅರುಪ್ಪೆಕುರು
(ಡೆಲ್ಲಿವಾಲಾ – 3)

ಅಪ್ಪುಮಾವ ಇಂಡಿಯಾದ ಅಸಂಖ್ಯಾತ ಸತ್ಪ್ರಜೆಗಳಲ್ಲೊಬ್ಬ; ಇಂಡಿಯಾದಂತೆ
ಪುರಾತನ ಶ್ರೇಷ್ಠ, ಸಂಸ್ಕೃತಿವೇತ್ತ. ಅವನಿಗೋ
ಇಂಡಿಯಾದಂತೆ ಬೆನ್ನಲ್ಲೊಂದು ಅರುಪ್ಪೆಕುರು; ಹೇಳಿದರೆ
ಬೆನ್ನಲ್ಲೊಂದು ಹುಣ್ಣು; ಹುಣ್ಣಿಗೆ ಮೊದಲು ಒಂದೇ ಕಣ್ಣು;
ದಿನ ಒಂದು ಕಳೆದದ್ದೆ ಒಡೆಯುವುದು ಕಣ್ಣಿಗೆ ಇನ್ನೊಂದು ಕಣ್ಣು;
ಆ ಮೇಲೆ ಮತ್ತೊಂದು ಮತ್ತೊಂದು ಮತ್ತೊಂದು; ಅರುಪ್ಪೆಕುರು
ಒಂದಕ್ಕೆ ಒಡೆಯುವುವು ಅನೇಕ ರಸಿಕೆ ಬಿರಿಯುವ ಕಣ್ಣು.

ಅರುಪ್ಪೆಕುರುವಿನ ಕೆರೆತ ಅಪ್ಪುಮಾವನು ಕೆರೆದ; ಇಳಿದಿತ್ತು
ರಸಿಕೆ ಬೆನ್ನಲ್ಲಿ, ನಿಂತಿತ್ತು
ತಿಕದ ಬಳಿ; ಮತ್ತೊಂದು ಕುರು
ಹುಟ್ಟಿತ್ತು ನಿಂತಲ್ಲಿ; ಮಾವನು ಕೆರೆದ; ರಸಿಕೆ
ಇಳಿಯಿತು ಮತ್ತೆ ತರಡಲ್ಲಿ; ಕುರು;

ಮಾವ ತುರಿಕೆಯ ಕೆರೆದ; ಹರಿಯಿತೋ ರಸಿಕೆ ಉಧೊ ಉಧೋ
ಬಿರಿಯಿತೋ ಮತ್ತೊಂದು ಕುರು ಮತ್ತೊಂದು ಕುರು ಮತ್ತೊಂದು ಕುರು ಮತ್ತೊಂದು

ಮಾವನೋ, ಇಂಡಿಯಾದ ಅಪ್ಪು ಮಾವನೋ,

ಬೆಳೆಯುವ ಕುರುಗಳ ಕೆರೆಯುತ್ತ ಹೋದ,
ಕಣ್ಣುಗಳು ಮೂಡುತ್ತ ಹೋದವು.
(1975)

ಆ ಕಾಲದ ‘ಮಾರ್ಕ್ ಸಂಜೀವರಾಯರ ಮಗ’ (1975), ‘ಹುಲಿ ಮತ್ತು ದನ’ (1975) ಕವನಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಹೈಬ್ರಿಡ್ ನಾಗರಿಕತೆ ಮತ್ತು ಸಮಯ ಸಾಧಕ ರಾಜಕಾರಣಗಳನ್ನು ಅವರು ವಿಡಂಬಿಸಿದ್ದಾರೆ. ಹೀಗೆ ರಾಮಚಂದ್ರ ದೇವರು ಕವಿತೆಗಳಲ್ಲಿ ತಮ್ಮ ಕಾಲದ ಸಮಾಜವನ್ನು ತೀವ್ರವಾಗಿ ವಿಮರ್ಶೆಗೆ ಒಳಪಡಿಸಿರುವುದಕ್ಕೆ ಇವೆಲ್ಲ ಸಾಕ್ಷಿಗಳಾಗಿವೆ.

ಅವರ ಸಣ್ಣ ಕತೆ ‘ದಂಗೆಯ ಪ್ರಕರಣ’ ಸತ್ವವುಳ್ಳ ಕತೆಯಾದುದರಿಂದ ವ್ಯಾಖ್ಯಾನಗಳಿಗೆ ತೆರೆದುಕೊಳ್ಳುತ್ತ ಸ್ವಾತಂತ್ರ್ಯೋತ್ತರ ಕಾಲದ ಬುದ್ಧಿಜೀವಿಗಳ ವಿಫಲತೆಯ ದಾಖಲೆಯಾಗಿ ಕಾಣುತ್ತದೆ. ಬುದ್ಧಿಜೀವಿಗಳಿಗೆ ನಮ್ಮ ಸಮಾಜಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಇದ್ದುದನ್ನೇ ಈ ಕತೆ ಒಂದು ರೂಪಕದ ರೀತಿಯಲ್ಲಿ ಹೇಳುತ್ತದೆ.

ಎರಡನೆಯ ಘಟ್ಟ

ರಾಮಚಂದ್ರ ದೇವರ ಮೂರು ಮುಖ್ಯ ಕತೆಗಳಲ್ಲಿ ಎರಡನೆಯದಾದ ‘ಮೂಗೇಲ’ ನವ್ಯ ಪಂಥದ ಇಳಿಗಾಲದಲ್ಲಿ, ಅಸಂಗತ ಅಥವಾ ಫ್ಯಾಂಟಸಿ ತಂತ್ರವನ್ನನುಸರಿಸಿ ಸೃಷ್ಟಿಯಾಯಿತು. ಭಾರತೀಯ ‘ಕಥೆಗಳು’ ಫ್ಯಾಂಟಸಿಯನ್ನು ಸಹಜವಾಗಿ ಬಳಸಿಕೊಳ್ಳುತ್ತವೆ ಮತ್ತು ದೇವರಿಗೆ ಅವುಗಳ ಗಾಢವಾದ ಅಭ್ಯಾಸದ ಹಿನ್ನೆಲೆಯಿದ್ದರೂ ‘ಮೂಗೇಲ’ ಕತೆಗೆ ಕಾಫ್ಕಾನ ‘ರೂಪಾಂತರ’ ಕತೆಯೇ ಸುಪ್ತವಾಗಿ ಹಿನ್ನೆಲೆಯಲ್ಲಿರುವುದು ಸ್ಪಷ್ಟವಾಗುತ್ತದೆ. ‘ಮೂಗೇಲ’ ಎಂಬ ಹೆಸರು ಪಡೆದ ಹುಡುಗನಿಗೆ ಐದು ವರ್ಷವಾಗುವವರೆಗೆ ಅವನ ಮೂಗು ಸಾಮಾನ್ಯವಾಗಿತ್ತು. ನಂತರ ಮೂಗು ಬೆಳೆಯತೊಡಗಿ ಸಾಮಾನ್ಯ ಮನುಷ್ಯನಂತೆ ಬದುಕಲು ಅಸಾಧ್ಯವಾಗಿ ಕೋಣೆಯೊಳಗೆ ಬಂಧಿತನಂತೆ ಕೂತಿರಬೇಕಾಯಿತು. ಅವನಿಗೆ 15 ವರ್ಷ ವಯಸ್ಸಾದಾಗ ಅವನ ಅಪ್ಪನಿಗೆ ಬಡತನ ಪ್ರಾಪ್ತಿಸಿತು. ಅವನು ಮೂಗೇಲನನ್ನು ಪ್ರದರ್ಶನಕ್ಕಿರಿಸಿ, ಟಿಕೇಟಿನಿಂದ ಹಣ ಸಂಪಾದಿಸಲು ಪ್ರಾರಂಭಿಸಿದ. ಇದರಿಂದ ಶ್ರೀಮಂತನಾಗಿ ಬೇರೆಡೆ ಮನೆ ಕಟ್ಟಿಸಿ, ಅಲ್ಲಿಗೆ ಕುಟುಂಬದವರು ಸ್ಥಳಾಂತರಗೊಂಡರು. ಮೂಗೇಲನನ್ನು ನೋಡಿಕೊಳ್ಳಲು ಯುವತಿಯೊಬ್ಬಳನ್ನು ನೇಮಿಸಿದರು. ಆಕೆಯೊಡನೆ ಆತನಿಗೆ ಲೈಂಗಿಕ ಸಂಬಂಧ ಬೆಳೆಯಿತು. ಇದರ ಸುಳಿವು ಸಿಕ್ಕಾಗ ವಿಜ್ಞಾನಿಗಳು ಅದರ ಚಿತ್ರೀಕರಣ ಮಾಡಿ ಅಭ್ಯಾಸ ಮಾಡಲು ಬಯಸಿದರು. ಇದರ ಸುಳಿವು ಸಿಕ್ಕಿ ಯುವತಿ ಓಡಿ ಹೋದಳು. ಮೂಗೇಲ ಉಪವಾಸ ಸತ್ಯಾಗ್ರಹ ಮಾಡಿ ಸತ್ತುಹೋದ. ನಂತರ ಅವನ ಅಪ್ಪ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಂಡು ಶ್ರೀಮಂತನಾದ. ಅವರಿಗೆ ಮತ್ತೊಂದು ಹೆಣ್ಣು ಮಗು ಹುಟ್ಟಿತು. “ಮೂಗೇಲ ಈಗಲೂ ಜೀವಂತವಿದ್ದಿದ್ದರೆ ಇವಳಿಗೆ ಮದುವೆ ಮಾಡುವುದಕ್ಕೇ ಆಗುತ್ತಿರಲಿಲ್ಲವೇನೋ ಎಂದು ಮಾತ್ರ ಮೂಗೇಲನ ಅಮ್ಮನಿಗೆ ಮಗಳ ಮದುವೆಯದಿನ ಕ್ಷಣ ಕಾಲ ಅನ್ನಿಸಿತ್ತು” – ಎಂದು ಕತೆ ಕೊನೆಯಾಗುತ್ತದೆ.

ಕಾಫ್ಕಾನ ಕತೆಯಲ್ಲಿ ನಾಯಕ ಗ್ರಿಗೋರ್ ಸಂಸ ಒಂದು ದಿನ ಬೆಳಿಗ್ಗೆ ಹಾಸಿಗೆಯಿಂದೇಳುವಾಗ ಇದ್ದಕ್ಕಿದ್ದಂತೆ ದೊಡ್ಡ ಗೊಬ್ಬರದ ಹುಳುವಾಗಿ ‘ರೂಪಾಂತರ’ ಗೊಳ್ಳುತ್ತಾನೆ. ಅವನೇ ಕುಟುಂಬದ ಜೀವನಾಧಾರ. ಅವನು ಹೀಗೆ ಕೋಣೆಯಿಂದ ಹೊರಗೆ ಕಾಣಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದಾಗ ಅವನ ‘ದುರ್ಬಲ’ರಾದ ತಂದೆ ತಾಯಿಗಳು ಸಂಪಾದನೆ ಮಾಡಲು ತೊಡಗುತ್ತಾರೆ. ತಂಗಿಯೂ ದುಡಿಯಲಾರಂಭಿಸುತ್ತಾಳೆ. ಅವನ ಇರುವಿಕೆ ಅವರಿಗೆ ತೊಂದರೆಯೇ ಅನಿಸುತ್ತದೆ. ಅವನು ಬೇಸರದಿಂದ ಹೊಟ್ಟೆಗೆ ತಿನ್ನದೆ ಸತ್ತು ಹೋದಾಗ ಅವನ ಮೃತ ಹುಳು ಶರೀರವನ್ನು ದೂರ ಎಸೆಯಲು ಕೆಲಸದಾಕೆಗೆ ಹೇಳಿ ತಾವು ಪಿಕ್‌ನಿಕ್‌ಗೆ ಹೋಗುತ್ತಾರೆ.

ಆಧುನಿಕ ಸಾಹಿತಿಗಳು ಅಸಂಗತ ಸನ್ನಿವೇಶ ಸೃಷ್ಟಿಯ ಮೂಲಕ ಒಂದು ವ್ಯಕ್ತಿತ್ವ ಅಥವಾ ವಿದ್ಯಮಾನವನ್ನು ಪರಿಶೀಲಿಸಲು ಒಂದು ಪ್ರಯೋಗಶಾಲೆಯನ್ನು ನಿರ್ಮಿಸಿಕೊಳ್ಳುತ್ತಾರೆಂದು ತೋರಿಸಲು; ಜಾಗತಿಕ ಸಾಹಿತ್ಯದಲ್ಲಿ ಇಂಥ ಬೇರೆ ಪ್ರಯತ್ನಗಳೂ ನಡೆದಿರುವುದನ್ನು ಉದಾಹರಿಸಲು ಕಾಫ್ಕಾನ ಕತೆಯನ್ನು ಗಮನಿಸಿದೆ. ರಾಮಚಂದ್ರ ದೇವರೂ ‘ಮೂಗೇಲ’ ಕತೆಯಲ್ಲಿ ಮೂಗೇಲನ ಅಪ್ಪನಂಥವರು ಮನುಷ್ಯ ಸಂಬಂಧಗಳಿಗಿಂತ ಆರ್ಥಿಕ ಲಾಭಕ್ಕೆ ಪ್ರಾಮುಖ್ಯ ನೀಡುವುದನ್ನು ತೋರಿಸಲು ಮೂಗೇಲನ ಮೂಗನ್ನು ಅಸಂಗತವಾಗಿ ಹನುಮಂತನ ಬಾಲದಂತೆ ಬೆಳೆಸಿದ್ದಾರೆ. ಈ ಕತೆ ಮೇಲ್ನೋಟಕ್ಕೆ ಭಾರತೀಯ ಅಥವಾ ಕನ್ನಡದ ವಿಶಿಷ್ಟ ಸನ್ನಿವೇಶವನ್ನು ಸೂಚಿಸುವಂಥದ್ದಲ್ಲ – ವೈಯಕ್ತಿಕ ಆಯಾಮದ ಪರಿಶೀಲನೆಯಾದುದರಿಂದ ಜಗತ್ತಿನ ಎಲ್ಲಿ ಬೇಕಾದರೂ ನಡೆಯಬಹುದಾದ್ದು ಎಂದು ಅನಿಸುತ್ತದೆ. ಇಂಥ ಲಾಭ ಬಡುಕರನ್ನು ಜಗತ್ತಿನಾದ್ಯಂತ ಕಾಣಬಹುದು ಎನ್ನುವುದೇ ಇದಕ್ಕೆ ಕಾರಣ.

ರಾಮಚಂದ್ರ ದೇವರ ಒಟ್ಟು ಬರವಣಿಗೆಯ ಸಂದರ್ಭದಲ್ಲಿ ಈ ಕತೆಯ ಸಾಂಸ್ಕೃತಿಕ ಪದರ ಸ್ಪಷ್ಟವಾಗುತ್ತದೆ. ಅವರ ‘ಡೊಂಕು ಪ್ರಗಾಥ’ ಎನ್ನುವ ಅದ್ಭುತ ಅಸಂಗತ ಕವನ ‘ಮೂಗೇಲ’ಕ್ಕೆ ಪೂರಕವಾಗಿರುವ ರಚನೆ; ಅವೆರಡನ್ನೂ ಒಟ್ಟಿಗೆ ನೋಡಿದರೆ ಅವರು ‘ಸಂಸ್ಕೃತಿ’ಯ ಬದಲು ‘ವಿಕೃತಿ’ಯ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಿರುವ ಭಾರತೀಯ ನಾಗರಿಕತೆಯನ್ನು ವ್ಯಂಗ್ಯವಾಗಿ ಸೂಚಿಸುತ್ತಿದ್ದಾರೆ ಎಂದು ತಿಳಿಯುತ್ತದೆ. ಜನ ಟಿಕೇಟು ಕೊಟ್ಟು ನೋಡಲು ಬರುವುದು ‘ಸಾಂಸ್ಕೃತಿಕ’ ಪ್ರದರ್ಶನವನ್ನಲ್ಲ; ವಿಕೃತಿಯ ಪ್ರದರ್ಶನವನ್ನು. ಮೂಗೇಲ ಕೆಲಸದ ಯುವತಿಯ ಬಗ್ಗೆ ಲೈಂಗಿಕ ಆಸಕ್ತಿಯನ್ನು ಪ್ರಕಟಿಸಿದ್ದು ತನ್ನ ವಿಕೃತ ಮೂಗಿನಿಂದ ಅವಳ ಸೀರೆಯನ್ನು ಎತ್ತುವುದರ ಮೂಲಕ. ವಿಜ್ಞಾನಿಗಳಾದರೂ ಅಧ್ಯಯನಕ್ಕೆ ಒಳಪಡಿಸಬೇಕೆಂದಿದ್ದುದು ಅವರ ಸಂಭೋಗವನ್ನು. ಮೂಗೇಲನ ಅಪ್ಪನಿಗೆ ವಿಕೃತಿಯೇ ಒಂದು ಹೆಚ್ಚುಗಾರಿಕೆಯಾಗಿ ಕಂಡು, ಅದರಿಂದ ಹಣಗಳಿಸುವ ಅವಕಾಶವನ್ನು ಅವನು ಹುಡುಕಿಕೊಳ್ಳುತ್ತಾನೆ. ಆಧುನಿಕ ನಾಗರಿಕತೆಯ ಹಲವು ವಿಚಾರಗಳನ್ನು ಈ ಕತೆ ಧ್ವನಿಸಬಲ್ಲುದು. ಕಾಫ್ಕಾನ ಕಥೆಯ ದೃಷ್ಟಿ ಇಂತಹ ಸಂಗತಿಗಳ ಬಗ್ಗೆ ಅಲ್ಲ.

‘ಮೂಗೇಲ’ ಕತೆಯಲ್ಲಿ ಕಾಣುವ ನಮ್ಮ ನಾಗರಿಕತೆ, ಸಮಾಜಗಳ ಅಸಹನೀಯ ಲಘುತ್ವವನ್ನು, ‘ಡೊಂಕು ಪ್ರಗಾಥ’ ಸಣ್ಣ ಕಾವ್ಯದಲ್ಲಿ ದೇವ ಇನ್ನಷ್ಟು ವಿಡಂಬನೆಗೆ ಒಳಪಡಿಸಿದ್ದಾರೆ.

ಡೊಂಕು ಪ್ರಗಾಥ

ಡೊಂಕು ಬಂದನೋ ಅಂಕು ಡೊಂಕು ಬಂದನೋ
ಅಂಕು ಡೊಂಕು ಸಂಕಪಾಳ ಡೊಂಕು ಬಂದನೋ

ಒಮ್ಮೆ ಕಣ್ಣ ಅತ್ತ ಕಡೆಗೆ ತಿರುಗಿ ಕಣ್ಣ ಇತ್ತ ಕಡೆಗೆ
ನೆತ್ತಿ ಕಡೆಗೆ ಆಗ ಈಗ ಕೊಂಕು ಬಂದನೋ

ಕೊಂಕು ಬಂದನೋ ಅಂಕು ಡೊಂಕು ಬಂದನೋ
ಡೊಂಕು ಬಂದನೋ ಪಾಂಕು ಹಿಡಿದು ಬಂದನೋ

ಬಾಲವನ್ನು ಕಿವಿಗೆ ಸೆಕ್ಕಿ ಮೆದುಳ ಪುಕುಳಿ ಒಟ್ಟೆಗಿಕ್ಕಿ
ಢುರ್ರ ಢುರ್ರ ಹೂಸು ಬಿಟ್ಟು ಡೊಂಕು ಬಂದನೋ

ಡೊಂಕು ಹೂಸು ಪರಿಮಳ, ಡೊಂಕು ಹೂಸು ಪರಿಮಳ
ಎಂದು ಮೆರೆದು ಹರಿದು ತರಿದು ಡೊಂಕು ಬಂದನೋ

ಕೆಲವು ಸಲ ಅತ್ತು ಬಿಡುವ, ಕೆಲವು ಸಲ ಬರಿದೆ ನಗುವ
ಕೆಲವು ಸಲ ಧ್ಯಾನಿಯಂತೆ ಕೂತು ಹೆಂಡ ಕುಡಿಯುವ

ಕೆಲವು ಸಲ ದುಡ್ಡು ಕೊಡುವ, ಕೆಲವು ಸಲ ಊಟ ಕೊಡುವ,
ಏನು ಕೊಡದೆ ಇದ್ದರೂನು ಕೊಟ್ಟೆನೆಂದು ಹೇಳಿಕೊಳುವ

ಡೊಂಕು ಬಂದನೋ ಅಂಕು ಡೊಂಕು ಬಂದನೋ
ಯಂಕು ಮಂಕು ಜೊತೆಗೆ ಸೇರಿ ಡೊಂಕು ಬಂದನೋ

ಇಂತು ಪರಿ ಅರೆಕ್ಷಣ ಒಡ್ಡೋಲಗ ಕೊಟ್ಟು ಡೊಂಕುವು ತೆರೆಯ ಹಿಂದೆ ಹೋದನು. ಒಡ್ಡೋಲಗ ಹೀಗೆ ಕ್ಷಣಾರ್ಧದಲ್ಲಿ ಬರ್ಖಾಸ್ತುಗೊಳ್ಳಲು ಕಾರಣವೆಂದರೆ–

ಡೊಂಕುವೂ ಡಾರ್ವಿನ್ನನ ವಿಕಾಸವಾದದ ರೀತಿ ಕೊಂಬು ಹಲ್ಲುಗುರು ಬಾಲ ಇಷ್ಟಿಷ್ಟೇ ಸವೆದು ಮನುಷ್ಯನಾದವನೇ ಹೌದಷ್ಟೇ. ಆದರೆ ಅವನು ಪ್ರಾಣಿಸಹಜವಾಗಿ ವರ್ತಿಸುತ್ತಲೂ ಯೋಚಿಸುತ್ತಲೂ ಇದ್ದುದರಿಂದ ಮೆದುಳಿನ ಪರಿಣಾಮ ದೇಹದ ಮೇಲೆ ಆಗಿ ಆಗಿ ಅದು ಹಿಮ್ಮುಖ ಸಾಗಿ ಅವನ ಅಂಡಿನ ಮೇಲೆ ಬಾಲ ಬೆಳೆಯಲು ಪ್ರಾರಂಭವಾಗಿತ್ತು. ಪರಿಣಾಮವಾಗಿ ಅವನಿಗೆ ಅರೆಕ್ಷಣಕ್ಕಿಂತ ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ. ಇದನ್ನು ಸರಿಪಡಿಸಲೆಂದು ಅವನು ಬೇರೆ ಬೇರೆ ವೈದ್ಯರನ್ನು ಮಂತ್ರವಾದಿಗಳನ್ನು, ತೀರ್ಥಕ್ಷೇತ್ರಗಳನ್ನು ಭೇಟಿ ಮಾಡಿದ್ದನು. ಕೆಲವರು ಸಹಾನುಭೂತಿ ತೋರಿಸಿದರೆ, ಔಷಧಿಯನ್ನೋ ಪರಿಹಾರವನ್ನೋ ಹೇಳಿದರೆ, ಇನ್ನು ಕೆಲವರು ಬಾಲ ಬೆಳೆಯುವುದು ತಿಳಿಯುತ್ತಲೇ ನಗಲು ಸುರು ಮಾಡುವರು, ಬೇರೆಯವರ ಕರೆದು ವಿಷಯ ತಿಳಿಸುವರು, ಬಾಲ ತೋರಿಸು ಎನ್ನುವರು. ಇವನಿಗೆ ಇದರಿಂದ ಸಿಟ್ಟು ಬಂದು ಬೈಯ್ಯಲು, ಕಿರುಚಾಡಲು, ಹೊಡೆಯಲು ಮೊದಲಾಗುವನು. ಇವನು ಹೀಗೆ ಹೆಂಡ ಕುಡಿದ ಮಂಗನ ಹಾಗೆ ಆಡಲು ಸುರು ಮಾಡಿದೊಡನೆ ಬಾಲ ಮತ್ತೊಂದಿಂಚು ಬೆಳೆಯುವುದು. ಆದರೆ ಕೆಲವರು ಹೀಗೆ ಬಾಲ ಬೆಳೆಯುವುದು ಪವಾಡವೆಂದೂ ಹನುಮಂತ ದೇವರ ಕೃಪೆಯೆಂದೂ ತಿಳಿದು ಡೊಂಕುವನ್ನು ಭಕ್ತಿಯಿಂದ ಕಾಣುತ್ತಿದ್ದರು. ಅಂಥವರಲ್ಲಿ ಗೋಜೇಂದ್ರನೂ ಒಬ್ಬ. ಅದೆಂತೆಂದರೆ –
ಗೋಜೇಂದ್ರ ಜೊತೆಗೆ ಇದ್ದ ಖೋಜೇಂದ್ರ ಜೊತೆಗೆ ಇದ್ದ
ಡೊಂಕು ಹೂಸಿ ಮೂಸಿ ಮೂಸಿ ಹಿಂದೆ ಹಿಂದೆ ಬರುತಲಿದ್ದ

ದೇವರನ್ನು ಬೇಡುತಿದ್ದ – ನನಗೆ ಒಂದು ಬಾಲ ಕೊಡು
ಡೊಂಕುವಂಥ ಬುದ್ದಿ ಕೊಡು, ಅಂಕು ಡೊಂಕು ಮಾಡಿ ಬಿಡು

ಡೊಂಕು ಮರಿಯ ಮಾಡು ನನ್ನ ಕಪ್ಪು ಕುರಿಯ ಮಾಡು ನನ್ನ
ಡೊಂಕು ಸೇವೆಯಲ್ಲಿ ಮನಸ ಸದಾ ಇರಿಸು ದೇವರೇ

ಗೋಜೇಂದ್ರನಿಗು ‘ಓಂದು ಬಾಲ ಬಂದಿತೋ – ಸಣ್ಣ
ಬಾಲ ಬಂದಿತೋ
ಖೋಜೇಂದ್ರನಿಗು ಒಂದು ಬಾಲ ಬಂದಿತೋ – ಚೆನ್ನ
ಬಾಲ ಬಂದಿತೋ

ಹೆಂಡತಿಯು ನೋಡಿದಳು ಖೋಜೇಂದ್ರನಾ ಬಾಲ
ಕೈಯ್ಯಲ್ಲಿ ಅದುಮುತ್ತ ಸುಖ ಪಟ್ಟಳು:

ಮುಂದೆ ಇರೋದಕ್ಕಿಂತ ಹಿಂದೆ
ಇರೋದೇ ಚೆಂದ
ಮನುಷ್ಯರಂತೆ ನಡೆಯೋಕಿಂತ
ಕುಣಿಯೋದೇ ಅಂದ

ಸೂಟು ಬೂಟು ಹಾಕ್ಕೊಂಡು ಹೋಗಿ
ದೊಡ್ಡವ ಅಂತಾರೆ
ಮಾರ್ಕ್ಸ್‌ ಕಾರ್ಡು ಹಿಡ್ಕೊಂಡ್ಹೋಗಿ
ಜೀನಿಯಸ್ ಅಂತಾರೆ

ಪ್ಕಾಂಟಿನೊಳಗೆ ಬಾಲ ಇರಲಿ ಕೋತಿ ಆಗಲಿ
ನಾನು ಅದನೆ ಬಳಸಿಕೊಳುವೆ ಹೀಗೇ ಇರಲಿ
ಕೋತಿ ನಾನು ನೀನು ಜೊತೆಲಿ ಹೇನು ತಿನ್ನೋಣ
ರಾತ್ರಿಯಲ್ಲಿ ಮರವ ಹತ್ತಿ ಹಲ್ಲು ಕಿರಿಯೋಣ

ನೀನು ಖೋಜು ನಾನು ರೋಜು
ಎಂಥಾ ಗೌಜು
ನಿನಗೆ ಬಾಲ ಬಂದ ಮೇಲೆ
ಎಂಥಾ ಮೋಜು.

ಹೀಗೇ ಕಾಲ ಕುಣಿದು ಶ್ರೀ ಮತ್ತು ಶ್ರೀಮತಿ ಗೋಜೇಂದ್ರರಿಗೆ ಮಕ್ಕಳು ಹುಟ್ಟಲು ಪ್ರಾರಂಭವಾದವು. ಹುಟ್ಟಿದ ಹತ್ತು ಮಕ್ಕಳಲ್ಲಿ ಪ್ರತಿಯೊಂದಕ್ಕೂ ಚಿಕ್ಕ ಚಿಕ್ಕ ಬಾಲ. ಇವರು ಕಿರುಚಿದರೆ, ಸಿಟ್ಟು ಮಾಡಿಕೊಂಡರೆ, ಇನ್ನೊಬ್ಬರನ್ನು ದ್ವೇಷಿಸಿದರೆ, ಹೊಡೆದರೆ, ಬೈದರೆ ಬಾಲ ಒಂದೊಂದಿಂಚು ಬೆಳೆಯುವುದು. ಇನ್ನೊಬ್ಬರನ್ನು ಪ್ರೀತಿಯಿಂದ ಕಂಡೊಡನೆ ಬಾಲ ಚಿಕ್ಕದಾಗುವುದು. ಇವರಿಗೆ ಹುಟ್ಟಿದ ಮಕ್ಕಳಿಗೆ ಹುಟ್ಟಿದ ಮಕ್ಕಳಿಗೂ ಹೀಗೇ ಬಾಲ. ಜೊತೆಗೆ ಡೊಂಕುವಿಗೆ ಬಾಲ ಬಂದಂತೆ ಅನೇಕರಿಗೆ ಇದ್ದಕ್ಕಿದ್ದಂತೆ ಬಾಲ ಬೆಳೆಯಲು ಪ್ರಾರಂಭವಾಯಿತು. ಇಂತಾಗಿ ಮೂರು ನಾಲ್ಕು ಜನರೇಶನ್ನು ಕಳೆಯುವುದರೊಳಗೆ ವಿಕಾಸವಾದದ ವಿರುದ್ಧವಾಗಿ ಈ ನಾಗರಿಕತೆ ಹಿಮ್ಮುಖ ಸಾಗಿ ಬಾಲವಿದ್ದ ಸಾಕಷ್ಟು ಸಂಖ್ಯೆಯ ಜನಗಳು ಈ ನಾಡಿನಲ್ಲಿ ತುಂಬಿಕೊಂಡರು. ಆದಿಮ ಜನಾಂಗದ ರೀತಿಯಲ್ಲಿ ಹೊಡೆದಾಡುತ್ತಿದ್ದವರು ಇದ್ದಕ್ಕಿದ್ದಂತೆ ಬಾಲ ಬೆಳೆದು ಅನಿಯಂತ್ರಿತವಾಗಿ ಮರದ ಮೇಲೆ ನೆಗೆದು ಹೋಗಿ ಹಲ್ಲು ಕಿರಿಯುವುದು ಸಾಮಾನ್ಯವಾಗಿತ್ತು. ಬಾಲವಿದ್ದವರೇ ಹೆಚ್ಚಿದ್ದರಿಂದ ಚುನಾವಣೆಯಲ್ಲಿ ಅವರೇ ಗೆದ್ದು ಬರುತ್ತಿದ್ದರು. ಬಾಲವಿದ್ದವರಿಗೆ ಇದ್ದ ಬೆಲೆ, ಸವಲತ್ತು ಇಲ್ಲದವರಿಗೆ ಇಲ್ಲದ್ದರಿಂದ ಬಾಲವಿಲ್ಲದವರು ತಮಗೂ ಬಾಲ ಬರಲಿ ಎಂದು ಹಂಬಲಿಸುವಂತಾಯಿತು. ನಾಗರಿಕತೆ ಮತ್ತೆ ಪ್ರಾಣಿ ಸ್ಥಿತಿಗೆ ಹಿಂದಿರುಗುತ್ತಿರುವ ಇಂಥಾ ಸಂದರ್ಭದಲ್ಲಿ ಡೊಂಕುವೇ ಈ ಜನಾಂಗದ ಪ್ರಧಾನ ಪಿತೃ ಎನಿಸಿದನು ಎಂಬಲ್ಲಿಗೆ –

ಮಂಗಲಂ ಜಯ ಮಂಗಲಂ-ಶುಭ
ಮಂಗಲಂ

ಸಹಜ ಮಾನವರಂತೆ ಓಡಾಡುವ ಜನರಿಗೆ
ಮಂಗಲಂ ಜಯ ಮಂಗಲಂ

ಸಹಜ ಉಣ್ಣುವ ತಿನ್ನುವ ಹೆಂಡತಿ ಮಕ್ಕಳ ಜೊತೆಗೆ
ಕಾಲ ಕಳೆಯುವ ಜನಕೆ ಮಂಗಲಂ

ಸಹಜ ಜೀವನ ಗತಿಯ ಅನುಸರಿಸುವವ ಯಾರೊ
ಸಹಜ ನಗೆ ಮಾತುಗಳ ಮನುಷ್ಯ ಯಾರೋ
ಕೊಂಕುವಲ್ಲ ಡೊಂಕುವಲ್ಲ ವಂಕಿ ಮಂಕಿಗಳಲ್ಲ
ಸಹಜ ಮನುಷ್ಯನ ಬದುಕ ಸಹಜತೆಗೋ
ತೆವಳದೆ ಹಾರದೆ ನಡೆವವಗೋ

ಮಂಗಲಂ ಜಯ ಮಂಗಲಂ-ಶುಭ
ಮಂಗಲಂ.
(1990)

ಮೇಲೆ ಹೇಳಿದ ಸಾಂಸ್ಕೃತಿಕ ಆಯಾಮವನ್ನು ಗುಪ್ತಗಾಮಿನಿಯಾಗಿ, ಆದರೆ ಪ್ರಧಾನ ಉದ್ದೇಶವಾಗಿ ಹೊಂದಿರುವ ‘ಡೊಂಕು ಪ್ರಗಾಥ’ ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನು ಮೇಲ್ನೋಟಕ್ಕೆ ಹೊಂದಿದೆ. ಡೊಂಕು ಎಂಬ ಮನುಷ್ಯನಿಗೆ ಬಾಲ ಬೆಳೆಯಲು ಪ್ರಾರಂಭವಾಗುತ್ತದೆ. ಅವನು ಪ್ರಾಣಿ ಸಹಜವಾಗಿ ವರ್ತಿಸುತ್ತಲೂ ಯೋಚಿಸುತ್ತಲೂ ಇದ್ದದ್ದರಿಂದ ಮೆದುಳಿನ ಪರಿಣಾಮ ದೇಹದ ಮೇಲೆ ಹಿಮ್ಮುಖವಾಗಿ ಆಗಿ, ವಿಕಾಸವಾದಕ್ಕೆ ವಿರುದ್ಧವಾದ ಪ್ರಕ್ರಿಯೆ ಜರುಗಿದ್ದೇ ಇದಕ್ಕೆ ಕಾರಣ. ಗೋಜೇಂದ್ರ, ಖೋಜೇಂದ್ರ ಎಂಬಿಬ್ಬರು ಇಂಥ ಬಾಲ ತಮಗೂ ಬೇಕೆಂದು ಆಶಿಸಿದಂತೆ ಅವರಿಗೂ ಬಾಲ ಹುಟ್ಟಿತು. ಶ್ರೀ ಮತ್ತು ಶ್ರೀಮತಿ ಗೋಜೇಂದ್ರರಿಗೆ ಹುಟ್ಟಿದ ಮಕ್ಕಳಿಗೂ ಬಾಲ ಇರುತ್ತದೆ. ಕಿರುಚಿ ಸಿಟ್ಟು ಮಾಡಿಕೊಂಡರೆ, ಇನ್ನೊಬ್ಬರನ್ನು ದ್ವೇಷಿಸಿದರೆ ಬಾಲ ಬೆಳೆಯುವುದು; ಪ್ರೀತಿಸಿದರೆ ಬಾಲ ಚಿಕ್ಕದಾಗುವುದು. ಮೂರು ನಾಲ್ಕು ಜನರೇಶನ್ ಕಳೆಯುವಷ್ಟರಲ್ಲಿ ಬಾಲವಿದ್ದವರೇ ಹೆಚ್ಚಾಗಿ, ಚುನಾವಣೆಯಲ್ಲಿ ಅವರೇ ಗೆದ್ದು ಬರುತ್ತಿದ್ದರು. “ಬಾಲವಿದ್ದವರಿಗೆ ಇದ್ದ ಬೆಲೆ, ಸವಲತ್ತು ಇಲ್ಲದವರಿಗೆ ಇಲ್ಲದ್ದರಿಂದ ಬಾಲವಿಲ್ಲದವರು ತಮಗೂ ಬಾಲ ಬರಲಿ ಎಂದು ಹಂಬಲಿಸುವಂತಾಯಿತು.” ಡೊಂಕುವೇ ಈ ಜನಾಂಗದ ಪ್ರಧಾನ ಪಿತೃ ಎನಿಸಿದನು. ಯಕ್ಷಗಾನ ಪ್ರಸಂಗದಂತಿರುವ ಈ ಸಣ್ಣ ಕಾವ್ಯಕ್ಕೆ ಒಂದು ಮಂಗಳ ಗೀತೆಯೂ ಇದೆ. ಆದರೆ ಅದು ಡೊಂಕುವಿಗೆ ಮಂಗಳವಾಗಲಿ ಎಂದು ಪ್ರಾರ್ಥಿಸುವುದಿಲ್ಲ; ಸಹಜ ಮನುಷ್ಯನಿಗೆ ಮಂಗಳವಾಗಲಿ ಎಂದು ಪ್ರಾರ್ಥಿಸುವುದು ಗಮನಾರ್ಹವಾಗಿದೆ. ಇದು ಲೇಖಕರ ಆಶಯವನ್ನು ಸೂಚಿಸುವ ಭಾಗ.

ಈ ಕವನ ಹುಟ್ಟಿದ ಸಂದರ್ಭವನ್ನು ಅವರು ಇನ್ನೊಂದೆಡೆ ಹೇಳಿಕೊಂಡಿದ್ದಾರೆ. ಅದು ತಿಳಿಯದಿದ್ದರೂ ಈ ಕವನದಲ್ಲಿ ಭಾರತದ ಇಂದಿನ ಪರಿಸ್ಥಿತಿಯನ್ನು ವಿಡಂಬಿಸಲಾಗಿದೆ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಮೊದಲಿಗೆ ಹೊಳೆಯುವ ಅರ್ಥವೆಂದರೆ ನಮ್ಮ ದೇಶದಲ್ಲಿ ಎಲ್ಲರೂ ಹಿಂದುಳಿದವರಾಗಲು ಹೋರಾಟ ನಡೆಸುತ್ತ, ಸುಲಭದಲ್ಲಿ ಸಿಕ್ಕುವ ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದಕ್ಕೆ ‘ಡೊಂಕು ಪ್ರಗಾಥ’ ಒಂದು ರೂಪಕವಾಗಿದೆ. ಹೆಚ್ಚು ಗಹನವಾದ ಅರ್ಥವೆಂದರೆ, ವಿಕಾಸವಾದಕ್ಕೆ ತದ್ವಿರುದ್ಧವಾದ ಹಿಮ್ಮುಖ ಬೆಳವಣಿಗೆ ಆದರೆ ಮನುಷ್ಯನ ನಾಗರಿಕತೆ ಯಾವ ಸ್ಥಿತಿಗೆ ತಲುಪುತ್ತದೆ ಎಂಬ ಜಿಜ್ಞಾಸೆ. ಇಲ್ಲಿಯೂ ‘ಮೂಗೇಲ’ ಕತೆಯಲ್ಲಿರುವಂತೆ ವಿಕೃತಿಯ ವೈಭವೀಕರಣ ಇದೆ.

ಆಧುನಿಕತೆ ಎನ್ನುವುದು ‘ದೇವರನ್ನು’ – ಅದೂ ಕೂಡ ರಿಚುವಲ್‌ಗಳಲ್ಲಿ ಪ್ರಸ್ತುತವಾಗುವ ಮೂರ್ತರೂಪದ ದೇವರನ್ನು – ದೂರವಿಟ್ಟಾಗಲಷ್ಟೇ ನಿಜವಾಗಬಲ್ಲುದು ಎನ್ನುವ ಗ್ರಹಿಕೆ ಸಾಮಾನ್ಯವಾಗಿ ಎಲ್ಲರಲ್ಲೂ, ರಾಮಚಂದ್ರದೇವರಲ್ಲೂ ಇದೆ. ಹಾಗಾಗಿ ‘ದಂಗೆಯ ಪ್ರಕರಣ’ದಲ್ಲಿ ದೇವರ ವಿರುದ್ಧ ದಂಗೆ ಎದ್ದಾಗಲಷ್ಟೇ ವಿಶಾಲ ಜಗತ್ತಿಗೆ, ಅಂದರೆ ಆಧುನಿಕತೆಯಿರುವ ಜಗತ್ತಿಗೆ ಬರಬಹುದು ಎನ್ನುವ ನಿಲುವು ಕಾಣಿಸಿಕೊಂಡಿದೆ.

ಈ ಕವನ ಬರೆಯಲು ಒಂದು ವಿದ್ಯಾಸಂಸ್ಥೆಯಲ್ಲಿ ಅವರಿಗಾದ ಅನುಭವವೇ ಕಾರಣವಾಯಿತೆಂದು ಅವರು ‘ಮುಚ್ಚು ಮತ್ತು ಇತರ ಲೇಖನ’ಗಳಲ್ಲಿ ಹೇಳಿದ್ದಾರೆ. ಈ ಬಗ್ಗೆ ಅವರು ಕಾದಂಬರಿ ಬರೆಯಲು ಪ್ರಾರಂಭಿಸಿ, ಸುಮಾರು ನೂರು ಪುಟ ಬರೆಯುವ ಹೊತ್ತಿಗೆ ಕಾದಂಬರಿಯಲ್ಲಿ ಹೇಳುವುದನ್ನು ಎರಡು – ಮೂರು ಪುಟಗಳ ಪದ್ಯದಲ್ಲಿ ಹೇಳಬಹುದು ಅನ್ನಿಸಿ ಪದ್ಯ ಬರೆದು ಕಾದಂಬರಿ ಮೂಲೆಗೆ ಬಿಸಾಕಿದರೆಂಬುದು ನಮಗಿಲ್ಲಿ ಮುಖ್ಯ. ಒಂದು ವಸ್ತುವನ್ನು ಕತೆ ಅಥವಾ ಕಾದಂಬರಿ ಅಥವಾ ಕವನ ಈ ರೂಪಗಳಲ್ಲಿ ಬರೆಯುವ ಆಯ್ಕೆ ಮಾಡಿಕೊಳ್ಳುವಂತೆ ಅವರ ‘ಕವಿತ್ವ’ಕ್ಕೆ (ನಿರೂಪಣಾ ಸಾಮಥ್ರ್ಯ ಎಂದು ಹೇಳಬಹುದು) ವಿಸ್ತಾರವಾದ ನೆಲೆಯಿದೆ.

ಮೂರನೆಯ ಘಟ್ಟ

ತಮ್ಮ ಪ್ರಮುಖ ಕೃತಿಯೊಂದನ್ನು ಬರೆದಾದ ಮೇಲೆಯೂ ಅದರ ಬಗ್ಗೆ ಚಿಂತಿಸಿ ಅದಕ್ಕೆ ಪೂರಕವಾಗಿ ಇನ್ನೊಂದು ಕವನವನ್ನು ಬರೆಯುವುದು ರಾಮಚಂದ್ರ ದೇವರಿಗೆ ಅಗತ್ಯವೆಂದು ಕಾಣುತ್ತದೆ. ಈ ಪ್ರವೃತ್ತಿ ಸ್ಪಷ್ಟವಾಗಿ ವ್ಯಕ್ತವಾದುದು ಅವರ ‘ರಿಸಾರ್ಟ್’ ಕತೆ ಮತ್ತು ಅದರ ಮುಂದುವರಿಕೆಯಂತೆ ಇರುವ ‘ಮಾತಾಡುವ ಮರ’ ಪ್ರಕಟವಾದ ಸಂದರ್ಭದಲ್ಲಿ. ಅವರ ಹಿಂದಿನ ಘಟ್ಟಗಳಲ್ಲಿ ಅವರ ಕತೆಗಳು ಮತ್ತು ಅವುಗಳಿಗೆ ಪೂರಕವಾದ ಕವನಗಳೂ ಇರುವುದನ್ನು ನೋಡಿದೆವು. ಆದರೆ ಮೇಲೆ ಹೇಳಿದ ಕತೆಗಳು ಮತ್ತು ಅವುಗಳ ಜತೆಗೆ ಚರ್ಚಿಸಿದ ಕವನಗಳಿಗೆ ನೇರವಾದ ಸಂಬಂಧಗಳಿಲ್ಲ. ಆದರೆ ‘ರಿಸಾರ್ಟ್’ ಕತೆ ಮತ್ತು ‘ಮಾತಾಡುವ ಮರ’ (ಕತೆಯೆಂದೇ ಕಾಣುವ ಸುದೀರ್ಘ ಕವನ) ಒಂದಕ್ಕೊಂದು ಪೂರಕವಾಗಿರುವುದು ಸ್ಪಷ್ಟವಾಗಿಯೇ ತಿಳಿಯುತ್ತದೆ.

‘ರಿಸಾರ್ಟ್’ ಕತೆ ಜಗತ್ತಿನ ಶ್ರೇಷ್ಠ ಕತೆಗಳಲ್ಲಿ ಒಂದೆಂದು ನಿಸ್ಸಂಕೋಚವಾಗಿ ಹೇಳಬಹುದು. (ಕನ್ನಡದಲ್ಲಿ ಅಂಥ ಹಲವು ಕತೆಗಳಿವೆ. ಸಣ್ಣ ಕತೆಗಳನ್ನು ಸಂಕೀರ್ಣ ಕಲಾಕೃತಿಗಳಾಗಿ ಹೆಣೆಯುವ ಕಲೆಗಾರಿಕೆಯಲ್ಲಿ ಕನ್ನಡದ ಶ್ರೇಷ್ಠ ಕತೆಗಾರರು ಸಾಧಿಸಿದ ನೈಪುಣ್ಯ ಜಾಗತಿಕ ಸಾಹಿತ್ಯದಲ್ಲಿ ಗುರುತಿಸಲ್ಪಡಬೇಕಾದುದು).

‘ರಿಸಾರ್ಟ್’ ಕತೆಯ ಶೀರ್ಷಿಕೆಯೂ ಸೇರಿದಂತೆ ಹಲವು ಶಬ್ದಗಳು ಸಹಜವಾಗಿ ಮತ್ತು ‘ಅನಿವಾರ್ಯವಾಗಿ’ ಇಂಗ್ಲಿಷಿನಲ್ಲೇ ಇವೆ. ಇಂದು ಕನ್ನಡ ಭಾಷೆಯ ಮತ್ತು ನಾಗರಿಕತೆಯ ಸ್ಥಿತಿ ಹೀಗಿದೆ. ಇದೆಲ್ಲ ‘ಜಾಗತೀಕರಣದ ಪ್ರಭಾವ’ ಎಂದು ಸುಲಭವಾಗಿ ಅದಕ್ಕೆ ಹಣೆಪಟ್ಟಿ ಅಂಟಿಸಿ ‘ಅರ್ಥೈಸಿಕೊಂಡು’ ಆಚೆಗಿಟ್ಟು ಹಾಯಾಗಿದ್ದುಬಿಡುವ ಪ್ರವೃತ್ತಿ ಜನರಲ್ಲಿ ಕಾಣಿಸಿಕೊಂಡಿದೆ.

ರಾಮಚಂದ್ರ ದೇವರು ಈ ಅದ್ಭುತ ಕತೆಯಲ್ಲಿ ಈ ಪರಿಸ್ಥಿತಿಗೆ ಜಾಗತೀಕರಣ ಎಂಬ ಗುಮ್ಮನನ್ನು ತೋರಿಸುವ ಬದಲು ನಮ್ಮ ನಮ್ಮ ದುರಾಸೆಗಳು ಇದಕ್ಕೆ ಹೇಗೆ, ಎಷ್ಟು ಕಾರಣ ಎಂದು ಆತ್ಮಶೋಧನೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ರೋಗನಿದಾನವೇ ಚಿಕಿತ್ಸೆಯಲ್ಲಿ ಪ್ರಧಾನವಾಗಿರುವಂತೆ ಸಾಹಿತ್ಯ ಕೃತಿಯೊಂದು ಸಮಾಜದ ಸ್ಥಿತಿಯನ್ನು (ಅದನ್ನು ರೋಗ ಅಥವಾ ಆರೋಗ್ಯ ಎಂದು ತೀರ್ಮಾನಿಸುವ ಕೆಲಸವನ್ನು ಓದುಗರಿಗೆ ಬಿಟ್ಟರೆ ಒಳ್ಳೆಯದು) ಓದುಗರ ಅರಿವಿಗೆ ತಂದುಕೊಡಬೇಕು. ‘ರಿಸಾರ್ಟ್’ ಅಂಥ ಕೆಲಸವನ್ನು ಮಾಡಿದೆ ಮಾತ್ರವಲ್ಲ ಪ್ರಜ್ಞಾವಂತ ನಾಗರಿಕರಿಗಿರುವ ಆಯ್ಕೆಗಳನ್ನು ತೋರಿಸಿಕೊಟ್ಟಿದೆ.

‘ರಿಸಾರ್ಟ್’ ಕತೆಯಲ್ಲಿ ಆಕರ್ಷಕವಾದ, ಇನ್ನೊಬ್ಬರಿಗೆ ಹೇಳಬಲ್ಲ ಒಂದು ಕತೆಯಿದೆ; ಅದರ ಜತೆ ಹೆಣೆದುಕೊಂಡ ಸೂಕ್ಷ್ಮವಾದ ಅರ್ಥಗಳು, ಮತ್ತು ಧ್ವನಿಗಳೂ ಇವೆ. ನಿರೂಪಕನಿರುವ ಊರಿನ ಗಂಗಾಧರ ಮತ್ತು ಮೋಹನ ದುಬಾಯಿಯಲ್ಲಿ ಎಂಪ್ಲಾಯ್ಡ್‌ (ಇದೇ ಶಬ್ದವನ್ನು ಕತೆಯಲ್ಲಿ ಬಳಸಲಾಗಿದೆ). ಈ ಗಂಗಾಧರ ಊರಿನ ಅಡಿಕೆ ತೋಟಗಳಿಗೆ ಸ್ಪ್ರಿಂಕ್ಲರ್ ತಂದವನು. “ಅವ ಇಲ್ಲದಿದ್ದರೆ ಸ್ಪ್ರಿಂಕ್ಲರ್ ಬರುತ್ತಿರಲಿಲ್ಲವೇ ಎಂದು ಕೇಳಬಹುದು. ಬರುತ್ತಿತ್ತು. ದೊಡ್ಡ ದೊಡ್ಡ ದೇಶಗಳೇ ಇಂಟರ್ ನ್ಯಾಶನಲ್ ವಿಲೇಜುಗಳಾಗಿರುವಾಗ ಸ್ಪ್ರಿಂಕ್ಲರ್ ಬರುವುದು ಏನು ಮಹಾ? ಅಲ್ಲದೆ ಒಂದು ಊರಿಗೆ ಬಂದದ್ದು ಮತ್ತೊಂದು ಊರಿಗೆ ಬಾರದೆ ಇರುವುದಿಲ್ಲ.” ಮೋಹನ ಎಂಬುವನು ಅರಬರಿಗೆ ಇಂಗ್ಲಿಷಿನಲ್ಲಿ ಲವ್‍ಲೆಟರ್ ಬರೆದುಕೊಟ್ಟು ಹಣಮಾಡಿದವ. ಒಬ್ಬ ಅರಬ ಅಮೆರಿಕದ ತನ್ನ ಪೆನ್‍ಫ್ರೆಂಡ್‍ಗೆ ಬರೆಸಿದ ಕಾಗದ ಓದಿ ಆಕೆ ದುಬಾೈಗೆ ಬಂದು ನಿಜಸ್ಥಿತಿ ತಿಳಿದು ರೇಗಿದ ಕತೆಯನ್ನು ಉಲ್ಲೇಖಿಸಲಾಗಿದೆ. ಇಂಗ್ಲಿಷ್ ಭಾಷೆ ಗೊತ್ತಿಲ್ಲದ ಅರಬ ಹಣದ ಬಲದಿಂದ ಭಾರತೀಯನ ‘ಸೇವೆ’ಯನ್ನು ಪಡೆದುಕೊಂಡು ಅಮೆರಿಕದವಳಿಗೆ ಗಾಳ ಹಾಕಿದ್ದು ಕೂಡ ಜಾಗತೀಕರಣಕ್ಕೆ ಉದಾಹರಣೆಯಾಗಬಲ್ಲುದು.

ನಿರೂಪಕನ ಮಧ್ಯಸ್ಥಿಕೆಯಿಂದ ಗಂಗಾಧರನಿಗೆ ಸುಬ್ರಾಯ ಧನಿಯ ಮಗಳು ಶಾಮಲೆಯ ಜತೆ ಮದುವೆಯಾಗುತ್ತದೆ. ದುಬಾೈ ಕೆಲಸ ಕಳೆದುಕೊಂಡ ಗಂಗಾಧರ ಸುಬ್ರಾಯ ಧನಿಯ ಆಸ್ತಿಯನ್ನು ಮಾರಾಟ ಮಾಡಿದಾಗ ಮೊದಲು ಒಕ್ಕಲಾಗಿದ್ದ ತಿಮ್ಮಪ್ಪ ಗೌಡ ಎಂಬ ಯುವಕನೇ ಅದನ್ನು ಕೊಂಡುಕೊಂಡು ಒಂದು ‘ರಿಸಾರ್ಟ್’ ಮಾಡುತ್ತಾನೆ. ಅವನು ಅಲ್ಲಿ ಯಾರೊಡನೆಯೂ ಕನ್ನಡ ಮಾತಾಡುವುದಿಲ್ಲ; ತಾನು ಹಗುರಾಗುತ್ತೇನೆ ಎಂದು. ಇಂಗ್ಲಿಷಾದರೆ ಅದಕ್ಕೊಂದು ಗತ್ತುಂಟು ಎನ್ನುವುದು ಅವನ ಅಭಿಪ್ರಾಯ. ಅವನ ಆಫೀಸ್ ಗೋಡೆ ಮೇಲೆ ನಯಾಗರ, ಪೀಸಾ ಟವರ್, ಲಿಬರ್ಟಿ ಸ್ಟೇಚ್ಯೂ ಮೊದಲಾದ ಚಿತ್ರಗಳು. ರಿನೊವೇಟ್ ಮಾಡಿದ ಹಳೆಯ ಹಾಲುಗಳಿಗೆ ಡಾಲ್‌ಹೌಸೀ, ಕರ್ಜನ್ಸ್ ದರ್ಬಾರ್, ಬೆಂಟೆಕ್ಸ್ ಕೋಚ್, ಜಾಕೆಲಿನ್ಸ್ ಡೀಲಕ್ಸ್, ಲಿಂಕನ್ಸ್, ಲಾರ್ಡ್ಸ್‌ ಲಕ್ಶುರಿ ಮೊದಲಾದ ಬ್ರಿಟಿಷ್, ಅಮೆರಿಕನ್ ಹೆಸರಿಟ್ಟಿದ್ದ.

ಸುಬ್ರಾಯ ಧನಿಗೂ ಇಂಗ್ಲಿಷ್ ಬೇಕು. ತನ್ನ ಕೊನೆಯ ದಿನಗಳಲ್ಲಿ ತಲೆ ಸರಿ ಇಲ್ಲದಿದ್ದಾಗ ಅವನು ಇಂಗ್ಲೆಂಡಿನ ರಾಣಿಗೂ ಅಧ್ಯಕ್ಷರಿಗೂ ಪತ್ರಗಳನ್ನು ಬರೆದು ಭಾರತದ ವ್ಯವಸ್ಥೆ ಹದಗೆಟ್ಟಿರುವುದರಿಂದ ಅವರು (ಬ್ರಿಟಿಷರೂ, ಅಮೆರಿಕನ್ನರೂ) ಬಂದು ಆಡಳಿತವನ್ನು ವಹಿಸಿಕೊಳ್ಳಬೇಕೆಂದು ಆಹ್ವಾನ ಕೊಡುತ್ತಿದ್ದ. ಈ ಪತ್ರಗಳನ್ನು ‘ಕರಣೀಕನಿಂದ ಇಂಗ್ಲಿಷಿನಲ್ಲಿ ಬರೆಯಿಸಿ ರಿಜಿಸ್ಟರ್ಡ್ ಅಂಚೆ ದ್ವಾರಾ ವಿಳಾಸದಾರರಿಗೆ ರವಾನಿಸಲಾಗಿದೆ’ ಎಂದು ಬರೆದು ಸಹಿ ಹಾಕಿಟ್ಟಿದ್ದ.

ಒಂದು ಕಾಲದಲ್ಲಿ ಶ್ರೀಮಂತಿಕೆಯ ದರ್ಪದಿಂದ ಮೆರೆದವ ಸುಬ್ರಾಯ ಧನಿ. ತಮ್ಮ ಹತ್ತಿರದ ಸಂಬಂಧಿಕನೊಬ್ಬ ತಮಗೆ ಹೇಳಿಕೆ ಮಾಡದೆ ಮಗಳ ಮದುವೆ ಮಾಡಿದನೆಂಬ ಸಿಟ್ಟಿನಲ್ಲಿ ಒಂದು ಗಂಡು ನಾಯಿಗೂ, ಒಂದು ಹೆಣ್ಣು ನಾಯಿಗೂ ವೈಭವದಿಂದ ಮದುವೆ ಮಾಡಿಸಿದ್ದವನು. ಡಿಕ್ಲರೇಶನಿನಲ್ಲಿ ಆಸ್ತಿಹೋಗಿ ಬಡತನ ಬಂದ ಮೇಲೆ ಅವನು ಆಗಾಗ ಹುಚ್ಚು ಕೆದರಿಸಿಕೊಂಡು ಯಕ್ಷಗಾನದ ರಾಜನೆಂಬಂತೆ ವರ್ತಿಸಿ ಆರ್ಭಟಿಸುವುದು ಶುರುವಾಯಿತು. ಅವನ ಜತೆಗೆ ಒಬ್ಬ ಕೋಡಂಗಿ. (ಕಿಂಗ್ ಲಿಯರ್ ಮತ್ತು ಕೋಡಂಗಿ ಇದ್ದ ಹಾಗೆ. ಲಿಯರ್‍ನ ಬಗ್ಗೆ ರಾಮಚಂದ್ರದೇವ ಕವನ ಬರೆದಿದ್ದಾರೆ. ಲಿಯರ್‌ನ ಪ್ರತಿಮೆ ಅವರಿಗೆ ಒಂದು ಮುಖ್ಯವಾದ ಪ್ರತಿಮೆ ಎನ್ನುವುದು ಸ್ಪಷ್ಟ.) ಧನಿಯ ಆಸ್ತಿಯನ್ನು ತಿಮ್ಮಪ್ಪಗೌಡ ತೆಗೆದುಕೊಂಡು ರಿಸಾರ್ಟ್ ಮಾಡಿದ ಮೇಲೆ –

1. ಮೊದಲು ಗಾಳಿ ಬೆಳಕು ಹೊಕ್ಕದೆ ಕತ್ತಲಲ್ಲಿದ್ದ ಅರಮನೆಯಂಥ ಮನೆಯ ಪುರಾತನ ವಸ್ತುಗಳನ್ನು ಒಂದು ಕೋಣೆಯಲ್ಲಿಟ್ಟು ವಸ್ತು ಸಂಗ್ರಹಾಲಯ ಮಾಡುತ್ತಾನೆ. (“ಬರೀ ಮೂರು ನಾಲ್ಕು ವರ್ಷಗಳ ಕೆಳಗೆ ದಿನಬಳಕೆಯ ವಸ್ತುವಾಗಿದ್ದವುಗಳು ಇವತ್ತು ಪ್ರದರ್ಶನಕ್ಕಿಟ್ಟ ಕುತೂಹಲವಾಗಿದ್ದವು.”) ದೇವರ ಕೋಣೆಯನ್ನು ನವೀಕರಿಸಲಾಗಿತ್ತು. ಅದರೆದುರಿಗೆ ತಿಮ್ಮಪ್ಪನ ತಂದೆಯ ಲೈಫ್ ಸೈಜ್ ಪ್ರತಿಮೆ ದೇವರಿಗೆ ಕೈಮುಗಿದುಕೊಂಡು ನಿಂತಿದೆ.

2. ಕೋಡಂಗಿ ಈಗ ಶಾಲು ಹೊದ್ದು ಭಸ್ಮ ಲೇಪಿಸಿಕೊಂಡು ಅಲ್ಲಿನ ಪೂಜೆಯವನಾಗಿ ನೇಮಕಗೊಂಡಿದ್ದಾನೆ.

3. ಮೊದಲು ಶ್ಯಾನುಭೋಗರಾಗಿದ್ದವರ ಮಗಳು ರಿಸಾರ್ಟಿನ ರೆಸೆಪ್ಶನಿಸ್ಟ್ ಆಗಿ ನೇಮಕವಾಗಿರುತ್ತಾಳೆ.
ಕೋಡಂಗಿ ಯಾವ ಸನ್ನಿವೇಶಕ್ಕೂ ಒಗ್ಗಿಕೊಂಡು ಬದುಕಬಲ್ಲವನು. ಆದರೆ ಅವನು ಯಾವತ್ತೂ ಯಜಮಾನನಾಗಲಾರ. ಆರ್ಥಿಕ ಯಾಜಮಾನ್ಯ ಬದಲಾದ ಹಾಗೆ ಉದ್ಯೋಗಗಳೂ ಬದಲಾಗುವುದು; ದಿನಬಳಕೆಯ ವಸ್ತುಗಳ ಬದಲಾವಣೆ; ಶ್ರದ್ಧಾಕೇಂದ್ರಗಳ ಸ್ವರೂಪ ಬದಲಾವಣೆ (ತಿಮ್ಮಪ್ಪ ಗೌಡನಿಗೆ ದೇವರ ಕೋಣೆಯ ಎದುರು ಕೈಮುಗಿದುಕೊಂಡ ತನ್ನಪ್ಪನ ಪ್ರತಿಮೆಯೇ ಶ್ರದ್ಧಾಕೇಂದ್ರ; ನವೀಕೃತ ದೇವರ ಕೋಣೆ ಮತ್ತು ಅರ್ಚಕ ಒಟ್ಟು ರಿಸಾರ್ಟಿನ ಗೆಟಪ್ ಹೆಚ್ಚಿಸುವ ಉಪಾಯಗಳಷ್ಟೇ; ಅಥವಾ ಈ ಮಿನಿಯೇಚರ್ ‘ಧರ್ಮ ವ್ಯವಸ್ಥೆ’ ತನ್ನ ಶ್ರೇಯಸ್ಸಿಗೆ ಕೆಲಸ ನಿರ್ವಹಿಸುತ್ತಿದೆಯೆಂಬ ಹೆಮ್ಮೆಯೂ ಅವನಿಗಿರಬಹುದು) ಇವುಗಳನ್ನು ಈ ಸನ್ನಿವೇಶದಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು.

ಶ್ಯಾಮಲೆ ನಿರೂಪಕನಿಗೆ ಬರೆದ ಕಾಗದದಲ್ಲಿ ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಯುವಕನ ಪ್ರಸ್ತಾಪವಿದೆ. ಅವನು ಮಂತ್ರ ಹೇಳುತ್ತಾ ಕಣ್ಣೀರು ಸುರಿಸುತ್ತಿದ್ದ (ರಾಮಕೃಷ್ಣ ಪರಮಹಂಸರ ಮಾದರಿ ಎನ್ನಬಹುದು) ಭಾವುಕ ಧಾರ್ಮಿಕ. ದೇವರ ಪೂಜೆ ಮಾಡದೆ ಇರಲು ಸಾಧ್ಯವಿಲ್ಲ ಎಂದು ಜ್ವರದಲ್ಲೇ ತಣ್ಣೀರು ಸ್ನಾನ ಮಾಡಿ ಪೂಜೆ ಮಾಡಿ ಸತ್ತುಹೋದ. ಇನ್ನೊಂದು ಕಡೆ, ಶ್ಯಾಮಲೆಯ ಗಂಡ ಗಂಗಾಧರ ಮೆಕ್ಯಾನಿಕ್ ಶಾಪಲ್ಲಿ ಕೆಲಸ ಮಾಡುತ್ತ ಸಂಜೆ ‘ಮೆಕ್ಯಾನಿಕ್ ಶಾಪಿನ ಬಟ್ಟೆ ಬದಲಾಯಿಸಿ ಅರ್ಚಕನ ವೇಷ ಧರಿಸಿ ದೇವಸ್ಥಾನಕ್ಕೆ’ ಹೋಗಿ ಇನ್‌ಕಂ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾನೆ. ಈ ರೀತಿಯ ವೈರುಧ್ಯಗಳನ್ನು ಅಲ್ಲಲ್ಲಿ ಕತೆಯೊಳಗೆ ಹೆಣೆದು ಬದುಕಿನ ಚಲನೆಯನ್ನು ಸರಳವೆನ್ನಿಸದ ರೀತಿಯಲ್ಲಿ ಅವಲೋಕಿಸಲಾಗಿದೆ.

ಮುಂಬೈಯ ಆರ್ಥಿಕ ಜಂಜಾಟ, ಅಜ್ಞಾತವಾಸ ಅಭ್ಯಾಸವಾಗಿ ಹೋದ ಗಂಗಾಧರ – ಶ್ಯಾಮಲೆಯರು ನಿರೂಪಕ ಕರೆದರೂ ಊರಿಗೆ ಬಂದು ಕೃಷಿಯಲ್ಲಿ ತೊಡಗಲು ನಿರಾಕರಿಸುತ್ತಾರೆ. ಕೊನೆಯಲ್ಲಿ ನಿರೂಪಕ ತನ್ನ ತೋಟ ತಾನು ಕಾಪಾಡಿಕೊಳ್ಳಬೇಕೆಂದು ಒಣಗತ್ತಿರುವ ಗಿಡಗಳಿಗೆ ನೀರು ಹಾಕಲು ಹೋಗುತ್ತಾನೆ. ನಿರೂಪಕನಿಗೆ ಬೇಕೆನ್ನಿಸುವ ಆತ್ಮೀಯತೆ ಗಂಗಾಧರ – ಶ್ಯಾಮಲೆಯರಿಗೆ ಬೇಕೆನ್ನಿಸುವುದಿಲ್ಲ – ಬಹುಶಃ ಬದುಕಿನ ಜಂಜಾಟದಲ್ಲಿ ತಮ್ಮ ಅಂತರಂಗ ಸ್ವಾಸ್ಥ್ಯವನ್ನು ಅವರು ಕಳೆದುಕೊಂಡಿರಬಹುದು. “ಪತ್ರ, ಮಾತುಕತೆ ಮೊದಲಾದವುಗಳಿಂದ ಇಲ್ಲದ ಇಂಟಿಮೆಸಿ ಸೃಷ್ಟಿಸಲು, ಬಿಸಿ ಇಳಿದ ಸಂಬಂಧ ಉಳಿಸಲು ಸಾಧ್ಯವಿಲ್ಲ”, “ಸಮರಸದ ಸಂಬಂಧಕ್ಕಾಗಿ ನಾವು ನಮ್ಮ ಅಂತರಂಗದ ಜೊತೆ ಮಾತ್ರ ಪ್ರಯತ್ನಿಸಬಹುದು” ಎನ್ನುವುದು ನಿರೂಪಕನ ನಿರ್ಧಾರ.

ರಾಮಚಂದ್ರ ದೇವರಲ್ಲಿ ‘ದಂಗೆಯ ಪ್ರಕರಣ’ ದಿಂದ ‘ರಿಸಾರ್ಟ್’ ವರೆಗೆ ಆಗಿರುವ ಬದಲಾವಣೆ ಯುಗದ ಪ್ರಜ್ಞೆಯಲ್ಲಿ ಆಗಿರುವ ಬದಲಾವಣೆಯೂ ಹೌದು; ಸಾಹಿತಿಯೊಬ್ಬ ತನ್ನ ಕಾಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನೋಡುವ ದಾರ್ಶನಿಕನ ನೋಟಗಳೂ ಹೌದು. ಆಧುನಿಕ ಕನ್ನಡದ ಗದ್ಯ ಸಾಹಿತ್ಯದಲ್ಲಿ (ಮುಖ್ಯವಾಗಿ ಕಾದಂಬರಿಗಳಲ್ಲಿ) ಸಮಾಜವನ್ನು ಸುಧಾರಣೆಯ ಕಡೆಗೆ ಒಯ್ಯಲು ವಿದ್ಯಾವಂತನಾದ, ಆದರ್ಶವಾದಿಯಾದ ಯುವಕನೊಬ್ಬ ಮರಳಿ ಊರಿಗೆ ಬರುತ್ತಾನೆ.

ಈ ಪರಂಪರೆಯಲ್ಲಿಯೇ ಬಂದರೂ ನಾಯಕನ ಸೋಲಿನ ವಸ್ತುಸ್ಥಿತಿಯನ್ನು ತೋರಿಸಿದ; ಅಸಂಗತ ಸನ್ನಿವೇಶವಿದ್ದರೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದ್ದ ‘ದಂಗೆಯ ಪ್ರಕರಣ’ ನಮ್ಮ ಸಮಾಜದ ಒಂದು ಹಂತದ ಚಿತ್ರಣವಾದರೆ ಈ ಕಾಲದ ವಾಸ್ತವಗಳನ್ನು ‘ರಿಸಾರ್ಟ್’ ಕತೆ ಪರಿಶೀಲಿಸಿದೆ. ಜಾಗತೀಕರಣ ವಾಸ್ತವ; ಅದರಿಂದ ನಮಗೆ ಲಾಭವೇ ನಷ್ಟವೇ ಎಂಬ ಚಿಂತನೆಯೇ ಅದರ ಮೌಲ್ಯಮಾಪನಕ್ಕೆ ಎಲ್ಲರಿಗೂ ಇರುವ ಮಾನದಂಡ. ಹಾಗಾಗಿ ನಾವು (ಓದುಗರು) ಮೌಲ್ಯಮಾಪನ ಮಾಡಬೇಕಾದುದು ಈ ಮೌಲ್ಯಮಾಪಕರ ಉದ್ದೇಶ ಸಮಾಜದ ಒಟ್ಟು ಹಿತಕ್ಕೆ ಪೂರಕವಾದುದೇ, ಮಾರಕವಾದುದೇ ಎನ್ನುವುದನ್ನು. ಸುಬ್ರಾಯ ಧನಿಯಂಥವರ ಶ್ರೀಮಂತಿಕೆಯ ಅಹಂಕಾರ, ತುಘಲಕ್ ದರ್ಬಾರು ಕೊನೆಗೊಂಡದ್ದು, ತಿಮ್ಮಪ್ಪ ಗೌಡನಂಥ ಶೋಷಿತರು ಮಾಲಕರಾದದ್ದು ಕಂಡು; ತಿಮ್ಮಪ್ಪ ಗೌಡ ಮತ್ತು ಅವನ ಮಾವ ಡಿಫೆನ್ಸ್ ಮಿನಿಸ್ಟರ ವಂಚನೆ, ಕಪ್ಪು ಹಣ ನಮಗೆ ಕಾಣದೆ ಇರಬಾರದು. ಸುಬ್ರಾಯ ಧನಿಯ ಪೂಜೆಯವನ ನಿಜವಾದ ದೈವ ಪ್ರೀತಿ ಕಂಡು; ಕೋಡಂಗಿ ಮತ್ತು ಗಂಗಾಧರ ಹೊಟ್ಟೆ ಪಾಡಿಗಾಗಿ ಹಾಕುವ ಅರ್ಚಕ ವೇಷಗಳು ಕಾಣದೆ ಇರಬಾರದು. ಈ ವಾಸ್ತವದೆದುರು ಪ್ರಜ್ಞಾವಂತ ಮನುಷ್ಯನ ಆಯ್ಕೆಯನ್ನು ಒಂದು ಆಶಯವಾಗಿ ತೋರಿಸಿರುವ ಈ ಕತೆ ಒಂದು ಶ್ರೇಷ್ಠ ಕತೆಯೆನ್ನುವುದಕ್ಕೆ ಯಾವ ಅನುಮಾನವೂ ಇಲ್ಲ.

– 5 –
‘ಮಾತಾಡುವ ಮರ’ ಎಂಬ 41 ಪುಟಗಳ ‘ವೇಸ್ಟ್ ಲ್ಯಾಂಡ್’ ಥರದ ರಚನೆಯ ಶೀರ್ಷಿಕೆಯ ಬಗ್ಗೆ ಲೇಖಕರು ಹೀಗೆ ಟಿಪ್ಪಣಿ ಕೊಟ್ಟಿದ್ದಾರೆ : “ಗ್ರೀಸಿನ ಅಲೆಗ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಮಾತಾಡುವ ಮರವನ್ನು ಹುಡುಕಿಕೊಂಡು ಹೋದನೆಂದೂ ಅವನಿಗೆ ಅದು ಸಿಕ್ಕಿ ಮಾತಾಡದ್ದರಿಂದಲೇ ಭಾರತದಿಂದ ಹಿಮ್ಮೆಟ್ಟಬೇಕಾಯಿತು ಎಂದೂ ಒಂದು ದಂತಕಥೆಯಿದೆ. ಯುರೋಪು – ಭಾರತಗಳ ಎದುರಾಬದುರಿನಲ್ಲಿ ಮಾತಾಡುವ ಮರದ ಕತೆಗೆ ಪ್ರಾಮುಖ್ಯತೆಯಿದೆ ಎಂಬುದು ನನಗೆ ಇಲ್ಲಿ ಪ್ರಸ್ತುತ.”

ಈ ಕಾವ್ಯದ ಕೆಲವು ತುಣುಕುಗಳು ಹೀಗಿವೆ:

ಮಾತಾಡುವ ಮರ
(ಆಯ್ದ ಭಾಗಗಳು)

1
ಉದ್ಘಾಟನೆ ಅಹ ಉದ್ಘಾಟನೆ,
ಹೊಸ ರಿಸಾರ್ಟಿನ ಘನ ಉದ್ಘಾಟನೆ;

ಸ್ವಿಮ್ಮಿಂಗು ಪೂಲುಂಟು ಜೋಕಾಲಿ ಉಂಟು
ಗಿಡಮರ ಬಳ್ಳಿಯು ಬೀಸೋ ತಂಗಾಳಿ;

ಮಕ್ಕಳ ಆಟಕೆ ಸೀಸಾ ಥ್ರೋಬಾಲ್
ಕೇರಂ ಚೆಸ್ಸೂ ಸಿನೆಮಾಕೆ ಮಿನಿ ಹಾಲ್;

ಹಳೆ ಹೊಸ ವಸ್ತುವ ಮ್ಯೂಸಿಯಮ್ಮೂ
ಡಾನ್ಸಿಗೆ ಗೀತಕೆ ಥರಥರ ರಿದಮ್ಮೂ;

ಚೈನೀಸು ಪಂಜಾಬಿ ಚೆನ್ನೈ ಕಾಶ್ಮೀರಿ
ಯಾವುದೇ ಟೇಸ್ಬಿನ ಊಟಾ ಡ್ರಿಂಕು;

ಬನ್ನಿರಿ ಬನ್ನಿರಿ ರಿಸಾರ್ಟಿಗೇ
ರಿಲ್ಯಾಕ್ಸ್ ಮಾಡುವ ಹೊಸ ಆರ್ಟಿಗೆ;
ಉದ್ಘಾಟನೆ ನಾಳೆ ಉದ್ಘಾಟನೆ,
ಹೊಸ ರಿಸಾರ್ಟಿನ ಮಜ ಉದ್ಘಾಟನೆ.

2

ಏನೇ ಅದು ರಿಕ್ಷಾದಲ್ಲಿ ಕೂಗಿ ಹೇಳಿದ್ದು?
ಹಳೇ ಅರಮನೆ ರಿನೊವೇಟ್ ಆಯ್ತು,
ರಿಸಾರ್ಟ್ ಮಾಡ್ತಾರೇ ಅದನ್ನು ರಿಸಾರ್ಟ್ ಮಾಡ್ತಾರೆ,
ಉದ್ಘಾಟನೆ ಅದರ ಉದ್ಘಾಟನೆ ಹೇಳಿ
ಹಾಡು ಹೇಳಿದ್ರು ಮೈಕಲ್ಲಿ ಕೂಗಿ ಹೇಳಿದ್ರು.
ಅದಾ, ಗೊತ್ತು, ಅಮೇರಿಕದವನು, ಅರಮನೇನ ಕ್ರಯಕ್ಕೆ ತಗೊಂಡ,
ರಿಸಾರ್ಟ್ ಮಾಡ್ತಾನೇ ಅದನ್ನು ರಿಸಾರ್ಟ್ ಮಾಡ್ತಾನೆ.
ಒಳ್ಳೇದಾಯ್ತು. ಬೇರೆ ಬೇರೆ ಕೆಲಸಕ್ಕೇಂತ
ರಿಸಾರ್ಟ್‍ನಲ್ಲಿ ಹುಡುಗೀರು ಬೇಕು –
ಜಾಹೀರಾತು ಬಂದಿತ್ತು ಹಿಂದೆ.
ಸೇರೇ ಬಿಡ್ತೇನೆ ಒಳ್ಳೇ ಸಂಬಳ ಕೊಡ್ತಾರೆ.
ಅಮೇರಿಕ ಬುದ್ಧಿ. ಕೆಲಸಕ್ಕೇಂತ ತಗೊಂಡ ಮೇಲೆ
ಏನಕ್ಕೆ ಬಳಸ್ತಾರೆ ಯಾರಿಗ್ಗೊತ್ತು?
ಮರ್ಯಾದೆ ಇಲ್ಲ, ಮಾನ ಇಲ್ಲ, ಮದುವೆ ಆಗಲ್ಲ ಯಾರೂ
ಗಂಡು ಬರಲ್ಲ.
ಮನೆ ಮನೆ ತಿರುಗಿ ಈ ನಮೂನೇಲಿ
ಲಿಪ್‍ಸ್ಟಿಕ್ ಮಾರಿ ಪೌಡರ್ ಕ್ರೀಮು
ಟೈಪಿಸ್ಟ್ ಅಂತ ಟೈಪು ಕುಟ್ಟಿ
ಸೀರೆ ಅಂಗಡೀಲಿ ಸೀರೆ ಮಾರಿ
ಮರ್ಯಾದೆ ಇರುತ್ತಾ ಏನು ಮದುವೆ ಆಗುತ್ತಾ?
ರಿಸಾರ್ಟಲ್ಲಿ ಕೆಲಸ ಪಡೆದ್ರೆ
ದುಡ್ಡು ಆದ್ರೂ ಜಾಸ್ತಿ ಬಂದು
ಆಸೆ ಆದ್ರೂ ಚೂರು ತೀರಿ
ನೋಡೇ ಇಲ್ವೇನೇ ಮೃಗವ
ತಿಳಿದೇ ಇಲ್ವೇನೇ? –
ಚಿನ್ನದ ಬಣ್ಣದ ತಾರೆಯ ಕಣ್ಣಿನ
ಚಿಗರೆಯ ನಡಿಗೆಯ ಕಲಿಸುವ ಜಿಂಕೆಯ

ರೇಷ್ಮೆಯ ಸೀರೆಯ ಚಿನ್ನದ ಬಳೆಗಳ
ಸೋಫದ ಸೆಟ್ಟಿನ ಫ್ಲೈಟಿನ ಜರ್ನಿಯ
ಥರಥರ ವೇಷದಿ ಭಂಗಿಲಿ

ರಸ್ತೆಲಿ ನಡೆವಾಗ ಅಂಗಡಿ ಒಳ ಕಂಡ
ಬಸ್ಸಲ್ಲಿ ಕೂತಾಗ ಕಾರಾಗಿ ಹರೀತಿದ್ದ

ನೋಡೇ ಇಲ್ವೇನೇ ಮೃಗವ
ತಿಳಿದೇ ಇಲ್ವೇನೇ?

3

ಬ್ರಿಟಿಷರ ಓಡಿಸಿ ಸ್ವಾತಂತ್ರ್ಯ ತರಿಸಿ
ರಾಜತ್ವ ಹೋಗಿ ಲ್ಯಾಂಡ್‍ಲಾರ್ಡ್ ಆಗಿ
ಪ್ರೈವಿ ಪರ್ಸು ಗೇಣಿ ಮೇಲೆ
ಬದುಕ್ತಾ ದಿನವ ನೂಕ್ತಿದ್ದಾಗ

ಪ್ರೈವಿ ಪರ್ಸು ಕ್ಯಾನ್ಸಲ್ಲಾಯ್ತು;
ಗೇಣಿಶಾಸನ ಬಂದು ಇದ್ದ
ಗದ್ದೆ ತೋಟ ಒಕ್ಕಲಿಗಾಯ್ತು;
ಅರಮನೆ ಮಾತ್ರ ಅರಸರಿಗೆ ಉಳೀತು.

ಊಟಕ್ಕೇನು ಮಾಡಬೇಕು ನೆಂಟರ ಶುಂಠರ ಆಶ್ರಿತ ಜನಗಳ?
ಕೂಗಲಿಕ್ಕೇನು ಮಾಡಬೇಕು ಬಿರುದು ಬಾವಲಿ ಪಟ್ಟದ ಕಾಲದ?
ಉತ್ಸವಕ್ಕೇನು ಮಾಡಬೇಕು ವಷರ್ಂಪ್ರತಿಯ ದಸರಾ ಪೂಜೆಯ?

ಸಾಲ ತಂದು ತಂದು ತಂದು ಸಾಲ ಕೊಡುವ ಜನರು ಕೂಡ
ದೂರ ದೂರ ದೂರ ಹೋಗಿ
ಇರ್ತಿದ್ನೆ ಕೊಡದೇ ಲುಕ್ಸಾನಾಯ್ತು ಬಿಸಿನೆಸ್ಸಲ್ಲಿ
ಕೇಳೋದು ಹೆಚ್ಚೋ ನೀವು ನನಗೆ ಕೊಡೋದು ಹೆಚ್ಚೋ ನಾನು ನಿಮಗೆ
ಆದ್ರೆ ಏನು ಮಾಡ್ಲಿ ಹೇಳಿ ಅಸಿಸ್ಟೆಂಟು ಒಬ್ಬ ಲಪಟಾಯಿಸಿ ಎಲ್ಲ
ನಾನೇ ಪಾಪರ್ ಆಗಿದ್ದೇನೆ.
ಚಿನ್ನ ಮಾರಿ
ಹುಲಿಯ ಚರ್ಮ ಜಿಂಕೆ ಕೊಂಬು ಆನೆ ಕಾಲು ದಂತ ಚೂರಿ
ಖಡ್ಗ ಕೋವಿ ಕೂಡ ಮುಗಿದು ಪಾತ್ರೆ ಪಡಗ ಮಂಚ ಕುರ್ಚಿ
ಮಾರಾಟ ಮಾಡಿ ಹಾಗೂ ಹೀಗೂ ಜೀವನ ನಡೆಸ್ತಾ ಮನೇಲಿ ಯಾರು

ಮುದುಕಿ ರಾಣಿ

*****

ಕಂಡ್ರಕುಟ್ಟಿ ದರವೇಸಿ ಹಂದಿ ಹಡಬೇಗ್‍ಹುಟ್ಟಿದ ನಾಯೀಮಗನೆ
ಕಪಾಳಕ್ಕೆರಡು ಬಿಟ್ಟರೆ ನೋಡು ಕಚ್ಚೆಲಿ ಹೇತು ಊರೆಲ್ಲ ಗಬ್ಬು
ನಾಯೀ ಮಕ್ಕಳೆ ನಾ ಯಾರು ಗೊತ್ತಾ ಶಕ್ತಿಯ ನಿಮಗೆ ತೋರಿಸಿ ಕೊಡುವೆ
ದೇವರು ಯಾಕೆ ಇದು ನೋಡ್ಕೊಂಡು ಸುಮ್ಮನೆ ಕೂತ ದೇವ್ರೇ ಬಾರೋ
ಒದ್ದು ಕೆಡವ್ಯೇನು ಏ ನನ ಮಗನೆ ದೇವ್ರೆ ನೀನು ಏನಂದುಕೊಂಡಿ
ಭೂಮಿಯ ಮಡಚುವೆ ಚಾಪೆಯ ಹಾಗೆ ಸೂರ್ಯರ ಚಂದ್ರರ ನಿಲ್ಲಿಸಿ ಬಿಡುವೆ
ಬೆಳಕನ್ನು ಹಿಂಡುವೆ ತಾರೆಗಳದ್ದು ಕತ್ತಲೆಯನ್ನೇ ತುಂಬುವೆ ಎಲ್ಲೆಡೆ
ಎಲ್ಲಾ ಪೂರಾ ಹೊಸತೇ ಮಾಡುವೆ ಏ ನನ ಮಗನೆ ದೇವರೆ ಬಾರೋ

ಕೇಳಿದವರು ಏನು ಗಲಾಟೆ ಹೋ ರಾಜ ಎಂದು ಸೇರಿ,
ಅರಸ ಆದ್ರೂ ಬೈಗುಳ ಬಲ್ಲ,
ಯಾರು ಅರಸರೆ ನಾಯಿಂಡೆಮೋನೆ,
ನಾಯಿಂಡೆಮೋನೆ ನೀನೇ ಮಗನೇ,

ಅವನು ಓಡಿ ಗುಂಪು ಓಡಿ ದೂರ ನಿಂತು ನಗುತ್ತ ನೋಡಿ
ರಾಜಾಧಿರಾಜ
ಕೊತ್ತಂಬರಿ ಬೀಜ
ಸೂರ್ಯ ಸಮ ತೇಜ
ಖೋ ಖೋ ಖೋ ಖೋಜ

ರಾಜರು ಕಲ್ಲು ತಕ್ಕೊಂಡು ಬೀಸಿ ನಾಯಿಂಡೆಮೋನೆ ಎಂದಾಗ ಗುಂಪಿನ
ಎಂಟ್ಹತ್ತು ಜನರು ಒಟ್ಟಾಗಿ ಸೇರಿ ರಾಜಾಧಿರಾಜ ಪುನಃ ಸುರು ಮಾ

ಅಷ್ಟು ಹೊತ್ತಿಗೆ ಯಾರೋ ಹಿರಿಯರು ತಮಾಷೆ ಏನು ಹೋಗ್ತೀರೋ ಇಲ್ಲವೋ
ಎಂದು ಹೆದರಿಸಿ ಓಡ್ಸಿದರೂನು ಕೆಲವರು ಹೋಗಿ ಕೆಲವರು ಸೇರಿ
ಗುಂಪು ಉಳಿದು ಅರಸರು ಮನೆ ಕಡೆ ನಡೀತಾ ಬಂದಾಗ ಹಿಂದ್ಹಿಂದೆ ಬಂದು

ಮನೆಯ ಸೇರಿ ಮಣ್ಣಿನ ಚಿಟ್ಟೆಲಿ ಮಲಗಿ ಎದ್ದ ಮೇಲೆ ಕಂಡಿತು-

ಇದು ಅಲ್ಲ ಮಣ್ಣಿನ ಚಿಟ್ಟೆ ಸಿಂಹಾಸನವೇ ಎಂದು ಕಂಡು
ಮಾಸಲು ಅರಿವೆಯ ಕೊಡೆ ಇದಲ್ಲ ರಾಜದಂಡ ಎಂದು ಕಂಡು
ಹಾಳೆ ಮೊಟ್ಟಾಳೆ ಅಲ್ಲವೆ ಅಲ್ಲ ಚಿನ್ನದ ಕಿರೀಟ ಎಂದು ಕಂಡು
ಅಡಿಕೆ ಮರಗಳ ಗುಂಪಿದಲ್ಲ ಕವಾಯಿತಿಗೆ ನಿಂತ ಯೋಧರ ಸಾಲು

ಈಗಲೊ ಅರಸ
ಬೈಯ್ಯುತ್ತ ಅಲೆವ;
ಕೋಲನು ತಿರುಗಿಸಿ
ನೆಲಕ್ಕೆ ಬಡಿವ;
ಉರಿಯನು ಹೆಚ್ಚಲು
ಬಾನಿಗೆ ಹೇಳುವ;
ಪ್ರಳಯವ ಸುರಿಸಲು
ಮೋಡಕ್ಕೆ ತಿಳಿಸುವ:

ಸಿಡಿಲೇ ಸಿಡಿಸಿಡಿ
ಜಗತ್ತೆಂಬ ಗೋಲವ
ಪುಡಿ ಪುಡಿ ಮಾಡು;
ಕೃತಫ್ನ ಮನುಕುಲ
ಕುಡಿಗಳ ಸುಡುಸುಡು;
ನಿವರ್ಂಶ ನಿರ್ಬೀಜ
ಮಾಡು ಬ್ರಹ್ಮಾಂಡ.

******

ಆ ರಾಜನ ಇಬ್ಬರು ಮಕ್ಕಳಲ್ಲಿ ಒಬ್ಬ
ಈ ನಾಡ ತಂಟೆ ಬೇಡವೆ ಬೇಡ
ಇಲ್ಲಿಂದೇನೂ ಬೇಡವೆ ಬೇಡ

ಅಮ್ಮನ ನೆನಪು ಅಪ್ಪನ ನೆನಪು
ಅರಮನೆ ಒಳಗಿನ ಹಿರಿಯರ ನೆನಪು
ಕಕ್ಕಸು ಮಾಡ್ಸಿದ ನರ್ಸಿನ ನೆನಪು
ಮೀಸಿದ ಬೆಳೆಸಿದ ಬಾಯಮ್ಮ ನೆನಪು
ಮೆಟ್ಟಿಲು ಇಳಿದರೆ ಕುದುರೆ ಸಾರೋಟು
ಕೇಸರಿಭಾತು ಲಾಡು ಚಿರೋಟು

ಒಂದರ ನೆನಪೂ ಬೇಡವೆ ಬೇಡ

ಎಂದು ದೃಢವ ಮಾಡಿಕೊಂಡು
ಅಮೆರಿಕನ್ ಯುನಿವರ್ಸಿಟಿಲಿ ಓದಲು ಹೋಗಿ
ಡಿಗ್ರಿ ಪಡೆದು ಕೆಲಸಕ್ಕೆ ಸೇರಿ
ಅಮೆರಿಕನ್ ಹುಡುಗೀನೆ ಮದುವೆ ಆಗಿ

******

ಮುಂಬೈಯಲ್ಲಿ ವಾಸಿಸುತ್ತಿರುವ ಅರಸನ ಇನ್ನೊಬ್ಬ ಮಗ
ತಾಯಿ ಕೂಡ ಸತ್ತ ಮೇಲೆ
ಗೋಡೆ ಜರಿದು ಬೀಳಲಾದ
ಮಾಡು ಕುಂಬು ಕುಂಬು ಆದ
ಅರಮನೆ ಮಾರಿ
ಪಾಟ್ರ್ನರ್ ಸೇರಿ
ಭುಜಬಲ ಚಕ್ರವರ್ಶಿ ಆಗುವ ಬದಲು
ಕಲಾಚಕ್ರವರ್ಶಿ ಆಗಬೇಕು

ಎಂದು ಯೋಚನೆ ಮಾಡಿಕೊಂಡು
ವಿದ್ಯುಚ್ಚೋರ ಕಾರ್ತಿಕ ರಿಸಿ ಕತೆ
ಸಿನೆಮಾ ತೆಗೆದ. ಅವನೇ ಹೀರೋ.
ಇಂದಿನ ಕಾಲದ ಮಿರರ್ ಎಂದು
ತಿಳಿದವರೆಲ್ಲಾ ಹೇಳಿದರೂನು
ಡಿಸ್ಟ್ರಿಬ್ಯೂಟರ್ಸ್ ಕಂಡೂ ಕಂಡು
ಥಿಯೇಟರ್‍ನಿಂದ ಥಿಯೇಟರ್‍ಗಲೆದು
ಎಷ್ಟೇ ಪ್ರಯತ್ನ ಪಟ್ಟ್ಟರು ಕೂಡ
ಸಿನೆಮಾ ರಿಲೀಸ್ ಆಗಲೆ ಇಲ್ಲ.

ನಾಲ್ಕು ಸಾವಿರ ಉಂಟು ಇನ್ನು ಆರು ತಿಂಗಳಿಗೆ ಸಾಕಾದೀತು;
ಮೂರು ಸಾವಿರ ಉಂಟು- ಅರೇ- ಹದಿನೈದು ದಿನಕ್ಕೇ ಸಾವಿರ ಮುಗೀತು;
ಎರಡು ಸಾವಿರ ಉಂಟು ಇನ್ನು -ಬಡ್ಡಿಗೆ ಯಾರು ಸಾಲ ಕೊಟ್ಟಾರು-
ಮಾರವಾಡಿಯು ಕೊಟ್ಟೇ ಕೊಡುವ- ಬಡ್ಡಿಯ ಮುರಕೊಂಡು ಉಳಿದದ್ದು ಕೊಡುವ-
ವಸೂಲಿಗೆ ಯಾವಾಗ ಬಂದಾನೊ ಏನೋ – ನೆರೆಕರೆಯವರು ಕೇಳುವ ಹಾಗೆ
ಬೈದೂ ಕಿರುಚಿ ವಸೂಲಿ ಮಾಡ್ತಾನೆ ಸಿಕ್ಕಿದ ಸಾಮಾನು ಎತ್ಕೊಂಡ್ಹೋಗಿ-

ಸಿನೆಮಾದಲ್ಲಿ ಎಕ್ಸ್‍ಟ್ರಾ ಆಗಿ ಟೀವಿಯಲ್ಲಿ ಯಾವ್ದಾದ್ರು ರೋಲು
ಸಿಕ್ಕದೆ ಏನು ಅಂತಂದ್ಕೊಂಡು ಗತ್ತಿನಿಂದ ಹೋಗಿ ಕೇಳಿ
ಸಿನೆಮಾ ಕೂಡ ಮಾಡಿದ್ದೇನೆ ಆಲ್ಬಂ ನೋಡಿ ಕ್ಯಾಸೆಟ್ ಕೊಡಲೇ,
ಹೇಳಿ ಕಳಿಸ್ತೇವೆ ನೀವು ಬೇಕಾದ್ರೆ ಹೊರಗಡೆ ಈಗ ಕಾಯ್ತಾ ಇರ್ರಿ,

ಹೊರಗಡೆ ಇದ್ದು ಕಾಯ್ತಾ ಕಾಯ್ತಾ ರೋಲು ಇದ್ರೆ ಕೊಡಿ ಸಾರ್ ಎಂದು
ಪ್ಲೀಸ್ ಸಾರ್ ರೋಲು:
ಅವಕಾಶ ಸಾರ್ ಮರೆಯೋದಿಲ್ಲ ಇದ್ರೆ ಒಂದು ರೋಲ್ ಕೊಡಿ ಸಾರ್
ಹೇಗಾದರೂ ಮಾಡಿ ಎಡ್ಡಸ್ಟ್ ಮಾಡಿ ದಯವಿಟ್ಟು ಸಾ ಸಾರ್ ಒಂದು ರೋಲು ಕೊಡ್ರಿ

ಅಂತೂ ಕೊನೆಗೆ ಒಂದೆರಡು ಸಿಕ್ಕಿ
ದಿನಾ ಹೋಗ್ತಾ ಬರ್ತಾ ಹೀಗೇ

*****

6
ರಿಸಾರ್ಟ್ ಶೃಂಗಾರ ಆಗುತ್ತ ಇದ್ದಾಗ

ಅರಮನೆ ಹಿಂದಿನ ಕತೆ ಕತೆ ಕಾಂಚಣ
ಜನ ಜನ ನಡು ನಡು ಸುತ್ತುತ್ತ ಸುಳಿಯುತ್ತ
ಇಂತಿಂತು ಪರಿಪರಿ ಹೊರಬರುತ್ತಿತ್ತು:

ದೂರದ ಊರಲ್ಲಿದ್ದನು ಒಬ್ಬನು
ಬಿಲ್ಲನು ಬಾಣವ ಕತ್ತಿಯ ಹಿಡಿದನು
ಐದಾರು ಜನರದ್ದು ಗುಂಪೊಂದು ಕಟ್ಟಿದ
ಬೇಟೆಯ ಆಡುತ್ತ ಆಡುತ್ತ ಬಂದನು
ಇಲ್ಲಾಗ ಕಂಡನು ನೀರನು ನೆರಳನು.

ಕರಡಿಯು ಎದುರು ಬಂದಿತ್ತಾಗ
ಕರಡಿಯನ್ನು ಹೊಡೆದು ಕೊಂದ;
ಹಂದಿ ಎದುರು ಬಂದಿತ್ತಾಗ
ಹಂದಿಯನ್ನು ಗುದ್ದಿ ಕೊಂದ;
ಹುಲಿಯು ನೆಗೆದು ಬಂದಿತ್ತಾಗ
ಹುಲಿಯ ನಖದಿ ಸಿಗಿದು ಕೊಂದ;
ಚಿರತೆ ಪುಟಿದು ಬಂದಿತ್ತಾಗ
ಚಿರತೆಯನ್ನು ಇರಿದು ಕೊಂದ;
ಹಾವುಗಳನ್ನು ಸುಟ್ಟು ಕೊಂದ,
ಏಡಿ ಚೇಳು ಮೆಟ್ಟಿ ಕೊಂದ,
ಗಿಡಗಳ ಬೆಳೆಯಿಸಿ ಕಾಲುವೆ ತೋಡಿಸಿ
ರಸ್ತೆಯ ಮಾಡಿಸಿ ಅಂಗಡಿ ನಿರ್ಮಿಸಿ
ಶಾಲೆಯ ಕಟ್ಟಿಸಿ ಪುಸ್ತಕ ಬರೆಯಿಸಿ

ರಾಜ್ಯವ ಕಟ್ಟಿದ; ಅರಮನೆ ಕಟ್ಟಿದ;
ವೈರಿಯ ಎಳೆತಂದು ನೊಗಕ್ಕೆ ಕಟ್ಟಿದ;
ಮಕ್ಕಳು ಹುಟ್ಟಲು ತೊಟ್ಟಿಲು ಕಟ್ಟಿದ,

ಮಕ್ಕಳ ಒಳಗೇ ಪೈಪೋಟಿ ಬೆಳೆದು
ಒಬ್ಬನು ಅಪ್ಪನ ಜೈಲಿಗೆ ತಳ್ಳಿ
ತಾನೇ ರಾಜಾಂತ ಘೋಷಿಸಿಕೊಂಡು
-ಸಾವಿರ ರೂಪದ ಸಾವಿಗೆ ಶರಣು
ಕರುಣೆಲಿ ಕರೆದೊಯ್ಯೊ ಪ್ರಭುವೇ ನಿನ್ನ
ಪಾದ ಬೆಳೆಸಿತ್ತ ನಿಧಾನ-
ಜನಗಳು ಪಟ್ಟಾಭಿಷೇಕಕ್ಕೆ ಬಂದು
ಶವ ಮೆರವಣಿಗೆ ಬೊಜ್ಜದ ಊಟ
ಮದುವೆಯ ಊಟ ಪ್ರಸ್ತದ ಊಟ
ನಾಮಕರಣದೂಟ ಆಟ ಪಾಠ

ಹೀಗೇ ನಡೀತಾ ಹೋಗ್ತಿದ್ದಾಗ
ಬ್ರಿಟಿಷರು ಬಂದು ರಾಜ್ಯವ ಪಡೆದು
ಅವರದ್ದೇ ಸೈನ್ಯ ಅವರದ್ದೇ ಭಾಷೆ
ಅವರದ್ದೇ ರೀತಿ ಅವರದ್ದೇ ನೀತಿ

ಎಲ್ಲಾ ಕಡೆಗೆ ತುಂಬ್ಕೊಂಡಿರಲು
ಬುಲಾವ್ ಬಂತು:
ಒಪ್ಪಿಸು ದೇಶ; ಇಲ್ಲದೆ ಹೋದರೆ
ಮಾಡ್ತೇವೆ ನಾಶ.

ರಾಜರು ಮಂತ್ರಿ ಸೇನಾಧಿಪತಿ ವಿಚಾರಿಸಲು ಅವರಂದರು:
ಶಸ್ತ್ರಾಭ್ಯಾಸ ಮಾಡದೆ ವರ್ಷಾನುಗಟ್ಟಲೆ ಆಯ್ತು;
ಯುದ್ಧಶಸ್ತ್ರಗಳು ತುಕ್ಕು ಹಿಡಿದಿವೆ;
ಕೆಲವು ತಂತ್ರ ಬಳಸೋದು ಹೇಗೇಂತ ಗೊತ್ತಿಲ್ಲ;
ಬರೆದಿಟ್ಟದ್ದು ಓದೋರಿಲ್ಲ, ಓದಿ ಹೇಳಿದರೂ ಅರ್ಥ ಆಗಲ್ಲ;
ಆದ್ದರಿಂದ, ಯುದ್ಧ ಬೇಡ, ಮೇಲುಸ್ತುವಾರಿ ನೀವು ನೋಡ್ಕೊಳ್ಳಿ,
ಮಾಂಡಲೀಕರಾಗಿ ಮುಂದುವರೀತೇವೆ ಅಂತ ವಿನಂತಿಸಿಕೊಳ್ಳೋಣ ಅಂದರು.

ಅದರಂತೆ ರಾಜರು

ಬ್ರಿಟಿಷರ ಭಾಷೆ ಕಲಿತ್ಕೊಂಬಿಟ್ರು
ಅವರದ್ದೆ ಡ್ರೆಸ್ಸು ಹಾಕ್ಕೊಂಬಿಟ್ರು
ಅವರ ಹಾಗೇ ಹೇರಿನ ಸ್ಟೈಲು
ಅವರ ಹಾಗೇ ಮೀಸೆಯ ಹುರಿಯು
ಅವರ ಹಾಗೇ ನಿಲ್ಲೋ ಕ್ರಮವು
ಅವರದ್ದೇ ಊಟ ಅವರದ್ದೇ ತಿಂಡಿ
ಕನ್ನಡಿ ಮುಂದೆ ನಿಂತು ಪ್ರಾಕ್ಟೀಸು
ಕನ್ನಡ ಮರೆಯುವ ಹಾಗೆ ಸಲೀಸು.

ನಾಕೈದು ಜನರ ಜೊತೆ ಮಾಡ್ಕೊಂಡು
ಬ್ರಿಟಿಷ್‌ ದೊರೆಗೆ ವಿರುದ್ಧ ಹೋಗಿ
ಅಂತ ಯಾರು ಏನೇ ಅಂದರು
ನಾವ್ ಮಾತ್ರ ಹಾಗೆ ಮಾಡೋರಲ್ಲ
ನಿಮಗೇ ನಮ್ಮದು ಪೂರಾ ಸಪೋರ್ಟು

ಅಂತ ದೊರೆಗಳಿಗೆ ತಿಳಿಸಿ ಬರೋಣ
ಅಂದ್ಕೊಂಡು ಮುಂದಕ್ಕೆ ಹೋಗ್ತಿದ್ದಾಗ

ಕಾಡು ಎಂದರೆ ಎಂಥಾ ಕಾಡು-

ಹುಲಿಗಳು ಚಿರತೆ ಆನೆಯು ತೋಳ
ಮುಂಗುಸಿ ಸಿಂಹ ಹಂದಿಯು ಮೊಲವು
ಸುಳಿ ಹೊಳೆ ಗುಡ್ಡೆ ಬಂಡೆಯು ಕಣಿವೆ
ತುರಿಸಣಿ ಬಳ್ಳಿ ಚೀಮುಳ್ಳು ಬಲ್ಲೆ
ಚಿರ್ಪಿನ ಮರಗಳು ಅಳು ನಗು ಹಕ್ಕಿ
ಜಲಪಾತ ಬೀಳ್ತಿದೆ ಉಕ್ಕೀ ಸೊಕ್ಕಿ-

ಹೀಗೇ ಕಾಡಲ್ಲಿ ಅಲೀತಾ ಇರಲು

ಮರದ ಮೇಲೊಬ್ಬನು ಉರ್ಬುಳಿ ಮನುಷ್ಯ
ಇವರನ್ನು ಕಂಡವ ಹತ್ತಿರ ಕರೆದ
ಕೊಂಬೆಂದ ಕೊಂಬೆಗೆ ಪುಟುಪುಟು ಹಾರಿದ
ಕೆಳಗಡೆ ಜಿಗಿದ ತಿತ್ತಿರಿ ತಿರುಗಿದ
ಬಳಿಕಿಂತೆಂದ:

ಹೀಗೇ ಕಾಡಲ್ಲಿ ಹೋದರೆ ಮುಂದೆ
ಒಂದೇ ಒಂದು ಉಂಟು ಮರ;
ಹಾವುಗಳೆಲ್ಲಾ ಒಟ್ಟಿಗೆ ಹೆಣೆದು
ಆಗಿದೆ ಅದರ ಬುಡ;
ಕೊಂಬೆಗೆ ನೇತಿದೆ ಟಗರು ಮುಖ;
ಏಳು ಜನ ಮಾತೆಯರು ಆ ಮರದ ಮೇಲೆ ಪವಡಿಸಿದ್ದಾರೆ;
ಅವರೂ ನೋಡುವುದಕ್ಕೆ ಹಣ್ಣಿನಂತಿದ್ದಾರೆ;
ಅವರ ಮೊಲೆಗಳಿಂದ ಹಾಲು ಹರಿಯುತ್ತಿದೆ;
ನೋಡುವುದಕ್ಕೆ ಆ ಮರವೂ ಎಲ್ಲಾ ಮರಗಳಂತೆ ಕಾಣುವುದು;
ಆದರೆ ಅದನ್ನು ಮಾತಾಡಿಸಿದರೆ
ಯಾವುದೇ ಭಾಷೆಯಲ್ಲಿ ಮಾತಾಡಿಸಿದರೂ
ಹಿಂದೆ ನಡೆದದ್ದೆಲ್ಲವನ್ನೂ ನಿನಗೆ ಹೇಳುವುದು;
ಹಿಂದಿನವರು ತಿಳಿದದ್ದನ್ನೂ ಬರೆದಿಟ್ಟದ್ದನ್ನೂ ಯೋಚಿಸಿದ್ದನ್ನೂ
ಯೋಚನೆಗೆ ಬಾರದೇ ಮನಸ್ಸೊಳಗೇ ಉಳಿದದ್ದನ್ನೂ
ನಿನಗೆ ತಿಳಿಸುವುದು; ಆ ಮೇಲೆ ಶತ್ರುವಿನ ಎದುರು ನಿಂತರೆ
ಅವರ ಶಕ್ತಿ ನಿಂದಾದೀತು; ಬಳಿಕ
ನಿನ್ನ ಯಾರೂ ಗೆಲ್ಲ.

ಹೀಗೆಂದು ಅಂದು ಮರವನು ಹತ್ತಿ
ಗೆಲ್ಲಿಂದ ಗೆಲ್ಲಿಗೆ ಹಾರುತ್ತ ಹೋದನು
ಎತ್ತೋ ಏನೋ ಕಾಡಿನ ವಾಸಿ.

ಅಹಾ ಇನ್ನು ಹೆದರ್ಬೇಕಿಲ್ಲ,
ನನ್ನನ್ನು ಗೆಲ್ಲಲು ಯಾರಿಂದ್ಲು ಆಗದು –

ಹೀಗಂತ ಕಾಡಲ್ಲಿ ಮುಂದಕ್ಕೆ ಹೋಗಿ
ಒಂದೊಂದಾಗಿ ಮರಗಳ ಕಂಡು
ಕನ್ನಡ ಕೊಂಕಣಿ ತಮಿಳು ಮಲೆಯಾಳ
ಹಿಂದಿಯೊ ತುಳುವೋ ಕೊಡಗೋ ಉರ್ದೋ
ಕೈಕರಣವೊ ಚೇಷ್ಟೆಯೊ ನೋಟವೊ ನಗೆಯೋ
ಯಾವುದೆ ಭಾಷೆಲಿ ಮಾತಾಡಿಸಿದರೂ
ಮರಗಳು ಸುಮ್ಮನೆ ನೋಡ್ತಾ ಇದ್ದವು.
ಎಲ್ಲಾ ಮರಗಳ ಕಡಿದೇ ಬಿಡುವ,
ಮಾತಾಡುವ ಮರ ಏಟಿಗೆ ಖಂಡಿತ
ಚೀರಿಯೆ ಚೀರುವುದು.

ಹೀಗೆಂದು ಮರಗಳ ಕಡಿಸೀ ಕಡಿಸಿ
ಹಕ್ಕಿಗಳು ಚೀರಿಕೊಂಡು ಹಾರಿಹಾರಿ ಬಂದವು;
ಮೃಗಗಳು ಘರ್ಜಿಸಿ ಓಡಿ ಓಡಿ ಬಂದವು.

ನಗರದ ಮೇಲೆಲ್ಲ ಹಕ್ಕಿಗಳು
ಮನೇಲಿ ರಸ್ತೆಲಿ ಪ್ರಾಣಿಗಳು
ಹಾವೂ ಮುಂಗುಸಿ ಚೇಳುಗಳು
ಹುಲಿ ಸಿಂಹ ಚಿಂಪಾಂಜಿ ಕೋತಿಗಳು.

******
7

ಉದ್ಘಾಟನೆಗೆ ಬಂದಿದ್ದ ಗೆಸ್ಟ್‌ಲಿಸ್ಟು ಇಂತುಂಟು:
ಡಿಫೆನ್ಸ್ ಮಿನಿಸ್ಟ್ರು ಹಾಗೂ ಅವರ ಮಿಸೆಸ್ಸು;
ಟ್ಯುಟೋರಿಯಲ್ ಕಾಲೇಜು ನಡೆಸುತ್ತಿದ್ದ ವೀಸಿ;
ಸುಪಾರಿ ಕೊಲೆ ಕನ್ಸಲ್ಟೆನ್ಸಿ ಎಕ್ಸ್‌ಪರ್ಟು;
ಕ್ರೈಂ ಪತ್ರಿಕೆಯ ಎಡಿಟರ್ ಹಾಗೂ ಅದರ ಓನರ್ರು
ಅಂಡರ್‍ಗ್ರೌಂಡು ಡಾನು;
ಅವರು ಫಂಡ್ ಮಾಡುತ್ತಿದ್ದ ಎನ್‌ಜಿಓದ ಛೇರ್ಮನ್ನು;
ದಂತಚೋರನಾಗಿದ್ದು ಇಲೆಕ್ಟನ್ನಿಗೆ ನಿಂತು ಗೆದ್ದಿದ್ದ ಎಂಎಲ್‍ಎ;
ಅವನು ಗೆಲ್ಲಲು ಕಾರಣನಾದ ಆ ಕ್ಯಾಸ್ಟಿನ ಮಠಾಧಿಪತಿ, ಹಾಗೂ ಪರಿವಾರ
ಸಂಪುಟ ದೇವರ ಸಹಿತ;
ಅಕ್ಕಮಹಾದೇವಿ ಗಂಡನ ಮನೆಯಿಂದ ಕಲ್ಯಾಣಕ್ಕೆ ಹೋಗುವಾಗ ದಾರಿಯಲ್ಲಿ ರೇಪ್ ಆಗಿದ್ದಳು,
ಹಾಗಾಗಿಯೇ ಅಲ್ಲಮನ ಹತ್ತಿರ ಹೋದಾಗ ಅವಳ ಮೈ ಮೇಲೆ ಬಟ್ಟೆ ಇರಲಿಲ್ಲ
ಎಂದು ಬರೆದಿದ್ದ ಪಂಡಿತ ಒಬ್ಬ;
ವೈಟ್‍ಮೇನ್ಸ್ ಬರ್ಡನ್ನು ಮುಗಿದಿಲ್ಲ ಇನ್ನೂನು
ಆದ್ದರಿಂದಲೆ ಇಂಥ ರಿಸಾರ್ಟ್ ಇರಬೇಕು, ಅಮೆರಿಕನ್ಸೂ ಬೇಕು
ಎಂದು ಪ್ರತಿಪಾದಿಸುವ ಪ್ರೊಫೆಸರ್ರು ಮತ್ತೊಬ್ಬ;
ರಿಸಾರ್ಟ್‍ಗೆ ಸೂಳೇರ ಸಪ್ಲೈ ಮಾಡುವ ಕಂಟ್ರಾಕ್ಟ್ ಹಿಡಿಯ ಬಂದಿದ್ದ ಮಗುದೊಬ್ಬ.

ಅರಮನೆಯ ಸುತ್ತ ಬೀದಿಗಳಿಂದ ಗೆಸ್ಟು ಬರುವೆಡೆಯಿಂದ
ಭಿಕ್ಷುಕ ರೋಗಿ ವೃದ್ಧರ ಗುಡಿಸಿ ಸಾರಿಸಿ ರಂಗೋಲಿ ಇಟ್ಟಿದ್ದರೂ
ಟರ್ಮಿನಲ್ ಸೀಡ್ಸ್ ಮಾಡಿ ರೈತರನ್ನು ದಾಸ್ಯಕ್ಕೆ ತಳ್ಳೋ
ಅರಮನೇನ ಹೋಟೆಲ್ಲು ಮಾಡಿ ಹೆರಿಟೇಜ್ ನಾಶ ಮಾಡೋ
ಇಂಥಾ ಕಂಪೆನಿ ಪೇಟ್ರನೈಸ್ ಮಾಡೋ ಸರಕಾರಕ್ಕೆ ಧಿಕ್ಕಾರ

ಅಂತ ಪ್ಲಕಾರ್ಡ್ ಹಿಡಿದ ಅರಮನೆಯ ಮಾಜಿ ಒಕ್ಕಲು ಜನರು
ನಮ್ಮ ಭೂಮಿ ನಮ್ಮ ನೆಲವ ಕಸಿದುಕೊಂಬ ಹೆರರ ಬಲವ
ಓಡಿಸಿ ಓಡಿಸಿ ಇಲ್ಲಿಂದೀಗ ಓಡಿಸಿ
ಎಂದು ಕೂಗೆ ಪೊಲೀಸರು ಎಳೆದುಕೊಂಡು ಆಚೆ ಹೋಗಿ
ವ್ಯಾನಿನಲ್ಲಿ ತುಂಬಿ ಎಲ್ಲೊ ಊರ ಹೊರಗೆ ಬಿಟ್ಟು ಬಂದು
ತೆವಳಿಕೊಂಡೊ ನಡೆದುಕೊಂಡೊ ಹೇಗಾದರೂ ಬರ್ರಿ ಎಂದು

ಡ್ರಿಂಕ್ಸ್ ಡಿನ್ನರ್ ಸುರು ಆಗಿ

ಹೊಗಳಿ ಮಿನಿಸ್ಟ್ರ ನಾಯಿ ಬೆಕ್ಕು
ಅಯ್ಯೊ ಎಂಥಾ ಮಾತು ಏನು ಕಾವ್ಯ ಎಂಥಾ ಜ್ಞಾನ
ಸೈಟೊ ಮನೆಯೊ ಹೋಲ್‍ಸೇಲ್ ಡೀಲೊ ತಮ್ಮ ಕರುಣೆ ಅಹಾ ಧನ್ಶ
ಎಂದು ಮಾತು ಆಡುತ್ತಿರಲು
ಪ್ರೊಫೆಸರ್ ಸಾಹೇಬರು ಬುದ್ಧಿ ಜೀವಿ
ಸ್ಕಾಚು ಚಿಕನ್ನು ಕುಡಿದು ತಿಂದು
ಡಾಬು ಸಡಿಲಿದ ತುರುಬು ಬಿಚ್ಚಿದ ತೊಟ್ಟ ಮೇಲುದ ಕೆಳಗೆ ಜಾರಿದ
ಕುಂಭ ಕುಚ ನಿತಂಬಿನಿ ಘನರು
ಸೋಫ ದಿಂಬುಗಳ ತಬ್ಬಿ ಗೊರೆಯುತ್ತ ಬಿದ್ದಾಗ
ಮುಂದೊತ್ತಿ ಬರುತ್ತಿರಲು ವಿಟಗಡಣ ನಡು ಇರುಳು

ಇತ್ತ ವೇದಿಕೆ ಮೇಲೆ ಹೊರಗಡೆ

ಯವರ್ ಎಟೆನ್ಶನ್ ಫ್ಲೀಸ್–
ಅಮೆರಿಕಾ ಪ್ರಜೆ ಮೇರಿ ಶೆರಡನ್ ಈಗ
ಜಗತ್ತಿನಾದ್ಯಂತ ಒಂದೇ ಭಾಷೆ ಒಂದೇ ಕಲ್ಚರ್ ಒಂದೇ ಸರಕಾರ
ಇರೋ ಅಗತ್ಯದ ಬಗ್ಗೆ ಭಾಷಣ ಮಾಡ್ತಾರೇ –
ಯುವರ್ ಎಟೆನ್ಶನ್ ಪ್ಲೀಸ್ –
ನೌ ವಿ ಹೇವ್ ಟ್ರೈಬಲ್ ಡಾನ್ಸ್ ಫ್ರಮ್ ಎನ್ ಓಲ್ಡ್ ವುಮನ್ ಫ್ರಮ್ ಎ ಜಂಗ್ಣ್;
ಯುವರ್ ಎಟೆನ್ಶನ್ ಪ್ಲೀಸ್ –
ನೌ ಪ್ರಾಕ್ಟಿಕಲ್ ಡೆಮಾನ್‍ಸ್ಟ್ರೇಶನ್ ಆಫ್ ಇಂಕ್ರೀಸಿಂಗ್ ಪ್ರೊಡಕ್ಷನ್ ಬೈ ಮೆಡಿಟೇಶನ್
ಯುವರ್ ಎಟೆನ್ಶನ್ ಪ್ಲೀಸ್ –
ನೌಯುಸೀ ಮಹಾತ್ಮಾ ಗಾಂಧಿ ಸ್ಟೇಂಡಿಂಗ್ STILL ಲೈಕ್ ಎ ಸ್ಟಾಚ್ಯೂ
ವಾಟ್ ಎ ಸ್ಪ್ಲೆಂಡಿಡ್ ಪಾರ್ಟಿ
ವಾಟ್ ಎ ನೈಸ್ ಜಂಟಲ್‍ಮನ್
ವಂಡರ್‍ಫುಲ್ ಮಾರ್ವೆಲಸ್

ಬಕಪ್ ಹುರ್ರಾ ಬಕಪ್ ಹುರ್ರಾ ಬಕಪ್ ಬಕಪ್ ಹುರ್ರಾ.

********
8
ಹೊಸತೇ ಒಂದು ನಾಗರಿಕತೆಯ ಕಟ್ಟುತ್ತೇನೆ;
ವೇಷ ಮುಖವಾಡಗಳ ಕಿತ್ತು ಎಸೆಯುತ್ತೇನೆ

ಎಂದು ಕಾರ್ತೀಕ, ಹೇಗೆ ಮುಂದುವರಿಯಬೇಕು ಎಂದು

ಭಿಕ್ಷುಗಳ ಕೇಳಿದನು;
ರೇಶ್ಮೆ ವಸ್ತ್ರ ಚಿನ್ನದ ರುದ್ರಾಕ್ಷಿ ಧರಿಸಿ
ಹುಲಿಚರ್ಮದ ಮೇಲೆ ಕೂತ ಮಠಾಧಿಪತಿಗಳ ಕೇಳಿದನು
ಶರಣು ಶರಣು ಎಂದು ತಿರುಗುತ್ತಿದ್ದ ಶರಣ ಸಂದೋಹ ಕೇಳಿದನು;
ಮುಲ್ಲಾಗಳನ್ನೂ ಪಾದ್ರಿಗಳನ್ನೂ ಕೇಳಿದನು.

ಅವರಲ್ಲೊಬ್ಬ ನಿಧಾನಕ್ಕೆ ಯೋಚಿಸಿ ಉತ್ತರಿಸುತ್ತೇನೆ ಎಂದ;
ಇನ್ನೊಬ್ಬ ಕಣ್ಣು ಮುಚ್ಚಿ ಕೂತ; ಮತ್ತೊಬ್ಬ
ಯುವರಾಜರು ಮುಂದೆ ರಾಜರಾದಾಗ
ಅಧಿಕಾರ ತತ್ತ್ವ್ವಜ್ಞಾನ ಸಂಗಮಿಸಿ ಧರ್ಮಸ್ಥಾಪನೆ ಆಗುತ್ತದೆ ಎಂದ.

ತೃಪ್ತನಾಗದ ಕಾರ್ತೀಕ
ಹಿಂದೆ ನಾಡಿನಿಂದ ಬಹಿಷ್ಟತರಾದ ಎಂಟು ಜನ ಭಟಾರಕರ ಕರೆತಂದು
ಮರೆತು ಹೋದ ಪರಂಪರೆಗಳನ್ನು ಪ್ರಾರಂಭಿಸಿ
ಹೊಸ ನಾಗರಿಕತೆ ಚಿಗುರಬೇಕು ಎಂದು
ಅವರನ್ನು ಹುಡುಕಿಸಲು

ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು;
ಮೂವರು ಪೊಲೀಸ್ ವಿಚಾರಣೆ ಸಮಯ ಸತ್ತಿದ್ದರು;
ಈ ಭ್ರಷ್ಟ ವ್ಯವಸ್ಥೆ ಬದಲಿಸೋಣ ಎಂದು ಪ್ರಚಾರ ಮಾಡುತ್ತಿದ್ದ ಮತ್ತೊಬ್ಬನ್ನ
ಹುಚ್ಚು ಹಿಡಿದಿದೆ ಎಂದು ಅವನ ಹೆಂಡತಿ ಮಕ್ಕಳು
ಹುಚ್ಚಾಸ್ಪತ್ರೆಗೆ ಸೇರಿಸಿದ್ದರು;
ಹಾಗೆ ಸೇರಿಸಿದ್ದಕ್ಕಾಗಿ ಅರಸಂದ ಅವರಿಗೆ ಬಹುಮಾನ ಸಿಕ್ಕಿತ್ತು
ಮಗುದೊಬ್ಬ ರಾಜರಾಣಿಯರ ಜೀವನ ಚರಿತ್ರೆ ಹಾಗೂ
ಅವರ ವಿರೋಧಿಗಳ ಖಂಡಿಸಿ ಕರಪತ್ರ ಬರೆಯುತ್ತಿದ್ದ;
ಇನ್ನೊಬ್ಬ ಮಾತ್ರ ತನ್ನಷ್ಟಕ್ಕೆ
ಹಾಗೂ ಅಲ್ಲ ಹೀಗೂ ಅಲ್ಲ ಎಂಬ ಸ್ಥಿತಿಯಲ್ಲಿದ್ದ.
ಕಾರ್ತೀಕ ಅವನನ್ನು ಕಂಡು

ನಾನು ಗೂಢಚಾರನಲ್ಲ;
ಅಪ್ಪ ಅಮ್ಮ ಇದ್ದರೂ ಇಲ್ಲದವ;
ಸ್ಮೃತಿಯೇ ಶಾಪವಾಗಿರುವವನು;
ನಾಡಲ್ಲಿ ಹುಲಿ ಕರಡಿ ತುಂಬಿವೆ ಎಂದು
ಉತ್ತಮರು ಭೂಗತರೆಂದು
ತೊಳಲುತ್ತ ಇರುವವನು;
ಮತ್ತೆ ಈ ನಾಡ ಮೊದಲಂತೆ ಮಾಡಲು ಹಸಿರು
ಮಾಡಬೇಕು ಏನು ತಿಳಿಸಿ

ಎನ್ನಲು, ಆ ಭಟಾರ

ನೀವು ನನ್ನನ್ನು ಬೇರೆ ಯಾರೋ ಎಂದು ತಿಳಿದಿದ್ದೀರಿ;
ನಾನು ಬರೀ ಓದುತ್ತ ಬರೆಯುತ್ತ ಇರುವವನು;
ತಾವು ಗೌರವಾನ್ವಿತರು; ದೇವಾಂಶ ಸಂಭೂತರು;
ನನ್ನ ಆತಿಥ್ಯ ಸ್ವೀಕರಿಸಬೇಕು;
ಇತ್ತ ಪಾದ ಬೆಳೆಸಿ, ದಯವಿಟ್ಟು

ಎಂದು ವಿನಯ ತೋರಿಸಿದ.

ಇವನೂ ಶಬ್ದಸೂತಕವ ಕಲಿತವನು,
ಮಾತು ಯೋಚನೆ ನಡುವ ಕಂದಕವ ತುಂಬುವುದೆಂತು
ಎಂದು, ಕಾರ್ತೀಕ,
ಹೇಳಬೇಕಾಗಿದ್ದ ಮಾತುಗಳನ್ನು ಸ್ವಗತವಾಗಿಯೇ ಹೇಳಬೇಕಾಗಿದ್ದ ಆ ಕಾಲದಲ್ಲಿ
ಯೋಚಿಸಿಕೊಂಡು ಹೋಗುತ್ತಿರಲು
ಒಬ್ಬ ಜೇಹಾದಿ ಬಂದು ನಮಸ್ಕರಿಸಿ ಇಂತು ಪರಿ ಬಿನ್ಸೈಸಿಕೊಂಡ:

ಪ್ರಭೂ, ನಂಬಲರ್ಹ ಮೂಲಗಳಿಂದ ತಿಳಿದಂತೆ
ತಮ್ಮನ್ನು ಕೊಲೆ ಮಾಡಲು ಅರಮನೆಯಿಂದ ನಿರೂಪ ಹೊರಟಿದೆ.
ಇದನ್ನು ಹೊರಡಿಸಿದವರು ರಾಜನೋ ರಾಣಿಯೋ
ನೀವು ರಾಜರಾದರೆ ತಮ್ಮ ಅಧಿಕಾರ ಹೋದೀತೆಂದು
ಭಯಪಟ್ಟ ಪರಿಜನರೋ-ತಿಳಿಯೆ.
ವ್ಯವಸ್ಥೆ ಬದಲಿಸಿ ತಮ್ಮ ಅಧಿಕಾರಕ್ಕೆ ಧಕ್ಕೆ ತರಲು
ಹೊರಟಿರುವ ನಿಮ್ಮ ಮೇಲೆ
ರಾಜ ರಾಣಿ ಪಿತೂರಿ ನಡೆಸಿದರೆ ಅಚ್ಚರಿಯಿಲ್ಲ.
ನಾವು ಜಗತ್ತಿನಾದ್ಕಂತ ವ್ಯಾಪಿಸಿದ ಸಂಘಟನೆ ಜನ.
ಸರ್ವಶಕ್ತನಾದ ನಮ್ಮ ಮುಖಂಡ ಗುಪ್ತ ಜಾಗೆಯಲ್ಲಿದ್ದು
ತರ್ಕಬದ್ಧ ನಡೆಗಳಿಂದ, ಸ್ಪಷ್ಟ ಲೆಕ್ಕಾಚಾರಗಳಿಂದ
ಚಳವಳಿಯ ನಿರ್ದೆಶಿಸುತ್ತಿದ್ದಾನೆ. ಅವನ ಆದರ್ಶ ಒಪ್ಪಿ
ಇಡೀ ಜಗತ್ತು ಒಂದೇ ಧರ್ಮದ ಕೆಳಗೆ ಬರಬೇಕೆಂದು
ಒಬ್ಬ ಪರಮಾತ್ಮನನ್ನೇ ಸೃಷ್ಟಿಕರ್ತನೆಂದು ಒಪ್ಪಬೇಕೆಂದು
ಒಂದೇ ನಾಗರಿಕತೆ ಎಲ್ಲಾ ಕಡೆ ಹಬ್ಬಬೇಕೆಂದು
ಜೀವವನ್ನೇ ಪಣವಿಟ್ಟು ಹೋರುವ ಪಡೆ ನಾವು.
ಅದಕ್ಕಾಗಿ ಭಯೋತ್ಪಾದನೆಯ ನೆಚ್ಚಿದ್ದೇವೆ.
ಗವಿಗಳಲ್ಲಿ ಅಥವಾ ಮನೆಗಳಲ್ಲೇ ಕೂತು
ಮಾನವ ಬಾಂಬುಗಳಿಂದ, ಜೈವಿಕ ಅಸ್ತ್ರಗಳಿಂದ
ಕಟ್ಟಡಗಳನ್ನು, ಆಸ್ಪತ್ರೆಗಳನ್ನು, ವಸತಿ ಸಂಕೀರ್ಣಗಳನ್ನು
ದಂಪತಿಗಳನ್ನು, ಬಸುರಿಯರನ್ನು, ಹಸುಳೆಗಳನ್ನು
ನಮ್ಮದಲ್ಲದ ಜಾತಿಗೆ ಸೇರಿದ ಈ ರೋಗಿಷ್ಠ ನಾಗರಿಕತೆಯ
ಎಲ್ಲ ಮೂಲಗಳನ್ನೂ ನಾಶಪಡಿಸುತ್ತೇವೆ.
ಭೂತಕಾಲದ ಎಲ್ಲ ಅವಶೇಷ ಒರೆಸಿ ಒರೆಸಿ ತೆಗೆಯುತ್ತೇವೆ.
ಆ ಸಾವ ಒಡಲಿಂದ ಹೊಸತು ಕಟ್ಟುತ್ತೇವೆ.
ಈ ಕೆಲಸದಲ್ಲಿ ಆಗಲೇ ತೊಡಗಿರುವವರು
ವೈದ್ಯ ಪಾದ್ರಿ ಪೊಲೀಸು ಸಾಧು ಸಂತರೇ ಮೊದಲಾದ ಸಹಸ್ರ ರೂಪಗಳಲ್ಲಿ
ನಗರಗಳಲ್ಲಿ ಹಳ್ಳಿಗಳಲ್ಲಿ ಮೂಲೆ ಮೂಲೆಗಳಲ್ಲಿ
ಹಬ್ಬಿ ಬೆಳೆದಿದ್ದಾರೆ- ಕಳ್ಳ ಯಾರು ಜಡ್ಡು ಯಾರು ಎಂದು ತಿಳಿಯದ ಹಾಗೆ.
ನೀವು ಇವತ್ತು ರಾತ್ರಿ ಸ್ಮಶಾನಕ್ಕೆ ಬನ್ನಿ;
ಹೊಸ ಜನ್ಮಕ್ಕೆ ನಿಮ್ಮನ್ನು ಅಲ್ಲಿ ಒಯ್ಯುತ್ತೇನೆ.

ಎಲ್ಲವನ್ನೂ ಎದುರಿಸಿ ಹಾಗೂ ಒಳಗೊಂಡು ತನ್ನ ಕ್ರಮ ರೂಪಿಸಬೇಕೆಂದು ಯೋಚಿಸುತ್ತಿದ್ದ ಕಾರ್ತೀಕ ಜೇಹಾದಿಯ ಈ ಹೊಸಲೋಕ ಹೇಗಿರಬಹುದೆಂದು ತಿಳಿಯಲು ರಾತ್ರಿ ಸ್ಮಶಾನಕ್ಕೆ ಹೋದನು. ಒಂದು ಕಡೆ ಬೆಂಕಿ ಉರಿಯುತ್ತಿತ್ತು. ಬಾವಲಿಗಳು ಹಾರುತ್ತಿದ್ದವು. ಕಾರ್ತೀಕ ಎಲ್ಲಿ ಇವ ಎಂದು ಸುತ್ತಮುತ್ತ ನೋಡುತ್ತಿರಲು ಜೇಹಾದಿ ಕಾಣಿಸಿಕೊಂಡು ಸ್ಮಶಾನದ ಮೂಲೆಗೆ ಕರೆದುಕೊಂಡು ಹೋಗಿ ಬೆಂಕಿಯ ಮುಂದೆ ಕೂರಿಸಿ ನೆತ್ತರಿನ ಬೊಟ್ಟಿಟ್ಟು ಕೆಂಪು ದಾಸವಾಳದ ಮಾಲೆ ಹಾಕಿ ಮಂತ್ರ ಹೇಳಲು ಪ್ರಾರಂಭಿಸಿದ. ಬೆಂಕಿಯ ಸುತ್ತ ಹಂದಿ ಕೋಳಿ ಕುರಿಗಳ ರುಂಡ ಮುಂಡ ಚೆಲ್ಲಾಪಿಲ್ಲಿ ಬಿದ್ದಿದ್ದವು. ಕತ್ತು ಕೊಯ್ದ ಕೋಳಿ ಪಟಪಟ ಬಿದ್ದು ಒದ್ದಾಡುತ್ತಾ ಮೇಲಕ್ಕೆ ಚಿಮ್ಮಿ ಕೆಳಕ್ಕೆ ಬೀಳುತ್ತಾ ಇದ್ದವು. ನೆತ್ತರು ಎಲ್ಲೆಂದರಲ್ಲಿ ಚೆಲ್ಲಿತ್ತು. ಆಜ್ಯ ಹೊಯ್ಯುತ್ತಿದ್ದ ಜೇಹಾದಿ ಕೊನೆಯ ಕ್ರಿಯೆ ಮಾತ್ರ ಬಾಕಿ ಇದೆ ಎಂದು ಮರದ ಹಿಂಬದಿ ಹೋಗಿ ಹಾಳೆಯ ಮೇಲೆ ಇಟ್ಟಿದ್ದ ಸುಮಾರು ಎರಡು ವರ್ಷದ ಹಸುಳೆಯನ್ನು ಎತ್ತಿಕೊಂಡು ಬಂದನು. ಅಫೀಮು ತಿನ್ನಿಸಿದ್ದರಿಂದಲೋ ಸುರೆ ಕುಡಿಸಿದ್ದರಿಂದಲೋ –ಅದರ ಕಣ್ಣು ಅರೆಮುಚ್ಚಿತ್ತು. ಕೂರಿಸಿದರೆ ಒರಗಿಕೊಳ್ಳುತ್ತಿತ್ತು. ಕತ್ತಿನ ಸುತ್ತ ಕೇಪಳೆ ಹೂವಿನ ಮಾಲೆ ಹಾಕಿ, ಹಣೆಗೆ ನೆತ್ತರು ಉದ್ದಿ, ಹ್ರಾಂ ಹ್ರೀಂ ಧರ್ಮಯುದ್ಧಾಯ ನಮಃ ಎಂದು ಕಾರ್ತಿಕಕನಿಗೆ ಎದ್ದು ನಿಲ್ಲುವಂತೆ ಹೇಳಿ, ಎದ್ದು ನಿಂತಾಗ ಮಗುವನ್ನು ಅವನ ಕೈಗೆ ಕೊಟ್ಟು

ಪ್ರಭೂ, ತಾಯಿ ಉಣ್ಣಿಸುತ್ತಿದ್ದಾಗ ಕಿತ್ತುತಂದ ಹಸುಳೆ ಇದು.
ಸವರ್ಣೀಯ ಮಗು.
ಶತಮಾನಗಳಿಂದ ದಲಿತರ ಶೋಷಿಸಿದ ಜಾತಿಯ ಪಿಂಡ.
ಹಿರಿಯರ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಈ ಮಗುವನ್ನು ಆಹುತಿ ಕೊಟ್ಟು
ಬ್ರಾಹ್ಮಣ ಗೌಡ ಲಿಂಗಾಯತರ ಶೋಷಣೆ ವಿರುದ್ಧ
ಸ್ವಾತಂತ್ರ್ಯ ಕಹಳೆ ಮೊಳಗಲಿ ಎಂದು
ದಲಿತರ ಹೆಸರಲ್ಲಿ ಕರಪತ್ರ ಹಂಚಿದ್ದೇವೆ.
ಪರಿಣಾಮವಾಗಿ ಸವರ್ಣೀಯರಿಗೂ ದಲಿತರಿಗೂ ಹೊಡೆದಾಟ ಹೆಚ್ಚುವುದು.
ಅದರಿಂದ ನಾಳೆ ನಮಗೇ ಲಾಭ.
ಪ್ರಭೂ, ಮಗುವನ್ನು ಹೀಗೆ ಯಜ್ಞಕುಂಡದ ಮೇಲೆ ಎತ್ತಿ ಹಿಡಿಯಿರಿ.
ನಾನು ಅದರ ರುಂಡವನ್ನು ಬೆಂಕಿಗೆ ಬೀಳುವಂತೆ ಕತ್ತರಿಸುತ್ತೇನೆ.
ನೀವು ಮುಂಡವನ್ನು ಬೆಂಕಿಗೆ ಎಸೆಯಿರಿ.
ನಮ್ಮಿಬ್ಬರ ಆಜ್ಯದಿಂದ ತೃಪ್ತವಾದ ಬೆಂಕಿ ಪ್ರಜ್ವಲಿಸಿ ಉರಿದು
ಜಗತ್ತನ್ನು ವ್ಯಾಪಿಸಲಿ.
ಇದು ನೀವು ನಮ್ಮ ಸಂಘಟನೆ ಸೇರಿರುವ ಉತ್ಸವ ಕೂಡ.
ನಿಮ್ಮಂಥ ಅವಿಶ್ರಾಂತ ಆತ್ಮಗಳು ನಮಗೆ ಪೋಷಕ ದ್ರವೈ

ಎಂದು ಹೇಳುತ್ತಾ ಕತ್ತಿ ಎತ್ತಲು ಬಗ್ಗಿದಾಗ

ಹಾಗೋ ಹೀಗೋ ನಿರ್ಧರಿಸಬೇಕಾದ ಆ ಹೊತ್ತಲ್ಲಿ – ಏನು ಮಾಡುತ್ತಿದ್ದೇನೆಂದು ತಿಳಿಯುವ ಮೊದಲೇ- ಕಾರ್ತೀಕ ಜೇಹಾದಿಯನ್ನು ಒದ್ದು ಕೆಳಗೆ ಉರುಳಿಸಿ ಮಗುವನ್ನೆತ್ತಿ ಓಡತೊಡಗಿದನು. ಓಡುತ್ತಾ ಸ್ಮಶಾನ ದಾಟಿ ಓಡುತ್ತಾ ನಗರ ಪ್ರವೇಶಿಸಿ ಓಡುತ್ತಾ ತಿರುಗುತ್ತ ತಿರುಗುತ್ತ ತಿರುಗುತ್ತಲೇ ಇರುವ ರಸ್ತೆಗಳಲ್ಲಿ ಓಡುತ್ತಾ – ಜೇಹಾದಿ ಬೆಂಕಿಗೆ ಬಿದ್ದನೇ? ಬಲಿ ಕೊಡಲು ಹೊರಟವ ತಾನೇ ಬಲಿಯಾದನೇ? ಅಲ್ಲ, ಬಿದ್ದಲ್ಲಿಂದ ಎದ್ದು ಹಿಂಬಾಲಿಸಿ ಬರುತ್ತಿರುವನೇ? ಜಗತ್ತಿನಾದ್ಯಂತ ವ್ಯಾಪಿಸಿದೆ ಎಂದ ಅವನ ಬಲೆಯೊಳಗೇ ತಾನಿನ್ನೂ ಇದ್ದೇನೆಯೇ? ಅವನು ಬೇರೆ ಬೇರೆ ವೇಷಗಳಲ್ಲಿ ಎಲ್ಲಾ ಕಡೆ ಹಬ್ಬಿದ್ದಾರೆ ಎಂದವರ ಕೈಗೇ ತಾನೂ ಮಗುವೂ ಸಿಕ್ಕಿ ಬೀಳುತ್ತೇವೆಯೇ? ಆಗ ಕಾರ್ತೀಕನಿಗೆ ಪ್ರಮುಖವಾಗಿ ಕಂಡದ್ದು ಮೊದಲು ಮಗುವನ್ನು ಸುರಕ್ಷಿತ ಜಾಗಕ್ಕೆ ಸೇರಿಸಬೇಕು ಹಾಗೂ ಅದಕ್ಕೆ ತಿನ್ನಲು ಕುಡಿಯಲು ಏನಾದರೂ ಕೊಡಬೇಕು ಎಂಬ ಯೋಚನೆ ಮಾತ್ರ.

ಅಂದರು: ಬತ್ತಿದೆ
ಬುಡದಲ್ಲೇ ನದಿ;
ನುಡಿದಿದೆ
ಗುಡುಗು ಸಹ.

ಗುಡುಗಿಯು ಮಳೆ
ಬಾರದ್ದುಂಟು-
ಬಹುವಿಧ ಹೇಳಿಯು
ಹೊಳೆಯದೆ ಬೆಳೆಯದೆ
ಉಳಿದಂತೇ ನುಡಿ.

ಹಾಗೆಂದು ಸುಮ್ಮನೆ
ಮುಚ್ಚದೆ ಬಾಯಿ
ಮತ್ತೊಂದು ಥರವೋ
ಮಗುದೊಂದು ಥರವೋ
ಹೇಳುದು ಬಿಟ್ಟರೆ
ಏನಿದೆ ಮಾರ್ಗ?
ಅಂದರು: ಗುಡುಗಿದೆ.
ಕೇಳಿಲ್ಲವೇ ಎಂದು
ಕೇಳಿದರೂ ಸಹ.
ಬಂದೀತು ಮಳೆ ಎಂದೆ
ತಯ್ಯಾರಿ ಮಾಡುವುದು
ಎತ್ತೂ ಬಿತ್ತೂ:
ಉದ್ಘಾಟನೆ ಎಂಬ
ಕ್ಯಾಸೆಟ್ಟುಗಳ ಹಾಡು
ಯುವರೆಟೆನ್ಶನ್ನಿಗೆ ಕಿರುಚಿದ್ದ
ಕೇಳ್ವಂತೆ ಈ ಪದವ
ಕೇಳುವವರಿಲ್ಲದೆ
ಇದ್ದರು, ಪದಗಳು
ಸೋತರು ಬಾತರು,
ಸರ್ವಾಧಿಕಾರಿಯ ಅಥವ
ಧರ್ಮಾಧಿಕಾರಿಯ ಕಠಿಣ
ಹೆಚ್ಚುತ್ತ ಇದ್ದರು,
ಸೀಳುತ್ತ ಮುರಿಯುತ್ತ
ಬಳಸುತ್ತ ಅವವೇ
ಪದಗಳ ಪುನರಪಿ
ಮತ್ತೊಮ್ಮೆ ಮಗುದೊಮ್ಮೆ
ಮುಚ್ಚಿಯೊ ಅಚ್ಚೆಲೊ
ಹೇಳುತ್ತ ಇರುವಂತೆ.

ಆದರು ಗುಡುಗಿನ
ನುಡಿಗಳ ಕೇಳಿದೆ
ಎಂದರು ಕೆಲವರು.

ಕೇಳಲಿ ಎಲ್ಲಾ ಈ ನನ ಮಕ್ಕಳು
ಅಂತಾ ಸಿಟ್ಟು ಬಂದರೆ ಗುಡುಗಿಗೆ
ಘರ್ಜಿಸಿ ದ ದ ದ ಎಂದು
ಹೊರಟರೆ ಯುದ್ಧಕ್ಕೆ ಇಳೆ ಉರಿ ಮೇಲೆ

ತಪ್ಪಾಯ್ತು ಅಂತ ನಮಗಾಗ ಕಂಡರೆ
ಇದ್ದರೆ ನೋಹನ ನೌಕೆಯ ಆಸರೆ

***

(ಲೇಖಕನ ಟಿಪ್ಪಣಿ: ಹೀಗೆ ‘ಮಾತಾಡುವ ಮರ’ ಆಧುನಿಕ ಖಂಡಕಾವ್ಯ ಕೊನೆಗೊಳ್ಳುತ್ತದೆ. ಈ ಭಾಗದಲ್ಲಿ ಬರುವ ಪರಿಕಲ ರಾಜ (ಶೇಕ್ಸ್‌ಪಿಯರನ ಪೆರಿಕ್ಲಿಸ್ ನಾಟಕವನ್ನು ಕನ್ನಡಕ್ಕೆ ರೂಪಾಂತರಿಸಿದಾಗ ಅವನನ್ನು ‘ಪರಿಕಲ ರಾಜ’ ಎಂದು ಕರೆಯಲಾಗಿತ್ತು), ವೀರಶ್ರೀ ರಾಣಿಯ ಮಗಳು ಕೃತ್ತಿಕೆಯನ್ನು ತಂದೆಯಾದ ಪರಿಕಲ ರಾಜನೇ ಮದುವೆಯಾಗಿ ಪಡೆದ ಮಗ ಕಾರ್ತಿಕ).
(2001 – 2002)

*****

ಈ ದೀರ್ಘ ಕೃತಿಯಲ್ಲಿ ಹಲವಾರು allusion ಗಳು ಅಥವಾ ಲೇಖಕರು ಕರೆಯುವಂತೆ ‘ಭಿತ್ತಿಗಳು’ ಇವೆ. ಇದರ ರಚನಾಕ್ರಮ ಎಲಿಯಟ್‌ನ ‘ವೇಸ್ಟ್ ಲ್ಯಾಂಡ್’ ಎಂಬ ಆಧುನಿಕ ಖಂಡಕಾವ್ಯದ ಹಾಗೆ. ‘ವೇಸ್ಟ್ ಲ್ಯಾಂಡ್’ ಕಾವ್ಯದ ಕೊನೆಗೆ ಎಲಿಯಟ್ ಟಿಪ್ಪಣಿಗಳನ್ನು ಕೊಟ್ಟು ಈ ಭಿತ್ತಿಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿರುವಂತೆ ಇಲ್ಲಿಯೂ ಕೊನೆಗೆ ಟಿಪ್ಪಣಿಗಳಿವೆ. ಕೊಲಾಜ್ ಎಂಬ ಕಲಾವಿಧಾನವನ್ನು ಹೋಲುವಂತೆ ಇಲ್ಲಿ ಕಥಾನಕಗಳ ತುಣುಕುಗಳನ್ನು ಕೊಡಲಾಗುತ್ತದೆ. ಈ ರೀತಿ ಕೊಡುವಾಗ ಒಂದು ಕಥಾನಕ ಇನ್ನೊಂದರ ಪ್ರತಿರೂಪದಂತೆ, ಮುಂದುವರಿಕೆಯಂತೆ, ಅದಕ್ಕೆ ಎದುರಾಗಿ ತದ್ವಿರುದ್ಧ ಸಂಗತಿಯನ್ನು ಧ್ವನಿಸುವಂತೆ ಇರುತ್ತವೆ. ಒಟ್ಟಾಗಿ ನಮ್ಮ ಕಾಲದ ಬದುಕನ್ನು ಹಲವು ರೂಪಕಗಳ ಮೂಲಕ ಒಂದು ಕಲಾಕೃತಿಯಾಗಿ ಪ್ರತಿಮಾವಿಧಾನದಿಂದ ಅನುಭವಕ್ಕೆ ತಂದುಕೊಡುವಂತೆ ಕವಿ ಸಂಯೋಜಿಸಿರುತ್ತಾನೆ.

ರಾಮಚಂದ್ರ ದೇವ ಅವರು ತಮ್ಮ ಕವನಗಳಲ್ಲಿ ಆಡುಮಾತನ್ನು ಬಳಸುವುದು ಗಮನಾರ್ಹವಾದ ಸಂಗತಿ. ಕಾವ್ಯ ಅನ್ನುವ ಪ್ರಕಾರದಲ್ಲಿ ಬರೆಯುತ್ತಿದ್ದೇನೆ ಎನ್ನುವ ಪ್ರಜ್ಞಾವಂತಿಕೆ ಅನಗತ್ಯ ಎನ್ನುವಂತೆ ಅವರು ಭಾಷೆಯನ್ನು ಬಳಸುತ್ತಾರೆ. ‘ಡೊಂಕು ಪ್ರಗಾಥ’ದ ‘ಪುಕುಳಿ ಒಟ್ಟೆ’ (ಗುದ ದ್ವಾರ), ‘ಮಾತಿನ ಮರ’ದಲ್ಲಿ ಬರುವ ‘ಉರ್ಬುಳಿ’ (ನಗ್ನ) ಎನ್ನುವ ಪದಬಳಕೆಯನ್ನು, ‘ಮಾತಿನ ಮರ’ದಲ್ಲಿ ಬರುವ, “ನಾಕೈದು ಜನರ ಜೊತೆ ಮಾಡ್ಕೊಂಡು, ಬ್ರಿಟಿಷ್‌ ದೊರೆಗೆ ವಿರುದ್ಧ ಹೋಗಿ ಅಂತ ಯಾರು ಏನೇ ಅಂದರು ನಾವ್ ಮಾತ್ರ ಹಾಗೆ ಮಾಡೋರಲ್ಲ ನಿಮಗೇ ನಮ್ಮದು ಪೂರಾ ಸಪೋರ್ಟು ಅಂತ ದೊರೆಗಳಿಗೆ ತಿಳಿಸಿ ಬರೋಣ ಅಂದ್ಕೊಂಡು ಮುಂದಕ್ಕೆ ಹೋಗ್ತಿದ್ದಾಗ…..”, ಮುಂತಾದ ಮಾತಿನ ಶೈಲಿಯನ್ನು ಉದಾಹರಣೆಯಾಗಿ ಗಮನಿಸಬಹುದು. ‘ಮಾತಿನ ಮರ’ ಕವನದ ಭಾಷೆ ಉದ್ದಕ್ಕೂ ಆಡುಮಾತಿಗೆ ಸಮೀಪವಾಗಿದ್ದರೂ, ನಡುನಡುವೆ ಹಾಡುಗಬ್ಬದ ಧಾಟಿಯಲ್ಲಿ ಲಯವನ್ನು ಹಿಡಿಯುತ್ತದೆ. ಆಗಾಗ ಪೂರ್ತಿ ಗದ್ಯವಾಗಿ ಆ ಭಾಗಗಳನ್ನು ಚಂಪೂ ಶೈಲಿಯಲ್ಲಿ ಗದ್ಯದಂತೆಯೇ ಮುದ್ರಿಸಲಾಗಿದೆ.

‘ರಿಸಾರ್ಟ್’ ಕತೆಯ ಸುಬ್ರಾಯ ಧನಿ ಇಲ್ಲಿ ಅರಸನಾಗಿದ್ದಾನೆ. ಅವನನ್ನು ಪರಿಕಲ, ಲಿಯರ್ ರಾಜರೊಂದಿಗೆ; ಅರಸು ಕುಮಾರನನ್ನು ಹ್ಯಾಮ್ಲೆಟ್, ಈಡಿಪಸ್, ಕಾರ್ತೀಕರೊಡನೆ, ಮರೀನಾಳನ್ನು ಕೃತ್ತಿಕೆಯೊಡನೆ ಮಿಳಿತಗೊಳಿಸುವ ಮೂಲಕ ಸಾರ್ವಕಾಲಿಕ ಕಾಲ ಮತ್ತು ಸರ್ವದೇಶೀಯ ಸ್ಥಳಗಳ ಪರಿಣಾಮವನ್ನು ತರಲು ಪ್ರಯತ್ನಿಸಿದ್ದಾರೆ. ಅರಸನ ಮನೆಯನ್ನು ಕೊಂಡು ರಿಸಾರ್ಟ್ ಮಾಡಿದವ ಈ ಕತೆಯಲ್ಲಿ ಅಮೆರಿಕದವ. ಅರಸನ ಇಬ್ಬರ ಮಕ್ಕಳಲ್ಲಿ ಒಬ್ಬ ಅಮೆರಿಕನ್ ವಿ.ವಿ.ಯಲ್ಲಿ ಓದಿ ಅಮೆರಿಕದವಳನ್ನೇ ಮದುವೆಯಾಗಿ, ಅಲ್ಲಿ ಆಗಾಗ ‘ಓರಿಯಂಟಲ್ ಜೀವನಕ್ರಮ’ದ ಪ್ರದರ್ಶನ ನೀಡುತ್ತಾನೆ; ಇನ್ನೊಬ್ಬ ಮುಂಬೈಯಲ್ಲಿ ಕಲಾವಿದನಾಗಲು ಪ್ರಯತ್ನಿಸಿ ಬಡವನಾಗಿ, ‘ವಿದ್ಯುಚ್ಚೋರ’ನಾಗಿ, ಸಮಾಜದಲ್ಲಿ ಗಣ್ಯನಾಗಿ ಓಡಾಡಿಕೊಂಡು ಇರುತ್ತಾನೆ. ಹೀಗೆ ಹಲವು ಬದಲಾವಣೆಗಳನ್ನು ಹೊಂದಿ, ಕೃತಿಯುದ್ದಕ್ಕೂ ಭಿತ್ತಿಗಳಿಂದ ತುಂಬಿ ಈ ಕೃತಿ ‘ರಿಸಾರ್ಟ್’ ಕತೆಗೆ ಪೂರಕವಾಗಿದೆ.

‘ಒಂದಕ್ಕೊಂದು ಸಂಬಂಧ ಇದೆ’ ಎಂದು ತಿಳಿದೂ ಅವುಗಳನ್ನು ಓದಬಹುದು; ‘ಇಲ್ಲ’ ಎಂದು ತಿಳಿದೂ ಓದಬಹುದು. ಮುಖ್ಯ ವಿಷಯವೆಂದರೆ ರಾಮಚಂದ್ರ ದೇವರಿಗೆ ನಮ್ಮ ಕಾಲದ ಬದುಕಿನ ಬಹುರೂಪ ಮತ್ತು ಪೂರ್ವ ಪಶ್ಚಿಮಗಳ ನಡುವಿನ ಮುಖಾಮುಖಿಗೆ ದಕ್ಕಿರುವ ಹೊಸ ಆಯಾಮಗಳನ್ನು ಪರಿಶೀಲಿಸುವುದು ಮುಖ್ಯವಾದ ಕಾಳಜಿಯಾಗಿದೆ ಎನ್ನುವುದನ್ನು ನಾವು ಗುರುತಿಸಬೇಕು.

‘ಮಾತಾಡುವ ಮರ’ವನ್ನು ಅವರ ಮುಖ್ಯ ಕೃತಿಗಳ ಒಟ್ಟು ಓದಿನಿಂದ ಹೊರಗಿಡಲಾಗದು ಎನ್ನುವುದಕ್ಕೆ ಇನ್ನೊಂದು ಕಾರಣವಿದೆ. ಅದೇನೆಂದರೆ ‘ದಂಗೆಯ ಪ್ರಕರಣ’ದಲ್ಲಿ ಅವ್ಯಕ್ತವಾಗಿದ್ದ ಸಂಸ್ಕೃತಿ ನಿಷ್ಠೆ ‘ಮಾತಾಡುವ ಮರ’ ಕವನಕ್ಕಾಗುವಾಗ ವ್ಯಕ್ತವಾಗಿ, ಪ್ರಧಾನವಾದ ಆಶಯವಾಗಿರುವುದು ರಾಮಚಂದ್ರ ದೇವರಲ್ಲಿ ಗಮನಿಸಬೇಕಾದ ಮುಖ್ಯವಾದ ಬೆಳವಣಿಗೆ. ಒಂದು ಜನಾಂಗದ ಧಾರಕ ಪ್ರಜ್ಞೆಯನ್ನು ಧಾರಣೆ ಮಾಡುವ ಕವಿ ಕಟ್ಟುವ ಕೆಲಸವನ್ನು ಮಾಡಬೇಕಾಗುತ್ತದೆ. ‘ದಂಗೆಯ ಪ್ರಕರಣ’ದಲ್ಲಿ ನಾಯಕ ಸಿಟ್ಟಿನಿಂದ ಕೆಡಹುವವನು; ಕಟ್ಟುವವನಲ್ಲ. ಲೇಖಕರ ಒಲವು ನಾಯಕನ ಕಡೆಗಿರುವಂತೆ ಕಂಡರೂ ಒಳಗಿಂದೊಳಗೆ ಅದು ತದ್ವಿರುದ್ಧ (ಕೆಡಹುವುದನ್ನು ಒಪ್ಪದ) ವಾಸ್ತವವನ್ನು ಹೇಳುತ್ತಿರುವುದನ್ನು ನಾವೀಗಾಗಲೇ ಗಮನಿಸಿದ್ದೇವೆ. ‘ಮಾತಾಡುವ ಮರ’ದಲ್ಲಿ ರಾಮಚಂದ್ರ ದೇವರು ವ್ಯಕ್ತವಾಗಿ ಕೆಡಹುವುದನ್ನು ವಿರೋಧಿಸುತ್ತ ಕಟ್ಟುವುದರ ಪರವಾಗಿದ್ದಾರೆ. ಎರಡು ಉದಾಹರಣೆಗಳನ್ನು ಗಮನಿಸಿ :

ಬ್ರಿಟಿಷರ ಮಾಂಡಲಿಕನಾದ ಅರಸು ಬ್ರಿಟಿಷರ ರೀತಿ ರಿವಾಜು ಭಾಷೆಗಳನ್ನು ಕಲಿತುಕೊಂಡು; ಯಾರೇ ಸ್ವಾತಂತ್ರ್ಯ ಹೋರಾಟ ಮಾಡಿದರೂ ನಮ್ಮ ಸಪೋರ್ಟ್ ನಿಮಗೇ ಎಂದು ಅವರಿಗೆ ತಿಳಿಸಿ ಬರಲು ಹೋಗುತ್ತಿದ್ದಾಗ ದಾರಿಯಲ್ಲಿ ಸಿಕ್ಕ ಕಾಡಲ್ಲಿ ಒಬ್ಬ ಅರಣ್ಯವಾಸಿ ಸಿಕ್ಕಿ ಮಾತಾಡುವ ಮರದ ವಿಷಯ ತಿಳಿಸುತ್ತಾನೆ. ಆ ಮರವನ್ನು ಮಾತಾಡಿಸಿದರೆ ಯಾವ ಭಾಷೆಯನ್ನಾದರೂ ಅರ್ಥ ಮಾಡಿಕೊಂಡು ಹಿಂದೆ ನಡೆದದ್ದೆಲ್ಲವನ್ನೂ ಹೇಳುವುದು. ಆಮೇಲೆ ಶತ್ರುವಿನ ಎದುರು ನಿಂತರೆ ಅವರ ಶಕ್ತಿ ಇವನಿಗೆ ಬರುತ್ತದೆ; ಹಾಗಾಗಿ ಇವನು ಅಜೇಯನಾಗುತ್ತಾನೆ. ಈ ವಿಷಯ ತಿಳಿದ ರಾಜ ಕಾಡಿನ ಮರಗಳೆದುರು ನಿಂತು ಯಾವ ಭಾಷೆಯಲ್ಲಿ ಮಾತಾಡಿದರೂ ಅವು ಉತ್ತರಿಸುವುದಿಲ್ಲ. ಆಗ “ಎಲ್ಲಾ ಮರಗಳನ್ನು ಕಡಿದೇ ಬಿಡುವ, ಮಾತಾಡುವ ಮರ ಏಟಿಗೆ ಖಂಡಿತ ಚೀರಿಯೇ ಚೀರುವುದು” ಎಂದು ಅರಸ ಎಲ್ಲಾ ಮರಗಳನ್ನು ಕಡಿಸಿ ಹಾಕುತ್ತಾನೆ.

ಈ ರೂಪಕದಲ್ಲಿ ನಾವು ಗಮನಿಸಬೇಕಾದುದು ಇದು : ಈಗ ಭಾರತೀಯ ರಾಜನಿಗೂ ಮಾತಾಡುವ ಮರದೊಂದಿಗೆ ಸಂವಾದ ಸಾಧ್ಯವಿಲ್ಲ. ಹಿಂದೆ ಅಲೆಗ್ಸಾಂಡರ್ ಮಾತಾಡುವ ಮರ ತನ್ನ ಜತೆ ಮಾತಾಡದ್ದರಿಂದಲೇ ಭಾರತದಿಂದ ಹಿಮ್ಮೆಟ್ಟಬೇಕಾಯಿತು. ಈಗ ಭಾರತೀಯ ಅರಸನೇ ಬ್ರಿಟಿಷರ ನಕಲಿಯಾಗಿ, ಮಾತಾಡುವ ಮರದ ಜತೆ ಸಂಪರ್ಕ ಸಾಧಿಸಲಾಗದೇ ಹೋಗುತ್ತಾನೆ. ಅದೇ ಹತಾಶೆಯಲ್ಲಿ ಮರಗಳನ್ನು ಕಡಿದೂ ಕಡಿದೂ ಹಾಕುತ್ತಾನೆ. ಕೋಲಾಹಲ ಎಬ್ಬಿಸುತ್ತಾನೆ. ಮಾತಾಡುವ ಮರ ಭಾರತೀಯ ಸಂಸ್ಕೃತಿಗೆ ರೂಪಕವಾಗಿದೆ. ಇದನ್ನು ನಾಶ ಮಾಡಲು ಪ್ರಯತ್ನಿಸುವ ಪಶ್ಚಿಮಬುದ್ಧಿಯ ಅರಸನ ಕ್ರಿಯೆಗೆ ಲೇಖಕರ ಸಹಾನುಭೂತಿ ಇಲ್ಲ.

ಎರಡನೆಯದು, ಪರಿಕಲ ರಾಜನ ಮಗ ಕಾರ್ತೀಕ ಮತ್ತೆ ಹೊಸ ಬದುಕು – ಹಿಂಸೆ, ವಂಚನೆ, ಭ್ರಷ್ಟಾಚಾರ, ಅನೈತಿಕತೆಗಳಿಂದ ಮುಕ್ತವಾದ ವ್ಯವಸ್ಥೆಯನ್ನು ಪ್ರಾರಂಭಿಸಬೇಕೆಂದು ಹಿಂದೆ ನಾಡಿನಿಂದ ಬಹಿಷ್ಕೃತರಾದ ಭಟ್ಟಾರಕರನ್ನು ಕರೆತಂದು ‘ಮರೆತುಹೋದ ಪರಂಪರೆಗಳನ್ನು ಪ್ರಾರಂಭಿಸಲು’ ಬಯಸುತ್ತಾನೆ. ಅವರು ಯಾರೂ ಅವನ ಯೋಚನೆಗೆ ಸ್ಪಂದಿಸುವುದಿಲ್ಲ ಅಥವಾ ಅವರೆಲ್ಲ ಸ್ವತಃ ಭ್ರಷ್ಟರಾಗಿರುತ್ತಾರೆ. ಆಗ ಒಬ್ಬ ಜೇಹಾದಿ ಅವನ ಸಹಾಯಕ್ಕೆಂಬಂತೆ ಬರುತ್ತಾನೆ. ಅವನು ಸ್ಮಶಾನದಲ್ಲಿ ಬೆಂಕಿಗೆ ಮಗುವೊಂದನ್ನು ಬಲಿಕೊಡಲು ಸಿದ್ಧತೆ ನಡೆಸುತ್ತಾನೆ.

“ಪ್ರಭೂ, ತಾಯಿ ಉಣ್ಣಿಸುತ್ತಿದ್ದಾಗ ಕಿತ್ತು ತಂದ ಹಸುಳೆ ಇದು. ಸವರ್ಣೀಯ ಮಗು. ಶತಮಾನಗಳಿಂದ ದಲಿತರ ಶೋಷಿಸಿದ ಜಾತಿಯ ಪಿಂಡ. ಹಿರಿಯರ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಈ ಮಗುವನ್ನು ಆಹುತಿ ಕೊಟ್ಟು ಬ್ರಾಹ್ಮಣ ಗೌಡ ಲಿಂಗಾಯಿತರ ಶೋಷಣೆ ವಿರುದ್ಧ ಸ್ವಾತಂತ್ರ್ಯ ಕಹಳೆ ಮೊಳಗಲಿ ಎಂದು ದಲಿತರ ಹೆಸರಲ್ಲಿ ಕರಪತ್ರ ಹಂಚಿದ್ದೇವೆ.”

ಎಂದು ಮಗುವಿನ ಕತ್ತು ಕತ್ತರಿಸಲು ಜೇಹಾದಿ ಸಿದ್ಧನಾದಾಗ ಕಾರ್ತೀಕ ಮಗುವನ್ನು ರಕ್ಷಿಸಲು ಅದನ್ನು ಹಿಡಿದುಕೊಂಡು ಓಡುತ್ತಾನೆ.

ಒಡೆಯುವುದು, ಕೆಡಹುವುದು, ಕಡಿಯುವುದು, ಕೊಲ್ಲುವುದು ಲೋಕವನ್ನು ನೆಮ್ಮದಿಯತ್ತ ಕೊಂಡೊಯ್ಯುವಂಥ ಕ್ರಿಯೆಗಳಲ್ಲ. ಸಂಸ್ಕೃತಿಯ ಜತೆ ಸಂವಾದ ನಡೆಸಲು ಪ್ರಯತ್ನಿಸುವುದು ಮತ್ತು ವಿನಾಶಕಾರಿ ಕ್ರಿಯೆಗಳನ್ನು ತಡೆಗಟ್ಟಲು ಪ್ರಯತ್ನಿಸುವುದು ಪ್ರಜ್ಞಾವಂತರ ಆಯ್ಕೆ ಎಂದು ರಾಮಚಂದ್ರ ದೇವ ‘ರಿಸಾರ್ಟ್’ ಮತ್ತು ‘ಮಾತಾಡುವ ಮರ’ ಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಸಮಾಜದ ಪ್ರಸ್ತುತ ಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಸರಿಯಾದ ದಾರಿತೋರಿಸುವುದು ಶ್ರೇಷ್ಠ ಸಾಹಿತ್ಯ ಮಾಡುವ ಕೆಲಸ. ತಾನು ಒಟ್ಟು ಸಮಾಜದ ಶ್ರೇಯಸ್ಸನ್ನು ಬಯಸುತ್ತೇನೆ ಎನ್ನುವ ಸಾಹಿತಿಯಷ್ಟೇ ಒಂದು ಜನಾಂಗದ ಸಮಸ್ತ ಪ್ರಜ್ಞೆಯನ್ನು ಧಾರಣೆ ಮಾಡಿಕೊಳ್ಳಬಲ್ಲ. ರಾಮಚಂದ್ರ ದೇವ ಅಂಥ ಸಾಧನೆ ಮಾಡಿರುವ ಕಾರಣ ಅವರು ಬಹುಮುಖ್ಯ ನವ್ಯೋತ್ತರ ‘ಕವಿ.’

*****

ಟಿಪ್ಪಣಿಗಳು: 1. ಇದು, ರಾಮಚಂದ್ರ ದೇವ ಕುರಿತ ಲೇಖನಗಳ ಪುಸ್ತಕ ‘ದೇವಸಾಹಿತ್ಯ’ಕ್ಕಾಗಿ ಬರೆದ ಲೇಖನ. ‘ದೇವಸಾಹಿತ್ಯ’: ಸಂಪಾದಕರು : ಕೆ. ನ. ಶಿವತೀರ್ಥನ್ ಮತ್ತು ಕೃಷ್ಣಮೂರ್ತಿ ಹನೂರು. ನೈರುತ್ಯ ಪ್ರಕಾಶನ, ಮೈಸೂರು. 2005.
2. ರಾಮಚಂದ್ರ ದೇವ ಅವರ ಕಾವ್ಯದ ಕುರಿತಾದ ಕೆಲವು ಚಿಂತನೆಗಳು ಈ ಲೇಖನದಲ್ಲಿ ನಡೆದಿವೆ. ಆದರೆ ಇದು ಅವರ ಸಮಗ್ರ ಕಾವ್ಯದಾಧ್ಯಯನವಲ್ಲ.